ಕಾದಂಬರಿಕಾರ ಎಂ. ಆರ್. ದತ್ತಾತ್ರಿ ಅವರ 5ನೇ ಕಾದಂಬರಿ ಸರ್ಪಭ್ರಮೆ 25.2.2024ರಂದು ಅಂಕಿತ ಪುಸ್ತಕ ದಿಂದ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಕಾದಂಬರಿಯ ಆಯ್ದ ಭಾಗವನ್ನು ನೀವಿಲ್ಲಿ ಓದಬಹುದು.
ಚಿಕ್ಕಪ್ಪ ಎಂದೊಡನೆ ನನಗೆ ಸ್ಥಾಯಿಭಾವವೆಂಬಂತೆ ಸದಾ ನೆನಪಾಗುವುದು ಅವನೊಂದಿಗೆ ಚಿಕ್ಕಮಗಳೂರಿಗೆ ಮಾಡಿದ ಎರಡು ಪ್ರಯಾಣಗಳು.
ಮದುವೆಯಾದ ಹೊಸದರಲ್ಲಿ, ವಾರದಲ್ಲೇ ಇರಬೇಕು, ಚಿಕ್ಕಪ್ಪ ಒಮ್ಮೆ ಚಿಕ್ಕಮ್ಮ ಮತ್ತು ನನ್ನನ್ನು ಚಿಕ್ಕಮಗಳೂರಿಗೆ ಸಿನಿಮಾಕ್ಕೆ ಕರೆದುಕೊಂಡು ಹೋಗಿದ್ದ. ಚಿಕ್ಕಪ್ಪ ಬಿಳಿಪಂಚೆಯ ಮೇಲೆ ತೆಳು ಹಳದಿ ಅಂಗಿಯನ್ನು ಧರಿಸಿದ್ದ. ಚಿಕ್ಕಮ್ಮ ಹಸುರು ಸೀರೆಯುಟ್ಟಿದ್ದಳು. ಅವಳ ಕೆನ್ನೆಗಳ ಮೇಲೆ ಅರಿಶಿಣ ಮತ್ತು ಕುತ್ತಿಗೆಯಲ್ಲಿ ಮಂಗಳಸೂತ್ರ ಎದ್ದುಕಾಣುತ್ತಿತ್ತು. ತಲೆಗೆ ಹೆರಳುಕಟ್ಟಿ ಕನಕಾಂಬರ ಹೂವನ್ನು ಮುಡಿದಿದ್ದಳು. ಅವಳ ಮುಖದಲ್ಲಿನ್ನು ವಧು ಚೆಲುವು ಹೊರ ಚಿಮ್ಮುತ್ತಿತ್ತು. ಬಸ್ಸಿನಲ್ಲಿ ಇಬ್ಬರು ಕೂರುವ ಒಂದು ಸೀಟು ಮಾತ್ರ ಖಾಲಿಯಿತ್ತು. ಚಿಕ್ಕಮ್ಮ ಮತ್ತು ನನ್ನನ್ನು ಕೂರಿಸಿ ಚಿಕ್ಕಪ್ಪ ನಿಂತುಕೊಂಡ. ಅವನ ರೋಗವು ಆಗಲೇ ಪ್ರಾರಂಭವಾಗಿತ್ತು ಎನ್ನಿಸುತ್ತದೆ. ಮುಕ್ಕಾಲು ಗಂಟೆ ನಿಂತಿದ್ದಕ್ಕೆ ಚಿಕ್ಕಮಗಳೂರು ತಲುಪುವ ಹೊತ್ತಿಗೆ ಸುಸ್ತಾಗಿದ್ದ. ಅವನನ್ನು ಬಲ್ಲ ನಾನು ಎರಡು ಸಲ ಸೀಟು ಬಿಟ್ಟುಕೊಡಲು