ಈ ಮರಕ್ಕೆ ಹಿಂದಿನ ಜನ್ಮದಲ್ಲಿ ಸಾವಿರ ಕೈಗಳಿದ್ದವಂತೆ!
ಪ್ರಸಾದ್ ನಾಯ್ಕ್ ಅವರ ʼಜಿಪ್ಸಿ ಜೀತುʼ ಕೃತಿಯಿಂದ ಆಯ್ದ ಭಾಗ
ಲೇಖಕ ಪ್ರಸಾದ್ ನಾಯ್ಕ್ ಅವರ ಜಿಪ್ಸಿ ಜೀತು (ಯಂಗ್ ಅಡಲ್ಟ್ ಫಿಕ್ಷನ್) ಕಿರುಕಾದಂಬರಿಯನ್ನು ಹರಿವು ಬುಕ್ಸ್ ಪ್ರಕಟಿಸಿದೆ. ಆಯ್ದ ಭಾಗ ನಿಮ್ಮ ಓದಿಗೆ.
ಈ ಮೂವರಿಗೆ ಜೀತೂನ ಹುಚ್ಚು ಸಾಹಸಗಳು ಗೊತ್ತಿಲ್ಲದ ಸಂಗತಿಯೇನಲ್ಲ.
ತಿರುಗಾಟದ ಯಾವ ಅವಕಾಶವನ್ನೂ ಜೀತು ಅಷ್ಟು ಸುಲಭವಾಗಿ ಬಿಡುವವನಲ್ಲ. ಶಾಲಾಪ್ರವಾಸವೆಂದರೆ ಎಲ್ಲರೂ ಭಾಗವಹಿಸುವುದಕ್ಕೆ ಉತ್ಸುಕರಾಗಿದ್ದರೆ ಇವನು ಆಯೋಜಿಸುವುದಕ್ಕೇ ಸಿದ್ಧನಾಗುತ್ತಿದ್ದ. ಬೇಸಿಗೆ ರಜೆಯ ಅವಧಿಯಲ್ಲಿ ಅಜ್ಜಿಮನೆಗೆಂದು ತೆರಳಿದರೆ ದಿನವಿಡೀ ಹಳ್ಳಿಯ ಮೂಲೆಗಳನ್ನು ನೋಡಿಯೇ ಮನೆ ಸೇರುತ್ತಿದ್ದ. ಬಹುಷಃ ಮನೆಯಲ್ಲಿ ಕೇಳುವವರೇನಾದರೂ ಇಲ್ಲದಿದ್ದರೆ ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ಸದಾಕಾಲ ಸುತ್ತಾಡುವುದೇ ಅವನ ಬದುಕಾಗುತ್ತಿತ್ತೋ ಏನೋ!
ಜೀತೂಗೆ ಮತ್ತಷ್ಟು ದೂರ ಸಾಗುವುದಿತ್ತು. ಜಗತ್ತು ಸುತ್ತುವುದಿತ್ತು. ಜಗತ್ತೆಂಬುದು ತಾನಂದುಕೊಂಡಿದ್ದಕ್ಕಿಂತಲೂ ಸಾಕಷ್ಟು ದೊಡ್ಡದಿದೆ ಎಂಬ ಸತ್ಯವು ಅವನಿಗೆ ತಿಳಿದಿದ್ದೇ ರಾಹತ್ ನಿಂದಾಗಿ. ಅದ್ಯಾವುದೋ ಪ್ರಖ್ಯಾತ ಅಂತಾರಾಷ್ಟ್ರೀಯ ಸಂಸ್ಥೆಯೊಂದು ಆಯೋಜಿಸಿದ್ದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಈಜಿಪ್ಟ್ ಮೂಲದ ರಾಹತ್ ಇಮಾಮ್ ಮಲ್ಲಿಗೆಪೇಟೆಯವರೆಗೆ ಬಂದಿದ್ದ. ಆ ಸಮಯದಲ್ಲೇ ರಾಹತ್ ಮತ್ತು ಜೀತು ಮೊದಲ ಬಾರಿ ಭೇಟಿಯಾಗಿದ್ದು ಮತ್ತು ಗೆಳೆಯರಾಗಿದ್ದು.
