‘ನಮ್ ತಂದೆ ಹತ್ರ ದಿನಾ ಮಾತಾಡ್ತೀರಾ? ತಿಂಗಳಿಗೆ ಇಷ್ಟು ಸಾವಿರ ಕೊಡ್ತೀನಿ’
ಜೋಗಿಯವರ ʼನಿರ್ಗಮನʼ ಕಾದಂಬರಿಯ ಆಯ್ದ ಭಾಗ
ಕಥೆಗಾರ, ಪತ್ರಕರ್ತ ಜೋಗಿ (ಗಿರೀಶ ರಾವ್ ಹತ್ವಾರ) ಅವರ 20ನೇ ಕಾದಂಬರಿ ನಿರ್ಗಮನ, 25.2.2024ರಂದು ಅಂಕಿತ ಪುಸ್ತಕ ದಿಂದ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಕಾದಂಬರಿಯ ಆಯ್ದ ಭಾಗ ಮತ್ತು ಜೋಗಿಯವರ ಮಾತುಗಳನ್ನು ನೀವಿಲ್ಲಿ ಓದಬಹುದು.
ವಯಸ್ಸಾದವರಿಗೆ ಇದು ಕಾಲವಲ್ಲ!
2024ರ ಜನವರಿ ತಿಂಗಳ ಒಂದು ದಿನ ನಾನು ಗಾಂಧೀಬಜಾರಿನ ಬೀದಿಯಲ್ಲಿ ಅಡ್ಡಾಡುತ್ತಿರುವಾಗ, ಒಬ್ಬರು ಬಾಡಿಗೆ ಸ್ಕೂಟರಿನಲ್ಲಿ ಬಂದು ನನ್ನ ಮುಂದೆ ಸ್ಥಾಪನೆಯಾದರು. ಅವರನ್ನು ನಾನು ಮೊದಲೆಲ್ಲೋ ನೋಡಿದ್ದೇನೆ ಅನ್ನಿಸಿತಾದರೂ, ಎಲ್ಲಿ ನೋಡಿದ್ದೆ ಅನ್ನುವುದು ನೆನಪಾಗಲಿಲ್ಲ. ನಾನು ಗುರುತು ಹಿಡಿಯುವುದರಲ್ಲಿ ಅಂಥ ಚಾಣಾಕ್ಷನೇನೂ ಅಲ್ಲ. ಎಷ್ಟೋ ಸಲ ಯಾವುದೋ ಶಾಪಿಂಗ್ ಕಾಂಪ್ಲೆಕ್ಸಿನ ಕನ್ನಡಿಯಲ್ಲಿ ಕಂಡಾತನನ್ನು ಎಲ್ಲೋ ನೋಡಿದ್ದೇನೆ ಅನ್ನಿಸುತ್ತಿರುತ್ತದೆ. ಎಷ್ಟೋ ಹೊತ್ತಿನ ನಂತರ ಅದು ನಾನೇ ಅನ್ನುವುದು ಹೊಳೆಯುತ್ತದೆ.
ಹಾಗೆ ಸ್ಕೂಟರಿನಲ್ಲಿ ಬಂದವರು ಅವರಾಗಿಯೇ ಪರಿಚಯ ಹೇಳಿಕೊಂಡರು. ಮೂವತ್ತು ವರ್ಷದ ಹಿಂದೆ ನ್ಯಾಷನಲ್ ಕಾಲೇಜಿನಲ್ಲಿ ರವಿ ಬೆಳಗರೆ ಜತೆ ಸೇರಿ ನಡೆಸುತ್ತಿದ್ದ ಪ್ರಜಾಜಾಗೃತಿ ಸಂಘದ ಸಭೆಗಳಲ್ಲಿ ಅವರು ಭಾಗವಹಿಸುತ್ತಿದ್ದರಂತೆ. ಅವರ ಮಾತು ಕೇಳಿ ನನಗೂ ಹಳೆಯ ನೆನಪು ಮರುಕಳಿಸಿತು. ಮಾತಾಡುತ್ತಾ ಈಗ ಎಲ್ಲಿದ್ದೀರಿ ಅಂತ ಕೇಳಿದೆ. ಜಯನಗರದ ಒಂದು ರಿಟೈರ್‌ಮೆಂಟ್ ಹೋಮ್‌ನಲ್ಲಿದ್ದೇನೆ ಎಂದರು. ನಾನು ವಿವರಗಳನ್ನು ಕೇಳಲು ಹೋಗಲಿಲ್ಲ.
ಅವರಂತೆ ಅನೇಕರು ಮಕ್ಕಳಿಂದ ದೂರವಾಗಿ ಬದುಕುವುದನ್ನು ನಾನು ಕಂಡಿದ್ದೇನೆ. ಅದಕ್ಕೆ ಕಾರಣ ಮಕ್ಕಳೂ ಅಲ್ಲ ಹಿರಿಯರೂ ಅಲ್ಲ. ಇಬ್ಬರಿಗೂ ಸಾಧ್ಯವಾಗದ ಹೊಂದಾಣಿಕೆ. ಕಿರಿಯರಿಗೆ ಹಿರಿಯರ ಅವಶ್ಯಕತೆ ಇರುವುದಿಲ್ಲ. ಹಿರಿಯರಿಗೆ ಕಿರಿಯರ ಧೋರಣೆ ಸರಿಹೊಂದುವುದಿಲ್ಲ. ಕಳೆದ ನೂರು ವರ್ಷಗಳಲ್ಲಿ ಆಗದ ಬದಲಾವಣೆ ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಆಗಿಹೋಗಿದೆ. ಅಪಾರ್ಟುಮೆಂಟುಗಳಲ್ಲಿ ಮೂರನೆಯ ವ್ಯಕ್ತಿ ಇದ್ದರೆ ದುಡಿಯುವ ಗಂಡ-ಹೆಂಡತಿಗೆ ಕಷ್ಟವಾಗುತ್ತದೆ. ಮೂರನೆಯ ವ್ಯಕ್ತಿಗೆ ಮತ್ತೂ ಕಷ್ಟವಾಗುತ್ತದೆ. ಹೊಸ ತಲೆಮಾರಿನ ಭಾಷೆ, ಅವರ ಹಿಂದಿನ ತಲೆಮಾರಿನ ಮಂದಿಗೆ ಅರ್ಥವೇ ಆಗುವುದಿಲ್ಲ.
