ಸಂಘರ್ಷ ಸಮನ್ವಯಗಳ ಹದವರಿತ ಮೇಧಾಶಕ್ತಿ
ಡಾ. ಬಿ ಎಂ ತಿಪ್ಪೇಸ್ವಾಮಿ ಶತಮಾನೋತ್ಸವದ ನೆನಪಿನಲ್ಲಿ 'ಮುಟ್ಟಿಸಿಕೊಂಡವರು'
ಡಾ. ಬಿ. ಎಂ. ತಿಪ್ಪೇಸ್ವಾಮಿ ಶತಮಾನೋತ್ಸವದ ನೆನಪಿನಲ್ಲಿ ಹಿರಿಯ ಕತೆಗಾರರು ಮತ್ತು ಲೇಖಕರಾದ ಬಿ. ಟಿ. ಜಾಹ್ನವಿ ಅವರು ಸಂಪಾದಿಸಿದ ಮುಟ್ಟಿಸಿಕೊಂಡವರು ಕೃತಿ ಮೇ 27, ಮಂಗಳವಾರ ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ. ಕೃತಿಯ ಕಿರುಪರಿಚಯ ಮತ್ತು ಪತ್ರಕರ್ತ ಎನ್. ಎಸ್. ಶಂಕರ್ ಅವರು ತಿಪ್ಪೇಸ್ವಾಮಿಯವರ ನೆನಪಿನಲ್ಲಿ ಬರೆದ ಲೇಖನ, ಈ ಸಂದರ್ಭದಲ್ಲಿ ನಿಮ್ಮ ಓದಿಗೆ.
ಕಿರು ಪರಿಚಯ: ಮುಟ್ಟಿಸಿಕೊಂಡವರ ಬಗೆಗೆ
ಬಿ. ಟಿ. ಜಾಹ್ನವಿ
ಕಡುಬಡತನದ, ಸಾಮಾಜಿಕ ಕೆಳಸ್ತರದ, ಒಂದು ಗ್ರಾಮೀಣ ಕುಟುಂಬದಲ್ಲಿ ಜನಿಸಿದ ನನ್ನ ಅಪ್ಪಾಜಿ ಡಾ.ಬಿ.ಎಂ.ತಿಪ್ಪೇಸ್ವಾಮಿಯವರು ಖ್ಯಾತ ಕಣ್ಣಿನ ತಜ್ಞರು, ಅಪಾರ ದೂರದರ್ಶಿತ್ವ ಇದ್ದ ರಾಜಕಾರಣಿ, ಸರಳ ಸಜ್ಜನರಾದ ಇವರು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ಚಿರಸ್ಮರಣೀಯ ಸೇವೆಯನ್ನು ಸಲ್ಲಿಸಿದವರು. ಸರಳ, ಸಜ್ಜನಿಕೆ, ದಿಟ್ಟ ನಿಲುವು, ಇಚ್ಛಾಶಕ್ತಿ, ಸಾಮಾಜಿಕ ತಿರಸ್ಕರಣಕ್ಕೊಳಗಾಗಿ ನೊಂದು ಬೆಂದವರ ಬಗ್ಗೆ ಅಪಾರ ಅನುಕಂಪ, ತಾವು ನಂಬಿದ ಮೌಲ್ಯಗಳಿಗಾಗಿ ಸತತ ಪರಿಶ್ರಮ, ಅಗ್ಗದ ಜನಪ್ರಿಯತೆಯ ಬಗೆಗೆ ಅನಾದರ. ಈ ಗುಣಗಳು ಅವರ ಸಂಪರ್ಕಕ್ಕೆ ಬಂದ ಎಲ್ಲ ವರ್ಗಗಳ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರಿದೆ. ಗ್ರಾಮಾಂತರ ಪ್ರದೇಶದ ಸಾಮಾಜಿಕವಾಗಿ ಆರ್ಥಿಕವಾಗಿ ಕೆಳಸ್ತರದಲ್ಲಿದ್ದ ವಿದ್ಯಾರ್ಥಿಗಳಿಗಾಗಿ ಅವರು ಸ್ಥಾಪಿಸಿದ ವಿದ್ಯಾರ್ಥಿನಿಲಯಗಳು, ಶಾಲೆಗಳು ಸಾವಿರಾರು ಮಕ್ಕಳ ಭವಿಷ್ಯಕ್ಕೆ ದಾರಿಮಾಡಿಕೊಟ್ಟಿವೆ.
