ಇಂದು ಫೆಬ್ರವರಿ 4, ಸ್ವರಾಧಿರಾಜ ಪಂ. ಭಿಮಸೇನ ಜೋಶಿ ಅವರು ಹುಟ್ಟಿದ ದಿನ. ಖ್ಯಾತ ಸರೋದವಾದಕ ಪಂ. ರಾಜೀವ ತಾರಾನಾಥ ಅವರನ್ನು ಶ್ರೀದೇವಿ ಕಳಸದ ಮಾತನಾಡಿಸಿದಾಗ ಅವರು ಭೀಮಸೇನರ ಕುರಿತು ತಮ್ಮ ಕೆಲ ನೆನಪುಗಳನ್ನು ಆಪ್ತವಾಗಿ ಹಂಚಿಕೊಂಡರು.
ರೇಡಿಯೋ ಆನ್ ಮಾಡುತ್ತಿದ್ದಂತೆ ‘ತುಂಗಾತೀರದಿ…’ ಅನುರಣಿಸಿತು. ಮುಂದೆ ಆ ಘನಗಂಭೀರ ಧ್ವನಿಯೇ ಮಾತಿನರೂಪು ತಳೆದು ಮೈನವಿರೇಳುವಂತೆ ಮಾಡುತ್ತದೆ ಎಂದು ಎಣಿಸಿರಲಿಲ್ಲ. ಏಕೆಂದರೆ ಆ ತನಕ ಹಿಂದಿ, ಮರಾಠಿಯ ಸಂದರ್ಶನಗಳಲ್ಲಿ ಆ ಧ್ವನಿಯನ್ನು ಕೇಳಿದ್ದಾಗಿತ್ತು. ಆದರೆ ಇಲ್ಲಿ ಕನ್ನಡ!

“ನಾನು ಬಿಎ ಡಿಗ್ರೀ ತುಗೊಂಡು ಆಮ್ಯಾಲೆ ಸಂಗೀತ ಸುರು ಮಾಡ್ಲಿ ಅಂತನ್ನೂದು ನಮ್ಮಪ್ಪನ ಇಚ್ಛಾ ಇತ್ತು. ಆದ್ರ ಏನೇನೋ ಕೆಲಸಾ ಮಾಡ್ಕೋತ ಕಲೀಲಿಕ್ಕೆ ಸಂಗೀತ ಸೈಡ್ ಬಿಜ಼ಿನೆಸ್ ಅಲ್ಲ. ಈಗಿನವರು ಸಂಜೀಮುಂದ ವ್ಯಾಳ್ಳೆ ಸಿಕ್ರ ಹೆಂಗ ಲಿಪ್ಸ್ಟಿಕ್ ಹಚ್ಕೋತೀವಲ್ಲಾ ಹಂಗ ಸಂಗೀತ ಕಲೀತಾರ. ಹಂಗಲ್ಲ ಅದು, 24 ತಾಸೂ ಗುರುವಿನ ಸಹವಾಸದೊಳಗ ಇರಬೇಕು. ಮತ್ತ ಕಲಾವಿದನ ಜೀವನದೊಳಗ ಒಮ್ಮೊಮ್ಮೆ ಹಿಂಗ ವ್ಯಾಳ್ಯಾ ಬರ್ತದಲಾ, ಎದಕ್ಕ ಬೇಕು ಸುಳ್ಳ ಇದೆಲ್ಲಾ, ಎಲ್ಲ್ಯರ ಥಣ್ಣಗ ಒಂದ ನೌಕರಿ ಮಾಡ್ಕೊಂಡು ಗಾನಾ ಮಾಸ್ತರ ಆಗೂದ ಛುಲೋ ಅನ್ನಿಸಿಬಿಡ್ತದ.”