ಇದನ್ನು ನಾನು ಯಾರನ್ನೇ ಆಗಲಿ ಆಕ್ಷೇಪಿಸಲು ಹೇಳುತ್ತಿಲ್ಲ. ಮಗ ವರುಷದಲ್ಲಿ ಆರು ತಿಂಗಳು ವಿದೇಶದಲ್ಲಿ ಇರಬೇಕಾಗುತ್ತದೆ. ಸೊಸೆಗೆ ಇಡೀ ದಿನ ಆಫೀಸು ಕೆಲಸ ಇರುತ್ತದೆ. ಎಷ್ಟೋ ದಿನ ಮನೆಯಲ್ಲಿ ಅಡುಗೆ ಮಾಡಲಿಕ್ಕೆ ಪುರುಸೊತ್ತಿರುವುದಿಲ್ಲ. ಅಂಥ ಸಂದರ್ಭದಲ್ಲಿ ಮನೆಯಲ್ಲಿ ಹಿರಿಯ ಜೀವ ಇದ್ದುಬಿಟ್ಟರೆ ಎಲ್ಲವೂ ಏರುಪೇರಾಗುತ್ತದೆ.
ಮಹಾನಗರಗಳಲ್ಲಿ ಇದ್ದಕ್ಕಿದ್ದಂತೆ ಮನೆಮನೆಗೆ ಹೊತ್ತು ಹೊತ್ತಿಗೆ ಊಟ ಕಳಿಸುವ ಹೊಸ ವೃತ್ತಿ ಆರಂಭವಾಗಿದೆ. ‘ನಮ್ ತಂದೆ ಹತ್ರ ದಿನಕ್ಕೆ ಎರಡು ತಾಸು ಮಾತಾಡ್ತೀರಾ? ತಿಂಗಳಿಗೆ ಹದಿನೈದು ಸಾವಿರ ಕೊಡ್ತೀನಿ’ ಅಂತ ನನ್ನ ಕವಿಮಿತ್ರರೊಬ್ಬರಿಗೆ ವಿದೇಶದಲ್ಲಿರುವ ಟೆಕ್ಕಿ ಒಬ್ಬರಿಂದ ಫೋನ್ ಬಂದಿತ್ತಂತೆ. ಹೊರಗೆ ಹೋಗುವಾಗ ವಯಸ್ಸಾದವರನ್ನು ಮನೆಯೊಳಗೆ ಕೂಡಿ ಹಾಕಿ ಹೋಗುವುದು ಕೂಡ ಮಹಾನಗರದ ಅನಿವಾರ್ಯತೆ. ಅವರು ಅಪರಿಚಿತರಿಗೆ ಬಾಗಿಲು ತೆರೆದು ಅನಾಹುತವಾದ ಉದಾಹರಣೆಗಳಿವೆ.
ವೃದ್ಧರಿಗೆ ಸ್ವಾಭಿಮಾನದ ಗೌರವದ ನೆಮ್ಮದಿಯ ಬದುಕು ನಡೆಸುವುದಕ್ಕೆ ಅನುವು ಮಾಡಿಕೊಡುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ನಿವೃತ್ತರಾದವರು ತಮ್ಮ ಹಳ್ಳಿಗೆ ಮರಳಲು ಅಂಜುತ್ತಾರೆ. ಅವರು ಕಟ್ಟುತ್ತಿರುವ ದುಬಾರಿ ಇನ್ಶೂರೆನ್ಸುಗಳಿಗೆ ತಕ್ಕ ಆಸ್ಪತ್ರೆ ಸಮೀಪದಲ್ಲೇ ಇರಬೇಕು ಅಂತ ಬಯಸುತ್ತಾರೆ. ಮಹಾನಗರ ಅವರನ್ನು ನಿಧಾನವಾಗಿ ತಿರಸ್ಕರಿಸುತ್ತಿದೆ. ಹಸಿಕಸ ಮತ್ತು ಒಣಕಸವನ್ನು ವಿಂಗಡಿಸುವಂತೆ ವೃದ್ಧರು ಮತ್ತು ಅತಿವೃದ್ಧರನ್ನು ವಿಂಗಡಿಸುವುದೂ ಶುರುವಾಗಿದೆ. ಈ ವಸ್ತುವನ್ನಿಟ್ಟುಕೊಂಡ ಬರೆದ ಕಾದಂಬರಿ ನಿರ್ಗಮನ.
ಜೋಗಿ
*
ಅವಸ್ಥೆ
ಮಾನಸಿ ಹೋದ ನಂತರ ಅನಿರುದ್ಧನಿಗೆ ತಾನು ಈ ಜಗತ್ತಿನಲ್ಲಿ ಏಕಾಕಿ ಅನ್ನಿಸತೊಡಗಿತು. ಕತ್ತಲಲ್ಲಿ ಕರಗುತ್ತಿದ್ದ ಮನೆ, ನಿರ್ಜನ ಬೀದಿ, ದೂರದಲ್ಲೆಲ್ಲೋ ನಾಯಿ ಬೊಗಳುವ ಸದ್ದು, ಆಗೊಮ್ಮೆ ಈಗೊಮ್ಮೆ ಪಕ್ಕದ ಬೀದಿಯಲ್ಲಿ ವಿಕಾರ ಸದ್ದು ಮಾಡುತ್ತಾ ಸಾಗುವ ಮೋಟರ್ ಬೈಕು, ಆಟೋ ರಿಕ್ಷಾ, ಕಿವಿಯ ಹತ್ತಿರ ಮುತ್ತುತ್ತಿರುವ ಸೊಳ್ಳೆಗಳು, ಮೋಡದ ಸುಳಿವಿಲ್ಲದ ಆಕಾಶದಲ್ಲಿ ಮಿನುಗುತ್ತಿರುವ ನಕ್ಷತ್ರಗಳು,
