ಝಾರ್‍ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಕುರುಖ್ ಅಥವಾ ಒರಾಓಂ (Oraon) ಬುಡಕಟ್ಟಿಗೆ ಸೇರಿದ ಜಸಿಂತಾ ಕೆರ್ಕೆಟ್ಟಾ (Jacinta Kerketta, 3.8.1983) ಹಿಂದೀ ಕವಿ, ಪತ್ರಿಕೋದ್ಯಮಿ ಮತ್ತು ಆದಿವಾಸಿ ಹಕ್ಕುಗಳ ಹೋರಾಟದ ಮುಂಚೂಣಿಯಲ್ಲಿರುವವರು. ಅವರು 2022ರಲ್ಲಿ ಪ್ರಕಟಿಸಿದ ‘ಅಂಗೋರ್' (ಕೆಂಡ) ಎಂಬ ಕವನ ಸಂಕಲನವನ್ನು ಸಂವರ್ತ “ಸಾಹಿಲ್" ಕನ್ನಡಕ್ಕೆ ‘ಗೋರಿಯ ಮೇಲೆ ರಾಗಿಯ ಕೊನರು’ ಎಂಬ ಶೀರ್ಷಿಕೆಯಡಿ ಅನುವಾದಿಸಿದ್ದಾರೆ.
ಇದಕ್ಕೆ ಪೂರಕವಾಗಿ ಸಂಕೇತ ಪಾಟೀಲ ಭಾರತ ಉಪಖಂಡದಲ್ಲಿ ಆಧುನಿಕ ಮಾನವರ ಮೊದಲ ವಲಸೆ, ಆದಿವಾಸಿಗಳ ಉಗಮ, ನಮ್ಮ ಬಹುತ್ವದ ಚರಿತ್ರೆ ಮತ್ತು ಇಂದು ಅದಕ್ಕೆ ಒದಗಿರುವ ಅಪಾಯಗಳ ಕುರಿತಾದ ಸ್ಥೂಲ ಚರ್ಚೆಯನ್ನು ಮೊದಲ ಭಾಗದಲ್ಲಿ ಮಾಡಿದ್ದಾರೆ. ಇಲ್ಲಿ ಉಲ್ಲೇಖಿಸಿರುವ ಹಲವು ವಿಷಯಗಳಿಗೆ ಟೋನಿ ಜೋಸೆಫ್‌ರ Early Indians ಮತ್ತು ಡೇವಿಡ್ ರೈಕ್ ಎಂಬ ಅಮೆರಿಕನ್ ತಳಿಶಾಸ್ತ್ರಜ್ಞರ ಸಂಶೋಧನಾ ಪ್ರಕಟಣೆಗಳು ಇದಕ್ಕೆ ಆಧಾರವಾಗಿವೆ. ಇನ್ನು ಎರಡನೇ ಭಾಗದಲ್ಲಿ, ಈ ಚರ್ಚೆಗಳ ಮುನ್ನೆಲೆಯಲ್ಲಿ ಕೆರ್ಕೆಟ್ಟಾರ ಕವನ ಸಂಕಲನದ ಅವಲೋಕನವನ್ನು ಮಾಡಿದ್ದಾರೆ. ಮೊದಲ ಭಾಗ ನಿಮ್ಮ ಓದಿಗೆ.
ನಾವು ಆಧುನಿಕ ಮಾನವ (Anatomically Modern Humans /Homo Sapiens) ಎಂದು ಕರೆಯುವ ಪ್ರಭೇದ ಕನಿಷ್ಠ ಪಕ್ಷ 300 ಸಾವಿರ ವರ್ಷಗಳಷ್ಟು ಹಿಂದಿನಿಂದ ಅಸ್ತಿತ್ವದಲ್ಲಿದೆ. ಮೊರೊಕ್ಕೋನ ಸಫಿ ನಗರದಿಂದ ಸುಮಾರು ಐವತ್ತು ಕಿಲೋಮೀಟರ್ ದೂರದಲ್ಲಿರುವ ಜೆಬೆಲ್ ಇರ್‍ಹೂದ್ (Jebel Irhoud) ಗುಹೆಯಲ್ಲಿ 2017ರಲ್ಲಿ ಸಿಕ್ಕ ಪಳೆಯುಳಿಕೆಯಿಂದ ಇದು ಸಾಬೀತಾಗಿದೆ. ಆಫ್ರಿಕಾದ ಹೊರಗೆ ಕಂಡುಬಂದಿರುವ ಆಧುನಿಕ ಮಾನವನ ಪಳೆಯುಳಿಕೆಗಳಲ್ಲಿ ಅತ್ಯಂತ ಹಳೆಯದು ಉತ್ತರ ಇಸ್ರೇಲಿನ ಮಿಸ್‌ಲಿಯಾ ಗುಹಾವಾಸಗಳಲ್ಲಿ ಕಂಡುಬಂದುದು. ಅದು ಸುಮಾರು 180 ಸಾವಿರ ವರ್ಷಗಳಷ್ಟು ಹಿಂದಿನದು.
