ನಾವು, ನಮ್ಮದು, ನಮ್ಮ ಊರು, ನಮ್ಮ ಮನೆ ಎಂದು ಯಾವುದನ್ನು ಕರೆಯುತ್ತೇವೆಯೋ, ಅದು ನಿಜಕ್ಕೂ ಎಲ್ಲಿರುತ್ತದೆ? ನಮ್ಮ ಮನಸ್ಸಿನಲ್ಲಿ, ನಾವು ಕಟ್ಟಿಕೊಂಡ ನೆನಪುಗಳಲ್ಲಿ ಎನ್ನಬಹುದೇನೋ. ಒಂದು ಊರಲ್ಲಿ ಹುಟ್ಟಿ ಬೆಳೆದಿದ್ದರೂ, ಅದರ ಮೂಲೆಮೂಲೆಗಳು ಪರಿಚಿತವಿದ್ದರೂ ನಮಗೆ ನಿಜಕ್ಕೂ ಗೊತ್ತಿರುವುದು, ನಮ್ಮ ಆಳಕ್ಕೆ ತಾಕುವುದು ಒಂದು ಪುಟ್ಟ ಜಗತ್ತಷ್ಟೇ. ಹುಟ್ಟೂರು, ಇದ್ದೂರು, ಆ ದೇಶ ಈ ದೇಶ ಎಲ್ಲಿಯೇ ದಶಕಗಳ ಕಾಲ ನೆಲೆಸಿದ್ದರೂ ‘ನಮ್ಮ ಊರು’ ನಾವು ನೆನಪಿನಲ್ಲಿ ಮಾತ್ರ ಕಾಪಿಟ್ಟುಕೊಂಡ ಈಗ ರೂಪರೇಖೆಗಳು ಸಂಪೂರ್ಣವಾಗಿ ಬದಲಾಗಿ, ಮೊದಲಿದ್ದ ಜಾಗ ಎಲ್ಲೂ ಕಾಣದ ಈಗ ಅಲ್ಲಿ ನಮಗೆ ಗೊತ್ತಿದ್ದ ಏನೂ ಉಳಿದಿರದ ಇತರರ ಪಾಲಿಗೆ ಒಂದು ಅನೂಹ್ಯ ಸ್ಥಳ. ವಾಸ್ತವದಲ್ಲಿ ಇದ್ದೂ, ಪಾಮುಕ್ನ ಇಸ್ತಾನ್ಬುಲ್, ಜಾಯ್ಸ್ನ ಡಬ್ಲಿನ್ ಮತ್ತು ಯಶವಂತ ಚಿತ್ತಾಲರ ಹನೇಹಳ್ಳಿ, ಎಲ್ಲವೂ ಕಾಲ್ಪನಿಕ ಊರುಗಳೇ.
ಹನೇಹಳ್ಳಿ ಎಂದಾಗ ತಕ್ಷಣ ನೆನಪಾದದ್ದು ಚಿತ್ತಾಲರ ‘ಆಟ’ ಎಂಬ ಕತೆ. ಕತೆಯ ಆರಂಭದಲ್ಲಿ ಬುಡಣಸಾಬ ಊರಿನ ಒಂದು ತುದಿಯಿಂದ ಇನ್ನೊಂದು ತುದಿಯಲ್ಲಿರುವ ಅವನ ಮಗಳ ಮನೆಗೆ ಹೊರಡುತ್ತಾನೆ. ಅವನು ಬಳಸುದಾರಿಯಲ್ಲಿ ಹೋಗುತ್ತಿರುವಾಗ ಅವನಿಗರಿವಿಲ್ಲದೇ ಕತೆಯ ಕೇಂದ್ರ ವಿದ್ಯಮಾನಗಳು ನಡೆಯುತ್ತಿರುತ್ತವೆ. ನಿಗೂಢತೆ ಮತ್ತು ಆಗಬೇಕಾದ ಯಾವುದರದೋ ಮುನ್ಸೂಚನೆಗಳು ಕತೆಯುದ್ದಕ್ಕೂ ದಟ್ಟವಾಗಿ ಹರಡಿಕೊಂಡು, ವಾಸ್ತವದಲ್ಲಿ ಕೆಲವು ನಿಮಿಷಗಳಷ್ಟು