ಕಥೆಗಾರ, ಅನುವಾದಕ, ವಿಮರ್ಶಕ ಕೇಶವ ಮಳಗಿ ಅವರ ಹೊಸ ಕೃತಿ ಬಯಲ ಕಣಗಿಲೆ, ಅಮೂಲ್ಯ ಪುಸ್ತಕದಿಂದ ಪ್ರಕಟವಾಗಿದೆ. ಈ ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ.
ಹೂವಯ್ಯನ ಗೆಳೆಯರನು ಹುಡುಕಿ: ಆಧುನಿಕ ಓದಿನ ಪರಂಪರೆಯ ಹೆಜ್ಜೆಜಾಡನು ಅರಸುತ್ತ
ಮುಂದಣ ಕವಿಗಳೆನ್ನ ಕರುಣದ ಕಂದಗಳು
- ಅಲ್ಲಮ
ಕನ್ನಡದ ಕ್ಲಾಸಿಕ್ ಕೃತಿಗಳಲ್ಲಿ ಒಂದಾದ, ಕುವೆಂಪು ಅವರ ‘ಕಾನೂರು ಸುಬ್ಬಮ್ಮ ಹೆಗ್ಗಡಿತಿ’ (ಮೊದಲ ಪ್ರಕಟಣೆ: 1936-37) ನೀವು ಓದಿದ್ದರೆ ಹೂವಯ್ಯ ಮತ್ತು ಸೀತೆಯ ಪಾತ್ರಗಳು ನಿಮ್ಮ ಜೀವ ಹಿಂಡಿ ಕಾಡಿರುತ್ತವೆ. ಆದರ್ಶಗಳ ಪ್ರತಿರೂಪವಾದ ಹೂವಯ್ಯ, ‘ಸುಶಿಕ್ಷಿತತೆ, ಆಧ್ಯಾತ್ಮಿಕತೆ, ಮತ್ತು ಕ್ರಿಯಾಶೀಲತೆಯಿಂದ ಸುತ್ತಲಿನವರ ಬದುಕನ್ನು ಉತ್ತಮಗೊಳಿಸಲುʼ ಪ್ರಯತ್ನಿಸುವವನು. ಇನ್ನು ‘ಸುಸಂಸ್ಕೃತೆ, ರೂಪವತಿ ಹಾಗೂ ಭಾವಜೀವಿʼಯಾದ ಸೀತೆಗೆ ಹೂವಯ್ಯ ಭಾವನೆಂದರೆ ಪ್ರಾಣ. ಸೀತೆ ತನ್ನ ಪ್ರೇಮದ ಸುಗಂಧವನು ಹೊರಸೂಸುವ ಬಗೆಯನು ಅರಿಯದ ಕಾನನ ಸುಮ. ಆಕೆ ಮಾಡಬಹುದಾದುದೆಲ್ಲ ‘ನಾನು ಹೂವಯ್ಯ ಭಾವನನ್ನೇ ಮದುವೆಯಾಗುತ್ತೇನೆʼ ಎಂದು ಸೀಸದ ಕಡ್ಡಿಯಿಂದ ಗೋಡೆಯ ಮೇಲೆ ಬರೆಯುವುದಷ್ಟೇ. ಆದರೆ, ಹೂವಯ್ಯನ ವಿಚಾರಗಳು ಬೇರೆಯೇ ಇವೆ. ವಿದ್ಯೆ, ಕೀರ್ತಿ, ಪ್ರತಿಭೆಗಳನು ಹುಡುಕುತ್ತ, ತ್ಯಾಗಮಯ ಬದುಕಿನಿಂದ ಮಹಾಪುರುಷನಾಗಲು, ಪರಮ ಸಾರ್ಥಕತೆ ಸಾಧಿಸಲು, ಅಗತ್ಯವಿದ್ದರೆ ಬಲಿದಾನವನ್ನೂ ನೀಡಲು ಸಿದ್ಧವಿರುವ ಆತ ಹೆಗ್ಗನಸಿನ ತರುಣ.
ಸ್ವಾತಂತ್ರಪೂರ್ವ ಭಾರತದ ಎರಡು ಭಾವಲೋಕಗಳಲ್ಲಿ ಬದುಕುವಾಗಿನ ಸಂಕಟಗಳನ್ನು ಸೀತೆ ಮತ್ತು ಹೂವಯ್ಯ, ಪಾತ್ರಗಳು ಬಹು ಚೆನ್ನಾಗಿ ಪ್ರತಿನಿಧಿಸುತ್ತವೆ. ಸದಾ ಕನಸಿನ ಲೋಕದತ್ತ ಹೆಜ್ಜೆ ಹಾಕಬೇಕೆಂಬ ಅದಮ್ಯ ತುಡಿತದ ಪ್ರೇಮಕಾಮಗಳ ಭಾವಜೀವಿಗಳ ಜಗತ್ತು ಒಂದೆಡೆ ಇದ್ದರೆ, ಪ್ರತಿ ಹೆಜ್ಜೆಯಲ್ಲಿಯೂ ಅಂಥ ಕನಸನ್ನು ವಿಫಲಗೊಳಿಸಲು ಸನ್ನದ್ಧವಾಗಿರುವ ನಿರ್ದಯ ದುಷ್ಟ ಮನುಷ್ಯ ಲೋಕ ಮತ್ತೊಂದೆಡೆ ಬಾಯ್ದೆರೆದು ನಿಂತಿದೆ. ಆಧುನಿಕ ಶಿಕ್ಷಣದ ಅಗತ್ಯ, ಸಾಮಾಜಿಕ ಪರಿವರ್ತನೆ, ಹೊಸ ಸಮಾಜದ ಹುಟ್ಟಿಗೆ ಬೇಕಾಗುವ ಸಾಮಾಜಿಕ ಸಿದ್ಧತೆ, ಪಾಳೇಗಾರಿ ವ್ಯವಸ್ಥೆ, ಜಾತಿಪದ್ಧತಿಗಳು ಸೃಷ್ಟಿಸುವ ಜೈವಿಕ ಹಾಗೂ ಮತ್ತಿತರ ಹಿಂಸೆ; ಮೌಢ್ಯ, ಕ್ರೌರ್ಯ ಪ್ರಧಾನವಾದ ಸಮಾಜಗಳಲ್ಲಿ ನಳುಗುವ ಹೆಣ್ಣಿನ ಕನಸು - ಆಶೋತ್ತರಗಳು; ಶೂದ್ರ ಸಮುದಾಯಗಳ ಸಾಂಸ್ಕೃತಿಕ ಅಸ್ಮಿತೆ ಹಾಗೂ ಸ್ಥಿತ್ಯಂತರಗಳು ಇವು ಮತ್ತು ಇಂಥವೇ ಅನೇಕ ಪ್ರಮುಖ ಅಂಶಗಳನ್ನು ಕಾದಂಬರಿಯು ತನ್ನ ಕಥಾಪರಿಸರ ಮತ್ತು ಪಾತ್ರಗಳ ಮೂಲಕ ಕಟ್ಟಿಕೊಡುತ್ತದೆ.