ಇದಕ್ಕೂ ಬಹಳ ಮುಂಚೆ, ಸುಮಾರು 2 ಮಿಲಿಯನ್ ವರ್ಷಗಳಿಗೂ ಹಿಂದಿನಿಂದ ಹಲವು ಪುರಾತನ ಮಾನವ ಪ್ರಭೇದಗಳು ವಿಕಾಸ ಹೊಂದಿ ಮೊದಲಿಗೆ ಆಫ್ರಿಕಾ ನಂತರ ಯುರೋಪ್ ಮತ್ತು ಏಷ್ಯಾ ಖಂಡಗಳ ಉದ್ದಗಲಕ್ಕೂ ಪಸರಿಸಿದ್ದುವು. ಆಫ್ರಿಕಾದಲ್ಲಿ 300 ಸಾವಿರ ವರ್ಷಗಳಷ್ಟು ಹಿಂದೆ ಆಧುನಿಕ ಮಾನವರು ತಲೆದೋರಿದ ಅವಧಿಯಲ್ಲೇ ಅಥವಾ ಅದಕ್ಕೂ ಮುಂಚೆ ಯುರೇಷಿಯಾದಲ್ಲಿ ನಿಯಾಂಡರ್‍ತಾಲ್ (ಜರ್ಮನ್ ಭಾಷೆಯಲ್ಲಿ ನಿಯಾಂಡರ್ ಕಣಿವೆ) ಮತ್ತು ನಂತರದ ದಿನಗಳಲ್ಲಿ ಡೆನಿಸೋವನ್‌ರು ತಲೆದೋರಿ ಆ ಭೂಖಂಡದೆಲ್ಲೆಡೆ ಪಸರಿಸಿದ್ದರು. ನಮ್ಮ ಇದುವರೆಗಿನ ತಿಳಿವಳಿಕೆಯ ಪ್ರಕಾರ ಒಟ್ಟು ಒಂಬತ್ತು ಮಾನವ ಪ್ರಭೇದಗಳಿದ್ದುವು (ಹೊಸ ಸಂಶೋಧನೆಗಳು ಮುಂದೆ ನಮಗೆ ಗೊತ್ತಿರದ ಹೊಸ ಪ್ರಭೇದಗಳನ್ನು ಹೊರಗೆಡಹಬಹುದು). ಆದರೆ ಇಂದು ಅಳಿಯದೇ ಉಳಿದುಕೊಂಡಿರುವ ಒಂದೇ ಪ್ರಭೇದವೆಂದರೆ ಆಧುನಿಕ ಮಾನವರದು, ಎಂದರೆ ನಾವುಗಳು.
ಈ ಕತೆ ಮುಂದೆ ಇನ್ನೂ ಆಸಕ್ತಿಕರವಾಗುತ್ತ ಹೋಗುತ್ತದೆ. ನಾವು ಇಷ್ಟೆಲ್ಲಾ ಸುದೀರ್ಘ ಇತಿಹಾಸ ಹೊಂದಿದ್ದರೂ ಆಫ್ರಿಕಾದ ಹೊರಗಿನ ಆಧುನಿಕ ಮಾನವರೆಲ್ಲರೂ ಸುಮಾರು 70 ಸಾವಿರ ವರ್ಷಗಳ ಹಿಂದೆ ಆಫ್ರಿಕಾದಿಂದ ಹೊರಟು ಏಷ್ಯಾ ತಲುಪಿದ — ಬಹುತೇಕ ಆಫ್ರಿಕಾದ ಕೊಂಬು ಮತ್ತು ಅರೇಬಿಯಾ ದ್ವೀಪಕಲ್ಪದ ನಡುವಿರುವ ಬಾಬ್-ಎಲ್-ಮಂಡೆಬ್ (“ಶೋಕದ ಹೆಬ್ಬಾಗಿಲು") ಜಲಸಂಧಿಯ ಮೂಲಕ ಇಂದಿನ ಯೆಮೆನ್‌ಗೆ ಬಂದ — ಏಕೈಕ ಚಿಕ್ಕ ವಲಸಿಗ1 ಜನಸಮುದಾಯದ ಸಂತತಿಯವರು! ಇದಕ್ಕಿಂತ ಮೊದಲೂ ಮಾನವ ವಲಸೆಗಳು ಆಗಿರಲಿಕ್ಕೇ ಬೇಕು: ಎಲ್ಲ ಪ್ರಾಣಿಗಳಂತೆ ಮನುಷ್ಯರೂ ಆಹಾರದ ಮೂಲಗಳನ್ನು ಹುಡುಕುತ್ತಾ ಒಂದೆಡೆಯಿಂದ ಇನ್ನೊಂದೆಡೆ ಸಾಗುತ್ತಿದ್ದರು. ದೂರದ ವಲಸೆಗಳು ಹೆಚ್ಚಾಗಿ ಎರಡು ಹಿಮಯುಗಗಳ ನಡುವಿನ interglacial ಅವಧಿಗಳಲ್ಲಿನ ಹೆಚ್ಚು ಅನುಕೂಲಕರ ತಾಪಮಾನಗಳು ಇದ್ದಾಗ ನಡೆಯುತ್ತಿದ್ದುವು. ಯೋರಪ್ ಮತ್ತು ಏಷ್ಯಾದ ಹಲವು ಕಡೆ ಸಿಕ್ಕ ಪಳೆಯುಳಿಕೆಗಳು, ಶಿಲಾಯುಧಗಳು ಈ ವಲಸೆಗಳಿಗೆ ಪುರಾವೆ ಕೊಡುತ್ತವೆ. ಆದರೆ ಈ ಹಳೆಯ ವಲಸಿಗರ ವಂಶವಾಹಿ ಈಗ ಎಲ್ಲೂ ಕಂಡುಬರದಿರುವ ಕಾರಣ, ಇವೆಲ್ಲ ಗುಂಪುಗಳು ಅಳಿದುಹೋದುವು ಎಂದು ನಾವು ತೀರ್ಮಾನಿಸಬಹುದು.
ಇದರ ಅರ್ಥ, ಕಳೆದ ನೂರಾರು ಸಾವಿರ ವರ್ಷಗಳಲ್ಲಿ ಆಗಿ ಹೋದ, ಇಂದಿರುವ 8 ಮತ್ತು ಮುಂದೆ ಹುಟ್ಟುವ ಎಷ್ಟೋ ಬಿಲಿಯನ್ ಮಂದಿಯ ವಂಶವಾಹಿಯನ್ನು ಹಿಡಿದು ಹಿಂದಕ್ಕೆ ಹೋದರೆ ನಮ್ಮೆಲ್ಲರ ಮೂಲ ನೆಲೆಯನ್ನು ನಾವು ಬಹುತೇಕ ಪೂರ್ವ ಆಫ್ರಿಕಾಕ್ಕೆ ಒಯ್ದು ಹಚ್ಚಬಹುದು. ಅಲ್ಲಿ ಸುಮಾರು 70 ಸಾವಿರ ವರ್ಷಗಳಷ್ಟು ಮುಂಚೆ ನಮ್ಮ “ಆದಿಮ ತಾಯಿ”ಯ (“Mitochondrial Eve”) ಬದುಕಿದ್ದಳು ಎಂದು ಊಹಿಸಬಹುದು.
