ಕನ್ನಡದ ಹಿರಿಯ ಕವಿ ಸವಿತಾ ನಾಗಭೂಷಣರ ಕಾವ್ಯದ ಕುರಿತು ಕವಿ ಕೊಟ್ರೇಶ್ ಅರಸೀಕೆರೆ ತಮ್ಮ ಕೆಲ ಅನ್ನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಮೊನ್ನೆ ಒಂದು ಸಾಹಿತ್ಯಿಕ ಗುಂಪಿನಲ್ಲಿ ಕವಿಯೊಬ್ಬನ ಕವಿತೆ ಓದಿದಾಕ್ಷಣ ಮತ್ತೊಬ್ಬ ಕವಿಯ ಕವಿತೆಯ ನೆನಪು ಬರುವ ಬಗ್ಗೆ ಒಂದು ವಿಸ್ತೃತವಾದ ಚರ್ಚೆ ನಡೆಯಿತು. ಇದನ್ನ ಯೋಚಿಸುತ್ತಲೇ “ಕಾವ್ಯವನ್ನು ಹೇಗೆ ರಚಿಸುತ್ತಾರೆ ?” ಎಂಬ ಸಹಜ ಪ್ರಶ್ನೆ ಮೂಡಿತು. ಅದೊಂದು ವಿಶಿಷ್ಟ ಸ್ಥಿತಿಯೇ? ಬರಿಯ ಭಾವವೇ? ಅಥವಾ ಸಹಜವಾಗಿ ಎಲ್ಲ ಕವಿಗಳು ಹೇಳುವ ಕ್ಲೀಷೆಯೆನಿಸುವ, “It comes to me,” ಎನ್ನುವ ಹಾಗೆಯೇ? ನಿಜವಾಗಿ ಕಾವ್ಯ ಸೃಷ್ಟಿಯಾಗುವುದು ಹೇಗೆ? ಇದರ ಜೊತೆಗೇ ಕವಿ ಮತ್ತು ಕವಿಯತ್ರಿಯರನ್ನು ಭಿನ್ನವಾಗಿ ನೋಡುವ ಓದುಗ, ವಿಮರ್ಶಕರ ಕುರಿತು ಅಚ್ಚರಿ. ಕಾವ್ಯ ಸೃಷ್ಟಿಯಲ್ಲಿ ‘ಲಿಂಗ ಸ್ವರೂಪ’ವು ಉಂಟೇ? ಇದನ್ನೆಲ್ಲ ಯೋಚಿಸುವಂತೆ ಮಾಡಿದ್ದು ನನ್ನ ಮುಂದಿರುವ ಕವಿ ಸವಿತಾ ನಾಗಭೂಷಣರ ಕೆಲ ಕವಿತೆಗಳು.
ಸವಿತಾ ಅವರ ಕಾವ್ಯ ಸೃಷ್ಟಿಯಲ್ಲಿ ಪ್ರಚೋದಕ ಅಂಶಗಳು ಯಾವುವು? ಅವು ಕೇವಲ ಭಾವ, ಸುಪ್ತಪ್ರಜ್ಞೆಯ ಚಿಂತನೆಯೇ? ಎಂದು ವಿಶ್ಲೇಷಿಸಿದರೆ ಅವರ ಬಹಳಷ್ಟು ಕವಿತೆಗಳಲ್ಲಿ ಪ್ರತಿಭಟನೆ, ಸ್ತ್ರೀಚಿಂತನೆ, ಸುತ್ತಲಿನ ಪರಿಸರ, ಆಳವಾದ ಓದು — ಎಲ್ಲವೂ ಕಾಣುತ್ತವೆ. ಅವರ ಕವಿತೆಗಳು ಭಾವ ಪ್ರಜ್ಞೆಯಿಂದ ಸೃಷ್ಟಿಯಾದುವಲ್ಲ; ಆಂತರಿಕ ಪ್ರಜ್ಞೆ, ಬಾಹ್ಯದೃಷ್ಟಿ ಅವರ ಕಾವ್ಯ ಶಕ್ತಿ. ನಮ್ಮ ವಿಮರ್ಶಕರು ಸವಿತಾ ಅವರ ಕಾವ್ಯ ವಿಶ್ಲೇಷಿಸುವಾಗ ಅವರ ಜತೆಗಿನ ಕವಿಗಳಾದ ಪ್ರತಿಭಾ ನಂದಕುಮಾರ, ವೈದೇಹಿಯವರ ಬರಹಗಳ ಜೊತೆ ಮಾತ್ರ ಸಮೀಕರಿಸಿ ಮಾತನಾಡುವುದನ್ನು ಓದಿದ್ದೇನೆ. ನನಗೆ ಇಲ್ಲಿ ಗಂಡು - ಹೆಣ್ಣು ಕವಿ/ಲೇಖಕರ classification ನಿಜಕ್ಕೂ ಬೇಸರದ ಸಂಗತಿ. ಅವರ ಕವಿತೆಗಳು ಸಿದ್ಧಲಿಂಗಯ್ಯನವರ, ಲಂಕೇಶರ, ಕೆಎಸ್ನ ಅವರ, ಎಚ್ ಎಸ್ ಶಿವಪ್ರಕಾಶರ ಕವಿತಗಳ ಜತೆ ಯಾಕೆ ಚರ್ಚೆಗೊಳಗಾಗಿಲ್ಲ? (ಈ ಹೆಸರುಗಳನ್ನು ಉದಾಹರಣೆಗಾಗಿ ಎತ್ತಿಕೊಂಡದ್ದಷ್ಟೇ.)
