ದನಿಯೆತ್ತಿ ಒಮ್ಮೊಮ್ಮೆ, ಆಕ್ಷೇಪಣೆಗೊಳಗಾಗಿ ಕೆಲವರಿಂದಲಾದರೂ
ನಿಸ್ಸೀಮ್ ಇಝೀಕೀಲ್ರ ಎರಡು ಕವಿತೆಗಳು ಕನ್ನಡದಲ್ಲಿ
ನಿಸ್ಸೀಮ್ ಇಝೀಕೀಲ್ (16 ಡಿಸೆಂಬರ್ 1924 - 9 ಜನೆವರಿ 2004) ಅವರನ್ನು ಸ್ವತಂತ್ರ ಭಾರತದ ಇಂಗ್ಲಿಷ್ ಕವಿತೆಯ ಜನಕ ಎಂದು ಪರಿಗಣಿಸಲಾಗುತ್ತದೆ. ಅವರು "ಬೆನೆ ಇಸ್ರೇಲ್" (ಇಸ್ರೇಲಿನ ಪುತ್ರರು) ಎಂದು ಗುರುತಿಸಲಾಗುವ ಮುಂಬೈನ ಯಹೂದಿ ಸಮುದಾಯಕ್ಕೆ ಸೇರಿದವರು. ಇಝೀಕೀಲ್ ಆಧುನಿಕ ಭಾರತದ ಸಾಹಿತ್ಯಿಕ ಚರಿತ್ರೆಯಲ್ಲಿ ಮಹತ್ವದ ಸ್ಥಾನವನ್ನು ಪಡೆದಿದ್ದಾರೆ. ವಸ್ತುವಿನ ಆಯ್ಕೆ ಮತ್ತು ಭಾಷೆಯ ಪ್ರಯೋಗ ಎರಡರಲ್ಲೂ ಮೇಲ್ನೋಟಕ್ಕೆ ಸರಳವೆನ್ನಿಸುವ ಅವರ ಬಿಗಿಬಂಧದ ಕವಿತೆಗಳು ಗಹನವಾದುದೇನನ್ನೋ ಹುಡುಕುತ್ತಿರುತ್ತವೆ.
ಇತ್ತೀಚೆಗೆ ನಮ್ಮ ಕಣ್ಸೆಳೆದ ಅವರ ಕವಿತೆಗಳಲ್ಲಿ ಎರಡನ್ನು ಸಂಕೇತ ಪಾಟೀಲ ಕನ್ನಡಕ್ಕೆ ಅನುವಾದಿಸಿದ್ದಾರೆ.

ಎರಡೂ ಕವಿತೆಗಳಲ್ಲಿ ಕೆಲವು ಸಾಮಾನ್ಯ ಹಾಗೂ ಸಾರ್ವತ್ರಿಕ themeಗಳನ್ನು ಓದುಗರು ಗಮನಿಸಬಹುದು. ಮಾನವತಾವಾದಿಯಾಗಿದ್ದ ಇಝೀಕೀಲ್ ತಮ್ಮ ನಂಬಿಕೆಯನ್ನು ಕುರಿತು ಒಂದೆಡೆ ಈ ರೀತಿ ಹೇಳಿದ್ದಾರೆ:
ನಾನು ಯಾವುದೇ ಸಾಂಪ್ರದಾಯಿಕ ಅರ್ಥದಲ್ಲಿ ಧಾರ್ಮಿಕ ಅಥವಾ ಕನಿಷ್ಟ ಪಕ್ಷ ನೈತಿಕ ವ್ಯಕ್ತಿಯೂ ಅಲ್ಲ. ಆದರೂ ಒಂದಷ್ಟು ರೀತಿಗಳಲ್ಲಿ ಯಾವಾಗಲೂ ನಾನು ಧಾರ್ಮಿಕ ಮತ್ತು ನೈತಿಕ ಎಂದು ಭಾವಿಸಿದ್ದೇನೆ. ಈ ಎರಡು ಹೇಳಿಕೆಗಳ ನಡುವಿನ ಅಂತರವೇ ನನ್ನ ಕಾವ್ಯದ ಅಸ್ತಿತ್ವದ ಹರವು.
ಅಂತೆಯೇ ತಮ್ಮ ಹಲವು ಪದ್ಯಗಳಲ್ಲಿ ಅವರು ದೈವಿಕತೆ, ಶ್ರದ್ಧೆ, ಅಧ್ಯಾತ್ಮ ಮೊದಲಾದ ವಸ್ತುಗಳನ್ನು ಪರಿಶೀಲಿಸಿದ್ದಾರೆ.
