ಚಿಲಿ ಮೂಲದ ಸ್ಪ್ಯಾನಿಶ್ ಕವಿ ಪಾಬ್ಲೋ ನೆರೂದ (12 ಜುಲೈ 1904 — 23 ಸೆಪ್ಟೆಂಬರ್ 1973) ಹದಿಮೂರನೆಯ ವರ್ಷಕ್ಕೇ ಕವಿ ಎಂದು ಗುರುತಿಸಲ್ಪಟ್ಟವನು. ಜೀವನದುದ್ದಕ್ಕೂ ಸಮೃದ್ಧವಾಗಿ ಬರೆದು ಜಗತ್ತಿನಾದ್ಯಂತ ಖ್ಯಾತಿಯನ್ನಷ್ಟೆ ಅಲ್ಲದೇ ಅಪಾರ ಜನಪ್ರಿಯತೆಯನ್ನೂ ಗಳಿಸಿದ್ದ ಅವನನ್ನು ಚಿಲಿಯ ರಾಷ್ಟ್ರಕವಿಯೆಂದು ಕರೆಯಲಾಗುತ್ತದೆ. ಗಾರ್ಸೀಯಾ ಮಾರ್ಕೇಸ್ ನೆರೂದನ ಬಗ್ಗೆ, “ಯಾವುದೇ ಭಾಷೆಯಲ್ಲಿನ ೨೦ನೆಯ ಶತಮಾನದ ಸರ್ವ ಶ್ರೇಷ್ಠ ಕವಿ” ಎಂದು ಹೇಳಿದ್ದ.
ನೆರೂದನ ಪ್ರಗಾಥಗಳಲ್ಲಿ ಎರಡನ್ನು ಸಂಕೇತ ಪಾಟೀಲ ಕನ್ನಡಕ್ಕೆ ತಂದಿದ್ದಾರೆ.

ನೆರೂದ ಹಲವು ಬಗೆಯ ಕವಿತೆಗಳನ್ನು ರಚಿಸಿದ್ದರೂ ಅವನ ಪ್ರೇಮಗೀತೆಗಳು ಮತ್ತು ಸಾಮಾನ್ಯ ಸಂಗತಿಗಳ ಬಗ್ಗೆ ಬರೆದ ಪ್ರಗಾಥಗಳು (odes) ಅವನ ಕಾವ್ಯದ ಚಾಚನ್ನು ಹೆಚ್ಚಿಸಿವೆ. ತನ್ನ ಜೀವನದ ನಾಲ್ಕನೆಯ ದಶಕದ ಕೊನೆಯಲ್ಲಿ ಅವನು ವಾರಕ್ಕೊಂದಾದರೂ ಪ್ರಗಾಥವನ್ನು ಬರೆಯುವ ಪಣತೊಟ್ಟನಂತೆ. ಅವನು ಬರೆದ 225ರಷ್ಟು ಪ್ರಗಾಥಗಳು ಅವನ ಸಮಸ್ತ ಕೃತಿಗಳುದ್ದಕ್ಕೂ ಹರಡಿಕೊಂಡಿವೆ. ಅವನ್ನು 2013ರಲ್ಲಿ “All the Odes” ಎಂಬ ಸ್ಪ್ಯಾನಿಶ್—ಇಂಗ್ಲಿಶ್ ದ್ವಿಭಾಷಾ ಆವೃತ್ತಿಯ ಪುಸ್ತಕದಲ್ಲಿ ಸಂಗ್ರಹಿಸಲಾಗಿದೆ. ಇವುಗಳ ವಿಷಯವಸ್ತುಗಳ ವೈವಿಧ್ಯತೆಯನ್ನು ಓದಿಯೇ ತಿಳಿದುಕೊಳ್ಳಬೇಕು. ಅವು ವಸ್ತುಗಳು, ಭಾವನೆಗಳು, ಸಂಗತಿಗಳು, ಜಾಗಗಳು, ಮನುಷ್ಯರು, ಎಲ್ಲವನ್ನೂ ಒಳಗೊಂಡಿವೆ: ವೈನ್, ಉಪ್ಪು, ಟ್ಯೂನಾ ಫಿಶ್, ಆರ್ಟಿಚೋಕ್, ಮೆಕ್ಕೆಜೋಳ, ಈರುಳ್ಳಿ, ಟೊಮೇಟೋ; ಪುಸ್ತಕ, ಕಾಲುಚೀಲ, ಹಾಸಿಗೆ, ಬಟ್ಟೆ, ಹಾಳಾಗಿ ಹೋದ ವಸ್ತುಗಳು, ಸೋಪಿನ ತುಣುಕು, ಕತ್ತರಿ; ಬೇಸರ, ಭರವಸೆ, ಮುಪ್ಪು; ಬೆಕ್ಕು, ನಾಯಿ, ಪಕ್ಷಿವೀಕ್ಷಣೆ; ಮೋಡಗಳು, ಹಳದಿ ಹೂವು; ಇನ್ನೂ ಏನೇನೋ. ಸಾಮಾನ್ಯ ವಸ್ತುಗಳಲ್ಲಿನ ಅಸಾಮಾನ್ಯತೆಯನ್ನು ಮುನ್ನೆಲೆಗೆ ತಂದು ಅವು ಬೆಳಗುವಂತೆ ಮಾಡಿದ್ದು ನೆರೂದನ ದೊಡ್ಡ ಸಾಧನೆ.
ಅವನ ನೂರಾರು ಪ್ರಗಾಥಗಳಲ್ಲಿ ಎರಡನ್ನು ಕನ್ನಡಕ್ಕೆ ತಂದಿದ್ದೇನೆ. ಇವು ನಿಜವಾದ ಅರ್ಥದಲ್ಲಿ ಅನುವಾದಗಳಲ್ಲ. ಬದಲಿಗೆ ನೆರೂದನ ಕವಿತೆಗಳನ್ನು ಕನ್ನಡದ ನುಡಿಗೆ ಒಗ್ಗಿಸಿ ಮೂಲದ ಸಾರವನ್ನು ಓದುಗರಿಗೆ ಒಂದಷ್ಟಾದರೂ ದಾಟಿಸುವ ಯತ್ನ. ಮೊದಲನೆಯದು ‘Ode to Ironing’, ಎರಡನೆಯದು, ‘Ode to Wine’. ಇವುಗಳ ಬಗ್ಗೆ ಹೇಳುವುದಕ್ಕೇನಿಲ್ಲ; ಓದಿ ಅನುಭವಿಸಬೇಕಷ್ಟೇ.
ನಿರಿಹಾಕುವುದಕ್ಕೊಂದು ಪ್ರಗಾಥ
ಕವಿತೆ ಬೆಳ್ಳಗಿರುವುದು:
ಅದು ನೀರೊಳಗಿಂದ ಹನಿಗಳುಡುಗೆ ಹೊದ್ದು ಬರುವುದು,
ಸುಕ್ಕುಸುಕ್ಕಾಗಿ ಗುಡ್ಡೆ ಬೀಳುವುದು,
ಈ ಜಗದ ತೊಗಲನ್ನು ಹರಡಬೇಕಾಗುವುದು,
ಬಿಳುಪಿನ ಕಡಲನ್ನು ತೀಡಿ ನಿರಿಹಾಕಬೇಕಾಗುವುದು,
ಕೈಗಳು ಮುಂದಡಿಯಿಡುತ್ತಲಿರುವುವು,
ಪವಿತ್ರ ಮೇಲ್ಪದರಗಳು ಮಟ್ಟಣಗೊಳ್ಳುವುವು,
ಏನನ್ನೂ ಮಾಡುವ ಬಗೆಯೇ ಇದಾಗಿರುವುದು:
ಕೈಗಳು ಪ್ರತಿದಿನವೂ ಜಗವ ಕಟ್ಟುವುವು,
ಕಬ್ಬಿಣವು ಉಕ್ಕಿನೊಂದಿಗೆ ಒಂದುಗೂಡುವುದು,
ಅಗಸನ ಸಾಲೆಯ ಬಡಿದಾಟಗಳಿಂದ
ದುಪ್ಪಟಿ, ತಟ್ಟು, ಅರಳೆಯ ಬಟ್ಟೆಗಳು ಮರಳುವುವು,
ಮತ್ತು ಬೆಳಕಿನಿಂದೊಂದು ಬೆಳುವ ಹುಟ್ಟುವುದು:
ಬುರುಗಿನೊಳಗಿಂದ ಪರಿಶುದ್ಧತೆ ಮಗುಳುವುದು.
