ನೀವು ಬಿಟ್ಟು ಬಂದದ್ದಾದರೂ ಏನು, ಒಂದು ಕಥೆಯ ಭಾರವನ್ನೇ?
ಬುಶ್ರಾ ಅಲ್-ಮಖ್ತಾರಿಯವರ ಮರವೆಯಾದ ಯುದ್ಧದ ದನಿಗಳು
ಯೆಮನ್ನ (Yemen) ತೇಯ್ಜ಼್ (Taiz) ನಗರದಲ್ಲಿ 1979ರಲ್ಲಿ ಹುಟ್ಟಿದ ಬುಶ್ರಾ ಅಲ್-ಮಖ್ತಾರಿ (Bushra al-Maqtari) ಒಬ್ಬ ಬರಹಗಾರ್ತಿ ಮತ್ತು ತನ್ನ ತವರೂರಿನಲ್ಲಿ ಯೆಮನೀ ಇಂತಿಫಾದಾದ (Intifada, ಅರೇಬಿಕ್ನಲ್ಲಿ ಕ್ರಾಂತಿ) ಮುಂದಾಳು. ಮಡಿವಂತ ಯೆಮನೀ ಸಮಾಜ ಮತ್ತು ಅಧಿಕಾರಶಾಹಿಯ ವಿರುದ್ಧ ದನಿಯೆತ್ತುವ ಅಪೂರ್ವ ಪ್ರಗತಿಪರ ಹೆಣ್ಣುಮಗಳು. ಅವರ ಬರವಣಿಗೆ ಮತ್ತು ರಾಜಕೀಯ ನಿಲುವನ್ನು ಸಹಿಸದ ಯೆಮನೀ ಮುಫ್ತಿಗಳು 2012ರಲ್ಲಿ ಅವರ ವಿರುದ್ಧ ಫ಼ತ್ವಾ ನೀಡಿ ಅವರನ್ನು ಬಹಿಷ್ಕರಿಸಬೇಕೆಂದು ಕರೆ ಕೊಟ್ಟಿದ್ದಾರೆ.

ಅಲ್-ಮಖ್ತಾರಿ ಸೆಪ್ಟೆಂಬರ್ 2014ರಲ್ಲಿ ಶುರುವಾಗಿ ಲಕ್ಷಾಂತರ ಜನರನ್ನು ಆಹುತಿ ತೆಗೆದುಕೊಂಡು ಲೆಕ್ಕವಿಲ್ಲದಷ್ಟು ಜನರನ್ನು ಸಂತ್ರಸ್ತರನ್ನಾಗಿ ಮಾಡಿ ಇನ್ನೂ ನಡೆಯುತ್ತಿರುವ ಯೆಮನೀ ಅಂತರ್ಯುದ್ಧದ 400ರಷ್ಟು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಒಟ್ಟುಗೂಡಿಸಿ 2018ರಲ್ಲಿ “What Have You Left Behind? Voices From A Forgotten War” (ಮೂಲ ಅರೇಬಿಕ್, ಇಂಗ್ಲಿಶ್ ಅನುವಾದ: ಸವದ್ ಹಸನ್) ಎಂಬ ಪುಸ್ತಕವನ್ನು ಪ್ರಕಟಿಸಿದರು. ಅವರ ಗಮನಕ್ಕೆ ಬಂದ ಬಲಿಯಾದ ಪ್ರತಿಯೊಬ್ಬ ವ್ಯಕ್ತಿಯ ಹೆಸರನ್ನೂ ಪಟ್ಟಿ ಮಾಡುವ ಈ ಪುಸ್ತಕ ಯೆಮೆನ್ನ ಒಳಜಗಳದ ಅತ್ಯಂತ ಪ್ರಬಲ ಮತ್ತು ಮನಕರಗಿಸುವ ದಾಖಲಾತಿಯಾಗಿದೆ.

ಇತ್ತೀಚೆಗೆ New York Review of Books (NYRB) ಪತ್ರಿಕೆಯಲ್ಲಿ ಪತ್ರಕರ್ತ ಸಮಂತ್ ಸುಬ್ರಮಣಿಯನ್ “The Weight of One Story” ಎಂಬ ಲೇಖನದಲ್ಲಿ ಅಲ್-ಮಖ್ತಾರಿಯವರ ಪುಸ್ತಕವನ್ನು ಪರಿಚಯಿಸಿದ್ದಾರೆ. ಅದನ್ನೋದಿ ಪ್ರಭಾವಿತರಾದ ಶಶಿಧರ್ ಡೋಂಗ್ರೆ ಅದನ್ನು ಕನ್ನಡಕ್ಕೆ ತಂದಿದ್ದಾರೆ.
ಬುಶ್ರಾ ಅಲ್-ಮಖ್ತಾರಿ ಅವರ What Have You Left Behind? Voices from a Forgotten War (“ನೀವು ಬಿಟ್ಟು ಬಂದದ್ದಾದರೂ ಏನು? ಮರವೆಯಾದ ಯುದ್ಧದ ದನಿಗಳು”) ಪುಸ್ತಕದಲ್ಲಿ (“ಅವಳು ಅತ್ತಳು”) ಎನ್ನುವುದು ಅರವತ್ತು ಬಾರಿಯಾದರೂ ಬರುತ್ತದೆ. ಇದಕ್ಕೆ ಹೋಲಿಸಿದರೆ ಗಂಡಸರು ಅತ್ತದ್ದು ಕಡಿಮೆ. (“ಅವನು ಅತ್ತ”) ಎನ್ನುವ ಪದವನ್ನು ಇಪ್ಪತ್ತು ಬಾರಿ ಬಳಸಲಾಗಿದೆ. ಈ ಪದಗಳನ್ನು ಯೆಮನೀ ಪತ್ರಕರ್ತೆ ಅಲ್-ಮಖ್ತಾರಿ ಅವರು ಇಟಾಲಿಕ್ಸ್ನಲ್ಲಿ ಬಳಸುತ್ತಾರೆ (ಮತ್ತು ಅದನ್ನು ಆವರಣದೊಳಗೆ ಇರಿಸುತ್ತಾರೆ). ನಾಟಕ ಕರ್ತೃ ನಿರ್ದೇಶಕನಿಗೆ ಕೊಡುವ ಸೂಚನೆಗಳ ಹಾಗೆ. ಇವು ಯೆಮನ್ನಲ್ಲಿ ನಡೆಯುತ್ತಿರುವ ಅಂತರ್ಯುದ್ಧದ ಮೌಖಿಕ ಪುರಾವೆಗಳನ್ನು ನಾವು ಹೇಗೆ ಓದಬೇಕು ಎಂಬುದರ ಸೂಚನೆ ಎನಿಸುತ್ತದೆ. ಈ ಸಂದರ್ಶನಗಳ ಸಂಖ್ಯೆ ನೂರಾರು. ಆದ್ದರಿಂದ ಅವರಿಗೆ ಹೇಳಲು ಇರುವ ವಸ್ತು ಬೇಕಾದಷ್ಟು ಇದೆ. ಈ ಅಂತರ್ಯುದ್ಧಕ್ಕೆ ಈಗ ಹತ್ತು ವರ್ಷ ಆಗಿದ್ದು, ಅದು 377,000 ಜನರನ್ನು ಬಲಿ ತೆಗೆದುಕೊಂಡಿದೆ. ವಿಶ್ವಸಂಸ್ಥೆಯ ಪ್ರಕಾರ ಇದು ಪ್ರಪಂಚದ ಅತಿ ಘೋರ ಮಾನವೀಯ ಬಿಕ್ಕಟ್ಟಾಗಿದ್ದು, 24 ಮಿಲಿಯನ್ ಯೆಮನೀ ಜನರಿಗೆ ನೆರವು ಮತ್ತು ರಕ್ಷಣೆ ಬೇಕಾಗಿದೆ. ಆದರೂ ವಿಶ್ವದ ಬಹುತೇಕ ನಾಯಕರು ಮೌನವಾಗಿದ್ದಾರೆ. ಅವರಿಗೆ ಈ ಯುದ್ಧ ಬೇಗ ನಿಲ್ಲಬೇಕೆಂಬ ಇರಾದೆ ಇದ್ದಂತಿಲ್ಲ.
ಈ ಯುದ್ಧದ ಇತಿಹಾಸದ ಬಗ್ಗೆ ತಿಳಿಯಲು ಕೇವಲ ಕಲವೇ ನಿಮಿಷ ಕಳೆದರೂ ಇದು ಎಷ್ಟು ರಾಷ್ಟ್ರಗಳನ್ನು ವ್ಯಾಪಿಸಿದೆ ಎಂಬುದು ನಿಮ್ಮ ಕಣ್ಣಿಗೆ ರಾಚುವಂತೆ ಕಾಣುತ್ತದೆ. ಯೆಮನ್ನ ವಾಯವ್ಯ ಭಾಗದಲ್ಲಿರುವ ಬುಡಕಟ್ಟು ಜನಾಂಗದ ಮೂಲದಿಂದ ಬಂದವರಾಗಿ ಶಿಯಾ ಮುಸ್ಲಿಂ ಎಂದು ಗುರುತಿಸಿಕೊಂಡಿರುವ ಹೌದಿಗಳು ಒಂದು ಕಡೆ; ಇನ್ನೊಂದು ಕಡೆ ದೇಶದ ದಕ್ಷಿಣ ಭಾಗವನ್ನು ನಿಯಂತ್ರಿಸುತ್ತಿರುವ ಆಡಳಿತ. ಆ ಗುಂಪಿಗೆ ಸೌದಿ ಅರೇಬಿಯಾ ಮತ್ತು ಯುಎಇ ದೇಶಗಳು ಬೆಂಬಲ ನೀಡುತ್ತಿವೆ. ಸೌದಿ ಅರೇಬಿಯಾ ಯೆಮನ್ ಅನ್ನು ತನ್ನ ತೆಕ್ಕೆಯೊಳಗೆ ಸೆಳೆದುಕೊಳ್ಳಲು ಬಹಳ ದಿನಗಳಿಂದ ಪ್ರಯತ್ನಿಸುತ್ತಿದೆ. 1980ರ ದಶಕದಲ್ಲಿ ಯೆಮನ್ ಎರಡು ಭಾಗವಾಗಿತ್ತಷ್ಟೆ. ಆಗ ಸೌದಿ ಅರೇಬಿಯಾ ವಹಾಬಿ ಸಿದ್ಧಾಂತವನ್ನು ಉತ್ತರ ಯೆಮನ್ನಲ್ಲಿ ಹರಡುವಂತೆ ಮಾಡುವಲ್ಲಿ ಮತ್ತು ಹೌದಿ ಗುಂಪನ್ನು ಬಲಹೀನ ಮಾಡುವಲ್ಲಿ ತಮ್ಮ ಶಕ್ತಿಯನ್ನು ವ್ಯಯಿಸಿತ್ತು. 1990ರಲ್ಲಿ ಅಲಿ ಅಬ್ದುಲ್ಲಾ ಸಾಲೇಹ್ (Ali Abddullah Saleh) ಎಂಬ ನಿವೃತ್ತ ಸೈನ್ಯಾಧಿಕಾರಿ ಆ ದೇಶದ ಅಧ್ಯಕ್ಷನಾಗಿ ನಿರ್ದಯತೆಯಿಂದ 12 ವರ್ಷ ಆಳಿದ ನಂತರದ ಕಾಲದಲ್ಲಿ ಎರಡೂ ಯೆಮನ್ಗಳು ಒಂದಾದವು. ಸೋವಿಯತ್ ಒಕ್ಕೂಟ ಛಿದ್ರಗೊಂಡಿದ್ದು ಮತ್ತು ಯೆಮನ್ನ ಎರಡೂ ಬಣಗಳಿಗೆ ಅಲ್ಲಿನ ತೈಲ ಉತ್ಪಾದನೆಯ ಮೇಲೆ ಇದ್ದ ಆಸಕ್ತಿ — ಇವುಗಳಿಂದ ಕೆಲವು ಕಾಲವಾದರೂ ಎರಡೂ ಬಣಗಳು ಒಂದು ದೇಶದಂತೆ ವ್ಯವಹರಿಸುವುದನ್ನು ಸಾಕಷ್ಟು ಶಾಂತಿಯಿಂದಲೇ ನಿರ್ವಹಿಸಿದವು.