ಅವರ ಒಡನಾಡಿಗಳು, ಮಿತ್ರರು ಹಾಗೂ ನಾಡಿನ ಸಾಮಾಜಿಕ ಚಿಂತಕರು ಅವರ ನೆನಪಿಗಾಗಿ ಒಂದು ಕೃತಿಯನ್ನು ಪ್ರಕಟಿಸಬೇಕೆಂದು ಬಹುಕಾಲದಿಂದ ಹಂಬಲಿಸುತ್ತಿದ್ದರು. ಎಲ್ಲರ ಹಂಬಲ ಕೈಗೂಡಿ ನಾವು ನೆನಪಿನ ಪುಸ್ತಕ ಹೊರತರುವ ಕಾರ್ಯಕ್ಕೆ ಕೈಹಾಕಿದೆವು. ನಾವು ಅಂದ್ರೆ ನಾನು ಮತ್ತು ನಮ್ಮ ನಾಡಿನ ಖ್ಯಾತ ವೈಚಾರಿಕ ಲೇಖಕರಾಗಿದ್ದ ದಿವಂಗತ ಬಿ.ವಿ.ವೀರಭದ್ರಪ್ಪನವರು. ಅಪ್ಪಾಜಿಗೆ ಬಲು ಆಪ್ತರಾಗಿದ್ದವರು ಅವರು. ಅಂತೆಯೇ ೧೯೯೮ರಲ್ಲಿ ‘ಮುಟ್ಟಿಸಿಕೊಂಡವರು’ ಪುಸ್ತಕ ಹೊರಬಂತು. ದಾವಣಗೆರೆಯ ಬಾಪೂಜಿ ಆಡಿಟೋರಿಯಂನಲ್ಲಿ ದೇವನೂರು ಮಹಾದೇವ ಅವರು ಪುಸ್ತಕ ಬಿಡುಗಡೆಯನ್ನೂ ಮಾಡಿದ್ದರು. ಇದೀಗ ಮರುಮುದ್ರಣಕ್ಕೆ ಅಣಿಯಾಗಿದೆ.
ಈ ನೆನಪಿನ ಪುಸ್ತಕ ಕೇವಲ ಒಂದು ಜೀವನ ಚರಿತ್ರೆಯಷ್ಟೇ ಆಗಿರುವುದರ ಬದಲು ಅದು ಅಪ್ಪಾಜಿ ಡಾ. ತಿಪ್ಪೇಸ್ಟಾಮಿಯವರು ಯಾವ ಹಿನ್ನೆಲೆಯಿಂದ ಬಂದರೋ ಆ ವರ್ಗದ ಜನರ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಜೀವನದ ಪರಿಚಯವನ್ನೂ ಕುರಿತ ಲೇಖನಗಳು ಈ ಕೃತಿಯಲ್ಲಿ ಇರುವುದು ಔಚಿತ್ಯಪೂರ್ಣವಾಗಬಹುದು ಎನಿಸಿತು. ಈ ದಿಕ್ಕಿನಲ್ಲಿ ದಲಿತ ಹಾಗೂ ಬಂಡಾಯ ಚಿಂತಕರನ್ನು ಸಂಪರ್ಕಿಸಿದಾಗ ಅವರಿಂದ ಪ್ರೋತ್ಸಾಹಕರ ಪ್ರತಿಕ್ರಿಯೆ ದೊರಕಿತ್ತು. ಹಾಗೆಯೇ ಅಪ್ಪಾಜಿಯ ಕೆಲವು ನಿಕಟವರ್ತಿಗಳನ್ನು ಸಂಪರ್ಕಿಸಿದಾಗ ಅವರು ಡಾಕ್ಟರೊಂದಿಗೆ ತಾವು ಹೊಂದಿದ ಸ್ನೇಹ ಸಂಬಂಧಗಳ ಹಿನ್ನೆಲೆಯಲ್ಲಿ ಅಪೂರ್ವ ಮಾಹಿತಿಯನ್ನು ನೀಡುವ ಲೇಖನಗಳನ್ನು ಕಳುಹಿಸಿ ಸಹಕರಿಸಿದ್ದಾರೆ. ದಲಿತ ಬಂಡಾಯ ವೈಚಾರಿಕ ಲೇಖನಗಳನ್ನು ಕೋರಿ ಅನೇಕರಿಗೆ ಪತ್ರ ಬರೆದಿದ್ದೆವು. ಕೆಲವರು ಲೇಖನಗಳನ್ನು ಬರೆದು ಕಳುಹಿಸಿದರು. ಮತ್ತೆ ಕೆಲವರು ಈಗಾಗಲೇ ತಾವು ಬರೆದು ಪ್ರಕಟವಾಗಿರುವ ಲೇಖನಗಳನ್ನೇ ಬಳಸಿಕೊಳ್ಳಲು