ಪತ್ರಕರ್ತ, ಕಥೆಗಾರ ಪ್ರೇಮಕುಮಾರ್ ಹರಿಯಬ್ಬೆ ಅವರ ಹೊಸ ಕಾದಂಬರಿ ಬಹುರೂಪಿ ಇದೀಗ ಓದುಗರಿಗೆ ಲಭ್ಯ. ಗೀತಾಂಜಲಿ ಪಬ್ಲಿಕೇಷನ್ ಇದನ್ನು ಪ್ರಕಟಿಸಿದ್ದು, ಆಯ್ದ ಭಾಗ ನಿಮ್ಮ ಓದಿಗೆ.
ಮೂರು ತಿಂಗಳು ಮೂರು ದಿನಗಳಂತೆ ಕಳೆದುಹೋದವು. ಸಕಾಲದಲ್ಲಿ ನಿದ್ದೆ, ಆಹಾರ ಸೇವನೆ, ವಿಶ್ರಾಂತಿಗಳಿಲ್ಲದೆ ಸಹಜಾನಂದರು ಬಳಲಿ ಬೆಂಡಾದರು. ಅವರನ್ನು ನೋಡಿದವರಿಗೆ ಅವರ ಆರೋಗ್ಯದ ಬಗ್ಗೆ ಅನುಮಾನಗಳು ಹುಟ್ಟಿಕೊಂಡವು. ನನ್ನದು ದೈಹಿಕ ಸಮಸ್ಯೆ ಅಲ್ಲ ಎಂದು ಸಹಜಾನಂದರಿಗೆ ಮಾತ್ರವೇ ಗೊತ್ತು. ಅದನ್ನು ಅವರು ಯಾರ ಬಳಿಯೂ ಹೇಳಿಕೊಳ್ಳಲಿಲ್ಲ. ಶ್ರೀಗಳು ರಾತ್ರಿ ವೇಳೆಯೂ ಅಧ್ಯಯನ ನಿರತರಾಗಿರುತ್ತಾರೆ. ಹಗಲಿನ ಸಮಯದಲ್ಲಿ ಬರವಣಿಗೆಯಲ್ಲಿ ತೊಡಗಿರುತ್ತಾರೆ. ಬಹುಶಃ ಯಾವುದೋ ಮಹತ್ವದ ಕೃತಿ ರಚನೆಯಲ್ಲಿ ತೊಡಗಿದ್ದಾರೆ. ಊಟ, ವಿಶ್ರಾಂತಿಯ ಪರಿವೇ ಅವರಿಗೆ ಇಲ್ಲ. ಓದು ಬರವಣಿಗೆಯ ನಂತರ ಧ್ಯಾನ ಮಾಡುತ್ತಾರೆ. ದಿನಕ್ಕೆ ಮೂರ್ನಾಲ್ಕು ಗಂಟೆಗಳಷ್ಟೂ ವಿಶ್ರಾಂತಿ ಪಡೆಯುತ್ತಿಲ್ಲ. ಅದರಿಂದಾಗಿ ಅವರ ದೇಹ ಸೊರಗಿದೆ ಎಂದು ಮಠದ ಸಿಬ್ಬಂದಿಗೆ ಹೇಳ ತೊಡಗಿದರು. ಜನ ಅವರ ಮಾತುಗಳನ್ನು ನಂಬಿದರು.
ಆದರೂ ಶ್ರೀಗಳ ಆರೋಗ್ಯ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ದೈಹಿಕವಾಗಿ ಅವರು ದುರ್ಬಲರಾಗಿದ್ದಾರೆ ಅನ್ನೋ ವದಂತಿಗಳು ಹುಟ್ಟಿಕೊಂಡವು!. ಅದಕ್ಕೆ ಪೂರಕವಾಗಿ ಕೆಲವರು ಆತಂಕ ಹುಟ್ಟಿಸುವಂತಹ ಮಾಹಿತಿಗಳನ್ನು ಸೇರಿಸಿ ತೇಲಿಬಿಟ್ಟರು. ಕೇಳಿಸಿಕೊಂಡವರು ಇದ್ದರೂ ಇರಬಹುದು ಎಂದು ನಂಬುವಂತೆ ಮಾಡಿದರು. ಸಹಜಾನಂದರಿಗೆ ಏನಾಗಿದೆ ಎನ್ನುವುದು ಯಾರಿಗೂ ಗೊತ್ತೇ ಆಗಲಿಲ್ಲ. ಶ್ರೀಗಳು ಮೂರು ಹೊತ್ತೂ ತಮ್ಮ ಕೋಣೆಯಲ್ಲೇ ಇರುತ್ತಾರೆ. ಅವರಿಗೆ ಯಾವುದೋ ಗಂಭೀರ ಕಾಯಿಲೆ ಇರಬಹುದು ಎಂದು ಪ್ರಚಾರವಾಯಿತು. ಶ್ರೀಗಳು ಯಾವುದೋ ದೊಡ್ಡ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿರಬಹುದು. ಹೊರಬರುವ ದಾರಿಗಳು ಕಾಣದೆ ಕಂಗೆಟ್ಟಿದ್ದಾರೆ ಎಂದು ಮಠದ ಸಿಬ್ಬಂದಿ ಭಾವಿಸಿದರು.
ಸಹಜಾನಂದರಿಗೆ ದೈಹಿಕ ಸಮಸ್ಯೆಗಳೇನೂ ಇಲ್ಲ. ವಿರೋಧಿಗಳು ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಠದ ಖಾಸಾ ಭಕ್ತರು ಹೇಳುತ್ತ ವದಂತಿಗಳನ್ನು ನಿರಾಕರಿಸುವ ಪ್ರಯತ್ನವನ್ನೂ ಮಾಡಿದರು. ಶ್ರೀಗಳು ತಮ್ಮ ಮನಸ್ಸಿನಲ್ಲಿ ಇರುವುದನ್ನು ಯಾರಿಗಾದರೂ ಹೇಳಿಕೊಂಡರೆ ಸರಿಹೋಗಬಹುದು. ಆದರೆ ಅವರಿಗೆ ಯಾರ ಮೇಲೂ ವಿಶ್ವಾಸ ಇಲ್ಲ. ಸದಾ ಏನನ್ನೋ ಚಿಂತೆ ಮಾಡುತ್ತಿರುತ್ತಾರಂತೆ. ಈಗೀಗ ಅವರು ತಮ್ಮ ನೆರಳನ್ನೂ ನಂಬುವುದಿಲ್ಲವಂತೆ ಎಂದೂ ಜನರು ತಮ್ಮತ್ತಮ್ಮಲ್ಲೇ ಮಾತಾಡಿಕೊಂಡರು. ಶ್ರೀಗಳ ಯೋಗಕ್ಷೇಮದ ಹೊಣೆ ಹೊತ್ತ ಆಪ್ತ ಸಿಬ್ಬಂದಿಗೂ ಅವರ ಸಮಸ್ಯೆ ಏನೆಂಬುದು ಗೊತ್ತಾಗಲಿಲ್ಲ. ಸದಾ ಮಂಕು ಕವಿದವರಂತೆ ಒಬ್ಬರೇ ಕೂತು ಯೋಚಿಸುತ್ತಾರೆ. ಅದೇನು ಯೋಚನೆಯೋ? ಮಠಕ್ಕೆ ಹಣಕಾಸಿನ ಸಮಸ್ಯೆಗಳಿಲ್ಲ. ಚಿಂತೆಗೆ ಏನು ಕಾರಣವೊ ಎಂದು ಯೋಚಿಸಿದರು. ಆಮೇಲೆ ದೊಡ್ಡವರ ವಿಷಯ ನಮಗೇಕೆ ಎನ್ನುವ ನಿಲುವು ತಾಳಿದರು. ಸಹಜಾನಂದರ ಆರೋಗ್ಯ ಹಾಳಾಗಿದೆ ಎನ್ನುವುದಕ್ಕೆ ಯಾವ ಸೂಚನೆಗಳೂ ಸಿಗಲಿಲ್ಲ. ಶ್ರೀಗಳದು ಮಾನಸಿಕ ಸಮಸ್ಯೆ ಇರಬಹುದು ಎಂದು ಅನೇಕರು ಊಹಿಸಿದರು.
*
‘ಪ್ರಭು, ನಿನ್ನ ಮನಸ್ಸಲ್ಲಿರುವ ಗೊಂದಲಗಳನ್ನು ನಿವಾರಿಸಿಕೊಳ್ಳಬೇಕು ಅಂತ ಯೋಚಿಸ್ತಾ ಇದೀಯಲ್ವ? ಒಂದು ಕೆಲಸ ಮಾಡು, ಈಗಲೇ ನನ್ನ ಡೈರಿ ಓದು. ನಿನ್ನ ಪ್ರಶ್ನೆಗಳಿಗೆ ಉತ್ತರ ಸಿಗಬಹುದು...’ ಎಂದು ನಿಶ್ಚಲಾನಂದರು ಬೆಳಗಿನ ಜಾವದ ಕನಸಿನಲ್ಲಿ ಕಾಣಿಸಿಕೊಂಡು ಅಪ್ಪಣೆ ಕೊಡಿಸಿದಂತೆ ಭಾಸವಾಯಿತು. ಅದು ಬರೀ ಕನಸಲ್ಲ, ಗುರುಗಳೇ ಬಂದು ಹೇಳಿದರು ಎಂದು ಸಹಜಾನಂದರು ನಂಬಿದರು.