ಹೊಟ್ಟೆಪಾಡಿಗಾಗಿ ಎಲ್ಲೆಲ್ಲಿಯೋ ಕೆಲಸ ಮಾಡಿ ಸಂಜೆಹೊತ್ತಿಗೆ ದಣಿದು ಮನೆ ಸೇರುವ ಇಂದಿನ ಯುವಕ ಯುವತಿಯರಿಗೆ ಸಂಗೀತ ಕಲಿಯಲು ಸಮಯ ಮತ್ತು ಉತ್ಸಾಹವಾದರೂ ಎಷ್ಟಿದ್ದೀತು? ಇದು ಅಷ್ಟರಪೂರ್ತೆ ಮುಖ ತೊಳೆದುಕೊಂಡು ಲಿಪ್ಸ್ಟಿಕ್ ಹಚ್ಚಿಕೊಂಡು ಆಗಿಂದಾಗ ತಯಾರಾದಂತೆ ಎಂಬ ಧ್ವನ್ಯರ್ಥ ಅವರ ಮಾತಿನಲ್ಲಿತ್ತೇನೋ.
“ಯಾಕಂದ್ರ ದರವೊಂದು ಪ್ರೋಗ್ರಾಮೂ ಪರೀಕ್ಷಾನಽ. ಛುಲೋ ಹಾಡಿದ್ದನ್ನ ಬಯಸೂದು ಮನಷ್ಯಾನ ಸ್ವಭಾವ. ಈ ಪರೀಕ್ಷಾಕ ಧೈರ್ಯದಿಂದ ಮಾರೀ ಕೊಡಬೇಕು […] ಆಗ ಎಲ್ಲಾ ಕಾರ್ಯಕ್ರಮದೊಳಗೂ ಕೇಸರಬಾಯಿ ಕೇರಕರ, ಬಡೇ ಗುಲಾಂ ಅಲೀ ಖಾನ್, ವಿಲಾಯತ್ ಖಾನ್, ಅಮ್ಜದ್ ಅಲೀ ಖಾನ್ ಇಂಥಾವ್ರ ನಡಕ ನಾ ಸ್ಯಾಂಡ್ವಿಚ್ ಆಗಿಬಿಡ್ತಿದ್ದೆ. ಯಾಕಂದ್ರ ಮದಲೇಕ ಆಮೀರ್ ಖಾನ್, ಆಮೇಲೆ ನಾನು, ನಂದಾದ ಮೇಲೆ ವಿಲಾಯತ್ ಖಾನ್. ಇವರಿಬ್ಬರ ನಡಕ ನಾ ಹೆಂಗ ಬದುಕಬೇಕು?! ಇದು ದೊಡ್ಡ ಜವಾಬ್ದಾರಿ. ಈ ಜವಾಬ್ದಾರೀನಽ ನನಗ ಕಲಿಸಿದ್ದು, ಸ್ವಲ್ಪಽ ಹೊತ್ತಿನೊಳಗ ಹೆಂಗ ಹಾಡಬೇಕು. ಅದಕ್ಕಾಗಿ ಹೆಂಗ ರಿಯಾಝ್ ಮಾಡಬೇಕು … ರಿಯಾಝ್ ಬ್ಯಾರೇ, ಎದರಗೆ ಹಾಡೂದಽ ಬ್ಯಾರೇ.”
2005ರಲ್ಲಿ ಪಂಡಿತ್ ಭೀಮಸೇನ ಜೋಶಿಯವರು ‘ಕರ್ನಾಟಕ ರತ್ನ’ ಪ್ರಶಸ್ತಿ ಪಡೆದಾಗ ಬೆಂಗಳೂರು ಆಕಾಶವಾಣಿ ಅವರನ್ನು ಸಂದರ್ಶಿಸಿದ ಸಂದರ್ಭ ಈ ಮೇಲಿನದು.
