ನುಡಿ, ಸಂಸ್ಕೃತಿ, ಲೋಕದೃಷ್ಟಿ ಮತ್ತು ಸಮುದಾಯಗಳ ನಂಟು
ಕೆ ವಿ ನಾರಾಯಣರ 'ನುಡಿಗಳ ಅಳಿವು'; ಮತ್ತಷ್ಟು ಬೇರೆ ದಿಕ್ಕಿನ ನೋಟಗಳು
ಕೆ ವಿ ನಾರಾಯಣರು ತಮ್ಮ ನುಡಿಗಳ ಅಳಿವು ಪ್ರಬಂಧವನ್ನು “ಇದು ಒಂದು ವಾಗ್ವಾದವನ್ನು ಬಯಸುವ ಗುರಿಯನ್ನುಳ್ಳ ಬರಹ” ಎಂದು ಹೇಳಿಯೇ ಆರಂಭಿಸುತ್ತಾರೆ. ಆ ನಿಟ್ಟಿನಲ್ಲಿ ಸಂಕೇತ ಪಾಟೀಲರ ಈ ಬರಹವು ಕೆವಿಎನ್ ಅವರ ಪ್ರಬಂಧದಲ್ಲಿರುವ ಹಲವು ಅಂಶಗಳನ್ನು ಚರ್ಚಿಸುತ್ತ ಅದಕ್ಕೆ ಪೂರಕವಾಗಿರುವ ಇನ್ನೂ ಕೆಲವು ನೋಟಗಳತ್ತ ಬೆಳಕು ಚೆಲ್ಲಲೆಳಸುತ್ತದೆ. ಈ ಬರಹವು ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಇದು ಮೊದಲನೆಯ ಭಾಗ. ಎರಡನೆಯ ಭಾಗ ಇಲ್ಲಿದೆ.
ಕೆ ವಿ ನಾರಾಯಣ ಅವರು ತಮ್ಮ ‘ನುಡಿಗಳ ಅಳಿವು’ ಎಂಬ ಪುಸ್ತಕಕ್ಕೆ ಕೊಟ್ಟ ಅಡಿಬರಹ ‘ಬೇರೆ ದಿಕ್ಕಿನ ನೋಟ’ ಎಂಬುದು. ಅವರು ಈ ಚಿಕ್ಕ ಪುಸ್ತಕದಲ್ಲಿ ಮಂಡಿಸಿರುವ ನೇರ, ತಾರ್ಕಿಕ ಮತ್ತು ಸಮಚಿತ್ತದ ವಾದಸರಣಿಗೆ ಮೇಲಿನ ಅಡಿಬರಹ ಕೊಟ್ಟದ್ದು ಕುತೂಹಲಕರವಾಗಿದೆ: ಅದು ಅವರ ಪ್ರಬಂಧದ ಬಗ್ಗೆ ಏನನ್ನಾದರೂ ಹೇಳುವುದಕ್ಕಿಂತ ಹೆಚ್ಚಾಗಿ ಈ ವಿಷಯದ ಕುರಿತಾಗಿ ಕನ್ನಡದಲ್ಲಿ (ಪ್ರಾಯಶಃ ಉಳಿದೆಡೆ ಕೂಡ) ಇದುವರೆಗಿನ ಚರ್ಚೆಗಳು ಸಮಸ್ಯಾತ್ಮಕವಾಗಿರುವುದನ್ನು ಸೂಚಿಸುತ್ತದೆ.
ಸಂಶೋಧಕರಲ್ಲಿ (ವಿಶೇಷವಾಗಿ ವೈಜ್ಞಾನಿಕ ಸಂಶೋಧನಾ ವಲಯದಲ್ಲಿ) ‘ಸಮಸ್ಯೆಯ ಹುಡುಕಾಟದಲ್ಲಿರುವ ಪರಿಹಾರ’ (a solution in search of a problem) ಎಂಬೊಂದು ಪರಿಕಲ್ಪನೆಯಿದೆ. ಯಾವುದೇ ಕ್ಷೇತ್ರದ ಸಂಶೋಧನೆಯಲ್ಲಿ ಎಲ್ಲರೂ ಒಪ್ಪುವ ಸಾಮಾನ್ಯ ಕ್ರಮವೆಂದರೆ, ಮೊದಲಿಗೆ ಒಂದು ವಿಷಯವಸ್ತುವನ್ನು ಅಥವಾ ವಿದ್ಯಮಾನವನ್ನು ಇಡಿಯಾಗಿ ಮತ್ತು ಆಳವಾಗಿ ಅರ್ಥೈಸಿಕೊಂಡು ಅದರ ಮೂಲದಲ್ಲಿರುವ ಸಮಸ್ಯೆಯ (ಅಥವಾ ಸಮಸ್ಯೆಗಳ) ಒಟ್ಟಾರೆ ಸ್ವರೂಪವನ್ನು ಆದಷ್ಟು ನಿಖರವಾಗಿಯೂ ಸ್ಪಷ್ಟವಾಗಿಯೂ ನಿರೂಪಿಸುವುದು. ಇದು ಬಡಪೆಟ್ಟಿಗೆ ಆಗುವಂಥದ್ದಲ್ಲ, ಒಂದು ಸಮಸ್ಯೆಯ ಜೊತೆಗೆ ಬಹಳ ವೇಳೆ ಕಳೆದು, ಹಲಬಗೆಯಿಂದ ಅದನ್ನು ಪರಿಭಾವಿಸುತ್ತ, ಹೊಸ ಹೊಳಹುಗಳ ಬೆಳಕಿನಲ್ಲಿ ಅದನ್ನು ತಿರುತಿರುಗಿ ನೋಡುತ್ತ ಹಂತಹಂತವಾಗಿ ಕಟ್ಟಿಕೊಳ್ಳುತ್ತ ಹೋಗುವಂಥದ್ದು. ಬಹಳಷ್ಟು ಸಲ ಒಮ್ಮೆ ಸರಿಯಾದ ಪ್ರಶ್ನೆ ಒಡಮೂಡಿತೋ ಅದೇ ಸೂಕ್ತ ಉತ್ತರದತ್ತ ದಾರಿಯನ್ನೂ ತೋರುತ್ತದೆ. ಆದರೆ, ಒಮ್ಮೊಮ್ಮೆ ನಮ್ಮಲ್ಲಿ ಮೊದಲಿಗೇ “ಸರಿಯಾದ” ಉತ್ತರ ಸಿದ್ಧವಿರುತ್ತದೆ (ಅಥವಾ ನಾವು ಹಾಗೆ ಅಂದುಕೊಂಡಿರುತ್ತೇವೆ). ಅದಕ್ಕೆ ಹೊಂದುವಂಥ ಪ್ರಶ್ನೆಗಳನ್ನು ನಂತರದಲ್ಲಿ ಹುಡುಕಿ ಜೋಡಿಸುತ್ತೇವೆ. ಇದು ಪ್ರಶ್ನೆಯ ಹುಡುಕಾಟದಲ್ಲಿರುವ ಉತ್ತರ. ಎಂದರೆ ಪರಿಹಾರ ಮೊದಲಾಗಿ ಸಮಸ್ಯೆ ಅದನ್ನು ಹಿಂಬಾಲಿಸುವಂತಾಗುತ್ತದೆ. ಇದಕ್ಕೆ solution-probleming ಅಂತಲೂ ಕರೆಯುತ್ತಾರೆ.
