ಇರುವೆಗಾಲ ಗೆಬರಿನಂತೆ ಚಿಟ್ಟೆ ಹಲ್ಲ ಮಸೆದಂತೆ ಮಣ್ಣಹುಡಿ ಉರುಳಿದಂತೆ
ಮನುಷ್ಯಸಹಜ ಹುಡುಕಾಟದ ಗುರಿ: ಘನತೆ - ಉದ್ದಿಶ್ಯ - ಕರ್ತೃತ್ವ ಶಕ್ತಿ
ಹತ್ಯಾಕಾಂಡದಲ್ಲಿ ಬದುಕುಳಿದವರು (Holocaust Survivors) ಬರೆದ ಕೆಲವು ಪುಸ್ತಕಗಳನ್ನು ಪರಿಚಯಿಸುತ್ತ, ಜೊತೆಗೇ ಅಪಾರ್ಥೈಡ್ನ ಅವಧಿಯನ್ನು ಕ್ಯಾನ್ವಾಸ್ ಆಗಿ ಮಾಡಿಕೊಂಡ ಎರಡು ಕಾದಂಬರಿಗಳನ್ನು ಗಮನಿಸುತ್ತ, ಮನುಷ್ಯನ ಅಸ್ತಿತ್ವದ ಜೀವಶಕ್ತಿ ಮತ್ತು ಅವನ ಹುಡುಕಾಟದ ಗುರಿಗಳನ್ನು ಕುರಿತು ಕೆಲವು ವಿಚಾರಗಳನ್ನು ಸಂಕೇತ ಪಾಟೀಲ ಈ ಪ್ರಬಂಧದಲ್ಲಿ ನಮ್ಮ ಮುಂದಿಡುತ್ತಾರೆ. ಇದು ಮೂರು ಭಾಗಗಳಲ್ಲಿ ಪ್ರಕಟವಾಗಲಿದೆ. ಈ ಪ್ರಬಂಧದ ಮೊದಲ ಭಾಗ ಇಲ್ಲಿದೆ. ಇದು ಎರಡನೆಯ ಭಾಗ. ಮೂರನೆಯ ಭಾಗ ಇಲ್ಲಿದೆ.
ವರ್ಣಭೇದದ ಚರಿತ್ರೆಯಲ್ಲಿ ಅಪಾರ್ಥೈಡ್ನದು (aparthied) ಅತ್ಯಂತ ಕರಾಳ ಅಧ್ಯಾಯ ಎಂದು ಹೇಳಬಹುದು. ತೀರ ಇತ್ತೀಚಿನವರೆಗೂ ಪ್ರಚಲಿತವಾಗಿದ್ದ ನನ್ನ ತಲೆಮಾರಿನವರು ಕೂಡ ಪರೋಕ್ಷವಾಗಿಯಾದರೂ ಗಮನಿಸಿದ್ದ ವಿದ್ಯಮಾನ. ಇನ್ನೂ ಪೂರ್ತಿಯಾಗಿ ಮಾಯದ ಹಸಿಗಾಯದಂಥದ್ದು. ಸೌತ್ ಆಫ್ರಿಕಾದ ವಸಾಹತುದಾರ ಡಚ್ ಜನರ ಆಡುನುಡಿಯಿಂದ ಹುಟ್ಟಿಕೊಂಡ ಆಫ್ರಿಕಾನ್ಸ್ ಭಾಷೆಯಲ್ಲಿ ಅಪಾರ್ಥೈಡ್ನ ವಾಚ್ಯಾರ್ಥ ‘ಪ್ರತ್ಯೇಕತೆ’ ಎಂದು (apart-hood / aparth-heid). ಅಪಾರ್ಥೈಡ್ ಎನ್ನುವುದು ವ್ಯವಸ್ಥಿತ ವರ್ಣಭೇದದ ಆತ್ಯಂತಿಕ ಸ್ಥಿತಿ; ಕೂಲಂಕಷವಾಗಿ ವಿನ್ಯಾಸಗೊಳಿಸಿದ ಅದರ ಪರಿಪೂರ್ಣ ಸ್ವರೂಪ: ದೇಶದ ಜನರನ್ನು ವಿಸ್ತೃತವೂ ಸಂಕೀರ್ಣವೂ ಆದ ಜನಾಂಗೀಯ ವರ್ಗೀಕರಣದ ಮೂಲಕ ವಿಂಗಡಿಸಿ, ಶ್ರೇಣೀಕೃತ ವ್ಯವಸ್ಥೆಯನ್ನು ನಿರ್ಮಿಸಿ, ಯಾವ ಜನಾಂಗದವರು ಎಲ್ಲಿ ವಾಸಿಸಬಹುದು, ಎಲ್ಲಿ ಓಡಾಡಬಹುದು, ಯಾರೊಂದಿಗೆ ಬೆರೆಯಬಹುದು, ಯಾವ ರೀತಿಯ ಕೆಲಸಗಳನ್ನು ಮಾಡಬಹುದು — ಪ್ರತಿಯೊಂದರಲ್ಲೂ ಅಚ್ಚುಕಟ್ಟಾದ ಬೇರ್ಪಾಟು.
