ಗಾಬ್ರಿಯೆಲ್ ಗಾರ್ಸಿಯಾ ಮಾರ್ಕೇಸ್ನ Light is Like Water ಮ್ಯಾಡ್ರಿಡ್ನಲ್ಲಿರುವ ಕೊಲಂಬಿಯನ್ ಕುಟುಂಬವೊಂದರ ಸಣ್ಣ ಕಥೆ. ಅವರ ಮೂಲದ ಕೊಲಂಬಿಯಾದಲ್ಲಿ ಇದ್ದಂತೆ ಇಲ್ಲಿ ‘ತಾರಿದಂಡೆ’ ಇಲ್ಲದಿದ್ದರೂ ಅಮ್ಮ-ಅಪ್ಪನ ಹತ್ತಿರ ತಮಗೊಂದು ಹಾಯಿದೋಣಿ ಬೇಕು ಎಂದು ಗಂಡುಮಕ್ಕಳಿಬ್ಬರು ಕೇಳುವುದರೊಂದಿಗೆ ಕತೆ ಶುರುವಾಗುತ್ತದೆ. ಹಾಯಿದೋಣಿ ಮನೆಗೆ ಬಂದೂ ಬಿಡುತ್ತದೆ. ಆದರೆ, ಮಕ್ಕಳು ಅದನ್ನು ತೇಲಿಸುವುದಾರೂ ಎಲ್ಲಿ?
“[…] ಮಕಾಂಡೋನಲ್ಲಿ ನಾಲ್ಕು ವರ್ಷ, ಹನ್ನೊಂದು ತಿಂಗಳು, ಎರಡು ದಿನ ಬಿಟ್ಟೂ ಬಿಡದೆ ಮಳೆಯಾಯಿತು. ಅದೊಂದು ದಿನ ಶುಕ್ರವಾರ ಮಧ್ಯಾಹ್ನ ಎರಡು ಗಂಟೆಗೆ, ನಲ್ಲಿ ನಿಲ್ಲಿಸಿದ ಹಾಗೆ ನಿಂತ ಮಳೆ ನಂತರದ ಹತ್ತು ವರ್ಷ ಬರಲೇ ಇಲ್ಲ […]” ಅಂದಮೇಲೆ “[…] ನಲ್ಲಿ ತಿರುಗಿಸಿದರೆ ನೀರು ಹರಿವ ಹಾಗೆ ಗುಂಡಿ ಒತ್ತಿದರೆ ಬೆಳಕೂ ಹರಿಯುತ್ತೆ [...]”, ಬೆಳಕಿನ ಕೊಳದಲ್ಲಿ ಹಾಯಿದೋಣಿ ತೇಲಿಯೂ ಬಿಡುತ್ತಪ್ಪ!
ಎಂದೋ ಓದಿ, ಮೆಚ್ಚಿ ಮನದ ಮೂಲೆಯಲ್ಲಿ ಇರಿಸಿದ್ದ magical realism ತಂತ್ರ ಬಳಸುವ ಈ ಕತೆ ಅದು ಹೇಗೋ ಮತ್ತೆ ಮನದ ಮುನ್ನೆಲೆಗೆ ಬಂದಿತು. 19-20ನೇ ಶತಮಾನದಲ್ಲಿ ಹೆಚ್ಚು ಚಾಲ್ತಿಯಲ್ಲಿದ್ದ, “ಆಯ್ಕೆಯ ಸಾಧ್ಯತೆಯೇ ಮನುಷ್ಯ ಸ್ವಭಾವದ ಕೇಂದ್ರ ಸತ್ಯ,” ಎನ್ನುವ ‘ಅಸ್ತಿತ್ವವಾದ’ದ ಒಂದೆಳೆ ಈ ಕಥೆಯ ಮೂಲ ಅಂಶ. ಸಂದರ್ಶನವೊಂದರಲ್ಲಿ ಮಾರ್ಕೆಸ್ ‘ನಿವಾರಿಸಲಾಗದ ಒಂಟಿತನ’ದ ಬಗ್ಗೆ ಮಾತನಾಡುತ್ತಾನೆ. ಅಸ್ತಿತ್ವವಾದ-ವೈಯಕ್ತಿಕ ಸಂತೋಷ (ಸ್ವಾತಂತ್ರ್ಯ)-ಒಂಟಿತನ; Rubik’s Cubeನ ನಾವು ಎಂದೂ ಕಾಣದ ಮೂರು ಮುಖಗಳು. ಒಳಗೆ ಸಮಾಧಾನ ಸಂತೋಷ ಇರದ ಹೊರತು ಹೊರಗಿನ ಯಾವುದಕ್ಕೂ connect ಆಗದ, ಎಂಥ ಜೀವದ ಗೆಳೆತನವೂ ಪ್ರೀತಿಯ ಸಂಗಾತಿಯೂ ಅದನ್ನು ಹೋಗಲಾಡಿಸದಂತೆ ಒಮ್ಮೊಮ್ಮೆ ಮನಸು ಬೀಗ ಜಡಿದು ಕೂರುತ್ತದಲ್ಲ, ಆಗ ‘ತೊರೆಯ ಮೇಲೆ ಸಾಗುವವರು ತೆರೆಗೆ ಬೆದರಲುಂಟೆ?’ ಎನ್ನುತ್ತ, ‘ಹರಿವ ನೀರಿನಂದದಿ…’ ನಮ್ಮೊಳಗೆ ಅಡಿಯಿಟ್ಟು ಮುದಗೊಳಿಸುವುದು; ಮನುಷ್ಯ ತನ್ನ ಮಿತಿಯನ್ನು ಮೀರಿ ಕಲಾತ್ಮಕ ಹುಡುಕಾಟದಲ್ಲಿ ತೊಡಗಿಕೊಳ್ಳುವಂತೆ ಮಾಡುವುದು ಇಂಥದೊಂದು ಕತೆ. ಆ ಹುಡುಕಾಟ ಎಲ್ಲಿ ಯಾವ ರೀತಿಯಲ್ಲಿ ಕೊನೆಯಾಗುವುದೆಂದು ಯಾರು ಬಲ್ಲರು?
ಇನ್ನೀಗ ಕತೆಗಾರ ಎಂ ಎಸ್ ಶ್ರೀರಾಮ್ ಅನುವಾದದಲ್ಲಿ ಮಾರ್ಕೇಸ್ನ La luz es como el agua.
ಹರಿವ ನೀರಿದು... ಬೆಳಕು…
ಕ್ರಿಸ್ಮಸ್ ಬಂದಾಗ ಮಕ್ಕಳು ಮತ್ತೊಮ್ಮೆ ಹಾಯಿದೋಣಿ ಬೇಕೆಂದು ಕೇಳಿದರು.
“ಸರಿ, ವಾಪಸ್ಸು ಕಾಟಜೀನಾಕ್ಕೆ ಹೋದಮೇಲೆ ಕೊಂಡುಕೊಳ್ಳೋಣ,” ಅಪ್ಪ ಹೇಳಿದ.
ಟೊಟೊ ಮತ್ತು ಜೊಯೆಲ್ರ ಇರಾದೆ ಅವರ ಅಪ್ಪ-ಅಮ್ಮ ನಂಬಿದ್ದಕ್ಕಿಂತ ದೃಢವಾಗಿತ್ತು.
“ಇಲ್ಲ. ನಮಗೆ ಈಗಲೇ ಬೇಕು. ತತ್ಕ್ಷಣ,” ಇಬ್ಬರೂ ಒಕ್ಕೊರಲಿನಲ್ಲಿ ಹೇಳಿದರು.
“ಆದರೆ, ಇಲ್ಲಿ ಸ್ನಾನಕ್ಕೆ ನಲ್ಲಿಯಿಂದ ಹರಿಯೋ ನೀರು ಬಿಟ್ಟರೆ ಬೇರೆ ನೀರು ಇಲ್ಲವೇ ಇಲ್ಲ ಅನ್ನೋದು ಗೊತ್ತಲ್ಲಾ?” ಅಮ್ಮ ಹೇಳಿದಳು.