ಹೂವಯ್ಯ, ಒಂದು ಅಭೂತಪೂರ್ವ ಕನಸಿಗೆ ತೆರೆದುಕೊಳ್ಳಲು ಕಾತರದಲಿ ಕಾದು ನಿಂತಿರುವ ಸಮಾಜದ ಜೀವಿ. ಮಲೆನಾಡಿನ ಕಾನನದ ಮಧ್ಯೆ ಇರುವ - ರಾಮತೀರ್ಥದ ಕಲ್ಲುಸಾರ, ಕಾನೂರು ಮುತ್ತಳ್ಳಿ, ಸೀತೆಮನೆ, ಅಗ್ರಹಾರ, ಕಳ್ಳಂಗಡಿ, ಕಾನುಬೈಲು, ಕತ್ತಲೆಗಿರಿಗಳಾಚೆ ಬೇರೊಂದು ಹೊಸಲೋಕ ಇನ್ನೇನು ಒಡಮೂಡಲಿರುವುದನ್ನು ಬಲ್ಲವನು. ‘ಪೊದೆಪೊದೆ ಕ್ರಾಪು’; ತೊಟ್ಟಿರುವ ‘ಖಾದಿ’ ಆತನ ವ್ಯಕ್ತಿತ್ವದ ಒಳಹೂರಣವನ್ನು ತೆರೆದಿಡಬಲ್ಲವು. ಹೂವಯ್ಯನಿಗೆ ರಾಷ್ಟ್ರೀಯತೆ, ದಾಸ್ಯದಿಂದ ಬಿಡುಗಡೆ, ಉನ್ನತ ಆದರ್ಶಗಳ ಆಧ್ಯಾತ್ಮಿಕ ಬದುಕು ಇತ್ಯಾದಿಗಳ ಹಿರಿಗನಸು. ಈ ಕನಸುಗಳು ದತ್ತವಾಗುತ್ತಿರುವುದು ಆಧುನಿಕ ಶಿಕ್ಷಣ ಮತ್ತು ಓದುಗಳಿಂದ. ಆತನ ಅರಿವಿನ ದೀಪವನು ಹೊತ್ತಿಸುತ್ತಿರುವುದು ಪುಸ್ತಕಗಳು. ಕಾದಂಬರಿಯ ಇಪ್ಪತ್ತನೆಯ ಅಧ್ಯಾಯದಲ್ಲಿ, ಹೂವಯ್ಯನ ಕೋರಿಕೆಯಂತೆ ಸೀತೆ ಆತನ ಟ್ರಂಕಿನಿಂದ ಭಾರವಾದ ಬಣ್ಣಬಣ್ಣದ ಹೊದಿಕೆಗಳಿರುವ ಇಂಗ್ಲಿಷ್ ಪುಸ್ತಕಗಳನ್ನು ಹೊತ್ತು ತಂದು, ಹೆತ್ತ ತಾಯಿ ತನ್ನ ಮಗುವನ್ನು ಗಂಡನಿಗೆ ನೀಡುವಂತೆ ಒಂದು ವಿಧದ ಧನ್ಯತೆ ಮತ್ತು ಅರ್ಪಣಾಭಾವದಿಂದ ಕೊಡುತ್ತಾಳೆ. ಹೂವಯ್ಯ, ಸೀತೆಗೆ ಚರಿತ್ರೆಯ ಪುಸ್ತಕ ಕೈಗೆ ಕೊಟ್ಟು ಚಿತ್ರಗಳನ್ನು ನೋಡುತ್ತಿರು, ಎಂದು ಹೇಳಿ, ತಾನು ಕವಿತೆಗಳ ಪುಸ್ತಕ ಓದುವುದರಲ್ಲಿ ಲೀನವಾಗುತ್ತಾನೆ.
***
ಸ್ವಾತಂತ್ರ್ಯಪೂರ್ವದ ಹೂವಯ್ಯನ ತಲೆಮಾರಿನ ಆಧುನಿಕ ಶಿಕ್ಷಣ ಪಡೆದ ತರುಣರಿಗೆಲ್ಲ ಮುಂಬೆಳಕಿನಲಿ ಹೆಜ್ಜೆ ಹಾಕಿ ಎಲ್ಲವನೂ ಹೊಸ ಪ್ರಕಾಶದಲಿ ನೋಡುವ ಬಯಕೆ. ಆತನ ಕನಸುಗಳಿಗೆ ರೆಕ್ಕೆಗಳ ಬಲವನ್ನು ನೀಡುತ್ತಿರುವವರು ಅಸಂಖ್ಯರು. ಒಂದೆಡೆ, ರಾಷ್ಟ್ರೀಯ ಆಂದೋಲನದ ಭಾವುಕ ಪರಿಸರ, ಶಿಕ್ಷಣ, ಓದುಗಳಿದ್ದರೆ ಇನ್ನೊಂದೆಡೆ, ಆತ ಹುಟ್ಟಿ ಬೆಳೆದ ಪರಿಸರ ಮತ್ತು ಆತನ ಜನವಿದ್ದಾರೆ. ಹೂವಯ್ಯ ಈ ಕಾನನದ ನಡುವೆ ತನ್ನೊಳ - ಹೊರಗಿನ ಸಂಕಟಗಳಲ್ಲಿ ಸಿಲುಕಿರುವಾಗಲೇ ನಾಡಿನ ಇನ್ನೊಂದು ಮೂಲೆಯಲಿ ‘ಧನಿಯರ ಸತ್ಯನಾರಾಯಣ’ ಕಥೆಯ ದೂಮ, ಬೂದ ಮತ್ತು ತುಕ್ರಿಯರು, ‘ಚೋಮನ ದುಡಿ’ಯ ಚೋಮ ಮತ್ತು ಅವನ ಸಂತಾನ; ‘ಮೋಚಿ’ ಕಥೆಯ ಮುಖ್ಯಪಾತ್ರ ತಮ್ಮ ಬಿಡುಗಡೆಗಾಗಿ ಹತಾಶೆಯಲಿ ಹಾತೊರೆಯುತ್ತಿದ್ದಾರೆ. ಆದರೆ, ಅವರ ಸಂತಾಪದ ಪರಿ ಮಾತ್ರ ಬೇರೆ.
***
ರಾಷ್ಟ್ರೀಯ ನೆಲೆಯಲ್ಲಿ ಈ ಬಗೆಯ ಹೊಸ ಸಮಾಜದ ಕನಸು ಕಂಡವರು ಸಾವಿರ ಲಕ್ಷ ಸಂಖ್ಯೆಯ ಜನರು. ರವೀಂದ್ರನಾಥ ಠಾಕೂರ, ಮೋಹನದಾಸ ಕರಮಚಂದ ಗಾಂಧಿ, ಸುಭಾಸ ಚಂದ್ರ ಬೋಸ್, ನರೇಂದ್ರ ದೇವ, ಶ್ರೀನಿವಾಸ ರಾಮಾನುಜ, ಸಿ.ವಿ. ರಾಮನ್, ನಂದಲಾಲ ಬೋಸ್, ಜವಹರ ಲಾಲ್ ನೆಹರು, ಬಿ.ಆರ್. ಅಂಬೇಡ್ಕರ್, ಜಗದೀಶ ಚಂದ್ರ ಬೋಸ್, ರಾಜಾ ರಾಮ ಮೋಹನ್ ರಾಯ್, ಹರ್ಡೇಕರ್ ಮಂಜಪ್ಪ, ದ.ರಾ. ಬೇಂದ್ರೆ, ಗಳಗನಾಥ, ಕೆರೂರ ವಾಸುದೇವಾಚಾರ್ಯ, ಶ್ರೀಕಂಠೇಶ ಗೌಡ, ಆಲೂರು ವೆಂಕಟರಾಯರು, ಶಿವರಾಮ ಕಾರಂತ, ಮಂಜೇಶ್ವರ ಗೋವಿಂದ ಪೈ, ಎಚ್.ವಿ. ಸಾವಿತ್ರಮ್ಮ, ಗಿರಿಬಾಲೆ, ತಿರುಮಲಾಂಬ, ಕುದ್ಮುಲ್ ರಂಗರಾವ್, ಕೊರಡ್ಕಲ್ ಶ್ರೀನಿವಾಸ ರಾವ್, ಕಮಲಾದೇವಿ ಚಟ್ಟೋಪಾಧ್ಯಾಯ ಇಂಥ ಅಸಂಖ್ಯರು ಒಬ್ಬರಿಂದೊಬ್ಬರು ಪ್ರಭಾವಗೊಳ್ಳುತ್ತ, ಉಳಿದವರನ್ನು ಹುರಿದುಂಬಿಸುತ್ತ ಕನಸಿನ ಸಮಾಜವನು ನಿರ್ಮಿಸುವ ಕಾತರದಲ್ಲಿದ್ದರು.
ಕಾನೂರಿನ ಹೂವಯ್ಯನ ಪಾತ್ರವನು ಸೃಷ್ಟಿಸಿದ್ದ ತರುಣ ಲೇಖಕ ಕೂಡ ಈ ಮಹಾಕನಸಿನ ಪಾಲುದಾರನೇ. ತನ್ನ ಇಪ್ಪತೊಂದನೆಯ ವಯಸ್ಸಿಗೆಲ್ಲ ಸಾಮಾಜಿಕ ಪರಿವರ್ತನೆ, ಅನಿಷ್ಟಗಳ ನಿರ್ಮೂಲನೆ, ಎಲ್ಲ ತತ್ತ್ವ, ಮತಗಳ ಹೊಟ್ಟನು ಬಾನಿಗೆ ತೂರಿ, ಸಮಾನತೆಯ ಕನಸು ಕಂಡ ಯುವಕನ ಕ್ರಾಂತಿಯ ಕನಸಿನ ಬೀಜಗಳು ಐದಾರು ವರ್ಷಗಳ ಅಂತರದಲ್ಲಿ ಪ್ರಕಟಿಸಲಿದ್ದ ‘ಪಾಂಚಜನ್ಯ’ (1933)ದಲ್ಲಿ ಮೊಳಗಲಿದ್ದವು. ಅದಕ್ಕೆ ಪೂರ್ವ ಪೀಠಿಕೆಯೋ ಎಂಬಂತೆ ರಾಮಕೃಷ್ಣ ಪರಮಹಂಸರ ವಿಚಾರಗಳಿಂದ ತುಳುಕುತ್ತಿದ್ದ, ವಿವೇಕಾನಂದರ ನುಡಿಗಳಿಂದ ಕಲರವಗೊಂಡಿದ್ದ ಕಲ್ಕತ್ತೆಯ ಬೇಲೂರು ಮಠದಲ್ಲಿ ಹೊಸ ಬದುಕಿನ ದೀಕ್ಷೆಯನ್ನೂ ತೊಟ್ಟಿದ್ದ. ಕಾನೂರಿನ ‘ಹೂವಯ್ಯ’ ಈ ಯುವಲೇಖಕನ ಕನಸು, ಮನೋಕಾಮನೆಗಳು ಹರಳುಗಟ್ಟಿದ ವಜ್ರದ ಹೊಳಪಿನಂತಿದ್ದ.
