ಮಿಲಾನ್ ಕುಂದೇರಾ (Milan Kundera) ಹೇಳಿದ ಒಂದು Kafkaesque ಕತೆಯ ನೆಪದಲ್ಲಿ ಕಾಫ್ಕಾನ ಪ್ರಮುಖ ಕತೆಗಳ ಕೆಲವು ಲಕ್ಷಣಗಳ ಕುರಿತು ಸಂಕೇತ ಪಾಟೀಲ ಟಿಪ್ಪಣಿ ಬರೆದಿದ್ದಾರೆ.
ಪ್ರಾಗ್ನ (Prague) ಒಬ್ಬ ಎಂಜಿನಿಯರ್ನನ್ನು ಲಂಡನ್ನಲ್ಲಿ ನಡೆಯುತ್ತಿರುವ ವೃತ್ತಿಪರ ಸಮ್ಮೇಳನವೊಂದಕ್ಕೆ ಆಹ್ವಾನಿಸಲಾಗುತ್ತದೆ. ಅದಕ್ಕೆ ಅವನು ಹೋಗುತ್ತಾನೆ, ಅಲ್ಲಿನ ಕಲಾಪಗಳಲ್ಲಿ ಭಾಗವಹಿಸಿ ಪ್ರಾಗ್ಗೆ ಹಿಂದಿರುಗುತ್ತಾನೆ. ಅವನು ಹಿಂದಿರುಗಿದ ಕೆಲವು ಗಂಟೆಗಳ ನಂತರ, ತನ್ನ ಕಚೇರಿಯಲ್ಲಿ ಕುಳಿತಿರುವಾಗ “ರೂಡೆ ಪ್ರಾವೋ”1—ಅದು ಪಾರ್ಟಿಯ ದೈನಿಕ ಪತ್ರಿಕೆ—ಕೈಗೆತ್ತಿಕೊಂಡು ಓದುತ್ತಾನೆ: ಲಂಡನ್ನಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಭಾಗವಹಿಸಿದ ಒಬ್ಬ ಚೆಕ್ (Czech) ಎಂಜಿನಿಯರ್ ತನ್ನ ಸೋಶಿಯಲಿಸ್ಟ್ ತಾಯ್ನಾಡಿನ ಬಗ್ಗೆ ಪಶ್ಚಿಮದ ವೃತ್ತಪತ್ರಿಕೆಗಳಿಗೆ ಅಪನಿಂದೆಯ ಹೇಳಿಕೆಯನ್ನು ಕೊಟ್ಟಿದ್ದಾರೆ ಹಾಗೂ ಪಶ್ಚಿಮದಲ್ಲಿಯೇ ನೆಲೆಸಲು ನಿರ್ಧರಿಸಿದ್ದಾರೆ.
ಅಕ್ರಮವಾಗಿ ವಲಸೆ ಹೋಗುವಿಕೆ, ಜೊತೆಗೆ ಆ ರೀತಿಯ ಹೇಳಿಕೆ ಕೊಟ್ಟಿರುವುದು ಎಂದರೆ ಕ್ಷುಲ್ಲಕ ವಿಷಯವಲ್ಲ. ಅದು ಇಪ್ಪತ್ತು ವರ್ಷಗಳ ಜೈಲಿನಲ್ಲಿರಬೇಕಾದ ಪ್ರಮಾಣದ್ದು. ನಮ್ಮ ಎಂಜಿನಿಯರ್ಗೆ ತನ್ನ ಕಣ್ಣುಗಳನ್ನು ನಂಬಲಾಗಲಿಲ್ಲ. ಆದರೆ ಆ ಲೇಖನವು ಅವನನ್ನೇ ಉಲ್ಲೇಖಿಸುತ್ತಿದೆ ಎಂಬುದರ ಬಗ್ಗೆ ಸಂದೇಹವೇ ಇಲ್ಲ. ಆಗ ಅವನ ಕಚೇರಿಯೊಳಗೆ ಬಂದ ಅವನ ಸೆಕ್ರೆಟರಿ ಅವನನ್ನು ನೋಡುತ್ತಲೇ ಗಾಬರಿಯಾಗುತ್ತಾಳೆ: ಅಯ್ಯೋ ದೇವರೇ! ನೀವು ಮರಳಿ ಬಂದಿದ್ದೀರಿ! ನನಗೆ ಒಂದೂ ತಿಳಿಯುತ್ತಿಲ್ಲ—ನಿಮ್ಮ ಬಗ್ಗೆ ಅವರು ಏನು ಬರೆದಿದ್ದಾರೆ ನೋಡಿದಿರಾ?
