ಒಂದು ಪುಟ್ಟ ಹಕ್ಕಿಗಾಗಿ ಲೋಕವನ್ನು ಉಳಿಸಲಾದೀತೇ?
ಸಂವರ್ತ 'ಸಾಹಿಲ್' ಅನುವಾದದಲ್ಲಿ ಜಸಿಂತಾ ಕೆರ್ಕೆಟ್ಟಾರ 'ಅಂಗೋರ್'
ಕವಿ, ಪತ್ರಕರ್ತೆ, ಆದಿವಾಸಿ ಹಕ್ಕುಗಳ ಹೋರಾಟಗಾರ್ತಿ ಜಸಿಂತಾ ಕೆರ್ಕೆಟ್ಟಾ ಅವರು 2022ರಲ್ಲಿ ಪ್ರಕಟಿಸಿದ ‘ಅಂಗೋರ್' (ಕೆಂಡ) ಎಂಬ ದ್ವಿಭಾಷಾ (ಹಿಂದಿ-ಇಂಗ್ಲಿಷ್) ಕವನ ಸಂಕಲನವನ್ನು ಸಂವರ್ತ ‘ಸಾಹಿಲ್’ ಕನ್ನಡಕ್ಕೆ ‘ಗೋರಿಯ ಮೇಲೆ ರಾಗಿಯ ಕೊನರು’ ಎಂಬ ಶೀರ್ಷಿಕೆಯಡಿ ಅನುವಾದಿಸಿದ್ದಾರೆ. ಇದಕ್ಕೆ ಪೂರಕವಾಗಿ ಸಂಕೇತ ಪಾಟೀಲ ಭಾರತ ಉಪಖಂಡದಲ್ಲಿ ಆಧುನಿಕ ಮಾನವರ ಮೊದಲ ವಲಸೆ, ಆದಿವಾಸಿಗಳ ಉಗಮ, ನಮ್ಮ ಬಹುತ್ವದ ಚರಿತ್ರೆ ಮತ್ತು ಇಂದು ಅದಕ್ಕೆ ಒದಗಿರುವ ಅಪಾಯಗಳ ಕುರಿತಾದ ಸ್ಥೂಲ ಚರ್ಚೆಯನ್ನು ಮೊದಲ ಭಾಗದಲ್ಲಿ ಮಾಡಿದ್ದಾರೆ. ಎರಡನೇ ಭಾಗದಲ್ಲಿ, ಈ ಚರ್ಚೆಗಳ ಮುನ್ನೆಲೆಯಲ್ಲಿ ಕೆರ್ಕೆಟ್ಟಾರ ಕವನ ಸಂಕಲನದ ಅವಲೋಕನವನ್ನು ಮಾಡಿದ್ದಾರೆ.
ಝಾರ್ಖಂಡದ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಕುರುಖ್ ಅಥವಾ ಒರಾಓಂ (Oraon) ಬುಡಕಟ್ಟಿಗೆ ಸೇರಿದ ಜಸಿಂತಾ ಕೆರ್ಕೆಟ್ಟಾರ ಹೆಸರನ್ನು ನಾನು ಮೊದಲು ಕೇಳಿದ್ದು ಒಂದು ಪಾಡ್ಕ್ಯಾಸ್ಟ್ ಕೇಳುವಾಗ. ಅದರಲ್ಲಿ ಕವಿ ಹುಸೇನ್ ಹೈದರಿ ಇವರನ್ನು ಉಲ್ಲೇಖಿಸಿ ಒಂದು ಪದ್ಯವನ್ನು ಓದಿದ್ದರು. ಕುತೂಹಲ ಹುಟ್ಟಿ ಇಂಟರ್ನೆಟ್ನಲ್ಲಿ ಅವರ ಬಗ್ಗೆ ಮಾಹಿತಿ ಹುಡುಕಿದ್ದೆ. ಹಿಂದಿಯಲ್ಲಿ ಬರೆದ ನಾನು ಕೇಳಿದ್ದ जहाँ कुछ नहीं पहुंचता ಎಂಬ ಆ ಪದ್ಯವೂ ಕಣ್ಣಿಗೆ ಬಿದ್ದಿತ್ತು. ಕೂಡಲೇ ಅದನ್ನು ಅನುವಾದಿಸಿದ್ದೆ. ಎಲ್ಲಿ ಏನೂ ತಲುಪುವುದಿಲ್ಲವೋ ಬೆಟ್ಟಗಳ ಮೇಲೆ ಮಂದಿ ಬೆಟ್ಟದ ನೀರನ್ನೇ ಕುಡಿಯುತ್ತಾರೆ ಸರಕಾರದ ನೀರು ಅಲ್ಲಿಯವರೆಗೆ ತಲುಪುವುದಿಲ್ಲ ತಾಯ್ನುಡಿಯಲ್ಲಿ ಕಲಿಸುವ ಯಾವುದೇ ಸ್ಕೂಲು ತಲುಪುವುದಿಲ್ಲ ಆಸ್ಪತ್ರೆಗೆ ಯಾವ ಡಾಕ್ಟರರೂ ತಲುಪುವುದಿಲ್ಲ ವಿದ್ಯುತ್ ತಲುಪುವುದಿಲ್ಲ ಇಂಟರ್ನೆಟ್ ತಲುಪುವುದಿಲ್ಲ ಅಲ್ಲಿ ಏನೇನೂ ತಲುಪುವುದಿಲ್ಲ ಸಾಹೇಬರೇ! ಎಲ್ಲಿ ಏನೇನೂ ತಲುಪುವುದಿಲ್ಲವೋ ಅಂಥಲ್ಲಿ ಮತ ಮತ್ತು ಆಕಳಿನ ಹೆಸರಿನಲ್ಲಿ ಮನುಷ್ಯರ ಕೊಲೆ ಮಾಡುವ ಸಲುವಾಗಿ ಇಷ್ಟೊಂದು ವಿಷ ಹೇಗೆ ತಲುಪುತ್ತದೆ?
