ಕಾಫ್ಕಾನ ಎರಡು ದೃಷ್ಟಾಂತಗಳನ್ನು (parables) ಸಂಕೇತ ಪಾಟೀಲ ಅನುವಾದಿಸಿ ಅವುಗಳ ಮುಖಾಂತರ ಕಾಫ್ಕಾನ ಕತೆಗಳನ್ನು ಓದಿದ ಅನುಭವದ ಬಗ್ಗೆ ಒಂದಷ್ಟು ವಿಚಾರಗಳನ್ನು ಬರೆದಿದ್ದಾರೆ.
ಬುಗುರಿ
ಇಂತೊಬ್ಬ ತಿಳಿದವನು ಮಕ್ಕಳು ಆಡುವಲ್ಲಿಯೇ ಸುಳಿದಾಡುವ ಅಭ್ಯಾಸವಿಟ್ಟುಕೊಂಡಿದ್ದನು. ಅವನು ಬುಗುರಿಯಾಡುವ ಹುಡುಗರನ್ನು ಕಂಡಾಗಲೆಲ್ಲ ಹೊಂಚುಹಾಕಿ ಕಾಯುತ್ತಿದ್ದನು. ಬುಗುರಿಯೊಂದು ತಿರುಗಲು ಶುರುವಿಡುತ್ತಿದ್ದಂತೆಯೇ ಆ ತಿಳಿದವನು ಅದರ ಬೆಂಬತ್ತಿ ಅದನ್ನು ಹಿಡಿಯಲೆಳಸುತ್ತಿದ್ದನು. ಮಕ್ಕಳು ಬೊಬ್ಬೆ ಹಾಕಿ ಗಲಾಟೆ ಮಾಡಿದರೂ, ತಮ್ಮ ಆಟಿಕೆಯಿಂದ ಅವನನ್ನು ದೂರವಿರಿಸಲು ನೋಡಿದರೂ ಅವನು ವಿಚಲಿತಗೊಳ್ಳುತ್ತಿರಲಿಲ್ಲ; ಬುಗುರಿ ಇನ್ನೂ ತಿರುಗುತ್ತಿರುವಾಗಲೇ ಅದನ್ನವನು ಹಿಡಿದುಕೊಳ್ಳಲು ಆಯಿತೋ ಸಾಕು, ಅವನಿಗೆ ಆನಂದವಾಗುತ್ತಿತ್ತು. ಆದರೆ ಅದು ಕ್ಷಣ ಮಾತ್ರ. ಕೂಡಲೇ ಅದನ್ನು ಅವನು ನೆಲಕ್ಕೆಸೆದು ನಡೆದುಬಿಡುತ್ತಿದ್ದನು. ಯಾವುದೇ ಒಂದು ವಿವರದ ಅರಿವು ಎಲ್ಲವನ್ನೂ ಅರ್ಥೈಸಿಕೊಳ್ಳಲು ಸಾಲುವುದು ಎಂದು ಅವನು ನಂಬಿದ್ದನು— ಆ ಅದು ಒಂದು ತಿರುಗುತ್ತಿರುವ ಬುಗುರಿಯಾದರೂ ಸರಿಯೇ. ಈ ಕಾರಣದಿಂದಾಗಿ ಅವನು ದೊಡ್ಡ ಸಮಸ್ಯೆಗಳನ್ನು ಅರ್ಥೈಸಿಕೊಳ್ಳುವ ಕೆಲಸದಲ್ಲಿ ತೊಡಗಿಕೊಳ್ಳುತ್ತಿರಲಿಲ್ಲ. ಅದು ಅವನಿಗೆ ಲಾಭಕರವಲ್ಲದ್ದು ಎಂದು ತೋರುತ್ತಿತ್ತು. ಒಂದೊಮ್ಮೆ ಸೂಕ್ಷ್ಮಾತಿಸೂಕ್ಷ್ಮ ವಿವರವನ್ನು ತಿಳಿದುಕೊಂಡುಬಿಟ್ಟರೆ ಎಲ್ಲವನ್ನೂ ತಿಳಿದುಕೊಂಡಂತೆಯೇ; ಹಾಗಾಗಿ ಅವನು ಕೇವಲ ತಿರುಗುವ ಬುಗುರಿಯೊಂದಿಗೆ ಬಿಡುವಿಲ್ಲದೆ ಉದ್ಯುಕ್ತನಾಗಿರುತ್ತಿದ್ದನು. ಅಂತೆಯೇ ಬುಗುರಿಗಳನ್ನು ತಿರುಗಿಸಲು ತಯಾರಿ ನಡೆಯುತ್ತಿರುವಾಗಲೆಲ್ಲ ಈ ಸಲ ಇದು ಸಫಲವಾದೀತು ಎಂದು ಆಶಿಸುತ್ತಿದ್ದನು: ಬುಗುರಿಯೊಂದು ತಿರುಗಲು ಶುರುವಿಡುತ್ತಲೇ ಅವನು ಅತ್ಯಾತುರದಿಂದ ಅದರ ಬೆನ್ನಟ್ಟಿ ಓಡುತ್ತಿದ್ದನು. ಆಶಯವು ಖಚಿತತೆಯಾಗಿ ಬದಲಾಗುತ್ತಿತ್ತು. ಆದರೆ ಆ ಬೆಪ್ಪು ಕಟ್ಟಿಗೆಯ ತುಂಡನ್ನು ಕಯ್ಯಲ್ಲಿ ಹಿಡಿದುಕೊಂಡಾಗ ಅವನಿಗೆ ಉಬ್ಬಳಿಸಿದಂತಾಗುತ್ತಿತ್ತು. ಇದುವರೆಗೂ ಕೇಳಿಸದಿದ್ದ ಆ ಮಕ್ಕಳ ಕಿರುಚಾಟವು ಈಗ ಒಮ್ಮಿಂದೊಮ್ಮೆಲೇ ಅವನ ಕಿವಿಗಳನ್ನು ಇರಿದಂತಾಗಿ ಅಟ್ಟಿ ಓಡಿಸುತ್ತಿತ್ತು. ಒರಟುಗೈಯ ಚಾಟಿಯಡಿಯ ಬುಗುರಿಯಂತೆ ಅವನು ತತ್ತರಿಸುತ್ತಿದ್ದನು.
ಗಾಬ್ರಿಏಲ್ ಗಾರ್ಸೀಯಾ ಮಾರ್ಕೇಸ್ (Gabriel Garcia Marquez) ತನ್ನ ಬರವಣಿಗೆಯ ಮೇಲೆ ಕಾಫ್ಕಾನ ಪ್ರಭಾವದ ಬಗ್ಗೆ ಒಂದು ಕಡೆ ಹೀಗೆ ಹೇಳಿದ್ದಾನೆ: “ಒಂದು ರಾತ್ರಿ ನನ್ನ ಸ್ನೇಹಿತರೊಬ್ಬರು ಫ್ರಾಂಝ್ ಕಾಫ್ಕಾನ ಸಣ್ಣಕತೆಗಳ ಪುಸ್ತಕವೊಂದನ್ನು ನನ್ನ ಕೈಗಿತ್ತರು. ನಾನು ಉಳಿದುಕೊಂಡಿದ್ದ ಬಿಡಾರಕ್ಕೆ ಮರಳಿ ಹೋಗಿ ಮೆಟಮಾರ್ಫಸಿಸ್ ಓದಲು ಶುರು ಮಾಡಿದೆ. ಅದರ ಮೊದಲನೆಯ ಸಾಲು ನನ್ನನ್ನು ಹೆಚ್ಚೂಕಡಿಮೆ ಹಾಸಿಗೆಯಿಂದ ನೆಲಕ್ಕುರುಳಿಸಿತ್ತು. [...] ನನಗೆ ಅಷ್ಟು ಅಚ್ಚರಿಯಾಗಿತ್ತು. ಆ ಸಾಲನ್ನು ಓದಿದಾಗ, ಹೀಗೆಲ್ಲಾ ಬರೆಯಲು ಯಾರಿಗಾದರೂ ಆಸ್ಪದವಿದೆ ಎಂದು ನನಗೆ ಗೊತ್ತೇ ಇರಲಿಲ್ಲ, ಎಂದು ಅಂದುಕೊಂಡಿದ್ದೆ. ಗೊತ್ತಿದ್ದಿದ್ದರೆ ನಾನು ಬಹಳ ಹಿಂದೆಯೇ ಬರೆಯಲು ಶುರು ಮಾಡುತ್ತಿದ್ದೆ. ನಾನು ತಕ್ಷಣವೇ ಸಣ್ಣಕತೆಗಳನ್ನು ಬರೆಯಲಾರಂಭಿಸಿದೆ.”
ಅವನ The Judgement, The Metamorphosis, In the Penal Colony, ಹಾಗೂ ಇನ್ನೂ ಕೆಲವು ಪ್ರಸಿದ್ಧ ಸಣ್ಣಕತೆಗಳು, ಅವನ ಮೂರು (ಅಪೂರ್ಣ) ಕಾದಂಬರಿಗಳು — ಇವೆಲ್ಲ ಅದ್ಭುತವಾಗಿವೆ. ಅವುಗಳ ಓದು ನಮ್ಮನ್ನು ದಂಗುಬಡಿಸುತ್ತದೆ ಎನ್ನುವುದು ನಿಸ್ಸಂಶಯ. ಆದರೆ ಅವನ್ನು ಎಲ್ಲ ಆಯಾಮಗಳಿಂದ ಇನ್ನಿಲ್ಲದಂತೆ ಸೀಳಿ ನೋಡಲಾಗಿದೆ, ವಾಕರಿಕೆ ಬರುವಷ್ಟು ವ್ಯಾಖ್ಯಾನಿಸಲಾಗಿದೆ ಎನ್ನುವುದೂ ಅಷ್ಟೇ ನಿಜ. ಅವನ ಮಹತ್ವದ ಕೃತಿಗಳಿಗೂ, ಅವನ ಬದುಕು, ಸಂಬಂಧಗಳು, ವೈಯಕ್ತಿಕ ಹೆಣಗಾಟಗಳಿಗೂ ಇರುವ ಸಾದೃಶ್ಯಗಳನ್ನು ವಿಮರ್ಶಕರು ಕೊನೆಯಿಲ್ಲದಂತೆ ಎತ್ತಿ ತೋರಿಸಿದ್ದಾರೆ. ಕಾಫ್ಕಾನನ್ನು ತಮ್ಮ ಸಾಹಿತ್ಯಿಕ ಹೀರೋ ಎಂದು ಪರಿಗಣಿಸಿದ್ದ ಕುಂದೇರಾ (Milan Kundera) ತಮ್ಮ ಬಹಳಷ್ಟು ಬರಹಗಳಲ್ಲಿ ಈ ಪ್ರವೃತ್ತಿಯ ಬಗ್ಗೆ ಅಸಹನೆ ತೋರಿಸಿದ್ದಾರೆ. "ಜನರಿಗೆ ಕಾಫ್ಕಾನನ್ನು ಹೇಗೆ ಓದುವುದು ಎಂದು ಗೊತ್ತೇ ಇಲ್ಲ. ಅವನ ಬರವಣಿಗೆಯ ಮತ್ತು ಅವನೊಳಗಿನ ರಹಸ್ಯ ಭೇದಿಸುವುದರಲ್ಲಿ ತೊಡಗಿಕೊಳ್ಳುತ್ತಾರೆ. ಅವನ ಎಣೆಯಿಲ್ಲದ ಕಲ್ಪನೆಯ ಹರಿವು ತಮ್ಮನ್ನು ಹೊತ್ತೊಯ್ಯುವುದಕ್ಕೆ ಬಿಡುವುದರ ಬದಲು ಅದರಲ್ಲಿ ಸಂಕೇತಗಳನ್ನು ಹುಡುಕುತ್ತಾರೆ. ಕ್ಲೀಷೆಗಳ ಹೊರತು ಬೇರೇನೂ ಎತ್ತಿ ತೋರಿಸುವುದಿಲ್ಲ: ಜೀವನವು ಅಸಂಬದ್ಧವಾಗಿದೆ (ಅಥವಾ ಅದು ಅಸಂಬದ್ಧವಾಗಿಲ್ಲ), ದೇವರು ನಮ್ಮ ತಲಪಿನಾಚೆ ಇರುವನು (ಅಥವಾ ತಲಪಿನೊಳಗಡೆ ಇರುವ), ಈ ರೀತಿಯವು. ಕಲ್ಪಕತೆಯು ಅದರಷ್ಟಕ್ಕೇ ಒಂದು ಮೌಲ್ಯ ಎಂಬುದನ್ನು ನೀವು ತಿಳಿದುಕೊಳ್ಳದಿದ್ದರೆ, ಕಲೆಯ ಬಗ್ಗೆ, ಅದೂ ಆಧುನಿಕ ಕಲೆಯ ಬಗ್ಗೆ, ಏನನ್ನೂ ತಿಳಿಯಲಾರಿರಿ."