ಇದನ್ನು ಬರೆಯುತ್ತ ನೆನಪಿಗೆ ಬಂದಿದ್ದು ಅಮೆರಿಕದ ವಯೋಲಿನ್ ಕಲಾವಿದ ಜಾಶಾ ಹೈಫೆಟ್ಝ್ (Jascha Heifetz) ಮಾತು: “ನಾನು ಒಂದು ದಿನ ಅಭ್ಯಾಸ ಮಾಡದಿದ್ದರೆ ನನಗೆ ಗೊತ್ತಾಗುತ್ತದೆ; ಎರಡು ದಿನ ಮಾಡದಿದ್ದರೆ ವಿಮರ್ಶಕರಿಗೆ ಗೊತ್ತಾಗುತ್ತದೆ; ಮೂರನೇ ದಿನಕ್ಕೆ ಸಾರ್ವಜನಿಕರಿಗೆ ಗೊತ್ತಾಗುತ್ತದೆ.”
ಹೀಗೆ ರಿಯಾಝ್ ಮತ್ತು ಕಲಾವಿದರ ಜವಾಬ್ದಾರಿಯ ಬಗ್ಗೆ ಯೋಚಿಸುತ್ತಿದ್ದಾಗ ಕಣ್ಮುಂದೆ ಬಂದವರು, 91ರ ವಯಸ್ಸಿನಲ್ಲಿ ಈಗಲೂ ಬೆಳಗಿನ ಐದಕ್ಕೇ ಸರೋದ್ ಹಿಡಿದು ಕುಳಿತುಕೊಳ್ಳುವ ಹಿರಿಯ ಕಲಾವಿದ ಪಂ. ರಾಜೀವ ತಾರಾನಾಥ ಮತ್ತವರ ಮಾತು: “ಕಲಾವಿದ ಉಪವಾಸ ಇರ್ತಾನೋ, ಚುಮ್ಮರಿ ತಿಂದ ಬದಕ್ತಾನೋ, ರಿಯಾಝ್ ಬಿಟ್ರ ಅವ ಸತ್ತಂಗನ”.
ರಾಜೀವರಿಗೆ ಫೋನಾಯಿಸಿ, ಭೀಮಸೇನರನ್ನು ಹೇಗೆ ನೆನಪಿಸಿಕೊಳ್ಳುತ್ತೀರಿ ಎಂದೆ.
“ಆಗ ನಾ ನಮ್ಮಮ್ಮಾ ಅಪ್ಪಾನ ಜೋಡಿ ಬೆಂಗಳೂರಾಗಿದ್ದೆ. ನಮ್ಮನೀಗೆ ರೊಟ್ಟಿ ಶೀನಪ್ಪ ಮತ್ತ ಒಂದಿಬ್ರು ಹಾರ್ಮೋನಿಯಂ ಮತ್ತ ತಬಲಾ ಕಲಾವಿದ್ರು ಬರ್ತಿದ್ರು. ನಮ್ಮ ಅಪ್ಪನ ಮುಂದ ಸಂಗೀತ ಕಾರ್ಯಕ್ರಮ ಕೊಡೂದಂದ್ರ ಸಂಗೀತಗಾರರಿಗೆ ಒಂದು ದೊಡ್ಡ ಹೆಗ್ಗುರುತು ಇದ್ದ್ಹಂಗ. ಪಂಚಾಕ್ಷರಿ ಗವಾಯಿಗಳು, ಬಸವರಾಜ ರಾಜಗುರುಗಳು, ಶಂಕರಗೌಡ ಪಾಟೀಲರು, ವೆಂಕಟರಾವ್ ರಾಮದುರ್ಗಕರ್ [ಸವಾಯಿ ಗಂಧರ್ವರ ಹಿರಿಯ ಶಿಷ್ಯ] ಇವರೆಲ್ಲರೂ ಮನೀಗೆ ಬಂದು ಹಾಡಿ ಹೋಗ್ತಿದ್ರು.”