ಈ ಪದ್ಯದಲ್ಲಿ ಕೆಲವು ಸಾಲು ನನ್ನ ಗಮನ ಸೆಳೆದವು. ಮುಖ್ಯವಾಗಿ ಇದು: “ತಾಯ್ನುಡಿಯಲ್ಲಿ ಕಲಿಸುವ ಯಾವುದೇ ಸ್ಕೂಲು ತಲುಪುವುದಿಲ್ಲ”. ವಾಸ್ತವದಲ್ಲಿ ದಕ್ಷಿಣ ಭಾರತಕ್ಕೂ ಹೆಚ್ಚಾಗಿ ಉತ್ತರ ಭಾರತದಲ್ಲಿ ಹಿಂದಿಯ ಹಾವಳಿಯಿದೆ. ಅಲ್ಲಿನ ಬಹುತೇಕ ಭಾಷೆಗಳು ಈಗ ಒಳನುಡಿಗಳಾಗಿ ಉಳಿದಿವೆ. ಇದರ ಬಗ್ಗೆ ಹೆಚ್ಚು ಚರ್ಚೆಗಳಾಗುವುದಿಲ್ಲವಷ್ಟೇ. ಪ್ರತಿರೋಧವೂ ಕಾಣುವುದಿಲ್ಲ. ಕಲಿಕೆಯಲ್ಲಿ ತಾಯ್ನುಡಿಯ ಕೊರತೆಯ ಬಗ್ಗೆ ಸಂವರ್ತ “ಸಾಹಿಲ್" ಈ ಸಂಕಲನದ ತಮ್ಮ ಮೊದಲ ಮಾತಿನಲ್ಲೂ ಬರೆದಿದ್ದಾರೆ.
ಜಸಿಂತಾ ಕೆರ್ಕೆಟ್ಟಾ ಹುಟ್ಟಿದ್ದು ಝಾರ್ಖಂಡ್ ಮತ್ತು ಒರಿಸ್ಸಾದ ಗಡಿಯಲ್ಲಿರುವ ಸಾರಂಡಾ ಕಾಡಿನ ನೆರೆಯಲ್ಲಿರುವ ಹಳ್ಳಿಯೊಂದರಲ್ಲಿ. ಒರಾಓಂ ಬುಡಕಟ್ಟಿಗೆ ಸೇರಿದ ಅವರ ತಾಯ್ನುಡಿ ಸಂತಾಲಿ. ಸಂತಾಲಿ ಆಸ್ಟ್ರೋ ಏಷಿಯಾಟಿಕ್ ಕುಟುಂಬಕ್ಕೆ ಸೇರಿದ ಒಂದು ಭಾಷೆ. ಮುಂಡಾರಿ ಭಾಷೆಗೆ ಹತ್ತಿರದ್ದು. ಮಧ್ಯಭಾರತದ ಆದಿವಾಸಿ ಸಮುದಾಯಗಳು ಸಾವಿರಾರು ವರ್ಷಗಳಿಂದ ಆಸ್ಟ್ರೋ ಏಶಿಯಾಟಿಕ್ ಭಾಷೆಗಳೊಂದಿಗೆ ಜೀವಿಸುತ್ತಿದ್ದಾರೆ. ಆದರೆ ಈಗ ಮೇಘಾಲಯದ ಖಾಸಿಯಂಥ ಕೆಲವು ಭಾಷೆಗಳನ್ನು ಬಿಟ್ಟರೆ ಬಹುತೇಕ ಎಲ್ಲವೂ ಅಳಿವಿನಂಚಿನಲ್ಲಿವೆ.