ಹೀಗಿದ್ದೂ ಕಾಫ್ಕಾನನ್ನು ಒಬ್ಬ ವ್ಯಕ್ತಿಯಾಗಿ ನಿಜಕ್ಕೂ ಅರ್ಥೈಸಿಕೊಳ್ಳುವ ದುಸ್ಸಾಹಸವನ್ನು ಮಾಡುವುದೇ ಆದರೆ ಅದನ್ನು ನಾವು ಅವನ ಕಿರುಬರಹಗಳನ್ನು ಗಮನಿಸುವ ಮೂಲಕ ಮಾಡಬೇಕು. ತುಂಡು ತುಂಡು ನೆನಹುಗಳು — ಸಣ್ಣ ಹೊಳಹುಗಳು — ಡೈರಿಯ ನಮೂದುಗಳಂತೆ ತೋರುವ ಜರಡಿ ಹಿಡಿದಿರದ ಸಾಲುಗಳು — ಸ್ಪಷ್ಟ ರೂಪ ತಳೆಯದ ಕಲ್ಪನೆಯ ಹೊರಗೆರೆಗಳು. ಕಾಳಜಿಯಿಂದ ಸಂಸ್ಕರಿಸಿದ ಮೇರುಕೃತಿಗಳಿಗಿಂತ ಇಂಥವು ಕೃತಿಕಾರನ ಒಳಗನ್ನು ತೆರೆದು ತೋರುತ್ತವೆ. ನನಗೆ ಗೊತ್ತಿರುವ ಪ್ರಕಾರ, ಕಾಫ್ಕಾನ ಕಿರುಗದ್ಯ ಬರಹಗಳ ಬಗ್ಗೆ ಓದುಗರು ಹೆಚ್ಚಿನ ಗಮನ ಹರಿಸಿಲ್ಲ. ನನ್ನ ದೃಷ್ಟಿಯಲ್ಲಿ ಅವನ ಅತಿ ಸಣ್ಣಕತೆಗಳು ಮತ್ತು ದೃಷ್ಟಾಂತಗಳನ್ನು ಓದುವುದು ಒಂದು ಅಪೂರ್ವವೂ ಸಾರ್ಥಕವೂ ಆದ ಅನುಭವ. ಕುಂದೇರಾ ಹೇಳಿದ ಎಣೆಯಿಲ್ಲದ ಕಲ್ಪಕತೆ ಇವುಗಳುದ್ದಕ್ಕೂ ಹರಿಯುತ್ತದೆ.
