ವಸ್ತುವಿನ ಆಕಾರ, ನೋಟದ ವಿನ್ಯಾಸ, ಮಾತಿನ ಅರ್ಥ ...
ಕೆ ವಿ ನಾರಾಯಣರ 'ನುಡಿಗಳ ಅಳಿವು'; ಮತ್ತಷ್ಟು ಬೇರೆ ದಿಕ್ಕಿನ ನೋಟಗಳು
ಕೆ ವಿ ನಾರಾಯಣರು ತಮ್ಮ ನುಡಿಗಳ ಅಳಿವು ಪ್ರಬಂಧವನ್ನು “ಇದು ಒಂದು ವಾಗ್ವಾದವನ್ನು ಬಯಸುವ ಗುರಿಯನ್ನುಳ್ಳ ಬರಹ” ಎಂದು ಹೇಳಿಯೇ ಆರಂಭಿಸುತ್ತಾರೆ. ಆ ನಿಟ್ಟಿನಲ್ಲಿ ಸಂಕೇತ ಪಾಟೀಲರ ಈ ಬರಹವು ಕೆವಿಎನ್ ಅವರ ಪ್ರಬಂಧದಲ್ಲಿರುವ ಹಲವು ಅಂಶಗಳನ್ನು ಚರ್ಚಿಸುತ್ತ ಅದಕ್ಕೆ ಪೂರಕವಾಗಿರುವ ಇನ್ನೂ ಕೆಲವು ನೋಟಗಳತ್ತ ಬೆಳಕು ಚೆಲ್ಲಲೆಳಸುತ್ತದೆ. ಈ ಬರಹವು ಎರಡು ಭಾಗಗಳಲ್ಲಿ ಪ್ರಕಟವಾಗಿದ್ದು ಇದು ಎರಡನೆಯ ಭಾಗವಾಗಿದೆ. ಮೊದಲನೆಯ ಭಾಗವನ್ನು ಇಲ್ಲಿ ಗಮನಿಸಬಹುದು.
ವಸ್ತು ಮತ್ತು ಅದರ ಚಿತ್ರಣ (object vs representation); ಸೂಚಕ ಮತ್ತು ಸೂಚ್ಯ; ಮಾದರಿ ಮತ್ತು ವಾಸ್ತವ — ಇವುಗಳ ಇಬ್ಬಗೆಯನ್ನು ಕಲೆ, ಸಾಹಿತ್ಯ ಅಷ್ಟೇ ಅಲ್ಲದೇ ವಿಜ್ಞಾನವೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಹುಕಾಲದಿಂದ ಪರಿಶೀಲಿಸಲಾಗಿದೆ. ಇದೇ ಮೂಲಭೂತ ಇಬ್ಬಗೆಯ ಹಲವು ರೂಪಗಳೂ ಇವೆ: “map is not the territory”, “word is not the thing”, ಹೀಗೆ. ಲೂಈಸ್ ಕ್ಯಾರಲ್ನ (Lewis Carroll) ಜನಪ್ರಿಯ ‘ಆಲೀಸ್ ಇನ್ ವಂಡರ್ಲ್ಯಾಂಡ್’ನ (Alice in Wonderland) ಒಂದು ಪಾತ್ರವು ಹೀಗೆ ಹೇಳುತ್ತದೆ: “ನಾನು ಬಳಸಿದ ಪದದ ಅರ್ಥ ನಿನಗೆ ಹೇಗೆ ಗೊತ್ತಿರಲು ಸಾಧ್ಯ? ಏಕೆಂದರೆ ಯಾವುದೇ ಪದವನ್ನು ಬಳಸುವಾಗ ಅದಕ್ಕೆ ಯಾವ ಅರ್ಥವನ್ನು ನಾನು ಹಚ್ಚಿರುತ್ತೇನೆಯೋ ಅದರರ್ಥ ಅದಷ್ಟೇ ಆಗಿರುತ್ತದೆ — ಹೆಚ್ಚಿಲ್ಲ ಕಡಿಮೆಯಿಲ್ಲ.” ಅವನ ‘ಸಿಲ್ವಿ ಮತ್ತು ಬ್ರೂನೋ’ (Sylvie and Bruno) ಕಾದಂಬರಿಯಲ್ಲಿ ನಿಜದ ನೆಲಹರಹನ್ನು ಹೆಚ್ಚು ಹೆಚ್ಚು ನಿಖರವಾಗಿ ಹೋಲುವ ನಕ್ಷೆಯನ್ನು ತಯಾರಿಸುತ್ತ ಹೋದಂತೆ ಆ ನಕ್ಷೆಯು ದೇಶವನ್ನೇ ಆವರಿಸುವಂತಾದಾಗ ಕೊನೆಗೆ ದೇಶದ ಜನರು ಆ ಪ್ರಯತ್ನವನ್ನು ತೊರೆದು ದೇಶವನ್ನೇ ನಕ್ಷೆಯನ್ನಾಗಿ ಬಳಸುವ ನಿರ್ಧಾರ ತಳೆಯುತ್ತಾರೆ. ಬೋರ್ಹೇಸ್ನ (Jorge Louis Borges) ಒಂದು ಕಿರುಕತೆಯಲ್ಲೂ (On Exactitude in Science) ಒಂದು ವಸ್ತುವನ್ನೂ ಅದರ ಮಾದರಿ ಅಥವಾ ಸೂಚಕವನ್ನೂ ಪ್ರತ್ಯೇಕಿಸಿ ನೋಡಲಾಗದುದರ ವಿಡಂಬನೆಯಿದೆ.
