ಹಳತು ಹೊನ್ನು ಎಂದುಕೊಳ್ಳುತ್ತ ಸಂಕೇತ ಪಾಟೀಲ ಕಾಲಕಾಲಕ್ಕೆ ಅನುವಾದಿಸಿದ ಒಂದಷ್ಟು ಒಲವಿನ ಕವಿತೆಗಳು Valentine's Day ಸಂದರ್ಭದಲ್ಲಿ ನಿಮ್ಮ ಓದಿಗೆ.
ರವೀಂದ್ರನಾಥ ಟ್ಯಾಗೋರರ ‘ತುಮಿ ಸಂಧ್ಯಾರ್ ಮೇಘಮಾಲಾ’ ಎಂಬ ಬಂಗಾಳಿ ಕವಿತೆಯ ಅವರೇ ಇಂಗ್ಲಿಷ್ಗೆ ಮಾಡಿದ ಅನುವಾದವನ್ನಾಧರಿಸಿ ಪಾಬ್ಲೋ ನೆರೂದ (ಅವನೇ ಹೇಳಿಕೊಂಡಂತೆ) ಮಾಡಿದ ಸ್ಪ್ಯಾನಿಷ್ ಭಾವಾನುವಾದದ (ಮತ್ತ್ಯಾರೋ ಮಾಡಿದ) ಇಂಗ್ಲಿಷ್ ಅನುವಾದದ (ನಾನು ಬಹಳ ವರ್ಷಗಳ ಹಿಂದೆ ಮಾಡಿದ) ಕನ್ನಡ ಅನುವಾದ ಇಲ್ಲಿದೆ. ಬಂಗಾಳಿ → ಇಂಗ್ಲಿಷ್ → ಸ್ಪ್ಯಾನಿಶ್ → ಇಂಗ್ಲಿಷ್ → ಕನ್ನಡ, ಈ ಭಾವಾನುವಾದಗಳ ಹಾದಿಯಲ್ಲಿ ಪಾಪ ಮೂಲ ಪದ್ಯ ಏನಾಗಿದೆಯೊ!

ಮುಸ್ಸಂಜೆಯ ನನ್ನ ಬಾನಿನಲಿ
ಮುಸ್ಸಂಜೆಯ ನನ್ನ ಬಾನಿನಲಿ ನೀನೊಂದು ಮೋಡದಂತೆ
ಬರುವೆ ನಿನ್ನ ಆಕಾರ ಬಣ್ಣಗಳಲಿ ನನ್ನ ಮನಕೊಪ್ಪುವಂತೆ
ನೀನು ನನ್ನವಳು, ನನ್ನವಳೆ, ಮಧುರ ತುಟಿಗಳ ಹೆಣ್ಣೆ
ನಿನ್ನ ಉಸಿರಿನಲ್ಲಿದೆ ನನ್ನ ಅನಂತ ಕನಸುಗಳ ಜೀವ
ನನ್ನ ಅಂತರಾಳದ ದೀಪ ಹೊಯ್ಯುತಿದೆ ನಿನ್ನ ಪಾದಗಳಿಗೆ ರಂಗು
ಹುಳಿ ಮದಿರೆಯ ಮಾಡದೆ ಸವಿ ನಿನ್ನ ತುಟಿಗಳ ಸೋಂಕು?
ನನ್ನ ಸಂಜೆಯ ಹಾಡುಗಳನೊಟ್ಟಿ ಸುಗ್ಗಿ ಮಾಡುವವಳೆ
ನನ್ನ ಒಬ್ಬಂಟಿ ಕನಸುಗಳಿಗೂ ಗೊತ್ತು ನೀನು ನನ್ನವಳೆ
ನೀನು ನನ್ನವಳು ನನ್ನವಳೆಂದು ಅಪರಾಹ್ನದ ಗಾಳಿಯಲಿ ಹಲುಬುತ್ತ ಓಡುತ್ತೇನೆ
ಗಾಳಿ ನನ್ನ ವಿಧುರ ಸುಯ್ಯನ್ನು ತುಯ್ಯುತ್ತ ಒಯ್ಯುತ್ತದೆ
ನನ್ನ ಕಣ್ಣಿನಾಳಕ್ಕೆ ಲಗ್ಗೆಯಿಟ್ಟವಳೆ, ಈ ನಿನ್ನ ಕೊಳ್ಳೆ
ನಿನ್ನ ಇರುಳಿನ ಆಸ್ಥೆಯನ್ನು ತಿಳಿಗೊಳಿಸುತ್ತದೆ ಕೊಳದ ನೀರಿನಂತೆ
ನನ್ನ ನಾದದ ಬಲೆಗೆ ಒಳಗಾಗಿದ್ದೀ ನೀ, ಪ್ರಿಯೆ
ಆಗಸದ ಹರವು ನನ್ನ ನಾದದ ಬಲೆಗೆ
ಅಗಲಿಕೆಯ ದು:ಖದ ನಿನ ಕಂಗಳ ತಡಿಯಲ್ಲೆ ನನ್ನ ಚೇತನದ ಹುಟ್ಟು
ಶೋಕಿಸುವ ನಿನ ಕಂಗಳೆ ಕನಸುಗಳ ನೆಲೆಯ ಶುರುವಾತು.
