ಪತ್ರಕರ್ತ, ಕತೆಗಾರ ರಘುನಾಥ ಚ. ಹ. ಅವರ ಇಲ್ಲಿಂದ ಮುಂದೆಲ್ಲ ಕಥೆ ಕಥಾಸಂಕಲನದ ಕುರಿತು ಲೇಖಕರು, ವಿಮರ್ಶಕರು ಆದ ಅನುಸೂಯ ಯತೀಶ್ ತಮ್ಮ ಅನ್ನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಹೊರಗೂ ಮಳೆ ಒಳಗೂ ಮಳೆ ಪ್ರಕಟವಾದ 19 ವರ್ಷಗಳ ನಂತರ ಇದೀಗ ಇಲ್ಲಿಂದ ಮುಂದೆಲ್ಲ ಕಥೆ ಎಂಬ ಎರಡನೆಯ ಸಂಕಲನದ ಮೂಲಕ ರಘುನಾಥ ಚ. ಹ. ಮತ್ತೆ ಕಥೆ ಹೇಳಲು ಹೊರಟಿದ್ದಾರೆ. ಸುದೀರ್ಘ ಅವಧಿಯ ಈ ತಾಳುವಿಕೆ ಅವರನ್ನು ಕಥೆಗಾರನಾಗಿ ಮತ್ತಷ್ಟು ಮಾಗಿಸಿದೆ ಎಂಬುದಂತೂ ಸತ್ಯ. ಇಲ್ಲಿಂದ ಮುಂದೆಲ್ಲ ಕಥೆ ಎನ್ನುವ ಶೀರ್ಷಿಕೆ ಗಾಢವಾದ ಅರ್ಥವನ್ನು ಹೊಂದಿದೆ. ಕೃತಿಯಲ್ಲಿ ಈ ಹೆಸರಿನ ಕಥೆಯಿಲ್ಲ. ಆದಾಗ್ಯೂ ಬಹುದೊಡ್ಡ ಆಶಯದೊಂದಿಗೆ ತಮ್ಮ ಕಥಾಸಂಕಲನಕ್ಕೆ ಇದನ್ನು ಶೀರ್ಷಿಕೆಯನ್ನಾಗಿ ನೀಡಿದ್ದಾರೆ. ಮನುಷ್ಯನು ಇದುವರೆಗೂ ಅನುಭವಿಸಿದ, ಅನುಭವಿಸುತ್ತಿರುವ ನೋವು, ಸಂಕಟ, ತಳಮಳ, ತಲ್ಲಣ, ತಾಕಲಾಟ, ಅಭದ್ರತೆ, ಅಸಹಾಯಕತೆಗಳೆಲ್ಲ ಯಾವುದೇ ಬದಲಾವಣೆ ಕಾಣದೆ ಕಾಲದ ಮುಂದುವರಿಕೆಗಳಾಗಿ ಮಾನವಕುಲವನ್ನ ನಿತ್ಯವೂ ಕಾಡುತ್ತಾ 'ಇಲ್ಲಿಂದ ಮುಂದೆಲ್ಲ ಒಂದೊಂದು ಮನಮಿಡಿವ ಕಥೆಗಳಾಗುತ್ತವೆ' ಎಂಬ ಪ್ರತಿರೋಧದ ಸಾಲಾಗಿ ಹೊಮ್ಮಿದೆ. ಈ ಕಾಲಘಟ್ಟದ ಬದುಕಿನ ಸಂಘರ್ಷಗಳನ್ನು ಏಳು ಕಥೆಗಳ ಮೂಲಕ ಕಥೆಗಾರರು ಓದುಗರೆದೆಗೆ ದಾಟಿಸಿದ್ದಾರೆ. ಮನುಜನ ಬದುಕು ಕೊನೆಯಿಲ್ಲದ ಹುಡುಕಾಟ. ಆ ದಾರಿಯಲ್ಲಿ ಸಾಗುವ ಕಥೆಗಳು ಮನುಷ್ಯ ಪ್ರೀತಿಯ ಶೋಧ ನಡೆಸುತ್ತವೆ. ಜೊತೆಜೊತೆಗೇ ಮೌಲ್ಯಗಳ ಹುಡುಕಾಟವನ್ನೂ ಮಾಡುತ್ತವೆ. ಇವು ಅಂತಃಕರಣವೇ ಪ್ರಧಾನವಾಗಿರುವ ಕಥೆಗಳು. ಮಾನವ ಸಂಬಂಧಗಳನ್ನು ನೋಡುವ ಮತ್ತು ಅದನ್ನು ಕಥನರೂಪಕ್ಕೆ ಇಳಿಸುವ ಇವರ ಪರಿ; ಮಾನವೀಯತೆಯನ್ನೇ ಕೇಂದ್ರವಾಗಿಸಿಕೊಂಡಿರುವ ಕಥಾವಸ್ತುಗಳು ಚ. ಹ. ಅವರನ್ನು ಬಹಳಷ್ಟು ಕಥೆಗಾರರಿಂದ ಭಿನ್ನವಾಗಿಸುತ್ತವೆ. ಅವರ ಬಲಿತ ಅನುಭವಗಳ ಗಾಢ ಪ್ರಭಾವವು ಈ ಕಥೆಗಳಲ್ಲಿದೆ.
