ಮುದ್ರಣಕ್ಕೆ ಸಿದ್ಧವಾಗುತ್ತಿರುವ ಸೃಜನಶೀಲ ಕೃತಿಗಳ ಆಯ್ದ ಭಾಗಗಳ ಪ್ರಕಟಣೆ ಹೊಸವೊಸಗೆ. ಇಂದು ವೆಂಕಟ್ರಮಣ ಗೌಡರ ಹೊಸ ಕಾದಂಬರಿ 'ಪ್ರಸಂಗದಿಂದಾಚೆ'ಯ ಒಂದು ಅಧ್ಯಾಯ ನಿಮ್ಮ ಓದಿಗೆ. ಮಾರ್ಚ್ ನಂತರ ಈ ಕೃತಿ ಋತ ಪ್ರಕಾಶನದಿಂದ ಓದುಗರ ಕೈಸೇರಲಿದೆ.
ಎಷ್ಟೊಂದು ಚೂರುಗಳು
ಚನಗಾರವೇ ಹಾಗೆ. ಸಂಜೆ ಬೀಳುತ್ತಿದ್ದಂತೆ, ಚನಗಾರದಲ್ಲಿ ಅವತ್ತು ಆಟವೆಂಬುದು ಸುತ್ತಲ ಮಾಬಗಿ, ಅಂಗಡಿಬೈಲು, ಕೇಶವಳ್ಳಿ, ಕಂಚಿನಕೆರೆ, ಕುಂಟಕಣಿ, ಒಡ್ಡಿ ಮೊದಲಾದೂರುಗಳಿಗೆ ಎಚ್ಚರ ಬಡಿವ ಹಾಗೆ ಲೌಡ್ ಸ್ಪೀಕರಿನಿಂದ ಶುಕ್ಲಾಂಬರಧರಂ ಸುರಿಯತೊಡಗುತ್ತದೆ. ಹೀಗೆ ವರ್ಷಕ್ಕೊಮ್ಮೆ ಮಾತ್ರ ಶುಕ್ಲಾಂಬರಧರಂ ಸುರಿವ ಇದೇ ಸಮಯದ ನೆನಪನ್ನು ಪ್ರೀತಿಯಿಂದ ಬೆಚ್ಚಗೆ ಕಾಪಾಡಿಕೊಳ್ಳುವ ಪುಟ್ಟ ಊರು ಅದು. ದಿನ ಬೆಳಗಾದರೆ ಮೈಮುರಿಯುವಷ್ಟು ದುಡಿವ ಮಂದಿಗೆ, ಕಾಲಿಟ್ಟಲ್ಲೆಲ್ಲ ಮಕ್ಕಳೇ ಸಿಗುವ ಮನೆಯೊಳಗೆ ಒಲೆಗೊಟ್ಟಿದ ಹಸಿ ಸೌದೆ ಉಗುಳುವ ಹೊಗೆ ಕುಡಿಯುತ್ತ ಕಣ್ಣು ಮೂಗಿನಲ್ಲೆಲ್ಲ ನೀರು ಸುರಿಸಿಕೊಳ್ಳುತ್ತ ಜನ್ಮಜನ್ಮದ ಕರ್ಮ ಪ್ರತೀಕಾರವೆಂಬಂತೆ ಕ್ಯೂನಲ್ಲೇ ರಚ್ಚೆ ಹಿಡಿವ ಮಕ್ಕಳ ಸಂಭಾಳಿಸುತ್ತ ಹೈರಾಣಾಗುವ ಹೆಂಗಸರಿಗೆ, ಮಾತೇ ಕೇಳದ ಮಕ್ಕಳಿಂದ – ಅವು ಮತ್ತೆ ಬೆಳಗಾದರೆ ಬಡಿದರೂ ಬಗ್ಗವೆಂಬ ಸತ್ಯ ಎದುರಿಗಿದ್ದರೂ – ವರ್ಷಕ್ಕೇ ಸಾಕೆಂಬಷ್ಟು ಕೆಲಸ ಮಾಡಿಸಿಕೊಳ್ಳಲು ಕಾದೇ ಕೂತಿರುವ ಮುದುಕ ಮುದುಕಿಯರಿಗೆ ಮತ್ತು ಎಲ್ಲರನ್ನೂ ಮೀರಿಯೇ ನಿಲ್ಲುವ ಮಕ್ಕಳಿಗೆ ಕಣ್ಣು ಬಿಡುವ ಮಗ್ಗುಲಲ್ಲೇ ನಿರಾಳತೆ ಹೊಳೆಯಿಸುವ ಆಟದ ದಿನಕ್ಕಾಗಿ ಬಸಿರ ಮಗುವಿಗೆ ಹೆಣ್ಣು ಕಾಯುವಂತೆ ಕಾಯುತ್ತದೆ ಚನಗಾರ.
ಆಟಕ್ಕೆ ತಿಂಗಳಿದೆಯೆನ್ನುವಾಗಿಂದ ನಾಡಿ ನಾಡಿಯಲ್ಲೂ ತವಕಗಳು ಹಸಿಯೊಡೆವ, ಹೆಪ್ಪುಗಟ್ಟುವ, ತಳದಲ್ಲೇ ಕಲಕುವ ಪರಿಯನ್ನು ಊರು ಬೆಚ್ಚಗೆ ಒಳಗೊಳ್ಳುವುದು. ಮೋಹವೆಂಬ ಮಾಯಕದ ಬೀಜವನ್ನು ಹೊಂತಗಾರ ಹುಡುಗ ಹುಡುಗಿಯರೆದೆಯಲ್ಲಿ ಬಿತ್ತಿ, ತಣ್ಣಗೆ ಕಾಯುವುದು. ಪರವೂರಿಗೆ ಮದುವೆ ಮಾಡಿಕೊಟ್ಟ ಹೆಣ್ಣುಮಕ್ಕಳನ್ನು ಇನಿತೂ ಭೇದವೆಣಿಸದೆ ಕರೆಸಿಕೊಂಡು ಖುಷಿಗೊಳ್ಳುವುದು. ನೆಂಟರನ್ನು ಕರೆದೇ ಕರೆಯುವುದು. ಸಂದಿಗೊಂದಿಯ ಸಾವಿರ ದುಃಖಗಳ ಮೆಟ್ಟಿ ಖುಷಿ ಮೀಯುವುದು. ಚನಗಾರಕ್ಕೆ ಚನಗಾರವೇ ಆ ತುದಿಯಿಂದೀ ತುದಿಗೆ, ಈ ತುದಿಯಿಂದಾ ತುದಿಗೆ ಜೀಕಿ, ‘ಹೋ’ ಎಂದು ಚಿಮ್ಮುತ್ತ, ಜನರೆಲ್ಲ ಆಟ ಮುಗಿದ ಬಳಿಕ ಬಾನಲ್ಲಿ ಮಳೆಮೋಡ ತೂಗುವುದನ್ನು ನೆನೆದು ಪುಳಕಗೊಳ್ಳುವರು.
ಮಳೆ ಹೊಯ್ಯುವ ಕಾಲಕ್ಕೆ ಚೆಂದಗಟ್ಟುವ ಮದುವೆಗಳಲ್ಲಿ ಬಹಳಷ್ಟು ಆಟದ ಸಮಯದ ದಕ್ಕೆಯಲ್ಲೇ ನಿಕ್ಕಿಯಾಗುವವು. ಎಷ್ಟೋ ದಿನಗಳ ಮುಂಚಿನಿಂದ ನಿತ್ಯ ರಾತ್ರಿಯೂಟದ ನಂತರ ಒಂದೆಡೆ ಕಲೆತು ಹುಡುಗರು ಆಟ ಕಲಿಯುವಾಗ ಅದೆಂಥದೋ ಆಸೆ ಕಟ್ಟಿಕೊಂಡ ಲಂಗ ದಾವಣಿಯ ಹುಡುಗಿಯರು ದಂಡಿನಲ್ಲಿ ಬಂದು ನೋಡಿ, ಹುಡುಕಿ, ಹೆಕ್ಕುವರು. ಯಾವಳಿಗೋ ಯಾವನ ಮೇಲೋ ಮನಸ್ಸಾಗುವುದು. ಆಮೇಲೆ ಮಾತಾಗುವುದು. ಅವರಿಗೇ ಗೊತ್ತಿಲ್ಲದಷ್ಟು ಬೇಗ ಬ್ಯಾಂಡಿನವರಿಗೆ ವೀಳ್ಯ ಹೋಗುವುದು. ಬಾಸಿಂಗ, ಬಣ್ಣ, ಪಾಯಸವಾಗಿ, ಅಂಕೋಲೆ ವೆಂಕಟರಮಣ ದೇವರಿಗೆ, ಕೊಗ್ರೆ ದೇವರಿಗೆ, ಅಮ್ಮನವರಿಗೆ ಹಣ್ಣುಕಾಯಿ ಸಲ್ಲುವುದು.