ಎಂಜಿನಿಯರ್ ತನ್ನ ಸೆಕ್ರೆಟರಿಯ ಕಣ್ಣುಗಳಲ್ಲಿ ಭೀತಿಯನ್ನು ಕಾಣುತ್ತಾನೆ. ತಾನು ಈಗ ಏನು ಮಾಡಬಹುದು? ಅವನು ರೂಡೆ ಪ್ರಾವೋದ ಕಚೇರಿಗೆ ಧಾವಿಸುತ್ತಾನೆ. ಸುದ್ದಿಗೆ ಹೊಣೆಗಾರನಾದ ಸಂಪಾದಕನನ್ನು ಹುಡುಕುತ್ತಾನೆ. ಆ ಸಂಪಾದಕ ಕ್ಷಮೆ ಕೇಳುತ್ತಾನೆ, ಹೌದು, ನಿಜಕ್ಕೂ ಇದೊಂದು ತೊಡಕಿನ ವ್ಯವಹಾರವಾಗಿದೆ, ಆದರೆ ನಾನು, ಎಂದರೆ ಸಂಪಾದಕ, ಇದರಲ್ಲಿ ಏನೂ ಮಾಡಲು ಬರುವಂತಿಲ್ಲ; ಅವನಿಗೆ ಆ ಲೇಖನದ ಪಠ್ಯ ನೇರವಾಗಿ ಆಂತರಿಕ ವ್ಯವಹಾರಗಳ ಸಚಿವಾಲಯದಿಂದ ಸಿಕ್ಕಿರುತ್ತದೆ.
ಹೀಗಾಗಿ ಎಂಜಿನಿಯರ್ ಸಚಿವಾಲಯಕ್ಕೇ ಹೋಗುತ್ತಾನೆ. ಅಲ್ಲಿ ಅವರು, ಹೌದು, ಖಂಡಿತ, ಇದೆಲ್ಲವೂ ತಪ್ಪಾಗಿದೆ, ಆದರೆ ಅವರು, ಎಂದರೆ ಸಚಿವಾಲಯವು, ಇದರಲ್ಲಿ ಏನೂ ಮಾಡಲು ಬರುವಂತಿಲ್ಲ; ಅವರಿಗೆ ಆ ಎಂಜಿನಿಯರ್ ಬಗ್ಗೆ ವರದಿ ಲಂಡನ್ ರಾಯಭಾರ ಕಚೇರಿಯಲ್ಲಿನ ಗುಪ್ತಚರ ಸಂಸ್ಥೆಯ ಜನರಿಂದ ಸಿಕ್ಕಿರುತ್ತದೆ. ಆ ಸುದ್ದಿಯನ್ನು ಹಿಂತೆಗೆದುಕೊಳ್ಳುವಂತೆ ಎಂಜಿನಿಯರ್ ಕೇಳಿಕೊಳ್ಳುತ್ತಾನೆ. ಇಲ್ಲ, ನಾವು ಎಂದೂ ಏನನ್ನೂ ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ, ಆದರೆ ಅವನಿಗೆ ಏನೂ ಆಗುವುದಿಲ್ಲ, ಅವನು ವ್ಯಾಕುಲಪಡಬೇಕಾದ್ದು ಏನೂ ಇಲ್ಲ, ಎಂದು ಅವನಿಗೆ ಹೇಳಲಾಗುತ್ತದೆ.
ಆದರೆ ಎಂಜಿನಿಯರ್ಗೆ ವ್ಯಾಕುಲ ಆಗಿಯೇ ಆಗುತ್ತದೆ. ಇದ್ದಕ್ಕಿದ್ದಂತೆ ಅವನ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ, ಅವನ ದೂರವಾಣಿಯನ್ನು ಕದ್ದಾಲಿಸಲಾಗುತ್ತಿದೆ, ಮತ್ತು ಬೀದಿಗಳಲ್ಲಿ ಅವನನ್ನು ಹಿಂಬಾಲಿಸಲಾಗುತ್ತಿದೆ, ಎಂಬುದು ಶೀಘ್ರದಲ್ಲೇ ಅವನ ಅರಿವಿಗೆ ಬರುತ್ತದೆ. ಅವನಿಗೆ ಸರಿಯಾಗಿ ನಿದ್ದೆ ಮಾಡಲಾಗುವುದಿಲ್ಲ, ದುಃಸ್ವಪ್ನಗಳನ್ನು ಕಾಣತೊಡಗುತ್ತಾನೆ. ಇದು ಎಲ್ಲಿಯವರೆಗೆ ಹೋಗುತ್ತದೆಂದರೆ, ಇನ್ನು ಈ ಒತ್ತಡವನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲವೆನ್ನಿಸಿ ಅವನು ಬಹಳಷ್ಟು ನಿಜವಾದ ಗಂಡಾಂತರಗಳಿಗೆ ಮೈಯೊಡ್ಡಿ ಅಕ್ರಮವಾಗಿ ದೇಶವನ್ನು ತೊರೆಯುತ್ತಾನೆ. ಮತ್ತು ಆ ಕಾರಣದಿಂದ ವಾಸ್ತವದಲ್ಲಿ ವಲಸೆ ಹೋದವನಾಗುತ್ತಾನೆ.
