ಹೋರಾಟಗಾರ್ತಿ, ಕಥೆಗಾರ್ತಿ ಬಿ. ಟಿ. ಜಾಹ್ನವಿ ಅವರ ಸಮಗ್ರ ಕಥಾ ಸಂಕಲನ ಒಬ್ರು ಸುದ್ಯಾssಕೆ ಒಬ್ರು ಗದ್ಲ್ಯಾssಕೆ 10.2.2024 ರಂದು ದಾವಣೆಗೆರೆಯಲ್ಲಿ ಬಿಡುಗಡೆಯಾಗಲಿದೆ. ಕೌದಿ ಪ್ರಕಾಶನ ಇದನ್ನು ಪ್ರಕಟಿಸಿದ್ದು, ಈ ಸಂದರ್ಭದಲ್ಲಿ ‘ದೂಪ್ದಳ್ಳಿ ಸೆಕ್ಸಿ ದುರುಗʼ ಎಂಬ ರಂಗಪ್ರಸ್ತುತಿಯನ್ನು ಕಲಾವಿದೆಯರಾದ ವಿದ್ಯಾ ಅಕ್ಷರ ಮತ್ತು ವಾಣಿ ಸತೀಶ ಪ್ರಸ್ತುತಪಡಿಸಲಿದ್ದಾರೆ. ಲಂಕೇಶ ಪತ್ರಿಕೆಯಲ್ಲಿ 28 ವರ್ಷಗಳ ಹಿಂದೆ ಪ್ರಕಟವಾದ ಈ ಕಥೆ ನಿಮ್ಮ ಓದಿಗೆ.
ರಾತ್ರಿಯೆಲ್ಲಾ ಲಕ್ಷ್ಮೀಯ ಅರಚಾಟವೇ ಅರಚಾಟ. ಆ ಅರಚಾಟ ಕೇಳಲಾರದೆ ಪರದೆ ಕಿತ್ತು ಹೊರಬಂದು,
“ಥೂ, ಒಳ್ಳೆ ಮಧ್ಯರಾತ್ರೀಲಿ ಇದೊಳ್ಳೆ ದರಿದ್ರ ಗೋಳಾಟ... ನೆಟ್ಟಗೆ ನಿದ್ದೆ ಮಾಡೋಕೂ ಬಿಡಂಗಿಲ್ಲ...”
ನನ್ನ ಗೊಣಗಾಟ ಕೇಳಿ ಅತ್ತ ಕಡೆ ಮಲಗಿದ್ದ ಸಣ್ಣಜ್ಜಿ ಅತ್ತಿತ್ತ ಹೊರಳಾಡಿ, ಮುಲುಕಾಡುತ್ತ,
“ಅಯ್ಯೋ ನಮ್ಮವ್ನೆ ಬೆದಿಗ್ಬಂದೈತೆ ಕಣೆ ಅದಕ್ಕಿಂಗೆ ಅರುಸ್ತತೆ ಪಾಪ... ಯಾರನ ಹೋಗಿ ಕಟ್ಟಿಸ್ಕೆಂಡು ಬರಾರ್ಗಾ ಇಂಗೆಯಾ...” ಅಂದ್ಲು.
“ಇನ್ನೊಂದಿನ ಹಿಂಗೆ ಇದು ಅರಚಾಡಿದ್ರೆ ಖಂಡಿತ ತಲೆಕೆಟ್ಟು ಮೊಸರ್ ಗಡಿಗೆಯಾಗತ್ತಷ್ಟೆ...” ಕಣ್ಣು ಮುಚ್ಚಲು ಪ್ರಯತ್ನಿಸುತ್ತ ಅಂದೆ.
“ನಾಳಿಕೆ ನಮ್ ಸಿಂಗ್ರಳಿ ರಾಮ ಬರ್ಬದೇನೂ ಕಣೇ ನಿಮ್ಮವ್ವ ಹೇಳಿಕಳಸ್ಯಾಳೆ... ಅವ್ನು ಬಂದ್ರೆ ವಡ್ಕಂಡೋಗ್ತನ್ ಬಿಡು...” ಅಂತಂದು “ಸಿರ್... ಸಿರ್..” ಅಂತ ಉಸಿರುದಬ್ಬುತ್ತ ಮತ್ತೆ ನಿದ್ರೆಗೆ ಜಾರಿದಳು ಸಣ್ಣಜ್ಜಿ.
ಲಕ್ಷ್ಮೀನ ನೋಡಿಕೊಳ್ಳಲು ಬಂದು ಹೋದ ಹುಡುಗರೆಷ್ಟೊ. ನಮ್ಮಮ್ಮನ ಅತಿಶಿಸ್ತು, ಅಪ್ಪನ ಕೋಪಾವೇಶಕ್ಕೆ ಬಂದವರ್ಯಾರು ಹದಿನೈದು ದಿನದ ಮೇಲಿರುತ್ತಿರಲಿಲ್ಲ. ಸಣ್ಣಜ್ಜಿ ಹೇಳಿದ ಸಿಂಗ್ರಳ್ಳಿ ರಾಮಪ್ಪನೂ ಸುಮ್ಮನೇ ಬರುವವನಲ್ಲ. ಯಾವುದಾದರೊಂದು ಮಿಕನ ಹಿಡಿದೇ ತರಬೇಕಿತ್ತು. “ದೇವ್ರೇ ನಾಳೆ ಆ ರಾಮಪ್ಪನ್ನ ಹೇಗಾದರೂ ನಮ್ಮನೆ ತಲುಪುವಂತೆ ಮಾಡು...” ಎಂದು ಮನದಲ್ಲೇ ಕಾಣದ ದೇವರಿಗೆ ಮೊರೆಯಿಟ್ಟು, ಕಣ್ಣು ಬಿಗಿಯಾಗಿ ಮುಚ್ಚುತ್ತ ನಿದ್ರೆ ಮಾಡುವ ಪ್ರಯತ್ನಪಟ್ಟೆ.
ನನ್ನ ಮೊರೆ ಆ ದೇವರಿಗೆ ಖಂಡಿತ ಕೇಳಿಸಿರಬೇಕು, ಮರುದಿನ ಬೆಳಿಗ್ಗೆ ನಾ ಏಳುವ ಹೊತ್ತಿಗಾಗಲೇ ರಾಮಪ್ಪ ಬಂದು ಲಕ್ಷ್ಮೀಯನ್ನು ಹೊಡೆದುಕೊಂಡು ಹೋಗಿ ಮನೆ ಶಾಂತವಾಗಿತ್ತು. ನಾನು ಸೀದಾ ಅಡುಗೆಮನೆ ಹೊಕ್ಕೆ. ಅಮ್ಮ, ಸಣ್ಣಜ್ಜಿ ಲಕ್ಷ್ಮೀಯ ವಿಚಾರವೇ ಮಾತಾಡುತ್ತಿದ್ದರು.
“ಸದ್ಯ, ರಾಮಪ್ಪ ಬಂದ. ಇಲ್ಲಂದಿದ್ರೆ ಅಕೀ ಒದರಾಟ ಏನ್ಕೇಳ್ತಿ....?” ಎನ್ನುತ್ತಿದ್ದಳು ಸಣ್ಣಜ್ಜಿ. ಅಮ್ಮ ಕೊಟ್ಟ ಕಾಫಿ ಕುಡಿಯುತ್ತ ಅಲ್ಲಾ, ಲಕ್ಷ್ಮೀ ಬೆದಿಗೆ ಬಂದ್ರೆ ಇವ್ರಿಗೆಲ್ಲಾ ಎಷ್ಟೊಂದು ಕಾಳಜಿ? ಎಷ್ಟೊಂದು ಒದ್ದಾಟ? ಅದೆಷ್ಟು ಅಂಡರ್ಸ್ಟಾಂಡಿಂಗೂ… ಅಂದುಕೊಂಡೆ. ಹಿಂದೆಯೇ ಯೋಚನೆಯೊಂದು ಹೊರಳಿ ಬಂದು ನಗು ತಡೆಯದಾಯ್ತು. ಒಬ್ಬಳೇ ನಗತೊಡಗಿದೆ. ಅಮ್ಮ ಅದೇನೆಂದು ಹೇಳುವ ತನಕ ಬಿಡಲಿಲ್ಲ. ಗದರಿಸಿ, ಗದರಿಸಿ ಕೇಳತೊಡಗಿದಳು.
“ಹೇಳಿದ್ಮೇಲೆ ಮತ್ತೆ ಬೈಬರ್ದು ನೋಡೂ...” ಎನ್ನುತ್ತಲೇ ಮೆಲ್ಲನೆ ಹೇಳಿದೆ.
“ಅಲ್ಲಾ ದನಗಳು ಬೆದೆಗೆ ಬಂದು ಒದರ್ತಾವಲ್ಲಾ... ಹಂಗೇ ಮನುಷ್ಯರೂ ಒದರಂಗಿದ್ದಿದ್ರೆ ಹೆಂಗರ್ತಿತ್ತೂಂತ” ಅಮ್ಮ ಪಕ್ಕದಲ್ಲಿ ಸಿಂಬೆ ಕೈಗೆತ್ತಿಕೊಂಡು,
“ಎದ್ದೋಗ್ತಿಯಿಲ್ಲೆ ಗಬ್ಬುಮುಂಡೇ ಬೆಳಿಗ್ಗೆ ಬೆಳಿಗ್ಗೆ ಅದೇನ್ಮಾತು...” ಎಂದು ನನ್ನತ್ತ ಬೀಸಿ ಒಗೆದಾಗ ನಾನು ಹೊರಕ್ಕೆ ನೆಗೆದು ತಪ್ಪಿಸಿಕೊಂಡೆ. ನನ್ನ ಹಿಂದೆ ಅಮ್ಮ, ಸಣ್ಣಜ್ಜಿ ಇಬ್ಬರೂ ಮುಸಿಮುಸಿ ನಗುತ್ತಿದ್ದುದು ಕಿವಿಗೆ ಬೀಳದಿರಲಿಲ್ಲ.
ಮುಖ ತೊಳೆಯಲು ಹಿತ್ತಲಿಗೆ ಹೊರಟ ನಾನು ಅಲ್ಲಿ ಕಂಡ ಅಪರಿಚಿತ ಹೊಸ ಆಕೃತಿಯನ್ನು ನೋಡಿ ಅರೆಕ್ಷಣ ಹಿಂಜರಿದು ನಿಂತೆ. ನನ್ನ ನೋಡಿದ್ದೆ ಓಡಿಹೋಗಿ ಮರೆಯಾಯ್ತು. ನನ್ನ ಹಿಂದೆಯೇ ಮುಸುರೆ ಪಾತ್ರೆಯಿಡಿದು ಬಂದ ಅಮ್ಮ ನನ್ನ ಮುಖ ನೋಡಿ, ಏನು ನಡೆದಿದೆಯೆಂದು ಊಹಿಸಿ,
“ಅದೇ ಕಣೆ ರಾಮಪ್ಪ್ಮಾವ ಕರ್ಕಂಡು ಬಂದಾನೆ. ದುರುಗ ಅಂತ ಹೆಸರು. ಅವರೂರ ಪಕ್ಕದಲ್ಲಿ ದೂಪ್ದಳ್ಳಿ ಹಟ್ಟಿ ಹುಡುಗ್ನಂತೆ....” ಅಂತ ಡೀಟೇಲ್ಸ್ ಹೇಳಿ
“ದುರುಗಾ.…” ಅಂತ ಕರೆದ್ಲು.