ರೆನೇ ಮ್ಯಾಗ್ರಿಟ್ (René Magritte) ಎಂಬ ಬೆಲ್ಜಿಯನ್ ಸರ್ರಿಯಲಿಸ್ಟ್ ಕಲಾವಿದ ತನ್ನ ಕಲಾಕೃತಿಗಳ ಮೂಲಕ ಚಿತ್ರ ಮತ್ತು ಪದಗಳ ನಡುವಿನ ನಂತನ್ನೂ ಪದಗಳು ಉಂಟುಮಾಡುವ ಗೊಂದಲಗಳನ್ನೂ ಅನ್ವೇಷಿಸಿದ್ದ. ‘ಚಿತ್ರಗಳ ಧೂರ್ತತನ’ (The Treachery of Images) ಎಂಬ ಅವನ ಕಲಾಕೃತಿಯಲ್ಲಿ, ಒಂದು ಪೈಪ್ನ ಚಿತ್ರಕ್ಕೆ ‘ಇದು ಒಂದು ಪೈಪ್ ಅಲ್ಲ’ ಎಂಬ ಒಕ್ಕಣೆಯಿತ್ತು. ಒಂದು ವಸ್ತು ಮತ್ತು ಅದರ ಚಿತ್ರರೂಪದ ನಡುವೆಯೂ ಭಾಷೆಯ ಪದಗಳಿಗೂ ಅವುಗಳ ಅರ್ಥದ ನಡುವೆಯೂ ಇರುವ ಅಂತರವನ್ನು ಮನಗಾಣಿಸುವ meta ಆಶಯವನ್ನು ಈ ಕೃತಿ ಹೊಂದಿತ್ತು.
“But it is a pipe."
"No, it's not," I said. It's a drawing of a pipe. Get it? All representations of a thing are inherently abstract. It's very clever.”"It's quite simple. Who would dare pretend that the representation of a pipe is a pipe? Who could possibly smoke the pipe in my painting? No one. Therefore it IS NOT A PIPE."
ನುಡಿಯಂಥ ಹಲಪದರಗಳ ಸಂಕೀರ್ಣ ವ್ಯವಸ್ಥೆಯ ಕುರಿತು ನಮ್ಮಲ್ಲಿ ಗೊಂದಲಗಳು ಇರುವುದು ಅಸಹಜವೇನಲ್ಲ. ನುಡಿ ಎನ್ನುವುದರ ನೆಲೆ ಯಾವುದು? ನುಡಿಯ ಸೂಚಕ ಮತ್ತು ಸೂಚ್ಯಗಳ ಸಂಬಂಧವೇನು ಎನ್ನುವುದರ ಬಗೆಗೆ ನಮಗೆ ಸ್ಪಷ್ಟತೆಯಿದೆಯೇ? ಉದಾಹರಣೆಗೆ, ಒಂದು ನುಡಿಗೂ ಅದರ ಲಿಪಿಗೂ ನೇರಾನೇರ ಸಂಬಂಧವಿಲ್ಲ. ಲಿಪಿಗಳು ಒಂದು (ಅಥವಾ ಹೆಚ್ಚು) ನುಡಿಗಳ ಧ್ವನಿಗಳನ್ನು ಬರಹರೂಪದಲ್ಲಿ ಅಭಿವ್ಯಕ್ತಿಸಲು ಬಳಸುವ ಸಂಕೇತ ಪದ್ಧತಿಗಳು ಮಾತ್ರ. ಅವು ಕಾಲಕಾಲಕ್ಕೆ ಬದಲಾದದ್ದೂ ಇದೆ. ಇದನ್ನಂತೂ ನಾವು ಒಪ್ಪುತ್ತೇವೆ. (ಹಾಗಿದ್ದೂ ಇತ್ತೀಚೆಗೆ ಫೇಸ್ಬುಕ್ನಲ್ಲಿ ಒಬ್ಬ ಬರಹಗಾರರು ಕನ್ನಡ ಲಿಪಿಯ ಕೆಲವು ಲಕ್ಷಣಗಳಿಂದ ಕನ್ನಡ ಪುಸ್ತಕಗಳ ಮುದ್ರಣದಲ್ಲಿ ಆಗುವ practical ಸಮಸ್ಯೆಗಳ ಕುರಿತು ತಮ್ಮ ಅನ್ನಿಸಿಕೆಯನ್ನು ಹಂಚಿಕೊಂಡಾಗ ಅಲ್ಲಿ ನಡೆದ ಚರ್ಚೆ ಹಾದಿತಪ್ಪಿ ಕನ್ನಡದ ಲಿಪಿಗೂ ನುಡಿಯ ಸೊಬಗು ಸೊಗಡು ಮೊದಲಾದುವಕ್ಕೂ ಅನಗತ್ಯ ಸಂಬಂಧವನ್ನು ಹಚ್ಚಿ ಭಾವುಕತೆಯತ್ತ ಜಾರಿದ್ದನ್ನು ನಾನು ಗಮನಿಸಿದೆ. ಅದಿರಲಿ.)
ಹಾಗಿದ್ದರೆ ನುಡಿಯೆಂದರೆ ಅದರಲ್ಲಿರುವ ಪದಗಳ ಮೊತ್ತವೇ? ಅದರ ವ್ಯಾಕರಣ ಮತ್ತು ಧ್ವನಿಪದ್ಧತಿಯೇ? ಯಾವುದೇ ನುಡಿಯ ಪದಕೋಶವು ಬದಲಾಗುತ್ತಿರುತ್ತದೆ: ಹಳೆಯ ಪದಗಳು ಕಳೆದುಹೋಗುತ್ತವೆ, ಅರ್ಥಪಲ್ಲಟಕ್ಕೆ ಒಳಗಾಗುತ್ತವೆ; ಹೊಸ ಪದಗಳು ಕೂಡಿಕೊಳ್ಳುತ್ತವೆ. ವ್ಯಾಕರಣ ಮತ್ತು ಧ್ವನಿಸಂಬಂಧೀ ಮಾರ್ಪಾಟುಗಳು ಹೋಲಿಕೆಯಲ್ಲಿ ಕಡಿಮೆ ಹಾಗೂ ಹೆಚ್ಚು ನಿಧಾನವಾಗಿ ಆಗುತ್ತವಾದರೂ ಅವುಗಳ ನಿದರ್ಶನಗಳೂ ನಮ್ಮೆದುರಿಗಿವೆ. “ಕೇಳ್ಪಟ್ಟೆ" ಎಂಬಂಥ ಪ್ರಯೋಗ ಕೊನೆಯಪಕ್ಷ ಬೆಂಗಳೂರಿನಲ್ಲಂತೂ ಮುಖ್ಯವಾಹಿನಿಗೆ ಸೇರಿದಂತಿದೆ. ಹಾಗೆಯೇ ಕನ್ನಡದಲ್ಲಿ ಸಾಮಾನ್ಯವಾಗಿ ಮಹಾಪ್ರಾಣಗಳನ್ನು ಕೈಬಿಟ್ಟರೂ ಕೆಲವು ಕಡೆ ಅದು ಅನಗತ್ಯವಾಗಿ ಸೇರಿಕೊಳ್ಳುತ್ತಿದೆ (“ಉಚ್ಛ”, “ವಿಧ್ಯಾಭ್ಯಾಸ”). ಇವನ್ನು ಸಾಮಾನ್ಯರಷ್ಟೇ ಅಲ್ಲದೇ ಮಾಧ್ಯಮದವರು, ಸಾಹಿತಿಗಳು ಕೂಡ ಬಳಸುವುದನ್ನು ನಾವು ಗಮನಿಸಬಹುದು. ಇದಕ್ಕೊಂದು ವಿನ್ಯಾಸವೂ ಇದ್ದಂತೆ ತೋರುತ್ತದೆ. ಈ “ತಪ್ಪು ಪ್ರಯೋಗ”ಗಳು ಮುಂದೊಮ್ಮೆ ಪ್ರಮಾಣಿತಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಈ ಹಿಂದೆ ಚರ್ಚಿಸಿದಂತೆ ಇದು ಮಲಿನತೆಯೇ ಭಾಷೆಯ ಸಹಜ ವಿಕಾಸದ ಪ್ರಕ್ರಿಯೆಯೇ?