'ಬರ' ಮತ್ತು 'ಕ್ರಾಂತಿ' ಕಥೆಗಳು ಅತಿ ಸಣ್ಣ ಕಥೆಗಳಾಗಿದ್ದರೆ, 'ಗೋರಿ' ಮತ್ತು 'ಬಣ್ಣ' ಕಥೆಗಳು ಮಧ್ಯಮ ಗಾತ್ರದವು. 'ಬಿಡುಗಡೆ', 'ಕನ್ನಡಿ' ಮತ್ತು 'ಅಪ್ಪುಗೆ' ಎಂಬ ಎರಡು ಕಥೆಗಳು ಸುದೀರ್ಘ ಕಥನಗಳಾಗಿದ್ದು ಈ ಸಂಕಲನದ ಅತಿ ಮಹತ್ವದ ಕಥೆಗಳೂ ಆಗಿವೆ. ಕಥೆಗಳ ಗಾತ್ರಕ್ಕಿಂತ ನಾವಿಲ್ಲಿ ಪ್ರಧಾನವಾಗಿ ಚರ್ಚಿಸಬೇಕಾಗಿರುವುದು ಅವು ಏನನ್ನು ಹೇಳಹೊರಟಿವೆ, ಅವುಗಳಿಂದ ಜನಸಮುದಾಯದ ಮೇಲೆ ಆಗುವ ಪರಿಣಾಮವೇನು, ಸಮಾಜ ಅವನ್ನು ಸ್ವೀಕರಿಸುವ ಪರಿ, ಮಾನವ ಕುಲಕ್ಕೆ — ಅದರಲ್ಲೂ ಸಮಕಾಲೀನ ಬಿಕ್ಕಟ್ಟುಗಳ ನಿರ್ವಹಣೆಗೆ — ಈ ಕಥೆಗಳ ತುಡಿತವು ಎಷ್ಟರಮಟ್ಟಿಗೆ ಪ್ರಸ್ತುತ, ಕಥಾವಸ್ತುವನ್ನು ತಲುಪಿಸುವಲ್ಲಿ ಲೇಖಕರ ಕಲಾತ್ಮಕತೆ ಎಷ್ಟು ಸಫಲವಾಗಿದೆ, ಎಂಬ ಪ್ರಶ್ನೆಗಳನ್ನು ಮುಖ್ಯವಾಗಿ ಪರಿಗಣಿಸಬೇಕಾಗುತ್ತದೆ. ಈ ಕಥೆಗಳು ಲೋಕದಲ್ಲಿ ಬಹುಕಾಲ ನೆಲೆಯೂರುವ ಲಕ್ಷಣಗಳನ್ನು ಒಳಗೊಂಡಿವೆ. ಚಿಂತನೆಗೆ ಹಚ್ಚುವ ಸಂಭಾಷಣೆಗಳು ಕಥೆಗಳ ಪಾತ್ರಗಳಾಚೆಗೂ ಓದುಗರತ್ತ ಚಾಚಿಕೊಳ್ಳುತ್ತವೆ. ಪಾತ್ರಗಳು ಲೇಖಕರ ಒತ್ತಾಯಪೂರ್ವಕ ತುರುಕುವಿಕೆ ಎನ್ನಿಸದೇ ಕಥೆಗಳಿಗನುಸಾರವಾಗಿ ಅವಾಗಿಯೇ ಜನ್ಮ ತಾಳಿವೆ ಎನ್ನಿಸುವಷ್ಟು ಆಪ್ತಭಾವದಿಂದ ಒಡಮೂಡಿವೆ.
ಇಲ್ಲಿರುವುವು ಓದುಗರನ್ನು ಡಿಸ್ಟರ್ಬ್ ಮಾಡುವ, ದೀರ್ಘ ಚಿಂತನೆಗೆ ಹಚ್ಚುವ ಶಕ್ತ ಕಥೆಗಳು. ಕೆಲವು ಸುದೀರ್ಘ ಕಥೆಗಳು ಭಾವತೀವ್ರತೆಯ ದೃಷ್ಟಿಯಿಂದ ಮನಸ್ಸನ್ನು ಹಿಡಿದಿಟ್ಟುಕೊಂಡು ಓದಿಸಿಕೊಳ್ಳುವ ಗುಣವನ್ನು ಹೊಂದಿವೆ. ಕಥೆ ಕಟ್ಟುವಿಕೆಯಲ್ಲಿನ ಬಿಗಿಹಿಡಿತ, ಹೊಸದೆನ್ನಿಸುವ ಕಥಾವಸ್ತು, ತಾಜಾತನ ಸೂಸುವ ನುಡಿಗಟ್ಟುಗಳು, ಸಶಕ್ತವಾದ ಸಾಲುಗಳು ಇದಕ್ಕೆ ಕಾರಣವಾಗಿ ನಿರೂಪಣೆಯ ತಂತ್ರಗಳು ಭಿನ್ನತೆಯನ್ನು ಕಾಯ್ದುಕೊಂಡಿವೆ. ಕಥಾವಸ್ತುವು ಓದುಗರೆದೆಯಲ್ಲಿ ನೆಲೆ ನಿಂತು ಹೊಸ ಬದಲಾವಣೆಗೆ ಸ್ಪಂದಿಸಲು ತುಡಿಯುತ್ತದೆ. ಗಲಾಟೆ ಅಬ್ಬರಗಳಿಲ್ಲದೆಯೂ ಈ ಸಮಾಜಕ್ಕೆ ತಿವಿಯುವ ತೀಕ್ಷ್ಣ ಸಾಲುಗಳು ಸಮಾಜವನ್ನು ಧನಾತ್ಮಕ ತಿರುವಿನೆಡೆಗೆ ಚಲಿಸುವಂತೆ ಮಾಡುವ ಆಶಯ ಹೊಂದಿವೆ. ಇಂಥಲ್ಲಿ ಕಥೆಗಾರರ ಸಾಮಾಜಿಕ ಹೊಣೆಗಾರಿಕೆ ಮತ್ತು ಕಾಳಜಿಗಳನ್ನು ಗಮನಿಸಬಹುದು. ಸೂಕ್ಷ್ಮ ಮನಸ್ಸಿನ ರಘುನಾಥ್ ಅವರ ಎದೆ ಪ್ರೇಮದ ಒಡಲು. ಒಲವನ್ನು ಹಂಚಲು ಬಯಸುವ ಇವರ ಕಥೆಗಳು ಈ ಕಾರಣದಿಂದಲೂ ಸಮಕಾಲೀನ ಸಂದರ್ಭದಲ್ಲಿ ಬಹುಮುಖ್ಯ ಎನಿಸುತ್ತವೆ. ಮಾನವನ ದೈನಿಕ ಪಡಿಪಾಟುಗಳನ್ನು ಸುಲಭವಾಗಿ ಗ್ರಹಿಸಿ ಸಂಕೀರ್ಣತೆಯಿಂದ ಬಿಡಿಸಿಕೊಂಡು ವಿಭಿನ್ನ ನೆಲೆಗಳಲ್ಲಿ ಅನ್ವೇಷಿಸುವ ಮೂಲಕ ವಾಸ್ತವ ಬದುಕನ್ನು ತೆರೆದಿಡುತ್ತವೆ ಮಾತ್ರವಲ್ಲ ಮಾನವನಿಗೆ ಎಚ್ಚರಿಕೆಯ ಪಾಠವಾಗುತ್ತವೆ. ಕಲ್ಪನೆಯ ತಳಹದಿಗಿಂತ ವಾಸ್ತವ, ನೈಜತೆಯೇ ಮುಖ್ಯವಾಗಿರುವ ಕಥೆಗಳು ನಿತ್ಯ ಬದುಕಿನ ಅನುಭವಗಳ ಸಂತೆಯಿಂದ ಎದ್ದು ಬಂದು ಎಲ್ಲರ ಬದುಕಿನ ಕಥನಗಳಾಗಿವೆ. ಸ್ವಾರಸ್ಯಕರ ಹೆಣಿಗೆಯ ಕಥೆಗಳ ಸೃಜನಾತ್ಮಕತೆ ನಿಲುಗಡೆಗೆ ಅವಕಾಶ ನೀಡದೆ ಓದಿಗೆ ಹಚ್ಚುತ್ತವೆ. ರೋಚಕತೆ ಕೌತುಕತೆಗಳು ಕಥೆಯನ್ನು ನಿರಾಯಾಸವಾಗಿ ಬೆಳೆಸಿಕೊಂಡು ಸಾಗುವಂತೆ ಮಾಡಿವೆ.