‘ನಾನು ನಿನ್ನ ಬೆನ್ನ ಹಿಂದೆ ಇರುತ್ತೇನೆ...’ ಎಂದು ಕೊನೆಗಾಲದಲ್ಲಿ ಹೇಳಿದ್ದರಲ್ಲ. ಗುರುಗಳು ನನ್ನನ್ನು ಹೀಗೆ ಮಾನಸಿಕ ಕ್ಲೇಷಗಳಿಗೆ ದೂಡಿ ನನ್ನನ್ನು ಪರೀಕ್ಷಿಸುತ್ತಿರಬಹುದೇ ಎಂದು ಯೋಚಿಸಿದರು. ಈಗ ಅವರೇ ಕನಸಿನಲ್ಲಿ ಬಂದು ಸೂಚನೆ ಕೊಡುತ್ತಿರಬಹುದು ಎಂದು ಭಾವಿಸಿದರು. ಏನಾದರೂ ಆಗಿ ಹೋಗಲಿ ಗುರುಗಳ ಡೈರಿ ಓದಬೇಕು ಎಂಬ ನಿರ್ಧಾರಕ್ಕೆ ಬಂದರು.
ನಿಶ್ಚಲಾನಂದರ ಕೋಣೆಯನ್ನು ಅವರು ಬದುಕಿದ್ದಾಗ ಹೇಗಿತ್ತೋ ಹಾಗೇ ಉಳಿಸಿಕೊಂಡಿದ್ದರು. ಸಹಜಾನಂದರೇ ಎರಡು ದಿನಗಳಿಗೊಮ್ಮೆ ಕೋಣೆಯನ್ನು ಸ್ವಚ್ಚ ಮಾಡುತ್ತಿದ್ದರು. ಗುರುಗಳ ಮಂಚ, ಹಾಸಿಗೆ, ಬಳಸುತ್ತಿದ್ದ ವಸ್ತುಗಳು ಅವರ ಪೆನ್ನು, ಕನ್ನಡಕ, ಚಪ್ಪಲಿ, ಪುಸ್ತಕಗಳು ಇತ್ಯಾದಿ ಎಲ್ಲವನ್ನೂ ಜೋಪಾನ ಮಾಡಿದ್ದರು. ಅವರ ಬಟ್ಟೆ ಬರೆಗಳು ಹಾಳಾಗದಂತೆ ರಾಸಾಯನಿಕಗಳನ್ನು ಸಿಂಪಡಿಸಿ ಉಳಿಸಿಕೊಂಡಿದ್ದರು. ಗುರುಗಳ ಕೋಣೆಯೊಳಕ್ಕೆ ಯಾರೂ ಬರದಂತೆ ನೋಡಿಕೊಂಡಿದ್ದರು.
ಸಹಜಾನಂದರ ಕೋಣೆಗೆ ಹೊಂದಿಕೊಂಡಂತೆ ಇದ್ದ ಗುರುಗಳ ಕೋಣೆಯೊಳಗೆ ಇನ್ನೊಂದು ಚಿಕ್ಕ ಕೋಣೆ ಇತ್ತು. ಅದರಲ್ಲಿದ್ದ ಬೀರುವಿನಿಂದ ಡೈರಿ ಹೊರ ತೆಗೆದರು. ಡೈರಿ ಅಂದರೆ ನಿರಂತರವಾಗಿ ಬರೆದ ದಿನಚರಿಯಲ್ಲ. ಯಾವುದೋ ವರ್ಷದ ಹಳೆಯ ಡೈರಿ ಪುಸ್ತಕ. ಅದರ ಕೆಲ ಪುಟಗಳಲ್ಲಿ ಕೆಲವು ವಿಷಯಗಳನ್ನು ಬರೆದಿದ್ದರು.
ಜನವರಿ 9, 1950
‘ನನ್ನ ಮಾನಸ ಪಿತೃ, ಗುರು ಎಲ್ಲವೂ ಆಗಿರುವ ಕೃಷ್ಣದಾಸರ ಆರೋಗ್ಯ ಇವತ್ತು ತುಂಬಾನೆ ಕೆಟ್ಟಿದೆ. ವಯಸ್ಸಿನ ಭಾರದಿಂದ ಹಣ್ಣಾಗಿದ್ದಾರೆ. ಎದ್ದು ನಿಲ್ಲಲೂ ಅವರಿಗೆ ಆಗುತ್ತಿಲ್ಲ. ಅವರು ಹೆಚ್ಚು ದಿನ ಬದುಕುವುದಿಲ್ಲ. ಸದಾ ಏನನ್ನೋ ಚಿಂತಿಸುತ್ತಿರುತ್ತಾರೆ. ಅದೇನೆಂದು ಕೇಳುವ ಧೈರ್ಯ ನನಗೆ ಬರಲಿಲ್ಲ... ಬೆಳಗಿನಿಂದ ಮನಸ್ಸಿನಲ್ಲಿ ಆತಂಕ ಶುರುವಾಗಿದೆ. ಗುರುಗಳಿಗೆ ಏನಾದರೂ ಆಗಿಬಿಡುತ್ತೆ ಅನ್ನೋ ಭಯ ಕಾಡುತ್ತಿದೆ...’
ಜನವರಿ 10, 1950
ಇಡೀ ದಿನ ನಾನು ಅವರ ಕಾಲ ಬಳಿಯೇ ಕೂತಿದ್ದೆ. ಅವರು ಮಲಗಿದ್ದರು. ಪ್ರಜ್ಞೆ ಇತ್ತೋ, ಇಲ್ಲವೋ ಗೊತ್ತಾಗಲಿಲ್ಲ. ಬೆಳಿಗ್ಗೆ ಒಂದು ಲೋಟ ಹಾಲನ್ನಷ್ಟೇ ಕುಡಿದಿದ್ದರು. ಮಧ್ಯಾಹ್ನದ ಊಟವನ್ನೂ ಮಾಡಲಿಲ್ಲ. ಅವರ ದೇಹದಲ್ಲಿ ಎದ್ದು ಕೂರುವಷ್ಟು ಶಕ್ತಿ ಇರಲಿಲ್ಲ. ಮುಸ್ಸಂಜೆ ಹೊತ್ತಿನಲ್ಲಿ ಕಣ್ಣು ತೆರೆದರು. ಹತ್ತಿರ ಬಾ ಎಂದು ಸಂಜ್ಞೆ ಮಾಡಿ ಕರೆದರು.
ಅವರ ಧ್ವನಿ ಕ್ಷೀಣವಾಗಿತ್ತು. ‘ನಿಶ್ಚಲ, ನಾನು ಹೇಳೋದನ್ನು ಸರಿಯಾಗಿ ಕೇಳಿಸಿಕೊ ಅಂದರು. ಅವರು ಹೇಳಿದ್ದನ್ನು ಯಥಾವತ್ತಾಗಿ ಇಲ್ಲಿ ಬರೆದಿದ್ದೇನೆ...’
ಕೆಲವು ವರ್ಷಗಳ ಹಿಂದೆ, ಯಾವ ವರ್ಷ ಅನ್ನೋದು ಮರೆತಿದ್ದೇನೆ. ಏಳೆಂಟು ದಿನ ಒಂದೇ ಸಮನೆ ಮಳೆ ಸುರಿಯಿತು. ಅದು ಅಕಾಲ ಮಳೆ. ವಾತಾವರಣದ ಏರುಪೇರಿನಿಂದ ಉಂಟಾದದ್ದು. ಮಳೆಗೆ ಜನ ತತ್ತರಿಸಿದರು. ಅನೇಕರ ಮನೆಗಳು ಬಿದ್ದು ಹೋದವು ಅಂತಲೂ ಗೊತ್ತಾಯಿತು. ಅಂಥಾ ಮಳೆಯನ್ನು ನಾನು ನನ್ನ ಜೀವಮಾನದಲ್ಲೇ ನೋಡಿರಲಿಲ್ಲ!
