ಸಾದತ್ ಹಸನ್ ಮಂಟೋ (Saadat Hasan Manto, ಮೇ 11, 1912 – ಜನವರಿ 18, 1955) ಹುಟ್ಟಿದ್ದು ಇಂದಿನ ಭಾರತದ ಪಂಜಾಬ್ ಪ್ರಾಂತ್ಯದ ಸಮ್ರಾಲಾನಲ್ಲಿ. ಬ್ರಿಟಿಷ್ ರಾಜ್ನ ಕಾಲದಲ್ಲಿ ಭಾರತದಲ್ಲಿಯೇ ವಾಸಿಸುತ್ತ ಬರೆಯುತ್ತಿದ್ದ ಮಂಟೋ ಭಾರತದ ವಿಭಜನೆಯ ನಂತರ ಪಾಕಿಸ್ತಾನಕ್ಕೆ ವಲಸೆ ಹೋದವನು. ಮಂಟೋ ಬದುಕಿದ್ದು ನಲವತ್ತೆರಡು ವರ್ಷಗಳಷ್ಟೇ. ಅಷ್ಟರಲ್ಲಿ ವಿಪುಲವೂ ಅತ್ಯಂತ ಪ್ರಭಾವಶಾಲಿಯೂ ಆದ ಕೃತಿಗಳನ್ನು ರಚಿಸಿ ಉರ್ದು ಸಾಹಿತ್ಯದಲ್ಲಿ ದೊಡ್ಡ ಹೆಸರು ಪಡೆದವನು. ಭಾರತದ ವಿಭಜನೆಯ ಅವಧಿಯ ಅವನ ಕತೆಗಳು ಇಂದಿಗೂ ನಮ್ಮನ್ನು ತಲ್ಲಣಗೊಳಿಸುತ್ತವೆ. ಖಾಲಿದ್ ಹುಸೇನ್ ಉರ್ದುವಿನಿಂದ ಅನುವಾದಿಸಿ Mottled Dawn ಎಂಬ ಹೆಸರಿನಲ್ಲಿ ಪ್ರಕಟಿಸಿದ ಪುಸ್ತಕದಿಂದ ಆಯ್ದ ಕೆಲವು ಕಿರುಕತೆಗಳು ನಿಮ್ಮ ಓದಿಗೆ ಕನ್ನಡದಲ್ಲಿ. ಯುದ್ಧೋನ್ಮಾದದ ಈ ದಿನಗಳಲ್ಲಿ ಮಂಟೋನ ಕತೆಗಳು ಇನ್ನೂ ಹೆಚ್ಚು ಪ್ರಸ್ತುತ ಎನ್ನಿಸುತ್ತದೆ.

ಅಜ್ಞಾನದ ಪ್ರಯೋಜನಗಳು
ಟ್ರಿಗರ್ ಒತ್ತಲಾಯಿತು. ಗುಂಡು ಕಡುಗೋಪದಿಂದ ತಿರುಗುತ್ತ ಹೊರಹಾರಿತು.
ಕಿಟಕಿಗೆ ಆತುಕೊಂಡು ತಲೆ ಹೊರಹಾಕಿದ್ದ ವ್ಯಕ್ತಿಯು ಮುಂದಕ್ಕೆ ವಾಲಿ ಸದ್ದು ಮಾಡದೇ ಕೆಳಕ್ಕುರುಳಿದ.
ಟ್ರಿಗರ್ ಅನ್ನು ಇನ್ನೊಮ್ಮೆ ಒತ್ತಲಾಯಿತು. ಗುಂಡು ಸಿಳ್ಳುಹಾಕುತ್ತ ಗಾಳಿಯನ್ನು ಸೀಳುತ್ತ ಸಾಗಿ ನೀರು ಹೊತ್ತು ತರುತ್ತಿದ್ದವನ ಮೇಕೆಚರ್ಮದ ಚೀಲವನ್ನು ತೂತುಮಾಡಿತು. ಅವನು ಮಕಾಡೆ ಬಿದ್ದ. ಅವನ ನೆತ್ತರು ನೀರಿನೊಂದಿಗೆ ಬೆರೆತು ರಸ್ತೆಯುದ್ದಕ್ಕೂ ಹರಿಯತೊಡಗಿತು. ಮೂರನೆಯ ಬಾರಿ ಟ್ರಿಗರ್ ಒತ್ತಲಾಯಿತು. ಗುಂಡು ಗುರಿ ತಪ್ಪಿ ಮಣ್ಣಿನ ಗೋಡೆಯೊಂದಕ್ಕೆ ಬಡಿದು ಸಿಕ್ಕಿಕೊಂಡಿತು.