ಆಕೆ ಮತ್ತು ಆಕೆಯ ಗಂಡ ಹೇಳಿದ್ದು ಸರಿಯಿತ್ತು. ಕೊಲ್ಲಿಯ ದಡದಲ್ಲಿದ್ದ ಕಾಟಜೀನಾದ ಮನೆಯಾಚೆ ನೀರಂಚಿಗೆ ಒಂದು ಕಟ್ಟೆಯಿತ್ತು. ಅಲ್ಲಿ ಬೋಟ್ಹೌಸ್ ಇತ್ತು. ಎರಡು ದೊಡ್ಡ ಜಹಜುಗಳಿದ್ದುವು. ಆದರೆ, ಅವರುಗಳು ಇಲ್ಲಿ, ಮ್ಯಾಡ್ರಿಡ್ ನಗರದ, ಕ್ಯಾಸ್ಟೆಲಾನ ರಸ್ತೆಯ 47ನೇ ನಂಬರ್ ಕಟ್ಟಡದ ಐದನೆಯ ಮಹಡಿಯ ಕಿಷ್ಕಿಂಧೆಯಲ್ಲಿದ್ದರು. ಕಡೆಗೂ ಆಕೆಯಾಗಲೀ, ಗಂಡನಾಗಲೀ ಹಾಯಿದೋಣಿಯನ್ನು ನಿರಾಕರಿಸಿ ಮಕ್ಕಳಿಗೆ ದಕ್ಕದಂತೆ ಮಾಡಲು ಆಗಲೇ ಇಲ್ಲ. ಶಾಲೆಯಲ್ಲಿ ಪೂರ್ಣ ಅಂಕಗಳನ್ನು ಗಿಟ್ಟಿಸಿದರೆ ಅವರಿಗೆ ಹಾಯಿದೋಣಿ, ದೂರಮಾಪಕ (sextant) ಮತ್ತು ದಿಕ್ಸೂಚಿ ಕೊಡಿಸಿಕೊಡುವುದಾಗಿ ಹೇಳಿದ್ದರು. ಮಕ್ಕಳು ಅಂಕಗಳನ್ನು ಗಿಟ್ಟಿಸಿದ್ದರು. ವಿಲಾಸಕ್ಕೆ ಸಾಲ ಪಡೆಯುವುದರ ಬಗ್ಗೆ ಮೂಲಭೂತ ತಗಾದೆಯಿದ್ದ ಹೆಂಡತಿಗೆ ಹೇಳದೆಯೇ ಅಪ್ಪ ಎಲ್ಲ ಪರಿಕರಗಳನ್ನು ಕೊಂಡು ತಂದಿದ್ದ. ನೀರನ್ನು ತಾಕುವ ಅಂಚಿನ ಸುತ್ತಲೂ ಬಂಗಾರ ಬಣ್ಣದ ಪಟ್ಟಿ ಲೇಪಿಸಿದ್ದ ಈ ಅಲ್ಯೂಮಿನಿಯಂ ದೋಣಿ ನಿಜಕ್ಕೂ ಸುಂದರವಾಗಿತ್ತು.
ಊಟದ ಸಮಯಕ್ಕೆ ಅಪ್ಪ ಹೇಳಿದ: “ದೋಣಿ ಗ್ಯಾರೇಜಿನಲ್ಲಿದೆ. ಆದರೆ, ಒಂದೇ ತೊಂದರೆ – ಅದನ್ನು ಮಹಡಿಯ ಮೆಟ್ಟಿಲು ಹತ್ತಿಸಿ ತರೋದಕ್ಕೆ ಆಗ್ತಾ ಇಲ್ಲ. ಗ್ಯಾರೇಜಿನಲ್ಲೂ ಹೆಚ್ಚು ಜಾಗವಿಲ್ಲ.”
ಆದರೆ, ಶನಿವಾರದಂದು ಮಕ್ಕಳು ತಮ್ಮ ಸಹಪಾಠಿಗಳನ್ನು ಮನೆಗೆ ಕರೆದರು. ಎಲ್ಲರೂ ಒಗ್ಗೂಡಿ ಸರ್ವೀಸ್ ರೂಮಿನ ಮಟ್ಟಕ್ಕೆ ದೋಣಿಯನ್ನು ತರುವುದಕ್ಕೆ ಸಾಧ್ಯವಾಯಿತು. “ಶಭಾಶ್. ಈಗೇನು ಮಾಡ್ತೀರಿ?” ಅಪ್ಪ ಕೇಳಿದ.
“ಏನೂ ಇಲ್ಲ,” ಮಕ್ಕಳಂದರು. “ನಮಗೆ ದೋಣಿ ಈ ಕೋಣೆಯಲ್ಲಿ ಬೇಕಿತ್ತು. ಈಗ ಅದು ಇಲ್ಲಿದೆ.”
