2018ರಲ್ಲಿ ಪ್ರಕಟವಾಗಿ 2023ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪಡೆದುಕೊಂಡಿದ್ದ ಮಂಜುನಾಯಕ ಚಳ್ಳೂರು ಅವರ ಮೊದಲ ಕಥಾಸಂಕಲನ ಫೂ ಮತ್ತು ಇತರ ಕತೆಗಳು ಸಂಕಲನವನ್ನು ಸಂಕೇತ ಪಾಟೀಲ ವಿಮರ್ಶಿಸಿದ್ದಾರೆ.
ಕತೆಯ ಕಟ್ಟೋಣದ ದೊಡ್ಡ ಕೆಲಸದಲ್ಲಿ ಅದಕ್ಕೆ ಚೆಂದದ ಬಾಗಿಲು ಮಾಡುವ ಪುಟ್ಟ ಕೆಲಸವೂ ಇರುತ್ತದೆ — ಒಂದು ಆಕರ್ಷಕ ಪ್ರವೇಶದ್ವಾರದ ಕೆತ್ತನೆ. ಅಂಥ ಹಲವು ಪ್ರಸಿದ್ಧ ಆರಂಭಿಕ ಸಾಲುಗಳನ್ನು ನಾವು ನೋಡಿದ್ದೇವೆ. ಅವು ಒಮ್ಮೊಮ್ಮೆ ಉದ್ದನೆಯ ನಾಲಗೆ ಚಾಚಿ ಸರಕ್ಕನೆ ನಮ್ಮನ್ನು ಒಳಗೆಳೆದುಕೊಳ್ಳುತ್ತವೆ; ಕತೆಯ ಒಟ್ಟೂ ಪರಿಸರವನ್ನು ಕ್ಲುಪ್ತವಾಗಿ ಕಟ್ಟಿಕೊಡುತ್ತವೆ; ಬಾಗಿಲಲ್ಲೇ ಒಂದು ಕ್ಷಣ ನಿಂತು ಅದರ ಕುಸುರಿಯನ್ನು ಆಸ್ವಾದಿಸುವಂತೆ ಮಾಡುತ್ತವೆ. ಒಟ್ಟಿನಲ್ಲಿ ಒಳ್ಳೆಯ ಕತೆಗಾರರಿಗೆಲ್ಲಾ ತಮ್ಮ ಕತೆಯ ಬಂಧದ ಬಗ್ಗೆ ತೀವ್ರ ಆಸ್ಥೆಯಿರುತ್ತದೆ. ಅಂಥವರು ಕಾಳಜಿಯಿಂದಲೇ ಓದುಗರಿಗೆ ಕತೆಯೊಳಗೆ ಪ್ರವೇಶ ಕಲ್ಪಿಸಿಕೊಡುತ್ತಾರೆ.
“ಅಪ್ಪನ ತಂಗಿ ಜಯತ್ತೆ ಎಂದರೆ ಜೀವ ನನಗೆ. ಅವಳ ಬಾಯಲ್ಲಿ ಕಾಮನಬಿಲ್ಲಿತ್ತು. ಅವಳು ಬಾಯಲ್ಲಿ ನೀರು ತುಂಬಿಕೊಂಡು ಬಿಸಿಲಿಗೆ ಮುಖ ಮಾಡಿ ‘ಫೂ’ ಮಾಡಿದಾಗ ಅದು ಮೂಡುತ್ತಿತ್ತು. ನಾನಾಗ ಚಪ್ಪಾಳೆ ತಟ್ಟುತ್ತಿದೆ.” ಎಂದು ಶುರುವಾಗುತ್ತದೆ ಮಂಜುನಾಯಕ ಚಳ್ಳೂರರ ‘ಫೂ’ ಎಂಬ ಕತೆ. ಗಣಿತದ ಫ್ರ್ಯಾಕ್ಟಲ್ ಎಂಬ ಜ್ಯಾಮಿತೀಯ ಆಕೃತಿಗಳ ಅತ್ಯಂತ ಸಣ್ಣ ಚೂರು ಕೂಡ ಆ ಇಡೀ ಆಕೃತಿಗೆ ಸ್ವಯಂಸದೃಶವಾಗಿದ್ದು ಅದರ ಒಟ್ಟಂದವನ್ನು ಎಲ್ಲಾ ವಿವರಗಳಲ್ಲಿ ತೋರುವಂತೆ ಈ ಸಾಲುಗಳು ಆ ಇಡೀ ಕತೆಯೊಳಗಿನ ಪುಟ್ಟಕತೆಯಾಗಿ ತಮ್ಮಷ್ಟಕ್ಕೇ ಕತೆಯ ಹಲವು ಸಾಧ್ಯತೆಗಳನ್ನು ತೋರುತ್ತವೆ. ಅರೆಗಳಿಗೆ ನಿಂತು ಈ ಪುಟ್ಟಪುಟ್ಟ ಸರಳ ವಾಕ್ಯಗಳ ಜೋಡಣೆಯಲ್ಲಿ ಅಡಗಿದ ಭಾಷೆಯ ಕಸುವಿನ ಬಗ್ಗೆ ಬೆರಗು ಮೂಡಿಸುತ್ತದೆ. ಇವನ್ನು ಬರೆದ ಕತೆಗಾರನ ಕತೆಗಾರಿಕೆಯಲ್ಲಿ ಹೊಸತನವಿರಬಹುದು ಎಂಬ ನಿರೀಕ್ಷೆಯನ್ನೂ ಉದ್ದೀಪಿಸುತ್ತವೆ.