ಅಪ್ಪ ಈ ಏಕಾಂತದಲ್ಲಿ ಒಬ್ಬರೇ ಹೇಗಿದ್ದರು? ಅವರೇ ಆರಿಸಿಕೊಂಡ ಬದುಕು ಇದು. ನಮ್ಮೆಲ್ಲರ ಜತೆಗೇ ಸಂತೋಷವಾಗಿ ಇರಬಹುದಾಗಿತ್ತು. ಆದರೂ ಅವರೇಕೆ ಬೇರೆ ಮನೆ ಬೇಕು ಅಂದರು. ಬರೆಯುತ್ತೇನೆ ಅಂತ ಹೇಳಿದ್ದು ಕೇವಲ ನೆಪವಾಗಿತ್ತಾ? ತಾನಾದರೂ ಅವರನ್ನು ಬರೆದು ಮುಗಿಯಿತಾ, ಮನೆಗೆ ವಾಪಸ್ಸು ಬರುತ್ತೀರಾ ಅಂತ ಕೇಳಿದ್ದೆನಾ? ಅನಿರುದ್ಧನಿಗೆ ನೆನಪಾಗಲಿಲ್ಲ. ಅಪ್ಪ ಬೇರೆ ಮನೇಲಿರುತ್ತೇನೆ ಅಂತ ಹೇಳಿದ್ದೆ ನೆಪವಾಗಿ, ತಾನು ಅವರನ್ನು ದೂರವೇ ಇಟ್ಟುಬಿಟ್ಟೆ. ಅವರು ಇಲ್ಲದ ಮನೆಯಲ್ಲಿ ತನಗೆ, ಮಾನಸಿಗೆ ವಿಕ್ಷಿಪ್ತವಾದ ಸ್ವಾತಂತ್ರ್ಯವಂತೂ ಸಿಕ್ಕಿತ್ತು. ಅಪ್ಪ ಇದ್ದಾಗ ಮನೆಯಲ್ಲಿ ಮಾತು ಇತ್ತು. ದಿನವೂ ಅಡುಗೆ ಮಾಡಬೇಕಿತ್ತು. ಬೆಳಗ್ಗೆ ಎಂಟು ಗಂಟೆಗೆ ತಿಂಡಿ ರೆಡಿಯಾಗಬೇಕಿತ್ತು. ರಾತ್ರಿ ತಡವಾಗಿ ಬಂದರೆ ಅಪ್ಪ ಮನೆಯ ಬಾಗಿಲಲ್ಲೇ ನಿಂತು ಕಾಯುತ್ತಿದ್ದರು. ಟೀವಿಯಲ್ಲಿ ಯಾವುದಾದರೂ ಸುದ್ದಿ ಇಷ್ಟವಾಗದೇ ಹೋದರೆ ಚರ್ಚೆ ಮಾಡುತ್ತಿದ್ದರು. ಅನಿರುದ್ಧನಿಗೆ ಆಫೀಸಿನಿಂದ ಬಂದ ನಂತರ ಮತ್ತೆ ಅದೇ ಸುದ್ದಿ, ಚರ್ಚೆ ಬೇಕಿರಲಿಲ್ಲ. ಅವನಿಗೆ ಆ ಸುದ್ದಿಯ ಹಿನ್ನೆಲೆ, ರಾಜಕೀಯ, ಪಿತೂರಿ ಎಲ್ಲವೂ ಗೊತ್ತಿರುತ್ತಿತ್ತು. ಆದರೆ ಅದನ್ನು ಯಾರ ಹತ್ತಿರವೂ ಹೇಳುವಂತಿರಲಿಲ್ಲ.
ತನಗೆ ಅಪ್ಪನ ಮೇಲೆ ಎಷ್ಟು ಪ್ರೀತಿಯಿತ್ತು ಅಂತ ಅನಿರುದ್ಧ ನೆನಪಿಸಿಕೊಳ್ಳಲು ಯತ್ನಿಸಿದ. ತಮ್ಮಿಬ್ಬರ ನಡುವಿನ ಆಪ್ತವಾದ ಕ್ಷಣಗಳು ಮನಸ್ಸಿನಲ್ಲಿ ಮೂಡಲೇ ಇಲ್ಲ. ನೀನು ಮುಂದೆ ಏನಾಗುತ್ತೀ ಅಂತ ಅಪ್ಪ ಯಾವತ್ತೂ ಕೇಳಿರಲೇ ಇಲ್ಲ. ಅಪ್ಪನಿಗೆ ದೇವರಲ್ಲಿ ನಂಬಿಕೆ ಇರಲಿಲ್ಲ. ಹೀಗಾಗಿ ಮನೆಯಲ್ಲಿ ಪೂಜೆ, ಹಬ್ಬ ಮುಂತಾದ ಆಚರಣೆಗಳೂ ಇರುತ್ತಿರಲಿಲ್ಲ. ಅಪ್ಪ ಸದಾ ಖಾದಿಯ ಜುಬ್ಬಾ ಹಾಕುತ್ತಿದ್ದರು. ಕೆಂಪು ಅಂಚಿನ ಬಿಳಿ ಪಂಚೆ ಉಡುತ್ತಿದ್ದರು. ಅಂಗಿಯ ಕಿಸೆಯಲ್ಲಿ ಒಂದು ಪೆನ್ನಿರುತ್ತಿತ್ತು. ಜುಬ್ಬಾದ ಎರಡೂ ಬದಿಯ ಜೇಬುಗಳಲ್ಲಿ ಚೀಟಿಗಳು, ಮಡಚಿದ ಪೇಪರುಗಳು, ಸ್ಚ್ರಾಪ್ ಕಿತ್ತು ಹೋದ ವಾಚು, ಗುಗ್ಗಿಕಡ್ಡಿಯ ಗೊಂಚಲು, ಆಫೀಸಿನ ಕಪಾಟಿನ ಬೀಗದ ಕೀ, ಬಸವಣ್ಣನ ಫೋಟೋ ಇರುವ ಅಂಗೈಯಗಲದ ನೋಟುಪುಸ್ತಕ, ಹ್ಯಾಗೋ ಹ್ಯಾಗೋ ಮಡಿಚಿಟ್ಟ ನೋಟುಗಳು ಇರುತ್ತಿದ್ದವು. ಅಮ್ಮ ದುಡ್ಡು ಕೇಳಿದರೆ ಅಪ್ಪ ಎರಡೂ ಜೇಬು ತಡಕಾಡಿ, ಜೇಬಲ್ಲಿ ಇರುವುದನ್ನೆಲ್ಲ ತೆಗೆದು ತೆಗೆದು ನೋಡಿ, ಕೊನೆಗೆ ದುಡ್ಡು ತೆಗೆಯುತ್ತಿದ್ದರು. ಯಾವ ಜೇಬಿನಲ್ಲಿ ಏನಿದೆ ಅನ್ನುವುದು ಅಪ್ಪನಿಗೆ ನೆನಪೇ ಇರುತ್ತಿರಲಿಲ್ಲ. ಅನಿರುದ್ಧ ನೋಡಿದ ಹಾಗೆ ಯಾವತ್ತೂ ಅವರು ಹುಡುಕುತ್ತಿರುವುದು ಎರಡನೇ ಜೇಬಲ್ಲೇ ಇರುತ್ತಿತ್ತು. ಆದರೂ ಅವರು ಮೊದಲ ಜೇಬಿನಲ್ಲಿ ಇರುವುದನ್ನೆಲ್ಲ ತೆಗೆದು