ಕಾಸರಗೋಡಿನ ಕಾರಡ್ಕದಲ್ಲಿ ಜನಿಸಿದ ಕೆ. ವಿ. ತಿರುಮಲೇಶ್ (12.9.1940 - 30.1.2023) ಅವರ ಕವಿತೆಗಳ ಸೆಳವಿಗೆ ಬೀಳದವರು ಅತ್ಯಂತ ವಿರಳ. ವಿಮರ್ಶಕರು ಮತ್ತು ಭಾಷಾವಿಜ್ಞಾನಿಯೂ ಆಗಿದ್ದ ಅವರು ಹೈದರಾಬಾದಿನ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಯುನಿವರ್ಸಿಟಿಯಲ್ಲಿ (EFLU) ಪ್ರಾಧ್ಯಾಪಕರಾಗಿದ್ದರು. ನಂತರ ಯೆಮನ್ನಲ್ಲಿ ಕೆಲಕಾಲ ಉಪನ್ಯಾಸಕರಾಗಿದ್ದರು. ತಮ್ಮ ನಿವೃತ್ತಿ ಜೀವನವನ್ನು ಹೈದರಾಬಾದಿನಲ್ಲಿ ಕಳೆದ ಅವರು ಸುಮಾರು 60 ಕೃತಿಗಳನ್ನು ಪ್ರಕಟಿಸಿದ್ದರು; ಕನ್ನಡದ ಈ ಅಪರೂಪದ ಜೀವ ನಮ್ಮೊಂದಿಗೆ ಇಲ್ಲವಾಗಿ ಇಂದಿಗೆ ಒಂದು ವರ್ಷ.
ಕೆಲ ವರ್ಷಗಳ ಹಿಂದೆ ಶ್ರೀದೇವಿ ಕಳಸದ, ತಿರುಮಲೇಶರೊಂದಿಗೆ ಇ-ಮೇಲ್ನಲ್ಲಿ ಒಡನಾಡುತ್ತಿದ್ದ ಸಂದರ್ಭದಲ್ಲಿ ತಿರುಮಲೇಶರು ಪ್ರಸ್ತುತ ಲೇಖನವನ್ನು ಕಳಿಸಿ, ಈ ಪುಟ್ಟ ಪತ್ರವನ್ನು ಬರೆದಿದ್ದರು:
"ಇತ್ತೀಚೆಗೆ ಸಾಧ್ಯವಾದಷ್ಟು ಸರಳ ರೀತಿಯಲ್ಲಿ ವ್ಯಾಕರಣ ಮತ್ತು ಭಾಷೆಗೆ ಸಂಬಂಧಿಸಿದ ಸಣ್ಣ ಲೇಖನಗಳನ್ನು ಬರೆಯುತ್ತಿದ್ದೇನೆ. ಆದರೆ ಅವುಗಳನ್ನು ಪ್ರಕಟಿಸುವಂಥ ಪತ್ರಿಕೆಗಳಿಲ್ಲ. ವಾಸ್ತವದಲ್ಲಿ, ಇದು ನಿಮ್ಮ ಪತ್ರಿಕೆಗೂ ಸೂಕ್ತವಲ್ಲದಿರಬಹುದು. ಆದ್ದರಿಂದ, ಇದನ್ನು ಕೈಬಿಡಲು ಹಿಂಜರಿಯಬೇಡಿ; ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೂ ನೀವು ರಿಸ್ಕ್ ತೆಗೆದುಕೊಳ್ಳಲು ಬಯಸಿದರೆ, ದಯವಿಟ್ಟು ತಪ್ಪಿಲ್ಲದಂತೆ ಮುದ್ರಿಸಲಾಗುವುದೇ? ನೋಡಿ."
ವಿಶ್ವಾಸದಿಂದ
ಕೆ. ವಿ. ತಿರುಮಲೇಶ್
ಅಕ್ಷರ ಸಂಸ್ಕೃತಿಯಲ್ಲಿ ತನ್ನನ್ನು ಅಭಿವೃದ್ಧಿಗೊಳಿಸುವ ಹಾದಿಯಲ್ಲಿ ಕನ್ನಡವು ಸಂಸ್ಕೃತದಿಂದ ಪಡೆದುಕೊಂಡ ಅಕ್ಷರಗಳಲ್ಲಿ ಬಿಂದುವೂ ಒಂದು. ಇದನ್ನು ಸೊನ್ನೆಯೆಂದೂ ಪೂಜ್ಯವೆಂದೂ ಕೂಡ ಕರೆಯಲಾಗುತ್ತದೆ. ಇವು ಇದರ ಅನ್ವರ್ಥನಾಮಗಳಾದರೆ, ಅನುಸ್ವಾರ ಎನ್ನುವುದು ಇದರ ಪಾರಿಭಾಷಿಕ ಹೆಸರು. ಕನ್ನಡ ಅಕ್ಷರಮಾಲೆಯಲ್ಲಿ ಇದು ‘ಅಂ’ ಎಂದು ಸುಪರಿಚಿತ. ಆದರೆ ಸುಪರಿಚಿತವಾಗಿರುವುದನ್ನು ನಾವು ನಿಸ್ಸಾರವಾಗಿ ಕಾಣುವುದರಿಂದ ಅದರ ಮೌಲ್ಯವನ್ನು ಮನಗಾಣದೆ ಇರುವುದೂ ಉಂಟು. ಕೆಲವರು ಕನ್ನಡಕ್ಕೆ ಬಿಂದುವಿನ ಅಗತ್ಯವಿಲ್ಲ ಎಂದು ಪ್ರತಿಪಾದಿಸುವ ವಾದದ ಹಿನ್ನೆಲೆಯಲ್ಲಿ ಬಿಂದುವಿನ ಉಪಯೋಗ ಏನು ಎಂಬುದನ್ನು ಪರಿಶೀಲಿಸಬೇಕಾಗುತ್ತದೆ.