ನಮ್ಮ ಈ ಊರು ಇರೋದೇ ತಗ್ಗು ಪ್ರದೇಶದಲ್ಲಿ. ಇನ್ನೂ ತಗ್ಗಿನ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಜೀವನ ಮಾಡುತ್ತಿದ್ದ ಬಡವರನ್ನು ಸ್ಥಳೀಯ ಆಡಳಿತ, ಅನುಕೂಲಸ್ಥರ ನೆರವಿನಿಂದ ಸುರಕ್ಷಿತ ಸ್ಥಳಕ್ಕೆ ಕಳಿಸಿತು. ಅನೇಕರ ಮನೆಗಳಲ್ಲಿ ಅಡುಗೆ ಮಾಡಿಕೊಳ್ಳಲು ಬೇಕಾದ ಪದಾರ್ಥಗಳು ಮುಗಿದು ಹೋಗಿದ್ದವಂತೆ. ಹೋಗಿ ತರೋಣವೆಂದರೆ ಮಳೆ ನಿಲ್ಲುತ್ತಿಲ್ಲ. ಜನ ಹಸಿವಿನಿಂದ ಕಂಗೆಟ್ಟಿದ್ದರು. ಒಬ್ಬರೋ, ಇಬ್ಬರೋ ಹಸಿವಿನಿಂದ ಸತ್ತರು ಅಂತಲೂ ಗೊತ್ತಾಯಿತು. ಮಳೆ ಬರುತ್ತಲೇ ಇತ್ತು. ಮಳೆ ಎಂದರೆ ಅಂತಿಂಥ ಮಳೆಯಲ್ಲ. ಆಕಾಶದಲ್ಲಿ ಇದ್ದ ಬದ್ದ ನೀರನ್ನೆಲ್ಲ ವರುಣ ದೇವರು ಸುರಿದು ಹಾಳು ಮಾಡುತ್ತಿದ್ದಾನೆ. ಅವನಿಗೆ ಜನರ ಮೇಲೆ ಸಿಟ್ಟು ಬಂದಿದೆ ಎಂದು ಭಾವಿಸುವಷ್ಟು.!
ರಾತ್ರಿ ಹತ್ತರ ಸಮಯ. ಆಶ್ರಮದ ಮಕ್ಕಳ ಊಟ ಮುಗಿದಿತ್ತು. ಎಲ್ಲರೂ ಮಲಗಿದ್ದರು. ನಾನು ಲಾಟೀನು ಬೆಳಕಿನಲ್ಲಿ ಏನನ್ನೋ ಓದುತ್ತ ಕುಳಿತಿದ್ದೆ. ಹೊರಗೆ ಸುರಿವ ಮಳೆಯಲ್ಲಿ ಮಗು ಅಳುವ ಸದ್ದು ಕೇಳಿಸಿದಂತೆ ಭಾಸವಾಯಿತು.!
ಹೌದು, ಮಗು ಅಳುವ ಸದ್ದು ಹೊರಗಿನಿಂದ ಬರುತ್ತಿದೆ! ಬಾಗಿಲು ಬಡಿದ ಸದ್ದು ಕೇಳಿಸಿತು. ಯಾರದೊ ಮಗು ಹಸಿವು, ಚಳಿಗೆ ಅಳುತ್ತಿರಬಹುದು ಎಂದುಕೊಂಡೆ. ಮಗು ಹಸಿದಿದೆ, ತಿನ್ನಲು ಏನಾದರೂ ಕೊಡಿ ಎಂದು ಕೇಳಲು ಮಗುವಿನ ತಾಯಿಯೋ, ತಂದೆಯೋ ಬಂದಿರಬಹುದು ಅನ್ನಿಸಿ ನೋಡೋಣವೆಂದು ಹೊರಕ್ಕೆ ಬಂದೆ. ಆಶ್ರಮದ ಹೊಸ್ತಿಲಲ್ಲಿ ಎಳೆಯ ಮಗುವೊಂದು ಅಳುತ್ತ ಮಲಗಿದೆ! ಗಂಡು ಮಗು. ಒದ್ದೆ ನೆಲದ ಮೇಲೇ ಮಲಗಿಸಿ ಹೋಗಿದ್ದಾರೆ! ಸುತ್ತಮುತ್ತ ನೋಡಿದೆ ಕಾರ್ಗತ್ತಲು. ಯಾರೂ ಕಾಣಲಿಲ್ಲ.
ಮಗು ಎತ್ತಿಕೊಂಡು ಒಳಕ್ಕೆ ಬಂದೆ. ಹೊದ್ದಿದ್ದ ಶಾಲು ತೆಗೆದು ನಡುಗುತ್ತಿದ್ದ ಮಗುವಿಗೆ ಹೊದಿಸಿದೆ. ಅಳು ನಿಲ್ಲಿಸಿತು. ಒಂದು ಸಲ ಕಣ್ಣು ತೆರೆದು ಮುಚ್ಚಿಕೊಂಡಿತು. ಮಗು ಹಸಿದಿರಬಹುದು ಅನ್ನಿಸಿ ಅಡುಗೆ ಮನೆಗೆ ಹೋದೆ. ಆಪತ್ಕಾಲಕ್ಕೆ ಇರಲಿ ಎಂದು ತಂದಿಟ್ಟಿದ್ದ ಹಾಲಿನಪುಡಿಯ ಡಬ್ಬ ಕೈಗೆ ಸಿಕ್ಕಿತು. ಒಲೆ ಹಚ್ಚಿ ನೀರು ಕಾಯಿಸಿ ಡಬ್ಬದಲ್ಲಿದ್ದ ಪುಡಿಯನ್ನು ಬೆರೆಸಿ ಹಾಲು ಸಿದ್ಧ ಮಾಡಿದೆ. ಉಗುರು ಬೆಚ್ಚಗಿನ ಹದಕ್ಕೆ ಬಂದ ಮೇಲೆ ಸಣ್ಣ ಚಮಚದಲ್ಲಿ ಮಗುವಿನ ಬಾಯಿಗೆ ಹಾಕಿದೆ. ಚಪ್ಪರಿಸಿಕೊಂಡು ಕುಡಿಯಿತು. ಐದಾರು ಚಮಚದಷ್ಟು ಕುಡಿದ ಮೇಲೆ ಸಾಕೆನಿಸಿತೇನೊ ಕಣ್ಣು ಮುಚ್ಚಿ ಮಲಗಿತು.
ಮಗುವನ್ನು ತಂದು ಬಾಗಿಲಲ್ಲಿ ಬಿಟ್ಟು ಹೋದವರು ಹೊರಗೆ ಇರಬಹುದೇನೋ ಅನ್ನಿಸಿ ನೋಡೋಣವೆಂದು ಮತ್ತೆ ಹೊರಕ್ಕೆ ಬಂದೆ. ಬಾಗಿಲ ಬಳಿ ದೊಡ್ಡ ಗೋಣಿ ಚೀಲ ಇತ್ತು!. ಮೊದಲು ಮಗುವೊಂದೇ ಇತ್ತು. ಈ ಚೀಲ ಎಲ್ಲಿಂದ ಬಂತು? ಅನ್ನಿಸಿ ಅತ್ತಿತ್ತ ನೋಡಿದೆ. ಯಾರೂ ಕಾಣಲಿಲ್ಲ. ಸಲೀಸಾಗಿ ಎತ್ತಲಾರದಷ್ಟು ಭಾರವಿತ್ತು ಚೀಲ. ಕೊನೆಗೆ ಪ್ರಯಾಸಪಟ್ಟು ಅದನ್ನು ಎಳೆದುಕೊಂಡೇ ಒಳಕ್ಕೆ ತಂದೆ. ಕೋಣೆಯೊಳಕ್ಕೆ ತರುವಷ್ಟರಲ್ಲಿ ನನಗೆ ಏದುಸಿರು ಬಂತು. ಬಿಚ್ಚಿ ನೋಡಿದರೆ ಬಂಗಾರದ ಗಟ್ಟಿಗಳು, ಒಡವೆಗಳು, ನೋಟಿನ ಕಂತೆಗಳು! ಜತೆಗೊಂದು ಪತ್ರ!
ಈ ಪತ್ರ ಓದುತ್ತಿರುವ ಮಹಾನುಭಾವರಿಗೆ... ಅಂತ ಶುರುವಾದ ಪತ್ರ.
‘ಈ ಮಗುವನ್ನು ಹೆತ್ತ ನಿರ್ಭಾಗ್ಯ ತಾಯಿ ನಾನು...
ನನ್ನ ಮಗನನ್ನು ಸಾಕಿ, ಬೆಳೆಸುವ ಶಕ್ತಿ ನನಗಿಲ್ಲ. ನನ್ನ ಕಾಲ ಮುಗಿಯುತ್ತ ಬಂದಿದೆ. ಚೀಲದಲ್ಲಿ ಇರುವ ಬಂಗಾರ, ಒಡವೆಗಳು, ಹಣ ನನ್ನ ಸ್ವಂತದ್ದು. ಇದನ್ನೆಲ್ಲ ತೆಗೆದುಕೊಂಡು ನನ್ನ ಮಗುವಿನ ಜವಾಬ್ದಾರಿ ನೋಡಿಕೊಳ್ಳಿ. ಇದಕ್ಕಿಂತ ಹೆಚ್ಚೇನೂ ಹೇಳಲಾರೆ...’ ಅನ್ನೋ ಒಕ್ಕಣೆ. ಪತ್ರಕ್ಕೆ ಸಹಿ ಇರಲಿಲ್ಲ.