ಇಲ್ಲಿನ ಕತೆಗಳಿಗೆ ಕೊಪ್ಪಳ ಜಿಲ್ಲೆಯ ಹಳ್ಳಿಗಳ ಪರಿಸರದ ಬಾಲ್ಯದ ದಟ್ಟ ಅನುಭವಗಳೇ ಮೂಲದ್ರವ್ಯ. ಪ್ರತಿ ಹೊಸ ಕತೆಗಾರರ ಪ್ರಯಾಣ ಶುರುವಾಗುವುದು ತನ್ನ ಎಳವೆಯ ಅನುಭವಗಳಿಂದಲೇ. ಸೂಕ್ಷ್ಮ ವಿವರಗಳಲ್ಲಿ ಪ್ರತಿಯೊಬ್ಬರ ಬದುಕು ಬೇರೆಬೇರೆಯಾಗಿದ್ದರೂ ಕಥಾದ್ರವ್ಯವಾಗಬಲ್ಲ ಗಾಢ ಅನುಭವಗಳು ಬಹಳಷ್ಟು ಸಲ ಅನನ್ಯವಾಗೇನೂ ಇರುವುದಿಲ್ಲ. ಅನನ್ಯತೆ ಬರುವುದು ನಾವು ಈಗಾಗಲೇ ಕಂಡುಕೇಳಿರುವ ಅನುಭವಗಳಿಗೂ ಇರಬಹುದಾದ ಇನ್ನಷ್ಟು ಮಗ್ಗುಲುಗಳನ್ನು ಹೊಸ ನುಡಿಗಟ್ಟುಗಳಲ್ಲಿ ಹೊಸ ಪ್ರತಿಮೆಗಳಲ್ಲಿ ಹಿಡಿದಿಟ್ಟು ಸಾವಧಾನವಾಗಿ ಕತೆ ಹೇಳುವ ಬಗೆಯಲ್ಲಿ. ಚಳ್ಳೂರರ ಸಂಕಲನದಲ್ಲಿರುವ ಏಳೂ ಕತೆಗಳಲ್ಲಿ ಇಂಥ ಕುಶಲ ಕಸುಬುದಾರಿಕೆ ಕಾಣುತ್ತದೆ. ಬರೆದ ಮೊದಲನೆಯ ಕತೆಯಿಂದಲೇ ಭಾಷೆಯ ಹದ ಮತ್ತು ಕತೆಗೆ ತಕ್ಕುದಾದ ಬಂಧಗಳನ್ನು ಕತೆಗಾರರು ದಕ್ಕಿಸಿಕೊಂಡಿದ್ದಾರೆ.
‘ಫೂ’ ಕತೆಯ ಸನ್ನಿವೇಶ ಗಂಭೀರ ಸಾಹಿತ್ಯಕೃತಿಗಳಿಂದ ಹಿಡಿದು ಜನಪ್ರಿಯ ಸಿನೆಮಾಗಳವರೆಗೆ ನೂರಾರು ಸಲ ಬಂದುಹೋಗಿರುವಂಥದು. ಆದರೂ, ಬಾಯಲ್ಲಿ ಕಾಮನಬಿಲ್ಲು ಇಟ್ಟುಕೊಂಡಿರುವಂಥ ಸೋದರತ್ತೆ ಮತ್ತು ನಿರೂಪಕ ಬಾಲಕನ ಸಂಬಂಧದ ನವಿರು ನಮ್ಮನ್ನು ತಾಕುತ್ತದೆ. ಅವರಿಬ್ಬರ ‘ಫೂ’ಆಟ ಎಷ್ಟು ಮುಗ್ಧವೋ ಹುಡುಗನ ‘ಬಾಯಲ್ಲಿ ಕಾಮನಬಿಲ್ಲು ಬೆಳೆಯುವಷ್ಟು’ ಅವನು ದೊಡ್ಡವನಾಗುವುದು ಮತ್ತು ಅದರಿಂದಾಗಿ ಮುಗ್ಧತೆ ಕಳೆದುಕೊಳ್ಳುವುದು ಅಷ್ಟೇ ಕ್ರೂರವಾದುದು. ದೊಡ್ಡವನಾಗುವ ಆತುರವಿರುವ ಹುಡುಗನಿಗೆ ದೊಡ್ಡವರ ಜಗತ್ತಿನ ಕಾಮನಬಿಲ್ಲಿನ ಬಣ್ಣಗಳು ಬೇರೆಯೇ ಎಂದು ಗೊತ್ತಿಲ್ಲ.