ಕವಿಯ ಮರಣಾನಂತರ ಅವರ ಪತ್ರಗಳಲ್ಲಿ ಸಿಕ್ಕ ಕವಿತೆ The Second Candle
ಎರಡನೆಯ ಮೋಂಬತ್ತಿ
ಎರಡನೆಯ ಮೋಂಬತ್ತಿ ಯಾತಕ್ಕೆ, ಕೇಳಿದೆ
ನನ್ನ ಹೆಂಡತಿಯನ್ನು ಒಂದು ಶುಕ್ರವಾರದಿರುಳು
ಇರು, ಅವು ಬೆಳಗುವತನಕ ಪ್ರಾರ್ಥನೆ ಮುಗಿವನಕ, ಅವಳೆಂದಳು.
ಆಮೇಲೆ ತಿರುಗಿದಳು ನನ್ನತ್ತ ಜಾಣಸಂಚಿನ ನಗೆಯೊಂದ ಬೀರುತ್ತ:
ಮೊದಲ ಮೋಂಬತ್ತಿ ದೇವರ ನಿತ್ಯದ ಕೊಡುಗೆಗಳಿಗಾಗಿ,
ಯಾವತ್ತಿನ ಸಂಗತಿಗಳು, ಗೊತ್ತಲ್ಲ, ಬದುಕಿ ಬಾಳುವುದು,
ಉಣ್ಣುವುದು, ಊಡುವುದು, ಒಲವು, ಮಕ್ಕಳು,
ಗೆಳೆಯರು, ಬಂಧುಗಳು, ಪುಸ್ತಕಗಳು, ಹೂವುಗಳು,
ಕುತ್ತು ಕೇಡುಗಳಿಂದ ಬಿಡುಗಡೆ, ಒಟ್ಟಿನಲ್ಲಿ ನಾವು
ದಿನದಿನವೂ ಉಸುರುವ ಅವವೇ ಕತೆಗಳ ಸಲುವಾಗಿ,
ಮತ್ತವೇ ನನಗಂತೂ ಕವಿತೆಗಳೂ ಹೌದು. ತಡೆದಳು,
ನಾನು ಮತ್ತದೇ ಪ್ರಶ್ನೆ ಕೇಳಲೆಂದು.
ಎರಡನೆಯ ಮೋಂಬತ್ತಿ ಯಾತಕ್ಕೆ? ಮತ್ತೆ ಕೇಳಲಿಲ್ಲ , ತಾಳ್ಮೆಯ ಮೌನ ...
ಸರಸರನೆ ಸೇರಿಸಿದಳು ಅತ್ತ ತಿರುಗುವ ಮುನ್ನ
ಎರಡನೆಯ ಮೋಂಬತ್ತಿ ಅಗತ್ಯದ ಒಂದು ಪವಾಡಕ್ಕಾಗಿ
ಒಂದು ವಿಶೇಷ ನೆರವು, ಆ ಒಂದು ತಿರುವು
ಬರಿಯ ದುಡಿಮೆ ಎಂದಿಗೂ ತರಲಾರದ್ದು
ನಾವು ಪಡೆಯಲು ಅರ್ಹರಲ್ಲದ ಆದರೂ ಕೇಳಿಕೊಂಡರೆ
ಸಿಕ್ಕರೂ ಸಿಗಬಹುದಾದ ಉಡುಗೊರೆಯದು.
ಬೇಕಾದರೆ ಅದನ್ನು ಅನುಗ್ರಹವೆನ್ನು, ಗಾಳಿಗುದುರಿದ ಪ್ರಾಪ್ತಿಯೆನ್ನು,
ಬೋನಸ್, ತುಟ್ಟಿಭತ್ಯೆ, ಬಡ್ತಿಗೂ ಹೆಚ್ಚಿನದು
ಯಾವುದೋ ಹೊಸ ಆಯಾಮ, ದಿವ್ಯದರ್ಶನ.
ಎರಡನೆಯ ಮೋಂಬತ್ತಿ ಇರುವುದು ಅದಕ್ಕಾಗಿ,
ಈಗ ಗೊತ್ತಾಯಿತಲ್ಲ.
