ಪ್ರಸಿದ್ಧ ಇಟ್ಯಾಲಿಯನ್ ಬರಹಗಾರ ಈಟಾಲೊ ಕಾಲ್ವೀನೊ (Italo Calvino, 15 October 1923 – 19 September 1985) ಅವರ Numbers in the Dark ಕಥಾಸಂಕಲನದ ಒಂದಷ್ಟು ನೀತಿಕಥೆಗಳನ್ನು (fables) ಸಂಕೇತ ಪಾಟೀಲ ಅನುವಾದಿಸಿ ಅವರ ಒಟ್ಟಾರೆ ಸಾಹಿತ್ಯದ ಆಶಯ ಹಾಗೂ ಕಥೆಗಳಿಗೆ ಪೂರಕವಾದ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

1985-86ರ ಶೈಕ್ಷಣಿಕ ವರ್ಷದ ಶರತ್ಕಾಲದ ಅವಧಿಯಲ್ಲಿ (Fall Semester) ಇಟ್ಯಾಲಿಯನ್ ಬರಹಗಾರ ಈಟಾಲೊ ಕಾಲ್ವೀನೊ (Italo Calvino) ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಒಂದು ಉಪನ್ಯಾಸ ಸರಣಿಯನ್ನು ಕೊಡಲು ಒಪ್ಪಿಕೊಂಡಿದ್ದರು. ಈ ಸರಣಿಗೆ ಅವರು ಕೊಟ್ಟಿದ್ದ ಹೆಸರು: Six Memos for the Next Millennium.
ಸಾಹಿತ್ಯದ ಭವಿಷ್ಯದ ಬಗ್ಗೆ ನನ್ನ ನಂಬಿಕೆಯು, ಅದರದೇ ವಿಶಿಷ್ಟ ಧಾರಣಾಶಕ್ತಿಯ ದೆಸೆಯಿಂದ ಸಾಹಿತ್ಯ ಮಾತ್ರ ಕೊಡಬಲ್ಲಂಥ ಕೊಡುಗೆಗಳಿವೆ ಎಂಬ ಅರಿವನ್ನು ಆಧರಿಸಿದೆ. ಹೀಗಾಗಿ ನನ್ನ ಈ ಉಪನ್ಯಾಸಗಳನ್ನು ನನ್ನ ಹೃದಯಕ್ಕೆ ಹತ್ತಿರವಾಗಿರುವ ಸಾಹಿತ್ಯದ ಕೆಲವು ಮೌಲ್ಯಗಳು ಅಥವಾ ಗುಣಗಳು, ಮತ್ತು ವಿಲಕ್ಷಣತೆಗಳಿಗೆ ಮೀಸಲಾಗಿಡಲು ಬಯಸುತ್ತೇನೆ. ಅವಕ್ಕೆ ಹೊಸ ಸಹಸ್ರಮಾನದ ಕಾಣ್ಕೆ ದಕ್ಕುವಂತೆ ನೆಲೆಗೊಳ್ಳಿಸುವ ಪ್ರಯತ್ನವೂ ಇದಾಗಿದೆ.
ಆ ವರ್ಷದ ಬೇಸಿಗೆಯಲ್ಲಿ ಈ ಉಪನ್ಯಾಸಗಳ ತಯಾರಿಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದ ಕಾಲ್ವೀನೊ ಸೆಪ್ಟೆಂಬರ್ನಲ್ಲಿ ಇನ್ನೇನು ಅಮೆರಿಕಕ್ಕೆ ಹೊರಡಬೇಕೆನ್ನುವಷ್ಟರಲ್ಲಿ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಬೇಕಾಯಿತು. ಮುಂದೆ ಕೆಲವೇ ದಿನಗಳಲ್ಲಿ ತೀರಿಕೊಂಡರು. ಸಾಯುವುದಕ್ಕೆ ಮೊದಲು ಆರರಲ್ಲಿ ಐದು ಉಪನ್ಯಾಸಗಳ ಕರಡನ್ನು ಅವರು ಬರೆದಿಟ್ಟಿದ್ದರು. ಅವರು ಚರ್ಚಿಸಬಯಸಿದ್ದ ಸಾಹಿತ್ಯದ ಮೌಲ್ಯಗಳು ಅಥವಾ ವಿಲಕ್ಷಣತೆಗಳು ಇವು: ಲಘುತ್ವ/ಲಘಿಮಾ (lightness), ತ್ವರಿತತೆ (quickness), ನಿಖರತೆ (exactitude), ದೃಗ್ಗೋಚರತೆ (visibility), multitude (ಬಾಹುಳ್ಯ). ಅವರು ಯೋಜನೆ ಹಾಕಿಕೊಂಡಿದ್ದ ಆದರೆ ಬರೆಯದಿದ್ದ ಆರನೆಯದು ಸುಸಂಗತತೆ (consistency), ಎಂದು ಅವರ ಹೆಂಡತಿ ಎಸ್ಟರ್—1988ರಲ್ಲಿ ಇವು ಪುಸ್ತಕರೂಪದಲ್ಲಿ ಪ್ರಕಟವಾದಾಗ ಅದರ ಪ್ರಸ್ತಾವನೆಯಲ್ಲಿ—ಹೇಳುತ್ತಾರೆ.
ಮೊದಲನೆಯ ಉಪನ್ಯಾಸದಲ್ಲಿ ಲಘಿಮಾ ಅಥವಾ ಹಗುರವನ್ನು ಭಾರದ ಎದುರಿಗಿಟ್ಟು, ಹಗುರದ ಪರವಾಗಿ ನಿಲ್ಲುತ್ತಾರೆ.
ನಾಲ್ಕು ದಶಕಗಳ ಕಾಲ ಫಿಕ್ಷನ್ ಬರೆದ ನಂತರ, ಅನೇಕ ಮಾರ್ಗಗಳನ್ನು ಅನ್ವೇಷಿಸಿ ಮತ್ತು ವಿವಿಧ ಪ್ರಯೋಗಗಳನ್ನು ಕೈಗೊಂಡಾದ ಮೇಲೆ, ನನ್ನ ಬರವಣಿಗೆಯ ಒಟ್ಟಾರೆ ವ್ಯಾಖ್ಯಾನವನ್ನು ಅರಸುವ ಗಳಿಗೆ ಬಂದಿದೆ. ನಾನು ಸೂಚಿಸಬಯಸುವುದು ಇದು: ನಾನು ಕಂಡುಕೊಂಡ ವಿಧಾನವು ಹೆಚ್ಚಾಗಿ ಭಾರವನ್ನು ಕಡಿಮೆ ಮಾಡುವುದನ್ನು ಒಳಗೊಂಡಿದೆ. ನಾನು ಮನುಷ್ಯಾಕೃತಿಗಳಿಂದ, ಆಕಾಶಕಾಯಗಳಿಂದ, ನಗರಗಳಿಂದ ಭಾರವನ್ನು ತೆಗೆಯಲು ಪ್ರಯತ್ನಿಸಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ಕತೆಯ ಸಂರಚನೆಯಿಂದ ಮತ್ತು ಭಾಷೆಯಿಂದ ಭಾರವನ್ನು ತೆಗೆದುಹಾಕಲು ಪ್ರಯತ್ನಿಸಿದ್ದೇನೆ.
ಕಾಲ್ವೀನೊರ ಕತೆ, ಕಾದಂಬರಿ, ಪ್ರಬಂಧ, ಮತ್ತಿತರ ಸಾಹಿತ್ಯಿಕ ಪ್ರಯೋಗಗಳನ್ನು ಓದುತ್ತ ಹೋದಂತೆ ಅವರು ಹೇಳುವ ಹಗುರದ ಅನುಭವ ನಮಗಾಗುತ್ತದೆ. ರಚನೆಯಲ್ಲಿ ಹಗುರವಾದ ಆದರೆ ಫಲಿತಾಂಶದಲ್ಲಿ ವಿಪುಲವಾದ ಕೆಲವು ಕತೆಗಳು ಕೆಳಗಿವೆ.
ಟೆ-ರೀ-ಸಾ…
(The Man Who Shouted Teresa)
ಫುಟ್ಪಾತಿನಿಂದ ಇಳಿದು ಮೇಲೆ ನೋಡುತ್ತಲೇ ನಾಕು ಹೆಜ್ಜೆ ಹಿಂದೆ ಬಂದೆ. ನಡುಬೀದಿಯಲ್ಲಿ ನಿಂತು, ಕೈಗಳೆರಡನ್ನೂ ಬಾಯಿಯ ಸುತ್ತ ಮೆಗಾಫ಼ೋನಿನ ಹಾಗೆ ಅಗಲಿಸಿ, ಕಟ್ಟಡದ ಮೇಲ್ಮಹಡಿಗಳನ್ನುದ್ದೇಶಿಸಿ ಜೋರಾಗಿ “ಟೆರೀಸಾ,” ಎಂದು ಕಿರುಚಿದೆ.
ನನ್ನ ನೆರಳು ಚಂದ್ರನಿಗೆ ಹೆದರಿ ಗಬಕ್ಕನೆ ನನ್ನ ಕಾಲಬುಡದಲ್ಲಿ ಕವುಚಿಕೊಂಡಿತು.
