ದುಶ್ಯಂತನ ವಾರಸುದಾರರಿಗಷ್ಟೇ ನೆನಪಿನ ಉಂಗುರದ ಹಂಗು
ರಘುನಾಥ ಚ. ಹ. ಅವರ 'ಇಲ್ಲಿಂದ ಮುಂದೆಲ್ಲ ಕಥೆ' ಸಂಕಲನದಿಂದ ಆಯ್ದ ಕಥೆ
ಪತ್ರಕರ್ತ, ಕತೆಗಾರ ರಘುನಾಥ ಚ. ಹ. ಅವರ ಇಲ್ಲಿಂದ ಮುಂದೆಲ್ಲ ಕಥೆ ಕಥಾಸಂಕಲನ ಅಂಕಿತ ಪುಸ್ತಕದಿಂದ ಮಾರ್ಚ್ ೨ ರಂದು ಬಿಡುಗಡೆಯಾಗಲಿದೆ. ಅದರಲ್ಲಿರುವ ಬಣ್ಣ ಕಥೆ ನಿಮ್ಮ ಓದಿಗೆ.
ಬಣ್ಣ
‘ನನ್ನ ತೀರಿಕೊಂಡ ಮಗಳು ಇವಳೇ ಸರ್,’ ಎಂದು ಪೇಂಟರ್ ಬಾಬು ಮೊಬೈಲ್ನಲ್ಲಿನ ಫೋಟೊವನ್ನು ಮುಂದೆ ಹಿಡಿದಾಗ ಏನು ಹೇಳಬೇಕೆಂದು ತೋಚದೆ ಕಕ್ಕಾಬಿಕ್ಕಿಯಾಗಿದ್ದೆ. ಮಗಳನ್ನು ಕಳಕೊಂಡ ನತದೃಷ್ಟ ಅಪ್ಪನನ್ನು ಏನೆಂದು ಸಮಾಧಾನಿಸುವುದು. ಆ ಸಂದರ್ಭಕ್ಕೆ ಏನು ಹೇಳಿದೆ ಎನ್ನುವುದೀಗ ಸ್ಪಷ್ಟವಾಗಿ ನೆನಪಿಲ್ಲವಾದರೂ ಆ ಕಂದಮ್ಮನ ಹೆಸರನ್ನೇ ಕೇಳಿರಲಿಲ್ಲ ಎನ್ನುವುದು ಮಾತ್ರ ಸರಿಯಾಗಿ ನೆನಪಿದೆ. ಮಗುವಿನ ಹೆಸರನ್ನೇ ತಿಳಿದುಕೊಳ್ಳದೆ ಹೋದ ನನ್ನ ಸ್ಪಂದನ ಅದೆಷ್ಟು ಅಪೂರ್ಣವಾಗಿತ್ತು, ಜಡವಾಗಿತ್ತು ಎಂದು ಯಾರು ಬೇಕಾದರೂ ಸುಲಭವಾಗಿ ಊಹಿಸಬಹುದು. ಆ ಮಾತುಕತೆ ನಡೆದ ಸ್ವಲ್ಪ ಸಮಯದ ನಂತರ, ಕಾಲಚಕ್ರ ಹಿಂದಕ್ಕೆ ಚಲಿಸಿ ಪೇಂಟರ್ ಬಾಬು ಇದೇ ಮಾತುಗಳನ್ನು ಮಾಸ್ತಿ ವೆಂಕಟೇಶ ಅಯ್ಯಂಗಾರರಿಗೋ ಬೆಸಗರಹಳ್ಳಿ ರಾಮಣ್ಣನವರಿಗೋ ಹೇಳಲು ಸಾಧ್ಯವಾಗಿದ್ದಿದ್ದರೆ ಅವರ ಪ್ರತಿಕ್ರಿಯೆ ಹೇಗಿರುತ್ತಿತ್ತು? ಕರುಳು ಎಲ್ಲರಿಗೂ ಇರುತ್ತದೆ. ನನ್ನಂತಹ ಬಹುತೇಕರಲ್ಲಿ ಅದು ತಿಂದದ್ದನ್ನು ಅರಗಿಸುವ ವಿಸರ್ಜಿಸುವ ಕೆಲಸವನ್ನಷ್ಟೇ ಮಾಡುತ್ತದೆ. ಎದುರಿನ ಮನುಷ್ಯನ ಸಂಕಟಕ್ಕೆ ಮಿಡಿಯಲು ಬೇಕಾದದ್ದು ತಾಯಿಕರುಳು.
ಬಣ್ಣದ ಡಬ್ಬಿ ಹಾಗೂ ಬ್ರಶ್ಶು ಬದಿಗಿಟ್ಟು, ನೆತ್ತಿ ಸುಡುವ ಮಧ್ಯಾಹ್ನದಲ್ಲಿ ತನ್ನ ಮಗಳನ್ನು ಇದ್ದಕ್ಕಿದ್ದಂತೆ ನೆನಪಿಸಿಕೊಂಡಿದ್ದ ಬಾಬು, ನಾಲ್ಕು ದಿನಗಳ ಪರಿಚಯದ ನನ್ನೆದುರು ಮಗಳ ಫೋಟೊ ಹಿಡಿದಿದ್ದ.