ಬಾಲ್ಯದ ಮುಗ್ಧ ಪ್ರಪಂಚ ದೊಡ್ಡವರ ಅನೇಕ ಬಿಕ್ಕಟ್ಟು ಕೆಡುಕುಗಳುಳ್ಳ ಪ್ರಪಂಚಕ್ಕೆ ಎದುರಾಗುವ ಕತೆಗಳ ಪರಂಪರೆಯೇ ಕನ್ನಡದಲ್ಲಿದೆ. ಕೊರಡ್ಕಲ್ ಶ್ರೀನಿವಾಸರಾಯರ ಕತೆಯ ಮಕ್ಕಳಿಗೆ, ತಮ್ಮ ಮನೆಯ ಬಾಳೆಗೊನೆಯ ಮೇಲೆ ಕಣ್ಣುಹಾಕಿದ ದನಿಯರ ಸತ್ನಾರಾಯಣನ ಮೇಲುಂಟಾಗುವ ಆಕ್ರೋಶ, ಶಾಂತಿನಾಥ ದೇಸಾಯರ ಚಂದೂನಿಗೆ ಎದುರಾಗುವ ಲೈಂಗಿಕ ಜಾಗೃತಿ ಮತ್ತು ತನ್ನ ಅಸಹಾಯಕತೆ, ಖಾಸನೀಸರ ಕತೆಯಲ್ಲಿ ತನ್ನ ಕಕ್ಕನನ್ನು ಹುಡುಕುತ್ತ ಮುಂಬೈ ಎಂಬ ಮಾಯಾನಗರಿಯಲ್ಲಿ ಅಲೆದಾಡುವ ವಾಸುವಿಗೆ ಉಂಟಾಗುವ ದಿಗ್ಭ್ರಮೆ, ಸಂತೆಗೆ ಸವಾರಿ ಹೋದ ರಾಮ ತನ್ನ ತಾಯಿಯಿತಂದೆಯರ ಜಗಳದಲ್ಲಿ ಗೊಂಬೆಯಂತೆ ಎಳೆದಾಟಕ್ಕೆ ಸಿಲುಕಿ ಪಡುವ ನೋವು — ಚಳ್ಳೂರರ ಕತೆಯ ಕೊನೆಯಲ್ಲಿ ಬಾವಿಗೆ ಬಿದ್ದ ಜಯತ್ತಿಯ ನೀರು ತುಂಬಿಕೊಂಡಿದ್ದ ಹೊಟ್ಟೆಯನ್ನು ಜೋರಾಗಿ ಅಮುಕಿದಾಗ, ಅವಳು ಕೊನೆಯ ಬಾರಿಯೊಮ್ಮೆ “ಫೂ… ಎಂದಳು. ಬಗ್ಗಿ ನೋಡುತ್ತಿದ್ದ ಅವ್ವ ಅಪ್ಪರ ಮುಖಕ್ಕೆ ಬಿರುಸಿನಿಂದ ನೀರು ಸಿಡಿದವು. ಅವ್ವ ಮುಖ ಒಂಥರ ಮಾಡಿದಳು.”
ಒಂದಾದ ಮೇಲೊಂದು ಸರಳವಾದ ಪುಟ್ಟಪುಟ್ಟ ವಾಕ್ಯಗಳು ಉರುಳುತ್ತ ಸಾಗುವ ಈ ಕತೆಯ ಲಯ ಪುಟ್ಟ ಹುಡುಗನ ಸಹಜ ಲಯಕ್ಕೆ ಅನುಗುಣವಾಗಿ ಆಸಕ್ತಿಕರವಾಗಿದೆ. ‘ಖತಲ್ ರಾತ್ರಿ’ ಇಂಥದೇ ಇನ್ನೊಂದು ಮುಗ್ಧತೆಯಲ್ಲಿ ಅದ್ದಿ ತೆಗೆದ ಕತೆ. ತಂದೆಯನ್ನು ಕಳೆದುಕೊಂಡ ಅನಾಥಪ್ರಜ್ಞೆ, ಊರವರ ಕೊಂಕುಮಾತುಗಳು ತರುವ ಹತಾಶೆ, ಹರೆಯಕ್ಕೆ ಸಹಜವಾದ ಸಿಟ್ಟು, ಎಲ್ಲ ಸಂಕಟಗಳ ನಡುವೆಯೂ ಜಿನುಗುವ ಮನುಷ್ಯ ಪ್ರೀತಿ, ಮೊಹರಂನ ಖತಲ್ ರಾತ್ರಿಯ ಹಿನ್ನೆಲೆಯಲ್ಲಿ ನವಿರಾಗಿ ಮೂಡಿ ಬರುತ್ತವೆ.
‘ತೇರು ಸಾಗಿತಮ್ಮ ನೋಡಿರೆ...’ ಕತೆಯ ಹುಚ್ಚಶೈಲಾ ಮತ್ತು ‘ವಜ್ರಮುನಿ’ ಕತೆಯ ನಿರೂಪಕನ ಅಪ್ಪ ಎರಡೂ ಒಂದೇ ರೀತಿಯ ಪಾತ್ರಗಳು: ಒಮ್ಮೆ ಹುಚ್ಚರಂತೆಯೂ ಮತ್ತೊಮ್ಮೆ ದಾರ್ಶನಿಕರಂತೆಯೂ ಒಮ್ಮೆ ಹತಾಶರಂತೆಯೂ ಮತ್ತೊಮ್ಮೆ ವಿರಕ್ತರಂತೆಯೂ ಕಾಣುವ ಇವರು ತಮ್ಮವೇ ಅಂತರ್ಲೋಕಗಳನ್ನು ಕಟ್ಟಿಕೊಂಡು ಅಲ್ಲೇ ನಿರ್ಲಿಪ್ತತೆ ಕಂಡುಕೊಂಡಿದ್ದಾರೆ. ಸಣ್ಣ ವಯಸ್ಸಿನಿಂದಲೆ ಭಜನೆಯ ಶರಣಪ್ಪನ ತತ್ವಪದಗಳ ಹುಚ್ಚು ಹಿಡಿಸಿಕೊಂಡ ಶ್ರೀಶೈಲ ಅವನನ್ನು ತಂದೆಯಂತೆ ಗುರುವಿನಂತೆ ಕಾಣತೊಡಗುತ್ತಾನೆ. ಶರಣಪ್ಪನ ಅಚಾನಕ್ ಸಾವಿನಿಂದ ದಿಕ್ಕೆಟ್ಟು ನಿರ್ವಿಣ್ಣನಾಗಿ ಹುಚ್ಚನಂತಾಗಿದ್ದಾನೆ. ತನ್ನಷ್ಟಕ್ಕೆ ತಾನು ರಸ್ತೆಯಲ್ಲಿ ಹಾಡುತ್ತ ಓಡಾಡುತ್ತ ಅವನ ಬದುಕಿನ ತೇರು ಸಾಗಿದೆ. ದೊಡ್ಡ ಮಳೆಯಿಂದ ಹಳ್ಳ ಬಂದು ಹಳ್ಳದ ದಂಡೆಯಲ್ಲಿ ಮಣ್ಣು ಮಾಡಿದ್ದ ಶರಣಪ್ಪನ ಹೆಣ ಮಾಂಸದ ಮುದ್ದೆಯಾಗಿ ಹರಿದು ಬಂದು ಬಾರಿಗಿಡಕ್ಕೆ ಸಿಕ್ಕಿಹಾಕಿಕೊಳ್ಳುವ ಭಯಾನಕ ದೃಶ್ಯದಿಂದ ವಿಚಲಿತನಾದರೂ ಜೀವನದ ನಶ್ವರತೆಯ ಬಗ್ಗೆ ಗಹನವಾದ ದರ್ಶನವನ್ನು ತೀರ ಸಣ್ಣ ವಯಸ್ಸಿನಲ್ಲೇ ಪಡೆದುಕೊಳ್ಳುತ್ತಾನೆ.
“ನಾನು ಐದನೇಯತ್ತೆ ಇದ್ದಾಗ ನಮ್ಮ ಮನೆಯಲ್ಲುಳಿದಿದ್ದ ಕೊನೆಯ ಎಮ್ಮೆ ಭದ್ರಿಯೂ ಸತ್ತು ಹೋಯಿತು. ಅದರೊಂದಿಗೆ ನಮ್ಮ ಬಂಕ ಖಾಲಿ ಖಾಲಿಯಾಯಿತು.” ಎಂದು ಶುರುವಾಗುವ ‘ವಜ್ರಮುನಿ’ ಕತೆಯಲ್ಲಿ ಅವ್ವನ ಕೊಂಕುಮಾತುಗಳು ಅಪ್ಪನ ಸಿಟ್ಟು ಬೇಜವಾಬ್ದಾರಿಗಳಿಗೆ ಸಿಲುಕಿ ಹಣ್ಣಾಗುವ ಮಕ್ಕಳಿದ್ದಾರೆ. ಭದ್ರಿಯ ಸಾವಿನ ನಂತರ ಅದು ವಿಕೋಪಕ್ಕೆ ಹೋಗಿ ಅವರು “ರಾಕ್ಷಿ"ಗಳಂತೆ ಕಡಿದಾಡಿ ಕೊನೆಗೆ ಖಬರಿಗೆ ಬಂದ ನಂತರ ಅಪ್ಪ ಪೂರ್ತಿ ಬದಲಾಗಿ ಬಿಡುತ್ತಾನೆ. ಏನೂ ಕೆಲಸ ಮಾಡದೇ ಇಡೀ ದಿನ ಬೀಡಿ ಸೇದುತ್ತ ಬಂಕವನ್ನೇ ತನ್ನ ಜಗತ್ತನ್ನಾಗಿ ಮಾಡಿಕೊಳ್ಳುತ್ತಾನೆ.