ಪ್ರತಿ ಬುಧವಾರದಂತೆ ಆ ಬುಧವಾರ ರಾತ್ರಿಯೂ ಹಿರಿಯರು ಸಿನೆಮಾ ನೋಡಲು ಹೋದರು. ಹಿರಿಯರಿಲ್ಲದ ಸಂದರ್ಭದಲ್ಲಿ ಈಗ ಮನೆಯ ಮಾಲಿಕರೂ-ಒಡೆಯರೂ ಆದ ಮಕ್ಕಳು ಎಲ್ಲ ಬಾಗಿಲು ಕಿಟಕಿಗಳನ್ನು ಮುಚ್ಚಿದರು. ಹಾಲ್ನಲ್ಲಿ ಉರಿಯುತ್ತಿದ್ದ ಬಲ್ಬೊಂದನ್ನು ಮುರಿದರು. ಅಲ್ಲಿಂದ ಬಂಗಾರ ಬಣ್ಣದ ಬೆಳಕಿನ ಕಿರಣ – ತಣ್ಣನೆಯ ನೀರಿನಂತೆ ಹರಿಯಿತು. ಮುರಿದ ಬಲ್ಬಿನಿಂದ ಅದು ನಾಲ್ಕು ಕೈಗಳಷ್ಟು ಆಳಕ್ಕಿಳಿಯುವ ವರೆಗೂ ಬೆಳಕನ್ನು ಹರಿಯಬಿಟ್ಟರು. ವಿದ್ಯುತ್ತನ್ನು ನಂದಿಸಿ, ದೋಣಿಯನ್ನು ಹೊರಕ್ಕೆಳೆದು ಮನೆಯಲ್ಲಿದ್ದ ಅನೇಕ ದ್ವೀಪಗಳ ಸುತ್ತಲೂ ಖುಷಿಯಿಂದ ತೇಲಿದರು.
ಈ ಅದ್ಭುತ ಸಾಹಸದ ಮೂಲ ‘ದೈನಿಕ ಪರಿಕರಗಳಲ್ಲಿನ ಕಾವ್ಯ’ ಎನ್ನುವ ವಿಷಯದ ಸೆಮಿನಾರಿನಲ್ಲಿ ಹಗುರ-ಉಡಾಫೆಯಲ್ಲಿ ನಾನು ಹೇಳಿದ್ದ ಮಾತುಗಳಲ್ಲಿ ಅಡಕವಾಗಿತ್ತು. ಗುಂಡಿಯನ್ನು ಒತ್ತಿದ ತಕ್ಷಣ ಬೆಳಕಾಗುವ ಅದ್ಭುತ ಹೇಗಾಗುತ್ತದೆಂದು ಟೊಟೊ ಕೇಳಿದ್ದಕ್ಕೆ ಸರಿಯಾದ ಜವಾಬು ಏನೆಂದು ಯೋಚಿಸುವ ಧೈರ್ಯವಾಗದೇ, “ಬೆಳಕು ನೀರಿನ ಹಾಗೆ,” ಅಂತಂದೆ, “ನಲ್ಲಿ ತಿರುಗಿಸಿದರೆ ನೀರು ಹರಿವ ಹಾಗೆ ಗುಂಡಿ ಒತ್ತಿದರೆ ಬೆಳಕೂ ಹರಿಯುತ್ತೆ.”
ಹೀಗೆ ಆ ಮಕ್ಕಳು ಪ್ರತಿ ಬುಧವಾರ ದಿಕ್ಸೂಚಿ ಮತ್ತು ದೂರಮಾಪಕ ಉಪಯೋಗಿಸುತ್ತ, ಹರಿವ ಬೆಳಕಿನಲ್ಲಿ ತಮ್ಮ ದೋಣಿಯನ್ನು ಹಾಯಿಸುತ್ತಿದ್ದರು. ಹಿರಿಯರು ಮನೆಗೆ ಬರುವಷ್ಟರಲ್ಲಿ ಮಕ್ಕಳು ಒಣ ನೆಲದಮೇಲೆ ಕಿನ್ನರರಂತೆ ಮಲಗಿರುತ್ತಿದ್ದರು. ಕೆಲ ತಿಂಗಳುಗಳಾದ ಮೇಲೆ ಮಕ್ಕಳು ಒಂದು ಹೆಜ್ಜೆ ಮುಂದೆಹೋಗಿ ಜಲಾಂತರ್ಗಾಮಿ ಮೀನುಗಾರಿಕೆಯ ಪರಿಕರಗಳು ಬೇಕೆಂದು ಕೇಳಿದರು. ಜೊತೆಗೆ – ಮುಖಕ್ಕೆ ಆಮ್ಮಜನಕದ ಮಾಸ್ಕು, ಸುಲಭವಾಗಿ ಈಜಲು - ಕಾಲಿಗೆ ತೊಡಿಸುವ ರೆಕ್ಕೆಯ ಬಡಿಗೆ, ಟ್ಯಾಂಕುಗಳು ಮತ್ತು ಸಂಕುಚಿತವಾಗಿಸಿದ ಗಾಳಿ ಬಂದೂಕುಗಳು.
“ಈಗಾಗಲೇ ಉಪಯೋಗಿಸಲು ಸಾಧ್ಯವಾಗದ ಹಾಯಿದೋಣಿ ಸರ್ವೀಸ್ ರೂಮಿನಲ್ಲಿ ಇರೋದು ಸಾಲದೂಂತ, ಈಗ ಸ್ಕೂಬಾ ಡೈವಿಂಗ್ ಪರಿಕರಗಳೂ ಬೇಕೇನೋ…” ಅಪ್ಪನೆಂದ.