ಇನ್ನೊಮ್ಮೆ, “ಟೆರೀಸಾ!” ಎಂದು ಕೂಗುವಾಗ ಯಾರೋ ಒಬ್ಬ ಅತ್ತಕಡೆ ಬಂದ. “ನೀನು ಇನ್ನೂ ಜೋರಾಗಿ ಕೂಗದಿದ್ದರೆ ಅವಳಿಗೆ ಕೇಳಿಸೋಲ್ಲ. ಒಂದು ಕೆಲ್ಸಾ ಮಾಡೋಣ. ಇಬ್ಬರೂ ಸೇರಿ ಕೂಗೋಣ. ಸರಿ, ಮೂರರ ತನಕ ಎಣಿಸೋಣ. ‘ಮೂರು’ ಅಂದ ತಕ್ಷಣ ಇಬ್ಬ್ರೂ ಸೇರಿ ಕೂಗೋಣ.” ಅವನು ಎಣಿಸಿದ, “ಒಂದು ಎರಡು ಮೂರು.” ಇಬ್ಬರೂ ಗಂಟಲು ಬಿಚ್ಚಿ ಕಿರುಚಿದೆವು, “ಟೆ-ರ್ರೀ-ಸಾ…!”
ಥೇಟರಿನಿಂದಲೋ ಕೆಫ಼ೆಯಿಂದಲೋ ವಾಪಾಸು ಬರುತ್ತಿದ್ದ ಗೆಳೆಯರ ಗುಂಪೊಂದು ನಾವು ಯಾರನ್ನೋ ಕರೆಯುತ್ತಿದ್ದುದನ್ನು ನೋಡಿತು. “ನಾವೂ ನಿಮ್ಮ ಜೊತೆ ಸೇರ್ಕೊಂಡು ಕೂಗ್ತೀವಿ… ಬನ್ರೋ” ಎನ್ನುತ್ತ ನಡುಬೀದಿಯಲ್ಲಿ ನಿಂತಿದ್ದ ನಮ್ಮನ್ನು ಬಂದು ಸೇರಿಕೊಂಡರು. ಮತ್ತೆ ಮೊದಲು ಬಂದಿದ್ದವ ಮೂರರ ತನಕ ಎಣಿಸಿದ. ಎಲ್ಲರೂ ಏಕಕಂಠದಿಂದ ಒದರಿದೆವು, “ಟೇ-ರ್ರೀ-ಸ್ಸ್ಸಾ!”
ಮತ್ತ್ಯಾರೋ ಬಂದು ನಮ್ಮನ್ನು ಸೇರಿಕೊಂಡರು; ಕಾಲುಗಂಟೆಯ ನಂತರ ಒಂದು ದೊಡ್ಡ ಗುಂಪೇ ಅಲ್ಲಿ ನೆರೆದಿತ್ತು. ಸುಮಾರು ಇಪ್ಪತ್ತು ಜನ ಆಗಿರಬಹುದು. ಆವಾಗವಾಗ ಹೊಸಬರು ಬಂದು ಕೂಡಿಕೊಳ್ಳುತ್ತಿದ್ದರು.
ಎಲ್ಲರನ್ನೂ ಸಂಘಟಿಸಿ, ಏಕಕಂಠದಿಂದ ಒಂದು ಒಳ್ಳೆಯ ಕರೆ ಕೊಡುವುದೆಂದರೆ ಸುಲಭದ ಮಾತಾಗಿರಲಿಲ್ಲ. ಮೂರು ಎಣಿಸುವ ಮೊದಲು ಶುರು ಮಾಡುವವರೋ ಎಲ್ಲರೂ ಮುಗಿಸಿದ ಮೇಲೂ ಮುಂದುವರಿಸುವವರೋ ಇದ್ದೇ ಇರುತ್ತಿದ್ದರು. ಆದರೂ ಈ ವ್ಯತ್ಯಾಸಗಳನ್ನೆಲ್ಲ ನೀಗಿಸಿಕೊಂಡು ಕೆಲಸವನ್ನು ಚೆನ್ನಾಗಿ ನಿಭಾಯಿಸತೊಡಗಿದೆವು. ನಾವು ನಮ್ಮ ಕೂಗು ಹೀಗಿರಬೇಕೆಂದು ನಿಶ್ಚಯಿಸಿದೆವು: ‘ಟೆ’ಯನ್ನು ಕೆಳದನಿಯಲ್ಲಿ ದೀರ್ಘವಾಗಿ ಅನ್ನತಕ್ಕದ್ದು; ‘ರೀ’ ತಾರಸ್ವರ ಹಾಗೂ ದೀರ್ಘ; ‘ಸಾ’, ಮತ್ತೆ ಮಂದ್ರ, ಆದರೆ ಹೃಸ್ವ. ಚೆನ್ನಾಗಿ ಕೇಳುತ್ತಿತ್ತು. ಯಾರಾದರೂ ಈ ಲಯವನ್ನು ತಪ್ಪಿಸಿದಾಗ ಸಣ್ಣಪುಟ್ಟ ತಕರಾರುಗಳು ಆವಾಗಿವಾಗ ಬರುತ್ತಿದ್ದವು.
ಇದು ನಮ್ಮ ಹಿಡಿತಕ್ಕೆ ಬಂದಿತ್ತಷ್ಟೆ. ಆಗಲೇ ಯಾವನೋ ಒಬ್ಬ ಪ್ರಶ್ನೆಯೆತ್ತಿದ —ಅವನ ದನಿಯಿಂದ ಅವನ ಲಕ್ಷಣಗಳನ್ನು ನಿರ್ಧರಿಸಬಹುದಾದಲ್ಲಿ, ಅವನ ಮುಖದ ತುಂಬಾ ಸಣ್ಣ ಕಂದುಬಣ್ಣದ ಮಚ್ಚೆಗಳಿರಲಿಕ್ಕೆ ಸಾಕು — “ಅಲ್ಲ, ಅವಳು ಮನೇಲಿದಾಳೆ ಅನ್ನೋದು ಗ್ಯಾರಂಟೀನಾ ಅಂತ?”
“ಇಲ್ಲ,” ನಾನೆಂದೆ.
“ಇದೊಳ್ಳೆ ಫಜೀತಿ,” ಇನ್ನೊಬ್ಬನೆಂದ. “ಕೀ ಮರ್ತಿದೀಯಾ?”
“Actually, ನನ್ನ ಕೀ ನನ್ನ ಹತ್ತಿರಾನೇ ಇದೆ,” ಅಂತ ಹೇಳಿದೆ.
“ಮತ್ತೆ? ಹೋಗು ಮೇಲಕ್ಕೆ!” ಅವರೆಂದರು.
“ಆದ್ರೆ, ನಾನು ಇಲ್ಲಿ ಇರಲ್ಲ,” ವಿವರಿಸಿದೆ, “ಬೇರೆ ಕಡೆ ಇರೋದು. ನಾನಿರೋದು ಆ ಸೈಡು.”
“ಹೌದಾ? ಹಾಗಿದ್ರೆ, ನಾನು ಒಂದು ಮಾತು ಕೇಳ್ತೀನಿ. ಇಲ್ಲಿ ಯಾರಿರ್ತಾರೆ?” ಆ ಮಚ್ಚೆ ದನಿಯವನು ಕೇಳಿದ.
“ಅಯ್ಯೋ, ಅದು ನನಗೆ ಹ್ಯಾಗೆ ಗೊತ್ತಿರುತ್ತೆ?” ಅಂತಂದೆ.
ಯಾಕೋ ಜನರು ಇದರಿಂದ ಸ್ವಲ್ಪ ಕೋಪ ಮಾಡಿಕೊಂಡಂತೆ ಅನ್ನಿಸಿತು.
“ಅಣಾ.. ಹಾಗಿದ್ದ್ರೆ ನಾವು ಇಲ್ಲಿ ನಿಂತ್ಕೊಂಡು ‘ಟೆರೀಸಾ’ ಅಂತ ಯಾಕೆ ಬಡ್ಕೋತಿದೀವಿ ಅಂತ ರವಷ್ಟು ಹೇಳ್ತೀಯಾ?” ಯಾವನೋ ಹಲ್ಲು ಬಿಗಿಹಿಡಿದು ದನಿ ಹೊರಡಿಸಿದ.
“ಇದೇ ಹೆಸರು ಕರೀಬೇಕು ಅಂತ ನಂದೇನೂ ಇಲ್ಲ. ಬೇರೆ ಯಾವ ಹೆಸರಾದ್ರೂ ಪರ್ವಾಗಿಲ್ಲ,” ನಾನು ಹೇಳಲು ಪ್ರಯತ್ನಿಸಿದೆ. “ಅಥವಾ ನಿಮಗಿಷ್ಟ ಇದ್ದರೆ ಬೇರೆ ಯಾವುದೋ ಜಾಗದಲ್ಲಿ ನಿಂತ್ಕೊಂಡೂ ಕರೀಬಹುದು.”
ಎಲ್ಲರೂ ಅಸಮಾಧಾನ ತಳೆಯುತ್ತಿದ್ದರು.