ಪದಗಳನ್ನು ದಾಟಿ ಗ್ರಹಿಕೆ ಮತ್ತು ಅರ್ಥಪ್ರತೀತಿಗಳಿಗೆ ಬಂದರೆ, ಅರ್ಥವೆನ್ನುವುದು ಸ್ಫುರಿಸುವುದು ಹಂತಹಂತವಾಗಿಯೋ (ಎಂದರೆ ಪ್ರತಿ ಪದಪದದಿಂದಲೋ) ಅಥವಾ ಅದು ಒಂದು ವಾಕ್ಯದ ಕೊನೆಗೆ ಒಮ್ಮೆಲೇ ಸ್ಫೋಟಗೊಳ್ಳುವಂಥದ್ದೋ? ಕೆವಿಎನ್ ಅವರ ಪ್ರಬಂಧದಲ್ಲಿ ಇದರ ಕುರಿತ ವಿವಿಧ ಸಿದ್ಧಾಂತಗಳ ಸವಿಸ್ತಾರ ಚರ್ಚೆಯಿದೆ. ಅದನ್ನು ಮುಂದುವರಿಸುವುದಾದರೆ, ಪ್ರತ್ಯೇಕ ಪದಗಳಿಗೇ ಅರ್ಥವೇನಾದರೂ ಇದೆಯೇ, ಇದ್ದರೆ ಆ ಅರ್ಥದ ನೆಲೆ ಎಲ್ಲಿದೆ; ಅರ್ಥವು ಒಂದು ಪದದಲ್ಲಿಯೇ ಅಡಕವಾಗಿರುವಂಥದ್ದೋ ಅಥವಾ ಅದರ ಸುತ್ತಣ ಪರಿಸರದಲ್ಲಿ ಅಥವಾ ಪೂರ್ವಾಪರ ಸಂದರ್ಭದಲ್ಲಿ (context) ಹರಡಿಕೊಂಡದ್ದೋ ಎಂಬಂಥ ಪ್ರಶ್ನೆಗಳೂ ಎದುರಾಗುತ್ತವೆ.
ಒಂದು ಉದಾಹರಣೆಯನ್ನು ನೋಡೋಣ:
“ಆ ದಿನ ಸಂಜೆ ಆಗಸದ ತುಂಬ ಕಪ್ಪು ತುರುಮುಗಳಿದ್ದುವು. ಅವುಗಳ ಕರಿ ನೆರಳು ನೆಲದುದ್ದಕ್ಕೂ ಚಾಚಿತ್ತು. ಇನ್ನೇನು ಆ ತುರುಮುಗಳಿಂದ ಮಳೆ ಸುರಿಯಲಿತ್ತು… ಅಷ್ಟರಲ್ಲಿ ಜೋರು ಗಾಳಿ ಬೀಸಿತು.”
ನನಗೆ ಗೊತ್ತಿರುವ ಪ್ರಕಾರ ಕನ್ನಡದಲ್ಲಿ ‘ತುರುಮು’ ಎಂಬ ಪದವಿಲ್ಲ, ಹೀಗಾಗಿ ಅದರರ್ಥ ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ಆದರೂ ಮೇಲಿನ ವಾಕ್ಯಗಳಲ್ಲಿ ಆ ಹೊಸ ಪದವು ಏನನ್ನು ಸೂಚಿಸುತ್ತಿದೆ ಎಂಬುದು ಕನ್ನಡ ಬಲ್ಲ ಸಣ್ಣ ಮಗುವಿಗೂ ಗೊತ್ತಾಗುತ್ತದೆ. ಎಂದರೆ ಗ್ರಹಿಕೆಯು ಇನ್ನೊಂದು ಸ್ತರದಲ್ಲಿ ಕೆಲಸ ಮಾಡುತ್ತಿದೆ ಎಂದಾಗುತ್ತದೆ. ಅಷ್ಟೇ ಅಲ್ಲದೇ ಒಂದು ಪದದ ಅರ್ಥವೆನ್ನುವುದು ಒಂದು ಬಿಂದುವಿನಲ್ಲಿ ಪ್ರಕಟವಾದಂತೆ ತೋರಿದರೂ ಅದು ವಾಸ್ತವದಲ್ಲಿ ಆ ಬಿಂದುವಿನಲ್ಲಿರದೇ ಪದದ ಸುತ್ತಣದಲ್ಲಿ ಪಸರಿಸಿಕೊಂಡಿರುತ್ತದೆ ಎಂದಾಗುತ್ತದೆ.