“ಮೊದಲ ಸೆಮಿಸ್ಟರಿನಲ್ಲಿ ಗೋಲ್ಡ್ ಸ್ಟಾರ್ಸ್ ಪಡೆದರೆ?” ಜೊಯೆಲ್ ಕೇಳಿದ.
“ಇಲ್ಲ,” ಅಮ್ಮ ತಕ್ಷಣಕ್ಕೆ ಹೆದರಿ ಹೇಳಿದಳು. “ಇಷ್ಟೇ. ಇನ್ನೇನೂ ಇಲ್ಲ.”
ಅಪ್ಪ ಆಕೆಯ ಬಿಮ್ಮನ್ನು ಟೀಕಿಸಿದ.
“ಅವರು ಮಾಡಬೇಕಾದ್ದನ್ನು ಮಾಡೋಕ್ಕೆ ಏನು ಬೇಕೋ ಅದೆಲ್ಲಾ ಅವರುಗಳಿಗೆ ಸಿಗುತ್ತಲೇ ಇದೆ... ಅದಕ್ಕೇನೂ ನಾವು ಕಡಿಮೆ ಮಾಡಿಲ್ಲ. ಆದರೆ, ಈ ಥರದ ತಿಕ್ಕಲುತನದ ಬೇಡಿಕೆಗಳನ್ನು ಮಂಡಿಸುವ ವಿಧಾನದಲ್ಲಿ ಅವರುಗಳು ಪ್ರೊಫೆಸರುಗಳಾಗಬಹುದು,” ಅಮ್ಮ ಚಡಪಡಿಕೆಯಿಂದ ಹೇಳಿದಳು.
ಕಡೆಗೆ ಅಮ್ಮ-ಅಪ್ಪ ಹೂಂ ಅನ್ನಲಿಲ್ಲ ಊಹೂಂ ಅಂತಲೂ ಅನ್ನಲಿಲ್ಲ. ಆದರೆ, ಜುಲೈ ತಿಂಗಳಲ್ಲಿ ಟೊಟೊ ಮತ್ತು ಜೊಯೆಲ್ ನಿಜಕ್ಕೂ ಗೋಲ್ಡ್ ಸ್ಟಾರ್ಸ್ ಗಿಟ್ಟಿಸಿದರು. ಅದಕ್ಕಾಗಿ ಶಾಲಾ ಪ್ರಿನ್ಸಿಪಾಲರು ಅವರಿಗೆ ಬಹಿರಂಗವಾಗಿ ಸನ್ಮಾನ ಮಾಡುವ ಕಾರ್ಯಕ್ರಮವನ್ನೂ ಏರ್ಪಡಿಸಿದ್ದರು. ಅದೇ ಮಧ್ಯಾಹ್ನ ಅವರು ಬೇಡಿಕೆಯನ್ನು ಮರುಮಂಡಿಸುವ ಮೊದಲೇ ಕೋಣೆಯಲ್ಲಿ ಅಂಗಡಿಯ ಪ್ಯಾಕಿಂಗ್ ತೆಗೆಯದ ಹೊಚ್ಚ ಹೊಸ ಸ್ಕೂಬಾ ಪರಿಕರಗಳು ಅವತರಿಸಿದ್ದನ್ನು ಕಂಡರು. ಮುಂದಿನ ಬುಧವಾರ ಹಿರಿಯರು ‘ಲಾಸ್ಟ್ ಟ್ಯಾಂಗೊ ಇನ್ ಪ್ಯಾರಿಸ್’ ಸಿನೆಮಾವನ್ನು ನೋಡುತ್ತಿದ್ದ ಸಮಯಕ್ಕೆ ಮಕ್ಕಳು ಮನೆಯನ್ನು ಎರಡು ಕೈ ಆಳಕ್ಕೆ ತುಂಬಿಸಿ ಮೇಜು ಮಂಚಗಳಡಿಯಲ್ಲಿ ಬೃಹತ್ ಶಾರ್ಕ್ ಮೀನುಗಳ ಹಾಗೆ ಸ್ಕೂಬಾಟವನ್ನಾಡಿದರು. ಗಹನ ಕತ್ತಲಿನಲ್ಲಿ ಕಳೆದುಕೊಂಡಿದ್ದ ಅನೇಕ ವಸ್ತುಗಳನ್ನು ಬೆಳಕಿನಾಳದಿಂದ ಬಚಾಯಿಸಿ ತಂದರು.