ಜೆ.ಎಂ.ಕೂಟ್ಸೀ (J.M.Coetzee) ಅವರ ಮೈಕಲ್ ಕೆ ಹುಟ್ಟಿದ್ದು ಆ ಅವಧಿಯಲ್ಲಿಯೇ. ಹುಟ್ಟಿನಿಂದಲೇ ತನ್ನ ಸೀಳುತುಟಿ, ಮಂದಬುದ್ಧಿಯಿಂದಾಗಿ ಎಲ್ಲರ ಕಣ್ಣಲ್ಲೂ ಕೀಳಾಗಿದ್ದವನು; ಹುಟ್ಟಿಸಿದ ತಾಯಿಗೇ ಬೇಡವಾದವನು. ಎಷ್ಟರಮಟ್ಟಿಗಂದರೆ ಅವಳು ಅವನನ್ನು ಸರಕಾರೀ ಅನಾಥಾಲಯಕ್ಕೊಪ್ಪಿಸಿ ಕೈತೊಳೆದುಕೊಂಡುಬಿಟ್ಟಿರುತ್ತಾಳೆ. ಹೇಗೋ ಬದುಕುಳಿದು ದೊಡ್ಡವನಾಗಿ ಕೇಪ್ ಟೌನ್ನ ಉದ್ಯಾನಗಳಲ್ಲಿ ಮಾಲಿಯಾಗಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿರುವವನಿಗೆ ಮುಂದೊಂದು ದಿನ ಅದುವರೆಗೂ ಅವನ ಬದುಕಿನಲ್ಲಿರದಿದ್ದ ತಾಯಿಯನ್ನು ಅವಳ ಕೊನೆಗಾಲದಲ್ಲಿ ಅವಳ ಹುಟ್ಟಿದೂರಿಗೆ ಕರೆದುಕೊಂಡು ಹೋಗುವ ಪ್ರಸಂಗ ಬರುತ್ತದೆ. ಅಪಾರ್ಥೈಡ್ನ ಆ ಕಾಲದಲ್ಲಿ ಅನುಮತಿಯಿಲ್ಲದೇ ಎಲ್ಲೂ ಹೋಗುವಂತಿಲ್ಲ. ಮೇಲಾಗಿ ದೇಶದಲ್ಲಿ ಅಂತರ್ಯುದ್ಧ. ನೂರಾರು ಕಿಲೋಮೀಟರ್ ದೂರದ ಅವಳ ಹುಟ್ಟೂರಿಗೆ ಕರೆದುಕೊಂಡು ಹೋಗುವುದೆಂತು?