ಕಾಫ್ಕಾನ ಬಹುತೇಕ ಕತೆಗಳನ್ನು ಓದುವಾಗ ಎದ್ದು ಕಾಣುವ ಅಂಶವೆಂದರೆ ತಪ್ಪರಿವು ಮತ್ತು ದಂಡನೆಯ ಬಗೆಗಿನ ಎತ್ತರಿಸಿದ ಗ್ರಹಿಕೆ—ಅವುಗಳ ಹಲವು ಸ್ವರೂಪಗಳಲ್ಲಿ. ಮತ್ತಿನ್ನು ಇಲ್ಲಿ protagonistನ ಮನದಲ್ಲಿ ತನ್ನ ಯಾವ ತಪ್ಪಿನಿಂದಾಗಿ ತೀವ್ರವಾದ ಈ guiltನ ಭಾವನೆ ಒಮ್ಮಿಂದೊಮ್ಮೆಲೇ ಉಂಟಾಗಿ ತಕ್ಷಣವೇ ಬೇರೂರಿದೆ ಎಂಬುದು ಸ್ಪಷ್ಟವಾಗಿರಬೇಕಿಲ್ಲ. ಹೀಗಾಗಿ ಇವುಗಳ ಜೊತೆಗೇ ಬರುವುದು ತಪ್ಪೊಪ್ಪಿಗೆ (acceptance); ಅಲ್ಲಗಳೆಯುವಿಕೆಗೆ ಅಲ್ಲಿ ಆಸ್ಪದವೇ ಇಲ್ಲ. ವ್ಯಥೆಗೆ ಹಂತಗಳಿರುವಂತೆ (Stages of Grief) ತಪ್ಪರಿವಿಗೂ ಹಂತಗಳಿರುತ್ತವೇನೋ (Stages of Guilt?). ಆದರೆ ಕಾಫ್ಕಾನಲ್ಲಿ ಬಹುಬೇಗನೇ ತಪ್ಪೊಪ್ಪಿಗೆಯ ಹಂತ ಬಂದುಬಿಡುತ್ತದೆ. ಕಥಾನಾಯಕರು ಮೊದಲಿಗೆ ತಮ್ಮ ದೆಸೆಯನ್ನು ಒಪ್ಪಿಕೊಂಡು ಬಿಡುತ್ತಾರೆ. ಬೇಕಿದ್ದಲ್ಲಿ ಅದಾದ ಮೇಲೆ ತಾವು ಮಾಡಿರಬಹುದಾದ ತಪ್ಪನ್ನು ಹುಡುಕಿ ಕಂಡುಕೊಂಡು ಅನ್ವಯಿಸಿಕೊಳ್ಳುತ್ತಾರೆ. ಅವನ ಬಹುತೇಕ ಪ್ರಸಿದ್ಧ ಕತೆಗಳಲ್ಲಿ ಇದನ್ನು ಕಾಣಬಹುದು.