ಅವಳು ನನ್ನುತ್ತರಕ್ಕಾಗಿ ಕಾಯಲಿಲ್ಲ. ನಾನು ಅಲ್ಲಿ ಬೆಳಗುತ್ತಿದ್ದ
ಎರಡು ಮೋಂಬತ್ತಿಗಳನ್ನು ದಿಟ್ಟಿಸುತ್ತ
ತನ್ನ ದೈವದೊಂದಿಗೆ ಇಷ್ಟು ಸರಳವಾಗಿ ವ್ಯವಹರಿಸುವ
ಆ ನಂಬುಗೆಯ ಕುರಿತು ಕೌತುಕಪಟ್ಟೆ.

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ Latter-Day Psalms (1982) ಸಂಕಲನದ ನಂತರ ಬರೆದ ಕೊನೆಯ ಕವಿತೆಗಳಲ್ಲೊಂದಾದ Blessings
ಹಾರಯಿಕೆಗಳು
೧
ನೀವು ವಿವೇಕಯುತ ಪುಸ್ತಕಗಳನ್ನು
ಕಾಮಿಕ್ಕುಗಳನ್ನೋದುವ ಲಹರಿಯಲ್ಲೂ
ಕಾಮಿಕ್ಕುಗಳನ್ನು ವಿವೇಕದಿಂದಲೂ
ಓದುವಂತಾಗಲಿ.
೨
ಮನೆಯ ನಲ್ಲಿ ಸೋರುವಾಗ
ಇಡೀ ಶಹರಿನ ನೀರಿನಾಕರದ
ಹನಿಹನಿಗೂ ನೀವೇ ತೆರುವಂತೆ
ಕಳವಳವಾಗಲಿ.
೩
ಮತ್ತರಾಗಿರಿ ಆಗೀಗ
ಜಿನ್ನು ವ್ಹಿಸ್ಕಿಗಳಿಂದಲ್ಲ. ಪ್ರಭುವು
ನಿಮ್ಮಳವಿಗೆ ಮೀರಿದ ಉದ್ದೇಶಪೂರ್ತಿಗಳಿಗೆ
ಬಳಸಿಕೊಳ್ಳುವಂತಾಗಲಿ ನಿಮ್ಮ
ಗೊತ್ತಾಗಲಿ ನಿಮಗೆ ಉನ್ಮತ್ತತೆಯು
ನಿಜದ ಅರ್ಥದಲಿ.
೪
ನೀವು ಯಾವುದನು ಅನುಸರಿಸಿದರೂ
ಸುಖವ ಬೆಂಬತ್ತದಿರಿ
ನಿಮ್ಮ ವಾಡಿಕೆಯ ಕಸುಬುಗಳಲೇ
ಅದು ಹೊಳಲಾಗಿ
ಪದೇಪದೇ ಎದುರಾಗಲಿ.
೫
ನೀವು ನಿರಪೇಕ್ಷವನ್ನು
ಪ್ರಾರ್ಥಿಸಿದಾಗಲೆಲ್ಲ
ಎಲ್ಲ ಸಾಪೇಕ್ಷಗಳನ್ನೂ
ನೆನೆಯುವಂತಾಗಲಿ.
೬
ವೇಳೆಯನು ಮರೆಯದಿರಿ
ಯಾವುದಕ್ಕೂ ಹೆಚ್ಚು ವೇಳೆಯಿಲ್ಲ
ವೇಳೆಯನು ಅನುಭೋಗಿಸಿ
ಎಲ್ಲದಕೂ ಸಾಕಷ್ಟು ವೇಳೆಯಿದೆ.
೭
ನಿಮ್ಮ ಪೂರ್ಣ ಎತ್ತರಕ್ಕೆ
ಸೆಟೆದೆದ್ದು ನಿಂತು
ನಮ್ರತೆಯನು ಕಂಡುಕೊಳ್ಳಿ.
ಅದು ಅಲ್ಲಿರುವುದೇ ಮೇಲು
ಕೆಳಗೆಲ್ಲೋ ಇರುವುದಕ್ಕಿಂತ.
೮
ನಿಮ್ಮ ಏಕಾಂತ
ಸವಿಯಾಗಿರಲಿ
ಸಾಂಗತ್ಯವೂ
ನಿಮಗೆ ರುಚಿಸಲಿ
ಹೊಟ್ಟೆ ಹಸಿದಾಗಿನ
ಊಟದಂತೆ.
ಎಲ್ಲದಕು ಹಸಿವೇ ಮಹತ್ತಿನದು.