ಜಾನ್ ರ್ಯೂಪರ್ಟ್ ಫರ್ತ್ (John Rupert Firth) ಎನ್ನುವ ಭಾಷಾಶಾಸ್ತ್ರಜ್ಞನು 1950ರ ದಶಕದಲ್ಲಿ “A word is characterized by the company it keeps,” ಎಂಬ ಕಲ್ಪನೆಯನ್ನು ಪ್ರಚುರಗೊಳಿಸಿದನು. ಇದೇ ಮುಂದೆ Distributional Semantics ಎಂಬ ಸಂಶೋಧನಾ ಕ್ಷೇತ್ರವಾಗಿ ಬೆಳೆಯಿತು. ಸರಳವಾಗಿ ಹೇಳಬೇಕೆಂದರೆ: ಒಂದು ಪದದ "ಅರ್ಥ” ಎನ್ನುವುದು ಹಲವು ಆಯಾಮಗಳಲ್ಲಿ ವಿತರಣೆಗೊಂಡಿರುತ್ತದೆ; ಹಾಗೂ ಹಲವು ವಿತರಿತ ಆಯಾಮಗಳು ಒಟ್ಟು ಸೇರಿ ಅದಕ್ಕೆ “ಅರ್ಥ”ವನ್ನು ಕೊಡುತ್ತವೆ. ಒಂದು ನುಡಿಯಲ್ಲಿನ ಪದಗಳ ನಡುವಿನ ಸಂಬಂಧವನ್ನು ಒಂದು semantics space ಅಥವಾ ಗಣಿತದ vector spaceನಲ್ಲಿ ಸಂಗ್ರಹವಾಗಿ ಹಿಡಿದಿಡಬಹುದು. ಅರ್ಥ ಎನ್ನುವುದು ಉಂಟಾಗುವುದು ಆ spaceನಲ್ಲಿ. ಇಂದಿನ LLMಗಳೂ ಸೇರಿದಂತೆ ಎಲ್ಲ ನುಡಿಮಾದರಿಗಳ (language models) ಬುನಾದಿಯಲ್ಲಿ ಈ ತತ್ವ ಕೆಲಸ ಮಾಡುತ್ತದೆ.
ನುಡಿ ಮತ್ತು ಚಿಂತನೆಗೆ ಇರುವ ಸಂಬಂಧದಲ್ಲೂ ಹಲಬಗೆಯ ಗೊಂದಲಗಳಿವೆ. ಗ್ರಹಿಕೆ, ಚಿಂತನೆ, ತಿಳಿವಳಿಕೆ ಇವುಗಳು ನುಡಿಯ ಮೂಲಕವೇ ಆಗುವಂಥವು; ನಮ್ಮ ನುಡಿಯ ಸೀಮಿತತೆಯು ಚಿಂತನೆಯನ್ನೂ ಸೀಮಿತಗೊಳಿಸುತ್ತದೆ ಎಂಬರ್ಥದ ವಾದಗಳಿವೆ. ಆಧುನಿಕ AIನ ಗಾಡ್ಫಾದರ್ ಎಂದು ಕರೆಸಿಕೊಳ್ಳುವ ಜೆಫ್ರೀ ಹಿಂಟನ್ (Geoffrey Hinton) ತಮ್ಮ ಒಂದು ಪ್ರಬಂಧದಲ್ಲಿ ಹೀಗೆ ಹೇಳಿದ್ದಾರೆ:
The shape of an object, the layout of a scene, the sense of a word, and the meaning of a sentence must all be represented as spatio-temporal patterns of neural activity.
ನಮ್ಮ ಮಿದುಳಿನಲ್ಲಿ ಮೂಡುವ ವಿಚಾರಗಳನ್ನು ಅವರು ಅಮೂರ್ತ “thought vectors” ಎಂದು ಗುರುತಿಸುತ್ತಾರೆ. ಇನ್ನೂ ಮಾತು ಬಾರದ ಹಸುಳೆಗಳು ತಮ್ಮ ಪರಿಸರದ ವಸ್ತುಗಳನ್ನು, ವ್ಯಕ್ತಿಗಳನ್ನು ಗ್ರಹಿಸಲು, ಅವುಗಳಿಗೆ ಬೇಕಾದ್ದನ್ನು ಕೈಗೆತ್ತಿಕೊಳ್ಳಲು, ಬೇಡಾದ್ದನ್ನು ತಿರಸ್ಕರಿಸಲು ಪದಗಳ / ನುಡಿಯ ಅಗತ್ಯವಿರುವುದಿಲ್ಲ. ಇದೀಗ ತನ್ನೆದುರಿಗೆ ಬಂದು ‘ಮಿಯಾಂವ್’ ಎಂದ ಬೆಕ್ಕಿನ ಪಿಳ್ಳೆಯನ್ನು ತಾನು ನಿನ್ನೆ ನೋಡಿದ್ದಂಥದ್ದಕ್ಕೆ ಸೇರಿದ್ದೆಂದೂ ಅತ್ತ ನಿಂತಿರುವ ನಾಯಿಮರಿಯು ಬೇರೆ ವರ್ಗಕ್ಕೆ ಸೇರಿದ್ದೆನ್ನುವುದರ ಅರಿವು ನುಡಿಯ ಮೂಲಕ ಆಗಬೇಕಿಲ್ಲ. ಗ್ರಹಿಕೆ ಮತ್ತು ಅರಿವು ಅಮೂರ್ತವಾದ thought vectorಗಳ ಮೂಲಕ ಆಗುತ್ತಿರುತ್ತದೆ.