ಹುಡುಗರು ಆಟ ಕಲಿಯುವಾಗ ಪ್ರತಿದಿನವೂ ಒಬ್ಬೊಬ್ಬರ ಮನೆಯಿಂದ ಅವಲಕ್ಕಿ ಚಾ ಹೋಗುವುದು. ಯಾರ ಯಾರ ಮನೆಯ ಅವಲಕ್ಕಿಯಲ್ಲಿ ಎಷ್ಟೆಷ್ಟು ಭತ್ತ, ಕಲ್ಲು ಸಿಕ್ಕಿತೆಂಬುದು ದಾಖಲಾಗುವುದು. ಯಾರು ಅವಲಕ್ಕಿಗೆ ಕೊಬ್ಬರಿಯ ಚೂರನ್ನೂ ಹಾಕಿರಲಿಲ್ಲ, ಯಾರ ಮನೆ ಚಹಕ್ಕೆ ಚಹದ ಸೊಗಸೇ ಇರಲಿಲ್ಲ ಎಂಬ ಕುರಿತು ಟೀಕೆ ಏಳುವುದು. ಇವರು ನಗಾಡುತ್ತ ಹೇಳಿದ್ದನ್ನು ಅವರು ನಗಾಡುತ್ತ ಕೇಳಿಸಿಕೊಳ್ಳುವರು.
ಆಟದ ಚಪ್ಪರ ಕಟ್ಟಲಿಕ್ಕೆ ಹತ್ತೂ ಮನೆಯ ಕೈಗಳು ಜತೆಗೂಡುವವು. ಗುಂಡಿ ತೋಡಿ, ಕಂಬ ನಿಲ್ಲಿಸಿ, ಬಳತ ಹೊಂದಿಸಿ, ಮಡಲು ಹೆಣೆದು, ಹೊತ್ತು ಮೂಡಿದಾಗ ಚಾ ಕುಡಿದು ನಿಂತವರು ಹೊತ್ತು ನೆತ್ತಿ ಮೇಲೆ ಬರುವಷ್ಟು ಹೊತ್ತಿಗೆ ತಾವೇ ಕಟ್ಟಿದ ಚಪ್ಪರದ ಚೆಂದಕ್ಕೆ ಖುಷಿಗೊಂಡು ತುಂಬಿಕೊಳ್ಳುವರು.
ಆಟದ ಚಪ್ಪರವೇಳುವುದು ಶಾಲೆಯ ಎದುರಿನ ಗದ್ದೆ ಬಯಲಲ್ಲಿ. ದೇವೂರಾಯನ ಚಹದಂಗಡಿಯೂ ಆದ ಎರಡೇ ಪಕ್ಕೆಯ ಹುಲ್ಲುಮಾಡಿನ ಹಟ್ಟಿಯಲ್ಲಿ ನಡುವಿನ ಕೈಯೆತ್ತರದ ಗೋಡೆಯೊಂದೇ ಶಾಲೆಗೂ ಚಾದಂಗಡಿಗೂ ಪ್ರತ್ಯೇಕ ಅಸ್ತಿತ್ವ ಒದಗಿಸಿದೆ. ಚಾದೊಲೆಯ ಹೊಗೆ ಶಾಲೆಯ ಒಳಗೋಡೆಯನ್ನೆಲ್ಲ ಕಪ್ಪು ಹಲಗೆಯಂತೆ ಮಾರ್ಪಡಿಸುವ ಪ್ರಯತ್ನದಲ್ಲಿರುತ್ತ, ಶಾಲೆಯಲ್ಲಿನ ಸುಣ್ಣದ ಕಡ್ಡಿಗಳು ದೇವೂರಾಯ ತನ್ನಂಗಡಿಯ ಅಚ್ಚ ಕಪ್ಪಿನ ಗೋಡೆ ಮೇಲೆ ಉದ್ರಿ ಖಾತೆಯವರ ಲೆಕ್ಕ ಬರೆಯಲಿಕ್ಕೆ ಬಳಕೆಯಾಗುತ್ತ ಒಂದು ಬಗೆಯ ಕೊಡುಕೊಳ್ಳುವಿಕೆ ಸಾಧ್ಯಗೊಂಡಿದೆ. ಅಂಥದ್ದರಲ್ಲಿ, ಆಟದ ದಿನವೆಂದರೆ ಶಾಲೆಗೆ ರಜೆಯಿದ್ದು, ಶಾಲೆಯ ಕೋಣೆಯೂ ಮಾಸ್ತರರ ಕುರ್ಚಿ ಟೇಬಲ್ಲೂ ದೇವೂರಾಯನದ್ದೇ ಸ್ವತ್ತಾಗಿಬಿಡುವುದು. ಕುಲುಕುಲು ನಗಾಡುತ್ತ ಸಂತೆ ಕರೆವ ಹೆಂಗಸರೂ ಅಂಥವರ ಕಿಬ್ಬೊಟ್ಟೆ ಗಿಲ್ಲುತ್ತ ಕುಶಾಲು ಮಾಡುವ ಗಂಡಸರೂ ಸೇರಿಕೊಳ್ಳುತ್ತ, ದೇವೂರಾಯನ ಅಂಗಡಿಯ ದೋಸೆ ಕೋಳಿಸಾರು ಚಲೋ ವ್ಯಾಪಾರವಾಗುವುದು.
ಒಂದಿನಿತೂ ಸವಡಿಲ್ಲದಂತೆ ನೆರೆಯುತ್ತದೆ ಚನಗಾರದ ಈ ಸಂಜೆ. ಹೆಣ್ಣುಮಕ್ಕಳು ಅನ್ನಕ್ಕಿಡುತ್ತ, ಹೂದಂಡೆ ಕಟ್ಟುತ್ತ, ತರಕಾರಿ ಹೆಚ್ಚುತ್ತ, ಹೇರುಪಿನ್ನು ಹೊಂದಿಸುತ್ತ, ಮಕ್ಕಳನ್ನು ಬೈಯುತ್ತ, ಅವಕಾಶವಾದರೆ ಗಂಡಸರ ಅಂಗಿ ಕಿಸೆಯಿಂದ ದುಡ್ಡು ಕದಿಯುತ್ತ, ಇನ್ನು ಸ್ವಲ್ಪವೇ ಹೊತ್ತಿನಲ್ಲಿ ಕಣ್ಣೆದುರು ಆಟ ಕುಣಿವ ಸಂಭ್ರಮಕ್ಕೆ ತೆರೆದುಕೊಳ್ಳುತ್ತಾರೆ.
ಯಂಕನ ಗಡಂಗಿನ ಕಡೆ ಹೋಗುವ ಗಂಡಸರ ಪರ್ಸೆಂಟೇಜು ಆಟದ ದಿನ ಜಾಸ್ತಿಯಾಗುತ್ತದೆ. ಅಪರೂಪಕ್ಕೆ ಕುಡಿವವರು ಅಥವಾ ಕುಡಿದು ಹೆಂಡಿರಿಂದ ಬೈಸಿಕೊಳ್ಳುವವರು ಅಲ್ಲಿ ಕಡ್ಡಿ ಇಲ್ಲಿ ಕಡ್ಡಿ ಹೆಕ್ಕಿದಂತೆ ಮಾಡುತ್ತ ಅಂಗಳದಲ್ಲೇ ಕಳ್ಳ ಬೆಕ್ಕಿನಂತೆ ಹೊಂಚು ಹಾಕಿ ಓಡಾಡುತ್ತ ಏಕ್ದಂ ಇಲ್ಲವಾಗುತ್ತಾರೆ. ಎಷ್ಟೋ ಮನೆಗಳಲ್ಲಿ ಆಟದ ನೆವದಲ್ಲಿ ಕೋಳಿಸಾರು ಕುದಿಯುತ್ತದೆ. ಯಾರು ಯಾರದೋ ಮನೆಗೆ ಯಾರು ಯಾರೋ ಹೋಗಿ ಯಾರು ಯಾರದೋ ಬಟ್ಟಲಿಗೆ ಕೈ ಹಾಕಿ ತಿನ್ನುತ್ತ, ನಡುನಡುವೆ ರೋಷಾವೇಷದ ಮಾತು ಉರಿಸುತ್ತ ಎಂಜಲು ಕೈಯಲ್ಲೇ ಎದೆ ತಟ್ಟಿಕೊಳ್ಳುತ್ತಾರೆ.