ಮನೆಗೆ ಬಣ್ಣ ಬಳಿಸಬೇಕೆಂದು ಯೋಚಿಸದೆ ಇದ್ದಿದ್ದರೆ ಬಾಬುವಿನ ಭೇಟಿ ಆಗುತ್ತಿರಲಿಲ್ಲವೇನೊ? ಮೂರ್ನಾಲ್ಕು ವರ್ಷಗಳಿಂದ ಮುಂದೂಡಿಕೊಂಡು ಬಂದಿದ್ದ ಬಣ್ಣ ಬಳಿಸುವ ಕೆಲಸಕ್ಕೆ ಗಳಿಗೆ ಕೂಡಿಬಂದದ್ದು ಲಾಕ್ಡೌನ್ನ ಸಡಿಲಗೊಂಡಿದ್ದ ಸಂದರ್ಭದಲ್ಲಿ. ಕೊರೊನಾ ಸೋಂಕಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರ ಲಾಕ್ಡೌನ್ ವಿಧಿಸಿತ್ತು. ಜನ ತಮ್ಮ ಮನೆಗಳಿಂದ ಹೊರಬರದಂತೆ ನಿರ್ಬಂಧಿಸಿತ್ತು. ವ್ಯಾಪಾರ ವಹಿವಾಟುಗಳಿಗೆ ಅವಕಾಶವಿರಲಿಲ್ಲ. ಒಮ್ಮಿಂದೊಮ್ಮೆಗೇ ಹೇರಲಾದ ನಿರ್ಬಂಧಗಳಿಂದ ಕಂಗಾಲಾದರೂ ಸರ್ಕಾರದ ಮಾತು ಕೇಳುವುದರ ಹೊರತು ಜನರಿಗೆ ಬೇರೆ ದಾರಿಯಿರಲಿಲ್ಲ. ಜೀವ ಉಳಿದರೆ ಮುಂದೆ ಹೇಗಾದರೂ ಬದುಕಿಕೊಳ್ಳಬಹುದು ಎನ್ನುವ ಆಸೆಯಿಂದ, ಒಪ್ಪತ್ತೋ ಉಪವಾಸವೋ ಆದಷ್ಟೂ ಮನೆಗಳಲ್ಲೇ ಉಳಿಯಲು ಪ್ರಯತ್ನಿಸಿದ್ದರು. ಹೊರಗೆ ಹೋಗಿ ಕೆಲಸ ಮಾಡಲು ಸಿದ್ಧವಿದ್ದರೂ ದುಡಿಮೆ ಸಿಗಬೇಕಲ್ಲ? ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲೇ ಜನ ಹಿಂಜರಿಯುತ್ತಿದ್ದ ದಿನಗಳವು. ಈ ಪರಿಸ್ಥಿತಿ ಎಷ್ಟು ದಿನ ಎನ್ನುವುದು ಸ್ಪಷ್ಟವಿಲ್ಲದೆ ಹೋದಾಗ, ನಗರದಲ್ಲಿನ ಲಕ್ಷಾಂತರ ಮಂದಿ ಊರಿನ ದಾರಿ ಹಿಡಿದಿದ್ದರು. ಹೀಗೆ ಊರು ಸೇರಿದವರು ಲಾಕ್ಡೌನ್ ಸಡಿಲಗೊಂಡಂತೆಲ್ಲ ನಗರಗಳಿಗೆ ಮರಳಿ ದುಡಿಮೆ ಹುಡುಕತೊಡಗಿದ್ದರು. ಆ ದಿನಗಳಲ್ಲೇ ಮನೆಗೆ ಬಣ್ಣ ಮಾಡಿಸಲು ಮುಂದಾದಾಗ, ಬ್ರಶ್ಶು ಹಿಡಿಯಲು ಬಂದವರಲ್ಲಿ ಬಾಬು ಕೂಡ ಒಬ್ಬ.
ಮೊದಲೆರಡು ದಿನಗಳಲ್ಲಿ ಬಾಬು ಬಿಗುವಾಗಿದ್ದ. ಟೀ ಬಿಸ್ಕತ್ತು ಕೊಡಲು ಹೋದ ಹೆಂಡತಿ, ‘ಈ ಹುಡುಗನಿಗೆ ದುರಹಂಕಾರ,’ ಎಂದು ಗೊಣಗಿದ್ದಳು. ಮೂರನೇ ದಿನದ ವೇಳೆಗೆ ಬಾಬು ನಿಧಾನಕ್ಕೆ ಮಾತಿಗೆ ಕುದುರಿಕೊಳ್ಳುವುದರೊಂದಿಗೆ ಅವನ ಕುರಿತ ನಮ್ಮ ಅಭಿಪ್ರಾಯವೂ ಬದಲಾಗುತ್ತಾ ಹೋಯಿತು.
ಮಕ್ಕಳ ಬಾಲ್ಯದ ಮಾಸಿಹೋಗುತ್ತಿರುವ ನೆನಪುಗಳಂತೆ ಸ್ಟೋರ್ರೂಮ್ನಲ್ಲಿ ಅನಾಥವಾಗಿದ್ದ ಆಟಿಕೆ ಕಾರನ್ನು ನೋಡಿ ಬಾಬು ಸಂಭ್ರಮಿಸಿದ್ದ. ಆ ದಿನ ಸಂಜೆ ಅಳಿದುಳಿದ ಬಣ್ಣಗಳನ್ನು ತಂದು, ‘ಈ ಬಣ್ಣಗಳನ್ನು ಕಾರಿಗೆ ಬಳಿಯಲಾ ಸಾರ್,’ ಎಂದವನು, ನಾನು ಹೂಂ ಎನ್ನುವುದನ್ನೂ ಕಾಯದೆ ಬ್ರಶ್ಶು ಕೈಗೆತ್ತಿಕೊಂಡಿದ್ದ. ಮಗುವೊಂದು ಬಣ್ಣಗಳೊಂದಿಗೆ ಆಡಿಕೊಳ್ಳುವ ಉತ್ಸಾಹ-ಮುಗ್ಧತೆಯಲ್ಲಿ ಕಾರನ್ನು ಜೀವಗೊಳಿಸಿದ. ವಿಚಿತ್ರ ಬಣ್ಣಗಳಿಂದ ಕಂಗೊಳಿಸತೊಡಗಿದ ಕಾರನ್ನು ನೋಡಿ, ‘ನಮ್ಮ ಮನೆಯಲ್ಲಿ ಈ ಕಾರಿನಲ್ಲಿ ಆಡುವವರು ಯಾರೂ ಇಲ್ಲ. ಬೇಕಿದ್ದರೆ ನೀನಿದನ್ನು ತೆಗೆದುಕೊಂಡು ಹೋಗಬಹುದು,’ ಎಂದೆ. ‘ಹಾಂ, ನಮ್ಮ ಪಕ್ಕದ ಮನೆಯಲ್ಲಿ ನನ್ನ ಮಗಳ ವಯಸ್ಸಿನ ಹುಡುಗಿ ಇದ್ದಾಳೆ ಸರ್. ಅವಳಿಗೆ ಕೊಡುತ್ತೇನೆ,’ ಎಂದ.
‘ನಿಮ್ಮ ಮನೆಯಲ್ಲಿ ಯಾರೂ ಮಕ್ಕಳಿಲ್ಲವೇ?’ ಎನ್ನುವ ಪ್ರಶ್ನೆಯನ್ನು ನಾನು ಕೇಳಬಾರದಿತ್ತೇನೊ? ಬಣ್ಣಗೊಂಡ ಕಾರನ್ನೇ ನೋಡುತ್ತ, ‘ನಾಲ್ಕು ವರ್ಷದ ಮಗಳು ಸಾರ್, ತೀರಿಕೊಂಡು ಎರಡು ತಿಂಗಳಾಯಿತು…’ ಎಂದಿದ್ದ.
ಎದೆಯೊಳಗೆ ದುಃಖದ ಮಡುವನ್ನೇ ಇಟ್ಟುಕೊಂಡಿದ್ದ ಬಾಬುವಿನ ಮೌನದ ಕಾರಣ ಹೊರಗೆ ಬಂದಿತ್ತು. ದುಃಖದ ರೂಪವಾಗಿದ್ದ ಅವನ ಮೌನವನ್ನು ಅಹಂಕಾರದಂತೆ ಭಾವಿಸಿದ್ದಕ್ಕಾಗಿ ಬೇಸರವಾಗಿ, ಛೇ ಛೇ ಎಂದು ಲೊಚಗುಟ್ಟುತ್ತ ಮಾತಿಗೆಳೆದಾಗ, ಕಾರನ್ನು ಪಕ್ಕಕ್ಕಿಟ್ಟು, ಸರಳುಗಳಿಗೆ ಬಣ್ಣ ಹಚ್ಚುತ್ತಲೇ ತನ್ನ ಬದುಕು ಬಣ್ಣ ಕಳೆದುಕೊಂಡ ಕಥೆಯನ್ನು ಹೇಳಿಕೊಂಡ. ಆ ಕಥೆಯನ್ನು ಅವನ ಮಾತುಗಳಲ್ಲೇ ಕೇಳಿ.
ಬಾಬು ಹೇಳಿದ ಮಗಳ ಕಥೆ:
ಹುಟ್ಟಿದ ಊರು ಹೊಟ್ಟೆಗೆ ಮೋಸ ಮಾಡದೆನ್ನುವ ನಂಬಿಕೆಯಲ್ಲಿ ಊರಿನ ಮಡಿಲು ಸೇರಿಕೊಂಡಾಗ ನಾನು ಮತ್ತು ನನ್ನ ಹೆಂಡತಿಗಿಂತಲೂ ಹೆಚ್ಚು ಖುಷಿಪಟ್ಟಿದ್ದು ಮಗಳು. ಮಗಳ ಸಂಭ್ರಮ ನೋಡಿ, ಆವರೆಗೆ ನಾವು ಏನೆಲ್ಲದರಿಂದ ಅವಳನ್ನು ದೂರ ಮಾಡಿದ್ದೆವು ಎನ್ನುವುದು ಅರಿವಿಗೆ ಬರತೊಡಗಿತು. ನಮಗೆ ಬದುಕಿನ ಅರ್ಥ ಮಾಡಿಸುವುದು ಮಕ್ಕಳೇ ಅಲ್ಲವೇ? ನನ್ನ ಮಗಳಂತೂ ನನ್ನ ಪಾಲಿಗೆ ಮೇಷ್ಟ್ರೇ ಆಗಿದ್ದಳು. ನಾನು ಅಮ್ಮ ಅಪ್ಪನಿಗೆ ಹೆದರಿದವನಲ್ಲ. ಹೆಂಡತಿಗೂ ಹೆದರಿದವನಲ್ಲ. ಮಗಳಿಗೆ ಹೆದರುತ್ತಿದ್ದೆ. ಮಗಳ ಕಣ್ಣಲ್ಲಿ ಒಳ್ಳೆಯ ಅಪ್ಪ ಎನ್ನಿಸಿಕೊಳ್ಳುವುದೇನು ತಮಾಷೆಯೆ? ಮಗಳ ಬಗ್ಗೆ ನನ್ನ ಹೃದಯ ಮೆದುವಾಗಲು ಕಾರಣವೂ ಇತ್ತು. ‘ಹೃದಯದ ಬಡಿತ ಸರಿಯಾಗಿಲ್ಲ. ಹಾಗೆಂದು ಹೆದರುವಂತಹದ್ದೇನೂ ಇಲ್ಲ. ಸ್ವಲ್ಪ ದೊಡ್ಡವಳಾದ ಮೇಲೆ ಹೃದಯದ ತೊಂದರೆ ಸರಿಯಾಗಬಹುದು. ಸರಿಯಾಗದೆ ಹೋದರೆ ಆಪರೇಷನ್ ಮಾಡಬೇಕಾಗಬಹುದು. ಅವಳ ಆರೋಗ್ಯದ ಬಗ್ಗೆ ನೀವು ಸದಾ ಜಾಗರೂಕರಾಗಿರಬೇಕು. ಆರೋಗ್ಯ ಏರುಪೇರಾದರೆ ತಕ್ಷಣ ಡಾಕ್ಟರಿಗೆ ತೋರಿಸಿ,’ ಎಂದು ಹುಟ್ಟಿದ ಕೂಸನ್ನು ಪರೀಕ್ಷಿಸಿದ್ದ ವೈದ್ಯರು ಎಚ್ಚರಿಸಿದ್ದರು.
ಹೆತ್ತವರಿಗೆ ಹೆಚ್ಚಿನ ತೊಂದರೆ ಕೊಡದೆ ಮಗಳು ಬೆಳುದಿಂಗಳಿನಂತೆ ಬೆಳೆಯುತ್ತಾ ಹೋದಳು. ಹುಣ್ಣಿಮೆ ಆದಮೇಲೆ ಅಮಾವಾಸ್ಯೆ ಇರುವುದೇ ನಮಗೆ ಮರೆತುಹೋಗಿತ್ತು. ಬದುಕು ಬಣ್ಣಬಣ್ಣವಾಗಿತ್ತು. ಕೊರೊನಾ ಸಮಯದಲ್ಲಿ ಕೂಡ ಒಳ್ಳೆಯ ದಿನಗಳು ಮತ್ತೆ ಬರುತ್ತವೆನ್ನುವ ಖುಷಿಯಲ್ಲಿ ಕಾಲ ಸರಿಯುತ್ತಿತ್ತು. ಹುಟ್ಟಿ ಬೆಳೆದ ಊರಿನಲ್ಲಿ ಮಗಳು ಹೆಂಡತಿಯೊಂದಿಗೆ ಒಂದಷ್ಟು ದಿನ ಕಾಲ ಹಾಕುವುದು ಕಷ್ಟವೇನೂ ಇರಲಿಲ್ಲ. ಒಡಹುಟ್ಟಿದ ಅಣ್ಣನದು ತಾಯಿಕರುಳು. ಅತ್ತಿಗೆ ದೊಡ್ಡಮನೆಯಿಂದ ಬಂದ ದೊಡ್ಡ ಕೈಯವಳು. ನಮ್ಮನ್ನೆಲ್ಲ ಚೆನ್ನಾಗಿಯೇ ನೋಡಿಕೊಂಡರು.