“ನಮ್ಮ ಜೊತೆ ಆಟ ಆಡ್ತಿದೀಯಾ? ಇದು ಸರಿ ಇಲ್ಲ,” ಚಿಕ್ಕಿ ದನಿಯವನು ಸಂಶಯದಿಂದ ಕೇಳಿದ.
“ಏನು ಹೇಳ್ತಾ ಇದೀರಾ?” ಎಂದು ನಾನು ವಿಷಾದದಿಂದ ಅಂದು, ಉಳಿದವರಿಗಾದರೂ ನನ್ನಲ್ಲಿ ಯಾವ ದುರುದ್ದೇಶವೂ ಇಲ್ಲ ಎಂಬ ನಂಬಿಕೆಯಿದೆಯೇನೋ ಎಂದು ಎಲ್ಲರತ್ತ ಮುಖ ಹೊರಳಿಸಿದೆ. ಯಾರೂ ಏನೂ ಹೇಳಲಿಲ್ಲ.
ಒಂದು ಕ್ಷಣ ಅಲ್ಲಿ ಮುಜುಗರದ ವಾತಾವರಣ ಏರ್ಪಟ್ಟಿತು.
ಅಷ್ಟರಲ್ಲಿ, ಅವರಲ್ಲೊಬ್ಬ, ಹಗುರಾಗಿ ಹೇಳಿದ, “ಒಂದು ಕೆಲಸ ಮಾಡೋಣ. ಕೊನೇ ಸಲ ‘ಟೆರೀಸಾ’ ಅಂತ ಕರದು, ನಮ್ಮ ನಮ್ಮ ಮನೆಗಳಿಗೆ ಹೋಗೋಣ.”
ಸರಿ, ಇನ್ನೊಂದು ಸಲ ಕೂಗಿದೆವು. “ಒಂದು ಎರಡು ಮೂರು.. ಟೆರೀಸಾ!” ಆದರೆ ಅಷ್ಟು ಸರಿಯಾಗಿ ಆಗಲಿಲ್ಲ. ಆಮೇಲೆ ಮಂದಿ ಮನೆಯತ್ತ ನಡೆದರು. ಕೆಲವರು ಅತ್ತಕಡೆ, ಕೆಲವರು ಇತ್ತಕಡೆ.
ನಾನೂ ಅಲ್ಲಿಂದ ನಡೆದು ಸರ್ಕಲ್ಲಿಗೆ ಬಂದಿದ್ದೆ. ಆವಾಗ ಯಾರೋ “ಟೆssರೀssಸಾss” ಎಂದು ಕಿರುಚಿದಂತೆ ಅನ್ನಿಸಿತು.
ಬಹಳ ಮಾಡಿ, ಯಾರೋ ಇನ್ನೂ ಅಲ್ಲೇ ಉಳಿದು ಕರೆಯುತ್ತಿದ್ದಾರೆ. ಯಾರೋ. ತುಂಬ ಹಠಮಾರಿಯಿರಬೇಕು.
ಗಣಿತ, ವಿಜ್ಞಾನ, ತಂತ್ರಜ್ಞಾನಗಳಲ್ಲಿ ಅಪಾರ ಆಸ್ಥೆ ಹೊಂದಿದ್ದ ಕಾಲ್ವೀನೊ 1967ರಲ್ಲಿ ಬರೆದ “Cybernetics and Ghosts” ಎಂಬ ಪ್ರಬಂಧದಲ್ಲಿ ಭಾಷೆ ಮತ್ತು ಕತೆಗಾರಿಕೆಯ ಹುಟ್ಟು ಮತ್ತು ವಿಕಸನದ ಬಗ್ಗೆ ಧೇನಿಸುತ್ತ, ಮನುಷ್ಯನ ಮನಸ್ಸೆಂಬ ಯಂತ್ರ ಆಸಕ್ತಿಕರ ಮತ್ತು ಅಪೂರ್ವ ಪದಸಂಯೋಜನೆಗಳ ಮೂಲಕ ಕವಿತೆಯ ವಿಶಿಷ್ಟ ಅನುಭೂತಿ ಕೊಡಬಲ್ಲುದಾದರೆ ಮುಂದೊಂದು ದಿನ ಕಂಪ್ಯೂಟರ್ಗಳು ಅಂಥ ಸಾಮರ್ಥ್ಯ ಪಡೆಯಬಹುದೇ, ಸಾಹಿತ್ಯವನ್ನು ಒಂದು ಸಂಕೀರ್ಣ ಆದರೆ ಸಾಧಿಸಬಹುದಾದ Computational ಪ್ರಕ್ರಿಯೆಯ ಮಟ್ಟಕ್ಕೆ ಇಳಿಸಬಹುದೇ ಎಂಬ ಚರ್ಚೆಯನ್ನು ಬೆಳೆಸುತ್ತ “The Literature Machine” ಎಂಬ ಪ್ರಚೋದಕ ಪರಿಕಲ್ಪನೆಯನ್ನು ನಮ್ಮ ಮುಂದಿಡುತ್ತಾರೆ.
ಅದೇ ಪುಸ್ತಕದ ಇನ್ನೊಂದು ಪ್ರಬಂಧದಲ್ಲಿ ಅವರು ಟಿವಿಯು ನಮ್ಮ ನಿತ್ಯವನ್ನು ಆವರಿಸಿಕೊಂಡಿರುವ ‘ದೃಶ್ಯ ನಾಗರಿಕತೆ’ಯ ಯುಗದಲ್ಲಿ ವ್ಯಕ್ತಿಗಳ ಸ್ವಂತದ ಕಲ್ಪನೆಗಳ ಭವಿಷ್ಯವೇನು? ಎಂಬ ಪ್ರಶ್ನೆ ಕೇಳುತ್ತಾರೆ. ಸುದ್ದಿಗಳು ಮತ್ತು ಚಿತ್ರಗಳು ನಮ್ಮ ಗಮನವನ್ನು ಹಿಡಿದಿಟ್ಟು ನಮ್ಮ ಅರಿವಿನ ಮೇಲೆ ಕಸದ ಪದರದಂತೆ ಹರಡಿಕೊಂಡಿರುವಾಗ ನಾವು ವಿಚಾರ ಶಕ್ತಿಯನ್ನೇ ಕಳೆದುಕೊಳ್ಳತೊಡಗುತ್ತೇವೇನೋ ಎಂದು ಕಳವಳ ಪಡುತ್ತಾರೆ. Zombieಗಳಂಥ ಒಂದೇ ರೀತಿಯ ಆಕೃತಿಗಳ ನಡುವೆ ಯಾವುದೇ ಒಬ್ಬ ವ್ಯಕ್ತಿಯು ಎದ್ದು ಕಾಣುವುದೇ ಕಷ್ಟವಾಗುತ್ತದೆ. ವೈಯಕ್ತಿಕ ಕರ್ತೃತ್ವ (agency) ಇಲ್ಲದ ಅತಿ ಸುಲಭವಾಗಿ ಸಮೂಹಸನ್ನಿಗೊಳಗಾಗುವ ಜನಾಂಗ ಬೆಳೆಯಲಿದೆಯೇ?
ಇಂದಿನ Large Language Models, Generative AI, ChatGPT ಯುಗದಲ್ಲಿ; ಸೋಶಿಯಲ್ ಮೀಡಿಯಾಗಳಲ್ಲಿನ ಕುರಿಮಂದೆಯ ಮನಸ್ಥಿತಿಯ ಈ ದಿನಗಳಲ್ಲಿ ಕಾಲ್ವೀನೊ ಅವರ ವಿಚಾರಗಳು ಬೆಚ್ಚಿಬೀಳಿಸುವಷ್ಟು ಮುನ್ನರಿವನ್ನು ತೋರಿಸುತ್ತವೆ.
ಟ್ವಿಟರ್ನಲ್ಲೋ ರೆಡ್ಡಿಟ್ನಲ್ಲೋ ಒಬ್ಬ ಏನೋ ಅಸಂಬದ್ಧ ಕಿರುಚಿ ಓಡಿಹೋದ ಎಷ್ಟೋ ಕಾಲದ ನಂತರವೂ ಅಲ್ಲಿನ ಕಾಮೆಂಟು ಥ್ರೆಡ್ಡುಗಳಲ್ಲಿ ಅದರ ಹೊಳಲು ಕೇಳುತ್ತಿರುತ್ತದೆ. ಇನ್ನೂ ಟೆರೀಸಾ ಎಂದು ಕೂಗುತ್ತಲೇ ಇರುವ ಹಠಮಾರಿಯ ದನಿಯಂತೆ.
ಒಗ್ಗಿಕೊಂಡಿರುವಿಕೆ
(Making Do)
ಒಂದು ಊರಿತ್ತು. ಅಲ್ಲಿ ಎಲ್ಲವನ್ನೂ ನಿಷೇಧಿಸಲಾಗಿತ್ತು.
ಆಗ ಅಲ್ಲಿ ಚಿಣ್ಣಿದಾಂಡು ಆಟವೊಂದಕ್ಕೆ ನಿಷೇಧವಿರಲಿಲ್ಲವಾದ್ದರಿಂದ ಆ ಊರಿನ ಪ್ರಜೆಗಳಲ್ಲ ಊರಿನ ಹಿಂಭಾಗದಲ್ಲಿದ್ದ ಹುಲ್ಲುಗಾವಲುಗಳಲ್ಲಿ ನೆರೆದು ಚಿಣ್ಣಿದಾಂಡು ಆಡುತ್ತ ದಿನ ಕಳೆಯುತ್ತಿದ್ದರು.