ಕೂಗಿದೆ. ಆದರೆ ಎರಡು ಸಲವೂ ಅವನು ಕೇಳಿಸಿಕೊಳ್ಳದವನಂತೆ ನಾಟಕವಾಡಿದ. ಚಿಕ್ಕಮ್ಮ ಕಿಟಕಿಯ ಪಕ್ಕ ಕೂತಳು. ಆಗಲೇ ಅವಳು ನನ್ನೊಂದಿಗೆ ಮುಕ್ತವಾಗಿ ಮಾತಾಡಿದ್ದು. ನಾನೇನು ಓದುತ್ತಿದ್ದೇನೆ, ನನ್ನ ಮಿತ್ರರು ಯಾರುಯಾರು, ಯಾವ ಪಾಠವನ್ನು ಕಲಿಯುವುದು ಇಷ್ಟ ಯಾವುದು ಕಷ್ಟ, ಯಾವ ಮೇಷ್ಟ್ರು ಹೊಡೆಯುತ್ತಾರೆ ಯಾರು ಪ್ರೀತಿಯಿಂದ ಕಾಣುತ್ತಾರೆ; ಎಷ್ಟೊಂದು ಪ್ರಶ್ನೆಗಳನ್ನು ಕೇಳಿದಳು! ಜ್ಯೋತಿ ಸೆಂಟ್ರಲ್ ಥಿಯೇಟರಿನಲ್ಲಿ ಸಿನಿಮಾ. ರಾಜಕುಮಾರ್ ಅಭಿನಯದ ‘ಬಾಳು ಬೆಳಗಿತು’. ಸಿನಿಮಾ ಕತೆ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಟಾಕೀಸಿನಲ್ಲಿ ಚಿಕ್ಕಮ್ಮನನ್ನು ಮಧ್ಯ ಕೂರಿಸಿ ಚಿಕ್ಕಪ್ಪ ಮತ್ತು ನಾನು ಆಕೆಯ ಅಕ್ಕಪಕ್ಕ ಕೂತೆವು. ವಾಪಸ್ಸು ಬರುವಾಗ ಬಸ್ಸಿನಲ್ಲಿ ಮೂರು ಮಂದಿ ಕೂರುವ ಸೀಟಿನಲ್ಲಿ ಟಾಕೀಸಿನಲ್ಲಿ ಕೂತಂತೆಯೇ ಚಿಕ್ಕಮ್ಮನನ್ನು ಮಧ್ಯ ಕೂರಿಸಿ ನಾನು ಚಿಕ್ಕಪ್ಪ ಆಕೆಯ ಅಕ್ಕಪಕ್ಕ ಕುಳಿತೆವು. ಆವತ್ತಿನ ಇಡೀ ಪಯಣದಲ್ಲಿ ಚಿಕ್ಕಪ್ಪ ಚಿಕ್ಕಮ್ಮನೊಂದಿಗೆ ಒಂದೇ ಒಂದು ಮಾತಾಡಿಲ್ಲ. ನನ್ನಂತಹ ಚಿಕ್ಕ ಹುಡುಗನಿಗೂ ಅವರಿಬ್ಬರ ನಡುವಿನ ಮಂಜಿನ ಗೋಡೆ ಎದ್ದು ಕಾಣುತಿತ್ತು. ಕಣ್ಣುಬಿಟ್ಟ ದಿನದಿಂದಲೇ ಚಿಕ್ಕಪ್ಪನನ್ನು ಬಲ್ಲ ನನಗೆ ಇದು ತೀರಾ ಆಶ್ಚರ್ಯದ್ದಾಗಿರಲಿಲ್ಲ. ಅವನು ಮನೆ ಮಂದಿಯೊಂದಿಗೇ ಅನೇಕ ಬಾರಿ ದಿನಗಟ್ಟಲೆ ಮಾತನಾಡಿದವನಲ್ಲ.