ತನ್ನ ಕೆಲಸವನ್ನು ಬಿಟ್ಟು ತಾಯಿಯ ಕೊನೆಯ ಆಸೆ ತೀರಿಸುವ ಉದ್ಯಮದಲ್ಲಿ ತೊಡಗುತ್ತಾನೆ. ರಸ್ತೆ ಬದಿ ಸಿಕ್ಕ ತಳ್ಳುಗಾಡಿಗೆ ತನ್ನ ಹಳೆಯ ಸೈಕಲ್ಲನ್ನು ಜೋಡಿಸಿ ಇದ್ದುದರಲ್ಲೇ ವ್ಯವಸ್ಥೆ ಮಾಡಿ ತಾಯಿಯನ್ನು ಅದರಲ್ಲಿ ಕೂರಿಸಿಕೊಂಡು ಒಯ್ಯುವ ವ್ಯವಸ್ಥೆ ಮಾಡುತ್ತಾನೆ. ಆದರೆ ಅವನ ದುರ್ದೈವ ಬೆಂಬಿಡುವುದೇ ಇಲ್ಲ. ಹೇಗೋ ಪೊಲೀಸರಿಂದ ತಪ್ಪಿಸಿಕೊಂಡು ಊರ ಹಾದಿ ಹಿಡಿಯುವಷ್ಟರಲ್ಲಿ ಅವನ ತಾಯಿಯೇ ತೀರಿಹೋಗುತ್ತಾಳೆ. ಆಸ್ಪತ್ರೆಯ ನರ್ಸ್ ಒಂದು ಚೀಲದಲ್ಲಿ ಸುಟ್ಟುಹೋದ ಅವನ ತಾಯಿಯ ಬೂದಿಯನ್ನು ತಂದುಕೊಟ್ಟಾಗ ಗೊಂದಲಗೊಳ್ಳುತ್ತಾನೆ. ಇನ್ನು ಮಾಡುವುದೇನು? ಜೀವನದಲ್ಲಿ ಮೊಟ್ಟಮೊದಲನೆಯ ಸಲ ಅವನೊಂದು ನಿರ್ಧಾರವನ್ನು ತಳೆಯಬೇಕು. ಅವಳು ಹುಟ್ಟಿದ್ದ ಆ ದೂರದ ತೋಟವನ್ನು ತಲುಪಿಯಾದರಾದರೂ ಆಯಿತು ಎಂದು ಮತ್ತೆ ಪಯಣ ಹೊರಡುತ್ತಾನೆ. ಹೆದ್ದಾರಿಗಳನ್ನು ಬಿಟ್ಟು ಒಳಹಾದಿಗಳಲ್ಲಿ, ಗುಡ್ಡಕಣಿವೆಗಳಿಂದ, ತೋಟಗಳ ಮೂಲಕ ನಡೆಯುತ್ತ, ದಾರಿಯಲ್ಲಿ ನೆಲವು ಹುಟ್ಟಿಸಿದ್ದನ್ನು ನೆಲವು ತಾನಾಗಿಯೇ ಇವನಿಗೆ ತಿನ್ನಲು ಬಿಟ್ಟುಕೊಟ್ಟದ್ದನ್ನು ತಿನ್ನುತ್ತ, ಹಲವು ಸಂಕಷ್ಟಗಳನ್ನು ನೀಗಿಸಿಕೊಂಡು ಕೊನೆಗೊಂದು ದಿನ ತಾಯಿಯ ಹುಟ್ಟೂರನ್ನು ತಲುಪುತ್ತಾನೆ.
ಕುಟ್ಸೀಯ Life and Times of Michael K ಓದುಗರನ್ನು ಆಳವಾಗಿ ತಟ್ಟಬಲ್ಲಂಥ ಕಾದಂಬರಿ. ಅವರ ಹೃಸ್ವತೆಯಲ್ಲಿ, ಅದರ ತೀವ್ರತೆಯಲ್ಲಿ ಅಗಾಧವಾದ ಸೌಂದರ್ಯವಿದೆ. ಮೈಕಲ್ನ ಪಾತ್ರದ ಮೂಲಕ ಕುಟ್ಸೀ ಮನುಷ್ಯನ ಇರುವಿಕೆಯ ಅರ್ಥವನ್ನು, ಘನತೆಯಿಂದ ಬಾಳುವುದರ ನೆಲೆಯನ್ನು ಹುಡುಕಲೆಳಸುತ್ತಾರೆ. ಇದು ಮನುಷ್ಯ ಸ್ವತಂತ್ರವಾಗಿ ತನಗೆ ಬೇಕಾದಂತೆ ಬದುಕಿದ್ದೂ ಸೃಷ್ಟಿಯ ಉಳಿದ ಯಾವುದಕ್ಕೂ ಅಡ್ಡಿಪಡಿಸದೇ ಯಾರ ಗಮನಕ್ಕೂ ಬಾರದೇ ಧೂಳಿನ ಕಣವೊಂದರಂತೆ ಹಗುರವಾಗಿದ್ದು ಕೊನೆಗೆ ಯಾವ ಕುರುಹನ್ನೂ ಹಿಂದೆ ಬಿಡದೇ ಹಾರಿಹೋಗುವ ಬಗೆಯದ್ದು.
ಸೌತ್ ಆಫ್ರಿಕಾದಲ್ಲಿ ನಡೆಯುತ್ತಿತ್ತು ಎಂದು ಹೇಳಲಾದ ಕಾಲ್ಪನಿಕ ಅಂತರ್ಯುದ್ಧದ ಮುನ್ನೆಲೆಯಲ್ಲಿ ಸಮಾಜದ ಅವಗಣನೆಗೆ ಒಳಗಾದ ಈ ಮೈಕೆಲ್ ಕೆ ಎಂಬ ಈ ವ್ಯಕ್ತಿಯ ಆಧ್ಯಾತ್ಮಿಕ ಯಾನವನ್ನು ಈ ಕಾದಂಬರಿ ದರ್ಶಿಸುತ್ತದೆ. ಯಾರ ಗಮನವನ್ನೂ ಸೆಳೆಯದೇ, ಘನತೆಯ, ಸ್ವಾವಲಂಬನೆಯ ಬದುಕನ್ನು ಬಾಳಬಯಸುವ ಸಾಮಾನ್ಯನೊಬ್ಬ ಯಾರನ್ನೂ ತನ್ನ ಪಾಡಿಗೆ ತಾನು ಇರಲು ಬಿಡದಿರುವ ಈ ಜಗತ್ತಿನ ಜೊತೆ ನಡೆಸಬೇಕಾದ ಹೋರಾಟವನ್ನು ಚಿತ್ರಿಸುತ್ತದೆ. ಅವನಿಗೆ ತನ್ನ ಬದುಕಿನ ಅರ್ಥ, ಇರುವಿಕೆಯ ಉದ್ದೇಶ ಸ್ಪಷ್ಟವಿದೆ. ಅದನ್ನು ಪೂರೈಸಿಕೊಳ್ಳಲು ಬೇಕಾಗುವ ಕರ್ತೃತ್ವಶಕ್ತಿಯೂ ಅವನಲ್ಲಿದೆ. ಅವನು ಸಮಾಜ, ಸಮುದಾಯಗಳ ಹಂಗಿಲ್ಲದ ಒಂದು ಸರಳ ಸುಂದರ ಜಗತ್ತಿನಲ್ಲಿನ ಒಬ್ಬ ತೋಟಗಾರ. ಆದರೆ ತನ್ನ ಸುತ್ತಲಿನ ಸೃಷ್ಟಿಯೊಳಗೆ ತಾನೊಂದಾಗುತ್ತ ಹೋಗುತ್ತಿದ್ದವನನ್ನು ಜಗತ್ತು ಮತ್ತೆ ಮತ್ತೆ ಹೊರಗೆಳೆದು ಪೀಡಿಸುತ್ತದೆ, ಅವನಿಗೆ “ಪುನರ್ವಸತಿ” ನೀಡಿ ನಾಗರಿಕತೆಗೆ ಮರಳಿಸಲು ಹವಣಿಸುತ್ತದೆ.
ಈ ಕಾದಂಬರಿಯ ಭಾಷೆಯೇ ಒಂದು ಸೊಗಸು: ಅದಕ್ಕೆ ಊದಿದರೆ ಹಾರಿಹೋಗುವಂಥ ಮುಟ್ಟಿದರೆ ಒಡೆದುಹೋಗುವಂಥ ನಾಜೂಕಿದೆ.
"He thought of himself not as something heavy that left tracks behind it, but if anything as a speck upon the surface of an earth too deeply asleep to notice the scratch of ant-feet, the rasp of butterfly teeth, the tumbling of dust."
ಮೈಕಲ್ ಕೆ ಇರಬಯಸಿದ್ದು ಹಾಗೆ: ಇರುವೆಗಾಲ ಗೆಬರಿನಂತೆ, ಚಿಟ್ಟೆ ಹಲ್ಲ ಮಸೆದಂತೆ, ಮಣ್ಣಹುಡಿ ಉರುಳಿದಂತೆ.
ನಡೀನ್ ಗಾರ್ಡಿಮರ್ರ (Nadine Gordimer) ಕಾದಂಬರಿ July’s People ಕೂಡ ಅಪಾರ್ಥೈಡ್ ಯುಗದ ಸೌತ್ ಆಫ್ರಿಕಾದಲ್ಲೇ ಸ್ಥಿತವಾದದ್ದು. ಅದು ಶುರುವಾಗುವುದೂ ರಾಜಧಾನಿ ಜೊಹಾನೆಸ್ಬರ್ಗ್ನಿಂದ ಒಳನಾಡಿನ ಹಳ್ಳಿಯೊಂದರತ್ತ ಮಾಡಬೇಕಾದ ಅನಿವಾರ್ಯ ಪ್ರಯಾಣದ ಪ್ರಮೇಯದಿಂದಲೇ. ಆದರೆ ಅದು ಮೈಕಲ್ ಕೆ ಮಾಡಿದ ಪ್ರಯಾಣಕ್ಕಿಂತ ತೀರ ಭಿನ್ನವಾದುದು. ಅದು ಪರ್ಯಾಯ ಚರಿತ್ರೆಯೊಂದರ (alternative history) ಅಂಗವಾಗಿ ಆದ ಪಾತ್ರಗಳ ತಿರುವುಮುರುವಿನ ಕುರಿತಾದದ್ದು.
