ಫ್ರಾಂಜ಼್ ಕಾಫ್ಕಾ The Married Couple (ಮೂಲ ಜರ್ಮನ್: Das Ehepaar) ಎಂಬ ಕಥೆಯನ್ನು 1922ರ ಸುಮಾರಿಗೆ ಬರೆದಿದ್ದನಾದರೂ ಅದು ಅವನ ಜೀವಿತಾವಧಿಯಲ್ಲಿ ಪ್ರಕಟವಾಗಲಿಲ್ಲ. ಅವನ ಮರಣಾನಂತರ 1931ರಲ್ಲಿ, ಅವನ ಗೆಳೆಯ ಮ್ಯಾಕ್ಸ್ ಬ್ರಾಡ್ (Max Brod) ಸಂಪಾದಿಸಿದ Beim Bau der Chinesischen Mauer ಎಂಬ ಕಥಾಸಂಕಲನದಲ್ಲಿ ಇದು ಮೊದಲ ಬಾರಿಗೆ ಬೆಳಕು ಕಂಡಿತು. ತರುವಾಯ ವಿಲ್ಲಾ ಮತ್ತು ಎಡ್ವಿನ್ ಮ್ಯೂರ್ (Willa and Edwin Muir) ಅವರ ಇಂಗ್ಲಿಷ್ ಅನುವಾದದಲ್ಲಿ The Great Wall of China. Stories and Reflections ಎಂಬ ಹೆಸರಿನಲ್ಲಿ 1933ರಲ್ಲಿ ಪ್ರಕಟವಾಯಿತು. ವಿಮರ್ಶಕ ಮತ್ತು ಅನುವಾದಕ ಸುಭಾಷ್ ರಾಜಮಾನೆಯವರು ಅದನ್ನು ಕನ್ನಡಕ್ಕೆ ತಂದಿದ್ದಾರೆ.
ವಿವಾಹಿತ ಜೋಡಿ
ಕೆಲವೊಮ್ಮೆ ವ್ಯವಹಾರವು ಅತ್ಯಂತ ಕೆಟ್ಟ ಸ್ಥಿತಿಯಲ್ಲಿದ್ದಾಗ, ಅದರಿಂದಾಗಿ ನನಗೆ ಕಛೇರಿಯಲ್ಲಿ ಒಂದಿಷ್ಟು ಬಿಡುವು ಸಿಗುತ್ತದೆ. ನನ್ನಷ್ಟಕ್ಕೆ ನಾನು ಕೆಲವು ಸ್ಯಾಂಪಲ್ಲುಗಳನ್ನು ಕೈಗೆತ್ತಿಕೊಳ್ಳುತ್ತೇನೆ. ನನ್ನ ಗ್ರಾಹಕರಿಗೆ ಖುದ್ದಾಗಿ ಕರೆ ಮಾಡುತ್ತೇನೆ. ನನಗೆ ತುಂಬ ಹಿಂದಿನಿಂದ ಎನ್. ಅವರನ್ನು ಬೇಟಿ ಮಾಡುವ ಉದ್ದೇಶವಿತ್ತು. ಹಿಂದೊಮ್ಮೆ ಅವರೊಂದಿಗೆ ಸ್ಥಿರವಾದ ವ್ಯಾವಹಾರಿಕ ಸಂಬಂಧಗಳಿದ್ದವು. ಆ ವ್ಯವಹಾರವು ಹೇಗೋ ಏನೋ ಕಳೆದ ವರ್ಷ ಸಂಪೂರ್ಣವಾಗಿಯೇ ನಿಂತು ಹೋಗಿದ್ದರಿಂದ ನನಗೆ ಅಪರಿಚಿತವಾಗಿ ಉಳಿದುಕೊಂಡಿದೆ. ಹೀಗೆ ಸಂಪರ್ಕ ಕಡಿದುಹೋಗಿರುವುದಕ್ಕೆ ಕಾರಣಗಳೇ ಇರುವುದಿಲ್ಲ; ಸದ್ಯದ ವ್ಯವಹಾರವು ಅಸ್ಥಿರವಾಗಿರುವ ಈ ಪರಿಸ್ಥಿತಿಯಲ್ಲಿ ಒಂದು ಭಾವವು ವ್ಯವಹಾರವನ್ನು ಕುದುರಿಸಬಲ್ಲದು; ಏನೂ ಇಲ್ಲದಿರುವ ಈ ಹೊತ್ತಿನಲ್ಲಿ ಒಂದು ಮಾತು ಸರಿಯಾದ ದಾರಿಯನ್ನು ತೋರಿಸಬಲ್ಲದು. ಎನ್. ಅವರೊಂದಿಗೆ ಸಂಪರ್ಕ ಸಾಧಿಸುವುದೆಂದರೆ ಇದೊಂದು ಪ್ರಚೋದಿತ ವ್ಯವಹಾರವೇ ಆಗುತ್ತದೆ; ವಯಸ್ಸಾಗಿರುವ ಈ ವ್ಯಕ್ತಿಯು ಚಂಚಲ ಸ್ವಭಾವದವನು. ಈಗಲೂ ವ್ಯವಹಾರದ ವಿಷಯಗಳಿಗೆ ತಾನಾಗಿಯೇ ಗಮನ ಕೊಡುತ್ತಾನೆ. ಅವನು ಕಛೇರಿಯಲ್ಲಿ ಇರುವುದೇ ಅಪರೂಪ. ಅವನೊಂದಿಗೆ ಮಾತನಾಡಬೇಕೆಂದರೆ ಆತನ ಮನೆಗೆ ಹೋಗಬೇಕಾಗುತ್ತದೆ. ಯಾರಾದರೂ ವ್ಯವಹಾರವನ್ನು ನಿಲ್ಲಿಸಬೇಕೆಂದರೆ ಇದೇ ಪದ್ಧತಿ ಇದ್ದಿರಬೇಕು.
