ಶ್ರುತಿ ಬಿ. ಆರ್. ಅವರ ‘ಎಲ್ಲೆಗಳ ದಾಟಿದವಳು’ ಕಥಾಸಂಕಲನದ ಬಗ್ಗೆ ಸಂಕೇತ ಪಾಟೀಲ ತಮ್ಮ ಅನ್ನಿಸಿಕೆಗಳನ್ನು ಬರೆದಿದ್ದಾರೆ.
‘ಎಲ್ಲೆಗಳ ದಾಟಿದವಳು’ ಎಂಬ ಶ್ರುತಿ ಬಿ. ಆರ್. ಅವರ ಮೊದಲ ಕಥಾಸಂಕಲನದ ಕತೆಗಳಲ್ಲಿ ಸಮಕಾಲೀನ ವಿದ್ಯಮಾನಗಳ ಸಂದರ್ಭದಲ್ಲಿ ಮನುಷ್ಯ ಒಮ್ಮೆಲೇ ಎದುರಿಸಬೇಕಾದ ಹೊಸ ಸವಾಲುಗಳು, ಅವುಗಳಿಂದ ಉಂಟಾಗುವ ಸಂಬಂಧಗಳಲ್ಲಿನ ಪಲ್ಲಟಗಳನ್ನು ಸೆರೆಹಿಡಿಯುವ ಪ್ರಯತ್ನ ಕಾಣುತ್ತದೆ.
'ದೇವರು ಬಂತು’ ಕತೆಯಲ್ಲಿ ಬೇಗನೆ ಹಣ ಗಳಿಸುವ ಸಾಲಬಡ್ಡಿಯಾಟದ ಸ್ಕೀಮ್ನ ಕೂಪಕ್ಕೆ ಬಿದ್ದ ನಿರೂಪಕಿಯ ಗೆಳತಿ ಗೀತಾಳನ್ನು ಅವಳಿಗಿಂತ ಹೆಚ್ಚು ವಿವೇಚನೆಯಿರುವ, ಪ್ರಶ್ನಿಸದೇ ಒಪ್ಪದಿರುವ ನಿರೂಪಕಿಯೇ “ದೇವಿ”ಯ ಹತ್ತಿರ ಪರಿಹಾರಕ್ಕೆ ಕರೆದುಕೊಂಡು ಹೋಗುತ್ತಾಳೆ. ಒಂದು ಕಡೆ ಸರ್ಕಾರಗಳು, ಕಾರ್ಪೋರೇಟ್ ಸಂಸ್ಥೆಗಳು ಸಂಘಟಿತವಾಗಿ ಸಮಾಜವನ್ನು ಕೊಳ್ಳೆಹೊಡೆಯುತ್ತಿದ್ದರೆ ಇನ್ನೊಂದೆಡೆ ಅಸಂಘಟಿತ ವಲಯದಲ್ಲಿ ಹೆಚ್ಚಿನ ಬಡ್ಡಿಯ ಸಾಲಗಳು, ಚೀಟಿ ವ್ಯವಹಾರಗಳು; ಜ್ಯೋತಿಷ್ಯ, ಮಾಟಮಂತ್ರಗಳು ಇಂದಿಗೂ ಬೇರೂರಿವೆ. ಈ ಮಾಹಿತಿಯುಗದಲ್ಲಿಯೂ ಫೇಸ್ಬುಕ್ನಂಥಲ್ಲಿ ವಶೀಕರಣ, ಇಂದ್ರಜಾಲದ ಜಾಹೀರಾತುಗಳು ಹರಿದಾಡುತ್ತವೆ. ಹೀಗಾಗಿ ನಿರೂಪಕಿಯು ಗೀತಾಳಿಗೆ ಸೂಚಿಸುವ ಪರಿಹಾರದಲ್ಲಿ ಒಂದು ಆಸಕ್ತಿಕರ ವಿಪರ್ಯಾಸವಿದೆ. ಆದರೆ ಈ ಪೂರ್ವಪ್ರಮೇಯವನ್ನು ಕತೆಯಲ್ಲಿ ಪೂರ್ತಿಯಾಗಿ ದುಡಿಸಿಕೊಳ್ಳಲಾಗಿಲ್ಲ. ದೇವಿ ಬರುವ ಸನ್ನಿವೇಶದ ಚಿತ್ರಣ ಕಟ್ಟಿಕೊಡುತ್ತಿದ್ದಂತೆಯೇ ತಾದಾತ್ಮ್ಯ ತಪ್ಪಿದಂತಾಗಿ ಕತೆ ಮುಗಿದುಬಿಡುತ್ತದೆ.