ಟರ್ಕಿಶ್ ಕವಿ Nâzım Hikmetರ ಒಂದು ಕವಿತೆ. ಇದು Randy Blasing ಮತ್ತು Mutlu Konukರು ಮಾಡಿದ್ದ ಇಂಗ್ಲಿಷ್ ಅನುವಾದದ ಕನ್ನಡ ಅನುವಾದ.
ನಿನ್ನ ಪ್ರೀತಿಸುವುದು
ನಿನ್ನ ಪ್ರೀತಿಸುವುದು ಉಪ್ಪಲ್ಲದ್ದಿದ್ದ ಬ್ರೆಡ್ ತಿಂದಂತೆ,
ಎಚ್ಚತ್ತಂತೆ ರಾತ್ರಿಯೊಳು ಜ್ವರವೆಂಬಂತೆ
ಮತ್ತು ತಣ್ಣೀರಿನ ಕೊಳವೆಗೆ ಬಾಯಿಕ್ಕಿದಂತೆ,
ಒಂದು ವಜನಾದ ಹೆಸರಿಲ್ಲದ ಪಾರ್ಸಲ್ಲು ತೆರೆದಂತೆ
ತವಕದಿಂದ, ಖುಷಿಯಿಂದ, ಎಚ್ಚರಿಕೆಯಿಂದ.
ನಿನ್ನ ಪ್ರೀತಿಸುವುದು ಮೊದಲನೆಯ ಸಲ
ಸಾಗರದ ಮೇಲೆ ಹಾರಾಡಿದಂತೆ,
ಇಸ್ತಾನ್ಬುಲ್ ಮೇಲೆ ಮೆತ್ತಗೆ ಮುಸ್ಸಂಜೆ
ಕವಿಯುವುದ ಅನುಭವಿಸಿದಂತೆ.
ನಿನ್ನ ಪ್ರೀತಿಸುವುದು “ನಾನು ಜೀವಿಸುತ್ತಿದ್ದೇನೆ” ಎಂದುಸಿರಿದಂತೆ.
Jeffrey McDaniel ಎಂಬ ಅಮೆರಿಕನ್ ಕವಿಯ "The Quiet World" ಎಂಬ ಕವಿತೆಯ ಅನುವಾದ.
ನೀರವ ಜಗತ್ತು
ಜನರು ಪರಸ್ಪರ ಕಣ್ಣೊಳಗೆ ಕಣ್ಣಿಟ್ಟು ನೋಡುವುದ
ಹೆಚ್ಚಿಸುವ, ಅಂತೆಯೇ ಮಾತು ಬಾರದವರ ಸಂತೈಸುವ,
ಯತ್ನ ಕೈಕೊಂಡ ಸರಕಾರ
ಪ್ರತಿ ವ್ಯಕ್ತಿಗೆ ದಿನಕ್ಕೆ ಬರೊಬ್ಬರಿ
ಒಂದು ನೂರಾ ಅರವತ್ತೇಳು
ಪದಗಳನ್ನು ಮಂಜೂರು ಮಾಡಲು ನಿರ್ಣಯಿಸಿದೆ.
ಫೋನ್ ಗಂಟೆ ಬಾರಿಸಿದಾಗ ಎತ್ತಿ
ಕಿವಿಗಿಟ್ಟುಕೊಳ್ಳುತ್ತೇನೆ, ಹಲೋ ಎನ್ನದೆ.
ರೆಸ್ಟುರಾಂಟಿನಲ್ಲಿ ಚಿಕನ್ ನೂಡಲ್ ಸೂಪಿನತ್ತ
ಬೆರಳು ತೋರಿಸುತ್ತೇನೆ.
ಈ ಹೊಸ ರೀತಿಗೆ ಚೆನ್ನಾಗಿಯೇ ಹೊಂದಿಕೊಳ್ಳುತ್ತಿದ್ದೇನೆ.
ತಡ ರಾತ್ರಿ ದೂರದೂರಿನ ಪ್ರೇಯಸಿಗೆ
ಕರೆ ಮಾಡಿ ನಾನಿವತ್ತು ಬರೇ ಐವತ್ತೊಂಬತ್ತು
ಬಳಸಿದೆ, ಉಳಿದುವೆಲ್ಲ ನಿನಗೋಸುಗವೇ
ಎಂದು ಹೆಮ್ಮೆಯಿಂದ ನಿವೇದಿಸುತ್ತೇನೆ.
