'ಈಸೊಂದು ಮಾತು ಬೇಡ ಕೆಸರ ಮಡುವಿನಲಿ ಕಪ್ಪೆ ಹಾರಿದೆ'
ಚೈತ್ರಾ ಶಿವಯೋಗಿಮಠ ಅನುವಾದದಲ್ಲಿ ಮೇರಿ ಆಲಿವರ್ ಕವಿತೆಗಳು
ಅಮೆರಿಕನ್ ಕವಿ ಮೇರಿ ಆಲಿವರ್ (Mary Oliver, ಸೆಪ್ಟೆಂಬರ್ 10, 1935 - ಜನವರಿ 17, 2019) ವಿಶಿಷ್ಟ ಪ್ರತಿಭೆ. ಮ್ಯಾಸಚೂಸೆಟ್ಸ್ನ ಸಮುದ್ರತೀರದ ಏಕಾಂತದಲ್ಲಿ, ಕಾಡುಗಳಲ್ಲಿನ ಒಬ್ಬೊಂಟಿ ತಿರುಗಾಟಗಳಲ್ಲಿ ತನ್ನನ್ನೂ ತನ್ನ ಕವಿತ್ವವನ್ನೂ ಕಂಡುಕೊಂಡವಳು. ಸಹಜವಾಗಿ ಸರಳವಾಗಿ ಬರೆದು ಅಂತೆಯೇ ಬದುಕಿದವಳು. ಅವಳ ಹಲವು ಕವಿತೆಗಳನ್ನು ಕವಿ ಚೈತ್ರಾ ಶಿವಯೋಗಿಮಠ ಅವರು ಆಯ್ದು ಅನುವಾದಿಸಿದ್ದಾರೆ. ಆಕಾಶ ನದಿ ಬಯಲು ಎಂಬ ಈ ಕವಿತೆಗಳ ಸಂಕಲನವು ಇತ್ತೀಚೆಗೆ ಬಿಡುಗಡೆಯಾಗಿತ್ತು. ಕೆಳಗಿನದು ಈ ಅನುವಾದಿತ ಸಂಕಲನದ ವಿಮರ್ಶೆಯಲ್ಲ. ಕವಿತೆಗಳನ್ನು ಓದುವಾಗ ಸ್ಫುರಿಸಿದ ಕೆಲವು ಹೊಳಹುಗಳ ಸರಣಿ. ಇದು ಮೊದಲಿಗೆ ಹಾಗೂ ಮುಖ್ಯವಾಗಿ ಕವಿಯನ್ನೇ ಉದ್ದೇಶಿಸಿ ಬರೆದದ್ದು. — ಸಂಕೇತ ಪಾಟೀಲ
ಕಳೆದ ಹಲವು ವರ್ಷಗಳಲ್ಲಿ ಮೇರಿ ಆಲಿವರ್ ಕವಿತೆಗಳನ್ನೂ ಬರಹಗಳನ್ನೂ ನಾನು ಆಗಾಗ ಅಲ್ಲಲ್ಲಿ ಓದುತ್ತ ಬಂದಿದ್ದರೂ ಇದುವರೆಗೂ ಸಮಗ್ರವಾಗಿ ಓದಲಾಗಿಲ್ಲ. ಹಾಗಿದ್ದೂ ಅವಳು ತೀರ ಪರಿಚಿತಳೆನ್ನಿಸಿಬಿಡುತ್ತಾಳೆ — ಅದು ಅವಳ ಬರವಣಿಗೆಯ ಗುಣವೇನೋ. ಅವಳು ನಮ್ಮಲ್ಲನೇಕರು ಇಷ್ಟಪಡುವ ಕವಿ, essayist ಎನ್ನುವುದಂತೂ ಹೌದು. ಆದರೆ ಅದಕ್ಕೂ ಹೆಚ್ಚಾಗಿ ನಾವೆಲ್ಲರೂ ಆಗಬಹುದಾದ ಆದರೆ ಆಗಲು ಪ್ರಯತ್ನಿಸದ, ನಮ್ಮಲ್ಲಿ ಬಹಳಷ್ಟು ಮಂದಿ ಊಹಿಸಿಕೊಳ್ಳಲೂ ಆಗದ ಬದುಕನ್ನು ಬದುಕಿದ ಸಹಜ, ಸಾರ್ಥಕ ಜೀವಿ ಅವಳು ಎನ್ನುವುದು ಮಹತ್ವದ್ದು. ಅವಳು ತಾನಿದ್ದ ಪರಿಸರವನ್ನು ಇಡಿಯಾಗಿ ತನ್ನೊಳಗೆ ತೆಗೆದುಕೊಂಡು, ತನ್ನನ್ನೂ ಅದಕ್ಕೆ ಕೊಟ್ಟುಕೊಂಡು ಜೀವಿಸಿದವಳು. ಅವಳಿಗಿಂತ ದೊಡ್ಡ ಕವಿಗಳು ಹಿಂದೆಯೂ ಇದ್ದರು, ಮುಂದೆಯೂ ಬಂದಾರು. ಆದರೆ ಅವಳಂತೆ ಬದುಕು-ಭಾವ-ಬರಹಗಳಲ್ಲಿ ಸಮನ್ವಯ ಸಾಧಿಸಿದವರು, ಒಂದುತನ ಕಂಡುಕೊಂಡವರು ಬಹಳ ಕಡಿಮೆ.