ಹೊರನೋಟಕ್ಕೆ ಶಾಂತಿಯಿದ್ದಂತೆ ತೋರಿದರೂ ಈ ದಾಂಪತ್ಯದೊಳಗಿನ ಬೆಂಕಿ ಆರಲೇ ಇಲ್ಲ. ಸಾಲೇಹ್ ಅವರು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಉಗ್ರಗಾಮಿಗಳನ್ನು ಆಶ್ರಯಿಸಿದರು ಮತ್ತು ಕ್ರಮೇಣ ಸರ್ವಾಧಿಕಾರಿಯಾದರು. ಸೆಪ್ಟೆಂಬರ್ 11ರ ದಾಳಿಗಳಾದ ಮೇಲೆ ಹೌದಿಗಳನ್ನು ಹತ್ತಿಕ್ಕಲು ಸೈನ್ಯವನ್ನು ಬಳಸಿದರು. ಅರಬ್ ಸ್ಪ್ರಿಂಗ್ ಎಂದು ಕರೆಯಲಾಗುವ ಅಲೆಯಲ್ಲಿ ಸಾಲೇಹ್ ಅವರನ್ನು 2012 ರಲ್ಲಿ ಗದ್ದುಗೆಯಿಂದ ಕೆಳಗಿಳಿಸಲಾಯಿತು. ಹೌದಿಗಳು ಯೆಮನ್ನ ಉತ್ತರಭಾಗವನ್ನು ತಮ್ಮ ತೆಕ್ಕೆಯಲ್ಲಿಟ್ಟುಕೊಳ್ಳುವುದು ಮತ್ತಷ್ಟು ಸುಲಭವಾಯಿತು. ದಕ್ಷಿಣದ ಸುನ್ನಿ ಪಂಗಡದ, ಸೈನ್ಯದಲ್ಲಿ ಫೀಲ್ಡ್ ಮಾರ್ಷಲ್ ಆಗಿದ್ದ ಅಬ್ದ್ರಬ್ಬೂ ಮನ್ಸೂರ್ ಹಾದಿ (Abdrabbuh Mansur Hadi) ಅವರು ಒಬ್ಬರೇ ಸ್ಪರ್ಧಿಸಿದ್ದ ಸುಳ್ಳು ಚುನಾವಣೆಯಲ್ಲಿ ಗೆದ್ದು ಗದ್ದುಗೆ ಏರಿದರು. ಇದು ಉತ್ತರದ ಹೌದಿಗಳಿಗೆ ನುಂಗಲಾರದ ಬಿಸಿ ತುಪ್ಪವಾಯಿತು.
ಹಾದಿ ಯೆಮನ್ ದೇಶವನ್ನು 6 ಭಾಗಗಳನ್ನಾಗಿ ವಿಂಗಡಿಸಿ, ಒಂದೇ ದೇಶವಾದರೂ ಸಂಯುಕ್ತ ರಾಜ್ಯಗಳ ರೀತಿಯನ್ನು ವ್ಯವಹರಿಸಬೇಕು ಎಂದರು. ಈ ಪ್ರಕ್ರಿಯೆಯು ಹೌದಿ ಗುಂಪು ನಿಯಂತ್ರಣ ಹೊಂದಿದ ಭಾಗಗಳು ಎಲ್ಲ ಕಡೆಯಿಂದ ಸುತ್ತುವರೆದಂತೆ ಮಾಡಿತು ಮತ್ತು ಅವರಿಗೆ ಉಸಿರುಗಟ್ಟಿದಂತೆ ಆಯಿತು. ಹೌದಿಗಳು ಸುಮ್ಮನೆ ಕೂರದೆ ಯೆಮನ್ನ ರಾಜಧಾನಿ ಸನಾದ ಮೇಲೆ 2014ರಲ್ಲಿ ದಾಳಿ ಮಾಡಿ ಸರ್ಕಾರವನ್ನು ಉರುಳಿಸಿ ದೇಶವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸಿದರು. ಹಾದಿ ಮತ್ತು ಅವರನ್ನು ಬೆಂಬಲಿಸಿದ್ದ ಪಡೆಗಳು ಪ್ರತಿ ದಾಳಿ ಮಾಡಿದವು ಮತ್ತು ಅರಬ್ ದೇಶಗಳ ಬೆಂಬಲವನ್ನೂ ಪಡೆದವು. ಪರಿಣಾಮ ಇಡೀ ದೇಶದ ಮೇಲೆ ಬಾಂಬುಗಳ ಮಳೆ ಸುರಿಯಿತು.
ಅಲ್ಲಿಂದ ಇಲ್ಲಿಯವರೆಗೆ ಮತ್ತಷ್ಟು ಗುಂಪುಗಳು ಈ ಯುದ್ಧದಲ್ಲಿ ಸೇರಿಕೊಂಡಿವೆ. ಈಗ ಈ ಅಂತರ್ಯುದ್ಧದಲ್ಲಿ ಎರಡಕ್ಕಿಂತ ಹೆಚ್ಚು ಬಣಗಳಿವೆ. ಯಾರು ಯಾರ ವಿರುದ್ಧ ಯಾವಾಗ ದಾಳಿ ಮಾಡುತ್ತಾರೆ ಎನ್ನುವುದೇ ಅರ್ಥವಾಗದೆ ಈ ಕಲಹ ಇಡೀ ದೇಶವನ್ನು ಅರಾಜಕತೆಯತ್ತ ತಳ್ಳಿದೆ. ಅಲ್-ಮಖ್ತಾರಿ ಅವರ ಪುಸ್ತಕದ ನಿರೂಪಣೆ 2018ರ ಅವಧಿಗೆ ಮುಗಿಯುತ್ತದೆ. ಅಲ್ಲಿಂದೀಚೆಗೆ ಕೆಲವು ರಾಜಕೀಯ ಬೆಳವಣಿಗೆಗಳು ಆಗಿದ್ದರೂ ಮೂಲಭೂತವಾಗಿ ಅಷ್ಟೇನೂ ವ್ಯತ್ಯಾಸಗಳಾಗಿಲ್ಲ. ಅಂತರ್ಯುದ್ಧ ನಡೆಯುತ್ತಲೇ ಇದೆ. ಸೌದಿ ಅರೇಬಿಯಾದ ಒತ್ತಡದಿಂದ ಹಾದಿ 2022ರಲ್ಲಿ ರಾಜೀನಾಮೆ ನೀಡಿದರು. ಅವರ ಬದಲಿಗೆ 8 ಮಂದಿಯನ್ನೊಳಗೊಂಡ ಅಧ್ಯಕ್ಷೀಯ ನಾಯಕರ ಗುಂಪೊಂದು ದೇಶದ ನಾಯಕತ್ವ ವಹಿಸಿಕೊಂಡಿದೆ. ಆದರೂ ಹೌದಿಗಳ ಜೊತೆ ಶಾಂತಿ ಒಪ್ಪಂದಕ್ಕೆ ಬರುವಲ್ಲಿ ಮತ್ತು ಕದನ ವಿರಾಮವನ್ನು ಕಾರ್ಯಗತಗೊಳಿಸುವಲ್ಲಿ ಈ ಆಳ್ವಿಕೆ ಸೋತಿದೆ.
ಬುಡಕಟ್ಟು ಜನಾಂಗಗಳ ಅಂತರ್ಯುದ್ಧವನ್ನು ಅರ್ಥ ಮಾಡಿಕೊಳ್ಳುವಲ್ಲಿ ಮತ್ತು ಬುಡಕಟ್ಟು ಜನಾಂಗಗಳ ಮಧ್ಯೆ ಇರುವ ಜನಾಂಗೀಯ ದ್ವೇಷವನ್ನು ಅರ್ಥ ಮಾಡಿಕೊಳ್ಳಲು ಪಶ್ಚಿಮಕ್ಕೆ ಇನ್ನೂ ಸಾಧ್ಯವಾಗಿಲ್ಲ. ಅವರಿಗೆ ಇದೊಂದು ಹಿತಕರವಲ್ಲದ, ಕೊಳಕಾದ ಜಗಳ. ಆದರೂ ಈ ಜಗಳ ಲಾಭ ತಂದುಕೊಡುತ್ತದೆ ಎಂದೂ ಅವರು ಬಲ್ಲರು. ಸೌದಿ ಅರೇಬಿಯಾ ಮತ್ತು ಯುಎಇ ದೇಶಗಳು ಈ ಯುದ್ಧಕ್ಕೆ ಸುರಿಯುತ್ತಿರುವ ತುಪ್ಪ ನೈತಿಕತೆಯಿಂದ ಕೂಡಿದೆಯೇ ಎಂಬ ಪ್ರಶ್ನೆ ಈ ದೇಶಗಳ ಸ್ನೇಹಿತರಾದ ಬ್ರಿಟನ್ ಮತ್ತು ಅಮೇರಿಕಾಗಳಿಗೆ ಕಾಡಿದಂತಿಲ್ಲ. ಸೌದಿಗಳಿಗೆ ಶಸ್ತ್ರಾಸ್ತ್ರ ಒದಗಿಸುವ ಉದ್ಯಮವೇ ಯೆಮೆನ್ನ ಮಾನವೀಯ ದುರಂತಕ್ಕೂ ಕಾರಣವಾಗಿದೆ ಎಂಬ ವಾಸ್ತವದ ಬಗ್ಗೆ ಆ ದೇಶಗಳದ್ದು ಜಾಣ ಕುರುಡು. ಅಲ್-ಮಖ್ತಾರಿ ಅವರು ತಮ್ಮ ಮುನ್ನುಡಿಯಲ್ಲಿ ಹೇಳಿದಂತೆ, “ಈ ದೇಶಗಳು ಇಲ್ಲಿ ನಡೆಯುತ್ತಿರುವ ಯುದ್ಧಕ್ಕೆ ಒಂದು ಪರದೆ ಎಳೆಯಬೇಕೆಂದಿವೆ. ಈ ಪರದೆಯ ಹಿಂದೆ ಆಗುತ್ತಿರುವ ಹಿಂಸೆ ತಮಗೆ ಕಾಣದಿದ್ದರೆ ಆಯಿತು. ಆಗ ಈ ಹಿಂಸೆಗೆ ಕಾರಣವಾಗುವವರ ನೆರವಿಗೆ ಬಂದರೂ ಮನಸ್ಸಿಗೆ ಅಷ್ಟು ಹಿಂಸೆ ಆಗಲಿಕ್ಕಿಲ್ಲ. ಆದರೆ ಈ ಯುದ್ಧದ ಎಲ್ಲ ಪರಿಣಾಮಗಳನ್ನೂ ಯೆಮನೀ ಪ್ರಜೆಗಳೇ ಅನುಭವಿಸಬೇಕಿದ್ದು ಈ ಯುದ್ಧದ ಅಸಂಬದ್ಧತೆ ಅವರನ್ನು ತಟ್ಟಿದಷ್ಟು ಬೇರೆ ಯಾರನ್ನೂ ತಟ್ಟದು.”
ಅಲ್-ಮಖ್ತಾರಿ ಪುಸ್ತಕ “What Have You Left Behind?” ಸಾಮಾನ್ಯ ಯೆಮನಿಗಳು ಯಾವ ರೀತಿ ಬದುಕುತ್ತಿದ್ದಾರೆ, ಈ ಯುದ್ಧದ ಬಗ್ಗೆ ಅವರ ಅಭಿಪ್ರಾಯವೇನು, ಎಂಬ ಪ್ರಶ್ನೆಗಳಿಗೆ ಉತ್ತರಗಳನ್ನು ಅವರ ಮಾತುಗಳಲ್ಲೇ ಕಟ್ಟಿಕೊಡುವ ಅಸಾಮಾನ್ಯ ಪ್ರಯತ್ನ. ಅಲ್-ಮಖ್ತಾರಿ ಅವರು ದಕ್ಷಿಣ ಯೆಮನ್ನ ಬೆಟ್ಟಪ್ರದೇಶದಲ್ಲಿರುವ ತೇಯ್ಜ಼್ ಪಟ್ಟಣದವರು. 2015ರಲ್ಲಿ ರಾಜಧಾನಿ ಸನಾ ಬಿಟ್ಟು ಹಾದಿ ದಕ್ಷಿಣ ಯೆಮನ್ನ ಬಂದರು ಪಟ್ಟಣ ಏಡನ್ಗೆ ಓಡಿ ಬಂದಿದ್ದರು. ಆ ಸಮಯಕ್ಕೆ ಅಲ್ಲಿಗೂ ಬಂದ ಹೌದಿಗಳು ಅಧ್ಯಕ್ಷೀಯ ಅರಮನೆಯ ಮೇಲೆ ಬಾಂಬ್ ದಾಳಿ ನಡೆಸಿದರು. ಎರಡೇ ವಾರಗಳ ಬಳಿಕ ಅರಬ್ ವಿಮಾನಗಳು ರಾಜಧಾನಿ ಸನಾದ ಮೇಲೆ ದಾಳಿ ನಡೆಸಿದವು. ಮುಂದಿನ ಎರಡು ವರ್ಷಗಳಲ್ಲಿ, ಸಂಮಿಶ್ರ ಗುಂಪುಗಳು ಒಡೆದವು, ಅಂತಾರಾಷ್ಟ್ರೀಯ ಹಸ್ತಕ್ಷೇಪ ಹೆಚ್ಚಾಯಿತು ಮತ್ತು ಯುದ್ಧ ಅನೇಕ ಆಯಾಮಗಳನ್ನು ಪಡೆಯಿತು. ಮಿಲಿಶಿಯಾ ತಂಡಗಳ ನಡುವೆ, ಬುಡಕಟ್ಟುಗಳ ನಡುವೆ, ದೇಶವನ್ನು ತುಂಡು ತುಂಡು ಮಾಡಿದರೂ ತಮ್ಮ ಬೇಳೆ ಬೇಯಿಸಿಕೊಳ್ಳಬೇಕು ಎನ್ನುವವರ ನಡುವೆ ಸಿಲುಕಿದ ಯುದ್ಧದ ಚಹರೆ ದಿನದಿಂದ ದಿನಕ್ಕೆ ಬದಲಾಗುತ್ತ ಹೋಯಿತು. ಈ ಸಂದರ್ಭದಲ್ಲಿ ಅಲ್-ಮಖ್ತಾರಿ ಎಲ್ಲೆಡೆ ಸಂಚರಿಸುತ್ತ 400ಕ್ಕೂ ಹೆಚ್ಚು ಜನರನ್ನು ಸಂದರ್ಶಿಸಿದರು. ಮಧ್ಯಮ ವರ್ಗ, ಬಡಜನ, ಪುರುಷ, ಸ್ತ್ರೀ, ಗೃಹಿಣಿ, ಮೀನುಗಾರರು, ದೇಶಭ್ರಷ್ಟರು ಮತ್ತು ಸೆರೆಮನೆವಾಸಿಗಳು — ಹೀಗೆ, ತಮ್ಮ ತಮ್ಮ ಕುಟುಂಬದ ಪ್ರೀತಿ ಪಾತ್ರರನ್ನು ಕಳೆದುಕೊಂಡ, ಸೈನಿಕರ ಮಧ್ಯೆ ಮಾತ್ರ ನಡೆಯಬೇಕಾಗಿದ್ದ ಯುದ್ಧದಲ್ಲಿ “ಯಾರೋ ಏನೋ ಗುರಿ ಇರದೆ ಬಿಟ್ಟ ಬಾಣ”ಕ್ಕೆ ಗುರಿಯಾದ, ಸಮಾಜದ ಎಲ್ಲ ವರ್ಗದ ಜನರನ್ನು ಸಂದರ್ಶಿಸಿದ್ದಾರೆ.
ಅವರೆಲ್ಲರನ್ನೂ ಯಾವ ರೀತಿಯ ಸೋಗಿಲ್ಲದೇ ನಮ್ಮ ಬಳಿ ನೇರವಾಗಿ ತರುತ್ತಾರೆ. ಮಾತನಾಡುವವರು ಹೇಗೆ ಕಾಣುತ್ತಾರೆ, ಹೇಗೆ ನಡೆಯುತ್ತಾರೆ, ಅವರ ಹಾವ ಭಾವ, ಮಾತನಾಡುವಾಗ ಅವರ ಧ್ವನಿ ಹೇಗಿತ್ತು? — ಇವೆಲ್ಲ ನಮಗೆ ಗೊತ್ತಿಲ್ಲ. “ಮದುವೆಯಾಗಿ ಎರಡು ತಿಂಗಳಾಗಿತ್ತಷ್ಟೆ. ಎಲ್ಲ ಮುಗಿಯಿತು” ರಹೀಬ್ ಅಬ್ದೆಲ್ ಕರೀಮ್ ಅಬ್ದೆಲ್ ಹಮೀದ್ ಗುಣುಗುಣಿಸುತ್ತ ಹೇಳುತ್ತಾರೆ, ಬಹುತೇಕ ಸ್ವಗತದಂತೆ. ಎಲ್ಲ ಮುಗಿಯುವ ಮೊದಲು, ಕಳೆದ ಗಳಿಗೆಗಳನ್ನು ನೆನೆಸಿಕೊಳ್ಳುತ್ತಾ ಇಪ್ಪತ್ತರ ಹುಡುಗಿ, ಸಾಲಿ ಹಸನ್ ಹಿಜಾ ಸಲಾಹ್ ಹೇಳುವುದು ಹೀಗೆ, ’ನಾನು ಮತ್ತು ನನ್ನ ತಂಗಿ, ಸಾರಾ, ಎಲ್ಲ ಒಟ್ಟಿಗೆ ಮಾಡುತ್ತಿದ್ದೆವು. ಕಿಟಕಿ ಒರೆಸುವುದು, ಒಟ್ಟಿಗೇ ಕಿರುಚುವುದು, ಚಿಕ್ಕ ಚಿಕ್ಕ ಮಕ್ಕಳು ಬಾಯಿ ತೆರೆದು ಹಾಡುವುದಿಲ್ಲವೇ? ಹಾಗೆ. ಆದರೆ....”.
ಈ ಪುಸ್ತಕವನ್ನು ವರದಿಗಾರಿಕೆಯ ಹೊತ್ತಿನಲ್ಲಿ ಮಾಡಿಕೊಂಡ ನೋಟ್ಸ್ ಎಂದೋ, ಕೋರ್ಟ್ನಲ್ಲಿ ಪ್ರದರ್ಶಿಸುವ ಅಫಿಡವಿಟ್ಗಳ ಕಂತೆ ಎಂದೋ ತಳ್ಳಿ ಹಾಕಿಬಿಡಬಹುದು. ಆದರೆ ಒಂದೊಂದು ಸಂದರ್ಶನವೂ ಆರು ಪುಟಗಳಷ್ಟಿದ್ದು ಯೆಮನೀ ನಾಗರಿಕರು ತಮ್ಮ ಜೀವನದ ಬಗ್ಗೆ ಮಾಡಿಕೊಂಡ ಸಣ್ಣ ಸಿಂಹಾವಲೋಕನದ ಮಾದರಿಯಲ್ಲಿದೆ. ಇವೆಲ್ಲವುಗಳನ್ನೂ ಸಾಕಷ್ಟು ಯೋಚಿಸಿ ಒಂದು ಬಂಧಕ್ಕೆ ಒಗ್ಗಿಸಿದ ರೀತಿ, ಅವರು ಕೇಳಿದ ಪ್ರಶ್ನೆಗಳು ಮತ್ತು ಅವರು ಆರಿಸಿಕೊಂಡ ಮಂದಿ — ಇವೆಲ್ಲದರ ಹಿಂದೆ ಅಲ್-ಮಖ್ತಾರಿ ಅವರ ಶ್ರಮ, ಪ್ರೀತಿ ಮತ್ತು ಸಹಾನುಭೂತಿ ಎದ್ದು ಕಾಣುತ್ತದೆ.
ಬಲ್ಗೇರಿಯಾದ ಲೇಖಕಿ, 2015ರ ನೊಬೆಲ್ ಪ್ರಶಸ್ತಿ ವಿಜೇತೆ ಸ್ವೆಟ್ಲಾನಾ ಅಲೆಕ್ಸೆಯೆವಿಚ್ (Svetlana Alexievich) ಅವರನ್ನು ಮಾದರಿಯಾಗಿರಿಸಿಕೊಂಡಿದ್ದೇನೆ ಎಂದು ಅಲ್-ಮಖ್ತಾರಿ ಹೇಳುತ್ತಾರೆ. ಆದರೆ ಇವರಿಬ್ಬರ ಲೇಖನಗಳು ಉಂಟುಮಾಡುವ ಪ್ರಭಾವ ಸ್ವಲ್ಪ ಬೇರೆಯದೆಂದು ತೋರುತ್ತದೆ. ಸ್ವೆಟ್ಲಾನಾ ಅವರ ಬರಹಗಳು ಸುದೀರ್ಘವಾಗಿದ್ದು ಬದುಕಿನ ಏರಿಳಿತಗಳನ್ನು ತಮ್ಮದೇ ಆದ ರೀತಿಯಲ್ಲಿ ಹೇಳುತ್ತ ಹೋಗುತ್ತವೆ. ಸೋವಿಯತ್ — ಆಫ್ಘನ್ ಯುದ್ಧವನ್ನು ಚಿತ್ರಿಸಿದ “Zinky Boys” (1989) ಅಥವಾ ಸೋವಿಯತ್ ದೇಶದ ವಿಘಟನೆಯನ್ನು ಕುರಿತ “Secondhand Time” (2013) ನಲ್ಲೂ ಇದನ್ನು ಕಾಣುತ್ತೇವೆ. ಸದ್ಯದ ಕಥೆ ಮುಖ್ಯವಾಗುತ್ತದೆಯಾದರೂ, ಒಟ್ಟು ಜೀವನದ ಅನುಭವ, ಮರೆಯಲಾಗದ ನೆನಪುಗಳು — ಇವೆಲ್ಲವನ್ನೂ ಒಟ್ಟಿಗೆ ಹೆಣೆದ ಚಿತ್ರಗಳನ್ನು ನಾವು ಅಲ್ಲಿ ಕಾಣುತ್ತೇವೆ. ಕಲ್ಪನೆಯ ಲೋಕದಲ್ಲಿ ವಿಹಾರ ಮಾಡುತ್ತಿದ್ದೇವೆಂಬ ಅನುಭವ ಕೊಡುವ ಇಲ್ಲಿನ ಬರಹಗಳಲ್ಲಿ ಉದಾಹರಣೆಗೆಳು ನಿರ್ದಿಷ್ಟವಾದರೂ, ಅವುಗಳ ಪರಿಣಾಮ ಭಾವುಕ ಮತ್ತು ಒಂದು ಸಿದ್ಧಾಂತವನ್ನು ಇನ್ನೊಂದರ ಮುಂದೆ ಮುಖಾಮುಖಿಯಾಗಿಸುತ್ತದೆ. “ನಾನು ಹಾಕಿಕೊಂಡ ಮೊದಲ ಜೀನ್ಸ್ ಪ್ಯಾಂಟ್ ಮೇಲೆ ಏನು ಬರೆದಿತ್ತು ಗೊತ್ತಾ? ಮೋಂಟಾನಾ! ಎಷ್ಟು ಚೆನ್ನಾಗಿತ್ತು!!” “Secondhand Time” ಕಾದಂಬರಿಯಲ್ಲಿ ತನ್ನ ಸೋವಿಯತ್ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾ ಒಬ್ಬ ಹೇಳುವ ಮಾತು ಇದು. ಅವನು ಮುಂದುವರೆಸುತ್ತ, “.... ರಾತ್ರಿ ಆದ ಮೇಲೆ, ಕನಸು ಬೀಳುತ್ತಿತ್ತು. ಏನು ಗೊತ್ತಾ? ನನ್ನ ಕೈಯಲ್ಲಿ ಒಂದು ಹ್ಯಾಂಡ್ ಗ್ರೆನೇಡ್ ಇದೆ. ಶತ್ರು ಖಂಡಿತ ಸಾಯುವ ಹಾಗೆ ಅದನ್ನು ಎಸೆಯುತ್ತಿದ್ದೇನೆ”.