ಆಟದ ಚಪ್ಪರದ ಕಡೆಯೇ ಜೀವವಿಟ್ಟುಕೊಂಡ ಮಕ್ಕಳು ಅಪರೂಪದ ಕೋಳಿಸಾರನ್ನು ತಪ್ಪಿಸಿಕೊಳ್ಳವು. ಪಾರ್ಟು ಹಾಕುವವರ ಮನೆಯಲ್ಲಿ ಗವಲು ಬೇಯಿಸರು. ಅಂಥ ಮಕ್ಕಳೆಲ್ಲ ಕೋಳಿ ಸಾರಿನ ಘಮ ಹೊಮ್ಮಿಸುವ ಮನೆಯ ಮಕ್ಕಳ ಬೆನ್ನು ಹಿಡಿಯುತ್ತವೆ. ದೊಡ್ಡವರ ಗದ್ದಲದ ನಡುವೆಯೇ ಕಾಡಿ ಬೇಡಿ ಉಣ್ಣುತ್ತವೆ. ಯಾರು ಯಾರಿಗೋ ಸರಾಯಿಯ ನಶೆ ಜಾಸ್ತಿಯಾಗುವುದನ್ನು ತಿಳಿಯುತ್ತವೆ. ಮತ್ತಾರೋ ಜೋರು ತಮಾಷೆ ಮಾಡುತ್ತ ಮಾತಾಡಿಕೊಂಡಿದ್ದವರು ಏಕ್ದಂ ‘ಬೋಸುಡಿ ಮಗ್ನೆ’ ಅಸ್ತ್ರ ತೆಗೆದು ರಪಾ ರಪಾ ಬಡಿದಾಡಿಕೊಳ್ಳುವುದನ್ನು ನೋಡುತ್ತವೆ. ಆಟದ ಚಪ್ಪರದ ಕಡೆಯಿಂದ ಚಂಡೆ ಮದ್ದಳೆ ಶ್ರುತಿ ಮಾಡಿಕೊಳ್ಳುವ ಸೌಂಡು ಕೇಳಿಸುತ್ತಲೇ ಆಟವೇ ಶುರುವಾಯಿತೆಂದುಕೊಂಡು, ಇದಾವುದೂ ತಲೆಯಲ್ಲಿ ನಿಲ್ಲದೆ, ಇದೊಂದರದ್ದೂ ಗರಜಿಲ್ಲದವರಂತೆ ಮತ್ತೊಂದೇ ಜಗತ್ತಿನ ಕಡೆಗೆಂಬಂತೆ ಕಾಲ್ಬಿಟ್ಟೇ ಓಡುತ್ತವೆ.
ಎಷ್ಟೋ ಹರಕಂತ್ರ ಮನೆಯ ಹಿತ್ತಿಲ ಮೀಯುವ ಕಲ್ಲಿನ ಬಳಿ ಸಣ್ಣ ದೀಪದ ಬೆಳಕೊಂದು ತೂಗುತ್ತ, ಹರಕಂತ್ರ ಹೆಂಗಸರು ಹಬೆಯಾಡುವ ಬೆಚ್ಚಗಿನ ನೀರು ಸುರಿದುಕೊಂಡು ಗಸಗಸ ಮೈತಿಕ್ಕಿ ಮೀಯುತ್ತ, ಅವರ ನಿರ್ದಯ ಕೈಗಳಲ್ಲಿ ಕರಗುವ ಸೋಪಿನ ಪರಿಮಳವೇಳುವುದು ಈಗಲೇ. ಮೀನುಪೇಟೆಯಲ್ಲಿ ಬುಟ್ಟಿ ತುಂಬ ಮೀನಿಟ್ಟುಕೊಂಡು ಬೆಳಗಿನಿಂದ ಕೂತು, ಲೆಕ್ಕವಿಲ್ಲದಷ್ಟು ಸಲ ರವಿಕೆಯೊಳಗಿಂದ ದುಡ್ಡು ತೆಗೆಯುತ್ತ, ಹಾಗೇ ಮಡಗುತ್ತ, ಮತ್ತೆ ತೆಗೆದು ಮಡಗುತ್ತ, ಮತ್ತೂ ತೆಗೆದು ಮತ್ತೂ ಮಡಗುತ್ತ, ತೆಳ್ಳಗಿನ ವ್ಯಾಪಾರಕ್ಕೆ – ಆಟದ ದಿನ ಮೀನು ಹೆಚ್ಚು ಹೋಗುವುದಿಲ್ಲವೆಂಬ ವಸ್ತುಸ್ಥಿತಿಯ ಅರಿವಿನಲ್ಲಿ – ವಾರ್ಷಿಕ ಸಹನೆ ತೋರಿ ಬೇಗ ಮನೆಗೆ ಮರಳಿದವರೇ ಮೀನು ಸಿಗಿದು ಉಪ್ಪು ಹಾಕಿ ನಾಳೆಯ ಬಿಸಿಲಿಗೆ ಒಣಗಿಸಲು ತಯಾರಿ ಮಾಡಿದ ಹೆಂಗಸರಿವರು. ಎಷ್ಟೋ ಸಲ ಇದೇ ದಿನ ಹೀಗೆ ಈ ಹೊತ್ತಲ್ಲೇ ಮೀಯಲೆಂದು ಹಿತ್ತಿಲಿಗಿಳಿದ ಎಷ್ಟೋ ಹರಕಂತ್ರ ಹೆಣ್ಣುಮಕ್ಕಳು ಉಟ್ಟ ಸೀರೆಯಲ್ಲೇ, ಇರುವ ಗಂಡನ ಬಿಟ್ಟು ಯಾರು ಯಾರದ್ದೋ ಬೆನ್ನು ಹತ್ತಿ ಓಡಿ ಹೆಸರುವಾಸಿಯಾದದ್ದುಂಟು. ಹೀಗಾಗೇ ಅನೇಕ ಗಂಡಸರಿಗೆ ಅಂಥದ್ದೊಂದು ಆತಂಕ ಕಾಡಿಯೇ ಕಾಡುವುದೂ ಉಂಟು. ಕೆಲವರಂತೂ ಮನೆಯವಳು ಹಾಗೆ ಮೀಯಲಿಕ್ಕಿಳಿದಾಗ ದೀಪದ ಜತೆ ಮಕ್ಕಳನ್ನೂ ನಿಲ್ಲಿಸಲು ಮರೆಯರು. ಹೆಂಗಸರೇನಾದರೂ ಆಚೀಚೆ ಜಾರಿದರೆ ಮಕ್ಕಳು ಕಂಗಾಲಾಗಿಯಾದರೂ ಕೂಗಿಕೊಳ್ಳುತ್ತವೆ ಎಂಬುದು ಅಂಥ ಗಂಡಸರ ಪ್ರಚಂಡ ತರ್ಕ. ಇಂಥ ತರ್ಕಗಳು ಎಷ್ಟೋ ಸಲ ತಲೆ ಬಿದ್ದುಹೋಗಿ ಎಡವಟ್ಟಾದುದರ ಉದಾಹರಣೆಗಳನ್ನು ಗುಂಪಿನಲ್ಲಿ ಮಳೆಯಲ್ಲಿ ನೆನೆಯುತ್ತ ಗದ್ದೆಹಾಳಿ ಕಟ್ಟುವ ಪ್ವಾರಗೋಳು ಕಥೆ ಮಾಡಿ ಹೇಳಿಕೊಂಡು ನಗಾಡುತ್ತ ಬೆಚ್ಚಗಾಗುತ್ತವೆ.
ಈಗ ಸತ್ತುಹೋಗಿರುವ ಶೀವ್ಯ ಹೀಗೆ ಒಂದು ಸಲ ಮೀಯುವುದಕ್ಕೆ ಹೊರಟ ಹೆಂಡತಿಯ ಹಿಂದೆ ಏಳೆಂಟೊರ್ಸದ ಮಗಳನ್ನು ನಿಲ್ಲಲು ಹೇಳಿ ಕೂತಿದ್ದ. ಎಲ್ಲಿಂದಲೋ ಓಡಿಬಂದ ನಾಯಿಮರಿಯೊಂದು ಕಾಲ ಬಳಿಯೇ ನುಸುಳಿ ಓಡಿದ್ದಕ್ಕೆ ಹೆದರಿದ ಹುಡುಗಿ ಬೊಬ್ಬೆ ಹಾಕಿಕೊಂಡುಬಿಟ್ಟಳು. ಇದೇ ಸಮಯಕ್ಕೇ ಪೂರ್ವ ತಯಾರಿ ಮಾಡಿಕೊಂಡು ಕಾಯುತ್ತಿದ್ದವನಂತೆ ರೋಷಾವೇಷ ಬೀಸುತ್ತ ಹಿತ್ತಲಿಗೋಡಿ, ಮೀಯುತ್ತಲಿದ್ದ ಹೆಂಡತಿಯನ್ನು ಹಿಡಿದೆಳೆದು ತಂದಿದ್ದ. ಇವನಿಗೇನಾಯಿತೆಂದು ತಿಳಿಯದೆ ಕಂಗಾಲು ಬಿದ್ದ ಅವಳು ಅವನೆದುರು ಪ್ರಶ್ನೆಯಂತಾ ಪ್ರಶ್ನೆಯಾಗಿ ನಿಂತಳು. ಇವಳಿಗೆ ಬುದ್ಧಿ ಕಲಿಸುತ್ತೇನೆ ಎಂಬ ಧಾಟಿಯಲ್ಲೇ ಅವನು ‘ಓಡ್ತ್ಯಾ?’ ಕೇಳಿದ. ತನ್ನ ಬಗ್ಗೆ ಗಂಡ ಇಲ್ಲದ್ದು ಸಂದೇಹಿಸಿದನೆಂಬುದು ಹೊಳೆದದ್ದೇ ಮೈಯೆಲ್ಲಾ ಕೆಂಡವಾದಳು. ‘ಹಾಂ ಓಡ್ತೀನೋ. ಗಂಡಸಾದ್ರೆ ನಿಲ್ಸು’ ಎಂದು ಆಕಾಶವೊಡೆವಂತೆ ಅವಳು ಕೇವಲ ಸಿಟ್ಟಿನಿಂದ ಅಬ್ಬರಿಸಿದಾಗ ತನ್ನ ತಲೆ ಸಹಿತ ಇಡೀ ದೇಹವೇ ತನ್ನದೇ ಪಾದದ ಬಳಿ ಸೇರಿಹೋದಂಥ ಭಾಸದಲ್ಲಿ ಇಳಿದುಹೋದ. ಮರುಕ್ಷಣವೇ ಯಾವುದೋ ಮೂಲೆ ಸೇರಿ ಬೀಡಿ ಹಚ್ಚಿಕೊಂಡು ಕೂತುಬಿಟ್ಟಿದ್ದ.