ಆದರೆ ಗ್ರಹಿಸಿದ್ದನ್ನು ಮತ್ತು ಅರಿತದ್ದನ್ನು ಮಾತಿನ ಮೂಲಕ ಹೇಳಬೇಕಾದಾಗ ನುಡಿಯು ಬೇಕಾಗುತ್ತದೆ. ಇದಕ್ಕೆ ಅನುವಾಗುವ ಸಂರಚನೆ ಅಥವಾ ಒಂದು ಅಮೂರ್ತ ನುಡಿ ಏರ್ಪಾಟು ಕೂಡ ಚಿಕ್ಕಮಕ್ಕಳಲ್ಲಿ ಅಂತರ್ಗತವಾಗಿರುತ್ತದೆ. ಅವರ ಪರಿಸರದಲ್ಲಿ ದಕ್ಕುವ ಯಾವುದೇ ನುಡಿಯ ಪದಗಳನ್ನು ಅದಕ್ಕೆ ಅಳವಡಿಸಿಕೊಂಡು ಅವು ಮಾತು ಕಲಿಯುತ್ತವೆ. ಈ ವ್ಯವಸ್ಥೆಗೆ ಪಿಂಕರ್ mentalese ಎನ್ನುತ್ತಾರೆ. ಒಂದು ರೀತಿಯಲ್ಲಿ ಇದು ನುಡಿಯೊಂದರ ಮೂಲಮಾದರಿ; ಅದರ ಆದಿಮ ನೆಲೆ.
ಚಿಂತನೆ ಮತ್ತು ಭಾಷೆಗಳ ನಡುವಿನ ಅಂತರ ಹಾಗೂ ಅವುಗಳ ಪರಸ್ಪರ ಸಂಬಂಧವನ್ನು ಗಣಿತವೆಂಬ ಭಾಷೆಯ ಮೂಲಕವೂ ಅರ್ಥೈಸಿಕೊಳ್ಳಲು ಪ್ರಯತ್ನಿಸಬಹುದು. ತನ್ಮೂಲಕ ನುಡಿಯು ಸೀಮಿತಗೊಳಿಸುವುದು (ಅಥವಾ ವಿಸ್ತೃತಗೊಳಿಸುವುದು) ಅಭಿವ್ಯಕ್ತಿಯನ್ನೇ ಹೊರತು ಚಿಂತನೆಯನ್ನಲ್ಲ ಎನ್ನುವುದನ್ನೂ ಕಂಡುಕೊಳ್ಳಬಹುದು.
ಇದಕ್ಕೆ ಒಂದು ಉದಾಹರಣೆಯಾಗಿ ರೋಮನ್ ಮತ್ತು ಹಿಂದೂ-ಅರೇಬಿಕ್ ಸಂಖ್ಯಾಪದ್ಧತಿಗಳನ್ನು ಗಮನಿಸಬಹುದು. ರೋಮನ್ ಪದ್ಧತಿಯಲ್ಲಿ ದೊಡ್ಡ ಸಂಖ್ಯೆಗಳನ್ನು ಕಟ್ಟುವುದು, ಕೂಡುವುದು, ಕಳೆಯುವುದು ಮೊದಲಾದ ಅಂಕಗಣಿತದ ಕ್ರಿಯೆಗಳನ್ನು ನಿಭಾಯಿಸುವುದು ಕಷ್ಟ. ಭಿನ್ನರಾಶಿ ಮೊದಲಾದ ಹಿರಿದಾದ ಪರಿಕಲ್ಪನೆಗಳಂತೂ ಸಾಮಾನ್ಯರಿಗೆ ಹಿಡಿತಕ್ಕೆ ಸಿಗುವಂಥವೇ ಅಲ್ಲ. ಆದರೆ ಹಿಂದೂ-ಅರೇಬಿಕ್ ಪದ್ಧತಿಯನ್ನು ಬಳಸಿಕೊಂಡು ಇವನ್ನೆಲ್ಲ ನಾವು ಸರಾಗವಾಗಿ ನಿಭಾಯಿಸುತ್ತೇವೆ. ಸಂಖ್ಯಾಪದ್ಧತಿಗಳ ವಿಕಾಸದ ಚರಿತ್ರೆಯನ್ನು ನಾವು ಗಮನಿಸಿದರೆ ಮೊಟ್ಟಮೊದಲಿಗೆ ಅವು ನಮ್ಮ ಕೈಕಾಲಬೆರಳುಗಳು, ದೇಹದ ವಿವಿಧ ಭಾಗಗಳು, ಅಂಗಾಂಗಗಳ ಆಧಾರದ ಮೇಲೆ ಶುರುವಾಗಿ, ಮುಂದೆ ರೋಮನ್ ಪದ್ಧತಿ, ನಂತರ ಸೊನ್ನೆ, ಮುಖಬೆಲೆ, ಸ್ಥಾನಬೆಲೆಗಳಿರುವ ಹಿಂದೂ-ಅರೇಬಿಕ್ ಪದ್ಧತಿ, ಅದಕ್ಕೂ ಮುಂದೆ ಕಂಪ್ಯೂಟರುಗಳ ಕಾರ್ಯವ್ಯವಸ್ಥೆಗಳಿಗೆ ಬೇಕಾದ ಬೈನರಿ (ಅಥವಾ ಆನ್-ಆಫ್) ಪದ್ಧತಿಯವರೆಗೆ ಮುಂದುವರಿದಿದೆ. ಇವನ್ನು ನಾವು ಒಂದೇ ಸಂಖ್ಯಾಭಾಷೆಯ ವಿಶಿಷ್ಟ ಪಾರಿಭಾಷಿಕಗಳೆಂದೋ ಹಲವು ಉಪಭಾಷೆಗಳೆಂದೋ ಪ್ರತ್ಯೇಕ ಭಾಷೆಗಳೆಂದೋ ಗಣಿತದ ಮಾದರಿಗಳೆಂದೋ ಹೇಗೆ ಬೇಕಾದರೂ ವ್ಯಾಖ್ಯಾನಿಸಬಹುದು. ಒಂದೇ ಅಗತ್ಯವನ್ನು (ಮತ್ತು ಅದರ ಹಿಂದಿರುವ ಚಿಂತನೆಯನ್ನು) ಅಭಿವ್ಯಕ್ತಿಸಲು ಒಂದು ಮಾದರಿಯು ಸಮರ್ಪಕವಾಗಿದ್ದಲ್ಲಿ ಉಳಿದುವು ಅಸಮರ್ಪಕವಾಗಿರಬಹುದು. ಇದೆಲ್ಲ ಬೆಳೆದುಬಂದದ್ದು ವ್ಯಕ್ತಿಗಳ ಕೊಡುಕೊಳೆ, ವ್ಯಾಪಾರ, ಕೃಷಿ ಮತ್ತಿತರ ಅಗತ್ಯಗಳಿಂದಾಗಿ. ಮುಂದೆಯೂ ಅದು ವಿಕಾಸಗೊಳ್ಳಬಹುದು. ಆದರೆ ಅದಾದದ್ದು ಮಾನವನು ತನಗೆದುರಾದ ಸಮಸ್ಯೆಗಳು ಮತ್ತು ಒದಗಿದ ಅವಕಾಶಗಳಿಗೆ ಸ್ಪಂದಿಸುತ್ತ ಅವುಗಳ ಬಗ್ಗೆ ಆಳವಾಗಿ ಚಿಂತಿಸುತ್ತ ಪರಿಹಾರಗಳನ್ನು ಕಂಡುಕೊಂಡು ಅವನ್ನು ಅಭಿವ್ಯಕ್ತಿಸಲು ತಕ್ಕುದಾದ ಹೊಸ ನುಡಿಗಟ್ಟನ್ನು ಕಂಡುಕೊಂಡಾಗ. ಮಾನವನ ಚಿಂತನೆಯು ನುಡಿಯನ್ನು (ಅಥವಾ ಅದನ್ನಷ್ಟೇ) ಅವಲಂಬಿಸಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.