“ಏನಮ್ಮೇ.…” ಎಂಬ ವಿಚಿತ್ರ ಶಬ್ದ ಮಾತ್ರ ಹೊರಬಂತು ಎಮ್ಮೆ ಮನೆಯಿಂದ.
“ಇದೇನಮ್ಮ ನೀನು ಕರದ್ರೆ ಅದೇನೋ ಮ್ಯೆ ಮ್ಯೆ ಅಂತಿದೆ ಒಳಗ್ನಿಂದ...” ಎಂದೆ ನಾನು ಕೀಟಲೆ ದನಿಯಲ್ಲಿ.
“ಸುಮ್ನಿರೆ ಶುರು ಮಾಡ್ಬೇಡ ನಿನ್ನ ವರಸೇನ...” ಎಂದು ಗದರಿ, ಅವನನ್ನು ಹೊರಕ್ಕೆಳೆದು ತಂದಳು ಅಮ್ಮ. ಗಳುವಿನಂತೆ ಗಳಗಳ ಅಲ್ಲಾಡುತ್ತಿದ್ದ ದುರುಗನ ಮೈಬಣ್ಣವೊ ಅಮವಾಸ್ಯೆಯ ಚಂದಿರನಂತೆ. ಆದರೇನು ಹಲ್ಲು ಬಿಟ್ಟಾಗಲೆಲ್ಲಾ ಹಾಲು ಬೆಳದಿಂಗಳು. ದನದ ಮೈಯುಜ್ಜುವ ನಾರಿನಂತೆ ಬಿರುಸಾಗಿ, ಪೊದೆಯಂತಿದ್ದ ಮೀಸೆ ಅವನ ಮುಖಕ್ಕೊಂದು ಕಳೆ ಕೊಟ್ಟಿತ್ತು.
ಒಗೆದು ಇಮ್ಮರಿಸಿದ್ದ ಬಿಳಿ ಪಂಚೆ, ಬಿಳಿ ಅಂಗಿಯಲ್ಲಿ ನೋಡಲು ಲಕ್ಷಣ ಅಂತನ್ನಿಸಿದರೂ ಜನರನ್ನು ಮಿಕಿಮಿಕಿ ನೋಡುವ ರೀತಿ, ಕಣ್ಕಣ್ಣು ಬಿಡುವ ರೀತಿ ಅವನಿಗೊಂದು ತೆರನ ಪೆದ್ದುಕಳೆ ನೀಡಿದ್ದವು. ಬೇಕಂತಲೇ ಅವನನ್ನು ಮಾತನಾಡಿಸುವ ಸಲುವಾಗಿ “ನಿನ್ನ ಹೆಸರೇನು...?” ಎಂದು ಕೇಳಿದೆ. ಒಂದು ಕೈ ಮುಖಕ್ಕೆ ಅಡ್ಡಯಿಡಿದು, ಮುಸಿ ಮುಸಿ ನಗುತ್ತ, ನುಲಿಯುತ್ತ
“ದುರುಗಂತ...” ಅಂದ.
ಅಬ್ಬಾ, ಗಟ್ಟಿಯಾದ ಕಂಚಿನ ಕಂಠ. “ಈ ಗಳುವಿಗೆಂತಹ ಗಟ್ಟಿ ದನಿ” ಎಂದುಕೊಂಡೆ.
ಲಕ್ಷ್ಮೀಯ ಕೆಲಸ ಪೂರ್ತಿ ಅವನ ಪಾಲಾಯ್ತು. ಅವನೂ ಸಹ ಅದೇಗೋ ಅಮ್ಮನಿಗೆ ಹೊಂದಿಕೊಂಡು ಲಕ್ಷ್ಮೀಯನ್ನು ಅಪ್ಪ, ಅಮ್ಮನಿಗಿಂತಲೂ ಚೆನ್ನಾಗಿ ಜೋಪಾನ ಮಾಡಹತ್ತಿದ. ಅಮ್ಮ ಅವನಿಗೆ ದಿನವೂ ಸ್ನಾನ ಮಾಡುವುದನ್ನೂ, ಶೌಚಕ್ಕೆ ಹೋಗಿ ಬಂದೊಡನೆ ಕೈ ಸೋಪಚ್ಚಿ ತಿಕ್ಕಿ ತಿಕ್ಕಿ ತೊಳೆಯುವುದು, ಕಾಲಿಗೆ ನೀರಾಕಿಕೊಳ್ಳುವುದು, ಉಗುರನ್ನು ಎರಡು ದಿನಕ್ಕೊಮ್ಮೆ ಕತ್ತರಿಸಿಕೊಳ್ಳುವುದು, ದಿನವೂ ಹಲ್ಲುಜ್ಜುವುದು ಪ್ರತಿಯೊಂದು ಅವನ ಬೆನ್ನತ್ತಿ ಹೇಳಿಕೊಟ್ಟಳು. ಇಷ್ಟಾದರೂ ಅವನಿಗೆ ಪ್ರವೇಶ ಮನೆಯ ಹಾಲ್ವರೆಗೆ ಮಾತ್ರ. ಮೊದಮೊದಲು ಅವನೂ ಕಳ್ಳಾಟ ಮಾಡಿದನಾದರೂ ಅಮ್ಮನ ಕೈಯಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಇರುವ ಹಾಗಿದ್ದರೆ ಹೀಗಿರಬೇಕು ಎಂದು ಮುಲಾಜಿಲ್ಲದೆ ಹೇಳಿದಾಗ ಅವ ಬಗ್ಗಿದ.
ಏನು ಹೇಳಿದರೂ ವಿಷಯ ಆ ತಲೆಯೊಳಕ್ಕೆ ಸುಲಭವಾಗಿ ಹೋಗುತ್ತಿರಲಿಲ್ಲ. ಹೀಗಾಗಿ ಅಮ್ಮನಿಂದ, ಸಣ್ಣಜ್ಜಿಯಿಂದ ಸದಾ ಬೈಸಿಕೊಳ್ಳುತ್ತಿದ್ದನವ. ಆದರೂ ನಗುತ್ತಲೇ ಇರುತ್ತಿದ್ದ. ಮಾತುಮಾತಿಗೂ ನಗು. ಅಮ್ಮ ಕೆಲವೊಮ್ಮೆ ಆ ನಗುವನ್ನು ಸಕತ್ ಎಂಜಾಯ್ ಮಾಡಿದರೆ, ಕೆಲವೊಮ್ಮೆ ಕಿರಿಕಿರಿಯಿಂದ ಸಿಟ್ಟಿಗೆದ್ದು ಕೂಗಾಡಿ ಬಿಡುತ್ತಿದ್ದಳು.
ಅದು ಹೀಗಾಗುತ್ತಿತ್ತು. ಮುಂಬಾಗಿಲ ಬಳಿ ಹೊಸ್ತಿಲಿಗೆ ಹಾಕಲು ತಟ್ಟು ತಾರೋ ಎಂದು ಹೇಳಿದರೆ ಅವ ಸೀದಾ ತಟ್ಟೆಯಿಡಿದು ಬಂದು ಕೂತುಬಿಟ್ಟಾಗ,
ಇನ್ನೊಮ್ಮೆ ಅಪ್ಪನ ಸ್ನೇಹಿತರ ಹೊಸದಾಗಿ ಮದುವೆಯಾದ ಮಗ, ಸೊಸೆಯನ್ನು ನಮ್ಮನೆಗೆ ಊಟಕ್ಕೆ ಕರೆದಿದ್ದರು. ಊಟವೆಲ್ಲ ಆದಮೇಲೆ ಅದೇನು ರೂಢಿಯೋ ಆ ಹುಡುಗಿ ಬಾಯಲ್ಲಿ ಹಾಕಿಕೊಳ್ಳಲು ಏಲಕ್ಕಿ ಕೇಳಿದಳು. ಒಳಗೋ ಡಬ್ಬಿಯಲ್ಲಿ ಖಾಲಿ. ಸರಿ ಇವನ ಕೈಲಿ ದುಡ್ಡು ಕೊಟ್ಟು,
“ನೋಡು ಬೇಗ್ಬಾ. ಆ ಹುಡ್ಗಿಗೆ ತಿನ್ನಕ್ಕೆ ಏಲಕ್ಕಿ ಬೇಕಂತೆ ಒಂತೊಲ ತಗಂಡ್ಬಾ...” ಅಂತೇಳಿದಳು ಅಮ್ಮ.
“ಹೂ....” ಎಂದು ದುಡ್ಡು ಇಸಿದುಕೊಂಡವ ಸುಮ್ಮನ ತಲೆ ಕೆರೆಯುತ್ತ ಒಳಕ್ಕೆ ಹೊರಕ್ಕೆ ಓಡಾಡಿದ.
ಆ ಹುಡುಗಿಯೊಡನೆ ಮಾತನಾಡುತ್ತ ಕೂತಿದ್ದ ನಾನು ಅವನನ್ನು ಗಮನಿಸಿ,
“ಏಯ್ ಬಾರೋ ಇಲ್ಲಿ ಹೋಗ್ಲಿಲ್ವೇನೋ...?” ಎಂದು ಕೇಳಿದ್ದಕ್ಕೆ
“ಅಲ್ಲೆಮ್ಮೆ ಅದೆಲ್ಲಿ ಸಿಕ್ತೇಂತಿ...? ಅದ್ನೆಂಗೆ ತರಾದೂ...?” ತಲೆ ಕೆರೆಯುತ್ತ ಕೇಳಿದಾಗ ಅಲ್ಲೆ ಕೂತಿದ್ದ ಅಮ್ಮ ತಾಳ್ಮೆಗೆಟ್ಟು,
“ಏನನ್ನಲೇ…” ಎಂದಳು ಹಲ್ಲು ಕಡಿಯುತ್ತ,
“ಅದೇ ಕಣಮ್ಮೆ ಈಯಮ್ಮನಿಗೆ ತಿನ್ನಾಕೆ ಹ್ಯೇಲು, ಅಕ್ಕಿ...” ಎಂದುಬಿಟ್ಟ.
ಸ್ಸರಿ ಅದುವರೆಗೂ ತಿಂದಿದ್ದೆಲ್ಲಾ ಅಲ್ಲೇ ಕಕ್ಕಿಕೊಂಡ ಆ ಹುಡುಗಿ, ಮತ್ತೆ ಏಲಕ್ಕಿ ತರಿಸುವ ಹೊತ್ತಿಗೆ ಏನೂ ತಿನ್ನುವ ಸ್ಥಿತಿಯಲ್ಲಿರಲಿಲ್ಲ.
ಅಂದು ಅವನನ್ನು ಹೊಡೆಯುವುದೊಂದು ಬಾಕಿ. ಅಮ್ಮ ಸಿಟ್ಟಿಗೆದ್ದು ಸಿಕ್ಕಾಪಟ್ಟೆ ಬೈದಾಡಿದರೂ ಅವ ಮುಸಿಮುಸಿ ನಗುತ್ತಿದ್ದ. ಆ ದಿನ ಮಾತ್ರ ಅವನ ಆ ನಗು ಅಮ್ಮನಿಗೆ ಹುಚ್ಚಿಡಿಸದಿದ್ದುದೇ ಆಶ್ಚರ್ಯ. ಇಂತಹ ಅನರ್ಥಗಳು ಆಗಾಗ ಸಂಭವಿಸುತ್ತಲೇ ಇರುತ್ತಿದ್ದವು. ಇವ ನಗುತ್ತಲೇ ಇರುತ್ತಿದ್ದ.
ಸಾಮಾನ್ಯವಾಗಿ ರಾತ್ರಿ ಊಟ ಮಾಡುತ್ತ ಎಲ್ಲರೂ ಟಿ.ವಿ.ಯ ಮುಂದೆ ಕೂರುತ್ತಿದ್ದೆವು. ಆದರೆ ಇವನು ಬಂದ ಮೇಲೆ ಟಿ.ವಿ.ಗಿಂತ ಇವನನ್ನು ನೋಡುವುದೇ ಹೆಚ್ಚಾಗಿತ್ತು. ಟಿ.ವಿಯಲ್ಲಿ ಯಾರಾದರೂ ಅತ್ತರೇ ತಾನೂ ಅವರೊಡನೆ ಅಳುತ್ತಿದ್ದ. ಪ್ರಣಯದ ದೃಶ್ಯಗಳು ಬಂದರಂತೂ,
“ಯಮ್ಮೇ... ನಾ ವಲ್ನೆಯವ್ವ... ನಾ ವಲ್ನೇ...” ಎನ್ನುತ್ತ ಮುಖ ಮುಚ್ಚಿಕೊಂಡು ಹೊರಗೋಡುತ್ತಿದ್ದ.
ಸಂವಾದ, ಚರ್ಚೆಗಳಿದ್ದಾಗ ಏನೋ ಎಲ್ಲಾ ಅರ್ಥ ಆದವನಂತೆ ಗಂಭೀರವಾಗಿ ನಿಂತು ಕೇಳಿಸಿಕೊಳ್ಳುತ್ತ ಏನೋ ಗಹನವಾಗಿ ವಿಚಾರ ಮಾಡುವವನಂತೆ ಕಣ್ಣು ಕಿರಿದುಗೊಳಿಸಿ, ಮೂತಿ ಉದ್ದ ಮಾಡಿ ನಿಲ್ಲುತ್ತಿದ್ದ ಅವನ ಭಂಗಿ ಎಲ್ಲವೂ ನಮಗೆ ಮನೋರಂಜನೆ ನೀಡುತ್ತಿದ್ದವು. ಟಿ.ವಿ.ಯಲ್ಲಿ ಬರುವ ಪ್ರತಿ ವಿಷಯದಲ್ಲೂ ವಿಪರೀತ ಕುತೂಹಲ. ಎಲವನ್ನೂ ತಿಳಿದುಕೊಳ್ಳುವ ಕೆಟ್ಟ ಕಾತರ.
ಒಮ್ಮೆ ಯಾವುದೋ ಸಿನಿಮಾದಲ್ಲಿ ಯಾರೋ ಸತ್ತರೆಂದು ಗೋಳಾಡುತ್ತ
“ಪಾಪ, ಆಟ್ಸ್ಸಣ್ಣೊಯ್ಸು ಯಂಗೆ ತರ್ಕೆಂಡ್ನಲ್ಲಮ್ಮೆ...? ಏನಮ್ಮೆ ಅವ್ನಿಗೇನರ ಬ್ಯಾಂಡೀಜಾಗಿತ್ತೇನಮ್ಮೆ...?” ಎಂದು ಕೇಳಿದ. ನಾನು ಹಣೆ ಚಚ್ಚಿಕೊಳ್ಳುತ್ತ,
“ಅದೇನಲೇ ಬ್ಯಾಂಡೀಜೂ...?” ಎಂದು ಕೇಳಿದರೆ ಅದುವರೆಗೂ ಅಳುತಿದ್ದವ ಜೋರಾಗಿ ನಗತೊಡಗಿದ.
“ಬ್ಯಾಂಡೀಜಂದ್ರೆ ಗೊತ್ತಿಲ್ಲೇನಮ್ಮೆ? ಮತ್ತೆ ನಮ್ಮೂರ್ ಡಾಟ್ರು ಯೇಳಿದ್ರು ಅದೊಂದು ದೊಡ್ರೋಗ ಅಂತೆ. ನಮ್ಮ ಸಣ್ಣಪ್ಪನ್ಮಗ ಇಂಗೆಯಾ ವೋದ್ವರ್ಸ ಬ್ಯಾಂಡೀಜಾಗಿ ತೀರ್ಕೆಂಡ. ಅಲ್ಲಮ್ಮೆ, ಪಾಡಾಗೇ ಇದ್ದ. ಒಮ್ಮೆಗೆ ಮೈಯಲ್ಲಾ ಅರುಸ್ಣ... ಕಣ್ಣೆಲ್ಲ ಅರುಸ್ಣ... ಕ್ವನೀಗೆ ತಿರುವ್ಕೆಂಡು, ತಿರುವ್ಕೆಂಡು ತರ್ಕೆಂಡೇಬಿಟ್ನಮ್ಮೆ...” ದುರುಗ ಮತ್ತೆ ಅಳತೊಡಗಿದ.
ಅವ ‘ಅರುಸ್ಣ’ ಅಂದಾಕ್ಷಣ ನಂಗೆ ಫ್ಲಾಷ್ ಆಗಿದ್ದು ಅವರೂರ ಡಾಟ್ರು ಹೇಳಿದ ದೊಡ್ಡರೋಗ ಬ್ಯಾಂಡೀಜಲ್ಲ ಜಾಂಡೀಸ್ ಅಂತ.
ಅವ ಅಳುತ್ತಿದ್ದು ನೋಡಿ ಕಷ್ಟಪಟ್ಟು ನಗು ನುಂಗಿದೆ.
“ಹೋಗ್ಲಿ ಬಿಡೊ...” ಎಂದರೂ ಕೇಳಲಿಲ್ಲ ಅವ.
“ಅಯ್ಯೋ ಈಗಿನ್ಕಾಲದಾಗೆ ಮಿಟ್ಗಿದ್ರೆ ಮಿಸ್ಗಿದ್ರೆ ಸಾಯ್ರ್ಕಣಮ್ಮೆ ಮನುಸ್ರು... ಬ್ಯಾಂಡೀಜಗಿರ್ಲಿ ನಮ್ಮಟ್ಟಿ ಮಲ್ಲಪ್ಪಣ್ಣುನೇಣ್ತಿ ರತುನ ಸಾವ್ಕರ್ರು ಮನೆರ್ಕೂಡೆ ಹಾಲಿಂಡಸ್ಟೂರು ಮಾಡಿ ತರ್ಕೆಂಡ್ ಅದೇವೋದ್ಲು...” ನಾನವನನ್ನ ಅರ್ಧಕ್ಕೆ ತಡೆದು,
“ಏನಂದೆ…? ಏನ್ಮಾಡಿದ್ಲು ಅಂದೆ...?” ಎಂದು ಒತ್ತಿಒತ್ತಿ ಕೇಳಿದೆ.
“ಅದೇ ಕಣಮ್ಮೆ ಹಾಲಿಂಡಸ್ಟೂರು ಮಾಡಿ, ದೆವ್ವ ಮೆಟ್ಕೆಂಡು ಮರ್ಕಂಡದೇ ವೋತು ಆಕಿನ...” ಅಂದ.
“ಅಯ್ಯೋ ಮಾರಾಯ ಅದೇನ್ ಹಾಲಿಂಡಸ್ಟೂರು? ಅದೇನ್ ಮರ್ಕಂತು...? ನನಗಂತು ಏನೇನು ತಿಳೀವಲ್ದು...” ಎಂದು “ನೋಡೂ, ಬೇರೆ ಪುರಾಣ ಎಲ್ಲ ನಿಲ್ಸಿ ಮೊದ್ಲು ಹಾಲಿಂಡಸ್ಟೂರು ಅಂದ್ರೇನು ಹೇಳು...” ಅಂದೆ.
ಅವ ನನ್ನ ಮೇಲಿಂದ ಕೆಳಗ ನೋಡತೊಡಗಿದ. ನನ್ನ ಮಹಾ ಪೆದ್ದಳೆಂದು ಭಾವಿಸಿದನೋ ಅಥ್ವಾ ಅವನಿಗೇನು ಹೇಳಬೇಕೆಂದು ತೋಚಲಿಲ್ಲವೋ ಕಣ್ಕಣ್ಣು ಬಿಡತೊಡಗಿದಾಗ,
“ಅಲ್ವೋ ದುರುಗ, ಹಾಲಿಂಡಸ್ಟೂರು ಅಂದ್ರೆ ಏನು...? ಅಲ್ಲ ಕಣೋ ಹಾಲ್ನ ಸ್ಟೋರ್ ಮಾಡೋದಾ...? ಇಲ್ಲ ಹಾಲಿಗೆ ಸಂಬಂಧಪಟ್ಟ ಏನಾದ್ರು ಪದಾರ್ಥನ...? ಅಥ್ವಾ ಹಾಲಿನಿಂದ ಮಾಡೋ ತಿನಿಸಾ? ಅಂದ್ರೆ ಪಾಯಸ, ಹುಗ್ಗಿ...?”
ನನ್ನ ಮಾತು ಕೇಳಿದ್ದೆ ಅವ ಹೊಟ್ಟೆಯಿಡಿದು ಉರುಳಾಡಿ ನಗತೊಡಗಿದ. ನಾನೊಂದು ಕ್ಷಣ ಪೆಚ್ಚಾದೆ. ಇವ ನನ್ನ ಲೇವಡಿ ಮಾಡಿ ನಗುವನಲ್ಲ ಎಂದು ಕೋಪವೂ ಬಂದು,
“ನಗಬೇಡ....” ಅಂತ ಗದರಿದೆ.