ಅದೇನಾಗಿತ್ತೆಂದರೆ, ಇವೆಲ್ಲವನ್ನೂ ನಿಷೇಧಿಸುವ ಕಾನೂನುಗಳನ್ನು ಒಂದೊಂದಾಗಿ ಜಾರಿಗೆ ತರಲಾಗಿತ್ತು ಮತ್ತು ಪ್ರತಿಯೊಂದರ ಹಿಂದೆಯೂ ಒಳ್ಳೆಯ ತರ್ಕವಿತ್ತು. ಹೀಗಾಗಿ ಆಕ್ಷೇಪಿಸಲು ಯಾರಿಗೂ ಕಾರಣ ಕಂಡಿರಲಿಲ್ಲ. ಅಲ್ಲದೇ ಅವಕ್ಕೆ ಒಗ್ಗಿಕೊಳ್ಳಲು ಅವರಿಗೆ ಯಾವುದೇ ತೊಂದರೆಯೂ ಆಗಿರಲಿಲ್ಲ.
ವರ್ಷಗಳು ಕಳೆದುವು. ಒಂದು ದಿನ ನ್ಯಾಯಾಧಿಕಾರಿಗಳಿಗೆ ಇನ್ನು ಮುಂದೆ ಎಲ್ಲವನ್ನೂ ನಿಷೇಧಿಸಲು ಕಾರಣವೇ ಇಲ್ಲ ಎಂದು ತೋರಿತು. ಪ್ರಜೆಗಳು ತಮಗೆ ಬೇಕಾದ್ದು ಮಾಡಲಡ್ಡಿಯಿಲ್ಲ ಎಂದು ತಿಳಿಸಲು ಅವರು ಓಲೆಕಾರರನ್ನು ಕಳಿಸಿದರು.
ಪ್ರಜೆಗಳು ಒಟ್ಟಿಗೆ ಸೇರುವ ವಾಡಿಕೆಯ ಜಾಗಗಳಿಗೆ ಓಲೆಕಾರರು ಹೋದರು.
‘ಕೇಳ್ರಪ್ಪಾ ಕೇಳಿ, ಕೇಳ್ರಪಾ ಕೇಳಿ, ಇನ್ನು ಮುಂದೆ ಯಾವುದೂ ನಿಷಿದ್ಧವಲ್ಲ,’ ಎಂದವರು ಸಾರಿದರು.
ಜನರು ಚಿಣ್ಣಿದಾಂಡು ಆಡುವುದನ್ನು ಮುಂದುವರಿಸಿದರು.
‘ತಿಳೀತೇ?’ ಓಲೆಕಾರರು ಒತ್ತಿಹೇಳಿದರು. ‘ನಿಮಗೆ ಬೇಕಾದ್ದು ಮಾಡಲು ನೀವು ಸ್ವತಂತ್ರರು.’
‘ಒಳ್ಳೇದು, ನಾವು ಚಿಣ್ಣಿದಾಂಡು ಆಡ್ತಿದ್ದೇವೆ,’ ಎಂದು ಪ್ರಜೆಗಳು ಉತ್ತರಿಸಿದರು.
ಓಲೆಕಾರರು ಅವರೆಲ್ಲ ಹಿಂದೊಮ್ಮೆ ತೊಡಗಿಸಿಕೊಂಡಿದ್ದ ಹಾಗೂ ಈಗ ಮತ್ತೆ ತೊಡಗಿಸಿಕೊಳ್ಳಬಹುದಾದ ಅನೇಕ ಅದ್ಭುತ ಮತ್ತು ಉಪಯುಕ್ತ ಉದ್ಯಮಗಳನ್ನು ಬಿಡುವಿಲ್ಲದೇ ನೆನಪಿಸಿಕೊಟ್ಟರು. ಆದರೆ ಪ್ರಜೆಗಳು ಕೇಳಿಸಿಕೊಳ್ಳುವದಕ್ಕೇ ಹೋಗಲಿಲ್ಲ. ಉಸಿರು ಹಿಡಿಯಲೂ ನಿಲ್ಲದೇ, ಒಂದೇಟು ಇನ್ನೊಂದೇಟು ಹಾಕುತ್ತ ಆಡುತ್ತಲೇ ಹೋದರು.
ಅವರ ಪ್ರಯತ್ನಗಳೆಲ್ಲ ವ್ಯರ್ಥವಾದುದನ್ನು ಕಂಡು ಓಲೆಕಾರರು ನ್ಯಾಯಾಧಿಕಾರಿಗಳಿಗೆ ಇದನ್ನು ತಿಳಿಸಲು ಹೊರಟುಹೋದರು.
‘ಅಷ್ಟೇ ತಾನೆ?’ ನ್ಯಾಯಾಧಿಕಾರಿಗಳು ಹೇಳಿದರು. ‘ಚಿಣ್ಣಿ ದಾಂಡು ಆಟವನ್ನು ನಿಷೇಧಿಸೋಣ.’
ಅದಾಗ ಜನರು ದಂಗೆಯೆದ್ದರು ಮತ್ತು ಅವರೆಲ್ಲರನ್ನೂ ಕೊಂದರು.
ನಂತರ ಸಮಯ ಕೇಡು ಮಾಡದೇ ಅವರು ಚಿಣ್ಣಿದಾಂಡು ಆಟಕ್ಕೆ ಮರಳಿದರು.
The Parable of the Boiling Frog ಎಂಬ ಒಂದು ದೃಷ್ಟಾಂತವಿದೆ. ನೀವು ಒಂದು ಜೀವಂತ ಕಪ್ಪೆಯನ್ನು ಕುದಿಯುವ ನೀರಿಗೆ ಹಾಕಿ ಕೊಲ್ಲಬೇಕು (ಏಕೆಂದು ಕೇಳಬೇಡಿ, ಈ ಕತೆಯಲ್ಲೊಂದು 'ನೀತಿ'ಯಿದೆ). ಆದರೆ ಕುದಿಯುವ ನೀರಿಗೆ ಒಮ್ಮೆಲೇ ಕಪ್ಪೆಯನ್ನು ಹಾಕಿದರೆ ಅದು ಜೀವಭಯದಿಂದ ಚಂಗನೆ ಹಾರಿ ತಪ್ಪಿಸಿಕೊಳ್ಳುವುದು ಖಾತ್ರಿ. ಅದರ ಬದಲು ತಣ್ಣನೆಯ ನೀರಿರುವ ಪಾತ್ರೆಗೆ ಅದನ್ನು ಹಾಕಿ ನೀರನ್ನು ನಿಧಾನಕ್ಕೆ ಕಾಯಿಸತೊಡಗಿದರೆ ಕಪ್ಪೆಯು ಹಿತವಾದ ಬೆಚ್ಚನೆಯ ನೀರಿನಲ್ಲಿ ತೇಲುತ್ತ ನೆಮ್ಮದಿಯ ನಿರಾಕುಲತೆಯ ಮಂಪರಿಗಿಳಿದು ಬರುಬರುತ್ತ ನೀರು ತಡೆದುಕೊಳ್ಳಲಾಗದಷ್ಟು ಬಿಸಿಯಾದರೂ ಏನೂ ಮಾಡಲಾಗದ ಸ್ಥಿತಿ ತಲುಪಿ ಕುದ್ದು ಸತ್ತುಹೋಗುತ್ತದೆ.
ಆಳ್ವಿಕೆಯು ತಮಗೆ ಬೇಕಾದಂತೆ—ಆದರೆ ಜನರಿಗೆ ಬೇಕಾದ್ದು ಎಂದು ಪೋಸು ಕೊಡುತ್ತ—ಒಂದೊಂದೇ ಸಣ್ಣ—ತರ್ಕಬದ್ಧ ಮತ್ತು ಸದುದ್ದೇಶದ!—ಬದಲಾವಣೆಯನ್ನು ಜಾರಿಗೆ ತಂದಾಗ ಜನಸಾಮಾನ್ಯರ ಆಕ್ಷೇಪಣೆಗೆ ಕಾರಣವೇ ಇರುವುದಿಲ್ಲವಲ್ಲ. ಪ್ರೋತ್ಸಾಹದ ಚಪ್ಪಾಳೆಯೇ ಸುರಿದೀತು! ಶಾಲೆಗಳಲ್ಲಿ ಭಗವದ್ಗೀತೆಯಂಥ ವಾಸ್ತವದಲ್ಲಿ (ರೂಢಿಗತ ಅರ್ಥದಲ್ಲಾದರೂ) ಧಾರ್ಮಿಕವಲ್ಲದ ಪಠ್ಯವನ್ನು ಕಲಿಸುವುದಕ್ಕೆ ವಿಚೇಚನೆಯುಳ್ಳ ಯಾರೂ ವಿರೋಧಿಸಲು ಹೇಗೆ ಸಾಧ್ಯ? ಹೆಣ್ಣಿನ ದಬ್ಬಾಳಿಕೆಯ ಸಂಕೇತವಾದ ಹಿಜಾಬ್ ನಿಷೇಧಿಸುವುದು ಪ್ರಗತಿಪರತೆಯಲ್ಲವೇ?