ಮದಿರೆಗೊಂದು ಪ್ರಗಾಥ
ಹಗಲ ಬಣ್ಣದ ಮದಿರೆ
ಇರುಳ ಬಣ್ಣದ ಮದಿರೆ
ನೇರಳೆ ಪಾದಗಳ ಮದಿರೆ
ಗೋಮೇಧಿಕ ರಂಜಿತ ಮದಿರೆ
ಮದಿರೆ
ಭುವಿಯ ಮುದ್ದು
ಮಿನುಗು ತಾರೆ
ಮದಿರೆ, ಚಿನ್ನ-
ದಲುಗಿನ ನುಣುಪೆ
ನವಿರೆ
ಲೋಲುಪ ಮಖಮಲ್ಲೆ
ಮದಿರೆ, ಕಪ್ಪೆಚಿಪ್ಪಿನ ಸಿಂಬಿ
ಒಳಗೆ ಕೌತುಕದುಂಬಿ
ಸರಸವೋ
ಸಾಗರವೋ;
ಒಂದೇ ಬಟ್ಟಲು ನಿನ್ನನ್ನೆಂದೂ ಹಿಡಿದಿಟ್ಟಿಲ್ಲ
ಒಂದೇ ಹಾಡಲ್ಲ, ಒಬ್ಬ ರಸಿಕನಲ್ಲ
ನೀನು ವೃಂದಗಾನಪ್ರಿಯೆ, ಸಮೂಹಜೀವಿ
ಹಂಚಿಕೊಳ್ಳಲೇಬೇಕು ನಿನ್ನನ್ನು.
ಒಮ್ಮೊಮ್ಮೆ
ನಶ್ವರ ನೆನಪು-
ಗಳನ್ನುಣ್ಣುತ್ತಿ;
ನಿನ್ನಲೆಗಳ ಮೇಲೆ ನಮಗೆ
ಗೋರಿಯಿಂದ ಗೋರಿಗೆ ಸವಾರಿ,
ಮಂಜುಗಟ್ಟಿದ ಸಾವ ಗವಿಗಳ ನೀನು ಕೊರೆದು ತೆಗೆದಾಗ,
ನಮಗದೋ ದುಃಖ
ನಾಕು ಹನಿ, ತಾತ್ಕಾಲಿಕ.
ನಿನ್ನ
ದಿವಿನಾದ
ವಸಂತದ ದಿರಿಸು
ವಿಭಿನ್ನ,
ಟಿಸಿಲುಗಳಲ್ಲಿ ನೆತ್ತರೇರುತ್ತದೆ,
ಗಾಳಿ ಹಗಲ ಉತ್ತೇಜಿಸುತ್ತದೆ,
ನಿನ್ನ ಸ್ಥಿರ ಚೇತನದ
ಕುರುಹೂ ಉಳಿಯುವುದಿಲ್ಲ.