ಏಕೆಂದರೆ, ಕಾಫ್ಕಾನ ಪ್ರಕಾರ ಅಧಿಕಾರಶಾಹಿಯ ಕೊನೆಯಿಲ್ಲದ ಸಿಕ್ಕುದಾರಿಯಲ್ಲಿ ಅಲೆಯುತ್ತ ಹೋಗಿ ಉಪಯೋಗವೇ ಇಲ್ಲ. ಆ ದಾರಿಯಲ್ಲಿ ಕೇಳುವುದು ಒಂದೇ ಹೊಳಲು: ನೀನು ಹೇಳುವುದೆಲ್ಲ ನಿಜ, ನಿನ್ನದೇನೂ ತಪ್ಪಿಲ್ಲ, ಆದರೆ ಶಿಕ್ಷೆಯಾಗಿಬಿಟ್ಟಿದೆಯಲ್ಲ? ಇನ್ನೇನೂ ಮಾಡಲು ಬರುವಂತಿಲ್ಲ. ನ್ಯಾಯದ ಬಾಗಿಲಿನಲ್ಲಿ ಜೀವಮಾನವಿಡೀ ಕಾದು ಕೂತ ಮನುಷ್ಯ ತನ್ನ ಕೊನೆಯ ಗಳಿಗೆಯಲ್ಲಿ, “ಎಲ್ಲರೂ ನ್ಯಾಯಕ್ಕಾಗಿ ಹಾತೊರೆಯುವುದಂತೂ ನಿಜ. ಹಾಗಿದ್ದಲ್ಲಿ, ಇಷ್ಟೆಲ್ಲ ವರ್ಷಗಳಲ್ಲಿ ನನ್ನನ್ನು ಬಿಟ್ಟು ಬೇರಾರೂ ಪ್ರವೇಶವನ್ನು ಕೋರಿಲ್ಲವೇಕೆ?” ಎಂದು ಹತಾಶನಾಗಿ ಕೇಳಿದಾಗ ದಕ್ಕುವುದು, “ಬೇರಾರಿಗೂ ಇಲ್ಲಿ ಪ್ರವೇಶ ಸಿಗುವಂತಿಲ್ಲ. ಈ ಬಾಗಿಲು ಇದ್ದದ್ದೇ ನಿನಗಾಗಿ. ಮತ್ತೀಗ ನಾನದನ್ನು ಮುಚ್ಚುತ್ತಿದ್ದೇನೆ,” ಎನ್ನುವ ದ್ವಾರಪಾಲಕನ ನಾಟಕೀಯ ವಿಪರ್ಯಾಸದ ಉತ್ತರವಷ್ಟೇ.
The Judgement ಕತೆಯಲ್ಲಿ ತಂದೆ ತನ್ನ ಮಗನ ಬಗ್ಗೆ ಯಾವುದೇ ಪ್ರಚೋದನೆಯಿಲ್ಲದೇ ಒಮ್ಮಿಂದೊಮ್ಮೆಲೇ ಒಂದು ವಿಚಿತ್ರ ಅನಿರೀಕ್ಷಿತ ತೀರ್ಪು ಕೊಟ್ಟು ಬಿಡುತ್ತಾನೆ: ನೀರಲ್ಲಿ ಮುಳುಗಿ ಸಾಯುವಂತೆ. ಇದೊಂದು ರೀತಿ ನಮ್ಮ ಪುರಾಣದ ಕತೆಗಳ ಶಾಪವಿದ್ದಂತೆ! ಅದನ್ನು ಬದಲಿಸಲು, ಅದು ಹುಸಿಹೋಗಲು ಸಾಧ್ಯವೇ ಇಲ್ಲ. ಮತ್ತಿದು ಅಪರಿಹಾರ್ಯ. ಹೀಗಾಗಿ ಶಪಿತರು ಶಾಪವನ್ನು ಒಪ್ಪಿಕೊಂಡು ಅದನ್ನು ಸಾರ್ಥಕಗೊಳಿಸುವುದರಲ್ಲಿ ತೊಡಗುತ್ತಾರೆ. ಈ ಕತೆಯಲ್ಲಿನ ಮಗ ಯಾವುದೋ ಕಾಣದ ಕೈಯಿಂದ ತಳ್ಳಿದವನಂತಾಗಿ ಓಡಿ ಹೋಗಿ ಒಂದು ಸೇತುವೆಯ ಮೇಲಿಂದ ನೀರಿಗೆ ಹಾರಿ ಬಿಡುತ್ತಾನೆ.
