“ಈ ಧೂಳಿನಿಂದಲೇ ಏಳಬೇಕು ನೆಲದೇವತೆಗಳ ನಾಡು ...”
ಕೋಟಿಗಾನಹಳ್ಳಿ ರಾಮಯ್ಯನವರ 'ದರ್ಗಾಮಾಳದ ಚಿತ್ರಗಳು'
ಇತ್ತೀಚೆಗೆ ಪ್ರಕಟವಾದ ಕೋಟಿಗಾನಹಳ್ಳಿ ರಾಮಯ್ಯನವರ ದರ್ಗಾಮಾಳದ ಚಿತ್ರಗಳು ಪುಸ್ತಕದ ಕುರಿತು ಸಂಕೇತ ಪಾಟೀಲ ಒಂದು ಟಿಪ್ಪಣಿ ಬರೆದಿದ್ದಾರೆ.

Nature photographyಯ ಹಲವು ಬಗೆಗಳಲ್ಲಿ macrophotography ಕೂಡ ಒಂದು. ಭವ್ಯವೂ ವಿಶಾಲವೂ ಆದದ್ದನ್ನು ಸೂಕ್ತ ಅಂತರದಿಂದ ಒಂದು ಚಿಕ್ಕ ಚೌಕಟ್ಟಿಗೆ ಅಳವಡಿಸಿ ಅದರೊಳಗೆ ಸಿಕ್ಕದ್ದನ್ನೆಲ್ಲ ಸ್ಥೂಲವಾಗಿ ಹಿಡಿದಿಟ್ಟು ತೋರಿಸುವುದು ಚಿತ್ರಗ್ರಹಣದ ಒಂದು ಬಗೆಯಾದರೆ ಚಿಕ್ಕಪುಟ್ಟ ವಸ್ತುಗಳನ್ನು ಜೀವಿಗಳನ್ನು ಅತ್ಯಂತ ಹತ್ತಿರದಿಂದ ಗಮನಿಸಿ ಸಾಮಾನ್ಯವಾಗಿ ನಮಗೆ ಕಾಣದ ವಿವರಗಳನ್ನು ಸ್ಪಷ್ಟವಾಗಿ ಕಾಣಿಸುವುದು ಇನ್ನೊಂದು ಬಗೆ. Macrophotographyಯ ಬಗೆ ಇಂಥದ್ದು. ಅದು ಭೂತಗನ್ನಡಿಯಂತೆ ಕೆಲಸಮಾಡುತ್ತ ಸಾಮಾನ್ಯವೆಂದು ತೋರುವ ವಸ್ತುಗಳಲ್ಲಿ ಅಡಕವಾಗಿರುವ ಸಂಕೀರ್ಣ ವಿನ್ಯಾಸಗಳು, ಮಾದರಿಗಳು ಮತ್ತು ರಚನೆಗಳ ಸೂಕ್ಷ್ಮ ಪ್ರಪಂಚಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ನೀರಿನ ಹನಿಯೊಂದು ಸ್ಫಟಿಕದ ಗೋಳವಾಗುತ್ತದೆ. ಕಳಚಿಬಿದ್ದ ಎಲೆಯ ಮೇಲ್ಮೈಯಲ್ಲಿ ಸಂಕೀರ್ಣವಾಗಿ ಹೆಣೆದುಕೊಂಡಿರುವ ಜಾಲವನ್ನು ಕಾಣಿಸುತ್ತದೆ. ಸಣ್ಣ ಕೀಟವೊಂದರ ಪುಟ್ಟಪಾದಗಳ ಆಶ್ಚರ್ಯಕರವಾದ ವಿನ್ಯಾಸವನ್ನು ಬಹಿರಂಗಪಡಿಸುತ್ತದೆ. ಎಲ್ಲೆಲ್ಲೂ ಮತ್ತು ಯಾವಾಗಲೂ ನಮ್ಮ ಸುತ್ತಮುತ್ತಲೂ ಇರುವ ಆದರೆ ನಮಗೆ ವಿರಳವಾಗಿ ಗೋಚರಿಸುವ ದೃಶ್ಯ ಶ್ರೀಮಂತಿಕೆಯ ವಿಶ್ವವನ್ನು ದರ್ಶಿಸುತ್ತದೆ.