ವರ್ಷಾಂತ್ಯದ ಸನ್ಮಾನ ಸಮಾರಂಭದಲ್ಲಿ ಶಾಲೆಯ ಅತ್ಯುತ್ತಮ ವಿದ್ಯಾರ್ಥಿಗಳ ಮಾದರಿ ಎಂದು ಈ ಸೋದರರನ್ನು ಹೊಗಳಿ, ಪ್ರಮಾಣ ಪತ್ರಗಳನ್ನು ಕೊಟ್ಟರು. ಈ ಬಾರಿ ಮಕ್ಕಳು ಏನೂ ಕೇಳುವ ಪರಿಸ್ಥಿತಿ ಬರಲಿಲ್ಲ. ಅವರು ಕೇಳುವುದಕ್ಕೆ ಮೊದಲೇ ಅಪ್ಪ-ಅಮ್ಮ ಏನು ಬೇಕೆಂದು ಕೇಳಿದರು. ಮಕ್ಕಳು ನಿಜಕ್ಕೂ ಯಾವುದೇ ಅತಿರೇಕಕ್ಕೆ ಹೋಗದೇ, ಬರೇ ತಮ್ಮ ಗೆಳೆಯರಿಗೆ ಧನ್ಯವಾದಗಳನ್ನರ್ಪಿಸಲು ಮನೆಯಲ್ಲಿ ಒಂದು ಔತಣಕೂಟ ಮಾಡಬೇಕೆಂದು ಮಾತ್ರ ಕೇಳಿದರು
ಅಪ್ಪ-ಅಮ್ಮ ಹೆಮ್ಮೆಯಿಂದ ಮಕ್ಕಳನ್ನು ನೋಡಿದರು.
“ಇದು ಅವರುಗಳು ಪರಿಪಕ್ವವಾಗಿರುವುದರ ಪುರಾವೆ,” ಆತ ಹೇಳಿದ.
“ನಿನ್ನ ತುಟಿಗಳಿಂದ – ದೇವರ ಕಿವಿಯವರೆಗೂ...” ಅಮ್ಮ ಹೇಳಿದಳು.
ಮರು ಬುಧವಾರ, ಹಿರಿಯರು ‘ದ ಬ್ಯಾಟಲ್ ದಿ ಏಂಜಲ್’ ನೋಡುತ್ತಿದ್ದ ಸಮಯದಲ್ಲಿ, ಕ್ಯಾಸ್ಟೆಲಾನ ರಸ್ತೆಯಲ್ಲಿ ಸಂಚರಿಸುತ್ತಿದ್ದ ಜನರಿಗೆ ಮರಗಳ ಹಿಂದೆ ಅಡಗಿದ್ದ ಒಂದು ಹಳೆಯ ಕಟ್ಟಡದಿಂದ ಬೆಳಕು ಜಲಪಾತದಂತೆ; ಬಾಲ್ಕನಿಗಳಿಂದ ಹರಿದು – ತುಂತುರುಗಳಾಗಿ ಮನೆಯ ಮುಂಭಾಗದ ಮೂಲಕ – ಬೆಳಕುಗಳಿಂದ ಅಲಂಕೃತವಾದ ರಸ್ತೆಯಲ್ಲಿ ಬಂಗಾರದ ಕಾಲುವೆಯಾಗಿ ಶೀಘ್ರಗತಿಯಲ್ಲಿ ಹರಿದು ಗ್ವಾದರಾಮ ನದಿಯಲ್ಲಿ ಸೇರಿಹೋಗುತ್ತಿರುವುದನ್ನು ಕಂಡರು.