ಅವ ಎದ್ದು ಕುಳಿತು ನಗುತ್ತಲೇ ಹೇಳಿದ
“ಅಲ್ಲಮ್ಮೆ ಹಾಲಿಂಡಸ್ಟೂರಂದ್ರೆ ಉಗ್ಗಿ ಅಂತೀಯಲ್ಲಾ? ಅಂಗಂದ್ರೆ... ನಮ್ ದೇಸನ ಆ ಮೂಲಿಂದ ಈ ಮೂಲಿತಂಕ ಬಿಡದಂಗೆ ಎಲ್ಲಾ ನೋಡ್ಕೆಂಡ್ಬರಾದೂ...” ಅಂದ.
“ನಮ್ ದೇಸಾ…?” ನಾನು ಯೋಚಿಸತೊಡಗಿದೆ. “ನಮ್ ದೇಸ. ಹಾಲಿಂಡಸ್ಟೂರು, ಹಾಲಿಂಡಸ್ಟೂರು... ನಮ್ ದೇಸ, ಅಂದ್ರೆ ಇಂಡಿಯಾ... ಯೆಸ್ ಇಂಡಿಯಾನ ಆ ಮೂಲೆಯಿಂದ ಈ ಮೂಲೆತನ್ಕ ಅಂದ್ರೆ ಟೂರ್ ಮಾಡರ್ಬಹುದೇ? ಅಂದ್ರೆ ಇಂಡಿಯಾ... ಓಹ್!” ನಾನೀಗ ಬಿದ್ದುಬಿದ್ದು ನಗತೊಡಗಿದೆ.
ಆಲ್ ಇಂಡಿಯಾ ಟೂರ್ ಇವನ ಬಾಯಲ್ಲಿ ಹಾಲಿಂಡಸ್ಟೂರಾಗಿತ್ತು. ನಕ್ಕು, ನಕ್ಕು ಸಾಕಾಗಿ ಆಮೇಲೆ ಕೇಳಿದೆ “ಅಲ್ವೊ, ಸರಿಯಪ್ಪ ಹಾಲಿಂಡಸ್ಟೂರಿಗೂ, ದೆವ್ವಕ್ಕೂ ಏನೋ ಸಂಬಂಧ...?”
“ಅಯ್ಯ, ಅದೊಂದೊಡ್ಕತೆ ಕಣಮ್ಮೆ..” ಎಂದು ಹೇಳತೊಡಗಿದ.
ನಾನು ಮತ್ತೆ ನಗಲು ರೆಡಿಯಾಗಿ ಕೂತೆ.
“ನಮ್ಮರ್ನ ಸಾವ್ಕರ್ಮನ್ಯೇರೆಲ್ಲ ಸರ್ಕೆಂಡು ಹಾಲಿಂಡಸ್ಟೂರು ಮಾಡಕೊಂಟ್ರೇನಮ್ಮೆ. ಅಲ್ಲೋದ್ಬಳ್ಕೆ ಏನನ ಕೆಲ್ಸ ಪಲ್ಸಕ್ಕೆ ಬತ್ತಳಂತ ನಮ್ ಮಲ್ಲಪ್ಪನೇಣ್ತಿ ರತುನನ್ನು ಜತಿಗೆ ಕರ್ಕಂಡ್ರು. ಆಕೆ ಅಲ್ಲೇ ಅರ್ಮನ್ಯೆಗೆ ಕೆಲ್ಸಕಿದ್ಲು. ಪಾಪ ಕಣಮ್ಮೆ ಎಂಟ್ತಿಗ್ಳು ಕೂಸಿತ್ತು. ಆಕಿ ವೋಗಂಗೇ ಇರ್ಲಿಲ್ಲ. ಗಂಡುನ್ನ ಮನಿಗೇ ಕರಸ್ಕಂಡ್ರು. ಒಂದೈನೂರ ಕೊಟ್ಟು ಬೆಳಗ್ಯೆ, ಸಂಜೀಗೆ ಮಗೀಗೆ ವಯ್ಯಾಲು ತಂದಾಕು ಅಂದ್ರು, ರತುನನ್ನು ಕರ್ಕಂಡದೇ ವೋದ್ರು. ಕೂಸ್ನ ಬಿಡಲರ್ದ ಬಿಟ್ಟೋದ್ಲು.
ತರ್ಗಿ ಬಂದ್ಯಾಕೆ ನೋಡ್ತೀವಿ... ಮೈಯ್ಯಾಗೆ ಕಸುವೇ ಇಲ್ದಂಗೆ, ಜರ ಸುಟ್ಗಂಡೂ ಸೋತು ಸುಣ್ಣಾಗಿದ್ಲು ಕಣಮ್ಮೆ... ಎಟೊತ್ತಂದ್ರೆ ಆಟೋತ್ನಾಗೆದ್ದು ಜೋರಾಗಿ ಅರುಸ್ಸಳು... ಬಿಡ್ರೋ ನನ್ಬಿಡ್ರಪ್ಪ ನಿಮ್ಮ ದಮ್ಮಯ್ಯ ನಿಮ್ಕಾಲಿಗ್ಬೀಳ್ತೀನ್ ಬಿಡ್ರೋ ಅಂತ ಅರಸ್ಸುಳಂಗೆಯಾ...”
“ಡಾಕ್ಟರಿಗೆ ತರ್ಸದಲ್ವೇನೊ...” ಆಕಳಿಸುತ್ತ ಕೇಳ್ದೆ ನಾನು. ಕಣ್ಣೆಳೆಯುತ್ತಿದ್ವು.
“ಅಯ್ಯೋ ಸಿವ್ನೆ ಎಲ್ಲಾರುಂಟೇನಮ್ಮೆ? ಅಲ್ಲಿ ವೋದ್ಕಡಗೆ ಎಲ್ಲಂದ್ರಲ್ಲಿ, ಎಟೊತ್ನಾಗಂದ್ರೆ ಆಟೊತ್ನಾಗಿ ಸುತ್ಬಿಟ್ಟಾರೆ. ಮೊದ್ಲೆ ಬಾಣ್ತಿ ಹಸಿ ಮೈಯಿ ಕೇಳ್ತಿಯೇನಮ್ಮೆ. ಒಳ್ಳೆ ಗನವಾದ ದೆವ್ವ ಮೆಟ್ಕಂಡ್ಬಿಟ್ಟಿತ್ತು. ಒಂದ್ತಿಂಗ್ಳು ಗಂಟ ಅಂಗೆ ಅರುಸ್ತಿದ್ಲಾ? ಅಮ್ಯಾಕೆ ತಿರುಸ್ಕೆಳಾಕತ್ತಿದ್ಲು. ಏನ್ತಿಂದ್ರೂ ತಿರುಸ್ಕೆಳಾದೆ... ಏನ್ಕುಡುದ್ರೂ ತಿರುಸ್ಕೆಳಾದೆಯಾ... ಕ್ವೊನಿಗೇ ಯಾತ್ರುದ್ದು ವಾಸ್ನೇನೂ ಆಗ್ರ್ದಂಗಾತೂ...”
ಇದುವರೆಗು ಅವ ಹೇಳದ್ದನ್ನೆಲ್ಲ ಹಗರುವಾಗಿ ತಗೊಂಡು ನಗುತ್ತಿದ್ದ ನಾನು ಒಮ್ಮೆಗೆ ಗಂಭೀರಳಾಗಿ,
“ಅಲವೋ ಸಾವ್ಕರ್ರೂ.....” ನಾನು ಕೇಳಿದ ಕುತೂಹಲದಿಂದ.
“ಬಂದ್ರಮ್ಮೆ ರತುನ ತಿರುಸ್ಕಂತವ್ಳೆ ಅಂತ ಗೊತ್ತಾಗಿ ತಕ್ಸಣುಕೆ ಬಂದ್ರು. ನಿಂತ ನಿಲುವಿನ್ಯಾಗೆ ರತುನನ್ನ ಗಾಡಿಮ್ಯಾಕೆ ಆಕ್ಕೆಂಡು ತಗಂಡೋದ್ರು ಮಲ್ಲಪ್ಪ ಸಾವ್ಕರ್ರು ಮನಿತಾವ್ಕೇ. ಅಲ್ಲ್ಯಾರೋ ಪಂಡಿತ್ರು ಬಂದಿದ್ರಂತೆ. ಏನೇನ್ ಬಡುದಾಡಿದ್ರು ಉಹೂಂ ರತುನ ವುಳಿಲಿಲ್ಲ. ಕ್ವನಿಗೆ ಮೈಯಲ್ಲ ನೀಲ್ಯಾಗಿ, ಬಾಯ್ತುಂಬ ನೊರೆ ಕಕ್ಕಿ ಅಲ್ಲೇ ಸಾವ್ಕರ್ಮನಿತಾವೆ ಸತ್ತೋದ್ಲು. ದಿವುಸುಕ್ಕೆ, ಮಣ್ಣಿಗೆ ಪಾಪ ಎಲ್ಲಾ ಖರ್ಚು ಸಾವ್ಕರ್ರೆ ಕೊಟ್ರು ಕಣಮ್ಮೆ. ರತುನ ಸತ್ತು ಒಂದ್ವರ್ಕೆ ಕೂಸು ಹಾಲಿಲ್ದಂಗೆ, ನೋಡಾರಿಲ್ದಂಗೆ ವಯ್ಯಕೆಂಡು, ವಯ್ಯಕೆಂಡು ಅದೂ ತರ್ಕೆಂತು...”
ದುರುಗ ಅಳುತ್ತಿದ್ದ. ನನ್ನ ಹೊಟ್ಟೆಯಲ್ಲೂ ವಿಚಿತ್ರ ಸಂಕಟ, ತಳಮಳ ಆಗುತ್ತಿತ್ತು. ದುರುಗನಿಗೆ ನಿಜಸ್ಥಿತಿ ಏನೆಂದೇ ತಿಳಿದಿರಲಿಲ್ಲ. ರತುನಳನ್ನು ಮೆಟ್ಟಿದ್ದು ದೆವ್ವಕ್ಕಿಂತಲೂ ಭಯಂಕರವಾದ, ಮೃಗಕ್ಕಿಂತಲೂ ಕಡೆಯಾದ ನೀಚ ಮನುಷ್ಯರ ವಿಕೃತ ಕಾಮುಕತೆ ಎಂಬ ಸತ್ಯ ತಿಳಿದರೆ ಇವ ಏನಾದಾನು..? ಯೋಚಿಸಿ ನಿಟ್ಟುಸಿರಿಟ್ಟೆ. ನನ್ನ ನಿದ್ದೆ ಹಾರಿಹೋಗಿತ್ತು.