ಸೂಕ್ಷ್ಮ ವಿಷಯಗಳ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವ ಮೂಲಕ, macrophotographyಯು ನಮ್ಮ ನೋಟಕ್ರಮವನ್ನು ಬದಲಾಯಿಸಿಕೊಳ್ಳಲು, ಬೇಕಾದಂತೆ ಹಿಗ್ಗಿಸಿಕೊಳ್ಳಲು, ಕುಗ್ಗಿಸಿಕೊಳ್ಳಲು ಒತ್ತಾಯಿಸುತ್ತದೆ. ಸೆರೆಹಿಡಿಯಲು ಯೋಗ್ಯವಾದಂಥ ವಸ್ತುಗಳು ಸಂಗತಿಗಳು ಯಾವುವು ಎಂಬುದರ ಕುರಿತು ನಮ್ಮ ಪೂರ್ವನಿಗದಿತ ಕಲ್ಪನೆಗಳಿಗೆ ಸವಾಲೊಡ್ಡುತ್ತದೆ. ನಮ್ಮ ಸುತ್ತಲಿನ ಪ್ರಪಂಚವನ್ನು ಮೊದಲಿಗಿಂತ ಹೆಚ್ಚು ಆಸ್ಥೆಯಿಂದ ಗಮನಿಸುವ ಅಗತ್ಯವಿದೆ ಎಂದು ತೋರಿಸಿಕೊಡುತ್ತದೆ. ಹಕ್ಕಿಗಳ, ವನ್ಯಜೀವಿಗಳ ಫೋಟೋ ತೆಗೆಯಬಯಸುವವರ ಲಕ್ಷ್ಯ ಯಾವಾಗಲೂ ಆಕಾಶದೆತ್ತರದಲ್ಲಿದ್ದರೆ ಇಂಥ ಚಿತ್ರಗಳನ್ನು ಸೆರೆಹಿಡಿಯಬಯಸುವವರ ಲಕ್ಷ್ಯ ನೆಲಮಟ್ಟದಲ್ಲಿರುತ್ತದೆ. ಅದು ಅವರನ್ನು ತಗ್ಗಿಸುತ್ತದೆ. ಹೊಡೆದರೆ ಹುಲಿಯನ್ನೇ ಸಿಂಹವನ್ನೇ ಹೊಡೆಯಬೇಕೆಂದು ದೂರದೂರಿನ ಹೊರದೇಶಗಳ ಕಾಡುಗಳಿಗೆ ಹೋಗುವ ಲೆಕ್ಕವಿಲ್ಲದಷ್ಟು ಛಾಯಾಚಿತ್ರಗಾರರು ನಮ್ಮಲ್ಲಿದ್ದಾರೆ. ತಪ್ಪೇನಿಲ್ಲ. ಆದರೆ, ವಿಸ್ಮಯಕಾರಿ ದೃಶ್ಯಗಳನ್ನು ವಿಷಯಗಳನ್ನು ಕಂಡುಕೊಳ್ಳಲು ನಾವು ನಮ್ಮ ನೆಲೆಯನ್ನು ಬಿಟ್ಟು ಬೇರೆಲ್ಲೂ ಹುಡುಕುತ್ತ ಹೋಗಬೇಕಾಗಿಲ್ಲ ಎಂದು ಈ ನೋಡುವ ಬಗೆ ಸಾಬೀತುಪಡಿಸುತ್ತದೆ.