ಬುದ್ಧಿ ಭಾವಗಳೆರಡನ್ನೂ ಉದ್ದೀಪಿಸುವ ಈ ಕಥೆಗಳು ಮನೋಚಿಕಿತ್ಸಕ ವಾಹಕಗಳಾಗಿ ಕೆಲಸ ಮಾಡುತ್ತವೆ. ಕವಿತೆಗಳಲ್ಲಿ ಪಲ್ಲವಿಸುವ ಭಾವಲಾಲಿತ್ಯ ಈ ಕಥೆಗಳಲ್ಲೂ ಕಾಣುತ್ತದೆ. ಒಂದೆಡೆ ಎದೆಗಿಳಿಯುವ ಭಾವನೆಗಳ ಅಭಿವ್ಯಕ್ತಿ ಆಪ್ತತೆ ನೀಡಿದರೆ, ಇನ್ನೊಂದೆಡೆ ವಿಪ್ಲವಗಳ ಸಂಭವಿಸುವಿಕೆಗೆ ಕಾರಣಗಳ ಹುಡುಕಾಟ ಮಾಡುವಲ್ಲಿ ಬೌದ್ಧಿಕತೆ ಪಾರಮ್ಯ ಮೆರೆಯುತ್ತದೆ. ಒಟ್ಟಿನಲ್ಲಿ, ಕಥೆಗಳನ್ನು ಓದಿ ಮುಗಿಸುವಷ್ಟರಲ್ಲಿ ಎದೆ ಭಾರವೆನಿಸುವುದಂತೂ ಹೌದು. ಬದುಕಿನ ಹೋರಾಟಗಳಿಂದ ಮನುಷ್ಯ ಕಲಿಯುವ ಪಾಠ ಬಹಳಷ್ಟು ಇದ್ದರೂ ಎಲ್ಲೋ ಒಂದು ಕಡೆ ಅವನಿನ್ನೂ ಸ್ವೀಕರಿಸುವ ಮನಸ್ಥಿತಿಗೆ ಪಕ್ಕಾಗದೇ ಪರಿತಪಿಸುವ ಮನೋವ್ಯಾಕುಲತೆಯನ್ನೂ ಜಿಜ್ಞಾಸೆಯನ್ನೂ ಈ ಕಥೆಗಳು ಅನಾವರಣಗೊಳಿಸುತ್ತವೆ. ಮನುಷ್ಯನು ಇನ್ನಾದರೂ ಮನುಷ್ಯನಂತೆ ಬದುಕುವ ಮನಸ್ಸು ಮಾಡುತ್ತಿಲ್ಲವೋ ಅಥವಾ ಇನ್ನೂ ಅವನಿಗೆ ಅರಿವಿನ ಕೊರತೆಯಿದೆಯೋ ಎಂಬ ಪ್ರಶ್ನೆಗಳನ್ನು ಎದುರುಗಾಣಿಸಿ ಓದುಗರನ್ನು ಆಲೋಚನೆಗೆ ಹಚ್ಚುತ್ತವೆ. ಇಲ್ಲಿನ ಪಾತ್ರಗಳನ್ನು, ಕಥಾವಸ್ತುಗಳನ್ನು ಓದುಗ ತನಗರಿವಿಲ್ಲದಂತೆ ತನ್ನೊಳಗೆ ಆವಾಹಿಸಿಕೊಂಡರೆ ಆಶ್ಚರ್ಯವಿಲ್ಲ. ಇವು ಘಟಿಸಲು ಪೂರಕವಾದ ನಾವಿನ್ಯಪೂರ್ಣ ಪ್ರಯೋಗಗಳನ್ನ ಚ. ಹ. ಅವರು ಮಾಡಿರುವುದು ಗಮನಾರ್ಹ. ಸಣ್ಣ ಎಳೆಯೊಂದನ್ನು ಹಿಡಿದು ಹೊರಟ ಕಥೆಗಾರರಿಗೆ ಎದುರಾದ ಸನ್ನಿವೇಶಗಳು, ಮುಖಾಮುಖಿಯಾದ ಕ್ರಿಯೆಗಳು ಸುಂದರ ಕಥೆಗಳ ನೇಯ್ಗೆಗೆ ದಾರಿಯಾಗಿವೆ. ಲೇಖಕರ ಅಂತರ್ಮುಖಿ ವ್ಯಕ್ತಿತ್ವ, ಸೂಕ್ಷ್ಮ ಸಂವೇದನಾ ಗುಣ, ಅಭಿವ್ಯಕ್ತಿ ಶೈಲಿಯಲ್ಲಿನ ಪ್ರಾಮಾಣಿಕತೆ, ಬರಹದ ಮೇಲಿನ ಪ್ರೀತಿ ಮತ್ತು ಬದ್ಧತೆಯಿಂದಾಗಿ ಇಲ್ಲಿನ ಕಥೆಗಳು ಓದುಗರಿಗೆ ತಾಕುತ್ತವೆ.
ರಹುನಾಥ ಚ.ಹ. ಅವರ ಕಥೆಗಳಲ್ಲಿ ರಮ್ಯ ಕಲ್ಪನಾಲೋಕಕ್ಕಿಂತ ಸಮಕಾಲೀನ ವಿದ್ಯಮಾನಗಳಿಗೆ ಸ್ಪಂದಿಸುವ ಅಂಶಗಳನ್ನು ಗುರುತಿಸಬಹುದು. ಅವರಿಗೆ ತನ್ನ ಕಥೆಗಳು ತಲುಪಬೇಕಾದ ಗಮ್ಯದ ಅರಿವಿದೆ. ಆ ನೆಲೆಯಲ್ಲಿ ವಸ್ತುವನ್ನು ಮನೋವೈಚಾರಿಕ ಆಯಾಮದಲ್ಲಿ ಚರ್ಚಿಸುತ್ತಾರೆ. ಹಾಗಾಗಿಯೇ ಎದ್ದುಕಾಣುವ ಪ್ರತಿರೋಧಕ್ಕಿಂತ ಆತ್ಮವಿಮರ್ಶೆಗೆ ಹೆಚ್ಚು ಪ್ರಾಧಾನ್ಯ ಒದಗಿದೆ. ಬದುಕಿನ ತಳಮಳಗಳಿಗೆ ಇತರರನ್ನು ಹೊಣೆ ಮಾಡದೇ ತಾವು ಸಾಗಬೇಕಾದ ದಾರಿಯ ತೊಡಕು ತೊಡರುಗಳನ್ನು ಪಕ್ಕಕ್ಕೆ ಸರಿಸಿ ಸರಿಯಾದ ಮಾರ್ಗವನ್ನು ಸೃಷ್ಟಿಸಿಕೊಳ್ಳಲು ಲೇಖಕರು ಹಂಬಲಿಸುತ್ತಾರೆ.
‘ಕನ್ನಡಿ’ ಈ ಸಂಕಲನದ ಅತ್ಯಂತ ಸಂವೇದನಾಶೀಲ ಕಥೆಯಾಗಿದೆ. 'ಮನುಷ್ಯನಾಗುವುದು ಎಷ್ಟೊಂದು ಕಷ್ಟ, ಮನುಷ್ಯನಾಗಿ ಉಳಿಯುವುದು ಇನ್ನೂ ಕಷ್ಟ,' ಎನ್ನುವ ಬದುಕಿನ ಅತಿ ದೊಡ್ಡ ತಾತ್ವಿಕತೆಯ ಮೂಲಕ ಆರಂಭವಾಗುವ ‘ಕನ್ನಡಿ’ ಕಥೆಯ ಬಿಂಬಗಳು ಮಧ್ಯಮ ವರ್ಗದ ಕುಟುಂಬಗಳ ಪ್ರಾತಿನಿಧಿಕ ಸಂವೇದನೆಗಳ ಒಟ್ಟು ಮೊತ್ತವಾಗಿವೆ. ಕಥಾನಾಯಕನಾದ ಬಸವರಾಜು ತನ್ನ ಬದುಕು ಕಟ್ಟಿಕೊಳ್ಳುವ ದಾರಿಯಲ್ಲಿ ಬಂದ ರಾಜಿ ಮಾಡಿಕೊಳ್ಳಬೇಕಾದ ಪರಿಸ್ಥಿತಿಗಳು, ಮನುಷ್ಯನ ಮನಸ್ಸಿನಲ್ಲಿ ಉಂಟಾಗುವ ಗೊಂದಲ, ಅನುಭವಿಸುವ ಮಾನಸಿಕ ಯಾತನೆಯ ಮಹಾದರ್ಶನವಿದೆ. ಮುಗ್ಧತೆ ಮತ್ತು ಅಂತಃಕರಣಗಳ ನಿಧಿಯಾಗಿದ್ದ ಬಸವರಾಜು ಬದುಕಿನ ಎಲ್ಲ ಒತ್ತಡಗಳಿಂದ ಮುಕ್ತಿ ಪಡೆಯಲು ಕುರಿಯಾಗಿ ಕುರಿಯಂತೆ ಬದುಕಲು ತೀರ್ಮಾನಿಸಿ ಮಾನವ ಬದುಕನ್ನು ತ್ಯಜಿಸುತ್ತಾನೆ. ಕುರಿಯಾದ ನಂತರ ಬದುಕು ಸುಂದರವಾಗಿದೆಯೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳುವ ಕಥಾನಾಯಕ ಕಂಡುಕೊಳ್ಳುವುದು: ಕಷ್ಟ, ಸವಾಲು, ಸಮಸ್ಯೆಗಳು ಎಲ್ಲೆಡೆ ಇರುತ್ತವೆ; ಅವುಗಳನ್ನು ಇದ್ದಲ್ಲೇ ಬಂದಂತೆ ಎದುರಿಸಬೇಕೆ ವಿನಹಃ ಪಲಾಯನವಾದ ಸಲ್ಲದು ಎಂಬ ಅರಿವನ್ನು. ಕಥಾನಾಯಕನ ತಂಗಿ ಪಂಕಜಾಕ್ಷಿ ಮತ್ತು ಅವಳ ಗಂಡ ಯತಿರಾಜನ ಹಿರಿಯ ಹೆಂಡತಿ ಮೇರಿ — ಇಬ್ಬರೂ ಗಂಡಾಡಳಿತದ ಬಲಿಪಶುಗಳು. ಹೆಣ್ಣುಮಕ್ಕಳಿಬ್ಬರಲ್ಲಿ ಸಂಘರ್ಷದಾಚೆಗೂ ಒಂದು ಅವಿನಾಭಾವ ಕಾಳಜಿ ಏರ್ಪಡುವುದು ಈ ಕಥೆಯ ಗೆಲುವು. ಹಾಗೆಯೇ, ಬಸವರಾಜು ಕೆಲಸ ಮಾಡುವಲ್ಲಿನ ದಾಕ್ಷಾಯಿಣಿ, ಆತನ ಗೆಳೆಯರು, ಬಾಲ್ಯದ ಗೆಳತಿ ಮಂಜುಳ ಜೊತೆಗೆ ಕಥಾನಾಯಕನ ಒಡನಾಟವನ್ನು ಆಪ್ತವಾಗಿ ಚಿತ್ರಿಸಿದ್ದಾರೆ. ತನ್ನ ಬದಲಾದ ಸನ್ನಿವೇಶದಲ್ಲಿ ಕುರಿಮಂದೆಯಲ್ಲಿ ಕುರಿಯಾಗಿ ಬದುಕುವುದು ಸರಳವಲ್ಲ; ಹೋರಾಟ ಮತ್ತು ಮನುಷ್ಯ ಒಂದಕ್ಕೊಂದು ಹೊರತಲ್ಲ ಎಂಬ ಅರಿವನ್ನು ಲೇಖಕರು ತೆರೆದಿಡುತ್ತಾರೆ. ಮನುಷ್ಯ ಮತ್ತು ಕುರಿಯ ಪಾತ್ರಗಳ ವೈರುಧ್ಯಗಳನ್ನು ಭಾವನಾತ್ಮಕವಾಗಿ ಚಿತ್ರಿಸಿದ್ದಾರೆ. ಕುರಿಯಾಗಿದ್ದ ಬಸವರಾಜ ಮತ್ತೆ ಮನುಷ್ಯ ಬದುಕಿಗೆ ಮರಳಿ ಜೀವನಪ್ರೀತಿಗೆ ತನ್ನನ್ನು ಒಡ್ಡಿಕೊಳ್ಳುವುದು ಮನದಟ್ಟುತ್ತದೆ.
