ಕತೆಗಾರ್ತಿ ಕಾವ್ಯಾ ಕಡಮೆ ಅವರ ತೊಟ್ಟು ಕ್ರಾಂತಿ (ಕಥಾ ಸಂಕಲನ) ಮತ್ತು ಸಂಜೀವಿನಿ ಸ್ಟೋರ್ಸ್ (ಮೂರು ನಾಟಕಗಳು) ೭.೭.೨೦೨೪ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿವೆ. ಅರಿಷಡ್ವರ್ಗೋಪಾಸನೆ ಎಂಬ ನಾಟಕದ ಆಯ್ದ ಭಾಗ ಇಲ್ಲಿದೆ.
ದೃಶ್ಯ ೪
(ಕಾಡಿನ ದೃಶ್ಯ. ಕಿಣಿ, ಆಗೂ, ನಿತ್ತಿ, ಕಮೂ ಹಾಡುವ ಹಾಡು. ಒಂಬಾ ಎಂದಿನಂತೆ ಒಂದೇ ಕಡೆಗೆ ಕುಳಿತಿದ್ದಾನೆ. ಹಾಡಿಗೆ ಸ್ಪಂದಿಸುತ್ತಿದ್ದಾನೆ.ಅವನ ಕೈಯಲ್ಲಿ ಎರಡು ಬೇರುಗಳಿವೆ. ಅವುಗಳನ್ನು ಟಿ ಆಕಾರದಲ್ಲಿಟ್ಟು ಮೊಸರು ಕಡೆದ ಹಾಗೆ ಕಡೆಯುತ್ತಿದ್ದಾನೆ. ಎಲ್ಲರೂ ಒಟ್ಟಾಗಿಕುಳಿತು ಕಿರುಬದ ಚರ್ಮ ಸುಲಿಯುತ್ತಿದ್ದಾರೆ. ಅಡುಗೆ ತಯಾರಾಗುತ್ತಿದೆ. ಅಲ್ಲಲ್ಲಿ ಬರುವ ‘ಎರರ್’ ಶಬ್ದ ನಾಟಕದ ಕತೆಗೆ ಪೂರಕ. ಅವು ತಪ್ಪುಗಳಲ್ಲ.)
ಮಾಣೆ ಪೆಂಥಾ ಇಲ್ಕಾ ಪೆಂಥಾ ಓನೋ ದೊಂ ಇಚ್ಚೆ ಬೆಂಥಾ ಮಿಲ್ಲಾ ಜಂಥಾ ಗೊಂಗೇ ಸಂ (ದೊಡ್ಡದಾಗಿ static ಸದ್ದಾಗುವುದು.) ಇಲ್ಲಿ ಕುಳಿತು ಅಲ್ಲಿ ಕುಳಿತು ಹೋಗೋದು ಹೊತ್ತು ಅತ್ತು ಆತು ಉತ್ತು ಕಿತ್ತು ತಿನ್ನೋದು ತುತ್ತು ಮುಚ್ಚಿದ ಬುತ್ತಿ ತೆರೆದ ಕತ್ತಿ ಇರಲಿರಲಿ ಹಾಗೆ ಸುತ್ತಿಟ್ಟ ಹಂಸ ಕಚ್ಚಿದ ಹುತ್ತ ಬಿದ್ದಿರಲಿ ಹೀಗೆ ನಾವು ನೀವು ಹೆಳವರು ಕುರುಡರು ಬಿಡಿಸೋದು ಹ್ಯಾಗೆ ಬಗೆದು ನೋಡು ಜಗವೇ ಅಲ್ಲಿತ್ತು ಒಡಲೊಳಗಣ ಬೇಗೆ ಒತ್ತು ತೆತ್ತು ಸುತ್ತು ಬಿತ್ತು ಹೀಗೇ ಅಚ್ಚೊತ್ತು ಗತ್ತು ಹೊತ್ತು ನಡೆಯೋದ್ಹ್ಯಾಂಗೆ ಇದುವೇ ಶರತ್ತು ಅಪ್ಪನ ತಂಗಿ ನಿನ್ನಾ ತಾಯಿ, ಅವಳ ಗಂಡ ನಿನ್ನಾ ಅಣ್ಣ ಅವನ ಮಗಳು ನನ್ನ ಪತ್ನಿ, ಪತ್ನಿಯ ಮಗನು ನಿನ್ನಾ ಸಖನು ಸಖನಾ ಪ್ರೇಯಸಿ ನಮ್ಮಾ ಮಗಳು, ಮಗಳಾ ಅತ್ತೆಯು ನಮಗೂ ಅತ್ತೆ ಅತ್ತೆಗೆ ಅಜ್ಜನು ನಮ್ಮಾ ಕುವರಾ, ಕುವರನ ಹೊಟ್ಟೇಲಿ ನಾನೂ ನೀನು ಅತ್ತು ಆತು ಉತ್ತು ಕಿತ್ತು ತಿನ್ನೋದು ತುತ್ತು ಇಲ್ಲಿ ಕುಳಿತು ಅಲ್ಲಿ ಕುಳಿತು ಹೋಗೋದು ಹೊತ್ತು
ಕಿಣಿ: ಓಯ್ ಮೂದೇವಿ, ಶೋಕಿ ಸಾಕು. ಬಂದಿಲ್ಲಿ ಸಹಾಯ ಮಾಡು.