ನೋಡಿ, ನಂತರ ಎರಡನೇ ಜೇಬು ಹುಡುಕುತ್ತಿದ್ದರು. ಅವರ ಜೇಬಿನಲ್ಲೇ ಕೈ ಹಾಕಿ ಹುಡುಕಿ ತೆಗೆಯುತ್ತಿದ್ದದ್ದು ಗುಗ್ಗಿ ಕಡ್ಡಿಯನ್ನು ಮಾತ್ರ. ಸ್ನಾನ ಮುಗಿಸಿ ಬಂದು, ಜುಬ್ಬಾ ಹಾಕಿಕೊಳ್ಳುತ್ತಿದ್ದಂತೆ ಅಮ್ಮ ತಿಂಡಿಗೆ ಕರೆಯುತ್ತಿದ್ದಳು. ಅಪ್ಪ ಆಗ ಮಾತ್ರ ಜುಬ್ಬಾದ ಜೋಬಿನಿಂದ ವಾಚು ತೆಗೆದು ನೋಡಿ, ತಿಂಡಿ ತಿನ್ನಲು ಹೋಗುತ್ತಿದ್ದರು. ಯಾವತ್ತೂ ಅವರು ಆಮೇಲೆ ತಿಂತೀನಿ, ಈಗ ಬೇಡ, ತುಂಬ ಬೇಗ ಆಯಿತು ಅಂತ ಹೇಳಿದ್ದನ್ನು ಅನಿರುದ್ಧ ಕಂಡಿರಲಿಲ್ಲ. ಹಾಗಿದ್ದರೂ ಅಪ್ಪ ಯಾಕೆ ವಾಚು ತೆಗೆದು ನೋಡುತ್ತಿದ್ದರು ಅಂತ ಅನಿರುದ್ಧನಿಗೆ ಕುತೂಹಲವಾಗುತ್ತಿತ್ತು.
ಅನಿರುದ್ಧನ ಫೋನು ಟಣ್ಣೆಂದಿತು. ಬ್ಯಾಟರಿ ಇಪ್ಪತ್ತು ಪರ್ಸೆಂಟಿಗೆ ಬಂದಿದೆ ಅನ್ನುವ ಸೂಚನೆ. ಅರ್ಧಗಂಟೆಯಲ್ಲಿ ಫೋನ್ ಸ್ವಿಚಾಫ್ ಆಗುತ್ತದೆ. ಚಾರ್ಜರ್ ತಂದಿಲ್ಲ. ಅಪರಿಚಿತವಾದ ಜಾಗದಲ್ಲಿದ್ದೇನೆ. ಇಲ್ಲಿಂದ ಎಷ್ಟು ದೂರ ನಡೆದುಕೊಂಡು ಹೋದರೆ ಮೇನ್ ರೋಡು ಸಿಗುತ್ತದೆ ಅಂತ ನೆನಪಿಸಿಕೊಂಡ. ಕಾರಲ್ಲಿ ಯಾಂತ್ರಿಕವಾಗಿ ಡ್ರೈವ್ ಮಾಡಿಕೊಂಡು ಬರುತ್ತಿದ್ದ ದಾರಿಯನ್ನು ಕಣ್ಮುಂದೆ ತಂದುಕೊಂಡ. ಸುಮಾರು ಎರಡು ಕಿಲೋಮೀಟರ್ ನಡೆಯಬೇಕಾಗಬಹುದು ಅಂತ ಮನಸ್ಸು ಹೇಳುತ್ತಿತ್ತು.
ಮಾಲವಿಕಾಳಿಗೆ ಇದೆಲ್ಲ ಹೇಳಬೇಕು. ಅವಳ ಅಭಿಪ್ರಾಯ ಕೇಳುವುದು ಒಳ್ಳೆಯದು. ಅಪ್ಪನನ್ನು ಈ ಮನೆಯಲ್ಲಿರುವಂತೆ ಹೇಳಿದ್ದೂ ಅವಳೇ. ಅವಳ ಮನೆಯ ಬೀಗ ಒಡೆದು ನೋಡುವ ಮೊದಲು ಅವಳನ್ನು ಒಂದು ಮಾತು ಕೇಳುವುದು ಒಳ್ಳೆಯದು ಅಂದುಕೊಂಡು ಮಾಳವಿಕಾಗೆ ಫೋನ್ ಮಾಡಿದ. ಅವಳು ಫೋನ್ ರಿಸೀವ್ ಮಾಡಲಿಲ್ಲ. ಕಾಲ್ ಮಿ ಅರ್ಜೆಂಟ್ ಅಂತ ಮೆಸೇಜು ಹಾಕಿದ.
ಅನಿರುದ್ಧನಿಗೆ ಇಂಥ ಸಂದರ್ಭದಲ್ಲಿ ಮುಂದೆ ಹೋಗಬೇಕೋ ಹಿಂದೆ ಹೋಗಬೇಕೋ ಗೊತ್ತಾಗುವುದಿಲ್ಲ. ಮನಸ್ಸು ಮುಂದೇನು ಅಂತ ಯೋಚಿಸಲು ಹಿಂಜರಿಯುತ್ತಾ, ಹಿಂದಿನ ನೆನಪನ್ನೇ ಕೆದಕುತ್ತಿರುತ್ತದೆ. ನೆನಪಿನ ಸಂಚಿಯಲ್ಲಿ ಇದಕ್ಕೇನಾದರೂ ಪರಿಹಾರ ಇರಬಹುದೇ ಎಂದು ಹುಡುಕುತ್ತಿರುತ್ತದೆ. ತಾನು ಕ್ರೈಮ್ ರಿಪೋರ್ಟರ್ ಆಗಿದ್ದ ದಿನಗಳನ್ನು ಅನಿರುದ್ಧ ನೆನಪಿಸಿಕೊಂಡ. ಸಹಕಾರನಗರದ ಮನೆಯಲ್ಲಿದ್ದ ಒಂಟಿ ಮುದುಕ ನಾಪತ್ತೆ ಎಂಬ ಶೀರ್ಷಿಕೆಯೊಂದಿಗೆ ಎಂಟು ಸಾಲಿನ ಸುದ್ದಿ ಬರೆದು ಎಸೆಯಬಹುದಾಗಿತ್ತು ಎಂಬ ಘಟನೆಯೊಂದು ತನ್ನ ಜೀವನದಲ್ಲಿ ನಡೆಯುತ್ತಿದೆ. ಈಗ ಅದು ಸುದ್ದಿ ಅಲ್ಲ. ಪೊಲೀಸ್ ಕಂಪ್ಲೇಂಟ್ ಕೊಡದೇ ಹೋದರೆ ಪತ್ರಿಕೆಗಳಿಗೂ ಸುದ್ದಿಯಲ್ಲ.