ಸವಿತಾ ಅವರ ಕಾವ್ಯಸೃಷ್ಟಿಗೆ ನೆಲದ ಭಾಷೆ, ಪರಿಸರ, ನಮ್ಮ ಕನ್ನಡದ ಪೂರ್ವಸೂರಿಗಳು, ಜನಪದ, ಶರಣ ಸಂಸ್ಕೃತಿ, ಕಾಡು-ಮೇಡು, ಪರಂಪರೆ, ಪ್ರತಿಭಟನೆ, ಚಳುವಳಿಗಳು, ಗಲಾಟೆ, ಹಿರಿಯರ ಓದು ಮುಖ್ಯವಾಗಿವೆ. ಯಾವ ಬರಹಗಾರ ನೆಲದ ಪ್ರಜ್ಞೆಯಿಂದ ದೂರವಾಗುತ್ತಾನೋ ಸಹಜವಾದುದನ್ನು, ಬದುಕಿಗೆ ಹತ್ತಿರವಾದುದನ್ನು ಸೃಷ್ಟಿಸಲಾರ.
ಸವಿತಾ ಅವರ ಪ್ರತಿಭಟನೆಯ ಧ್ವನಿ ವಿಶಿಷ್ಟವಾದುದು. ಕೆಎಸ್ನ ಅವರ ಕವಿತೆ (ಐರಾವತ ಸಂಕಲನ)
ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ ಅತ್ತಿತ್ತ ಸುಳಿದವರು ನೀವಲ್ಲವೆ ? ಹತ್ತಿರದ ಹೆಣ್ಣೆಂದು ಮತ್ತೆ ಮುತ್ತೂರಿನಲಿ ಒಪ್ಪಿ ಕೈಹಿಡಿದವರು ನೀವಲ್ಲವೆ ? ಬೆಟ್ಟಗಳ ಬೆನ್ನಿನಲಿ ಬೆಟ್ಟಗಲ ದಾರಿಯಲಿ, ಕಟ್ಟಿಕೊಂಡಲೆದವರು ನೀವಲ್ಲವೆ ? ತಿಟ್ಟಿನಲಿ ಮುಂದಾಗಿ, ಕಣಿವೆಯಲಿ ಹಿಂದಾಗಿ, ನಗುನಗುತ ನಡೆದವರು ನೀವಲ್ಲವೆ ?......