ಅಪಾರ್ಥೈಡ್ ಯುಗದ ಸೌತ್ ಆಫ್ರಿಕಾದಲ್ಲಿದ್ದೂ ಉದಾರವಾದಿಯಾಗಿರುವ ಬಿಳಿಯ ಸ್ಮೇಲ್ ಕುಟುಂಬ ಮತ್ತು ಅವರ ಕಪ್ಪು ಆಫ್ರಿಕನ್ ಮನೆಯಾಳು ಜುಲೈ — ಇವರ ಕತೆಯನ್ನು July’s People ಹೇಳುತ್ತದೆ. ಅದು ನಡೆಯುವುದು ಒಂದು ಕಾಲ್ಪನಿಕ ಪರ್ಯಾಯ ಚರಿತ್ರೆಯಲ್ಲಿ. ಇಲ್ಲೂ ಒಂದು ಅಂತರ್ಯುದ್ಧವಾಗುತ್ತಿದ್ದೆ. ನಾವು ಅಂತರ್ಯುದ್ಧದ ಮುಗಿತಾಯದ ಹಂತದಲ್ಲಿದ್ದೇವೆ. ಅದರ ಪರಿಣಾಮವಾಗಿ ಕಪ್ಪು ಆಫ್ರಿಕನ್ನರು ದೇಶವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅವರು ಬಿಳಿಯರನ್ನು ಅವರ ಮನೆಗಳಿಂದ ಹೊರಹಾಕುತ್ತಿದ್ದಾರೆ, ಕಂಡಲ್ಲಿ ಕೊಲ್ಲುತ್ತಿದ್ದಾರೆ. ಇದು ಕಾದಂಬರಿಯ ಶುರುವಾತು. ಜೊಹಾನೆಸ್ಬರ್ಗ್ನ ಈ ಮೇಲ್ವರ್ಗದ ಬಿಳಿಯ ಸ್ಮೇಲ್ ಕುಟುಂಬವು ಈ ಹೊಸ ಆಳ್ವಿಕೆಯಿಂದ ಅಥವಾ ಆಳ್ವಿಕೆಯ ಬೆಂಬಲವಿರುವ ಕರಿಯ ದಂಗೆಕೋರರಿಂದ ಕಾಪಾಡುವ ಹೊಣೆಯನ್ನು ಜುಲೈ ತನ್ನ ಮೇಲೆಳೆದುಕೊಂಡು, ಗಂಡ, ಹೆಂಡತಿ ಮತ್ತು ಅವರ ಹದಿಹರೆಯದ ಇಬ್ಬರು ಗಂಡುಮಕ್ಕಳನ್ನು ಸೌತ್ ಆಫ್ರಿಕಾದ ಒಳನಾಡಿನಲ್ಲಿರುವ ತನ್ನ ಹಳ್ಳಿಗೆ ಕರೆದುಕೊಂಡು ಹೋಗುತ್ತಾನೆ. ಪೊಲೀಸರಿಂದ, ದಂಗೆಕೋರರಿಂದ ತಪ್ಪಿಸಿಕೊಳ್ಳುತ್ತ 600 ಕಿಲೋಮೀಟರುಗಳಿಗೂ ಹೆಚ್ಚು ದೂರದ ಅಪಾಯಭರಿತ ಪ್ರಯಾಣದ ನಂತರ ಕೊನೆಗೂ ಅವನ ಊರನ್ನು ತಲುಪುತ್ತಾರೆ.
