ಪೋಲಿಶ್ ಲೇಖಕಿ ಓಲ್ಗಾ ಟೊಕಾರ್ಚುಕ್ (Olga Tokarczuk) ತಮ್ಮ ಕಾದಂಬರಿಗಳ ಕಥನದ ಪ್ರಚಂಡ ಕಲ್ಪಕತೆ ಮತ್ತು ಎಣೆಯಿಲ್ಲದ ಪ್ರಯೋಗಶೀಲತೆಯಿಂದಾಗಿ ಖ್ಯಾತರು. “ಒಂದು ಜೀವರೂಪ ತಳೆದು ಎಲ್ಲೆಗಳ ಮೀರುವಿಕೆಯನ್ನು ಪ್ರತಿನಿಧಿಸುವ ಎಲ್ಲವನ್ನೂ ಒಳಗೊಳ್ಳುವ ಉತ್ಸುಕತೆಯ ಕಥನದ ಕಲ್ಪಕತೆ”ಗಾಗಿ ೨೦೧೮ರ ನೊಬೆಲ್ ಪ್ರಶಸ್ತಿಯನ್ನು ಪಡೆದವರು. ೨೦೦೭ರಲ್ಲಿ ಪೋಲಿಶ್ ಭಾಷೆಯಲ್ಲಿ ಪ್ರಕಟವಾದ ಅವರ ‘ಬಿಗೂನಿ' (Bieguni) ಎಂಬ ಕಾದಂಬರಿ, ೨೦೧೭ರಲ್ಲಿ ಜೆನಿಫರ್ ಕ್ರಾಫ್ಟ್ (Jennifer Croft) ಅವರ ಇಂಗ್ಲಿಷ್ ಅನುವಾದದಲ್ಲಿ Flights ಎಂದು ಪ್ರಕಟವಾಗಿ ಜಗತ್ತಿನ ಗಮನ ಸೆಳೆಯಿತು.
ಈ ಕಾದಂಬರಿಯ ಬಗ್ಗೆ ಬರೆಯುತ್ತ ಅದರ ಕೆಲವು ತುಣುಕುಗಳನ್ನು ಅನುವಾದಿಸಿ ಟೊಕಾರ್ಚುಕ್ರ ಬರವಣಿಗೆಯ ಮಿಣುಕುನೋಟವನ್ನು ಸಂಕೇತ ಪಾಟೀಲ ಈ ಲೇಖನದಲ್ಲಿ ಸೆರೆಹಿಡಿದಿದ್ದಾರೆ.
ಓಲ್ಗಾ ಟೊಕಾರ್ಚುಕ್ರ ಕಾದಂಬರಿಯ ಮೂಲ ಪೋಲಿಶ್ ಶೀರ್ಷಿಕೆಯ ವಾಚ್ಯಾರ್ಥ ‘ಓಡುವವರು' ಎಂದು. ಪೌರ್ವಾತ್ಯ ಸಾಂಪ್ರದಾಯಿಕ ಕ್ರೈಸ್ತ (Eastern Orthodox Christians) ಮತಕ್ಕೆ ಸೇರಿದ ‘ಹಳೆಯ ಆಚಾರವಂತರ’ (Old Believers) ಒಂದು ನಿಗೂಢ (ಕಾಲ್ಪನಿಕವೂ ಇರಬಹುದು) ಸ್ಲಾವಿಕ್ ಅಲೆಮಾರಿಗಳ ಪಂಗಡ ಬಿಗೂನಿಗಳದು. ಕೇಡಿನಿಂದ ತಪ್ಪಿಸಿಕೊಳ್ಳುವುದಕ್ಕೆ ನಿರಂತರವಾಗಿ ಚಲನೆಯಲ್ಲಿರುವುದು ಒಂದು ಯುಕ್ತಿ ಎಂಬ ನಂಬಿಕೆಯುಳ್ಳವರು ಅವರು. ಟೊಕಾರ್ಚುಕ್ರ ಪೋಲಿಶ್ ಕಾದಂಬರಿಯ ಶೀರ್ಷಿಕೆ ಈ ಭಾವವನ್ನು ಆವಾಹಿಸುತ್ತದೆ. ಕಾದಂಬರಿಯನ್ನು ಓದುತ್ತಿದ್ದಂತೆ ಅದು ನಮ್ಮನ್ನೂ ಆವರಿಸಿಕೊಳ್ಳುತ್ತದೆ.
ಕಾದಂಬರಿ ಶುರುವಾಗುವುದು ಅದರ ನಿರೂಪಕಿ ತನ್ನ ಎಳವೆಯ ಸ್ಥೂಲ ಚಿತ್ರಣವೊಂದನ್ನು ಕೊಡುವುದರ ಮೂಲಕ. ಆಗಲೇ ಅವಳಲ್ಲಿ ಸ್ಥಿರತೆಯ ಬಗ್ಗೆ, ಸಂಜೆಯ ನೀರವತೆಯ ಬಗ್ಗೆ ಅಸ್ವಸ್ಥತೆಯ ಭಾವ ಮೂಡುತ್ತಿದೆ.