ಹೇಳಿದರು ಮತ್ತು ಅನುಮತಿ ಕೊಟ್ಟರು. ಈ ಮರುಮುದ್ರಣದಲ್ಲಿ ಅಪ್ಪಾಜಿಯನ್ನು ನನ್ನ ದೃಷ್ಟಿಯಿಂದ, ನನಗಿರುವ ಮಾಹಿತಿಯ ಮಿತಿಯಲ್ಲಿ ಇಚ್ಚಾಶಕ್ತಿಯ ನಿರೂಪ ಲೇಖನದಲ್ಲಿ ಹಿಡಿದಿಡುವ ಪ್ರಯತ್ನ ಮಾಡಿರುವೆ. ಪ್ರೋಫೆಸರ್ ಬಿ.ವಿ.ವೀರಭದ್ರಪ್ಪನವರು ಈಗ ನಮ್ಮೊಂದಿಗಿಲ್ಲ. ಆದರೆ ಅವರ ಮಾರ್ಗದರ್ಶನ ಈಗಲೂ ಜೀವಂತವಿದ್ದು ನನ್ನ ಕೈಹಿಡಿದು ಮುನ್ನಡೆಸುತ್ತಿದೆ. ಅಂತೆಯೇ ನಾವು ಅಂದು ಅಂದುಕೊಂಡಂತೆ ಅಪ್ಪಾಜಿ ಡಾ.ತಿಪ್ಪೇಸ್ಟಾಮಿಯವರ ಜೀವನ ಚಿತ್ರಣವನ್ನು ಮತ್ತು ಅವರ ಆ ಜನಾಂಗದ ಜನರ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನದ ಪರಿಚಯವನ್ನು ಹೊತ್ತ ಅವರ ನೆನಪಿನ ಪುಸ್ತಕ ಈಗ ನಿಮ್ಮೆದುರಿಗಿದೆ.
ಬಿಕ್ಕಟ್ಟಿನ ಸಮ್ಮುಖದಲ್ಲಿ ಬೆಳೆದವರು
ಎನ್. ಎಸ್. ಶಂಕರ್
ಲಂಕೇಶರ ‘ಮುಟ್ಟಿಸಿಕೊಂಡವನು’ ಕತೆಯನ್ನು ಮೊದಲ ಬಾರಿ ಓದಿದಾಗ ನನಗೆ ಆ ಕತೆಯ ನಿಜ ನಾಯಕ ಡಾ. ಬಿ.ಎಂ.ತಿಪ್ಪೇಸ್ವಾಮಿ ಎಂಬ ವಿಷಯವಾಗಲೀ ಮತ್ತು ಆ ತಿಪ್ಪೇಸ್ವಾಮಿಯವರು ಈ ನಾಡು ಕಂಡ ಅಪರೂಪದ ವೈದ್ಯ ಹಾಗೂ ರಾಜಕಾರಣಿ ಎಂಬ ತಿಳುವಳಿಕೆಯಾಗಲೀ ಇರಲಿಲ್ಲ. ಆದರೆ ಆ ಕತೆಗೆ ಜನ್ಮ ಕೊಟ್ಟ ಘಟನೆ ಹಾಗೂ ಆ ಘಟನೆಯ ಹಿಂದಿನ ಮನುಷ್ಯರು ಮಾತ್ರ ಶಾಶ್ವತವಾಗಿ ನನ್ನ ಮನಸ್ಸಿನಲ್ಲಿ ನಿಂತು ಪುರಾಣದ ಹಾಗೆ ಬೆಳೆಯತೊಡಗಿದರು. ಹಾಗಾಗಿ, ಸ್ಪರ್ಶದಿಂದಲೇ ತಮ್ಮ ರೋಗಿಗೆ ತಿಳಿವಿನ ಹೊಸ ಕಣ್ಣುಕೊಟ್ಟ ಆ ಮಾನವೀಯ ವೈದ್ಯ ಡಾ. ತಿಪ್ಪೇಸ್ವಾಮಿ. ನನಗೆ ಪರಿಚಯವಾಗುವ ಮುನ್ನವೇ ನನ್ನ ಮನಸ್ಸು ಅವರ ಸುತ್ತಾ ಒಂದು ಪೌರಾಣಿಕ ಪ್ರಭೆಯನ್ನುಕಲ್ಪಿಸಿಕೊಂಡಿತ್ತು! ಮುಂದಕ್ಕೆ ಪರಿಚಯದ ಭಾಗ್ಯವೂ ಸಿಕ್ಕು ಎರಡು ವರ್ಷ ಕಾಲ ಒಡನಾಡಿದರೂ ಆ ಕಾಲ್ಪನಿಕ ಪ್ರಭೆ ಒಮ್ಮೆಯೂ ಕಳೆಗುಂದಲಿಲ್ಲವೆಂಬುದೇ ಅವರ ವ್ಯಕ್ತಿತ್ವದ ಹಿರಿಮೆ.