ನಾಪತ್ತೆಯಾಗಲು ಕಾರಣಗಳು ಏನೇನು ಅಂತ ಅನಿರುದ್ಧ ಲೆಕ್ಕ ಹಾಕಿದ. ಮನೆಯೊಳಗೆ ಇದ್ದಾರೆ, ಆತ್ಮಹತ್ಯೆ ಮಾಡ್ಕೊಂಡಿದ್ದಾರೆ, ವಾಕಿಂಗ್ ಹೋಗುವಾಗ ತಲೆ ಸುತ್ತಿ ಬಿದ್ದಿದ್ದಾರೆ, ಯಾರೋ ಆಸ್ಪತ್ರೆಗೆ ಸೇರಿಸಿದ್ದಾರೆ. ಯಾರೋ ಗೆಳೆಯರು ಜೊತೆಗೆ ಕರೆದುಕೊಂಡು ಹೋಗಿದ್ದಾರೆ. ದಾರೀಲಿ ಯಾವುದು ಅಪರಿಚಿತ ವಾಹನ ಡಿಕ್ಕಿ ಹೊಡೆದುಕೊಂಡು ಹೋಗಿದೆ. ಸ್ಥಳದಲ್ಲೇ ಪ್ರಾಣ ಹೋಗಿದೆ. ಶವ ಮಾರ್ಚುರಿಯಲ್ಲಿದೆ. ಸಂಬಂಧಿಕರ ಮನೆಗೆ ಹೋಗಿದ್ದಾರೆ. ಮಾಡಿದ ಸಾಲ ವಾಪಸ್ಸು ಕೊಡದೇ ಇದ್ದದ್ದರಿಂದ ಸಾಲಗಾರರು ಕರಕೊಂಡು ಹೋಗಿದ್ದಾರೆ. ಬಾರಿನಲ್ಲಿ ಗಲಾಟೆ ಮಾಡಿದ್ದರಿಂದ ರೌಡಿಗಳು ಕರೆದುಕೊಂಡು ಹೋಗಿದ್ದಾರೆ.
ಇದರಿಂದಾಚೆಗೆ ಯಾವ ಕಾರಣಗಳೂ ಹೊಳೆಯಲಿಲ್ಲ. ಬೇಸರ ಬಂದು ಯಾರಿಗೂ ಹೇಳದೇ ದೇಶಾಂತರ ಹೋಗಿರಬಹುದಾದ ಸಾಧ್ಯತೆಯನ್ನೂ ಮನಸ್ಸು ಯೋಚಿಸಿತು. ಆದರೆ ಅದನ್ನು ಕೂಡಲೇ ತಳ್ಳಿಹಾಕಿತು. ಅಪ್ಪನಿಗೆ ಅಷ್ಟೆಲ್ಲ ಅಧ್ಯಾತ್ಮಿದ ಒಲವು ಇದೆ ಅಂತ ಅನಿರುದ್ಧನಿಗೆ ಯಾವತ್ತೂ ಅನ್ನಿಸಿರಲಿಲ್ಲ. ಅಪ್ಪ ತಾನು ದೈವಭಕ್ತ ಎಂದು ತೋರಿಸಿಕೊಳ್ಳುವ ಕೆಲಸಗಳನ್ನು ಯಾವತ್ತೂ ಮಾಡಿರಲಿಲ್ಲ.
ಎಲ್ಲಾ ಕಾರಣಗಳೂ ಕ್ರೈಮ್ ಸುತ್ತಲೇ ಸುತ್ತುತ್ತಿದೆ ಅನ್ನಿಸಿ, ಅನಿರುದ್ಧ ಬಲದೇವನಿಗೆ ವಿಷಯ ತಿಳಿಸುವುದು ಒಳ್ಳೆಯದು ಅಂದುಕೊಂಡ. ಕ್ರೈಮ್ ರಿಪೋರ್ಟರ್ ಆಗಿರುವುದರಿಂದ ಬಲದೇವನಿಗೆ ಪೊಲೀಸ್ ಅಧಿಕಾರಿಗಳೆಲ್ಲ ಚೆನ್ನಾಗಿ ಗೊತ್ತು. ಅನಿರುದ್ಧನಿಗೆ ಅವರೆಲ್ಲರ ಪರಿಚಯ ಇದ್ದರೂ, ಸಹಾಯ ಕೇಳುವಷ್ಟು ಮಾತಿನ ಬಳಕೆ ಇಲ್ಲ. ಬಲದೇವನನ್ನೂ ತಕ್ಷಣ ಬರೋದಕ್ಕೆ ಹೇಳಿದರೆ ಮುಂದಿನ ದಾರಿ ಅವನೇ ಸೂಚಿಸುತ್ತಾನೆ ಅನ್ನಿಸಿತು. ಆದರೆ ಬಲದೇವ ಇದನ್ನು ಎಲ್ಲರಿಗೂ ಹೇಳುತ್ತಾ ಹೋಗುತ್ತಾನೆ. ಅರ್ಧ ನಿಮಿಷದಲ್ಲಿ ಅರ್ಧ ಜಗತ್ತಿಗೆ ಸುದ್ದಿ ಮುಟ್ಟಿಸುವುದಕ್ಕೆ ಬೇಕಾದ ಪರಿಣತಿ ಅವನಲ್ಲಿದೆ. ಹಾಗೆಯೇ ಜಗತ್ತಿನ ಸುದ್ದಿಗಳೂ ಎಲ್ಲರಿಗಿಂತ ಮೊದಲು ಅವನಿಗೇ ಗೊತ್ತಾಗುತ್ತವೆ.