ಈಜಿಪ್ಟಿನ ಕೈರೋ ಮೂಲದ ರಾಹತನಿಗೆ ಸಹಜವಾಗಿ ಕನ್ನಡ ಗೊತ್ತಿರಲಿಲ್ಲ. ಇನ್ನು ಜೀತೂಗೆ ಕನ್ನಡ ಮತ್ತು ಚೂರುಪಾರು ಹಿಂದಿಯನ್ನು ಬಿಟ್ಟು ಬೇರೆ ಭಾಷೆ ತಿಳಿದಿರಲಿಲ್ಲ. ಆದರೂ ಅವರಿಬ್ಬರ ನಡುವೆ ಮಾತುಕತೆಗಳು ಅದ್ಹೇಗೋ ನಡೆಯುತ್ತಿದ್ದವು. ತನ್ನೊಡನೆ ತಂದಿದ್ದ ಫೋಟೋ ಆಲ್ಬಮ್ ಒಂದರಲ್ಲಿ ಈಜಿಪ್ಟಿನ ದೈತ್ಯ ಪಿರಾಮಿಡ್ಡುಗಳನ್ನು ರಾಹತ್ ತೋರಿಸಿದಾಗ, ಅವುಗಳ ಅಗಾಧತೆಗೆ ಜೀತು ಮಾರುಹೋಗಿದ್ದ. ಇನ್ನು ಪಿರಾಮಿಡ್ಡುಗಳ ಬಗೆಗಿನ ವೀಡಿಯೋಗಳನ್ನು ನೋಡಿದ ಮೇಲಂತೂ, ಯಾವತ್ತಾದರೊಂದು ದಿನ ಪಿರಾಮಿಡ್ಡುಗಳನ್ನು ಸ್ವತಃ ನೋಡಲೇಬೇಕೆಂದು ಜೀತು ಮನದಲ್ಲೇ ನಿರ್ಧರಿಸಿದ್ದ.
ಆ ದೈತ್ಯ ಪಿರಾಮಿಡ್ಡುಗಳನ್ನು ನೋಡಿದಾಗ ನಾವು ಮನುಷ್ಯರು ಅದೆಷ್ಟು ಚಿಕ್ಕವರು ಎಂಬ ಸಂಗತಿಯು ಜೀತೂಗೆ ಮತ್ತೊಮ್ಮೆ ನೆನಪಾಗಿತ್ತು. ಈ ಹಿಂದೆ ಇಂಥದ್ದೊಂದು ಯೋಚನೆಯು ಅವನಿಗೆ ಮೂಡಿದ್ದು ಮಲ್ಪೆಯ ಸಮುದ್ರತೀರದಲ್ಲಿ. ಅಸಲಿಗೆ ನೀರನ್ನು ಅಷ್ಟು ದೊಡ್ಡ ಪ್ರಮಾಣದಲ್ಲಿ ಅವನೆಂದೂ ನೋಡಿಯೇ ಇರಲಿಲ್ಲ. ಸಮುದ್ರವನ್ನು ನೋಡಿದಾಗಲೆಲ್ಲ ತಾನು ನಿಂತಿರುವ ತುಂಡುಭೂಮಿಯೊಂದನ್ನು ಬಿಟ್ಟು, ಬೇರೆಲ್ಲವೂ ಈ ನೀರಿನಲ್ಲಿ ಮುಳುಗಿಬಿಟ್ಟಿದೆ ಎಂಬ ವಿಚಿತ್ರ ಭಾವವೊಂದು ಅವನಲ್ಲಿ ಮೂಡುತ್ತಿತ್ತು. ಹೀಗಾಗಿ ಸಮುದ್ರವು ಜೀತೂನ ಪಾಲಿಗೆ ಅಚ್ಚರಿ, ಗಾಬರಿ, ಕೌತುಕಗಳೆಲ್ಲವೂ ಆಗಿದ್ದವು.
ಜೀತೂನ ಬಗ್ಗೆ ಕೂತು ಯೋಚಿಸಿದಂತೆಲ್ಲ ಹೀಗೆ ಒಂದರ ಹಿಂದೊಂದರಂತೆ ನೆನಪುಗಳ ಮೆರವಣಿಗೆಯು ಮುಂದುವರೆಯುತ್ತಿತ್ತು.