ಮಗುವಿನ ಮುಖ ನೋಡಿದೆ. ಅದು ನಿಶ್ಚಲವಾಗಿತ್ತು. ಬದುಕಿರಬಹುದೇ ಅಂತ ಪರೀಕ್ಷಿಸಿದೆ. ಪುಪ್ಪಸ ಏರಿಳಿಯುವುದನ್ನು ನೋಡಿ ಬದುಕಿದೆ ಎಂದು ಖಚಿತ ಪಡಿಸಿಕೊಂಡೆ. ಎರಡು ದಿನಗಳ ನಂತರ ಮಳೆ ನಿಂತಿತು. ಆಮೇಲೆ ಕೆಲವು ದಿನಗಳಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಬಂತು. ಆದರೆ ಮಗು ನಿಶ್ಚಲವಾಗಿತ್ತು. ಯಾವಾಗಲಾದರೂ ಒಮ್ಮೆ ಕಣ್ಣು ತೆರೆದು ಹಸಿವಾದಾಗ ನಾಲಿಗೆ ಹೊರಚಾಚಿ ಬರಿದೇ ಚಪ್ಪರಿಸಿ ಮತ್ತೆ ಒಳಕ್ಕೆ ಎಳೆದುಕೊಳ್ಳುತ್ತಿತ್ತು. ಆಶ್ರಮದ ಮಕ್ಕಳಿಗೆ ತಮ್ಮ ಜತೆಗೆ ಇನ್ನೊಂದು ಜೀವ ಬಂತು ಅನ್ನೋ ಸಂತೋಷ. ನನಗೆ ಮಗು ಬದುಕುವುದು ಕಷ್ಟ ಅನ್ನೋ ಆತಂಕ ಹೆಚ್ಚಾಯಿತು. ಅದನ್ನು ಎತ್ತಿಕೊಂಡು ಪಂಡಿತರ ಬಳಿಗೆ ಓಡಿದೆ.
ಮಗು ಚೇತರಿಸಿಕೊಂಡಿತು. ಆಶ್ರಮದ ಇತರ ಮಕ್ಕಳ ಜತೆಗೆ ಪುಟ್ಟ ಕೂಸಿನ ಜವಾಬ್ದಾರಿ ಹೊತ್ತು ಕೊಂಡೆ. ಕೆಲಸದ ಹೆಣ್ಣೊಬ್ಬಳು ಮಗುವನ್ನು ನನಗೆ ಕೊಡಿ ಸಾಕಿಕೊಳ್ಳುತ್ತೇನೆ ಅಂದಳು. ಮಗುವನ್ನು ನೀನೇ ನೋಡಿಕೊಳ್ಳಬೇಕು. ಸದ್ಯಕ್ಕೆ ಅದು ನನ್ನ ಆಶ್ರಮದಲ್ಲೇ ಇರಲಿ. ಉಳಿದ ಮಕ್ಕಳ ಜತೆ ಬೆಳೆಯಲಿ. ಸಾಕುವ ಶಕ್ತಿ ನನಗಿದೆ. ಆಗದಿದ್ದರೆ ಮಗುವನ್ನು ನಿನಗೇ ಕೊಡುತ್ತೇನೆ ಅಂದೆ.
ಏಳೆಂಟು ದಿನ ಮಗು ಕಣ್ಣು ಪಿಳುಕಿಸುವುದರ ಹೊರತು ಮತ್ತೇನೂ ಸೂಚನೆ ಕೊಡದೆ ಬದುಕಿತ್ತು. ಚಲನೆ ಇಲ್ಲದ ಮಗು. ಅದಕ್ಕೆ ನಿಶ್ಚಲನೆಂದು ಹೆಸರಿಟ್ಟೆ. ಮುಂದೆ ಶಾಲೆಗೆ ಸೇರಿಸುವಾಗ ನಿಶ್ಚಲಾನಂದನೆಂದು ಬರೆಸಿದೆ. ಆ ಮಗು ನೀನೇ!.
‘ನನ್ನ ಆಯಸ್ಸು ಮುಗಿಯುತ್ತ ಬಂದಿದೆ. ನೀನು ನನ್ನ ಮಗನ ಸ್ಥಾನದಲ್ಲಿ ನಿಂತು ಆಶ್ರಮದ ಮಕ್ಕಳ ಜವಾಬ್ದಾರಿ ನೋಡಿಕೊಳ್ಳಬೇಕು... ಅಂತ ಹೇಳುವಷ್ಟರಲ್ಲಿ ಅವರು ಏದುಸಿರು ಬಿಡುತ್ತಿದ್ದರು....’
‘ಮರುದಿನ ಬೆಳಿಗ್ಗೆ ನನ್ನನ್ನು ಹತ್ತಿರಕ್ಕೆ ಕರೆದು ಕೂರಿಸಿಕೊಂಡು ಇವತ್ತೇ ನನ್ನ ಕೊನೆ ದಿನ ಆಗಬಹುದು.... ನಿನ್ನ ಅಮ್ಮ ನಿನಗೆಂದು ಬಿಟ್ಟು ಹೋದ ಬಂಗಾರ, ಒಡವೆಗಳನ್ನು ಕಾಪಾಡಿದ್ದೇನೆ. ನಿನ್ನಮ್ಮ ಬರೆದಿಟ್ಟಿದ್ದ ಪತ್ರವನ್ನೂ ಸಹ....’ ಎಂದರು.
ಆಗತಾನೇ ಎರಡನೇ ಮಹಾಯುದ್ಧ ಮುಗಿದಿತ್ತು. ದೇಶದ ವಿಮೋಚನೆಗೆ ನಡೆಯುತ್ತಿದ್ದ ಚಳವಳಿ ತೀವ್ರವಾಗಿತ್ತು. ದೇಶದಲ್ಲಿ ಆಹಾರದ ಕೊರತೆ ಇತ್ತು. ಇತರೆ ದಿನಬಳಕೆ ವಸ್ತುಗಳು, ಬಟ್ಟೆ ಬರೆಗೆ ಕಷ್ಟ ಇತ್ತು. ನನ್ನಲ್ಲಿ ಹಣ ಇರಲಿಲ್ಲ. ಎಷ್ಟೋ ದಿನ ಭಿಕ್ಷೆ ಎತ್ತಿ ಮಕ್ಕಳನ್ನು ಸಾಕಿದೆ. ಬೆಳಿಗ್ಗೆ ಮಕ್ಕಳನ್ನು ಎಬ್ಬಿಸಿ ಸ್ನಾನ ಮಾಡಿಸಿ, ಓದಲು ಕೂರಿಸಿ ಊರಿನ ಅನುಕೂಲಸ್ಥರ ಮನೆಗಳ ಮುಂದೆ ಹೋಗಿ ನಿಲ್ಲುತ್ತಿದ್ದೆ. ಆ ಕಷ್ಟದ ಕಾಲದಲ್ಲೂ ತಾಯಂದಿರು, ಅಕ್ಕ ತಂಗಿಯರು ಕೊಂಚವೂ ಬೇಸರ ಮಾಡಿಕೊಳ್ಳದೆ, ಮುಖ ಸಿಂಡರಿಸದೆ ಮನೆಯಲ್ಲಿದ್ದ ತಂಗಳನ್ನೊ, ಇಲ್ಲವೇ ಅವರಿಗಾಗಿ ಮಾಡಿಕೊಂಡಿದ್ದ ಅನ್ನ,ರೊಟ್ಟಿ, ಪಲ್ಯ,ಸಾರು ಕೊಡುತ್ತಿದ್ದರು. ಅವನ್ನು ತಂದು ಮಕ್ಕಳಿಗೆ ತಿನ್ನಿಸಿ ಅವರನ್ನು ಅಕ್ಷರಾಭ್ಯಾಸಕ್ಕೆ ಕಳಿಸುತ್ತಿದ್ದೆ. ಎಷ್ಟು ದಿನ ಅಂತ ಭಿಕ್ಷೆ ಎತ್ತಿ ಮಕ್ಕಳನ್ನು ಸಾಕೋದು? ಇನ್ನು ಭಿಕ್ಷೆ ಎತ್ತುವುದು ಕಷ್ಟ ಅನ್ನಿಸಿತು. ನಿನ್ನ ಅಮ್ಮ ನಿನಗೆ ಅಂತ ಕೊಟ್ಟು ಹೋಗಿದ್ದ ಹಣವನ್ನು ಮಕ್ಕಳ ಊಟಕ್ಕೆ, ಬಟ್ಟೆ ಬರೆಗೆ ಬಳಸಿಕೊಳ್ಳಲು ನಿರ್ಧರಿಸಿದೆ. ಅದು ನಿನಗೆ ಸೇರಬೇಕಾದ ಹಣ. ಅದನ್ನು ಬಳಸಿಕೊಳ್ಳದೆ ಮಕ್ಕಳನ್ನು ಸಾಕಲು ಸಾಧ್ಯವಿರಲಿಲ್ಲ, ಬಳಸಿಕೊಂಡೆ. ಅದರಲ್ಲಿ ಒಂದು ಸಣ್ಣ ಪಾಲು ನಿನಗೂ ಸಿಕ್ಕಿದೆ ಅನ್ನೋ ಸಮಾಧಾನ ನನಗಿದೆ.