ನಿಜ, ಬಿಂದು ಕನ್ನಡಕ್ಕೆ ಅನಿವಾರ್ಯವೇನಲ್ಲ; ಅದು ಎಲ್ಲೆಲ್ಲಿ ಬರುತ್ತದೋ ಅಲ್ಲೆಲ್ಲಾ ಅದಿಲ್ಲದೆಯೂ ಅದರ ಕಾರ್ಯವನ್ನು ಇತರ ರೀತಿಯಿಂದ ನಿರ್ವಹಿಸಿಕೊಳ್ಳಬಹುದು. ಉದಾಹರಣೆಗೆ: ಅಂದ ~ ಅನ್ದ, ಕಂಬ ~ ಕಮ್ಬ, ತುಂಡು ~ ತುಣ್ಡು, ಪಂಚೆ ~ ಪಞ್ಚೆ, ಸಂಗ ~ ಸಙ್ಗ ಎಂದು ಮುಂತಾಗಿ. ಹೀಗಿರುತ್ತ ಕನ್ನಡ ಅಕ್ಷರಮಾಲೆಯನ್ನು 'ವಿನಾ ಕಾರಣ' ವಿಸ್ತರಿಸಿ ಕಲಿಕೆಯ ಭಾರವನ್ನು ಹೆಚ್ಚಿಸುವ ಈ ಬಿಂದು ಯಾಕೆ ಎನ್ನುವುದು ಕೆಲವರ ನಿಜವಾದ ಪ್ರಶ್ನೆಯಾಗಿರಬಹುದು. ಈ ಸರಳವಾದ ಬಿಂದು ಮತ್ತು ಅದನ್ನು ಬಳಸುವ ನಿಯಮಗಳು ಅಷ್ಟೊಂದು ಕಠಿಣವೇ ಎಂದು ಕೇಳಬೇಕಾಗುತ್ತದೆ. ಹಾಗೂ ಅದನ್ನು ಬಳಸುವುದರಿಂದ ಆಗುವ ಕಾರ್ಯಲಾಭವನ್ನು ವಸ್ತುನಿಷ್ಠವಾಗಿ ಪರಿಗಣಿಸಬೇಕಾಗುತ್ತದೆ. ಅದೇನೂ ಕುರುಡು ಅನುಕರಣೆಯಿಂದಲೋ ಖಯಾಲಿಗಾಗಿಯೋ ಕನ್ನಡಕ್ಕೆ ಬಂದಿದೆ ಎಂದು ಅನಿಸುವುದಿಲ್ಲ.
ಸಂಸ್ಕೃತದಲ್ಲಿ ಇದು ತಾನು ಅವಲಂಬಿತವಾಗಿರುವ ಅಕ್ಷರದ ತಲೆಗೆರೆಯ ಮೇಲೆ ಒಂದು ಬೊಟ್ಟಿನ ರೂಪದಲ್ಲಿ ಬಂದರೆ, ಕನ್ನಡದಲ್ಲಿ ಅವಲಂಬನಾಕ್ಷರದ ಸಾಲಿನಲ್ಲೇ ಬಲಬದಿಗೆ ಸೊನ್ನೆಯ ಆಕಾರದಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಅನುಸ್ವಾರ ಎಂಬ ಹೆಸರು ಬರಲಿಕ್ಕೆ ಕಾರಣ ಇದು ಹಿಂದಣ ಸ್ವರವನ್ನು ಅನುಸರಿಸಿ (ಸ್ವತಂತ್ರವಾಗಿ ಅಲ್ಲ) ಬರುವುದರಿಂದ. ಅನುಸ್ವಾರ ಎಂದರೆ: “The nasal sound which is marked by a dot above the line ... and which always belongs to a preceding vowel” (The Student's Sanskrit-English Dictionary by V. M. Apte, 2011). ಆದ್ದರಿಂದ ಬಿಂದು ಹಿಂದಣ ಅಕ್ಷರದ ಭಾಗವಾಗಿರುತ್ತದೆ. ಹೀಗೆ ಈ ಪೂರ್ವಾಕ್ಷರದ ಮೇಲಿನ ಅವಲಂಬನವನ್ನು ಸೂಚಿಸುವುದಕ್ಕಾಗಿ ಎಂಬಂತೆ ವರ್ಣಮಾಲೆಯಲ್ಲಿ ಅದನ್ನು ‘ಅಂ’ ಎಂದು ಗುರುತಿಸಲಾಗುತ್ತದೆ. ವರ್ಣಮಾಲೆಯಲ್ಲಿ ಸ್ವರಾಕ್ಷರಗಳ ಜತೆ ‘ಅಂ’ ಸ್ಥಾನ ಪಡೆದರೂ, ಅದು ನಿಜಕ್ಕೂ ಸ್ವರವಲ್ಲ, ವ್ಯಂಜನವೇ. ಸ್ವರಾಧಾರವಿಲ್ಲದೆ ಬರೇ ವ್ಯಂಜನಕ್ಕೆ (ಎಂದರೆ ಅರ್ಧಾಕ್ಷರಕ್ಕೆ) ಇದು ಬರಲಾರದು. ಯಾವುದೇ ಪದವೂ ಅನುಸ್ವಾರದೊಂದಿಗೆ ಆರಂಭವಾಗುವುದೂ ಇಲ್ಲ. ವ್ಯಂಜನವಾಗಿ ಅದು ಸೂಚಿಸುವುದು ಅನುನಾಸಿಕವನ್ನು, ಹಾಗೂ ಅನುನಾಸಿಕವಾಗಿ (ಮೂಗಿನ ಸಹಾಯದಿಂದ ಉಚ್ಚರಿಸುವ ಧ್ವನಿ) ಅದೊಂದು ಪರಿವರ್ತನೀಯ (Variable). ಎಂದರೆ ಅದು ಯಾವ ವರ್ಗದ ನಿಕಟೋತ್ತರ ವ್ಯಂಜನಕ್ಕೆ ಬರುತ್ತದೆಯೋ ಆ ವ್ಯಂಜನದ ಧ್ವನಿಸ್ಥಾನಕ್ಕೆ ಹೊಂದಿಕೊಂಡು ತನ್ನ ಧ್ವನಿರೂಪವನ್ನು ಪಡೆದುಕೊಳ್ಳುವಂಥದು — ‘ಅಂದ’ ಎಂಬಲ್ಲಿ ನಕಾರವಾಗಿ (ಅನ್ದ), ‘ಬಿಂಬ’ ಎಂಬಲ್ಲಿ ಮಕಾರವಾಗಿ (ಬಿಮ್ಬ), ಇತ್ಯಾದಿ. ಎಂದರೆ ಆಯಾ ವರ್ಗದ ಅನುನಾಸಿಕವಾಗಿ. ಬಿಂದು ಒಂದು ಶಾರ್ಟ್ ಹ್ಯಾಂಡ್ ಚಿಹ್ನೆಯಿದ್ದ ಹಾಗೆ!