ಮದಿರೆ ವಸಂತವನ್ನು
ಕದಳಿಸುತ್ತದೆ, ಆನಂದ
ಭುವಿಯೊಡಲಿನ ಸಸಿಯಂತೆ ಹೊಮ್ಮುತ್ತದೆ,
ಗೋಡೆಗಳು, ಬಂಡೆ
ಗುಡ್ಡಗಳು ಕುಸಿಯುತ್ತವೆ
ಬಿರುಕುಗಳು ಮುಚ್ಚುತ್ತವೆ
ಹಾಡೊಂದು ಹುಟ್ಟುತ್ತದೆ.
ಹಳೆಯ ಕವಿಯ ಹಾಡು
ಕಾನನದ ಏಕಾಂತದಲಿ
ಮದಿರೆಯ ಬೋಗುಣಿ, ನೀನು, ನಾನು
ಪ್ರೀತಿಯ ಚುಂಬನಕೆ
ಮಧು ಸಮ್ಮಿಲನ.
ನನ್ನ ನಲ್ಲೆ, ನಿನ್ನ ನಡುವು
ಮದಿರೆ ಬಟ್ಟಲಿನ
ತುಳುಕುವ ತಿರುವು
ನಿನ್ನ ಮೊಲೆ ದ್ರಾಕ್ಷಿಗೊಂಚಲು
ಮೊಲೆತೊಟ್ಟೆ ದ್ರಾಕ್ಷಿ
ಹೊಕ್ಕುಳು ನಿನ್ನೊಡಲಿಗೆ ಒತ್ತಿದ
ವಿಮಲ ಮುದ್ರೆ
ನಿನ್ನ ಪ್ರೇಮ ಎಣೆಯಿಲ್ಲದ
ಮಧುವಿನ ಧಬಧಬೆ
ನನ್ನ ಇಂದ್ರಿಯಗಳಿಗೆ ಕಳೆಗಟ್ಟುವ ಬೆಳಕು
ಇಳೆಯ ಜೀವದ ಮೆರುಗು.
ಆದರೆ ನೀನು ಪ್ರೀತಿಗೂ ಮಿಗಿಲು,
ಸುಡುಸುಡುವ ಮುತ್ತು,
ಬೆಂಕಿಯ ಬಿಸಿ,
ಜೀವಮಧುವಿಗೂ ಹೆಚ್ಚು;
ನೀನು
ರಸಿಕನಿಗೆ ಸಮುದಾಯ,
ಪಾರದರ್ಶಕತೆ,
ಹಿಮ್ಮೇಳದ ಶಿಸ್ತು,
ಹೂವುಗಳ ರಾಶಿ.
ಟೇಬಲ್ಲಿನ ಮೇಲೆ ಚದುರ ಮದಿರೆಯ
ಬಾಟಲಿಯ ಬೆಳಕು
ನನಗಿಷ್ಟ
ನಾವು ಮಾತಾಡುವಾಗ.
ಅದನ್ನು ಹೀರು,
ಹೊನ್ನಿನ ಪ್ರತಿ ಹನಿಯಲ್ಲೂ,
ಗೋಮೇಧಿಕದ ಪ್ರತಿ ಬಟ್ಟಲಲ್ಲೂ,
ಪ್ರತಿ ನೇರಳೆ ಚಮ್ಮಚೆಯಲ್ಲೂ,
ಮತ್ತೆ ಮತ್ತೆ ನೆನೆ,
ಶರದ್ಕಾಲವು ಮದಿರೆಯ ಗಡಿಗೆಯನ್ನು
ತುಂಬಲು ಬಸಿದ ಬೇನೆಯನ್ನು;
ಹಾಗೆಯೇ ಆಫೀಸಿನ ಸಮಾರಂಭಗಳಲ್ಲಿ
ಪ್ರತಿ ಮನುಷ್ಯನೂ ಮರೆಯದಿರಲಿ
ತನ್ನ ನೆಲವನ್ನು, ತನ್ನ ಕರ್ತವ್ಯವನ್ನು,
ಹಾಗೂ ಮದಿರೆಯ ಭಜನೆಯನ್ನು ಹರಡುವುದನ್ನು.