ಹೆಂಗಸರೆಲ್ಲ ಇವತ್ತಿನಿಂದ ವರ್ಷಕ್ಕೇ ಸಾಕೆಂಬಷ್ಟು ಪೌಡರು ಬಳಿದುಕೊಂಡು, ಜಾರೂ ಸೀರೆಯ ಉಡುತ್ತ ಬಿಚ್ಚುತ್ತ, ಮತ್ತೆ ಉಟ್ಟು, ಬಿಚ್ಚಿ ಅಂತೂ ಉಟ್ಟುಕೊಂಡು, ಹಠ ಮಾಡುವ ಮಕ್ಕಳ ಬೆನ್ನಿಗೊಂದೊಂದು ಇಕ್ಕಿ – ಟೀವಿ ಆರಿಸುವಂತೆ ಮಕ್ಕಳನ್ನು ತೆಪ್ಪಗಾಗಿಸಿ ಆಟದ ಚಪ್ಪರದ ಕಡೆ ಹೊರಡುವಾಗ, ಅತ್ತ ಪಾರ್ಟು ಹಾಕುವವರೂ ಬಣ್ಣ ಹಚ್ಚಿಕೊಂಡು ವೇಷ ಕಟ್ಟಿಕೊಂಡು ಸಿದ್ಧವಾಗುವುದೂ ಮುಗಿದಿರುತ್ತದೆ. ಬಣ್ಣ ಹಚ್ಚುವವನು ಹೆಂಡದಮಲಿನಲ್ಲಿ ಕಣ್ಣಿಗೆ ಹಚ್ಚಬೇಕಾದ ಕಪ್ಪನ್ನು ಕೆನ್ನೆಗೂ, ಮೀಸೆಯನ್ನು ಕುತ್ತಿಗೆಗೂ ಹಚ್ಚುತ್ತ, ಪಾರ್ಟು ಹಾಕುವವನು ತನ್ನ ಅವಸ್ಥೆ ಇದೇನಾಗುತ್ತಿದೆ ಎಂದು ಸಿಟ್ಟಿನಲ್ಲಿ ಅವನಿಗೆ ನಾಲ್ಕು ಬಾರಿಸಿ, ಆಮೇಲೆ ದೊಡ್ಡ ಜಗಳವೇ ಆಗುವುದೂ ಇದೆ ಒಂದೊಂದು ವರ್ಷ. ರಂಗಸ್ಥಳ ಮತ್ತು ಜನ ಕೂತುಕೊಳ್ಳುವ ಜಾಗವನ್ನು ಪ್ರತ್ಯೇಕಿಸುವಂತೆ ಮೂರೂ ಬಾಜೂ ಕಟ್ಟಿದ ಹಗ್ಗಕ್ಕೆ ಒತ್ತಿಕೊಂಡು ಕೂರುತ್ತದೆ ಜನ. ಹಗ್ಗಕ್ಕೆ ಹತ್ತಿರವಾಗಿ ಲೈಟಿನ ಬೆಳಕಿಗೆ ಮುಖವೆಲ್ಲ ಬಿಚ್ಚಿಕೊಳ್ಳುವಂತೆ ಮಕ್ಕಳು ಹೆಂಗಸರು, ಹಿಂದೆಲ್ಲ ಗಂಡಸರು. ಅದಕ್ಕೂ ಆಚೆ ಇಸ್ಪೀಟಾಟದವರ ಗದ್ದಲ ಆಗೀಗ ಮೊಳಗುತ್ತಿರುತ್ತದೆ. ಕೆಳಗೆ ಶಾಲೆ ಹಟ್ಟಿಯಲ್ಲಿ ದೇವೂರಾಯನು ಮಾಡಿದ ದೋಸೆ ಮತ್ತು ಕೋಳಿಸಾರು ಮೊದಲ ಸುತ್ತಿನಲ್ಲೇ ಬಹುಬೇಗ ಮುಗಿದು, ಮತ್ತೊಂದು ರೌಂಡಿನದು ತಯಾರಾಗುವವರೆಗೂ ಸಂಬಾಳಿಸುವ ಯತ್ನದಲ್ಲಿ ಸಾರಿಗೆ ಬಿಸಿ ನೀರನ್ನೂ ಉಪ್ಪನ್ನೂ ಗಿರಾಕಿಗಳ ಕಣ್ಣು ತಪ್ಪಿಸಿ ಸೇರಿಸಿ ವ್ಯಾಪಾರ ಮುಂದುವರಿಸಿರುತ್ತಾನೆ.
ಬಾಲಗೋಪಾಲರು, ಕೋಡಂಗಿ ನಂತರ ಮೊದಲು ಪ್ರವೇಶವಾಗುವ, ಒಂದೆರಡು ಪದಗಳಿರುವ ಪಾತ್ರ ಕಟ್ಟುವವನು ಎಲೆಮಾರೂ ಪೊಕ್ಕನೇ. ಅವನು ರಂಗಸ್ಥಳಕ್ಕೆ ಬಂದು ಒಡ್ಡೋಲಗದ ಕುಣಿತದಲ್ಲಿ ರಾಜಗಾಂಭೀರ್ಯದ ಅಭಿನಯದಲ್ಲಿರುವಾಗ ತೀರಾ ಮುಂದೆ ಕೂತಿರುವ ಕೆಲ ಹೆಂಗಸರೂ ಮಕ್ಕಳೂ ‘ಎಲೆಮಾರೂ ಪೊಕ್ಕ’ ಎಂದು ಸಾಕಷ್ಟು ಜೋರು ದನಿಯಲ್ಲೇ ಪಿಸುಗುಡುತ್ತಾರೆ. ಕುಣಿಯುತ್ತಿರುವ ಎಲೆಮಾರೂ ಪೊಕ್ಕನೂ ತಾನು ಎಲೆ ಮಾರಲು ಕೂರುವ ಕಲ್ಲನ್ನೇ ನೆನಪು ಮಾಡಿಕೊಂಡು, ಅದರ ಕರಾಮತಿಯೆಂಬಂತೆ ‘ಥೂ ನಿಮ್ಮ’ ಎಂದು ಉಗುಳಿ, ಅನಂತರ, ‘ಅಯ್ಯಾ ಭಾಗವತರೇ ಈ ಪಾಂಚಾಲ ದೇಶಕ್ಕೆ ಅಧಿಪತಿ ಯಾರೆಂದು ಕೇಳಿದ್ದೀರಿ?’ ಎಂದು ಶುರು ಹಚ್ಚಿಕೊಳ್ಳುತ್ತಾನೆ. ಅದಕ್ಕೆ ಭಾಗವತರು ಉತ್ತರಿಸುವುದಕ್ಕೂ ಮೊದಲೇ ಹಿಂದಿನಿಂದ ಯಾರೋ ಹುಡುಗರು, ‘ಎಲೆ ಮಾರೂ ಪೊಕ್ಕನೆಂದು ಕೇಳಿ ಬಲ್ಲೆವು’ ಎಂದು ಭಾಗವತರ ಶೈಲಿಯಲ್ಲೇ ಹೇಳಿ ಪೊಕ್ಕನ ಸಹನೆಯನ್ನೇ ಕೆಣಕುತ್ತಾರೆ.
ಹೀಗೆ ಆಟವೆಂಬುದು ಖುಷಿ, ಕನಸು, ಆಸೆ, ಎಂಥದೋ ಮಮಕಾರದ ಘಳಿಗೆ, ಎಲ್ಲರಿಗೂ ಪ್ರೀತಿ ಹಂಚುವ ನೇವರಿಕೆ, ಒಂದಿಷ್ಟು ಕುಶಾಲು, ಅಲ್ಲೆಲ್ಲೋ ತುಸು ಕುತ್ಸಿತ, ಕಾಲೆಳೆವ ಉಮೇದು, ಹಸಿ ಹಸೀ ಬಯಕೆ, ಬಣ್ಣ, ಬೆಳಕು, ಧಾವಂತ ಎಲ್ಲವೂ ಹೌದು ಚನಗಾರದಲ್ಲಿ. ಆಟಕ್ಕೆ ಊರು ಸೋಲುತ್ತದೆ, ಪರವಶಗೊಳ್ಳುತ್ತದೆ. ನವಿರು ನವಿರಾದ ಗುನುಗು, ಏನೋ ಪಲ್ಲಟದ ಭಾಸ, ಈ ಬದುಕು ಕೇಳುವುದೆಲ್ಲವನ್ನೂ ಒಳಗೊಳ್ಳುತ್ತಿರುವಂಥ ತೀವ್ರತೆ ಇವೆಲ್ಲವೂ ಅಲ್ಲಿ ಅನುರಣನಗೊಂಡು ಕೇಳಿಸುತ್ತದೆ.