***
ಹೌದು, ಈ ನೆಲದ ನವೋದಯದ ಮುಂಬೆಳಗಿನಲಿ ಹೊಳೆದ, ದೇಹ-ಮನಸ್ಸುಗಳಿಗೆ ನವಿರಾದ ಬೆಚ್ಚಗಿನ ಭಾವವನು ಒದಗಿಸುವಂಥ ಬೆಳಕನು ನೀಡಬಲ್ಲ ಮೇಲಿನ ‘ಅಪೌರುಷೇಯ’ರಂತೆ ನಾವೂ ಅಭಿಜಾತ ಮತ್ತಿತರ ಪರಂಪರೆಗಳನ್ನು ಹಸ್ತಾಂತರಿಸಬಲ್ಲ ಶಿಕ್ಷಣಕ್ಕೆ ಮತ್ತು ಓದಿಗೆ ಏಕೆ ತೆರೆದುಕೊಳ್ಳಬೇಕು? ಉತ್ತರ ಸರಳವಾಗಿದೆ: ಇಂಥ ಅಭಿಜಾತ ಕೃತಿಗಳು ಎಲ್ಲ ಕಾಲದಲ್ಲೂ ಒಳಿತು-ಕೆಡಕುಗಳನ್ನು ತಿಳಿಸಿ ಎಚ್ಚರಿಸುವ ಗುಣಗಳಿಂದ ತುಳುಕುತ್ತಿವೆ. ಇವು ಮುದುರಿ ಕಮಟುಗಟ್ಟಿದ ಹಳೆಯ ಚೀಲದಂತಾದ ನಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸಿ ಒಳಗಡಗಿದ ವಿನಾಕಾರಣ ದ್ವೇಷಾಸೂಯೆ, ಸೇಡಿನ ಮನೋಭಾವ, ಎದುರಿಗಿರುವವನ್ನು ನಾಶಪಡಿಸಿಯೇ ಸಿದ್ಧವೆಂಬ ಉನ್ಮಾದದ ಕಸಕಡ್ಡಿಯನ್ನು ಕರಗಿಸಿ ನಮ್ಮನ್ನು ನಮ್ಯರನ್ನಾಗಿಸುತ್ತವೆ. ಯಾರೋ ಹೇಳಿದ ಮಾತುಗಳನು ಕೇಳುತ್ತ ‘ಪರಪುಟ್ಟ’ರಂತೆ ಜೀವಿಸುವ ನಮ್ಮನ್ನು ಹಕ್ಕಿಗಳಂತೆ ಸ್ವತಂತ್ರಗೊಳಿಸಿ ಮುಕ್ತತೆಯ ಬಗೆ ಬಾನಿಗೆ ಹಾರಿಬಿಡುವ ಸಹಜ ಸಾಮರ್ಥ್ಯವನ್ನು ಹೊಂದಿರುತ್ತವೆ.
***
ಅಂದಿನ ತರುಣರಾಗಿದ್ದ, ಮೇಲೆ ಹೆಸರಿಸಿದವರೆಲ್ಲ ತಮ್ಮ ಭವಿಷ್ಯದ ಸಪ್ನಸದೃಶ್ಯ ರಾಷ್ಟ್ರವನ್ನು - ಆದರ್ಶಮಯ ಸ್ವಾವಲಂಬಿ ಜೀವನ; ಅನಿಷ್ಟತೆ, ತರತಮಗಳಿಲ್ಲದ ನಿಷ್ಕಲ್ಮಶ ಸಮಾಜ, ಆಧ್ಯಾತ್ಮಿಕ ಉನ್ನತಿ ಸಾಧಿಸಿದ ಅಂತರಂಗ, ಸದಾ ಪರರ ಒಳಿತು ಬಯಸುವ ನಿಸ್ವಾರ್ಥ ಸೇವಾ ಮನೋಭಾವಗಳಂಥ ಮೌಲ್ಯಗಳ ತಳಹದಿಯ ಮೇಲೆ ಕಟ್ಟಲು ಬಯಸಿದ್ದರು. ಈ ಅಡಿಪಾಯಕ್ಕೆ ಉಳಿದೆಲ್ಲ ಸಂಸ್ಕಾರಗಳೊಂದಿಗೆ, ಆಧುನಿಕ ಶಿಕ್ಷಣ ಮತ್ತು ಓದುಗಳು ಬಹುಮುಖ್ಯ ಮೂಲಸಾಮಗ್ರಿಗಳೆಂದು ಬಗೆದಿದ್ದರು. ವಿಶಾಲವಾದ ಓದು ಅವರ ತಿಳುವಳಿಕೆಯನ್ನು ಹಿಗ್ಗಿಸಿ, ಅನುಕಂಪಲೇಪಿತ ಉದಾರ ಚಿಂತನೆಯನ್ನು ಬಿತ್ತಿದ್ದವು. ಇವರಲ್ಲಿ ಕೆಲವರು ವಿದೇಶಗಳಲ್ಲಿ ಕಲಿತು ಅಲ್ಲಿನ ಶಿಕ್ಷಣ, ಹೊಸ, ಬಗೆಯ ಓದು, ಜನಜೀವನ, ತಾತ್ತ್ವಿಕತೆಗಳಿಂದ ಪ್ರಭಾವಿತರಾಗಿದ್ದರು.
ಮುಕ್ಕಿಲ್ಲದ ಅಪ್ಪಟ ಒಡವೆಗಳನ್ನು ಮಾಡಲು, ತಮ್ಮ ಕನಸುಗಳಿಗೆ ಎರಕ ಹೊಯ್ಯಲು ತಾಯಿನಾಡೇ ಕರ್ತಾರನ ಕಮ್ಮಟವೆಂದು ನಂಬಿ ತಾವು ಪಡೆದುದೆಲ್ಲವನ್ನೂ ಮನಸ್ಸಿನ ಕನಸಿನಲ್ಲಿ ಬೈಚಿಟ್ಟುಕೊಂಡು ಮರಳಿ ಹುಟ್ಟಿದ ನೆಲಕ್ಕೆ ಬಂದಿದ್ದರು. ಸ್ವಾತಂತ್ರ್ಯಪೂರ್ವದ ಈ ಕನಸಿಗರು ತಾವು ಹುಟ್ಟಿದ ನೆಲಕೆ ಸಿರಿಯನು ತರುವ ಗುಟ್ಟನು ಅರಿಯಲೆಂದೇ ವಿದೇಶಿ ಶಿಕ್ಷಣಕೆ ಮಾರು ಹೋದವರು. ಬೆಳಗಿನ ಮೊದಲು ಮೂಡುವ ನಸುಬೆಳಕಿನಂಥ ಈ ಬಗೆಯ ಪರಿಸರದಿಂದ ಪ್ರಭಾವಿತರಾದ ಸಾಮಾನ್ಯ ಅಕ್ಷರಸ್ಥರು ರಾಷ್ಟ್ರೀಯ ಆಂದೋಲನದ ಭಾಗವೆಂಬಂತೆ ವೃತ್ತಪತ್ರಿಕೆ ಓದು, ರಾಜಕೀಯ ಕರಪತ್ರಗಳ ಚರ್ಚೆ, ಬಂಧು-ಬಳಗದೊಂದಿಗೆ ಪತ್ರ ವಿನಿಮಯದಂತಹ ಅಕ್ಷರಲೋಕದ ವಿಸ್ಮಯದ ಸುಳಿಗೆ ಸಿಲುಕಿ ಹೊಸ ಜಾಗೃತ ಸಮಾಜ ಸೃಷ್ಟಿಸತೊಡಗಿದರು. ಪ್ರಭಾತಫೇರಿಯಲಿ ನೆಲದ ಸಿರಿಯನು ಸ್ಮರಿಸುವ ಹಾಡು, ಸ್ವಾಭಿಮಾನದ ಸಂಕೇತವಾಗಿ ತೊಟ್ಟ ಖಾದಿ, ಸಾಮರಸ್ಯದ ಬಾಳ್ವೆಯೊಂದಿಗೆ ಕನಿಷ್ಠ ಅಕ್ಷರವಂತರಿರುವ ಹಳ್ಳಿಗಳಲ್ಲಿ ಗ್ರಾಮ ಗ್ರಂಥಾಲಯಗಳು ಅಡಿಯಿಟ್ಟುದೂ ಈ ಕಾಲದಲ್ಲಿಯೇ. ತನ್ನ ಸೀಮಿತಾರ್ಥದಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಭಾವನೆಗಳನ್ನು ಅಭಿವ್ಯಕ್ತಿಸತೊಡಗಿದ್ದೂ ಇದೇ ಕಾಲದಲ್ಲಿಯೇ.