ಅಲ್ಲಿದ್ದಾಗ ಅವರು ತಮ್ಮ ದೊಡ್ಡ ಮನೆಗೆ ಹೊಂದಿಕೊಂಡಂತೆಯೇ ಇದ್ದ ಪುಟ್ಟ ಮನೆಯೊಂದನ್ನು ಜುಲೈಗಾಗಿಯೇ ಬಿಟ್ಟುಕೊಟ್ಟಿರುತ್ತಾರೆ. ಅವನನ್ನು “ಕೆಲಸದ ಹುಡುಗ”ನಂತೆ ಕಾಣದೇ ಘನತೆಯಿಂದ ನಡೆಸಿಕೊಳ್ಳುತ್ತಿರುತ್ತಾರೆ. ತಮ್ಮನ್ನು “ಒಡೆಯ” ಅಥವಾ “ಒಡತಿ” ಎಂದು ಕರೆಯದಿರುವಂತೆ ತಾಕೀತು ಮಾಡಿರುತ್ತಾರೆ. ಇಲ್ಲೀಗ ಅಂಥ ಔದಾರ್ಯವನ್ನು ಚಾಚುವ ಸರದಿ ಜುಲೈನದು. ಅವನು ತನ್ನ ಸ್ವಂತದ ಗುಡಿಸಲನ್ನೇ ಅವರಿಗೆ ಬಿಟ್ಟುಕೊಟ್ಟು ಹೆಂಡತಿಯ ಗುಡಿಸಿಲಿನಲ್ಲಿ ಇರತೊಡಗುತ್ತಾನೆ. ಅವರಿಗೆ ಸುತ್ತಲ ಜನರಿಂದ ರಕ್ಷಣೆ, ಅಡುಗೆಗೆ ಸಾಮಗ್ರಿ, ಬಟ್ಟೆಬರೆ, ಮತ್ತು ಸಾಧ್ಯವಾದಷ್ಟು ಸೌಕರ್ಯ ಒದಗಿಸುತ್ತಾನೆ. ಬದಲಾದ ಸನ್ನಿವೇಶದಲ್ಲಿ ನಿಜಕ್ಕೂ ಅವನು ಒಡೆಯ; ಆದರೆ ಅವನು ಇನ್ನೂ ಕೆಲಸದ ಹುಡುಗ ಕೂಡ — ಅವನು ಅವರಿಗೆ ಒದಗಿಸುವ ಸರಕು ಸರಂಜಾಮುಗಳಿಗೆಲ್ಲ ಹಣ ತೆಗೆದುಕೊಳ್ಳುತ್ತಾನೆ. ಅವನಿಂದಲೇ ತಾವು ಬದುಕುಳಿದಿರುವುದು ಎಂದು ಇವರ ಮೈಯ ಕಣಕಣಕ್ಕೂ ಗೊತ್ತು. ಹಾಗಿದ್ದೂ ಈ ಪಾತ್ರ ವಿಪರ್ಯಾಸ ಅರಗಿಸಿಕೊಳ್ಳಲಾಗುವಂಥದ್ದಲ್ಲ, ಹಿತಕರವಲ್ಲ. ಅವನು ತೆಗೆದುಕೊಂಡ ಹಣದ ಲೆಕ್ಕ ಕೂಡ ಒಪ್ಪಿಸುವುದಿಲ್ಲವಲ್ಲ! ಅವನ ತಾಯಿಯ ಗುಡಿಸಿಲಲ್ಲಿ, ಹೆಂಡತಿಯ ಗುಡಿಸಿಲಲ್ಲಿ ನಮ್ಮ ಮನೆಯ ಹಲವು ಚಿಕ್ಕಪುಟ್ಟ ವಸ್ತುಗಳಿವೆಯಲ್ಲ; ಅವನ್ನು ಕದ್ದದ್ದೇಕೆ, ಕೇಳಿದ್ದರೆ ನಾವೇ ಕೊಡುತ್ತಿದ್ದೆವಲ್ಲ? ಅವನ ನಿಜವಾದ ಹೆಸರು ಜುಲೈ ಕೂಡ ಅಲ್ಲವಂತಲ್ಲ, ನಾವು ಇಷ್ಟು ವರ್ಷ ಹಾಗೆ ಕರೆಯುತ್ತಿದ್ದೆವಲ್ಲ. ನಮ್ಮ ಕಾರಿನ ಕೀಲಿಕೈ ಅವನೇ ಇಟ್ಟುಕೊಂಡಿದ್ದಾನಲ್ಲ. ಇವೇ ಮೊದಲಾದ ಸಣ್ಣ ದೊಡ್ಡ ಕಿರಿಕಿರಿಗಳು. ಅದೆಷ್ಟೇ ಪ್ರಗತಿಪರತೆಯನ್ನು ತೋರಿದರೂ ಮೈಯೊಳಗಡಕವಾದ, ಆತ್ಮಕ್ಕಂಟಿಕೊಂಡ ಪ್ರಿವಿಲಿಜ್ ಸುಲಭವಾಗಿ ಕಳಚಿಹಾಕುವಂಥದ್ದಲ್ಲ.