ವಿಕಿಪಿಡಿಯಾ ಪ್ರಕಾರ ಝಾರ್ಖಂಡ್ನಲ್ಲಿ ಶೇ ೪೦ ಖನಿಜ ನಿಕ್ಷೇಪಗಳಿವೆ, ಆದರೆ ಅಲ್ಲಿನ ಶೇ ೩೯ರಷ್ಟು ಜನ ಬಡತನದ ಗೆರೆಯ ಕೆಳಗಿದ್ದಾರೆ. ಇದು ಆ ಪ್ರದೇಶದ “ವಿಪುಲತೆಯ ವಿರೋಧಾಭಾಸ” (paradox of plenty). ಕೆರ್ಕೆಟ್ಟಾರ ಊರಿನ ಹತ್ತಿರದ ಸಾರಂಡ (“700 ಬೆಟ್ಟಗಳು”) ಹೇರಳವಾಗಿ ಸಾಲ್ ಮರಗಳಿರುವ ದಟ್ಟವಾದ ಕಾಡು. ಈ ಕಾಡಿನ ದೊಡ್ಡ ಪಾಲು ಕಬ್ಬಿಣದ ಅದಿರಿನ ಗಣಿಗಾರಿಕೆ ಮಾಡುವ ಕಂಪನಿಗಳ ಗುತ್ತಿಗೆಯಲ್ಲಿದೆ. ಹೀಗಾಗಿ ವಿಕಾಸದ ಬುಲ್ಡೋಝರ್ಗಳು ಅಲ್ಲಿ ಓಡಾಡುವುದು ಸಹಜವೇ. ಅವು ಕಾಡು, ಕಣಿವೆಗಳನ್ನಷ್ಟೇ ಅಲ್ಲದೇ ನುಡಿಗಳ, ಸಂಸ್ಕೃತಿಗಳ ಬೇರುಗಳನ್ನೂ ಅಲ್ಲಾಡಿಸುತ್ತವೆ. ಕೆರ್ಕೆಟ್ಟಾರ ಕವಿತೆಗಳು ಆದಿವಾಸಿ ನೆಲೆಯವು, ಅವರ ಮೇಲಿನ ದಬ್ಬಾಳಿಕೆಯ ಬಗ್ಗೆ, ನುಡಿ ಸಂಸ್ಕೃತಿ ನಾಶದ ಅಭದ್ರತೆಯ ಬಗ್ಗೆ ಇರುವಂಥವು. ಸಂತಾಲಿ ತಾಯ್ನುಡಿಯಾಗಿರುವ ಕೆರ್ಕೆಟ್ಟಾ ಕೂಡ ಬರೆಯುವುದು ಹಿಂದಿಯಲ್ಲಿಯೇ. ಹಾಗಾದರೂ ಅವರ ಅಳಲು ತಲುಪಬೇಕಾದವರನ್ನು ತಲುಪುತ್ತದೆ ಎಂದಿರಬೇಕು.
ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸೆಯನ್ನು ವರದಿ ಮಾಡುವುದನ್ನು ಮುಖ್ಯವಾಹಿನಿಗಳು ಕಡೆಗಣಿಸಿದ್ದನ್ನು ಪ್ರತಿಭಟಿಸಿ, ನವೆಂಬರ ೨೦೨೩ರಲ್ಲಿ ಇಂಡಿಯಾ ಟುಡೇ ಕೊಟ್ಟ ಪ್ರಶಸ್ತಿಯನ್ನು ಜಸಿಂತಾ ಕೆರ್ಕೆಟ್ಟಾ ತಿರಸ್ಕರಿಸಿದರು. ಇದಕ್ಕಾಗಿ ಅವರು ಕೊಟ್ಟ ಕಾರಣ ಹೀಗಿತ್ತು, “ದೇಶದಲ್ಲಿ ಬುಡಕಟ್ಟು ಸಮುದಾಯಗಳ ಜೀವಕ್ಕೆ ಬೆಲೆಯಿಲ್ಲದ ಕಾಲದಲ್ಲಿ, ಮಧ್ಯ ಭಾರತ ಹಾಗೂ ಮಣಿಪುರದ ಆದಿವಾಸಿಗಳ ಘನತೆಯಿಲ್ಲದೆ ಬದುಕುತ್ತಿರುವಾಗ, ಇತರ ಸಮುದಾಯಗಳು ನಿರಂತರ ದಾಳಿಗೆ ಒಳಗಾಗುತ್ತಿರುವಾಗ, ಕವಿ ಅಥವಾ ಲೇಖಕರಿಗೆ ಕೊಡುವ ಗೌರವ ಅವರಿಗೆ ಸಂತೋಷ ಕೊಡುವುದಾದರೂ ಹೇಗೆ?”