ಪ್ರಕೃತಿಯೊಂದಿಗಿನ ಅವಳ ನಂಟೂ ಅನನ್ಯವಾದುದು. ಕನ್ನಡವೂ ಸೇರಿದಂತೆ ಜಗತ್ತಿನ ಹಲವು ಭಾಷೆಗಳ ಅಭಿಜಾತ ಕಾವ್ಯಗಳಿಂದ ಹಿಡಿದು, ಯುರೋಪಿನ romantic age, ಕನ್ನಡದ ನವೋದಯದವರೆಗೂ; ನಂತರದಲ್ಲಿ ಜಿಎಸ್ಎಸ್, ಕಣವಿ ಮೊದಲಾದವರ ಕೃತಿಗಳಲ್ಲಿಯೂ ನಿಸರ್ಗವು ಬತ್ತದ ಒರತೆಯಾಗಿ ಉಳಿದೇ ಇದೆ. ಆಧುನಿಕ ಯುರೋಪಿಯನ್ ಮತ್ತು ಅಮೆರಿಕನ್ ಕಾವ್ಯದಲ್ಲೂ ಅದು ಇರಲಿಕ್ಕೆ ಸಾಕು. ಹಾಗಿದ್ದೂ ಮೇರಿಯ ಕಾವ್ಯ ತುಸು ಭಿನ್ನವಾಗಿ ಕಾಣಲು ಕಾರಣಗಳಿವೆ: ಪ್ರಕೃತಿಯ ವಿದ್ಯಮಾನಗಳ ಕುರಿತು ಅಲ್ಲಿ ವಿಸ್ಮಯವಷ್ಟೇ ಅಲ್ಲದೇ ಆಪ್ತ ಕುತೂಹಲವಿದೆ; ಆರಾಧನಾಭಾವದ ಅಂತರವಿರದೇ ಸಲುಗೆಯ ಅಪ್ಪುಗೆಯಿದೆ; ತಾನು ಮತ್ತು ತನ್ನ ಪರಿಸರ ಅಭಿನ್ನವೆಂಬ ಆಳವಾದ ನಂಬಿಕೆಯಿದೆ.
ಚೈತ್ರಾ ಶಿವಯೋಗಿಮಠರ ಅನುವಾದಿತ ಕವಿತೆಗಳನ್ನು ಓದುವಾಗ ಕನ್ನಡದಲ್ಲಿ ಇತ್ತೀಚಿನವರೆಗೂ ಬರೆಯುತ್ತಿದ್ದ ಅಥವಾ ಈಗಲೂ ಬರೆಯುತ್ತಿರುವವರಲ್ಲಿ ನನಗೆ ತಕ್ಷಣ ನೆನಪಾದವರು: ಜೀವಯಾನದ ಎಸ್. ಮಂಜುನಾಥ್, ಮೈಸೂರಿನ ರಾಮು ಮತ್ತು ಮುಖ್ಯವಾಗಿ, ಸವಿತಾ ನಾಗಭೂಷಣ. ಮಂಜುನಾಥರ ಬಹಳಷ್ಟು ಕವಿತೆಗಳಲ್ಲಿ ತನ್ನ ಸುತ್ತಲಿನ ಪರಿಸರದ ಅತ್ಯಂತ ಸಣ್ಣ, ಬಹುತೇಕರಿಗೆ ಮಹತ್ವದ್ದಲ್ಲವೆನ್ನಿಸುವ ಸಂಗತಿಗಳ ಕುರಿತ ಧ್ಯಾನವನ್ನು ಕಾಣಬಹುದು. ಅವರ ಮೊದಲಿನ ಕವಿತೆಗಳಲ್ಲಿ ಒಂದಾದ ‘ಹಕ್ಕಿಪಲ್ಟಿ’ ಶುರುವಾಗುವುದು ತಾನೂ ಬೇರೆಯವರಂತೆ ಘನವಾದದ್ದೇನೋ ಸಾಧಿಸಬಹುದಿತ್ತು ಎಂಬ ಹಳಹಳಿಕೆಯಿಂದಾದರೆ ಕೊನೆಯಾಗುವುದು ‘ಹಕ್ಕಿಪಲ್ಟಿ’ಯಂಥ ಸರಳ ಸಹಜ ವಿಸ್ಮಯದ ಸಾಧ್ಯತೆಯಿಂದ!