ಎಂದು ಸಾಗುವ ಸುಂದರವಾದ ಜನಮನ್ನಣೆ ಗಳಿಸಿರುವ ಪ್ರೇಮಕಾವ್ಯ ಇವರದು. ಸವಿತಾ ಅವರ ನೀವಲ್ಲವೇ? ನೀವಲ್ಲವೇ? ಕವಿತೆಯಲ್ಲಿ (ದೇವರಿಗೆ ಹೋದೆವು ಸಂಕಲನ)
ಕೈಕಾಲು ಕಟ್ಟಿ ಬೆಂಕಿಗೆ ಎಸೆದದ್ದು ಕಣ್ಣಿಗೆ ಕಟ್ಟಿ ಕಾಡಿಗೆ ಅಟ್ಟಿದ್ದು ನೀವಲ್ಲವೇ.... ಕಾದೆಣ್ಣೆಯಲ್ಲಿ ಕೈ ಇಕ್ಕಿಸಿದ್ದು ಕೆರೆಗೆ ಹಾರ, ಮಹಾಸತಿಯ ಪಟ್ಟ ಕೊಡಮಾಡುತ್ತದೆ ನೀವಲ್ಲವೇ... ಮಂಡೆಬೋಳಿಸಿ ಮಡಿಸೀರೆ ಉಡಿಸಿ ಒಪ್ಪತ್ತೂಟ ಕತ್ತಲವಾಸ ಕರುಣಿಸಿದ್ದು ನೀವಲ್ಲವೇ....
ಹೀಗೇ ಇಡೀ ಭಾರತೀಯ ಮಹಿಳಾ ಕುಲದ ಕಷ್ಟನಷ್ಟ ಪರಂಪರೆಯ ಧ್ಯಾನಿಸಿ ಸಮಾಜದ ಮತ್ತೊಂದು ಮುಖದ ಬಗ್ಗೆ ಪ್ರಶ್ನಿಸುತ್ತಾರೆ.
ಅಶ್ವಿನಿ ಕಳಸದ ಓದಿದ ನೀವಲ್ಲವೆ? ನೀವಲ್ಲವೆ? ಕವಿತೆ.
ಹಾಗೆಯೇ, ಅಕ್ಕನ ವಚನ
ಅಕ್ಕ ಕೇಳವ್ವ ಅಕ್ಕಯ್ಯ ಕೇಳವ್ವ ಕೇಳವ್ವ ನಾನೊಂದು ಕನಸ ಕಂಡೆ ಅಕ್ಕಿ ಅಡಕೆ ಓಲೆ ತೆಂಗಿನಕಾಯಿ ಕಂಡೆ ಚಿಕ್ಕ ಚಿಕ್ಕ ಜಡೆಗಳ ಸುಳಿಪಲ್ಲ ಗೊರವನು ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವ ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ
ಇವರ ಕವಿತೆಯಲ್ಲಿ ಎಲ್ಲರ ಹುಡುಗಿಯರ ಕನಸಾಗುತ್ತದೆ.
ಅವ್ವ ಕೇಳೇ ನಾನೊಂದ ಕನಸ ಕಂಡೇ…. ಅವ್ವ ಕೇಳೇ ಕನಸೊಂದ ಕಂಡೆನೆ…. ಮುಂಗೋಳಿ ಕೂಗಿತ್ತು ಮೂಡಲ್ಲಿ ಕೆಂಪಿತ್ತು ಬೆಳ್ಳಿಯೂ ಮರಳಿತ್ತು ಹಕ್ಕಿಯೂ ಹಾಡಿತ್ತು ಮಲ್ಲಿಗೆ ಸಂಪಿಗೆ ಘಮ್ಮೆಂದು ಬಿರಿದಿತ್ತು ಹಾದಿಲಿ ಇಬ್ಬನಿಯು ಮುತ್ತಾಗಿ ಸುರಿದಿತ್ತು. ||ಅವ್ವ||
ಅಕ್ಕ ಅವ್ವವಾಗುತ್ತಾಳೆ, ಎಲ್ಲ ಹುಡುಗಿಯರು ಶಿವೆಯ ಮನದವರಾಗುತ್ತಾರೆ. ಅವರ ಒಳ ಮನಸ್ಸಿನ ಕನ್ನಡಿಯಾಗುತ್ತಾರೆ. ಸಾಕ್ಷಾತ್ ಶಕ್ತಿಯಾಗುತ್ತಾರೆ. ಸೃಷ್ಟಿಯಲ್ಲಿ ಬೆರೆಯುತ್ತಾರೆ, ಹಾಡುತ್ತಾರೆ. ಕಟ್ಟುಪಾಡುಗಳ ಧಿಕ್ಕರಿಸುತ್ತಾರೆ. ಚಪ್ಪರ, ತೋರಣ, ಓಲಗ, ಮಂತ್ರ, ಆರತಿ ಶಾಸ್ತ್ರಗಳ ಕಿತ್ತೊಗೆಯುತ್ತಾರೆ. ಸಹಜವೂ, ಸೌಂದರ್ಯವೂ ಆದ ಸರಳ ಬದುಕಿಗೆ ಹಂಬಲಿಸುತ್ತಾರೆ. ಸ್ವಾತಂತ್ರ್ಯದ ಹಂಬಲಕ್ಕೆ ಸ್ತ್ರೀ ಕಾತರಳಾಗುತ್ತಾಳೆ. ತನ್ನಂತೆಯೇ ಬಗೆಯುವ, ಜೀವಿಸುವ ಪುರುಷನಿಗೆ ಹಂಬಲಿಸುತ್ತಾಳೆ.