ನುಡಿಗಳನ್ನು ಕಾಪಿಡಬೇಕು, ಅವು ಅಳಿಯದಂತೆ ತಡೆಯಬೇಕು, ಅದಕ್ಕೆ ಹಲಬಗೆಯ ಕಾರ್ಯಸೂಚಿಗಳನ್ನೂ ಯೋಜನೆಗಳನ್ನೂ ಸಾಂಕೇತಿಕ ಆಚರಣೆಗಳನ್ನೂ (ಉದಾಹರಣೆಗೆ, ಪ್ರತಿಯೊಂದು ಭಾಷೆಯನ್ನು ಗುರುತಿಸುವ ಒಂದೊಂದು ಮರವನ್ನು ನೆಟ್ಟು “ಭಾಷಾವನ”ಗಳನ್ನು ಸೃಷ್ಟಿಸುವುದು, ಇತ್ಯಾದಿ) ಹಮ್ಮಿಕೊಳ್ಳಬೇಕು ಎಂಬ ಉತ್ತರ ನಮ್ಮಲ್ಲಿ ಸಿದ್ಧವಾಗಿದೆ. ಆದರೆ, ನಿಜವಾದ ಪ್ರಶ್ನೆಯೇನೆನ್ನುವುದೇ ನಮಗೆ ಗೊತ್ತಿದ್ದಂತಿಲ್ಲ: ಒಂದು ನುಡಿ ಎಂದರೇನು ಎನ್ನುವುದರಿಂದ ಹಿಡಿದು, ನಮ್ಮಲ್ಲಿ ಎಷ್ಟು ನುಡಿಗಳಿವೆ, ಅವುಗಳಲ್ಲಿ ಎಷ್ಟು ಹದುಳಾಗಿವೆ, ಯಾವುವು ಅಳಿವಿನಂಚಿನಲ್ಲಿವೆ, ನುಡಿಯೊಂದು ಅಳಿಯುವುದು ಎಂದರೇನು, ಅವು ನಿಜಕ್ಕೂ ಅಳಿದಿವೆಯೇ ಅಳಿಯುತ್ತಿವೆಯೇ, ಅಳಿದಿದ್ದರೆ ಅದಕ್ಕೆ ಕಾರಣಗಳೇನು, ನುಡಿಗಳ ಅಳಿವಿನ ಬಗ್ಗೆ ನಾವು ಚಿಂತಿಸಬೇಕೇ ಮತ್ತು ಚಿಂತಿಸಿದರೆ ಯಾವ ಕಾರಣಗಳಿಂದಾಗಿ ಚಿಂತಿಸಬೇಕು — ಇವೇ ಮೊದಲಾದ ಪ್ರಶ್ನೆಗಳನ್ನು ಉದ್ವಿಗ್ನತೆಗೆ ಒಳಗಾಗದೇ ರಮ್ಯ ಕಲ್ಪನೆಗಳ ಹಿಡಿತದಿಂದ ಬಿಡಿಸಿಕೊಂಡು ಕೇಳಿಕೊಳ್ಳದೇ ನುಡಿಯ ಅಳಿವಿನ ಬಗ್ಗೆ ಮಾತಾಡುವುದರಲ್ಲಿ ಅರ್ಥವಿಲ್ಲ.
ಇದಲ್ಲದೆಯೇ ಒಂದು ನುಡಿಯನ್ನು ಅದನ್ನಾಡುವ ಸಮುದಾಯದಿಂದ ಬೇರ್ಪಡಿಸಿ ಅದಕ್ಕೇ ಪ್ರತ್ಯೇಕ ಅಸ್ತಿತ್ವವಿರುವಂತೆ ಭಾವಿಸುವುದು ಅಸಂಗತ. ಯಾವ ನುಡಿಯೂ ನಿರ್ವಾತದಲ್ಲಿರಲಾರದು. ಅದನ್ನು ಆಡುವ ಸಮುದಾಯದ ಉಸಿರ್ಗಾಳಿಯೇ ನುಡಿಯನ್ನು ಬದುಕಿಸುವಂಥದ್ದು. ಹೀಗಾಗಿ ನುಡಿಯೊಂದರದೇ “ರಕ್ಷಣೆ” ಮಾಡುವುದು, ಅದು ಅಳಿಯದಂತೆ ಕಾಪಿಡುವುದು ಎನ್ನುವುದು ತಪ್ಪಾಗಿ ವ್ಯಾಖ್ಯಾನಿಸಿದ ಸಮಸ್ಯೆ. ಇದನ್ನು ಅನುಸರಿಸುವ ಯೋಜನೆಗಳು ವಿಫಲ ಪ್ರಯತ್ನಗಳು.