ಇಷ್ಟಾದರೂ ನಾನು ಕಳೆದ ಸಂಜೆ ಆರು ಗಂಟೆಯ ಹೊತ್ತಿಗೆ ಅವರ ಮನೆಯ ಹೊರಗೆ ಕಾಯುತ್ತಿದ್ದೆ; ಕರೆಗಳನ್ನು ಮಾಡಲಿಕ್ಕೆ ಸಮಯವೇ ಇರಲಿಲ್ಲ. ಇಷ್ಟಾಗಿಯೂ ನನ್ನ ಭೇಟಿಯು ಶುದ್ದ ವ್ಯವಹಾರಿಕವೇ ಹೊರತು ಸಾಮಾಜಿಕವೇನೂ ಅಲ್ಲ. ನನಗೆ ಅದೃಷ್ಟ ಚೆನ್ನಾಗಿತ್ತು. ಎನ್. ಒಳಗಿದ್ದ. ಆತ ತನ್ನ ಹೆಂಡತಿಯೊಂದಿಗೆ ವಾಯುವಿಹಾರವನ್ನು ಮುಗಿಸಿಕೊಂಡು ಈಗಷ್ಟೆ ಬಂದಿದ್ದಾನೆಂದು ಸೇವಕ ಹೇಳಿದ. ಅವನು ತನ್ನ ಮಗನಿಗೆ ಹುಷಾರಿಲ್ಲದ್ದರಿಂದ ಅವನ ಕೋಣೆಯಲ್ಲಿದ್ದ; ಮಗ ಹಾಸಿಗೆಯಲ್ಲಿಯೇ ಬಿದ್ದುಕೊಂಡಿದ್ದ. ಅಲ್ಲಿಗೆ ಹೋಗಲು ನನ್ನನ್ನು ಕೇಳಿಕೊಂಡರು; ಮೊದಲು ನನಗೆ ಸಂಕೋಚವಾಯಿತು. ಆದರೆ ನೋಡದಿರುವ ನನ್ನ ಇಂಗಿತವನ್ನು ತಕ್ಷಣಕ್ಕೆ ಬದಲಿಸಿಕೊಂಡೆ. ಕೋಟು ಮತ್ತು ಟೋಪಿಯನ್ನು ಧರಿಸಿದ್ದ ನಾನು ಕೆಲವು ಸ್ಯಾಂಪಲ್ಲುಗಳೊಂದಿಗೆ ಕತ್ತಲ ಕೋಣೆಯ ಮೂಲಕ ಪ್ರವೇಶಿಸಿದೆ. ಅಲ್ಲಿ ಮಂದ ಬೆಳಕಿತ್ತು. ಒಂದು ಸಣ್ಣ ಕೂಟವೇ ಸೇರಿತ್ತು.

ನನ್ನ ಮೊದಲ ಗಮನವು ಪ್ರಾಯಶಃ ನನಗೆ ಚೆನ್ನಾಗಿ ಪರಿಚಯವಿದ್ದ, ಉದ್ಯೋಗದಲ್ಲಿ ಹಲವು ರೀತಿಯಲ್ಲಿ ನನ್ನೊಂದಿಗೆ ಪ್ರತಿಸ್ಪರ್ಧಿಯಾಗಿದ್ದ ಏಜೆಂಟ್ನ ಮೇಲೆ ಬಿತ್ತು. ಆತ ರೋಗಪೀಡಿತ ವ್ಯಕ್ತಿಯ ಹಾಸಿಗೆಯ ಪಕ್ಕದಲ್ಲಿಯೇ ತಾನೊಬ್ಬ ವೈದ್ಯನೇನೋ ಎಂಬ ಹಾಗೆ ಕುಳಿತಿದ್ದ; ಅವನು ತನ್ನ ಸುಂದರ ಕೋಟನ್ನು ಹಾಕಿಕೊಂಡು, ಬಿಚ್ಚಿದ ಬಟನ್ಗಳೊಂದಿಗೆ ಲಜ್ಜೆಗೆಟ್ಟವನಾಗಿ ಕುಳಿತಿದ್ದ; ಆ ಹಾಸಿಗೆಯ ಮೇಲೆ ಒರಗಿಕೊಂಡಿದ್ದ ರೋಗಪೀಡಿತ ವ್ಯಕ್ತಿಯ ಗಲ್ಲಗಳು ಜ್ವರದಿಂದ ಮೂರ್ಛಿತಗೊಂಡವನಂತೆ, ಬಹುಶಃ ಆತ ತನ್ನದೇ ವಿಚಾರಗಳನ್ನು ಹೊಂದಿರುವಂತೆ ಕಂಡವು. ಆಗೊಮ್ಮೆ ಈಗೊಮ್ಮೆ ಆತ ಆಗುಂತಕನನ್ನು ಗಮನಿಸುತ್ತಿದ್ದ. ಅವನು ತರುಣನಂತೆಯೂ ಎನ್.ನ ಮಗನಂತೆಯೂ ಕಾಣಲಿಲ್ಲ. ಸಣ್ಣ ಗಡ್ಡವನ್ನು ಬಿಟ್ಟಿದ್ದ ನನ್ನ ವಯಸ್ಸಿನ ಆ ವ್ಯಕ್ತಿಯು ಕಾಯಿಲೆಯಿಂದ ಜರ್ಜರಿತನಾಗಿದ್ದ. ವಯಸ್ಸಾದ ಎನ್. ಎತ್ತರದ, ನೀಳ ಭುಜಗಳನ್ನು ಹೊಂದಿದ್ದ ಮನುಷ್ಯ; ಆದರೆ ಅವನು ತುಂಬ ಸಣಕಲಾಗಿದ್ದ. ಬಳ್ಳಿಯಂತೆ ಬಾಗಿದ್ದ ಮತ್ತು ಅಸ್ಥಿರನಾಗಿದ್ದ. ಈಗಲೂ ಉಣ್ಣೆಯ ಕೋಟನ್ನು ಧರಿಸಿದವನಾಗಿ ಬಂದ ಮತ್ತು ತನ್ನ ಮಗನೊಂದಿಗೆ ಏನನ್ನೊ ಗೊಣಗಿದ. ಆತನ ಹೆಂಡತಿ ಕುಳ್ಳನೆಯ ಮತ್ತು ಚಂಚಲ ಸ್ವಭಾವದವಳಾಗಿದ್ದರೂ ಅತ್ಯುತ್ಸಾಹದಿಂದ ಆತನ ಕೋಟನ್ನು ತೆಗೆದಿರಿಸಲು ನೆರವಾದಳು. ಅವರಿಬ್ಬರ ಎತ್ತರದಲ್ಲಿ ದೊಡ್ಡ ವ್ಯತ್ಯಾಸವಿದ್ದದ್ದು ಕಾಣುತ್ತಿತ್ತು. ಅದರಿಂದಾದ ದೊಡ್ಡ ಕಷ್ಟವನ್ನು ನಿಭಾಯಿಸಲಾಯಿತು. ಎನ್.