Photographyಯ ಪರಿಭಾಷೆಯಲ್ಲಿ ಹೇಳುವುದಾದರೆ ಕೋಟಿಗಾನಹಳ್ಳಿ ರಾಮಯ್ಯನವರು ಒಬ್ಬ macrophotographer ಇದ್ದಂತೆ. ಯಾವುದು ಸಾಮಾನ್ಯ ಅದು ಅಸಾಮಾನ್ಯ ಕೂಡ. ಅದರಲ್ಲಿ ಭವ್ಯತೆ, ವಿಪುಲತೆ, ಅದೇ ರೀತಿ ಕ್ಷುದ್ರತೆ, ಸಂಕುಚಿತತೆ ಎಲ್ಲವೂ ಇದೆ. ಅದನ್ನು ಇಡಿಯಾಗಿ ಕಂಡುಕೊಳ್ಳುವ ಕಾಣ್ಕೆ ಬೇಕಷ್ಟೇ. ಅದು ಅವರಿಗಿರುವುದರಿಂದಲೇ ಅವರ ಬರಹಗಳು ನಮ್ಮ ಸುತ್ತಮುತ್ತಲೂ ಇರುವ ನಾವು ಸಾಮಾನ್ಯವಾಗಿ ನೋಡಿಯೂ ಕಾಣದ ವ್ಯಕ್ತಿಗಳು, ವಿದ್ಯಮಾನಗಳು, ಜೀವಿಗಳನ್ನು ಅವರ ಮತ್ತು ಅವುಗಳ ಸೂಕ್ಷ್ಮ ವಿವರಗಳಲ್ಲಿ ಅನಾವರಣಗೊಳಿಸುವಂಥವು. ಅವು ದರ್ಗಾಮಾಳದ ಚಿತ್ರಗಳು ಎಂಬ ಈ ಪುಸ್ತಕದಲ್ಲಿ ಮೇಳೈಸಿವೆ. ಬಿ. ಶ್ರೀಪಾದ ಭಟ್ ಮತ್ತು ಕೆ. ಪಿ. ಲಕ್ಷಣ್ ಅವರ ಮೊದಲ ಮಾತುಗಳು ಈ ಚಿತ್ರಗಳಿಗೆ ಸೂಕ್ತ context ಒದಗಿಸುತ್ತವೆ.
“ದರ್ಗಾಮಾಳ — ಕೋಲಾರ ಬೆಟ್ಟದ ಮೇಲಿರುವ ಆರು ಊರುಗಳ ನಡುವಿನ ಜೀವಕೇಂದ್ರ.” ಈ ಪುಸ್ತಕದಲ್ಲಿ ಕಾಣುವುದು ಆ ಪರಿಸರದ, ಅಲ್ಲಿನ ವ್ಯಕ್ತಿಗಳ, ಅವರ ನಿತ್ಯಗಟ್ಟಳೆಯ, ಅವರನ್ನೊಳಗೊಂಡ ಘಟನೆಗಳ ಆಪ್ತ ಚಿತ್ರಣ. ಇಲ್ಲಿ ನಮಗೆ ತೇಜಸ್ವಿಯವರ ಮಂದಣ್ಣ, ಬಿರಿಯಾನಿ ಕರಿಯನಂಥವರನ್ನು ಹೋಲುವ ರಹೀಮ, ತಿಮ್ಮುಡು ಮೊದಲಾದವರು ಎದುರಾಗುತ್ತಾರೆ. ಇವರಲ್ಲಿ ಅನೇಕರು ದಕ್ಖನಿ ಅಥವಾ ತೆಲುಗಿನಲ್ಲಿ ಕನ್ನಡವನ್ನೋ ಕನ್ನಡದಲ್ಲಿ ತೆಲುಗು, ದಕ್ಖನಿಯನ್ನೋ ಮಾತನಾಡುವವರು. ತಮ್ಮ ವಿಲಕ್ಷಣ ನುಡಿಯ ಮೂಲಕವೇ ಹಲಬಗೆಯ ಕತೆಗಳು, ವ್ಯಾವಹಾರಿಕತೆ, ತಾತ್ತ್ವಿಕತೆ, ಲೋಕದೃಷ್ಟಿಯನ್ನು ಕೇಳಿಯೂ ಕೇಳದೆಯೂ ಒದಗಿಸುವವರು. ಹಾಗೆ ಮಾಡುವಾಗ ಭಾಷೆ ಸಾಲದೇ ಹೋದರೆ ಕೈಬೆರಳುಗಳು ಮತ್ತಿತರ ಆಂಗಿಕ ಅಭಿನಯದಿಂದ ತಮ್ಮ ಇರಾದೆಯನ್ನು ಸ್ಪಷ್ಟವಾಗಿ ಸೂಚಿಸಬಲ್ಲವರು. ಮಕ್ಕಳಂತೂ ದೊಡ್ಡವರನ್ನೂ ಮೀರಿಸುವಂಥವರು. ತಮ್ಮವೇ ನಾಟಕಗಳನ್ನು ಕಟ್ಟಿಕೊಂಡು ಆಡಿ ಆಡಿಸುವಂಥವರು.