ಇವೆರಡರ ಕಥಾಹಂದರ ಗಟ್ಟಿಯಾಗಿದ್ದರೂ ಬೆಳವಣಿಗೆಯ ಗತಿ ಹಾಗೂ focusಗಳಲ್ಲಿ ಸಮಸ್ಯೆಗಳಿವೆ. ಶೈಲಾನ ಮರುಳುತನದ ಬಗ್ಗೆ ಊರಮಂದಿಯ, ವಿಶೇಷವಾಗಿ ಅವನ ಮಾವನ, ಕೊಂಕುತನ, ಅದಕ್ಕೆ ಅವನ ಅವ್ವನ ಮಾರುತ್ತರ — ಇವುಗಳ ಮೇಲೆ ಕತೆ ಅಗತ್ಯಕ್ಕಿಂತ ಹೆಚ್ಚು ಗಮನ ವ್ಯಯಿಸಿರುವುದರಿಂದ ಕತೆಯ ಬಂಧ ಸಡಿಲಾಗಿದೆ. ‘ವಜ್ರಮುನಿ’ ಕತೆಯಲ್ಲಿ ಅಪ್ಪನ ನಡವಳಿಕೆ ಮಾತುಗಳು ಕುತೂಹಲಕರವಾಗಿದ್ದರೂ convincing ಆಗಿಲ್ಲ. ಒಂದಷ್ಟು ಬಿಡಿ ಘಟನೆಗಳನ್ನು ಪೋಣಿಸಿದಂತಾಗಿ ಆದ್ಯಂತವಾದ ಆಶಯ ಘನೀಭವಿಸಿಲ್ಲ. ಕೊನೆಯಲ್ಲಿ ಅಪ್ಪ ಮಗನಿಗೆ, “[…] ನಾ ನಂದಾ ಒಂದು ಕಥಿ ಕಟ್ಟಿಗ್ಯೊಂಡು ಅದ್ರಾಗ ಅರಾಮದೀನಿ… ಅದನ್ ಸುಳ್ ಮಾಡೂ ಯಾವ್ ಕಥೀನೂ ಬ್ಯಾಡಾಗ್ಯೇತಿ ನನಗ…” ಎನ್ನುವಲ್ಲಿಗೇ ಕತೆ ಮುಗಿದಿತ್ತೇನೋ. ನಂತರ ಬರುವ ನಿರೂಪಕನ ಟಿಪ್ಪಣಿ ಮತ್ತು ಅವನು ಇದನ್ನೆಲ್ಲ ತನ್ನ ಸ್ಥಿತಿಗೆ ತಂದು ಹಚ್ಚುವುದು — “[…] ಅಪ್ಪನಿಗಾದರೂ ತನ್ನ ಕತೆಯನ್ನು ಉಳಿಸಿಕೊಳ್ಳಲು ಬಂಕವಿದೆ. ನನಗೆ?” — ಈ shift in focus ತುಸು self-indulgent ಎನ್ನಿಸುತ್ತದೆ.
ಈ ನಾಲ್ಕೂ ಕತೆಗಳು, ಅವುಗಳ ಬೇರೆ ಬೇರೆ ಮಟ್ಟದ ಸಾಫಲ್ಯದ ನಡುವೆಯೂ, ಕತೆಗಾರರು ಬುದ್ಧಿಪೂರ್ವಕವಾಗಿಯೇ ಚಿಕ್ಕ ಕ್ಯಾನ್ವಾಸಿನ ಮೇಲೆ ರಚಿಸಿದುವು. ‘ಕನಸಿನ ವಾಸನೆ’ ಮತ್ತು ‘ಪಾತಿ’ ಈ ಸಂಕಲನದ ದೀರ್ಘ ಮತ್ತು ಮಹತ್ವಾಕಾಂಕ್ಷೆಯುಳ್ಳ ಕತೆಗಳು. ‘ಕನಸಿನ ವಾಸನೆ’ಯಲ್ಲಿ ಮಿರ್ಚಿ ಮಂಡಾಳ ಮಾರುತ್ತ ಯಾರ ಹಂಗಲ್ಲೂ ಬೀಳದೆ ಯಾರ ಗೋಜಿಗೂ ಹೋಗದೆ “ಜಾಲಿ ಮರದಂತೆ” ಬದುಕುವ ರಂಗಮ್ಮ; ಅವಳ ಮಿರ್ಚಿಯ ಪರಿಮಳ ಅವಳಂತೆ ನಿಗೂಢವಾಗಿಯೇ ಉಳಿದಿದೆ. ಅದರ ರಹಸ್ಯ ಇರುವುದು ಅವಳಲ್ಲಿ ಮಡುಗಟ್ಟಿದ ಅಪಾರ ದುಃಖವೇ ಏನೋ ಎಂಬಂತೆ ತನ್ನ ಕಾಯಕದಲ್ಲಿ ನಿರತಳಾಗಿದ್ದವಳ ಮೇಲೆ ನಡೆದ ಕಿರುಕುಳದಿಂದಾಗಿ ಕಟ್ಟೆಯೊಡೆದು ನೀರು ಹರಿಯತೊಡಗಿದ ನಂತರದ ದಿನಗಳಲ್ಲಿ ಅವಳ ಮಿರ್ಚಿಗೆ ಮೊದಲಿನ ರುಚಿಯಿಲ್ಲ. ಅವಳ ಮೈಮೇಲೆ ಕೈಹಾಕಿ ಅವಳಿಂದ ಹೊಡೆಸಿಕೊಂಡ ವಿಕೃತ ಬುದ್ಧಿಯ ಲಚುಮ — ಇನ್ನೂ ಯೌವನ ಮೀರಿರದ — ಗಂಡನನ್ನು ಬೇಗ ಕಳೆದುಕೊಂಡ — ಹುಟ್ಟಿದ ಮಗು ಎರಡೇ ದಿನಗಳಲ್ಲಿ ತೀರಿಹೋದ — ರಂಗಮ್ಮನ ಅದುಮಿಟ್ಟ ಕಾಮಾಸಕ್ತಿ, ತಾಯ್ತನದ ಬಯಕೆ ಮೊದಲಾದ ಭಾವಗಳನ್ನು ಜಾಗೃತಗೊಳಿಸುತ್ತಾನೆ. ಅವು ಹೆಬ್ಬಾವಾಗಿ ಅವಳ ಕಾಲಿಗೆ ಸುತ್ತಿಕೊಳ್ಳುತ್ತವೆ. ಇತ್ತ ತನ್ನ ಅತಿ ಕಾಮುಕತೆಯ ದೆಸೆಯಿಂದ ಕೊನೆಗೊಮ್ಮೆ ಮಣ್ಣುಮುಕ್ಕಿದ ಲಚುಮನ ತಪ್ಪರಿವು ಅವನ ಕನಸಿನಲ್ಲಿ ಒಡೆದ ಹಾಲಿನ ವಾಸನೆಯ ರೂಪ ತಾಳಿ ಅವನ್ನು ಹಗಲಿರುಳು ಬೆಂಬತ್ತುತ್ತದೆ. ಕಡೆಗೆ ರಂಗಮ್ಮನ ಕಾಲಿಗೆ ಬಿದ್ದು ಅವಳ ಕಣ್ಣೀರಿನ ಬಟ್ಟಲನ್ನು ಎತ್ತಿ ಕುಡಿದಾಗಲೇ ಆ ವಾಸನೆ ಹೋಗುವುದು. ಬಟ್ಟಲುಗಟ್ಟಲೇ ಹರಿಯುತ್ತಿರುವ ಅವಳ ಕಣ್ಣೀರು ಅವಳಿಗೆ catharsis ಒದಗಿಸಿದರೆ, ಅದೇ ಇವನ ಪಾಪಗಳನ್ನು ತೊಳೆದು ಮುಗ್ಧತೆ ತಂದುಕೊಡುವುದು. ಇಬ್ಬರಿಗೂ ಆದ ಕೆಟ್ಟ ಅನುಭವಗಳಿಗೊಂದು ಮುಗಿತಾಯ ಸಿಕ್ಕುವುದು.
ಕತೆಯಲ್ಲಿ ರಂಗಮ್ಮನ ಪಾತ್ರದ ಚಿತ್ರಣ ಗಟ್ಟಿಯಾಗಿದೆ, ಆದರೆ ಲಚುಮನ ಪಾತ್ರ ದುರ್ಬಲವಾಗಿದೆ. ಅವನಲ್ಲಿನ ಮಾರ್ಪಾಟು, ಅವನ ಬದಲಾದ ನಡೆವಳಿಕೆಗಳು ಸಹಜವೆನ್ನಿಸುವುದಿಲ್ಲ; ಅದಕ್ಕೆ ಸೂಕ್ತ ಪೂರ್ವ ತಯಾರಿಯಿಲ್ಲ. ಹೀಗಾಗಿ ಮಾಂತ್ರಿಕ ವಾಸ್ತವವಾದದ ಸಮರ್ಪಕ ಒಳಗೊಳ್ಳುವಿಕೆಯಿಂದ ಕಟ್ಟಿದ ಒಳ್ಳೆಯ ಕಥನವಿದ್ದರೂ, ಈ ಎರಡು ವ್ಯತಿರಿಕ್ತ ಪಾತ್ರಗಳನ್ನು ಎದುರುಬದುರಾಗಿ ನಿಲ್ಲಿಸುವ ಪ್ರಯತ್ನ ಆಸಕ್ತಿಕರವಾಗಿದ್ದರೂ, ಕತೆ ಪೂರ್ತಿಯಾಗಿ ಸಫಲವಾಗಿಲ್ಲ.