ಭಾರತವನ್ನು ಕೇಂದ್ರಬಿಂದುವಾಗಿಟ್ಟುಕೊಂಡು ನಾವು ಈ ಕತೆಯನ್ನು ಮುಂದುವರೆಸೋಣ. ಭಾರತ ಉಪಖಂಡದ ನಾಗರಿಕತೆಗಳು ಮತ್ತು ಜನಸಮುದಾಯಗಳ ಆನುವಂಶಿಕತೆಯ ವಿತರಣೆಯನ್ನು ರೂಪಿಸುವಲ್ಲಿ ಇತಿಹಾಸ ಪೂರ್ವದ ನಾಲ್ಕು ವಲಸೆಗಳು ಪ್ರಮುಖ ಪಾತ್ರ ವಹಿಸಿವೆ. ಅವುಗಳಲ್ಲಿ ಮೊದಲನೆಯದು ನಾವು ಇದೀಗ ನೋಡಿದ “ಆಫ್ರಿಕಾದಿಂದ ಹೊರಬೀಳುವಿಕೆ”. ಈ ವಲಸೆಗಾರರು ಸುಮಾರು 65000 ವರ್ಷಗಳ ಹಿಂದೆ ಉಪಖಂಡಕ್ಕೆ ಬಂದರು. ಅವರಿಗಿಂತ ಮೊದಲು ಇಲ್ಲಿ ನೆಲೆಸಿದ್ದ ಪುರಾತನ ಮಾನವರು ಇವರ ದೆಸೆಯಿಂದಾಗಿಯೋ ಮತ್ತಿತರ ಕಾರಣಗಳಿಂದಾಗಿಯೋ ನಶಿಸಿಹೋಗಿರಲಿಕ್ಕೆ ಸಾಕು. ಒಂದರ್ಥದಲ್ಲಿ ಇವರು ಈ ನಾಡಿನ ಮೊದಲ ವಸಾಹತುದಾರರು. ಆದರೆ ಆಧುನಿಕ ಮಾನವರಿಗಷ್ಟೇ ನಮ್ಮ ದೃಷ್ಟಿಕೋನವನ್ನು ಸೀಮಿತಗೊಳಿಸಿಕೊಂಡರೆ ನಿಜಾರ್ಥದಲ್ಲಿ ಇವರು ಈ ನಾಡಿನ ಮೂಲನಿವಾಸಿಗಳು, ಮೊದಲ ಭಾರತೀಯರು (“First Indians”).
ಎರಡನೆಯ ವಲಸೆ ಆಗಿದ್ದು ಸುಮಾರು 9000 ವರ್ಷಗಳ ಹಿಂದೆ (ಸಾಮಾನ್ಯ ಶಕ ಪೂರ್ವ 7000ರ ಸುಮಾರು). ಇಂದಿನ ಇರಾನ್, ಇರಾಕ್, ಮತ್ತು ಟರ್ಕಿ ದೇಶಗಳಗುಂಟ ಇರುವ ಝಾಗ್ರೋಸ್ ಬೆಟ್ಟಗಳಿಂದ ವಲಸೆ ಹೊರಟ ಕುರಿಮಂದೆಯವರ ಸಮುದಾಯಗಳು ಬಲೂಚಿಸ್ತಾನ್ ಮೂಲಕ ಉಪಖಂಡದ ವಾಯವ್ಯ ಭಾಗವನ್ನು ತಲುಪಿದರು. ಇಂದಿನ ಪಾಕಿಸ್ತಾನದ ಬಲೂಚ್ ಪ್ರಾಂತ್ಯದ ಮೆಹ್ರ್‌ಗಢ್‌ದಲ್ಲಿ ಗೋಧಿ ಮತ್ತು ಬಾರ್ಲಿಯ ಸಾಗುವಳಿಯನ್ನು ಆರಂಭಿಸಿ ಪ್ರಾಣಿಗಳನ್ನು ಪಳಗಿಸಿ ಸಾಕುವುದನ್ನು ಕಲಿತರು. ಇವರು ಮತ್ತು ಇವರಿಗಿಂತ ಸುಮಾರು ಐವತ್ತು ಸಾವಿರ ವರ್ಷಗಳ ಮೊದಲು ಆಫ್ರಿಕಾದಿಂದ ಬಂದು ನೆಲೆನಿಂತಿದ್ದ ಮೊದಲ ಭಾರತೀಯರ ಒಡನಾಟದಿಂದ ಹುಟ್ಟಿದ್ದು ಹರಪ್ಪ ನಾಗರಿಕತೆ.