* * *
ಇಂಥ ಚನಗಾರದ ಒಡಲಲ್ಲಿ ಅವೆರಡು ಸಂಗತಿಗಳು ಆಟದ ಈ ಎಲ್ಲ ಪ್ರವಹಿಸುವಿಕೆಯ ಜೊತೆಜೊತೆಗೇ ಮನಸ್ಸಿನ ದಂಡೆಗೆ ಬಂದು ತಾಡಿ ಕನಲುವಂತೆ ಮಾಡುತ್ತವೆ.
ಒಂದು, ತುಂಬಾ ಹಿಂದೆ ಆಗಿಹೋದದ್ದು. ಕೇಳಿಸಿಕೊಂಡರೆ ಪುರಾಣವೇನೋ ಅಂತನ್ನಿಸುತ್ತದೆ. ಅದನ್ನು ಹೇಳುವವರ ದನಿಗೆ ನೋವಿನ ಪಸೆಯಿರುತ್ತದೆ. ಕೂತು ಕೇಳಿಸಿಕೊಳ್ಳುವವರ ಮೈ ಜುಮ್ಮೆನ್ನುತ್ತದೆ.
ಅವತ್ತೂ ಆಟದ ರಾತ್ರಿ. ಆದರೆ ಮುಗಿಯಿತು ಎಂದುಕೊಂಡ ಆಟ ಎಲ್ಲರ ಊಹೆ ಮೀರಿದ್ದೇ ಆ ರಾತ್ರಿಯ ಹೆಸರಲ್ಲಿ ದುರಂತವನ್ನು ಬರೆದಿತ್ತು.
ರುಕ್ಮಾಂಗದ ನಾಯಕ ಎಂದರೆ ಯಾರಿಗೆ ಗೊತ್ತಿರಲಿಲ್ಲ ಊರಲ್ಲಿ? ತುಂಬ ಸಜ್ಜನ. ಅಷ್ಟೇ ಸ್ವಾಭಿಮಾನಿ. ಯಾರ ಹಂಗಿನಲ್ಲೂ ಬದುಕಬಾರದೆಂಬ ತತ್ವವನ್ನೇ ಕಡೆತನಕವೂ ಬಾಳಿದ್ದವನು. ಅವನನ್ನು ಹಂಗಿಗೆ ಬೀಳಿಸಬೇಕೆಂದು ಹಠ ತೊಟ್ಟವರಂತೆ ಮುಗಿಬಿದ್ದಿದ್ದವರು ಎಷ್ಟೋ ಮಂದಿ. ಇಡೀ ಕಾಡನ್ನೆಲ್ಲ ಕೊಳ್ಳೆ ಹೊಡೆಯುತ್ತ ಅಸಡ್ಡಾಳವಾಗಿ ಬೆಳೆದಿದ್ದ ಮಾರ ಎಂಬ ದರ್ಪದ ಮನುಷ್ಯ ಕೂಡ ಅವರಲ್ಲೊಬ್ಬನಾಗಿದ್ದ. ಅವನಿಗೆ ಕರೆಕ್ಟಾಗಿಯೇ ಗೊತ್ತಿತ್ತು, ರುಕ್ಮಾಂಗದ ನಾಯಕನ ಸಾಚಾತನವನ್ನೆಲ್ಲ ನುಂಗಿ ನೀರು ಕುಡಿದುಬಿಡಲು ಅವನ ಹೆಂಡತಿಯ ದುಡ್ಡಿನಾಸೆಯೇ ಸಾಕು ಎಂಬುದು. ಅವಳನ್ನು ಸರಿಯಾಗಿಯೇ ಬಳಸಿಕೊಂಡು, ಅವಳ ಮೂಲಕವೇ ಹತ್ತು ಮಂದಿಯ ಮುಂದೆ ರುಕ್ಮಾಂಗದ ನಾಯಕನ ಮಾನ ತೆಗೆಯಬೇಕೆಂದು ತನ್ನೊಳಗೇ ಶಪಥ ಮಾಡಿದ್ದ ಮಾರ. ವಿನಾಕಾರಣ ಹುಟ್ಟಿಕೊಂಡಿದ್ದ ದ್ವೇಷ ಅದು. ಅವನು ಸಜ್ಜನ ಆಗಿರುವುದೇ ಮಾರನಿಗೆ ಆಗಿಬರದ ವಿಷಯವಾಗಿತ್ತು. ಅವನ ಮೇಲಿನ ಸೇಡಿನ ಭಾವನೆ ಮಾರನೊಳಗೆ ಬಲಿಯುತ್ತಲೇ ಇತ್ತು. ಅದು ಅವನನ್ನು ಬಲಿ ಹಾಕಲೆಂದೇ ಸರಿಯಾದ ಸಮಯಕ್ಕೆ ಕಾದಿತ್ತು.
ಹಾಗೆ ಅವನನ್ನು ಬಲಿ ಹಾಕುವ ವಿಚಾರದಲ್ಲಿ ಮಾರ ಅಷ್ಟೊಂದು ತಾಳ್ಮೆ ತೋರಿಸುತ್ತಿದ್ದುದಕ್ಕೂ ಕಾರಣವಿಲ್ಲದೆ ಇರಲಿಲ್ಲ. ಬಲಿ ಹಾಕುತ್ತಲೇ ಇದ್ದೇನಲ್ಲ ಎಂಬ ತೃಪ್ತಿ ಅದು. ರುಕ್ಮಾಂಗದ ನಾಯಕನ ಹೆಂಡತಿಯ ಜೊತೆಗಿನ ಸಖ್ಯದ ಮೂಲಕ ಅವನಿಗೆ ಬೇಕಾದ್ದೆಲ್ಲವೂ ಸಿಗುತ್ತಿತ್ತು. ಸಣ್ಣ ಅವಕಾಶ ಸಿಕ್ಕರೂ ಅವರಿಬ್ಬರ ಕಳ್ಳಾಟ ರುಕ್ಮಾಂಗದ ನಾಯಕನ ಬೆನ್ನ ಹಿಂದೆ ನಡೆಯುತ್ತಲೇ ಇತ್ತು. ಅವತ್ತು ರಾತ್ರಿ ಕೂಡ ಆಟದ ಅಬ್ಬರದ ಅಂಚಿನಲ್ಲೇ ಸುಖ ಮೊಗೆವ ಅವರಿಬ್ಬರ ಆಟ ಸಾಗಿತ್ತು. ಆದರೆ ಅದೇ ರಾತ್ರಿ ರುಕ್ಮಾಂಗದ ನಾಯಕನ ಮುಂದೆ ಗುಟ್ಟು ರಟ್ಟಾಗುವುದರ ಸುಳಿವು ಮಾತ್ರ ಇಬ್ಬರಿಗೂ ಸಿಕ್ಕಿರಲಿಲ್ಲ.
ಅವತ್ತು ರಂಗಸ್ಥಳದ ಮೇಲೆ ಗೌತಮನ ಪತ್ನಿ ಅಹಲ್ಯೆಯನ್ನು ಕೂಡುವ ಇಂದ್ರನ ಪಾತ್ರದಲ್ಲಿ ಮೆರೆದದ್ದು ಇದೇ ಮಾರ. ಮತ್ತು ಆತನ ಆಟವನ್ನು ಕಣ್ಣಾರೆ ಕಂಡು ದಂಗಾಗುವ ಗೌತಮನ ಪಾತ್ರದಲ್ಲಿದ್ದದ್ದು ರುಕ್ಮಾಂಗದ ನಾಯಕ. ಗೌತಮನಿಂದ ಶಾಪಕ್ಕೊಳಗಾಗುವ ಇಂದ್ರನ ಪಾತ್ರ ಮುಗಿದ ಮೇಲೂ ಗೌತಮನ ವೇಷ ಮುಂದುವರಿದಿರುತ್ತದೆ. ಎಲ್ಲ ಮುಗಿಸಿ, ವೇಷ ಕಳಚಿ ಬಣ್ಣ ಒರೆಸಿಕೊಂಡು ಮನೆಗೆ ಮುಟ್ಟುತ್ತಾನೆ ರುಕ್ಮಾಂಗದ ನಾಯಕ. ಜಗುಲಿಯಲ್ಲಿ ಕಾಲಿಡುತ್ತಲೇ ಸಿಕ್ಕ ಸುಳಿವಿಗೆ ನಿಜವಾಗಿಯೂ ದಂಗಾಗುವ, ದಿಕ್ಕೆಟ್ಟಂಥ ಸ್ಥಿತಿ ಅವನದಾಗುತ್ತದೆ. ಇನ್ನಿಲ್ಲವೆಂಬಷ್ಟು ಸುಖ ಸೂರೆಗೈದು ದಣಿದು ಗಾಢಾಲಿಂಗನದಲ್ಲೇ ನಿದ್ದೆಹೋದ ಬೆತ್ತಲೆ ಜೋಡಿ. ಆಟದ ರಾತ್ರಿಯ ನಂತರದ ನಿದ್ದೆ ಮತ್ತು ಸುಖದ ಪರಮೋತ್ಕಟತೆಯ ನಂತರದ ನಿತ್ರಾಣವೆಡರಡೂ ಕೂಡಿದ ಪೂರ್ಣ ಮೈಮರೆವಿನಲ್ಲಿದ್ದ ಜೋಡಿ. ಯಾವನನ್ನು ಪರಮ ದುಷ್ಟನೆಂದು ದೂರವೇ ಇಟ್ಟಿರುವೆನೋ ಅಂಥವನ ತೆಕ್ಕೆಯಲ್ಲಿ ಮೈಮರೆತಿರುವ ಹೆಂಡತಿ. ಒಂದು ಕ್ಷಣ ಹತಾಶನಾಗುತ್ತಾನೆ ರುಕ್ಮಾಂಗದ ನಾಯಕ. ಒಂದೇ ಕ್ಷಣ. ಮುಂದೆ ಅವನು ಇಟ್ಟದ್ದು ಹತಾಶೆಯ ಮುಂದುವರಿಕೆಯಂಥದ್ದಾಗಿತ್ತೊ ಅಥವಾ ಇನ್ನು ಯಾವುದೂ ಉಳಿಯಬೇಕಾದ ಅಗತ್ಯವಿಲ್ಲ ಎಂಬ ನಿರ್ಧಾರದಿಂದ ದೃಢಗೊಂಡದ್ದಾಗಿತ್ತೊ ಗೊತ್ತಿಲ್ಲ. ಜಗುಲಿಯ ಗೋಡೆಯ ಮೇಲೆಯೇ ಇರುವ ಕತ್ತಿ ಅವನ ಕೈಗೆ ಬಂದಾಗಿತ್ತು. ಸುಖದ ಅಮಲುಂಡು ಈ ಜಗತ್ತಿನ ಪರಿವೆಯಿಲ್ಲದೆ ಪರಸ್ಪರರ ತೆಕ್ಕೆಯಲ್ಲಿ ನಿದ್ದೆಹೋಗಿದ್ದ ಅವರಿಬ್ಬರ ಮೇಲೆ ಇದ್ದಷ್ಟೂ ಬಲದಿಂದ ಬೀಸಿದ್ದ ಕತ್ತಿ ಹಾದುಹೋಗಿತ್ತು. ಬೆಸೆದುಕೊಂಡಿದ್ದ ಜೀವಗಳೆರಡೂ ನಿದ್ದೆಯಲ್ಲಿಯೇ ತುಂಡಾಗಿ ಬಿದ್ದಿದ್ದವು. ಮತ್ತೂ ಮುಂದಿನ ಕ್ಷಣವೇ ಅದೇ ಕೆಂಪು ಕೆಂಪಾದ ಕತ್ತಿ ಸ್ವತಃ ರುಕ್ಮಾಂಗದ ನಾಯಕನ ಎದೆಯನ್ನೂ ಹೊಕ್ಕಿತ್ತು. ಮುಂದೆ ಉಳಿದದ್ದೆಲ್ಲ ಬರೀ ನೆತ್ತರು.