The Metamorphosis ಕತೆಯಲ್ಲಿ ಗ್ರೆಗೋರ್ ಸ್ಯಾಂಸಾ ಹುಳವಾಗಿ ಬದಲಾದದ್ದನ್ನು ಅನಗತ್ಯ ಗಲಿಬಿಲಿಗೊಳಗಾಗದೇ ಒಪ್ಪಿಕೊಂಡಂತೆ—ಕಾಫ್ಕಾನ ಬಹುತೇಕ ಕತೆಗಳಲ್ಲಿ ಇಂಥ ವಿಲಕ್ಷಣ ಘಟನೆಗಳಿಗೂ ಅದರದೇ ಒಂದು ಆಂತರಿಕ ತರ್ಕ (internal logic) ಇರುತ್ತದೆ, ಅದನ್ನು ಅವನ ಪಾತ್ರಗಳು ಒಪ್ಪಿಕೊಂಡಂತೆ— ನಾವೂ ಒಪ್ಪಿಕೊಂಡು ಮುಂದುವರಿಯಬೇಕು. ಆ ಭ್ರಾಮಕ ಘಟನೆಯನ್ನು ಬಿಟ್ಟರೆ ಉಳಿದಂತೆ ಅದೊಂದು ಸಾರ್ವತ್ರಿಕ ಮಾನವಿಕ ಕತೆಯಂತೆಯೇ ಓದಿಸಿಕೊಂಡು ಹೋಗುತ್ತದೆ. ಕತೆಯ ಶ್ರೇಷ್ಠತೆ ಇರುವುದು ಅಲ್ಲಿ: ಅದರ ಭ್ರಾಮಕ ಪ್ರಮೇಯದಲ್ಲಲ್ಲ. ಗ್ರೆಗೋರ್ ಹುಳವಾಗಿ ರೂಪಾಂತರವಾಗುವುದರ ಬದಲು ಅವನಿಗೆ ಮತ್ತೇನೋ ಅನಪೇಕ್ಷಿತವಾದುದು ಆಗಿದ್ದರೆ (ಉದಾಹರಣೆಗೆ, ಅಂಗವೈಕಲ್ಯ, ಕೆಟ್ಟ ಕಾಯಿಲೆ, ಇತ್ಯಾದಿ) ಅಥವಾ ಅವನು ಯಾವುದೇ ಬಗೆಯಲ್ಲಿ ಬಲಗೆಟ್ಟವನಾಗಿ (invalid) ಬೇರೆಯವರ ಮೇಲೆ ಅವಲಂಬಿತನಾಗಿದ್ದರೂ, ಒಟ್ಟಿನಲ್ಲಿ ಅವನ ಕುಟುಂಬದ ಉಳಿದವರ ಪಲ್ಲಟಕ್ಕೆ ಯಾವುದೇ ರೀತಿ ಕಾರಣನಾಗಿದ್ದರೂ ಕತೆ ಈಗಿದ್ದಂತೆ ಮುಂದುವರಿಯುತ್ತಿತ್ತೇನೋ. ಹುಳವನ್ನು ರೂಪಾಂತರದ ಒಂದು ಪ್ರತಿಮೆಯಾಗಿ ಮತ್ತು ಕತೆಗಾರನ ತಂತ್ರದ ಆಯ್ಕೆಯಾಗಿ ನೋಡಬೇಕೇ ಹೊರತು ಓದುಗರು ಅದಕ್ಕೆ ಅತಿಯಾದ ಮಹತ್ವ ಕೊಡಬಾರದು ಎಂದು ಕಾಫ್ಕಾನ ಆಶಯವಾಗಿತ್ತು ಎನ್ನಿಸುತ್ತದೆ.2 ಹೀಗಾಗಿ ಕಥಾನಾಯಕನ ಪರಿಸ್ಥಿತಿಯಲ್ಲಿ ಉಂಟಾದ ಬದಲಾವಣೆಯನ್ನು ಕಾಫ್ಕಾ ಮೊದಲಿಗೇ ಒಂದಷ್ಟು ವಾಕ್ಯಗಳಲ್ಲಿ ಹೇಳಿ ಮುಗಿಸಿಬಿಡುತ್ತಾನೆ. ಮುಂದೆ ಗ್ರೆಗೋರ್ಗೆ ಎದುರಾಗುವ ಮುಖ್ಯ ಸಮಸ್ಯೆ, ಹಾಸಿಗೆ ಬಿಟ್ಟೆದ್ದು ತಯಾರಾಗಿ ರೈಲು ಹಿಡಿದು—ಈಗಾಗಲೇ ಸಾಕಷ್ಟು ತಡವಾಗಿದೆ!—ನೌಕರಿಗೆ ಹೋಗುವುದು ಹೇಗೆ ಎನ್ನುವುದು. ಏಕೆಂದರೆ ಅವನ ಮನೆಯವರ ಸೌಖ್ಯ ಅವನು ನಿಯಮಿತವಾಗಿ ದುಡಿಯುವುದನ್ನು ಆಧರಿಸಿದೆ. ಅದನ್ನು ಕೊಡಲು ಅವನಿಗಾಗದಿದ್ದಾಗ ಅದಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸುತ್ತಾನೆ.