ಇವರೆಲ್ಲರ ನಡುವೆ ರಾಮಯ್ಯನವರ ಪಾತ್ರ! ಅದು ಒಮ್ಮೊಮ್ಮೆ ಕರ್ವಾಲೋರನ್ನೂ ಬಿಳಿಗೆರೆ ಕೃಷ್ಣಮೂರ್ತಿಯವರ ಛೂಮಂತ್ರಯ್ಯನವರನ್ನೂ ನೆನಪಿಗೆ ತಂದೀತು. ಅವರಾದರೋ ಹೇಗಾದರೂ ಮಾಡಿ ಒಮ್ಮೊಮ್ಮೆಯಾದರೂ ತಮ್ಮ ವಾದದಲ್ಲಿ ಗೆಲ್ಲುತ್ತಿದ್ದವರು, ತಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳುತ್ತಿದ್ದವರು. ಇಲ್ಲಿ ರಾಮಯ್ಯನವರ ಮಾತು ನಡೆಯುವುದು, ಅವರ ಕಾರ್ಯಸಾಧನೆಯಾಗುವುದು ಅಷ್ಟಕ್ಕಷ್ಟೇ! ಇವರೆಲ್ಲ ಘಟಾನುಘಟಿಗಳ ನಡುವೆ ಕೊನೆಗೆ ಅವರಿಗೆ ಉಳಿಯುವುದು ತಲೆಚಚ್ಚಿಕೊಳ್ಳುವ, ಜಾಡಿಸಿ ಒದೆಯುವ ಹವಣು ಮಾತ್ರ.
ನೇರವಾದ ತಿಳಿಹಾಸ್ಯದ ಮಾದರಿಯ ಈ ಬರಹಗಳಲ್ಲಿ ಅಲ್ಲಲ್ಲಿ ಸಿಟ್ಟು, ನಿರಾಸೆ, ಹರಿತವಾದ ವ್ಯಂಗ್ಯ ಕಾಣುತ್ತದೆ. ಆದರೆ ಆ ರೋಷದಲ್ಲೂ ಕಟುತನದಲ್ಲೂ ಕಾರುಣ್ಯದ ಸೆಲೆಯಿದೆ. ಭಾವುಕವಲ್ಲದ ಆದರೆ cynical ಕೂಡ ಆಗದ ಜೀವಪರತೆಯ ಸಮತೋಲವಿದೆ. ಭವಿತವ್ಯದ ಕುರಿತ ನಂಬಿಕೆಯ ಜೊತೆಗೆ ಗಾಢವಾದ ವಿಷಾದ ಹದಬೆರೆತಿದೆ.
ಬೆಟ್ಟದ ಮೇಲಿನ ಈ ದಿಕ್ಕೆಟ್ಟ ಊರಾದ ಪಾಪರಾಜನಹಳ್ಳಿಯ ಮಕ್ಕಳ ಹೆಸರುಗಳು ಇವತ್ತಿನ ಭಾರತ ದೇಶದ ಚರಿತ್ರೆಯಲ್ಲಿ ಕಾಣಿಸುತ್ತವೆಯೋ ಇಲ್ಲವೋ ಹೇಳುವುದು ಕಷ್ಟ. ಆದರೂ ಈ ಮಕ್ಕಳಿಗೆ ತಮ್ಮ ಹೆಸರುಗಳನ್ನು ಚಂದ್ರಲೋಕದ ಆಲದಮರದ ಎಲೆಗಳಲ್ಲಿ ಬರೆದಿರುತ್ತಾರೆ ಎಂಬ ಗಟ್ಟಿ ನಂಬಿಕೆ ಇದೆ. ಅಂತೆಯೇ ಶಾಲೆ ಬಿಟ್ಟು ಕೂಲಿಕಾರನಾಗಬೇಕಾಗಿ ಬಂದ ಸುಮನ್ ಹೆಸರನ್ನೂ ಅಲ್ಲಿ ಬರೆದಿರಲೇಬೇಕು.