***
ಇನ್ನೊಂದು ಘಟನೆ ನಡೆದದ್ದು ಈಗೊಂದಿಷ್ಟು ವರ್ಷಗಳ ಕೆಳಗೆ. ರಂಗಸ್ಥಳದಲ್ಲಿ ಹಿರಣ್ಯಕಶಿಪು-ನಾರಸಿಂಹ ಪ್ರಸಂಗ. ನಿಜವಾಗಿಯೂ ಆಟಕ್ಕೆ ಅಬ್ಬರವೇರಿತ್ತು, ಹಿರಣ್ಯಕಶಿಪು ರಂಗದ ಮೇಲೆ ಬಂದಾಗ. ಹಿರಣ್ಯಕಶಿಪು ಪಾತ್ರ ಹಾಕಿದ್ದ ಮ್ಯಾಲಿನಕೇರಿ ದೇವು ಆಳ್ತನದಲ್ಲಿ ಆ ಪಾತ್ರಕ್ಕೆ ಒಪ್ಪುವ ಹಾಗೇ ಇದ್ದ. ‘ಮಗನೇ ಪ್ರಹ್ಲಾದ, ನಿನ್ನ ಹರಿಭಕ್ತಿಯೇ ನಮ್ಮ ನಡುವೆ ಬಿರುಕು ತಂದೀತು ಮಗನೆ’ ಎನ್ನುವಾಗ ಸತ್ತುಹೋದ ಹಿರಿಮಗನದ್ದೇ ನೆನಪು ತುಂಬಿಕೊಂಡಿದ್ದ. ನೀರಿಗಾಗಿ ನಡೆದ ಜಗಳದಲ್ಲಿ ಅವನ ಮಗನ ಕೊಲೆಯಾಗಿತ್ತು. ಸಣ್ಣಗೆ ಮಾತಿಗೆ ಮಾತು ಶುರುವಾದದ್ದು ಏಕ್ದಂ ಬೆಳೆದು ಎದುರುಗಡೆಯವನು ಬೀಸಿದ ಕತ್ತಿಗೆ ಅವನ ಮಗ ಮುಗಿದುಹೋಗಿಬಿಟ್ಟಿದ್ದ. ಹಾಗೆ ಕತ್ತಿ ಬೀಸಿದ್ದ ಗಾಳೀಮನೆ ಬೀರಪ್ಪನನ್ನು ನೆನೆದು ಕಿಡಿಕಿಡಿಯಾಗುತ್ತಲೇ, ‘ದಾನವ ಕುಲಕ್ಕೆ ಮಹಾ ವೈರಿಯಾಗಿರುವ ವಿಷ್ಣುವಿನ ನೆನಪಿಗೆ ಬೆಂಕಿಹಾಕು’ ಅಂದಿದ್ದ.
ನಾರಸಿಂಹನ ಪ್ರವೇಶವಾದುದೇ ಮತ್ತಷ್ಟು ರಂಗೇರಿತ್ತು ಆಟ. ಸಿಂಹದ ಮುಖ ತೊಟ್ಟ ಯೋಗು ತನ್ನ ಕುಣಿತದಿಂದಲೇ ಎಲ್ಲರ ಗಮನ ಸೆಳೆದ. ಸಮವಯಸ್ಕರಾದ, ಒಂದೇ ಅಂಗಡಿಯಲ್ಲಿ ಚಹ, ಬೀಡಿಗೆ ಉದ್ರಿ ಲೆಕ್ಕ ಬರೆಸುವವರಾದ, ಇದೆಲ್ಲಕ್ಕಿಂತ ಹೆಚ್ಚಾಗಿ ಒಂದೇ ಕಟ್ಟೆಯ ಮೇಲೆ ಕೂತು ಶತಪೋಲಿ ಜೋಕು ಹೇಳುತ್ತ ಎಲ್ಲರನ್ನೂ ನಗಿಸುವ ದೋಸ್ತರಾದ ದೇವು ಮತ್ತು ಯೋಗು ಎದುರಾಳಿಗಳ ಪಾತ್ರಗಳಲ್ಲಿ ಚಪ್ಪರ ಕಿತ್ತು ಹೋಗುವಂತೆ ಅಬ್ಬರಿಸುತ್ತಿದ್ದರು.
ನೋಡನೋಡುತ್ತಿದ್ದಂತೆ ನಾರಸಿಂಹ ಒಂದು ನೆಗೆತ ನೆಗೆದು ಹಿರಣ್ಯಕಶಿಪುವನ್ನು ನೆಲಕ್ಕೆ ಕೆಡವಿದ. ಅವನೆದೆಯ ಮೇಲೆ ಕೂತು ಎರಡೂ ಕೈಯಿಂದ ಅವನ ವೇಷದಂಗಿಯನ್ನು ಸಿಗಿದೆಳೆದು ಹಾಕಿದ. ಜನರು ತನ್ಮಯರಾಗಿ ನೋಡುತ್ತಿರುವಾಗಲೇ, ಚನಗಾರ ಬ್ವಾಳೆ ಮೇಲೆ ಆಗೀಗ ಹುಲಿ ಮೊರೆವಂತೆ ಮೊರೆಯತೊಡಗಿದ. ಹಿರಣ್ಯಕಶಿಪುವಿನ ಎದೆ ಸೀಳಿದ ಅವನ ಅಭಿನಯಕ್ಕೆ ಜನ ಶಾಭಾಸ್ ಅಂದಿತು. ಹಿರಣ್ಯಕಶಿಪು ಪಾತ್ರದಲ್ಲಿದ್ದ ದೇವು ಮಾತ್ರ ದೊಡ್ಡಕ್ಕೆ ಬೊಬ್ಬೆ ಹುಯ್ದುಕೊಳ್ಳತೊಡಗಿದ್ದ. ತನ್ನ ಕುತ್ತಿಗೆಯ ಮೇಲೆ ಬಲಗೊಳ್ಳುತ್ತಿರುವ ಯೋಗುವಿನ ಬೆರಳುಗಳಿಂದ ಬಿಡಿಸಿಕೊಳ್ಳಲು ಚಡಪಡಿಸುತ್ತಿದ್ದ. ಕ್ಷಣಕ್ಷಣವೂ ಯೋಗು ಮೊರೆಯುತ್ತ ಹಿಡಿತ ಬಿಗಿಗೊಳಿಸುತ್ತಿದ್ದರೆ, ಎದೆಯ ಮೇಲೆ ಅಷ್ಟೊಂದು ಭದ್ರವಾಗಿ ಕುಳಿತಿದ್ದ ಅವನಿಂದ ಬಿಡಿಸಿಕೊಳ್ಳಲು ಶಕ್ತಿಯಿರುವಷ್ಟೂ ಪ್ರಯತ್ನಿಸುತ್ತ ಕಾಲುಗಳನ್ನು ಬಡಿದುಕೊಳ್ಳುತ್ತ ದೇವು ಒದ್ದಾಡುತ್ತಿದ್ದ. ಜನ ತಲೆದೂಗುತ್ತಲೇ ಇದ್ದರು. ಇರುವಷ್ಟೂ ಬಲ ಪ್ರಯೋಗಿಸಿ ಅದೊಮ್ಮೆ ದೇವು ಹೇಗೋ ಅವನ ಹಿಡಿತದಿಂದ ಜಾರಿದ. ಜಾರಿದವನೇ ಇದ್ದೆನೊ ಬಿದ್ದೆನೊ ಎಂದೆಣಿಸದೆ ರಂಗಸ್ಥಳದ ಸುತ್ತ ಕಟ್ಟಿದ್ದ ಹಗ್ಗ ದಾಟಿ ಜನರ ನಡುವಿನಿಂದ ಬಿದ್ದು ಓಡಿಯೇ ಓಡಿದ. ಅವನ ಅನಿರೀಕ್ಷಿತ ಹೊಡೆತಕ್ಕೆ ಬಲ ಕಳಕೊಂಡು ಏನಾಯಿತೆಂದು ತಿಳಿಯಲಾರದವನಂತೆ ರಾಶಿಯಾಗಿ ಬಿದ್ದಿದ್ದ ಯೋಗುವೂ ಬೆನ್ನಿಗೇ ‘ನಿನ್ನ ಬಿಡ್ತೇನೆ ತಿಳದ್ಯಾ?’ ಅನ್ನುವವನಂತೆ ಓಡಿದ. ಇಬ್ಬರೂ ಕತ್ತಲಲ್ಲಿ ಜನರ ಕಣ್ಣಿಂದ ದಾಟಿ ಹೋಗಿಬಿಟ್ಟರು. ಜನ ಮುಖ ಮುಖ ನೋಡಿಕೊಂಡರು. ಯಾರಿಗೂ ತುದಿಬುಡ ಅರ್ಥವಾಗಿರಲಿಲ್ಲ. ಅವರಾರಿಗೂ ಹೇಳದೆ ಕೇಳದೆ ಆಟ ಹೀಗೆ ಮುಗಿದಿತ್ತು.