ನ ಅಸಹನೆಯ ಕಾರಣದಿಂದ ನಿಜಕ್ಕೂ ಕಷ್ಟವಾಯಿತು. ಆತನ ಹೆಂಡತಿಯು ಕೋಟನ್ನು ತೆಗೆದಿರಿಸಿದ ನಂತರದಲ್ಲಿ ಗಂಡನ ಅವಿಶ್ರಾಂತ ಕೈಗಳ ಬೆಚ್ಚನೆಯ ಭಾವಕ್ಕಾಗಿ ಥಟ್ಟನೆ ಆರಾಮ ಕುರ್ಚಿಯನ್ನು ಮುಂದಕ್ಕೆ ತಳ್ಳಿದಳು. ಆಕೆ ಉಣ್ಣೆಯ ಕೋಟನ್ನು ತೆಗೆದುಕೊಂಡಳು ಮತ್ತು ಬಹುತೇಕವಾಗಿ ಕುಸಿದು ಹೋದಳು.
ಈಗ ಅಂತಿಮವಾಗಿ, ನನ್ನ ಕ್ಷಣ ಬಂತೆನೋ ಅಂತ ಅನ್ನಿಸಿತು ಅಥವಾ ಅದು ಬರಲಾರದೇನೋ ಹಾಗೂ ಪ್ರಾಯಶಃ ಅದು ಎಂದಿಗೂ ಬರಲಾರದೇನೋ; ಆದರೂ ನಾನು ಏನನ್ನಾದರೂ ಪ್ರಯತ್ನಿಸಬೇಕಾದರೆ ಅದನ್ನು ತಕ್ಷಣವೇ ಮಾಡಬೇಕಿತ್ತು. ಇಲ್ಲವಾದರೆ ನನಗೆ ಇಲ್ಲಿ ವ್ಯಾಪಾರದ ಮಾತುಕತೆಗೆ ಪರಿಸ್ಥಿತಿಯು ಹೆಚ್ಚು ಪ್ರತಿಕೂಲವಾಗುತ್ತ ಹೋಗುತ್ತದೆ ಎಂದೆನಿಸಿತು. ಏಜೆಂಟನು ಉದ್ದೇಶಿಸಿದಂತೆ ನಾನು ಇಲ್ಲಿಯೇ ಶಾಶ್ವತವಾಗಿ ನೆಲೆಸುವುದು ನನ್ನ ಉದ್ದೇಶವಾಗಿರಲಿಲ್ಲ. ನಾನು ಅವನ ಕಡೆಗೆ ಸ್ವಲ್ಪವೂ ಗಮನ ಕೊಡಲು ಹೋಗಲಿಲ್ಲ. ಆದ್ದರಿಂದ ನಾನು ಯಾವುದೇ ಔಪಚಾರಿಕತೆ ಇಲ್ಲದೆಯೇ ನನ್ನ ವಿಷಯವನ್ನು ಹೇಳಲು ಆರಂಭಿಸಿದೆ. ಆದರೆ ಆ ಕ್ಷಣದಲ್ಲಿ ಎನ್. ತನ್ನ ಮಗನೊಂದಿಗೆ ಮಾತನಾಡಲು ಇಷ್ಟಪಡುತ್ತಿರುವುದು ನನ್ನ ಗಮನಕ್ಕೆ ಬಂದಿತು. ದುರದೃಷ್ಟವಶಾತ್ ನಾನು ಯಾವುದಾದರೂ ವಿಷಯದಲ್ಲಿ ತನ್ಮಯನಾದಾಗ ಅದಕ್ಕೆ ತುಂಬ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಈ ಸಂದರ್ಭದಲ್ಲಿಯೂ ಎಂದಿಗಿಂತ ಕಡಿಮೆ ಸಮಯವೇ ತೆಗೆದುಕೊಂಡಿತು. ನಾನು ಮಾತನಾಡುವಾಗ ನನಗೆ ಅತ್ತಿತ್ತ ನಡೆದಾಡುವ ಅಭ್ಯಾಸವಿದೆ. ಸ್ವಂತ ಕಛೇರಿಯಲ್ಲಿ ಈ ಅಭ್ಯಾಸವು ಸರಿಯೆನಿಸಿದರೂ ಅಪರಿಚಿತರ ಮನೆಯಲ್ಲಿ ಇದು ಮುಜುಗರ ತರಬಹುದು. ಆದರೆ ನನ್ನನ್ನು ನಾನು ಸಂಭಾಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಹೊತ್ತಿಗೆ ಎಂದಿನಂತೆ ಸೇದಲು ನನ್ನ ಬಳಿ ಸಿಗರೇಟ್ ಕೂಡ ಇರಲಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಅವನದೇ ಆದ ಕೆಟ್ಟ ಚಟಗಳಿರುತ್ತವೆ. ಆದರೆ ಏಜೆಂಟನ ಚಟಗಳ ಬಗ್ಗೆ ಯೋಚಿಸಿದಾಗ ನನ್ನ ಚಟಗಳ ಬಗ್ಗೆ ನನಗೆ ಹೆಮ್ಮೆ ಅನ್ನಿಸಿತು. ಅವನ ನಡವಳಿಕೆಯ ಬಗ್ಗೆ ಹೇಳುವುದಾದರೆ, ಅವನು ತನ್ನ ಟೋಪಿಯನ್ನು ಪದೇ ಪದೇ ತಲೆಯ ಮೇಲೆ ಇಟ್ಟುಕೊಳ್ಳುತ್ತಿದ್ದ; ಅದನ್ನು ಮಂಡಿಯ ಮೇಲೆ ಹಿಡಿದುಕೊಂಡು ನಿಧಾನವಾಗಿ ಮೇಲೆ ಕೆಳಗೆ ತಳ್ಳುತ್ತಿದ್ದ. ಅವನು ಏನೋ ತಪ್ಪು ಮಾಡಿದವನಂತೆ ಅದನ್ನು ತಟಕ್ಕನೆ ತೆಗೆದ. ಒಂದೆರೆಡು ಸೆಕೆಂಡು ತನ್ನ ತಲೆಯ ಮೇಲೆಯೇ ಇಟ್ಟುಕೊಂಡಿದ್ದ. ಅವನು ಅದನ್ನೆ ಮತ್ತೆ ಮತ್ತೆ ಪುನರಾವರ್ತಿಸಿದ. ಇಂತಹ ನಡವಳಿಕೆಯು ಖಂಡಿತ ಕ್ಷಮಿಸಲಾಗದ್ದು. ಆದರೆ ನನಗೇನು ಇದರಿಂದ ತೊಂದರೆ ಆಗಲಿಲ್ಲ. ನಾನು ನನ್ನದೇ ಪ್ರಸ್ತಾಪಗಳಲ್ಲಿ ಮುಳುಗಿ ಹೋಗಿದ್ದರಿಂದ ಅವನನ್ನು ನಿರ್ಲಕ್ಷಿಸಿ ಅತ್ತಿತ್ತ ನಡೆದಾಡುತ್ತಿದ್ದೆ. ಆದರೆ ಆತನ ಟೋಪಿಯ ಆ ಚಾತುರ್ಯವು ಎಂಥವರನ್ನಾದರೂ ದಿಕ್ಕು ತಪ್ಪಿಸಬಹುದಾಗಿತ್ತು. ನಾನು ಕೆಲಸದಲ್ಲಿ ಮುಳುಗಿದ್ದಾಗ ಇಂತಹದನ್ನೆಲ್ಲ ನಿರ್ಲಕ್ಷಿಸುತ್ತೇನೆ. ನನ್ನ ಸುತ್ತಲೂ ನಡೆಯುವುತ್ತಿರುವುದನ್ನು ನಾನು ಗಮನಿಸುವುದು ನಿಜವಾದರೂ ನನ್ನ ಮಾತು ಮುಗಿವ ತನಕ ಅಥವಾ ಯಾವುದೇ ಆಕ್ಷೇಪಣೆ ಬರುವ ತನಕ ಅದನ್ನು ನನ್ನ ತಲೆಗೆ ಹಾಕಿಕೊಳ್ಳುವುದಿಲ್ಲ.
ಹೀಗಾಗಿ ಎನ್. ಯಾವುದೇ ರೀತಿಯಲ್ಲೂ ಗ್ರಹಿಸುವ ಸ್ಥಿತಿಯಲ್ಲಿರಲಿಲ್ಲ ಎಂಬುದನ್ನು ನಾನು ಗಮನಿಸಿದೆ. ಅವನು ತನ್ನ ಕುರ್ಚಿಯ ತೋಳುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಅಸಹಜವಾಗಿ ಅತ್ತಿತ್ತ ತಿರುಗುತ್ತಿದ್ದ. ಒಂದು ಕ್ಷಣವೂ ನನ್ನ ಕಡೆಗೆ ಕಣ್ಣೆತ್ತಿ ನೋಡಲಿಲ್ಲ; ಬದಲಿಗೆ ಏನನ್ನೋ ಹುಡುಕುತ್ತಿರುವಂತೆ ಶೂನ್ಯತೆಯನ್ನು ದಿಟ್ಟಿಸುತ್ತಿದ್ದ. ಅವನ ಮುಖಭಾವವು ನಿಶ್ಚಲವಾಗಿತ್ತು; ನನ್ನ ಒಂದು ಮಾತು ಕೂಡ ಅಥವಾ ಇರುವಿಕೆಯ ಅರಿವು ಕೂಡ ಅವನ ಗಮನಕ್ಕೆ ಬಂದಿಲ್ಲ ಎಂದು ಯಾರಾದರೂ ಭಾವಿಸಬಹುದಿತ್ತು. ಒಬ್ಬ ಕಾಯಿಲೆಪೀಡಿತ ವ್ಯಕ್ತಿಯಂತಿದ್ದ ಅವನ ನಡವಳಿಕೆಯು ನನಗೆ ಅಮಂಗಳವಾಗಿ ತೋರುತ್ತಿದ್ದರೂ ಅದನ್ನು ಚೆನ್ನಾಗಿ ಗ್ರಹಿಸಿದೆ; ಆದರೂ ಲಾಭದಾಯಕ ಕೊಡುಗೆಗಳ ಮೂಲಕ ಎಲ್ಲವನ್ನೂ ಮತ್ತೆ ಸರಿಪಡಿಸುವ ಸಣ್ಣ ಆಶಾಭಾವನೆಯಿಂದ ಮಾತನಾಡುತ್ತಲೇ ಹೋದೆ. ಸ್ವತಃ ನಾನೇ ನೀಡಿದ ರಿಯಾಯಿತಿಗಳನ್ನು ಕಂಡು ನನಗೆ ಅಚ್ಚರಿಯಾಯಿತು. ಈ ರಿಯಾಯಿತಿಗಳನ್ನು ಯಾರೂ ಕೇಳಿರಲಿಲ್ಲ. ಆ ಏಜೆಂಟನು ಕೊನೆಗೂ ತನ್ನ ಟೋಪಿಯನ್ನು ನೆಮ್ಮದಿಯಿಂದ ಬಿಟ್ಟು ತನ್ನ ಎದೆಯ ಮೇಲೆ ಕೈಗಳನ್ನು ಕಟ್ಟಿಕೊಂಡಿರುವುದನ್ನು ಗಮನಿಸಿದಾಗ ನನಗೂ ನಿರಾಳ ಭಾವ ಮೂಡಿತು. ನನ್ನ ಈ ಪ್ರದರ್ಶನವು ಭಾಗಶಃ ಅವನಿಗಾಗಿಯೇ ಉದ್ದೇಶಿಸಲಾಗಿತ್ತು ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು; ಇದು ಅವನ ಯೋಜನೆಗಳಿಗೆ ತೀವ್ರವಾದ ಪೆಟ್ಟು ನೀಡಿದಂತೆ ತೋರಿತು. ಈ ಫಲಿತಾಂಶದಿಂದ ಉಂಟಾದ ಉತ್ಸಾಹದಲ್ಲಿ ನಾನು ಬಹುಶಃ ಇನ್ನೂ ದೀರ್ಘಕಾಲ ಮಾತನಾಡುತ್ತಲೇ ಇರುತ್ತಿದ್ದೇನೆನೋ. ಆದರೆ ಅಲ್ಲಿಯವರೆಗೆ ನನ್ನ ಯೋಜನೆಗಳಲ್ಲಿ ಗೌಣವೆಂದು ನಾನು ಭಾವಿಸಿದ್ದ ಅವನ ಮಗ ಹಠಾತ್ತಾಗಿ ತನ್ನ ಹಾಸಿಗೆಯಿಂದ ಎದ್ದು ಕುಳಿತು ತನ್ನ ಮುಷ್ಟಿಯನ್ನು ಅಲ್ಲಾಡಿಸುತ್ತ ನನ್ನ ಗಮನ ಸೆಳೆದ. ಅವನು ಏನೋ ಹೇಳಲು ಬಯಸುತ್ತಿದ್ದ; ಏನನ್ನೋ ತೋರಿಸಲು ಹವಣಿಸುತ್ತಿದ್ದ; ಆದರೆ ಅವನಿಗೆ ಅಷ್ಟು ತ್ರಾಣವಿರಲಿಲ್ಲ. ಅವನ ಮನಸ್ಸು ಎಲ್ಲೋ ಅಲೆಯುತ್ತಿದೆ ಎಂದು ನಾನು ಭಾವಿಸಿದೆ. ಆದರೆ ನಾನು ತಿಳಿಯದೆಯೇ ಮುದುಕ ಎನ್. ಕಡೆಗೆ ಕಣ್ಣಾಡಿಸಿದಾಗ ನನಗೆ ವಿಷಯ ಮನದಟ್ಟಾಯಿತು.
ಎನ್. ಕಣ್ಣುಗಳು ಅಗಲವಾಗಿದ್ದವು; ಉಬ್ಬಿದ ನಿರ್ಜೀವ ನೋಟದಿಂದ ಕುಳಿತಿದ್ದ; ದೃಷ್ಟಿ ಕಳೆದುಕೊಳ್ಳುವ ಹಂತದಲ್ಲಿದ್ದಂತೆ ಕಾಣುತ್ತಿದ್ದ; ಅವನು ನಡುಗುತ್ತಿದ್ದ. ಯಾರೋ ಅವನನ್ನು ಕೆಳಕ್ಕೆ ಒತ್ತಿ ಹಿಡಿದಿರುವಂತೆ ಅಥವಾ ಅವನ ಹೆಗಲ ಮೇಲೆ ಹೊಡೆಯುತ್ತಿರುವಂತೆ ಅವನ ದೇಹವು ಮುಂದಕ್ಕೆ ಬಾಗಿತ್ತು. ಅವನ ಕೆಳತುಟಿ, ಕೆಳದವಡೆಯ ಒಸಡುಗಳು ಕಾಣಿಸುತ್ತಿದ್ದವು. ಮುಖವು ತನ್ನ ಆಕಾರವನ್ನು ಕಳೆದುಕೊಂಡ ಹಾಗೆ ಕಾಣುತ್ತಿತ್ತು. ಅವನು ಕಷ್ಟಪಟ್ಟು ಉಸಿರಾಡುತ್ತಿದ್ದ. ಆದರೆ ಅವನನ್ನು ಯಾರೋ ಬಿಡುಗಡೆ ಮಾಡಿದಂತೆ ಕುರ್ಚಿಯ ಹಿಂಭಾಗಕ್ಕೆ ಒರಗಿಕೊಂಡ; ಕಣ್ಣುಗಳನ್ನು ಮುಚ್ಚಿದ; ಅವನ ಮುಖದ ಮೇಲೆ ಒತ್ತಡದ ಯಾವುದೋ ದೊಡ್ಡ ಗುರುತು ಕಂಡಂತಾಗಿ ಹಾಗೆ ಕಣ್ಮರೆಯಾಯಿತು ಮತ್ತು ಎಲ್ಲವೂ ಮುಗಿದು ಹೋಯಿತು. ನಾನು ಅವನ ಬಳಿ ಧಾವಿಸಿ ಕೈಯನ್ನು ಹಿಡಿದುಕೊಂಡೆ. ಅದು ಎಷ್ಟು ತಣ್ಣಗಿತ್ತೆಂದರೆ ನನಗೆ ನಡುಕ ಉಂಟಾಯಿತು. ನಾಡಿಮಿಡಿತ ನಿಂತು ಹೋಗಿತ್ತು. ಹಾಗಾಗಿ ಎಲ್ಲವೂ ಮುಗಿದಿತ್ತು. ಅವನಿಗೆ ತುಂಬ ವಯಸ್ಸಾಗಿತ್ತು. ನಮಗೂ ಇಂತಹ ಸುಲಭದ ಸಾವು ಒದಗಿ ಬಂದರೆ ನಾವೂ ಅದೃಷ್ಟವಂತರು. ಆದರೆ ಮಾಡಬೇಕಾದ ಕೆಲಸಗಳು ಎಷ್ಟೊಂದಿವೆ! ಈಗ ನಾನೇನು ಮಾಡಬೇಕು? ಸಹಾಯಕ್ಕಾಗಿ ಸುತ್ತಲೂ ನೋಡಿದೆ. ಆದರೆ ಮಗ ತನ್ನ ತಲೆಯವರೆಗೂ ಹೊದಿಕೆಯನ್ನು ಎಳೆದುಕೊಂಡಿದ್ದ. ಅವನು ಜೋರಾಗಿ ಬಿಕ್ಕಿ ಬಿಕ್ಕಿ ಅಳುತ್ತಿರುವುದು ನನಗೆ ಕೇಳಿಸುತ್ತಿತ್ತು. ಆ ಏಜೆಂಟ್ ತಣ್ಣನೆಯ ಮೀನಿನಂತೆ ಎನ್.ನಿಂದ ಎರಡು ಹೆಜ್ಜೆ ದೂರದಲ್ಲಿ ತನ್ನ ಕುರ್ಚಿಯ ಮೇಲೆ ನಿಶ್ಚಲನಾಗಿ ಕುಳಿತಿದ್ದ. ಕಾಲವು ಏನನ್ನು ತರಲಿದೆಯೋ ಎಂದು ಕಾಯುತ್ತ ಏನನ್ನೂ ಮಾಡದಿರಲು ನಿರ್ಧರಿಸಿದ್ದ. ನಾನೇ ಇಲ್ಲಿ ಈಗ ಏನನ್ನಾದರೂ ಮಾಡಬೇಕಿತ್ತು. ಯಾರಾದರೂ ಮಾಡಲು ಹೇಳಬಹುದಾದ ತೀರ ಕಷ್ಟದ ಕೆಲಸವದು; ಆ ಸುದ್ದಿಯನ್ನು ಅವನ ಹೆಂಡತಿಗೆ ಸಹಿಸಬಹುದಾದ ಯಾವುದಾದರೂ ರೂಪದಲ್ಲಿ ತಿಳಿಸಬೇಕಾಗಿತ್ತು. ಅಂದರೆ ಅಸ್ತಿತ್ವದಲ್ಲೇ ಇಲ್ಲದ ಒಂದು ರೂಪದಲ್ಲಿ ಹೇಳಬೇಕಾಗಿತ್ತು. ಅದಾಗಲೇ ಪಕ್ಕದ ಕೋಣೆಯಲ್ಲಿ ಅವಳ ಹೆಜ್ಜೆಯ ಮಂದ ಸಪ್ಪಳ ನನಗೆ ಕೇಳಿಸುತ್ತಿತ್ತು.
ಅವಳು ಇನ್ನೂ ಮನೆ ಹೊರಗೆ ಧರಿಸುವ ಉಡುಪುಗಳಲ್ಲೇ ಇದ್ದಳು; ಅವಳಿಗೆ ಬಟ್ಟೆ ಬದಲಾಯಿಸಲು ಸಮಯ ಸಿಕ್ಕಿರಲಿಲ್ಲ; ಅವಳು ತನ್ನ ಗಂಡನಿಗೆ ಧರಿಸಲು ಬೆಚ್ಚಗಿನ ರಾತ್ರಿ ಉಡುಪನ್ನು ತಂದಳು. ಅವಳು ನಗುತ್ತಾ ಮತ್ತು ತಲೆಯಾಡಿಸುತ್ತಾ ನಾವು ಅಷ್ಟು ನಿಶ್ಚಲವಾಗಿ ಕುಳಿತಿರುವುದನ್ನು ನೋಡಿ, “ಅವರು ನಿದ್ರೆಗೆ ಜಾರಿದ್ದಾರೆ,” ಎಂದಳು. ನಾನು ಸ್ವಲ್ಪ ಸಮಯದ ಮುಂಚೆ ಭಯ ಮತ್ತು ಅಸಹ್ಯದಿಂದ ಯಾವ ಕೈಯನ್ನು ಹಿಡಿದುಕೊಂಡಿದ್ದೇನೋ ಅವಳು ಯಾವುದೇ ನಿರಪರಾಧಿ ಭಾವದಿಂದಲೇ ಅತ್ಯಂತ ಮುಗ್ಧತೆಯಿಂದ ಅದೇ ಕೈಯವನ್ನು ಎತ್ತಿಕೊಂಡು ತಮಾಷೆಯಾಗಿ ಚುಂಬಿಸಿದಳು. ನಮ್ಮಲ್ಲಿ ಉಳಿದ ಮೂವರು ಆ ದೃಶ್ಯವನ್ನು ಹೇಗೆ ತಾನೆ ಸಹಿಸಲು ಸಾಧ್ಯವಿತ್ತು?