೯
ದೇವರಿಂದ ನಿಮ್ಮನ್ನು ಪ್ರತ್ಯೇಕಿಸಿ
ದೂರ ಸರಿದು ನೀವು
ಅವನ ಕೊರತೆ ಮನಗಂಡಾಗ
ಸಾಂತ್ವನ ಕಳಿಸಲಿ
ಅವ ನಿಮ್ಮ ಬಳಿ.
೧೦
ನಿಮ್ಮ ಪಂಥ
ನಿಗೂಢ ಸಿದ್ಧಾಂತಗಳು
ಸಾಧಾರಣ ಅನುಭವಗಳು
ಅರಿವು ಅಜ್ಞಾನ
ಮತ್ತು ಗಾಢನಂಬಿಕೆಗಳು ಇವೆಲ್ಲ
ತಣ್ಣನೆಯ ಎದೆಯೊಟ್ಟಿಗೆ ಕೂಡಿ
ಬಾಳದಿರಲಿ.
೧೧
ಮರಗಿಡಗಳೆಡೆಯಲ್ಲಿ ಇರುವಂತೆ
ದೇವರು ಅನುಗ್ರಹಿಸಲಿ.
ವಾಸ್ತವದಲ್ಲಾಗದಿದ್ದರೆ ಕಲ್ಪನೆಯಲ್ಲಾದರೂ
ಎಷ್ಟೊಂದು ಬಗೆಬಗೆಯ
ಅದೆಷ್ಟು ಚೆಂದದ ಮರಗಳೆಂದರೆ
ಅವುಗಳ ನಡುವಿರುವ ನೀವು
ನಿಮ್ಮನ್ನು ಪ್ರೀತಿಸಿಕೊಳ್ಳದೇ
ಇರಲಾರಿರಿ.
೧೨
ತಾವಿರುವ ಕಾಲದ ಉದ್ಧಾರವೇ
ಹಣೆಬರೆಹವಾಗಿರುವ
ನಿಮ್ಮ ತಲೆಮಾರಿನ ಆ ೩೬
ನೀತಿಯುತರಲ್ಲೊಬ್ಬರಂತಾಗಲು ಯತ್ನಿಸಿ
ಕಡೆಗೆ ಅದರಿಂದ ನಿಮ್ಮ ಉದ್ಧಾರವಷ್ಟೇ
ಆದರೂ ಕೂಡ.
೧೩
ದನಿಯೆತ್ತಿ ಒಮ್ಮೊಮ್ಮೆ,
ಆಕ್ಷೇಪಣೆಗೊಳಗಾಗಿ
ಕೆಲವರಿಂದಲಾದರೂ.
ಹಾಗೇ ನೆನಪಿಟ್ಟುಕೊಳ್ಳಿ
ಬೇರೆಯವರು ಇದೇ ನಿಯಮ
ಪಾಲಿಸಿದಾಗ ಆಕ್ಷೇಪಿಸದೇ
ಇರುವುದನ್ನು.
೧೪
ನೀವೊಬ್ಬ
ಕವಿ ಕಲಾವಿದ ವಿದ್ವಾಂಸ
ಚಿಂತಕ ಅಥವಾ ಸಂಗೀತಗಾರರಾಗಲೆಂಬ ಹಾರಯಿಕೆಯಿದೆ
ನಿಮ್ಮ ಬದುಕಿನ ಹೊರತಾಗಿ
ಮಹತ್ವದ್ದೇನನ್ನೂ ನೀವು ಸೃಷ್ಟಿಸದಿದ್ದರೂ,
ಬದುಕನ್ನೇ ಆದರೂ ಸೃಜಿಸಲೇಬೇಕಲ್ಲ.
ಪದ್ಯಗಳು ಮತ್ತು ಅನುವಾದ ಎರಡೂ ಚನ್ನಾಗಿವೆ. ಅಭಿನಂದನೆಗಳು
ಒಳ್ಳೆಯ ಆರಂಭ. ಶುಭವಾಗಲಿ.
ನೀನೊಲಿದರೆ ಕೊರಡು ಕೊನರುವುದಯ್ಯ ನೀನೊಲಿದರೆ ಬರಡು ಹಯನಹುದಯ್ಯ...
ಆ ಅದಾರ ಒಲುಮೆಯೋ, ನಿಮ್ಮಿಂದ ಕೊನರಿದ ಇದು ಬೆಳೆದು ಹೆಮ್ಮರವಾಗಲಿ.