ಕನ್ನಡದ ಸ್ಫೋಟಗಳು (ಸ್ಪರ್ಶಗಳು, Plosives) ಐದು ವರ್ಗಗಳಲ್ಲಿ ಬರುತ್ತವೆಯಷ್ಟೆ — ಕ ಚ ಟ ತ ಪ ಎಂಬುದಾಗಿ. ಈ ವರ್ಗೀಕರಣವನ್ನು ಧ್ವನಿಸ್ಥಾನದ ಆಧಾರದ ಮೇಲೆ ಮಾಡಲಾಗಿದೆ: ಬಾಯಿಯ ಹಿಂದಿನಿಂದ ಮುಂದಿನ ದಿಕ್ಕಿಗಾಗಿ ಹೇಳುವುದಾದರೆ, ಕಂಠ್ಯ, ತಾಲವ್ಯ, ಮೂರ್ಧನ್ಯ, ದಂತ್ಯ ಮತ್ತು ಓಷ್ಠ್ಯ ಎಂದು ಐದು ವರ್ಗಗಳು. ಇವು ಒಂದೊಂದಕ್ಕೂ ಸಮವಾದ ನಾಸಿಕ ಧ್ವನಿಗಳೂ ವರ್ಗಾಂತ್ಯದಲ್ಲಿ ಬರುತ್ತವೆ. ಈ ಕೆಳಗಿನ ಪಟ್ಟಿಯನ್ನು ನೋಡಿ--ಇವೆಲ್ಲ ನೀವು ನಾನು ಶಾಲೆಯಲ್ಲಿ ಕಲಿತದ್ದೇ:
ಙ ಞ ಣ ನ ಮ ವರ್ಗೀಯ ಅನುನಾಸಿಕ ವ್ಯಂಜನಗಳು — ಅವು ಸ್ಫೋಟಗಳಲ್ಲ. ಅನುಸ್ವಾರದ (ಬಿಂದುವಿನ) ಉಚ್ಚಾರಣೆ ಅದರ ಹತ್ತಿರವಿರುವ ಮುಂದಣ ವರ್ಗೀಯ ವ್ಯಂಜನದ ಅನುನಾಸಿಕವೇ ಆಗಿದೆ ಎನ್ನುವುದು ನಿಯಮ. ಇದನ್ನು ಕೆಳಗಿನ ಉದಾಹರಣೆಗಳಿಂದ ಕಂಡುಕೊಳ್ಳಬಹುದು:
ಅನುಸ್ವಾರವು ಪದಾಂತದಲ್ಲಿ ಬಂದಾಗ ಮಾತ್ರ ಅದು ‘ಮ್’ ಎಂಬ ಉಚ್ಚಾರಣೆಯಿಂದ ಕೂಡಿರುತ್ತದೆ. ಉದಾಹರಣೆಗೆ: ಶಾಕುಂತಲಂ (ಶಾಕುಂತಲಮ್), ಶಾಂತಂ ಪಾಪಂ (ಶಾಂತಮ್ ಪಾಪಮ್), ಸತ್ಯಂ ಶಿವಂ ಸುಂದರಂ (ಸತ್ಯಮ್ ಶಿವಮ್ ಸುಂದರಮ್) ಇತ್ಯಾದಿ. ಆದರೆ ಹೆಸರುಗಳಲ್ಲಿ ಬರುವ ಕೊನೆಯ ಅನುನಾಸಿಕವನ್ನು ಅನುಸ್ವಾರಕ್ಕೆ ಬದಲಾಗಿ ‘ಮ್’ ಎಂದು ಬರೆಯುವುದನ್ನೇ ಈಚೆಗೆ ಹೆಚ್ಚು ಮಂದಿ ಅಪೇಕ್ಷಿಸುತ್ತಾರೆ: ರಾಮ್, ಶ್ಯಾಮ್, ಟಾಮ್ ಮುಂತಾಗಿ. ಅಲ್ಲದೆ ಇಂಗ್ಲಿಷ್ ಮೂಲದ ಪದಗಳನ್ನು ಕನ್ನಡದಲ್ಲಿ ಬರೆಯುವಾಗಲೂ ಪದಾಂತದಲ್ಲಿ ಬಿಂದುವಿಗಿಂತ ‘ಮ್’ ಹೆಚ್ಚು ಜನಪ್ರಿಯ: ಜ್ಯಾಮ್, ಸ್ಲಮ್, ಕ್ರೈಮ್, ಸಿಮ್ ಎಂದಿತ್ಯಾದಿಯಾಗಿ.
ಹೇಗೇ ಬರೆದರೂ ಪದಾಂತದಲ್ಲಿ ಬರುವ ಅನುಸ್ವಾರದ ಉಚ್ಚಾರಣೆ ‘ಮ್’ ಎಂದೇ ಆಗಿರುತ್ತದೆ. ಪದಾಂತದಲ್ಲಿ ಇತರ ಅನುನಾಸಿಕಗಳು ಬರಬಹುದಾದರೂ, ಅವುಗಳನ್ನು ಬಿಂದುವಿನಲ್ಲಿ ಸೂಚಿಸುವುದು ಸಾಧ್ಯವಿಲ್ಲ. ಆದ್ದರಿಂದ ‘ಕಿರಣ್ 'ಎನ್ನುವುದನ್ನು ‘ಕಿರಂ’ ಎಂದು ಬರೆಯುವಂತಿಲ್ಲ. ಅಥವಾ ‘ರಾಂ’ ಎನ್ನುವುದನ್ನು ‘ರಾಮ್’ ಎಂದಲ್ಲದೆ ಬೇರೆ ಯಾವ ರೀತಿಯಿಂದಲೂ ಓದುವ ಹಾಗಿಲ್ಲ. ಇಂಥ ಕಡೆ ಇಂಗ್ಲಿಷಿನಲ್ಲಂತೂ ‘m’ ಸ್ಪಷ್ಟವಾಗಿ ಕಂಡುಬರುತ್ತದೆ. ಹೆಸರುಗಳ ಅಂತ್ಯದಲ್ಲಿ ಇತರ ಪದಾಂತಗಳಲ್ಲಿ ಬಿಂದುವಿಗಿಂತ ‘ಮ್’ ಹೆಚ್ಚು ಆಯ್ಕೆಗೊಳ್ಳುತ್ತಿರುವುದಕ್ಕೆ ಈಗ ಹೆಚ್ಚೆಚ್ಚು ಆಗುತ್ತಿರುವ ಇಂಗ್ಲಿಷ್ ಬಳಕೆಯೂ ಒಂದು ಕಾರಣವಿರಬಹುದು.
ಅದೇ ರೀತಿ, ಅನುನಾಸಿಕಗಳ ದ್ವಿತ್ವವನ್ನು (ನ್ನ, ಮ್ಮ ಮುಂತಾಗಿ) ಸೂಚಿಸಲೂ ಬಿಂದು ಉಪಯೋಗವಾಗುವುದಿಲ್ಲ. ಅರ್ಥಾತ್ ಅನುನಾಸಿಕ ಸವರ್ಣಾಕ್ಷರಗಳು (ಎರಡು ನಕಾರಗಳು, ಮಕಾರಗಳು ಇತ್ಯಾದಿ) ಸಂಯುಕ್ತವಾದಾಗ ಮೊದಲಿನದಕ್ಕೆ ಎರಡನೆಯದನ್ನು ಒತ್ತಕ್ಷರವಾಗಿ ಕೊಡುವುದೇ ವಾಡಿಕೆ: ಅಣ್ಣ, ಅಮ್ಮ, ಅನ್ನ ಮುಂತಾಗಿ; ಅವುಗಳನ್ನು ಅಂಣ, ಅಂಮ, ಅಂನ ಎಂದು ಬರೆಯುವ ವಾಡಿಕೆಯಿಲ್ಲ; ಅಂಥ ರೂಪಗಳು ಕೆಲವರಲ್ಲಿ ಕಂಡುಬಂದರೂ (ಇನ್ನು ಕೆಲವರು ಅಂಣ್ಣ, ಅಂಮ್ಮ ಎಂದು ಕೂಡ ಬರೆಯಬಹುದು!), ಅವು ಹೆಚ್ಚು ಚಾಲ್ತಿಯಲ್ಲಿಲ್ಲ. ಬಹುಶಃ ಹಾಗೆ ಮೊದಲು ಬರೆಯುತ್ತಿದ್ದರೋ ಏನೋ. ಕೆಲವು ಶಿಲಾಲೇಖಗಳಲ್ಲಿ, ಹಳೆಯ ದಸ್ತಾವೇಜುಗಳಲ್ಲಿ ಅಂಥ ರೂಪಗಳನ್ನು ಕಾಣಬಹುದು. ಅವೆಲ್ಲ ಕನ್ನಡ ಬರಹ ಪ್ರಮಾಣಬದ್ಧತೆಗೆ ಒಳಗಾಗುವ ಕಾಲಕ್ಕಿಂತ ಮೊದಲಿನ ರೂಪಗಳು.
ಕಿಟೆಲರು ತಮ್ಮ ಕನ್ನಡ-ಇಂಗ್ಲಿಷ್ ಡಿಕ್ಷನರಿಯಲ್ಲಿ ಒಂದು ಸಮ್ಮಿಶ್ರ ಪದ್ಧತಿಯನ್ನು ಬಳಸುತ್ತಾರೆ: ಙ ಮತ್ತು ಞ ಅನುನಾಸಿಕಗಳಿಗೆ ಸಂಯುಕ್ತಾಕ್ಷರಗಳಲ್ಲಿ ಬಿಂದುವನ್ನೂ, ಉಳಿದ ಣ ನ ಮ ಅನುನಾಸಿಕಗಳಿಗೆ ಮೂಲ ರೂಪಗಳನ್ನೂ ಅವರು ಬಳಸುತ್ತಾರೆ. ಉದಾಹರಣೆಗೆ, ಅವರ ಡಿಕ್ಷನರಿಯಲ್ಲಿ ಕಾಣುವುದು ಅಂಗ, ಮಿಂಚು ಇತ್ಯಾದಿಯಾಗಿ (‘ಅಙ್ಗ’, ‘ಮಿಞ್ಚು’ ಇತ್ಯಾದಿಯಾಗಿ ಅಲ್ಲ); ಹಾಗೆಯೇ ಬಣ್ಡೆ, ಸನ್ತ, ಪೆಮ್ಪು ಇತ್ಯಾದಿಯಾಗಿ (‘ಬಂಡೆ’, ‘ಸಂತ’, ‘ಪೆಂಪು’ ಇತ್ಯಾದಿಯಾಗಿ ಅಲ್ಲ). ಯಾಕೆ ಹೀಗೆ? ಮೂಲ ಙಕಾರ ಮತ್ತು ಞಕಾರಗಳು ಸ್ವತಂತ್ರ ರೂಪಗಳಲ್ಲಿ ಅಪರೂಪವಾಗಿವೆ, ಅಲ್ಲದೆ ಸಂಯುಕ್ತಾಕ್ಷರಗಳಲ್ಲಿ ಅವುಗಳನ್ನು ಮೂಲರೂಪದಲ್ಲಿ ಕೊಡುವುದು ಮುದ್ರಣಕ್ಕೆ ತೊಂದರೆ ಉಂಟುಮಾಡುತ್ತದೆ ಎಂಬ ದೃಷ್ಟಿಯಿಂದ ಅಂಥ ಕಡೆ ಬಿಂದುವನ್ನು ಬಳಸಲಾಗಿದೆ ಎನ್ನುತ್ತಾರೆ ಕಿಟೆಲರು ತಮ್ಮ ಪ್ರಸ್ತಾವನೆಯಲ್ಲಿ. ಇನ್ನುಳಿದ ಣ ನ ಮ ಅನುಸ್ವಾರಗಳು ಕನ್ನಡದಲ್ಲಿ ಸಾಮಾನ್ಯವಾಗಿದ್ದು, ಸಂಯುಕ್ತಾಕ್ಷರಗಳಲ್ಲಿ ಅವುಗಳನ್ನು (ಬಣ್ಡೆ, ಸನ್ತ, ಪೆಮ್ಪು ಎಂದು ಮುಂತಾಗಿ) ಬಳಸುವುದು ಡಿಕ್ಷನರಿಯ ಅಕಾರಾದಿ ಕ್ರಮದ ದೃಷ್ಟಿಯಿಂದ ಹೆಚ್ಚು ಸೂಕ್ತ ಎನ್ನುವುದು ಅವರ ಅಭಿಪ್ರಾಯ. ಮಾತ್ರವಲ್ಲದೆ ಅಂಥ ರೂಪಗಳು ಕನ್ನಡದ ಒತ್ತಕ್ಷರ ಪದ್ಧತಿಗೆ ಹೊಂದಿಕೊಳ್ಳುತ್ತವೆ ಕೂಡ ಎಂದು ಅವುಗಳ ಪರವಾಗಿ ನಾವು ಸೇರಿಸಬಹುದು.