ರಾಷ್ಟ್ರೀಯ ಆಂದೋಲನವು ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧವಾಗಿದ್ದರೆ, ಮಹಿಳೆಯರು ಕುಟುಂಬ, ಸಮಾಜ, ಮೌಢ್ಯಗಳನ್ನು ಗೆದ್ದು, ಆನಂತರ ವಿಶಾಲನೆಲೆಯ ನಾಡ ಬಿಡುಗಡೆಯ ಚಳವಳಿಗೆ ಸೇರಿಕೊಳ್ಳಬೇಕಿತ್ತು. ಅಂದರೆ ಸ್ತ್ರೀ ಅಸ್ಮಿತೆಯ ಹೋರಾಟವು ಬಹುಸ್ತರದ, ಬಹು ಅಂಶಗಳನ್ನು ಒಳಗೊಂಡಿತ್ತು. ಇವೆಲ್ಲವನ್ನೂ ದಾಟಿದರಷ್ಟೇ ಅವರಿಗೆ ನಿಜವಾದ ಮುಕ್ತಿ ದೊರಕಲಿತ್ತು. ಇದ್ದರೂ, ಆಧುನಿಕ ಶಿಕ್ಷಣ ಒಂದೆಡೆ ವಿಶಾಲವ್ಯಾಪ್ತಿಯ ಸಾಮಾಜಿಕ ಸಮಾನತೆ ಒದಗಿಸಿದರೆ, ಓದು ಅರಿವಿನ ವಿಸ್ತಾರ ಹೆಚ್ಚಿಸಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪರಿಚಯಿಸುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಆವರೆಗೂ ಪಾಲ್ಗೊಳ್ಳದ ಸಮುದಾಯಗಳು ಇದ್ದವು ಎನ್ನುವುದು ಅತ್ಯಂತ ಮಹತ್ವದ ವಿಷಯವಾಗಿದೆ. ಈ ಅರ್ಥದಲ್ಲಿಯೇ ಯಾವುದೇ ಕಾಲದಲ್ಲಿ ವ್ಯಕ್ತಿಯೊಬ್ಬ ಕೈಗೊಳ್ಳುವ ವೈಯಕ್ತಿಕ ನೆಲೆಯ ಓದು ಆತನನ್ನು ಎಲ್ಲ ಅನಿರ್ಬಂಧಿತ ಪ್ರಜಾಸತ್ತಾತ್ಮಕ ಕ್ರಿಯೆಗೆ ಒಳಪಡಿಸುತ್ತದೆ. ಓದಿನ ನಿಜವಾದ ಆಶಯವೇ ಎಲ್ಲ ಬಗೆಯ ಪೂರ್ವಗ್ರಹಗಳಿಂದ ಮುಕ್ತವಾಗಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಒಳಗೊಳ್ಳುವುದಾಗಿದೆ.
***
ಕಾನೂರಿನ ಹೂವಯ್ಯ, ‘ಗೋರಾ’ ಕಾದಂಬರಿಯ ಗೌರಮೋಹನ ಮತ್ತು ವಿನಯ (ರವೀಂದ್ರನಾಥ ಠಾಕೂರ, ಮೊದಲ ಮುದ್ರಣ, 1907) ಸ್ವಾತಂತ್ರ್ಯದ ನಂತರ ತಮ್ಮ ವಾರಸುದಾರಿಕೆಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಿದರು. ವಾರಸುದಾರಿಕೆಯ ಹಸ್ತಾಂತರ ಪಡೆದ ಕಥಾಪಾತ್ರಗಳಾದರೂ ಆಧುನಿಕ ಶಿಕ್ಷಣ, ವಿದೇಶ ವ್ಯಾಸಂಗ, ಹೊಸ ಯುಗಧರ್ಮದ ಧ್ಯೇಯವಾಗಿದ್ದ ಜ್ಞಾನದ ಪ್ರತಿರೂಪವೇ ಆಗಿದ್ದ ಪುಸ್ತಕಗಳ ಓದಿನಲ್ಲಿ ಕಳೆದು ಹೋದವರೇ. ಮೊದಲ ತಲೆಮಾರಿನವರಂತೆಯೇ ಎರಡು ವಿಭಿನ್ನಾಭಿರುಚಿಗಳ ಲೋಕಗಳ ಮಧ್ಯೆ ಬದುಕುವಾಗಿನ ತಲ್ಲಣ, ಸಂಕಟ, ನೈತಿಕ ಸಂಘರ್ಷಗಳ ನಡುವೆ ಸಿಲುಕಿ ಬಿಡುಗಡೆಯ ದಾರಿಯನು ಹುಡುಕುತಿದ್ದಂಥವರೇ. ಆದರೆ, ಈ ಮಹಾಶಯರ ಬಿಡುಗಡೆಯ ಅಗತ್ಯತೆ, ಮುಕ್ತಿಮಾರ್ಗಗಳು ಮಾತ್ರ ಸಂಪೂರ್ಣ ಬೇರೆಯಾಗಿದ್ದವು. ಉತ್ಕಟ ಭಾವುಕತೆ, ಕನಸು, ಪ್ರೇಮಮಯ ಜೀವನ, ಆದರ್ಶ, ಪರಹಿತ, ಐಬುಗಳಿಲ್ಲದ ಸುಂದರ ಸಮಾಜಗಳ ಸೃಷ್ಟಿ ಮುಕ್ತಿಯನು ನೀಡಬಲ್ಲವು ಎಂಬುದು ಮೊದಲ ತಲೆಮಾರಿನ ಕನಸಿಗರ ನಂಬಿಕೆಯಾಗಿದ್ದರೆ, ಎರಡನೆಯ ತಲೆಮಾರಿನ ವಾರಸುದಾರರಿಗೆ ಹೊರಲೋಕಕ್ಕಿಂತ ಒಳಲೋಕವೇ ಮುಖ್ಯವಾಗಿತ್ತು. ಭಾವದಿಂದಲ್ಲದೆ ಬುದ್ಧಿ, ಪ್ರಜ್ಞೆಯ ಮೂಲಕ ಬದುಕು ನಿರುಕಿಸಬೇಕು, ಭಾವನಿಷ್ಠೆಗಿಂತ ವಸ್ತುನಿಷ್ಠತೆಗೆ ಆದ್ಯತೆ ನೀಡಬೇಕು. ಜಗದ ಗೊಡವೆಗಿಂತ ನನ್ನ ಅಸ್ತಿತ್ವವೇ ಮುಖ್ಯವೆಂಬುದು ಇವರ ನಂಬುಗೆಯಾಗಿತ್ತು.
ಯು.ಆರ್. ಅನಂತಮೂರ್ತಿಯವರ ‘ಕ್ಲಿಪ್ಜಾಯಿಂಟ್’ನ ಕೇಶವ, ಶಾಂತಿನಾಥ ದೇಸಾಯಿಯವರ ‘ಕ್ಷಿತಿಜ’ದ ಮಂದಾಕಿನಿ ಮತ್ತು ‘ಮುಕ್ತಿ’ ಕಾದಂಬರಿಯ ಗೌರೀಶ, ಯಶವಂತ ಚಿತ್ತಾಲರ ‘ಶಿಕಾರಿ’ಯ ನಾಗಪ್ಪ, ಎ.ಕೆ.ರಾಮಾನುಜನ್ರ ‘ಅಣ್ಣಯ್ಯನ ಮಾನವಶಾಸ್ತ್ರ’ ಪಾತ್ರಧಾರಿಗಳ ಅತಿ ಆತ್ಮಾವಲೋಕನ ವರಸೆ ಹಲವೊಮ್ಮೆ ಸ್ವಯಂ ಮತ್ತು ಸಾಮುದಾಯಿಕ ಹಿಂಸೆ ಸೃಷ್ಟಿಸುತ್ತಿರುವಂತೆ ಕಂಡರೆ ಅಚ್ಚರಿಯೇನಿಲ್ಲ, ಅದು ಆ ಯುಗಧರ್ಮದ ಸಿದ್ಧಾಂತಗಳ ಫಲ. ಬದುಕಿನ ನಿರರ್ಥಕತೆಯನ್ನು ಸಿಗಿದು, ಬಗೆಯುವುದೇ ಇವರಿಗೆ ಮೆಚ್ಚು. ಆದಾಗ್ಯೂ, ಇವರನ್ನು ರೂಪಿಸಿದ್ದು ಕೂಡ ಆಧುನಿಕ ಶಿಕ್ಷಣ ಮತ್ತು ಅಪಾರವಾದ ಓದು ಎಂಬುದನ್ನು ಮರೆಯುವಂತಿಲ್ಲ. ಗಮನಿಸಬೇಕಾದುದೆಂದರೆ, ಮೌಲ್ಯಗಳ ಆಯ್ಕೆಯಲ್ಲಿ ಆಗಿರುವ ಪಲ್ಲಟ.