ತಿಪ್ಪೇಸ್ವಾಮಿಯವರೊಬ್ಬ ರಾಜಕಾರಣಿ. ನಾನೊಬ್ಬ ಪರ್ತಕರ್ತ. ಇಷ್ಟರಿಂದಲೇ ಆರಂಭವಾದ ಆ ಸ್ನೇಹ, ಪರ್ತಕರ್ತನಿಗೆ ಸಹಜವಾದ ನನ್ನ ಅನುಮಾನ ಪ್ರವೃತ್ತಿ, ವಿಮರ್ಶಾದೂರುಗಳನ್ನೆಲ್ಲಾ ಮೀರಿ ಆತ್ಮೀಯತೆಗೆ ತಿರುಗಲು ಹೆಚ್ಚು ಕಾಲ ಹಿಡಿಯಲಿಲ್ಲ. ಅಷ್ಟಾದರೂ ನಮ್ಮ ಸಂಬಂಧಕ್ಕೆ ಯಾವ ನಿರೀಕ್ಷೆ, ಅಪೇಕ್ಷೆಗಳ ಭಾರವೂ ಇರದಿದ್ದ ಕಾರಣಕ್ಕೋ ಏನೋ ಅವರ ವೈಯಕ್ತಿಕ ಜೀವನದ ವಿವರಗಳು ನನಗೆ ಗೊತ್ತಿರಲಿಲ್ಲ. ಗೊತ್ತಾಗಬೇಕೆಂಬ ಕುತೂಹಲವೂ ನನಗಿರಲಿಲ್ಲ. ನಾನು ಮೆಚ್ಚಿದ ಆ ಹಿರಿಯ ಜೀವಕ್ಕೆ, ಇಂಥ ವಿವರಗಳ ತಿಳುವಳಿಕೆಯಿಂದ ಇನ್ನಷ್ಟು ತೂಕ ಬಂದೀತೆಂಬ ಗರಜೂ ನನಗೆ ಕಾಣಲಿಲ್ಲ. ಅವರನ್ನು ಕಂಡಾಗ ತಂತಾನೇ ಗೌರವ ಮೂಡುತ್ತಿತ್ತು. ಅವರ ಬೆಚ್ಚನೆಯ ಜೀವದ ಸ್ಪರ್ಶದಿಂದ ಉಲ್ಲಾಸ ಹುಟ್ಟುತ್ತಿತ್ತು ಅನ್ನುವುದಷ್ಟೇ ನನಗೆ ಸಾಕಾಗಿತ್ತು. ನಾಲ್ಕು ಮಾತು, ತಮಾಷೆ, ಹರಟೆ, ನನ್ನ ವೃತ್ತಿಗೆ ಅನಿವಾರ್ಯವಾದ ರಾಜಕೀಯ ಚರ್ಚೆ- ಇಷ್ಟರಲ್ಲೇ ಮುಗಿದ ಭೇಟಿ ಕೂಡಾ ಅಪ್ಯಾಯಮಾನವಾಗಿರುತ್ತಿತ್ತು.