ಇನ್ನೇನು ಬಲದೇವನಿಗೆ ಫೋನ್ ಮಾಡಬೇಕು ಅನ್ನುವಷ್ಟರಲ್ಲಿ ಮಾಲವಿಕಾಳ ಫೋನ್ ಬಂತು. `ಏನಣ್ಣಾ ಬೆಳಗ್ಗೆ ಬೆಳಗ್ಗೆ ಫೋನ್ ಮಾಡಿದ್ದೀಯಲ್ಲ ಅಂತ ಮಾಲವಿಕಾ ಎಂದಿನ ಲವಲವಿಕೆಯಲ್ಲಿ ಮಾತು ಶುರುಮಾಡಿದಳು. ನಿಂಗೆ ಬೆಳಗ್ಗೆ, ನಂಗೆ ರಾತ್ರಿ ಶುರುವಾಗಿದೆ ಅಂತ ಅನಿರುದ್ಧ ‘ನಿಂಗೊಂದು ಸುದ್ದಿ ಹೇಳಬೇಕು. ನಿನ್ನ ಮನೆ ಹತ್ರ ಬಂದಿದ್ದೀನಿ’ ಅಂದ.
‘ಹೌದಾ, ಅಪ್ಪನ ನೋಡಕ್ಕಾ... ಇಬ್ರೂ ಬಂದಿದ್ದೀರಾ `
‘ಮಾನಸೀನೂ ಬಂದಿದ್ಳು. ಈಗ ವಾಪಸ್ ಹೋದ್ಳು. ಮನೇಲಿ ಶಾನ್ವಿ ಒಬ್ಬಳೇ ಇದಾಳಲ್ಲ’. `
‘ನೀನಿವತ್ತು ಅಪ್ಪನ ಜತೆಗೇ ಇರೋನಾ ಹಾಗಿದ್ರೆ. ಒಳ್ಳೇದಾಯ್ತು ಬಿಡು. ಅಪ್ಪಂಗೂ ಖುಷಿ ಆಗತ್ತೆ’.
‘ಅಪ್ಪ ಮನೇಲಿಲ್ಲ. ನಿನ್ನೆ ಬೆಳಗ್ಗೆ ಹೋದೋರು ಇನ್ನೂ ಬಂದಿಲ್ಲ. ಮಾನಸಿಗೆ ನೀಲಾ ಫೋನ್ ಮಾಡಿದ್ಳಂತೆ. ಅದಕ್ಕೇ ಹುಡುಕ್ಕೊಂಡು ಬಂದೆ.’
‘ಅಪ್ಪ ಇಲ್ಲ ಅಂದ್ರೆ ಎಂಥದದು.. ಏನ್ ಹಾಗಂದ್ರೆ?’
‘ಅಪ್ಪ ಮನೇಲಿಲ್ವೇ... ಮನೆಗೆ ಬೀಗ ಹಾಕಿದೆ. ಗೇಟಿಗೂ ಬೀಗ ಹಾಕಿತ್ತು. ಎಲ್ಲಿಗೋ ಹೋಗಿದ್ದಾರೆ, ವಾಪಸ್ ಬಂದಿಲ್ಲ’.
‘ಮನೆ ಒಳಗಿದ್ದರೂ ಇರಬಹುದು. ಬಾಗಿಲು ಬಡಿದು ನೋಡು’.
‘ನೀನು ತುಂಬ ಹಿಂದೆ ಇದ್ದೀ. ಅದೆಲ್ಲ ಮಾಡಾಯ್ತು. ಮನೆ ಮುಂದೆ ಇವತ್ತಿನ ಪೇಪರು, ಹಾಲಿನ ಪ್ಯಾಕೆಟ್ಟು ಬಿದ್ದಿತ್ತು. ಗೇಟು ಒಳಗಿನಿಂದ ಬೀಗ ಹಾಕ್ಕೊಂಡಿದ್ದಾರೆ. ಅವರು ಹೊರಗೆ ಹೋಗೋವಾಗ ಒಳಗಿನಿಂದ ಬೀಗ ಹಾಕ್ಕೊಂಡು ಹೋಗ್ತಾರಂತೆ. ಇಲ್ಲೆಲ್ಲ ವಿಚಾರಿಸೋಣ ಅಂದ್ರೆ ಯಾರ ಮನೇನೂ ಇಲ್ಲ. ಈ ಬೀದೀನೂ ಖಾಲಿ ಖಾಲಿ. ಏನು ಮಾಡೋದು ಅಂತ ಯೋಚನೆ ಮಾಡ್ತಿದ್ದೀನಿ. ನಿನ್ನ ಮನೆ ಬೀಗ ಒಡೆದು ನೋಡ್ಲಾ’.
‘ನೋಡಬೇಕೂಂದ್ರೆ ನೋಡು. ಅದನ್ನೆಲ್ಲ ನನ್ನ ಕೇಳಬೇಕಾ ಅಣ್ಣ. ಹೊರಗೆಲ್ಲಾದರೂ ಹೋಗಿರಬಹುದೋ ಏನೋ? ಫ್ರೆಂಡ್ಸ್ ಯಾರಾದ್ರೂ ಕರಕೊಂಡು ಹೋಗಿದ್ರೆ..? ಯಾರಿಗಾದರೂ ಫೋನ್ ಮಾಡಿ ಕೇಳು’
‘ಅದನ್ನೇ ಮಾಡ್ತಿದ್ದೀನಿ. ಪೊಲೀಸ್ ಕಂಪ್ಲೇಂಟ್ ಕೊಡೋದಾ ಬೇಡ್ವಾ ಗೊತ್ತಾಗ್ತಿಲ್ಲ’.
‘ಕಂಪ್ಲೇಂಟ್ ಬೇಡ ಅನ್ಸುತ್ತೆ. ನಾಳೆ ಪೇಪರಲ್ಲೆಲ್ಲ ಬಂದು ಎಲ್ಲರಿಗೂ ಗೊತ್ತಾಗುತ್ತೆ. ಅಷ್ಟರೊಳಗೆ ಅಪ್ಪ ವಾಪಸ್ ಬಂದ್ರೆ ಅವರಿಗೂ ಬೇಜಾರಾದೀತು. ಅಪ್ಪನ ಒಬ್ಬನನ್ನೇ ಬೇರೆ ಮಾಡಿ ಕೂರಿಸಿದ್ದಾರೆ ಅಂತ ಊರವರೆಲ್ಲ ಬಾಯಿಗೆ ಬಂದ ಹಾಗೆ ಮಾತಾಡ್ಕೋತಾರೆ. ಇಂಥದ್ದಕ್ಕೇ ಕಾಯ್ತಿರ್ತಾರೆ ಅವರೆಲ್ಲ. ಹಂಗೇ ಹುಡುಕಕ್ಕೆ ಆಗಲ್ವಾ ನಿಂಗೆ. ದೊಡ್ಡ ಎಡಿಟರ್ ಅಲ್ವಾ ನೀನು?’