ಕಾನೂರಿನ ಹೂವಯ್ಯನ, ಗೋರಾ ಕಾದಂಬರಿಯ ವಿನಯ ಮತ್ತು ಗೌರಮೋಹನರ ಉದಾರವಾದಿ - ಸಮಾಜವಾದಿ ಆದರ್ಶಗಳು ಮುಂದಿನ ತಲೆಮಾರಿಗೆ ಖಾಸಗಿ - ವ್ಯಕ್ತಿಗತ ನೆಲೆಯ ಆದರ್ಶಗಳಾಗಿ ಬದಲಾಗಿದ್ದವು. ಹಾಗೆಂದೇ, ಭಾವೋದ್ವೇಗತೆ, ಅಚಲ ಪ್ರೇಮಗಳು ವೈಯಕ್ತಿಕ ಆಯ್ಕೆ ಮತ್ತು ತನ್ನ ಅಸ್ತಿತ್ವವಷ್ಟೇ ಮುಖ್ಯ ಎಂಬ ದಿರಿಸನ್ನು ತೊಟ್ಟಿವೆ. ‘ಇಲ್ಲಿ ಯಾರೂ ಅಮುಖ್ಯರಲ್ಲ’, ಎಂಬುದಕ್ಕಿಂತ, ಇಲ್ಲಿ ‘ನಾನೇ ಮುಖ್ಯ’ ಎಂಬುದು ಇವುಗಳ ಮಂತ್ರತಂತ್ರ, ಭುಕ್ತಭೋಕ್ತ. ಕಾನೂರಿನ ಸೀತೆಗೆ ಹೂವಯ್ಯ ಭಾವನ ಮೇಲೆ ಅಕಳಂಕ ಪ್ರೇಮ, ಆಕೆಯದು ಪರಮನಿಷ್ಠೆ. ಆದರೆ, ‘ಮುಕ್ತಿ’ ಕಾದಂಬರಿಯ ಕಾಮಿನಿಗೆ ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆಕೆ ಸ್ವೇಚ್ಛಾಜೀವಿ, ತಾರುಣ್ಯದಲಿ ಸೊಕ್ಕಿದ ದೈಹಿಕ ಕಾಮನೆಗಳ ಪೂರೈಸಿಕೊಳ್ಳಲು ಆಕೆಗೆ ಸಾಂಪ್ರದಾಯಿಕ ನೈತಿಕ ನೆಲೆಗಟ್ಟುಗಳ ಹಂಗಿಲ್ಲ. ನವ್ಯ ಅಥವಾ ಮಾಡರ್ನಿಸ್ಟ್ ಕಥನಮಾರ್ಗದ ವಿಶ್ಲೇಷಣೆಯಲ್ಲಿ ಕೆಲವೊಮ್ಮೆ ಕಥೆಯ ಮುಖ್ಯ ಪಾತ್ರಧಾರಿಯನ್ನು ‘ನಿಹಿಲಿಸ್ಟ್’ ಎಂದು ಗುರುತಿಸುವುದನ್ನು ಕಾಣುತ್ತೇವೆ. ಆ ಶಬ್ದ ಕಾಮಿನಿ ಪಾತ್ರಕ್ಕೆ ಸರಿಯಾಗಿ ಹೊಂದುತ್ತದೆ. ತನ್ನ ಚಂಚಲತೆಯ ಮುಂದೆ ಗೌರೀಶನ ಮುಗ್ಧಪ್ರೀತಿಯನ್ನು ನಿವಾಳಿಸಿ ಒಗೆಯುವಂಥವಳು.
***
ಸ್ವಾತಂತ್ರ್ಯಪೂರ್ವದ ತಲೆಮಾರು ವಿದೇಶಿ ವಿದ್ಯೆ ಪಡೆದು ಸ್ವದೇಶವನ್ನು ಕಟ್ಟಲು ಮರಳಿ ಬಂದರೆ, ಮುಂದಿನ ತಲೆಮಾರು ತಮ್ಮ ಪಿತೃಹತ್ಯೆಯ ಪಾಪಪ್ರಜ್ಞೆಯಿಂದ ಹೊರಬಂದು, ಜಂಜಾಟಗಳಿಂದ ಮುಕ್ತಿ ಪಡೆಯಲು ವಿದೇಶಿ ಪಲಾಯನದಲ್ಲಿ ಅಸ್ತಿತ್ವ ಕಂಡುಕೊಳ್ಳಲು ಹಾತೊರೆದವರು. ಸಮಾಜವಾದ, ತರತಮಗಳಿಲ್ಲದ ಕನಸಿಗೆ ಪ್ರತಿಯಾಗಿ ಸೃಷ್ಟಿಗೊಂಡ ವ್ಯಕ್ತಿಸ್ವಾತಂತ್ರ್ಯ, ವ್ಯಕ್ತಿಗತ ಸುಖದ ಆಯ್ಕೆಗೆ ಆದ್ಯತೆಯನ್ನು ನೀಡಿದವರು. ನೆಂಟಿನ ಕೂಡುಬಾಳ್ವೆಗಿಂತ ಒಂಟಿಬಾಳ್ವೆಯೇ ಸುಖ ಎಂಬ ಪಲ್ಲಟಗೊಂಡ ತತ್ತ್ವವೇ ಪಾತ್ರಗಳ ಉದ್ಘೋಷ. ಹಾಗೆಂದೇ, ಅವರ ಓದು, ಪರದೇಶ ವ್ಯಾಸಂಗ, ಸಾಮಾಜಿಕವಾಗಿ ಮೇಲು ಸ್ತರದ ಏರುಗತಿಗಳು ಕುಟುಂಬ ಮತ್ತು ಸಮುದಾಯದ ಸಾಧನೆಯಾಗದೆ, ವ್ಯಕ್ತಿಗತ ಅಸ್ಮಿತೆಯನ್ನು, ವಿಶಿಷ್ಟತೆಯನ್ನು ಎತ್ತಿ ಹಿಡಿಯುವ ಸಾಧನೆಗಳಾಗಿ ಬಿಂಬಿತವಾದಂತೆ ಕಂಡವು.
ಬಹುಪಾಲು ಮೇಲ್ವರ್ಗದ ಲೇಖಕರು ಸೃಷ್ಟಿಸಿದ ಈ ಕಥಾ ಪಾತ್ರಗಳು ಮನುಷ್ಯ ತನ್ನ ಅಸ್ತಿತ್ವಕ್ಕೆ ತಾನೇ ‘ಜವಾಬ್ದಾರ’ ಎಂದು; ಅಥವಾ ‘ನಾನು ಯೋಚಿಸುವುದರಿಂದಲೇ ನನ್ನ ಅಸ್ತಿತ್ವದ ಅರಿವು ನನಗಿದೆʼ (“I think, therefore I am”) ಎನ್ನುವ ರೇನೆ ಡೆಕಾರ್ಟ್ನ (René Descartes) ಹೇಳಿಕೆಯನ್ನು ನಂಬಿರುವಂಥವು. ಆ ಕಾರಣವಾಗಿಯೇ, ಈ ಕಥಾಪಾತ್ರಗಳಲ್ಲಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಪಾರಂಪರಿಕ ಮೌಲ್ಯಗಳೇನೂ ಇದ್ದಂತಿರಲಿಲ್ಲ. ಬರಿಗೈಯಲಿ ನಿಂತಿದ್ದ ಹೊಸ ತರುಣ ತಲೆಮಾರಿನ ಸ್ಥಿತಿ ತಮ್ಮ ದೊಂದಿಯನು ತಾವೇ ಹೊತ್ತಿಸಿಕೊಂಡು, ಆ ಬೆಳಕಿನಲ್ಲಿ ಮುಂದೆ ಚಲಿಸುವಂತಿತ್ತು. ಈ ಶೂನ್ಯವನ್ನು ತಕ್ಷಣವೇ ಗುರುತಿಸಿದವರು - ಈವರೆಗೆ ಮೇಲ್ವರ್ಗಗಳ ತಾಂತ್ರಿಕ ಪರಿಣತಿ, ಮಾನವಿಕ ವಿಷಯಗಳಲ್ಲಿ ಸಾಧಿಸಿದ ತಜ್ಞತೆಯನ್ನು ಮೌನ ಅಸಹನೆಯಲ್ಲಿ ಗಮನಿಸುತ್ತಿದ್ದ ಸ್ವಾತಂತ್ರ್ಯಾನಂತರದ ಎರಡನೆಯ ತಲೆಮಾರಿನ ಶೂದ್ರ ಮತ್ತು ಇತರ ಹಿಂದುಳಿದ ಸಮುದಾಯಗಳು. ಅವು ಸಮರೋತ್ಸಾಹದಲಿ ಮೇಲಿನೆರಡೂ ಕ್ಷೇತ್ರಗಳಿಗೆ ಕ್ಷಿಪ್ರಗತಿಯಲ್ಲಿ ವ್ಯಾಪಿಸಿಕೊಳ್ಳತೊಡಗಿದರು. ಇದೊಂದು ಐತಿಹಾಸಿಕ ಚಲನೆ. ಏಕಮುಖ, ಏಕರೇಖೆಯ ಗತಿಯಲ್ಲ, ಬದಲಿಗೆ ಸುರುಳಿ ಸುತ್ತಿದ ಸಿಂಬಿಯಂಥ ಸ್ವರೂಪದ್ದು. ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಾದ ಪಲ್ಲಟಗಳು ಕೂಡ ಇವು ಮುಂಚೂಣಿಗೆ ಬರಲು ಅನುವು ಮಾಡಿಕೊಟ್ಟವು.