ನಾನು ಇಲ್ಲಿದ್ದೇನೆ
[…] ನನಗೆ ಕೆಲವೇ ವರ್ಷಗಳಾಗಿವೆ. ನಾನು ಕಿಟಕಿ ಕಟ್ಟೆಯ ಮೇಲೆ ಕುಳಿತು ಚಳಿಹಿಡಿದ ಅಂಗಳದತ್ತ ನೋಡುತ್ತಿದ್ದೇನೆ. ಶಾಲೆಯ ಅಡುಗೆಕೋಣೆಯ ದೀಪಗಳು ಆರಿವೆ: ಎಲ್ಲರೂ ಹೊರಟುಹೋಗಿದ್ದಾರೆ. ಎಲ್ಲ ಬಾಗಿಲುಗಳೂ ಮುಚ್ಚಿವೆ, ಕದಗಳನ್ನು ಎಳೆದಿದ್ದಾರೆ, ಪರದೆಗಳು ಕೆಳಗಿಳಿದಿವೆ. ನನಗೆ ಹೋಗಬೇಕಾಗಿದೆ, ಆದರೆ ಹೋಗುವುದಕ್ಕೆ ಯಾವ ಜಾಗವೂ ಇಲ್ಲ. […]
ಮುಂದಿನ ದಿನಗಳಲ್ಲಿ ಕಾಲ್ನಡಿಗೆಯಲ್ಲಿ ಮನೆಯಿಂದಾಚೆ ಹೊರಡತೊಡಗುವ ಹುಡುಗಿಗೆ ಮನೆಯ ಹತ್ತಿರದಲ್ಲೇ ‘ತೊನೆದಾಡುವ ರಿಬ್ಬನ್ನಂಥ’ ನದಿಯೊಂದು ಎದುರಾಗುತ್ತದೆ. ಅದೇನು ಅಂಥಾ ದೊಡ್ಡ ನದಿಯಲ್ಲ, ಒಂದು ಕಿರಿಯ ಹೊಳೆ. ಆದರೆ ಅದು ಅವಳ ಜೀವನದೃಷ್ಟಿಯನ್ನೇ ಬದಲಿಸುತ್ತದೆ: “ನನ್ನತ್ತ ಒಂದಿನಿತೂ ಗಮನ ಕೊಡದೇ ತನ್ನದೇ ಧ್ಯಾನದಲ್ಲಿರುವ ನದಿ, ಸದಾ ಬದಲಾಗುತ್ತಿರುವ ಆ ಸಂಚಾರಿ ನೀರಿನಲ್ಲಿ ಒಮ್ಮೆ ಕಾಲಿಟ್ಟರೆ ಅದರಲ್ಲೇ ಮತ್ತೊಮ್ಮೆ ಕಾಲಿಡಲಾಗದು ಎಂಬುದು ನನಗೆ ತಿಳಿದದ್ದು ನಂತರದಲ್ಲಿ.”
“ಅಲ್ಲಿ ನದಿಯೊಡ್ಡಿನ ಮೇಲೆ ನಿಂತು, ಪ್ರವಾಹವನ್ನು ನಿಟ್ಟಿಸುತ್ತಿರುವಾಗ ಅರಿತುಕೊಂಡದ್ದೆಂದರೆ — ಎಲ್ಲಾ ಅಪಾಯಗಳ ಹೊರತಾಗಿಯೂ — ಚಲನೆಯಲ್ಲಿರುವ ವಸ್ತುವೊಂದು ವಿಶ್ರಾಂತಿಯಲ್ಲಿರುವ ವಸ್ತುವಿಗಿಂತ ಯಾವತ್ತಿಗೂ ಮೇಲಾದುದು; ಬದಲಾವಣೆಯು ಯಾವತ್ತಿಗೂ ಸ್ಥಿರತೆಗಿಂತ ಉದಾತ್ತವಾದ ಸಂಗತಿ; ಯಾವುದು ಜಡವೋ ಅದು ಅವನತಿ ಹೊಂದುತ್ತದೆ, ನಶಿಸುತ್ತದೆ, ಬೂದಿಯಾಗಿಬಿಡುತ್ತದೆ, ಆದರೆ ಯಾವುದು ಚಲನೆಯಲ್ಲಿರುತ್ತದೋ ಅದು ಚಿರಕಾಲದವರೆಗೆ ಉಳಿಯುತ್ತದೆ. […]”
ಅವಳ ತಂದೆ ತಾಯಿಯರು ಪ್ರವಾಸಪ್ರಿಯರಾದರೂ ಅದು ಮುಗಿದ ಮೇಲೆ ಅವರು ಒಂದೆಡೆ ನೆಲೆನಿಲ್ಲಬಯಸುವವರು. ಆದರೆ ಅದು ನಿರೂಪಕಿಯ ಜಾಯಮಾನದಲ್ಲಿಲ್ಲ.
“ಆ ಬದುಕು ನನ್ನದಲ್ಲ. ಒಂದು ಜಾಗದಲ್ಲಿ ಸುಳಿದಾಡುತ್ತಲೇ ಅಲ್ಲಿಯೇ ಬೇರುಗಳನ್ನೂರತೊಡಗುವಂತೆ ಮಾಡುವ ಯಾವುದೋ ಒಂದು ವಂಶವಾಹಿಯನ್ನು ನಾನು ಆನುವಂಶಿಕವಾಗಿ ಪಡೆದಿಲ್ಲವೆನ್ನುವುದು ಸ್ಪಷ್ಟ. ನಾನು ಹಲವು ಬಾರಿ ಪ್ರಯತ್ನಿಸಿದ್ದಿದೆ, ಆದರೆ ನನ್ನ ಬೇರುಗಳು ಯಾವಾಗಲೂ ಮೇಲುಮೇಲೆಯೇ; ಸಣ್ಣಾತಿಸಣ್ಣ ತಂಗಾಳಿ ಕೂಡ ನನ್ನನ್ನು ಹಾರಿಸಿಕೊಂಡು ಹೋಗಬಲ್ಲುದು. ಮೊಳಕೆಯೊಡೆಯುವುದು ಹೇಗೆಂದು ನನಗೆ ತಿಳಿದಿಲ್ಲ. ನೆಲದಾಳಕ್ಕಿಳಿಯುವ ಕಾಯಿಪಲ್ಲೆಗಳ ಅಳವಿನ ಒಡೆತನ ನನಗಿಲ್ಲವೇ ಇಲ್ಲ. ನನಗೆ ನೆಲದಿಂದ ನ್ಯೂಟ್ರಾನನ್ನು ಕೀಳುವುದಕ್ಕೆ ಆಗುವುದಿಲ್ಲ, ನಾನು ಆಂಟೆಯಸ್ನ* ವಿರೋಧಿ. ನಾನು ಚೈತನ್ಯವನ್ನು ಚಲನೆಯಿಂದ ಪಡೆಯುತ್ತೇನೆ — ಬಸ್ಸುಗಳ ಅದುರುವಿಕೆ, ವಿಮಾನಗಳ ಗುಡುಗುಡುವಿಕೆ, ರೈಲು ಮತ್ತು ದೋಣಿಗಳ ಓಲಾಡುವಿಕೆ.”