ಇದ್ದಿರಬಹುದಾದ ಆ ನಡಿಗೆ ಕಾಲದಲ್ಲಿಯೂ ದೇಶದಲ್ಲಿಯೂ ವ್ಯಾಪಿಸುತ್ತ ಹೋದಂತೆ ತೋರುತ್ತದೆ. ಹೀಗೆ ಚಿತ್ತಾಲರ ಪುಟ್ಟ ಹನೇಹಳ್ಳಿ ವಿಶ್ವವ್ಯಾಪಿಯಾಗಿಯೂ ತೋರಬಹುದು. ಇನ್ನೊಂದೆಡೆ ಬೃಹತ್ ನಗರವಾದ ಇಸ್ತಾನ್ಬುಲ್ ನಮಗೆ ಪಾಮುಕ್ನ ಪುಟ್ಟ ಖಾಸಗಿ ಜಗತ್ತಿನ ಸಾರವಾಗಿಯಷ್ಟೇ ದಕ್ಕಬಹುದು. ಈ ಹಿಗ್ಗುವಿಕೆ ಕುಗ್ಗುವಿಕೆಗಳು ಬರೆಯುವವರ ಹಾಗೂ ಓದುಗರ ಮನಸ್ಸಿನಲ್ಲಿ ನಡೆಯುತ್ತಲೇ ಇರುತ್ತವೆ.
ಬಾಲ್ಯ ಕಳೆದ ಊರಿಗೆ ಮರಳಿದಾಗ ಈ ಓಣಿಯ ಉದ್ದಗಲಗಳು ಯಾವಾಗಲೂ ಇಷ್ಟೆಯೇ ಇದ್ದುವೇ? ಇಲ್ಲಿಂದ ಆ ಬಾವಿ, ಚಾವಡಿ, ಅಂಚೆ ಕಚೇರಿ, ಸರಕಾರಿ ಆಸ್ಪತ್ರೆ, ಅದರಾಚೆಯ ಶಾಲೆ, ಕೆರೆ, ಹೊಲಗಳಿಗೆ ಹೋಗುವ ರಸ್ತೆ ಇವೆಲ್ಲ ಇಷ್ಟು ಹತ್ತಿರದಲ್ಲಿವೆಯಲ್ಲ? ಮೊದಲಾದ ಪ್ರಶ್ನೆಗಳು ಮನಸ್ಸಿನಲ್ಲಿ ಏಳುತ್ತವೆ. ಏಕೆಂದರೆ ನಮ್ಮ ಕಲ್ಪನೆಯಲ್ಲಿ ಮಾತ್ರ ಈವತ್ತಿಗೂ ಇವೆಲ್ಲ ಅಗಾಧ ಹರವುಳ್ಳ ಅಪರಿಮಿತ ಸಾಧ್ಯತೆಗಳುಳ್ಳ ಸ್ಥಳಗಳು.
ಇಷ್ಟೆಲ್ಲ ಹೇಳಿದ್ದು ಇನ್ನೊಬ್ಬ ಚಿತ್ತಾಲ, ಎಂದರೆ ಯಶವಂತರ ಅಣ್ಣ, ಗಂಗಾಧರ ಚಿತ್ತಾಲರ ‘ತಾಯಿ’ ಎಂಬ ಕವನದ ಗುಂಗಿನಲ್ಲಿ.
ಇದೇ ತಿಂಗಳು 12ಕ್ಕೆ ಕವಿ ಗಂಗಾಧರ ಚಿತ್ತಾಲರು ಹುಟ್ಟಿ ನೂರು ವರ್ಷಗಳು ತುಂಬಿದುವು. ಅವರ ನೆನಕೆಯಲ್ಲಿ 'ಎಪ್ಪತ್ತೆರಡು ಕವಿತೆಗಳು' ತಿರುವಿ ಹಾಕುತ್ತಿದ್ದಾಗ ಅವರ 'ತಾಯಿ' ಮತ್ತೆ ನಮಗೆ ಎದುರಾದರು. (ಅಂದೇ 'ಕೊನರು' ಶುರುವಾಗಿದ್ದು ಕಾಕತಾಳೀಯ ಹಾಗೂ ಒಂದೊಳ್ಳೇ ಶಕುನವೆಂದು ನಾವು ಭಾವಿಸಿದ್ದೇವೆ.)