ನಂತರ ಸಾಮಾನ್ಯ ಶಕ ಪೂರ್ವ 2000ರ ಸುಮಾರು ಚೀನಾದಿಂದ ಹೊರಟ ವಲಸೆಯ ಎರಡು ಅಲೆಗಳು ಆಗ್ನೇಯ ಏಷ್ಯಾ ಮತ್ತು ಪೂರ್ವ ಏಷ್ಯಾ ಮೂಲಕ ಭಾರತದ ಒಳನಾಡನ್ನು ತಲುಪಿದುವು. ಇವರು ಬಹುತೇಕ ಮಧ್ಯ ಭಾರತ ಹಾಗೂ ಈಶಾನ್ಯ ಭಾರತಗಳಲ್ಲಿ ನೆಲೆಸಿದರು. ಸುಮಾರು ಅದೇ ಅವಧಿಯಲ್ಲಿ, ಎಂದರೆ ಹರಪ್ಪ ನಾಗರಿಕತೆಯ ಅವಸಾನದ ಕಾಲದಲ್ಲಿ, ಮಧ್ಯ ಏಷ್ಯಾದ ಸ್ಟೆಪ್ (Steppes) ಹುಲ್ಲುಗಾವಲುಗಳಿಂದ ಹೊರಟ ದನಗಾಹಿಗಳ ಸಮುದಾಯಗಳು ಉಪಖಂಡದ ವಾಯವ್ಯ ಭಾಗಕ್ಕೆ ಬರತೊಡಗಿದುವು. ಚಿಕ್ಕ ಗುಂಪುಗಳಲ್ಲಿ ಬಂದ ಇವರ ಒಳಹರಿವು ನೂರಾರು ವರ್ಷಗಳ ಕಾಲ ನಡೆಯಿತು. ಇವರೇ ಈ ನಾಲ್ಕು ಪ್ರಮುಖ ವಲಸೆಗಳ ಕೊನೆಯಲ್ಲಿ ಆಗಮಿಸಿದ ಸಂಸ್ಕೃತದಂಥ ಭಾಷೆಯನ್ನಾಡುತ್ತಿದ್ದ ಇಂಡೋ—ಆರ್ಯನ್ನರು, ಅಥವಾ ಆರ್ಯರು.2 ಇವರು ವೇದಗಳ ಸಂರಚನೆ ಮಾಡಿದವರು. ಭಾರತದ ಮಟ್ಟಿಗೆ ಈ ವಲಸೆ ಉಳಿದೆಲ್ಲವುಗಳಿಗಿಂತ ಮಹತ್ತರ ಪರಿಣಾಮ ಮಾಡಿದ್ದು. ಆಧುನಿಕ ಭಾರತದಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಮತ್ತು ರಾಜಕೀಯ ಪ್ರಾಬಲ್ಯ ಪಡೆದಿರುವ ಬಹುತೇಕ ಸಮುದಾಯಗಳನ್ನು ಈ ವಲಸೆಯ ಜೊತೆಗೆ ತಳುಕು ಹಾಕಬಹುದು.
ಇವರೆಲ್ಲ ಬಂದು ಒಬ್ಬರಿನ್ನೊಬ್ಬರ ಜೊತೆ ಹೋರಾಡಿ ಒಡನಾಡಿ ಕೊಡುಕೊಳೆ ಮಾಡಿಕೊಂಡು ತಳವೂರಿದ ಬಹುಕಾಲದ ನಂತರವೂ ಈ ನಾಡಿಗೆ ಹತ್ತಾರು ಸಣ್ಣಪುಟ್ಟ ವಲಸೆಗಳಾಗಿವೆ: ಗ್ರೀಕರು, ಅರಬರು, ಯಹೂದಿಗಳು, ಹೂಣರು, ಶಾಕರು, ಪಾರ್ಸಿಗಳು, ಸಿರಿಯನ್ನರು, ಇಥಿಯೋಪಿಯನ್ನರು, ಆಗ್ನೇಯ ಆಫ್ರಿಕಾದ ಬಂಟು ಬುಡಕಟ್ಟಿಗೆ ಸೇರಿದ ಭಾರತಕ್ಕೆ ಗುಲಾಮರಾಗಿ ಬಂದ ಸಿದ್ದಿಗಳು, ತುರ್ಕರು, ಮುಘಲರು, ಮುಂದೆ ಪೋರ್ತುಗೀಸರು, ಬ್ರಿಟಿಷರು… ಮತ್ತಿನ್ನಾರಾರೋ!
ಈ ವಲಸೆ ಮತ್ತು ವಿಭಿನ್ನ ಜನಸಮುದಾಯಗಳ ಸಂಕರದ ಪರಿಣಾಮವಾಗಿ ಭಾರತದಲ್ಲಿ ನಾಲ್ಕು ಪ್ರಮುಖ ಭಾಷಾ ಕುಟುಂಬಗಳಿವೆ: (1) ದ್ರಾವಿಡ, (2) ಇಂಡೋ—ಆರ್ಯನ್, (3) ಟಿಬೆಟೋ—ಬರ್ಮನ್, ಮತ್ತು (4) ಆಸ್ಟ್ರೋ ಏಷ್ಯಾಟಿಕ್. ನೂರಾರು ಭಾಷೆಗಳು, ಸಂಸ್ಕೃತಿ ಉಪಸಂಸ್ಕೃತಿಗಳು, ಆಹಾರ ಮತ್ತು ಆರಾಧನೆಯ ಪದ್ಧತಿಗಳು — ಇವೆಲ್ಲವುಗಳ ಹಿಂದೆ ಹತ್ತಾರು ಸಾವಿರ ವರ್ಷಗಳ ಚರಿತ್ರೆಯಿದೆ. ಮೇಲಿನ ಎಲ್ಲ ವಾದಗಳಿಗೂ ಈಹೊತ್ತು ಪುರಾತತ್ತ್ವಶಾಸ್ತ್ರ, ಭಾಷಾಶಾಸ್ತ್ರ, ಹಾಗೂ ತಳಿವಿಜ್ಞಾನದ ಪ್ರಬಲ ಪುರಾವೆಗಳಿವೆ. ಅವು ಬಹುಮಟ್ಟಿಗೆ ಎಲ್ಲ ರೀತಿಯ ರಾಜಕೀಯಗಳಿಗೂ ಪೂರ್ವಗ್ರಹಗಳಿಗೂ ಹೊರತಾದುವು.