ಕೋವಿಡ್ ಮಹಾಮಾರಿಯ ಕಾಲದಲ್ಲಿ, ವಿಶೇಷವಾಗಿ ದೊಡ್ಡ ಊರುಗಳಲ್ಲಿ, ಮನುಷ್ಯನ ದಿನಚರಿಯೇ ಮುರಿದುಬಿದ್ದು ವಾರಗಟ್ಟಲೇ ಮನೆಯಾಚೆ ಹೆಜ್ಜೆಯೂ ಇಡದಂತಾಗಿದ್ದ ಕಾಲದಲ್ಲಿ ಮತ್ತೆ ಹೊಸದಾಗುತ್ತಿದ್ದ ಪರಿಸರದಲ್ಲಿ ಉಳಿದ ಜೀವಜಂತುಗಳು ನಿರಾತಂಕವಾಗಿ ಬಾಳುವೆ ನಡೆಸಲು ಸಾಧ್ಯವಾಗಿತ್ತು ಎಂಬಂಥ ಮಾತುಗಳನ್ನು ನಾವು ಕೇಳಿದ್ದೇವೆ. ಹಾಗಿದ್ದೂ ಮನುಷ್ಯವಲಯದ ಹಾಗೂ ಸ್ವಲ್ಪಮಟ್ಟಿಗಾದರೂ ಮನುಷ್ಯಾವಲಂಬಿಗಳಾದ ನಾಯಿಯಂಥ ಪ್ರಾಣಿಗಳೂ ಹಲಬಗೆಯ ಕಷ್ಟಗಳಿಗೆ ಸಿಲುಕಬೇಕಾಗಿಬಂದಿತ್ತು. ಸಾಕುನಾಯಿಗಳಿಗೋ ಅಕಾರಣ ಗೃಹಬಂಧನ; ಇನ್ನು ಬೀದಿನಾಯಿಗಳಿಗೆ ಪುಟ್ಟಪೂರಾ ಉಪವಾಸ. ‘ದ್ಯಾಮವ್ವನೂ… ಸತ್ಯನಾರಾಯಣನೂ…’ ಕತೆ ಇಂಥ ಸಂದರ್ಭದಲ್ಲಿ ಮನುಷ್ಯ-ಮನುಷ್ಯ ಮತ್ತು ಮತ್ತು ಮನುಷ್ಯ-ಇತರ ಪ್ರಾಣಿಗಳ ನಡುವಿನ ಮಾನವೀಯತೆಯನ್ನು ಕುರಿತಾಗಿದೆ. ಜೊತೆಗೇ ಇಂದಿಗೂ ಮತ್ತೆಮತ್ತೆ ಭುಗಿಲೇಳುವ ಸಸ್ಯಾಹಾರ-ಮಾಂಸಾಹಾರದ ವಿವಾದದ ಎಳೆಯೂ ಕತೆಯಲ್ಲಿ ಸೇರಿಕೊಂಡಿದೆ. ಪಾತ್ರಗಳ ಧೋರಣೆ ಬದಲಾದರೂ ಪರಿಸ್ಥಿತಿಯ ವೈಪರೀತ್ಯವು ಅಂತಃಕರಣವು ನೆಲೆಗೊಳ್ಳಲು ಬಿಡದಿದ್ದುದನ್ನು ಕತೆ ತೋರಿಸುತ್ತದೆ. ಇವೆರಡೂ ಕತೆಗಳಲ್ಲೂ ನಿರೂಪಣೆಯು ವಿದ್ಯಮಾನದ ಆಳಕ್ಕಿಳಿಯದೇ ಅದರ ಸುತ್ತಲೂ ಸುತ್ತುತ್ತಲೇ ಉಳಿದು ಪರಿಸ್ಥಿತಿಯ ವ್ಯಂಗ್ಯ ಮತ್ತು ಪಾತ್ರಗಳ ಅಸಹಾಯಕತೆಯನ್ನು ಸಂಪೂರ್ಣವಾಗಿ ಒಡಮೂಡಿಸುವಲ್ಲಿ ವಿಫಲವಾಗಿವೆ.