ಕಪ್ಪು ಚುಕ್ಕಿ
(The Black Sheep)
ಒಂದು ದೇಶವಿತ್ತು. ಅಲ್ಲಿಯ ಎಲ್ಲರೂ ಕಳ್ಳರಾಗಿದ್ದರು.
ರಾತ್ರಿಯಲ್ಲಿ ಎಲ್ಲರೂ ಅಟ್ಟೆಯ ಕೀಲಿಕೈಗಳು ಮತ್ತು ಮಬ್ಬು ಕಂದೀಲುಗಳೊಂದಿಗೆ ಮನೆ ಬಿಟ್ಟು ನೆರೆಯ ಮನೆಯೊಂದಕ್ಕೆ ಹೋಗಿ ತುಡುಗು ಮಾಡುತ್ತಿದ್ದರು.ಹೊರೆ ಹೊತ್ತುಕೊಂಡು ಅವರು ನಸುಕಿನಲ್ಲಿ ಮರಳಿದಾಗ ತಮ್ಮ ಮನೆಯೂ ಕೊಳ್ಳೆಯಾಗಿರುವುದನ್ನು ಕಾಣುತ್ತಿದ್ದರು.
ಹೀಗಾಗಿ ಎಲ್ಲರೂ ಸಂತೋಷದಿಂದ ಸಹಬಾಳ್ವೆ ನಡೆಸುತ್ತಿದ್ದರು. ಯಾರೂ ಅವಕಾಶ ವಂಚಿತರಾಗಿರಲಿಲ್ಲ. ಏಕೆಂದರೆ ಪ್ರತಿಯೊಬ್ಬನೂ ಇನ್ನೊಬ್ಬನಿಂದ ಕದಿಯುತ್ತಿದ್ದ, ಮತ್ತು ಆ ಇನ್ನೊಬ್ಬ ಮತ್ತೆ ಮತ್ತೊಬ್ಬನಿಂದ, ಇದು ಹೀಗೆ ಕಡೆಯವನು ಮೊದಲಿನವನಿಂದ ಕದಿಯುವುದಾಗುವವರೆಗೆ ಮುಂದುವರಿಯುತ್ತಾ ಹೋಗುತ್ತಿತ್ತು. ಇಂಥ ದೇಶದ ವ್ಯಾಪಾರವು ಅನಿವಾರ್ಯವಾಗಿ ಕೊಳ್ಳುವ ಮತ್ತು ಮಾರುವ ಎರಡೂ ಕಡೆ ಮೋಸವನ್ನು ಒಳಗೊಂಡಿತ್ತು. ಸರಕಾರವು ಪ್ರಜೆಗಳಿಂದ ದೋಚುವ ಕ್ರಿಮಿನಲ್ ಸಂಸ್ಥೆಯಾಗಿತ್ತು. ಇತ್ತ ಪ್ರಜೆಗಳಿಗೆ ಸರಕಾರವನ್ನು ವಂಚಿಸುವುದರ ಬಗ್ಗೆ ಮಾತ್ರ ಒಲವಿತ್ತು. ಈ ರೀತಿಯಲ್ಲಿ ಜನಜೀವನ ಸಲೀಸಾಗಿ ನಡೆದಿತ್ತು. ಯಾರೂ ಶ್ರೀಮಂತರಾಗಿರಲಿಲ್ಲ ಯಾರೂ ಬಡವರಾಗಿರಲಿಲ್ಲ.
ಇದು ಹೇಗಾಯಿತೆಂದು ನಮಗೂ ಗೊತ್ತಿಲ್ಲ, ಆದರೆ ಒಂದು ದಿನ ಆ ಸ್ಥಳದಲ್ಲಿ ವಾಸಿಸಲು ಒಬ್ಬ ಪ್ರಾಮಾಣಿಕ ವ್ಯಕ್ತಿ ಬಂದ. ರಾತ್ರಿ ಹೊತ್ತು ತನ್ನ ಗೋಣಿಚೀಲ ಮತ್ತು ಕಂದೀಲು ತೆಗೆದುಕೊಂಡು ಹೊರಹೋಗುವುದರ ಬದಲು ಅವನು ಮನೆಯಲ್ಲೇ ಉಳಿದುಕೊಂಡು ಸಿಗರೇಟು ಸೇದುತ್ತ ಕಾದಂಬರಿಗಳನ್ನು ಓದುತ್ತಿದ್ದ.
ಕಳ್ಳರು ಬಂದರು, ಉರಿಯುತ್ತಿದ್ದ ದೀಪವನ್ನು ನೋಡಿದರು, ಒಳಗೆ ಹೋಗಲಿಲ್ಲ.
ಇದು ಒಂದಷ್ಟು ಕಾಲದವರೆಗೆ ಹೀಗೇ ನಡೆಯಿತು. ಆಮೇಲೆ ಅವರು ಇದನ್ನು ಅವನಿಗೆ ವಿವರಿಸುವುದು ಅನಿವಾರ್ಯವಾಯಿತು: ಅವನು ಏನನ್ನೂ ಮಾಡದೆ ಬದುಕಲು ಬಯಸಿದ್ದರೂ ಸಹ, ಇತರರು ತಮ್ಮ ಕೆಲಸವನ್ನು ಮಾಡಲು ಅವನು ತಡೆಯಾಗಬೇಕಾದ ಯಾವುದೇ ಕಾರಣವಿಲ್ಲ. ಅವನು ಒಂದು ರಾತ್ರಿ ಮನೆಯಲ್ಲಿ ಕಳೆದನೆಂದರೆ ಮರುದಿನ ಯಾವುದೋ ಒಂದು ಕುಟುಂಬಕ್ಕೆ ತಿನ್ನಲೇನೂ ಇರುವುದಿಲ್ಲ.
ಆ ಪ್ರಾಮಾಣಿಕ ವ್ಯಕ್ತಿಯು ಇಂಥ ತರ್ಕಸರಣಿಗೆ ಆಕ್ಷೇಪವೆತ್ತಲು ಸಾಧ್ಯವೇ ಇರಲಿಲ್ಲ. ಅವನು ಅವರೆಲ್ಲರಂತೆ ಇರುಳಿನಲ್ಲಿ ಹೊರಗೆ ಹೋಗಿ ಮರುದಿನ ನಸುಕಿನಲ್ಲಿ ಮರಳುವುದನ್ನು ರೂಢಿಸಿಕೊಂಡ. ಆದರೆ ಅವನು ಕಳುವು ಮಾಡುತ್ತಿರಲಿಲ್ಲ. ಅವನು ಪ್ರಾಮಾಣಿಕನಾಗಿದ್ದ, ಅದಕ್ಕೇನೂ ಮಾಡುವಂತಿರಲಿಲ್ಲ. ಅವನು ದೂರದ ಸೇತುವೆಯವರೆಗೂ ಹೋಗಿ ಕೆಳಗೆ ಹರಿಯುತ್ತಿದ್ದ ನೀರನ್ನು ನೋಡುತ್ತಾ ನಿಂತ. ಮನೆ ತಲುಪಿದಾಗ ಅವನನ್ನು ದೋಚಿದ್ದು ತಿಳಿಯಿತು.
ವಾರ ಕಳೆಯುವಷ್ಟರಲ್ಲೇ ಆ ಪ್ರಾಮಾಣಿಕ ವ್ಯಕ್ತಿಯು ತನ್ನ ಬಳಿ ಒಂದು ಕಾಸೂ ಇಲ್ಲದ್ದನ್ನು ಕಂಡುಕೊಂಡನು, ತಿನ್ನಲೂ ಏನಿರಲಿಲ್ಲ ಮನೆಯೂ ಖಾಲಿಯಾಗಿತ್ತು. ಆದರೆ ಇದು ಹೇಳಿಕೊಳ್ಳುವಂಥ ಸಮಸ್ಯೆಯೇ ಆಗಿರಲಿಲ್ಲ, ಏಕೆಂದರೆ ಅದು ಅವನದೇ ತಪ್ಪು; ಅಲ್ಲ, ನಿಜವಾದ ಸಮಸ್ಯೆಯೇನೆಂದರೆ ಅವನ ನಡವಳಿಕೆಯು ಎಲ್ಲವನ್ನೂ ತಲೆಕೆಳಗು ಮಾಡಿತ್ತು. ಏಕೆಂದರೆ ಅವನು ಯಾರಿಂದಲೂ ಏನೂ ಕದಿಯದೇ ತನ್ನಲ್ಲಿದ್ದ ಎಲ್ಲವನ್ನೂ ಉಳಿದವರು ಕದಿಯುವುದಕ್ಕೆ ಬಿಟ್ಟಿದ್ದ; ಹೀಗಾಗಿ ಯಾವಾಗಲೂ ನಸುಕಿನಲ್ಲಿ ಮನೆಗೆ ಮರಳಿದವರಲ್ಲೊಬ್ಬರು ತಮ್ಮ ಮನೆಯನ್ನು ಯಾರೂ ಮುಟ್ಟದೇ ಇದ್ದುದನ್ನು ನೋಡುತ್ತಿದ್ದರು: ಅದು ಅವನು ಲೂಟಿ ಮಾಡಬೇಕಾಗಿದ್ದ ಮನೆ. ಅದೇನೇ ಇರಲಿ, ತುಸು ಕಾಲದ ನಂತರ ಲೂಟಿಗೊಳಗಾಗದವರು ಉಳಿದವರಿಗಿಂತ ಶ್ರೀಮಂತರಾದರು, ಮತ್ತೆ ಮುಂದೆ ಅವರಿಗೆ ಕಳ್ಳತನ ಮಾಡುವುದು ಬೇಡವಾಯಿತು. ಪರಿಸ್ಥಿತಿ ಇನ್ನೂ ಹದಗೆಟ್ಟಿದ್ದೆಂದರೆ, ಈ ಪ್ರಾಮಾಣಿಕ ವ್ಯಕ್ತಿಯ ಮನೆಯಿಂದ ಕದಿಯಲು ಬಂದವರೆಲ್ಲರಿಗೂ ಖಾಲಿ ಮನೆಯೇ ಸಿಗುತ್ತಿತ್ತು; ಇದರಿಂದ ಅವರು ಬಡವರಾದರು.