* ಆಂಟೆಯಸ್ ಗ್ರೀಕ್ ಪುರಾಣಗಳ ಒಬ್ಬ ಅರೆ ದಾನವ. ಅವನು ಅವನ ತಾಯಿಯಾದ ಭೂಮಿಯನ್ನು ಸೋಕಿರುವ ತನಕ ಮಲ್ಲಯುದ್ಧದಲ್ಲಿ ಯಾರೂ ಅವನ್ನು ಸೋಲಿಸಲಾರರು.
ಹೀಗೆ ಶುರುವಾಗುವ ಈ ಕಾದಂಬರಿ ಇರುವುದೇ ಅಲೆಮಾರಿತನದ ಬಗ್ಗೆ. ವಾಸ್ತವದಲ್ಲಿ ಇದನ್ನು ರೂಢಿಗತ ಅರ್ಥದಲ್ಲಿ ಕಾದಂಬರಿ ಎನ್ನುವುದೇ ಕಷ್ಟ. ‘ಹಲ ತುಣುಕುಗಳ ಕಾದಂಬರಿ’ (fragmentary novel) ಎನ್ನಬಹುದೇನೋ. ಒಂದೆಡೆಯಿಂದ ಇನ್ನೊಂದೆಡೆ ಜಿಗಿಯುತ್ತ, ಎದುರಾದುದೆಲ್ಲವನ್ನೂ ಗಮನಿಸಿ ಮೆಲುಕು ಹಾಕುತ್ತ, ದಕ್ಕಿದ ಹೊಳಹುಗಳನ್ನು ಓದುಗರೊಂದಿಗೆ ತೀರ ಸಹಜವಾಗಿ ಆಪ್ತತೆಯಿಂದ ಹಂಚಿಕೊಳ್ಳುತ್ತ ಕಾದಂಬರಿ ಮುಂದುವರಿಯುತ್ತದೆ. ಇದರಲ್ಲಿ ನೂರಕ್ಕೂ ಹೆಚ್ಚು ಗದ್ಯದ ತುಣುಕುಗಳಿವೆ. ಅವುಗಳಲ್ಲಿ ಹಲವು ಒಂದೆರಡೇ ವಾಕ್ಯಗಳಿರುವ ಕಿರುಪ್ರಬಂಧಗಳು; ಅಪರಿಚಿತ ಸಹಪ್ರಯಾಣಿಕರ ಜೊತೆಗಿನ ಮಾತುಕತೆಯ ಭಾಗಗಳು; ಚರಿತ್ರೆಯ ಮೆಲುಕುಗಳು; ಮನುಷ್ಯನ ಶರೀರ ವಿಜ್ಞಾನದ ವಿವರಗಳು (ಶರೀರ ಕೂಡ ನಮ್ಮ ಯಾತ್ರೆಗೆ ಬೇಕಾದ ತೇರಲ್ಲವೇ, ಹೀಗಾಗಿ ಅದರ ಬಗೆಗಿನ ಕುತೂಹಲವೂ ಸಹಜವೇ); ಮತ್ತು ತುಂಡುತುಂಡಾಗಿ ಮುಂದುವರಿಯುವ ಒಂದಷ್ಟು ನೀಳ್ಗತೆಗಳು. ಎಲ್ಲವೂ ಒಂದರೊಳಗೊಂದು ಹಾಸುಹೊಕ್ಕಿವೆ. ಆದರೆ ಇವನ್ನೆಲ್ಲ ಒಟ್ಟಿಗೇ ಹಿಡಿದಿಟ್ಟಿರುವುದು ಒಂದು ಕಥೆಯಲ್ಲ. ಇಲ್ಲಿ ಪಾತ್ರಗಳು, ಕಥೆಯ ಎಳೆಗಳು ಇಲ್ಲವೆಂದಲ್ಲ. ಆದರೆ ಅವಕ್ಕಿಂತ ಮುಖ್ಯವಾಗಿ ಎದ್ದು ಕಾಣುವುವು ಎರಡು motifಗಳು: ಅಲೆಮಾರಿತನ (ಇದನ್ನು ಒಂದೆರಡು ಕಡೆ ಲೇಖಕಿ ‘ಯಾತ್ರೆ' ಎಂದಿದ್ದಾರೆ, ಇದು ತೀರ್ಥಯಾತ್ರೆಯಷ್ಟೇ ಗಂಭೀರ ಮತ್ತು ಪವಿತ್ರ ಕಾಯಕ), ಮತ್ತು ಕೌತುಕ (ಆರಂಭದಲ್ಲೇ ಲೇಖಕಿ Cabinet of Curiosities, ಕೌತುಕಗಳ ಅಲಮಾರಿ, ಎಂಬ ನುಡಿಗಟ್ಟನ್ನು ಬಳಸಿದ್ದಾರೆ; ಕಾದಂಬರಿಯ ಸಂದರ್ಭದಲ್ಲಿ ಅದು ಪ್ರಸ್ತುತ). ಇವುಗಳ ಕೆಲವು ಮಾದರಿಗಳನ್ನು ಕೆಳಗೆ ನೋಡಬಹುದು.