[…] ಎತ್ತರಾಕಾಶದಲ್ಲಿ ಪುಟ್ಟ ಹಕ್ಕಿಯೊಂದು ಸರ್ಕಸ್ ಮಾಡಿತು ಮರುಕ್ಷಣ ಈ ಪ್ರಶ್ನೆ ಬಂತು: ಏನಾದರೂ ಆಗಬೇಕೇಕೆ ಹಕ್ಕಿಪಲ್ಟಿಯಂಥ ಘಟನೆಗಳ ಗಮನಿಸಲು ಶಕ್ಯವಿದ್ದರೆ ಸಾಲದೆ, ಇನ್ನುಳಿದಂತೆ ನಾವು ಆಗಲೆಳಸುವುದೆಲ್ಲ ಜಗಮೆಚ್ಚುಗೆಗಲ್ಲವೆ?
ಮೇರಿಯ ಪದ್ಯದಲ್ಲಿ ‘ಸಪಾಟು ಕರಿ ಟೊಪ್ಪಿಗೆ ತೊಟ್ಟ’ ಅದೇ ಹಕ್ಕಿ ಮೆಣಸಿನಗಿಡದ ಮೇಲೆ ಸುಮ್ಮನೆ ತನ್ನ ಕೆಲಸ ಮಾಡುತ್ತಾ ಕೂತಿದ್ದು ‘ಕೊಂಬೆಯಿಂದ ಕೊಂಬೆಗೆ ಇಳಿಯುತ್ತಾ ಇಳಿಯುತ್ತಾ ಕೆಳಗಿಳಿ’ದು ‘ನೀರಿನೂಟೆಯಿಂದ ನೀಟಾಗಿ ಗುಟುಕರಿ’ಸಿ ಹಾರಿ ಹೋಗುತ್ತದೆ. ಅಷ್ಟೇ! ಅದಕ್ಕೆ ಹೆಸರು ಕೊಡಬೇಕೆನ್ನುವುದು ಕವಿಯ ಹವಣಿಕೆಯಾದರೂ ಆ ಹಕ್ಕಿಗೆ ‘ಹೆಸರೆನ್ನುವುದು ಕುಣಿಕೆಯಲ್ಲ’.
‘Nothing is too small to be wondered about’ ಎಂಬ ಅವಳ ಪದ್ಯವಿದೆ. ಆ ಸಾಲು ಅವಳ ಕಾವ್ಯದ ಆಶಯವಷ್ಟೇ ಅಲ್ಲ ಬದುಕಿನ ತಾತ್ವಿಕತೆ ಕೂಡ ಆಗಿತ್ತು. ಮೇರಿಯ ಕವಿತೆಗಳಲ್ಲಿ ತಲೆ ಕೆಡಿಸಿಕೊಳ್ಳದಿರುವುದು ಹಕ್ಕಿ ಮಾತ್ರವಲ್ಲ; ಚಿಟ್ಟೆ, ನಾಯಿ, ಕೇರೆಹಾವು, ಮಿಡತೆ, ಕರಡಿ, ಎಲ್ಲವೂ. ಮೇಲೆ ಹೇಳಿದ ಪದ್ಯದಲ್ಲೇ ನೋಡಿ, ಪ್ರಣಯಕಾಲ ಮುಗಿದ ಮೇಲೂ ಹಾಡುವ ಮಿಡತೆಗೆ ಜಗಮೆಚ್ಚುಗೆಯ ಹಂಗಿಲ್ಲ. ತನಗೆ ಬೇಕಾದ್ದೇ ಮಾಡುವುದು ಅದರ ರೀತಿ. ಆದರೂ —
ಹಾಗೆಂದ ಮಾತ್ರಕ್ಕೆ ಜೀವನವಿಡೀ
ಅದೊಂದು ಘನವಾದ ಮಿಡತೆಯಂತೆ
ಬದುಕಲಿಲ್ಲ ಎಂದು ಹೇಳಲಾಗದು
ಹಾಗೆಯೇ ಈ ಕೆಳಗಿನ ಸಾಲುಗಳನ್ನು ನೋಡಿ. ಇವು ಮಂಜುನಾಥ್ ಬರೆಯಬಹುದಾದಂಥ ಸಾಲುಗಳು ಎನ್ನಿಸುವಂಥವು!