ಇದರ ನಡುವೆ ಇತ್ತೀಚೆಗೆ ಶ್ರೀಮಂತರಾದವರು ಆ ಪ್ರಾಮಾಣಿಕ ವ್ಯಕ್ತಿಯಂತೆ ರಾತ್ರಿ ಹೊತ್ತು ಸೇತುವೆಗೆ ಹೋಗಿ ಕೆಳಗೆ ಹರಿಯುತ್ತಿದ್ದ ನೀರನ್ನು ನೋಡುತ್ತ ನಿಲ್ಲುವುದನ್ನು ಹವ್ಯಾಸ ಬೆಳೆಸಿಕೊಂಡರು. ಇದು ಗೊಂದಲವನ್ನು ಹೆಚ್ಚಿಸಿತು. ಏಕೆಂದರೆ ಇದರಿಂದಾಗಿ ಇತರರಲ್ಲಿ ಹಲವರು ಶ್ರೀಮಂತರಾದರು ಮತ್ತು ಹಲವರು ಬಡವರಾದರು.
ಹೀಗಿದ್ದಾಗ, ತಾವು ಪ್ರತಿ ರಾತ್ರಿ ಸೇತುವೆಗೆ ಹೋದರೆ ಬಲುಬೇಗ ತಾವು ಬಡವರಾಗುತ್ತೇವೆ ಎಂದು ಶ್ರೀಮಂತರು ಕಂಡುಕೊಂಡರು. ಅವರು ‘ನಮ್ಮ ಪರವಾಗಿ ಹೋಗಿ ಲೂಟಿ ಮಾಡಲು ಬಡವರಲ್ಲಿ ಕೆಲವರಿಗೆ ದುಡ್ಡು ಕೊಡೋಣ,’ ಎಂದು ಯೋಚಿಸಿದರು. ಅವರು ಒಪ್ಪಂದಗಳನ್ನು ಮಾಡಿಕೊಂಡರು, ಸಂಬಳ, ಕಮೀಶನ್ ನಿಗದಿಪಡಿಸಿದರು: ಆದರೆ ಅವರೆಲ್ಲರೂ ಈಗಲೂ ಹೇಳಿಕೇಳಿ ಕಳ್ಳರೇ, ಹೀಗಾಗಿ ಈಗಲೂ ಒಬ್ಬರಿನ್ನೊಬ್ಬರಿಗೆ ಟೋಪಿಹಾಕಲು ಯತ್ನಿಸಿದರು. ಆದರೂ, ಸಾಮಾನ್ಯವಾಗಿ ಆಗುವಂತೆ, ಶ್ರೀಮಂತರು ಹೆಚ್ಚು ಶ್ರೀಮಂತರಾದರು ಮತ್ತು ಬಡವರು ಹೆಚ್ಚು ಹೆಚ್ಚು ಬಡವರಾಗುತ್ತ ಹೋದರು.
ಶ್ರೀಮಂತರಲ್ಲಿ ಕೆಲವರು ಎಷ್ಟು ಶ್ರೀಮಂತರಾದರೆಂದರೆ ಅವರಿಗೆ ಕದಿಯುವ ಅಥವಾ ಬೇರೆಯವರಿಂದ ಕದಿಸುವ ಅಗತ್ಯ ಉಳಿಯಲಿಲ್ಲ. ಆದರೆ ಅವರು ಕದಿಯುವುದನ್ನು ನಿಲ್ಲಿಸಿದರೆ ಅವರು ಬಡವರಾಗುತ್ತಿದ್ದರು, ಏಕೆಂದರೆ ಬಡವರು ಅವರಿಂದ ಕದಿಯುವುದು ಮುಂದುವರಿಯುತ್ತಿತ್ತು. ಆದ್ದರಿಂದ ಅವರು ತಮ್ಮ ಸ್ವತ್ತನ್ನು ಬಡವರಿಂದ ಕಾಪಾಡಿಕೊಳ್ಳಲು ಬಡವರಲ್ಲೇ ಅತಿ ಬಡವರಿಗೆ ಹಣ ಕೊಡತೊಡಗಿದರು. ಅಲ್ಲದೇ ಇದರಿಂದಾಗಿ ಪೊಲೀಸ್ ಪಡೆಯನ್ನು ನೆಲೆಗೊಳಿಸಬೇಕಾಯಿತು ಮತ್ತು ಸೆರೆಮನೆಗಳನ್ನು ಕಟ್ಟಬೇಕಾಯಿತು.
ಆದದ್ದು ಇದು. ಆ ಪ್ರಾಮಾಣಿಕ ವ್ಯಕ್ತಿ ತಲೆದೋರಿದ ಕೆಲವೇ ವರ್ಷಗಳ ನಂತರ ಜನರಲ್ಲಿ ದೋಚುವುದು ಮತ್ತು ದೋಚಿಸಿಕೊಳ್ಳುವುದರ ಬಗ್ಗೆ ಮಾತು ನಿಂತು, ಬದಲಿಗೆ ಕೇವಲ ಶ್ರೀಮಂತರ ಹಾಗೂ ಬಡವರ ಬಗ್ಗೆ ಶುರುವಾಯಿತು; ಇಷ್ಟಾದರೂ ಅವರೆಲ್ಲ ಇನ್ನೂ ಕಳ್ಳರೇ ಆಗಿದ್ದರು.
ಮೊದಲಿಗೆ ಇದ್ದನಲ್ಲ, ಅವನೊಬ್ಬನೇ ಪ್ರಾಮಾಣಿಕ ವ್ಯಕ್ತಿಯಾಗಿದ್ದವನು, ಮತ್ತವನು ಬಲುಬೇಗನೇ ಹಸಿವಿನಿಂದಾಗಿ ಸತ್ತು ಹೋಗಿದ್ದನು.
ಒಗ್ಗಟ್ಟಿನ ಆಟ
(Solidarity)
ನಾನು ಅವರನ್ನು ಗಮನಿಸಲು ನಿಂತೆ.
ಅವರು ರಾತ್ರಿ ಹೊತ್ತು, ಜನಸಂಚಾರವಿಲ್ಲದ ಒಂದು ಬೀದಿಯಲ್ಲಿ ಅಂಗಡಿಯೊಂದರ ಶಟರ್ ಬಳಿ ಏನೋ ಮಾಡುತ್ತಿದ್ದರು.
ಆ ಶಟರ್ ಭಾರವಿತ್ತು: ಅವರು ಕಬ್ಬಿಣದ ಸಳಿಯೊಂದನ್ನು ಸನ್ನೆಗೋಲಾಗಿ ಬಳಸುತ್ತಿದ್ದರು, ಆದರೆ ಶಟರ್ ಕದಲಲಿಲ್ಲ.
ನನಗೆ ಇಂಥಲ್ಲೇ ಹೋಗುವ ಉದ್ದೇಶವಿರಲಿಲ್ಲ, ಸುಮ್ಮನೇ ನನ್ನ ಪಾಡಿಗೆ ನಾನು ಸುತ್ತುತ್ತಿದ್ದೆ. ನಾನೂ ಅವರೊಂದಿಗೆ ಸಳಿ ಹಿಡಿದು ಕೈಗೂಡಿಸಿದೆ. ಅವರು ನನಗೆ ಅವಕಾಶ ಮಾಡಿಕೊಟ್ಟರು.
ನಾವು ಒಗ್ಗಟ್ಟಿನಿಂದ ಜಗ್ಗುತ್ತಿರಲಿಲ್ಲ. ‘ಹೇಯ್ ಮೇಲ್ಗಡೆ!’ ನಾನೆಂದೆ. ನನ್ನ ಬಲಗಡೆಯಿದ್ದವನು ಮೊಣಕೈಯಿಂದ ತಿವಿದು, ‘ಮುಚ್ಚ್ಕೋ. ತಲೆ ಕೆಟ್ಟಿದ್ಯಾ! ನಮ್ಮ ದನಿ ಅವ್ರಿಗೆ ಕೇಳಸ್ಬೇಕಾ?’