"ಜೀತು ಎಲ್ಲಿಗೆ ಹೋಗಿರಬಹುದು ಅಂತೀಯಾ?", ತನಗೆ ತಾನೇ ಕೇಳುವಂತೆ ರಿಷಿ ಅನ್ಯಮನಸ್ಕನಾಗಿ ಕೇಳಿದ.
"ನನಗೂ ಇದು ಗೊತ್ತಾಗುತ್ತಿಲ್ಲಪ್ಪ", ಸಬಾ ಆಕಾಶ ನೋಡುತ್ತಾ ಹೇಳಿದಳು.
"ಮೊದಲೇ ಅವನಿಗೆ ತಿರುಗಾಟದ ಹುಚ್ಚು. ಪಕ್ಕದ ಜಾನಕೀಪುರಕ್ಕೋ, ಹೊಸಳ್ಳಿಗೋ ಹೋಗಿರಬಹುದಾ? ಹೋಗಿದ್ದರೂ ಮರಳಿ ಬರಬೇಕಿತ್ತಲ್ಲ?", ಈ ಘಟನೆಯನ್ನು ವಿವಿಧ ಆಯಾಮಗಳಲ್ಲಿ ನೋಡಲು ಪ್ರಯತ್ನಿಸುತ್ತಿದ್ದ ಚಿಂಟು.
"ಹೊಸಳ್ಳಿಯಲ್ಲಿ ನಿನ್ನೆಯಿಂದ ಊರ ವಾರ್ಷಿಕ ಜಾತ್ರೆಯಂತೆ. ಅಲ್ಲಿ ಮಜಾ ಮಾಡಲು ಹೋಗಿ ಅಲ್ಲೇ ಯಾರೋ ಸಂಬಂಧಿಗಳ ಮನೆಯಲ್ಲಿ ಉಳಿದಿರಬಹುದು. ಒಮ್ಮೆ ವಿಚಾರಿಸಿ ನೋಡಿ ಅಂತ ಶಾಂತಿ ಆಂಟಿ ಹತ್ರ ಹೇಳ್ತೀನಿ ಇವತ್ತು", ಎಂದಳು ಸಬಾ.
"ಹೋದವನು ಕಡೇ ಪಕ್ಷ ಒಂದು ಫೋನ್ ಕಾಲ್ ಮಾಡಿದ್ರೆ ಇದು ಪೋಲೀಸರು ಮನೆಗೆ ಬರುವಷ್ಟು ದೊಡ್ಡ ಸಂಗತಿಯಾಗುತ್ತಿರಲಿಲ್ಲ", ರಿಷಿ ದನಿಗೂಡಿಸಿದ.
"ಅವನ ಬಳಿ ಎಲ್ಲಿದೆ ಫೋನು? ಅವನದ್ದು ಹಾಗಿರಲಿ, ನಮ್ಮ ಬಳಿ ಆದ್ರೂ ಇದೆಯಾ? ಶಾಲೆಯ ನಿಯಮದಂತೆ ಸಂಜೆಯ ಒಂದು ತಾಸು ಮಾತ್ರ ಫೋನು, ಇಂಟರ್ನೆಟ್ಟು ಅಂತೆಲ್ಲ ನಮ್ಮ ಮನೆಗಳಲ್ಲಿ ಭಯಂಕರ ಕಾನೂನು ತಂದಾಗಿದೆ. ಹೀಗಾಗಿ ಫೋನಿಟ್ಟುಕೊಂಡು ಮಾಡೋದಾದ್ರೂ ಏನು?", ಗೊಣಗಿದ ಚಿಂಟು.
"ಏನೂ ಆಗಿರಲ್ಲ. ನಾವು ಧೈರ್ಯ ಕಳೆದುಕೊಳ್ಳುವುದು ಬೇಡ. ಅವನಿಗೆ ಸ್ವಲ್ಪ ಬೇಜವಾಬ್ದಾರಿ ಹೆಚ್ಚು. ಇಲ್ಲೆಲ್ಲೋ ಪಕ್ಕದ ಹಳ್ಳಿಗೆ ಹೋಗಿರಬೇಕು. ಇವತ್ತು ಸಂಜೆಯೊಳಗೆ ಖಂಡಿತ ಮನೆ ಸೇರಿರುತ್ತಾನೆ ನೋಡಿ", ಸಾವಧಾನವಾಗಿ ಸಂತೈಸುವ ಧಾಟಿಯಲ್ಲಿ ಹೇಳಿದಳು ಸಬಾ.