ಬಿಂದುವಿನ ಸಹಾಯವಿಲ್ಲದೆ ಙ ಮತ್ತು ಞ ಅಕ್ಷರಗಳಿಗೆ ಒತ್ತು ಕೊಟ್ಟು ಬರೆಯುವುದು ಸಂಸ್ಕೃತದಲ್ಲಿ ಕೂಡ ಕಷ್ಟವೇ; ಬಿಂದು ಉಪಯೋಗಿಸಿದರೆ ಬರೆಯುವುದು (ಮುದ್ರಿಸುವುದು) ಆ ಭಾಷೆಯಲ್ಲಿಯೂ ಸುಲಭವಾಗುತ್ತದೆ. ಮೇಲೆ ಉದ್ಧರಿಸಿದ ಆಪ್ಟೆಯವರ ನಿಘಂಟುವಿನಲ್ಲಂತೂ ಎಲ್ಲ ಕಡೆ ಬಿಂದುವನ್ನೇ ಉಪಯೋಗಿಸಲಾಗಿದೆ. ಕನ್ನಡದಲ್ಲಿ ಸಂಸ್ಕೃತದಲ್ಲಿರುವಂಥ ಸಮಸ್ಯೆ ಇಲ್ಲದಿದ್ದರೂ ಸಮಸ್ಯೆಯಂತೂ ಇದೆ. ಆದರೆ ಕನ್ನಡದಲ್ಲಿ ಕಿಟೆಲರ ಮಾದರಿಯನ್ನು (ವ್ಯಂಜನಕ್ಕೆ ಙ್, ಞ್ ಅನುನಾಸಿಕಗಳು ಪೂರ್ವವಾಗಿ ಬಂದಲ್ಲಿ ಬಿಂದುವನ್ನೂ ಉಳಿದ ಣ್, ನ್, ಮ್ ಅನುನಾಸಿಕಗಳು ಬಂದ ಸಂದರ್ಭದಲ್ಲಿ ಮೂಲ ರೂಪಗಳನ್ನೂ ಕೊಡುವ ಮಿಶ್ರಪದ್ಧತಿಯನ್ನು) ಅವರ ನಂತರದ ಯಾರೂ ಅನುಸರಿಸಿದಂತೆ ತೋರುವುದಿಲ್ಲ. ಈಚಿನ ಎಲ್ಲ ಕನ್ನಡ ನಿಘಂಟುಗಳಲ್ಲೂ ಬಿಂದುವೇ ಸರ್ವತ್ರ ಬಳಕೆಯಾದಂತೆ ಅನಿಸುತ್ತದೆ. ಬಿಂದು ನೀಡುವ ಸೌಲಭ್ಯಗಳೇ ಇದಕ್ಕೆ ಕಾರಣ.
ಅನುಸ್ವಾರ (ಬಿಂದು) ಕನ್ನಡದಲ್ಲಿ ಒಂದು ಜನಪ್ರಿಯವಾದ ಚಿಹ್ನೆ ಎನ್ನುವುದರಲ್ಲಿ ಸಂದೇಹವಿಲ್ಲ. ಅದನ್ನು ಬಿಟ್ಟು ಬರೆಯಬೇಕೆಂದರೆ ಕನ್ನಡಿಗರು ತಬ್ಬಿಬ್ಬಾಗಬಹುದು. ಬಿಟ್ಟು ಬರೆಯುವ ಅಗತ್ಯವೂ ಇಲ್ಲ. ಬಿಡಬೇಕೆನ್ನುವುದಕ್ಕೆ ಇರುವ ಕಾರಣಗಳಲ್ಲಿ ಒಂದು ಲಿಪಿಗಳ ಸಂಖ್ಯೆಯಲ್ಲಿ ಒಂದು ಕಡಿಮೆಯಾಗುತ್ತದೆ ಎನ್ನುವುದು, ಅದು (ಬಿಂದು) ಪಾರದರ್ಶಕವಾಗಿಲ್ಲ ಎನ್ನುವುದು ಇನ್ನೊಂದು — ಯಾಕೆಂದರೆ ಅದೊಂದು ಪರಿವರ್ತನೀಯ (Variable). ಬಿಂದು ಕನ್ನಡದ ಒತ್ತಕ್ಷರ ಪದ್ಧತಿಯನ್ನು ಅನುಸರಿಸುವುದಿಲ್ಲ ಎನ್ನುವುದು ಮತ್ತೊಂದು ಕಾರಣ. (ಅಲ್ಲದೆ ಬಿಂದು ಸಂಸ್ಕೃತದಿಂದ ಬಂದುದು ಎಂಬ ವಿರೋಧ ಕೆಲವರಿಗೆ ಇರಬಹುದು; ಆದರೆ ಅದು ಭಾಷೆಯ ಕುರಿತು ಸರಿಯಾದ ಸಮೀಪನವಲ್ಲ. ಜನಸಾಮಾನ್ಯರಿಗೆ ಅದು ಎಲ್ಲಿಂದ ಬಂತೆನ್ನುವುದು ಗೊತ್ತೂ ಇಲ್ಲ, ಗೊತ್ತಿದ್ದರೂ ಅವರಿಗದೊಂದು ಸಮಸ್ಯೆ ಎನಿಸಲಾರದು.) ಆದರೆ ಇವು ಯಾವುವೂ ಪ್ರಬಲವಾದ ಕಾರಣಗಳಾಗುವುದಿಲ್ಲ. ಬಿಂದು ಅತ್ಯಂತ ಸರಳವಾದ ಅಕ್ಷರ, ಪುಟ್ಟ ಮಗು ಕೂಡ ಕಲಿತುಕೊಳ್ಳಬಹುದಾದಂಥದು. ಆದ್ದರಿಂದ ಅಕ್ಷರಮಾಲೆಗೆ ಅದೊಂದು ಹೊರೆಯಾಗುವುದಿಲ್ಲ. ವಾಸ್ತವದಲ್ಲಿ ಒಟ್ಟು ‘ಭಾರ’ವನ್ನು ಅದು ಕಡಿಮೆ ಮಾಡುತ್ತದೆ. ಇನ್ನು ಪರಿವರ್ತಿತ ಎನ್ನುವ ವಿಚಾರ. ಬಿಂದು ತಾನು ಯಾವ ವರ್ಗದ ಅನುನಾಸಿಕ ಎಂದು ತೋರಿಸಿಕೊಳ್ಳುವುದಿಲ್ಲ, ನಿಜ; ಆದರೆ ಅದರ ಮುಂದಿನ ವ್ಯಂಜನದಿಂದ ಅದು ಗೊತ್ತಾಗುವುದಿಲ್ಲವೇ? ಈ ನಿಯಮ ಯಾದೃಚ್ಛಿಕವೇನೂ (Arbitrary) ಅಲ್ಲ. ಅದರಲ್ಲಿ ಒಂದು ಸಹಜತೆಯಿದೆ. ‘ಅಂಕೆ’ ಎನ್ನುವಲ್ಲಿನ ಬಿಂದು ಕವರ್ಗದ ಅನುನಾಸಿಕ; ‘ಅಂಚೆ’ ಎಂಬಲ್ಲಿ ಅದು ಚವರ್ಗದ ಅನುನಾಸಿಕವಾಗಿದೆ, ಇತ್ಯಾದಿ. ಇದು ಅಂಗಮೂಲದ ಅನುಸಂಧಾನವಾದ್ದರಿಂದ ಒಂದು ಸಮಸ್ಯೆ ಎನಿಸುವುದಿಲ್ಲ, ಸ್ವಾಭಾವಿಕವಾಗಿರುತ್ತದೆ. ಅನುನಾಸಿಕ ಮತ್ತು ಮುಂದಿನ ವ್ಯಂಜನಗಳಲ್ಲಿ ಈ ಅನುಸಂಧಾನ ಇಲ್ಲದಿರುವಾಗ ಒಂದೋ ಬಿಂದು ಬರುವುದಿಲ್ಲ, ಅಥವಾ ಅದು ಮುಂದಿನ ವ್ಯಂಜನಕ್ಕೆ ಹೊಂದಿಕೊಳ್ಳುತ್ತದೆ.
ಇತರ ಕೆಲವು ಭಾಷೆಗಳಲ್ಲಿ ಕೂಡ ಇಂಥ ಅಕ್ಷರವ್ಯವಸ್ಥೆಯನ್ನು ನಾವು ಕಾಣುತ್ತೇವೆ. ಉದಾಹರಣೆಗೆ, ಇಂಗ್ಲಿಷಿನ sink, inch, send, snow ಎಂಬಲ್ಲಿ ನಕಾರದ ಉಚ್ಚಾರಣೆ ಬೇರೆ ಬೇರೆ ಇದೆ — ಅದರ ನಿಕಟೋತ್ತರದ ಧ್ವನಿಯನ್ನು ಹೊಂದಿಕೊಂಡು. ಎಂದರೆ ನಕಾರ (letter ‘n’) ಇಲ್ಲೆಲ್ಲಾ ಅನುಸ್ವಾರದಂತೆ ವರ್ತಿಸುತ್ತದೆ ಎಂದಾಯಿತು. ಈ ತರಹ ಅಕ್ಕಪಕ್ಕದ ಹೊಂದಾಣಿಕೆ ಧ್ವನಿಮಟ್ಟದಲ್ಲಿ ಸಾಮಾನ್ಯ. ಬಿಂದು ಕನ್ನಡದ ಒತ್ತಕ್ಷರ ಪದ್ಧತಿಯಿಂದ ಪ್ರತ್ಯೇಕವಾಗಿದೆ ಎನ್ನುವುದೇನೋ ನಿಜ; ಆದರೆ ಬಿಂದು ಅನುಸರಿಸುವ ವಿಧಾನ ಅತ್ಯಂತ ಸರಳವಾದುದರಿಂದ ಅದೊಂದು ಸೌಲಭ್ಯವೇ ಸರಿ. ಸಂಸ್ಕೃತದಲ್ಲೂ ಅನುಸ್ವಾರ ಲಿಪಿಕ್ರಮದ ಒತ್ತಕ್ಷರ ಪದ್ಧತಿಯೊಳಗೆ ಬರುವುದಿಲ್ಲ, ಆದರೆ ಅದು ಒದಗಿಸುವ ಸರಳತೆಯ ಕುರಿತು ಈಗಾಗಲೇ ಪ್ರಸ್ತಾಪಿಸಿದೆವು.