ಬಾಯಿತಪ್ಪಿ ಮಾತು ಹೊರಬಿತ್ತು ಎನ್ನುವಂತೆ ನಾನು ತಲೆ ಅಲ್ಲಾಡಿಸಿದೆ.
ಸಾಕಷ್ಟು ಸಮಯ ಹಿಡಿಯಿತು, ನಾವು ಬೆವೆತಿದ್ದೆವು, ಆದರೆ ಕೊನೆಗೂ ಯಾರಾದರೂ ಒಳತೂರಿಕೊಳ್ಳುವಷ್ಟು ಎತ್ತರಕ್ಕೆ ಶಟರನ್ನು ಮೀಟುತ್ತ ಎತ್ತಿದ್ದೆವು. ತೃಪ್ತಿಯಿಂದ ಒಬ್ಬರನ್ನೊಬ್ಬರು ನೋಡಿದೆವು. ಆಮೇಲೆ ಒಳಹೊಕ್ಕೆವು. ನನಗೊಂದು ಗೋಣಿಚೀಲ ಹಿಡಿದುಕೊಳ್ಳಲು ಕೊಟ್ಟರು. ಅವರೆಲ್ಲ ಸಾಮಾನು ತಂದು ಹಾಕುತ್ತಿದ್ದರು.
‘ಆ ಹಲ್ಕಾ ಪೋಲೀಸರು ಬಂದೊಕ್ಕರಿಸದಿದ್ದರೆ ಸಾಕು!’ ಅವರೆನ್ನುತ್ತಿದ್ದರು.
‘ಹೌದು, ಅವು ನಿಜ್ವಾಗ್ಲೂ ಹಲ್ಕಾಗಳು!’ ನಾನೆಂದೆ. ‘ತೆಪ್ಪಗಿರು. ಹೆಜ್ಜೆ ಶಬ್ದ ಕೇಳ್ತಾ ಇಲ್ವಾ?’ ಅವರು ಗಳಿಗೆಗೊಮ್ಮೆ ಹೀಗೆನ್ನುತ್ತಿದ್ದರು. ನಾನು ಗಮನಕೊಟ್ಟು ಕೇಳಿಸಿಕೊಂಡೆ, ಚೂರು ಭಯವಾಗುತ್ತಿತ್ತು. ‘ಅಲ್ಲ, ಅಲ್ಲ, ಅವರಲ್ಲ,’ ಎಂದೆ.
‘ನಾವು ಯಾವಾಗ ಬರೋದೆ ಇಲ್ಲ ಅಂದ್ಕೊಂಡಿರ್ತೀವೋ ಸರಿಯಾಗಿ ಆಗಲೇ ಬಂದು ವಕ್ಕರಿಸಿಗೋತವೆ ಅವುಗಳು!’ ಅವರಲ್ಲೊಬ್ಬನೆಂದ.
ನಾನು ತಲೆ ಅಲ್ಲಾಡಿಸಿದೆ. ‘ಕೊಂದುಬಿಡಬೇಕು, ಎಲ್ಲಾವನ್ನೂ, ಮತ್ತಿನ್ನೇನು,’ ಎಂದೆ.
ಆಮೇಲೆ ಸ್ವಲ್ಪ ದೂರದ ತನಕ, ಅದೋ ಆ ಮೂಲೆಯವರೆಗೂ, ಹೋಗಿ ಯಾರಾದರೂ ಬರುತ್ತಿದ್ದಾರಾ ಎಂದು ನೋಡಿಕೊಂದು ಬರಲು ನನಗೆ ಹೇಳಿದರು. ಹೋದೆ.
ಹೊರಗೆ, ಆ ಮೂಲೆಯಲ್ಲಿ, ಇವರಿದ್ದರು, ಅವರು ಗೋಡೆಗಂಟಿಕೊಂಡು, ಬಾಗಿಲುಗಳ ಹಿಂದೆ ಅಡಗಿಕೊಂಡು, ನನ್ನತ್ತ ಬರುತ್ತಿದ್ದರು.
ನಾನೂ ಇವರನ್ನು ಸೇರಿಕೊಂಡೆ.
‘ಅಲ್ಲಿ ಕೆಳಗಡೆ, ಆ ಅಂಗಡಿಗಳ ಹತ್ತರ, ಅಲ್ಲಿಂದ ಸದ್ದು ಬರ್ತಾ ಇದೆ,’ ನನ್ನ ಪಕ್ಕದಲ್ಲಿದ್ದವನು ಹೇಳಿದ.
ನಾನು ಆಕಡೆ ತಲೆ ಹಾಕಿ ನೋಡಿದೆ.
‘ತಲೆ ತಗ್ಗಸೋ, ಪೆದ್ದ, ಅವ್ರು ನಮ್ಮನ್ನ ನೋಡಿದ್ರೂ ಅಂದ್ರೆ ಮತ್ತೆ ತಪ್ಪಿಸ್ಕೋತಾರೆ,’ ಅವನು ಬುಸುಗುಟ್ಟಿದ.
‘ನೋಡ್ತಾ ಇದ್ದೆ ಅಷ್ಟೇ,’ ಸಮಜಾಯಿಷಿ ಕೊಟ್ಟು ಗೋಡೆಗಾತು ಬಗ್ಗಿ ನಿಂತೆ.
ಇನ್ನೊಬ್ಬ ಹೇಳಿದ, ‘ಅವ್ರಿಗೆ ಗೊತ್ತಾಗದಂಗೆ ನಾವು ಸುತ್ತುವರದರೆ, ಅವ್ರನ್ನ ಸಿಕ್ಕ್ಹಾಕಸಬಹುದು. ಜಾಸ್ತಿ ಜನ ಇಲ್ಲ ಅಲ್ಲಿ.’
ನಾವು ಉಸಿರು ಬಿಗಿಹಿಡಿದು ತುದಿಗಾಲಲ್ಲಿ ಏಕಾಏಕಿ ಒಂದಷ್ಟು ನಡೆಯುವುದು ನಿಲ್ಲುವುದು ಮಾಡುತ್ತ ಮುಂದುವರಿದೆವು: ಗಳಿಗೆಗೊಮ್ಮೆ ಹೊಳೆಯುವ ಕಣ್ಣುಗಳಿಂದ ಪರಸ್ಪರ ನಸುನೋಟ ಬೀರುತ್ತಿದ್ದೆವು.
‘ಅವರೀಗ ತಪ್ಪಿಸ್ಕೋಳ್ಳೋಕೆ ಸಾಧ್ಯವಿಲ್ಲ,’ ನಾನೆಂದೆ.
‘ಕೊನೆಗೂ ಅವರನ್ನ ರೆಡ್ ಹ್ಯಾಂಡ್ ಆಗಿ ಹಿಡೀತೀವಿ,’ ಯಾರೋ ಹೇಳಿದರು.
‘ಈಗಲಾದರೂ,’ ನಾನೆಂದೆ.
‘ಕೊಳಕು ಬೇವರ್ಸಿಗಳು, ಹೆಂಗೆ ಅಂಗಡಿ ಒಳಗೆ ನುಗ್ಗ್ತಾರೆ ನೋಡು!’ ಇನ್ನೊಬ್ಬನೆಂದ.
‘ಬೇವರ್ಸಿಗಳು, ಮಿಂಡ್ರಿಗುಟ್ಟ್ದೋರು!’ ನಾನು ಸಿಟ್ಟಿನಿಂದ ಮತ್ತೆ ಮತ್ತೆ ಹೇಳಿದೆ.
ನೋಡಿ ಬರಲೆಂದು ಅವರು ನನ್ನನ್ನು ಸ್ವಲ್ಪ ಮುಂದೆ ಕಳಿಸಿದರು. ನಾನು ಮತ್ತೆ ಆ ಅಂಗಡಿಯೊಳಗೆ ಬಂದು ನಿಂತಿದ್ದೆ.
‘ಅವರೀಗ ನಮ್ಮನ್ನ ಹಿಡಿಯಕ್ಕಾಗಲ್ಲ,’ ತನ್ನ ಹೆಗಲಿನ ಮೇಲೆ ಗೋಣಿಚೀಲ ತೂಗಾಡಿಸುತ್ತ ಒಬ್ಬ ಹೇಳುತ್ತಿದ್ದ.
‘ಬೇಗ,’ ಬೇರೊಬ್ಬ ಹೇಳಿದ. ‘ಹಿಂದುಗಡೆಯಿಂದ ಹೋಗುವ! ಹಂಗೆ ಅವರ ಎದುರ್ಗೇ ಅವರ ಮೂಗಿನ ನೇರಕ್ಕೇ ತಪ್ಪಿಸ್ಕೊಂಡು ಓಡಿ ಹೋಗಬಹುದು.’
ನಮ್ಮೆಲ್ಲರ ತುಟಿಗಳ ಮೇಲೆ ವಿಜಯೋತ್ಸವದ ನಗುವಿತ್ತು.
‘ಅವ್ರಿಗೆ ಸರ್ರಿಯಾಗಿ ಉರಿಯತ್ತೆ,’ ನಾನೆಂದೆ. ನಾವು ಅಂಗಡಿಯ ಹಿಂದುಗಡೆಗೆ ನುಸುಳಿದೆವು.