ದುರುಗ ಮತ್ತೆ ಹೇಳತೊಡಗಿದ. “ಅದಾಗಿ ಸ್ರ್ಯಾಗಿ ಒಂದ್ತಿಂಗ್ಳಿಗೆ, ಅಮಾಸೆ ದಿನ ಸಾವ್ಕರ್ನೇಣ್ತಿನೂ ದೆವ್ವ ಮೆಟ್ಕಂಡು ಸತ್ತೇವೋದ್ಲು. ‘ರತುನ ನಾನ್ ತೆಪ್ಮಾಡ್ದೆ. ನಾವೆಲ್ಲ ತ್ಯಪ್ಮಾಡಿದ್ವಿ ನಮ್ಮನ್ನ ಬಿಟ್ಬಿಡವ್ವ...’ ಅಂತ ಅರುಸ್ಸಿ, ಅರುಸ್ಸಿ ಅವ್ಳೂ ಸತ್ಲಂತೆ. ರತುನ ಅಕೀನೂ ಮೆಟ್ಗೆಂಡು, ಮರ್ಕಂಡದೆ ವೋದ್ಲಮ್ಮೆ. ಆಮ್ಯಾಕೆ ಇಡೀ ಹಟ್ಟಿಗೇ ಮಂತ್ರುವಾದಿನ್ ಕರ್ಸಿ ಕಟ್ಟು ಮಾಡ್ಸಿದ್ವೆಮ್ಮೆ…”
ಅಯ್ಯೊ ಎಂತಹ ಮೂರ್ಖತನ! ಎಂತಹ ಅಮಾಯಕತೆ..! ಒಂದು ವೇಳೆ ನಿಜಸ್ಥಿತಿ ತಿಳಿದಿದ್ರೂ ಇವರು ಏನಾದರೂ ಮಾಡಲು ಸಾಧ್ಯವಿತ್ತೆ? ಇವರಿಗೆ ನ್ಯಾಯ ಸಿಗುತ್ತಿತ್ತೆ...? ರತುನಳ ಸಾವು, ಅವಳ ಕೂಸಿನ ಸಾವು ಕೇವಲ ಸಾವೇ? ಇಲ್ಲ ಕೊಲೆಯೇ...? ಇದೇ ಮುಂತಾದ ವಿಚಾರಗಳು ಕಣ್ಣೆವೆಯಲ್ಲಿ ನುಸಳಿ, ನುಸಳಿ ಮತ್ತೆ ಮತ್ತೆ ಕಾಡುವ ನೊರಜಗಳಂತೆ ಇಡೀ ರಾತ್ರಿ ಕಾಡಿದವು.
ಇನ್ನೆರಡು ತಿಂಗಳಲ್ಲಿ ಫೈನಲ್ ಇಯರ್ ಪರೀಕ್ಷೆಗಳು ಶುರುವಾಗುವುದರಲ್ಲಿದ್ದವು. ಪಾರು, ಗೌರಿಯ ಜತೆಯಲ್ಲಿ ರೇಖಳೂ ಉಳಿದ ಸಬ್ಜೆಕ್ಟ್ ಕ್ಲಿಯರ್ ಮಾಡಿಕೊಳ್ಳಲು ಊರಿಂದ ಬಂದಿದ್ದಳು. ನಾವು ನಾಲ್ವರು ಒಟ್ಟಿಗೆ ಸೇರಿದೆವೆಂದರೆ ಮುಗೀತು ನಾವು ಮಾತನಾಡದ ವಿಷಯಗಳಿಲ್ಲ. ರಾಜಕೀಯ, ಭ್ರಷ್ಟಾಚಾರ, ಶೋಷಣೆ, ಕಲೆ, ಸಾಹಿತ್ಯ, ಅತ್ಯಾಚಾರ, ವ್ಯಭಿಚಾರ, ಸೆಕ್ಸು ಈ ಎಲ್ಲವೂ ನಮ್ಮ ಚರ್ಚೆಗೆ ಒದಗುತ್ತಿದ್ದ ವಿಷಯಗಳು. ಅದರಲ್ಲೂ ರೇಖಳಿಗೆ ಸೆಕ್ಸ್ ತುಂಬಾ ಆಕರ್ಷಕವಾದ ಮತ್ತು ಆಸಕ್ತಿಯುಳ್ಳ ವಿಷಯ.
ಒಬ್ಬಳೇ ಮಗಳೆಂಬ ಅತಿಮುದ್ದಿನ ಫಲವಾಗಿ ತೀರ ಚೆಲ್ಲುಚೆಲ್ಲಾದ, ಎಗ್ಗುಸಿಗ್ಗಿಲ್ಲದ ಸ್ವಲ್ಪವೂ ಸೀರಿಯಸ್ನೆಸ್ ಇಲ್ಲದ ಖ್ಯಾತನಾಮಳು. ಆಕೆಯ ಸಿನಿಮಾದ ಹೀರೋಗಳಿರಲಿ, ಸ್ವಲ್ಪ ಸ್ಮಾರ್ಟಾದ ಬೀದಿ ಕಾಮಣ್ಣಗಳಿರಲಿ, ಕಸಗುಡಿಸುವವ ಆಗಲಿ, ತಿಪ್ಪೆ ಎತ್ತುವವನಾಗಲಿ ಎಲ್ಲರೂ ಆಕೆಗೆ ಸೆಕ್ಸಿಯೆ. ಅಷ್ಟೇ ಏಕೆ ಬೆಳಗ್ಗಿನ ಜಾಗಿಂಗ್ ಸಮಯದಲ್ಲಿ ಎದುರಿಗೆ ಸ್ವಲ್ಪ ಫಿಟ್ಟಾದ ಅಜ್ಜ ಬಂದರೂ ತೀರಿತು “ಲುಕ್ ಯಾರ್... ವ್ಹಾಟ್ ಎ ಸೆಕ್ಸೀ ಗ್ರಾಂಡ್ ಪಾ..!” ಎಂದವರ ಹಿಂದೆಯೇ ಓಡಲು ತೊಡಗುತ್ತಿದ್ದಳು. ನಾವು ಆಕೇನ ಹಿಡಿದು ಮುಂದಕ್ಕೆ ಎಳೆದೊಯ್ಯುತ್ತಿದ್ದೆವು. ಮಾತು ಮಾತಿಗೂ ಸೆಕ್ಸೀ ಎನ್ನವುದು ಆಕೆಗೆ ರೂಢಿಯಾಗಿ ಹೋಗಿತ್ತು. ಇಂತಹವಳ ಕೈಯಲ್ಲಿ ಸಿಕ್ಕಿಬಿದ್ದ ದುರುಗ.
ನಾಲ್ವರು ಕಂಬೈನ್ಡ್ ಸ್ಟಡಿ ಮಾಡಲು ನಮ್ಮನೆಯಲ್ಲೇ ಸೇರುತ್ತಿದ್ದೆವು. ದುರುಗನನ್ನು ನೋಡಿದ ಘಳಿಗೆಯಿಂದಲೇ “ಟೈಂಪಾಸ್ ಮಾಡಲು ಇದಕ್ಕಿಂತಲೂ ಒಳ್ಳೆಯ ಸಾಧನ ಇನ್ನೇನು ಬೇಕು...” ಎನ್ನುತ್ತ ಅವನ ಎದುರು ಬಂದಾಗಲೆಲ್ಲ ಸಿಳ್ಳೆ ಹೊಡೆದು, ಕಣ್ಣೊಡೆದು,
“ಯೂ ಆರ್ ರಿಯಲೀ ಸೆಕ್ಸಿ ಕಣೋ ದುರುಗ...” ಎಂದೋ,
“ನಿನ್ನ ಮೀಸೆ ಸೆಕ್ಸಿ...” ಎಂದು ಅವನ ಮೀಸೆಯಿಡಿದು ಜಗ್ಗುವುದೋ,
“ನಿನ್ನಂಗಿ ಸೆಕ್ಸಿ...” ಎಂದು ಅವನ ಅಂಗಿ ಎಳೆಯುವುದೋ,
“ನೀ ನಕ್ಕರೆ ಸೆಕ್ಸಿ...” ಎಂದು ಕೆನ್ನೆ ಹಿಂಡುವುದೋ ಇವೇ ಮುಂತಾದ ಚೇಷ್ಟೆಗಳಿಂದ ಅವನನ್ನು ಬಫೂನ್ ಮಾಡಿ, ತಾನು ಮಜ ತೆಗದುಕೊಳ್ಳುತ್ತಿದ್ದಳು. ಆಕೆಯೊಡನೆ ನಾವು ಸೇರಿ ನಗುತ್ತಿದ್ದೆವು.
ಅವಳ ಚೇಷ್ಟೆ ಜಾಸ್ತಿಯಾದ ಹಾಗೆ ಒಂದು ದಿನ ದುರುಗ ಬಂದವನೆ,
“ಅಲ್ಲಮ್ಮೆ ನಮ್ಮರ್ನಗೆ ವೊಲ್ಸು ತುಳುದ್ರೆ, ಯೇಸ್ಗೆ ಮಾಡಿದ್ರೆ ಇಸ್ಸಿ ಇಸ್ಸಿ ಅಂತಾರೆ. ಈಯಮ್ಮ ದಿನಾಲು ನನ್ನ ಮೈಯ್ಯಲ್ಲ ಮುಟ್ಮುಟ್ಟಿ ಇಸ್ಸಿ ಇಸ್ಸಿ ಅಂತಾಳಲ್ಲ... ಏನಮ್ಮೆ ನನ್ ಮೈಯಿ ಆಟೋಂದ್ ವೊಲ್ಸಾಗೈತ್ಯೆ...?”
ಎಂದು ಕೇಳಿದಾಗ ಒಂದು ಕ್ಷಣ ಎಲ್ಲರೂ ಪೆಚ್ಚಾದೆವು.
ರೇಖಳಿಗೆ ಅವನ ಮೈಕೈ ಮುಟ್ಟಬೇಡ, ಅತಿ ಮಾಡಬೇಡ ಎಂದು ನಾನು ಆಗಾಗ ಹೇಳುತ್ತಿದ್ದೆ. ಆದರವಳು,
“ಲೇ ನಾನ್ಮುಟ್ತಿನಿ ಅನ್ನೋ ಫೀಲಿಂಗಾದ್ರೂ ಆ ಎಮ್ಮೆಗೆ ಆಗುತ್ತೊ ಇಲ್ವೋ ಸುಮ್ನಿರೆ. ಬಿಟ್ಟಿ ಮನೋರಂಜನೆ ಯಾರಿಗುಂಟು ಯಾರಿಗಿಲ್ಲ...” ಎಂದು ನನ್ನ ಬಾಯಿ ಮುಚ್ಚಿಸುತ್ತಿದ್ದಳು.
ಆದರಿಂದು ಅವನು ಆಡಿದ ಮಾತುಗಳಿಂದ ನಾವಂದುಕೊಂಡಷ್ಟು ಕೊರಡಲ್ಲ ಅವ ಎನಿಸಿತು ನನಗೆ.