ನಾಲ್ಕನೆಯದು ಒಬ್ಬ ಮುದುಕಿಯನ್ನು ಕೆಡವಿತು. ಅವಳು ಕಿರುಚಲೂ ಇಲ್ಲ.
ಐದು ಮತ್ತು ಆರನೆಯವು ಕೇಡಾದುವು. ಯಾರೂ ಸಾಯಲಿಲ್ಲ, ಯಾರಿಗೆ ಗಾಯವೂ ಆಗಲಿಲ್ಲ.
ಗುರಿಕಾರನು ಹತಾಶನಾದಂತೆ ತೋರುತ್ತಿದ್ದ. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಓಡಿಬರುತ್ತಿದ್ದ ಮಗುವೊಂದು ರಸ್ತೆಯಲ್ಲಿ ಕಾಣಿಸಿಕೊಂಡಿತು. ಅವನು ಬಂದೂಕನ್ನೆತ್ತಿ ಗುರಿಯಿಟ್ಟ.
‘ಏನು ಮಾಡ್ತಾ ಇದ್ದೀಯೋ?’ ಅವನ ಜೊತೆಗಾರ ಕೇಳಿದ.
‘ಯಾಕೆ? ಏನಾಯ್ತು?’
‘ನಿನ್ನ ಗುಂಡುಗಳೆಲ್ಲ ಮುಗಿದಿವೆ.’
‘ನೀನು ತೆಪ್ಪಗಿರೋ. ಪಾಪ, ಚಿಕ್ಕ ಮಗು, ಅದಕ್ಕೇನು ಗೊತ್ತಾಗತ್ತೆ?’
ಅಗತ್ಯ ಕ್ರಮ
ಅಲ್ಲಿ ದಾಳಿ ನಡೆದಾಗ ಆ ಸುತ್ತುಬಳಸಿನಲ್ಲಿದ್ದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದ ಕೆಲವರು ಕೊಲ್ಲಲ್ಪಟ್ಟರು. ಬದುಕುಳಿದವರಾದರೋ ದೂರ ಓಡಿಹೋದರು. ಆದರೆ, ಒಬ್ಬಾತ ಮತ್ತು ಅವನ ಹೆಂಡತಿ ತಮ್ಮ ಮನೆಯ ನೆಲಮಾಳಿಗೆಯಲ್ಲಿ ಅಡಗಿಕೊಂಡರು.
ಎರಡು ರಾತ್ರಿಗಳ ಕಾಲ ಅವರು ಅಲ್ಲಿಯೇ ಇರುಕಿಕೊಂಡಿದ್ದರು. ಯಾವುದೇ ಗಳಿಗೆಯಲ್ಲಿ ಪತ್ತೆಯಾಗಬಹುದೆಂಬ ನಿರೀಕ್ಷೆಯಲ್ಲಿದ್ದರು.
ಇನ್ನೂ ಎರಡು ರಾತ್ರಿಗಳು ಕಳೆದುವು. ಸಾವಿನ ಹೆದರಿಕೆ ಹಿಂದೆ ಸರಿಯುತ್ತ, ಆ ಜಾಗದಲ್ಲಿ ಹಸಿವಿನ ಯಾತನೆ ಬೇರೂರುತ್ತಿತ್ತು.
ಇನ್ನೂ ನಾಲ್ಕು ರಾತ್ರಿಗಳು ಕಳೆದವು. ಅವರೀಗ ಬದುಕಿದರೂ ಅಷ್ಟೇ ಸತ್ತರೂ ಅಷ್ಟೇ ಎಂಬ ಹಂತವನ್ನು ತಲುಪಿದ್ದರು. ತಮ್ಮ ಅಡಗುತಾಣದಿಂದ ಹೊರಬಿದ್ದರು.