ಸುಮನ್ … ಒಂದು ಅಂಥ ಕಳಚಿದ ಎಲೆ, ಅಳಿಸಿದ ಚರಿತ್ರೆಯ ಪುಟ.
ನಿರಂತರವಾಗಿ ಜನರೊಂದಿಗೆ ಒಡನಾಡುತ್ತ ತಳಸಮುದಾಯದವರ ಹಕ್ಕುಗಳಿಗಾಗಿ ಹೋರಾಡುತ್ತ ಬಂದವರಿಗೆ ಹೊರಗಿನವರಿಂದಲೂ ಒಳಗಿನವರಿಂದಲೂ ಉಂಟಾಗುವ ಭ್ರಮನಿರಸನವೇ ಸ್ಥಾಯಿಯಾಗುತ್ತದೇನೋ. ಹಾಗಿದ್ದೂ “ಈ ಧೂಳಿನಿಂದಲೇ ಏಳಬೇಕು ನೆಲದೇವತೆಗಳ ನಾಡು,” ಎಂಬ ಆಶಯವನ್ನು ಆವಾಹಿಸಿಕೊಳ್ಳುವುದೂ ಅನಿವಾರ್ಯವೇನೋ.
ಇಲ್ಲಿರುವ ‘ಯಾಕೋ ಎದೆ ಭಾರವಾಗುತ್ತಿದೆ’, ‘ಬಾವುಟದ ನೆರಳಿಗೆ ನೋವಾಗದಿರಬಹುದು ಆದರೆ’, ‘ಊರು ಒಡೆಯಲಿ; ಆದರೆ ಕುರಿಮಂದೆಗಳು?’, ‘ಬೆಳಗಿರಿ ಜ್ಯೋತಿಗಳೆ’, ಇಂಥ ಬರಹಗಳು ಒಳ್ಳೆಯ ಸಣ್ಣಕತೆಗಳಂತೆ ಓದಿಸಿಕೊಂಡು ಹೋಗುತ್ತವೆ. ದಿನಚರಿಯ ದಾಖಲಾತಿಯಂಥ ಇಲ್ಲಿನ ಹಲವು ಬರಹಗಳು ಅದಕ್ಕಿಂತ ಹೆಚ್ಚೇನೋ ಆಗುತ್ತ ಅವಕ್ಕೊಂದು ಆವೇಗ ಸಿಕ್ಕು ಕತೆಯೇ ಆಗುತ್ತ ಹೋಗುತ್ತಿದ್ದಂತೆ ಹೇಳುವವರ ತಾದಾತ್ಮ್ಯ ತಪ್ಪಿ ಅಲ್ಲಿಯೇ ನಿಂತುಬಿಡುವುದು ಕೇಳುವವರಿಗೆ ಅರೆಗುಟುಕು ಮಾಡಿಸುತ್ತವೆ.
ಎರಡು-ನಾಕು ಪುಟಗಳ ಈ ಚಿಕ್ಕ ಕತೆಗಳಂಥವನ್ನು, ಚಿಟಿಕೆಚಿತ್ರಗಳನ್ನು ಬಿಡಿಬಿಡಿಯಾಗಿಯೂ ಆಸ್ವಾದಿಸಬಹುದು. ಅವನ್ನು ಇಡಿಯಾಗಿ ಒಂದೆಡೆ ಹಿಡಿದಿಟ್ಟ ಒಂದು ದೇಶಕಾಲದ ನಿರಂತತೆಯ ಕಿಂಡಿಯ ಮೂಲಕವೂ ನೋಡಬಹುದು. ಅನೇಕ ಜೀವಂತ ಪಾತ್ರಗಳು, ಅವುಗಳ ಕತೆ ಉಪಕತೆಗಳು, ಗಿಡ-ಮರ-ಬಳ್ಳಿ-ಪ್ರಾಣಿ-ಪಕ್ಷಿಗಳು; ಇವೆಲ್ಲದರ ಸುತ್ತ ಹೆಣೆದುಕೊಂಡ ಲೋಕದ ಘನವಿದ್ಯಮಾನಗಳು — ಈ ಪುಸ್ತಕವನ್ನು ಒಂದು ದೊಡ್ಡ ಕಾದಂಬರಿಯ sketch ಎಂದು ಕೂಡ ಓದಿಕೊಳ್ಳಬಹುದು.