ನೀಲಕುರುಂಜಿಯೇ ಆಗಬೇಕಿಲ್ಲ
ಖಾಲಿ ಬಯಲಿನಲಿ
ಪಾರ್ಥೇನಿಯಂ ಕಸವಾದರೂ ಸರಿ
ಇಲ್ಲವೇ ಒಂದೆರಡು ಬೆಣಚುಕಲ್ಲು
ಹಿಡಿದು ಸುಮ್ಮನೆ ಧ್ಯಾನಿಸು
ಒಟ್ಟುಮಾಡಿ ಪದಗಳ ಪೋಣಿಸು
—
‘ಈಸೊಂದು ಮಾತು ಬೇಡ
ಕೆಸರ ಮಡುವಿನಲಿ ಕಪ್ಪೆ ಹಾರಿದೆ’
ಈ ಕವಿತೆಗಳಲ್ಲಿ ಹಗುರತನವಿದೆ. ಹಾಗಿದ್ದೇ ಅವು ಹಾರುತ್ತವೆ — ‘ಕೊನೆಗೂ ಭಾರ ಇಳಿಸಿಕೊಂಡ ಮರಿಕತ್ತೆಯ ಹಾಗೆ’, ‘ಏನನ್ನೂ ಹೊರದೆ ಹಗುರಾಗಿ’ರುವ ಹಕ್ಕಿಯ ಹಾಗೆ.
ರಾಮು ಅವರ ಹಾಯ್ಕುವಿನಂಥ ಒಂದು ಪುಟ್ಟ ಪದ್ಯ (‘ಹನಿ') ಹೀಗಿದೆ:
ಮೋಡದೊಳಗಿದ್ದಾಗ ಸಿಡಿಲ ಮಗ್ಗುಲಲ್ಲೇ ಇದ್ದ ಪುಟ್ಟ ಹನಿ
ಹೇಗೋ ಬಚಾವಾಗಿ
ಇಳಿದು ಬಂದು
ಈಗ ಈ ಕೆಸುವಿನೆಲೆ ಮೇಲೆ ಕೂತಿದೆ
ಇನ್ನೂ ನಡುಗುತ್ತಿದೆ
ಚೈತ್ರಾ ಅವರ ಅನುವಾದದಲ್ಲಿ ಮೇರಿಯ ಒಂದು ಪದ್ಯ ‘ಎಲೆಯ ಹಾಡು’ ಆಗಿ, ಅದರ ಈ ಸಾಲುಗಳು:
ನೀನು ಮಗುವಾಗಿದ್ದಾಗ ಆಲಿಸಿದ ಎಲೆ ಮೇಲಿನ ಹಾಡು ಇನ್ನೂ ಅಲ್ಲೇ ಗುನುಗುತ್ತಲಿದೆ
ಆ ಎಲೆಯು ಆ ಹನಿಗೆ ಹಾಡಿದಂತಿದೆ ಎನ್ನಿಸಿಬಿಟ್ಟಿತು.
‘ಸುಗ್ಗಿ ಬಂತಲ್ಲ…' ಎಂಬ ಅನುರಾಗಮಾಲಿಕೆಯಲ್ಲಿ ರಾಮು ‘ಎಲ್ಲ ಈ ಬೆದೆಗೇನೆ ಹುಟ್ಟಿದ್ದು / ಅದಕಾಗೆ ನಾನೂ ಈ ಹುಳವೂ ಒಡಹುಟ್ಟು’ ಎನ್ನುತ್ತ ಇಡೀ ಸೃಷ್ಟಿಯ ನಿರಂತರತೆಯನ್ನು, ಪರಸ್ಪರ ನಂಟನ್ನು ಕಾವ್ಯದಲ್ಲಿ ಹೇಳುತ್ತ ಹೋಗುತ್ತಾರೆ. ಇನ್ನೊಂದು ಕಡೆ ಮೇರಿ ತಾನು ಕೈಯಾರೆ ಗಾಳಹಾಕಿ ಹಿಡಿದ ಮೀನನ್ನು ತಿಂದು ಮುಗಿಸಿದ ಮೇಲೆ:
ಕಡಲು ಈಗ ನನ್ನೊಳಗಿದೆ ಈಗ ನಾನೇ ಮೀನು ನನ್ನೊಳಗೆ ಫಳಫಳ ಹೊಳೆಯುತ್ತಿದೆ ಮೀನು ನಾನು ಮೀನು ಇಬ್ಬರೂ ಒಬ್ಬರಿಗೊಬ್ಬರು ಬೆಸೆದುಕೊಂಡಿದ್ದೇವೆ