ಆದರೆ, ವಿಧಿಯ ನಾಟಕ ಬೇರೆಯದೇ ಇತ್ತು. ದುರ್ಭಿಕ್ಷದಲ್ಲಿ ಅಧಿಕಮಾಸ ಎನ್ನುವಂತೆ ಹುಟ್ಟಿನೊಂದಿಗೆ ಮಗಳಿಗೆ ಜೊತೆಯಾಗಿದ್ದ ಹೃದಯದ ಬೇನೆ ಮುಚ್ಚಿದ್ದ ಕಣ್ಣು ತೆರೆಯಿತು. ನಗರಗಳಲ್ಲಿನ ಸಣ್ಣಪುಟ್ಟ ಆಸ್ಪತ್ರೆಗಳೆಲ್ಲ ತಗಡು ಬಡಿಸಿಕೊಂಡು, ದೊಡ್ಡಾಸ್ಪತ್ರೆಗಳೆಲ್ಲ ಕೊರೊನಾ ಸೆಂಟರ್ಗಳಾಗಿದ್ದಾಗ ಪುಟ್ಟ ಊರಿನಲ್ಲಿ ಕೆರಳಿದ ಹೃದಯವನ್ನು ಯಾರು ಶಮನಗೊಳಿಸಿಯಾರು. ಇಲಾಜು ತಮ್ಮ ಕೈಮೀರಿದ್ದೆಂದು ಊರಿನಲ್ಲಿನ ಡಾಕ್ಟರು ನಗರದ ದಾರಿ ತೋರಿದರು.
ಬರುವಾಗಲೇನೊ ದಾರಿಯಲ್ಲಿ ಸಿಕ್ಕ ಟೆಂಪೊ, ಆಟೊ ಹಿಡಿದು ಊರು ಸೇರಿದ್ದಾಗಿತ್ತು. ಈಗ ಲಾಕ್ಡೌನ್ ಬಿಗಿಯಾಗಿರುವ ಸಂದರ್ಭದಲ್ಲಿ ನಿತ್ರಾಣಳಾಗಿರುವ ಮಗಳೊಂದಿಗೆ ಬೆಂಗಳೂರಿಗೆ ಹೋಗುವುದು ಸುಲಭವಿರಲಿಲ್ಲ. ಕಾರು ವಿಚಾರಿಸಿದರೆ, ಹದಿನೈದು ಸಾವಿರ ರೂಪಾಯಿ ಕೈಯಲ್ಲಿಡದ ಹೊರತು ಹೊರಡುವುದು ಸಾಧ್ಯವೇ ಇಲ್ಲವೆನ್ನುವ ಉತ್ತರ. ಕೈಯಲ್ಲಿ ಹದಿನೈದು ನೂರು ರೂಪಾಯಿಯೂ ಇರಲಿಲ್ಲ. ಹೆಂಡತಿಯ ಕಿವಿ ಕೊರಳನ್ನು ಬಣ್ಣಗೆಡಿಸಿ ಬಾಡಿಗೆಗೆ ಹಾಗೂ ಆಸ್ಪತ್ರೆಗೆಂದು ಒಂದಷ್ಟು ದುಡ್ಡು ಹೊಂದಿಸಿಕೊಂಡಿದ್ದಾಯಿತು.
ಬೆಂಗಳೂರಿನ ದಾರಿ ಚಕ್ರವ್ಯೂಹದಂತಿತ್ತು. ದಾರಿಯಲ್ಲಿ ನಾಲ್ಕಾರು ಕಡೆ ಪೊಲೀಸರ ವಿಚಾರಣೆ. ಅವರಿಗೆ ಪರಿಸ್ಥಿತಿ ಮನದಟ್ಟು ಮಾಡಿಕೊಡಲು ಕಲಿತ ಬುದ್ಧಿಯನ್ನೆಲ್ಲ ಖರ್ಚು ಮಾಡಬೇಕಾಯಿತು. ಮಗಳನ್ನು ಮಡಿಲಲ್ಲಿ ಮಲಗಿಸಿಕೊಂಡಿದ್ದ ಹೆಂಡತಿ ಮಾತು ಕಳೆದುಕೊಂಡಿದ್ದಳು. ದೊಡ್ಡಾಸ್ಪತ್ರೆಯ ಬಾಗಿಲು ತಲುಪುವ ವೇಳೆಗೆ ನನಗೂ ಅವಳಿಗೂ ಕೈಕಾಲುಗಳ ಶಕ್ತಿಯೇ ಬಸಿದುಹೋದಂತಿತ್ತು. ದೊಡ್ಡವರ ಪಾಡೇ ಹೀಗಿರುವಾಗ ಪುಟ್ಟ ಕಂದಮ್ಮನ ಕಥೆಯೇನು? ಮಗುವನ್ನು ದಾದಿಯರು ಮತ್ತು ವೈದ್ಯರಿಗೊಪ್ಪಿಸಿ, ಗಾಜಿನ ಬಾಗಿಲಾಚೆಗಿನ ಕೋಣೆಯಲ್ಲಿ ಮಗಳು ಗುಣಮುಖಳಾಗುವ ಗಳಿಗೆಗಾಗಿ ಕಾತರಿಸುತ್ತ, ಆಸ್ಪತ್ರೆಯ ಗದಗುಟ್ಟಿಸುವ ಪಡಸಾಲೆಯ ನೀರವದಲ್ಲಿ ಅಪರಿಚಿತರಂತೆ ಕುಳಿತ ನನಗೂ ಅವಳಿಗೂ ತುಂಬಾ ಹೊತ್ತು ಮಾತನಾಡುವುದಿರಲಿ, ಪರಸ್ಪರ ಮುಖ ನೋಡಿಕೊಳ್ಳುವ ಧೈರ್ಯವೂ ಆಗಲಿಲ್ಲ. ಪಡಸಾಲೆಯ ನಡುವೆಯಿದ್ದ ಕಪ್ಪುಗಲ್ಲಿನ ಗಣಪತಿಯ ಮೂರ್ತಿ ಅವಳ ಗಮನಸೆಳೆಯಿತು. ಯಾರೋ ಉರಿಸಿಹೋಗಿದ್ದ ಮೇಣದಬತ್ತಿಯ ಬೆಳಕು ಗಣಪನ ಮುಖವನ್ನು ಬೆಳಗುತ್ತಿತ್ತು. ಎದ್ದುಹೋದವಳು ಗಣಪನ ಎದುರು ನಿಂತಳು. ಮೂರ್ತಿಯ ಎದುರಲ್ಲಿ ಕಾಜೂ ಬರ್ಫಿಯ ಸಿಹಿ ಬಿಲ್ಲೆಗಳು. ಗುಣಮುಖರಾದ ನಿರಾಳದಲ್ಲಿ ಯಾರೋ ನೈವೇದ್ಯ ಮಾಡಿ ಹೋಗಿರಬೇಕು. ಮಗಳಿಗೆ ಕಾಜೂ ಬರ್ಫಿ ಎಂದರೆ ಪ್ರಾಣ. ಕಣ್ಣುಗಳಲ್ಲಿ ನೀರು ತುಂಬಿಕೊಂಡವಳು, ನಾನು ಅವಳನ್ನೇ ಗಮನಿಸುತ್ತಿದ್ದುದನ್ನು ನೋಡಿ ಮುಖ ತಿರುಗಿಸಿಕೊಂಡಳು.