ಕಾಫ್ಕಾನ ಇನ್ನೊಂದು ಮಹತ್ವಾಕಾಂಕ್ಷಿ ಕತೆಯಾದ In the Penal Colonyಯಲ್ಲಿ ಆಪಾದಿತರನ್ನು ಸಾದ್ಯಂತವಾಗಿ ಹಿಂಸಿಸಿ ಕೊಲ್ಲುವ ಯಂತ್ರವೊಂದಿದೆ. ಕತೆಯಲ್ಲಿರುವುದು ನಾಲ್ಕು ಪಾತ್ರಗಳು: ಯಂತ್ರವನ್ನು ನೋಡಿಕೊಳ್ಳಲು ಒಬ್ಬ ಕಾರ್ಯನಿರ್ವಾಹಕ ಅಧಿಕಾರಿ; ದಂಡನೆಗೆ ಗುರಿಯಾಗಿ ಯಂತ್ರದ ಮೇಲೇರಲು ಕಾಯುತ್ತಿರುವ ಆಪಾದಿತ (ಹಿರಿಯ ಅಧಿಕಾರಿಯ ಮನೆಯ ರಾತ್ರಿ ಕಾವಲುಗಾರನಾದ ಅವನು ಗಂಟೆಗೊಂದಾವರ್ತಿ ಎದ್ದು ನಿಂತು ಮನೆಯ ಬಾಗಿಲಿಗೆ ಸಲಾಮು ಹೊಡೆಯುವುದನ್ನು ತಪ್ಪಿದ್ದುದರಿಂದ ಅವನಿಗೆ ಮರಣದಂಡನೆ ವಿಧಿಸಲಾಗಿದೆ.); ಆಪಾದಿತನನ್ನು ಕಾಯಲು ಒಬ್ಬ ಸೈನಿಕ; ಮತ್ತು ಯಂತ್ರವನ್ನು ನೋಡಲು ಬಂದ ಒಬ್ಬ ಗಣ್ಯ ಯೂರೋಪಿಯನ್ ಯಾತ್ರಿ. ಆ ಗಣ್ಯ ಯಾತ್ರಿಗೆ ಶಿಕ್ಷೆ ಕೊಡುವ ಈ ಅದ್ವಿತೀಯ ಪದ್ಧತಿಯನ್ನು ಸವಿಸ್ತಾರವಾಗಿ ವಿವರಿಸಿ, ಅವನಿಗೆ ಅದರ ನ್ಯಾಯೋಚಿತತೆಯನ್ನು ಮನದಟ್ಟು ಮಾಡಿಸುವ ಹವಣಿಕೆ ಅಧಿಕಾರಿಯದು. ಅದಾದರೆ ಯಾತ್ರಿಯ ಪ್ರಭಾವದಿಂದ ಸದ್ಯಕ್ಕೆ ಅವಕೃಪೆಗೊಳಗಾಗಿರುವ ಈ ಯಂತ್ರ ಮತ್ತೆ ಮನ್ನಣೆಗೆ ಬರಬಹುದು ಎಂದು ಅವನ ಆಸೆ. ಅವನಂದುಕೊಂಡ ಹಾಗೆ ಆಗದಿದ್ದಾಗ ಕೂಡಲೇ ಆ ವೈಫಲ್ಯವನ್ನು ಸ್ವ ಇಚ್ಛೆಯಿಂದ ಒಪ್ಪಿಕೊಂಡು ತಾನೇ ಆ ಯಂತ್ರಕ್ಕೆ ಬಲಿಯಾಗಹೊರಡುತ್ತಾನೆ. ಯಂತ್ರದ ವಿನ್ಯಾಸದ ಅಚ್ಚಿನಲ್ಲಿ BE JUST ಎಂಬ ವಾಕ್ಯವನ್ನು ಅಳವಡಿಸಿ ಯಂತ್ರದ ತಡಿಯ ಮೇಲೆ ಮಲಗುತ್ತಾನೆ.
ಅಥವಾ ಕುಂದೇರಾ ತಮ್ಮ ಒಂದು ಪ್ರಬಂಧದಲ್ಲಿ ಹೇಳುವಂತೆ:
“[ದಾಸ್ತೋಯೆಫ್ಸ್ಕೀಯ Crime and Punishment ಕಾದಂಬರಿಯ] ರಾಸ್ಕೋಲ್ನಿಕೋವ್ನಿಗೆ (Raskolnikov) ತನ್ನ ತಪ್ಪಿನ ಅರಿವಿನ ಭಾರವನ್ನು ಹೊರಲಾಗುತ್ತಿಲ್ಲ. ಮನಃಶಾಂತಿಯನ್ನು ಕಂಡುಕೊಳ್ಳಲು ತನ್ನ ಸ್ವಂತ ಇಚ್ಛೆಯಿಂದ ಶಿಕ್ಷೆಗೆ ಒಳಗಾಗಲು ಸಮ್ಮತಿಸುತ್ತಾನೆ. ಇದು ಮಾಡಿದ ತಪ್ಪಿಗೆ ಶಿಕ್ಷೆಯನ್ನು ಬಯಸುವ, ಎಲ್ಲರಿಗೂ ಗೊತ್ತಿರುವ ಸನ್ನಿವೇಶವಾಗಿದೆ.