ಮೇಲೆ ಉಲ್ಲೇಖಿಸಿದ ಎರಡು ಕವಿತೆಗಳನ್ನು ಗಮನಿಸಿದಾಗ ಕವಿಯ ಅಂತರಾಳದ ಅನಾವರಣವಾಗುತ್ತದೆ. ಸಂಪ್ರದಾಯದ ಹೆಸರಿನ ಕ್ರೌರ್ಯ, ಶತಶತಮಾನದಿಂದ ಹೆಣ್ಣು ಅನುಭವಿಸುತ್ತಾ ಬಂದಿರುವ ಶೋಷಣೆಗೆ ಈ ಎರಡು ಕವಿತೆಗಳು ಉತ್ತರದಂತಿವೆ. ಪ್ರತಿಭಟನೆಯ ಕಾವ್ಯವಾಗಿ ಈ ಎರಡೂ ಕವಿತೆಗಳು ಗಮನ ಸೆಳೆಯುತ್ತವೆ. ಕೆಎಸ್ನರ ಕವಿತೆಗೆ ಉತ್ತರ ಹೇಳುವ ಕವಿತೆಗಿಂತ ಕಾವ್ಯದ ಸೌಂದರ್ಯದ ವಿಷಯದಲ್ಲಿ ಎಲ್ಲ ಹುಡುಗಿಯರ ಕನಸು ಕವಿತೆ ಗೆಲ್ಲುತ್ತದೆ; ಇವೆರಡೂ ಸ್ತ್ರೀಚಿಂತನೆಯ ಮಹತ್ವದ ಕವಿತೆಗಳಾಗಿವೆ ಎಂಬುದಾದರೂ ಇಲ್ಲಿ ಕಾಡುವುದು ಕಾವ್ಯದ ಸ್ವತಂತ್ರ ಆಶಯದ ಪ್ರಶ್ನೆ. ಈ ನಿಟ್ಟಿನಲ್ಲಿ ಇವರ ಹೊಳೆ ಮಗಳು ಸಂಕಲನದ ಹೊಳೆ ಮಗಳು ಕವಿತೆ ಲಯ, ಗೇಯತೆ, ವೈಚಾರಿಕ ದೃಷ್ಟಿಯಿಂದಲೂ ಬಹಳ ಒಳ್ಳೆಯ, ಕಾವ್ಯ ಓದುಗರನ್ನು ಸ್ಪರ್ಶಿಸುವ ಕವಿತೆಯಾಗಿದೆ. ತಾಯಿ ಮತ್ತು ಮಗಳ ಈ ಕವಿತೆ:
ಅವಳು ಹಳ್ಳ ಇವಳು ಹೊಳೆ ಹಳ್ಳದ ಬಳ್ಳಿಯಲಿ ಹರಿದು ಬಂದವಳು ಹೊಳೆ ಮಗಳು ತಾಯಿ - ಹೊಳೆ ಮಗಳ ಹುಬ್ಬನು ತೀಡುವಳು ಸುಳಿ ಮುಂಗುರುಳ ಬಾಚುವಳು ದಿಟ್ಟಿಯ ಬೊಟ್ಟಿಟ್ಟು ಅಕ್ಕರೆಯ ಮುತ್ತಿಟ್ಟು ಮುನ್ನೆಡೆಸುವಳು ಇದು ಬೆಟ್ಟ ಇದು ಗಾಳಿ ಇದು ಹೂವು ಇದು ಎಲೆ ಎಂದು ಮಗಳಿಗೆ ಪರಿಚಯಿಸುವಳು