ಕೆವಿಎನ್ ಅವರ ಪ್ರಬಂಧದ ಮುಖ್ಯ ಕೊಡುಗೆ ಇದನ್ನು ಎತ್ತಿ ತೋರಿಸುವುದು ಹಾಗೂ ಆದಷ್ಟು ತಾರ್ಕಿಕವಾಗಿ ಮತ್ತು ತಿಳಿಯಾಗಿ ನುಡಿಗಳ ಅಳಿವಿನ ಪ್ರಶ್ನೆಯ ಹಲವು ಮಗ್ಗುಲುಗಳನ್ನು ತೋರಿಸಿಕೊಡುವುದು ಆಗಿದೆ. ಅವರು ನುಡಿಗಳು ಅಳಿಯುತ್ತಿರುವುದನ್ನು ಅಲ್ಲಗಳೆಯುವುದಿಲ್ಲ. ಸಹಜವಾಗಿ ನುಡಿಗಳ ಅಳಿವಿನ ಕುರಿತ ಆತಂಕ ಅವರಲ್ಲೂ ಇದೆ. ಆದರೆ ಈ ಸಮಸ್ಯೆಯನ್ನು ಇನ್ನೂ ಆಳಕ್ಕಿಳಿದು ಪರಿಶೀಲಿಸುವಂತೆ ಅವರು ಒತ್ತಾಯಿಸುತ್ತಾರೆ. ಈ ಪ್ರಬಂಧದ ಮುಖ್ಯ ಅಂಶಗಳನ್ನು ಸಂಕ್ಷೇಪಿಸಿ ಹೇಳುವುದಾದರೆ:
ನುಡಿಯ ಅಳಿವನ್ನು (ಹಾಗೆ ನೋಡಿದರೆ ಒಟ್ಟಾರೆಯಾಗಿ ನುಡಿಯನ್ನೇ) ಅದನ್ನಾಡುವ ಸಮುದಾಯದ ಹೊರಗಿಟ್ಟು ಅಥವಾ ಒಟ್ಟೂ ಮಾನವ ವ್ಯಾಪಾರದ ಪರಿಧಿಗೆ ಹೊರತಾಗಿ ನೋಡುವುದು ಸರಿಯಾಗದು.
ಅಳಿವಿನಂಚಿನಲ್ಲಿರುವ ನುಡಿಗಳ ಕಾಳಜಿ ಮಾಡುವುದೇನೋ ಸರಿ; ಆದರೆ ಸದ್ಯಕ್ಕೆ ಸ್ವಸ್ಥವಾಗಿರುವ ನುಡಿಗಳ ಕುರಿತು ಹಾಗೂ ಅವು ಮುಂದೆ ಅಳಿವಿನಂಚಿಗೆ ಹೋಗದಿರದಂತೆ ನೋಡಿಕೊಳ್ಳುವುದು ಕೂಡ ನಮ್ಮ ಹೊಣೆಗಾರಿಕೆ.
ಹಿಂದಿನದಕ್ಕೆ ಸಂಬಂಧಿಸಿದಂತೆಯೇ ಒಂದು ನುಡಿ ಅಳಿಯಬಾರದೆಂದರೆ ಅದನ್ನು ಸಶಕ್ತಗೊಳಿಸುವ, ಎಲ್ಲ ವಲಯಗಳಲ್ಲಿ (ಅಥವಾ ಈಗಿರುವುದಕ್ಕಿಂತ ಹೆಚ್ಚಿನ ವಲಯಗಳಲ್ಲಿ) ಅದನ್ನು ಬಳಸುವುದು ಹೇಗೆ ಎಂಬ ಚಿಂತನೆ, ಯೋಜನೆಗಳು ಮತ್ತು ಕಾರ್ಯವಾಹಿ ಇರಬೇಕು.
ನುಡಿಗಳನ್ನು ಕಾಪಿಡಬೇಕು ಎಂಬ ವಾದದ ಹಿಂದಿರುವ ತಾತ್ತ್ವಿಕತೆ ಎಂಥದ್ದು? ಅವನ್ನು ಉಳಿಸಿಕೊಳ್ಳಬೇಕು ಎನ್ನುವುದೇನೋ ಸರಿ. ಆದರೆ ಅವುಗಳ ಇರುವಿಕೆಯು (ವಸ್ತುಸಂಗ್ರಹಾಲಯದಲ್ಲಿದ್ದಂತೆ) ಕೇವಲ ಸಾಂಕೇತಿಕವೋ; ನಮ್ಮ ಕಾಳಜಿ ಅಕಾಡೆಮಿಕ್ ನೆಲೆಯದ್ದು ಮಾತ್ರವೋ ಅಥವಾ ಇನ್ನೂ ಹೆಚ್ಚಿನದೋ ಎನ್ನುವ ಪ್ರಶ್ನೆ.
ಮನುಷ್ಯ ಸಮುದಾಯಗಳ ಇರುವಿಕೆ ಮತ್ತು ಅರಿವಿಗೆ ಸಂಬಂಧಪಟ್ಟ ಕೆಲವು artifactಗಳಾದ ಸಾಂಸ್ಕೃತಿಕ ನೆನಪು, ಲೋಕದೃಷ್ಟಿ, (ವೈಯಕ್ತಿಕ ಮತ್ತು) ಸಾಮುದಾಯಿಕ ತಿಳಿವಳಿಕೆ ಮೊದಲಾದುವು ನುಡಿಯ ಮೂಲಕವೇ ಆಗುವಂಥವು ಎಂಬ ಗ್ರಹಿಕೆಯಲ್ಲಿರುವ ಸಮಸ್ಯೆಗಳ ಚರ್ಚೆ.