ಇನ್ನೊಂದು ಉದಾಹರಣೆಯನ್ನು ನೋಡೋಣ. ಜ಼ೀನೋ (Zeno of Elea) ಎಂಬ ಸಾಮಾನ್ಯ ಶಕ ಪೂರ್ವ ೫ನೆಯ ಶತಮಾನದ ಗ್ರೀಕ್ ತತ್ವಜ್ಞಾನಿ ಕೆಲವು ತಾತ್ವಿಕ ಕಗ್ಗಂಟುಗಳನ್ನು ಮುಂದುಮಾಡಿದ್ದ. ಇವಕ್ಕೆ ಜ಼ೀನೋನ ವಿರೋಧಾಭಾಸಗಳು (Zeno’s Paradoxes) ಎನ್ನುತ್ತಾರೆ. ಅದರಲ್ಲಿ ಒಂದು ‘ಅಖಿಲೀಸ್ ಮತ್ತು ಆಮೆ’ಯದು. (ಮೊಲ ಮತ್ತು ಆಮೆಯ ಕತೆ ನೆನಪಿಸಿಕೊಳ್ಳಿ.) ಒಂದೊಮ್ಮೆ ಅಖಿಲೀಸ್ ಒಂದು ಆಮೆಯ ಜೊತೆ ಓಟದ ಪಂದ್ಯ ಕಟ್ಟುತ್ತಾನೆ. ಮಹಾ ವೀರ ಮತ್ತು ವೇಗಿಯಾದ ಅಖಿಲೀಸ್ ಆಮೆಗೆ ಒಂದಷ್ಟು ಆರಂಭಿಕ ಅಂತರವನ್ನು ಬಿಟ್ಟುಕೊಟ್ಟು ಹಿಂದಿನಿಂದ ಓಟ ಶುರು ಮಾಡುತ್ತಾನೆ. ಇಲ್ಲಿ ಜ಼ೀನೋ ಹೇಳುವುದೇನೆಂದರೆ ಅಖಿಲೀಸ್ ಆಮೆಯನ್ನು ದಾಟಿಹೋಗಲು ಸಾಧ್ಯವೇ ಇಲ್ಲ ಎಂದು. ಏಕೆಂದರೆ ಅವನು ಆಮೆಯ ಹತ್ತಿರ ಬಂದು ಇನ್ನೇನು ದಾಟಬೇಕು ಎನ್ನುವಷ್ಟರಲ್ಲಿ ಅದು ಕೊಂಚವೇ ಮುಂದೆ ಹೋಗಿರುತ್ತದೆ; ಅವನು ಆ ಅಂತರವನ್ನು ಕ್ರಮಿಸುವಷ್ಟರಲ್ಲಿ ಆಮೆಯು ಇನ್ನೂ ಕೊಂಚ — ಮೊದಲಿಗಿಂತ ಕಡಿಮೆ — ಮುಂದೆ ಹೋಗಿರುತ್ತದೆ. (ಮೇಲಿನ ಚಿತ್ರವನ್ನು ಗಮನಿಸಿ.) ಹೀಗೆ ಅಖಿಲೀಸ್ ಎಷ್ಟೇ ವೇಗದಿಂದ ಓಡಿದರೂ ಆಮೆಯೂ ಎಷ್ಟೇ ನಿಧಾನಗತಿಯದ್ದಾಗಿದ್ದರೂ ಇಬ್ಬರ ನಡುವಣ ಅಂತರ ಕಡಿಮೆಯಾಗುತ್ತಲೇ ಇದ್ದರೂ ಅದು ಕ್ವಚಿತ್ತಾಗಿಯಾದರೂ ಉಳಿದೇ ಉಳಿಯುತ್ತದೆ; ಹೀಗಾಗಿ ಕೊನೆಗೆ ಈ ಪಂದ್ಯದಲ್ಲಿ ಆಮೆಯೇ ಗೆಲ್ಲುತ್ತದೆ — ಇದು ಜ಼ೀನೋನ ವಾದ. ಇಂಥದೇ ಇನ್ನೊಂದು ವಾದದ ಮೂಲಕ ಅವನು “ಚಲನೆಯು ಅಸಂಭವ” ಎಂದು ಸಾಧಿಸುತ್ತಾನೆ! ಅವನದು ವಿತಂಡ ವಾದ ಎನ್ನುವುದು ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಿದ್ದರೂ ನುಡಿಯನ್ನು ಬಳಸಿ ಅವನು ಮಂಡಿಸುತ್ತಿದ್ದ ವಾದವು ಯಾವ ರೀತಿಯಲ್ಲಿ ತಪ್ಪು ಎನ್ನುವುದನ್ನು ನುಡಿಯ ಮೂಲಕವೇ ರುಜುವಾತುಪಡಿಸಲು ಆಗಿನ ಗ್ರೀಕ್ ತತ್ವಜ್ಞಾನಿಗಳ ನುಡಿಯಲ್ಲಿ ಸಶಕ್ತ ಪರಿಕರಗಳಿರಲಿಲ್ಲ. ಜ಼ೀನೋನ ವಾದವನ್ನು ಜಾಗರೂಕತೆಯಿಂದ ಕೂಲಂಕಷವಾಗಿ ತಪ್ಪೆಂದು ತೋರಿಸಲು ಕಲನಶಾಸ್ತ್ರ (Calculus) ಮತ್ತು ಅಪರಿಮಿತ ಸರಣಿಗಳ (Infinite Series) ನುಡಿಗಟ್ಟನ್ನು ಕಂಡುಹಿಡಿಯಬೇಕಾಯಿತು.