ಇವನ್ನೆಲ್ಲಾ ಗಮನದಲ್ಲಿಟ್ಟುಕೊಳ್ಳದೇ ಕೆರ್ಕೆಟ್ಟಾರ ಅಥವಾ ಒಟ್ಟಾರೆ ಆದಿವಾಸಿ ನೆಲೆಯ ಸಾಹಿತ್ಯದೊಂದಿಗೆ ತೊಡಗಿಕೊಳ್ಳುವುದು ಸೂಕ್ತವಲ್ಲ ಎಂದು ನನ್ನ ಭಾವನೆ. ಸಂವರ್ತ ‘ಸಾಹಿಲ್' ಇದನ್ನು ಚೆನ್ನಾಗಿ ಅರ್ಥಮಾಡಿಕೊಂಡವರು. ಅಂತೆಯೇ ಅವರು ಝಾರ್ಖಂಡ್ನ ಆದಿವಾಸಿ ಹಳ್ಳಿಗಳಿಗೆ ಹೋಗಿ, ಅಲ್ಲಿನ ಜನರ ನಡುವೆ ಬದುಕಿ, ಅಲ್ಲಿನ ಜನಜೀವನವನ್ನು ಹತ್ತಿರದಿಂದ ನೋಡಿ ಬಂದಿದ್ದಾರೆ. ಅದಕ್ಕಾಗಿ ಅವರಿಗೆ ಮೊದಲ ಅಭಿನಂದನೆಗಳು ಸಲ್ಲಬೇಕು.
ಇನ್ನು ಕವಿತೆಗಳಿಗೆ ಬಂದಾಗ ಅವುಗಳಲ್ಲಿ ಒಂದಷ್ಟು ಇಬ್ಬಗೆ ಉದ್ದಕ್ಕೂ ಎದ್ದು ಕಾಣುತ್ತವೆ: (೧) ಹಳ್ಳಿ / ನಗರ, (೨) ಪೂರ್ವಜರು ಬದುಕಿದ ರೀತಿ / ಈಗಿನವರ ನಡೆಗಳು, (೩) ಪ್ರಕೃತಿಯೊಂದಿಗೆ ಸಹಬಾಳ್ವೆ / ಅಭಿವೃದ್ದಿಯೊಂದಿಗಿನ ಅಪವಿತ್ರ ಮೈತ್ರಿ, ಮೊದಲಾದುವು. ಕೆಲವು ಕಡೆ ಈ ಬೈನರಿಗಳು ತೀರಾ ಅಮಾಯಕವಾಗಿಯೂ ರಮ್ಯವಾಗಿಯೂ ತೋರುತ್ತವೆ.
ಪೇಟೆಯಲ್ಲಿ ಇದ್ದಿಲು ಸುಡುತ್ತದೆ, ಸುಟ್ಟುಹಾಕುತ್ತದೆ ಆಮೇಲೆ ಬೂದಿಯಾಗುತ್ತದೆ. ಹಳ್ಳಿಯಲ್ಲಿ ಕೆಂಡ ಒಂದು ಒಲೆಯಿಂದ ಮತ್ತೊಂದು ಒಲೆಗೆ ಹೋಗುತ್ತದೆ ಅದರಿಂದ ಎಲ್ಲಾ ಒಲೆಗಳು ಉರಿಯುತ್ತವೆ.
ಹಳ್ಳಿಯ ಸಂಜೆಗಳಲ್ಲಿ ಸೂರ್ಯ “ಹೊಳೆಯ ಸೆರಗಿನಿಂದ ಬೆವರೊರೆಸಿಕೊಳ್ಳುತ್ತಾನೆ” ಅಲ್ಲದೇ ಸಂಜೆಯ ಚಟುವಟಿಕೆಗಳನ್ನು ಮರದ ಹಿಂದೆ ನಿಂತು ನೋಡುವ ಚಂದ್ರ,
ಒಲೆಯಿಂದ ಹೊಗೆ ಎದ್ದಾಗ ಕೆಮ್ಮುತ್ತಾನೆ ಆಗ ಆಕೆ ಓಡಿ ಹೋಗಿ ಚಂದ್ರನ ಬೆನ್ನು ತಟ್ಟಿ ಸುಧಾರಿಸುತ್ತಾಳೆ.
ಹಳ್ಳಿಯಲ್ಲಿ ನಡೆಯಬಲ್ಲಂಥ ಅತ್ಯಂತ ಕಠೋರ ವಿದ್ಯಮಾನವೆಂದರೆ ಆಕೆ ಸಂಜೆಯಡುಗೆಗೆ ಒಲೆ ಉರಿಸುವಾಗ ಚಂದ್ರನಿಗೆ ಕೆಮ್ಮು ಬರುವುದು!

ಅಂಗಡಿಯವ ಕೇಳಿದ— ಏನು ಬೇಕು? ಅಣ್ಣ, ಒಂಚೂರು ಮಳೆ, ಒಂದು ಮುಷ್ಠಿ ಮಣ್ಣು, ಒಂದು ಗಡಿಗೆ ನದಿ, ಭರಣಿಯಲ್ಲಿ ಕೂಡಿಟ್ಟ ಬೆಟ್ಟ, ಮತ್ತು ಅಲ್ಲಿ ಗೋಡೆಮೇಲೆ ತೂಗುಹಾಕಿದ ಪ್ರಕೃತಿ.