ಸಂವಾದಿಯಾಗಿ, ಅಲ್-ಮಖ್ತಾರಿ ಅವರ ಸಂದರ್ಶನಗಳು ಒಂದು ಘಟನೆಯನ್ನು ಮಾತ್ರ ಹೇಳುತ್ತವೆ. ತಮ್ಮ ಕುಟುಂಬದವರ ಅಥವಾ ಸ್ನೇಹಿತನ ಘೋರ ಮರಣ. ಪ್ರತಿಯೊಂದು ಬಾರಿಯೂ ದಿನನಿತ್ಯದ ಸಂಗತಿಯೊಂದು ಹೇಗೆ ತೀವ್ರ ಭಾವನೆಗಳಿಗೆ ಬಹುಬೇಗ ಪಲ್ಲಟ ಹೊಂದುತ್ತದೆ ಎನ್ನುವುದು ಇಲ್ಲಿನ ಸಂದರ್ಶನಗಳ ಸ್ಥಾಯಿ ಭಾವ. ಒಬ್ಬ ತಂದೆ ತನ್ನ ಹಿರಿಯ ಮಗನ ಜೊತೆ ತನ್ನ ವರ್ಕ್ಶಾಪ್ಗೆ ಹೊರಡುತ್ತಾನೆ. ಅವನ ಹೆಂಡತಿ ಫಾತಿಮಾ ಹೇಳುವ ಮಾತಿದು. “ಅವರು ಹೊರಟ ತಕ್ಷಣ, ಪ್ರತಿದಿನ ಮಾಡುವ ಹಾಗೆ ನಾನು ಬಾಗಿಲು ಹಾಕಿಕೊಂಡು ನನ್ನ ಕೆಲಸಗಳಲ್ಲಿ ನಿರತಳಾದೆ. ಆ ದಿನ ವಿಶೇಷವೇನಾದರೂ ಸಂಭವಿಸಬಹುದು ಎನ್ನಿಸಲೇ ಇಲ್ಲ”. ಕೆಲವೇ ಗಂಟೆಗಳಲ್ಲಿ ಹೌದಿ ಪಡೆಗಳ ದಾಳಿಯಲ್ಲಿ ಅವರ ವರ್ಕ್ಶಾಪ್ ಧೂಳೀಪಟವಾಯಿತು. ಫಾತಿಮಾ ಗಂಡನ ಕಾಲಿನ ಅರ್ಧ ಭಾಗ ಛಿದ್ರವಾಗಿತ್ತು. ಇನ್ನರ್ಧವನ್ನು ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸುವ ಸಮಯದಲ್ಲಿ ಅವನು ತೀರಿಕೊಂಡ. ಅವನ ಕಾಲು ಈ ಪಟ್ಟಣದ ಪೂರ್ವದಲ್ಲಿ ಎಲ್ಲೋ ಬಿದ್ದಿದೆ. ಅವನ ದೇಹವನ್ನು ಪಶ್ಚಿಮದಲ್ಲಿ ಹೂಳಲಾಗಿದೆ. ಇದನ್ನು ನೆನೆಸಿಕೊಂಡು ಅಳುತ್ತಾಳೆ ಫಾತಿಮಾ.
ಆಸ್ಪತ್ರೆಯ ಶವಾಗಾರದಲ್ಲಿ ಹಫ್ಸಾ ಹಸನ್ ಮೊಹಮದ್ ಮುನಾವಿಸ್ ತನ್ನ ತಂಗಿಯನ್ನು ಗುರುತಿಸುತ್ತಾನೆ. ಅವಳು ಕೆಲಸ ಮಾಡುತ್ತಿದ್ದ ಫ್ಯಾಕ್ಟರಿ ಸಮ್ಮಿಶ್ರ ಅರಬ್ ಸೈನ್ಯದ ದಾಳಿಯಲ್ಲಿ ನಿರ್ನಾಮವಾಗಿದೆ. “ಅರ್ಧ ಸುಟ್ಟ ಅವಳ ಕೂದಲನ್ನು ನೋಡಿ ಮುಟ್ಟಿದೆ. ಫೈಜಾಳ ಕೂದಲು ಎಷ್ಟು ಉದ್ದ ಇತ್ತು? ಚಿನ್ನದ ಬಣ್ಣದ ಉದ್ದ ಕೂದಲು. ಈಗ ಸುಟ್ಟು ತಾಮ್ರದ ಬಣ್ಣಕ್ಕೆ ಹೊರಳಿತ್ತು. ಬೆರಳನ್ನು ನೋಡಿದಾಗ ಕೆಲವು ಸುಟ್ಟಿವೆ. ಕೆಲವು ಇಲ್ಲವೇ ಇಲ್ಲ. ಆಮೇಲೆ ಅವಳು ಧರಿಸುತ್ತಿದ್ದ ಬೆಳ್ಳಿಯ ಉಂಗುರವನ್ನು ನೋಡಿದೆ”. ನೆನಪಿನಲ್ಲಿ ಇಷ್ಟು ಖಚಿತತೆ ಇರಲು ಸಾಧ್ಯವೇ? ಇರಬೇಕು. ಏಕೆಂದರೆ, ಅದನ್ನು ಹೇಳುತ್ತಿರುವ ಹಫ್ಸಾಗೆ ಅದನ್ನು ಮರೆಯಲು ಸಾಧ್ಯವೇ ಇಲ್ಲ.
ಪ್ರತಿಯೊಬ್ಬರ ಸಂದರ್ಶನದ ಕೊನೆಗೂ ಇಟಾಲಿಕ್ಸ್ನಲ್ಲಿರುವ ಒಂದು ಪ್ಯಾರಾ ಇದೆ. ಅಲ್ಲಿ ಅಲ್-ಮಖ್ತಾರಿ ಸತ್ತಿರುವವರ ಹೆಸರು, ಸತ್ತ ಸಮಯ, ಹೇಗೆ ಸತ್ತರು, ಯಾರು ಕೊಂದಿದ್ದು — ಎಲ್ಲವನ್ನೂ ದಾಖಲಿಸಿದ್ದಾರೆ. ಉದಾಹರಣೆಗೆ:
ಹೌದಿ-ಸಲೇಹ್ ಮಿಲಿಶಿಯಾ ತಂಡದವರು ತೇಯ್ಜ಼್ ಪಟ್ಟಣದ ಸರಹದ್ದಿನಲ್ಲಿ ನೀರಿನ ಟ್ಯಾಂಕರ್ ಒಂದಕ್ಕೆ ಗುಂಡಿಕ್ಕಿದರು. ಮೂರು ಮಕ್ಕಳು ಸತ್ತರು. ನೈಮಾ ಅವರ ಮಗ ಏನಸ್ ಅಬ್ದೆಲ್ ಜಲೀಲ್ ಮಹ್ಯೂಹ್ (7 ವರ್ಷ), ಅಸ್ಮಾ ಅಬ್ದೋ ಘನೆಮ್ (15 ವರ್ಷ) ಶ್ಯಾಮಾ ಅದೆಲ್ ಮೊಹಮದ್ ಸಯಿಫ್ ( 13 ವರ್ಷ)
ಒಂದು ರೀತಿಯಲ್ಲಿ ಇದು ಸತ್ತಿರುವವರಿಗೆ ಸಲ್ಲಿಸುತ್ತಿರುವ ಗೌರವ. ಅದರ ಜೊತೆಗೆ ಇದನ್ನು ಹೇಳುತ್ತಿರುವವರ ಸ್ವಂತ ಕಥೆಯನ್ನು ಜಗತ್ತಿಗೆ ಸಾರುವಂತಹ ರೀತಿ. ಇವೆರಡೂ ಅಲ್ಲದೆ ಅಲ್-ಮಖ್ತಾರಿ ತಮ್ಮ ಪುಸ್ತಕದಲ್ಲಿ ಒಬ್ಬರ ಧ್ವನಿಯನ್ನು ಇನ್ನೊಬ್ಬರ ಧ್ವನಿಯಲ್ಲಿ ಬೆರೆಸಿ, ಇದು ಎಲ್ಲರ ಕಥೆ ಎನ್ನುವ ರೀತಿಯಲ್ಲಿ ಬರೆಯುತ್ತಾರೆ. ಕಳೆದ ಹತ್ತು ವರ್ಷಗಳಲ್ಲಿ ಯೆಮನೀ ನಾಗರಿಕರ ಕಥೆಯೂ ಇದೇ ಅಲ್ಲವೇ? ಯಾರು ಹೇಗೆ ಸತ್ತರು ಎಂಬ ವಿವರಣೆಗಳು — ಹೆಣ್ಣು ಮಗಳೊಬ್ಬಳು ತನ್ನ ಅಪಾರ್ಟ್ಮೆಂಟ್ನಲ್ಲಿರುವಾಗ, ಮೆಶೀನ್ ಗನ್ನ ಗುಂಡುಗಳು ಅವಳ ಗೋಡೆಯನ್ನು ತೂರಿ ಬಂದು ಅವಳು ಸತ್ತಳು; ಮೀನು ತರಲು ಸಮುದ್ರಕ್ಕೆ ಹೋದ ಬೆಸ್ತರ ತಂಡದಲ್ಲಿ ಗುಂಡಿನ ದಾಳಿಯಿಂದ ಎಲ್ಲರೂ ಸತ್ತರು; ಈದ್ನ ಎರಡನೇ ದಿನ ಇಡೀ ಕುಟುಂಬವೊಂದು ಕ್ಷಿಪಣಿ ದಾಳಿಯಿಂದ ನಿರ್ನಾಮವಾಯಿತು — ಇವೆಲ್ಲ ಸ್ಲೈಡ್ಗಳು ಬಂದು ಹೋದ ಹಾಗೆ ನಮ್ಮ ಮನಃಪಟಲದಲ್ಲಿ ಸರಿದು ಹೋಗುತ್ತವೆ. ಸ್ವೆಟ್ಲಾನಾ ಅಲೆಕ್ಸಿಯೆವಿಚ್ ಅವರ ಶೈಲಿಗಿಂತ ಇದು ಭಿನ್ನ. ಕೊನೆಗೂ ಎಲ್ಲ ಧ್ವನಿಗಳೂ ಒಂದೇ ಅಲ್ಲವೇ? ಎಂಬ ಭಾವ ಬಂದು ಹೋಗುವಂತೆ ಇರುತ್ತದೆ. ಎಲ್ಲರನ್ನೂ ಬಾಧಿಸುವ ನೋವು ಮತ್ತು ದುಃಖದಿಂದ ಯಾರಿಗೂ ಬಿಡುಗಡೆಯೂ ಇಲ್ಲ, ಅದು ಕಡಿಮೆಯಾಗುವ ಸಾಧ್ಯತೆಯೂ ಇಲ್ಲ ಎನ್ನುವ ಹಾಗೆ ಒಂದೇ ರೀತಿಯ ಧ್ವನಿ ಎಲ್ಲ ಸಂದರ್ಶನಗಳಲ್ಲೂ ಮೂಡುತ್ತದೆ.
ತೇಯ್ಜ಼್ ಪಟ್ಟಣದಲ್ಲಿ ಅಲ್-ಮಖ್ತಾರಿ ಅವರು ಸು ಮಯ್ಯ ಅಹಮದ್ ಸಯೀದ್ ಅವರನ್ನು ಭೇಟಿಯಾಗುತ್ತಾರೆ. ಸು ಮಯ್ಯ 2015ರಲ್ಲಿ ಮೂರು ಮಕ್ಕಳನ್ನು ಕ್ಷಿಪಣಿ ದಾಳಿಯಲ್ಲಿ ಕಳೆದುಕೊಂಡ ನತದೃಷ್ಟೆ. ಅವರಿಗೂ ಗೊತ್ತು, ಇಂಥ ದುಃಖಕ್ಕೆ ಈಡಾದವರು ಅವರು ಮಾತ್ರ ಅಲ್ಲ ಎಂಬ ನಗ್ನ ಸತ್ಯ. “ತಮ್ಮದೇ ಮಕ್ಕಳನ್ನು ಹೂಳಬೇಕಾದಂಥ ಸ್ಥಿತಿ ಸಾವಿರಾರು ಮಹಿಳೆಯರಿಗೆ ಇದೆ. ನನ್ನ ಕಥೆಯಲ್ಲಿ ವಿಶೇಷವಾದಂಥದ್ದು ಏನು? ಪ್ರತಿಯೊಂದು ನಗರದ ಪ್ರತಿ ಮನೆಯಲ್ಲೂ ಇಂಥದೊಂದು ಕಥೆ ಇದೆ. ಅಂಥ ಎಲ್ಲ ಕಥೆಗಳಿಗೆ ನಿದ್ದೆ ಬರುವ ಹಾಗೆ ಮಾಡಿ ಅವು ಎಂದೆಂದೂ ಏಳದಂತೆ ಮಾಡಬೇಕು,” ಎನ್ನುತ್ತಾರೆ ಸು ಮಯ್ಯ.