ಈ ಕಾದಂಬರಿಯ ಹರಿವು ಮೈಕಲ್ ಕೆ ಮಾಡುವ ಯಾನದಂತಲ್ಲ; ಇದರಲ್ಲಿ ಮನುಷ್ಯನ ಸ್ವಾತಂತ್ರ್ಯದ, ಅವನ ಘನತೆಯಿಂದ ಬಾಳುವ ಬಗೆಯ ಆಧ್ಯಾತ್ಮಿಕತೆಯಿಲ್ಲ. ಇದರಲ್ಲಿ ಮನುಷ್ಯ ಸಹಜ ದೊಡ್ಡತನ ಮತ್ತು ಸಣ್ಣತನಗಳ ಒಟ್ಟಿಗೇ ಇರುವಿಕೆ ಮತ್ತು ಕಾಲಕಾಲಕ್ಕೆ ಎದುರಾಗುವಿಕೆಯ ದರ್ಶನವಿದೆ. ಜುಲೈನ ಹೆಂಡತಿ ಮತ್ತು ಇತರ ಹೆಣ್ಣುಮಕ್ಕಳ ಒಡಗೂಡಿ ಹೆಂಡತಿ ಸ್ಮೇಲ್ ತೋಟದ ಕೆಲಸಕ್ಕೆ ಹೋದದ್ದರ ಬಗ್ಗೆ ಜುಲೈ ಕೋಪಗೊಳ್ಳುತ್ತಾನೆ. ಅದರ ನಂತರ ನಡೆಯುವ ವಾದದಲ್ಲಿ ಇಬ್ಬರ ಮುಖವಾಡಗಳೂ ಕಳಚಿಬೀಳುತ್ತವೆ. ತಮಗಿಂತ ಬೇರೆಯಾಗಿರುವವರನ್ನು ನಿಜಕ್ಕೂ ಅರಿಯದೇ ಅವರೊಡನೆ ಒಡನಾಡದೇ ದೂರದಲ್ಲಿಯೇ ಇದ್ದುಕೊಂಡು ಅವರಿಗೆ ಘನತೆಯನ್ನು ಆರೋಪಿಸುವ ಪ್ರಗತಿಪರತೆಯ ಟೊಳ್ಳುತನವನ್ನು ಕಾದಂಬರಿ ಎತ್ತಿ ತೋರಿಸುತ್ತದೆ. ಒಂದರಿನ್ನೊಂದು ಭಿನ್ನವಾದ ಬಾಷೆ, ಸಂಸ್ಕೃತಿಗಳನ್ನು ಹೊಂದಿದ್ದು, ತಮ್ಮವೇ ನೂರೆಂಟು ಒಳಜಗಳಗಳಲ್ಲಿ ವ್ಯಸ್ತವಾಗಿ, ಹತ್ತು ಹಲವು ಬುಡಕಟ್ಟುಗಳಲ್ಲಿ ಹಂಚಿಹೋಗಿರುವ ಕಪ್ಪು ಜನರನ್ನು ಗುರುತಿಸದೇ ಅವರೆಲ್ಲರೂ ಒಂದೇ ಎಂಬಂತೆ ಪರಿಭಾವಿಸುವ ಗಂಡ ಸ್ಮೇಲ್ನ ತಥಾಕಥಿತ ಪ್ರಗತಿಪರತೆಯ ಸೀಮಿತತೆ, ಅವನ ಬೌದ್ಧಿಕ ಪೊಳ್ಳುತನ ಎಲ್ಲರೆದುರಿಗೆ ಸಾಬೀತಾಗುತ್ತದೆ. ಅವರೆಲ್ಲರೂ ಒಂದಾಗಿ ಏಕಮೇವ ವೈರಿಯಾದ “ಬಿಳಿಯ ಮನುಷ್ಯ”ನನ್ನು ಎದುರಿಸುವುದಿಲ್ಲವೇಕೆ ಎಂಬ ಉಪದೇಶ ಹಾಸ್ಯಾಸ್ಪದವಾಗಿ ತೋರುತ್ತದೆ.