ಅಭಿವೃದ್ಧಿಯ ಯಜ್ಞಕ್ಕೆ ಬಲಿಪಶುವಾದ ಮನಸ್ಥಿತಿ, ಹಳೆಯದರ ಹಳಹಳಿಕೆ, ಹತಾಶೆಗಳು ಇಲ್ಲಿ ಕಾಣಿಸಿಕೊಳ್ಳುವ ಕೆಲವು ಸಾಮಾನ್ಯ ಥೀಮ್ಗಳು.
ರಕ್ತದಲ್ಲಿ ಮಿಂದೆದ್ದ ನದಿ ಕಿನಾರೆಯ ಹೆಗಲಮೇಲೆ ತಲೆಯಿಟ್ಟು ಗೋಳಿಡುವಾಗ ಕಾಡಿಗೆ ಕಾಡೇ ಕೆಂಪಾಗುತ್ತದೆ [..] ಒಣಗಿದ ಕಾಗದದ ಮೇಲೆ ಒಪ್ಪಂದಗಳು ಗರ್ಜಿಸುವಾಗ ಭರವಸೆಯ ಕಣ್ಣುಗಳು ಮುಳುಗುವ ಸೂರ್ಯನಂತೆ ಮಂಕಾಗುತ್ತವೆ.
ಗೊತ್ತಿದ್ದೂ ಮತ್ತೆ ಮತ್ತೆ ಮೋಸಹೋಗುವಿಕೆ, ಹಳ್ಳಿಗಳ ಇತಿಹಾಸವೇ ನಾಶವಾಗುತ್ತಿರುವ ಪ್ರಕ್ರಿಯೆಯ ಬಗ್ಗೆ ನೋವಿದೆ.
[…] ಅದೇ ನೆಲವನ್ನು ಅಗೆದಗೆದು ಬೆಟ್ಟದ ಕೆಳಗೆ ಅಡಗಿರುವ ಲೋಹಯುಗವನ್ನು ಮೇಲೆತ್ತುತ್ತವೆ. ಆದರೆ ಅವರಿಗೆ ಯುಗಯುಗಗಳಿಂದ ನೊಂದ ಹೆಸರಿಲ್ಲದ ಹಳ್ಳಿಗಳ ಯಾವುದೇ ನಿಶಾನಿ ಸಿಗುವುದಿಲ್ಲ.
ಹಳ್ಳಿಯ ಇತಿಹಾಸವನ್ನೇ ಹರಿದು ಗಾಯಪಟ್ಟಿಯಾಗಿ ಸುತ್ತುತ್ತಿರುವ ಎಂಟು ದಿಕ್ಕುಗಳು. ಮತ್ತು ಎಂಟು ದಿಕ್ಕುಗಳ ಕಾಲಿಗೆ ಅದರ ಸಾಂತ್ವನದ ಮಾತುಗಳಿಗೆ ಶರಣಾಗುತ್ತಿರುವ ಇತಿಹಾಸ!
ಹಿರಿಯರ ಆಶಯಗಳನ್ನು ಮರೆವ ಈಗಿನ ‘ಪೀಢಿ'ಗಳ ಬಗ್ಗೆ ನಿರಾಸೆಯಿದೆ.
ಹಳ್ಳಿಮನೆಯ ಹುಲ್ಲು ಮಾಡಿನ ಮೇಲೆ ತೆಗೆದಿಟ್ಟ ಬುಟ್ಟಿಯಲ್ಲಿ ಹಿರಿಯರ ತೋಟದಲ್ಲಿ ಬೆಳೆದ ಪದಗಳು ರಾತ್ರಿ ಇಬ್ಬನಿಗೆ ನೆನೆಯುತ್ತವೆ. ಬೆಳಗಾಗುತ್ತಲೇ ಅಮ್ಮ ಪದಗಳ ಬುಟ್ಟಿಯನ್ನು ಕೆಳಗಿಳಿಸುತ್ತಾಳೆ. ಸಿಪ್ಪೆ ಸುಲಿದು, ಒಲೆಯ ಮೇಲೆ ಕಾಸಿ ಸರಯಿ ಎಲೆಗಳಲ್ಲಿ ಮಡಚಿ ಪದಗಳನ್ನು ಮಕ್ಕಳ ಕೈಗಿಡುತ್ತಾಳೆ.
ಆದರೆ ಆ ಪದಗಳು ಸಾರಂಡದ ಕಾಡಿನಲ್ಲಿ ಬೆಳೆಯದೇ ನಗರಗಳ ಕಾಂಕ್ರೀಟ್ ಕಾಡಿನಲ್ಲಿ ಹೊರಗಿನಿಂದ ಸುಂದರವಾಗಿ ಕಂಡು ಒಳಗೆ ಭೀಕರವಾದ ನಿರ್ಜೀವ ಅಂಕುರಗಳಾಗಿ ಅವತರಿಸುತ್ತವೆ. ಕೊನೆಗೆ ಭಾವಶೂನ್ಯ ಪದಗಳಷ್ಟೇ ಉಳಿಯುತ್ತವೆ.
ನನ್ನ ಪೂರ್ವಜರು ಬೆಳ್ಳಂಬೆಳಗಿನಂತೆ ಎದ್ದು ಉರಿಬಿಸಿಲಿನ ವಿರುದ್ಧ ಸೆಣಸಾಡುತ್ತಿದ್ದರು. ಅವರು ನೆಟ್ಟ ಸಸಿಗಳು ಮಾತ್ರ ಇಂದು ಬಿಸಿಲಿಗೆ ಮೈಯ್ಯೊಡ್ಡಲು ನಾಚುತ್ತವೆ. […] ಅಂಗಡಿಗಳ ಶಟರ್ ಮುಚ್ಚಿಸಲು ಕೆಲವರು ಒಂದು ಇಶಾರೆಗೆ ಕಾದು ಕುಳಿತ ಬೀಸುವ ದೊಣ್ಣೆಯಾಗಿ ಬದಲಾಗುತ್ತಾರೆ. […] ಕೆಲವರು ಕೋಟೆಯ ಬುಡದಲ್ಲೇ ಕೂತು ಬೇಹುಗಾರರಾಗುತ್ತಾರೆ ಮೌಲ್ಯಗಳ ನಂಬಿಕೆಯ ವ್ಯಾಪಾರ ಮಾಡುತ್ತಾರೆ.
ಅಲ್ಲಲ್ಲಿ ಪರ್ಯಾಲೋಚನೆ ಮತ್ತು ಆತ್ಮಪ್ರಜ್ಞೆ ತೋರುತ್ತದಾದರೂ ಸದ್ಯದ ಪರಿಸ್ಥಿತಿಗೆ ತಮ್ಮದೇ ಸಮುದಾಯದವರು ಮಾಡಿದ ತಪ್ಪುಗಳು ಅಥವಾ ಆಯ್ದುಕೊಂಡ ಮಾರ್ಗಗಳು ಕೂಡ ಕಾರಣ ಎಂದು ಕವಿಗೆ ಪೂರ್ಣವಾಗಿ ಒಪ್ಪಿಕೊಳ್ಳಲಾಗುತ್ತಿಲ್ಲ. ಚೈತನ್ಯದ ಅಭಾವ ಭ್ರಮನಿರಸನದತ್ತ ತಳ್ಳುತ್ತದೆ.
ದಿನದ ಮೊದಲ ಗಾಡಿಯಲ್ಲಿ ಹಳ್ಳಿಗೆ ವಾಪಸ್ ಕಳುಹಿಸುವ ಸಲುವಾಗಿ ತನ್ನ ಭಾಷೆ, ಹಾಡು, ಭಾವನೆಗಳು, ಉಡುಪು, ಉಚ್ಚಾರ ತನ್ನ ಪುರಾತನ ಜೀವನಶೈಲಿ ಎಲ್ಲವನ್ನು ಮಡಚಿ ಮೂಲೆಯಲ್ಲಿಡುತ್ತಾನೆ. ಇನ್ಸ್ಟಾಲ್ಮೆಂಟಿನಲ್ಲಿ ಖರೀದಿ ಮಾಡಿದ್ದಾನೆ ಹೊಸ ನಡೆ—ನುಡಿ, ಹೊಸ ಬಗೆಯ ಉಡುಪು, ಹೊಸ ಜೀವನ ಶೈಲಿ ಮತ್ತು ಒಂದು ಹುಸಿ ವಿಶ್ವಾಸ. ಇವೆಲ್ಲ ನಿಧಾನಕ್ಕೆ ಅವನ ಅಸ್ತಿತ್ವದ ಬೇರನ್ನು ನಾಶ ಮಾಡುತ್ತವೆ.
ಆದರೆ ಮಣ್ಣಿನ ಆದಿಮ ಸಂಸ್ಕೃತಿಯ ಘಮ ಆಸ್ವಾದಿಸುತ್ತ ತನ್ನ ಪುರಾತನ ಅಸ್ತಿತ್ವದ ಮಂಜಲ್ಲಿ ಮೀಯುತ್ತ ಮಲಗಿದ್ದ ಅವನು ಈ ಬಾರಿ ಎದ್ದಾಗ ಎಚ್ಚತ್ತುಕೊಳ್ಳುತ್ತಾನೆ. ಆದರೆ ಎಚ್ಚತ್ತುಕೊಳ್ಳುವುದೆಂದರೆ ನಿಜಕ್ಕೂ ಏನು? ಮರಳಿ ಹಿಂದಕ್ಕೆ ಹೋಗುವುದು ಸಾಧ್ಯವೇ? ಹೋದರೂ ಯಾವ ಯುಗದ ಯಾವ ವಿಶಿಷ್ಟ ಅವಧಿಗೆ? ಮನುಷ್ಯನ ಅಸ್ತಿತ್ವವೆಂದರೇನೇ ಪರಿಸರದ ಮೇಲೆ ನಡೆಸುವ ಹಿಂಸೆಯ ಕ್ರಿಯೆಗಳ ಸರಣಿ; ಪ್ರಕೃತಿಯ ಶೋಷಣೆ ಅಪರಿಹಾರ್ಯ. ಸಮತೋಲನವನ್ನು ಸಾಧಿಸುವ ಬಗೆ ಯಾವುದು? ಕವಿತೆ ಈ ಪ್ರಶ್ನೆಗಳನ್ನು ಎದುರಿಸಿ ಉತ್ತರ ಕೊಡಬಲ್ಲುದೇ? ಗೊತ್ತಿಲ್ಲ. ಗೊತ್ತಿರುವುದು ಏನೆಂದರೆ, “ಒಂದು ಪುಟ್ಟ ಹಕ್ಕಿಗಾಗಿ / ಲೋಕವನ್ನು ಉಳಿಸಲಾಗದು” ಎಂದು.