ನಿನ್ನಮ್ಮ ಕೊಟ್ಟಿದ್ದ ಬಂಗಾರದಲ್ಲಿ ಒಂದೇ ಒಂದು ಗುಲಗಂಜಿಯಷ್ಟನ್ನೂ ನಾನು ಬಳಸಿಕೊಂಡಿಲ್ಲ. ಅದು ನನ್ನ ಕೋಣೆಯಲ್ಲಿದೆ. ಈಗ ಈ ಮಕ್ಕಳನ್ನು ನಿನಗೆ ಒಪ್ಪಿಸಿ ಹೋಗುತ್ತಿದ್ದೇನೆ. ಇವರನ್ನು ಜೋಪಾನ ಮಾಡುವ ಹೊಣೆ ನಿನ್ನದು. ಎಲ್ಲರನ್ನೂ ಒಂದು ದಡಕ್ಕೆ ಸೇರಿಸು. ಮುಂದೆ ನೀನು ಬೇರೆ ಯಾರನ್ನೂ ಸಾಕೋದು ಬೇಡ. ಇದು ತುಂಬಾ ಕಷ್ಟದ ಕೆಲಸ. ಆದರೆ ಈ ಮಕ್ಕಳನ್ನು ಬೀದಿಗೆ ಬಿಡಬೇಡ ಎಂದು ಕೈಮುಗಿದು ಕೇಳಿಕೊಂಡರು. ಆ ಕ್ಷಣ ಅವರ ಕಣ್ಣಲ್ಲಿದ್ದ ದೈನ್ಯತೆ ನೋಡಿ ನನಗೆ ಅಳು ಬಂತು. ಅವರ ಕೈಗಳನ್ನು ಹಿಡಿದು ನಿಮ್ಮ ಮಾತು ನಡೆಸಿ ಕೊಡುತ್ತೇನೆ ಅಂದೆ. ಅವತ್ತು ರಾತ್ರಿಯೇ ಗುರುಗಳು ಉಸಿರು ನಿಲ್ಲಿಸಿದರು....’ ಎಂದು ಬರೆದು ಉದ್ದನೆಯ ಗೆರೆ ಎಳೆದು ನಿಲ್ಲಿಸಿದ್ದರು. ಮುಂದಿನದನ್ನು ಯಾವ ದಿನಾಂಕದಂದು ಬರೆದರು ಎಂಬುದನ್ನು ಹೇಳಿರಲಿಲ್ಲ.
ಕೃಷ್ಣದಾಸರು ಸಾಯುವಾಗ ನನಗೆ ಇಪ್ಪತ್ತು ವರ್ಷ. ನನಗೆ ಓದುವುದು, ಬರೆಯುವುದು ಗೊತ್ತಿತ್ತು. ಆಶ್ರಮದಲ್ಲಿ ಹತ್ತು ಮಕ್ಕಳಿದ್ದವು. ಗುರುಗಳ ಮನೆಯೇ ಆಶ್ರಮ. ಅಮ್ಮ ನನಗೆ ಅಂತ ಬಿಟ್ಟುಹೋಗಿದ್ದ ಬಂಗಾರ, ಒಡವೆಗಳು ಗುರುಗಳ ಕೋಣೆಯಲ್ಲಿತ್ತಲ್ಲ, ಅದರಲ್ಲಿ ಸ್ವಲ್ಪ ಮಾರಾಟ ಮಾಡಿ ಆಶ್ರಮ ನಡೆಸಿದೆ. ವರ್ಷ ಕಳೆಯುವುದರೊಳಗೆ ಬೇಸರ ಬಂತು. ಇದು ನೀರಸವಾದ ಕೆಲಸ ಅನ್ನಿಸಿತು.
ಆಗ ಊರು ಸಣ್ಣದಿತ್ತು. ಊರ ತುಂಬಾ ಜನ. ಅವರಲ್ಲಿ ಕುಷ್ಠ ರೋಗಿಗಳೂ ಇದ್ದರು. ಅವರ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಅವರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿರಲಿಲ್ಲ. ಸಣ್ಣ ಊರಲ್ಲಿ ಇಷ್ಟು ಜನ ಕುಷ್ಠರು ಹೇಗೆ ಬಂದರು? ಅವರು ಇದೇ ಊರಿನವರೋ ಅಥವಾ ಹೊರಗಿನಿಂದ ಬಂದು ಸೇರಿಕೊಂಡವರೋ ಗೊತ್ತಿರಲಿಲ್ಲ. ಉಳಿದವರ ಪೈಕಿ ಬಹಳಷ್ಟು ಮಂದಿ ಕೆಳ ವರ್ಗದವರು. ಎಲ್ಲರೂ ಬಡವರು. ಬಹಳಷ್ಟು ಜನರಿಗೆ ಸರಿಯಾದ ಕೆಲಸಗಳೇ ಇರಲಿಲ್ಲ. ಜನ ಸದಾ ಮಂಕು ಕವಿದವರಂತೆ ಇರುತ್ತಿದ್ದರು. ಅವರ ಆರೋಗ್ಯವೂ ಚೆನ್ನಾಗಿರಲಿಲ್ಲ. ಎಲ್ಲರೂ ಅಕ್ಕ ಪಕ್ಕದ ಊರುಗಳು, ಸಮೀಪದ ಪಟ್ಟಣಕ್ಕೆ ಕೂಲಿ ಮಾಡಲು ಹೋಗುತ್ತಿದ್ದರು. ಸಂಜೆ ಊರಿಗೆ ಬಂದು ಉಂಡು ಮಲಗುತ್ತಿದ್ದರು. ಮಲಗಿದ ಮೇಲೆ ಎಲ್ಲರೂ ಕ್ರಿಯಾಶೀಲರಾಗಿದ್ದರಿಂದ ಅವರ ಸಂತಾನ ಬೆಳೆಯುತ್ತಿತ್ತು. ಎಲ್ಲವನ್ನೂ ನಾನು ಸೂಕ್ಷ್ಮವಾಗಿ ಗಮನಿಸಿದೆ. ಈ ಊರಲ್ಲಿದ್ದು ಆಶ್ರಮದ ಮಕ್ಕಳನ್ನು ಸಾಕಿ ಬೆಳೆಸುವುದರಲ್ಲಿ ಅರ್ಥವಿಲ್ಲ ಅನ್ನಿಸಿತು.
ಜನರು ನೆಮ್ಮದಿಯಾಗಿ ಬದುಕಲು ಏನಾದರೂ ಮಾಡಬೇಕು ಅನ್ನಿಸಿತು. ಅದು ನನ್ನೊಬ್ಬನಿಂದ ಆಗುವ ಕೆಲಸವಲ್ಲ ಅನ್ನಿಸಿತು. ಮುಂದಿನ ಪೀಳಿಗೆಯವರಾದರೂ ಊರು ಬಿಟ್ಟು ಬೇರೆ ಕಡೆ ಹೋಗಿ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗುವಂಥದ್ದು ಏನಾದರೂ ಮಾಡಬೇಕು ಎಂದು ಯೋಚಿಸಿದೆ. ಊರ ಮಕ್ಕಳಿಗೆ ಓದು, ಬರಹ ಕಲಿಸಿದರೆ ಅವರಿಗೆ ತಮ್ಮ ಕಾಲ ಮೇಲೆ ನಿಲ್ಲುವ ಶಕ್ತಿ ಬರಹುದು ಅನ್ನಿಸಿತು. ಹಗಲು,ರಾತ್ರಿ ಅದನ್ನೇ ಕುರಿತು ಯೋಚಿಸಿದೆ. ಮುಂದಿನ ದಾರಿ ಕಾಣಿಸಿತು
ನಮ್ಮೂರ ಸಮೀಪವೇ ಇದ್ದ ಸಣ್ಣ ಪಟ್ಟಣದಲ್ಲಿ ಮಿಷನರಿಯವರ ಒಂದು ಸ್ಕೂಲಿತ್ತು. ಆಶ್ರಮದ ಮತ್ತು ಊರಿನ ಬಡ ಮಕ್ಕಳು ಅಲ್ಲಿಗೆ ಹೋಗುವುದು ಸಾಧ್ಯವಿರಲಿಲ್ಲ. ಊರ ಮಕ್ಕಳಿಗಾಗಿ ಒಂದು ಕನ್ನಡ ಶಾಲೆ ತೆರೆಯುತ್ತೇನೆ ಅನುಮತಿ ಕೊಡಿ ಅಂತ ಸರ್ಕಾರಕ್ಕೆ ಅರ್ಜಿ ಬರೆದೆ. ಸರ್ಕಾರ ಹಿಂದೆ ಮುಂದೆ ನೋಡದೆ ಅನುಮತಿ ಕೊಟ್ಟಿತು. ಶಾಲೆ ಕಟ್ಟಲು ಊರ ಹೊರಗೆ ಸ್ವಲ್ಪ ಜಾಗವನ್ನೂ, ಜತೆಗೆ ಸ್ವಲ್ಪ ಹಣವನ್ನೂ. ನನ್ನ ಅಮ್ಮ, ನನಗೆಂದು ಬಿಟ್ಟುಹೋಗಿದ್ದ ಬಂಗಾರ ಇತ್ತಲ್ಲ. ಅದನ್ನು ಮಾರಾಟ ಮಾಡಿದೆ. ಹತ್ತಾರು ಮಕ್ಕಳ ಭವಿಷ್ಯ ರೂಪಿಸುವ ಕೆಲಸಕ್ಕೆ ಕೈಹಾಕಿದೆ. ನನ್ನ ಪ್ರಯತ್ನ ಯಶಸ್ವಿಯಾಯಿತು. ಮೊದಲು ಪ್ರೈಮರಿ ಸ್ಕೂಲು. ಆಮೇಲೆ ಮಿಡ್ಲ್ ಸ್ಕೂಲು, ನಂತರ ಹೈಸ್ಕೂಲು ಆ ಮೇಲೆ ಕಾಲೇಜುಗಳು, ಹಾಸ್ಟೆಲುಗಳನ್ನು ಆರಂಭಿಸಿದೆ. ಇಪ್ಪತ್ತೈದು ವರ್ಷಗಳಲ್ಲಿ ನನ್ನ ಗುರುಗಳ ಅನಾಥಾಶ್ರಮ ವಿಜ್ಞಾನಾಶ್ರಮದ ಹೆಸರಿನಲ್ಲಿ ತಲೆ ಎತ್ತಿತು. ಸಾವಿರಾರು ಮಕ್ಕಳು ಬಂದರು. ಆಶ್ರಮದಲ್ಲೇ ಇದ್ದುಕೊಂಡು ಓದಿದರು.