ಈಗ ಎನ್. ನಿಧಾನವಾಗಿ ಕೊಸರಾಡಿದ ಮತ್ತು ಜೋರಾಗಿ ಆಕಳಿಸಿದ. ತನಗೆ ರಾತ್ರಿಯ ಉಡುಪನ್ನು ತೊಡಿಸಲು ಸಹಕರಿಸಿದ; ಅತಿಯಾದ ನಡಿಗೆಯಿಂದ ದಣಿದು ಹೋಗಿದ್ದಕ್ಕಾಗಿ ಅವನ ಹೆಂಡತಿಯ ಕೋಮಲ ಆಕ್ಷೇಪಣೆಗಳನ್ನು ಕಿರಿಕಿರಿ ಮತ್ತು ವ್ಯಂಗ್ಯದ ಪ್ರತಿಕ್ರಿಯೆಯಿಂದ ಸಹಿಸಿಕೊಂಡ. ಅವನು ನಿದ್ರೆಗೆ ಜಾರಿದ್ದಕ್ಕೆ ಬೇರೆ ವಿವರಣೆಯನ್ನು ನೀಡಲು ತನಗೆ ಬೇಸರವಾಗುತ್ತಿರುವುದರ ಬಗ್ಗೆ ಏನೋ ಹೇಳಿದ. ತನಗೆ ಶೀತವಾಗಬಾರದೆಂದು ತನ್ನ ಮಗನ ಹಾಸಿಗೆಯ ಮೇಲೆ ಮಲಗಿದ. ಅವನ ಹೆಂಡತಿ ಅವಸರದಿಂದ ತಂದ ಎರಡು ಮೆತ್ತೆಗಳ ಮೇಲೆ ಅವನ ತಲೆಯನ್ನು ಮಗನ ಪಾದಗಳ ಪಕ್ಕದಲ್ಲಿ ಇರಿಸಲಾಗಿತ್ತು. ಇದಕ್ಕೂ ಮೊದಲು ನಡೆದದ್ದನ್ನೆಲ್ಲ ನೋಡಿದ ಮೇಲೆ ನನಗೆ ಇದರಲ್ಲಿ ವಿಶೇಷ ವಿಚಿತ್ರವೇನೂ ಅನಿಸಲಿಲ್ಲ. ನಂತರ ಅವನು ಸಂಜೆಯ ಪತ್ರಿಕೆಯನ್ನು ಕೇಳಿದ; ತನ್ನ ಅತಿಥಿಗಳಿಗೆ ಯಾವುದೇ ಗಮನ ಕೊಡದೆ ಅದನ್ನು ಓದಲು ತೆರೆದ. ಆದರೆ ಅದನ್ನು ಓದಲಿಲ್ಲ. ಕೇವಲ ಅಲ್ಲಿ ಇಲ್ಲಿ ಕಣ್ಣಾಡಿಸಿದ. ನಮ್ಮ ಪ್ರಸ್ತಾಪಗಳ ಬಗ್ಗೆ ಅತ್ಯಂತ ಅಪ್ರಿಯವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ. ಆ ಅಭಿಪ್ರಾಯಗಳು ಆಶ್ಚರ್ಯ ಎನ್ನುವಷ್ಟು ಚತುರತೆಯಿಂದ ಕೂಡಿದ್ದವು. ಅದೇ ಸಮಯದಲ್ಲಿ ಅವನು ತಿರಸ್ಕಾರದಿಂದ ತನ್ನ ಕೈಯನ್ನು ಗಾಳಿಯಲ್ಲಿ ಆಡಿಸಿದ. ನಮ್ಮ ವ್ಯವಹಾರದ ನಡೆ ಅವನಿಗೆ ಇಷ್ಟವಾಗಿಲ್ಲ ಎಂದು ಸೂಚಿಸಿದ. ಏಜೆಂಟ್ ಒಂದೆರಡು ಅನುಚಿತ ಮಾತುಗಳನ್ನು ಆಡುವುದರಿಂದ ತನ್ನನ್ನು ತಾನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಅವನು ನಡೆದ ಘಟನೆಯ ನಂತರ ತನಗೆ ಏನಾದರೂ ಪರಿಹಾರ ಸಿಗಬೇಕೆಂದು ಭಾವಿಸಿರಬಹುದು. ಆದರೆ ಅದನ್ನು ಪಡೆದುಕೊಳ್ಳಲು ಅವನು ಆರಿಸಿಕೊಂಡ ಹಾದಿ ಬಲು ಕೆಟ್ಟದಾಗಿತ್ತು. ನಾನು ಎಷ್ಟು ಸಾಧ್ಯವೋ ಅಷ್ಟು ಬೇಗ ವಿದಾಯ ಹೇಳಿದೆ. ನಾನು ಏಜೆಂಟನಿಗೆ ಕೃತಜ್ಞನಾಗಿದ್ದೆ ಎನಿಸಿತು; ಒಂದು ವೇಳೆ ಅವನು ಅಲ್ಲಿ ಇರದೇ ಇದ್ದಿದ್ದರೆ ನನಗೆ ಅಷ್ಟು ಬೇಗ ಹೊರಡಲು ಧೈರ್ಯ ಬರುತ್ತಿರಲಿಲ್ಲ.