ಎನ್ನುತ್ತಾಳೆ. ಒಂದು ತನ್ನ ಆರ್ದೃತೆ, ಆರ್ತತೆಯಿಂದ ನಮ್ಮನ್ನು ತಟ್ಟಿದರೆ ಇನ್ನೊಂದು ನಮ್ಮ ಸುತ್ತಣ ಸಹಜ ಚಮತ್ಕಾರಗಳಲ್ಲಿ ನಮ್ಮನ್ನೂ ಒಳಗೊಂಡು, ಇದು ಇರಬೇಕಾದ್ದೇ ಹೀಗೆ ಎಂದು ಅದನ್ನು ಹಗುರ ಮಾಡಿ ತೋರಿಸುತ್ತದೆ. ಮೇರಿ ಆಲಿವರ್ ಮನುಷ್ಯರಿಗಷ್ಟೇ ಅಲ್ಲದೇ ಉಳಿದ ಸಜೀವ/ನಿರ್ಜೀವ ರೂಪಗಳಿಗೂ:
ಬಾ ನಮ್ಮೊಳಗಿನ ನಿರಾಶೆಯ ನೀಲಿಗೆ
ಇಬ್ಬರೂ ಕೂತು ಮಾತಾಡೋಣ
ನೀನು ನಿನ್ನದು ಹೇಳು, ನಾನು ನನ್ನದು
ಎಂದು ಹೇಳಬಲ್ಲಳೇನೋ ಎನ್ನಿಸುತ್ತದೆ! ಅವಳ ಪ್ರಾರ್ಥನೆಗಳಲ್ಲೂ ಪ್ರಕೃತಿಯ ಬಗ್ಗೆ ಋಣದ, ಆರಾಧನೆಯ, ಧನ್ಯತೆಯ ಬದಲು ಎಣೆಯಿಲ್ಲದ ಕೌತುಕದ, ಸಲುಗೆಯ ಕುತೂಹಲದ ಭಾವವಿದೆ: ‘ಕರುಣಿಸು ನನಗೆ ಇನ್ನೊಂಚೂರು ಸಮಯವನ್ನು […] ನಿಧನಿಧಾನವಾಗಿ ಎಲ್ಲವನು ಕಲಿಯುತ್ತಲಿರುವೆ’. ಸವಿತಾ ನಾಗಭೂಷಣರ ‘ಹಳ್ಳಿಯ ದಾರಿ’ ಹಿಡಿದು ಊರಿಗೆ ಹೊರಟ ಅಜ್ಜ ಮತ್ತು ಮೊಮ್ಮಗಳು ನೆನಪಗುತ್ತಾರೆ. ಅಜ್ಜನಿಗೋ ಅದೇ ನಿತ್ಯದ ದಾರಿ, ಬೇಗ ಊರಿಗೆ ಸೇರಿದರೆ ಸಾಕಾಗಿದೆ. ಆದರೆ ಮೊಮ್ಮಗಳಿಗೆ ಎಲ್ಲವೂ ಹೊಸತು, ಎಲ್ಲವನ್ನೂ ನಿಂತು ನೋಡಬೇಕಿದೆ:
ಹಿಂದೆ ಹಿಂದೆಯೆ
ಉಳಿದಳು ಹುಡುಗಿ
ಹಾವಿನ ಪೊರೆ
ನವಿಲ ಗರಿ
ಹುಡುಕುತ
ಅವರ ಇನ್ನೊಂದು ಪದ್ಯ ‘ಹೊಳೆಮಗಳು’ವಿನಲ್ಲಿ ಮಾತ್ರ ಹೊಳೆಯು:
ಇದು ಬೆಟ್ಟ ಇದು ಗಾಳಿ
ಇದು ಹೂವು ಇದು ಎಲೆ
ಎಂದು ಮಗಳಿಗೆ ಪರಿಚಯಿಸುವಳು
ನಿಧಾನಿಸು, ಸಮಯ ಕೊಡು, ಗಮನಿಸು, ಒಳಗೊಳ್ಳು ಎನ್ನುವುದು ಪ್ರಕೃತಿಗೂ ಮನುಕುಲಕ್ಕೂ ಮೇರಿಯ ಮೊರೆ.
ಮೇಲೆ ಪ್ರಾಸಂಗಿಕವಾಗಿ ಉಲ್ಲೇಖಿಸಿದ ಸಾಲುಗಳ ಹೊರತಾಗಿ ‘ಪುಟ್ಟಗುಮ್ಮ’, ‘ಚೈತ್ರ’, ‘ನಿಶ್ಶಬ್ದದೊಳಗಣ ಶಬ್ದ’ ಮೊದಲಾದ ಕವಿತೆಗಳೂ ಕೆಳಗೆ ನಾನು ಗುರುತಿಸಿರುವ ಸಾಲುಗಳೂ ಚೈತ್ರಾ ಅವರ ಅನುವಾದದಲ್ಲಿ ಚೆನ್ನಾಗಿ ಮೂಡಿಬಂದಿವೆ.