ನಾವು ‘ಸುದ್ದಿ ಸಂಗಾತಿ’ ವಾರಪತ್ರಿಕೆ ಮಾಡುತ್ತಿದ್ದ ದಿನಗಳವು. ನಾಡಿನ ಬುದ್ಧಿಜೀವಿ ಸುದ್ದಿಜೀವಿಗಳೆಲ್ಲರನ್ನೂ ಮರುಳು ಮಾಡಿದ್ದ ರಾಮಕೃಷ್ಣ ಹೆಗಡೆ ರಾಷ್ಟ್ರನಾಯಕರಾಗಲು ಹವಣಿಸುತ್ತಿದ್ದ ಕಾಲ. ಆದರೆ ಅವರ ನಯವಂಚನೆಯ ಶೈಲಿಯಿಂದ ಈ ನೆಲಕ್ಕೆ ಒಳ್ಳೆಯದಾಗುವುದಿಲ್ಲವೆಂಬ ಆತಂಕದಲ್ಲಿ ನಾವಿದ್ದಾಗಲೇ ಅವರ ವಿರುದ್ಧ ಭಿನ್ನಮತದ ಅಲೆಯೆದ್ದು ಎಚ್.ಡಿ.ದೇವೇಗೌಡರು ಭಿನ್ನಮತೀಯ ನಾಯಕರಾಗಿಬಿಟ್ಟಿದ್ದನ್ನು ಕಂಡೆವು. ಭ್ರಮೆಗಳನ್ನೇ ಊರುಗೋಲಾಗಿಟ್ಟುಕೊಂಡ ಹೆಗಡೆಯವರೊಂದು ಕಡೆ; ತಮ್ಮಅಳುಬುರುಕ ರಾಜಕೀಯಕ್ಕೆ ತಾತ್ವಿಕ ಲೇಪ ನೀಡಲು ನೀರಾವರಿ ಸೋಬಾನೆ ಹಾಡುತ್ತಿದ್ದ ದೇವೇಗೌಡರು ಇನ್ನೊಂದು ಕಡೆ. ಮತ್ತು ನೂರು ಬಗೆಯ ವಾಂಛಲ್ಯ, ಪ್ರೇರಣೆಗಳ ಭಿನ್ನಮತೀಯರ ಕೂಟ. ಮಂತ್ರಿ ಪದವಿ ಸಿಗದವರು, ಯಾವುದೋ ಕಾರಣಕ್ಕೆ ಅವಮಾನಗೊಂಡವರು, ಜಾತೀಯ ಸೆಳೆತ - ಭಿನ್ನಮತೀಯರ ಎದೆಯಲ್ಲಿ ಎಲ್ಲ ತರದ ಕಾರಣಗಳೂ ಇದ್ದವು.
ಇಂಥ ಪ್ರಕ್ಷುಬ್ಧ ಗೊಂದಲದ ನಡುವೆ ಡಾ.ತಿಪ್ಪೇಸ್ಟಾಮಿಯವರ ನಿಲುವು ಕುತೂಹಲದ್ದಾಗಿತ್ತು. ತಿಪ್ಪೇಸ್ವಾಮಿಯವರು ಬಹಿರಂಗ ಭಿನ್ನಮತೀಯರೇ. ಮುಚ್ಚುಮರೆಯೇನಿಲ್ಲ. ಅಂದಮಾತ್ರಕ್ಕೆ ಅವರಿಗೆ ದೇವೇಗೌಡರ ಬಗ್ಗೆ ಕುರುಡು ನಂಬಿಕೆಯೂ ಇರಲಿಲ್ಲ. ಹೆಗಡೆ ವಿರುದ್ಧ ನಿಷ್ಕಾರಣ ದ್ವೇಷವೂ ಇರಲಿಲ್ಲ. ಸಭೆ ಭಿನ್ನವತ್ತಳೆ, ದಿಲ್ಲಿಯಾತ್ರೆ, ಪ್ರತಿತಂತ್ರಗಳ ಗೋಜಲಿನಲ್ಲಿ ಎಲ್ಲರ ಸ್ಥಿಮಿತ ಕೆಡುತ್ತಿದ್ದಾಗಲೂ ತಿಪ್ಪೇಸ್ವಾಮಿಯವರ ಬಾಯಿಂದ ಅಪ್ಪಿತಪ್ಪಿಯೂ ತೂಕತಪ್ಪಿದ ಮಾತುಗಳು ಬಂದಿದ್ದನ್ನು ನಾನು ಕೇಳಿಲ್ಲ. ಗುಣ ಅವರ ಅನುಭವ, ಸಾವಧಾನ, ದೂರದೃಷ್ಟಿ ಮತ್ತು ಸಮಚಿತ್ತಗಳನ್ನು ಕಾಣುವಂಥ ನಾಯಕತ್ವದ ಹೆಗಡೆಯವರಿಗಿದ್ದಿದ್ದರೆ ತಿಪ್ಪೇಸ್ವಾಮಿ ನಿಜಕ್ಕೂ ಸಚಿವಸಂಪುಟದಲ್ಲಿರಬೇಕಿತ್ತು. ಅದರಿಂದ ಹೆಗಡೆ ಸಂಪುಟದ ಘನತೆಯೇ ಹೆಚ್ಚುತ್ತಿತ್ತು. ಆದರೆ ಹೆಗಡೆ ಹೋಗಲಿ, ಇವರನ್ನೆಲ್ಲಾ ಬಳಸಿಕೊಂಡ ದೇವೇಗೌಡರಿಂದ ಕೂಡಾ ತಿಪ್ಪೇಸ್ವಾಮಿಯವರ ಪ್ರತಿಭೆಗೆ ಮನ್ನಣೆ ಸಿಗಲಿಲ್ಲ ಎಂಬುದೇ ಸಮಕಾಲೀನಚರಿತ್ರೆಯ ಸ್ವರೂಪ!