'ಬಿಡುಗಡೆ' ಸಾಹಿತ್ಯ ಕ್ಷೇತ್ರದ ಮೇಲೆ ಬೆಳಕು ಚೆಲ್ಲುವ ಕಥೆ. ಸಾಹಿತಿಯೊಬ್ಬನ ಆತ್ಮಕಥೆಯು ಅಂತಿಮ ಹಂತಕ್ಕೆ ಬಂದಾಗ ಅವನೊಳಗೆ ಉಂಟಾಗುವ ಗೊಂದಲಗಳು ಆತ್ಮಕತೆಯ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತವೆ. ಅವನು ವಸ್ತುಸ್ಥಿತಿಯನ್ನು ಮರೆಮಾಚಿ ತನಗೆ, ತನ್ನ ಕುಟುಂಬಕ್ಕೆ ಅನುಕೂಲವಾಗುವಂತೆ ಬರೆಯುತ್ತಾನೆಯೇ ವಿನಃ ಆತ್ಮಸಾಕ್ಷಿಗನುಗುಣವಾಗಿ ಬರೆಯುವುದಿಲ್ಲ. ಆತ್ಮಕಥೆಯಲ್ಲಿ ಬಿಚ್ಚಿಡುವ ಅಂಶಗಳ ಜೊತೆಗೇ ಬಚ್ಚಿಡುವ ಅಂಶಗಳೂ ಇರುತ್ತವೆ ಎಂಬುದನ್ನು ಕಥೆಗಳಲ್ಲಿ ಮಾರ್ಮಿಕವಾಗಿ ಹೇಳುವ ಮೂಲಕ ಲೇಖಕರು ಸಮಕಾಲೀನ ಸಂದರ್ಭದಲ್ಲಿ ಆತ್ಮಕತೆ ಬರೆಯುವವರಿಗೆ ಚಾಟಿ ಬೀಸುತ್ತಾರೆ. ಆತ್ಮಕಥೆ ಬರೆಯುವ ವ್ಯಕ್ತಿಗೆ ಮುಖಾಮುಖಿಯಾಗುವ ಸವಾಲುಗಳ ಸತ್ಯಾಸತ್ಯತೆಯನ್ನು ಕೂಡ ಈ ಕಥೆ ತೆರೆದಿಡುತ್ತದೆ. ಮೇಜಿನ ಮೇಲಿದ್ದ ಆತ್ಮಕತೆಯ ಹಾಳೆಗಳು ಜೀವ ತಳೆದು, ರೆಕ್ಕೆಗಳನ್ನು ಪಡೆದು ಹಾರುತ್ತ, ಪಲ್ಟಿ ಹೊಡೆಯುತ್ತ ನೆಲಕಚ್ಚುತ್ತಾ ಮತ್ತೆ ಹಾರುತ್ತ ತನ್ನೊಂದಿಗೆ ಊರುಕೇರಿಗಳ ಚಿತ್ರಗಳನ್ನು ತಿಳಿಸತೊಡಗುತ್ತವೆ. ಲೇಖಕ ಸೃಷ್ಟಿಸಿದ ಪಾತ್ರಗಳೇ ಜೀವ ತುಂಬಿಕೊಂಡು ಲೇಖಕರ ಬದುಕಿನಲ್ಲಿ ಆ ಪಾತ್ರಗಳ ಪಾಲುದಾರಿಕೆಯನ್ನು ಪ್ರಕಟಿಸುವಾಗ ಲೇಖಕರ ಮನಸ್ಸು ಅಲ್ಲೋಲಕಲ್ಲೋಲವಾಗಿ ವಿಲವಿಲ ಒದ್ದಾಡುವ ಕಲ್ಪನೆ ಕಥೆಯ ಓಘವನ್ನು ದುಪ್ಪಟ್ಟು ಮಾಡಿದೆ. ಇಲ್ಲಿರುವ ಬಿಡುಗಡೆ ಎರಡು ನೆಲೆಗಳಲ್ಲಿ ನಡೆಯುವಂಥದ್ದು: ಒಂದು ದೇಹದಿಂದ ಜೀವದ ಬಿಡುಗಡೆ, ಇನ್ನೊಂದು ಲೇಖಕನ ಮನದೊಳಗೆ ಬಸಿರಾದ ಭಾವಗಳ ಅಕ್ಷರ ರೂಪದ ಅಭಿವ್ಯಕ್ತಿ.
'ಅಪ್ಪುಗೆ' ಆಪ್ತತೆಯ ಸಂಕೇತ, ಸಾಂತ್ವನದ ಮಡಿಲು, ಅಂತಃಕರಣದ ತೊರೆ, ಜೀವನ ಪ್ರೀತಿಯ ಚೆಲುಮೆ. ಆ ಅಪ್ಪುಗೆಯು ನೀಡುವ ಸ್ಪರ್ಶ ಮನಸ್ಸಿಗೆ ಚೇತೋಹರಿ. ಇಂತಹ ಕಥಾ ವಸ್ತುವನ್ನು ಆಧರಿಸಿದ ಕಥೆಯನ್ನು ದೈಹಿಕದಾಚೆಗಿನ ಬದುಕು ಮತ್ತು ಸಂಬಂಧಗಳ ಅಗತ್ಯವಾಗಿ ಚಿತ್ರಿಸಿದ್ದಾರೆ. ಇಲ್ಲಿ ತಾಯಿಯನ್ನು ಕಳೆದುಕೊಂಡ ಶಕುಂತಲಾ ಎಂಬ ಹೆಣ್ಣು ಮಗಳು ಅಪ್ಪುಗೆಗಾಗಿ ಹಂಬಲಿಸುವ ಪರಿ ಓದುಗರನ್ನು ಕಂಗಳನ್ನು ಒದ್ದೆಯಾಗಿಸುತ್ತದೆ. ಮಗಳಿಗೆ ಮಲತಾಯಿಯನ್ನು ತರೆದಂತೆ ಮಗಳ ಮೇಲೆ ಪ್ರೀತಿ ಕಾಳಸಿ ಮಾಡುವ ಅಪ್ಪನ ಪಾತ್ರ ಹೆಮ್ಮೆಪಡುವಂತಿದ್ದರೂ ಮಗಳ ತಲೆಯನ್ನು ಒಮ್ಮೆಯು ನೇವರಿಸಿ ಸಾಂತ್ವನ ಹೇಳುವಲ್ಲಿ ಅಪ್ಪ ಹಿಂಜರಿಯುತ್ತಾನೆ. ಪ್ರೀತಿಯ ಅಪ್ಪುಗೆ ನೀಡುವಲ್ಲಿ ಅಪ್ಪ ಯಾಕೋ ನಿರ್ಲಿಪ್ತ ಭಾವ ತೋರುತ್ತಾನೆ. ಇದು ಇಡೀ ಕಥೆಯುದ್ಧಕ್ಕೂ ಅವಳನ್ನು ಕಾಡುತ್ತಾ ಹೋಗುತ್ತದೆ. ಅಪ್ಪ ಅಮ್ಮ ಅಜ್ಜಿ ತಾತ ಅಕ್ಕ ತಂಗಿ ತಮ್ಮ ಯಾರ ಅಪ್ಪುಗೆಯು ದೊರೆಯದೆ ಬೀದಿಯಲ್ಲಿ ನಿಂತು ಅಪ್ಪುಗಾಗಿ ಕರೆ ಕೊಡುತ್ತಾಳೆ. ಇಲ್ಲಿ ಹೆಣ್ಣು ಮಗಳು ಬಹಿರಂಗವಾಗಿ ಕರೆಕೊಟ್ಟಾಗ ಮನುಷ್ಯನ ವಿಚಲಿತವಾದ ವಿಕೃತ ಮನಸ್ಸುಗಳ ಮೂಲಕ ಲೋಕದ ನಡಾವಳಿಯನ್ನು ತೆರೆದಿಟ್ಟಿದ್ದಾರೆ. ಕಾಮ, ದೈಹಿಕದಾಚೆಗೂ ಹೆಣ್ಣು ಅಪ್ಪುಗೆಗೆ ಹಂಬಲಿವ ಪರಿಯನ್ನ ಸಮಾಜಕ್ಕೆ ಪರಿಚಯಿಸುತ್ತದೆ. ಹಿಂದಿನ ಯಾಂತ್ರಿಕ ಬದುಕಿನಲ್ಲಿ ಅಪ್ಪುಗೆ ಎಂಬುದು ಭಾವನಾತ್ಮಕವಾದ ಒಂದು ಅಂಶವಾಗಿದ್ದು ಅನೇಕ ನೋವು ಕಷ್ಟ ದುಃಖಗಳಿಗೆ ಮನೋ ಚಿಕಿತ್ಸಕವಾಗಿ ಕೆಲಸ ಮಾಡುತ್ತದೆ ಎಂಬ ಅಂಶದ ಮೇಲೆ ಈ ಕಥೆ ಬೆಳಕು ಚೆಲ್ಲುತ್ತದೆ.
ಜಗತ್ತನ್ನು ಅಲ್ಲೋಲಕಲ್ಲೋಲಗೊಳಿಸಿದ ಕೊರೋನಾ ಮಹಾಮಾರಿಯ ಕಾಲದಲ್ಲಿ ಜನರು ಸಾವು ಯಾವಾಗ ನಮ್ಮ ಮನೆ ಬಾಗಿಲು ತಟ್ಟುವುದೋ ಎಂದು ಆತಂಕದಿಂದ ದಿನಗಳನ್ನು ಕಳೆಯುತ್ತ, ತಮ್ಮವರನ್ನು ಕಳೆದುಕೊಂಡು ಪರಿತಪಿಸುತ್ತ, ಬಡವರು ಆಹಾರ ಉದ್ಯೋಗವಿಲ್ಲದೆ ಪರದಾಡಿದ ಪಾಡನ್ನು ನಾವೆಲ್ಲರೂ ತಿಳಿದೇ ಇದ್ದೇವೆ. ಅಂತಹ ಸಂದರ್ಭದಲ್ಲಿ ಮಗಳನ್ನು ಕಳೆದುಕೊಂಡ ಬಾಬುವಿನ ಕರುಣಾಜನಕ ಕಥೆಯೇ 'ಬಣ್ಣ'. ಇದು ಕರುಳಿನ ಕಥೆ. ಕರುಳ ಕುಡಿಯನ್ನು ಕಳೆದುಕೊಂಡು ದುಃಖಿಸುವ ತಂದೆಯ ಕಥೆ. ಬಾಬು ಎಲ್ಲರ ಮನೆಗೆ ಬಣ್ಣ ಬಳಿಯುತ್ತಾ ಅವರ ಮನೆ ಮನವನ್ನು ವರ್ಣರಂಜಿತಗೊಳಿಸುವವನು. ಆದರೆ ಮಗಳನ್ನು ಕಳೆದುಕೊಂಡು ಅವನ ಬದುಕೇ ಬಣ್ಣಗೆಟ್ಟಿದೆ. ಅವನ ಖುಷಿಗೆ ಬಣ್ಣಗಲೇ ಇಲ್ಲ. ಬಣ್ಣ ಮಾಸಿದ ಶ್ರಮಜೀವಿಯ ವಿಷಾದಗಾಥೆಯಿದು. ಯಜಮಾನ ಎಂದರೆ ದರ್ಪ ಎನ್ನುವ ಭಾವಕ್ಕೆ ತದ್ವಿರುದ್ಧವಾಗಿ ನಿರೂಪಕನ ಪಾತ್ರ ಮಾನವೀಯ ನೆಲೆಯಲ್ಲಿ ರಚನೆಯಾಗಿದೆ. ಬಾಬುವಿನ ಮಗಳ ಅಗಲಿಕೆಯ ದುಃಖದಲ್ಲಿ ಪಾಲುದಾರನಾಗುವ ನಿರೂಪಕ, ಬಾಬುವಿನ ದುಃಖವನ್ನು ತನ್ನದೇ ದುಃಖ ಎಂದು ಅನುಭೂತಿ ಪಡುವ ಪರಿ - ಮಾಲೀಕ ಮತ್ತು ಕೆಲಸಗಾರ ನಡುವೆ ವ್ಯವಹಾರದಾಚೆಗಿನ ಅಂತಃಕರಣವನ್ನು ಕಥೆಗಾರರು ಮನೋಜ್ಞವಾಗಿ ಸೆರೆಹಿಡಿದಿದ್ದಾರೆ. ಈ ಚಿಕ್ಕ ಕಥೆ ನಮ್ಮ ಸಮಾಜದ ಬಹುಜನರ ನೋವಿನ ಪ್ರತೀಕವಾಗಿ ಒಡಮೂಡಿದೆ.