ಹಾಗೆಯೇ ಇವರ ಹಳ್ಳಿಯ ದಾರಿ ಕವಿತೆಯನ್ನು ಓದುತ್ತಾ ಓದುಗ ಕಾವ್ಯದ ಸಮ್ಮೋಹನದಲಿ ಮುಳುಗುತ್ತಾನೆ. ಅರವತ್ತರ ಮುದುಕ ಹತ್ತರ ಹುಡುಗಿ ಇಬ್ಬರೂ ಸೇರಿ ದಾರಿ ಸವಿಸುತ್ತಿದ್ದಾರೆ. ನಿತ್ಯದ ದಾರಿಯಲ್ಲಿ ಮುದುಕ ಮುನ್ನಡೆದರೆ, ಹುಡುಗಿಗೆ ಆ ದಾರಿಯಲ್ಲಿನ ಎಲ್ಲವೂ ಹೊಸದು. ಕವಿತೆ ಕಥನ ಕಾವ್ಯದ ಹಾಗೇ ಕುತೂಹಲ ಹುಟ್ಟಿಸುತ್ತಾ ನದಿಯಂತೆ ಸಾಗುತ್ತದೆ. ಇಲ್ಲಿ ವಿಪರೀತ ಶಬ್ದಗಳ ಬಳಕೆಯಿಲ್ಲ, ಪದಗಳ ಬಂಧವಿಲ್ಲ. ಎಲ್ಲವೂ ಹುಡುಗಿಯಂತೆ ಸರಳ. ಕವಿತೆಯ ಭಾವ, ಅರ್ಥವೂ ಕೂಡ.
ಹಿಂದೆ ಹಿಂದೆಯೆ ಉಳಿದಳು ಹುಡುಗಿ ಹಾವಿನ ಪೊರೆ ನವಿಲ ಗರಿ ಹುಡುಕುತ.
ಇವರ ದೇವರಿಗೆ ಹೋದೆವು ಕೂಡ ಎಷ್ಟು ಲಯಬದ್ಧವಾದ ಕವಿತೆ ಅಲ್ಲವೇ? ಹಾಗೆಯೇ ದೇವಿ ಕವಿತೆ ಕೂಡ ತನ್ನ ಲಯದಿಂದ, ಗೇಯತೆಯ ಅಂಶದಿಂದ ಮನಸ್ಸಿಗೆ ತಟ್ಟುತ್ತದೆ. ಭಾವವೂ ವಿಸ್ತಾರವಾಗುತ್ತದೆ. ಅದಕ್ಕೇ ಬೇಂದ್ರೆಯವರು ಹೇಳಿದ್ದು ‘ನಾದಬೇಕು, ನಾದಬೇಕು / ನಾದನ್ನ ನಾದಬೇಕು / ನಾದಕ್ಕೆ ಪ್ರತಿನಾದಬೇಕು.…’ ಎಂದು.
ಒಂದು ಕವಿತೆಯ, ಇಡೀ ಕಾವ್ಯದ ಯಶಸ್ಸು ಈ ನಾದದಿಂದಲೇ. ಸವಿತಾ ನಾಗಭೂಷಣರ ಒಟ್ಟಾರೆ ಕಾವ್ಯವನ್ನು ಗಮನಿಸಿದರೆ ಇಂಥ ನಾದವಿರುವ, ಲಯಬದ್ಧ, ಗೇಯತೆಯಿರುವ ಕವಿತೆಗಳೇ ಓದುಗರನ್ನು ಸೆಳೆದಿರುವುದು ಎನ್ನಬಹುದು. ಹೇಳಲೇಬೇಕೆಂಬ ಒತ್ತಡದಲ್ಲಿ ಬರೆದ ಕವಿತೆಗಳು ಸಪ್ಪೆಯಾಗಿ ಕಾಣುತ್ತವೆ. ಅಂಥಲ್ಲಿ ಭಾವವೊಂದೇ ಪ್ರಧಾನವಾಗಿ ವಿಚಾರ ಚಿಂತನೆಯಷ್ಟೇ ಪ್ರಕಟವಾಗಿವೆ. ಕವಿತೆ ಕಾವ್ಯವಾಗಿಲ್ಲ.