ಮಾರನೇ ಬೆಳಗು ಎಂಥದೂ ನಡೆದೇ ಇಲ್ಲವೆನ್ನುವಂತೆ ಮೀನುಪೇಟೆಯಲ್ಲಿ ಗಿಜಿಗಿಜಿ ಮೈಹಾಸಿದಾಗ, ಎಷ್ಟೋ ಹರಕಂತ್ರ ಹೆಂಗಸರ ಕಣ್ಣಲ್ಲಿ ನಿದ್ದೆ ಬಾಡಿಕೊಂಡಿತ್ತು. ಕೆಲವರ ಕಣ್ಣಲ್ಲಿ, ರಾತ್ರಿ ಹೀಗಾಯಿತು ಅನ್ನುವುದು ಹೊಳೆಯುತ್ತಿದ್ದ ಹಾಗಿತ್ತು. ಕಾಳಿ, ನಾಗಮ್ಮ, ಶೂಲಿ, ರತ್ನ, ಮಾದಿ, ಕನ್ನಿ, ಸೀತೆ, ಗಿಣ್ಣಿ, ರೇಣುಕಾ, ನಂಜಿ, ಪಾರೋತಿ, ಗುಲಾಬಿ, ಬಾಮೆ, ಮೋನು ಎಲ್ಲರೂ ಮಾತುಗಳೇ ಆಗಿ ಸುರಿಯುತ್ತಿದ್ದಾರೇನೋ ಎಂಬಷ್ಟು ಮಾತು ಅಲ್ಲಿ ಮೀನೀನ ವಾಸನೆಯನ್ನು ಬೆರೆಸಿಕೊಂಡು ಹರಡುತ್ತಿತ್ತು.
ಆ ಮಾತು ಮತ್ತು ವಾಸನೆ ನಡುವೆ, ಮೀನು ಕೊಳ್ಳಲು ಬಂದವರು ಮೀನುಗಳ ತಾಜಾತನ ಪರೀಕ್ಷಿಸುತ್ತ, ಮಸ್ತು ಹೆಂಗಸರ ಮೈಯನ್ನು ಕಣ್ಣಲ್ಲೇ ಎಂಜಲು ಮಾಡುತ್ತ ಇದ್ದಾಗ, ಇದ್ದಕ್ಕಿದ್ದಂತೆ ಬಹಳಷ್ಟು ಕಣ್ಣುಗಳು ಅಲ್ಲಿ ಪ್ರತ್ಯಕ್ಷನಾದ ವ್ಯಕ್ತಿಯೊಬ್ಬನ ಮೇಲೆ ನೆಟ್ಟವು. ಯೋಗಿ ಅಲ್ಲಿ ತಲುಪಿದ್ದ. ನಾರಸಿಂಹನ ವೇಷವೇನೂ ಇರಲಿಲ್ಲ. ಮಾಸಿದೊಂದು ಮುಂಡು ಉಟ್ಟು ಬನಿಯನ್ನು ಸಿಗಿಸಿಕೊಂಡು ಬಂದಿದ್ದ. ಮೈಯಿಂದ ಹೆಂಡದ ವಾಸನೆ ಹೊಡೀತಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿರುವಂತೆ ಕಾಣುತ್ತಿದ್ದವು. ತೀವ್ರ ದಣಿದವನಂತೆ ಇದ್ದ ಅವನನ್ನು ಯಾರೂ ಮಾತನಾಡಿಸಲು ಮುಂದಾಗಲಿಲ್ಲ. ಅವನೂ ಯಾರೊಂದಿಗೂ ತುಟಿ ಬಿಚ್ಚಲಿಲ್ಲ. ಒಮ್ಮೆಲೆ ಅವನ ದೃಷ್ಟಿ ಒಂದೆಡೆ ನೆಟ್ಟಿತು. ಅದೆಲ್ಲಿ ಎಂದು ನೋಡಿದರೆ, ಅಲ್ಲಿ ಭರ್ತಿ ಪ್ರಾಯದ ಗಿಣ್ಣಿ ಕೂತಿರುವುದು ಕಾಣಿಸಿತು. ಗಿಣ್ಣಿ ಮೀನು ಎಣಿಸಿ ಎದುರಿಗಿದ್ದವನ ಚೀಲಕ್ಕೆ ಹಾಕುವುದರಲ್ಲಿ ಮಗ್ನಳಾಗಿದ್ದಳು. ಅವಳ ಒಟ್ಟು ಕುಲುಕಾಟ ಅವಳ ಪ್ರಾಯಕ್ಕೆ ಇನ್ನಷ್ಟು ಕಳೆ ಕಟ್ಟಿತ್ತು. ಯೋಗುವಿನ ಕಣ್ಣಲ್ಲಿ ಒಮ್ಮೆಲೆ, ಹುಡುಕುತ್ತಿರುವುದು ಸಿಕ್ಕಿತು ಎಂಬಂಥ ಖುಷಿ ಮಿಂಚಿದಂತೆ ಕಂಡಿತು. ಮೈಮೇಲಿನ ಧ್ಯಾಸವೇ ತಪ್ಪಿದಂತೆ ’ಇದೇ, ಇಲ್ಲೇ ಇವಾ ಹಿರಣ್ಯಕಸಿಪು’ ಅನ್ನುತ್ತಲೇ ಒಂದೇ ಜಿಗಿತಕ್ಕೆ ಗಿಣ್ಣಿಯ ಎದುರಿಗೆ ಮುಟ್ಟಿದ್ದ. ಅವನ ದನಿ ಕೇಳಿಸಿದ್ದೇ ಗಿಣ್ಣಿಯಿಂದ ಮೀನು ಹಾಕಿಸಿಕೊಳ್ಳುತ್ತಿದ್ದ ದೇವು ಚೀಲ ಅಲ್ಲೇ ಎಸೆದು ದೊಡ್ಡಕ್ಕೆ ಅಯ್ಯಯ್ಯೋ ಎಂದು ಬೊಬ್ಬೆ ಹೊಯ್ಯುತ್ತ ಗಿಣ್ಣಿಯ ನೆತ್ತಿಯ ಮೇಲಿಂದಲೇ ಆಚೆ ಜಿಗಿದಾ.