“ನೋಡು ನಿನ್ನ ಹುಡಗಾಟ ಪೇಚಾಟಕ್ಕಿಟ್ಟುಕೊಂಡೀತೆ ಸಾಕು ಮಾರಾಯ್ತಿ ನೀನವ್ನ ಸುದ್ದಿಗಿನ್ನ ಹೋಗ್ಬೇಡ...” ಎಂದು ರೇಖಳನ್ನು ವಾರ್ನ್ ಮಾಡಿ ತಡೆಯುವ ಪ್ರಯತ್ನ ಮಾಡಿದೆ. ಆದರಾಕೆ ಎಲ್ಲಿ ಕೇಳಬೇಕು. ಬದಲಿಗೆ ದುರುಗನನ್ನೇ ಓಲೈಸತೊಡಗಿದಳು.
“ಅಯ್ಯೋ ದುರುಗಾ, ನಾನು ನಿನಗೆ ಇಸ್ಸಿ ಅಂತನೆನೋ...? ಅಲ್ವೋ ನಾನಂದದ್ದು ಸೆಕ್ಸೀ ಅಂತ. ಹಂಗಂದ್ರೆ ಹುಡುಗೀರು ಯಾರ್ನ ಭಾಳ ಪ್ರೀತಿ ಮಾಡ್ತರಲ್ಲ ಅವರ್ನ ಸೆಕ್ಸೀ ಅಂತಾರೆ... ಗೊತ್ತಾಯ್ತೇನೋ ಸೆಕ್ಸೀ ದುರುಗಾ...” ಮತ್ತೆ ಅವನ ಕೆನ್ನೆ ಸವರಿದಳು. ಸ್ಸರಿ, ಅವ ನಾಚಿ ನೀರಾಗಿ, ಬೆವತು, ಗದಗದ ನಡುಗಿ, ಮೂರ್ಛೆ ಹೋಗುವುದೊಂದು ಬಾಕಿಯಷ್ಟೆ.
ಇದ್ದಕ್ಕಿದ್ದಂತೆ ಅವನಿಗೆ ತನ್ನ ಬಟ್ಟೆಬರೆ, ಕೂದಲು, ಮುಖ, ಚರ್ಮ ಎಲ್ಲದರಲ್ಲೂ ಹೊಸ ಆಸಕ್ತಿ ಮೂಡತೊಡಗಿತು. ಹಾಗೆಯೇ ಕೆಲಸ ಕಾರ್ಯ, ಊಟ, ತಿಂಡಿ, ಕೊನೆಗೆ ಲಕ್ಷ್ಮೀಯಲ್ಲೂ ಆಸಕ್ತಿ ಕಳೆದುಕೊಳ್ಳತೊಡಗಿದ. ರೇಖ ಹೇಳಿದ್ದೆಲ್ಲ ವೇದವಾಕ್ಯ ಆಗಿಹೋಯ್ತು ಅವನಿಗೆ. ಒಮ್ಮೆ ಆಕೆ,
“ದುರುಗ ನೀನು ಮೀಸೆ ಬೋಳ್ಸು ನೋಡೂ ಎಷ್ಟು ಸೆಕ್ಸಿಯಾಗಿ ಕಾಣ್ತಿಯಾಂದ್ರೆ ನಿನ್ನಂಗೇ ಯಾರೂ ಇರಲ್ಲ ಬಿಡೋ...” ಎಂದುಬಿಟ್ಟಳು ಮೈಯೆಲ್ಲ ಕುಣಸುತ್ತ. ಅವ ಆ ಕ್ಷಣವೇ ಮೀಸೆ ಬೋಳಿಸಲು ತಯಾರಾದ.
ಮೈಯೆಲ್ಲ ಉರಿ ಎದ್ದ ನಾನು ಕೆಟ್ಟದಾಗಿ ಗದರಿಸಿ ನಿಲ್ಲಿಸಿದೆ ಅವನನ್ನ.
“ಲೇ ತೆಪ್ರ್ಮುಂಡೆದೇ ಮೀಸೆ ಬೋಳಿಸಿದ್ರೆ ಸೆಕ್ಸಿಯಾಗಿ ಕಾಣಲ್ಲ ನೀನು, ಬದ್ಲಿಗೆ ಗಂಡ್ಜೋಗ್ತಿ ತರಹ ಕಾಣ್ತೀಯ. ಇಲ್ನೋಡು ಇರೋ ಮೀಸೆನ ಬೋಳಿಸಿದ್ರೆ ಎಲ್ರೂ ಕಾಣದು ಹಾಗೇನೇ ಗೊತ್ತಾಯ್ತಾ...? ಹೋಗ್ ಕೆಲ್ಸ ನೋಡ್ ನಡಿ...” ಎಂದವನನ್ನು ಅಲ್ಲಿ ನಿಲ್ಲದೆ ಓಡಿಸಿದ್ದೆ.
ಇಷ್ಟಾದರೂ ರೇಖ ಬಿಡಲಿಲ್ಲ ಅವನಿಗೆ ಪ್ಯಾಂಟು ಟೀ ಶರ್ಟ್ನ ಹೊಸ ಐಲು ಹಿಡಿಸಿ ಕೈಬಿಟ್ಟಳು. ಅವನು ಒಮ್ಮೆಗೆ ಅಮ್ಮನಿಗೆ ಗಂಟುಬಿದ್ದು, ಒಪ್ಪಿಸಿ ಊರಿಗೆ ಹೊರಟ. ಅವನತ್ತ ಹೋಗುತ್ತಲೂ ನಾವು ಸಂಪೂರ್ಣ ಪರೀಕ್ಷೆಯ ಟೆನ್ಷನ್ನಲ್ಲಿ ಗಂಭೀರವಾಗಿ ಓದತೊಡಗಿದೆವು.
ಪರೀಕ್ಷೆ ಸ್ಸರಿಯಾಗಿ ಒಂದು ವಾರ ಉಳಿದಿತ್ತು. ನಾವು ಸೀರಿಯಸ್ ಡಿಸ್ಕಷನ್ನಲ್ಲಿ ತೊಡಗಿದ್ದೆವು. ದಿಢೀರನೆ ಪ್ಯಾಂಟು, ಟೀ ಶರ್ಟ್ನಲ್ಲಿ ನಮ್ಮೆದುರಿಗೆ ಪ್ರತ್ಯಕ್ಷನಾದ ದುರುಗ. ಮೀಸೆಯನ್ನೂ ಬೋಳಿಸಿದ್ದ. ಕಣ್ಣು ಬಾಯಿ ಬಿಟ್ಟುಕೊಂಡು ನಾಲ್ವರೂ ದಂಗಾಗಿ ಕುಳಿತೆವು.
ಅವ ಸೀದಾ ಹೋಗಿ ರೇಖಳ ಮುಂದೆ ನಿಂತು ಭುಜ ಕುಣಸಹತ್ತಿದ. ಶಿಳ್ಳಾಕುತ್ತಾ, ಆಕೆಯ ತರಹವೇ ಕಣ್ಣು ಮಿಟುಕಿಸುತ್ತ,
“ಚೆಸ್ಸಿ ರೈಕಾ...” ಅಂದ.
ರೇಖ ಮಾತಾಡುವುದರಿಲಿ ಉಸಿರಾಡಲೂ ಆಗದಂತೆ ಸ್ಟಿಲ್ಲಾಗಿ ಕೂತಿದ್ದಳು. ಅವನನ್ನು ಆ ವೇಷದಲ್ಲಿ ನೋಡಿದ ಹಾಗೆಯೇ ಆಕೆ ಪೂರ್ಣ ತಣ್ಣಗಾಗಿ ಹೋಗಿದ್ದಳು. ಅವಳಿಂದ ಯಾವ ಪ್ರತಿಕ್ರಿಯೆಯೂ ಬಾರದಾಗ ಅವನೇ ಮುಂದುವರಿದ. ರೇಖಳ ಕೆನ್ನೆಗಳನ್ನು ಸವರಿ, ಎಳೆದು ಹಿಂಡಿಬಿಟ್ಟ. ಕಿಟಾರನೆ ಕಿರುಚಿದಳಾಕೆ. ಅವ ನಗಹತ್ತಿದ. ನಾನು ಗಾಬರಿಗೊಂಡು ಧಾವಿಸಿದವಳೆ ಅವನ ಕೆನ್ನೆಗೆ ನಾಲ್ಕು ಬಿಗಿದು, ಕೋಣೆಯಿಂದ ಆಚೆ ದಬ್ಬಿದೆ.
ಮೂವರು ಸೇರಿ ರೇಖಳನ್ನು ಎಷ್ಟು ಸಮಾಧಾನಗೊಳಿಸಿದರೂ ಕೇಳಲಿಲ್ಲಾಕೆ.
“ಥೂ ಅಸಹ್ಯ..!” ಎಂದು ಕೆನ್ನೆಗಳನ್ನು ಜೋರಾಗಿ ತಿಕ್ಕುತ್ತ ನಡುಗತೊಡಗಿದಳು.
ಗಲಾಟೆ ಕೇಳಿ ಅಮ್ಮ ಓಡಿ ಬಂದೇಬಿಟ್ಟಳು. ವಿಷಯ ತಿಳಿದು ಸೀದ ಅವನನ್ನರಸಿ ಎಮ್ಮೆ ಮನೆಗೆ ಓಡಿದಳು. ಅಪ್ಪ ಅದುವರೆಗೂ ಗೋಡೆಯಲ್ಲಿ ಷೋಗೆ ನೇತಾಡುತ್ತಿದ್ದ ಬಾರಕೋಲಿಗೆ ಕೈಹಾಕಿದ್ದೆ ಏನಾಗುತ್ತಿದೆ ಎಂದು ಅರಿವಾಗುವುದರಲ್ಲಿ ದುರುಗನನ್ನು ಸೆಳೆತ ಸೆಳೆದಿದ್ದ.
ಈ ಗಲಾಟೆಯಲ್ಲಿ ಅದ್ಯಾವ ಮಾಯೆಯಲ್ಲೋ ಓಡಿಹೋದ ರೇಖ ತನ್ನ ಕಸಿನ್ಗಳನ್ನು ಕರೆತಂದಳು. ಮೈಲಿಗೆ ಆದವಳಂತೆ, ಮಲಿನಗೊಂಡವಳಂತೆ ಚಡಪಡಿಸುತ್ತ ಅಳುತ್ತಲೇ ಇದ್ಳು. ಅಪ್ಪ ಅಮ್ಮ ತಾವು ಈಗಾಗಲೇ ಅವನನ್ನು ಸರಿಯಾಗಿ ಶಿಕ್ಷಿಸಿರುವುದಾಗಿ ಹೇಳಿದರೂ ಕೇಳದೆ ಎಲ್ಲರೂ ಸೀದ ಎಮ್ಮೆ ಮನೆಗೆ ನಡೆದರು.