ಈ ರೀತಿ ಒಂದೊಂದು ಕಥೆಯ ಭಾರವನ್ನೂ ಈ ಪುಸ್ತಕ ಹೊರಬೇಕಿದೆ. ಇದೇ ಈ ಪುಸ್ತಕವನ್ನು ಮೊದಲ ಪುಟದಿಂದ ಕೊನೆಯ ಪುಟದವರೆಗೂ ಬಂಧಿಸಿರುವ ತಂತು. ಪ್ರತಿಯೊಂದು ಕಥೆಯಲ್ಲೂ ‘ಸಾಮಾಜಿಕ’ ಅನುಭವವನ್ನು ಹಿಡಿಯಲು ಪ್ರಯತ್ನಿಸಿರುವುದರಿಂದ ಪ್ರತಿಯೊಬ್ಬರ ಅನನ್ಯವಾದ ಅನುಭವ ಮತ್ತು ಧ್ವನಿ ಅಡಗುವಂತಾಗಿದೆ. ವೈಯಕ್ತಿಕ ಹಾಗೂ ಸಾಮಾಜಿಕ ಎಂಬ ಈ ಎರಡು ವಿರುದ್ಧ ಧ್ರುವಗಳ ನಡುವಿನ ಬಿಗಿತ ಬಹುಶಃ ಅಲ್-ಮಖ್ತಾರಿ ಅವರನ್ನು ಕಾಡಿರಬೇಕು. ಈ ಬಿಗಿತದ ನಡುವಿನ ಹದವನ್ನು ಕಾಪಾಡಿಕೊಳ್ಳಲು ಮಾಡಿದ ಪ್ರಯತ್ನ — ಅವರು ಆಯ್ದುಕೊಳ್ಳುವ ಪ್ರಶ್ನೆಗಳ ಮೂಲಕ — ನಮಗೆ ಕಾಣುತ್ತದೆ. ವೈಯಕ್ತಿಕ ಮತ್ತು ಸಾಮಾಜಿಕದ ನಡುವಿನ ಸಂಘರ್ಷ ಇದು. ಅಲೆಕ್ಸಿಯೆವಿಚ್ ತಮ್ಮ ಪುಸ್ತಕಗಳನ್ನು ಕಾದಂಬರಿ ಎಂದು ಕರೆದುಕೊಂಡಿದ್ದಾರೆ. ಅವರ ಪುಸ್ತಕಗಳೂ ಸಂದರ್ಶನಗಳನ್ನು ಆಧರಿಸಿದ್ದರೂ ತಮ್ಮ ತಮ್ಮ ಖಾಸಗಿ ಬದುಕನ್ನು ಎಷ್ಟು ಚಿತ್ರಮಯವಾಗಿ ಕಟ್ಟಿ ಕೊಡುತ್ತಾರೆಂದರೆ, ಅವರೆಲ್ಲರ ನಡುವೆ ಇರುವ ’ಸಾಮಾಜಿಕತನ’ ನಾವು ಪ್ರಯತ್ನಪೂರ್ವಕವಾಗಿ ನೋಡಿದಾಗ ಮಾತ್ರ, ’ಹೌದಲ್ಲವೇ?’ ಎನ್ನುವ ಅನುಭವ ಕೊಡುವಂತಹದ್ದು.
ಇದಕ್ಕೆ ಸಂವಾದಿಯಾಗಿ ಪತ್ರಕರ್ತ ವಾಲೇಸ್ ಟೆರಿ (Wallace Terry) ಅವರು ವಿಯೆಟ್ನಾಂ ಯುದ್ಧದಲ್ಲಿ ಭಾಗವಹಿಸಿದ ಕಪ್ಪು ಅಮೇರಿಕನ್ನರ ಸಂದರ್ಶನಗಳ ಆಧಾರದ ಮೇಲೆ ಬರೆದ ಪುಸ್ತಕ “Bloods” (1984) ಗಮನಿಸಬಹುದು. ಅದರಲ್ಲಿ ಯುದ್ಧದ ಮೌಖಿಕ ಇತಿಹಾಸವನ್ನು ಬಿಂಬಿಸುವ ಪ್ರಯತ್ನವಿದೆ. ಆದರೆ ವಾಲೇಸ್ ಬುದ್ಧಿಪೂರ್ವಕವಾಗಿಯೇ ಸಂದರ್ಶಕರ ಪಟ್ಟಿ ತಯಾರಿಸಿದ್ದರು. ಕಪ್ಪು ಅಮೇರಿಕನರಲ್ಲೇ ಇರುವ ವೈವಿಧ್ಯ ತಮ್ಮ ಪುಸ್ತಕದಲ್ಲಿ ಕಾಣಬೇಕೆಂದು ಅವರ ಇಚ್ಛೆಯಾಗಿತ್ತು. ಅವರಲ್ಲಿ ಕೆಲವರು ನಗರಗಳಿಂದ ಬಂದವರು, ಕೆಲವರು ಗ್ರಾಮ್ಯ ಭಾಗಗಳಿಂದ; ಕೆಲವರಿಗೆ ಈ ಯುದ್ಧದಿಂದ ತಮ್ಮ ಕುಟುಂಬಕ್ಕೆ ನೇರ ನಷ್ಟವಾಗಿತ್ತು. ಇನ್ನೂ ಕೆಲವರಿಗೆ ವಿಯಟ್ನಾಂ ಯುದ್ಧದಲ್ಲಿ ಭಾಗವಹಿಸುವುದು ಎಂದರೆ ಅಮೇರಿಕನ್ ಆಸಕ್ತಿಯನ್ನು ತಾವು ಎಂತಹ ಸಂದರ್ಭದಲ್ಲೂ ಕಾಪಾಡಿದೆವು ಎಂದು ತಮ್ಮ ಬಯೋಡೇಟಾದಲ್ಲಿ ಬರೆದುಕೊಳ್ಳಬಹುದಾದ ಅವಕಾಶ. ನ್ಯೂಯಾರ್ಕ್ ಟೈಮ್ಸ್ನ ವಿಮರ್ಶಕ, ಈ ಪುಸ್ತಕದ ಬಗ್ಗೆ ಹೇಳಿದ್ದು ಹೀಗೆ: “ಇಡೀ ಪುಸ್ತಕದಲ್ಲಿ ಒಂದೇ ತರಹದ ಘಟನೆಗಳನ್ನು ಬೇರೆಬೇರೆಯವರು ಹೇಳಿದಂತೆ ಇದೆ”. ವಾಲೇಸ್ ಬಹುಶಃ ಅಂದುಕೊಂಡಿರಬಹುದು: “ಅದನ್ನೇ ಅಲ್ಲವೇ ನಾನು ಮಾಡ ಹೊರಟಿರುವುದು? ನಿಮ್ಮ ಹಿನ್ನೆಲೆಯ ವೈವಿಧ್ಯತೆ ಏನೇ ಇರಲಿ, ನಿಮ್ಮ ಅನುಭವ ಒಂದೇ!”
ಮೌಖಿಕ ಇತಿಹಾಸಗಳು ನಮಗೆ ಈಗಾಗಲೇ ತಿಳಿದಿರುವ ಘಟನೆಗಳನ್ನು ಬೇರೆ ಬೇರೆ ರೀತಿಯಲ್ಲಿ ಹೇಳುತ್ತವೆ. ಒಂದು ರೀತಿಯಲ್ಲಿ ಇವು ರಂಗಮಂದಿರದ ರೀತಿ. ಹಿಂದೆ ಇರುವ ಪರದೆಯ ಮೇಲೆ ಆ ಘಟನೆಯನ್ನು ಈಗಾಗಲೇ ಚಿತ್ರಿಸಿದೆ. ರಂಗದ ಮುಂದೆ ಬರುವ ಪಾತ್ರಗಳು ಮಾತ್ರ ಬದಲಾಗುತ್ತಿರುತ್ತವೆ. Bloods ಓದುವವರಿಗೆ ವಿಯೆಟ್ನಾಂನ ಯುದ್ಧದ ಬಗ್ಗೆ ಈಗಾಗಲೇ ಗೊತ್ತಿರುತ್ತದೆ. ಹಾಗೆಯೇ Secondhand Time ಓದುವವರಿಗೆ ಅಮೇರಿಕಾ ಮತ್ತು ಸೋವಿಯತ್ ನಡುವೆ ಇದ್ದ ಶೀತಲ ಸಮರದ ಬಗ್ಗೆ ತಿಳಿದಿರುತ್ತದೆ. ಆದರೆ ಯೆಮನ್ನಲ್ಲಿ ಆಗುತ್ತಿರುವ ಯುದ್ಧದ ಬಗ್ಗೆ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಅಲ್ಲಲ್ಲಿ ವಿರಳವಾಗಿ ದೊರಕುವ ಅಡಿ ಟಿಪ್ಪಣಿ ಬಿಟ್ಟರೆ, ಯೆಮನ್ ಯುದ್ಧದ ಇತಿಹಾಸವನ್ನು ಅಲ್-ಮಖ್ತಾರಿ ಹೇಳಲು ನಿರಾಕರಿಸುತ್ತಾರೆ. “ಯುದ್ಧದ ಹಿಂದಿನ ರಾಜಕೀಯವನ್ನು ವಿವರಿಸುವುದರಲ್ಲಿ ನನಗೆ ಯಾವ ಆಸಕ್ತಿಯೂ ಇಲ್ಲ,” ಎಂದು ಅವರು ಮುನ್ನುಡಿಯಲ್ಲಿ ಹೇಳುತ್ತಾರೆ. ಆದರೆ ಅದು ಒಂದು ಹೇಳಿಕೆಯಾಗಿ ಮಾತ್ರ ಕಾಣುತ್ತದೆ. ಇಡೀ ಪಠ್ಯ “ರಾಜಕೀಯ ವಿಶ್ಲೇಷಣೆ ಮಾಡಲಾರೆ” ಎಂಬ ಧ್ವನಿ ಹೊರಡಿಸುವುದಿಲ್ಲ.
“ನಾನು ಬರೆಯುವಾಗ ಜನಸಾಮಾನ್ಯರ ದೈನಂದಿನ ಜೀವನದ ಗುಣಮಟ್ಟ ಹೇಗೆ ಅಧೋಗತಿಗೆ ಇಳಿದಿದೆಯೆಂದು ತಿಳಿಸುವುದು ನನ್ನ ಮುಖ್ಯ ಗುರಿಯಾಗಿತ್ತು. ಎಲ್ಲೆಲ್ಲೂ ಆವರಿಸಿರುವ ಭಯ — ವಸತಿ, ಆಹಾರ, ದಿನನಿತ್ಯದ ನೈಮಿತ್ತಿಕ ಇವುಗಳನ್ನು ಹೇಗೆ ಬುಡಮೇಲು ಮಾಡಿವೆ ಎನ್ನುವುದನ್ನು ತಿಳಿಸಬೇಕಾಗಿತ್ತು,” ಎನ್ನುತ್ತಾರೆ ಅಲ್-ಮಖ್ತಾರಿ. ಆದರೆ ಇಂತಹ ಆಯ್ಕೆಯೂ ರಾಜಕೀಯ ಆಯ್ಕೆ ಎನಿಸುತ್ತದೆ. ಈ ಆಯ್ಕೆ, ಈಗಿರುವ ಸ್ಥಿತಿ — ಎರಡೂ ಬಣಗಳಿಂದ — ಒಂದು ಕಡೆ ಹೌದಿ ಪಡೆ, ಇನ್ನೊಂದು ಕಡೆ ಅರಬ್ ಸಮ್ಮಿಶ್ರ ಪಡೆ — ಇವೆರಡರಿಂದಲೂ ಉಂಟಾಗಿದೆ ಎನ್ನುತ್ತಾರೆ. ಇನ್ನೊಂದು ಬಗೆಯಲ್ಲಿ ಇದು ಈ ಪುಸ್ತಕದ ಸೌಂದರ್ಯ ಮೀಮಾಂಸೆಯ ಬಗೆಯೂ ಹೌದು. “ಇಷ್ಟೆಲ್ಲ ನಾಶ, ಸಾವು ಏತಕ್ಕೆ?” ಮುನೀರಾ ಕೇಳುತ್ತಾರೆ. “ಯಾತಕ್ಕಾದರೂ ಹೊಡೆದಾಡುತ್ತಿದ್ದಾರೆ? ಇಷ್ಟೆಲ್ಲ ಸಾವುಗಳಾದ ದೊರಕುವುದಾದರೂ ಏನು?”