ಕೇಳಿಯೂ ಕೇಳದಂಥ ದನಿಯಲ್ಲಿ ಆ ವ್ಯಕ್ತಿಯು, ‘ನಾವು ಹೊರಬರ್ತಿದೀವಿ, ನಮ್ಮನ್ನ ನಿಮ್ಮ ಕೈಗೆ ಒಪ್ಪಿಸ್ಕೋತಿದೀವಿ. ದಯವಿಟ್ಟು ನಮ್ಮನ್ನ ಕೊಂದುಬಿಡಿ,' ಎಂದು ತನ್ನ ಮನೆಯ ಹೊಸ ನೆಲಸಿಗರಿಗೆ ಹೇಳಿದನು.
‘ಕೊಲ್ಲೋದಕ್ಕಾಗೋದಿಲ್ಲ, ನಮ್ಮ ಧರ್ಮ ಅದನ್ನ ಆಗಗೊಡೋದಿಲ್ಲ,' ಎಂದು ಅವರು ಉತ್ತರಿಸಿದರು.
ಅವರು ಎಲ್ಲ ಜೀವರೂಪಗಳೂ ಪವಿತ್ರವೆಂಬ ಕಟ್ಟಳೆ ವಿಧಿಸಿರುವ ಜೈನಮತದ ಪಾಲಕರು.
ಪರಸ್ಪರ ಸಮಾಲೋಚನೆಯ ಬಳಿಕ, ಅದುವರೆಗೂ ತಲೆತಪ್ಪಿಸಿಕೊಂಡಿದ್ದ ಆ ದಂಪತಿಗಳನ್ನು ನೆರೆಯ ಪ್ರದೇಶದ ಜೈನರಲ್ಲದ ನಿವಾಸಿಗಳಿಗೆ ಹಸ್ತಾಂತರಿಸಲಾಯಿತು: 'ಅಗತ್ಯ ಕ್ರಮ ಕೈಗೊಳ್ಳುವುದಕ್ಕಾಗಿ'.
ಪವಾಡಪುರುಷ
ಲೂಟಿಯಾದ ವಸ್ತುಗಳನ್ನು ಮರಳಿಪಡೆಯಲು ಪೋಲೀಸರು ಮನೆಮನೆಯ ಮೇಲೆ ದಾಳಿ ನಡೆಸುತ್ತಿದ್ದರು.
ಭಯಕ್ಕೀಡಾದ ಜನರು ತಾವು ಹೊತ್ತುತಂದಿದ್ದ ‘ಬಿಸಿಬಿಸಿ ಮಾಲು’ ಇಳಿಸಂಜೆಯ ನಂತರ ಮನೆಯ ಕಿಟಕಿಗಳಿಂದ ಹೊರಗೆಸೆಯತೊಡಗಿದರು. ಕೆಲವರಂತೂ ಕಾನೂನಿನ ಕಿಡಿಗೇಡಿತನಕ್ಕೆ ಎರವಾಗಬಾರದೆಂಬ ತವಕದಲ್ಲಿ ತಾವು ನ್ಯಾಯಯುತವಾಗಿ ಸಂಪಾದಿಸಿದ್ದ ಸರಕನ್ನೂ ಬಿಸಾಕಿದರು.
ಒಬ್ಬಾತನಿಗೆ ಒಂದು ತೊಡಕುಂಟಾಗಿತ್ತು. ಅವನ ಮನೆಯಲ್ಲಿ ಎರಡು ದೊಡ್ಡ ಸಕ್ಕರೆ ಚೀಲಗಳಿದ್ದುವು. ಪಕ್ಕದ ದಿನಸಿ ಅಂಗಡಿಯನ್ನು ಜನರು ದೋಚಿದಾಗ ತನ್ನದೂ ಒಂದು ಪಾಲು ಇರಲೆಂದು ಅವನ್ನು ಹೊತ್ತುತಂದಿದ್ದನು. ಒಂದು ರಾತ್ರಿ, ಅವನು ಅವುಗಳನ್ನು ಹತ್ತಿರದ ಬಾವಿಯವರೆಗೆ ಹೇಗೋ ಎಳೆದುಕೊಂಡಂತೂ ಹೋದನು. ಒಂದು ಚೀಲವನ್ನೇನೋ ಸುಲಭವಾಗಿ ಒಳಗೆ ತಳ್ಳಿದನು. ಆದರೆ ಎರಡನೆಯದರೊಟ್ಟಿಗೆ ತಾನೂ ಬಿದ್ದನು.