‘ಪಾತಿ’ಯಲ್ಲಿ ಎಳೆ ಮನಸ್ಸುಗಳ ಸಂಬಂಧಗಳ ಸಂಕೀರ್ಣತೆ, ಅವಕ್ಕೆ ಹೆಸರು ಕೊಡಲಾಗದಿರುವಿಕೆ — ಹಾಗೂ ಹೆಸರು ಕೊಟ್ಟಾಕ್ಷಣ ಅವು ಉಂಟುಮಾಡುವ ತಲ್ಲಣಗಳ ತಡಕಾಟವಿದೆ. ಇಲ್ಲಿನ ಪಾತಿ ಚಿಕ್ಕಂದಿನಿಂದಲೇ ಗಟ್ಟಿಗಿತ್ತಿ; ಎಲ್ಲ ಅರ್ಥದಲ್ಲೂ ಅವಳು ತನಗಿಂತ ತುಸು ಚಿಕ್ಕವನಾದ ನಿರೂಪಕನಿಗಿಂತ ಹೆಚ್ಚು ಪ್ರಬುದ್ಧಳು. ತನ್ನನ್ನು ಅವನು ಅಕ್ಕನೆಂದು ಕರೆದರೆ ಸಿಟ್ಟು ಮಾಡಿಕೊಳ್ಳುವುದಿರಲಿ, ಇವರಿಗೆ ಕತೆ ಹೇಳಿ ಚಾಕಲೇಟ್ ಕೊಟ್ಟು ಮರುಳು ಮಾಡುವ ಮುದುಕನ ‘ಚಾಳಿ ಬೇಸಿಲ್ಲ,’ ಎಂದು ಬಹುಬೇಗ ಕಂಡುಕೊಳ್ಳುವುದಿರಲಿ, ಇವನಿಗಾಗಿ ‘ಮಸಾಲಿ ಅನ್ನ’ ಕಟ್ಟಿಕೊಂಡು ಬಂದು ತಿನ್ನಿಸುವುದಿರಲಿ, ಹುಡುಗನ ಹಠಮಾರಿತನ ಪೋಕರಿತನಗಳನ್ನು ಮಾಫಿ ಮಾಡುವುದಿರಲಿ, ಹಂಪಿಯ ಪುರಂದರ ಮಂಟಪದ ಮರೆಗೆ ಕರೆದೊಯ್ಯುವುದಿರಲಿ … ಕಡೆಗೆ, ಇನ್ನು ಮಂಟಪಕ್ಕೆ ಹೋಗುವುದು ಬೇಡವೆಂದು, ಬೇರೆ ಬೇರೆ ಮತಗಳ ತಮ್ಮಿಬ್ಬರ ಸಂಬಂಧದ ಮಿತಿ ಇಷ್ಟೇ ಎಂಬ ಸೂಚನೆಯನ್ನೂ ಕೊಟ್ಟು — ಒಟ್ಟಾರೆ ಎಲ್ಲ ರೀತಿಯಿಂದ ಅವನನ್ನು ಪೊರೆದವಳು. ಇವಳು ಫಾತಿಮಾ. ಕಕ್ಕುಲತೆ, ಔದಾರ್ಯ, ಮತ್ತು ಎಣೆಯಿಲ್ಲದ ಸಹನೆಯ ಮೂರ್ತಿ. ಮುಹಮ್ಮದನ ಮೆಚ್ಚಿನ ಮಗಳು. ಅವಳಿಲ್ಲಿ ಪಾತಿ. ಸವಿಸ್ತಾರವಾಗಿ ಬೆಳೆಯುತ್ತ ಹೋಗುವ ಈ ಕತೆ ನಮ್ಮನ್ನು ಸಂಕಟದ ಕೂಪಕ್ಕೆ ತಳ್ಳುತ್ತದೆ. ಇದು ಈ ಸಂಕಲನದ ಕಾಡುವ ಕತೆಗಳಲ್ಲಿ ಮುಖ್ಯವಾದುದು.