“ಬಹುಶಃ ನನಗಾಗ ಎಂಟೊಂಬ್ಹತ್ತು ವರ್ಷ ಇದ್ದೀತು. ಒಮ್ಮೆ ಭೀಮಸೇನರು ನಮ್ಮನೀಗೆ ಬಂದು ತಾಸಗಟ್ಲೇ ಅದ್ಭುತವಾಗಿ ಹಾಡಿದ್ರು. ಮತ್ತೊಮ್ಮೆ ನಾ ನಿಮ್ಮನೀಗೆ ಬರ್ತೀನಿ ಅಂತನೂ ಹೇಳಿಹೋದ್ರು. ಅದ ಮೊದಲ ಸಲಾ ನಾ ಅವರನ್ನ ನೋಡಿದ್ದು. ಮುಂದ 1945ರೊಳಗ ಅವರು ತಮ್ಮ ಮಾತಿನ್ಹಂಗ ಹೊಳ್ಳಿ ನಮ್ಮ ಮನೀಗೆ ಬಂದ್ರು. ಆದ್ರ 1942ರೊಳಗ ನಮ್ಮಪ್ಪ ತೀರಿಹೋಗಿದ್ರು. ‘ಅವರಿಲ್ಲಂದ್ರ ಏನಾತು, ಎದರ್ಗೆ ಅವರದೊಂದು ಫೋಟೋ ಇಡ್ರಿ. ಅವರ ಮಗ ಇದ್ದಾನಲ್ಲ, ನಾ ಹಾಡ್ತೀನಿ,ʼ ಅಂದ್ರು. ಅವತ್ತ ಬರೋಬ್ಬರಿ ಮೂರು ತಾಸು ಹಾಡಿದ್ರು. ಹಿಂಗ ಹಾಡಿದ್ರಲ್ಲಾ, ನಾ ಅವರ ಸಂಗೀತದ ಭಕ್ತ ಆಗಿಬಿಟ್ನಿ!”
“ಮುಂದ ಧಾರವಾಡದ ಕರ್ನಾಟಕ ಕಾಲೇಜಿನೊಳಗ ನಾ ಇಂಗ್ಲಿಷ್ ಮಾಸ್ತರಾಗಿ ನೌಕರಿ ಮಾಡಲಿಕ್ಹತ್ತೆ. ಅಲ್ಲಿ ಮನೋಹರ ಗ್ರಂಥಮಾಲಾದ ಜಿ.ಬಿ. ಜೋಶಿಯವರ ಮಗ ರಮಾಕಾಂತ ಓದ್ತಿದ್ದ. ಒಂದಿನಾ ಜಿ.ಬಿ. ಜೋಶಿ ತಮ್ಮ ಮನೀಗೆ ನನ್ನನ್ನ ಕರಿಕಳಿಸಿದ್ರು. ಜಿ.ಬಿ., ಭೀಮಸೇನರ ಅಪ್ಪ ಗುರುರಾಜಾಚಾರ್ಯರರ ತಮ್ಮ, ಅಂದ್ರ ಭೀಮಸೇನರ ಚಿಕ್ಕಪ್ಪ — ಅವರು ಒಂದ ದೊಡ್ಡ ಸಂಸ್ಕಾರ ರೂಪ. ಮಗ್ರಮಾ ಅಟ್ಟದ ಮ್ಯಾಲೆ ಮತ್ತೊಮ್ಮೆ ಭೀಮಸೇನರ ಭೇಟಿ ಆತು. ಹಂಗ ನೋಡಿದ್ರ ನನಗ ಅವರ ಜೋಡಿ ಅಂಥಾ ಒಡನಾಟೇನೂ ಇರಲಿಲ್ಲ, ಆದ್ರ ಅವರ ಗಾನಾದಿಂದ ನಾನು ಭಾಳ ಪ್ರಭಾವಿತನಾಗಿದ್ನಿ.”