‘ಈ ಮನೆಗೆ ಸೀಸಿ ಟೀವಿ ಹಾಕ್ಸಿದ್ದೀಯಾ?’
‘ಮನೆ ಖಾಲಿ ಇದ್ದಾಗ ಹಾಕ್ಸಿದ್ದೆ.. ಈಗ ಅದು ಕೆಲಸ ಮಾಡ್ತಿಲ್ಲವಂತೆ. ಈ ಸಲ ಬಂದಾಗ ರಿಪೇರಿ ಮಾಡ್ಸೋಣ ಅಂದುಕೊಂಡಿದ್ದೆ. ಹೇಗೂ ಅಪ್ಪನೇ ಇದ್ದಾರಲ್ಲ ಮನೇಲಿ ಅಂತ ನಾನೂ ನೆಗ್ಲೆಕ್ಟ್ ಮಾಡ್ದೆ.’
‘ಸರಿ ಹಾಗಿದ್ರೆ. ಏನಾಯ್ತು ಅಂತ ಹೇಳ್ತಾ ಇರ್ತೀನಿ. ಮುಂದೇನು ಮಾಡೋದು ಅಂತ ಯೋಚನೆ ಮಾಡ್ತೀನಿ. ಅಗತ್ಯ ಬಿದ್ರೆ ಬೀಗ ಒಡೆದು ಡೋರ್ ತೆಗೀಬೇಕಾಗಿ ಬರಬಹುದು. ಮನೆ ನಿನ್ನದಾಗಿರೋದರಿಂದ ವಾಟ್ಸ್ಯಾಪಲ್ಲೇ ಒಂದು ಪರ್ಮಿಷನ್ ಕಳ್ಸು. ಪೊಲೀಸರು ಕೇಳಿದರೂ ಕೇಳಬಹುದು.’
‘ಛೇ.. ಅಪ್ಪ ಎಲ್ಹೋಗಿರಬಹುದು. ನಂಗಿವತ್ತು ಬೇರೆ ಏನೂ ಮಾಡೋದಕ್ಕೂ ತೋಚೋದಿಲ್ಲ. ಆದಷ್ಟು ಬೇಗ ಹುಡುಕಿಸು. ಆಗಾಗ ಫೋನ್ ಮಾಡ್ತಿರ್ತೀನಿ. ಕೀಪ್ ಮಿ ಅಪ್‌ಡೇಟೆಡ್ ಅಣ್ಣ’ ಅಂತ ಬೇಜಾರು ಮಾಡಿಕೊಳ್ಳುತ್ತಾ ಮಾಲವಿಕಾ ಫೋನ್ ಕಟ್ ಮಾಡಿದಳು. ಮರುನಿಮಿಷವೇ ‘ಸಹಕಾರನಗರದ ಕೆನರಾಬ್ಯಾಂಕ್ ಬಡಾವಣೆಯ 17ನೇ ಕ್ರಾಸಿನಲ್ಲಿರುವ 234ನೇ ನಂಬರಿನ ಶಾರದೆ ಹೆಸರಿನ ಮನೆಯ ಮಾಲಿಕಳಾದ ನಾನು ಆ ಮನೆಯೊಳಗೆ ಪ್ರವೇಶಿಸಲು ನನ್ನ ಅಣ್ಣನಾದ ಅನಿರುದ್ಧನಿಗೆ ಪೂರ್ಣ ಅನುಮತಿ ನೀಡಿದ್ದೇನೆ. ಮನೆಯ ಬೀಗದ ಕೀ ಸಿಗದೇ ಇದ್ದ ಪಕ್ಷದಲ್ಲಿ, ಬೀಗ ಒಡೆದು ಪ್ರವೇಶ ಪಡೆಯುವುದಕ್ಕೆ ನನ್ನ ಅನುಮತಿ ಇರುತ್ತದೆ’ ಎಂಬ ಮೆಸೇಜು ಬಂದು ಬಿತ್ತು. ಮಾಲವಿಕಾಳ ಸಂದೇಶದಲ್ಲಿದ್ದ ಸ್ಪಷ್ಟತೆ ನೋಡಿ ಅನಿರುದ್ಧ ಅವಳನ್ನು ಮೆಚ್ಚಿಕೊಂಡ.
ಫೋನಿನ ಬ್ಯಾಟರಿ ಸಾಯುವುದರಲ್ಲಿತ್ತು. ಬಲದೇವನಿಗೆ `ನಮ್ಮನೇಲಿ ರಾತ್ರಿ ಹತ್ತು ಗಂಟೆಗೆ ಸಿಗೋಣವೇ? ತುರ್ತು ಸಂಗತಿ’ ಅಂತ ಮೆಸೇಜು ಕಳಿಸಿದ. ಬಲದೇವನ ಫೋನು ಕೈಯಲ್ಲೇ ಇದ್ದಿರಬೇಕು. ಫಟ್ಟನೆ ಶೂರ್ ಅಂತ ಮೆಸೇಜ್ ಬಂತು. ಅನಿರುದ್ಧ ಮನೆಯನ್ನೊಮ್ಮೆ ದಿಟ್ಟಿಸಿ ನೋಡಿದ. ಇಡೀ ಮನೆ ಕತ್ತಲಲ್ಲಿ ಮುಳುಗಿಹೋಗಿತ್ತು. ಹಾಗೇ ನಡೆಯುತ್ತಾ ಹೋದ. ಅಪ್ಪ ದಿನವೂ ಇದೇ ದಾರಿಯಲ್ಲೇ ವಾಕಿಂಗ್ ಹೋಗುತ್ತಿದ್ದಿರಬೇಕು ಎಂದುಕೊಳ್ಳುತ್ತಾ, ಅತ್ತಿತ್ತ ನೋಡುತ್ತಾ ಸಾಗಿದ. ಪಕ್ಕದ ರಸ್ತೆಯಲ್ಲಿ ಒಂದೇ ಒಂದು ಬೀದಿದು ಮಂಕಾಗಿ ಉರಿಯುತ್ತಿತ್ತು. ಅದರಾಚೆಗಿನ ಬೀದಿ ಪೂರ್ತಿ ಬೆಳಕಾಗಿತ್ತು.