ಹೌದಿ ಮತ್ತು ಅವರ ಶತ್ರುಗಳು ಇಂಥ ಪ್ರಶ್ನೆಗಳಿಗೆ ಕೊಡುವ ಉತ್ತರ ಒಂದೇ: “ಅಧಿಕಾರ ಮತ್ತು ನಿಯಂತ್ರಣ”. ಇಪ್ಪತ್ತನೆಯ ಶತಮಾನದ ಬಹುಕಾಲ ಯೆಮನ್ ಎಂದು ನಾವು ಈಗ ಕಾಣುವ ದೇಶ ಇಬ್ಭಾಗವಾಗಿತ್ತು. ಉತ್ತರದಲ್ಲಿ ಬಲಪಂಥೀಯ ರಾಜ್ಯ; ದಕ್ಷಿಣದಲ್ಲಿ ಎಡಪಂಥೀಯ ಕಮ್ಯುನಿಸ್ಟ್ ರಾಜ್ಯ. ಶೀತಲ ಯುದ್ಧದ ನಕಲನ್ನು ಇಲ್ಲಿ ಕಾಣಬಹುದಿತ್ತು. ಹೌದಿ ಪಂಗಡದವರು ಉತ್ತರದ ಕುಲೀನ ಮನೆತನಗಳಿಂದ ಬಂದವರು. 1962 ರ ಸುಧಾರಣೆಗಳಲ್ಲಿ ಅವರು ತಮ್ಮ ಅಧಿಕಾರವನ್ನು ಕಳೆದುಕೊಂಡರು. ಸೌದಿ ಅರೇಬಿಯಾದ ಪ್ರಭಾವ ಯೆಮನ್ ಮೇಲೆ ಹೆಚ್ಚಾಗಿ, ಸಾಲೇಹ್ ಮತ್ತು ಹಾದಿ ಅವರ ನಿಯಂತ್ರಣದಲ್ಲಿದ್ದಾಗ ಅಧಿಕಾರ ಇನ್ನಷ್ಟು ಮೊಟಕಾಯಿತು. ಸಾಲೇಹ್ ತಮ್ಮ ಶತ್ರುವಾಗಿದ್ದರೂ, ಸಾಲೇಹ್ರನ್ನು ಬೆಂಬಲಿಸುತ್ತಿದ್ದ ಮಿಲಿಟರಿ ತುಕಡಿಗಳ ಸಹಾಯದಿಂದ 2014ರಲ್ಲಿ, ಸನಾ ನಗರದ ಕೆಲವು ಸರ್ಕಾರಿ ಕಟ್ಟಡಗಳ ಮೇಲೆ ತಮ್ಮ ಅಧಿಪತ್ಯ ಸಾಧಿಸಿದರು. ಶೇಕ್ಸ್ಪಿಯರ್ನ ನಾಟಕಗಳಲ್ಲಿ ಆಗುವಂತೆ, ಹೌದಿ ಸೈನಿಕರು ತಮ್ಮ ಸ್ನೇಹಿತರಾಗಿದ್ದ ಸಾಲೇಹ್ ಪಡೆಗಳ ಮೇಲೆಯೇ ಗ್ರೆನೇಡ್ ಮಳೆ ಸುರಿಸಿದರು. ಸಲೇಹ್ ಅವರು ಸನಾ ಪಟ್ಟಣವನ್ನು ಬಿಟ್ಟು ಓಡಿ ಹೋಗುತ್ತಿದ್ದಾಗ ಹತರಾದರು. ಇದಾದದ್ದು 2017ರಲ್ಲಿ.
ಹೀಗೆ ಮೊದಲಿನಿಂದಲೂ, ಈ ಯುದ್ಧ ನೇರವಾಗಿ ನಡೆದಿಲ್ಲ. ಯಾರದ್ದೋ ಕುಮ್ಮಕ್ಕಿನಿಂದ, ಇನ್ಯಾರೋ ಹೊಡೆದಾಡುತ್ತಿದ್ದರು. ಇರಾನ್ ಹೌದಿಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದರೆ, ಸೌದಿ ಸರ್ಕಾರ ಹೌದಿ ಆಡಳಿತವನ್ನು ಬೆಂಬಲಿಸಿತು. ಈ ಸಮಯದಲ್ಲಿ ಸೌದಿ ಹಣ ಹಾದಿ ಸರ್ಕಾರದ ಬೊಕ್ಕಸವನ್ನು ತುಂಬುತ್ತಿತ್ತು. ಅಲ್-ಮಖ್ತಾರಿ ಬರೆಯುತ್ತಾರೆ: “ಹೀಗೆ ಯುದ್ಧವೆಂಬ ಮನಮೋಹಕ ಆಟ, ನಮಗೆ ಗೊತ್ತಿಲ್ಲದೆಯೇ ಬೇರೆ ಬೇರೆ ನಗರಗಳಿಗೆ ಹಬ್ಬಿತು. ಕೆಲವೇ ಕೆಲವು ಶ್ರೀಮಂತರು ಹೊಳೆಯಲ್ಲಿ ಮೀನೂ ಹಿಡಿದರು. ಇದೆಲ್ಲ ನಡೆಯುತ್ತಿರುವುದು, ಸಾವಿರಾರು ಜನ ಹೊಟ್ಟೆಗೆ ಹಿಟ್ಟಿಲ್ಲದೆ, ಹಸಿವೆಯಿಂದ ನರಳುತ್ತಿರುವುದರ ಮಧ್ಯೆ. ಆದ್ದರಿಂದಲೇ, ಕೆಲವರಿಗೆ ಈ ಯುದ್ಧ ಎಷ್ಟು ಸಮಯ ನಡೆದರೂ ಅಷ್ಟೇ ಒಳ್ಳೆಯದು.”
ಅಲ್-ಮಖ್ತಾರಿ ಅವರ ಪುಸ್ತಕದಲ್ಲಿ ನೆರೆಹೊರೆ, ಹಳ್ಳಿ ಮತ್ತು ಪಟ್ಟಣಗಳ ಮೇಲೆ ಯುದ್ಧ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬುದನ್ನು ಒಂದೊಂದಾಗಿ ನೋಡುತ್ತೇವೆ. ಅವರು ಮಾಡಿರುವ ಸಂದರ್ಶನಗಳಲ್ಲಿ ಸಿಗುವ ಈ ಬಿಂದುಗಳನ್ನು ಓದುಗರು ಜೋಡಿಸಿದಾಗ ಮಾತ್ರ ಒಟ್ಟೂ ಚಿತ್ರಣ ದೊರೆಯುತ್ತದೆ. ಸೌದಿ ಸಮ್ಮಿಶ್ರ ಪಡೆಗಳು ಒಂದು ಮೊಬೈಲ್ ಟವರನ್ನೋ, ಹೌದಿ ನಾಯಕನ ಮನೆಯನ್ನೋ, ಒಂದು ಆಲೂಗಡ್ಡೆ ಫ್ಯಾಕ್ಟರಿಯನ್ನೋ ಗುರಿಯನ್ನಾಗಿರಿಸಿಕೊಂಡಿರುತ್ತವೆ. ಆದರೆ ಆ ಗುರಿ ತಪ್ಪಿದಾಗ ಅವು ಬೀಳುವುದು ಸಾಮಾನ್ಯ ಜನರ ಮನೆ, ಅಂಗಡಿ ಮತ್ತು ಶಾಲೆಗಳ ಮೇಲೆ. ರಹೀಬ್ ಅಬ್ದೆಲ್ ರಕೀಮ್ ಅಬ್ದೆಲ್ ಹಮೀದ್ ಇರುವುದು ಪಶ್ಚಿಮ ಯೆಮೆನ್ನ ಹಳ್ಳಿಯೊಂದರಲ್ಲಿ. “ಅವರು ಇಲ್ಲಿ ಬಂದು ಯಾಕೆ ಬಾಂಬ್ ಹಾಕಬೇಕು?” ಎಂದು ಕೇಳುತ್ತಾರೆ. ಇವೆಲ್ಲವನ್ನೂ ನೋಡಿಯೇ ಸೌದಿ ಪಡೆಗಳು ಯೆಮೆನೀ ನಾಗರಿಕರನ್ನು ಕೊಲ್ಲಲು ಹೊಂಚು ಹಾಕಿದೆ ಎಂಬ ಬಲವಾದ ನಂಬಿಕೆ ಹುಟ್ಟುತ್ತದೆ.
ತೇಯ್ಜ಼್ ನಗರದಲ್ಲಿ ಹೌದಿಗಳು ಸೊಫಿಟೆಲ್ನಂತಹ ಹೊಟೆಲ್ ಮೇಲಿನ ಮಹಡಿಗಳಿಂದ ಕ್ಷಿಪಣಿಗಳನ್ನು ಹಾರಿಸುತ್ತಾರೆ. ಅವರನ್ನು ಟೀಕಿಸಿದವರನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುತ್ತಾರೆ. ಸಖರ್ ಅಬ್ದೆಲ್ ಜಬ್ಬಾರ್ ಮೊಹಮ್ಮದ್ ಅವರ ಮನೆಯ ಅಡಿಗೆಮನೆಯ ಕಿಟಕಿಯಿಂದ ಕಾಣುವ ಹಾಗೆ ಒಬ್ಬ ಭಯೋತ್ಪಾದಕ ತನ್ನ ಕ್ಷಿಪಣಿಯನ್ನು ಕ್ಯಾಮೆರಾ ಮೂಲಕ ನೋಡುತ್ತ ಗುರಿ ಇಡುವುದು ಕಾಣುತ್ತದೆ. “ಅವನನ್ನು ನಾವು ಎಂದೂ ನೋಡಲಿಲ್ಲ. ಆದರೆ ಅವನ ಬಲಿಪಶುಗಳಿಂದ ಅವನು ‘ಕಂಡ’. ಅವನಿಂದ ಹತರಾದರವನ್ನು ನಾವು ಮುಖ್ಯರಸ್ತೆ ಅಥವಾ ಅಡ್ಡರಸ್ತೆಯಲ್ಲಿ ರಕ್ತಸಿಕ್ತವಾಗಿ ಬಿದ್ದಿರುವುದನ್ನು ನೋಡಿದೆವು .… ನಾವೆಲ್ಲ ನಮ್ಮ ಅಡಿಗೆಮನೆಯ ಕಿಟಕಿಯಿಂದ ಒಂದೊಂದೇ ಹೆಣ ಬೀಳುವುದನ್ನು ಕಂಡೆವು. ನಾವು ನಮ್ಮ ಮನೆಯಲ್ಲೇ ಭೂತಗಳಾಗಿದ್ದೆವು. ನಮ್ಮನ್ನು ಸಾವೆಂಬ ಬೇಲಿ ಸುತ್ತುವರೆದಿತ್ತು. ಕೊನೆಗೂ ಒಂದು ದಿನ ಸಾವು ಸಖರ್ ಮನೆಗೂ ಬಂತು. ಅವನ ತಮ್ಮ ಬೇರೆ ಕೋಣೆಯಿಂದ ಅಡಿಗೆಮನೆಯತ್ತ ಬರುತ್ತಿದ್ದ. ಅವನಿಗೆ ಆಗ ಹತ್ತು ವರ್ಷ.”