ಈ ಸಂಕಲನದ ‘ಎಲ್ಲೆಗಳ ದಾಟಿದವಳು’, ‘ದರಕಾಸ್ತು’ ಮತ್ತು ‘ಧಾರೆ' ಇವು ಗಟ್ಟಿಯಾದ ಕತೆಗಳಾಗುವ ಸಾಧ್ಯತೆಯುಳ್ಳವು. ಮೊಮ್ಮಗಳು ಮತ್ತು ಅಜ್ಜಿಯ ಸಾಮಾನ್ಯ ದಿನನಿತ್ಯದ ಸಲ್ಲಾಪದೊಂದಿಗೆ ನಿಧಾನವಾಗಿ ಶುರುವಾಗುವ ‘ಎಲ್ಲೆಗಳ ದಾಟಿದವಳು’ ಕತೆಯು ಮುಂದೆ ತೀವ್ರತೆಯನ್ನೂ ಆಳವನ್ನೂ ಪಡೆದುಕೊಂಡು ಓದುಗರನ್ನು ಒಳಸೆಳೆಯುತ್ತದೆ. ಇಲ್ಲಿಯೂ ಗಂಡಾಳ್ವಿಕೆ, ಮುಸಲ್ಮಾನರ ಬಗೆಗಿನ ಅಸಹನೆಯಂಥ ಪ್ರಚಲಿತ ಚರ್ಚೆಗಳು ಕತೆಯ ಹುರುಳಾಗಿದ್ದರೂ ಅವುಗಳ ನಿರ್ವಹಣೆ ಚೆನ್ನಾಗಿದೆ. “ಅಯ್ಯೋ, ಇಷ್ಟೇನಾ ಯಾವ್ದೋ ಸುಲ್ತಾನ ಯಾವ್ದೋ ಶತಮಾನದಲ್ಲಿ ಯುದ್ಧ ಮಾಡಿದ್ಕೆ ಇನ್ನ್ಯಾರೋ ಸಂಬಂದ ಇಲ್ದೇ ಇರೋ ಸಾಬ್ರುನ್ನ ಕಂಡ್ರೆ ಆಗಲ್ವಾ, ವಿಚಿತ್ರ ನಿಮ್ಮ ತಾತ,” ಎಂಬ ಮೊಮ್ಮಗಳ ಪ್ರಶ್ನೆ, ಮತ್ತು ಅದಕ್ಕೆ “ನಿನಗೇನೇ ಗೊತ್ತು, ಅಷ್ಟೊಂದು ಶ್ರೀಮಂತರಾಗಿದ್ದೋರಿಗೆ ಇರೋಕೆ ಮನೇನೂ ಇಲ್ದೇ, ಕಾಣ್ದೇ ಕೇಳ್ದೇ ಇರೋ ಊರಲ್ಲಿ ಹೊಸದಾಗಿ ವ್ಯಾಪಾರ ಶುರುಮಾಡಕ್ಕೆ ಎಷ್ಟು ಕಷ್ಟ ಆಗಿರಬೇಡ, ಅದಕ್ಕೆ ಅವರಿಗೆ ಸಾಬ್ರು ಕಂಡ್ರೆ ಆಗಲ್ಲ. ಆ ಯುದ್ಧ ಆಗ್ದೆ ಇದ್ದಿದ್ರೆ ಈಗ ನೀನು ಆ ಶ್ರೀಮಂತಿಕೆ ಎಲ್ಲಾ ನೋಡ್ಬೋದಿತ್ತಾ?” ಎಂಬ ಅಜ್ಜಿಯ ಉತ್ತರ; ಇಂದು ಈ ಸಮಸ್ಯೆಯ ಮೂಲಕ್ಕೆ ಸಂಬಂಧಿಸಿದ ಬಹಳಷ್ಟು ವಾದಗಳ ತಿರುಳನ್ನು ಈ ಎರಡೇ ಮಾತುಗಳಲ್ಲಿ ಕಾಣಬಹುದು. ಕತೆಯಲ್ಲಿ ‘ಎಲ್ಲೆ ಮೀರಿದ’ ದೊಡ್ಡಮ್ಮನ ಪಾತ್ರವು ಸಶಕ್ತವಾಗಿ ಚಿತ್ರಿತವಾಗಿದೆ. ಅದುವರೆಗೂ ಪರಿಣಾಮಕಾರಿಯಾಗಿದ್ದ ಕತೆ ಕೊನೆಯಲ್ಲಿ ಅನಾವಶ್ಯಕವಾಗಿ ಹೆಚ್ಚು ವಿವರಣಾತ್ಮಕವೂ ಭಾವುಕವೂ ಆಗಿ ಹದ ತಪ್ಪಿದಂತಾಗುತ್ತದೆ.