ಆದರೆ ಕೆರ್ಕೆಟ್ಟಾರಿಗೆ ಇನ್ನೂ ಭ್ರಮನಿರಸನವಾದಂತಿಲ್ಲ. ಸಿದೋ, ಕಾನಹು, ಸುಗ್ನಾ, ಬಿರ್ಸಾ ಮುಂಡಾರ ಚೈತನ್ಯ ಇನ್ನೂ ಸುಳಿದಾಡುತ್ತಿದೆ, ಹೂಲ್ (ಸಂತಾಲಿಯಲ್ಲಿ ಬಂಡಾಯ) ಇನ್ನೂ ಆಗಲಿದೆ ಎಂಬ ಭರವಸೆ ಹೊಂದಿದ್ದಾರೆ.
ತುಳಿಯಲ್ಪಟ್ಟ ಕ್ರಾಂತಿ ಮತ್ತೆ ತಲೆಯೆತ್ತಲು ಕಾದಿರುವಂತೆ ಅವನ ಮೈಬೆವರಿನ ಘಮ ಈಗಲೂ ಹರಿದಾಡುತ್ತಿದೆ ಕಾಡಿನಲ್ಲಿ.
ಸುಗ್ನಾನ ಕತೆ ಲೋಕಕ್ಕೆಲ್ಲಾ ಖಂಡಿತಾ ಕೇಳಿಸುತ್ತದೆ. ಕೇಳಿಸಲಿಕ್ಕಾಗಿಯೇ ಚಿಗುರೊಡೆದಿದೆ ಅವನ ಗೋರಿಯ ಮೇಲೆ ರಾಗಿಯ ಕೊನರು
ತನ್ನ ಗೋರಿಯೊಳಗೆ ವೀರ ಬಿರ್ಸಾ ಮುಂಡಾ ನೆನಪಿನ ಬಾಗಿಲು ತೆರೆದಾಗ ಡೋಂಬಾರಿ ಬೆಟ್ಟದ ಸ್ವರ ಕೇಳಿಸಬೇಕು ಅವನಿಗೆ ಕ್ರಾಂತಿಯ ಕಿಡಿ ಕಾಣಿಸಬೇಕು.
ಇವುಗಳ ಹೊರತು ಘೋಷಣೆಗನ್ನು ಮೀರಿ ಬರೆದ ಕೆಲವು ಮೆಲುಮಾತಿನ ಕವಿತೆಗಳು ಹೆಚ್ಚು ಪರಿಣಾಮಕಾರಿಯಾಗಿವೆ.
ಅಚಾನಕ್ಕಾಗಿ ಶಬ್ದಗಳ ಬಣ್ಣಗಳು ಅಳಿಸಿಹೋದವು, ಮೊದಲ ಬಾರಿ ಮಣ್ಣಿಗೆ ಹತ್ತಿರವಾದವು. ‘ಎಷ್ಟೊಂದು ಮರೆವು ಆವರಿಸಿದೆ’ ಎನ್ನುವಾಗಲೇ ಅಲ್ಲೇ ಪಕ್ಕದಲ್ಲಿ ಮಹುವಾ ಹೂವು ಉದುರಿತು. ಅದನ್ನು ಸ್ಪರ್ಶಿಸಿದ ಶಬ್ದಗಳ ಬಾಯಿ ಕಟ್ಟಿಹೋಯಿತು. ಆ ಹೂವು ಮೆಲ್ಲಗೆ ಅರ್ಥಪೂರ್ಣ ಶಬ್ದವಾಗಿ ಅರಳಿತು.
ಗಾಡಿಗಳ ಗದ್ದಲಕ್ಕೆ ಬೆದರಿ ರಸ್ತೆ ದಾಟಲು ಹಿಂಜರಿಯುತ್ತಿದ್ದ ಹುಡುಗಿಯ ಕೈಯ್ಯನು ತಂದೆ ಹಿಡಿದಾಗ ಅದು ಅವಳಿಗೆ ಮುಗ್ಧ ಮಗುವೊಂದರ ಸ್ಪರ್ಶದಂತೆ ತೋರುತ್ತದೆ.
ಅಗಲವಾದ ರಸ್ತೆಯನ್ನು ದಾಟುವ ಸಮಯ ಮಗಳು ಅನಾಯಾಸವಾಗಿ ತಾಯಿಯಾದಳು. ಆಗ ಅವಳಿಗೆ ತಾಯಿಯಾಗಲು ವಯಸ್ಸಿಲ್ಲ ಎಂದು ತಿಳಿಯಿತು. ತಾಯ್ತನದ ವಯಸ್ಸು ಏನೆಂದು ಭೂಮಿಯನ್ನೇ ಕೇಳಿ ನೋಡಿ ಯಾರಾದರು.
ಜಸಿಂತಾ ಕೆರ್ಕೆಟ್ಟಾರ ಕವಿತೆಗಳಲ್ಲಿ ಹಲವು ಓರೆಕೋರೆಗಳಿದ್ದರೂ ನಾವು ಅವುಗಳ ಹಿನ್ನೆಲೆಯನ್ನು ಗಮನಿಸದೆ ಅವುಗಳಲ್ಲಿನ ಸರಳತೆಯನ್ನು, ಸಿಟ್ಟನ್ನು, ದೂರುಗಳನ್ನು, ಅಮಾಯಕ ಭರವಸೆಯನ್ನು ವಸ್ತುನಿಷ್ಠವಾಗಿ ಗ್ರಹಿಸಲು ಸಾಧ್ಯವಿಲ್ಲ. ಇನ್ನು ಝಾರ್ಖಂಡ್, ಮಧ್ಯಭಾರತದ ಆದಿವಾಸಿ ಸಮುದಾಯಗಳು, ಸಂತಾಲಿಯಂಥ ಭಾಷೆಗಳು, ಸಾರಂಡ, ಇವುಗಳ ಬಗ್ಗೆ ಏನೂ ಗೊತ್ತಿಲ್ಲದವರಿಗೆ ಇವು ಆ ಪರಿಸರದ ಒಂದು ಸ್ಥೂಲ ಚಿತ್ರಣ ಕಟ್ಟಿಕೊಡುತ್ತವೆ.
‘ಸಾಹಿಲ್’ ಸಮರ್ಥ ಅನುವಾದಕರೆಂದು ಈಗಾಗಲೇ ಹೆಸರು ಮಾಡಿದ್ದಾರೆ. ಅವರ ಅನುವಾದಗಳನ್ನೂ ಲೇಖನಗಳನ್ನೂ ಬಿಡಿಯಾಗಿ ಓದಿ ಆನಂದಿಸಿದ್ದೇನೆ. ಇಲ್ಲಿ ಇಡಿ ಕವನ ಸಂಕಲನದ ಓದು ದಕ್ಕಿದೆ. ಕೆರ್ಕೆಟ್ಟಾರ ಹಿಂದಿ ಕನ್ನಡಕ್ಕೆ ಕವಿತೆಯ ಲಯಕ್ಕೆ ಅಡ್ಡಿಯಾಗದಂತೆ ಸಹಜವಾಗಿ ಹರಿದು ಬಂದಿವೆ. ಇದು ಒಳ್ಳೆಯ ಅನುವಾದದ ಲಕ್ಷಣ. "ಮಳೆಯ ಹೆಣವನ್ನು / ಮರಕ್ಕೆ ನೇತುಹಾಕಿದ್ದಾರೆ”, "ಭ್ರಮೆಯ ಕರಡಿಗೆಯಿಂದ ಕೆರೆಕೆರೆದು / ಕುಂಕುಮ ಹಣೆಗೆ ಇಟ್ಟುಕೊಳ್ಳುತ್ತಾಳೆ” ಹಾಗೂ ಮೇಲೆ ಉದ್ಧರಿಸಿದ ಹಲವು ಸಾಲುಗಳಲ್ಲಿ ಅವರ ಅನುವಾದದ ಸಾಮರ್ಥ್ಯ ಸ್ಪಷ್ಟವಾಗಿ ಕಂಡುಬರುತ್ತದೆ. ನಮಗೆ ಈ ರೀತಿಯ ವಿವಿಧತೆಯ, ಬಹುತ್ವದ ಇನ್ನಷ್ಟು ಕೃತಿಗಳು ದಕ್ಕಬೇಕು. ಅಂಥ ಒಳ್ಳೆಯ ಕೆಲಸದಲ್ಲಿ ತೊಡಗಿಕೊಂಡಿರುವ ಸಂವರ್ತ ‘ಸಾಹಿಲ್'ರಿಗೆ ವಂದನೆಗಳು.
ಮಳೆಯ ಹೆಣವನ್ನು ಮರಕ್ಕೆ ನೇತುಹಾಕಿದ್ಜಾರೆ! ...ಎಂತಹ ಸಾಲು
ಅರಿವನ್ನು ವಿಸ್ತರಿಸುವ ಲೇಖನಕ್ಕಾಗಿ ಧನ್ಯವಾದ
-- ವಿಜಯಶ್ರೀ ಹಾಲಾಡಿ