ನಿತ್ತಿ: ಏನು ಮಾಡಿದರೂ ಸಮಾಧಾನ ಇಲ್ಲಲ್ಲ ನಿನಗೆ.
ಕಿಣಿ: ಈಗೇನು ಬೇಕಾ ಒದೀಕಿ? ನಿನ್ನೆ ಕಾಲಿಗೆ ಬಿದ್ದೆ ಅಂತ್ಹೇಳಿ ಹತ್ತಿರ ಸೇರಿಸ್ಕೊಂಡಿದೀನಿ. ಮತ್ತೆ ತಂಟೆ ಶುರು ಮಾಡಿದ್ಯೋ ಬೀಳುತ್ತೆ ನಿನಗೆ.
ನಿತ್ತಿ: ಯಾಕಲೇ ಎರರ್ ಎರರ್... ಇಡೀ ಕಾಡಿನಲ್ಲಿದ್ದ ಒಂಟಿ ಕಿರುಬ ಅದು. ಎಷ್ಟೆಲ್ಲ ಸಾಹಸ ಮಾಡಿ ಹಿಡಿದಿದ್ದು ಗೊತ್ತಾ. ಆ ಕಮೂ ಹಿಂದೆಹಿಂದೆ ಇದ್ದ ಅಷ್ಟೇ. ಕಿರುಬ ಬರೋ ದಾರೀಲಿ ಸೆಣಬು ಕಟ್ಟಿ ಮುಕ್ಕರಿಸುವಂತೆ ಮಾಡಿದ್ದು ಯಾರು ಅಂದ್ಕೊಂಡಿ?
ಕಮೂ: ಹೌದಪ್ಪಾ, ರಾಜ್ಕುಮಾರ ನೀನೇ ಹಿಡಿದಿದ್ದು. ಯಣ್ಣೋ... ಯಣ್ಣೋ ಕಾಲಿಗೆ ಬೀಳ್ತೀನಿ. ಈ ಕಿರುಬನ್ನೊಂದು ಹೊಡಕೊಂಡು ಹೋಗೋಣಣ್ಣೋ... ಒಂದು ತಪ್ಪಾಗೋಗಿದೆ, ಈ ಉಡುಗೊರೆನೊಂದು ತೊಗೊಂಡು ಹೋಗದಿದ್ರೆ ನಮ್ಮುಡುಗಿ ಹಾಸಿಗೆಗೆ ಸೇರಿಸಂಗಿಲ್ಲ...
ಆಗೂ: ಅಂತಂದು ಆಮೇಲೆ ಕಿರುಬ ಮುಂದಿರೋವಾಗ...
ಕಮೂ: ಅಣ್ಣೋ, ನನ್ನ ಕೈಲಾಗೋದಿಲ್ಲ... ನಾನು ಬಾಲ ಹಿಡಕೋತೀನಿ, ನೀನು ಕತ್ತು ಸೀಳು...
(ನಗುವರು.)
ನಿತ್ತಿ: ಈಗೇನು, ಸುಖಾಂತ್ಯ ಆಯ್ತು ಎರರ್ ಹೌದಿಲ್ಲೋ? ಮತ್ತೆ ಮತ್ತೆ ಅದೇ ಮಾತು ಯಾಕೀಗ.