‘ನಿಶ್ಚಲಾನಂದ ಯಾವ ತಾಯಿ ಹೆತ್ತ ಮಗನೋ, ಅವನದು ತಾಯಿ ಹೃದಯ. ನೂರಾರು ಮಕ್ಕಳಿಗೆ ಅನ್ನ ಹಾಕಿ ಓದಲು ಅವಕಾಶ ಮಾಡಿಕೊಟ್ಟ ಮಹಾನುಭಾವ...’ ಎಂದು ಜನ ಕೊಂಡಾಡುತ್ತಿದ್ದರು.
ಅಂಥ ಮಾತುಗಳನ್ನು ಕೇಳಿದಾಗಲೆಲ್ಲ ನನ್ನ ಮನಸ್ಸಿಗೆ ನೋವಾಗುತ್ತಿತ್ತು. ತನ್ನ ಹೆಸರನ್ನೂ ಹೇಳಿಕೊಳ್ಳಲು ಹಿಂಜರಿದ, ನನ್ನನ್ನು ಸಾಕಲಾಗದ, ಎಳೆಯ ಕೂಸು ಅನ್ನೋ ಕನಿಕರವೂ ಇಲ್ಲದೆ ಗುರುಗಳ ಆಶ್ರಮದ ಬಾಗಿಲಲ್ಲಿ ಬಿಟ್ಟುಹೋದ ನತದೃಷ್ಟ ತಾಯಿಯ ಮಗ ನಾನು ಅನ್ನೋದು ನೆನಪಾಗುತ್ತಿತ್ತು. ಆ ನೋವನ್ನು ಅರಗಿಸಿಕೊಳ್ಳಲು ನನಗೆ ಆಗಲೇ ಇಲ್ಲ. ಅದನ್ನು ಮರೆಯಲೆಂದೇ ನಾನು ಇನ್ನಷ್ಟು, ಮತ್ತಷ್ಟು ಅನಾಥ ಮತ್ತು ಬಡ ಮಕ್ಕಳನ್ನು ಸಾಕುವ ನಿರ್ಧಾರ ಮಾಡಿದೆ. ಮಕ್ಕಳು ಉತ್ತಮ ಪ್ರಜೆಗಳಾಗಬೇಕು ಎಂದು ಅವರಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಹುಟ್ಟಿಸಿದೆ. ವೈಜ್ಞಾನಿಕ ಮನೋಭಾವ ಬೆಳೆಸಿದೆ. ಇಂಗ್ಲಿಷ್ ಕಲಿಯಲು ಉತ್ತೇಜಿಸಿದೆ.
ಜನ, ನನ್ನನ್ನು ಗುರೂಜಿ ಅಂತ ಕರೆದು ಗೌರವ ಕೊಡುತ್ತಿದ್ದರು. ಆದರೆ ನಾನು ಗುರು ಅನ್ನುವ ಭಾವನೆ ಬೆಳೆಸಿಕೊಳ್ಳಲಿಲ್ಲ. ಎಲ್ಲರಂತೆ ಸಾಮಾನ್ಯ ಮನುಷ್ಯ ಅನ್ನೋ ಮನಸ್ಥಿತಿಯಲ್ಲೇ ಉಳಿದೆ. ಈ ಆಶ್ರಮ, ಸ್ಕೂಲು, ಕಾಲೇಜುಗಳ ಬೆಲೆ ಎಷ್ಟೆಂಬುದರ ಅಂದಾಜಿಲ್ಲ. ಇವನ್ನೆಲ್ಲ ಕಟ್ಟಲು ಬೇಕಾದ ಭೂಮಿಯನ್ನು ಸರ್ಕಾರ ಕೊಟ್ಟಿತು. ಇನ್ನಷ್ಟು ಭೂಮಿ ನಾನೇ ಖರೀದಿಸಿದೆ. ಒಳ್ಳೆಯ ಕೆಲಸಕ್ಕೆ ಅಂತ ಕೆಲವರು ತಮ್ಮ ಭೂಮಿಯನ್ನು ಕಡಿಮೆ ಹಣಕ್ಕೆ ನನಗೆ ಮಾರಿದರು. ನೀನು ಒಳ್ಳೆಯ ಕೆಲಸ ಮಾಡುತ್ತಿದ್ದೀಯ ಅಂತ ದೂರದ ಊರುಗಳ ಸಜ್ಜನರು ನಾನು ಕೇಳದಿದ್ದರೂ ಹಣ ಕೊಟ್ಟು ಸಹಾಯ ಮಾಡಿದರು.
ನಮ್ಮೂರಿನ ಕುಷ್ಠ ರೋಗಿಯೊಬ್ಬ ತನ್ನ ಒಂದು ಎಕರೆ ಭೂಮಿಯನ್ನು ಆಶ್ರಮಕ್ಕೆ ದಾನ ಕೊಡಲು ಬಂದ. ನೀನೇ ಕಷ್ಟದಲ್ಲಿದ್ದೀಯ, ದಾನ ಬೇಡ, ಹಣ ಕೊಡುತ್ತೇನೆ ಖರೀದಿಗೆ ಕೊಡು ಎಂದೆ. ಹಣ ಪಡೆಯಲು ಅವನು ಒಪ್ಪಲಿಲ್ಲ. ಈ ಭೂಮಿ ಇಟ್ಟುಕೊಂಡು ನಾನೇನು ಮಾಡಲಿ. ನಿಮಗೆ ಕೊಟ್ಟರೆ ಪುಣ್ಯವಾದರೂ ಬರುತ್ತೆ. ಮಕ್ಕಳಿಗೆ ಅನುಕೂಲವಾಗುತ್ತೆ ಅಂದ. ನೀನು ಒಳ್ಳೆಯ ಕೆಲಸ ಮಾಡುತ್ತಿದ್ದೀಯ, ಇದೇ ದೇವರ ಸೇವೆ ಎಂದು ಹೇಳುತ್ತ ತನ್ನ ಕೈಯನ್ನು ನನ್ನ ಕೈಮೇಲಿಟ್ಟು ತನ್ನ ಚೊಂಬಿನಿಂದ ಸ್ವಲ್ಪ ನೀರು ಹಾಕುತ್ತ ಇವತ್ತಿನಿಂದ ನನ್ನ ಈ ಭೂಮಿ ನಿನ್ನದು ಅಂದ. ಆ ಕ್ಷಣ ನನ್ನ ಹೃದಯ ತುಂಬಿ ಬಂದು ಕಣ್ಣುಗಳು ಮಂಜಾದವು. ಆ ಮೇಲೆ ಅವನು ಎಲ್ಲಿಗೆ ಹೋದನೋ ಗೊತ್ತೇ ಆಗಲಿಲ್ಲ. ಮತ್ತೆಂದೂ ಅವನು ನನ್ನ ಕಣ್ಣಿಗೆ ಬೀಳಲಿಲ್ಲ. ಅವನ ನಿಸ್ವಾರ್ಥ ಮನಸ್ಥಿತಿ ನನ್ನ ಮೇಲೆ ತುಂಬಾ ಪರಿಣಾಮ ಬೀರಿತು. ಅವನು ನಿಜವಾದ ಮಹಾನುಭಾವ. ಅವನ ನಿರ್ಮಲ ಮನಸ್ಸು ನನಗೆ ಆದರ್ಶವಾಯಿತು. ಅವನಂತೆ ಅನೇಕರು ನನಗೆ ಸಹಕಾರ ಕೊಟ್ಟರು. ಅಂಥ ಹತ್ತಾರು ಜನರ ನೆರವು ಪಡೆದುಕೊಂಡು ಈ ಆಶ್ರಮ ಕಟ್ಟಿ ಬೆಳೆಸಿದೆ.
ಆಶ್ರಮ ದೊಡ್ಡದಾಗಿ ಬೆಳೆದ ಮೇಲೆ ಅನೇಕರ ಕಣ್ಣು ಅದರ ಮೇಲೆ ಬಿತ್ತು. ಆಶ್ರಮದ ನಿರ್ವಹಣೆಗೆ ಒಂದು ಸಮಿತಿ ಮಾಡು ಎಂದು ಕೆಲವರು ದುಂಬಾಲು ಬಿದ್ದರು. ರಾಜಕಾರಣಿಯೊಬ್ಬರು ಇದನ್ನು ಮಠವನ್ನಾಗಿ ಮಾಡು ಅಂತ ಒತ್ತಾಯ ಮಾಡಿದರು. ಮಠವಾದರೆ ನಮ್ಮ ಸಮಾಜದ ಆಸ್ತಿಯಾಗಿ ಅನೇಕ ತಲೆಮಾರುಗಳ ತನಕ ಉಳಿಯುತ್ತೆ. ನಿರ್ವಹಣೆ ಮಾಡೋದು ಸುಲಭ ಅಂದರು.