ಕಾಫ್ಕಾನಲ್ಲಿ [ಅಪರಾಧ ಮತ್ತು ಶಿಕ್ಷೆಯ] ತರ್ಕವು ವ್ಯತಿರಿಕ್ತವಾಗಿದೆ. ಶಿಕ್ಷೆಗೊಳಗಾದವರಿಗೆ ಶಿಕ್ಷೆಯ ಕಾರಣ ತಿಳಿದಿರುವುದಿಲ್ಲ. ಆ ಶಿಕ್ಷೆಯ ಅಸಂಬದ್ಧತೆಯು ಎಷ್ಟು ಅಸಹನೀಯವಾಗಿರುತ್ತದೆಂದರೆ, ನೆಮ್ಮದಿ ದೊರಕಿಸಿಕೊಳ್ಳಲು ಆರೋಪಿಯು ತನಗಾದ ಶಿಕ್ಷೆಗೆ ಸಮರ್ಥನೆಯನ್ನು ಕಂಡುಕೊಳ್ಳಲೇಬೇಕು: ಶಿಕ್ಷೆಯು ಮೊದಲಾಗಿ ನಂತರ ಅದು ಅದಕ್ಕೆ ತಕ್ಕ ತಪ್ಪನ್ನು ಅರಸುತ್ತದೆ.”
ಮೊದಲು ಹೇಳಿದ ಕತೆಯನ್ನು ಓದುತ್ತಿರುವಂತೆ ನಮಗೆ ಇದು Kafkaesque ಎನ್ನುವ ಭಾವನೆ ಬರಬಹುದು. ಅವನ “Before the Law”ದಂಥ ದೃಷ್ಟಾಂತಗಳು, “The Trial”ನ ಜೋಸೆಫ್ ಕೆ ನೆನಪಾಗಬಹುದು. ಆದರೆ ಇದು ಕಾಫ್ಕಾ ಬರೆದ ಕತೆಯಲ್ಲ. ಇದೇ ಪ್ರಬಂಧದ ಆರಂಭದಲ್ಲಿ ಕುಂದೇರಾ ಈ "ಕತೆ"ಯನ್ನು ಹೇಳುತ್ತಾರೆ. ಆ ಪ್ರಬಂಧ ಶುರುವಾಗುವುದು ಹೀಗೆ: “ನನ್ನ ಗೆಳೆಯ ಜೋಸೆಫ್ ಸ್ಕ್ವೊರೆಕಿ (Josef Skvorecky) ಅವರ ಪುಸ್ತಕವೊಂದರಲ್ಲಿ, ಈ ಸತ್ಯಕಥೆಯನ್ನು ಹೇಳುತ್ತಾರೆ: […]”
ಇಲ್ಲಿಯೂ ಎಂಜಿನಿಯರ್ನ ಭವಿಷ್ಯದ ಬಗ್ಗೆ ತೀರ್ಪು ಸಿಕ್ಕು ಅವನು ಮುಂದೆ ಮಾಡಬೇಕಾದ್ದು ಪೂರ್ವನಿರ್ಧಾರಿತವಾಗಿದೆ. ಅಕ್ರಮ ವಲಸೆ (ಅವನು ಇನ್ನೂ ಮಾಡಿರದ) ತಪ್ಪೂ ಹೌದು ಅದರ ಶಿಕ್ಷೆಯೂ ಹೌದು. ಇದರ ಅಪರಿಹಾರ್ಯತೆಯನ್ನು ಅವನು ಒಪ್ಪಿಕೊಳ್ಳಲೇಬೇಕಾದ ಒತ್ತಡದಲ್ಲಿ ಅಸಹಾಯಕನಾಗಿ ಆ ತಪ್ಪನ್ನು ಮಾಡಿ ಅದಕ್ಕೆ ತಕ್ಕ ಶಿಕ್ಷೆಯನ್ನು ಪಡೆದೇ ತೀರುತ್ತಾನೆ. ಇದು ಕಾಫ್ಕಾ ಬರೆಯದ ಅತ್ಯಂತ ಕಾಫ್ಕಾಎಸ್ಕ್ ಕತೆಗಳಲ್ಲೊಂದು ಎಂದು ನನ್ನ ಭಾವನೆ.