ಹೀಗೆ ನುಡಿಯ ಕೊರತೆಗಳನ್ನು ಅದರ ಬಿಕ್ಕಟ್ಟುಗಳನ್ನು ನಾವು ನಮ್ಮ ಚಿಂತನೆಯ ಮೂಲಕ ಪರಿಹರಿಸಿಕೊಳ್ಳುತ್ತ ನುಡಿಯಲ್ಲಿನ ತೆರಪುಗಳನ್ನು ತುಂಬಿಕೊಳ್ಳುತ್ತ ಹೋಗುತ್ತೇವೆ.
ಕೊನೆಯಲ್ಲಿ ಇನ್ನೊಮ್ಮೆ ಈ ಮೊದಲು ಹೇಳಿದ “ತುರುಮು”ಗಳಿಗೆ ಹಿಂದಿರುಗೋಣ. ಆ ಉದಾಹರಣೆಯಲ್ಲಿ ಒಂದು ಪದದ ಪಲ್ಲಟದಿಂದ ವಾಕ್ಯಗಳ ಅರ್ಥದಲ್ಲಿ ಯಾವ ಪಲ್ಲಟವೂ ಆಗಲಿಲ್ಲ; ಗ್ರಹಿಕೆಯಲ್ಲಿ ತೊಡಕುಂಟಾಗಲಿಲ್ಲ. ಆ ವಾಕ್ಯಗಳಲ್ಲಿನ ಇನ್ನೊಂದೋ ಎರಡೋ ಪದಗಳನ್ನು ಬದಲಿಸಿದರೆ ಏನಾಗುತ್ತದೆ? ಒಂದೊಂದೇ ಪದವನ್ನು ಬದಲಿಸುತ್ತ ಹೋದರೆ ಏನಾಗಬಹುದು? ಯಾವ ಹಂತದಲ್ಲಿ ಗ್ರಹಿಕೆ ತಪ್ಪುವುದು?
ನಮ್ಮ ನೋಟವನ್ನು ಹಿಗ್ಗಿಸಿ ಒಂದಿಡೀ ನುಡಿಯನ್ನೇ ಪರಿಗಣಿಸೋಣ. ಒಂದು ನುಡಿಯ ಒಂದೊಂದೇ ಪದ ಪಲ್ಲಟಗೊಳ್ಳುತ್ತ ಹತ್ತಾರು ಅಥವಾ ನೂರಾರು ವರ್ಷಗಳ ಕಾಲಾವಧಿಯಲ್ಲಿ ಅದರ ಬಹುತೇಕ ಮೂಲಪದಗಳನ್ನು ಇನ್ನೊಂದು ನುಡಿಯ ಪದಗಳು ಸ್ಥಾನಪಲ್ಲಟಗೊಳಿಸಿದರೆ ಆಗ ಮೊದಲಿನ ನುಡಿಯು ಅಳಿದಂತಾಗುವುದೇ? ಅದು ನುಡಿಪಲ್ಲಟವೇ? ಅಥವಾ ಕೇವಲ ಹೊಸ ಪದಕೋಶವೊಂದರ ಮರು ಅಳವಡಿಕೆಯೇ (relexification)? ಮಲಯಾಳದಲ್ಲಿ ಬಹುಪ್ರಮಾಣದಲ್ಲಿ ಸಂಸ್ಕೃತ ಪದಗಳಿರುವುದು ನಮಗೆಲ್ಲ ಗೊತ್ತಿದೆ — ಆಡುಮಾತಿನಲ್ಲಿ ಕೂಡ. ಹಾಗಿದ್ದೂ ಅದನ್ನು ಮಲಯಾಳವೇ ಎನ್ನುತ್ತೇವೆ. ಯಾವ ಪ್ರಮಾಣದಲ್ಲಿ ಪದಕೋಶದ ಪಲ್ಲಟವಾದಾಗ ಒಂದು ನುಡಿಯ ಪಲ್ಲಟವಾಯಿತು ಎನ್ನಬಹುದು? ನುಡಿಗಳ ಅಳಿವಿನ ಕುರಿತು ಚಿಂತಿಸುವವರಿಗೆ ಇವೆಲ್ಲ ಆಸಕ್ತಿಕರ ಪ್ರಶ್ನೆಗಳಾಗಿರಬಹುದು.