ಕೊನೆಯ ಕತೆ ‘ಮಿಣುಕು ಹುಳು’ ಒಂದು ಕುತೂಹಲಕರ ಪ್ರಯೋಗ. ಬೋರ್ಹೆಸ್, ಕಾಲ್ವೀನೋ ಮೊದಲಾದವರ fableಗಳು, allegoryಗಳಲ್ಲಿ ಇಂಥವನ್ನು ಈಗಾಗಲೇ ಓದಿದ್ದರೂ ಅಂಥ ಕಥನ ಶೈಲಿಯನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸಿಕೊಳ್ಳುವ ಪ್ರಯತ್ನವಿಲ್ಲಿದೆ. ಇನ್ನಷ್ಟು ತಾದಾತ್ಮ್ಯದಿಂದ ಕತೆಯನ್ನು ಕಟ್ಟಬಹುದಿತ್ತು ಎನ್ನಿಸುತ್ತದೆ. ಅದಾಗ್ಗ್ಯೂ, ಔಷಧಿ ಅಂಗಡಿಗೆ ಬಂದ ಎಲ್ಲರ ಚೀಟಿಗಳನ್ನೂ ಇಸಿದುಕೊಂಡು ಜಗತ್ತಿನಲ್ಲಿ ಇರುವ ನೋವಿನ ಲೆಕ್ಕ ಹಾಕಬಯಸುವ ಸೂಕ್ಷ್ಮ ಸಂವೇದನೆ ಇಲ್ಲಿದೆ. ಆ ಪ್ರಯತ್ನದಲ್ಲಿ ಜನರಿಂದ ನಗೆಪಾಟಲಿಗೀಡಾಗಬೇಕಾಗುತ್ತದೆ. ಆದರೆ ಅದು ಕತೆಗಾರನ ಅಸಹಾಯಕತೆ ಮತ್ತು ಅನಿವಾರ್ಯ.
ಎಲ್ಲ ಸಂವೇದನಾಶೀಲರಂತೆ ಮಂಜುನಾಯಕರಿಗೂ ಮಿಣುಕುಹುಳದ ಉಪಟಳವಿದೆ. ಅದು ಸುಮ್ಮನೆ ಕೂತಾಗಲೆಲ್ಲ ಕಾಡುತ್ತದೆ. ಅದರ ಕಾಟ ತಪ್ಪಿಸಿಕೊಳ್ಳಬೇಕೆಂದರೆ — ತಾತ್ಕಾಲಿಕವಾಗಿಯಾದರೂ — ಏನಾದರೂ ಮಾಡುತ್ತಲೇ ಇರಬೇಕು — ಅದು ಎಂಥ ನಿರರ್ಥಕ ಕೆಲಸವಾಗಿದ್ದರೂ! ಆದರೆ, ಮಿಣುಕುಹುಳದ ಕಾಟವಿರುವವರೇ ಒಳ್ಳೆಯ ಕತೆ ಬರೆಯಲು ಹಾಗೂ ತನ್ಮೂಲಕ ಅದರ ಕಾಟವನ್ನು ಕೊಂಚವಾದರೂ ತಗ್ಗಿಸಿಕೊಳ್ಳಲು ಸಾಧ್ಯ. ಬಹಳ ಕಾಲದ ನಂತರ ಕನ್ನಡದಲ್ಲಿ ಒಂದಿಡೀ ಕಥಾಸಂಕಲನದ ಓದು ಮೊದಲಿಂದ ಕೊನೆಯವರೆಗೂ ನನ್ನಲ್ಲಿ ಖುಷಿಯ, ತೃಪ್ತಿಯ ಭಾವವನ್ನು ಉಳಿಸಿತು. ಮಂಜುನಾಯಕ ಚಳ್ಳೂರರು ಭರವಸೆಯ ಯುವ ಕತೆಗಾರರು ಎಂಬುದಕ್ಕೆ ಮೊದಲ ಸಂಕಲನದಲ್ಲೇ ಸಾಕಷ್ಟು ಪುರಾವೆ ಒದಗಿಸಿದ್ದಾರೆ. ಅವರಿಂದ ಮುಂದೆ ಇನ್ನೂ ಮಹತ್ವಾಕಾಂಕ್ಷಿ ಕತೆಗಳು ಬರಲೆಂದು ಹಾರೈಸುತ್ತೇನೆ.
ಮಂಜುನಾಯಕ ಚಳ್ಳೂರು
ಬೆಂಗಳೂರಿನಲ್ಲಿ ವಾಸಿಸುತ್ತಿರುವ ಮಂಜುನಾಯಕ ಚಳ್ಳೂರು ಅವರ ಹುಟ್ಟೂರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಚಳ್ಳೂರು. ಜನನ 31-08-1993ರಲ್ಲಿ. ಧಾರವಾಡದಲ್ಲಿ ಬಿಎಸ್ಸಿ ಪದವಿ ಪಡೆದ ನಂತರ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಲ್ಪಕಾಲ ಪರ್ತಕರ್ತರಾಗಿದ್ದರು. ಸದ್ಯ ಕಲರ್ಸ್ ಕನ್ನಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. “ಫೂ ಮತ್ತು ಇತರ ಕತೆಗಳು” ಇವರ ಮೊದಲ ಕಥಾ ಸಂಕಲನ. ಟೊಟೊ ಪುರಸ್ಕಾರ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಇವರಿಗೆ ಲಭಿಸಿವೆ.