ನಾನು ಅಸಹಾಯಕಳಾಗಿ ನಿಂತ ಅಮ್ಮನನ್ನು ಗಟ್ಟಿಯಾಗಿ ತಬ್ಬಿಕೊಂಡೆ. ದುರುಗನ ಚೀರಾಟ ಹೊಟ್ಟೆ ತೊಳೆಸತೊಡಗಿ, ಬಾಯ್ತುಂಬ ನೀರು ತುಂಬಿಕೊಳ್ಳುತ್ತಿತ್ತು. ಬಚ್ಚಲಿಗೆ ಓಡಿ ಕುಸಿದುಬಿದ್ದೆ. ಎಷ್ಟೋ ಹೊತ್ತಿನ ಮೇಲೆ ಒಮ್ಮೆಗೆ ಮೌನ ಆವರಿಸಿ, ಅಪ್ಪ ಬಂದವರೇ ಅಮ್ಮನನ್ನು, ನನ್ನನ್ನು ಒಳಗಿನ ಕೋಣೆಗೆ ಹೋಗುವಂತೆ ಬಲವಂತದಿಂದ ಕಳಿಸಿ ಹೊರಗಿನಿಂದ ಬಾಗಿಲಾಕಿಕೊಂಡು ಹೊರಟು ಹೋದರು.
ಮತ್ತೆ ಅಪ್ಪ ಬಂದು ಬಾಗಿಲು ತೆಗೆದಾಗ ಹೊರಗೆ ಕಾರು ಹೋದ ಶಬ್ದವಾಯ್ತು. ಮಂಕಾಗಿ ಹೆದರಿದಂತೆ ಕಾಣುತ್ತಿದ್ದ ಅಪ್ಪ,
“ಊರಿಗೆ ಬಿಟ್ಟು ಬರ್ತೀವಿ ಅಂತ ಕರ್ಕಂಡೋದ್ರು...” ಎಂದೇಳಿ ಕುರ್ಚಿಯಲ್ಲಿ ಕುಸಿದ.
“ಸದ್ಯ, ಊರಿಗಾದ್ರೂ ಕರೆದೊಯ್ದರಲ್ಲ...” ಎಂದು ಸ್ವಲ್ಪ ಸಮಾಧಾನವಾಯ್ತು ನನ್ನ ಮನಸ್ಸಿಗೆ.
ಸಿಂಗ್ರಳ್ಳಿ ರಾಮಪ್ಪ ಬರಬಹುದು, ಅವನಿಂದ ದುರುಗನ ವಿಷಯ ತಿಳಿಯಬಹುದು ಎಂದು ಕಾಯುತ್ತಲೇ ಇದ್ದೆ ನಾನು. ದುರುಗ ಹೋಗಿ ಆಗಲೇ ಹದಿನೈದು ದಿನಗಳಾಗಿದ್ದವು. ನಮ್ಮ ಮನೆಯಲ್ಲಿ ಸ್ಮಶಾನ ಮೌನ, ಸಣ್ಣಜ್ಜಿ ಮಾತ್ರ ಆಗಾಗ ಕದ್ದು ಕದ್ದು ಕಣ್ಣೀರು ಹಾಕುವುದನ್ನು ನೋಡಿ ಅಚ್ಚರಿಗೊಳ್ಳುತ್ತಿದ್ದೆ. ಪರೀಕ್ಷೆಗೆ ಬರುತ್ತಿದ್ದ ರೇಖಳನ್ನು ಈ ಹಿಂದೆ ಮಾತನಾಡಿಸಿದಂತೆ ಮಾತನಾಡಿಸುವುದು ನನ್ನಿಂದ ಆಗಲೇ ಇಲ್ಲ. ಇಷ್ಟರಲ್ಲೇ ಆಕೆಯ ಮದುವೆಯೂ ಸೆಟಲ್ ಆಗಿ, ನಿಶ್ಚಿತಾರ್ಥಕ್ಕೆ ಬರಬೇಕೆಂದು ಫೋನ್ನಲ್ಲಿ ನನ್ನ ಕರೆದಳು.
“ನನ್ ವುಡ್ ಬೀ ಬಂದು ನೋಡೇ... ಹಿ ಇಸ್ ಸೋ ಸೆಕ್ಸಿ ಕಣೇ... ಒಳ್ಳೆ ಸೆಕ್ಸ್ ಸಿಂಬಲ್ ತರಹ ಇದ್ದಾರೆ ಕಣೇ...”
ನಾನು ರಿಸೀವರ್ ಪಟ್ಟಂತ ಕುಕ್ಕಿಬಿಟ್ಟೆ ಆ ಪದವೇಕೋ ನನ್ನಲ್ಲಿ ನಡುಕ ಹುಟ್ಟಿಸಿತ್ತು. ಅಂದೇ ಸಂಜೆ ಬಂದ ರಾಮಪ್ಪ. ಅವನನ್ನು ಸೀದ ಕೋಣೆಗೆ ಕರೆದೊಯ್ದು ಬಾಗಿಲಿಕ್ಕಿಕೊಂಡರು ಅಪ್ಪ, ಅಮ್ಮ. ನಾನು ಅನುಮಾನದಿಂದ ಬಾಗಿಲಿಗೆ ಕಿವಿಯಾನಿಸಿ ನಿಂತೆ. ಅಪ್ಪ ಅಮ್ಮನ ದನಿಗಳೆಂದು ಗೊತ್ತಾಗುತ್ತಿತ್ತಷ್ಟೆ ಮಾತುಗಳು ಸ್ಪಷ್ಟವಾಗಿ ಕೇಳಿಸುತ್ತಿರ್ಲಿಲ್ಲ.
“ಅವಳತ್ರ ಮಾತಾಡ್ಬೇಡ...” “ಅನುಮಾನ ಬಂತಾ...?” “ದುಡ್ಡು ಕೊಟ್ಯಾ...?” “ಏನಂದ್ರೂ...?” ಇದೇ ತುಣುಕುಗಳು ಕಿವಿಗೆ ಬಿದ್ದವು.
ಆದರೆ ರಾಮಪ್ಪನದು ತುಂಬ ದೊಡ್ಡ ದನಿ. ಅವನ ಮಾತುಗಳು ಸ್ಪಷ್ಟವಾಗಿ ಕೇಳಿಸಿದವು.
“ನೀವು ಕೊಟ್ಟ ಮೂರು ಸಾವ್ರ ಕೊಟ್ಟೆ, ಇಸ್ಗಂಡ್ರು. ಮೊನ್ನಿನಾಗೆ ಊರಿಗ್ಬಂದಾನು ಪ್ಯಾಟೆರಿಗೆ ತಕ್ಕಂಗೆ ನಾನು ಇರ್ಬೇಕು, ಹೊಸ ಬಟ್ಟೆ ಬರೆ ಬೇಕು ಅಂತ ಅವರಪ್ಪ ಅಮ್ಮನ್ಕೂಟೆ ಗುದ್ದಾಡಿ, ಪಾಪ ಅವ್ರು ವರ್ಸಪೂರ್ತಿ ಕಸ್ಟಪಟ್ಟು ಬೆಳೆಸಿದ್ದ ಒಂದು ಚೀಲ ಸೇಂಗ ಮರ್ಕೆಂಡು ದುಡ್ಡು ತಗಂಡದೇ ಬಂದಿದ್ನಂತೆ.
ಅದುಕ್ರ್ಯಾಗಿ ನಾನು ‘ಇಲ್ಲ ಕಣಪ್ಪ ನಿಮ್ ದುರ್ಗ ಹೇಳ್ದೆ ಕೇಳ್ದೆ ಕೆಲ್ಸ ಬಿಟ್ಟು, ಮನಿ ಬಿಟ್ಟು ಆಯಮ್ಮ ಬೈದಾಡಿದ್ಕೆ ಸಿಟ್ಮಾಡ್ಕೆಂಡು ಅದೇ ವೋಗ್ಯಾನಂತ ಸ್ವಾಮೇರು ಬೈದಾಡಿದ್ರು. ಅವ್ನ ಸಾವಸನೇ ಬ್ಯಾಡಂತ ಲೆಕ್ಕ ಚುಕ್ತಾ ಮಾಡು ಅಂದ್ರು ತಗ ದುಡ್ಡು...’ ಅಂತ ಮೂರು ಸಾವ್ರ ಕೊಟ್ಟು ಬಂದ್ಬುಟ್ಟೆ.
ಪಾಪ, ಅವ್ನು ಮತ್ತೆ ತಿರುಗಿ ಬರಲ್ಲ ಅಂತ ಗೊತ್ತಿಲ್ಲ ಅವ್ರಿಗೆ. ಅವರವ್ವ ಭಾಳ ಗೋಳಾಡಿದ್ಲು ಕಣಮ್ಮ. ‘ಎಲ್ಲೋಯ್ತು ಕಣಪ್ಪ ನನ್ನ ಕೂಸು. ಪಾಪ, ಪುಣ್ಯೇವು, ಮೋಸವಂಚ್ನೆ ಒಂದು ತಿಳೀದದ್ಕೆ. ಅಂತ ವಯ್ದಾಡ್ತಿದ್ಲು ಕಣಮ್ಮ...” ಅಂದ ರಾಮಪ್ಪ ಅಳುತ್ತಿದ್ದ!
ಅದುವರೆಗೂ ಒಳಗೇ ಸಿಕ್ಕು ಚಡಪಡಿಸುತ್ತಿದ್ದ ಕೋಪ, ಅಸಮಾಧಾನ, ದುಃಖ ಎಲ್ಲವೂ ಕಿತ್ತುಕೊಂಡು ಹೊರಬಂದವು. ರೇಖಳ ನಂಬರ್ ತಿರುಗಿಸಿದೆ.
“ಥೂ ಪಾಪಿ, ಕೊನೆಗೂ ಅವ್ನ ಪ್ರಾಣ ತಗೊಂಡೇಬಿಟ್ಯೆಲ್ಲೆ... ಅಯ್ಯೊ ರಾಕ್ಷಸಿ, ಅವ್ನ ಪರಿಸ್ಥಿತೀನ ಉಪಯೋಗಿಸಿಕೊಂಡು ಅವ್ನ ಇನ್ನೊಸೆನ್ಸ್ ಜತೆ ಆಟ ಆಡಿ ಅವನ್ನ ಮುಗ್ಸೆ ಬಿಟ್ಯಲ್ಲೆ... ನಿನ್ನ ಮುಟ್ಟೋಷ್ಟು ಧೈರ್ಯ ಅವ್ನಿಗೆ ಹೆಂಗೆ ಬಂತೂ...? ಅವನ್ನ ಪ್ರೇರೇಪಿಸ್ದೊರ್ಯಾರು...? ಅವನ ಮೈಕೈ ಎಲ್ಲಾ ಮುಟ್ಟಿ ಸವರಿ ಅವ್ನ ಉದ್ರೇಕಿಸಿ, ನೀನು ಬಿಟ್ಟಿ ಸುಖ ಅನುಭವಿಸ್ತಿದ್ಯಲ್ಲ ಕಂತ್ರಿ ಆಗ ನಿಂಗೆ ಅಸಹ್ಯ ಆಗ್ತರ್ಲಿಲ್ಲಾ...? ಅವ್ನು ನಿನ್ನ ಮುಟ್ಟಿದಾಕ್ಷಣ ಏನೇ ನಿಂದು ಕೊಳ್ಳೆ ಹೋಗಿದ್ದು...?