ತುರ್ತುಕರೆಗೆ ಪ್ರತಿಕ್ರಿಯಿಸಿದ ಅಗ್ನಿಶಾಮಕ ದಳದವರು ಐದನೆಯ ಮಹಡಿಯ ಮನೆಯ ಬಾಗಿಲನ್ನು ಬಲಪ್ರಯೋಗದಿಂದ ತೆರೆದರು. ಅಲ್ಲಿ, ಇಡೀ ಜಾಗ ನೆಲದಿಂದ ಸೂರಿನವರೆಗೆ ಬೆಳಕಿನಿಂದ ತುಂಬಿತ್ತು. ಆ ಕೋಣೆಯಲ್ಲಿ ಸೋಫಾ ಮತ್ತು ಚಿರತೆ ಚರ್ಮದ ಆರಾಮ ಕುರ್ಚಿಗಳು ಭಿನ್ನ ಮಜಲುಗಳಲ್ಲಿ ತೇಲಾಡುತ್ತಿದ್ದುವು. ಬಾರಿನಲ್ಲಿದ್ದ ಶೀಷೆಗಳೂ, ದೊಡ್ಡ ಪಿಯಾನೋದ ನಡುವೆ ಮನಿಲಾದ ಶಾಲೂ, ನಡುನೀರಿನಲ್ಲಿ ಹೊಳೆವ ಸೂರ್ಯನ ಬಂಗಾರದ ಕಿರಣದಂತೆ ಥಳಥಳಿಸುತ್ತಿದ್ದುವು. ಮನೆಯ ಪರಿಕರಗಳು ತಮ್ಮದೇ ಕಾವ್ಯೋನ್ಮಾದದಲ್ಲಿ ಅಡುಗೆ ಮನೆಯ ಬಾನಿನಲ್ಲಿ ತಮ್ಮದೇ ರೆಕ್ಕೆಗಳನ್ನು ಪಸರಿಸಿ ಹಾರಾಡುತ್ತಿದ್ದುವು.
ಮಕ್ಕಳ ಕವಾಯತ್ ಬ್ಯಾಂಡಿನ ವಾದ್ಯಗಳು, ತೇಲಾಡುತ್ತಿರುವ ಏಕೈಕ ಜೀವಂತ ವಸ್ತುವಾದ ಅಮ್ಮನ ಪಾರದರ್ಶಕ ಹೂಜಿಯಿಂದ ಮುಕ್ತಗೊಂಡ ಮೀನುಗಳ ಜೊತೆಯಲ್ಲಿ ಆ ಬೆಳಕಿನ ಕೆಸರಿನಲ್ಲಿ ತೇಲುತ್ತಿದ್ದುವು. ಬಚ್ಚಲಿನಲ್ಲಿ ಅಪ್ಪನ ಟೂತ್ಬ್ರಶ್ಶುಗಳು ಕಾಂಡೋಮುಗಳ ಜೊತೆ, ಅಮ್ಮನ ಕೋಲ್ಡ್ ಕ್ರೀಮುಗಳು ಇತರ ಸೌಂದರ್ಯವರ್ಧಕಗಳ ಜೊತೆ ತೇಲುತ್ತಿದ್ದುವು. ಮಾಸ್ಟರ್ ಬೆಡ್ರೂಮಿನ ದೊಡ್ಡ ಟಿವಿಯು ರಾತ್ರಿಯ ವಯಸ್ಕರ ಚಿತ್ರದ ಕೊನೆಯ ದೃಶ್ಯವನ್ನು ತೋರಿಸುತ್ತಲೇ ಅಡ್ಡಡ್ಡಕ್ಕೆ ತೇಲುತ್ತಿತ್ತು.
ಹಾಲಿನ ಅಂತ್ಯದಲ್ಲಿ ಎರಡು ನೀರುಗಳ ನಡುವೆ ತೇಲಾಡುತ್ತಾ ಟೊಟೊ ಹಾಯಿದೋಣಿಯ ಚಾಲಕ ಸ್ಥಾನದಲ್ಲಿ ಹುಟ್ಟುಗಳನ್ನು ಭದ್ರವಾಗಿ ಹಿಡಿದು ಕೂತಿದ್ದ. ಟ್ಯಾಂಕುಗಳ ಗಾಳಿ ಖಾಲಿಯಾಗುವ ವರೆಗೂ ಸ್ಕೂಬಾ ಮಾಸ್ಕುಗಳನ್ನು ಧರಿಸಿ ಬಂದರಿನ ಲೈಟ್ಹೌಸನ್ನು ಹುಡುಕುತ್ತಿದ್ದ. ಜೊಯೆಲ್ ಮುಂಭಾಗದ ಮೂತಿಯ ಮೇಲೆ ಕೂತ ದೂರಮಾಪಕದಿಂದ ಧೃವತಾರೆಯ ಎತ್ತರವನ್ನು ಅಳೆಯಲು ಪ್ರಯತ್ನಿಸುತ್ತಿದ್ದ. ಆ ಮನೆಯ ಉದ್ದಗಲಕ್ಕೂ ಅವರುಗಳ 36 ಸಹಪಾಠಿಗಳು ಶಾಲಾ ಹಾಡುಗಳನ್ನು ಅಪಭ್ರಂಶಗೊಳಿಸಿ ಪ್ರಿನ್ಸಿಪಾಲರನ್ನು ಲೇವಡಿ ಮಾಡುತ್ತಾ, ಜರೇನಿಯಂನ ಕುಂಡದಲ್ಲಿ ಮೂತ್ರವಿಸರ್ಜಿಸುತ್ತಾ, ಅಪ್ಪನ ಬ್ರಾಂಡಿಯ ಒಂದು ಗ್ಲಾಸನ್ನು ಕದ್ದು ಕುಡಿಯುತ್ತಾ ಇದ್ದರು. ಒಂದೇ ಸಮಯಕ್ಕೆ ಎಷ್ಟು ಬೆಳಕಿನ ಮೂಲಗಳನ್ನು ತೆರೆದಿದ್ದರೆಂದರೆ, ಆ ಮನೆಯು ಮುಳುಗಿದ್ದಲ್ಲದೇ ಬೆಳಕಿನ ಧಾರಾಪ್ರವಾಹ ಹರಿದಿತ್ತು.