ನಾವು ಇವರೆಲ್ಲರ ಇವೆಲ್ಲವುಗಳ ಪರಸ್ಪರ ಒಡನಾಟದ ಫಲಗಳು. ನಾವೆಲ್ಲರೂ ಇಲ್ಲಿಯವರೇ ಅಥವಾ ಯಾರೂ ಇಲ್ಲಿನವರಲ್ಲ. ಯಾವುದೂ ಶುದ್ಧವಲ್ಲ, ಯಾರೂ ಶ್ರೇಷ್ಠರಲ್ಲ. ನಾವೆಲ್ಲರೂ ಬೆರಕೆಗಳು. ಬಹುಕಾಲ ಎಲ್ಲರೂ ಉಳಿದೆಲ್ಲರೊಂದಿಗೆ ಬೆರೆಯುತ್ತಿದ್ದರು — ಸಾಮಾನ್ಯ ಶಕ ಎರಡನೆಯ ಶತಮಾನದವರೆಗಂತೂ ಇದು ಅಡೆತಡೆಯಿಲ್ಲದೇ ನಡೆಯಿತು. ಮುಂದೆ ಇದು ಕಡಿಮೆಯಾಗುತ್ತ ಬಂದು ಜನಸಮುದಾಯಗಳು ಹೋಳುಹೋಳಾಗುತ್ತ ಬಂದವು. ಡೇವಿಡ್ ರೈಕ್ (David Reich, ಅಮೆರಿಕನ್ ತಳಿಶಾಸ್ತ್ರಜ್ಞ) ಹೇಳುತ್ತಾರೆ:
[...] ಹಾನ್ ಚೀನಿಯರದು ನಿಜವಾಗಿಯೂ ಒಂದೇ ಒಂದು ದೊಡ್ಡ ಜನಸಂಖ್ಯೆ. ಅವರು ಸಾವಿರಾರು ವರ್ಷಗಳಿಂದ ಮುಕ್ತವಾಗಿ ಬೆರೆಯುತ್ತಲಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಜನಸಂಖ್ಯಾ ವಿಜ್ಞಾನದ ಆಧಾರದ ಮೇಲೆ ನೊಡುವುದಾದರೆ ಭಾರತದಲ್ಲಿ ತುಂಬಾ ದೊಡ್ಡ ಜನಸಂಖ್ಯೆಯ ಯಾವುದೇ ಗುಂಪುಗಳಿಲ್ಲ. ಅಲ್ಲದೇ ಒಂದೇ ಹಳ್ಳಿಯಲ್ಲಿ ಅಕ್ಕಪಕ್ಕದಲ್ಲಿ ವಾಸಿಸುವ ಬೇರೆ ಬೇರೆ ಜಾತಿಗಳ ಜನರ ನಡುವಿನ ಆನುವಂಶಿಕ ವ್ಯತ್ಯಾಸದ ಮಟ್ಟವು ಉತ್ತರ ಮತ್ತು ದಕ್ಷಿಣ ಯುರೋಪಿಯನ್ನರ ನಡುವಿನ ಆನುವಂಶಿಕ ವ್ಯತ್ಯಾಸಕ್ಕಿಂತ ಎರಡು ಅಥವಾ ಮೂರು ಪಟ್ಟು ಹೆಚ್ಚಾಗಿದೆ. ವಾಸ್ತವವೆಂದರೆ ಭಾರತದಲ್ಲಿರುವುದು, ದೊಡ್ಡ ಸಂಖ್ಯೆಯ ಸಣ್ಣ ಜನಸಮುದಾಯಗಳು.
ಇದರದೇ ಇನ್ನೊಂದು ಕತೆಯಿದೆ.3 ಅದಿರಲಿ.
ಆದರೆ ಇದಕ್ಕಿಂತ ಮೊದಲು ಹೇಳಿದ ಸಂಗತಿಯಲ್ಲೇ ಇನ್ನೂ ಒಂದು ಕುತೂಹಲಕಾರಿ ಅಂಶವಿದೆ. ನಾವೆಲ್ಲರೂ ಬೆರಕೆಗಳು ಎಂದೇನೋ ಹೇಳಿದೆವು. ಆದರೆ ಅದಾಗಿರುವುದು ಏಕರೂಪದಲ್ಲಲ್ಲ. ಸುಮಾರು 100ರಿಂದ 120 ಜನಸಂಖ್ಯೆಯಿರುವ, ಬೇರೆ ಸಮುದಾಯಗಳೊಂದಿಗೆ ಅಷ್ಟಾಗಿ ಬೆರೆಯದಿರುವ, ಅಂಡಮಾನಿನ ಒಂಗೇ (Onge) ಬುಡಕಟ್ಟಿನವರು ಆಫ್ರಿಕಾದಿಂದ ಬಂದ ಮೊದಲಿನವರಿಗೆ ಅತಿ ಹತ್ತಿರದವರು. ಬಹುತೇಕ ಭಾರತೀಯರಲ್ಲಿ 50ರಿಂದ 67 ಪ್ರತಿಶತದಷ್ಟು ವಂಶವಾಹಿಗಳು ಮೊದಲ ಭಾರತೀಯರಿಂದ ಬಂದವು. ಇನ್ನುಳಿದದ್ದು ನಂತರ ವಲಸೆ ಬಂದವರಿಂದ ಬಂದದ್ದು. ಉತ್ತರ ಭಾರತೀಯರಲ್ಲಿ (ಅದೂ ಮೇಲ್ಜಾತಿಗಳಲ್ಲಿ) ಇತರರ ಹೋಲಿಕೆಯಲ್ಲಿ ಇಂಡೋ—ಆರ್ಯನ್ ವಂಶವಾಹಿಗಳು ಹೆಚ್ಚು ಕಂಡುಬರುತ್ತವೆ. ಅದೇ ರೀತಿ, ದಕ್ಷಿಣ ಭಾರತೀಯರಲ್ಲಿ (ಹಾಗೂ ಭಾರತದ ಬಹುಭಾಗದ ಕೆಳಜಾತಿಯ ಜನರಲ್ಲಿ) ಝಾಗ್ರೋಸ್ ಕುರಿಮಂದೆಯವರ (ಇವರು ಹರಪ್ಪ ಜನರ ಪೂರ್ವಜರು) ವಂಶವಾಹಿಗಳು ಇತರರ ಹೋಲಿಕೆಯಲ್ಲಿ ಹೆಚ್ಚು ಕಂಡುಬರುತ್ತವೆ.