ಅವ್ನ ಎಮ್ಮೆ ಅಂತಿದ್ಯಲ್ಲಾ ಯೂ ಫೂಲ್ ಎಮ್ಮೆನೂ ಒಂದ್ಸಾರಿ ಪ್ರೀತಿಯಿಂದ ಮೈ ನೇವರಿಸಿ ಇನ್ನೊಮ್ಮೆ ಎದುರಿಗೆ ಹೋದ್ರೆ ‘ಅಂಬಾ...’ ಅಂತ ನಮ್ಮನ್ನ ಹತ್ತಿರ ಕರೆಯುತ್ತೆ. ಅಂತಾದ್ರಲ್ಲಿ ಅವ ಮನುಷ್ಯ ಕಣೇ ನಿನ್ನ ಹಾಗೇ. ನೀನು ಮುಟ್ಟುತ್ತಿದ್ದಿಯಾ ಅಂತ ಅವ್ನಿಗೆ ಫೀಲ್ ಆಗ್ದೆ ಇದ್ದಿರ್ಬಹುದು ಆದ್ರೆ, ಅವನನ್ನು ಮುಟ್ಟುತ್ತಿದ್ದೀನಿ ಅನ್ನೋ ಭಾವನೆ ನಿಂಗೆ ಆಗ್ತಿರ್ಲಿಲ್ವಾ...? ಬೊಗ್ಳೆ ನೀನು ಆ ಸ್ಪರ್ಶನ ಫೀಲ್ ಮಾಡ್ತಿರ್ಲಿಲ್ವಾ...? ಯೂ ಬಿಚ್ ಅದನ್ನ ನೀನು ಎಂಜಾಯ್ ಮಾಡ್ತಿರ್ಲಿಲ್ವಾ...? ಆನ್ಸರ್ ಮೀ ಯೂ ಡರ್ಟಿ ಬಿಚ್...” ಅಪ್ಪ ಛಟೀರನೆ ನನ್ನ ಕೆನ್ನೆಗೆ ಬಾರಿಸಿದಾಗಲೇ ನನಗೆಚ್ಚರ. ರಿಸೀವರ್ ಜಾರಿ ಕೆಳಗುರುಳಿತ್ತು.
ಸುಮ್ಮನೇ ಸೂರು ನೋಡುತ್ತ ಮಲಗಿದ್ದೆ. ರೇಖ ಪ್ರತ್ಯಕ್ಷವಾಗಿ ಕಾರಣಳಾದರೆ ನಾನು ಪರೋಕ್ಷವಾಗಿ ಕಾರಣಳಾಗಿದ್ದೆ ಎಲ್ಲ ಹಗರಣಕ್ಕೆ. ಆಕೆ ಮಾಡುತ್ತಿದ್ದ ಚೇಷ್ಟೆಗಳಿಗೆಲ್ಲ ನಕ್ಕು, ನಕ್ಕು ಕುಮ್ಮಕ್ಕು ಕೊಡುತ್ತಲಿದ್ದೆ. ಇಬ್ಬರೂ ಸಮಾನ ಹೊಣೆಗಾರರು.
ಇದೆಂತಹ ವಿಚಿತ್ರ ವ್ಯವಸ್ಥೆ? ಇದೆಂತಹ ವಿಚಿತ್ರ ಶಿಕ್ಷೆ...? ಶಿಕ್ಷೆ ಅನುಭವಿಸಬೇಕಾದವರು ನಾವು... ಹೌದು ಶಿಕ್ಷೆ ನಮಗೆ... ಚೀರಿದೆನೇನೋ ಅಮ್ಮ ಓಡಿಬಂದಳು.
“ಸುಮ್ನೆ ಬಿದ್ಕೊಳೆ ಅತಿ ಆಡ್ಬೇಡ, ನೋಡು ಪಾಪ, ಆ ಹುಡ್ಗಿಗೆ ನಿನ್ನೆ ಏನೇನೋ ಅಂದ್ಯಲ್ಲ ಅವ್ಳಿಗೆ ರಾತ್ರಿ ಎಲ್ಲಾ ಜ್ವರ ಬಂದು, ಏನೇನೋ ಮಾತಾಡ್ತಿದ್ಲಂತೆ. ಪಾಪ ರಾತ್ರೋರಾತ್ರಿ ಆಸ್ಪತ್ರೆಗೆ ಸೇರ್ಸಿದ್ರಂತೆ...” ಇನ್ನು ಏನೇನೋ ಒದರಿಹೋದ್ಲು ಅಮ್ಮ.
“ಇವರೆಲ್ಲ ಮನುಷ್ಯರೇ...? ಹೌದೆ...? ಹಾಗಿದ್ದರೆ ಎಂತಹ ಮನುಷ್ಯರಿವರೂ...?” ಗಲಿಬಿಲಿಗೊಳ್ಳುತ್ತ ಚಡಪಡಿಸತೊಡಗಿದೆ.
ನನ್ನ ಯಾರೋ ಹಿಡಿದು ಅಲ್ಲಾಡಿಸುತ್ತಿದ್ದರು. ಕಣ್ಣು ತಿರುಗಿಸಿದರೆ ದುರುಗ..! ಅರೆ, ಅದೇ ದೂಪ್ದಳ್ಳಿ ದುರುಗ..! ಅದೇ ಸೆಕ್ಸಿ ದುರುಗ..! “ಅದೇ ಕಣಮ್ಮೆ ನಮ್ ಮಲ್ಲಪ್ಪಣ್ಣನೇಣ್ತಿ ರತುನ... ಹಸಿಮೈ ಬಾಣ್ತೀ... ದೆವ್ವ ಮೆಟ್ಕಂಡು, ಮೈಯೆಲ್ಲಾ ನೀಲ್ಗಟ್ಟಿ, ಬಾಯ್ತುಂಬ ನೊರೆ ಕಕ್ಕಿ ತರ್ಕೆಂಡೇ ಬಿಟ್ಲು. ಮತ್ತೊಂದ್ವಾರ್ಕೆಯ ರತುನ ದೆವ್ವಾಗಿ ನಮ್ನೂರ್ ಸಾವ್ಕರ್ನೇಣ್ತಿನ ಮೆಟ್ಕಂಡು, ಮರ್ಕಂಡದೇ ವೋದ್ಲು...” ಹೇಳುತ್ತಲೇ ನಗತೊಡಗಿದ. ಹೊಟ್ಟೆ ಹಿಡಿದುಕೊಂಡು ಬಿದ್ದು, ಬಿದ್ದು ಉರುಳಾಡಿ ನಗತೊಡಗಿದ. ನನಗೂ ತಡೆಯದಾಯ್ತು. ನಗತೊಡಗಿದೆ ಜೋರಾಗಿ ನಾನೂ ಅವನಂತೆಯೇ, ಅವನೊಂದಿಗೆ ಬಿದ್ದು ಬಿದ್ದು ಉರುಳಾಡಿ...
ಕೃತಿ : ಒಬ್ರು ಸುದ್ಯಾssಕೆ ಒಬ್ರು ಗದ್ಲ್ಯಾssಕೆ (ಸಮಗ್ರ ಕಥೆಗಳು)
ಲೇ : ಬಿ. ಟಿ. ಜಾಹ್ನವಿ
ಪ್ರಕಾಶನ : ಕೌದಿ
ಪುಟ : 336
ಬೆಲೆ : ರೂ. 350
ಮುಖಪುಟ ವಿನ್ಯಾಸ : ವಿಷ್ಣುಕುಮಾರ್ ಎಸ್.
ಖರೀದಿಗೆ ಸಂಪರ್ಕ : 9008660371
ಬಿ. ಟಿ. ಜಾಹ್ನವಿ
ಜನಪರ ಹೋರಾಟಗಳಲ್ಲಿ ತೊಡಗಿಕೊಂಡಿರುವ ಜಾಹ್ನವಿಯವರು ದಾವಣಗೆರೆಯಲ್ಲಿ ನೆಲೆಸಿದ್ದಾರೆ. ಇವರ ಕಥಾಸಂಕಲನಗಳು ‘ಕಳೆದುಕೊಂಡವಳು ಹಾಗೂ ಇತರೆ ಕತೆಗಳು’, ‘ಹುಡುಕಾಟ’ ಮತ್ತು ‘ಕಳ್ಳುಬಳ್ಳಿ’. ‘ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ’, ಕರ್ನಾಟಕ ಲೇಖಕಿಯರ ಸಂಘದಿಂದ ‘ಹೆಚ್.ವಿ.ಸಾವಿತ್ರಮ್ಮ ದತ್ತಿ ಪ್ರಶಸ್ತಿ’, ಧಾರವಾಡದ ಉತ್ತರ ಕರ್ನಾಟಕ ಲೇಖಕಿಯರ ಸಂಘದಿಂದ ‘ಶಾಂತಾದೇವಿ ಕಣವಿ ಕಥಾಪ್ರಶಸ್ತಿ, ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ ಕೊಡಮಾಡುವ ‘ಡಾ.ವಿಜಯಾ ಸುಬ್ಬರಾಜು ಸಾಹಿತ್ಯ ಪುರಸ್ಕಾರ’ ದೊರಕಿದೆ. ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಖ್ಯಾತ ನೇತ್ರ ತಜ್ಞ, ರಾಜಕಾರಣಿ, ತಂದೆ ಡಾ. ಬಿ.ಎಂ.ತಿಪ್ಪೇಸ್ವಾಮಿ ಇವರನ್ನು ಕುರಿತು ‘ಮುಟ್ಟಿಸಿಕೊಂಡವರು’ ಎನ್ನುವ ಕೃತಿಯನ್ನು ಸಂಪಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಸಾಹಿತ್ಯ ಶ್ರೀ’ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಿದ್ದಲಿಂಗಯ್ಯ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.
ಮುದ್ರಣಕ್ಕೆ/ಬಿಡುಗಡೆಗೆ ಸಿದ್ಧವಾಗುತ್ತಿರುವ ನಿಮ್ಮ ಕೃತಿಗಳ ಆಯ್ದ ಭಾಗಗಳ ಪ್ರಕಟಣೆಗಾಗಿ ಸಂಪರ್ಕಿಸಿ team@konaru.org
Very touching story...
Thanks for sharing..
- Renuka