ಎಲ್ಲ ಕವಿಗಳು ಜಾನಪದದ ಹಂಗಿನಿಂದ, ನವೋದಯದ ಬಂಧನದಿಂದ ಅಷ್ಟು ಸುಲಭವಾಗಿ ತಪ್ಪಿಸಿಕೊಳ್ಳಲಾರರು. ಇದು ಓದುಗನ ಭಾಷೆ, ಜನಭಾಷೆ, ಹೃದಯದ ಭಾಷೆ. ಬೇಂದ್ರೆ ಎಲ್ಲರನ್ನೂ ತಲುಪಿದ್ದು ಇದೇ ಕಾರಣ. ಅಡಿಗರ ಮೊದಲ ಮೂರು ಸಂಕಲನದ ಕವಿತೆಗಳು ಜನಮನಸೂರೆಗೊಂಡಿದ್ದು ಇದೇ ಕಾರಣಕ್ಕೆ. ಕೆ ಎಸ್ ನರಸಿಂಹ ಸ್ವಾಮಿಯವರ ಕವಿತೆಗಳು ಜನಕಾವ್ಯವಾಗಿದ್ದು ಕೂಡ. ಸಿದ್ಧಲಿಂಗಯ್ಯನವರ ಕೆಂಪು ಸೂರ್ಯ ಸಂಕಲನದ ಸಾವಿರಾರು ನದಿಗಳು ಕವಿತೆ
ನೆನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು ಕಪ್ಪುಮುಖ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು ಹಗಲು ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು ಕಂಬಳಿಗಳು ಕೊರಗಿದವು ಎದ್ದೇಳುವ ರೊಚ್ಚಿಗೆ ಭೂಕಂಪನವಾಯಿತು...
ಇಲ್ಲಿನ ಲಯ, ಭಾಷೆಯ ಪ್ರಯೋಗದಿಂದಲೇ ಹೊಸ ಚಳವಳಿಗೆ ನಾಂದಿಯಾಯಿತು. ಹೋರಾಟದ ಎಲ್ಲ ಹಾಡುಗಳಲ್ಲೂ ಕಾವ್ಯದನಿಯನ್ನು ನಾವು ಗುರುತಿಸಬಹುದು. ಇಷ್ಟೆಲ್ಲ ಹೇಳಲು ಕಾರಣ ಮಿತ ಪದಗಳೊಂದಿಗೆ ಕವಿತೆ ಕಟ್ಟುವ ಪ್ರಯೋಗಗಳನ್ನು ಮಾಡಿದ ಸವಿತಾ ನಾಗಭೂಷಣರ ಕವಿತೆಗಳ ಕುರಿತು. ಈ ಬಗೆಯಲ್ಲಿ ಅವರು ಯಶಸ್ವಿಯಾದರೂ ಧಾರಾಳವಾಗಿ ಬಳಸಿದ ಪದಗಳೇ ಹೆಚ್ಚು ಸಶಕ್ತವಾಗಿವೆ. ಅವು ಕವಿತೆ, ಪದ್ಯ, ಹಾಡಾಗಿವೆ.
ಅಶ್ವಿನಿ ಕಳಸದ ಓದಿದ ಬೆದೆಯಲ್ಲ ಒಲವು ಕವಿತೆ.
ಸವಿತಾ ನಾಗಭೂಷಣರ ಕವಿತೆಗಳಲ್ಲಿ ಸಹಜವಾಗಿ ವಚನಕಾರ್ತಿ ಶರಣೆ ಅಕ್ಕನ ಪ್ರಭಾವ, ಬಸವಣ್ಣ, ಕಬೀರರ ಪ್ರಭಾವವೂ ಇದೆ. ಅವರೇ ಹೇಳಿದ ಹಾಗೆ ಕುವೆಂಪುರವರಿಂದ ಬಹಳಷ್ಟು ಪ್ರಭಾವಿತರಾದರೆಂದು (ನನ್ನ ಮಾತು; ದೇವರಿಗೆ ಹೋದೆವು) ಅವರ ಕಾವ್ಯ ಒಳ ನೋಟಗಳಲ್ಲಿ ಪುರಾಣದ ಅಂಶಗಳು, ಪರಿಸರದ ಕಾಡು, ಪಕ್ಷಿ, ಹೂ-ಬಳ್ಳಿ, ಮರ, ಜಾನಪದಗಳಲ್ಲಿನ ಸ್ತ್ರೀಚಿಂತನೆ ದಟ್ಟವಾಗಿವೆ. ಕಡಿಮೆ ಪದಗಳ ಪ್ರಯೋಗವನ್ನು ಮೀರಿ ದೊಡ್ಡ ಕವಿತೆಗಳ ಸೃಷ್ಟಿಯನ್ನು ಸಾಧ್ಯಮಾಡಿಕೊಂಡಿದ್ದರೆ ಮತ್ತಷ್ಟು ಕಾವ್ಯ ಮಾಂತ್ರಿಕತೆಯನ್ನು ನಿರೀಕ್ಷಿಸಬಹುದಿತ್ತೆಂಬುದು ಓದುಗನಾಗಿ ನನ್ನ ವೈಯಕ್ತಿಕ ಭಾವನೆ. ಬೇಂದ್ರೆಯವರು ಎಲ್ಲ ಜ್ಞಾನವೂ ಶಬ್ದದಿಂದಲೇ ಎನ್ನುತ್ತಾರೆ. ಶಬ್ದವು ಬೆನ್ನಂಟಿದ ಅರಿವೇ ಲೋಕದಲ್ಲಿ ಇಲ್ಲ ಎನ್ನುತ್ತಾರೆ.