ದಾದಿಯೊಬ್ಬರು ಬಂದು ಮಾತನಾಡಿಸಿದಾಗ ನಂನಮ್ಮ ಲೋಕಗಳಿಂದ ಹೊರಬಂದು, ಆಕೆಯನ್ನು ಹಿಂಬಾಲಿಸಿ ವೈದ್ಯರ ಕೊಠಡಿ ತಲುಪಿದೆವು. ವೈದ್ಯರು ಹೇಳಿದ ಮಾತುಗಳಲ್ಲಿ ಅರ್ಥವಾದುದಿಷ್ಟು: ಕೂಸಿಗೆ ಕೋವಿಡ್ ನೆಗೆಟಿವ್ ಬಂದಿದೆ. ತಕ್ಷಣವೇ ಟ್ರೀಟ್ಮೆಂಟ್ ಶುರು ಮಾಡಬೇಕು. ಹೃದಯ ತುಂಬಾ ದುರ್ಬಲವಾಗಿದೆ. ಎರಡು ದಿನಗಳ ನಿಗಾದ ನಂತರವಷ್ಟೇ ಏನನ್ನಾದರೂ ಹೇಳಲು ಸಾಧ್ಯ. ಸದ್ಯಕ್ಕೆ ಒಂದಷ್ಟು ದುಡ್ಡು ಕಟ್ಟಬೇಕು. ಕೌಂಟರ್ಗೆ ಹೋದರೆ ಮಾಹಿತಿ ಕೊಡುತ್ತಾರೆ.
ತಮ್ಮ ಮಾತು ಮುಗಿದರೂ ಎದುರಿಗೆ ಮೂಕವಾಗಿ ಕುಳಿತ ದೀನಮುಖಗಳನ್ನು ನೋಡಿದ ವೈದ್ಯರು, ‘ಧೈರ್ಯ ಕಳೆದುಕೊಳ್ಳಬೇಡಿ, ದೇವರಿದ್ದಾನೆ,’ ಎಂದರು.
‘ಸಾರ್, ಒಂದು ಸಲ ಮಗಳನ್ನು ನೋಡಬೇಕು,’ ಎಂದಳು ನಮ್ಮವಳು.
‘ಈಗ ಬೇಡ. ಮಗುವಿಗೆ ಪ್ರಜ್ಞೆಯಿಲ್ಲ. ಎಚ್ಚರವಾದ ಮೇಲೆ ನೋಡುವಿರಂತೆ. ಅಗತ್ಯ ಬಿದ್ದರೆ ನಿಮ್ಮಲ್ಲೊಬ್ಬರು ಮಗುವಿನ ಬಳಿ ಇರಬಹುದು,’ ಎನ್ನುವ ವೈದ್ಯರ ಮಾತಿನಿಂದ ಆಸೆಯೂ ನಿರಾಸೆಯೂ ಒಟ್ಟಿಗೆ ಉಂಟಾಯಿತು.
ಅಲ್ಲಿಂದ ದಾದಿ ದಾರಿ ತೋರಿದಲ್ಲಿಗೆ ನಡೆದು, ಕೌಂಟರ್ನಲ್ಲಿ ಐವತ್ತು ಸಾವಿರ ರೂಪಾಯಿ ಕಟ್ಟಿ, ಎರಡು ಲಕ್ಷ ರೂಪಾಯಿಗಳನ್ನು ನಾಳಿದ್ದು ಬೆಳಗ್ಗೆ ಕಟ್ಟುವುದಾಗಿ ಗಡುವು ತೆಗೆದುಕೊಂಡೆವು. ಅಣ್ಣನಿಗೆ ಫೋನ್ ಮಾಡಿ, ಹೇಗಾದರೂ ಮಾಡಿ ನಾಳಿದ್ದು ಬೆಳಗ್ಗೆ ವೇಳೆಗೆ ಹಣ ಹೊಂದಿಸಿಕೊಂಡು ಬರಲು ಹೇಳಿದೆ. ಆ ರಾತ್ರಿಯನ್ನು ಆಸ್ಪತ್ರೆಯಲ್ಲೇ ಬೆಳಕಾಗಿಸಿದೆವು.
ಹೊಸ ದಿನದ ಬೆಳಕಿನಲ್ಲಿ ಆಸ್ಪತ್ರೆಯ ಪಡಸಾಲೆಯೂ ಹೊಸದಾಗಿ ಕಾಣಿಸತೊಡಗಿತು. ಅಲ್ಲಿನ ನೀರವತೆಯನ್ನು ಹೋಗಲಾಡಿಸಲು ಪ್ರಯತ್ನಿಸಿ ಸೋಲುತ್ತಿರುವಂತೆ ಹೋಗಿಬರುವ ಜನರ ಮಾತುಕತೆ ಭಾಸವಾಗತೊಡಗಿತು. ಗಣಪತಿಯ ಎದುರು ಯಾರೋ ಮೇಣದಬತ್ತಿ ಉರಿಸಿದರು. ಅಸ್ಪಷ್ಟ ಪ್ರಾರ್ಥನೆಗಳನ್ನು ಕಾಣಿಸಲು ಪ್ರಯತ್ನಿಸುವಂತೆ ಹರಡಿಕೊಳ್ಳುತ್ತಿದ್ದ ಊದುಬತ್ತಿಯ ಹೊಗೆ.