ಒಂದು ಸುದೀರ್ಘ ಕಾಲು ಗಂಟೆ
ವಿಮಾನದಲ್ಲಿ ಬೆಳಗಿನ ೮:೪೫ರಿಂದ ೯ ಗಂಟೆಯ ನಡುವಿನ ವೇಳೆ. ನನ್ನ ಮನಸ್ಸಿನಲ್ಲಿ ಇದು ಒಂದು ಗಂಟೆಯಷ್ಟು ತೆಗೆದುಕೊಂಡಿತು; ಅಥವಾ ಇನ್ನೂ ಹೆಚ್ಚು.
ಸೂಚನೆಗಳು
ನಾನು ಕೆರೆಗಳು ಮತ್ತು ಕೊಳಗಳ ಛಾಯಾಚಿತ್ರಗಳಿದ್ದ ಒಂದು ಅಮೆರಿಕನ್ ನಿಯತಕಾಲಿಕೆಯ ಪುಟಗಳನ್ನು ತಿರುವಿಹಾಕುತ್ತಿದ್ದೇನೆಂದು ಕನಸು ಕಂಡೆ. ನಾನು ಎಲ್ಲವನ್ನೂ ಅವುಗಳ ವಿವರವಿವರಗಳಲ್ಲಿ ನೋಡುತ್ತಿದ್ದೆ. ಯೋಜನೆಗಳ ಮತ್ತು ಹೊರಗೆರೆಗಳ ಪ್ರತಿಯೊಂದು ಘಟಕ ಭಾಗವನ್ನೂ ನಿಖರವಾಗಿ A, B ಮತ್ತು C ಅಕ್ಷರಗಳು ನಿರೂಪಿಸುತ್ತಿದ್ದುವು. 'ಸಾಗರವನ್ನು ಕಟ್ಟುವುದು ಹೇಗೆ: ಸೂಚನೆಗಳು’ ಎಂಬ ತಲೆಬರಹವಿದ್ದ ಲೇಖನವನ್ನು ನಾನು ತವಕದಿಂದ ಓದಲು ಶುರು ಮಾಡಿದೆ.
ಗದ್ಯರೂಪದ ಹಾಯ್ಕುಗಳಂಥ ಈ ಕಿರು ಪ್ರಬಂಧಗಳು ಕಾದಂಬರಿಯುದ್ದಕ್ಕೂ ಹರಡಿಕೊಂಡಿವೆ.
ಸ್ವಸ್ತಿಕಗಳು
ದಕ್ಷಿಣ ಏಷ್ಯಾದ ಒಂದು ನಗರದಲ್ಲಿ ಸಸ್ಯಾಹಾರಿ ರೆಸ್ಟೋರೆಂಟ್ಗಳನ್ನು ಸಾಮಾನ್ಯವಾಗಿ ಕೆಂಪು ಸ್ವಸ್ತಿಕಗಳೊಂದಿಗೆ ಸೂಚಿಸುತ್ತಾರೆ. ಅವು ಸೂರ್ಯ ಮತ್ತು ಜೀವಚೈತನ್ಯದ ಪ್ರಾಚೀನ ಚಿಹ್ನೆಗಳು. ಇದು ವಿದೇಶಿ ನಗರದಲ್ಲಿ ಸಸ್ಯಾಹಾರಿಗಳ ವಾಸವನ್ನು ಹೆಚ್ಚು ಸುಲಭಗೊಳಿಸುತ್ತದೆ — ಆ ಚಿಹ್ನೆಯನ್ನು ಗಮನಿಸಿ ಅವುಗಳ ದಾರಿ ಹಿಡಿದು ಹೋಗಬೇಕಷ್ಟೆ. ಅಲ್ಲಿ ಅವರು ತರಕಾರಿ ಮೇಲೋಗರಗಳು (ಬಹುಬಗೆಯ ತರಕಾರಿಗಳು ಮೇಲೋಗರಗಳು ಇರುತ್ತವೆ), ಪಕೋಡಗಳು, ಸಮೋಸಾಗಳು ಮತ್ತು ಕೂರ್ಮಾಗಳು, ಪಿಲಾಫ್ಗಳು, ಚಿಕ್ಕ ಕಟ್ಲೆಟ್ಗಳು, ಹಾಗೆಯೇ ನನ್ನ ಅಚ್ಚುಮೆಚ್ಚಿನ ಒಣಗಿದ ಪಾಚಿ ಹಾಳೆಗಳಲ್ಲಿ ಸುತ್ತಿ ಕೊಡುವ ಅಕ್ಕಿಯ ಕಡ್ಡಿಗಳನ್ನು ಬಡಿಸುತ್ತಾರೆ.
ಕೆಲವು ದಿನಗಳ ನಂತರ ನಾನು ಪಾವ್ಲೋವ್ನ ಪಳಗಿದ ನಾಯಿಯಂತೆ* ನಡೆದುಕೊಳ್ಳುತ್ತಿದ್ದೇನೆ — ಸ್ವಸ್ತಿಕವನ್ನು ನೋಡಿದ ಕೂಡಲೇ ನಾನು ಜೊಲ್ಲು ಸುರಿಸತೊಡಗುತ್ತೇನೆ.