ಕಾಫ್ಕಾನ ಬರಹಗಳಲ್ಲಿ ನಿರಂತರವಾಗಿ ಯೋಚಿಸುವ, ಸುತ್ತಲಿನದೆಲ್ಲವನೂ ಗಮನಿಸುವ, ಎಲ್ಲದಕ್ಕೂ ಸೂಕ್ಷ್ಮವಾಗಿ ಸಂವೇದಿಸುವ ಒಂದು ಮನಸ್ಸನ್ನು ನಾವು ಕಾಣಬಹುದು. ಕಾಫ್ಕಾನ ಬಗ್ಗೆ ಮಾತನ್ನಾಡುವಾಗಲೆಲ್ಲ ಅವನಲ್ಲಿ ಕಾಣುವ ವಿಷಣ್ಣತೆ, ಅಸಂತುಷ್ಟಿ, ಅಪರಾಧಪ್ರಜ್ಞೆ, ತಲ್ಲಣ, ಪರಕೀಯ ಪ್ರಜ್ಞೆ ಮೊದಲಾದುವುಗಳ ಬಗ್ಗೆ ಎಡೆಬಿಡದೆ ಮಾತನ್ನಾಡುತ್ತೇವೆ. ಆದರೆ ವಾಸ್ತವದಲ್ಲಿ ಅವನು ಜೀವಚೈತನ್ಯ ತುಂಬಿದ ವ್ಯಕ್ತಿಯಾಗಿದ್ದನು ಎಂದು ನನಗನ್ನಿಸುತ್ತದೆ. ಯಾವುದೇ ಯೋಚನಾಪರ ವ್ಯಕ್ತಿಯ ಸ್ಥಾಯಿಭಾವ ವಿಷಣ್ಣತೆಯೇ. ನಾವೆಲ್ಲರೂ ಒಂದಲ್ಲಾ ಒಂದು ರೀತಿಯ ಪರಕೀಯ ಪ್ರಜ್ಞೆಯಿಂದ ಬಳಲುವವರೇ. ಬಹುತೇಕ ಜನರು ಅದನ್ನು ಸಹಜವಾಗಿ ಇದು ಇರುವುದೇ ಹೀಗೆ ಎಂಬಂತೆ ನಿಭಾಯಿಸುತ್ತಾರೆ. ಸಂವೇದನಾಶೀಲರು ಅದಕ್ಕೊಂದು ಸೃಜನಶೀಲ ಅಭಿವ್ಯಕ್ತಿ ಕಂಡುಕೊಳ್ಳಲು ಹವಣಿಸುತ್ತಾರೆ: ಬಣ್ಣಗಳು, ಅಮೂರ್ತ ಕಾವ್ಯ, ವಾಸ್ತವವಾದಿ ಗದ್ಯ; fantasy, ರೂಪಕಗಳು, ಇತ್ಯಾದಿ. ಬಹಳಷ್ಟು ಜನರು ಜೀವನದ ಅಸಂಬದ್ಧತೆಯನ್ನು ತೀವ್ರವಾಗಿ ಗ್ರಹಿಸಿದರೂ ಅದನ್ನು ವ್ಯಕ್ತಪಡಿಸಲು ಅವರಲ್ಲಿ ಪರಿಕರಗಳಿರುವುದಿಲ್ಲ. ಇದನ್ನು ನಿವಾರಿಸಲು ಕಾಫ್ಕಾ ತನ್ನದೇ ಆದ ವಿಶಿಷ್ಟ ಭಾಷೆ ಮತ್ತು ವ್ಯಾಕರಣವನ್ನು ಕಂಡುಕೊಂಡ. ಅದು ಅವನ ಅಸಾಧಾರಣ ಪ್ರತಿಭೆ.
‘ಬುಗುರಿ'ಯಂಥ ಕತೆಯ ತುಣುಕುಗಳನ್ನು ಓದಿದಾಗ ನಮಗೆ ಅವನ ದಿನನಿತ್ಯದ ಒದ್ದಾಟಗಳು ಕಾಣಸಿಗುತ್ತವೆ. ಅವನು ತನ್ನ ಪರಿಸರದೊಂದಿಗೆ ಹೊಂದಿಕೊಳ್ಳಲು, ಅದರಲ್ಲಿ ಸ್ಥಾನ ಕಂಡುಕೊಳ್ಳಲು ಹೆಣಗುತ್ತಿದ್ದಾನೆ. ಅವನು ಹತಾಶನಾಗಿಲ್ಲ, ವ್ಯಾಕುಲಿತನಾಗಿಲ್ಲ. ಅವನು ಇದನ್ನೆಲ್ಲ ಅರ್ಥೈಸಿಕೊಳ್ಳುವ ಪ್ರಯತ್ನದಲ್ಲಿದ್ದಾನೆ. ಒಂದೇ ಒಂದು ಸೂಕ್ಷ್ಮಾತಿಸೂಕ್ಷ್ಮ ವಿವರವನ್ನು ಅರಿತುಕೊಳ್ಳುವ ಕುತೂಹಲದಿಂದ ಹುಯಿಲಿಡುವ ಮಕ್ಕಳೊಟ್ಟಿಗೆ ಸುಳಿದಾಡುವ ತಿಳಿದವನು ಅವನು. ಒರಟುಗೈಯ ಚಾಟಿಯ ಪ್ರಭಾವಕ್ಕೊಳಗಾದ ನಮ್ಮೆಲ್ಲರಂತೆ ಅವನೂ ತತ್ತರಿಸುತ್ತಿದ್ದಾನೆ. ಹಾಗಿದ್ದೂ ಬುಗುರಿ ತಿರುಗಿಸುವ ಹುಡುಗರನ್ನು ನೋಡಿದಾಗಲೆಲ್ಲ ಮತ್ತೆ ಅವರ ಹಿಂದೆ ಹೋಗುತ್ತಾನೆ.