ಮತ್ತೊಂದು ನೆನಪಿನಲ್ಲುಳಿದ ಪ್ರಯಾಣವೆಂದರೆ ಚಿಕ್ಕಪ್ಪನನ್ನು ಎರಡು ದಿನಕ್ಕೆ ಚಿಕ್ಕಮಗಳೂರಿನ ಮಲ್ಲೇಗೌಡ ಜನರಲ್ ಆಸ್ಪತ್ರೆಗೆ ಸೇರಿಸಿ ಅಲ್ಲಿಂದ ವಾಪಸ್ಸು ಕರೆತಂದಿದ್ದು. ಅವನು ಆಸ್ಪತ್ರೆಗೆ ಹೋಗಲು ಎಂದೂ ಒಪ್ಪಿದವನಲ್ಲ. ಆದರೆ ಆ ಸಲ ಕೆಮ್ಮು ಕಫ ವಾಂತಿ ಆಯಾಸಗಳಿಂದ ಅದೆಷ್ಟು ಸುಸ್ತಾದನೆಂದರೆ ಪ್ರತಿರೋಧವಿಲ್ಲದೆ ಆಸ್ಪತ್ರೆಗೆ ಬಂದಿದ್ದ. ಅಲ್ಲಿ ಎರಡುದಿನಗಳು ಅವನನ್ನು ನೋಡಿಕೊಂಡಿದ್ದು ನಾನೊಬ್ಬನೇ. ಚಿಕ್ಕಪ್ಪ ಪೂರ್ತಿ ಚಿಕಿತ್ಸೆ ತೆಗೆದುಕೊಳ್ಳದೆ ಆಸ್ಪತ್ರೆಯಿಂದ ಓಡಿ ಬಂದ. “ಅಲ್ಲಿ ಸಾಯುವುದಕ್ಕಿಂತ ಮನೆಯಲ್ಲೇ ಸಾಯುತ್ತೇನೆ,” ಎಂದ. ಊರಿಗೆ ಬಸ್ಸು ಹತ್ತುವ ಮುನ್ನ ನನ್ನನ್ನು ಬಸ್ಸ್ಟ್ಯಾಂಡ್ ಹತ್ತಿರದ ಮಯೂರ ಹೋಟೆಲಿಗೆ ಕರೆದೊಯ್ದು ಮಸಾಲೆ ದೋಸೆ ಕೊಡಿಸಿದ. ನಾನು ನಿಜಕ್ಕೂ ಹೋಟೆಲಿನಲ್ಲಿ ತಿಂಡಿ ತಿಂದಿದ್ದು ಅದೇ ಮೊದಲು. ಚಿಕ್ಕಪ್ಪ ಹೊಟ್ಟೆ ತೊಳೆಸುತ್ತಿದೆ ಎಂದು ಏನನ್ನೂ ತಿನ್ನಲಿಲ್ಲ. ನನಗಷ್ಟೆ ಕೊಡಿಸಿದ.
ಆಸ್ಪತ್ರೆಯಿಂದ ಓಡಿಬಂದ ಕಾರಣ ಅಸಹಜವಾಗಿದೆ. ಚಿಕ್ಕಪ್ಪನ ಪಕ್ಕದ ಹಾಸಿಗೆಯಲ್ಲಿದ್ದವನು ಒಬ್ಬ ಇಪ್ಪತ್ತಾರು ವಯಸ್ಸಿನ ಗಂಡಸು. ಅವನು ತನ್ನೂರ ಕೆರೆಯಲ್ಲಿ ಈಜಲು ಧುಮುಕಿ ಚೂಪುಗಲ್ಲು ಹೊಡೆಸಿಕೊಂಡು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದ. ಅವನ ಎದೆಯಿಂದ ಹೊಟ್ಟೆಯತನಕ ಹೊಲಿಗೆ ಹಾಕಲಾಗಿತ್ತು. ಅವನು ರಾತ್ರಿಯೆಲ್ಲ ನರಳಿದ. ಕೋಣೆಯಲ್ಲಿ ಆರು ರೋಗಿಗಳು. ನನಗೆ ಬಾಗಿಲಿನಾಚೆಗೆ ಚಾಪೆ ಹಾಕಿಕೊಂಡು ಮಲಗಲು ಬಿಟ್ಟಿದ್ದರು. ಆದರೆ ಅವನ ನರಳುವಿಕೆ ಯಾರಿಗೆ ನಿದ್ರೆ ತಂದೀತು? ಅವನ ಹೆಂಡತಿ, ಇನ್ನೂ ಇಪ್ಪತ್ತರ ಹರಯದವಳು, ರಾತ್ರಿ ಎರಡು ಸಲ ಒಬ್ಬ ದಾದಿಯನ್ನು ಕರೆತಂದು ಅವನಿಗೆ ಇಂಜೆಕ್ಷನ್ ಕೊಡಿಸಿದಳು. ಹೊರಗೆ ನಾನು ಮಲಗಿದ್ದ ಜಾಗದಿಂದ ನಾಲ್ಕು ಹೆಜ್ಜೆಗಳಾಚೆ ಕುಳಿತು ಅವಳು ಮತ್ತು ಅವಳ ತಂದೆ ರಾತ್ರಿಯೆಲ್ಲ ಮಾತನಾಡಿದ್ದಾರೆ ಮತ್ತು ರೋದಿಸಿದ್ದಾರೆ. ಬೆಳಗ್ಗೆ ಆರುಗಂಟೆಯ ಹೊತ್ತಿಗೆ ಆ ಮನುಷ್ಯನ ನರಳಾಟವು ಕಡಿಮೆಯಾಯಿತು. ಅವನಿಗೆ ಪ್ರಜ್ಞೆಯೂ ಹೋಯಿತು. ಇಬ್ಬರು ನರ್ಸ್ ಮತ್ತು ಇಬ್ಬರು ಜವಾನರು ಅವನನ್ನು ಬೆಡ್ಶೀಟ್ ಸಮೇತ ಎತ್ತುಕೊಂಡು ಹೋದರು. ಅಷ್ಟೇ, ಅವನು ಮತ್ತೆ ವಾಪಸ್ಸು ಬರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಅವನ ಹಾಸಿಗೆಯನ್ನು ಶುದ್ಧ ಮಾಡಲು ಬಂದ ಕೆಲಸದವಳೊಬ್ಬಳು ಅವನು ತೀರಿಕೊಂಡ ವಿಚಾರವನ್ನು ಚಿಕ್ಕಪ್ಪನಿಗೆ ಹೇಳಿದಳು. ಇವನು ಕೇಳಿದನೋ ಅವಳೇ ಹೇಳಿದಳೋ ನನಗೆ ತಿಳಿಯದು. ರಾತ್ರಿ ನಿದ್ರೆಗೆಟ್ಟ ನಾನು ಅರೆಎಚ್ಚರದಲ್ಲಿದ್ದೆ. ಚಿಕ್ಕಪ್ಪನ ಮುಖ ಕಾಂತಿಹೀನವಾಗಿ ಬಾಡಿತು. ಮನೆಗೆ ಹೋಗೋಣ ಎಂದು ಆ ಘಳಿಗೆಯಲ್ಲಿ ನಿರ್ಧರಿಸಿದ. ಯಾರಿಗೂ ಹೇಳದೇ ಕೇಳದೇ ನಮ್ಮ ಚೀಲಗಳನ್ನು ಎತ್ತಿಕೊಂಡು ಇದ್ದರೀತಿಯಲ್ಲೇ ಆಸ್ಪತ್ರೆಯಿಂದಾಚೆಗೆ ಬಂದುಬಿಟ್ಟೆವು.
ಅವನನ್ನು ಕರೆದುಕೊಂಡು ಊರಿಗೆ ವಾಪಸ್ಸು ಬಂದ ಬಸ್ಸಿನ ಪ್ರಯಾಣವನ್ನು ನಾನು ಎಂದಿಗೂ ಮರೆಯಲಾರೆ. ಊರು ತಲುಪುವತನಕ ತಪಸ್ಸಿಗೆ ಕುಳಿತವನಂತೆ ಕಣ್ಣುಮುಚ್ಚಿ ಕುಳಿತಿದ್ದ. ಊರಲ್ಲಿ ಇಳಿದೊಡನೆ ಮನೆಯ ಕಡೆಗೆ ಹೋಗದೆ ನದಿಯ ಕಡೆಗೆ ಹೆಜ್ಜೆ ಹಾಕಿದ. ನನಗೆ ಅವನನ್ನು ಗಾಬರಿಯಲ್ಲಿ ಅನುಸರಿಸುವುದಷ್ಟೇ ಆಯಿತು. ಅಂಗಿ ಮತ್ತು ಪಂಚೆಯನ್ನು ಬಿಚ್ಚಿ ಕಲ್ಲಬಂಡೆಯ ಮೇಲಿಟ್ಟು ಚಡ್ಡಿಯಲ್ಲಿ ದುಡುಮ್ಮನೆ ನೀರಿಗೆ ನೆಗೆದ. ನಾನು ನಡುಗಿಹೋದೆ. ಜಿಟಿಜಿಟಿ ಮಳೆ ಬೇರೆ. ಅವನು ಒಳ್ಳೆಯ ಈಜುಗಾರ ಎನ್ನುವುದು ನನಗೆ ಗೊತ್ತು ಆದರೆ ಆಗಿನ್ನೂ ಆಸ್ಪತ್ರೆಯಿಂದ ಬಂದವನು; ದೇಹದಲ್ಲಿ ತೀರಾ ಶಕ್ತಿಯಿಲ್ಲದವನು. ನಾನೂ ನೀರಿಗೆ ಹಾರಿಕೊಂಡೆ. ನಾನೂ ಒಳ್ಳೆಯ ಈಜುಗಾರನೇ. ಅವನಿಗೆ ಕೈಸೋತರೆ ಎಂದು ಪಕ್ಕದಲ್ಲಿ ಈಜಿದರೆ ‘ದೂರ ಹೋಗು’ ಎಂದು ಜೋರು ಮಾಡಿ ಓಡಿಸಿದ. ಎಷ್ಟೋ ಹೊತ್ತು, ಚಳಿ ಮಳೆಯಲ್ಲಿ ಈಜಿ, ದಡಕ್ಕೆ ಬಂದು ಅದುರುವ ಬೊಗಸೆಯಲ್ಲಿ ಮೂರು ಅರ್ಘ್ಯಗಳನ್ನು ಕೊಟ್ಟು, ಮೇಲೆ ಬಂಡೆಯ ಮೇಲೆ ನಡುಗುತ್ತ ಕುಳಿತ. ಬ್ಯಾಗಿನಲ್ಲಿದ್ದ ಟವಲ್ಲನ್ನು ಅವನ ಬೆನ್ನಿಗೆ ಹೊದಿಸಿದೆ. ಅವನು ಸಿಟ್ಟು ಮಾಡಲಿಲ್ಲ. ಬೇಡ ಎನ್ನಲಿಲ್ಲ. ಎಷ್ಟೋ ಹೊತ್ತು ಸುಮ್ಮನೆ ಹಾಗೇ ಕುಳಿತಿದ್ದ. ನನಗೆ ಅವನನ್ನು ಮಾತನಾಡಿಸಲು ಅಂಜಿಕೆಯಾಗಿತ್ತು. ನಾನೂ ಹಾಗೆಯೇ ಕುಳಿತಿದ್ದೆ. ಆಮೇಲೆ ಇದ್ದಕ್ಕಿದ್ದಂತೆ, “ರಾಮು, ನಡಿ ನಾನು ಸಿದ್ಧ” ಎಂದ. ಆ ಮಾತಿನೊಂದಿಗೆ ಮನೆಗೆ ಹೋಗಲು ಸಿದ್ಧನಾದನೋ, ತನ್ನ ಕೊನೆಯ ಪಯಣಕ್ಕೋ? ಒಂದು ತಕ್ಷಣಕ್ಕೆ, ಇನ್ನೊಂದು ಮುಂದಿನ ಕೆಲವು ತಿಂಗಳುಗಳಿಗೆ; ಒಟ್ಟಿನಲ್ಲಿ ಎರಡೂ ನಡೆಯಿತು.
ಮನೆಗೆ ಬಂದಾಗ ಅವನ ಸ್ಥಿತಿ ನೋಡಿ ಎಲ್ಲರೂ ಗಾಬರಿಯಾದರು. ಅಜ್ಜಿ ಸೆರಗಿನಿಂದಲೇ ಅವನ ತಲೆ ಒರೆಸಲು ಹೋಗಿ ಅವನಿಂದ ಬೈಯ್ಯಿಸಿಕೊಂಡಳು. ಚಿಕ್ಕಮ್ಮ ಅಸಹಾಯಕ ಮೌನದಲ್ಲಿ ನೋಡುತ್ತಿದ್ದಳು. ಆದರೆ ನನಗೆ ಚಿಕ್ಕಪ್ಪ ಯಾವತ್ತಿಗಿಂತಲೂ ಅತಿ ಪ್ರಶಾಂತನಾಗಿ ಕಂಡ.