* Pavlovian Conditioning ಅಥವಾ Classical Conditioning ಎಂಬ ಸಿದ್ಧಾಂತದ ಬಗ್ಗೆ ಇಲ್ಲಿ ಓದಿರಿ.
ಮೂಲ ಮತ್ತು ಪ್ರತಿ
ಒಂದು ವಸ್ತುಸಂಗ್ರಹಾಲಯದ ಕೆಫೆಟೇರಿಯಾದಲ್ಲಿನ ಹೀಗೊಬ್ಬ, ತನಗೆ ಒಂದು ಮೂಲ ಕಲಾಕೃತಿಯ ಸಾನ್ನಿಧ್ಯದಲ್ಲಿ ಸಿಗುವ ತೃಪ್ತಿ ಬೇರೆಲ್ಲೂ ಸಿಗುವುದಿಲ್ಲ, ಎಂದು ಹೇಳುತ್ತಿದ್ದ. ಅಲ್ಲದೇ, ಹೆಚ್ಚು ಪ್ರತಿಗಳು ಇದ್ದಷ್ಟೂ ಮೂಲ ಕೃತಿಯ ಮಹತ್ವ ಹೆಚ್ಚಾಗುತ್ತದೆ ಎಂದವನು ಒತ್ತಿ ಹೇಳಿದ. ಒಮ್ಮೊಮ್ಮೆ ಅದು ಪವಿತ್ರ ಸ್ಮಾರಕವೊಂದರ ಮಹತ್ವಕ್ಕೆ ಹತ್ತಿರದ್ದಾಗುತ್ತದೆ. ಏಕೆಂದರೆ ಅನನ್ಯವಾದುದು ಮಹತ್ತಿನದಾಗಿದೆ. ಅಲ್ಲದೇ ಅದರ ಮೇಲೆ ವಿನಾಶದ ಬೆದರಿಕೆಯು ತೂಗಾಡುತ್ತಲಿರುತ್ತದೆ. ಈ ಮಾತುಗಳ ದೃಢೀಕರಣವು ಹತ್ತಿರದಲ್ಲಿದ್ದ ಪ್ರವಾಸಿಗರ ಗುಂಪೊಂದರ ರೂಪದಲ್ಲಿ ಬಂದಿತು. ಅವರು ಉತ್ಸುಕ ಏಕಾಗ್ರತೆಯಿಂದ ಲಿಯೊನಾರ್ಡೊ ಡಾ ವಿಂಚಿಯ ವರ್ಣಚಿತ್ರವನ್ನು ಆರಾಧಿಸುತ್ತಾ ನಿಂತರು. ಆಗೀಗ, ಅವರಲ್ಲಿ ಯಾರಾದರೊಬ್ಬರು ಇನ್ನು ತಡೆದುಕೊಳ್ಳಲು ಸಾಧ್ಯವೇ ಇಲ್ಲವಾದಾಗ, ಕ್ಯಾಮರಾದ ಸ್ಪಷ್ಟವಾದ ಕ್ಲಿಕ್ ಧ್ವನಿ ಕೇಳಿಬರುತ್ತಿತ್ತು. ಇದು ಹೊಸದೊಂದು ಡಿಜಿಟಲ್ ಭಾಷೆಯ ‘ಆಮೆನ್'ನಂತೆ ಕೇಳುತ್ತಿತ್ತು.
ಯಾತ್ರಿಯ ಮನೋಧರ್ಮ
ನನ್ನ ಹಳೆಯ ಗೆಳೆಯನೊಬ್ಬ ತನಗೆ ಒಂಟಿಯಾಗಿ ಪ್ರಯಾಣಿಸುವುದು ತೀರ ಬೇಡವಾಗುತ್ತದೆಂದು ನನಗೊಮ್ಮೆ ಹೇಳಿದ್ದ. ಅವನ ದೂರು ಹೀಗಿತ್ತು: ಅವನು ಅಸಾಮಾನ್ಯವಾದುದನ್ನು, ಏನೋ ಹೊಸದನ್ನು ಸುಂದರವಾದುದನ್ನು ಕಂಡಾಗ, ಅದನ್ನು ಯಾರೊಂದಿಗಾದರೂ ಹಂಚಿಕೊಳ್ಳಲೇಬೇಕು ಎಂದು ಎಷ್ಟೊಂದು ಹಂಬಲಿಸುತ್ತಾನೆಂದರೆ,ಅವನ ಜೊತೆಗೆ ಆಗ ಯಾರೂ ಇರದಿದ್ದಲ್ಲಿ ಅವನು ತೀವ್ರ ವ್ಯಾಕುಲಕ್ಕೊಳಗಾಗುತ್ತಾನೆ.
ಅವನು ಒಳ್ಳೆಯ ಯಾತ್ರಿಕನಾಗಬಹುದು ಎಂಬ ಬಗ್ಗೆ ನನಗೆ ಅನುಮಾನವಿದೆ.
ಅಲ್ಲಲ್ಲಿ ನಮಗೆಲ್ಲ ಗೊತ್ತಿರುವ ತೀರ ಸಾಮಾನ್ಯ ವಿಷಯಕ್ಕೇ ಬೇರೆ ಆಯಾಮ ಕೊಟ್ಟು ನಮ್ಮ ಗ್ರಹಿಕೆಯ ವ್ಯಾಪ್ತಿಯನ್ನು ಹಿಗ್ಗಿಸುತ್ತವೆ.
ನಾಲಿಗೆಯು ಅತ್ಯಂತ ಪ್ರಬಲ ಸ್ನಾಯು
ಕೆಲವು ದೇಶಗಳಿವೆ. ಅಲ್ಲಿ ಜನರು ಇಂಗ್ಲಿಷ್ ಮಾತನ್ನಾಡುತ್ತಾರೆ. ಆದರೆ ಅದು ನಮ್ಮಂತೆ ಅಲ್ಲ — ನಮಗೆ ನಮ್ಮವೇ ಆದ ಭಾಷೆಗಳಿವೆ. ಅವನ್ನು ನಾವು ನಮ್ಮ ಕ್ಯಾರಿ-ಆನ್ ಲಗೇಜುಗಳಲ್ಲಿ, ನಮ್ಮ ಕಾಸ್ಮೆಟಿಕ್ ಚೀಲಗಳಲ್ಲಿ ಮರೆಮಾಚಿಟ್ಟಿರುತ್ತೇವೆ. ಇಂಗ್ಲಿಷನ್ನು ನಾವು ಪ್ರಯಾಣಿಸುವಾಗ ಮಾತ್ರ ಬಳಸುತ್ತೇವೆ, ಅದೂ ಹೊರದೇಶಗಳಲ್ಲಿ, ಹೊರಗಿನ ಮಂದಿಯೊಂದಿಗೆ. ಇದನ್ನು ಊಹಿಸಿಕೊಳ್ಳುವುದು ಕಷ್ಟ, ಆದರೆ ಇಂಗ್ಲಿಷ್ ಅವರ ನಿಜವಾದ ಭಾಷೆಯಾಗಿದೆ! ಮತ್ತು ಬಹಳಷ್ಟು ಸಲ ಅವರ ಏಕೈಕ ಭಾಷೆ. ನೆಚ್ಚಿಕೊಳ್ಳಲು ಅಥವಾ ಅನಿಶ್ಚಿತತೆಯ ಸಮಯದಲ್ಲಿ ಆಸರೆ ಪಡೆದುಕೊಳ್ಳಲು ಅವರಲ್ಲಿ ಬೇರೇನೂ ಇಲ್ಲ.
ಎಲ್ಲಾ ಸೂಚನೆಗಳು, ಎಲ್ಲಾ ರೀತಿಯ ಎಡವಟ್ಟು ಹಾಡುಗಳ ಎಲ್ಲಾ ಸಾಲುಗಳು, ಎಲ್ಲಾ ಮೆನುಗಳು, ಎಲ್ಲಾ ಅಸಹನೀಯ ಕರಪತ್ರಗಳು ಮತ್ತು ಕೈಪಿಡಿಗಳು - ಲಿಫ್ಟ್ನಲ್ಲಿರುವ ಬಟನ್ಗಳು ಸಹ! — ಎಲ್ಲವೂ ಅವರ ಖಾಸಗಿ ಭಾಷೆಯಲ್ಲಿಯೇ ಇರುವ ಈ ಜಗತ್ತಿನಲ್ಲಿ ಅವರು ಅದೆಷ್ಟು ಕಂಗೆಟ್ಟಂತಾಗಿರಬಹುದು. ಅವರು ತಮ್ಮ ಬಾಯಿ ತೆರೆದಾಗಲೆಲ್ಲ ಯಾರಿಗಾದರೂ ಯಾವ ಗಳಿಗೆಯಲ್ಲಾದರೂ ಅವರ ಮಾತು ಅರ್ಥವಾಗಬಹುದು. ಅವರು ವಿಶೇಷ ಗುಪ್ತಭಾಷೆಯಲ್ಲಿ ವಿಷಯಗಳನ್ನು ಬರೆಯಬೇಕಾಗುತ್ತದೇನೋ. ಅವರು ಎಲ್ಲೇ ಇದ್ದರೂ ಜನರಿಗೆ ಅನಿರ್ಬಂಧಿತರಾಗಿ ಲಭ್ಯರು — ಅವರು ಎಲ್ಲರಿಗೂ ಮತ್ತು ಎಲ್ಲದಕ್ಕೂ ದಕ್ಕುವರು! ಅವರಿಗೆ ತಮ್ಮದೇ ಒಂದು ಪುಟ್ಟ ಭಾಷೆಯನ್ನು ದಕ್ಕಿಸಿಕೊಡುವ ಯೋಜನೆಗಳಿವೆ ಎಂದು ನಾನು ಕೇಳಿದ್ದೇನೆ. ಅದು ಬೇರೇ ಯಾರೂ ಬಳಸದ ಸತ್ತ ಭಾಷೆಗಳಲ್ಲಿ ಒಂದು ಇರಬೇಕು. ಒಮ್ಮೊಮ್ಮೆಯಾದರೂ ಕೇವಲ ತಮಗಾಗಿಯೇ ಅವರು ಏನಾದರೂ ಒಂದಷ್ಟು ಇಟ್ಟುಕೊಳ್ಳಲೋಸುಗ.
ಹೀಗೆ "ಎಲ್ಲವನ್ನೂ ಒಳಗೊಳ್ಳುವ” encyclopeadic ಉತ್ಸುಕತೆಯನ್ನು ಪ್ರದರ್ಶಿಸಿದರೂ ಲೇಖಕಿ ಮತ್ತೆ ಮತ್ತೆ ಚಲನೆಯ ಆಶಯಕ್ಕೇ ಹಿಂದಿರುಗುತ್ತಿರುತ್ತಾರೆ.