ಮಧುಸಂದೇಶ ರವಾನಿಸುವ
ಸಾಲುಸಾಲು ಮೆರವಣಿಗೆ ಹೊರಡುವ
ದುಂಬಿ ದೂತರ ಸಾಲು
ಜೇನುಕೂಡಿಸಿವೆ ಮರದ ತುಂಬಾ
—
ಮೇಲಮೇಲಕ್ಕೇರುತ
ಮಂದವಾಗುವ ಪ್ರಾಣಜ್ಯೋತಿ
ಬಯಲಲ್ಲಿ ಬಯಲಾಗುವುದು
—
ಪರಪಂಚ ರಂಗಮಂಚ
ಖುಷಿಯಲ್ಲಿ ಒಂದಿಷ್ಟು
ಒದ್ದೆಯಾಗದಿದ್ದರೆ
ಆ ದಿನವಾದರೂ ಎಂಥ ದಿನ ಹೇಳಿ
ಹೀಗೆ ಎಲ್ಲವನ್ನೂ ಹೇಳಿಕೇಳಿಯಾದ ಮೇಲೆ ಕೊನೆಗೆ ‘ಉಳಿಯುವುದೊಂದೇ ಪ್ರಶ್ನೆ’. ಖುಷಿಯಾಗಿರುವುದು ಹೇಗೆ? ಅದಕ್ಕೆ ಹೆಚ್ಚಿನದನೇನೂ ಬೇಕಿರುವುದಿಲ್ಲ, ಆದರೂ ಅದು ದಕ್ಕುವುದು ಕಷ್ಟಸಾಧ್ಯ. ಅದೇ ರೀತಿ ‘ಪ್ರೀತಿಸುವುದು ಹೇಗೆ ಈ ಲೋಕವನ್ನು’ ಎಂದೂ ಮೇರಿ ಕೇಳುತ್ತಾಳೆ. ಅದರ ಹಾದಿಯನ್ನೂ ಆ ಹಾದಿಯಲ್ಲಿರುವ ತೊಡಕುಗಳನ್ನೂ ಅವಳೇ ಸೂಚಿಸುತ್ತಾಳೆ.
ನಾವೇ ಆ ಭಾಷೆ
ಇನ್ನೂ ಸರಿಯಾಗಿ ಕಲಿತಿಲ್ಲವೇನೋ
—
ನಿಮ್ಮ ತಲೆಯಲ್ಲಿ
‘ದೇವತೆಗಳಿದ್ದರೆ ಮಾತ್ರ ದೇವತೆಯ ಕಾಣಬಲ್ಲಿರಿ’
ಇದರ ಬಗ್ಗೆ ಯೋಚಿಸುತ್ತಿದ್ದಾಗ ಎಜ಼್ರಾ ಪೌಂಡ್ನ ಒಂದು ಚಿಕ್ಕ, ಮೊನಚಾದ ಪದ್ಯ ನೆನಪಾಯಿತು:
Salutation
O generation of the thoroughly smug
and thoroughly uncomfortable,
I have seen fishermen picnicking in the sun,
I have seen them with untidy families,
I have seen their smiles full of teeth
and heard ungainly laughter.
And I am happier than you are,
And they were happier than I am;
And the fish swim in the lake
and do not even own clothing.
ಆ ಮೀನುಗಳು, ಮೀನುಗಾರರು ಬರಿಮೈಯ್ಯಲ್ಲಿದ್ದರೂ ಅವರೊಳಗಡೆ ದೇವತೆಗಳಿವೆಯೇನೋ!
ಚೈತ್ರಾ ಅವರ ಅನುವಾದದಲ್ಲಿ ಇವೆಲ್ಲ ಒಳ್ಳೆಯ ಸಾಲುಗಳ ನಡುವೆಯೂ ಅಲ್ಲಲ್ಲಿ ಅನುವಾದ ಇನ್ನಷ್ಟು ಸೂಕ್ತವಾಗಿ ಆಗಬಹುದಿತ್ತು ಎನ್ನಿಸಿತು. ಕೆಲವು ಕಡೆ ಇನ್ನಷ್ಟು ಕಾಳಜಿಯಿಂದ editing ಆಗಿದ್ದರೆ ಕನ್ನಡಕ್ಕೆ ಬಂದ ಈ ಕವಿತೆಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತಿದ್ದುವು. ಉದಾಹರಣೆಗೆ, ಇಂಗ್ಲಿಷ್ನಲ್ಲಿನಂತೆ ಪ್ರಾಣಿಗಳಿಗೆ ಲಿಂಗವನ್ನು ಅನ್ವಯಿಸುವಾಗ ಕನ್ನಡಕ್ಕೆ ಒಗ್ಗಿಸಿಕೊಳ್ಳಬೇಕಾಗುತ್ತದೆ, ಸುಸಂಗತತೆಯನ್ನು ಪಾಲಿಸಬೇಕಾಗುತ್ತದೆ. ಅದೇ ರೀತಿ, ಇಂಗ್ಲಿಷ್ನ punctuation, ಪದಕ್ರಮ ಅಥವಾ ಸಾಲುಗಳ ಕ್ರಮ, spacing ಮೊದಲಾದುವನ್ನು ಕನ್ನಡದ ಜಾಯಮಾನಕ್ಕೆ ಹೊಂದುವಂತೆ ಬದಲಿಸಿಕೊಳ್ಳುವುದರಲ್ಲಿ ತಪ್ಪಿಲ್ಲ.