ಇದಷ್ಟೇ ಅಲ್ಲ. ಮೈಟೊಕಾಂಡ್ರಿಯಲ್ ಡಿಎನ್‌ಎ (mtDNA) ಎಂದರೆ ತಾಯಿಯಿಂದ ಅವಳ ಹೆಣ್ಣುಮಗಳಿಗೆ ಮತ್ತು ಮುಂದಿನ ಹೆಣ್ಣು ಸಂತಾನಕ್ಕೆ ಹರಿಯುತ್ತ ಹೋಗುವ ವಂಶವಾಹಿಯನ್ನು ಅಭ್ಯಸಿಸಿದರೆ ಭಾರತದ 70ರಿಂದ 90 ಪ್ರತಿಶತ ಹೆಣ್ಣುಮಕ್ಕಳ “ಆದಿಮ ತಾಯಿ” (Mitochondrial Eve) 65000 ವರ್ಷ ಹಿಂದೆ ಇಲ್ಲಿಗೆ ವಲಸೆ ಬಂದ ಒಬ್ಬ ಹೆಣ್ಣು ಎಂದು ಹೇಳಬಹುದು. ಆದರೆ ಅಪ್ಪನಿಂದ ಮಗನಿಗೆ ಮಾತ್ರ ಬರುವ Y-chromosome ವಿಶ್ಲೇಷಣೆ ಮಾಡಿದಾಗ 30 ಪ್ರತಿಶತಕ್ಕೂ ಕಡಿಮೆ ಭಾರತೀಯ ಗಂಡಸರ “ಆದಿಮ ತಂದೆ” (Y-chromosomal Adam) ಆಫ್ರಿಕಾದಿಂದ ವಲಸೆ ಬಂದ ಒಬ್ಬ ಗಂಡು ಎಂದು ಹೇಳಬಹುದು. ಇದಕ್ಕೆ ಒಳ್ಳೆಯ ವಿವರಣೆಗಳಿವೆ. ನಂತರದ ವಲಸೆಗಳು, ಅದರಲ್ಲೂ ಕೊನೆಯ ಇಂಡೋ—ಆರ್ಯನ್ ವಲಸೆ, ಪುರುಷಪ್ರಧಾನವಾಗಿದ್ದುವು.4 ಹೀಗಾಗಿ ಆಫ್ರಿಕಾದಿಂದ ಬಂದ ಮೊದಲ ವಲಸಿಗರ ಅಥವಾ ಮೊದಲ ಭಾರತೀಯರ mtDNA ಹೊಂದಿರುವ ಇಲ್ಲಿಯ ಬಹುತೇಕ ಹೆಂಗಸರು ಈ ನೆಲದವರು. ಆದರೆ ಗಂಡಸರು ಎಲ್ಲೆಡೆಯಿಂದ ಬಂದವರು.
ಟೋನಿ ಜೋಸೆಫ್ (Tony Joseph), ತಮ್ಮ Early Indians ಪುಸ್ತಕದಲ್ಲಿ ಇದರ ಬಗ್ಗೆ ವಿಸ್ತಾರವಾಗಿ ಬರೆಯುತ್ತ ಒಂದೆಡೆ ಹೀಗೆ ಹೇಳುತ್ತಾರೆ:
ಇಲ್ಲಿ ನಿಮಗೊಂದು ಪ್ರಶ್ನೆಯಿದೆ: ನಾವು ಭಾರತೀಯರನ್ನು ಅತ್ತ್ಯುತ್ತಮವಾಗಿ ಮೈದಾಳಿಸುವ ಒಬ್ಬ ವ್ಯಕ್ತಿಯನ್ನು ನೀವು ಗುರುತಿಸಬೇಕೆಂದಾದರೆ ಅದು ಯಾರಾಗಿರಬಹುದೆಂದು ನಿಮಗನ್ನಿಸುತ್ತದೆ? ಅರ್ಹತೆಯ ಪ್ರಕಾರ, ಒಬ್ಬ ಆದಿವಾಸಿ ಮಹಿಳೆ. ಏಕೆಂದರೆ ಅವಳು ಇಂದು ಭಾರತದಲ್ಲಿ ಅತ್ಯಂತ ಹೆಚ್ಚು ಬೇರೂರಿರುವ ಮತ್ತು ವ್ಯಾಪಕವಾಗಿ ಹರಡಿರುವ mtDNA ವಂಶಾವಳಿಯನ್ನು ಹೊತ್ತಿದ್ದಾಳೆ. ಆ ರೀತಿ ನೋಡಿದಾಗ, ಅವಳು ಹೆಚ್ಚೂಕಡಿಮೆ ನಮ್ಮ ಇಡೀ ಚರಿತ್ರೆಯನ್ನು ಪ್ರತಿನಿಧಿಸುತ್ತಾಳೆ. ಬಹುತೇಕ ಭಾರತೀಯರ ಜೊತೆ — ಅವರು ಸಾಮಾಜಿಕ ಏಣಿಯಲ್ಲಿ ಎಷ್ಟೇ ಎತ್ತರದಲ್ಲಿರಲಿ, ಯಾವುದೇ ಭಾಷೆ ಮಾತಾಡಲಿ, ಮತ್ತು ಎಲ್ಲಿಯೇ ನೆಲೆಸಿರಲಿ — ಅವಳ ತಳುಕಿದೆ. ಏಕೆಂದರೆ ನಾವೆಲ್ಲರೂ ವಲಸಿಗರು. ನಾವೆಲ್ಲರೂ ಮಿಶ್ರಣಗೊಂಡವರು. ಆದರೆ ಅವಳು ಮಾತ್ರ ಮೊದಲಿನಿಂದಲೂ ಇಲ್ಲಿಯೇ ಇದ್ದವಳು. […]