ಮುಸುಕುಧಾರಿ ಜಂಗಮ ಹೇಳುತ್ತಿದ್ದುದು ಏನು
ಅಲುಗಾಡು, ಮುಂದುವರಿ, ನಡೆ. ಅವನಿಂದ ತಪ್ಪಿಸಿಕೊಳ್ಳಲು ಅದೊಂದೇ ದಾರಿ. ಜಗತ್ತನ್ನು ಆಳುವವನಿಗೆ ಚಲನೆಯ ಮೇಲೆ ಯಾವುದೇ ಅಧಿಕಾರವಿಲ್ಲ ಮತ್ತು ಚಲನೆಯಲ್ಲಿರುವ ನಮ್ಮ ದೇಹ ಪವಿತ್ರವಾದದ್ದು ಎಂದವನಿಗೆ ತಿಳಿದಿದೆ. ಮತ್ತಿನ್ನು ಒಮ್ಮೆ ಹೊರಟೆದ್ದ ಮೇಲೆಯೇ ನೀನು ಅವನಿಂದ ಪಾರಾಗಲು ಸಾಧ್ಯ. ಅವನು ಆಳ್ವಿಕೆ ನಡೆಸುವುದು ನಿಶ್ಚಲವಾಗಿರುವ ಮತ್ತು ಹೆಪ್ಪುಗಟ್ಟಿರುವೆಲ್ಲದರ ಮೇಲೆ, ಎಲ್ಲ ನಿಷ್ಕ್ರಿಯ ಮತ್ತು ಜಡವಾಗಿರುವುದರ ಮೇಲೆ.
ಈ ಕಾದಂಬರಿಯಲ್ಲಿ ನಾಲ್ಕೈದು ತಮ್ಮಷ್ಟಕ್ಕೇ ನಿಲ್ಲಬಲ್ಲ ಸತ್ವಯುತ ನೀಳ್ಗತೆಗಳೂ ಕೆಲವು ಅತಿ ಸಣ್ಣಕತೆಗಳೂ ಇವೆ. ನಮ್ಮನ್ನು ದಂಗುಗೊಳಿಸಿ ವಿಚಾರಕ್ಕೆ ಹಚ್ಚುವ ಕಿರು ಪ್ರಬಂಧಗಳಿವೆ. ಭೂಪಟಶಾಸ್ತ್ರ, ಭಾಷೆಗಳು, ಶರೀರ ವಿಜ್ಞಾನ, ಚರಿತ್ರೆ, ಮೊದಲಾದವುಗಳ ಬಗ್ಗೆ ಆಳವಾದ ಹೊಳಹುಗಳಿವೆ. ಹಾಗಿದ್ದೂ ಈ ಕಾದಂಬರಿ ಒಟ್ಟಾರೆಯಾಗಿ ಏನನ್ನು ಹೇಳಲೆತ್ನಿಸುತ್ತಿದೆ, ಅದನ್ನು ಸಂಗ್ರಹವಾಗಿ ಹೇಗೆ ಹೇಳುವುದು? ಎಂಬಂಥ ಪ್ರಶ್ನೆಗಳಿಗೆ ಉತ್ತರ ಸಿಗುವುದು ಕಷ್ಟ. ಗೊತ್ತಿರುವ ಸಾಮಾಜಿಕ ಸಾಂಸ್ಕೃತಿಕ ಮಸೂರಗಳಿಂದ ಇದನ್ನು ಸೀಳಿನೋಡಿ ಸಿದ್ಧಮಾದರಿಯ ವಿಮರ್ಶೆಯ ಚೌಕಟ್ಟುಗಳಲ್ಲಿ ಹಿಡಿದಿಡುವುದು ಸಾಧ್ಯವಿಲ್ಲ. European Novel ಎಂಬ ಮೂಲಮಾದರಿಯು ಇಂಥ ಗ್ರಹಿಕೆಯನ್ನು ಎದುರಿಸಿ ನಿಂತು ಬಹುಕಾಲವಾಯಿತು.
ಓಲ್ಗಾ ಟೊಕಾರ್ಚುಕ್ ಒಂದು ಕಡೆ ತಮ್ಮ ಈ ಕಾದಂಬರಿಯ ಕುರಿತು, ಇದನ್ನು ನಾನು ಒಂದು “constellation novel” ಆಗಿರಲಿ ಎಂಬ ಆಶಯದೊಂದಿಗೆ ಬರೆದೆ, ಎಂದು ಹೇಳುತ್ತಾರೆ. ಎಂದರೆ, ನಾವು ಮಹಡಿಯ ಮೇಲೆ ಹತ್ತಿ ನಿಂತಾಗ ನಮಗೆ ಲೆಕ್ಕವಿಲ್ಲದಷ್ಟು ಮಿನುಗುವ ನಕ್ಷತ್ರಗಳು, ಕೆಲವು ಗ್ರಹಗಳು ಕಾಣುತ್ತವಷ್ಟೇ. ಹಲವು ನಕ್ಷತ್ರಮಂಡಲಗಳನ್ನೂ ಗುರುತಿಸುತ್ತೇವೆ. ಆದರೆ, ಅಸಂಖ್ಯ ನಕ್ಷತ್ರಗಳು ಪ್ರತಿಯೊಂದೂ ಸ್ವತಂತ್ರವಾಗಿ ತಮ್ಮಷ್ಟಕ್ಕೆ ತಾವು ಹರಡಿಕೊಂಡಿರುತ್ತವೆ. ಅವುಗಳ ಯಾದೃಚ್ಛಿಕ ಹರವಿನಲ್ಲಿ ಸುಸಂಗತ ವಿನ್ಯಾಸಗಳನ್ನು ಕಂಡುಕೊಂಡು ಅವಕ್ಕೆ ಹೆಸರುಗಳನ್ನು ಕೊಟ್ಟು ಕತೆಗಳನ್ನು ಆರೋಪಿಸುವುದು ನಾವು. ಹಾಗೆಯೇ ಲೆಕ್ಕವಿಲ್ಲದಷ್ಟು ಕಲ್ಪನೆಗಳು ಹರಡಿಕೊಂಡಿರುತ್ತವೆ. ಅವುಗಳಲ್ಲಿ ಕೆಲವನ್ನಾದರೂ ಹೊಳೆಯುವಂತೆ ಮಾಡುವುದು ಕಾದಂಬರಿಕಾರರ ಕೆಲಸ. ಆ ಹೊಳಪಿನ ಚುಕ್ಕೆಗಳಲ್ಲಿ ನಕ್ಷತ್ರಪುಂಜಗಳನ್ನು ಕಂಡುಕೊಳ್ಳುವುದು ಓದುಗರ ಕೆಲಸ. ಒಂದಷ್ಟು ಓದುಗರಿಗಾದರೂ ಹಾಗಾಗಿದ್ದಲ್ಲಿ ಅದೇ ಈ ಕಾದಂಬರಿಯ ಸಾರ್ಥಕತೆ ಎಂದು ಟೊಕಾರ್ಚುಕ್ ಅವರ ನಂಬಿಕೆ.