ಹಸಿದ ಹೆಬ್ಬಾವು ತಾನು ಹಿಡಿದ ಪ್ರಾಣಿಯನ್ನು ಗಟ್ಟಿಯಾಗಿ ಅಪ್ಪುವಂತೆ, ಇಡೀ ನಗರವನ್ನು ಯುದ್ಧವೆಂಬ ಹೆಬ್ಬಾವು ಸುತ್ತಿತ್ತು. ಖದೀಜಾ ಮೊಹಮ್ಮದ್ ಹಸನ್ ದಿನನಿತ್ಯದ ಸಾಮಾನನ್ನು ಕೊಳ್ಳಲು ಮಾರ್ಕೆಟ್ಟಿಗೆ ಹೋಗಲು ತನ್ನ ಕೋಲನ್ನು ಹಿಡಿದು ಹೋಗುವಾಗ ಹೌದಿ ಪಡೆಗಳು ನಿಲ್ಲಿಸಿದ್ದ ಅಲ್-ದೆಹಿ ಚೆಕ್ ಪಾಯಿಂಟನ್ನು ದಾಟಿ ಹೋಗಬೇಕಿತ್ತು. ಸೈನಿಕರು ಯುವಕರನ್ನು ಥಳಿಸುವುದು, ಹೆಂಗಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮತ್ತು ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವುದು — ಇವೆಲ್ಲವೂ ಆಕೆಗೆ ದಿನನಿತ್ಯದ ನೋಟ. ಸುರಕ್ಷಿತ ತಾಣ ಯಾವುದೆಂದು ತಿಳಿಯದೆ ಹಳ್ಳಿಯಿಂದ ಪಟ್ಟಣಕ್ಕೆ, ಪಟ್ಟಣದಿಂದ ಹಳ್ಳಿಗೆ ಜನ ಹೋಗುವುದು ಸಾಮಾನ್ಯವಾಗಿತ್ತು. ಕೆಲವು ಬಾರಿ ಬಂಧುಗಳು ಆಶ್ರಯ ಕೊಡುತ್ತಿದ್ದರು. ಅನೇಕ ಬಾರಿ ಮುಚ್ಚಿದ ಬಾಗಿಲನ್ನು ನೋಡಬೇಕಾಗಿರುತ್ತಿತ್ತು. ಇಡೀ ಕುಟುಂಬಗಳು ಶಾಲೆಯಲ್ಲೋ, ಆಸ್ಪತ್ರೆಯಲ್ಲೋ, ಛಾವಣಿ ಹಾರಿ ಹೋದ ಮನೆಗಳಲ್ಲೋ ಇರುವುದನ್ನು ನೋಡುತ್ತಿದ್ದೆವು. ಲುಲ್ ಸಯೀಫ್ ಮತ್ತು ಅವಳ ಮಕ್ಕಳನ್ನು ಹೌದಿ ಸೈನಿಕರು ಮನೆಯಿಂದ ಹೊರಹೋಗುವಂತೆ ಆಜ್ಞೆ ಮಾಡಿದರು. “ಮಧ್ಯ ರಾತ್ರಿಯಲ್ಲಿ ನಾವು ಹೋಗುವುದಾದರೂ ಎಲ್ಲಿಗೆ? ನಮ್ಮ ಹತ್ತಿರ ಹಣವೂ ಇಲ್ಲ; ಯಾರೂ ಸಹಾಯಕ್ಕೂ ಬರಲಿಲ್ಲ,” ಅಲ್-ರಹೀದಾ ನಗರದಲ್ಲಿ ಅವಳು ಮತ್ತು ಅವಳ ಕುಟುಂಬ ನಾಲ್ಕು ತಿಂಗಳು ಒಂದು ಕ್ಲಿನಿಕ್ ನಲ್ಲಿದ್ದರು. ಛಳಿಯಿಂದ ತಪ್ಪಿಸಿಕೊಳ್ಳಲು ಬೆಂಕಿ ಕಾಯಿಸುತ್ತಾ, ಬ್ರೆಡ್ ತಿಂದು, ಟೀ ಕುಡಿದು ಬದುಕಿದರು. ಲುಲ್ ಸಯೀಫ್ನ ನೆನಪಿನಲ್ಲಿ ಇದ್ದದ್ದು ಆ ಬಡತನ ಮಾತ್ರವಲ್ಲ; ಅದರ ಜೊತೆಗೆ ಇದ್ದ ಅವಮಾನ; ಅವಳ ಒಟ್ಟೂ ಬದುಕನ್ನು ಬರಡಾಗಿಸಿದ ರೀತಿ. ಎಲ್ಲ ಘನತೆಯನ್ನೂ ಬಿಟ್ಟುಕೊಟ್ಟ ಕೀಳು ಮಟ್ಟದ ಅಸ್ತಿತ್ವ.
ಈ ಯುದ್ಧ ಬರೇ ಯೆಮನ್ ನಿವಾಸಿಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. 2017ರ ಮಾರ್ಚ್ನಲ್ಲಿ 41 ಸೋಮಾಲಿ ಪ್ರಜೆಗಳಿದ್ದ ದೋಣಿಯೊಂದಕ್ಕೆ ಸೌದಿ ಹೆಲಿಕಾಪ್ಟರ್ ಗುಂಡಿಕ್ಕಿತು. ಅವರು ಯೆಮನ್ನತ್ತ ಬರುತ್ತಿದ್ದ ನಿರಾಶ್ರಿತರು. ಆ ದೋಣಿಯಲ್ಲಿದ್ದ ಮುನಾ ಅವದ್ ಮಹಮೂದ್, ಮೂರು ಗಂಟೆಗಳ ಕಾಲ ಗುಂಡಿನ ಸುರಿಮಳೆಯನ್ನು ಹೆಣಗಳ ಮಧ್ಯೆ ಅಡಗಿ ಕುಳಿತು ಎದುರಿಸಬೇಕಾಯಿತು. ಕೊನೆಗೂ ದೋಣಿ ತೀರ ತಲುಪಿದ ಕ್ಷಣವನ್ನು ಮುನಾ ನೆನಪಿಸಿಕೊಂಡಿದ್ದು ಹೀಗೆ, “ಎಷ್ಟು ಸಂತೋಷವಾಗಿತ್ತು ನಮಗೆ? ಇಲ್ಲಿನ ನೆಲದ ಮೇಲೆ ಕಾಲಿಡಬೇಕೆಂದು ಎಷ್ಟು ದಿನಗಳಿಂದ ಕನಸು ಕಂಡಿದ್ದೆವು? ನಮ್ಮ ಕಾಲ ಕೆಳಗೆ ತಣ್ಣಗಿನ ಮರಳು, ಮೇಲೆ ನೀಲಿ ಆಕಾಶ. ಕೊನೆಗೂ ನೆಮ್ಮದಿಯ ಜೀವನ ನಮ್ಮದಾಗುತ್ತದೆ ಎಂಬ ಭಾವ.” ಯೆಮೆನ್ನಲ್ಲಿ ಇಷ್ಟು ಘೋರ ಯುದ್ಧ ನಡೆಯುತ್ತಿದ್ದಾಗಲೂ, ಇದಕ್ಕಿಂತಲೂ ದುರ್ಬರವಾದ ಜೀವನ ನಡೆಯುವ ಸ್ಥಳಗಳು ಈ ಭೂಮಿಯ ಮೇಲೆ ಇನ್ನೂ ಇವೆ. ಅಲ್ಲಿಂದ ಬಂದವರಿಗೆ ಯೆಮನ್ ಒಂದು ಆಕಾಂಕ್ಷೆ, ಸುಖೀ ಜೀವನವನ್ನು ದೂರದಲ್ಲಿ ತೋರಿಸುವ ದಿಗಂತ.
ಸಾಮಾನ್ಯ ನಾಗರಿಕರ ಜೀವ ಹಿಂಡುತ್ತಿರುವ, ದೈನಂದಿನ ಬದುಕನ್ನು ನರಕ ಮಾಡುತ್ತಿರುವು ಹೌದಿ ಪಡೆಗಳು ಮತ್ತು ಅರಬ್ ಸಮ್ಮಿಶ್ರ ಸೈನ್ಯ — ಇವೆರಡು ಮಾತ್ರವಲ್ಲ. ಇವೆರಡರ ಜೊತೆಗೆ ಅಲ್-ಇಸ್ಲಾ ಪಾರ್ಟಿ ಇದೆ. ಅದು ಅದರದ್ದೇ ಆದ ಸಶಸ್ತ್ರ ಬಂಡುಕೋರರ ಪಡೆಯನ್ನು ಹೊಂದಿದೆ. ರಾಜಕೀಯ ಕಾರ್ಯಕರ್ತರನ್ನು ಅಪಹರಣ ಮಾಡುವುದು ಇವರ ವಿಶೇಷತೆ. ಒಂದು ಸಲ ಅಪಹರಣ ಮಾಡಿದರೆಂದರೆ ಅವರನ್ನು ಇನ್ನೆಂದೂ ಕಾಣಲಾಗುವುದಿಲ್ಲ. ‘ಮುಸ್ಲಿಂ ಬ್ರದರ್ ಹುಡ್’ ಸಂಸ್ಥೆಯ ಜೊತೆ ಒಡನಾಟವಿಟ್ಟುಕೊಂಡಿರುವುದರಿಂದ ಸಂಯುಕ್ತ ಅರಬ್ ಎಮಿರೇಟ್ಸ್ಗೆ ಅಲ್-ಇಸ್ಲಾ ಪಾರ್ಟಿಯನ್ನು ಕಂಡರೆ ಆಗುವುದಿಲ್ಲ. ಆದರೆ ಸೌದಿ ಅರೇಬಿಯಾ ಅದನ್ನು ನೋಡಿಯೂ ನೋಡದೇ ಇರುವಂತೆ ಇರುತ್ತದೆ. ತೇಯ್ಜ಼್ ನಗರವನ್ನು ಸೌದಿ ವಿಮಾನಗಳು ನುಚ್ಚು ನೂರು ಮಾಡಿವೆ. ಆದರೆ ಆ ವಿಮಾನಗಳ ಪೈಲಟ್ಗಳಿಗೆ ಇಂಥಿಂಥ ಸ್ಥಳಗಳಿಗೆ ದಾಳಿಯಿಡಿ ಎಂದು ಹೇಳಿಕೊಡುವ ಮತ್ತು ಅವುಗಳ ಜಿಪಿಎಸ್ ಕೋಆರ್ಡಿನೇಟ್ಗಳನ್ನು ಕೊಡುವವರು ಬೇಕಲ್ಲ? ಅಂಥವುಗಳನ್ನು ಕೊಡುತ್ತಿದ್ದ ಅಲ್-ಇಸ್ಲಾದ ನಾಯಕನ ಜೊತೆ ಮಾತನಾಡಿದ್ದನ್ನು ಅಲ್-ಮಖ್ತಾರಿ ಸಂದರ್ಶಿಸಿದ ಒಬ್ಬ ನೆನಪಿಸಿಕೊಳ್ಳುವುದು ಹೀಗೆ, “ಒಬ್ಬ ತಾನು ಇಂಥಿಂಥ ಸ್ಥಳಗಳಿಗೆ ಬಾಂಬ್ ಹಾಕಿ ಎಂದು ಅವುಗಳ ನಿರ್ದಿಷ್ಟ ಮಾಹಿತಿಯನ್ನು ಕೊಡುತ್ತಿದ್ದೆ ಎಂದು ಹೇಳಿದ. ಒಂದು ಕೊಲೆಗೆ ಸಹಾಯ ಮಾಡುತ್ತಿದ್ದೇನೆ ಎಂಬ ಕನಿಷ್ಠ ಆತ್ಮಸಾಕ್ಷಿಯೂ ಇಲ್ಲವೇ?”
ಶಿಯಾ — ಸುನ್ನಿ ನಡುವಿನ ಘರ್ಷಣೆ ನಗರಗಳ ಬಡಾವಣೆಗಳಿಗೂ ಹಬ್ಬಿದೆ. ತೇಯ್ಜ಼್ನ ಹಳೆಯ ಭಾಗವಾದ ಅಲ್-ಜಮಿಲಿಯಾದ ಹೆಂಗಸೊಬ್ಬಳು ಅಲ್-ಮಖ್ತಾರಿ ಸಂಗಡ ಮಾತನಾಡುತ್ತ, “ಅನೇಕ ವರ್ಷಗಳಿಂದ ನಮ್ಮ ಸುಖ, ದುಃಖಗಳಲ್ಲಿ ಭಾಗಿಯಾಗಿದ್ದವರು, ನಮ್ಮ ನೆನಪುಗಳ ಭಾಗವಾಗಿದ್ದವರು — ಇವರೆಲ್ಲರನ್ನೂ ಈಗ ಭಯದಿಂದ ನೋಡುವಂತಾಗಿದೆ. ಅವರೂ ನಮ್ಮ ಕುರಿತು ಸೈನ್ಯದವರಿಗೆ ಹೇಳಬಹುದು.” ಮೂವತ್ತು ವರ್ಷದ ಅಬ್ದೆಲ್ ಹಬೀಬ್ ಅವಳ ಬಂಧು. ಒಂದು ದಿನ ಅಲ್-ಖೈದಾ ಪಡೆ ಅವನನ್ನು ಅವನ ಮನೆಯಿಂದ ಅಪಹರಿಸಿತು. ನಂತರ ಅವನು ಕಾಣಲೇ ಇಲ್ಲ. “ಅವನು ಇಸ್ಲಾಂ ಧರ್ಮದ ಕಟ್ಟಾ ಪಾಲಕನಾಗಿರಲಿಲ್ಲ; ಅವನ ಹತ್ತಿರದ ನೆಂಟ ಅಲ್-ಖೈದಾಗೆ ಸೇರಿಕೊಂಡಿದ್ದ; ಅವನೇ ಈ ಅಪಹರಣದ ಹಿಂದೆ ಇದ್ದಾನೆ ಎಂದು ಎಲ್ಲರೂ ಹೇಳುತ್ತಾರೆ. ಇನ್ನು ಕೆಲವರ ಪ್ರಕಾರ, ಅಬ್ದೆಲ್ ಹಬೀಬ್ ಹೊಸ ನಿಸ್ಸಾನ್ ಕಾರು ಕೊಂಡಿದ್ದ, ಅದನ್ನು ಅಪಹರಿಸಲು ಅವನನ್ನು ಕೊಂದಿದ್ದಾರೆ. ಅವನ ನಿಸ್ಸಾನ್ನಲ್ಲಿ ಅಲ್-ಖೈದಾ ಸೈನಿಕರು ಓಡಾಡುತ್ತಿದ್ದುದನ್ನು ನಮ್ಮವರೇ ನೋಡಿದ್ದಾರೆ”. ಅಲ್-ಖೈದಾ ಹೇಳುತ್ತಿರಬಹುದು: “ಹೌದು. ನಾವೇ. ನಾವೇ ಅವನನ್ನು ಕೊಂದಿರುವುದು ಮತ್ತು ಈ ಕಾರು ಅವನದೇ. ಎಲ್ಲ ನಿಮ್ಮ ಕಣ್ಣಮುಂದೆಯೇ. ಹಾ … ಹಾ … ನಿಮಗೆ ಏನೂ ಮಾಡಲು ಸಾಧ್ಯವಿಲ್ಲ”. ನಿಸಾನ್ ಕಾರಿನ ವ್ಯಾಮೋಹವೇ ಈ ಕೊಲೆಗೆ ಮುಖ್ಯ ಪ್ರೇರಣೆ ಎಂದು ಹೇಳಿಬಿಡಬಹುದು. ಅದು ಇದ್ದರೂ ಇರಬಹುದು. ಆದರೆ ಇದನ್ನು ನೆನಪಿಸಿಕೊಳ್ಳುವ ಮಹಿಳೆಗೆ ಈ ಸಾಧ್ಯತೆಯ ಬಗ್ಗೆ ಅಷ್ಟು ನಂಬಿಕೆ ಇಲ್ಲ. ಈ ಎಲ್ಲ ಸತ್ಯ ಸುಳ್ಳುಗಳ ಮಧ್ಯೆ ಅಬ್ದೆಲ್ ಹಬೀಬ್ ಕಾಣೆಯಾಗಿರುವುದಂತೂ ವಾಸ್ತವ.