‘ದರಕಾಸ್ತು’ ಕತೆಯಲ್ಲಿ ಅಧಿಕಾರಶಾಹಿ ಮತ್ತು ಸಮಾಜ ಒಟ್ಟಾಗಿ ವ್ಯಕ್ತಿಯೊಬ್ಬನನ್ನು ವ್ಯವಸ್ಥಿತವಾಗಿ ಅಸಹಾಯಕತೆಯ ಕೂಪಕ್ಕೆ ತಳ್ಳುವುದನ್ನು ನೋಡುತ್ತೇವೆ. ಕತೆಯ ವಸ್ತುವು ಹೊಸದಲ್ಲದಿದ್ದರೂ ವಿವರಗಳ ನಿಖರತೆಯೂ ಭಾಷೆಯ ಹದವೂ ನಿರೂಪಣೆಯ ನಿರ್ಲಿಪ್ತತೆಯೂ ಅದನ್ನೊಂದು ಒಳ್ಳೆಯ ಕತೆಯಾಗಿಸಿವೆ. ಅದೇ ರೀತಿ ‘ಧಾರೆ’ ಕತೆಯಲ್ಲಿ ಸುನಂದಾಳ ಮತ್ತು ಅದಕ್ಕೂ ಹೆಚ್ಚಾಗಿ ಅವಳ ಗಂಡ ಮಲ್ಲಿಕಾರ್ಜುನಯ್ಯನ ಪಾತ್ರದ ಕಟ್ಟುವಿಕೆ ಆಸಕ್ತಿಕರವಾಗಿದೆ.
ಈ ಕತೆಗಳ ಹೊರತಾಗಿ, ‘ಶಕುನದ ಹಕ್ಕಿ’, ‘ಅನಾಮಧೇಯ' ಮೊದಲಾದುವು ಜನಪ್ರಿಯ ಮಾದರಿಯ ಅಥವಾ ಹೆಚ್ಚಿನ ಆಕಾಂಕ್ಷೆಯಿಲ್ಲದ ಸ್ಪಷ್ಟ ಆಶಯವಿಲ್ಲದ ಕತೆಗಳು. ಒಂದು ಕತೆಯು ಅನುಭವದ ಆಳದಿಂದ ಅಥವಾ ನಮ್ಮನ್ನು ಕಾಡುತ್ತಿರುವ ಯಾವುದೋ ಪ್ರಶ್ನೆಯ ಒತ್ತಡದಿಂದ ಬರದಿದ್ದಾಗ ಪ್ರಸಂಗಗಳನ್ನು ಜೋಡಿಸುತ್ತ ಅದನ್ನು ಒತ್ತಾಯದಿಂದ ಕಟ್ಟಿದಂತಾಗಿ ಅಂಥ ಕತೆಗಳ ಅನಿವಾರ್ಯತೆಯ ಕುರಿತು ಪ್ರಶ್ನೆ ಏಳುತ್ತವೆ. ಈ ಸಂಕಲನದಲ್ಲಿ ಕೆಲವು ಒಳ್ಳೆಯ ಕತೆಗಳಾಗಿ ರೂಪುಗೊಂಡಿವೆ ಮತ್ತು ಉಳಿದುವು ಇನ್ನೂ ಆ ಹಾದಿಯಲ್ಲಿವೆ. ಇವೆರಡನ್ನೂ ಸೂಕ್ಷವಾಗಿ ಗಮನಿಸಿದರೆ ಶ್ರುತಿ ಬಿ. ಆರ್. ಅವರು ಮುಂದೆ ಇನ್ನೂ ಒಳ್ಳೆಯ ಕತೆಗಳನ್ನು ಬರೆಯುವ ಸಾಧ್ಯತೆಯಿದೆ.