ಅವನು ರಾಮು ಅಂದಿದ್ದು ಯಾರನ್ನು? ನನ್ನನ್ನು ಎಂದೂ ಅವನು ಹಾಗೆ ಕರೆದವನಲ್ಲ. ಯಾರಾದರೂ ಆ ಹೆಸರಿನ ಸ್ನೇಹಿತರಿದ್ದರೇ? ಅಥವಾ, ತಾನೆಂದೂ ಕಾಣದ ತನ್ನಣ್ಣ ರಾಮಚಂದ್ರನನ್ನು ಉದ್ದೇಶಿಸಿದನೇ? ಅವನನ್ನು ನನ್ನಲ್ಲಿ ಕಂಡನೇ? ಬಾಯಿತಪ್ಪಿ ಕರೆದನೇ? ಜ್ವರದ ಸನ್ನಿಪಾತವೇ? ದೇವರಿಗೆ ಗೊತ್ತು. ಆದರೆ ಅವನ ಆ ಅನಿರೀಕ್ಷಿತ ಮಾತು ತನ್ನೆಲ್ಲ ಸಕಲ ಭಾವಗಳೊಂದಿಗೆ, ಅವನ ಗಂಟಲಿನ ಹಸಿಯೊಂದಿಗೆ ನನ್ನೊಳಗೆ ಇಳಿಯಿತು. ಅವನು ಆವರೆಗೂ ಹೇಳದ ಏನನ್ನೋ ನನಗೆ ಹೇಳಿತು. ಬಾಲ್ಯದ ಆವರಣವನ್ನು ಕಳಚಿ ನನ್ನನ್ನೊಬ್ಬ ಮನೆಯ ಸಬಲ ಸದಸ್ಯನನ್ನಾಗಿಸಿತು. ನನ್ನನ್ನು ದಿಟಕ್ಕೂ ರಾಮಚಂದ್ರ ಜೋಯಿಸರ ಮಗ ಮತ್ತು ನಾಗಪ್ಪ ಜೋಯಿಸ - ಚಂದ್ರಶೇಖರ ಜೋಯಿಸರ ವಂಶಸ್ಥನನ್ನಾಗಿಸಿತು. ಆ ಕ್ಷಣದಲ್ಲಿ ನನ್ನ ಬಾಳು ಅಧಿಕೃತವಾಯಿತು.
ಮಾರನೆಯ ದಿನ ಅವನಿಗೆ ತೀವ್ರವಾಗಿ ಜ್ವರ ಬಂತು.
ಪುಸ್ತಕದ ವಿವರಗಳು
ಕೃತಿ : ಸರ್ಪಭ್ರಮೆ
ಲೇಖಕರು : ಎಂ.ಆರ್.ದತ್ತಾತ್ರಿ
ಪ್ರಕಾಶನ : ಅಂಕಿತ ಪುಸ್ತಕ
ಪುಟ : 210
ಬೆಲೆ: ರೂ. 250
ಮುಖಪುಟ ಕಲೆ: ರೂಪಾ ದತ್ತಾತ್ರಿ
ಮುಖಪುಟ ಸಂಯೋಜನೆ: ಶಾಶ್ವತ್ ಹೆಗ್ಡೆ
ಖರೀದಿಗೆ ಸಂಪರ್ಕ : ಅಮೂಲ್ಯ ಪುಸ್ತಕ (9448676770)
ಎಂ.ಆರ್.ದತ್ತಾತ್ರಿ
ಕಾದಂಬರಿಕಾರ ಎಂ.ಆರ್.ದತ್ತಾತ್ರಿ ಹಿರಿಯ ಐಟಿ ವೃತ್ತಿಪರರು. ‘ದ್ವೀಪವ ಬಯಸಿ', ‘ಮಸುಕು ಬೆಟ್ಟದ ದಾರಿ’, ‘ತಾರಾಬಾಯಿಯ ಪತ್ರ’, ‘ಒಂದೊಂದು ತಲೆಗೂ ಒಂದೊಂದು ಬೆಲೆ’, ಪ್ರಕಟಿತ ಕಾದಂಬರಿಗಳು. ಅವರು ಮಾಸ್ತಿ ಪ್ರಶಸ್ತಿ (2019), ಪುಸ್ತಕ ಬ್ರಹ್ಮ ವರ್ಷದ ಅತ್ಯುತ್ತಮ ಕಾದಂಬರಿ (2023), ವರ್ಧಮಾನ ಪ್ರಶಸ್ತಿ (2023), ಮೊದಲಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಎರಡು ಕಾದಂಬರಿಗಳು ತೆಲುಗಿಗೆ ಅನುವಾದಗೊಂಡು ಉತ್ತಮ ಪ್ರತಿಕ್ರಿಯೆಯನ್ನು ಪಡೆದಿವೆ.
ಮುದ್ರಣಕ್ಕೆ/ಬಿಡುಗಡೆಗೆ ಸಿದ್ಧವಾಗುತ್ತಿರುವ ನಿಮ್ಮ ಕೃತಿಗಳ ಆಯ್ದ ಭಾಗಗಳ ಪ್ರಕಟಣೆಗಾಗಿ ಸಂಪರ್ಕಿಸಿ team@konaru.org