ನನಗಂತೂ ಪ್ರತಿ ಸಲ ಈ ಕಾದಂಬರಿಯ ಯಾವುದೇ ಭಾಗವನ್ನು ಓದಿದಾಗಲೂ ಹೇಳಲಾಗದ ಹಿಗ್ಗು ಉಂಟಾಗುತ್ತದೆ.
ಒಂದು ರೀತಿ ಚೆನ್ನಾಗಿದೆ. ನನಗನ್ನಿಸುವುದು, ಬದುಕಿನ ಬೇರೆ ಬೇರೆ ಮಗ್ಗುಲುಗಳು, ಸಂಗತಿಗಳು, ಹೊಳವುಗಳು ಇವೆಲ್ಲ ಎಲ್ಲ (ಒಳ್ಳೆಯ) ಕೃತಿಗಳಲ್ಲಿಯೂ ಉದ್ದೇಶಪೂರ್ವಕವಾಗಿಯೋ ಅಥವಾ ಅಲ್ಲದೆಯೋ ಬಂದೇ ಬರುತ್ತವೆ. ಅವಿಲ್ಲದೆ ಕೃತಿಯು ಅಸ್ಥಿಪಂಜರ ಮಾತ್ರ. ನಿಮ್ಮ ಈ ಮೇಲಿನ ಪರಿಚಯದಲ್ಲಿ ಕಾಣಿಸಿದ ತುಣುಕುತುಣುಕಾದ, ಆಗಸದ ಹಂಚಿ ಹರಡಿದ ಚುಕ್ಕಿಗಳಂತೆ, ಓದುಗಣ್ಣುಗಳ ಕಲ್ಪನೆಗೆ ದಕ್ಕಿದ ಚಿತ್ರ ಮೂಡಿಸುವ ಹರಹಿನಂತಹ ಬರೆವಣಿಗೆಯಲ್ಲಿ ಅವಕ್ಕೆ ನಿರ್ದಿಷ್ಟ ಸೂತ್ರತೆ ಇಲ್ಲದಿರುವಂತಹ ಹಂದರ, ತಂತ್ರ ಎಂಬಂತಹ ಅರ್ಥ ನನಗೆ ಮೂಡಿದ್ದು. ಅದನ್ನು ಗಮನಿಸಿದರೆ ನನಗೆ ಅನಿಸುವ ಮಟ್ಟಿಗೆ ಸಾಹಿತ್ಯದ ಭಾಗವಾಗಿ ಬರುವ ಸೂತ್ರತೆಯಿರದೇ ಅವೆಲ್ಲ ಒಕ್ಕಣಿಕೆಗಳು ಓದುಗನ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲಲು ಸಾಧ್ಯವೇ, ಸುಲಭವೇ ಎಂಬುದು ಸಂದೇಹ. ಹಾಗೆ ಮಾಡಬೇಕಾದರೆ ಅದರ ಫಾರ್ಮಿನಲ್ಲಿ ಎದ್ದುಕಾಣುವ ಅಂಶಗಳನ್ನು ತರಬೇಕಾಗುತ್ತದೆ. ಆ ಕೃತಿಯನ್ನು ಓದದೇ ನನಗೆ ಹೆಚ್ಚು ಬರೆಯಲು ಅಧಿಕಾರ ಕಾಣೆ. ನಿಮಗೆ ಏನಾದರೂ ಸ್ಪಷ್ಟತೆ ಕೊಡುವ ಸಾಧ್ಯತೆ ಇದ್ದರೆ ನೋಡಿ. (ಡಿಜಿಟಲ್ ಭಾಷೆಯ ಅಮೆನ್ ಇತ್ಯಾದಿ ಇಷ್ಟವಾದುವು..)
ಸಣ್ಣಾತಿಸಣ್ಣ ಎಂಬ ಪದ ನೋಡಿದೆ. ಕನ್ನಡ ಸಂಸ್ಕೃತಗಳ ಹಿತಕರವಲ್ಲದ ಸಮಾಹಾರವಾಯಿತು. ರೂಢಿಯಲ್ಲಿ ಇರುವುದೂ ಕಾಣಲಿಲ್ಲ.