ನುಡಿಯೆನ್ನುವುದು ಸೂಚಕ. ನುಡಿಪಲ್ಲಟ, ನುಡಿಯಳಿವು ಆದರೂ ಮನುಷ್ಯ ತನ್ನ ಸಹಜ ನುಡಿಕಸುವಿನ ಮೂಲಕ ಮತ್ತೊಂದು ನುಡಿ ಗಳಿಸಬಲ್ಲ ಎಂಬುದರ ನಿರೂಪಣೆ.
ನುಡಿಗಳ ಅಳಿವಿನ ಬಗ್ಗೆ ಆತಂಕ ಪಡುವವರು ಮುಂದೊಡ್ಡುವ ಹಲವು ಕಾರಣಗಳಿವೆ. ಅದರಲ್ಲಿ ಒಂದು: ಪರಿಸರ ಸಮತೋಲನಕ್ಕೆ ಜೀವ ವೈವಿಧ್ಯ ಹೇಗೆ ಅತ್ಯಗತ್ಯವೋ ಹಾಗೆಯೇ ನುಡಿ ವೈವಿಧ್ಯವೂ ಎಂಬ ವಾದ. ಇದು ಮೇಲ್ನೋಟಕ್ಕೆ ಆಕರ್ಷಕವೆಂದು ತೋರಿದರೂ ಅದೊಂದು ಹುಸಿ ಸಾಟಿತನವನ್ನು (false equivalence) ಆಧರಿಸಿದ್ದು. ಜೀವಪ್ರಭೇದಗಳ ವಿಕಾಸಕ್ಕೂ ನುಡಿಗಳ ವಿಕಾಸದ ಪ್ರಕ್ರಿಯೆಗೂ ಯಥಾವತ್ತಾದ ಸಂಬಂಧವಿಲ್ಲ. ಜೀವವಿಕಾಸವು ಮಿಲಿಯಗಟ್ಟಲೇ ವರ್ಷಗಳ ಕಾಲಾವಧಿಯಲ್ಲಿ ನಡೆದುಬಂದದ್ದು, ಇನ್ನೂ ನಡೆಯುತ್ತಿರುವುದು. ರಾಚನಿಕವಾಗಿ ಒಂದಕ್ಕಿಂತ ಇನ್ನೊಂದು ಭಿನ್ನವಾದ ಲಕ್ಷಾಂತರ ಜೀವಪ್ರಭೇದಗಳಿವೆ. ಆದರೆ ಜಗತ್ತಿನ ಸಾವಿರಾರು ಭಾಷೆಗಳು ಮೇಲ್ನೋಟಕ್ಕೆ ಬೇರೆಬೇರೆಯಾಗಿ ಕಂಡರೂ ಆಳದಲ್ಲಿ ಮಹತ್ವದ ವ್ಯತ್ಯಾಸಗಳನ್ನು ಹೊಂದಿಲ್ಲ. ಅಲ್ಲದೇ ಪರಿಸರ ಸಮತೋಲ (ಅಂಥದ್ದೇನಾದರೂ ನಿಜಕ್ಕೂ ಇದ್ದಲ್ಲಿ) ತೀರ ಸಂಕೀರ್ಣವಾದುದು ಮತ್ತು ಅಷ್ಟೇ ನಾಜೂಕಿನದು. ಒಂದು ಪ್ರದೇಶದಲ್ಲಿ ಒಂದೇ ಒಂದು ಕೀಟದ ಪ್ರಭೇದ ಅಳಿದುಹೋದರೂ ಅಲ್ಲಿನ ಹಲಬಗೆಯ ಸಸ್ಯಗಳ ಪರಾಗಸ್ಪರ್ಶದಲ್ಲಿ, ಬೀಜಗಳ ಹರಡುವಿಕೆಯಲ್ಲಿ ಏರುಪೇರಾಗಿ ಒಟ್ಟಾರೆ ಆಹಾರ ಸರಪಳಿಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿರುತ್ತದೆ. ಆದರೆ ಒಂದು ನುಡಿ ಅಳಿದರೆ ಅದರ ಪರಿಸರದಲ್ಲಿ ದೀರ್ಘಕಾಲಿಕ ಪರಿಣಾಮವಾಗುತ್ತದೆಂದು ಹೇಳಲಾಗುವುದಿಲ್ಲ.
ಬಹುತ್ವವು ಸೈದ್ಧಾಂತಿಕವಾಗಿ ಒಳ್ಳೆಯದೇ ಆದರೂ ಅದರ ನೈತಿಕ ತಳಹದಿಯನ್ನು ಪರಿಶೀಲಿಸಿ ಮುಂದುವರಿಯಬೇಕಾಗುತ್ತದೆ. ಭಾರತದಂಥ ದೇಶದಲ್ಲಿ ಬಹುತ್ವದ ಹಿನ್ನೆಲೆ ಸಂಕೀರ್ಣವಾದುದು; ಅದಕ್ಕೊಂದು ತಾರತಮ್ಯದ ಚರಿತ್ರೆಯಿರುವುದು. ಉದಾಹರಣೆಗೆ, ಭಾರತದ ಜಾತಿ ಉಪಜಾತಿಗಳ ‘ಬಹುತ್ವ' ಉಂಟಾಗಿದ್ದು ಸುಮಾರು 2000 ವರ್ಷಗಳ ಹಿಂದೆ ಶುರುವಾದ ಒಳಮದುವೆ (endogamy) ಮತ್ತು ಅದರಿಂದಾದ ಜನಾಂಗೀಯ ಪ್ರತ್ಯೇಕತೆಗಳಿಂದಾಗಿ. ಸಮಾನತೆಯಿಲ್ಲದ ಬಹುತ್ವವು ಏಕರೂಪತೆಗಿಂತ ಕ್ರೂರವಾದುದು.