ಬರುವ ಸೃಷ್ಟಿಯ ಬೇಳೆಯೊಡೆದಿದೆ ಶಬ್ದವಾಗಿದೆ ಶಬ್ದ ಕೇಳಣ್ಣಾ (ಓ ಹಾಡೆ)
ಕೆ. ಎಸ್. ನರಸಿಂಹಸ್ವಾಮಿಯವರು ತಮ್ಮ ಕಾವ್ಯ ದ ಬಗೆಗಿನ ಆಕ್ಷೇಪಕ್ಕೆ
ಸೇತುವೆಯ ದಾಟುತ್ತ ಹೆದ್ದಾರಿಯಲ್ಲಿ ನಡೆದು ಎಲ್ಲ ನೋವನು ಮರೆತೆ ಬದುಕಿನೊಳಗೆ ನೊಂದ ನೋವನಷ್ಟೇ ಹಾಡಲೇಬೇಕೇನು ಬೇಡವೇ ಯಾರಿಗೂ ಸಿರಿಮಲ್ಲಿಗೆ? (ಮಲ್ಲಿಗೆಯ ಮಾಲೆ)
ಇಲ್ಲಿ ಸಾಮಾಜಿಕತೆಯ ನಿರಾಕರಣೆ ಇಲ್ಲ, ಕಬ್ಬಿಗರು ಅದನಿದನೆ ಹಾಡಬೇಕೆಂದವರು ನಾವಲ್ಲ ಎನ್ನುತ್ತಾರೆ ಮಲ್ಲಿಗೆಯ ಕವಿ. ನಮ್ಮ ಅನುಭಾವಿ ಕವಿ ಎಚ್.ಎಸ್. ಶಿವಪ್ರಕಾಶರು ಕೂಡ ಒಂದೆಡೆ, ನನ್ನ ಕವಿತೆಯ ಸಾಲುಗಳು ಕೆ. ಎಸ್. ನರಸಿಂಹಸ್ವಾಮಿಯವರ ಸಾಲುಗಳಂತೆಯೇ ಇದ್ದವು ಎನ್ನುತ್ತಾರೆ.