ಈ ಸಂಕಲನವನ್ನು ಓದುತ್ತಲೇ ಮೇರಿ ಆಲಿವರ್ಳ ‘A Poetry Handbook’ ತಿರುವಿಹಾಕುತ್ತಿದ್ದೆ. ಅಲ್ಲಿ ಅವಳು ಧ್ವನಿಯ (sound) ಕುರಿತು ಹೆಚ್ಚಿನ ಒತ್ತುಕೊಟ್ಟು ಹೇಳುತ್ತಾಳೆ. ಅಲ್ಲದೇ revision ಬಗ್ಗೆಯೂ. (ಇತ್ತೀಚಿನ ‘ಅಕ್ಷರ ಸಂಗಾತ’ದ ಮೇರಿ ಆಲಿವರ್ ಸರಣಿಯಲ್ಲಿ ಹಿರಿಯ ವಿಮರ್ಶಕ ಮತ್ತು ಅನುವಾದಕರಾದ OLN ಕೂಡ ಇದರ ಬಗ್ಗೆ ಬರೆದಿದ್ದಾರೆ.) ಅವು ಬಹಳ ಮಹತ್ವದ್ದು ಎನ್ನಿಸುತ್ತದೆ.
ನಾನು ಸ್ವತಃ ಕವಿಯಲ್ಲ. ಹೀಗಾಗಿ ನಾನು ಕೆಳಗೆ ಹೇಳುವುದನ್ನು — ಕವಿಯಾಗಲಿ ಉಳಿದವರಾಗಲಿ — ಸಲಹೆ ಎಂದುಕೊಳ್ಳದೇ ‘ಇದು ಹೀಗಿದ್ದರೆ ಇನ್ನೂ ಚೆನ್ನಾಗಿ ಕೇಳುತ್ತಿತ್ತೇ’ ಎಂಬ ಜಿಜ್ಞಾಸೆಯಂತೆ ಓದಿಕೊಳ್ಳಿ.
ಫ್ರಾಂಜ಼್ ಮಾರ್ಕ್ ಸಣ್ಣ ವಯಸ್ಸಿನಲ್ಲಿ ತೀರಿ ಹೋದ ಬಾಂಬು ಚೂರುಗಳನು ಹೊತ್ತು ತಲೆ ಬುರುಡೆಯೊಳಗೆ ಸಿಡಿದು ಚೂರಾದ ಫ್ರಾಂಜ಼್ ಮಾರ್ಕ್ ಸಣ್ಣ ವಯಸ್ಸಿನಲ್ಲಿ ತೀರಿಹೋದ ತಲೆಬುರುಡೆಯೊಳಗೆ ಸಿಡಿದು ಚೂರಾದ ಬಾಂಬುಚೂರುಗಳನು ಹೊತ್ತು — ಇಷ್ಟು ಸರಾಗ ಈ ಪರಾಗ ಸ್ವರ್ಶ ಅಂದುಕೊಂಡವರು ಯಾರು? ಅಂದುಕೊಂಡವರು ಯಾರು ಇಷ್ಟು ಸರಾಗ ಈ ಪರಾಗ ಸ್ಪರ್ಶ! — ಪಟಪಟ ಪಟಪಟ ಪಟಪಟಿಸಿ ಗಾಳಿಯಲ್ಲಿ ಧಗಧಗಿಸುವ ದಿಗಿಲನ್ನು ಬಾಯಿತೆರೆದು ಚಪ್ಪರಿಸಿತು ಆಮೇಲೆ ಸುರಿಯುವ ಕಾಮನಬಿಲ್ಲಿನ ಬಣ್ಣಗಳ ನಡುವೆ ನಿಧನಿಧಾನವಾಗಿ ಉಸಿರು ಚೆಲ್ಲಿತು ಪಟಪಟಿಸಿ ಪಟಪಟನೆ ಗಾಳಿಯಲ್ಲಿ ಧಗಧಗಿಸುವ ದಿಗಿಲ ಬಾಯ್ದೆರೆದು ಚಪ್ಪರಿಸಿ ಸುರಿವ ಕಾಮನಬಿಲ್ಲ ಬಣ್ಣಗಳ ನಡುವೆ ಉಸಿರ ಚೆಲ್ಲಿತು ನಿಧನಿಧಾನ
ಕವಿತೆಯ ಮೊದಲ ಬರೆಯುವಿಕೆ ಸ್ಫೂರ್ತಿಯ ಸೆಲೆಯಿಂದ ಚಿಮ್ಮಿದ ಭಾವಪ್ರವಾಹವಿರಬಹುದು. ಆದರೆ ಅದರ ನಂತರದ ಕಟ್ಟುವಿಕೆ ಪ್ರಜ್ಞಾಪೂರ್ವಕವಾಗಿ ನಡೆಯಬೇಕಾದದ್ದು. ಒಂದು ಕಡೆ ಚೈತ್ರಾ ಅವರೇ ಅನುವಾದಿಸಿದ ಮೇರಿಯ ಈ ಸಾಲುಗಳನ್ನು