ಮಠದ ಪೀಠದ ಮೇಲೆ ತಮಗೆ ಬೇಕಾದವನನ್ನು ಕೂರಿಸಿ ಎಲ್ಲವನ್ನೂ ಕಬಳಿಸುವ ದುರಾಲೋಚನೆ ಅವರದು ಅಂತ ನನಗೆ ಅರ್ಥವಾಯಿತು. ನಾನು ಒಪ್ಪಲಿಲ್ಲ. ಕಿರುಕುಳ ಶುರುವಾದವು. ಕೊಲೆ ಮಾಡಿಸುವ ಬೆದರಿಕೆ ಹಾಕಿದರು. ನಾನು ತಣ್ಣಗಿದ್ದು ಎಲ್ಲವನ್ನೂ ಎದುರಿಸಿದೆ. ಆಮೇಲೆ ಕೆಲವರು ನಾವು ನಿಮ್ಮ ಜಾತಿಯವರು ಎಂದು ಹೇಳಿಕೊಂಡು ಬಂದರು. ನಿಮ್ಮ ನಂತರ ಆಶ್ರಮದ ಆಸ್ತಿ ಬೇರೆಯವರ ಪಾಲಾಗುವುದನ್ನು ತಪ್ಪಿಸಬೇಕು. ನಮ್ಮವರಿಗೇ ಉಸ್ತುವಾರಿ ಕೊಟ್ಟು ಹೋಗಬೇಕು ಎಂದು ಒತ್ತಾಯಿಸಿದರು.
‘ನಾನು ನಿಮ್ಮ ಜಾತಿಯವನಲ್ಲ. ಯಾವ ಜಾತಿಯವನು ಅನ್ನೋದೂ ನನಗೆ ಗೊತ್ತಿಲ್ಲ ಅಂದೆ. ಅವರಿಗೆ ಸಿಟ್ಟು ಬಂತು. ನಿಮ್ಮ ಮನಸ್ಸಿಗೆ ಬಂದ ಹಾಗೆ ಮಾಡಿ...’ ಎಂದು ಹೇಳಿ ಹೊರಟೇಹೋದರು. ಕ್ರಮೇಣ ಅವರೆಲ್ಲ ನನ್ನಿಂದ, ನನ್ನ ಆಶ್ರಮದಿಂದ ದೂರವಾದರು.
ನನ್ನನ್ನು ಸಾಕಿ ಬೆಳೆಸಿದ ಕೃಷ್ಣದಾಸರು ದೇವತಾ ಮನುಷ್ಯರು. ಅವರು ಅನಾಥ ಮಕ್ಕಳಿಗಾಗಿ ಆಶ್ರಮ ತೆರೆಯಲು ಕಾರಣವೇನು? ಅವರ ಹಿನ್ನೆಲೆ ಏನು ಎನ್ನುವುದು ನನಗೂ ಸರಿಯಾಗಿ ಗೊತ್ತಿಲ್ಲ. ಅವರ ಹೆಂಡತಿ ಮಕ್ಕಳು ಒಂದೇ ದಿನ ಪ್ಲೇಗು ಬಂದು ಸತ್ತರು ಎನ್ನುವುದು ಗೊತ್ತಿತ್ತು. ಅವರದು ನಿಷ್ಕಲ್ಮಶ ಮನಸ್ಸು. ನನ್ನ ಮೇಲೆ ವಿಶ್ವಾಸ ಇಟ್ಟು ಆಶ್ರಮದ ಮತ್ತು ಮಕ್ಕಳ ಜವಾಬ್ದಾರಿಯನ್ನು ಹೊರಿಸಿದರು. ಆಶ್ರಮದ ಹೆಸರು ಉಳಿಸು ಅಂದರು. ನಿನ್ನ ಮೇಲೆ ನನಗೆ ನಂಬಿಕೆ ಇದೆ ಅಂದರು. ಗುರುಗಳು ನನಗೆ ವಹಿಸಿದ ಜವಾಬ್ದಾರಿಯನ್ನು ಹೊತ್ತು ನಿರ್ವಹಿಸುವ ನಿರ್ಧಾರ ಮಾಡಿದೆ. ಗುರುಗಳ ಮನಸ್ಥಿತಿಯನ್ನು ಬೆಳೆಸಿಕೊಂಡೆ. ಅವರ ಆಶ್ರಮವನ್ನು ಜ್ಞಾನದ ದೇಗುಲವಾಗಿ ಬೆಳೆಸಲು ಪ್ರಯತ್ನಿಸಿದೆ. ನಮ್ಮ ಸುತ್ತ ಒಳ್ಳೆಯ ಮನಸ್ಸಿನ ಸಾವಿರಾರು ಜನ ಈಗಲೂ ಇದ್ದಾರೆ. ಮುಂದೆಯೂ ಇರುತ್ತಾರೆ. ಈ ಆಶ್ರಮ ಅಂತಹ ಜನರದ್ದಾಗಬೇಕು. ನಮ್ಮ ಆಶ್ರಮ ಯಾವುದೋ ಒಂದು ಜಾತಿ, ಧರ್ಮದವರದಲ್ಲ ಎನ್ನುವುದು ನಿನಗೆ ಸದಾ ನೆನಪಿರಲಿ.
ನಮ್ಮೂರಿನ ಕುಷ್ಠರೋಗಿಗಳಿಗೆ ನಾನು ಏನನ್ನೂ ಮಾಡಲಿಲ್ಲ. ಒಂದು ಎಕರೆ ಭೂಮಿ ದಾನ ಮಾಡಿದವನ ಋಣ ತೀರಿಸಲು ಆಗಲಿಲ್ಲ. ಅವನ ನೆನಪಿನಲ್ಲಿ ಕುಷ್ಠರಿಗೊಂದು ಆಸ್ಪತ್ರೆಯನ್ನು ಕಟ್ಟಿಸುವ ಮನಸ್ಸಿತ್ತು. ಅದೂ ಸಾಧ್ಯವಾಗಲಿಲ್ಲ.
ಗುರುಗಳ ಮನೆಯನ್ನೇ ಜನರು ಅನಾಥಾಶ್ರಮ ಎನ್ನುತ್ತಿದ್ದರು. ನಾನು ನಮ್ಮ ಶಾಲೆಗಳಿದ್ದ ಕ್ಯಾಂಪಸ್ಸನ್ನು ವಿಜ್ಞಾನಾಶ್ರಮ ಎಂದು ಹೆಸರಿಸಿ ಅಧಿಕೃತವಾಗಿ ರಿಜಿಸ್ಟರು ಮಾಡಿಸಿದೆ. ಆಶ್ರಮ ಮುಂದೆಯೂ ಹೀಗೇ ಇರಬೇಕು ಎನ್ನುವುದು ನನ್ನ ಮತ್ತು ಗುರುಗಳ ಆಸೆ. ಅವರು ಆಶ್ರಮದ ಜವಾಬ್ದಾರಿ ನನಗೆ ವಹಿಸಿಕೊಡುವಾಗ ಇದು ನನ್ನದು. ನಿನಗೆ ಕೊಟ್ಟು ಹೋಗುತ್ತಿದ್ದೇನೆ ಎನ್ನುವ ಭಾವ ಅವರಲ್ಲಿ ಇರಲಿಲ್ಲ. ಆಶ್ರಮ ನಿರಂತರವಾಗಿ ತನ್ನ ಕೆಲಸ ಮಾಡುತ್ತಿರಬೇಕು ಎಂದಷ್ಟೇ ಅವರು ಬಯಸಿದ್ದರು. ಈಗ ನಾನೂ ಅದೇ ಭಾವದಲ್ಲಿ ನಿನಗೆ ವಹಿಸಿಕೊಡಲು ತೀರ್ಮಾನಿಸಿದ್ದೇನೆ. ಇದು ನನ್ನ ತೀರ್ಮಾನ. ಮುಂದೆ ನೀನು ಆಶ್ರಮದ ಜವಾಬ್ದಾರಿಯನ್ನು ಬೇರೊಬ್ಬರಿಗೆ ವಹಿಸಿಕೊಡುವಾಗ ಇದೇ ಮನಸ್ಥಿತಿಯಲ್ಲಿ ಯೋಗ್ಯ ವ್ಯಕ್ತಿಯ ಕೈಗೆ ಜವಾಬ್ದಾರಿ ಕೊಟ್ಟು ಹೋಗಬೇಕು... ಎಂದು ಬರೆದು ನಿಲ್ಲಿಸಿದ್ದರು. ಕೆಳಗೆ ನಿಶ್ಚಲಾನಂದ ಎಂದು ಸಹಿ ಮಾಡಿದ್ದರು. ಮೇಲಿನ ವಿಷಯಗಳನ್ನು ಯಾವ ದಿನ ಬರೆದರು ಎಂಬುದರ ಸೂಚನೆ ಇರಲಿಲ್ಲ.