ಇದು ಜೀವನೋತ್ಸಾಹ, ಇದು ಕಾಫ್ಕಾನ ಜೀವದೊಳದುಂಬಿದ ಬೆರಗು, ನಲಿವು, ಮತ್ತು ಸಂಕಟ. ಇನ್ನೊಂದು ಕಡೆ ಕುಂದೇರಾ ಹೇಳುವಂತೆ: “Kafka did not suffer for us! He enjoyed himself for us!” ನನ್ನ ಮಟ್ಟಿಗಂತೂ Kafkaesque ಅನ್ನುವ ಪದಕ್ಕೆ ರೂಢಿಗತವಾದುದಕಿಂತ ಬಹುದೊಡ್ಡ ಅರ್ಥವ್ಯಾಪ್ತಿಯಿದೆ.
ದೃಷ್ಟಾಂತಗಳ ಬಗ್ಗೆ
ತಿಳಿದವರ ಮಾತುಗಳು ಬರಿಯ ದೃಷ್ಟಾಂತಗಳು, ಅವುಗಳಿಂದ ನಮ್ಮ ದೈನಂದಿನ ಬದುಕಿನಲ್ಲಿ – ಮತ್ತಿನ್ನು ನಮಗಿರುವುದು ಇದೊಂದೇ ಬದುಕು – ಯಾವುದೇ ಪ್ರಯೋಜನವಿಲ್ಲ ಎಂದು ಹಲವರು ದೂರುತ್ತಾರೆ. ವಿವೇಕಿಯೊಬ್ಬ "ಮೇಲೆ ಹಾಯು," ಎಂದಾಗ ನಾವು ಯಾವುದೋ ನಿಜವಾದ ಸ್ಥಳಕ್ಕೆ ಹಾದು ಹೋಗಬೇಕೆಂಬುದು ಅವನ ಮಾತಿನ ಅರ್ಥವಲ್ಲ – ಶ್ರಮಯೋಗ್ಯವಾದರೆ ಅದನ್ನು ನಾವು ಹೇಗೋ ಮಾಡುತ್ತಿದ್ದೆವು; ಅವನು ಸೂಚಿಸುತ್ತಿರುವುದು ಯಾವುದೋ ಅದ್ಭುತ ಅತ್ತಣ, ಅದು ನಮಗೆ ಅಪರಿಚಿತವಾದದ್ದು, ಅವನಾದರೂ ಇನ್ನಷ್ಟು ನಿಖರವಾಗಿ ಹೆಸರಿಸಲಾರದ್ದು ಅದು. ಆದುದರಿಂದ ಅವನಿಲ್ಲಿ ನಮಗೆ ಅತ್ಯಲ್ಪ ಸಹಾಯವನ್ನೂ ಮಾಡಲಾರ. ನಿಜಕ್ಕೂ ಈ ಎಲ್ಲಾ ದೃಷ್ಟಾಂತಗಳು ಕೇವಲ ಗ್ರಹಿಸಲಾಗದ್ದನ್ನು ಗ್ರಹಿಸಲಾಗುವುದಿಲ್ಲ ಎಂದು ಹೇಳಹೊರಟಿವೆಯಷ್ಟೇ ಹಾಗೂ ಇದು ನಮಗೆ ಈಗಾಗಲೇ ತಿಳಿದಿದೆ. ಆದರೆ ನಾವು ದಿನನಿತ್ಯವೂ ಒದ್ದಾಡಿ ಸಂಭಾಳಿಸಬೇಕಾದ ಗೊಡವೆಗಳು: ಅದು ಬೇರೆಯದೇ ವಿಷಯ.