ಹೂವಯ್ಯ, ಇದೀಗ ಅಮಾಸ, ಚೆಲುವ, ಚೆನ್ನ, ಕಪ್ಪುಚಿರತೆ, ಕರಿ ತೆಲಿ ಮಾನವ, ತ್ರಿಶೂಲ, ಸಾಕವ್ವ ಹೀಗೆ ನಾನಾ ಹೊಸ ರೂಪಗಳನ್ನು ತೊಟ್ಟುಕೊಳ್ಳಬೇಕಾಯಿತು. ಈವರೆಗೆ, ಅನುಕಂಪ ಮತ್ತು ಕರುಣೆಯಿಂದ ಸೃಷ್ಟಿಯಾಗಿದ್ದ ಚೋಮ, ತುಕ್ರಿ, ದೂಮ, ಮೋಚಿಯಂಥ ಪಾತ್ರಗಳು ತಾವೇ ತಮ್ಮ ಕಥೆಯನ್ನು ಹೇಳತೊಡಗಿದರು. ಆಧುನಿಕ ಶಿಕ್ಷಣ ಮತ್ತು ಪ್ರತಿ ತಲೆಮಾರಿಗೂ ಹೊಸದಾಗಿಯೇ ಇರುವ ‘ಓದು’ ಮೊದಲ ತಲೆಮಾರಿನಿಂದಲೂ ಸಾಮಾಜಿಕ ಚಲನಶೀಲತೆಗೆ ಪರಿವರ್ತಕದಂತೆ ಕೆಲಸ ಮಾಡಿತ್ತು. ಈಗಲೂ ತನ್ನ ಹೊಣೆಯನ್ನೂ ಸರಿಯಾಗಿಯೇ ನಿಭಾಯಿಸಿತು. ಮಸುಕಾಗಿದ್ದ ಮಾನವಿಕ ವಿಷಯಗಳಿಗೆ ಮಗದೊಮ್ಮೆ ಜೀವ ತುಂಬಿ ಬಂದಿತು.
ಭಾರತೀಯ ಸಮಾಜವೊಂದು ನಿಗೂಢ, ದುರ್ಗಮ ಕಾನನದಂತೆ. ಹೆಜ್ಜೆ ಹಾಕಿದಷ್ಟೂ ಕಾಡಿನ ಹೊಸ ಮುಖಗಳು ಕಾಣತೊಡಗುವಂತೆ, ಪ್ರತಿ ತಲೆಮಾರಿನಲ್ಲಿಯೂ ಅಕ್ಷರವನ್ನು ಕಲಿಯುವ ಮೊದಲ ಮಗು ಇದ್ದೇ ಇರುತ್ತದೆ. ಹೊಸ ರಾಜಕೀಯ ಸನ್ನಿವೇಶ, ಸಾಮಾಜಿಕ ವ್ಯಾಖ್ಯಾನಗಳು ಬದಲಾದಂತೆಲ್ಲ ಸಾಮಾಜಿಕ ನ್ಯಾಯದ ಪ್ರಸ್ತಾವನೆ ಮುನ್ನೆಲೆಗೆ ಬಂದು ಅಂಥ ಪ್ರತಿ ಹೊಸ ಮಗು ಅಕ್ಷರ ಕಲಿಯುವುದು, ಹಳೆಯ ಪುಸ್ತಕಗಳನ್ನು ಹೊಸ ಪುಸ್ತಕದಂತೆ ಓದುವುದು, ಹಳೆಯ ಅನುಭವವನ್ನು ಪುನಾವಿಶ್ಲೇಷಣೆಗೊಳಪಡಿಸಿ, ಪರಿಷ್ಕರಿಸಿ ಹೊಸ ಪುಸ್ತಕ ಬರೆಯುವುದು ನಿರಂತರವಾದ ಪ್ರಕ್ರಿಯೆಯಂತೆ ನಡೆಯುತ್ತದೆ. ‘ಇನ್ನೀಗ ಮುಗಿಯಿತು’, ಎಂದಾಗ ಮತ್ತೊಂದು ಹೊಸ ತಲೆಮಾರು ನಾವಿದ್ದೇವೆ ಎಂದು ಕತ್ತಲೆಯಿಂದ ಬೆಳಕಿನೆಡೆಗೆ ನಡೆದು ಬರುತ್ತಾರೆ. ಇರುತ್ತ, ಇದೀಗ ನಾಡಿನ ಬಿಡುಗಡೆಯ ಬಳಿಕ ಮೂರನೆಯ ತಲೆಮಾರು ತನ್ನನ್ನು ದಾಟಿಕೊಂಡಿದೆ.
***
ಹಾಗೆ ನೋಡಿದರೆ, ಜ್ಞಾನದ ಪಾರಂಪರಿಕ ಯಜಮಾನಿಕೆಯನ್ನು ಒಡೆದು ಅರಿವಿನ ಸಾರ್ವತ್ರೀಕರಣ ಆರಂಭವಾದುದು ಹತ್ತೊಂಬತ್ತನೆಯ ಶತಮಾನದ ಆರಂಭದ ಒಂದೆರಡು ದಶಕಗಳ ನಂತರ. ಭಾರತೀಯ ಸಮಾಜವನ್ನು ತಿಳಿದುಕೊಳ್ಳಲು ಆಡಳಿತ ಯಂತ್ರವಷ್ಟೇ ಸಾಲದು, ಸಾಂಸ್ಕೃತಿಕ ಉಪಕ್ರಮಗಳು ಬಹುಮುಖ್ಯವೆಂಬ ವಸಾಹತುಶಾಹಿ ತಿಳುವಳಿಕೆಯಿಂದ. ಪೌರಸ್ತ್ಯ ಜ್ಞಾನಪರಂಪರೆಯಲ್ಲಿ ಅಪಾರ ಕುತೂಹಲವಿದ್ದ ಓರಿಯಂಟಲಿಸ್ಟ್ ವಿದ್ವಾಂಸರು, ಸಾರ್ವತ್ರಿಕ ಶಿಕ್ಷಣದ ಅಗತ್ಯವನ್ನು ಮನಗಂಡ ಬ್ರಿಟಿಶ್ ಅಧಿಕಾರಶಾಹಿಗಳು, ಕ್ರೈಸ್ತ ಮಿಶನರಿಗಳ ಅಧ್ಯಯನಶೀಲರು ಮತ್ತು ವಸಾಹತುಶಾಹಿಗಳೊಂದಿಗೆ ನಿಕಟತೆಯನ್ನು ಹೊಂದಿದ್ದ ದೇಸಿ ಪಂಡಿತರು, ಭಾರತೀಯ ಭಾಷೆಗಳಲ್ಲಿ ಆಳಜ್ಞಾನವನ್ನು ಪಡೆದಿದ್ದ ಶಾಸ್ತ್ರಪಾರಂಗತರು ಈ ಹೊಸ ಬಗೆಯ ಜ್ಞಾನ ಸೃಷ್ಟಿಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳತೊಡಗಿದರು.
ಪಠ್ಯಪುಸ್ತಕಗಳ ರಚನೆ, ಸಮಾಜಶಾಸ್ತ್ರ, ಮಾನವಶಾಸ್ತ್ರಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹ, ಹಳೆಯ ಹಸ್ತಪ್ರತಿಗಳ ಸಂಗ್ರಹ ಮತ್ತು ಪರಿಷ್ಕರಣೆ, ಲಭ್ಯವಿದ್ದ ವಿವಿಧ ಬಗೆಯ ಶಾಸನಗಳ ಅರ್ಥೈಸಿಕೊಳ್ಳುವಿಕೆ ಮತ್ತು ವ್ಯಾಖ್ಯಾನ ಇವು ಮತ್ತು ಇಂಥವು ಅವರು ಕೈಗೊಂಡ ಮಹತ್ವದ ಉಪಕ್ರಮಗಳಾಗಿದ್ದವು. ಸಾಮಾಜಿಕ ಹಾಗೂ ಸಾಂಸ್ಕೃತಿಕ ಲೋಕವನ್ನು ಅರ್ಥೈಸಿಕೊಳ್ಳುವ ಈ ಪ್ರಕ್ರಿಯೆಯಲ್ಲಿ ಸ್ಥಳೀಯ ವಿದ್ವಾಂಸರ ಭಾಗವಹಿಸುವಿಕೆಯಿಂದ ದೇಸಿತನ ಹದಗೊಂಡ ದೃಷ್ಟಿಕೋನ ಪ್ರಾಪ್ತವಾಯಿತು. ಮತ್ತು ಓರಿಯಂಟಲಿಸ್ಟರ ಪಾಲ್ಗೊಳ್ಳುವಿಕೆಯಿಂದ ಅಂದಿನ ಅರ್ಥದಲ್ಲಿ ಪ್ರಜಾಸತ್ತಾತ್ಮಕ ಉಪಕ್ರಮವಾಗಿ ರೂಪಾಂತರಗೊಂಡಿತು.
ಈ ವಿಶಾಲಭಿತ್ತಿಯನ್ನು ಹಿನ್ನೆಲೆಯಾಗಿ ಹೊಂದಿದ ಆಧುನಿಕ ಭಾರತೀಯ ಶಿಕ್ಷಣ - ಓದು ಪರಂಪರೆಯು ಅಂದಿನ ಅರ್ಥದಲ್ಲಿ ಕುಲಮತ ನಿರಪೇಕ್ಷಿತ ಶಿಕ್ಷಣವನ್ನು ಒದಗಿಸಿಲು ಬದ್ಧವಾಯಿತು. ಆ ಪ್ರಕ್ರಿಯೆಯ ಅಂಗವಾಗಿಯೇ ಮೊದಲೊಮ್ಮೆ ಹೆಸರಿಸಿದ ಮೊದಲ ತಲೆಮಾರಿನ ಆಧುನಿಕ ಶಿಕ್ಷಿತರು ಹೊರಹೊಮ್ಮಿದರು.
ಸ್ವಾತಂತ್ರ್ಯಪೂರ್ವದಿಂದ ಆಧುನಿಕ ಶಿಕ್ಷಣ, ಹೊಸ ಯುಗಧರ್ಮದ ಓದುಗಳನ್ನು ಪರಿಶೀಲಿಸಿದಾಗ ಕಾಣುವ ಅಂಶಗಳು:
ಮೊದಲ ತಲೆಮಾರಿಗೆ ಶಿಕ್ಷಣ ಮತ್ತು ಓದು, ಬಿಡುಗಡೆ - ಸ್ವಾತಂತ್ರ್ಯ ಮತ್ತು ಸ್ವಾವಲಂಬಿ ಬದುಕಿನ ದ್ಯೋತಕವಾಗಿದ್ದವು. ಉದಾರವಾದಿ ಜೀವನ ಸಿದ್ಧಾಂತವನ್ನು ಸ್ಪಷ್ಟವಾಗಿ ಒಡಮೂಡಿಸಿ, ಕಲೆಯ ವಿವಿಧ ಪ್ರಕಾರಗಳಲ್ಲಿ ಅಭಿವ್ಯಕ್ತಿಸಲು ಪ್ರಯತ್ನಿಸಿದವು.
ಮುಂದಿನ ತಲೆಮಾರಿಗೆ ಅವು ಸಾಂಸ್ಕೃತಿಕ ಬಂಡವಾಳವಾಗಿ ವೈಯಕ್ತಿಕ ಪ್ರತಿಷ್ಠೆ ಮತ್ತು ಖಾಸಗಿ ಸಂಪತ್ತನ್ನು ಕ್ರೋಡೀಕರಿಸುವ, ಅಸ್ತಿತ್ವ ಪ್ರತಿಷ್ಠಾಪನೆಯ ಸಾಧನವಾದವು.
ಆಧುನಿಕ ಶಿಕ್ಷಣ ಮತ್ತು ಯುಗಧರ್ಮದ ಓದು ಮೂರನೆಯ ತಲೆಮಾರಿಗೆ ನೇರ ಅಭಿವ್ಯಕ್ತಿ, ಸಾಮಾಜಿಕ ಚಲನಶೀಲತೆ, ಸ್ವಾಭಿಮಾನದ ಪ್ರತೀಕವಾದಂತೆಯೇ, ಪ್ರಭುತ್ವದ ಅನುಗ್ರಹ ಪಡೆಯುವ ಪರಿಕರಗಳಾದವು. ಒಂದು ಸಮಾಜ ಸಾಧಿಸಬೇಕಾದ ಸಾಂಸ್ಕೃತಿಕ ಆಶೋತ್ತರಗಳನ್ನು ರಾಜಕೀಯ ಸಂಕಥನದ ಮುನ್ನೆಲೆಗೆ ತಂದು ಅವನ್ನು ‘ಸಾಂಕೇತಿಕ’ವಾಗಿ ಸಾಧಿಸಿದ ಭಾವನೆ ಮೂಡಿಸುತ್ತ, ವಾಸ್ತವಿಕ ನೆಲೆಯಲ್ಲಿ ರಾಜಕೀಯ ಸಿದ್ಧಾಂತಗಳು ಪೂರ್ಣಗೊಳಿಸಬೇಕಾದ ಕಾರ್ಯಸೂಚಿಯನ್ನು ಹಿನ್ನೆಲೆಗೆ ಸರಿಸಿದವು.
***
ಕಾದಂಬರಿಯಲ್ಲಿ ಇಪ್ಪತ್ತರ ಆಸುಪಾಸಿನ ಯುವಕ ಕಾನೂರಿನ ಹೂವಯ್ಯನಿಗೀಗ ನೂರರ ಮೇಲಿನ ಪ್ರಾಯ. ಹೂವಯ್ಯ ಬಣ್ಣದ ಹೊದಿಕೆಯ ಪುಸ್ತಕಗಳನ್ನು ಎರಡೂ ಕೈಗಳಲ್ಲಿ ಹಿಡಿದು ಓದುತ್ತಿದ್ದವ. ಜ್ಞಾನದ ವ್ಯಾಖ್ಯಾನ ಬದಲಾದಂತೆ ರಟ್ಟು, ತೆಳು ರಟ್ಟಿನ ಪುಸ್ತಕಗಳು ಮರೆಯಾಗಿ, ಮನರಂಜನೆಯೂ ಜ್ಞಾನವೇ ಎಂಬ ವಿಶ್ಲೇಷಣೆಯಿಂದ ಹಿರಿ ತೆರೆ, ಕಿರು ತೆರೆ, ಕರಸ್ಥಲದಲ್ಲಿ ಕೂತಿರುವ ಅಂಗೈ ತೆರೆಗಳು ಮನುಷ್ಯನ ಸಾಂಸ್ಕೃತಿಕ ಅಭಿರುಚಿಗಳನ್ನು ನಿಯಂತ್ರಿಸುತ್ತಿವೆ. ಹೂವಯ್ಯನ ನಾಲ್ಕನೆಯ ತಲೆಮಾರು ಈ ಕರಸ್ಥಲ ಜ್ಞಾನಮೀಮಾಂಸೆಯ ಕಾಲದವರು. ಆದರೇನು? ಹೂವಯ್ಯನಂತೆಯೇ ತಾರುಣ್ಯ ತುಳುಕಿಸಿಕೊಂಡು ತೊನೆದಾಡುತ್ತಿರುವಂಥವರು.
ಹೂವಯ್ಯನಂತೆಯೇ ‘ಪೌರುಷ, (ವಿಶಾಲಾರ್ಥದ) ಆಧ್ಯಾತ್ಮಿಕತೆ, ಅಂತರ್ಮುಖತೆ, ರಸಿಕತೆ, ಮೇಧಾಶಕ್ತಿ, ಹಠಭಾವಗಳ ಭವ್ಯವ್ಯಕ್ತಿತ್ವ’ವನ್ನು ಹೊಂದಿದವರು. ಇವರಿಗೆ ಮೂರೂ ತಲೆಮಾರುಗಳ ಪೂರ್ವಿಕರ ದತ್ತ ಅಂಶಗಳು ಕಲಸುಮೇಲೋಗರವಾಗಿ ಹಸ್ತಾಂತರವಾಗಿವೆ. ತಮ್ಮ ವೃತ್ತಿಪರ ಶಿಕ್ಷಣ, ವ್ಯಕ್ತಿತ್ವ ವಿಕಸನ, ವ್ಯಕ್ತಿಗತ ಏಳ್ಗೆ, ತಾನೇ ಜಗದ ಕೇಂದ್ರವೆಂದು ಬೋಧಿಸಿದ ಮೂರನೆಯ ತಲೆಮಾರಿನ ಪೋಷಕರು ಮತ್ತು ಸಮಾಜದಿಂದ ಈ ತಲೆಮಾರು ಮಾನವಿಕ ವಿಷಯಗಳಿಗಿಂತ ಪಠ್ಯಪುಸ್ತಕಗಳು ಮುಖ್ಯವೆಂದು ನಂಬಿರುವಂಥದ್ದು.