ನುಡಿಗಳ ವಿಷಯದಲ್ಲಿ ಬಹುತ್ವವು ಯಾವ ಬಗೆಯಲ್ಲಿ ಕೆಲಸ ಮಾಡುತ್ತಿದೆ ಎಂಬುದನ್ನೂ ನೋಡಬೇಕಾಗುತ್ತದೆ. ನಾವು ಕಾನೂನಿನ ಪ್ರಕಾರವೂ ಹೇಳಿಕೆಯಲ್ಲಿಯೂ ಭಾಷಾಬಹುತ್ವವನ್ನು ಒಪ್ಪಿಕೊಂಡಿದ್ದರೂ ಬಳಕೆಯಲ್ಲಿ ಕೆಲವು ಭಾಷೆಗಳ ಯಜಮಾನಿಕೆಯನ್ನೂ ಬೇಕಾಗಿಯೋ ಬೇಡಾಗಿಯೋ ಒಪ್ಪಿಕೊಂಡಿದ್ದೇವೆ. ಭಾಷೆಗಳದೂ ಒಂದು ಆಹಾರ ಸರಪಳಿ, ಎಂದರೆ ಒಂದು ಶ್ರೇಣೀಕೃತ ವ್ಯವಸ್ಥೆಯಿದೆ: ಹಿಂದಿ, ಇಂಗ್ಲಿಷ್ನಂಥ ಆಡಳಿತದ ಭಾಷೆಗಳು ಪ್ರಾದೇಶಿಕ ಭಾಷೆಗಳನ್ನು ಆವರಿಸುತ್ತವೆ; ಬಹುಜನರ ಪ್ರಾದೇಶಿಕ ಭಾಷೆಗಳು ಉಳಿದ, ಅದರಲ್ಲೂ ಬರೆಹ ರೂಪದಲ್ಲಿಲ್ಲದ ನುಡಿ, ಆಡುನುಡಿಗಳನ್ನು ಆವರಿಸುತ್ತವೆ; ಅಧಿಕಾರ ಕೇಂದ್ರಕ್ಕೆ ಹೆಚ್ಚು ಹತ್ತಿರವಿರುವುವು ಬೇರೆ ಬೇರೆ ಪ್ರಾಂತ್ಯಗಳ ಆಡುನುಡಿಗಳನ್ನು ನುಂಗುತ್ತ ಹೋಗುತ್ತವೆ. ಇಂಥ ಸಂದರ್ಭದಲ್ಲಿ ನುಡಿಗಳ ಅಳಿವಿನ ಕುರಿತ ನಮ್ಮ ಚಿಂತನೆಯ ಸ್ವರೂಪವೇನು?
ಇದರ ಜೊತೆಗೇ ‘ಮೊದಲನುಡಿ’ (first language) ಅಥವಾ ‘ತಾಯ್ನುಡಿ’ (mother tongue) ಎಂಬ ತೊಡಕಿನ ಪರಿಕಲ್ಪನೆಯನ್ನೂ ನೀಗಿಸಿಕೊಳ್ಳುವ ಅಗತ್ಯವಿದೆ. ಎರಡು ಮೂರು ತಲೆಮಾರುಗಳಷ್ಟು ಹಿಂದೆ ‘ತಾಯ್ನುಡಿ', ‘ಮೊದಲನುಡಿ’, ‘ಮನೆಮಾತು’, ‘ಪರಿಸರದ ಭಾಷೆ’, ‘ಸಹಜ ಭಾಷೆ’ ಮೊದಲಾದುವು ಬಹುಪಾಲು ಒಂದೇ ನುಡಿಗೆ ಅನ್ವಯಿಸಬಹುದಾದ ಹಣೆಪಟ್ಟಿಗಳಾಗಿದ್ದುವು. ಇಂದು, ವಿಶೇಷವಾಗಿ ನಗರಪ್ರದೇಶಗಳಲ್ಲಿ — ಬದಲಾಗುತ್ತಿರುವ ಕೆಲಸದ ಬಗೆಗಳು, ಹೆಚ್ಚಿದ ವಲಸೆಗಳು, ಹೊರಮದುವೆಗಳು (exogamy) ಮೊದಲಾದ ಕಾರಣಗಳಿಂದ — ಇವೆಲ್ಲವೂ ಬೇರೆಬೇರೆಯಾಗಿರುವ ಸಾಧ್ಯತೆಯಿದೆ.