ಕೆವಿಎನ್ ಅವರು ತಮ್ಮ ಪ್ರಬಂಧದಲ್ಲಿ ನುಡಿಕಸುವಿನ ಕುರಿತೂ ಚರ್ಚಿಸುತ್ತಾರೆ. ವ್ಯಕ್ತಿಗಳು ತಮ್ಮ ಮೊದಲಿನ ನುಡಿಯನ್ನು ಕಳೆದುಕೊಂಡರೂ ಸಹಜ ನುಡಿಕಸುವಿನಿಂದ ಇನ್ನೊಂದನ್ನು ಪಡೆದುಕೊಳ್ಳಬಲ್ಲರು ಎಂದು ಹೇಳುತ್ತಾರೆ. ಅದಂತೂ ಹೌದು. ಆದರೆ ನಾವು ನುಡಿಕಸುವನ್ನು ಇನ್ನಷ್ಟು ವಿಸ್ತೃತವಾಗಿ ನೋಡಬೇಕು: ನುಡಿಕಸುವು ಒಂದು ಅಥವಾ ಇನ್ನೊಂದು ನುಡಿಗಷ್ಟೇ ಸೀಮಿತವಾಗಬೇಕಿಲ್ಲ; ಅದು ಒಂದಕ್ಕಿಂತ ಹೆಚ್ಚಿನ ನುಡಿಗಳ ಮೇಲೆಯೂ ವ್ಯಾಪಿಸಬಹುದು. ಹಿಂದೆ ನಮ್ಮ ನುಡಿಗಳ ಬಳಕೆಯು ವಿವಿಧ ವಲಯಗಳಲ್ಲಿ ಆಗುವಂತೆ ಮಾಡಿ ಅದರ ಪಾತ್ರವನ್ನು ಹಿಗ್ಗಿಸಬೇಕೆಂದು ಹೇಳಿದ್ದೆ. ಆ ಪ್ರಯತ್ನದ ಜೊತೆಗೇ ಯಾವುದನ್ನು ‘ನಮ್ಮ ನುಡಿ’ ಎನ್ನುತ್ತೇವೋ ಅದರ ವ್ಯಾಖ್ಯಾನ ಮತ್ತು ವ್ಯಾಪ್ತಿಯನ್ನೂ ಹಿಗ್ಗಿಸುವ ಪ್ರಯತ್ನ ಮಾಡಬೇಕು. ನುಡಿಯನ್ನು ಅದನ್ನಾಡುವ ಸಮುದಾಯದ ಹೊರತಾಗಿ ನೋಡುವುದರಲ್ಲಿ ಅರ್ಥವಿಲ್ಲ; ಹಾಗೆಯೇ ನುಡಿಯಳಿವನ್ನೂ. ನುಡಿಗಳ ಅಳಿವನ್ನು ತಡೆಯುವ ಕುರಿತು ಚಿಂತಿಸುತ್ತಿರುವ ಸಂದರ್ಭದಲ್ಲಿ ನುಡಿಗಳ ಕಸುವನ್ನೂ ವ್ಯಕ್ತಿಗಳ ಹಾಗೂ ಸಮುದಾಯಗಳ ನುಡಿಕಸುವನ್ನು ಹೆಚ್ಚಿಸುವುದರ ಕುರಿತೂ ನಾವು ಚಿಂತಿಸಬೇಕಾಗಿದೆ.
ಕೆ ವಿ ನಾರಾಯಣರು ತಮ್ಮ ‘ನುಡಿಗಳ ಅಳಿವು’ ಪ್ರಬಂಧವನ್ನು “ಇದು ಒಂದು ವಾಗ್ವಾದವನ್ನು ಬಯಸುವ ಗುರಿಯನ್ನುಳ್ಳ ಬರಹ” ಎಂದು ಹೇಳಿಯೇ ಆರಂಭಿಸುತ್ತಾರೆ. ನನಗೆ ಭಾಷಾಶಾಸ್ತ್ರದಲ್ಲಿ ಹೆಚ್ಚಿನ ಅರಿವು (ಅಥವಾ ತೀವ್ರ ಆಸಕ್ತಿ) ಇಲ್ಲದಿದ್ದರೂ ನುಡಿಗಳ ಬಗ್ಗೆ ಕುತೂಹಲವಿರುವುದರಿಂದಲೂ ಗಣಿತ, Natural Language Process (NLP) ಮತ್ತು AI ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಬಹುಕಾಲ ಯೋಚಿಸಿರುವುದರಿಂದಲೂ ನುಡಿಮಾದರಿಗಳ (Language Models) ಕುರಿತು ಕೆಲಸ ಮಾಡಿರುವುದರಿಂದಲೂ ಅವರು ತಮ್ಮ ಪ್ರಬಂಧದಲ್ಲಿ ಮಂಡಿಸಿದ ವಿಚಾರಗಳಿಗೆ ಪೂರಕವಾಗಿ ಕೆಲವು ಮಾತುಗಳನ್ನು ಸೇರಿಸಿದ್ದೇನೆ. ಕನ್ನಡದಲ್ಲಿ ನುಡಿಯರಿಮೆಯು ತನ್ನ ಪಾರಂಪರಿಕ ನೆಲೆಗಳಿಂದಷ್ಟೇ ಅಲ್ಲದೇ AI ಸೇರಿದಂತೆ ಹಲವು ನೆಲೆಗಳಿಂದ ಹೊಳಹುಗಳನ್ನು ಪಡೆದು ಅದರ ಸಂಶೋಧನೆಗೆ ಹೊಸ ಆವೇಗ ಸಿಕ್ಕಲಿ ಎನ್ನುವುದು ಅವರಂತೆಯೇ ನನ್ನ ಆಶಯವೂ ಆಗಿದೆ.
ಇದನ್ನೂ ಓದಿ …
ನುಡಿ, ಸಂಸ್ಕೃತಿ, ಲೋಕದೃಷ್ಟಿ ಮತ್ತು ಸಮುದಾಯಗಳ ನಂಟು
ಕೆ ವಿ ನಾರಾಯಣರು ತಮ್ಮ ನುಡಿಗಳ ಅಳಿವು ಪ್ರಬಂಧವನ್ನು “ಇದು ಒಂದು ವಾಗ್ವಾದವನ್ನು ಬಯಸುವ ಗುರಿಯನ್ನುಳ್ಳ ಬರಹ” ಎಂದು ಹೇಳಿಯೇ ಆರಂಭಿಸುತ್ತಾರೆ. ಆ ನಿಟ್ಟಿನಲ್ಲಿ ಸಂಕೇತ ಪಾಟೀಲರ ಈ ಬರಹವು ಕೆವಿಎನ್ ಅವರ ಪ್ರಬಂಧದಲ್ಲಿರುವ ಹಲವು ಅಂಶಗಳನ್ನು ಚರ್ಚಿಸುತ್ತ ಅದಕ್ಕೆ ಪೂರಕವಾಗಿರುವ ಇನ್ನೂ ಕೆಲವು ನೋಟಗಳತ್ತ ಬೆಳಕು ಚೆಲ್ಲಲೆಳಸುತ್ತದೆ. ಈ ಬರಹವು ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಇದು ಮೊದಲನೆಯ ಭಾಗ.