'ಗೋರಿ' ಈ ಸಂಕಲನದ ಮತ್ತೊಂದು ಕಥೆಯಾಗಿದ್ದು ವರ್ತಮಾನದ ಬದುಕು ಮತ್ತು ಗೊಂದಲಗಳಲ್ಲಿ ರಚಿತವಾಗಿದೆ. "ಈ ಕ್ಷಣ ಕಾಲವೆನ್ನುವುದು ತನ್ನ ಕೈಗಳೇ ಹೆಪ್ಪುಗಟ್ಟಿದೆ" ಎಂಬ ಚಿಂತನೆಯೊಂದಿಗೆ ಆರಂಭವಾಗುವ ಈ 'ಗೋರಿ' ಕಥೆ ಚಂದ್ರಮೋಹನ ಮತ್ತು ರಾಜಶೇಖರ ಈ ಕಥೆಯ ನಾಯಕರುಗಳು. ನಗರದ ಪ್ರತಿಷ್ಠಿತ ಇಂದ್ರಮಹಲ್ ಆಯೋಜಿಸಿದ್ದ 'ಟಚ್ ಮಾಡಿ ಕಾರ್ ಗೆಲ್ಲಿ' ಸ್ಪರ್ಧೆಯು ಹೊಸದಾಗಿ ಮಾರ್ಕೆಟಿಗೆ ಬಂದ ಪುಷ್ಪಕ ಕಾರ್ ಪ್ರಮೋಷನ್ ಗಾಗಿತ್ತು. ಯಾರು ಹೆಚ್ಚು ದಿನ ಕಾರ್ ಮೇಲೆ ಕೈಯಿಟ್ಟು ನಿಲ್ಲುವರೋ ಅವರೇ ಸ್ಪರ್ಧೆಯ ವಿಜಯಿಯಾಗುತ್ತಾರೆ. ರಾಜಶೇಖರನಿಗೆ ತನ್ನ ಬಡತನದ ಕುಟುಂಬಕ್ಕೆ ಅಗತ್ಯ ಎಂಬಂತೆ ಆ ಕಾರು ಕಂಡರೆ, ಚಂದ್ರಮೋಹನನಿಗೆ ಅದು ತನ್ನ ಪ್ರೇಮಿಗೆ ಮದುವೆಯ ಉಡುಗೊರೆ ಕೊಡುವ ಅಗತ್ಯವಾಗಿ ಕಾಣುತ್ತದೆ. ರಾಜಶೇಖರ ಸರ್ಕಾರದ ಮತ್ತು ಬಂಡವಾಳಶಾಹಿಗಳ ಭೂಸ್ವಾಧೀನಕ್ಕೆ ಬಲಿಯಾದವನು. ಅದೇ ಕಂಪನಿ ಹೆಸರಲ್ಲಿ ಭೂಮಿ ಕಳೆದುಕೊಂಡವನು. ಈಗ ಇವನ ತಂದೆ ಮರಣಿಸಿದಾಗ ಅದೇ ಜಾಗದಲ್ಲಿ ಗೋರಿ ಕಟ್ಟಲಾಗಿತ್ತು. ಪದಗಳಲ್ಲಿ ಹೇಳಲು ಸಾಧ್ಯವಿಲ್ಲದ ಅವನ ನೋವು ಈ ಸ್ಪರ್ಧೆಯ ಹಿನ್ನೆಲೆಯಲ್ಲಿದೆ. ಕಾರಿನ ಮೇಲೆ ಕೈಯಿಟ್ಟಾಗಲೂ ಗೋರಿಯ ಮೇಲೆ ಕೈಯಿಟ್ಟ ಭಾವ. ತಂದೆಯನ್ನು ಕಳೆದುಕೊಂಡ ವೈಯಕ್ತಿಕ ನೋವು ಅಷ್ಟೇ ಅಲ್ಲದೇ ವ್ಯವಸ್ಥೆಯ ವಿರುದ್ಧ ದನಿ ಎತ್ತಲಾಗದ ರೈತರ, ಬಡವರ ಅಸಹಾಯಕತೆಯನ್ನೂ ಈ ಕಥೆ ಪ್ರತಿನಿಧಿಸುತ್ತದೆ. ತಮ್ಮೆಲ್ಲಾ ದೈಹಿಕ ಯಾತನೆಗಳನ್ನು ಬದಿಗಿಟ್ಟು ಗೆಲ್ಲಲೇಬೇಕೆಂದು ಪಣತೊಟ್ಟು ನಿಂತ ಸ್ಪರ್ಧಿಗಳಿಬ್ಬರು ಇವೆಲ್ಲವನ್ನೂ ಮರೆತು ಮಾನವೀಯತೆ, ಅಂತಃಕರಣವೇ ಬಹುದೊಡ್ಡದು ಎಂಬ ಘಟನೆಗೆ ಪಕ್ಕಾಗಿದ್ದು ಕಥೆಯ ಸತ್ವವಾಗಿದೆ.
ಬರಗಾಲದಿಂದ ಸೋತು ಸುಣ್ಣವಾದ ಹುಡುಗನೊಬ್ಬ ನಗರಕ್ಕೆ ಕೆಲಸ ಹುಡುಕಿ ಬರುವ ಕಥೆ, 'ಬರ'. ಹಳ್ಳಿಹುಡುಗನ ಮುಗ್ದತೆಯಾಚೆಗಿನ ಅವನ ತೀಕ್ಷ್ಣನೋಟ, ಸೂಕ್ಷ್ಮಗ್ರಹಿಕೆಗಳು ಗಮನ ಸೆಳೆಯುತ್ತದೆ. ಜಗವೆಂಬ ಈ ನಾಟಕರಂಗದ ಪಾತ್ರಧಾರಿಗಳು ನೈಜತೆಯಿಂದ ದೂರ ಸರಿದು ತಮ್ಮ ಸ್ವಾರ್ಥಕ್ಕಾಗಿ ನಾಟಕವಾಡಿಕೊಂಡು ಬದುಕುವ ಹುನ್ನಾರವನ್ನು ಈ ಕಥೆ ಸಂಕೇತಿಸುತ್ತದೆ. ಕಥೆಯಲ್ಲಿ ನಾಟಕವೇ ಒಂದು ರೂಪಕವಾಗಿದೆ. ನಾಟಕದ ಮೇಷ್ಟ್ರು ಅಂತಃಕರಣ ಜೀವಿಯಾದರೂ ಏನು ಮಾಡಲಾಗದ ಅಸಹಾಯಕತೆಯ ಪ್ರತೀಕ. ಕಥೆಗಾರರೂ ಆದ ಅವರು ಕಥೆಯ ಹುಡುಕಾಟದಲ್ಲಿರುವವರು. ಈ ಹುಡುಗನ ಮೂಲಕ ಮೇಷ್ಟರಿಗೆ ಕಥಾವಸ್ತು ದೊರೆಯುತ್ತದೆ. ಕಥೆಗಳಿಗೆ ವಸ್ತುವನ್ನು ಎಲ್ಲಿಂದಲೋ ಹುಡುಕಿ ತರಬೇಕಾಗಿಲ್ಲ, ನಮ್ಮ ಸುತ್ತಲಿನ ಸಂವೇದನೆಗಳಿಗೆ ಸ್ಪಂದಿಸಿದರೆ ಸಾಕು. ಕಣ್ಣು ಕಿವಿಗಳನ್ನ ಇತರರ ಭಾವನೆಗಳಿಗೆ ತೆರೆದಿಟ್ಟುಕೊಂಡರೆ ಸಾಕು ಎಂಬುದನ್ನು ಈ ಕಥೆಯಲ್ಲಿ ನಾವು ನೋಡಬಹುದು.