ಬೇರೆ ಕಡೆಯಿಂದ ಬೆಂಗಳೂರಿಗೆ ವಲಸೆ ಬಂದ ಮೇಲ್ಮಧ್ಯಮವರ್ಗದ ಕುಟುಂಬವೊಂದರ ತಾಯಿಯ ನುಡಿ ಹಿಂದಿಯಾಗಿದ್ದು (ತಂದೆಯೂ ಅದನ್ನೇ ಆಡುತ್ತ ಅದೇ ಮನೆಮಾತಾಗಿರುವ ಕೊಂಚ ಸರಳ ಸನ್ನಿವೇಶದಲ್ಲಿ) ಅವರಿರುವ ಒಟ್ಟಾರೆ ಪರಿಸರದ ಭಾಷೆ ಕನ್ನಡವಾಗಿದ್ದರೂ ಆ ಕುಟುಂಬದ ಮಗು ತನ್ನ ಮೊದಲನುಡಿಯಾಗಿ (ಅಥವಾ ಸಹಜಭಾಷೆಯಾಗಿ) ಇಂಗ್ಲಿಷ್ ಅನ್ನು ಕಲಿಯುವುದು ಸಾಮಾನ್ಯವಾಗಿದೆ. ಆ ಮಗುವು ಮುಂದೆ ಶಾಲೆಯಲ್ಲಿ ಮೂರನೆಯ ಭಾಷೆಯಾಗಿ ಕನ್ನಡವನ್ನು ಕಲಿತು ಅಂಗಡಿಯ ಹೆಸರುಗಳನ್ನೋ ಸೂಚನಾಫಲಕಗಳನ್ನೋ ಓದಲು ಕಲಿತರೂ ಅಷ್ಟಿಷ್ಟು ಬರೆಯಲು ಕಲಿತರೂ ಕನ್ನಡವನ್ನು ಮಾತನಾಡಲು ಕಲಿಯಲಿಕ್ಕೇ ಇಲ್ಲ.
ಬೆಂಗಳೂರಿನಂಥಲ್ಲಿ ಕನ್ನಡ ಮನೆಮಾತಾಗಿರುವ (ಅಥವಾ ತಾಯಿ / ತಂದೆ ಇಬ್ಬರಲ್ಲಿ ಒಬ್ಬರ ಮೊದಲನುಡಿಯಾಗಿರುವ) ಕುಟುಂಬಗಳಲ್ಲೂ ‘ಕನ್ನಡದ ಮಗು’ವೊಂದು ಇಂಗ್ಲಿಷ್ ಅನ್ನೇ ಮೊದಲನುಡಿಯಾಗಿ ಕಲಿಯುವುದೂ ಅಸಹಜವೇನಲ್ಲ. ಅಂಥ ಮಗು ಮುಂದೆ ಶಾಲೆಯಲ್ಲಿ ಕನ್ನಡವನ್ನು ಎರಡನೆಯ ನುಡಿಯಾಗಿ ಕಲಿತು ತಪ್ಪಿಲ್ಲದೇ ಓದಲು ಬರೆಯಲು ಕಲಿತರೂ ಅದೇ ಕ್ಷಮತೆಯಿಂದ ನಿರರ್ಗಳವಾಗಿ ಮಾತಾಡಬಲ್ಲುದು ಎಂದು ಹೇಳಲಾಗುವುದಿಲ್ಲ.
ಇಂಥವೆಲ್ಲ ಸಂದರ್ಭಗಳನ್ನು ಒತ್ತಟ್ಟಿಗಿಟ್ಟು ನೋಡಿದರೆ ಕನ್ನಡದಂಥ ನುಡಿಗಳು ಬೆಳೆಯುತ್ತಿವೆಯೆನ್ನಬೇಕೋ ಅಳಿವಿನತ್ತ ಸಾಗುತ್ತಿವೆ ಎನ್ನಬೇಕೋ? ಉತ್ತರ ಸ್ಪಷ್ಟವಿಲ್ಲ. ಆದರೆ ಇದೊಂದು ಆಸಕ್ತಿಕರ ಪ್ರಶ್ನೆಯೆನ್ನುವುದಂತೂ ಹೌದು.
ಇದರೊಟ್ಟಿಗೆ ನುಡಿಯ ಜೊತೆ ನುಡಿಯ ಮೂಲಕವೇ ಆಗುವಂಥವು ಮತ್ತು ಇರುವಂಥವು ಎಂದು ಹೇಳಲಾಗುವ ಸಾಂಸ್ಕೃತಿಕ ನೆನಪು, ಸಾಮುದಾಯಿಕ ತಿಳಿವಳಿಕೆ, ಲೋಕದೃಷ್ಟಿ ಮೊದಲಾದ ಆಯಾಮಗಳನ್ನು ತಂದರೆ ಈ ಸಮಸ್ಯೆ ಇನ್ನೂ ಜಟಿಲವಾಗುತ್ತದೆ. ನಗರಪ್ರದೇಶಗಳಲ್ಲಿ ವಾಸಿಸಿರುವ ಕನ್ನಡದ ಹಣೆಪಟ್ಟಿ ಹೊತ್ತಿರುವ ಬಹಳಷ್ಟು ಮಕ್ಕಳು ಕನ್ನಡದ ಜನಪದ, ಸಂಸ್ಕೃತಿ, ಸಾಮುದಾಯಿಕತೆಯ ಯಾವುದೇ ‘ಭಾರ’ವನ್ನು ಹೊರದೇ ಪೂರ್ವ (ಕೊರಿಯಾ, ಜಪಾನ್) ಮತ್ತು ಪಶ್ಚಿಮ ಎರಡೂ ಕಡೆಯ ಜನಪ್ರಿಯ ಸಂಸ್ಕೃತಿಯನ್ನು ಹೆಚ್ಚಾಗಿ ಹೀರಿಕೊಳ್ಳುತ್ತ ಬೆಳೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಇದಕ್ಕೆ ಕಾರಣವೇನು? ಇನ್ನು ಇಲ್ಲಿಯೇ ಹುಟ್ಟಿಬೆಳೆದು ಇಲ್ಲಿನ ಸಂಸ್ಕೃತಿ ಲೋಕದೃಷ್ಟಿಯನ್ನು ಒಳಗೂಡಿಸಿಕೊಂಡು ಬೇರೆಲ್ಲೋ ವಲಸೆ ಹೋಗಬೇಕಾಗಿ ಬಂದು ಅಲ್ಲಿ ಕನ್ನಡವನ್ನು ಬಳಸುವ ಅವಕಾಶವಿಲ್ಲದೇ ಕಾಲಕ್ರಮೇಣ ಒಬ್ಬ ವ್ಯಕ್ತಿಯೋ ಒಂದು ಸಣ್ಣ ಸಮುದಾಯವೋ ಅದನ್ನು ಕಳೆದುಕೊಂಡರೆ ನಿಜಕ್ಕೂ ನುಡಿಯೊಂದು ಅಳಿದದ್ದು ಹೌದೇ?