ಅವಳು ಉತ್ತರ ಕೊಡದಿದ್ದಾಗ, ಅವಳು
ತನ್ನೆಲ್ಲ ಪದಗಳನ್ನು ಬಳಸಿಬಿಟ್ಟಿರುವಳೆಂದು
ಅರಿವಾಗುತ್ತದೆ. ಆಗ I love you ಎಂದು
ಮೂವತ್ತೆರಡು ಮತ್ತು ಒಂದು ಮೂರಾಂಶ
ಸಲ ಮೆಲ್ಲಗೆ ಉಸುರುತ್ತೇನೆ. ಅದಾದ ಮೇಲೆ
ಲೈನಿಗಾನಿಕೊಂಡೇ ಒಬ್ಬರ ಉಸಿರಿನ್ನೊಬ್ಬರು
ಆಲಿಸುತ್ತ ಕೂತು ಬಿಡುತ್ತೇವೆ.
Laura Grace Weldon ಎಂಬ ಅಮೆರಿಕನ್ ಕವಿಯ “Most Important Word” ಎಂಬ ಕವಿತೆಯ ಅನುವಾದ.
ಎಲ್ಲಕ್ಕೂ ಮಿಗಿಲಾದ ಶಬ್ದ
ನನ್ನ ಚೊಚ್ಚಿಲ ಮಗುವಿಗೆ ಅವನ ಹೆಸರಿನ
ಎಂಟು ಅಕ್ಷರಗಳನ್ನು ಕಲಿಸುವ ಮುನ್ನ
ಎಲ್ಲಕ್ಕೂ ಮಿಗಿಲಾದ ಶಬ್ದ
ಹೇಗೆ ಬರೆಯುವುದೆಂದು ತೋರಿಸಿಕೊಟ್ಟೆ.
ಮೇಲ್ದುಟಿಗೆ ಒತ್ತಿದ ಮಡಚಿದ ನಾಲಗೆ,
ಬಿಗಿಯಾಗಿ ಪೆನ್ಸಿಲ್ ಹಿಡಿದ ನಾಲ್ಕು ವರ್ಷಗಳ
ಮೆದುವಾದ ಬೆರಳುಗಳು. ನನ್ನ ಅಕ್ಷರಗಳನ್ನು
ಕಾಪಿ ಮಾಡಿದ. ಕುಂಟಾಡುವ ಕುರ್ಚಿಯೊಂದರ ಬೆನ್ನು,
ಒಪ್ಪಾರೆಯಾದ ಮೊಟ್ಟೆ, ಖಾಲಿ ಐಸ್ಕ್ರೀಂ ಕೋನ್
ಹಿಡಿಕೆಯಿಲ್ಲದ ಕವಲುಗೋಲು.
ಈ ಅಕ್ಷರ ಜೋಡಣೆ LOVE ಎಂದವನಿಗೆ ಹೇಳಿದೆ.
ಅದನ್ನವ ಬರೆದ ತನ್ನ ಕ್ರೇಯಾನಿನ ಚಿತ್ರಗಳ ಮೇಲೆ,
ಉಸಿರುಗಿಯ ಮುಸುಕಿನ ಕಿಟಕಿಗಳ ಮೇಲೆ,
ಸುಣ್ಣದ ಕಡ್ಡಿಯ ಕಾಲ್ದಾರಿಗಳ ಮೇಲೆ.
ತಾನು ನಂತರ ಕಲಿತ ಪದಗಳ ಮಗ್ಗುಲಿಗೆ ಅದನ್ನವ ಬರೆದ —
ಅಮ್ಮ ಒಲವು, ಅಪ್ಪ ಒಲವು, ಮರ ಒಲವು, ಒಲವು
ಅವನದೇ ಹೆಸರಿನ ಪಕ್ಕಕ್ಕೆ ತೂರಿ ಅಡಕಿ ಕುಳಿತಿತು.
ಆಕಾರಗಳ ಕೀಲಿಯೊಡೆದು ಅವು ಸಂಕೇತಗಳಾದುವು,
ಮುಂದೆ ಬಹುಬೇಗ ತಾ ಬರೆದ ಚಿತ್ರಗಳ ಜೊತೆಗೋಡುವ
ಕತೆಗಳ ಗಟ್ಟಿಯಾಗಿ ಓದತೊಡಗಿದ.
ನಾನೀಗ ಅವನ ಮಗಳಿಗೆ ಮೊತ್ತಮೊದಲ ಆ
ಮಾಂತ್ರಿಕ ಶಬ್ದವನ್ನು ಕಲಿಸುತ್ತಿದ್ದೇನೆ.
ಅವಳು ಏಕಾಗ್ರಳಾಗುತ್ತಾಳೆ,
ಹಾಳೆಯ ಮೇಲೆ ಗೆರೆಗಳು ನಲಿದಾಡುತ್ತವೆ,
ಸುರುಳಿ ಸುತ್ತಿದ ನಾಲಗೆ ತುಟಿಗೊತ್ತುತ್ತದೆ.