ತಿಂಗಳುಗಟ್ಟಲೆ ಅನಿಶ್ಚಿತತೆಯಲ್ಲೇ ಹೋರಾಡುವಾಗಲೂ ತಮ್ಮ ನಿರ್ಲಿಪ್ತತೆ ಮತ್ತು ಹಾಸ್ಯಪ್ರಜ್ಞೆಯನ್ನು ಬಿಟ್ಟುಕೊಟ್ಟವರಲ್ಲ ಡಾ.ತಿಪ್ಪೇಸ್ವಾಮಿ. ನಾನೇ ಒಮ್ಮೆ ಕೆಣಕಿ ಕೇಳಿದ್ದೆ; “ಸಾರ್ ನಿಮ್ಮನ್ನು ಮಂತ್ರಿಮಾಡಿದ್ದರೆ ಆಗಲೂ ನೀವು ಭಿನ್ನಮತೀಯರ ಜತೆಯೇ ಇರುತ್ತಿದ್ದಿರಾ?” ಅವರು ಯೋಚನೆ ಕೂಡಾ ಮಾಡದೆ ಸರಳವಾಗಿ, “ಇಲ್ಲ” ಅಂದಿದ್ದರು. ದೊಡ್ಡ ದೊಡ್ಡ ತಾತ್ವಿಕ ಫೋಸುಗಳ ಅಗತ್ಯವೂ ಅವರಿಗಿರಲಿಲ್ಲ; ಹಾಗೆಯೇ ಅವರು ಕೇವಲ ಮಂತ್ರಿಯಾಗದ ದುಮ್ಮಾನದಿಂದಲೇ ಭಿನ್ನಮತದ ತುತ್ತೂರಿ ಊದಿದವರೂ ಅಲ್ಲ. ದೈನಿಕ ರಾಜಕೀಯದಲ್ಲಿ ಇಂಥದ್ದೆಲ್ಲಾ ಇದ್ದಿದ್ದೇ ಎಂಬ ಸಂಯಮದ ಮನಸ್ಥಿತಿಯನ್ನು ಅವರೆಂದೂ ಬಿಟ್ಟವರಲ್ಲ. ಇಲ್ಲದಿದ್ದರೆ ತಮ್ಮನ್ನೂ ಇತರರನ್ನು ನವಿರಾಗಿ ತಮಾಷೆ ಮಾಡುವ ಗುಣ ಎಲ್ಲಿಂದ ಬರಬೇಕು? “ನಿಮ್ಮದೇನು ಸಾರ್ ಈಗ ಸ್ಟ್ಯಾಂಡು?” (ನಿಲುವು) ಎಂದು ಕೇಳಿದರೆ “ನಂದೇನಪ್ಪ ಸ್ಟ್ಯಾಂಡು ? ಬಸ್ಸ್ಟ್ಯಾಂಡು, ಏನೂ ಬಗೆ ಹರೀದಿದ್ರೆ ಬಸ್ಹತ್ಗಂಡು ಊರಿಗೆ ಹೋಗೋದು ಅಷ್ಟೇಯ,” ಎಂದು ನಗೆಯಾಡಿದವರು.
ಅವರ ವೈಯಕ್ತಿಕ ವಿಷಯ ಬಂದದ್ದು ಒಂದೇ ಸಲ ಎಂದು ನನ್ನ ನೆನಪು. ಅಪಾರ ಭರವಸೆಯ ಬರಹಗಾರ್ತಿ ಬಿ.ಟಿ.ಜಾಹ್ನವಿ ತಿಪ್ಪೇಸ್ವಾಮಿಯವರ ಮಗಳು. ಜಾಹ್ನವಿಯವರ ಕತೆಯನ್ನು ‘ಸಂಗಾತಿ’ಯಲ್ಲಿ ಪ್ರಕಟಿಸಿದ್ದಾಗ ಒಮ್ಮೆ ತಿಪ್ಪೇಸ್ವಾಮಿ “ಏನಪ್ಪ, ಆಕಿ ಏನರೆ ಬರಿತಾಳಾ?” ಎಂದು ವಿಚಾರಿಸಿದರು. “ಇಲ್ಲ ಸಾರ್, ಚೆನ್ನಾಗೇ ಬರೀತಾರೆ,” ಅಂದಾಗ “ಹ್ಞುಂ, ಏನೇನೋ ಬರಕಂತಿರ್ತಾಳೆ,” ಎಂದು ಮತ್ತೆ ಆ ವಿಷಯಕ್ಕೇ ಹೋಗಲಿಲ್ಲ. ಆದರೆ ಮಗಳ ಬರವಣಿಗೆಯ ಬಗ್ಗೆ ಬಂದ ಒಳ್ಳೆಯ ಮಾತಿಂದ ಅವರಿಗೆ ಸಂತೋಷವಾಗಿತ್ತು. ಹೀಗೆ ಸಾರ್ವಜನಿಕ ಜೀವನಕ್ಕೆ ತಮ್ಮನ್ನು ಕೊಟ್ಟುಕೊಂಡಂತಿದ್ದ ತಿಪ್ಪೇಸ್ವಾಮಿಯವರ ಆಳ್ತನವನ್ನು ಅಲ್ಲಾಡಿಸಿದ ಘಟನೆ ಬೆಂಡಿಗೇರಿ ದುರಂತ. ದಲಿತರಿಗೆ ಸವರ್ಣೀಯರು ಮಲ ತಿನ್ನಿಸಿದರೆಂಬ ಘಟನೆ ಬೆಳಗಾವಿ ಜಿಲ್ಲೆಯ ಬೆಂಡಿಗೇರಿಯಲ್ಲಿ ನಡೆಯಿತೆಂದು ವರದಿಯಾದಾಗ, ಸರ್ಕಾರ ತನಿಖೆಗೆಂದು ಸರ್ವಜಾತಿ ಶಾಸಕರದೊಂದು ಸದನ ಸಮಿತಿ ರಚಿಸಿತು. ಆ ಸಮಿತಿಗೆ ತಿಪ್ಪೇಸ್ಟಾಮಿಯವರೇ ಅಧ್ಯಕ್ಷರು.
ತನಿಖೆ ಮಾಡಲು ಹೊರಟಾಗ ತಿಪ್ಪೇಸ್ವಾಮಿಯವರು ಕೇವಲ ಸತ್ಯ ತಿಳಿಯುವ ಮುಕ್ತ ಮನಸ್ಸಿನಿಂದಲೇ ಹೋಗಿದ್ದನ್ನು ನಾನು ಬಲ್ಲೆ. ಅಲ್ಲಿಂದ ಬರುತ್ತಿದ್ದಂತೆಯೇ, ವರದಿ ಬರೆಯುವ ಮುನ್ನವೇ ಹೇಳಿ ಕಳಿಸಿದರು. ಇಂದೂಧರ ಹೊನ್ನಾಪುರ ಮತ್ತು ನಾನು ಶಾಸಕರ ಭವನದ ಅವರ ರೂಮಿಗೆ ಹೋದಾಗ, ಅಲ್ಲಿದ್ದವರೆಲ್ಲ ಹೋಗುವವರೆಗೆ ಕಾದು ಹತ್ತಿರ ಬಂದು ಕೂತರು. “ಮಾಡಿದಾರಪ್ಪ,” ಅಂದರು. ಅಂದರೆ ಘಟನೆ ನಡೆದದ್ದು ಹೌದು. ತಿಪ್ಪೇಸ್ವಾಮಿ ಮೇಲ್ನೋಟಕ್ಕೆ ಎಂದಿನ ಗಾಂಭೀರ್ಯದಲ್ಲೇ ಹೇಳುತ್ತಾ ಹೋದರೂ, ಅವರ ಇಡೀ ಜೀವನದ ತಳಮಳ, ಹೋರಾಟ, ಔದಾರ್ಯಗಳೆಲ್ಲ ಅರ್ಥಹೀನವಾದಂತೆ; ಅವರು ಕಲಿತಿದ್ದೆಲ್ಲಾ ನಿರರ್ಥಕ ಎನಿಸಿದಂಥ ವಿಹ್ವಲ ಹೊಯ್ದಾಟ ಅವರನ್ನು ಕಾಡುತ್ತಿದ್ದುದು ಸ್ಪಷ್ಟವಾಗಿತ್ತು. ನಿಂತ ನೆಲವೇ ಕುಸಿದಂಥ ಆಘಾತದ ಎದುರು ಉತ್ತರಗಳಿಗೆ ತಡಕಾಡುತ್ತಿದ್ದಂತೆ ಕಂಡರು.