ಇನ್ನು ಬಿಂದುವಿನ ಈ ತರದ ಭಾಗಶಃ ಅನಿರ್ದಿಷ್ಟತೆ ಕೂಡ ಕೆಲವು ಕಡೆಗಳಲ್ಲಿ ಒಂದು ಅನುಕೂಲವೇ ಆಗಿದೆ. ಇಷ್ಟರ ವರೆಗೆ ವರ್ಗೀಯ ವ್ಯಂಜನಗಳಲ್ಲಿ ಅದರ ಪಾಂತರಗಳನ್ನು ನೋಡಿದೆವು. ಆದರೆ ಬಿಂದು ಕೆಲವೊಮ್ಮೆ ಅವರ್ಗೀಯಗಳ ಜತೆಯೂ ಬರಬಹುದು. ಕೆಳಗಿನ ಉದಾಹರಣೆಗಳನ್ನು ಗಮನಿಸಿ:
ಸಂಯಮ, ಸಂಯುಕ್ತ, ಸಂಯೋಜನೆ
ಸಂವಾದ, ಸಂವತ್ಸರ, ಸಂವಿಧಾನ
ಯಕಾರ ಮತ್ತು ವಕಾರಗಳು ವರ್ಗೀಯ ವ್ಯಂಜನಗಳಲ್ಲ; ಅವು ಅರ್ಧಸ್ವರಗಳು — ಎಂದರೆ ವ್ಯಂಜನಗಳಾಗಿದ್ದೂ ಸ್ವರದ ಸ್ವಭಾವ ಹೊಂದಿರುವ ಧ್ವನಿಗಳು. ಆದ್ದರಿಂದ ವರ್ಗೀಯ ಅನುನಾಸಿಕಗಳಾದ ಙಞಣನಮಗಳಲ್ಲಿ ಯಾವುದೂ ಅವಕ್ಕೆ ಸೇರುವುದಿಲ್ಲ. ಈ ಉದಾಹರಣೆಗಳಲ್ಲಿ ‘ಸಂ’ ಎನ್ನುವುದು ಸಂಸ್ಕೃತದ ಉಪಸರ್ಗ ‘ಸಮ್’ ಎನ್ನುವುದೇನೋ ನಿಜ. ಪ್ರತ್ಯೇಕವಾಗಿ ಇದರ ಉಚ್ಚಾರಣೆ ‘ಸಮ್’ ಎಂದೇ. ಆದರೆ ‘ಸಂಗೀತ’ (ಙ), ‘ಸಂಚಲನ’ (ಞ), ‘ಸಂತೋಷ’ (ನ), ‘ಸಂಭ್ರಮ’ (ಮ) ಎಂಬಲ್ಲಿ ‘ಸಮ್ನ’ ಮಕಾರ ನಿಯಮಿತವಾಗಿ ಬೇರೆ ಬೇರೆ ರೂಪಗಳನ್ನು ಪಡೆಯುತ್ತದೆ. ಇದೊಂದು ಸಂಧಿವಿಚಾರ. ಇವೆಲ್ಲವೂ ವರ್ಗೀಯ ವ್ಯಂಜನಗಳು. ಆದರೆ ಅವರ್ಗೀಯಗಳಾದ ಯಕಾರ ಮತ್ತು ವಕಾರಗಳ ಕತೆಯೇನು? ಇವುಗಳಲ್ಲಿನ ಅನುನಾಸಿಕಗಳು ‘ಸ್ಪರ್ಶ’ವಿಲ್ಲದೆ ಉತ್ಪತ್ತಿಯಾಗುವಂಥವು, ಆದ್ದರಿಂದ ಇವುಗಳನ್ನು ‘ಸಮ್ಯಮ’, ‘ಸಮ್ವಾದ’ ಎಂಬಿತ್ಯಾದಿಯಾಗಿ ಉಚ್ಚರಿಸುವುದಾಗಲಿ, ಬರೆಯುವುದಾಗಲಿ ಸರಿಯೆನಿಸುವುದಿಲ್ಲ. (‘ಕಂಸ’, ‘ಸಂಶಯ’, ‘ಸಿಂಹ’ ಎಂಬ ಕಡೆ ‘ಕಮ್ಸ’, ‘ಸಮ್ಶಯ’, ‘ಸಿಮ್ಹ’ ಎಂದರೂ ನಡೆಯುತ್ತದೆ.) ಬಿಂದು ಮುಂದಿನ ಧ್ವನಿಸ್ಥಾನಕ್ಕೆ ಹೊಂದಿಕೊಳ್ಳುವುದರಿಂದ, ‘ಸಂಯಮ’, ‘ಸಂವಾದ’ ಎಂಬ ಕಡೆ ಅದು ಸಹಜ ಉಚ್ಚಾರಣೆಯನ್ನು ಪಡೆದುಕೊಳ್ಳುತ್ತದೆ, ಎಂದರೆ ತಾನು ಅವಲಂಬಿತವಾಗಿರುವ ನಿಕಟಪೂರ್ವ ಸ್ವರಕ್ಕೆ ಹತ್ತಿಕೊಂಡು ಮುಂದಿನ ಅವರ್ಗೀಯಕ್ಕೆ ದಾಟುತ್ತದೆ. ಇಲ್ಲಿ ಸ್ವರವೇ ಅನುನಾಸಿಕತ್ವವನ್ನು ಪಡೆದುಕೊಳ್ಳುತ್ತದೆ. ಇದುವೇ ಸಹಜ ಪ್ರಕ್ರಿಯೆ. ಅದೇ ರೀತಿ, ‘ಸಿಂಹಳ’, ‘ಸಂಹಾರ’ ಎಂಬ ಪದಗಳನ್ನೂ ‘ಸಿಮ್ಹಳ’, ‘ಸಮ್ಹಾರ’ ಎಂದು ಉಚ್ಚರಿಸದೆ ಅನುಸ್ವಾರವನ್ನು ಹಕಾರಕ್ಕೆ ಹೊಂದಿಸಿಕೊಂಡೇ (ಎಂದರೆ, ತುಟಿಗಳನ್ನು ಜೋಡಿಸದೆ, ಬಹುಶಃ ಕೆಳತುಟಿಯನ್ನು ಮಾತ್ರ ಮೇಲೆ ತಂದು ದಂತೋಷ್ಠ್ಯವೆಂಬಂತೆ) ಹೆಚ್ಚಿನವರೂ ಉಚ್ಚರಿಸುತ್ತಾರೆ ಎಂದು ನನ್ನ ಊಹೆ. ಇಲ್ಲಿಯೂ ಹಿಂದಣ ಸ್ವರ ಅನುನಾಸಿಕೀಕರಣಕ್ಕೆ (Nasalization) ಒಳಗಾಗುತ್ತದೆ. ಬಿಂದುವನ್ನೇ ತೆಗೆದು ಹಾಕಿದರೆ ಈ ಅನುಕೂಲತೆಯಿಲ್ಲ.