ಅಶ್ವಿನಿ ಕಳಸದ ಓದಿದ ಈ ಕವನವನ್ನು ಇಲ್ಲಿ ಕೇಳಬಹುದು.
ಅವರ ಹಳೆಯ ಮನೆಯನ್ನು ಕಂಡವರೆಲ್ಲ ‘ಈಗ ಅಲ್ಲಿ ಏನೂ ಉಳಿದಿಲ್ಲ’ವೆಂದು ಹೇಳುತ್ತಾರೆ. ದನಗಳು ಎಲ್ಲೆಂದರಲ್ಲಿ ಸಗಣಿಯಿಕ್ಕುವ ಕಾಡಗಂಟಿ ಮೆಳೆ ಬೆಳೆದಿರುವ ಒಂದು ಕಾಲದಲ್ಲಿ ಕಾಳಜಿಯಿಂದ ಕಟ್ಟಿದ್ದ ಬೆಳೆಸಿದ್ದ ಅಲ್ಲಿನ ಪ್ರತಿಯೊಂದಕ್ಕೂ ನಿರ್ದಿಷ್ಟ ದುರ್ಗತಿಯೋ ಸಾರ್ಥಕ್ಯವೋ ಒದಗಿದೆ. ಉದಾಹರಣೆಗೆ, ‘ಹೂವು ಹೇರಿದ ಬೇಲಿ ಜಿಗ್ಗು ಒಟ್ಟುವ ನೆರೆಯ ಶೂದ್ರರೊಲೆಗಳಿಗೆಲ್ಲ ಎಂದೊ ಪಾಲು.’
ಆದರೆ ಕವಿಯ ‘ನೆನಪಲ್ಲಿ ಮಾತ್ರ ಹರಿಯುತ್ತಲೇ ಇದೆ ನೀರು ಹಿತ್ತಿಲ ತುಂಬ.’ ಅವರಿಗೆ ಕಣ್ಣಿಗೆ ಕಟ್ಟಿದ ಕೈಚಾಚಿದರೆ ಎಟಕುವ ಜೀವಂತ ನೆನಪುಗಳಿವೆ: ಪ್ರತಿಯೊಂದು ಗಿಡವನ್ನು ಹೆಸರಿಸಿ ಅದಕ್ಕೆ ‘ಚೊಂಬಿನಡಿ ಕೈಹಿಡಿದು ತುಂತುರಿಸಿ ಹನಿಸಿದ್ದು.’ ಈಗ ಹತ್ತೆಡೆಗೆ ಹಿಸಿದು ಕಾಕಪೋಕರಿಗಳಿಗೆಲ್ಲ ಹಾದಿಬೀದಿಯಾಗಿ ಬರಡಾಗಿರುವ ಅದೇ ಮಣ್ಣಿನ ಕೆಸರ ಕಸುವಿನಿಂದ ಹೊಂಬಾಳೆ ಹಿಗ್ಗುತ್ತಿದ್ದುವು, ‘ಬಚ್ಚಲ ರೊಚ್ಚೆಯಲ್ಲಿ ಕರ್ರಗೆ ಸೊಕ್ಕಿ ಹಬ್ಬಿದ ಬಸಲೆ'ಯಿತ್ತು. Vivid and visceral memories!
ಇವೆಲ್ಲ ಸದ್ದು ಸೊಗಸು ಇದ್ದರೂ ಮನೆಯನ್ನು ಮನೆಯಾಗಿಸಿರುವುದು ಅದರ ಕೇಂದ್ರ ವ್ಯಕ್ತಿಗಳು. ಅಲ್ಲಿ ಇವೆಲ್ಲದರ ‘ಮಧ್ಯದಲ್ಲೇ ತಾಯಿ’. ಒಂದು ಬಿರುಸಾಡದ, ಒಂದು ಉರಿಸ್ಯಾಡದ ಅವಳ ಕಣ್ಣ ಕಾವಲ ನೆನಪಿರುವತನಕ ‘ಹೇಗೆ ಒಪ್ಪಲಿ ಈಗ ಏನೂ ಉಳಿದಿಲ್ಲವೆಂಬ ದೂರು?’