ಆಗೂ: ಏನು ಸುಖಾಂತ್ಯಾನೋ. ಇಡೀ ಕಾಡಿನಲ್ಲಿ ಉಳಿದಿದ್ದು ಇದೊಂದೇ ಕುರ್ಕ, ಇದನ್ನೂ ತಿಂದು ಮುಗಿಸಿದ್ರೆ, ನಾಳೆಗೇನು ಮಾಡೋದು!
ಕಿಣಿ: ಜೊತೆಗೆ ಈ ಹಾಳು ಚಳಿ. ಹೋದ ಚಳಿಯಲ್ಲಿ ಮಾಳಿ ಹೋದಳು. ತರಬ ಹೋದ. ಇನ್ನೆಷ್ಟು ಹೆಣ ಬೀಳೋದಿದೆಯೋ.
ನಿತ್ತಿ: ಒಳ್ಳೆಯ ಸಮಯದಲ್ಲಿ ಕೆಟ್ಟ ಮಾತ್ಯಾಕೆ ಆಡ್ತೀ? ಹೋದವರು ಮತ್ತೆ ಅದೇ ಜಾಗದಿಂದ ಎದ್ದು ಬಂದಾರು.
ಕಿಣಿ: ಒಳ್ಳೆ ಸಮಯ, ಕೆಟ್ಟ ಸಮಯ. ಬಾಯಿ ಬಿಟ್ರೆ ಇದೇ ಆಯ್ತು ನಿಂದು ನಿತ್ತಿ. ಒಂದಾದರೂ ಅರ್ಥ ಇರೋದು ಮಾತಾಡಬೇಕು.
(ಹೋಗಿ ಕುರ್ಕದ ಮಾಂಸ ಹಸನುಗೊಳಿಸತೊಡಗುವಳು.)
ಆಗೂ: ಕಡೆಯ ಕುರ್ಕವನ್ನಂತೂ ಹೊಡೆದಾಯ್ತು. ಇನ್ನೇನು ಕೊಡತಾಳೆ ನಿಮ್ಮ ತಾಯಿ ಮರ ನೋಡುತೇನೆ ನಾನೂ.
ಕಮೂ: ನಂಬಿಕೆ ಮುಖ್ಯ.
ಆಗೂ: ಖಾಲಿ ಹೊಟ್ಟೇಲಿ ತತ್ವ ಹೊಟ್ಟೋದಿಲ್ಲ. ಎರರ್.
ಕಮೂ: ಆಹಾ, ಬಹಳ ಹೊಸ ಹೊಸ ಮಾತು ಬರ್ತಿದೆಯಲ್ಲ ಹೊರಗೆ. ಬೇಟೆಯ ಮಹಿಮೆ ಏನೋ.
ನಿತ್ತಿ: ನನ್ನ ಮಾತು ನಂಬೋದಿಲ್ಲ ಈ ಹೆಂಗಸರು. ನೀನೇ ಹೇಳು ಕಮೂ, ಚಂದಿರ ಕಗ್ಗತ್ತಲ ಧೂಪ ಹಾಸಿರೋವಾಗ, ಕಿವಿಯಿಟ್ಟು ಕೇಳಿದ್ರೆ ತಾಯಿ ಮರ ನಡೆದಾಡೋದು ಕೇಳಸ್ತದೆ.
ಕಮೂ: ನಡಕೊಂಡು ಹೋಗಿ ಅವಳು, ಆ ಬೇರೆ ಜಗತ್ತಿನಿಂದ ಪ್ರಾಣಿಗಳ ಹಿಡಿದು ಇಲ್ಲಿ ಒಗದು ಹೋಗತಾಳೆ. ಹಾಗೆಲ್ಲ ಹಸಿದುಕೊಂಡು ಸಾಯೋದಕ್ಕೆ ಬಿಡತಾಳೆ ಅಂತ ಮಾಡೀಯೇನು?
ಆಗೂ: ಕಲ್ಪನೆ ಚೆನ್ನಾಗಿದೆ ಎರರ್.