ಹಾಗೆ ಯೋಗುವಿನ ಮೊದಲ ನೆಗೆತದ ಗುರಿಯಿಂದ ತಪ್ಪಿಸಿಕೊಂಡ ದೇವು, ಬೆನ್ನಟ್ಟಿದವನನ್ನು ಸತಾಯಿಸುತ್ತ ಮೀನುಪೇಟೆಯಲ್ಲಿ ಅಷ್ಟು ದೊಡ್ಡ ಜಾಗದಲ್ಲಿ ರವುಂಡಾಗಿ ಕೂತಿದ್ದ ಹರಕಂತ್ರ ಹೆಂಗಸರನ್ನೆ ಸುತ್ತುವರಿದು ಓಡತೊಡಗಿದ. ಯೋಗು ಅವನ ಬೆನ್ನಟ್ಟಿಯೇ ಅಟ್ಟಿದ. ದೂರದಿಂದ ನೋಡಿದವರಿಗೆ ಮಕ್ಕಳು ಹುಲಿ ಹಸುವಿನ ಆಟ ಆಡುತ್ತಿರುವಂತೆ ಅದು ಕಾಣಿಸಬಹುದಿತ್ತು. ಅವರು ಹಾಗೆ ಅಡ್ಡಾದಿಡ್ಡಿ ಓಡುವಾಗ ಎಷ್ಟೋ ಮೀನುಬುಟ್ಟಿಗಳು ಚೆಲ್ಲಾಡಿ ಹೋದವು. ಕಣ್ಣೆದುರಲ್ಲೇ ಮೀನುಗಳು ಅವರ ಕಾಲ್ತುಳಿತಕ್ಕೆ ಸಿಕ್ಕಿ ಮಣ್ಣುಪಾಲಾಗುವುದನ್ನು ಕಂಡು ರೊಚ್ಚಿಗೆದ್ದ ಕೆಲ ಹೆಂಗಸರಂತೂ ಪಾದದಲ್ಲಿದ್ದುದನ್ನು ಕೈಗೆ ತಕ್ಕೊಂಡು, ಸಿಕ್ಕಲಿ ಬೇವರ್ಸಿಗಳು ಎಂದು ಸನ್ನದ್ಧರಾಗಿ ನಿಂತರು. ಇದ್ದಕ್ಕಿದ್ದಂತೆ ಏನಾಯಿತೆಂದರೆ, ಅಷ್ಟು ಹೊತ್ತೂ ರವುಂಡಾಗಿ ಮುಂದೆ ಓಡುತ್ತ, ತನ್ನನ್ನಟ್ಟಿಕೊಂಡು ಬರುತ್ತಿದ್ದ ಯೋಗುವಿನ ಕೈಯಿಂದ ಇಷ್ಟಿಷ್ಟರಲ್ಲೇ ಎಂಬಂತೆ ತಪ್ಪಿಸಿಕೊಳ್ಳುತ್ತಿದ್ದ ದೇವು ಏಕ್ದಂ ವಿರುದ್ಧ ದಿಕ್ಕಿಗೇ ತಿರುಗಿ, ಎದುರಿಂದ ಓಡಿ ಬರುತ್ತಿದ್ದ ಯೋಗುವಿನ ಪಕ್ಕೆಗೆ ಅವನು ಒಟ್ಟು ಪರಿಸ್ಥಿತಿ ಗ್ರಹಿಸುವ ಮೊದಲೇ ಬಲವಾದ ಪೆಟ್ಟು ಕೊಟ್ಟು, ‘ನಿನ್ನ ಕೈಗೆ ಸಿಗ್ತೀನಂತಾ ತಿಳ್ಕಂಬ್ಯಾಡ್ವೋ’ ಅನ್ನುವ ಸವಾಲು ಹಾಕುವ ವೇಗದಲ್ಲಿ ಮೀನುಪೇಟೆಯ ವಾಸನೆಯೂ ತನ್ನ ಬೆನ್ನಟ್ಟಿ ಹಿಡಿಯದ ಹಾಗೆ ಓಡಿದ.
ಅವನಿಂದ ಅನಿರೀಕ್ಷಿತ ಹೊಡೆತ ತಿಂದು ಆಯತಪ್ಪಿ ಯಾವುದೋ ಹೆಂಗಸಿನ ಕಾಲ ಬುಡದಲ್ಲಿ ಮೀನುಬುಟ್ಟಿಯಲ್ಲಿ ಮುಖ ಹುಗಿದುಹೋಗುವ ಹಾಗೆ ಬಿದ್ದಿದ್ದ ಯೋಗುವಿನ ಸ್ಥಿತಿ ಎಷ್ಟು ದಯನೀಯವಾಗಿತ್ತೆಂದರೆ, ಅಷ್ಟೊಂದು ಸಿಟ್ಟಿನಿಂದ ಚಪ್ಪಲಿ ಹಿಡಿದು ನಿಂತಿದ್ದ ಹೆಂಗಸರೂ ಅಷ್ಟೇ ಬೇಗ ಕನಿಕರದಿಂದ ಕರಗಿದ್ದರು. ಆದರೂ ಮೀನು ಹೀಗೆ ಯಾವುದಕ್ಕಿಲ್ಲದೆ ಹೋದುದರ ದುಃಖ ಅಥವಾ ಸಿಟ್ಟು ಕಮ್ಮಿಯಾಗದೆ, ಶಾಪ ಅವರ ಬಾಯಿಂದ ಗುಡುಗಿನಂತೆ ಹೊಮ್ಮುತ್ತಿತ್ತು. ಅಸಹನೀಯ ನೋವು ಪಡುತ್ತ ಕವುಚಿ ಬಿದ್ದಿದ್ದ ಯೋಗು ಮೆಲ್ಲಗೆ ಮಗ್ಗುಲಾಗುತ್ತಲೇ, ಆ ಹೆಂಗಸರೆಲ್ಲ ಯಾರೋ ಅಪರಿಚಿತ ರಕ್ಕಸಿಯರಂತೆ ಕಂಡು, ಅವರೆಲ್ಲ ತನ್ನನ್ನು ಮುಗಿಸಿಬಿಡಲೆಂದೇ ಸುತ್ತುವರಿದು ನಿಂತಿದ್ದಾರೆನ್ನಿಸುತ್ತಲೇ, ತನ್ನ ಯಾವ ಅವಯವವೂ ಒಂದಕ್ಕೊಂದು ಹೊಂದಿ ಕೆಲಸ ಮಾಡುತ್ತಿಲ್ಲ ಎಂಬ ಭಾಸದಲ್ಲಿ ಚಡಪಡಿಸಿದ. ಆ ಕ್ರುದ್ಧರಾಗಿರುವ ಹೆಂಗಸರಿಂದ ತಪ್ಪಿಸಿಕೊಳ್ಳುವ ಅಥವಾ ಅವರು ಹಿಂಜರಿಯುವಂತೆ ಮಾಡುವ ಮೊದಲ ಮತ್ತು ಕಟ್ಟಕಡೆಯ ಪ್ರಯತ್ನವನ್ನೀಗ ಮಾಡುವುದೆಂದುಕೊಂಡವನೇ, ಭಯವೂ ಬೆದರಿಕೆಯೂ ಮಿಶ್ರವಾದಂಥ ವಿಚಿತ್ರ ದನಿಯಲ್ಲಿ ಸಾಧ್ಯವಾದಷ್ಟೂ ಜೋರಿನಿಂದ ‘ನಾ ಹಿರಣ್ಯಕಸಿಪು ಅಲ್ಲ, ನಾರಸಿಂವಾ’ ಅಂದ.
ಕಾದಂಬರಿಕಾರರ ಪರಿಚಯ
ವೆಂಕಟ್ರಮಣ ಗೌಡರ ಊರು ಉತ್ತರ ಕನ್ನಡದ ಅಂಕೋಲೆ. ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿ. ಪತ್ರಿಕೋದ್ಯಮದಲ್ಲಿ ದುಡಿಮೆ. ಕೆಲಕಾಲ ‘ಹಂಗಾಮ’ ಸಾಹಿತ್ಯಕ ಪತ್ರಿಕೆ ಸಂಪಾದನೆ, ಪ್ರಕಟಣೆ. ‘ಪಾಂಗು’, ‘ಉರಿವ ಜಾತ್ರೆ’ (ಕವನ ಸಂಕಲನಗಳು), ‘ಈ ಸರ್ತಿಯ ಸುಗ್ಗಿ’ (ಕಥಾ ಸಂಕಲನ), ‘ತರುವಾಯ’ (ಕಾದಂಬರಿ) ಪ್ರಕಟಿತ ಕೃತಿಗಳು.
ಗಮನಿಸಿ : ಮುದ್ರಣಕ್ಕೆ ಸಿದ್ಧವಾಗಿರುವ ನಿಮ್ಮ ಸೃಜನಶೀಲ ಕೃತಿಯೊಂದರ ಆಯ್ದ ಭಾಗವು ಪ್ರಕಟವಾಗಬೇಕೆಂಬ ಇಚ್ಛೆ ಇದ್ದಲ್ಲಿ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ಇ-ಮೇಲ್: team@konaru.org
ಉತ್ತರಕನ್ನಡವೆ ಎದ್ದು ನಿಂತಂತೆ...ಬಹಳ ಚಲೊ ಬಂದಿದೆ. ಪುಸ್ತಕ ಬಂದ ತಕ್ಷಣ ಕೊಂಡುಕೊಳ್ಳುವೆ. ಕಾಯುವೆ.ಬೇಗ ಪ್ರಕಟಗೊಳ್ಳಲಿ. ಶುಭಾಶಯಗಳು
ಉತ್ತರ ಕನ್ನಡದ ಕಾಡೂರಿನ ಬದುಕು ಅದರೊಳಗಿನ ಅದೆಷ್ಟೋ ತುಮುಲಗಳು, ಸೂಕ್ಷ್ಮತೆಗಳು ತುಂಬ ಸುಂದರವಾಗಿ ಬಂದಿವೆ.