ಅವನ ಕಿರುಚಾಟವು ಎಲ್ಲರನ್ನೂ ಎಚ್ಚರಗೊಳಿಸಿತು. ಹಗ್ಗಗಳನ್ನು ಕೆಳಗಿಳಿಸಲಾಯಿತು ಆದರೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಇಬ್ಬರು ಯುವಕರು ಬಾವಿಯಲ್ಲಿಳಿದು ಅವನನ್ನು ಹೊರಗೆಳೆದುತಂದರು. ಆದರೆ, ಕೆಲವೇ ಗಂಟೆಗಳ ನಂತರ ಅವನು ಸತ್ತುಹೋದನು.
ಮರುದಿನ ಬೆಳಿಗ್ಗೆ ಜನರು ಬಾವಿಯಿಂದ ನೀರು ಸೇದಿದಾಗ ಅದು ಬಹಳೇ ಸವಿಯಾಗಿದೆಯಿಂದು ಕಂಡುಕೊಂಡರು.
ಆ ರಾತ್ರಿ, ಪ್ರಾರ್ಥನೆಯ ದೀಪಗಳು ಆ ಪವಾಡಪುರುಷನ ಗೋರಿಯನ್ನು ಬೆಳಗುತ್ತಿದ್ದುವು.
ತಪ್ಪನ್ನು ತೊಡೆದುಹಾಕಲಾಯಿತು
‘ಯಾರು ನೀನು?’
‘ನೀನು ಯಾರು?’
‘ಹರ್ ಹರ್ ಮಹಾದೇವ್! ಹರ್ ಹರ್ ಮಹಾದೇವ್!’
‘ಹರ್ ಹರ್ ಮಹಾದೇವ್!’
‘ನೀನು ಯಾರು ಅಂತ ಹೇಳ್ತಿದೀಯಲ್ಲ ಅದೇ ಅನ್ನೋದಕ್ಕೆ ಪುರಾವೆ ಏನು?’
‘ಪುರಾವೆ? ನನ್ನ ಹೆಸರು ಧರಮ್ ಚಂದ್ — ಹಿಂದೂ ಹೆಸರು ಅದು.’
‘ಅದೆಂಥಾ ಪುರಾವೆ? ಅಲ್ಲವೇ ಅಲ್ಲ.’
‘ಒಳ್ಳೇದು. ಪೂಜ್ಯವಾದ ವೇದಗಳೆಲ್ಲ ನನಗೆ ಕಂಠಸ್ಥವಾಗಿವೆ, ಬೇಕಿದ್ದರೆ ಪರೀಕ್ಷೆ ಮಾಡಿ.’
‘ನಮಗೆ ವೇದಗೀದ ಎಲ್ಲಾ ಗೊತ್ತಿಲ್ಲ. ನಮಗೆ ಬೇಕಾಗಿರೋದು ಪುರಾವೆ.’
‘ಏನು ಹಾಗಂದ್ರೆ?’
‘ಪ್ಯಾಂಟ್ ಕೆಳಗಿಳಿಸು.’
ಅವನ ಪ್ಯಾಂಟ್ ಕೆಳಗಿಳಿಸಿದಾಗ ಅಲ್ಲಿ ಹುಯಿಲೆದ್ದಿತು. ‘ಕೊಲ್ಲಿ ಅವನನ್ನ, ಕೊಲ್ಲಿ ಅವನನ್ನ.’
‘ತಡೆಯಿರಿ, ದಯವಿಟ್ಟು ತಡೆಯಿರಿ … ನಾನು ನಿಮ್ಮ ಸಹೋದರ … ಭಗವಂತನಾಣೆ, ನಾನು ನಿಮ್ಮವನೇ, ನಿಮ್ಮ ಬಂಧು.’
‘ಹಾಗಿದ್ದರೆ ಸುನತಿ ಆಗಿರೋದು ಯಾಕೆ?’