ಹೀಗೆ ಹಲಬಗೆಯ ವಾಸ್ತವಿಕ ಸನ್ನಿವೇಶಗಳನ್ನು ಎತ್ತಿತೋರಿಸುತ್ತ ಈ ಸಮಸ್ಯೆಯ ಸಂಕೀರ್ಣತೆಯನ್ನು ನಿರೂಪಿಸಬಹುದು. ತಾತ್ಪರ್ಯ ಇಷ್ಟೇ: ಸಮಸ್ಯೆಯ ಎಲ್ಲ ಆಯಾಮಗಳನ್ನೂ ಗಣಿಸದೇ ನುಡಿಯ ಅಳಿವಿನ ಬಗ್ಗೆ ಚಿಂತಿಸುವುದು ಸರಿಯಾದ ಕ್ರಮವಾಗಲಾರದು. ನಗರಗಳಷ್ಟಲ್ಲದಿದ್ದರೂ ಹಳ್ಳಿಗಳಲ್ಲೂ ನಮ್ಮ ಹಳೆಯ ನುಡಿಗಳ ಬಳಕೆಯು ನಿತ್ಯದ ವ್ಯವಹಾರಗಳಿಗಷ್ಟೇ ಸೀಮಿತವಾಗಿದ್ದು ಬೇರೇ ವಲಯಗಳಲ್ಲಿ ಕುಗ್ಗುತ್ತಲಿದೆ. ನುಡಿಯ ಪಾತ್ರವನ್ನು ಹಿಗ್ಗಿಸದೇ ಅದು ಬತ್ತಿಹೋಗುತ್ತದೆಂದು ಆತಂಕ ಪಡುವುದು ಅಸಂಗತವೆನ್ನಿಸುತ್ತದೆ.
ಇದಲ್ಲದೇ ಒಂದು ಭಾಷೆಗೆ ಪರಭಾಷೆಯ ಪದಗಳು ಕೂಡಿಕೊಂಡಾಗ, ಅಥವಾ ಆ ಭಾಷೆಯದ್ದೇ ಕೆಲವು ಪದಗಳ ಬಳಕೆಯ ರೀತಿ ಬದಲಾದಾಗ, ಅದನ್ನು ನಾವು ‘ನುಡಿ ಮಾಲಿನ್ಯ’ ಎಂದುಕೊಳ್ಳಬೇಕೇ? ಹಳೆಗನ್ನಡದಿಂದ ನಡುಗನ್ನಡ, ಮುಂದೆ ಹೊಸಗನ್ನಡ ಮತ್ತು ಈಗ ನಮ್ಮೆದುರೇ ಹೊಸಗನ್ನಡದಲ್ಲಿ ಆಗುತ್ತಿರುವ ಮಾರ್ಪಾಟುಗಳು — ಅವನ್ನು ನಾವು ಹಾಗೆ ಗುರುತಿಸಿದರೂ ಅವು ಪ್ರತ್ಯೇಕ ಘಟ್ಟಗಳಲ್ಲ, ಮತ್ತಿನ್ನು ಮಲಿನತೆ ಎನ್ನುವುದು ನಿರಂತರವಾಗಿ ಆಗುತ್ತಿರುವಂಥದು. ಪ್ರಮಾಣಿತ ಭಾಷೆ ಎನ್ನುವುದೂ ಆಯಾ ಕಾಲಘಟ್ಟದಲ್ಲಿ ಸಾಮಾನ್ಯವಾಗಿ ಎಲ್ಲರೂ ಒಪ್ಪಿದಂಥ ಭಾಷೆಯ ಒಂದು ತಳಿ. ಅದು ವಿವಿಧ ಪ್ರದೇಶಗಳ ಸಮುದಾಯಗಳ ನೂರಾರು ಆಡುಮಾತುಗಳೊಟ್ಟಿಗೆಯೇ ಬಾಳ್ವೆ ಮಾಡುತ್ತಿರುತ್ತದೆ. ಭಾಷೆಯ ಒಂದು ಪ್ರಭೇದವು ಪ್ರಮಾಣಿತವಾಗುವುದು ಹೇಗೆ? ಅದರ ಹಿಂದಿನ ರಾಜಕಾರಣವೇನು? ಉದಾಹರಣೆಗೆ, ಕರ್ನಾಟಕದಲ್ಲಿ ತುಂಗಭದ್ರೆಯ ಆಚೆ ಮತ್ತು ಈಚೆಗಿನ ಕನ್ನಡ ನುಡಿಗಳಲ್ಲಿ ಎದ್ದುಕಾಣುವ ವ್ಯತ್ಯಾಸಗಳನ್ನು ನಾವು ಗುರುತಿಸುತ್ತೇವೆ. ದೊಡ್ಡ ನದಿಗಳು, ಬೆಟ್ಟಸಾಲುಗಳು, ನಡುಗಡ್ಡೆಗಳು ಇದ್ದಲ್ಲಿ ಸಮುದಾಯಗಳ ನಡುವೆ ಹೆಚ್ಚಿನ ಸಂವಹನವಿಲ್ಲದೇ ಬೇರೆಬೇರೆ ನುಡಿಗಳು ಹುಟ್ಟಿಕೊಳ್ಳುವುದು ಗೊತ್ತಿರುವುದೇ. ಆದರೆ ಈ ವ್ಯತ್ಯಾಸಗಳಿಗೆ ಭೌಗೋಳಿಕ ಲಕ್ಷಣಗಳಷ್ಟೇ ಕಾರಣವೇ? ಇಂಥ ವಿದ್ಯಮಾನಗಳ ಹಿನ್ನೆಲೆಯಲ್ಲಿರುವ ಪ್ರಕ್ರಿಯೆಗಳ ಕುರಿತು ಅಥವಾ ಇಂದು ನುಡಿಗಳಲ್ಲಿ ಆಗುತ್ತಿರುವ ಮಾರ್ಪಾಟುಗಳ ಕುರಿತ ಕುತೂಹಲವೂ ಅವನು ಅರ್ಥೈಸಿಕೊಳ್ಳುವ ಪ್ರೇರಣೆಯೂ ಭಾಷೆಗಳ ಬಗೆಗೆ ಯೋಚಿಸುವವರಲ್ಲಿ ಕಾಣದೆ, ಅವು ಮಲಿನವಾಗುತ್ತಿರುವ ಅಳಿದುಹೋಗುತ್ತಿರುವ ಕುರಿತಾದ ಅನುಚಿತ ಆತಂಕವೇ ಹೆಚ್ಚಿದ್ದಂತೆ ತೋರುತ್ತದೆ.