ಸಬಾ ಹಾಗೆ ಹೇಳಿದ್ದೇನೋ ಸರಿ. ಆದರೆ ತನ್ನ ಮಾತಿನ ಬಗ್ಗೆ ಖುದ್ದು ಅವಳಿಗೆ ಸಂಪೂರ್ಣವಾಗಿ ನಂಬಿಕೆಯಿದ್ದಂತಿರಲಿಲ್ಲ. ಏಕೆಂದರೆ ಜೀತು ಎಷ್ಟು ತುಂಟನಾಗಿದ್ದರೂ, ಹೀಗೆಲ್ಲ ಏಕಾಏಕಿ ಕಾಣೆಯಾಗುವುದರಲ್ಲಿ ಅರ್ಥವಿರಲಿಲ್ಲ. ಇನ್ನು ಮಲ್ಲಿಗೆಪೇಟೆಯಂತಹ ಚಿಕ್ಕ ಹಳ್ಳಿಯಲ್ಲಿ ಸಾಮಾನ್ಯವಾಗಿ ಇಂಥಾ ಘಟನೆಗಳು ಆಗುತ್ತಲೂ ಇರಲಿಲ್ಲ. ಹೀಗಿರುವಾಗ ಜೀತೂ ಎಲ್ಲಿ ಮಾಯವಾದ? ಅವನಿಗೆ ಏನಾದರೂ ಅನಾಹುತವಾಗಿರಬಹುದೇ? ಯಾರಾದರೂ ಅವನನ್ನು ಅಪಹರಿಸಿರಬಹುದೇ? ಗುಡ್ಡದಾಚೆಯ ಕಾಡುದಾರಿಯಲ್ಲಿ ಎಲ್ಲಾದರೂ ದಾರಿ ತಪ್ಪಿ ಹೋಗಿಬಿಟ್ಟನೇ? ಸಬಾಳನ್ನು ಕಾಡುತ್ತಿದ್ದ ಪ್ರಶ್ನೆಗಳು ಮುಗಿಯುವಂತೆ ಕಾಣಲಿಲ್ಲ.
ಏನೇ ಆಗಲಿ. ಇವತ್ತು ಶಾಲೆಯಿಂದ ಹೊರಟ ನಂತರ ಜೀತೂನ ಮನೆಗೆ ಹೋಗಿಯೇ ಮನೆ ಸೇರುತ್ತೇನೆ ಎಂದು ಲೆಕ್ಕಹಾಕಿದಳು ಸಬಾ.
***
ಅಂದಿನ ಎಲ್ಲಾ ತರಗತಿಗಳ ಹಾಜರಾತಿಯಲ್ಲಿ ಜೀತೂನ ಗೈರುಹಾಜರಿ ದಾಖಲಾಗಿತ್ತು.
ವಾರದ ಮೊದಲ ದಿನವಾಗಿದ್ದ ಪರಿಣಾಮವಾಗಿ ಯಾವ ಶಿಕ್ಷಕರೂ ಅವನ ಗೈರುಹಾಜರಿಯ ಬಗ್ಗೆ ಹೆಚ್ಚು ಮಾತಾಡಲಿಲ್ಲ. ಅವನ ಖಾಸಾ ಗೆಳೆಯರಲ್ಲೂ ವಿಚಾರಿಸಲಿಲ್ಲ. ಇನ್ನು ಚಿಂಟು ಹೇಳುವ ಪ್ರಕಾರ ಜೀತು ಕಾಣೆಯಾದ ಸುದ್ದಿಯು ಇನ್ನೂ ಶಾಲೆಯನ್ನು ತಲುಪಿರಲಿಲ್ಲ. ಹೀಗಾಗಿ ಅಲ್ಲಿ ಎಲ್ಲವೂ ಬಹುತೇಕ ಸಹಜವಾಗಿಯೇ ಇತ್ತು. ನಿಸ್ಸಂದೇಹವಾಗಿ ಈ ಮೂವರನ್ನು ಬಿಟ್ಟು!