‘ಆ ಬೆಪ್ಪುಗಳಿಗೆ ಮತ್ತೆ ಮಳ್ಳು ಮಾಡಿದ್ವಿ!’ ಅವರೆಂದರು. ಆದರೆ ಅಷ್ಟರಲ್ಲಿ: ‘ಯಾರಿದೀರಿ ಅಲ್ಲಿ, ನಿಂತ್ಕೊಳ್ಳಿ,’ ಎಂಬ ಧ್ವನಿ ಕೇಳಿತು ಮತ್ತು ದೀಪಗಳು ಹತ್ತಿದವು. ನಾವು ಬಿಳಿಚಿಕೊಂಡು, ಒಬ್ಬರೊಬ್ಬರ ಕೈ ಬಿಗಿಯಾಗಿ ಹಿಡಿದುಕೊಂಡು ಯಾವುದರದೋ ಹಿಂದೆ ಕುಕ್ಕರುಗಾಲಿನಲ್ಲಿ ಕೂತೆವು. ಆ ಬೇರೆಯವರು ಹಿಂಬದಿಯ ಕೋಣೆಗೆ ಬಂದರು, ನಮ್ಮನ್ನು ನೋಡಲಿಲ್ಲ, ಹಿಂದಿರುಗಿ ಹೋದರು. ನಾವು ಹಾರಿಸಿದ ಗುಂಡಿನಂತೆ ಅಲ್ಲಿಂದ ಚಿಮ್ಮಿ ಹುಚ್ಚುಹಿಡಿದವರಂತೆ ಓಟಕಿತ್ತೆವು. ‘ನಾವು ಪಾರಾಗಿದೀವಿ. ಗೆದ್ದಿದೀವಿ!’ ಕೂಗಿಕೊಂಡೆವು. ನಾನು ಒಂದೆರಡು ಸಲ ಮುಗ್ಗರಿಸಿ ಹಿಂದೆ ಬಿದ್ದಿದ್ದೆ. ನಾನೀಗ ಅವರ ಬೆನ್ನಟ್ಟಿದ್ದ ಇವರ ಜೊತೆಗಿದ್ದೆ.
‘ಬೇಗ ಬಾ,’ ಇವರೆಂದರು, ‘ಇನ್ನೇನು ಅವ್ರು ನಮ್ಮ ಕೈಗೆ ಸಿಗ್ತಾರೆ.’
ಇವರೆಲ್ಲರೂ ಆ ಕಿರಿದಾದ ಬೀದಿಗಳಲ್ಲಿ ಅವರ ಬೆನ್ನಟ್ಟಿದ್ದರು. ‘ಈ ಕಡೆ ಓಡು, ಆ ಒಳಹಾದಿಯಿಂದ ಹೋಗಿ ಅಡ್ಡಗಟ್ಟು,’ ನಾವೆನ್ನುತ್ತಿದ್ದೆವು. ಮತ್ತಿದೀಗ ಆ ಅವರು ಹೆಚ್ಚೇನೂ ಮುಂದಿರಲಿಲ್ಲ. ಅದನ್ನು ನೋಡಿ ನಾವು, ‘ಕಮಾನ್, ಅವರು ತಪ್ಪಿಸ್ಕೊಳ್ಳಕ್ಕಾಗಲ್ಲ,’ ಎಂದು ಕಿರುಚುತ್ತಿದ್ದೆವು.
ನಾನು ಹೇಗೋ ಮಾಡಿ ಅವರಲ್ಲಿ ಒಬ್ಬನನ್ನು ಹಿಂದೆ ಹಾಕುವುದರಲ್ಲಿ ಯಶಸ್ವಿಯಾಗಿದ್ದೆ. ಅವನೆಂದ, ‘ಶಭಾಶ್, ನೀನು ತಪ್ಪಿಸಿಕೊಂಡೆ. ಬಾ ಬಾ, ಈ ಕಡೆ ಓಡು, ಅವರಿಂದ ನುಣುಚಿಕೊಳ್ಳೋಣ,’ ಆಗ ನಾನು ಅವನೊಂದಿಗೆ ಹೊರಟೆ. ಒಂದಷ್ಟು ಹೊತ್ತಿನ ನಂತರ ಓಣಿಯೊಂದರಲ್ಲಿ ನಾನೊಬ್ಬನೇ ಉಳಿದುಕೊಂಡಿದ್ದೆ. ರಸ್ತೆಕೂಡಿನಿಂದ ಹೊರಳಿ ಓಡಿಬರುತ್ತಿದ್ದ ಯಾರೋ ಒಬ್ಬ ಹೇಳಿದ: ‘ಬಾ ಬಾ, ಈ ಕಡೆ, ನೋಡಿದೆ ನಾನು ಅವ್ರನ್ನ. ತುಂಬಾ ದೂರ ಹೋಗಿರಲ್ಲ ಅವ್ರು.’ ನಾನು ಒಂದಷ್ಟು ಹೊತ್ತು ಅವನ ಹಿಂದೆ ಓಡಿದೆ.
ಆಮೇಲೆ ನಾನು ನಿಂತೆ. ಪೂರ್ತಿ ಬೆವೆತಿದ್ದೆ. ಯಾರೂ ಆಗ ಉಳಿದಿರಲಿಲ್ಲ, ಯಾವ ಗಲಾಟೆಯೂ ಕೇಳುತ್ತಿರಲಿಲ್ಲ. ಜೇಬಿನೊಳಗಡೆ ಕೈಯಿಳಿಸಿಕೊಂಡು ನಿಂತುಕೊಂಡೆ. ನಡೆಯತೊಡಗಿದೆ, ನನ್ನ ಪಾಡಿಗೆ ನಾನು, ಇಂಥಲ್ಲೇ ಹೋಗುವ ಉದ್ದೇಶವಿಲ್ಲದೆ.
ಸಮತೋಲವೆನ್ನುವುದು ನಾಜೂಕಾದ್ದು. ಎಲ್ಲರೂ ಅನುಸರಿಸಿಕೊಂಡು ಹೋದರೆ ಸರಿ. ಇಲ್ಲಾ ಸಣ್ಣ ಹೊಡೆತ ಬಿದ್ದರು ಒಡೆದುಹೋಗುವಂಥದ್ದು. ಎಲ್ಲವೂ ಒಂದಳತೆಯಲ್ಲಿ ನಡೆಯುತ್ತಿರುವ ಭ್ರಷ್ಟ ವ್ಯವಸ್ಥೆಯೊಳಗೆ ಸೇರಿಕೊಂಡ ಪ್ರಾಮಾಣಿಕನೊಬ್ಬ ತಾನೂ ತೊಂದರೆಗೊಳಗಾಗಿ ವ್ಯವಸ್ಥೆಯನ್ನೂ ಹದಗೆಡಿಸಿದಂತೆ. ಟ್ರಾಫಿಕ್ ಸಿಗ್ನಲ್ನಲ್ಲಿ ಎಲ್ಲರೂ ಮುನ್ನುಗ್ಗಬಯಸುವಾಗ ಇನ್ನೂ ಆರು ಸೆಕೆಂಡುಗಳಿವೆ ಎಂದು ಒಂದೊಂದೇ ಎಣಿಸುತ್ತ ಕಾಯ್ದು ಸಮಸ್ಥಿತಿಯಲ್ಲಿ ಅರಾಜಕತೆ ತಂದಂತೆ.
ವ್ಯಕ್ತಿಯ ಸಮತೋಲವೂ ಅಷ್ಟೇ ನಾಜೂಕಾದ್ದು. ಅದು ಎತ್ತ ಎಳೆದರತ್ತ ಬಾಗುವುದು. ಜನಜಂಗುಳಿಗನುಸಾರವಾಗಿ ನಡೆದುಕೊಳ್ಳುವುದು. ಇವರು ಅವರಿಗೆ ಮರಳು ಮಾಡಿದರೂ ಅವರು ಇವರಿಗೆ ಮರಳು ಮಾಡಿದರೂ ನಡುವೆ ತಾನೇ ಮರುಳಾದರೂ ಏನೂ ವ್ಯತ್ಯಾಸವಿಲ್ಲವಲ್ಲ!
ಅಗಾಧ ಕಲ್ಪಕತೆಯಿಂದ ಕಟ್ಟಿದ ವಾಸ್ತವಿಕತೆಯ ಭಾರವಿಲ್ಲದ ಅರ್ಥದ ಭಾರವೂ ಇಲ್ಲದ ಈ ಹಗುರ ಕತೆಗಳು ದೇಶದಿಂದ ದೇಶಕ್ಕೆ ಕಾಲದಿಂದ ಕಾಲಕ್ಕೆ ತೇಲುತ್ತ ಸಾರ್ವಕಾಲಿಕತೆಯನ್ನು ಪಡೆಯುತ್ತವೆ. ನಾವು ಆ ಒಂದು ಕ್ಷಣದಲ್ಲಿ ಕಂಡಂತೆ ಕಾಣಿಸಿಕೊಂಡು ಕ್ಷಣಿಕವಾಗಿ ಆರೋಪಿಸಿದ ಅರ್ಥಗಳನ್ನು ಗಾಳಿಯಲ್ಲಿ ತೂರಿ ಮತ್ತೆ ಮುಂದೆ ಸಾಗುತ್ತವೆ.