‘ಇಲ್ಲಿಂದ ಮುಂದೆಲ್ಲ ಕಥೆ' ಸಂಕಲನದ ಸ್ಥಾಯಿ ಭಾವ ನವಿರುತನದ್ದು. ಈ ಕಥೆಗಳು ಒಂದೇ ಗುಕ್ಕಿನಲ್ಲಿ ಓದಿಸಿಕೊಳ್ಳುತ್ತದೆ. ಮನಸ್ಸಿಗೆ ಮುದ ನೀಡುವ ಚೇತೋಹಾರಿ ನಿರೂಪಣೆ, ಪಾತ್ರಗಳನ್ನು ಜೀವಂತವಾಗಿಡುವ ಸಂವೇದನಾಶೀಲ ಅಭಿವ್ಯಕ್ತಿ ಶೈಲಿ, ಕತೆಗಾರರಿಗೆ ಸಿದ್ಧಿಸಿದ ಭಾಷೆಯ ಮೇಲಿನ ಹಿಡಿತ, ಮತ್ತು ಕಥೆಗಳ ಸಮಾಜಮುಖಿ ಗುಣಗಳಿಂದಾಗಿ ಈ ಕೃತಿಯನ್ನು ಓದುಗರು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ. ಹಲವು ಸಾಲುಗಳು ಕ್ವೋಟ್ ಮಾಡಬಹುದಾದಷ್ಟು ಸಶಕ್ತವಾಗಿವೆ. ಧ್ವನಿಪೂರ್ಣವಾದ ಇಲ್ಲಿನ ಕಥೆಗಳು ವ್ಯಕ್ತಿಗತ ಮತ್ತು ಸಾಮೂದಾಯಿಕ ಅನುಭವಗಳ ಅನುಸಂಧಾನಗಳಾಗಿವೆ. ಇವುಗಳನ್ನು ಗಾಢವಾಗಿ ಕಂಡರಿಸುವ ಭಾಷೆಯ ಕುಸುರಿ, ಕಥೆ ಕಟ್ಟುವ ಕಸುಬುದಾರಿಕೆಗಳು ಕಥೆಗಳ ಸೊಗಸನ್ನ ಹೆಚ್ಚಿಸಿವೆ. ಈ ಕೃತಿ ಕನ್ನಡ ಕಥಾಲೋಕದಲ್ಲಿ ಹೆಚ್ಚು ಕಾಲ ತಾಳಲಿದೆ.
ಅನುಸೂಯ ಯತೀಶ್
ಬೆಂಗಳೂರಿನ ಅನುಸೂಯ ಯತೀಶ್ ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರೆ. ಇವರು ಕ್ರಿಯಾಶೀಲ ಬೋಧನೆ ಮತ್ತು ಹಲಬಗೆಯ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡವರು. ತಮ್ಮ ಕ್ರಿಯಾಕ್ಷೇತ್ರದಲ್ಲಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಜೊತೆಗೇ ಕತೆ, ಕವನ, ಪ್ರಬಂಧ, ಗ಼ಜ಼ಲ್, ಹೈಕು, ವಿಮರ್ಶೆ ಮೊದಲಾದ ಪ್ರಕಾರಗಳಲ್ಲಿ ಬರೆಯುತ್ತಿದ್ದಾರೆ. ಅನೇಕ ಪತ್ರಿಕೆಗಳಲ್ಲಿ ಅವರ ಬರಹಗಳು ಪ್ರಕಟವಾಗಿವೆ. ವಿಮರ್ಶೆ ಇವರ ಮೆಚ್ಚಿನ ಪ್ರಕಾರವಾಗಿದ್ದು, 'ಕೃತಿಮಂಥನ', 'ಕಾವ್ಯ ದರ್ಪಣ', 'ನುಡಿ ಸಖ್ಯ', ‘ಕೆನೆವಾಲ ಕಡೆದು', ‘ರಾಗಂ ಬರಹ ಬೆರಗು’, 'ಪಡಿನುಡಿ’ ಇವು ಪ್ರಕಟಿತ ವಿಮರ್ಶಾ ಕೃತಿಗಳು. ‘ಹಲೋ ಟೀಚರ್’ ಶಿಕ್ಷಕಿಯ ಅನುಭವ ಕಥನ. ‘ನಿನ್ನ ಕಾಲ್ಗೆಜ್ಜೆ ಸದ್ದಿಗೆ’ ಎಂಬ ಗ಼ಜ಼ಲ್ ಸಂಕಲನ ಮುದ್ರಣದ ಹಂತದಲ್ಲಿದೆ. 'ವೀರಲೋಕ’ ಮತ್ತು ‘ಸಾಹಿತ್ಯ ಲೋಕ’ ವಿಮರ್ಶಾ ಸ್ಪರ್ಧೆಗಳಲ್ಲಿ ಬಹುಮಾನವನ್ನು ಪಡೆದಿದ್ದಾರೆ.
ಇದನ್ನೂ ಓದಿ…
ದುಶ್ಯಂತನ ವಾರಸುದಾರರಿಗಷ್ಟೇ ನೆನಪಿನ ಉಂಗುರದ ಹಂಗು
ಪತ್ರಕರ್ತ, ಕತೆಗಾರ ರಘುನಾಥ ಚ. ಹ. ಅವರ ಇಲ್ಲಿಂದ ಮುಂದೆಲ್ಲ ಕಥೆ ಕಥಾಸಂಕಲನ ಅಂಕಿತ ಪುಸ್ತಕದಿಂದ ಮಾರ್ಚ್ ೨ ರಂದು ಬಿಡುಗಡೆಯಾಗಲಿದೆ. ಅದರಲ್ಲಿರುವ ಬಣ್ಣ ಕಥೆ ನಿಮ್ಮ ಓದಿಗೆ.