ಕಮೂ: ಮತ್ತೇನು? ಹೊಟ್ಟೆ ಒಣಗಬಾರದು ಅಂತ ಎಷ್ಟೋ ದಿನಗಳಿಂದ ಕಣ್ಣು ತಪ್ಪಿಸಿ ತಿರಗ್ತಿದ್ದ ಈ ಮಿಕವನ್ನ ಹಿಡಿಸಿ ಕೊಟ್ಲು. ಬೇರುಗಳನ್ನ ಉಜ್ಜಿಉಜ್ಜೀನೇ ಹಣ್ಣಾದ ಈ ಒಂಬಾನ ಕೈಯಲ್ಲಿ ಬೆಂಕಿ ಹುಟ್ಟಿಸಿದಳು. ಆಗಾಗ ಪಕ್ಷಿಗಳನ್ನ ಬೇಟೆಗೆ ಸಿಗೋವಷ್ಟೇ ದೂರದಲ್ಲಿ ನೆಟ್ಟುಹೋದ್ಲು. ಚಳಿಗೆ ಇಡೀ ಕಾಡಿನ ಮರಗಳು ಉದುರಿದರೂ ಅದೋ ಆ ಎತ್ತರದ ಮರದಲ್ಲಿ ಬೆಳೆಯೋ ಮೈಮುಚ್ಚೋ ಎಲೆಗಳು ಮಾತ್ರ ಉದುರದೇ ಇನ್ನಷ್ಟು ಗಡುಸಾಗತವೆ. ಚಳಿಗೆ ಕೌದಿ ಒದಗಿಸುತಾವೆ.
ನಿತ್ತಿ: ಎರಡು ಜೀವಗಳ ಅಪ್ಪುಗೆಯಲ್ಲಿ ಇಡೀ ಜಗತ್ತಿನ ಕಾವನ್ನ ಸೃಷ್ಟಿ ಮಾಡತಾಳೆ.
ಆಗೂ: ಆಹಾ... ಬಹಳ ದೊಡ್ಡದೊಡ್ಡದೇ ಬರ್ತಿದೆ ಮಾತು. “ಅದು” ಇದೆ ಅಂದ ತಕ್ಷಣ ಕಲ್ಪನೇನೂ ದೊಡ್ಡದಾಗತದೇನು?
(ಹುಡುಗಿಯರಿಬ್ಬರೂ ನಗುವರು.)
ನಿತ್ತಿ: ಸತ್ಯ ಹೇಳಿದರೆ, ಇಂಥದೇ ನಿಮ್ದು.
ಆಗೂ: ಏನು ಸತ್ಯ? ಅಂಥ ನಿಮ್ಮ ತಾಯಿ ಆ ಕಾಡಂಚಿನ ಸರಿಗೆ ಮುಟ್ಟಿದರೆ ಮಾತ್ರ ಯಾಕೆ ಸತ್ತು ಮಲಗಿಸತಿದ್ಲು? ಒಮ್ಮೊಮ್ಮೆಮಧ್ಯರಾತ್ರಿಯ ನೀರವದಲ್ಲಿ ಕಿವಿಯಿಟ್ಟು ಕೇಳಿದರೆ ದೂರದಲ್ಲಿ ಕೇಳೋ ಆ ಹೆಜ್ಜೆಸಪ್ಪಳ ಏನು? ಅದು ತಾಯೀದು ಅಂತ ಹೇಳ್ತೀರಿ ನೀವು. ನನಗದು ಆಚೆ ಜಗತ್ತಿನಲ್ಲಿ ನಮ್ಮಂತೆಯೇ ನಡೆದಾಡೋ ಜನರ ಸಪ್ಪಳದ ಹಾಗೆ ಕೇಳಸ್ತದೆ. ಮತ್ತೆ ಬಿಟ್ಟು ಬಿಟ್ಟು ಮಳೆ ಸುರಿದ ಹಾಗೆ ಕೇಳೋ ಆ ಸದ್ದೇನು? ಆಕಾಶದ ಅತೀ ಎತ್ತರದಲ್ಲಿ ನಿಧಾನಕ್ಕೆ ಬಿಳೇ ಹೂಸು ಬಿಡತಾ ತೇಲಿ ಹೋಗೋ ಆ ಹಕ್ಕಿಯೇನು? ಏನೇನೂ ಕುತೂಹಲ ಇಲ್ಲ ನಿಮಗೆ. ಎಲ್ಲದಕ್ಕೂ ತಾಯಿ ಮರ ತಾಯಿ ಮರ ಅಂದ್ಕೊಂಡು...
ಕಮೂ: ನೀನು ಹೇಳಬೇಕಂತಿರೋದಾದ್ರೂ ಏನು?
ಆಗೂ: ಆ ಸರಿಗೆಯ ಆಚೆಗೆ ಏನಿದೆ ಹೇಳು.