“ನಮ್ಮ ಇಡೀ ದೇಶಕ್ಕ ಅವರು ಕಿರಾಣಾ ಘರಾಣಾದ ಸೂರ್ಯ ಇದ್ಹಂಗ. ಅಬ್ದುಲ್ ಕರೀಂ ಖಾನ್ ಸಾಹೇಬರು ಇಂದೋರದಿಂದ ಬಂದು ಮಿರಜದಲ್ಲಿದ್ದರು. ಮುಂದ ಕರ್ನಾಟಕಕ್ಕ ಬಂದರು … ಹುಬ್ಬಳ್ಳಿ, ಧಾರವಾಡ ಹಿಂಗ... ಇದೆಲ್ಲದರ ಫಲ ಕರ್ನಾಟಕದೊಳಗ ಫಲಿಸಿತು. ನಾವು ಕನ್ನಡದವರು ನಾಚಿಕಿ ಸ್ವಭಾವದವರು. ಮುನ್ನುಗ್ಗೂದಿಲ್ಲ. ಆದ್ರ ಭೀಮಸೇನರು ಪುಣೆಗೆ ಹೋಗಿಬಿಟ್ರು. ಅಲ್ಲಿ ಅವರು ದೇವರಾಗಿಬಿಟ್ರು. ಪುಣೇ ಮಂದಿ ಅವರನ್ನ ‘ಆಮಚಾ ಭೀಮಸೇನ’ ಅಂತ ಅಪಗೊಂಡ್ರು.”
“ಒಮ್ಮೇನಾತು, ಅವರನ್ನ ಭೆಟ್ಟಿ ಆಗಬೇಕು ಅಂತ ಪುಣೇಕ ಹೋದೆ. ಆಟೋ ಇತ್ತು, ಹತ್ತಿದೆ. ಎಷ್ಟ ತಿರಗಾಡಿದ್ರೂ ಅವರ ಮನಿ ಸಿಗವಾಲ್ದಾಗಿತ್ತು. ಕೊನೀಗೆ ಒಂದ ಗೇಟಿನ ಮುಂದ ಭೀಮಸೇನರು ನಿಂತಿದ್ದರು, ಮತ್ತವರ ಕಾರೂ ನಿಂತಿತ್ತು. ಹೋದಾವ್ನ ಅವರ ಕಾಲಿಗೆ ಬಿದ್ದೆ. ಆಟೋದವನೂ ಬಿದ್ದ. ಆಮ್ಯಾಲ ಆಟೋದಾವ್ನಿಗೆ ರೊಕ್ಕ ಎಷ್ಟಾತಪಾ ಅಂದೆ. ‘ಇವರು ದೇವರಿದ್ಹಂಗ ಇದ್ದಾರ. ಇವರ ಮನೀಗೆ ಕರ್ಕೊಂಬಂದ್ರ ಹೊಳ್ಳಿ ನನಗ ರೊಕ್ಕಾ ಕೊಡ್ಲಿಕ್ಕೆ ಬರ್ತೀ? ನಾಚಿಕಿ ಆಗಬೇಕು ನಿನಗ,’ ಅಂತ ಬೈದ ಹೋಗಿಬಿಟ್ಟ. ಇದು ನನ್ನ ಜೀವನದ ದೊಡ್ಡ ಘಟನಾಗಳೊಳಗ ಒಂದು.”
“ಮೇರು ಕಲಾವಿದ ಭೀಮಸೇನರನ್ನ ನಮ್ಮ ದೇಶ ಗುರುತಿಸಿದ್ದು ವಿನಾಕಾರಣ ಅಲ್ಲ, ಅಗದೀ ಒಳ್ಳೆಯ ಕಾರಣಕ್ಕ. ಕಠೋರ ರಿಯಾಝಂದ್ರ ಭೀಮಸೇನರದು. ಕಠೋರ ರಿಯಾಝಿನ ಫಲ ಹೆಂಗಿರತದ ಅಂದ್ರ ಭೀಮಸೇನರ ಹಾಡುಗಾರಿಕಿ ಹಂಗ. ತಮ್ಮ ಪ್ರತಿಭೆಯಿಂದ ಅವರು ಬೆಳಗ್ತಾ ಹೋದರು, ಸೂರ್ಯನ ಹಂಗ ಬೆಳದರು.”
ರಾಜೀವ ತಾರಾನಾಥರವು ಎಂದಿನಂತೆ ಅನಿರ್ಬಂಧಿತ ನಿರ್ಭಿಡೆಯ freewheeling ಮಾತುಗಳು.
“ನಮ್ಮಲ್ಲಿನ ಪ್ರತಿಭಾವಂತ ಕಲಾವಿದರ ಪೈಕಿ ಆಗ ಕೆಲವರಾದರೂ ಮುಂಬೈ ಕಲ್ಕತ್ತಾ ಪುಣೆಯಂಥ ಮಹಾನಗರಗಳಿಗೆ ಹೋದರೂ ಅಂದ್ರ ಅದು ಭೀಮಸೇನರ ಪ್ರಭಾವದಿಂದನಽ. ಹಿಂಗಾಗಿ ಹಗರ್ಕ ನಾವೂ ಸ್ವಲ್ಪ ಹೊರಬಂದ್ವಿ, ಅಲ್ಲೀತನಕ ಹಿಂಜರೀತಿದ್ವಿ. ಹಿಂಗ ಕಲಾವಿದರಿಗೆ ಹೊರದಾರಿ ತೋರಿಸಿದವ್ರು ಅವ್ರು. ಅಲ್ಲೀತನಕ ಸಂಗೀತಂದ್ರ ಸೈಡ್ ಬಿಜ಼ಿನೆಸ್ ಇದ್ದಂಗ ಇತ್ತು. ಮಾಸ್ತರಿಕಿ ಮಾಡೂ ಮುಂದ ಸಂಗೀತಾನೂ… ಅಂತ ದೀರ್ಘ ಹಚ್ಚಿದ್ಹಂಗ. ಆದ್ರ ಇವರು ಸಂಗೀತನ್ನ ಹಿಂಗ ಮುನ್ನೆಲೆಗೆ ತಂದು ಇಂಥಾ ಛಂದ ವಾತಾವರಣ ಬೆಳೆಸಿದ್ರು. ಸಂಗೀತದಲ್ಲಿ ನಾವು, ಅಂದ್ರ ಕರ್ನಾಟಕದವರು, ದೊಡ್ಡತನ ಹೆಂಗ ಸಾಧಿಸಬಹುದು ಅನ್ನೂದನ್ನ ತೋರಿಸಿಕೊಟ್ರು.”
“ಇನ್ನ ಅವ್ರು ‘ದಾಸವಾಣಿ’ ಮಾತ್ರ ಹಾಡ್ತಿದ್ರು ಅನ್ನೋ ತಕರಾರೇನದಲಾ ಅದು ತಪ್ಪು. ನಾನಿದನ್ನ ಒಪ್ಪೂದಿಲ್ಲ. ಆದ್ರ ತಪ್ಪೇನಿಲ್ಲ ಹಾಡ್ರಿ ಅಂತ ಅಂತಿದ್ರಲ್ಲ ಅದು ಅವ್ರ ತಪ್ಪು. ಏನ್ ಮಾಡೂದ್ರೀ, ನಮ್ಮ ದೇಶ ಕಲ್ಪಿಸಿರೋ ವಾತಾವರಣ ಹಂಗಾಗಿಬಿಟ್ಟದ. ಇದು ಒಳ್ಳೇದಲ್ಲ. ನಮ್ಮ ವೆಂಕಟೇಶ ಕುಮಾರ, ಫಯಾಝ್ ಖಾನ್ ಎಲ್ರಿಗೂ ಈವತ್ತ ದಾಸವಾಣಿ ಹಾಡ್ರೀ ಅಂತ ಒತ್ತಾಯ ಮಾಡ್ತೀವಿ ನಾವು. ಮತ್ತವರು