“ಅಲ್ಲಪ್ಪ ದಲಿತರ ಮೇಲೆ ನಿಜವಾಗಲೂ ದೌರ್ಜನ್ಯಗಳು ಜಾಸ್ತಿ ಆಗಿದ್ದಾವಾ? ಅಥವಾ ಮೊದಲಿನಿಂದಲೂ ಇದ್ದು ಈಗ ಬೆಳಕಿಗೆ ಬರೋದು ಜಾಸ್ತಿಯಾಗಿದೆಯಾ?” ಎಂದು ತಮಗೆ ತಾವೇ ಕೇಳಿಕೊಂಡರು. ಅಂಥ ಕ್ರೌರ್ಯ ತೋರಿದ “ಇಂಥವರನ್ನು ಏನು ಮಾಡಬೇಕಪ್ಪಾ?” ಎಂಬ ಪ್ರಶ್ನೆಯಿಟ್ಟರು. ಆದರೂ ಆವೇಶದ ಯಾವುದೋ ತೀರ್ಮಾನದಿಂದಲೂ ಪ್ರಯೋಜನವಿಲ್ಲವೆಂಬ ಅರಿವೂ ಅವರಿಗಿತ್ತು. ಕೊನೆಗೆ ‘ತಪ್ಪಿತಸ್ಥರಿಗೆ ಬಹಿಷ್ಕಾರ ಹಾಕುವುದೇ ಸೂಕ್ತ’ ಎಂಬ ತೀರ್ಮಾನ ಬಂತು. ತಿಪ್ಪೇಸ್ವಾಮಿ ತಮ್ಮ ವರದಿಯಲ್ಲೂ ಹಾಗೇ ಶಿಫಾರಸ್ಸು ಮಾಡಿ ಬರೆದರು. ಅದಕ್ಕೂ ಮುಂಚೆ ಸಮಿತಿಯ ಸದಸ್ಯರೆಲ್ಲರೂ ಒಮ್ಮತದ ತೀರ್ಮಾನ ಕೊಡದಿದ್ದರೆ, ಸರ್ಕಾರ ಯಾವ ಕ್ರಮಕ್ಕೂ ಮುಂದಾಗುತ್ತಿರಲಿಲ್ಲವೆಂಬ ಎಚ್ಚರದಿಂದ ಎಲ್ಲ ಜಾತಿಯ ಸದಸ್ಯರಿಗೆ ಮನವರಿಕೆ ಮಾಡಿದ್ದರಲ್ಲೇ ಡಾ. ತಿಪ್ಪೇಸ್ವಾಮಿಯವರ ನಿಜ ರಾಜಕೀಯ ಶೈಲಿ ಕಾಣುತ್ತದೆಂದು ನನ್ನ ಗ್ರಹಿಕೆ...
ತಿಪ್ಪೇಸ್ವಾಮಿಯವರು ಹೋಗಿಬಿಟ್ಟರೆಂದು ಸುದ್ದಿ ಬಂದಾಗ ನಿಜಕ್ಕೂ ನನ್ನ ಮನೆಯವರೇ ಒಬ್ಬರನ್ನು ಕಳೆದುಕೊಂಡೆನೆಂಬ ಖಾಲಿತನ ಅನುಭವಿಸಿದೆ. ಆಗ ಲಂಕೇಶ್ ಪತ್ರಿಕೆಯಲ್ಲಿ ಬಿ.ವಿ. ವೀರಭದ್ರಪ್ಪ ಬರೆದ ವ್ಯಕ್ತಿ ಚಿತ್ರ ಓದಿದಾಗಲೇ ನನಗೆ ತಿಪ್ಪೇಸ್ವಾಮಿಯವರ ಸಂಘರ್ಷ ಸಮನ್ವಯಗಳ ಹದವರಿತ ಮತ್ತು ಬಿಕ್ಕಟ್ಟುಗಳ ಸಮ್ಮುಖದಲ್ಲಿ ಬೆಳೆದ ಅವರ ಮೇಧಾಶಕ್ತಿಯ ಪರಿಚಯವಾದದ್ದು. ಬದುಕು ತಿಪ್ಪೇಸ್ವಾಮಿಯವರ ಸಾವಿನಿಂದ ಒಳ್ಳೆಯವರ ಜಗತ್ತು ಇನ್ನಷ್ಟು ಕಿರಿದಾಯಿತು.
ಇದನ್ನೂ ಓದಿ …
“ಈ ಧೂಳಿನಿಂದಲೇ ಏಳಬೇಕು ನೆಲದೇವತೆಗಳ ನಾಡು ...”
ಇತ್ತೀಚೆಗೆ ಪ್ರಕಟವಾದ ಕೋಟಿಗಾನಹಳ್ಳಿ ರಾಮಯ್ಯನವರ ದರ್ಗಾಮಾಳದ ಚಿತ್ರಗಳು ಪುಸ್ತಕದ ಕುರಿತು ಸಂಕೇತ ಪಾಟೀಲ ಒಂದು ಟಿಪ್ಪಣಿ ಬರೆದಿದ್ದಾರೆ.