ನೋಡಿ: ‘ಪದಗಳು ಹೆಚ್ಚಾದರೆ, ಅವು ಸರಿಯಾದ ಪದವೇ ಆಗಿದ್ದರೂ / ಕವಿತೆಯನ್ನು ಕೊಂದುಬಿಡುತ್ತವೆ’. Revision ಅಥವಾ editing ಎಂದರೆ ಈ ರೀತಿಯಲ್ಲಿ ಬೇರೆಬೇರೆ ಆಯ್ಕೆಗಳನ್ನು ಒಂದರ ಬದಿಗೊಂದು ಇಟ್ಟು ನೋಡುತ್ತಾ, ಗಟ್ಟಿಯಾಗಿ ಓದುತ್ತಾ ಯಾವುದು ಹೆಚ್ಚು ಸಹಜ, ಯಾವ ಪದ (ಅಕ್ಷರ ಕೂಡ) ಅನಗತ್ಯ, ಯಾವುದು ಲಯಗಾರಿಕೆಯನ್ನು ಹೆಚ್ಚಿಸುತ್ತಿದೆ ಮತ್ತು ತಪ್ಪಿಸುತ್ತಿದೆ, ಯಾವುದು ಪರಿಣಾಮಕಾರಿಯಾಗಿದೆ, ಬೇರೊಂದು ಅರ್ಥವನ್ನು ಹೊಳೆಯಿಸುತ್ತಿದೆ ಎಂದು ಕಂಡುಕೊಳ್ಳುವುದು ನಮ್ಮದೇ ಕವಿತೆಗಾಗಲೀ ಅನುವಾದಕ್ಕೇ ಆಗಲಿ ಹೆಚ್ಚಿನ ಹೊಳಪು ಕೊಡುತ್ತದೆ ಎಂದು ನನ್ನ ನಂಬಿಕೆ.
ಆಕಾಶ ನದಿ ಬಯಲು ಎಂಬ ಈ ಸಂಕಲನದಲ್ಲಿ ಮೇರಿ ಆಲಿವರ್ಳ ಕಾವ್ಯದ ಮತ್ತು ವ್ಯಕ್ತಿತ್ವದ ಕಿರುಪರಿಚಯವೂ 2011ರಲ್ಲಿ ಪ್ರಕಟವಾದ ಅವಳ ಒಂದು ಸುದೀರ್ಘ ಸಂದರ್ಶನದ ಅನುವಾದವೂ ಇದೆ. (ಮುಖ್ಯವಾಹಿನಿಯಿಂದ ದೂರವೇ ಇದ್ದ ಅವಳು ಈ ಸಂದರ್ಶನಕ್ಕೆ ಒಪ್ಪಿದ್ದೇ ಒಂದು ವಿದ್ಯಮಾನ!) ಇವು ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ. ಕನ್ನಡದ ಹೊಸ ಓದುಗರಿಗೆ ಮೇರಿ ಆಲಿವರ್ಳನ್ನು ಕವಿತೆಗಳನ್ನು ಪರಿಚಯಿಸಿದ್ದಕ್ಕೆ ಚೈತ್ರಾ ಅವರಿಗೆ ಅಭಿನಂದನೆಗಳು. ಅವರಿಂದ ಇನ್ನಷ್ಟು ಸಫಲ ಅನುವಾದಗಳೂ ಕವಿತೆಯೂ ಬರಲಿ.
ಇದನ್ನೂ ಓದಿ …
ಒಂದು ಪುಟ್ಟ ಹಕ್ಕಿಗಾಗಿ ಲೋಕವನ್ನು ಉಳಿಸಲಾದೀತೇ?
ಕವಿ, ಪತ್ರಕರ್ತೆ, ಆದಿವಾಸಿ ಹಕ್ಕುಗಳ ಹೋರಾಟಗಾರ್ತಿ ಜಸಿಂತಾ ಕೆರ್ಕೆಟ್ಟಾ ಅವರು 2022ರಲ್ಲಿ ಪ್ರಕಟಿಸಿದ ‘ಅಂಗೋರ್' (ಕೆಂಡ) ಎಂಬ ದ್ವಿಭಾಷಾ (ಹಿಂದಿ-ಇಂಗ್ಲಿಷ್) ಕವನ ಸಂಕಲನವನ್ನು ಸಂವರ್ತ ‘ಸಾಹಿಲ್’ ಕನ್ನಡಕ್ಕೆ ‘ಗೋರಿಯ ಮೇಲೆ ರಾಗಿಯ ಕೊನರು’ ಎಂಬ ಶೀರ್ಷಿಕೆಯಡಿ ಅನುವಾದಿಸಿದ್ದಾರೆ. ಇದಕ್ಕೆ ಪೂರಕವಾಗಿ ಸಂಕೇತ ಪಾಟೀಲ