ರಿಸೆಪ್ಷನ್ನಲ್ಲಿದ್ದ ಹೆಣ್ಣುಮಗಳು ಮೈಕ್ನಲ್ಲಿ ಮಗಳ ಹೆಸರು ಕೂಗಿದಳು. ಮಗಳ ಹೆಸರು ಕಿವಿಗೆ ಬಿದ್ದಕೂಡಲೇ ಕುರ್ಚಿಯ ತುದಿಗೆ ಕೂತಿದ್ದವಳು ಧಡಕ್ಕನೆದ್ದು ರಿಸೆಪ್ಷನ್ನತ್ತ ದಾಪುಗಾಲುಗಳಲ್ಲಿ ನಡೆದಳು. ಅವಳನ್ನು ಹಿಂಬಾಲಿಸಿದೆ.
‘ಡಾಕ್ಟರ್ ಕರೀತಿದ್ದಾರೆ’ ಎಂದ ಹೆಣ್ಣುಮಗಳು, ದಾರಿಯನ್ನೂ ತೋರಿದಳು.
‘ಮಗುವಿಗೆ ಪ್ರಜ್ಞೆ ಬಂದಿದೆ. ನೀವು ಹೋಗಿ ನೋಡಬಹುದು’ ಎಂದ ವೈದ್ಯರು, ‘ಮಗು ಇನ್ನೂ ಅಪಾಯದಿಂದ ಚೇತರಿಸಿಕೊಂಡಿಲ್ಲ. ನೀವು ಅದಕ್ಕೆ ತೊಂದರೆ ಕೊಡಬಾರದು. ಗಲಾಟೆ ಮಾಡದೆ ಇರುವುದಾದರೆ ಮಗುವಿನ ಜೊತೆ ಅಮ್ಮ ಇರಬಹುದು,’ ಎಂದೂ ಹೇಳಿದರು.
ಬಿಳಿಯ ಬಾಗಿಲನ್ನು ನಿಧಾನಕ್ಕೆ ದಬ್ಬಿ ಒಳಗೆ ಹೋದೆವು. ದೊಡ್ಡದೊಂದು ಪಡಸಾಲೆಯಲ್ಲಿ ಹರಡಿಕೊಂಡಿದ್ದ ಮಂಚಗಳು. ಪ್ರತಿ ಮಂಚದ ಬಳಿಯೂ ಉಸಿರುಹೊಯ್ಯುವಂತೆ ಕಾಣಿಸುತ್ತಿದ್ದ ಮಿಷಿನುಗಳು. ಬಾಯಿಗೋ ಮೂಗಿಗೋ ಏನನ್ನೋ ತಗುಲಿಸಿಕೊಂಡು, ಕೈಗೆ ಸೂಜಿ ಚುಚ್ಚಿಸಿಕೊಂಡು ಮಲಗಿದ್ದ ಕಂದಮ್ಮಗಳನ್ನು ನೋಡುತ್ತ ಅಂಜುತ್ತ ನಡೆದವರು ಪಡಸಾಲೆಯ ಮೂಲೆಯಲ್ಲಿದ್ದ ಮಂಚ ತಲುಪಿದರು. ಕಂದಮ್ಮ ಕಣ್ಣು ತೆರೆದಿತ್ತು. ಅಮ್ಮ ಅಪ್ಪನನ್ನು ನೋಡಿ ಕಣ್ಣುಗಳು ಮಿನುಗಿದವು. ಹೆಂಡತಿಯೇನೋ ಮಗಳ ತಲೆಯ ಬಳಿ ನಿಂತು ಅಭಯ ನೀಡುವವಳಂತೆ ನೆತ್ತಿಯನ್ನು ನೇವರಿಸತೊಡಗಿದಳು. ಮಗಳನ್ನು ಆ ಸ್ಥಿತಿಯಲ್ಲಿ ನೋಡಿ ಏನು ಮಾತನಾಡುವುದೆಂದೇ ತೋಚಲಿಲ್ಲ. ಎಡಗೈ ತೋಳಿನಲ್ಲಿ ಕಣ್ಣೊರೆಸಿಕೊಳ್ಳುತ್ತ, ಇನ್ನೊಂದು ಕೈಯಲ್ಲಿ ಗ್ಲುಕೋಸ್ ನೀರು ಹರಿಯುತ್ತಿದ್ದ ಕೊಳವೆಯ ಸೂಜಿ ಚುಚ್ಚಿಸಿಕೊಂಡ ಎಳೆಯ ಕೈಯನ್ನು ನೇವರಿಸುತ್ತ, ‘ಎಲ್ಲ ಸರಿಹೋಗುತ್ತೆ ಮಗಳೇ. ಹೆದರಿಕೊಳ್ಳಬೇಡ’ ಎಂದು ಹೇಳುವ ವೇಳೆಗೆ ಗಂಟಲುಬ್ಬಿ ಮಾತು ಕಟ್ಟಿತು. ದಾದಿ ನಮ್ಮತ್ತಲೇ ನೋಡುತ್ತಿರುವುದನ್ನು ನೋಡಿ ಮೌನದಲ್ಲೇ ಮಾತನಾಡತೊಡಗಿದೆವು.
ಕೆಲವು ನಿಮಿಷಗಳಷ್ಟೇ. ದಾದಿಯ ಮಾತು ಅನುಸರಿಸಿ, ಹೆಂಡತಿಯನ್ನು ಮಗಳ ಬಳಿ ಬಿಟ್ಟು ಹೊರಗೆ ಬಂದೆ. ಅದೇ ಪಡಸಾಲೆ. ಅದೇ ಕುರ್ಚಿ. ಅದೇ ಗಣಪತಿ.