ಅಲ್ಲದೆ ಒತ್ತಕ್ಷರಗಳಿಗೆ ಸಂಬಂಧಿಸಿದಂತೆ ಬಿಂದು ಒದಗಿಸುವ ಕಾರ್ಯಲಾಭದ ಕುರಿತು ಯೋಚಿಸಿ ನೋಡಿ. ಕನ್ನಡದಲ್ಲಿ ಒತ್ತಕ್ಷರಗಳು ಒಂದರ ಕೆಳಗೆ ಒಂದರಂತೆ ಬರುತ್ತವೆಯಷ್ಟೆ? ಈ ಮೆಟ್ಟಲುಗಳನ್ನು ಬಿಂದು ಒಂದರಷ್ಟು ಕಡಿಮೆ ಮಾಡುತ್ತದೆ ‘ಅಙ್ಕೆ’ಯನ್ನು ‘ಅಂಕೆ’ಯೆಂದು ಬರೆದಾಗ ಕೆಳಗಿನ ಒತ್ತಕ್ಷರ ಹೊರಟುಹೋಗುತ್ತದೆ. ‘ಸಞ್ಜೆ’ಯನ್ನು ‘ಸಂಜೆ’ಯೆಂದು ಬರೆಯುವುದರಿಂದ ಇಂಥದೇ ಲಾಭವಾಗುತ್ತದೆ. ಇನ್ನು ಹೆಚ್ಚೆಚ್ಚು ವ್ಯಂಜನಗಳು ಸಂಯುಕ್ತವಾದಷ್ಟೂ ನಾವು ಬಿಂದುವಿನ ಅನುಕೂಲತೆಯನ್ನು ಇನ್ನಷ್ಟು ಗುರುತಿಸುತ್ತೇವೆ. ಉದಾಹರಣೆಗೆ, ‘ಆಂಧ್ರ’, ‘ಅಂಘ್ರಿ’, ‘ಸಂಖ್ಯೆ’, ‘ಸಂಭ್ರಮ’, ‘ಝಂಝಾವಾತ’ ಎಂದು ಬರೆಯುವುದು ‘ಆನ್ಧ್ರ’. ‘ಅಙ್ಘ್ರಿ’, ‘ಸಙ್ಖ್ಯೆ’, ‘ಸಮ್ಭ್ರಮ’, ‘ಝಞ್ಝಾವಾತ’ ಎಂದು ಬರೆಯುವುದಕ್ಕಿಂತ ಸುಲಭವಲ್ಲವೇ? ‘ಸಂಸ್ಕಾರ’ (‘ಸಮ್ಸ್ಕಾರ’), ‘ಸಂಸ್ಕೃತಿ’ (‘ಸಮ್ಸ್ಕೃತಿ’), ‘ಸ್ವಾತಂತ್ರ್ಯ’ (‘ಸ್ವಾತನ್ತ್ರ್ಯ’), ‘ಸಂತೃಪ್ತಿ’ (‘ಸನ್ತೃಪ್ತಿ’), ‘ದಂಷ್ಟ್ರ’ (‘ದಮ್ಷ್ಟ್ರ’), ‘ಸಂಜ್ಞೆ’ (‘ಸಞ್ಜ್ಞೆ’) ಎಂಬಂಥ ಸಂಕೀರ್ಣ ಸಂಯುಕ್ತಪದಗಳ ಬರೆಯುವಿಕೆಯನ್ನೂ ಬಿಂದು ಸರಳಗೊಳಿಸುತ್ತದೆ. ಬಿಂದುವನ್ನು ಕೈಬಿಟ್ಟರೆ ಇಂಥ ಅನುಕೂಲತೆ ಇಲ್ಲದಾಗುತ್ತದೆ, ಅಲ್ಲದೆ ಸಂಕೀರ್ಣ ಪದಗಳನ್ನೇ ಕೈಬಿಡುವ ಮನೋಭಾವ ಬಂದುಬಿಡುತ್ತದೆ. ಇದರಿಂದ ಭಾಷೆ ಸಂಕುಚಿತವಾಗುತ್ತದೆ.
(‘ಸಂಜ್ಞೆ’ಯ ನಿಜವಾದ ಉಚ್ಚಾರದ ಬಗ್ಗೆ ನನಗೆ ನನ್ನದೇ ಅನುಮಾನಗಳಿವೆ: ಇದು ‘ಸಞ್ಜ್ಞೆ’ ಎಂದಿರದೆ ‘ಸಮ್ಜ್ಞೆ’ ಎಂದಿರಬಹುದು; ಕಾರಣ ಎರಡು ಞಕಾರಗಳು ಜಕಾರದ ಆಚೀಚೆ ಬರುವುದರಿಂದ ಉಚ್ಚಾರಣೆಗೆ ಕಷ್ಟವಾಗುತ್ತದೆ; ಆದ್ದರಿಂದ ಅನುಸ್ವಾರದ ಮಕಾರ — ‘ಸಮ್’ — ಸಂಧಿಯಲ್ಲಿ ಞಕಾರವಾಗದೆ ಮಕಾರವಾಗಿಯೇ ಉಳಿಯುತ್ತದೆ. ಇದು ‘ಸಂಜ್ಞೆ’ಯ ಸಹಜ ಉಚ್ಚಾರ ಅನಿಸುತ್ತದೆ. ಬಿಂದು ಇದನ್ನು ನಿರ್ದೇಶಿಸುವುದಿಲ್ಲ, ಆದರೆ ಈ ಸಹಜೋಚ್ಚಾರಕ್ಕೆ ಎಡೆಮಾಡಿಕೊಡುತ್ತದೆ.)
ಅಲ್ಲದೆ, ಯಾವುದೇ ಕಾರಣಕ್ಕೆ ‘ಅನ್ದ’, ‘ಸನ್ತ’, ‘ಬಿಮ್ಬ’ ಮುಂತಾಗಿ ಬಿಂದುರಹಿತವಾಗಿ ಬರೆಯಬೇಕೆಂದಿದ್ದರೆ ಆ ಆಯ್ಕೆ ನಮಗೆ ಯಾವತ್ತೂ ಇದೆ; ಆದರೆ ಬಿಂದುವನ್ನೇ ಇಲ್ಲದೆಮಾಡಿದರೆ, ‘ಅಂದ’, ‘ಸಂತ’, ‘ಬಿಂಬ’ ಮುಂತಾಗಿ ಬರೆಯುವುದು ಅಸಾಧ್ಯವಾಗುತ್ತದೆ.
ಲಿಖಿತ ದ್ರಾವಿಡ ಭಾಷೆಗಳಲ್ಲಿ ಕನ್ನಡದಲ್ಲಲ್ಲದೆ ತೆಲುಗು ಮತ್ತು ಮಲೆಯಾಳದಲ್ಲೂ ಬಿಂದು ಬಳಕೆಯಲ್ಲಿದೆ, ತಮಿಳಿನಲ್ಲಿ ಮಾತ್ರವೇ ಇಲ್ಲ.
ಇದನ್ನೂ ಓದಿ: ನೀವು ಬಿಟ್ಟು ಬಂದದ್ದಾದರೂ ಏನು, ಒಂದು ಕಥೆಯ ಭಾರವನ್ನೇ?