ಆದರೆ, ಮಾನವಿಕ ವಿಷಯಗಳ ಗೈರುಹಾಜರಿಯಲ್ಲಿ ನಾವು ಬಹಳಷ್ಟನ್ನು ಕಳೆದುಕೊಂಡಿದ್ದೇವೆ ಎಂದು ನಾಲ್ಕನೆಯ ತಲೆಮಾರಿನ ಕೆಲವು ಸಂವೇದನಾಶೀಲ ವಾರಸುದಾರರು ಮನಗಂಡಿದ್ದಾರೆ. ಸ್ಪರ್ಧಾತ್ಮಕ ಪುಸ್ತಕಗಳಾಚೆಗೂ ಬದುಕಿನ ಸಂತಸ ಹೆಚ್ಚಿಸಬಲ್ಲ ಹೊತ್ತಿಗೆಗಳಿವೆ — ಎಂಬ ನಿಜದ ನೆಲೆಯನ್ನು ಅರಿಯತೊಡಗಿದ್ದಾರೆ. ಎರಡನೆಯ ತಲೆಮಾರಿನವರಂತೆ ಅಲ್ಲಿದೆ ನಮ್ಮನೆ ಎಂದು ‘ಪಶ್ಚಿಮ’ದಲ್ಲಿಯೇ ಉಳಿದುಕೊಳ್ಳದೆ, ಅಲ್ಲಿಷ್ಟು - ಇಲ್ಲಿಷ್ಟು ಎಂದು ಸಾಗರೋಲ್ಲಂಘನೆ ಮಾಡುತ್ತ ಎಡತಾಕುವುದು ನಿರರ್ಥಕವೆಂದು ಮುಂಗಾಣುತ್ತಿದ್ದಾರೆ. ಐಹಿಕ ಸುಖವನು ಮೀರಿದ ಸಹಜ ಸಂತೋಷಗಳನ್ನು ಪಡೆಯುವ ವಿಧಾನಗಳನ್ನು ಹುಡುಕುತ್ತಿದ್ದಾರೆ.
ಆದರಿಷ್ಟೇ: ಮೊದಲ ತಲೆಮಾರಿನ ಭಾವುಕತೆಯಿಂದ ಉಕ್ಕುತ್ತಿದ್ದ ಅಸೀಮ ಆದರ್ಶ, ಎಲ್ಲ ಒಳಿತು - ಕೆಡಕುಗಳ ಬಳಿಕವೂ ಮನುಷ್ಯ, ಮನುಷ್ಯನಾಗಿಯೇ ಇರುತ್ತಾನೆ ಎಂಬ ನಂಬಿಕೆ, ಸ್ವಾತಂತ್ರ್ಯದ ನಂತರದ ತಲೆಮಾರಿನ ಸ್ವಾರ್ಥಸೆಲೆಯ ಆತ್ಮಾವಲೋಕನದ ಬದಲು ಸಾಮುದಾಯಿಕ ಅವಲೋಕನ ಹಾಗೂ ಸಾಮುದಾಯಿಕ ಹಿತದಲ್ಲಿಯೇ ನನ್ನ ಮತ್ತು ಕುಟುಂಬದ ಸುಖವಡಗಿದೆ ಎಂಬ ಕಠಿಣ ನಿಲುವು; ಅಸ್ಮಿತೆಯನ್ನು ರೂಪಿಸಲು, ಸ್ವಾಭಿಮಾನವನ್ನು ಮೆರೆಯಲಷ್ಟೇ ನಮ್ಮ ವ್ಯಕ್ತಿವಿಶಿಷ್ಟ ದನಿಯೇ ಹೊರತು ಪ್ರಾಮಾಣಿಕತೆ-ನಿಷ್ಠೆಗಳ ಅಡವಿಟ್ಟು ಪಡೆವ ಅಧಿಕಾರ, ಅಂಗೀಕಾರ ಗಳಿಸಲು ಅಲ್ಲ ಎಂಬ ಖಚಿತತೆ ಹೊಸ ತಲೆಮಾರಿನ ಓದುಗರ ಮುಂದೆ ತೆರೆದು ನಿಂತಿವೆ.
ಇದೊಂದು ಕಡಿದಾದ, ಬಲು ದೂರ ಕ್ರಮಿಸಬೇಕಾದ ದಾರಿ. ನಡೆಯುವಾಗ ಮರಿದ, ಕುಸಿದ, ತಗ್ಗುಬಿದ್ದ ಜಾಗಗಳನ್ನು ಮುಚ್ಚಬೇಕು, ಶಿಥಿಲವಾಗಿರುವೆಡೆ ಹೊಸ ಕೈ ಸೇತುವೆಗಳನು ಕಟ್ಟಬೇಕು. ಆಮೇಲೆ, ಹೆಜ್ಜೆಯ ಮೇಲೊಂದ್ಹೆಜ್ಜೆಯ ಇಕ್ಕುತ ಹೋದರೆ, ಹೂವಯ್ಯ ಕನಸಿದ ಹೂವು, ಚೆಲ್ಲಿದ ಹಾದಿ ಅವರಿಗೆ ಕಾಣಿಸಲೂಬಹುದು. ಆಗ ಮೊದಲ ತಲೆಮಾರಿನ ಪೂರ್ವಿಕರು ಓದಿನಿಂದ ನಿಜಕ್ಕೂ ಪಡೆದ ‘ಸುಖʼ ಮತ್ತು ‘ಕಾಣ್ಕೆ’ ಏನು ಎನ್ನುವ ಅನುಭಾವಿ ಒಳನೋಟ ದಕ್ಕಬಹುದು.
ಕೃತಿ: ಬಯಲ ಕಣಗಿಲೆ (ಪ್ರಬಂಧಗಳು)
ಲೇ: ಕೇಶವ ಮಳಗಿ
ಪ್ರಕಾಶನ: ಅಮೂಲ್ಯ ಪುಸ್ತಕ
ಪುಟ: 232
ಬೆಲೆ: ರೂ. 250
ಮುಖಪುಟ ವಿನ್ಯಾಸ: ಗುರುಪ್ರಸಾದ ಎಂ. ಆರ್.
ಆನ್ಲೈನ್ ಖರೀದಿಗೆ : https://imojo.in/1jmdXiB
ಸಂಪರ್ಕ : 94486 76770
ಕೇಶವ ಮಳಗಿ
ಕೇಶವ ಮಳಗಿಯವರು ಬಳ್ಳಾರಿ ಜಿಲ್ಲೆಯವರು. ಬೆಂಗಳೂರಿನಲ್ಲಿ ವಾಸವಾಗಿರುವ ಇವರು ಸೃಷ್ಟಿ ಮಣಿಪಾಲ ಇನ್ಸ್ಟಿಟ್ಯೂಟ್ನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ. ಇವರ ಪ್ರಕಟಿತ ಕೃತಿಗಳು, 'ಕಡಲ ತೆರೆಗೆ ದಂಡೆ', 'ಮಾಗಿ ಮೂವತ್ತೈದು', 'ವೆನ್ನೆಲ ದೊರೆಸಾನಿ', 'ಹೊಳೆ ಬದಿಯ ಬೆಳಗು'. 'ಕುಂಕುಮ ಭೂಮಿ', 'ಅಂಗಧ ಧರೆ' 'ನೇರಳೆ ಮರ' 'ಬೋರಿಸ್ ಪಾಸ್ತರ್ನಾಕ್: ವಾಚಿಕೆ', 'ನೀಲಿ ಕಡಲ ಹಕ್ಕಿ' 'ಮದನೋತ್ಸವ' 'ಸಂಕಥನ' 'ಕಡಲಾಚೆಯ ಚೆಲುವೆ' ಆಲ್ಬರ್ಟ್ ಕಾಮು (ತರುಣ ವಾಚಿಕೆ) ಮತ್ತು ‘ಅಕಥ ಕಥಾ’.
ಮುದ್ರಣಕ್ಕೆ/ಬಿಡುಗಡೆಗೆ ಸಿದ್ಧವಾಗುತ್ತಿರುವ ನಿಮ್ಮ ಕೃತಿಗಳ ಆಯ್ದ ಭಾಗಗಳ ಪ್ರಕಟಣೆಗಾಗಿ ಸಂಪರ್ಕಿಸಿ team@konaru.org