ನಮ್ಮ ಕೆಲ ವಿಮರ್ಶಕರು ಸವಿತಾ ಅವರರ ಕಾವ್ಯವನ್ನು ಪ್ರತಿಭಾ ನಂದಕುಮಾರರ ಕಾವ್ಯದ ಜೊತೆಗೆ ವಿಶ್ಲೇಷಿಸುತ್ತಾರೆ. ನನಗದು ಅಚ್ಚರಿಯ ಅಂಶ. ಸವಿತಾ ಅವರ ಒಳತೋಟಿ ಕೃಷ್ಣ, ಶಿವ, ಪರಂಪರೆಯ, ಜಾನಪದದ ಬೇರಿನದು. ಅವರ ಕಾವ್ಯಗಳಲ್ಲಿ ಕಾವ್ಯ ಪರಂಪರೆಯ ಜಾಡು ಇದೆ. ಪದಗಳ ಬಳಕೆಯಲ್ಲಿ ಎಚ್ಚರವಿದೆ. ನಿರ್ಭಿಡೆಯಾಗಿ ಬೀದಿಗಿಳಿದ ಪದ ಬಳಕೆ ಇಲ್ಲ. ಪ್ರತಿಭಟನೆಯ, ಸ್ತ್ರೀಚಿಂತನೆಯ ಕವಿತೆಗಳಲ್ಲೂ ನವಿರು ಇದೆ; ಸವಿತಾ ಅವರ ಕಾವ್ಯವು ಪರಂಪರೆಯ ಸತ್ವ, ಮೂಢನಂಬಿಕೆ, ಸ್ತ್ರೀಕುಲದ ನೋವು, ಹಾಡು ಪಾಡು, ದೇವರು, ನೆಲದ ಭಾಷೆಯ ಅಪ್ಪಟ ಕಾವ್ಯ. ಅವರ ಪ್ರತಿಭಟನೆ ಕೂಡ ಸಹಜ ಚಿಂತನೆಯ ರೂಪಕವಾಗಿವೆ. ಹೆಣ್ಣುಮಗಳೊಬ್ಬಳ ಹಾಡಾಗಿವೆ. ನಮ್ಮ ಜನಪದ ಸಾಹಿತ್ಯದ ಒಂದು ಗೀತೆ
ಹೆಣ್ಣುಮಕ್ಕಳ ದುಃಖವ ಹೆತ್ತಮ್ಮ ಬಲ್ಲಾಳು ಹುತ್ತಾದ ಒಳಗಿರುವ ಸರ್ಪದ ಬೇಗೆಯ ಶಿವ ಬಲ್ಲ
ಎಂಬಂತೆ ಸ್ತ್ರೀಸಂವೇದನೆಯೆಲ್ಲವೂ ಇವರ ಕವಿತೆಗಳಲ್ಲಿ ಗಟ್ಟಿಯಾಗಿವೆ. ಹಾಗಂತ ಕೇವಲ ಹೆಣ್ಣುಕವಿಗಳೊಡನೆ ಮಾತ್ರ ಮಾಡುವ ಇವರ ಕಾವ್ಯ ವಿಶ್ಲೇಷಣೆ ಕಾವ್ಯಕ್ಕೆ ಮಾಡುವ ಅನ್ಯಾಯ ಕೂಡ. ಈ ನಿಟ್ಟಿನಿಂದ ನಮ್ಮ ವಿಮರ್ಶಕರು ನೋಡಬೇಕಾದದ್ದಿದೆ. ನಿಜ ಕಾವ್ಯ ಸ್ವರೂಪವನ್ನು ಅರಿಯಬೇಕಿದೆ.
ಮತ್ತೆ ಮತ್ತೆ ಹೊಸ ಓದುಗರನ್ನು ತಲುಪುತ್ತಲೇ ಇರುವ ಕವಿ ಸವಿತಾ. ಅವರ ಕರುಣಾಳು ಪದ್ಯ ಯಾರಾದರೂ ಮರೆಯುವರುಂಟೇ? ಕನಕ-ಕೃಷ್ಣ ಕವಿತೆ ಓದದವರುಂಟೇ? ತಮ್ಮ ವೈಚಾರಿಕ ನಿಲುವಿನಿಂದ, ಸತ್ಯದ, ಪ್ರಾಮಾಣಿಕತೆಯ ನೋಟದಿಂದ ಮತ್ತೆ ಮತ್ತೆ ಸೆಳೆಯಬಲ್ಲ ಕವಿ ಎಂದರೆ ತಪ್ಪಾಗಲಾರದು. ಅವರ ಕಾವ್ಯ ಪ್ರಯೋಗ ಸಾಗುತ್ತಲೇ ಇರಲೆಂದು ಒಬ್ಬ ಓದುಗನಾಗಿ ಆಶಿಸುತ್ತೇನೆ.
ಕೊಟ್ರೇಶ್ ಅರಸೀಕೆರೆ
ಕವಿ, ಸಾಹಿತ್ಯಾಸಕ್ತ ಕೊಟ್ರೇಶ್ ಹಾಸನ ಜಿಲ್ಲೆಯ ಅರಸೀಕೆರೆಯವರು. ಅವರ “ಭವಸಾರ” ಕವನ ಸಂಕಲನ 2020ರಲ್ಲಿ ಪ್ರಕಟವಾಗಿದೆ.