ಕೂರಲಾರದೆ ಎದ್ದವನು ಪಡಸಾಲೆಯ ಅಂಚಿನ ಗಾಜಿನ ಗೋಡೆಯ ಬಳಿಗೆ ಬಂದು ನಿಂತು ಹೊರಗಿನ ಊರನ್ನು ನೋಡತೊಡಗಿದೆ. ಎತ್ತೆತ್ತರದ ಕಟ್ಟಡಗಳು. ಅಲ್ಲಲ್ಲಿ ಮರಗಿಡಗಳ ಹಸಿರು. ಅಲ್ಲೆಲ್ಲೋ ದೂರದಲ್ಲಿ ಅಭಯಹಸ್ತದಂತೆ ಚಾಚಿಕೊಂಡಿದ್ದ ಮಸೀದಿಯೊಂದರ ಮಿನಾರು. ಮೊಬೈಲ್ ನೋಡಿದೆ. ದುಹರ್ ಸಮಯ. ದೂರದ ಮಿನಾರಿನಿಂದ ಹೊರಹೊಮ್ಮುವ ಪ್ರಾರ್ಥನೆಯ ಸಣ್ಣ ಅಲೆಯೊಂದು ಆಸ್ಪತ್ರೆಯ ಗಾಜಿನ ಹೊರಗೆ ತೇಲುತ್ತಿರಬಹುದೆ? ದೃಷ್ಟಿ ಬದಲಿಸಿ ಗಣಪತಿಯ ಕಡೆಗೆ ನೋಡಿದೆ. ಮತ್ತೊಮ್ಮೆ ಮಿನಾರನ್ನು ನೋಡಿದೆ. ಮಿನಾರು ಮತ್ತು ಗಣಪತಿಯ ನಡುವೆ ನಿಂತುಕೊಂಡು, ಕಣ್ಣು ಮುಚ್ಚಿಕೊಂಡೆ.
ಹಸಿರು ಬಣ್ಣದ ದುಪ್ಪಟಿಯೊಳಗೆ ಹುದುಗಿಕೊಂಡಿದ್ದ ಗುಬ್ಬಚ್ಚಿಯಂತಹ ಮಗಳು ಕಣ್ಣುತುಂಬಿದಳು. ಅವಳು ಹೊದ್ದಿದ್ದ ದುಪ್ಪಟ್ಟಿಯ ಹಸಿರು ಪಡಸಾಲೆಯನ್ನು ದಾಟಿ, ಆಸ್ಪತ್ರೆಯನ್ನೆಲ್ಲ ಆವರಿಸಿಕೊಂಡು, ಬಯಲಿಗೂ ಹರಡಿತು. ಹೃದಯ ಪ್ರಾರ್ಥಿಸತೊಡಗಿತು: ಗುಬ್ಬಚ್ಚಿಯ ಹೃದಯದ ಮಿಡಿತ ನಿಲ್ಲದಿರಲಿ ಪ್ರಭುವೇ...
ಹೃದಯಕ್ಕೆ ಮುಳ್ಳು ನೆಟ್ಟಿತ್ತು. ಗುಬ್ಬಚ್ಚಿಯನ್ನು ಸುತ್ತಿಕೊಂಡಿದ್ದ ಹಸಿರು ಚಾದರ ಬಿಳಿಯಾಗಿತ್ತು.
ಸುತ್ತಮುತ್ತ ಇದ್ದವರನ್ನು ಲೆಕ್ಕಿಸದೆ ತೆಕ್ಕೆಗೆ ಬಿದ್ದ ಹೆಂಡತಿ ಜೋರುದನಿಯಲ್ಲಿ ಅಳತೊಡಗಿದಳು. ನಾನೂ ಬಿಕ್ಕತೊಡಗಿದೆ.
ಋಣ ಇದ್ದುದಷ್ಟೇ.
ಮಗಳ ಕಥೆಯನ್ನು ಹೇಳಿ ಮುಗಿಸಿ ಮೌನವಾದ ಬಾಬುವಿಗೆ, ‘ಹೌದು, ಋಣ ಇದ್ದುದಷ್ಟೇ’ ಎಂದು ಅವನ ಮಾತನ್ನೇ ಹೇಳಿದ್ದೆ.
‘ನನ್ನ ಹೆಂಡತಿ ಈಗಲೂ ಅಳುವುದನ್ನು ನಿಲ್ಲಿಸಿಲ್ಲ ಸರ್’ ಎಂದ ಬಾಬು, ಬಣ್ಣದ ಡಬ್ಬಿಯನ್ನು ಎತ್ತಿಕೊಂಡು ಮತ್ತೊಂದು ಕಿಟಕಿಯ ಬಳಿಗೆ ಹೋದ.
ಅದಾದ ಮರುದಿನ, ಟೆರೇಸಿನ ಅಂಚುಗಳಲ್ಲಿ ಮೂಡಿದ್ದ ಕೂದಲೆಳೆ ಬಿರುಕುಗಳಿಗೆ ಅಂಟು ಬಳಿಯುತ್ತಿದ್ದ ಬಾಬು, ಒಮ್ಮಿಂದೊಮ್ಮೆಗೆ ಮೊಬೈಲ್ ತೆಗೆದು ತನ್ನ ಮಗಳ ಫೋಟೊ ಎದುರಿಗೆ ಹಿಡಿದಿದ್ದ. ನಗುಮುಖದ ಕಂದಮ್ಮನನ್ನು ನೋಡಿ ಮೊಬೈಲನ್ನು ಮರಳಿಸುವಾಗ ನತದೃಷ್ಟ ಅಪ್ಪನ ಮುಖ ನೋಡಿದೆ. ಮಗಳು ತೊಟ್ಟಿದ್ದ ಫ್ರಾಕ್ನ ಮೈತುಂಬಾ ಇದ್ದ ಹೂಗಳ ಬಣ್ಣಗಳು ಆ ಕ್ಷಣ ಬಾಬುವಿನ ಕಣ್ಣುಗಳಲ್ಲಿ ಮಿನುಗುತ್ತಿರುವಂತೆ ಕಾಣಿಸಿತು.
ಬಣ್ಣದ ಕೆಲಸ ಮುಗಿದ ಸಂಜೆ, ಹುಡುಗರೆಲ್ಲ ಹೊರಡುವ ಮುನ್ನ, ‘ಬಣ್ಣಗಳ ಸೆಲೆಕ್ಷನ್ ತುಂಬಾ ಚೆನ್ನಾಗಿದೆ ಸರ್. ಮನೆ ಎಷ್ಟು ಅದ್ಭುತವಾಗಿ ಕಾಣುತ್ತಿದೆ ನೋಡಿ,’ ಎಂದು ಬಾಬು ಹೇಳಿದ. ಪೆಚ್ಚಾಗಿ ನಕ್ಕೆ. ನನ್ನ ಕಣ್ಣಿಗೆ ಮನೆಯ ಬಣ್ಣಗಳೆಲ್ಲ ಬಾಬುವಿನ ಮಗಳ ಫ್ರಾಕ್ನ ಹೂಗಳಿಂದ ಬಸಿದುಕೊಂಡಂತೆ ಕಾಣಿಸುತ್ತಿರುವುದನ್ನು ಅವನಿಗೆ ಹೇಗೆ ಹೇಳುವುದು?