ಇದರ ಕುರಿತಾಗಿ ಒಮ್ಮೆ ಒಬ್ಬ ಹೇಳಿದ: ಏಕಿಂಥ ಹಿಂಜರಿಕೆ? ನೀವು ದೃಷ್ಟಾಂತಗಳನ್ನು ಅನುಸರಿಸಿದರೆ ಸಾಕು, ನೀವೇ ದೃಷ್ಟಾಂತಗಳಾಗುತ್ತೀರಿ ಮತ್ತು ತನ್ಮೂಲಕ ನಿಮ್ಮ ನಿತ್ಯದ ಗೊಡವೆಗಳನ್ನು ನೀಗುತ್ತೀರಿ.
ಇನ್ನೊಬ್ಬ ಹೇಳಿದ: ಇದೂ ಒಂದು ದೃಷ್ಟಾಂತವೆಂದು ನಾನು ಪಣವೊಡ್ಡುತ್ತೇನೆ.
ಮೊದಲಿನವನು ಹೇಳಿದ: ನೀನು ಗೆದ್ದಿರುವೆ.
ಎರಡನೆಯವನು ಹೇಳಿದ: ಆದರೆ ದುರಾದೃಷ್ಟವಶಾತ್ ದೃಷ್ಟಾಂತದಲ್ಲಿ ಮಾತ್ರ.
ಮೊದಲಿನವನು ಹೇಳಿದ: ಇಲ್ಲ, ವಾಸ್ತವದಲ್ಲಿ: ದೃಷ್ಟಾಂತದಲ್ಲಿ ನೀನು ಸೋತಿರುವೆ.
ಕಾಫ್ಕಾ ತನ್ನ ಮೊದಲಿನ ಕತೆಗಳನ್ನು ಆಪ್ತ ಗೆಳೆಯರ ಮುಂದೆ ದನಿ ತೆಗೆದು ಹಾವಭಾವಪೂರ್ಣವಾಗಿ ಓದುತ್ತಿದ್ದನಂತೆ. ಒಮ್ಮೊಮ್ಮೆ ತಡೆಯಲಾಗದಷ್ಟು ನಗೆಯುಕ್ಕಿ ಅವನಿಗೆ ಮುಂದೆ ಓದಲಾಗುತ್ತಿರಲಿಲ್ಲವಂತೆ. ಕಾಫ್ಕಾನ ಎಷ್ಟೋ ಕತೆಗಳನ್ನು ಓದುವಾಗ ಅವನಲ್ಲಿನ ವಿನೋದದ, ಉಲ್ಲಾಸದ ಮನೋಭಾವ ಕಂಡುಬರುತ್ತದೆ. ಅವನ ಕತೆಗಳನ್ನು ದೃಷ್ಟಾಂತಗಳನ್ನು ಓದಿದನುಭವಕ್ಕಾಗಿ ಓದಿದರೆ ನಾವು ಗೆಲ್ಲುತ್ತೇವೆ. ಅವನ್ನು ಹಿಂಜಲು ಹೋದರೆ ಸೋಲುತ್ತೇವೆ.
ಬದುಕಿನ ವಿಕ್ಷಿಪ್ತತೆಯನ್ನು ಕಾಫ್ಕಾ ತನ್ನ ಸಣ್ಣಾತಿಸಣ್ಣ ಕತೆಯಲ್ಲಿ ಸೆರೆ ಹಿಡಿದಿದ್ದಾನೆ. ಕತೆಯ ಅನುವಾದವೂ ಚೆನ್ನಾಗಿದೆ.
---
ಸುನಾಥ
Very interesting...
Raghavendra Patil