ಆದಿವಾಸಿ! ನನಗೆ 'ಆದಿವಾಸಿ' ಎಂಬ ಪದವನ್ನು ಈ ಲೇಖನದಲ್ಲಿ ಉಲ್ಲೇಖಿಸುವುದಕ್ಕೂ ಮೊದಲು, ಜಸಿಂತಾ ಕೆರ್ಕೆಟ್ಟಾ ಅವರ ಆದಿವಾಸಿ ನೆಲೆಯ ಪದ್ಯಗಳನ್ನು ಕುರಿತು ಮಾತನಾಡುವುದಕ್ಕೂ ಮೊದಲು, ಭಾರತದ ವಲಸೆಗಳ ಇತಿಹಾಸದ ಬಗ್ಗೆ ಸ್ಥೂಲವಾಗಿ ಬರೆಯಬೇಕೆನ್ನಿಸಿತು. ಏಕೆಂದರೆ ಈ ಕಾಲದಲ್ಲಿ ಆ ಪದವೇ ತಪ್ಪು ಎನ್ನುವವರೂ ಇದ್ದಾರೆ! ಅದರ ಬದಲು “ಅರಣ್ಯಕ" ಅಥವಾ “ಕಾಡುಜನರು" ಎನ್ನುವುದು ಸೂಕ್ತ ಎಂದು ಅವರ ವಾದ. ಇದರ ಹಿಂದಿರುವುದು, ಈ ನಾಡಿನಲ್ಲಿ ಅಗ್ರಗಣ್ಯತೆಯ ಹಕ್ಕನ್ನು ಯಾರೂ ಸಾಧಿಸುವಂತಿಲ್ಲ, ಇಲ್ಲಿ ಯಾರೂ ಮೊದಲಿನವರಲ್ಲ, ಎಂಬ ನಿಲುವು. ಆದರೆ ವಿಪರ್ಯಾಸವೆಂದರೆ ಈ ವಾದ ಮಂಡಿಸುವವರಲ್ಲಿ ಬಹುತೇಕರು ಈ ನಾಗರಿಕತೆಯ ಸ್ವಾಭಾವಿಕ ಬಹುತ್ವವನ್ನು ಮಟ್ಟಮಾಡಿ ಏಕರೂಪತೆಯನ್ನು ತರಬಯಸುವವರು, ತಮ್ಮ ಸೀಮಿತ ಸಂಸ್ಕೃತಿಯೇ ಶ್ರೇಷ್ಠ ಮತ್ತು ಅದೊಂದೇ ನಿಜವಾದ ಭಾರತೀಯ ಸಂಸ್ಕೃತಿ ಎಂದು ಹೇಳುವವರು. ಅದರ ಅರ್ಥ, ಅದರಿಂದಾಗಬಹುದಾದ ಪರಿಣಾಮಗಳ ಕಲ್ಪನೆಯೇ ಇಲ್ಲದಿದ್ದರೂ “ಏಕರೂಪ ನಾಗರಿಕ ಸಂಹಿತೆ”ಯನ್ನು ತರಬಯಸುವವರು. (ಸ್ವಾರಸ್ಯದ ಸಂಗತಿಯೆಂದರೆ, ಇವರು “ಕೊನೆಯಲ್ಲಿ ಬಂದು ನೆಲೆಸಿದ” ಜನರೊಂದಿಗೆ ಶಬ್ದಶಃ — ಭರತದ ಉಳಿದೆಲ್ಲ ಸಮುದಾಯಗಳಿಗಿಂತ ಹೆಚ್ಚಿನ — ಕಳ್ಳುಬಳ್ಳಿಯ ಸಂಬಂಧವುಳ್ಳವರು!).
ಜೀವವಿಕಾಸದ ಮಿಲಿಯಗಟ್ಟಲೇ ವರ್ಷಗಳ ಚರಿತ್ರೆಯನ್ನು ನಾವು ಒಂದಷ್ಟಾದರೂ ಅಭ್ಯಸಿಸಿದರೆ, ಮಾನವ ನಡೆದು ಬಂದ ಹಾದಿಯನ್ನು ತುಸುವಾದರೂ ಗಮನಿಸಿದರೆ, ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡರೆ ನಮ್ಮ ಇಂದಿನ ಒಡಕಿನ ರಾಜಕಾರಣ, identity politics ಎಷ್ಟೊಂದು ಕ್ಷುಲ್ಲಕವೆನ್ನಿಸಬೇಕು. ನಮ್ಮ ಬಹುತ್ವದ ಪರಂಪರೆಯನ್ನು ಕಾಪಿಟ್ಟುಕೊಂಡು ಸಂಭ್ರಮಿಸಬೇಕು. ಬಹುತ್ವ ಎನ್ನುವುದು ಕೇವಲ aesthetic ಅಥವಾ ನೈತಿಕ (moral) ಆಶಯವಲ್ಲ. ಜೀವವೈವಿಧ್ಯತೆ, ಬಹುಭಾಷೆ, ಬಹುಸಂಸ್ಕೃತಿ, ಸಮುದಾಯಗಳ ಮುಕ್ತವಾದ ಬೆರೆಯುವಿಕೆ ಇವು ಸೃಷ್ಟಿಯ ಮತ್ತು ತನ್ಮೂಲಕ ಮಾನವರ ಅಸ್ತಿತ್ವಕ್ಕೆ ಅತ್ಯಗತ್ಯ. ನಮ್ಮ ಮುಂದಿರುವುದು ecological sustainabilityಯ ಪ್ರಶ್ನೆ.
ಆದರೆ ನಾವು ಅಂಥ ಆದರ್ಶಲೋಕದಲ್ಲಿಲ್ಲ, ನಿಜವಾದ ರಾಮರಾಜ್ಯದಲ್ಲಿಲ್ಲ. ಹೀಗಾಗಿ “ಒಂದು ದೇಶ ಒಂದು ಭಾಷೆ” (ಚೂರು ಅವಕಾಶ ಕೊಟ್ಟರೆ, ಒಂದೇ ಮತ, ಒಂದೇ ದೇವರು, ಒಂದೇ ಆಚರಣೆ, ಇತ್ಯಾದಿ) ಸಿದ್ಧಾಂತ ಪಠಿಸಲಾಗುತ್ತಿರುವ homogenization juggernautನ, ಅವೈಚಾರಿಕತೆಯ ಪರಾಕಾಷ್ಠೆಯ, ಒಂದುಗೂಡಿಸುವಿಕೆಯ ನೆವದಲ್ಲಿ ಎಲ್ಲವನ್ನೂ ಮಟ್ಟಸಗೊಳಿಸಬಹುದಾದ ಅಮೃತದ ಹೆಸರು ಹೊತ್ತ ಈ ವಿಷಮ ಕಾಲವನ್ನು ರಾಜಕೀಯ ಮಾರ್ಗದಿಂದಲೇ ಎದುರಿಸುವುದು ಅನಿವಾರ್ಯ.