ಬುಡಕಟ್ಟು ಜನಾಂಗಗಳ ಮಧ್ಯೆ ಇರುವ ಅಪನಂಬಿಕೆ, ಸ್ಥಳೀಯ ಬಿರುಕುಗಳು, ವಿಶ್ವಾಸ ಮತ್ತು ನಂಬಿಕೆಗಳ ಅಡಿಪಾಯ ತೆಳುವಾಗಿರುವುದು — ಇವೆಲ್ಲವುಗಳೂ ಈ ಯುದ್ಧದಲ್ಲಿ ಒಂದಕ್ಕೊಂದು ಹೆಣೆದುಕೊಂಡಿವೆ. 2008 ರಲ್ಲಿ ಸಾಲೆಹ್ ಹೇಳಿದ್ದರು, “ಯೆಮನ್ ದೇಶವನ್ನು ಆಳುವುದು ತುಂಬ ಕಷ್ಟ. ಅದು ಏಳು ಹೆಡೆಯ ಹಾವಿನ ತಲೆಯ ಮೇಲೆ ನಿಂತು ನರ್ತನ ಮಾಡಿದಂತೆ".
ಅಲ್-ಮಖ್ತಾರಿ ಅವರ ಪುಸ್ತಕದ ಹತ್ತು ಹನ್ನೆರಡು ಪುಟ ಓದುತ್ತಿದ್ದಂತೆ ದಣಿವಾಗುತ್ತದೆ. ಕಳೆದುಕೊಳ್ಳುವುದರ ಬಗ್ಗೆ ನಿರಂತರವಾದ ಮತ್ತು ನಯ ನಾಜೂಕು ಪರಿಷ್ಕರಣೆಯಿಲ್ಲದ ನೇರ ವಾಕ್ಯಗಳು ನಿಮ್ಮ ಹೃದಯವನ್ನು ಹಿಂಡುತ್ತವೆ. ಯುದ್ಧದ ಸಮಯದಲ್ಲಿ ಆಗುವ ಸಾವಿನ ಅನಾಗರಿಕತೆ, ಕ್ಷುದ್ರತೆ ಮತ್ತು ಮನುಷ್ಯನ ಘನತೆಯನ್ನು ಕನಿಷ್ಠ ಮಟ್ಟಕ್ಕಿಳಿಸುವ ರೀತಿಯನ್ನು ಹಸಿ ಹಸಿಯಾಗಿ ವಿವರಿಸುವಲ್ಲಿ ಅಲ್-ಮಖ್ತಾರಿ ಹಿಂಜರಿಯುವುದಿಲ್ಲ. ಒಂದು ದೇಹವನ್ನು ಅದರ ಕಾಲಿನಿಂದ ಮಾತ್ರ ಗುರುತಿಸಬೇಕಾದ ಅಗತ್ಯ, ಒಬ್ಬ ಬಾಲಕನ ತಾಯಿ ಅದೇ ದಿನ ಬೆಳಿಗ್ಗೆ ಅವನಿಗೆ ತೊಡಿಸಿದ ಪ್ಯಾಂಟ್ನ ವಿವರಗಳು; ಅಕ್ಕ ತಂಗಿಯರಿಬ್ಬರು ಚಿಪ್ಸ್ ಪ್ಯಾಕೆಟ್ ತರಲು ಹತ್ತಿರವಿದ್ದ ಅಂಗಡಿಗೆ ಹೋಗಿದ್ದಾಗ, ಗುಂಡಿನ ಮಳೆಯಾಗಿ ನಾಕು ವರ್ಷದ ತಂಗಿ ಸಾವಿಗೀಡಾದದ್ದು ಮತ್ತು ಅವಳ ದೇಹದ ಸುತ್ತ ರಕ್ತ ಸಿಕ್ತ ಅಲೂಗಡ್ಡೆಯ ಚಿಪ್ಸ್ ಇದ್ದದ್ದು; ತನ್ನ ತಮ್ಮ ರಿಯಾದ್ನ ಜೊತೆ ಮೀನು ಮಾರಲು ಹೊರಟಾಗ ಸೌದಿ ಹೆಲಿಕಾಪ್ಟರಿನಿಂದ ಸುರಿದ ಗುಂಡು ಅವನ ದೇಹವನ್ನು ರಕ್ತ ಸೋರುವ ಪೀಪಾಯಿಯನ್ನಾಗಿ ಮಾಡಿದ್ದು. ಹೀಗೆ ಒಂದೊಂದು ಕಥೆಯೂ ನಿಮ್ಮನ್ನು ನಿಶ್ಚೇಷ್ಟಿತರಾಗಿಸುತ್ತದೆ.
ಒಂದೊಂದು ಕಥೆಯೂ ಪ್ರತ್ಯೇಕ ಮತ್ತು ವೈಯಕ್ತಿಕವಾದರೂ ಪುಸ್ತಕವನ್ನು ಓದಿ ಕೆಳಗಿಟ್ಟ ಮೇಲೆ ನಮ್ಮ ಮನಸ್ಸಿನಲ್ಲಿ ಎಲ್ಲವೂ ಒಂದುಗೂಡುತ್ತವೆ. ಬೂದು ಎಂಬ್ರಾಯ್ಡರಿ ಇದ್ದ ಕೆಂಪು ಗೌನನ್ನು ತೊಟ್ಟಿದ್ದ ಹೆಂಗಸನ್ನು ಕೊಂದಿದ್ದು ಯಾರು ಮತ್ತು ಹೇಗೆ? ಸೌಕ್ ಪಟ್ಟಣದ ಮೇಲೆ ಬಾಂಬ್ ದಾಳಿ ನಡೆದಾಗ ಅವಳು ತನ್ನ ತಂಗಿಯನ್ನು ಕಳೆದುಕೊಂಡಿದ್ದಾದರೂ ಹೇಗೆ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲದಿರುವುದು ನಾವು ಅವರಿಗೆ ಅಗೌರವ ಸಲ್ಲಿಸಿದಂತೆ ಎಂಬ ಭಾವ ಮನಸ್ಸಿನಲ್ಲಿ ಮೂಡುವುದಾದರೂ ಇವುಗಳಿಗೆ ರಾಜಕೀಯ ಉತ್ತರವನ್ನು ಕೊಡುವ ಪ್ರಯತ್ನ ಇಲ್ಲದಿರುವುದು ಇಲ್ಲಿ ಉದ್ದೇಶಪೂರ್ವಕ. “ಇಲ್ಲಿನ ಕಥೆ ಸರಳವಲ್ಲ. ಕಪ್ಪು ಬಿಳುಪಿನಲ್ಲಿ ನೋಡಲಿಕ್ಕೆ ಆಗುವುದಿಲ್ಲ,” ಎಂದು ಅಲ್-ಮಖ್ತಾರಿ ಹೇಳುವಂತಿದೆ.
ಹೌದಿ ಮತ್ತು ಅರಬ್ ಸಂಯುಕ್ತ ಪಡೆ, ಹಾಗೂ ಇವೆರಡರ ಹಿಂದೆ ಇರುವ ಅಂತಾರಾಷ್ಟ್ರೀಯ ಸಂಸ್ಥೆಗಳು /ರಾಷ್ಟಗಳು — ಇವು ಯೆಮನ್ ದೇಶ ಇಂದು ಈ ಸ್ಥಿತಿ ತಲುಪಲು ಕಾರಣ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ತನ್ನದೇ ದೇಶದಲ್ಲಿ ಅಪರಿಚಿತ ಭಾವವನ್ನು ಮತ್ತು ಈ ಹಿಂಸೆಯ ಹಿಂದೆ ಇರುವ ತರ್ಕ ಹೀನತೆಯನ್ನು ಅನುಭವಿಸುವ ಅಲ್-ಮಖ್ತಾರಿ ಅವರ ನೋವು ಈ ಪುಸ್ತಕದ ಓದುಗರಾದ ನಮಗೂ ತಲುಪುತ್ತದೆ. ನಾವು ಎಷ್ಟೇ ವಸ್ತುನಿಷ್ಠವಾಗಿ ಯೋಚಿಸಿ ಇಲ್ಲಿನ ಭೌಗೋಳಿಕ ಮತ್ತು ರಾಜಕೀಯದ ಭೂಪಟವನ್ನು ಬರೆಯಲು ಪ್ರಯತ್ನಿಸಿದರೂ ಈ ಪುಸ್ತಕವನ್ನು ಓದುತ್ತಿದ್ದಂತೆ ಹಿಂಸೆಯ ಅರ್ಥಹೀನತೆ ನಮ್ಮ ಕಣ್ಣಿಗೆ ರಾಚುತ್ತದೆ. ಅಲ್-ಮಖ್ತಾರಿ ಈ ಪುಸ್ತಕದ ಮೂಲಕ ನಮಗೆ ತಿಳಿಸಲು ಬಯಸುವುದು ಬಹುಶಃ ಇದು: “ಎಲ್ಲ ಯುದ್ಧಗಳ ಹಿಂದೆ ಇರುವ ಊಹಿಸಲೂ ಸಾಧ್ಯವಾಗದ ಅನಾಗರಿಕತೆ ಎಣೆಯಿಲ್ಲದ್ದು ಮತ್ತು ಮನುಷ್ಯ ನಿರ್ಮಿತ; ಆದರೆ ಅದು ತರುವ ತೀವ್ರ ಸಂಕಟ ಮಾತ್ರ ಸಾಮಾನ್ಯ ಮನುಷ್ಯರದ್ದು. ಕೊನೆಗೂ ಮುಖ್ಯವಾಗುವುದು ಅವರ ವಿಧಿ".
ಶಶಿಧರ ಡೋಂಗ್ರೆ
ಲೇಖಕ, ಅನುವಾದಕರಾದ ಶಶಿಧರ ಡೋಂಗ್ರೆ ಮೈಸೂರಿನಲ್ಲಿ ನೆಲೆಸಿದ್ದಾರೆ. ಅವರು ಖಾಸಗಿ ಸಂಸ್ಥೆಯೊಂದರಲ್ಲಿ ಎಂಜಿನಿಯರಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ರಂಗಭೂಮಿ, ಸಂಗೀತ, ವಿಜ್ಞಾನದ ಇತಿಹಾಸ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಉಳ್ಳವರು.