***
ಫೇಸ್ಬುಕ್ ತೆರೆದು ‘ಫ್ರೆಂಡ್ ರಿಕ್ವೆಸ್ಟ್’ ಪಟ್ಟಿಯಲ್ಲಿದ್ದ ಹೆಸರುಗಳ ಮೇಲೆ ಕಣ್ಣಾಡಿಸುತ್ತಿದ್ದವನು, ಇದ್ದಕ್ಕಿದ್ದಂತೆ ಎದುರಾದ ಬಾಬುವಿನ ಫೋಟೊ ನೋಡಿದಾಗ, ಎರಡು ವರ್ಷಗಳ ಹಿಂದಿನ ಕಥೆ ನೆನಪಾಯಿತು. ಅವನು ಕಳುಹಿಸಿದ ಫ್ರೆಂಡ್ ರಿಕ್ವೆಸ್ಟ್ ಅನ್ನು ಒಪ್ಪಿಕೊಳ್ಳುವುದೋ ಬೇಡವೋ ಎನ್ನುವ ಸಂದಿಗ್ಧದಲ್ಲಿ ಮನಸ್ಸು ಹೊಯ್ದಾಡತೊಡಗಿತು.
ಮಾಸ್ತಿಯವರಿಗೋ ಬೆಸಗರಹಳ್ಳಿವರಿಗೋ ಇಂಥ ಸಂದಿಗ್ಧವೇ ಒದಗುತ್ತಿರಲಿಲ್ಲ. ದುಶ್ಯಂತನ ವಾರಸುದಾರರಿಗಷ್ಟೇ ನೆನಪಿನ ಉಂಗುರದ ಹಂಗು.
ಬಾಬುವಿನ ಮಗಳ ಹೆಸರೇನಿರಬಹುದು ಎನ್ನುವ ಪ್ರಶ್ನೆಗೆ ಎರಡು ವರ್ಷಗಳ ನಂತರವಾದರೂ ಉತ್ತರ ಕಂಡುಕೊಳ್ಳಬೇಕೆನ್ನಿಸಿ, ಫೇಸ್ಬುಕ್ ಗ್ಯಾಲರಿಯಲ್ಲಿ ಬೆರಳಾಡಿಸತೊಡಗಿದೆ.
ಕೃತಿ : ಇಲ್ಲಿಂದ ಮುಂದೆಲ್ಲ ಕಥೆ
ಲೇಖಕ : ರಘುನಾಥ ಚ. ಹ.
ಬೆಲೆ : ರೂ 170
ಮುಖಪುಟ ವಿನ್ಯಾಸ : ಅಪಾರ
ಪ್ರಕಾಶನ: ಅಂಕಿತ ಪುಸ್ತಕ
ರಘುನಾಥ ಚ. ಹ.
ಪೂರ್ಣ ಹೆಸರು ರಘುನಾಥ ಚನ್ನಿಗರಾಯಪ್ಪ ಹರಳಾಪುರ. ಸಾಹಿತ್ಯ ಮತ್ತು ಸಿನಿಮಾ ಆಸಕ್ತಿಯ ಪ್ರಮುಖ ಸೆಲೆಗಳು. ಪ್ರಸ್ತುತ ‘ಪ್ರಜಾವಾಣಿ’ ಬಳಗದ ‘ಸುಧಾ’, ‘ಮಯೂರ’ ಪತ್ರಿಕೆಗಳ ಕಾರ್ಯ ನಿರ್ವಾಹಕ ಸಂಪಾದಕ. ‘ಹೊಳೆಯಲ್ಲಿ ಹರಿದ ನೀರು’ (ಕವಿತೆಗಳು); ‘ಹೊರಗೂ ಮಳೆ ಒಳಗೂ ಮಳೆ’ (ಕಥೆಗಳು); ‘ರಾಗಿಮುದ್ದೆ’, ‘ಬೆಳ್ಳಿತೊರೆ’ (ಪ್ರಬಂಧ ಸಂಕಲನಗಳು), ‘ಸತಿ ಸುಲೋಚನಾ’ (ಕನ್ನಡದ ಮೊದಲ ವಾಕ್ಚಿತ್ರದ ಕಥನ); ‘ಪುಟ್ಟಲಕ್ಷ್ಮಿ ಕಥೆಗಳು’, ‘ಜಾಮೂನು ಪದ್ಯಗಳು (ಮಕ್ಕಳ ಸಾಹಿತ್ಯ); ಹಾಗೂ ‘ಅಂಕಣ ವ್ಯಾಯೋಗ’ ಕೆಲವು ಪ್ರಕಟಿತ ಕೃತಿಗಳು. ವರ್ಧಮಾನ ಪ್ರಶಸ್ತಿ, ಕೆ. ಸಾಂಬಶಿವಪ್ಪ ಸ್ಮಾರಕ ಪ್ರಶಸ್ತಿ, ದ.ರಾ. ಬೇಂದ್ರೆ ಟ್ರಸ್ಟ್ನ ಗ್ರಂಥ ಬಹುಮಾನ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ‘ಅರಳು ಪ್ರಶಸ್ತಿ’, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ‘ಕರ್ನಾಟಕ ಬಾಲವಿಕಾಸ ಅಕಾಡೆಮಿ’ ಪ್ರಶಸ್ತಿ, ವೀಚಿ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ‘ಅರಗಿಣಿ ಪ್ರಶಸ್ತಿ’, ಕನ್ನಡ ಸಾಹಿತ್ಯ ಪರಿಷತ್ತಿನ `ಶ್ರೀವಿಜಯ ಪ್ರಶಸ್ತಿ’, ನರಹಳ್ಳಿ ಪ್ರತಿಷ್ಠಾನದ ‘ನರಹಳ್ಳಿ ಪ್ರಶಸ್ತಿ’, ಗದಗದ ‘ಡಾ. ತೋಂಟದ ಸಿದ್ಧಲಿಂಗಶ್ರೀ’ ಪ್ರಶಸ್ತಿಗಳು ಸೇರಿದಂತೆ ಹಲವು ಗೌರವ-ಪುರಸ್ಕಾರಗಳು ಸಂದಿವೆ.
ಕತೆ ನೋವಾದ ಹಲ್ಲಿಗೆ ನಾಲಿಗೆ ಹೊರಳಿದಂತಿದೆ...