ನಿತ್ತಿ: ನಮಗಿಂಥ ಹತ್ತು ಪಟ್ಟು ಎತ್ತರದ ಗೋಡೆ.
ಆಗೂ: ಆ ಗೋಡೆಯ ಆಚೆಗೆ?
ನಿತ್ತಿ: ಆ ಗೋಡೆಯ ಆಚೆಗೆ ಅಂದ್ರೆ? ಜಗತ್ತು ಅಲ್ಲೇ ಶುರುವಾಗೋದು. ಅಲ್ಲೇ ಮುಗಿಯೋದು. ಸೂರ್ಯ ಆ ಒಂದು ಕಡೆಯಿಂದ ಹುಟ್ಟಿ ಆ ಇನ್ನೊಂದು ಮಗ್ಗುಲಲ್ಲಿ ಮುಳಗ್ತಾನೆ.
ಆಗೂ: ಅಷ್ಟೇನಾ?
ಕಮೂ: ಮತ್ತೇನು?
ಆಗೂ: ಅಷ್ಟೇ ಆಗಿದ್ದರೆ, ಈ ಹಸಿವಿಗೇನು ಅರ್ಥ? ಈ ನೋವಿಗೇನು ಅರ್ಥ? ನೆನಪಿಗೆ? ಕನಸಿಗೆ? ಏನೂ ಅರ್ಥ ಇಲ್ಲ ಅಂತೀರೇನು ಈ ಯಾವುದಕ್ಕೂ?
ಕಿಣಿ: ಹರಟೇನೇ ಹೊಡೀತಾ ಕೂತಿರತೀರೋ? ಇಲ್ಲಿ ಈ ಎಲುಬು ಎಳೆಯೋದಕ್ಕೆ ಬರ್ತಿಲ್ಲ.
(ನಿತ್ತಿ ಹೋಗಿ ಕಿರುಬದ ದೊಡ್ಡ ಎಲುಬೊಂದನ್ನು ಶಕ್ತಿ ಹಾಕಿ ಎಳೆಯುವನು. ಕಿಣಿ ಓಡಿ ಹೋಗಿ ಕಕ್ಕಿಕೊಳ್ಳುವಳು. ಆಗೂ, ಕಮೂ, ನಿತ್ತಿ ಸಹಾಯಕ್ಕೆ ಬರುವರು.)
ಆಗೂ: ಮುಂಜಾನೆಯಿಂದ ಮೂರನೆಯ ಬಾರಿ ಅಲ್ಲ ಇದು.
ಕಿಣಿ: ರಕ್ತದ ವಾಸನೆ ತಡೆಯೋಕಾಗಿಲ್ಲ.
ಆಗೂ: ಮೊದಲು ಅದನ್ನೇ ಘಮ ಘಮ ಅಂತಿದ್ದೆ.
ಕಿಣಿ: ಬಿಡು, ಕೆಲಸ ನೋಡೋಣ.
ಆಗೂ: ಹೌದೇನು ಕಿಣಿ?
ಕಿಣಿ: ಇರಬಹುದು ಅಂತ ಕಾಣತದೆ. ಇಲ್ಲಾ ನಿನ್ನೆ ಬಿದ್ದ ಹಳದೀ ಎಲೆಗಳನ್ನ ಅರೆದು ಕುಡಿದಿದ್ದೆವಲ್ಲ, ಅದು ಹೊಟ್ಟೆಗೆ ಆಗಲಿಲ್ಲೋ ಏನೋ.
ಆಗೂ: ಅದೇ ಆಗಿದ್ದರೆ ನನಗೂ ವಾಂತಿಯಾಗಬೇಕಿತ್ತಲ್ಲ.
ಕಿಣಿ: ಅಂದರೆ ಅದೇ ಅಂತೀಯೇನು?
ಆಗೂ: ಹಂಗೇ ಕಾಣತದೆ.
ಕಿಣಿ: ಈಗಲೇ ಹೇಳೋದು ಬೇಡ. ಗೊತ್ತಾದರೆ ಬೊಬ್ಬೆ ಜೋರಾಗತದೆ. ಇರೋರಿಗೇ ಹೊಟ್ಟೆಗಿಲ್ಲ. ಹೊಸಬರಿಗೆ ಏನು ತಿನ್ನಿಸೋಣ. ಇತ್ಯಾದಿ ಇತ್ಯಾದಿ. ಎರರ್.
ಆಗೂ: ಬಿಡು. ಇನ್ನೂ ಸಮಯ ಇದೆ.