ಅದೇನೇ ಇರಲಿ, ಇಲ್ಲಿನ ಬರಹಗಳಲ್ಲಿ ನಮ್ಮ ಸಮಾಜವು ಹೆಚ್ಚಾಗಿ ಯಾರನ್ನು ಗಮನಿಸಿರುವುದಿಲ್ಲವೋ ಅವರೊಂದಿಗೆ ತೀವ್ರಾಸಕ್ತಿಯಿಂದ ತೊಡಗಿಕೊಂಡು ಅವರನ್ನು ಮುನ್ನೆಲೆಗೆ ತರುವ ಪ್ರಯತ್ನವಿದೆ. ಚಿಕಿತ್ಸಕ ಒಳನೋಟಗಳಿರುವ ಈ ಪ್ರಯತ್ನವು ಪ್ರಾಮಾಣಿಕವಾದುದು, ವಸ್ತುನಿಷ್ಠವಾದುದು. ಇಲ್ಲಿ ಯಾವುದೇ ವ್ಯಕ್ತಿಗೆ ಸಮುದಾಯಕ್ಕೆ ದಿವ್ಯತ್ವವನ್ನು ಅಧ್ಯಾರೋಪಿಸುವ ಅನುಗ್ರಾಹಕತೆಯೂ ಧಾವಂತವೂ ಇಲ್ಲ. ಸುತ್ತಣ ಪರಿಸರವನ್ನು ಇಡಿಯಾಗಿ ಪರಿಭಾವಿಸುವ ಮತ್ತು ಹಾಗೆ ಮಾಡುವ ಕ್ರಮವನ್ನು ಉಳಿದವರಿಗೆ ತೋರಿಸುವ ಮಾದರಿಯನ್ನು ನಾವು ಕಾಣಬಹುದು. ತನ್ನ ಪರಿಸರದಲ್ಲಿ ನಡೆಯುವ ಸಣ್ಣಪುಟ್ಟ ಎಲ್ಲವನ್ನೂ ಪರಿಶೀಲಿಸುತ್ತ, ಅವನ್ನು ಕೌತುಕದಿಂದ ಪರಿಭಾವಿಸುತ್ತ, ತೀವ್ರ ಪ್ರಾಮಾಣಿಕತೆಯಿಂದ ಸ್ಪಂದಿಸುತ್ತ ಹೊಸ ಅರಿವು ಮೂಡಿಸಿಕೊಳ್ಳುತ್ತ ನಮ್ಮ ಅರಿವನ್ನೂ ಹಿಗ್ಗಿಸುವ ಬರಹಗಳು ಇವು.
ಇದನ್ನೂ ಓದಿ …
ಬುದ್ಧನ ಕಾಲದ ಸಮಾಜದಲ್ಲಿ ಮಹಿಳೆಯ ಪಾತ್ರ
ಇತ್ತೀಚೆಗೆ ಪ್ರಕಟವಾದ ಶೈಲಜಾ ಅವರ ಥೇರೀಗಾಥಾ ಕಾಣಿಸಿದ ಹೆಣ್ಣು: ಬೌದ್ಧ ಧರ್ಮದಲ್ಲಿ ಮಹಿಳೆ ಕೃತಿಯ ಕುರಿತು ಸಂಕೇತ ಪಾಟೀಲ ಒಂದು ಟಿಪ್ಪಣಿ ಬರೆದಿದ್ದಾರೆ.