ಮೇಲೆ ಉಲ್ಲೇಖಿಸಿದ ಮಾನವನ ವಲಸೆಯ ವಿನ್ಯಾಸ, ಇದುವರೆಗಿನ ನುಡಿಯರಿಮೆಯ ತಿಳಿವಳಿಕೆ ಹಾಗೂ ಇತ್ತೀಚೆಗೆ ಬಹುಸ್ತರದ ಪ್ರಗತಿ ಸಾಧಿಸಿರುವ ancient DNA ವಿಶ್ಲೇಷಣೆಗಳನ್ನು ನಾವು ಒಪ್ಪುವುದಾದರೆ, ತರ್ಕಬದ್ಧವಾಗಿ ಅಂಡಮಾನಿನ ಒಂಗೇ, ಛತ್ತಿಸಗಢದ ಗೊಂಡ್, ಒಡಿಶಾದ ಬೊಂಡಾ ಮೊದಲಾದ ಬುಡಕಟ್ಟುಗಳ ಅಗ್ರಗಣ್ಯತೆ ಅಥವಾ primacyಯ ಹಕ್ಕನ್ನು ನಾವು ಒಪ್ಪಲೇಬೇಕು. ಹಾಗೆಂದು ಉಳಿದವರು ಇವರಿಗಿಂತ ಕಡಿಮೆ ಭಾರತೀಯರು, ಅವರ ಹಕ್ಕುಗಳು ಕಡಿಮೆ ಎಂದಲ್ಲ. ಆದರೆ ಎಲ್ಲದಕ್ಕೂ “ವಿಕಾಸ” ಎಂದು ಬೊಬ್ಬೆ ಹಾಕಿ ಜನಸಮುದಾಯಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವಾಗ, ಸೋಶಿಯಲ್ ಮೀಡಿಯಾ ಕ್ಯಾಂಪೇನ್‌ಗಳಿಂದ ವಾಸ್ತವವನ್ನು ಮರೆಮಾಚಿ ಪ್ರತಿ ಪದದ ಅರ್ಥವನ್ನು ತಿರುಚುತ್ತಿರುವಾಗ ಪದಪದವೂ ಮುಖ್ಯವಾಗುತ್ತದೆ. ಒಂದೊಂದು ಪದದಲ್ಲೂ ನಮ್ಮಳವಿಗೆ ನೀಗದಷ್ಟು ರಾಜಕಾರಣವಿದೆ. ಹೀಗಾಗಿ ಅವುಗಳನ್ನು ಸಮರ್ಥಿಸಿಕೊಳ್ಳಲೇಬೇಕು. ಪ್ರತಿಭಟಿಸಲೇಬೇಕು.
ಇದಕ್ಕೆ Out of Africa ಸಿದ್ಧಾಂತ ಎಂದು ಹೆಸರು.
ಮೇಲೆ ಹೇಳಿದ ನಾಲ್ಕು ಪ್ರಮುಖ ವಲಸೆಗಳಲ್ಲಿ ಮೊದಲ ಮೂರನ್ನು ಸಾಮಾನ್ಯವಾಗಿ ಎಲ್ಲರೂ ಒಪ್ಪುತ್ತಾರೆ; ಅವುಗಳ ಬಗ್ಗೆ ಗಂಭೀರ ವಾಗ್ವಾದಗಳಂತೂ ಇಲ್ಲ. ಆದರೆ ಕೊನೆಯದರ — ಎಂದರೆ ಇಂಡೋ—ಆರ್ಯನ್ನರ ವಲಸೆಯ — ವಿಚಾರಕ್ಕೆ ಬಂದಾಗ ವಿವಾದ ಭುಗಿಲೇಳುತ್ತದೆ. ಇವರು ಹೊರಗಿನಿಂದ ಬಂದವರಲ್ಲ, ಬದಲಿಗೆ ವಲಸೆಗಳು ಶುರುವಾಗಿದ್ದು ಇಲ್ಲಿಂದಲೇ ಎಂದು ಪ್ರತಿಪಾದಿಸುವ Out of India ಎಂಬ ವಾದಗಳಿವೆ. ಯಾವುದೇ ಖಚಿತ ಪುರಾವೆಗಳಿರದಿದ್ದರೂ ಇದು ವಿಶೇಷವಾಗಿ ಈ ದಿನಗಳಲ್ಲಿ ಮುಂಚೂಣಿಗೆ ಬಂದಿದೆ.
ಒಳಮದುವೆ / ಸ್ವಜಾತಿ ವಿವಾಹ (endogamy) ಕೂಡ ಆರ್ಯರ ವಲಸೆಯ ಪರಿಣಾಮವೇ.
ಭಾರತದ ಬಹುತೇಕ ಬುಡಕಟ್ಟುಗಳು ಮಾತೃಪ್ರಧಾನತೆಯನ್ನು ಪಾಲಿಸುತ್ತವೆ. ಪಿತೃಪ್ರಧಾನತೆಯನ್ನು ಪಾಲಿಸುವ ಆರ್ಯರು ಇಲ್ಲಿಗೆ ಬರುವವರೆಗೆ ಭಾರತದ ಸಮುದಾಯಗಳು ಮಾತೃಪ್ರಧಾನ ಹಾಗೂ ಮಾತೃವಂಶೀಯವಾಗುದ್ದವು ಎಂಬ ವಾದಗಳಿವೆ.