“ಕೆಂಪು ನ್ಯಾಯ” ಅಥವಾ “ಕೆಂಪು ಹಕ್ಕು”
ಮುಖಪುಟದ ಮೇಲೆ ಹುಳದ ಚಿತ್ರವನ್ನು ಪ್ರಕಟಿಸದಂತೆ, ಒಟ್ಟಾರೆ ಅದರ ಸಚಿತ್ರ ನಿರೂಪಣೆ ಬೇಡವೆಂದು ಕಾಫ್ಕಾ ಪ್ರಕಾಶಕರಿಗೆ ತಾಕೀತು ಮಾಡಿದ್ದ.
“[…] ಆ ಕಲಾವಿದನ ಶೈಲಿಯ ಬಗ್ಗೆ ನನಗೆ ತಕ್ಕಮಟ್ಟಿಗೆ ಗೊತ್ತಿರುವುದರಿಂದ [...] ನನಗೆ ಸಣ್ಣ ಮತ್ತು ಬಹುತೇಕ ಅನಗತ್ಯವಾದೊಂದು ದಿಗಿಲು ಉಂಟಾಗಿದೆ. ಚಿತ್ರಕಾರನಾದ ಅವನು […] ಹುಳವನ್ನೇ ಚಿತ್ರಿಸಬಯಸಬಹುದು. ಅದು ಬೇಡ, ದಯವಿಟ್ಟು ಅದು ಬೇಡ! ನಾನು ಅವನನ್ನು ಕಟ್ಟುಪಾಡಿಗೆ ಒಳಪಡಿಸಬಯಸುವುದಿಲ್ಲ, ಆದರೆ ಕತೆಯ ಬಗ್ಗೆ ನನಗಿರುವ ಹೆಚ್ಚು ಆಳದ ಅರಿವಿನಿಂದಾಗಿ ಕೋರಿಕೊಳ್ಳುತ್ತಿದ್ದೇನಷ್ಟೇ. ಹುಳವನ್ನು ಚಿತ್ರಿಸಕೂಡದು. ಅದನ್ನು ದೂರದಿಂದಲೂ ತೋರಿಸಕೂಡದು. ಬಹುಶಃ [ಅವನಿಗೆ] ಅಂತಹ ಯಾವುದೇ ಉದ್ದೇಶವಿರಲಿಕ್ಕಿಲ್ಲ ಮತ್ತು ನನ್ನ ಕೋರಿಕೆಯನ್ನು ಒಂದು ಮುಗುಳ್ನಗೆಯೊಂದಿಗೆ [ಅವನು] ತಳ್ಳಿಹಾಕಬಹುದು—ಅದಾದಲ್ಲಿ ಇನ್ನೂ ಉತ್ತಮ. ಆದರೆ ನೀವು ನನ್ನ ಮನವಿಯನ್ನು ತಿಳಿಸಿದರೆ ಮತ್ತು ಅದನ್ನು ಹೆಚ್ಚು ಒತ್ತಿಹೇಳಿದರೆ ನಾನು ತುಂಬಾ ಕೃತಜ್ಞ. ಚಿತ್ರಕಲೆಗೆ ನಾನು ಸಲಹೆಗಳನ್ನು ಕೊಡುವುದಾರೆ, ನಾನು ಈ ರೀತಿಯ ದೃಶ್ಯಗಳನ್ನು ಆಯ್ದುಕೊಳ್ಳಬಹುದು: ಬೀಗ ಹಾಕಿದ ಬಾಗಿಲಿನ ಮುಂದೆ ಪೋಷಕರು ಮತ್ತು ಮುಖ್ಯ ಗುಮಾಸ್ತ, ಅಥವಾ ಅದಕ್ಕಿಂತ ಒಳ್ಳೆಯದು, ಬೆಳಕಿರುವ ಕೋಣೆಯಲ್ಲಿ ತಂದೆ ತಾಯಿ ಮತ್ತು ತಂಗಿ, ಜೊತೆಗೆ ಬಾಗಿಲು ತೆರೆದಿರುವ ಕತ್ತಲೆಯಲ್ಲಿ ಮುಳುಗಿದ ಪಕ್ಕದ ಕೋಣೆ.” [Source: ಕಾಫ್ಕಾ ತನ್ನ ಪ್ರಕಾಶಕರಿಗೆ ಬರೆದ ಪತ್ರ]