ಅಂದಹಾಗೆ ಮಲ್ಲಿಗೆಪೇಟೆಯ ಊರಾಚೆಯ ಗುಡಿಯ ಬಳಿ ದಿನನಿತ್ಯವೂ ರಾತ್ರಿ ಶಾಲೆಯನ್ನು ನಡೆಸಲಾಗುತ್ತದೆ. ರಿಷಿಯ ಮಾವ ಸುಕೇಶ ಅಲ್ಲಿಯ ವಿದ್ಯಾರ್ಥಿ. ತನ್ನ ದೈನಂದಿನ ದಿನಗೂಲಿಯ ಕಾರ್ಯಗಳನ್ನು ಮುಗಿಸಿ ಸುಕೇಶ ನಿತ್ಯವೂ ರಾತ್ರಿ ಶಾಲೆಗೆ ಹೋಗುತ್ತಾನೆ. ಅಲ್ಲದೆ ತನಗೆ ಜೊತೆ ಬೇಕೆಂದು ರಿಷಿಯನ್ನೂ ತನ್ನ ಜೊತೆ ಕರೆದೊಯ್ಯುತ್ತಾನೆ. ಹಲವು ಬಾರಿ ಗಣಿತವು ತೀರಾ ತಲೆ ತಿನ್ನತೊಡಗಿದಾಗ ರಿಷಿಯೇ ಸುಕೇಶನಿಗೆ ಸಹಾಯ ಮಾಡಬೇಕು. ನಿತ್ಯವೂ ತನ್ನ ಶಾಲೆಯ ಕೆಲಸಗಳನ್ನು ಮುಗಿಸಿ, ಕತ್ತಲಾದ ನಂತರ ಮಾವನ ಜೊತೆ ಮತ್ತೆ ರಾತ್ರಿ ಶಾಲೆಗೆ ತೆರಳುವುದು ಅವನಿಗೆ ಸುಲಭದ ಮಾತೇನಲ್ಲ. ಮೊದಲು ಇವೆಲ್ಲ ಹೊರೆಯಂತೆ ಅನ್ನಿಸುತ್ತಿದ್ದರೂ ರಿಷಿಗೀಗ ಇವೆಲ್ಲ ಅಭ್ಯಾಸವಾಗಿಬಿಟ್ಟಿದೆ. ಹಲವು ಬಾರಿ ಶಾಲೆಯಿಂದ ಕೊಡಲಾಗುವ ತನ್ನ ಮನೆಕೆಲಸಗಳನ್ನು ಅವನು ಅಲ್ಲೇ ಕೂತು ಮಾಡಿದ್ದೂ ಉಂಟು. ಇನ್ನು ಕಷ್ಟವೆನಿಸುವ ಗಣಿತ-ಇಂಗ್ಲಿಷ್-ವಿಜ್ಞಾನದಂತಹ ವಿಷಯಗಳಲ್ಲಿ ಏನಾದರೂ ಸಂಶಯಗಳಿದ್ದರೆ ಹೇಗೂ ಅಲ್ಲಿ ಶಿಕ್ಷಕರಿರುತ್ತಾರಲ್ವಾ!
ಹೀಗೆ ರಾತ್ರಿ ಶಾಲೆ ಮುಗಿಸಿ ರಿಷಿ ಮತ್ತು ಸುಕೇಶ ಮನೆ ಸೇರುವಾಗ ಒಂದಿಷ್ಟು ತಡವೇ ಆಗುತ್ತದೆ. ಇನ್ನು ಕಾಡದಾರಿಯಲ್ಲಿ ನಡೆಯುತ್ತಾ ಮನೆಯವರೆಗೆ ಹೋಗುವುದೆಂದರೆ ರಿಷಿಗಂತೂ ಒಂದು ಬಗೆಯ ಅಳುಕು ಇದ್ದೇ ಇದೆ. ಆದರೆ ಇದನ್ನು ಮಾವನ ಬಳಿ ಮನಬಿಚ್ಚಿ ಹೇಳುವಂತಿಲ್ಲ. ಹಾಗೇನಾದರೂ ಹೇಳಿದರೆ ಅರೇ ಪುಕ್ಕಲ ನೀನು ಎಂದು ಅವನು ಹೀಗಳೆಯುತ್ತಾನೆ. ಈ ಬಗ್ಗೆ ಮನೆಯಲ್ಲೂ ಎಲ್ಲರ ಬಳಿ ಟಾಂಟಾಂ ಮಾಡಿ ವಿನಾಕಾರಣ ಗೋಳು ಹುಯ್ದುಕೊಳ್ಳುತ್ತಾನೆ. ಹೀಗಾಗಿ ತಾನು ಧೈರ್ಯವಂತನೆಂದು ತನ್ನಿಂದಾಗುವಷ್ಟು ಪೋಸು ಕೊಡುತ್ತಾನೆ ರಿಷಿ. ಆ ಬಹುತೇಕ ನಿರ್ಜನವೆನಿಸುವ ದಾರಿಗಳಲ್ಲಿ ಹೆಜ್ಜೆ ಹಾಕಲು ಒಳಗೊಳಗೇ ಸಾಕಷ್ಟು ಭಯವಾಗುತ್ತಿದ್ದರೂ ಕೂಡ!