ನಿರ್ವಾಹ ಇಲ್ಲದ ಹಾಡಽಬೇಕು. ಯಾಕ? ಅವ್ರು ಅಗದೀ ಛಂದ ಹಾಡ್ತಾರ. ಇದು ಕಿರಾಣಾ ಘರಾಣಾದ ಪ್ರಭಾವ. ಕಿರಾಣಾಕ್ಕ ನಮ್ಮ ಗಂಗೂಬಾಯಿಯವರದೂ ಕೊಡುಗಿ ಅದ, ಹಂಗ ನಮ್ಮ ಅಲ್ಲಾದಿಯಾಖಾನರು, ಮಲ್ಲಿಕಾರ್ಜುನ ಮನ್ಸೂರ ಅಣ್ಣಾವ್ರದು ಜೈಪುರ್ ಅತ್ರೌಲಿ ಘರಾಣಾಕ್ಕ. ಹಿಂಗ ಒಂದೊಂದ ಘರಾಣಾಕ್ಕ ಒಂದೊಂದಿಷ್ಟು ಕಲಾವಿದರು ಜೀವ ತೇಯ್ಕೊಂಡಾರು … ಮುಂದ ೬೦ರ ದಶಕದೊಳಗ ಧಾರವಾಡದ ಜಿ.ಬಿ. ಜೋಶಿಯವರ ಮನಿಯೊಳಗ ಊಟಕ್ಕ ಕರದಿದ್ರು. ಭೀಮಸೇನರದು ಮತ್ತು ನಂದು ಅದ ಕೊನೀ ಭೇಟಿ ಆತು.”
“ಒಂದ ಮಾತ್ರಿ: ದೊಡ್ಡ ಸಂಗೀತಗಾರ ಯಾವ ರಾಗ ಹಾಡಿದ್ರೂ, ಏನ ಹಾಡಿದ್ರೂ ಅದಕ್ಕೊಂದು ಕಳಾ ಕಟ್ಟತದ. ಅದಕ್ಕನ ಅವ ದೊಡ್ಡ ಸಂಗೀತಗಾರ. ಆತನ ಪ್ರಸ್ತುತಿಯೊಳಗ ಪ್ರತೀ ರಾಗನೂ ಹೆಚ್ಚೆಚ್ಚು ಹೊಳೀತಾ ಹೋಗ್ತದ. ದೊಡ್ಡವರ ಬಗ್ಗೆ ಮಾತಾಡಬೇಕಾದ್ರ ಒಂದೊಂದ ಮಾತು ಹೂ ಇದ್ಹಂಗ ಇರಬೇಕು ಕಲ್ಲ ಇದ್ದಂಗ ಇರಬಾರದು. ಕೇಳುಗರು ಒಂದೊಂದನ್ನೂ ಹೂವಿನ್ಹಾಂಗ ಸ್ವೀಕರಿಸಬೇಕು.”
19 ವರ್ಷಗಳ ಹಿಂದೆ ಆಕಾಶವಾಣಿಯ ಸಂದರ್ಶನದಲ್ಲಿ ಭೀಮಸೇನರು, ಇಂದಿಲ್ಲಿ ರಾಜೀವರು ತಿರುಗಿ ಬಂದಿದ್ದು ಅದೇ ಸಮ್ಮಿಗೆ: ಸಂಗೀತ ಸೈಡ್ ಬಿಜ಼ಿನೆಸ್ ಅಲ್ಲ.
(4.2.2024 ರ ಉದಯವಾಣಿಯ ಭಾನುವಾರದ ಪುರವಣಿ ‘ಸಂಪದ’ದಲ್ಲಿ ಪ್ರಕಟವಾದ ಸಂದರ್ಶನದ ಪರಿಷ್ಕೃತ ಆವೃತ್ತಿ.)