ಅನಿರುದ್ಧ ಮುಖ್ಯರಸ್ತೆಗೆ ಹೋಗಿ ನಿಂತು, ಟ್ಯಾಕ್ಸಿ ಬುಕ್ ಮಾಡಿದ. ಕಾಯುವ ಸಮಯ ಎಂಟು ನಿಮಿಷ ತೋರಿಸಿತು. ಅನಿರುದ್ಧನಿಗೆ ಸಿಗರೇಟು ಸೇದಬೇಕು ಅಂತ ಆಶೆಯಾಯಿತು. ಸಿಗರೇಟು ಸೇದುವುದನ್ನು ನಿಲ್ಲಿಸಿ ಹತ್ತೊಂಬತ್ತು ವರ್ಷದ ನಂತರ ಇದೀಗ ಮತ್ತೆ ಸಿಗರೇಟು ಸೇದಬೇಕು ಅಂತ ಅನ್ನಿಸಿದ್ದಕ್ಕೆ ಅನಿರುದ್ಧನಿಗೆ ಖುಷಿಯಾಯಿತು. ಈ ಆಶೆಯನ್ನು ಹುಸಿಯಾಗಲಿಕ್ಕೆ ಬಿಡಬಾರದು ಅಂತ ಅಲ್ಲೇ ಇದ್ದ ಗೂಡಂಗಡಿಗೆ ಹೋಗಿ ಸಿಗರೇಟು ಯಾವುದಿದೆ ಅಂತ ಕೇಳಿದ. ಅನಿರುದ್ಧ ಸೇದುತ್ತಿದ್ದ ಬ್ರಾಂಡು ಇರಲಿಲ್ಲ. ಅವನು ಚೆನ್ನಾಗಿದೆ ಅಂತ ಹೇಳಿ ಕೊಟ್ಟದ್ದನ್ನೇ ಮೂಸಿದ. ನಿಕೋಟಿನ್ ಪರಿಮಳಕ್ಕೆ ರೋಮಾಂಚನವಾಯಿತು. ಅಂಗಡಿಯಾತ ಇಪ್ಪತ್ತೆರಡು ರುಪಾಯಿ ಅಂದ. ಅನಿರುದ್ಧನಿಗೆ ತನ್ನಲ್ಲಿ ದುಡ್ಡಿಲ್ಲ ಅನ್ನುವುದು ನೆನಪಾಯಿತು. ಕ್ಯೂಆರ್ ಕೋಡ್ ಹುಡುಕಾಡಿದ. ಅಂಗಡಿಯಾದ ಕ್ಯಾಶ್ ಮಾತ್ರ, ಗೂಗಲ್ ಪೇ ಇಲ್ಲ ಅಂದು ಸಿಗರೇಟು ವಾಪಸ್ಸು ಕೊಟ್ಟ. ಅಪರೂಪದ ಕ್ಷಣವೊಂದು ತನ್ನಿಂದ ತಪ್ಪಿಸಿಕೊಂಡು ಹೋಯಿತಲ್ಲ ಅಂತ ಅನಿರುದ್ಧನಿಗೆ ಬೇಜಾರಾಯಿತು.
ಕೃತಿ : ನಿರ್ಗಮನ (ಕಾದಂಬರಿ)
ಲೇ : ಜೋಗಿ
ಪುಟ : 160
ಬೆಲೆ : ರೂ. 170
ಮುಖಪುಟ ವಿನ್ಯಾಸ : ಸುಧಾಕರ ದರ್ಬೆ
ಪ್ರಕಾಶನ : ಅಂಕಿತ ಪುಸ್ತಕ
ಖರೀದಿಗೆ: 8660404034
ಜೋಗಿ
ಸೂರತ್ಕಲ್ ಸಮೀಪದ ಹೊಸಬೆಟ್ಟುವಿನವರಾದ ಕಥೆಗಾರ, ಪತ್ರಕರ್ತ ಜೋಗಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಈತನಕ ಇವರು ರಚಿಸಿದ ಮತ್ತು ಸಂಪಾದಿಸಿದ ಒಟ್ಟು ಕೃತಿಗಳು 93. ನದಿಯ ನೆನಪಿನ ಹಂಗು, ಯಾಮಿನಿ, ಚಿಟ್ಟೆ ಹೆಜ್ಜೆ ಜಾಡು, ಹಿಟ್ ವಿಕೆಟ್, ಊರ್ಮಿಳಾ, ಮಾಯಾಕಿನ್ನರಿ, ಗುರುವಾಯನಕೆರೆ, ದೇವರ ಹುಚ್ಚು, ಚಿಕ್ಕಪ್ಪ, ಚೈತ್ರ ವೈಶಾಖ ವಸಂತ, ಎಲ್ಲಾನು ಮಾಡುವುದು ಹೊಟ್ಟೆಗಾಗಿ, ವಿರಹದ ಸಂಕ್ಷಿಪ್ತ ಪದಕೋಶ, ಬೆಂಗಳೂರು, ಬಿ ಕ್ಯಾಪಿಟಲ್, ಸೀಳುನಾಲಿಗೆ, ಜೋಗಿ ಕತೆಗಳು, ಕಾಡು ಹಾದಿಯ ಕತೆಗಳು, ರಾಯಭಾಗದ ರಹಸ್ಯ ರಾತ್ರಿ, ಜರಾಸಂಧ, ಸೂಫಿ ಕತೆಗಳು, ಕಥಾ ಸಮಯ, ಫೇಸ್ ಬುಕ್ ಡಾಟ್ ಕಾಮ್-ಮಾನಸ ಜೋಶಿ, ನಾಳೆ ಬಾ, ಅಶ್ವಥ್ಥಾಮನ್, ಎಲ್ (ಕಾದಂಬರಿ), ಆಸ್ಕ್ ಮಿಸ್ಟರ್, ಜೋಗಿ ಕಾಲಂ, ನೋಟ್ ಬುಕ್, ಜೋಗಿ, ಹಸ್ತಿನಾವತಿ ಮುಂತಾದವು.
ಮುದ್ರಣಕ್ಕೆ/ಬಿಡುಗಡೆಗೆ ಸಿದ್ಧವಾಗುತ್ತಿರುವ ನಿಮ್ಮ ಕೃತಿಗಳ ಆಯ್ದ ಭಾಗಗಳ ಪ್ರಕಟಣೆಗಾಗಿ ಸಂಪರ್ಕಿಸಿ team@konaru.org
ಇದನ್ನೊಮ್ಮೆ ಕಣ್ಣಾಡಿಸಿ…