ಕಿಣಿ: ಅಷ್ಟೇ.
ಕಮೂ: ಕಿಣೀ, ಹುಶಾರಿದ್ದೀ ಹೌದಿಲ್ಲೋ. ತಾಯಿಮರದ ತೊಗಟೇನ ತೇಯ್ದು ನೇರಳೆ ಎಲೆಗಳ ಜೊತೆ ತಿಂದರೆ ಕಡಿಮೆ ಆಗತದೆ. ಹೊಟ್ಟೆಗೆ ಹುಣ್ಣಾಗದೋ ಏನೋ.
ನಿತ್ತಿ: ನಾನು ತೊಗಟೆ ತರಲಿಕ್ಕೆ ಹೋಗತೇನೆ.
ಕಮೂ: ನಾನು ನೇರಳೆ ಮರಕ್ಕೆ ಹೋಗತೇನೆ. ಬಂದು ನಾನೇ ಚರ್ಮ ಸುಲಿದು ಕೊಡತೇನೆ. ಹೋಗಿ ಮಲಗಿರು ಕಿಣಿ. ಆಗೂ, ನೀನೂ ಅಷ್ಟೇ. ಪುರಾಣ ಒದರಿ ಅವಳ ನಿದ್ದೆಗೆಡಿಸಬೇಡ.
(ನಿತ್ತಿ ಹೊರಟವನು ಮರಳಿ ಕಿಣಿಯ ಕೆನ್ನೆಗೆ ಮುತ್ತಿಡುತ್ತಾನೆ.)
ನಿತ್ತಿ: ಹುಶಾರು... ಚಿನ್ನಾ...
(ನಿತ್ತಿ ಮತ್ತು ಕಮೂ ನಿರ್ಗಮಿಸುವರು.)
ಕಿಣಿ: ಚಿನ್ನಾ!? ಚೆನ್ನಾಗಿದೆ.
ಆಗೂ: ಕಿಣಿ, ಯಾವಾಗ ಹೇಳ್ತೀ ಅವರಿಗೆ?
ಕಿಣಿ: ಹೇಳೋದಕ್ಕೇ ಭಯ.
ಆಗೂ: ಹುಚ್ಚಿ ಹೇಳದಿದ್ದರೆ ಗೊತ್ತಾಗೋದಿಲ್ಲೇನು?
ಕಿಣಿ: ಗೊತ್ತಾದಾಗ ಆಗಲಿ. ನೀನೇನೇ ಹೇಳು. ಈ ಸಲ ನಾನು ಉಳಿಸಿಕೊಳ್ಳೋಳು.
ಆಗೂ: ನಾನೂ ಜೊತೆ ಕೊಡ್ತೀನಿ ನಿಂಗೆ. ಐದು ಜನ ಇದೀವಿ. ಆರನೇದರ ಹೊಟ್ಟೆ ಹೊರೆಯೋದು ಅಷ್ಟೊಂದು ಕಷ್ಟ ಏನು?
ಕಿಣಿ: ಅಷ್ಟಕ್ಕೂ ಅವರಿಗೆ ಹೇಳೋದು ಅಂಥ ದೊಡ್ಡ ವಿಷಯ ಯಾಕಾಗಬೇಕು? ನಮ್ಮ ಮಗು ನಾವು ಕಾಪಾಡಿಕೊಳ್ಳೋದಕ್ಕಾಗೋದಿಲ್ಲೇನು?
ಆಗೂ: ಇವರು ಹೆಣೆಯೋ ಸುಳ್ಳುಗಳ ನಡುವೆ ಹೊಟ್ಟೆಯಲ್ಲಿ ಕೈಕಾಲು ಆಡಿಸೋದಷ್ಟೇ ಸತ್ಯ ನುಡಿಯೋದು ಅನ್ನಿಸಿ ಬಿಡತದೆ. ಈ ಸಲ ಬರಲಿ ಮಗೂನ ಕಸಿಯೋಕೆ, ಅವರಿಬ್ಬರ ಚರ್ಮ ಸುಲಿದು ಬಿಡ್ತೀನಿ. ಎರರ್ ಎರರ್ಗಳು.
ಕಿಣಿ: ಅಷ್ಟೇ.
ಆಗೂ: ಕಿಣಿ, ಆ ಹಾಡು ನೆನಪದೆ ಏನು ನಿನಗೆ?