ಇತ್ತ ಜೀತು ಹಟಾತ್ತನೆ ಮಾಯವಾಗುವುದಕ್ಕೂ, ಇವೆಲ್ಲ ರಿಷಿಗೆ ಒಮ್ಮೆಲೇ ನೆನಪಾಗುವುದಕ್ಕೂ ಒಂದು ಹಿನ್ನೆಲೆಯಿದೆ. ಅದೇನೆಂದರೆ ಮೇಲೆ ಹೇಳಿರುವ ಕಾಡುದಾರಿಯಲ್ಲಿ ಒಂದು ದೊಡ್ಡ ಆಲದ ಮರವೂ ಸಿಗುತ್ತದೆ. ಏನಿಲ್ಲವೆಂದರೂ ಅದಕ್ಕೆ ನೂರೈವತ್ತು ವರ್ಷಗಳಾಗಿರಬಹುದು ಎಂದು ಮರದ ಬಗ್ಗೆ ಊರ ಹಿರಿಯರು ಮೆಚ್ಚಿ ಹೇಳುವುದುಂಟು. ಇನ್ನು ಬೆಳದಿಂಗಳ ರಾತ್ರಿಗಳಲ್ಲಂತೂ ಆಲದ ಮರದ ಬಿಳಲುಗಳು ಕತ್ತಲ ಹಿನ್ನೆಲೆ ಮತ್ತು ಬೆಳದಿಂಗಳ ಲೇಪದಲ್ಲಿ ಕೆಲವೊಮ್ಮೆ ವಿಚಿತ್ರವಾಗಿ ಕಾಣುತ್ತವೆ. ಈ ದೃಶ್ಯಗಳು ಅವನಲ್ಲಿ ಹಲವು ಬಾರಿ ಭಯವನ್ನು ಮೂಡಿಸಿದ್ದು ಸುಳ್ಳಲ್ಲ.
"ಈ ಮರಕ್ಕೆ ಹಿಂದಿನ ಜನ್ಮದಲ್ಲಿ ಸಾವಿರ ಕೈಗಳಿದ್ದವಂತೆ. ಅದಕ್ಕೆ ಮಕ್ಕಳೆಂದರೆ ಬಹಳ ಪ್ರೀತಿಯಂತೆ. ಹೀಗಾಗಿ ಮಕ್ಕಳು ಅದರ ಪಕ್ಕ ಬಂದಾಗಲೆಲ್ಲಾ ತನ್ನ ಅಷ್ಟೂ ಕೈಗಳಿಂದ ಪ್ರೀತಿಯಿಂದ ಮಕ್ಕಳ ಮೈಸವರುತ್ತಿತ್ತಂತೆ. ಆಲಂಗಿಸಿಕೊಳ್ಳುತ್ತಿತ್ತಂತೆ. ಅದು ದ್ವಾಪರಯುಗ ಮಾರಾಯ... ಇದೆಲ್ಲಾ ಆಗ ಸಾಧ್ಯವಿತ್ತು. ಆದರೆ ಈಗ ಕಲಿಯುಗ. ಹೀಗಾಗಿ ಅದರ ಕೈಗಳೆಲ್ಲ ಹೀಗೆ ಬಿಳಲುಗಳಾಗಿ ಮರಗಟ್ಟಿಹೋಗಿವೆ. ಆದರೂ ಈಗಿನ ಮಕ್ಕಳು ಬಂದು ಈ ಬಿಳಲುಗಳನ್ನು ಉಯ್ಯಾಲೆ ಮಾಡಿಕೊಂಡು ಜೋತಾಡುವಾಗ ಈ ಮರಕ್ಕೆ ಖುಷಿಯಾಗುತ್ತದಂತೆ. ಮಕ್ಕಳು ಮರವನ್ನು ತಬ್ಬಿ ಹಿಡಿಯುವಂತೆ ತಾನೂ ಅವರನ್ನು ಅಪ್ಪಿಕೊಳ್ಳಬೇಕು ಅಂತೆಲ್ಲ ಅದಕ್ಕೆ ಆಸೆಯಾಗುತ್ತದಂತೆ...", ಹೀಗೆ ಬ್ರಹ್ಮರಾಕ್ಷಸನಂತೆ ಕಾಣುತ್ತಿದ್ದ ಆ ದೊಡ್ಡ ಮರದ ಬಗ್ಗೆ ವಿಚಿತ್ರ ಕತೆಯೊಂದನ್ನು ಹೇಳಿದ್ದ ಸುಕೇಶ.
ಸುಕೇಶ ಈ ಕತೆಯನ್ನು ಯಾವ ಉದ್ದೇಶವಿಟ್ಟುಕೊಂಡು ಹೇಳಿದ್ದನೋ ತಿಳಿಯದು. ಆದರೆ ರಿಷಿಗಂತೂ ಇದರಿಂದ ಮರದ ಬಗ್ಗೆ ಪ್ರೀತಿ ಹುಟ್ಟುವುದು ಬಿಟ್ಟು, ವಿಕ್ಷಿಪ್ತ ಭಯವೊಂದು ಹುಟ್ಟಿಕೊಂಡಿತ್ತು. ಆ ದಾರಿಯಲ್ಲಿ ಹೋಗುವಾಗಲೆಲ್ಲಾ ಮರವು ತನ್ನತ್ತಲೇ ನೋಡುತ್ತಿದೆ, ಗಾಳಿಪಟದ ಉದ್ದನೆಯ ಬಾಲದಂತೆ ನೇತಾಡುತ್ತಿರುವ ಆ ಬಿಳಲುಗಳು ತನ್ನನ್ನೂ ಸುತ್ತಿಕೊಳ್ಳಲಿವೆ... ಅಂತೆಲ್ಲ ರೋಚಕ ಯೋಚನೆಗಳು ಹುಟ್ಟಿ ಅವನಿಗೆ ಮೈಯೊಳಗೆ ನಡುಕ ಹುಟ್ಟುತ್ತಿತ್ತು. ಆ ಮರವು ನಮ್ಮ ಜೀತೂನನ್ನು ನುಂಗಿ ಹಾಕಿರಬಹುದೇ ಎಂದು ಭಯದಲ್ಲೇ ಯೋಚಿಸುತ್ತಿದ್ದ ರಿಷಿ.
ಇಂದು ರಾತ್ರಿ ಶಾಲೆಯ ನಂತರ ಮನೆಯತ್ತ ತೆರಳುವಾಗ ಮರದ ಬಳಿಯೂ ಹೋಗಿ ಸೂಕ್ಷ್ಮವಾಗಿ ಪರೀಕ್ಷೆ ಮಾಡಬೇಕು. ಅಗತ್ಯ ಬಿದ್ದಲ್ಲಿ ಮಾವನಿಗೂ ಈ ಬಗ್ಗೆ ಹೇಳಬೇಕು. ಸಾಧ್ಯವಾದಲ್ಲಿ ನಾಳೆಯಿಂದ ಬೇರೆ ದಾರಿ ಹಿಡಿದು ಮನೆ ಸೇರಬೇಕು. ಅಷ್ಟಕ್ಕೂ ಮಾವ ಹೇಳಿದ್ದ ಆ ಕತೆಯು ಸತ್ಯವಾಗಿರಬಹುದೇ? ಅದು ನಿಜಕ್ಕೂ ನಮ್ಮ ಜೀತೂನನ್ನು ನುಂಗಿರಬಹುದೇ? ಅದು ಹೌದಾದಲ್ಲಿ ಅವನನ್ನು ಮತ್ತೆ ಕರೆತರುವುದಾದರೂ ಹೇಗೆ?