ಬೆಳಕಿನ ಮೇಲೆ ತೇಲುವ ವೈಜ್ಞಾನಿಕ ಪದ್ಧತಿಯನ್ನು ಎಂದೂ ಕೈವಶ ಮಾಡಿಕೊಂಡಿರದ; ಬೇಸಿಗೆಯ ಉರಿತಾಪ, ಕಡಿದಾದ ತಣ್ಣನೆಯ ಗಾಳಿಯನ್ನು ನಿಯಮಿತವಾಗಿ ಕಂಡರೂ, ಎಂದೂ ಸಮುದ್ರ ಅಥವಾ ನದಿಯನ್ನೇ ಕಂಡಿರದ ಸ್ಪೇನಿನ ದೂರದ ಮ್ಯಾಡ್ರಿಡ್ ನಗರದ ಮೂಲ ನೆಲವಾಸಿಗಳಾದ ಸಂತ್ ಜೂಲಿಯನ್ ಹಾಸ್ಪಿಟಲಿಯರ್ನ ನಾಲ್ಕನೇ ತರಗತಿಯ ಮಕ್ಕಳ ತಂಡ - ಕ್ಯಾಸ್ಟೆಲಾನ ರಸ್ತೆಯ 47ನೇ ನಂಬರ್ ಕಟ್ಟಡದ ಐದನೆಯ ಮಹಡಿಯಿಂದ ಹರಿದುಕ್ಕಿದ ಬೆಳಕಿನಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗಿತ್ತು.
ಎಂ ಎಸ್ ಶ್ರೀರಾಮ್
ಕತೆಗಾರ, ಅನುವಾದಕ ಪ್ರೊ. ಎಂ.ಎಸ್. ಶ್ರೀರಾಮ್ ಬೆಂಗಳೂರಿನ ಐಐಎಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾಯಾದರ್ಪಣ, ಅವರವರ ಸತ್ಯ, ತೇಲ್ ಮಾಲಿಶ್, ಸಲ್ಮಾನ್ ಖಾನ್ನ ಡಿಫಿಕಲ್ಟೀಸು, ಕನಸು ಕಟ್ಟುವ ಕಾಲ, ಶನಿವಾರ ಸಂತೆ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ.
ಇದನ್ನೂ ಓದಿ …
ನಾವು ಕಾಣಬೇಕೆಂದಿದ್ದ ಮುಂಬೆಳಗು ಇದಲ್ಲ
ಸಾದತ್ ಹಸನ್ ಮಂಟೋ (Saadat Hasan Manto, ಮೇ 11, 1912 – ಜನವರಿ 18, 1955) ಹುಟ್ಟಿದ್ದು ಇಂದಿನ ಭಾರತದ ಪಂಜಾಬ್ ಪ್ರಾಂತ್ಯದ ಸಮ್ರಾಲಾನಲ್ಲಿ. ಬ್ರಿಟಿಷ್ ರಾಜ್ನ ಕಾಲದಲ್ಲಿ ಭಾರತದಲ್ಲಿಯೇ ವಾಸಿಸುತ್ತ ಬರೆಯುತ್ತಿದ್ದ ಮಂಟೋ ಭಾರತದ ವಿಭಜನೆಯ ನಂತರ ಪಾಕಿಸ್ತಾನಕ್ಕೆ ವಲಸೆ ಹೋದವನು. ಮಂಟೋ ಬದುಕಿದ್ದು ನಲವತ್ತೆರಡು ವರ್ಷಗಳಷ್ಟೇ. ಅಷ್ಟರಲ್ಲಿ ವಿಪುಲವೂ ಅತ್ಯಂತ ಪ್ರಭಾವಶಾಲಿಯೂ ಆದ ಕೃತಿಗಳನ್ನು ರಚಿಸಿ ಉರ್ದು ಸಾಹಿತ್ಯದಲ್ಲಿ ದೊಡ್ಡ ಹ…