ಕಿಣಿ: ಯಾವುದು ಹೇಳು?
ಆಗೂ: ಅದೇ ಆಗ, ಇಬ್ಬರೂ ಬಸಿರಿನಲ್ಲಿ ಜೀವಗಳನ್ನ ಹೊತ್ತು ಇದೇ ಬಂಡೆಯ ಮೇಲೆ ಕೂತು ಹೊಸೆದಿದ್ದೆವಲ್ಲ.
ಕಿಣಿ: ನೆನಪಿಲ್ಲದೇ ಏನು. ಈ ಒಂಬಾ, ಈತನೂ ಇಲ್ಲೇ ಹೀಗೇ ಕುಳಿತಿದ್ದ ಅಲ್ಲ ಆಗ?
ಆಗೂ: ಬೆಂಕಿಯ ರುಚಿ ಕಂಡಿರಲಿಲ್ಲ ಇನ್ನೂ ನಾವು.
ಕಿಣಿ: ಆದರೂ ಉರೀತಿತ್ತು. ಆಸೆ, ಸಂಭ್ರಮ, ಕನಸು.
ಆಗೂ: ಬಿಡು, ಮತ್ತೆ ಉರೀತದೆ. ನಂಚೋದಕ್ಕೆ ಬಿಡೋದು ಬೇಡ.
ಕಿಣಿ: ಟಕ್ಕಟಕಟಕ ಟಕ್ಕಟಕಟಕ, ಒಂಬಾ, ನೆನಪದೆ ಏನು ಆ ರಾಗ?
(ಒಂಬಾ ಹೌದು ಎನ್ನುವ ಹಾಗೆ ಇಶಾರೆ ಮಾಡುತ್ತಾನೆ. ಬೆಂಕಿ ಮಾಡುವ ಯಂತ್ರವನ್ನೇ ಈ ಹಾಡಿನ ರಾಗಕ್ಕೆ ತಾಳೆ ಹಾಕುತ್ತಾನೆ.
ಹಾಡು.)
ಕೊಂಬೆಗಳಾ ಮಡಿಲಲಿ ಬೀಳಲೇ ಬೇಡ- ಚಂದಿರ ಸಿಂಬೆದ್ದ ಕಡಲಲಿ ಮುಳುಗಲು ಕಂಡಿತು- ಅಂಬರ ನೀನು ಬರುವಾ ತನಕ- ಬಂದಿಲ್ಲ ಎಂಬೆ ಬಂದಾ ಮೇಲೆ- ನಿಂತಿಲ್ಲ ಕಾಂಬೆ ನಿಂತ ತರುವಾಯ- ನಂಬೋದು ಹ್ಯಾಂಗೆ ನಂಬಿದೊಡೆ ನೀ ಮಾಯ- ಹಿಡಿಯೋದು ಹ್ಯಾಗಯ್ಯ ಕೊಂಬೆಗಳಾ ಮಡಿಲಲಿ ಬೀಳಲೇ ಬೇಡ- ಚಂದಿರ ಸಿಂಬೆದ್ದ ಕಡಲಲಿ ಮುಳುಗಲು ಕಂಡಿತು- ಅಂಬರ ಹಡೆಯೋನು ನೀನೇ- ನೀನೇ ಚಂದ್ರಯ್ಯ ಹುಟ್ಟೋನು ನೀನೇ- ನೀನೇ ಕಂದಯ್ಯ ಬೆನ್ನಿಗೂ ನೀನೇ- ಎತ್ತೀ ಮುದ್ದಿಸುತ ಮಡಿಲಲ್ಲೂ ನೀನೇ- ನಮ್ನೇ ಆಡಿಸುತ ಹಿಡಿಹಿಡಿದು ಬಿಡಬೇಡ ಬಡಿಬಡಿದು ಒಗಿಬೇಡ- ಚಂದಿರ ಗಡಗಡನೆ ನಡುಗಿಸುತ ಕಾಣಿಸಲೇ ಬೇಡಯ್ಯ- ಅಂಬರ.