‘ನಾನು ದಾಟಿಬಂದ ಪ್ರದೇಶದಲ್ಲಿ ನಮ್ಮ ವೈರಿಗಳ ಹಿಡಿತದಲ್ಲಿತ್ತು. ಅದಕ್ಕೆ, ನಾನು ಈ ಮುಂಜಾಗ್ರತೆ ತೆಗೆದುಕೊಳ್ಳುವ ಅನಿವಾರ್ಯತೆ ಬಂತು … ನನ್ನ ಜೀವ ಉಳಿಸಿಕೊಳ್ಳುವ ಸಲುವಾಗಿ … ಇದೊಂದೇ ತಪ್ಪಾಗಿದೆ, ಉಳಿದಂತೆ ನಾನು ಸರಿಯಾಗಿಯೇ ಇದ್ದೀನಿ.’
‘ತಪ್ಪನ್ನ ತೆಗೆದುಹಾಕಿ.’
ತಪ್ಪನ್ನು ತೊಡೆದುಹಾಕಲಾಯಿತು … ಅದರ ಜೊತೆಗೇ ಧರಮ್ ಚಂದ್ನನ್ನೂ.
ದಗಲ್ಬಾಜಿ
‘ಇಲ್ನೋಡು, ಇದು ನ್ಯಾಯವಾದದ್ದಲ್ಲ. ನೀನು ನನಗೆ ಕಳಪೆ ಪೆಟ್ರೋಲನ್ನ ಕಳ್ಳಸಂತೆ ದರದಲ್ಲಿ ಮಾರಿದೀಯ. ಆ ಕಲಬೆರಕೆ ಮಾಲಿನಿಂದ ಒಂದೇ ಒಂದು ಅಂಗಡಿಗೂ ಬೆಂಕಿ ಇಡೋದಕ್ಕೆ ಆಗಲಿಲ್ಲ.’
ಕೃತಘ್ನ ಜನತೆ
‘ಎಂಥಾ ಕೃತಘ್ನ ದೇಶವಿದು! ನಾನು ಹೇಳತೀರದ ತೊಂದರೆಗಳನ್ನೆಲ್ಲ ಅನುಭವಿಸಿ ಈ ಮಸೀದಿಯಲ್ಲಿ ಐವತ್ತು ಹಂದಿಗಳನ್ನು ಕಡಿದುಹಾಕಿದೆ. ಆದರೆ ಬಂದದ್ದೇನು? ಹಾಳಾದ ಒಬ್ಬ ಗಿರಾಕಿಯೂ ಬರಲಿಲ್ಲ. ಅದೇ ಅಲ್ಲಿ ನೋಡಿದಿರಾ, ಆ ಬದಿ? ಲೆಕ್ಕವಿಲ್ಲದಷ್ಟು ಜನರು ಸಾಲುಗಟ್ಟಿದ್ದಾರೆ ಅಲ್ಲಿ, ಪ್ರತಿಯೊಂದು ದೇವಸ್ಥಾನದ ಹೊರಗೂ, ಗೋಮಾಂಸ ಖರೀದಿಸಲು! ನಿಮಗೆ ಗೊತ್ತೇ?'
ಇದನ್ನೂ ಓದಿ …
“ನಿಜವಾದ ಅರಬ್ನಿಗೆ ಕೈಯಿಂದಲೇ ನೊಣ ಹಿಡಿಯುವುದು ಗೊತ್ತು”
ನೆಯೋಮಿ ಶಿಹಾಬ್ ನಾಯ್ (Naomi Shihab Nye, 12.3.1952) ಒಬ್ಬ ಅರಬ್-ಅಮೇರಿಕನ್ ಕವಿ. ಅವರ ತಂದೆ ಪ್ಯಾಲೆಸ್ಟೀನ್ನ ಒಬ್ಬ ನಿರಾಶ್ರಿತರು, ತಾಯಿ ಅಮೆರಿಕನ್. ಎರಡೂ ಸಂಸ್ಕೃತಿಗಳ ಪ್ರಭಾವ, ಆಂತರಿಕ ದ್ವಂದ್ವ, ಹಲವಿಚಾರಗಳ ತಿಕ್ಕಾಟ ಎಳೆದಾಟಗಳು ಅವರ ಕವಿತೆಗಳಲ್ಲಿ ಮತ್ತೆಮತ್ತೆ ಕಾಣುತ್ತವೆ. ಸಂಕೇತ ಪಾಟೀಲ ಅವರ ಕೆಲವು ಪದ್ಯಗಳನ್ನು ಕನ್ನಡಕ್ಕೆ ತಂದಿದ್ದಾರೆ.