ನಾನು ಹಜಾರದಲ್ಲಿ ಫ್ರೌ ಎನ್. ಅವರನ್ನು ಮತ್ತೊಮ್ಮೆ ಭೇಟಿಯಾದೆ. ಅವಳ ದಾರುಣ ಆಕೃತಿಯನ್ನು ನೋಡಿದ ನನಗೆ ತಕ್ಷಣವೇ ನನ್ನ ಅಮ್ಮನ ನೆನಪಾಯಿತು ಎಂದು ಹೇಳಿದೆ. ಅವಳು ಮೌನವಾಗಿಯೇ ಇದ್ದಾಗ, “ಜನರು ಏನೇ ಹೇಳಲಿ, ಅವಳು ಅದ್ಭುತಗಳನ್ನೇ ಮಾಡಬಲ್ಲವಳಾಗಿದ್ದಳು. ನಾವು ಹಾಳು ಮಾಡಿದ ವಸ್ತುಗಳನ್ನು ಅವಳು ಮತ್ತೆ ಪೂರ್ತಿಯಾಗಿ ಸರಿಪಡಿಸಬಲ್ಲವಳಾಗಿದ್ದಳು. ನಾನು ಇನ್ನೂ ಮಗುವಾಗಿದ್ದಾಗಲೇ ಅವಳನ್ನು ಕಳೆದುಕೊಂಡೆ,” ಎಂದು ಹೇಳಿದೆ. ಆ ವೃದ್ಧೆಗೆ ಕಿವಿ ಸರಿಯಾಗಿ ಕೇಳಿಸುವುದಿಲ್ಲ ಎಂದು ನಾನು ಭಾವಿಸಿದ್ದರಿಂದ ಉದ್ದೇಶಪೂರ್ವಕವಾಗಿಯೇ ನಿಧಾನವಾಗಿ ಮತ್ತು ಗಟ್ಟಿಯಾಗಿ ಮಾತನಾಡಿದ್ದೆ. ಆದರೆ ಅವಳಿಗೆ ಸಂಪೂರ್ಣವಾಗಿ ಕಿವಿ ಕೇಳಿಸುತ್ತಿರಲಿಲ್ಲ ಅನ್ನಿಸುತ್ತದೆ. ಏಕೆಂದರೆ ಅವಳು ಯಾವುದೇ ಮುನ್ಸೂಚನೆಯಿಲ್ಲದೆ ನನಗೆ ನೇರವಾಗಿ, “ನನ್ನ ಗಂಡ ನಿನಗೆ ಹೇಗೆ ಕಾಣಿಸುತ್ತಾನೆ?” ಎಂದು ಕೇಳಿದಳು. ಕೊನೆಯಲ್ಲಿ ಆಡಿದ ವಿದಾಯದ ಮಾತುಗಳಿಂದ ಅವಳು ನನ್ನನ್ನು ಏಜೆಂಟ್ ಎಂದು ತಪ್ಪಾಗಿ ಭಾವಿಸಿದ್ದಾಳೆ ಎಂಬುದು ನನಗೆ ತಿಳಿಯಿತು. ಇಲ್ಲದಿದ್ದರೆ ಅವಳು ಇನ್ನೂ ಹೆಚ್ಚು ಮುಕ್ತವಾಗಿ ಮಾತನಾಡುತ್ತಿದ್ದಳು ಎಂದೆನಿಸಿತು.
ನಂತರದಲ್ಲಿ ನಾನು ಮೆಟ್ಟಿಲುಗಳನ್ನು ಇಳಿದು ಬಂದೆ: ಮೇಲಕ್ಕೆ ಹತ್ತಿದ್ದಕ್ಕಿಂತ ಕೆಳಗೆ ಇಳಿಯುವುದು ಹೆಚ್ಚು ಪ್ರಯಾಸಕರವಾಗಿತ್ತು. ಮೇಲಕ್ಕೆ ಹತ್ತುವುದು ಕೂಡ ಅಷ್ಟು ಸುಲಭವಾಗಿರಲಿಲ್ಲ. ಎಷ್ಟೋ ವ್ಯವಹಾರದ ಕರೆಗಳು ಯಾವುದೇ ಫಲ ನೀಡುವುದಿಲ್ಲ. ಆದರೂ ಮುಂದೆ ಸಾಗುತ್ತಲೇ ಇರಬೇಕು.
ಸುಭಾಷ್ ರಾಜಮಾನೆ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕುಸನಾಳದ ಸುಭಾಷ್ ರಾಜಮನೆಯವರು ಹೊಸ ತಲೆಮಾರಿನ ವಿಮರ್ಶಕರು. ಹಲವು ಕೃತಿಗಳನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಕಂಡದ್ದು ಕಾಣದ್ದು: ಕೃತಿ ಜಗತ್ತಿಗೆ ಹೀಗೊಂದು ಪಯಣ ಎಂಬ ಅವರ ಸಾಹಿತ್ಯಿಕ ಲೇಖನಗಳ ಸಂಗ್ರಹವು ಆಕೃತಿ ಪುಸ್ತಕದಿಂದ 2024ರಲ್ಲಿ ಪ್ರಕಟವಾಗಿ ಮೆಚ್ಚುಗೆ ಗಳಿಸಿದೆ. ರಾಜಮಾನೆಯವರು ಬೆಂಗಳೂರಿನಲ್ಲಿ ನೆಲಸಿ ಸರ್ಕಾರಿ ಆರ್. ಸಿ. ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಕನ್ನಡ ಅದ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ …
ಶಿಕ್ಷೆಗೆ ತಕ್ಕ ಅಪರಾಧದ ಅರಸುವಿಕೆ
ಮಿಲಾನ್ ಕುಂದೇರಾ (Milan Kundera) ಹೇಳಿದ ಒಂದು Kafkaesque ಕತೆಯ ನೆಪದಲ್ಲಿ ಕಾಫ್ಕಾನ ಪ್ರಮುಖ ಕತೆಗಳ ಕೆಲವು ಲಕ್ಷಣಗಳ ಕುರಿತು ಸಂಕೇತ ಪಾಟೀಲ ಟಿಪ್ಪಣಿ ಬರೆದಿದ್ದಾರೆ.