ಕೆವಿಎನ್ ಅವರು ಈ ಪ್ರಬಂಧದಲ್ಲಿ ವಿವರವಾಗಿ ಚರ್ಚಿಸಿರುವ ಇನ್ನೊಂದು ಮುಖ್ಯ ಅಂಶ, ಗ್ರಹಿಕೆ, ಅರ್ಥಪ್ರತೀತಿ, ಚಿಂತನೆ, ತಿಳಿವಳಿಕೆ ಮತ್ತು ನುಡಿ ಇವುಗಳ ನಡುವಿನ ನಂಟಿನ ಬಗೆಗಿನದು. ಇಲ್ಲಿ ಅವರು ಚಾಮ್ಸ್ಕೀ (Noam Chomsky), ಪಿಂಕರ್ (Stephen Pinker) ಮೊದಲಾದ ನುಡಿಯರಿಗರ ಕೃತಿಗಳನ್ನು ಉದ್ಧರಿಸುತ್ತ ತಮ್ಮ ವಾದಸರಣಿಯನ್ನು ಬೆಳೆಸುತ್ತಾರೆ. ನುಡಿ ಸಾಪೇಕ್ಷವಾದ, ನುಡಿ ವಿಧಿವಾದ ಮತ್ತು ನುಡಿ ಸಾರ್ವತ್ರಿಕವಾದಗಳ ವ್ಯಾಪಕ ಶ್ರೇಣಿಯಗುಂಟ ಮಾರ್ಪಡುತ್ತ ಹೋಗುವ ನುಡಿ ಮತ್ತು ಚಿಂತನೆಯ ನಡುವಣ ನಂಟಿನ ಸ್ವರೂಪವನ್ನು ತಿಳಿಪಡಿಸಿ ನುಡಿ ವಿಧಿವಾದವು ಗಟ್ಟಿ ನೆಲೆಯ ಮೇಲೆ ನಿಂತಿಲ್ಲವೆಂದು ತೋರಿಸಿಕೊಡುತ್ತಾರೆ. ಈ ವಿಷಯದ ಕುರಿತಾದ ವಾದಗಳನ್ನು ಗಮನಿಸಿದರೆ ಬಹಳಷ್ಟು ಸಲ ನಮಗೆ ನುಡಿಯ ನೆಲೆಯ ಬಗ್ಗೆ ಗೊಂದಲಗಳಿರುವುದು ಸ್ಪಷ್ಟವಾಗುತ್ತದೆ. ಇದನ್ನು ಮುಂದಿನ ಭಾಗದಲ್ಲಿ ವಿವರವಾಗಿ ಚರ್ಚಿಸಬಹುದು. ಎರಡನೆಯ ಭಾಗದಲ್ಲಿ ನುಡಿಯರಿಮೆಯ ಪಾರಂಪರಿಕ ನೆಲೆಗಳ ಜೊತೆಗೆ Natural Language Process (NLP), ಗಣಿತ ಮತ್ತು ನುಡಿಮಾದರಿಗಳ (language models) ನೆಲೆಗಳಿಂದಲೂ ಚರ್ಚೆಯನ್ನು ಮುಂದುವರಿಸೋಣ.
ಇದನ್ನೂ ಓದಿ …
ಬಿಂದುವಿನಲ್ಲಿ ಸಿಂಧು: ಅನುಸ್ವಾರವೆಂಬುವುದು
ಕಾಸರಗೋಡಿನ ಕಾರಡ್ಕದಲ್ಲಿ ಜನಿಸಿದ ಕೆ. ವಿ. ತಿರುಮಲೇಶ್ (12.9.1940 - 30.1.2023) ಅವರ ಕವಿತೆಗಳ ಸೆಳವಿಗೆ ಬೀಳದವರು ಅತ್ಯಂತ ವಿರಳ. ವಿಮರ್ಶಕರು ಮತ್ತು ಭಾಷಾವಿಜ್ಞಾನಿಯೂ ಆಗಿದ್ದ ಅವರು ಹೈದರಾಬಾದಿನ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಯುನಿವರ್ಸಿಟಿಯಲ್ಲಿ (EFLU) ಪ್ರಾಧ್ಯಾಪಕರಾಗಿದ್ದರು. ನಂತರ ಯೆಮನ್ನಲ್ಲಿ ಕೆಲಕಾಲ ಉಪನ್ಯಾಸಕರಾಗಿದ್ದರು. ತಮ್ಮ ನಿವೃತ್ತಿ ಜೀವನವನ್ನು ಹೈದರಾಬಾದಿನಲ್ಲಿ ಕಳೆದ ಅವರು ಸುಮಾರು 60 ಕೃತಿಗಳನ್ನು…