(ಹಾಡು ಮುಗಿಯುತ್ತಲೇ ಒಂಬಾನ ಯಂತ್ರದಿಂದ ಚರಕ್ಕನೆ ಹೊಗೆ ಏಳತೊಡಗುವುದು. ಮೂವರೂ ಆ ಹೊಗೆಯನ್ನು ದೀಪದಂತೆ ಅಂಗೈಗಳಿಂದ ಜೋಪಾನ ಮಾಡುವರು. ಮೆಲ್ಲಗೆ ಹೊಗೆಯ ಮೇಲೆ ತರಗೆಲೆ ಹಾಕುವರು. ಮೂವರ ಮೊಗದಲ್ಲೂ ಸಂಭ್ರಮ. ಬೆಂಕಿ ಮೆಲ್ಲಗೆ ಹೊತ್ತಿಕೊಳ್ಳತೊಡಗುವುದು.)
ಕೃತಿ : ಸಂಜೀವಿನಿ ಸ್ಟೋರ್ಸ್ (ಮೂರು ನಾಟಕಗಳು)
ಲೇಖಕರು : ಕಾವ್ಯಾ ಕಡಮೆ
ಪುಟ : ೧೨೦
ಬೆಲೆ : ರೂ ೧೩೦
ಮುಖಪುಟ ವಿನ್ಯಾಸ : ಸಿ.ಪಿ. ಮದನ್
ಪ್ರಕಾಶನ : ಕಾನ್ಕೇವ್ ಮೀಡಿಯಾ ಅಂಡ್ ಪಬ್ಲಿಷರ್
ಕಾವ್ಯಾ ಕಡಮೆ
ಕಾವ್ಯಾ ಕಡಮೆ ಉತ್ತರ ಕನ್ನಡ ಜಿಲ್ಲೆಯ ಕಡಮೆಯವರು. ೧೯೮೮ರಲ್ಲಿ ಜನನ. ಬಿಎಸ್ಸಿ ನಂತರ ಕರ್ನಾಟಕ ವಿವಿಯಿಂದ ಆರು ಚಿನ್ನದ ಪದಕಗಳೊಂದಿಗೆ ಪತ್ರಿಕೋದ್ಯಮ ಎಂ.ಎ ಪದವಿ. ೨೦೧೩ರಿಂದ ಅಮೆರಿಕಾದ ನ್ಯೂಜೆರ್ಸಿಯಲ್ಲಿ ವಾಸ. ಧ್ಯಾನಕೆ ತಾರೀಖಿನ ಹಂಗಿಲ್ಲ, ಜೀನ್ಸ್ ತೊಟ್ಟ ದೇವರು ಪ್ರಕಟಿತ ಕವನ ಸಂಕಲನಗಳು. ಮಾಕೋನ ಏಕಾಂತ, ತೊಟ್ಟು ಕ್ರಾಂತಿ ಕಥಾ ಸಂಕಲನಗಳು. ಪುನರಪಿ ಕಾದಂಬರಿ. ಆಟದೊಳಗಾಟ ಮತ್ತು ಡೋರ್ ನಂಬರ್ ಎಂಟು ಹಾಗೂ ಸಂಜೀವಿನಿ ಸ್ಟೋರ್ಸ್ ನಾಟಕ ಸಂಕಲನಗಳು. ದೂರ ದೇಶವೆಂಬ ಪಕ್ಕದ ಮನೆ ಪ್ರಬಂಧ ಸಂಕಲನ.
ಇವರ ಪದ್ಯ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ, ಟೋಟೋ ಪುರಸ್ಕಾರ, ಕಡೆಂಗೋಡ್ಲು ಕಾವ್ಯ ಪುರಸ್ಕಾರ ಹಾಗೂ ದಿನಕರ ಕಾವ್ಯ ಪ್ರಶಸ್ತಿ ದೊರೆತಿದೆ. ಗದ್ಯ ಕೃತಿಗಳಿಗೆ ಛಂದ ಪುಸ್ತಕ ಬಹುಮಾನ, ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ರತ್ನಮ್ಮ ಹೆಗ್ಗಡೆ ಗ್ರಂಥ ಬಹುಮಾನ, ಡಾ ಎಚ್ ಶಾಂತಾರಾಮ್ ಪ್ರಶಸ್ತಿ, ವೀಣಾ ಶಾಂತೇಶ್ವರ ಯುವ ಕತೆಗಾರ್ತಿ ಪ್ರಶಸ್ತಿ, ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಲೇಖಕಿಯರ ಸಂಘದ ದತ್ತಿ ಪುರಸ್ಕಾರಗಳು ಹಾಗೂ ನಾಟಕ ಅಕಾಡೆಮಿಯ ನಾಟಕ ಬಹುಮಾನ ಸಂದಿದೆ.