ರಿಷಿ ಯೋಚಿಸುತ್ತಲೇ ಇದ್ದ. ಆದರೆ ಉತ್ತರಗಳು ಮಾತ್ರ ಸದ್ಯ ಅವನತ್ತ ಬರುವ ಗೋಜಿನಲ್ಲಿರುವಂತೆ ಕಾಣಲಿಲ್ಲ.
ಕೃತಿ : ಜಿಪ್ಸಿ ಜೀತು (ಯಂಗ್ ಅಡಲ್ಟ್ ಫಿಕ್ಷನ್)
ಲೇಖಕರು : ಪ್ರಸಾದ್ ನಾಯ್ಕ್
ಮುಖಪುಟ ವಿನ್ಯಾಸ: ಕಿರಣ ಮಾಡಾಳು
ಪುಟ: ೧೫೦
ಬೆಲೆ: ರೂ. ೧೭೫
ಪ್ರಕಾಶನ: ಹರಿವು ಬುಕ್ಸ್
ಪ್ರಸಾದ್ ನಾಯ್ಕ್
ಪ್ರಸಾದ್ ನಾಯ್ಕ್ ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು. "ಹಾಯ್ ಅಂಗೋಲಾ", "ಸಫಾ", "ಸ್ನೇಹಗ್ರಾಮದ ಸಂಸತ್ತು" ಮತ್ತು "ಮರ ಏರಲಾಗದ ಗುಮ್ಮ" ಇವರ ಪ್ರಕಟಿತ ಕೃತಿಗಳು. ಇವರ ಚೊಚ್ಚಲ ಕೃತಿ "ಹಾಯ್ ಅಂಗೋಲಾ" ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ವರ್ಷದ ಅತ್ಯುತ್ತಮ ಪ್ರವಾಸ ಕಥನಕ್ಕಾಗಿ ಶಿವಮೊಗ್ಗ ಸಾಹಿತ್ಯ ಸಂಘದಿಂದ ನೀಡಲಾಗುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಪುರಸ್ಕಾರವನ್ನು ಪಡೆದುಕೊಂಡಿದೆ. ಹರಿವು ಬುಕ್ಸ್ ನಿಂದ ಪ್ರಕಟವಾಗಿರುವ "ಜಿಪ್ಸಿ ಜೀತು" ಇವರ ಹೊಸ ಕೃತಿ.
ಕನ್ನಡ ಕಲಿಸುವ ನಿಟ್ಟಿನಲ್ಲಿ ಸಕ್ರಿಯವಾಗಿರುವ ಕನ್ನಡ ಗೊತ್ತಿಲ್ಲ ಡಾಟ್ ಕಾಮ್ ಗಾಗಿ ವ್ಯಂಗ್ಯಚಿತ್ರಗಳನ್ನು ಬರೆದಿದ್ದು, ಸಾಧನಕೇರಿ ಸಾಹಿತ್ಯ ಪ್ರತಿಷ್ಠಾನದಿಂದ ಬಿಡುಗಡೆಯಾಗಿದ್ದ "ಒಲವನಾದ" ಮತ್ತು "ಯೋಧ ನಮನ" ಮ್ಯೂಸಿಕ್ ಆಲ್ಬಮ್ ಗಳಿಗಾಗಿ ಕೆಲ ಹಾಡುಗಳನ್ನು ಬರೆದಿದ್ದಾರೆ. ಹರಿಯಾಣಾದ ಗುರುಗ್ರಾಮ ನಿವಾಸಿಯಾಗಿರುವ ಇವರು ಕೇಂದ್ರ ಸರಕಾರಿ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವಾನಿರತರು. ಸದ್ಯ ಕನ್ನಡ ಪ್ಲಾನೆಟ್ ನ್ಯೂಸ್ ಪೋರ್ಟಲ್ ಗಾಗಿ "ಮೆಟ್ರೋ ಲೈಫ್" ಎಂಬ ಅಂಕಣವನ್ನೂ ಬರೆಯುತ್ತಿದ್ದಾರೆ.