ಡೈರಿ ಓದಿ ಮುಗಿಸುವ ಹೊತ್ತಿಗೆ ಸಹಜಾನಂದ ಮನಸ್ಸು ಆರ್ದ್ರವಾಯಿತು. ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ಅಳಬಾರದು ಎಂದು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಸಣ್ಣ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತರು. ತುಂಬಾ ಹೊತ್ತಿನ ತನಕ ಅಳುತ್ತಲೇ ಇದ್ದರು. ಆನಂತರ ಸ್ವಲ್ಪ ಹೊತ್ತು ದಿಕ್ಕು ತಪ್ಪಿದವರಂತೆ ಸುಮ್ಮನೆ ಕೂತರು.
ಕೃಷ್ಣದಾಸರು, ನಿಶ್ಚಲಾನಂದರು ನಿಂತ ಜಾಗದಲ್ಲಿ ಕೂತಿರುವ ಸಣ್ಣ ಮನುಷ್ಯ ನಾನು ಎಂಬ ಭಾವ ಅವರನ್ನು ಆವರಿಸಿಕೊಂಡಿತು. ನಿಸ್ವಾರ್ಥ ಮನಸ್ಸು, ವಿಶಾಲ ಹೃದಯದ ಗುರುಗಳ ಹೆಸರು ಹೇಳುವ ಯೋಗ್ಯತೆ ನನಗಿಲ್ಲ ಅನ್ನಿಸಿತು.
ಅನಾಥ ಮಕ್ಕಳಿಗಾಗಿ ಆಶ್ರಮ ತೆರೆದು, ಭಿಕ್ಷೆ ಎತ್ತಿ ಅವರ ಹಸಿವು ನೀಗಿಸಿದ ಕೃಷ್ಣದಾಸರು, ಅನ್ನ ಹಾಕಿ ಜತೆಗೆ ಅಕ್ಷರ ಕಲಿಸಿದ ನಿಶ್ಚಲಾನಂದರು ನಿಜಕ್ಕೂ ದೊಡ್ಡವರು. ದೊಡ್ಡವರೆಂದರೆ ಮನುಷ್ಯರಾಗಿದ್ದುಕೊಂಡೇ ದೇವತ್ವಕ್ಕೆ ಏರಿದ ಮಹಾ ಪುರುಷರು. ನಾನು ಅವರ ಕಾಲಿನ ದೂಳಿಗೂ ಸಮನಲ್ಲ ಅನ್ನಿಸಿದ ಕೂಡಲೇ ಮತ್ತೆ ಭಾವುಕರಾದರು. ಕಣ್ಣುಗಳು ತುಂಬಿಬಂದವು. ಅಳಬಾರದು ಎಂದು ನಿರ್ಧರಿಸಿದರು. ಪ್ರಯಾಸಪಟ್ಟು ನಿಯಂತ್ರಿಸಿಕೊಂಡರು.
ಟ್ರಸ್ಟಿನ ಅಧಿಕಾರ ವಹಿಸಿಕೊಳ್ಳುವ ಮೊದಲು ಡೈರಿ ಓದಿದ್ದರೆ, ಮಠ ಮಾಡು ಎಂದು ಒತ್ತಾಯಿಸಿದ ಮುಖ್ಯಮಂತ್ರಿಗೆ ಉತ್ತರ ಹೇಳುವ ಧೈರ್ಯ ಬರುತ್ತಿತ್ತು. ಈ ಮೊದಲೇ ಓದದೆ ತಪ್ಪು ಮಾಡಿದೆ ಎಂದು ಮತ್ತೆ ಪೇಚಾಡಿಕೊಂಡರು. ಮನಸ್ಸು ಖಾಲಿಯಾಗಿತ್ತು. ಕುಳಿತೇ ಇದ್ದರು. ಹಾಗೇ ನಿದ್ದೆಗೆ ಜಾರಿದರು. ನಿದ್ದೆ ಎಂದರೆ ಗಾಢ ನಿದ್ದೆ. ಸುಮಾರು ಹೊತ್ತು ಅವರಿಗೆ ಎಚ್ಚರ ಆಗಲಿಲ್ಲ.
ಸಹಜಾನಂದರ ಕಣ್ಣೆದುರು ಇಬ್ಬರು ನಡೆದು ಹೋಗುತ್ತಿದ್ದಾರೆ. ಮುಂದಿದ್ದವರು ಸ್ವಲ್ಪ ಕುಳ್ಳನೆಯ ಸ್ಥೂಲದೇಹಿ. ಬಹುಶಃ ಅವರು ಕೃಷ್ಣದಾಸರಿರಬೇಕು. ಅವರ ಹಿಂದೆ ಇದ್ದವರು ನಿಶ್ಚಯವಾಗಿಯೂ ನಿಶ್ಚಲಾನಂದ ಗುರುಗಳು. ಇಬ್ಬರ ಬೆನ್ನುಗಳಷ್ಟೇ ಕಾಣಿಸಿತು. ಅವರು ನಡೆಯುತ್ತಲೇ ಇದ್ದರು. ಸಹಜಾನಂದರೂ ಅವರ ಹಿಂದೆ ನಡೆದು ಹೋಗುವ ಪ್ರಯತ್ನ ಮಾಡಿದರು, ಸಾಧ್ಯವಾಗಲಿಲ್ಲ. ಕಾಲುಗಳನ್ನು ಎತ್ತಿ ಇಡಲೂ ಆಗಲಿಲ್ಲ. ಗುರುಗಳೇ ನಿಲ್ಲಿ. ನಾನೂ ನಿಮ್ಮ ಜತೆ ಬರುತ್ತೇನೆ. ನನ್ನನ್ನೂ ಕರೆದುಕೊಂಡು ಹೋಗಿ ಎಂದು ಕೂಗುತ್ತಲೇ ಇದ್ದರು. ಆದರೆ ಸಹಜಾನಂದರ ಮಾತನ್ನು ಗುರುದ್ವಯರು ಕೇಳಿಸಿಕೊಳ್ಳಲಿಲ್ಲ. ಕೇಳಿಸಿಕೊಂಡರೇನೋ ಆದರೆ ನಿಲ್ಲಲಿಲ್ಲ. ಹಿಂದಕ್ಕೆ ತಿರುಗಿ ನೋಡಲೂ ಇಲ್ಲ. ಅಷ್ಟರಲ್ಲಿ ಎಚ್ಚರವಾಯಿತು.
ಇಳಿ ಸಂಜೆಯಲ್ಲಿ ಬಿದ್ದ ಸ್ಪಷ್ಟ ಕನಸು. ಕಿಟಕಿ ಮೂಲಕ ಹೊರಗೆ ನೋಡಿದರು. ಕತ್ತಲಾಗಿತ್ತು. ಧ್ಯಾನ ಮಂದಿರದಿಂದ ಬರುತ್ತಿದ್ದ ಸದ್ದು ಕೇಳಿಸಿತು. ಪ್ರಾರ್ಥನೆ ಮುಗಿಸಿ ಮಕ್ಕಳು ಊಟಕ್ಕೆ ಹೊರಟಿರಬೇಕು ಅನ್ನಿಸಿತು. ಕೋಣೆಯಿಂದ ಹೊರ ಬಂದರು.
ಕೃತಿ : ಬಹುರೂಪಿ (ಕಾದಂಬರಿ)
ಲೇಖಕರು : ಪ್ರೇಮಕುಮಾರ್ ಹರಿಯಬ್ಬೆ
ಪುಟ : ೨೫೦
ಬೆಲೆ : ರೂ. ೨೫೦
ಮುಖಪುಟ ವಿನ್ಯಾಸ : ಮನೋಹರ್ ಆಚಾರ್ಯ
ಪ್ರಕಾಶನ : ಗೀತಾಂಜಲಿ ಪಬ್ಲಿಕೇಷನ್ಸ್
ಪ್ರೇಮಕುಮಾರ್ ಹರಿಯಬ್ಬೆ
ಬೆಂಗಳೂರಿನಲ್ಲಿ ವಾಸವಾಗಿರುವ ಪ್ರೇಮಕುಮಾರ್ ಹರಿಯಬ್ಬೆ ಚಿತ್ರದುರ್ಗ ಜಿಲ್ಲೆಯ ಹರಿಯಬ್ಬೆಯವರು. ೩೮ ವರ್ಷಗಳ ಕಾಲ ಪ್ರಜಾವಾಣಿಯಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ ಇವರಿಗೆ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. “ಸತ್ತವರ ಬದುಕು”, “ದೇವ ಕಣಗಿಲೆ”, “ಅಕಾಲ” ಇವರ ಪ್ರಕಟಿತ ಕಥಾಸಂಕಲನಗಳು. ಪ್ರಸ್ತುತ “ಬಹುರೂಪಿ” ಮೊದಲ ಕಾದಂಬರಿ. “ನಾಟಕೀಯ” ಕಥಾಸಂಕಲನ ಅಚ್ಚಿನಲ್ಲಿದೆ.