ಪ್ರೀಮೋ ಲೆವಿಯನ್ನು ಇಟಲಿಯಲ್ಲಿ ಬಂಧಿಸಲಾಗಿದ್ದು 1943ರ ಡಿಸೆಂಬರ್ 13ಕ್ಕೆ. ಆಗ ಅವರಿಗೆ 24 ವರ್ಷ ವಯಸ್ಸು. ಅವರು ಔಷ್ವಿಟ್ಜ಼್ ತಲುಪಿದ್ದು 1944ರ ಫೆಬ್ರುವರಿಯ ಒಂದು ಸಂಜೆ. ಅವರು ಮತ್ತು ಬದುಕುಳಿದಿದ್ದ ಬೆರಳೆಣಿಕೆಯಷ್ಟು ಉಳಿದ ಬಂಧಿಗಳನ್ನು ರಷ್ಯನ್ ಪಡೆಗಳು ಬಿಡುಗಡೆಗೊಳಿಸಿದ್ದು 1945ರ ಜನವರಿ 27ರಂದು. ಅಲ್ಲಿಂದ ಮುಂದೆ ಹಲವು ತಿಂಗಳುಗಳ ಸುತ್ತುಬಳಸಿನ ಪ್ರಯಾಣದ ನಂತರ 1945ರ ಅಕ್ಟೋಬರ್ 19ರಂದು ಕೊನೆಗೊಮ್ಮೆ ಟ್ಯೂರಿನ್ ತಲುಪಿದಾಗ ಅವರ ಮನೆ ಮೊದಲಿದ್ದಲ್ಲಿಯೇ ಇದ್ದಿತು, ಅವರ ಮನೆಮಂದಿಯೂ ಬದುಕುಳಿದಿದ್ದರು; ಇವರ ಬರುವ ಹಾದಿಯನ್ನು ಯಾರೂ ನೋಡುತ್ತಿರಲಿಲ್ಲವಷ್ಟೇ. ಲಾಗರ್ನಿಂದ ಹೊರಬಿದ್ದ ಮೇಲೆ ಮರಳಿ ಊರಿಗೆ ಬಂದು ತಲುಪುವ ಹಾದಿಯಲ್ಲಿ ನಡೆದ ಘಟನೆಗಳನ್ನೂ ಭೇಟಿಯಾದ ವ್ಯಕ್ತಿಗಳನ್ನೂ ಅನುಭವಗಳನ್ನೂ ಕುರಿತು The Truce ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.
ಯಹೂದಿಗಳ ಹತ್ಯಾಕಾಂಡದಲ್ಲಿ ಅಥವಾ ಅಂಥವೇ ಘೋರ ಸನ್ನಿವೇಶಗಳಿಂದ ಪಾರಾಗಿ ಬಂದವರಿಗೆ ಒಂದು ಪ್ರಶ್ನೆ ಎದುರಾಗುತ್ತದೆ: ಅವರ ಜೊತೆಗಿದ್ದ ಬಹುತೇಕ ಎಲ್ಲರೂ ಸತ್ತುಹೋದಾಗ ಇವರು ಬದುಕುಳಿದದ್ದು ಹೇಗೆ? ಅಂಥ ಆತ್ಮಬಲ ಬಂದದ್ದು ಎಲ್ಲಿಂದ? ಆ ಪ್ರಶ್ನೆಗೆ ಲೆವಿ ಮತ್ತು ಅಂಥ ಹಲವರು ಕೊಡುವ ಉತ್ತರ ಒಂದೇ: ಬದುಕಿಗೆ ಇದೆಲ್ಲವನ್ನೂ ಮೀರಿದ ಒಂದು ಅರ್ಥವಿದೆ ಎಂಬ ನಂಬಿಕೆಯನ್ನು ಕಾಪಿಟ್ಟುಕೊಳ್ಳುವುದು; ತಮ್ಮ ಜೀವಿತಕ್ಕೆ ಒಂದು ಉದ್ದೇಶವಿದೆ ಎಂದು ನಂಬಿ ಹೇಗಾದರೂ ಮಾಡಿ ಕಂಡುಕೊಳ್ಳುವುದು; ತಮ್ಮಿಂದ ಹೊರತಾದ ತಮಗಿಂತಲೂ ಘನವಾದ ಉದ್ದೇಶ.
ಒಂದು ಕಡೆ ಲೆವಿ, “The conviction that life has a purpose is rooted in every fibre of man, it is a property of the human substance.” ಎಂದು ಹೇಳುತ್ತಾರೆ. ಬಹಳ ಒಳ್ಳೆಯ ರಸಾಯನಶಾಸ್ತ್ರಜ್ಞ ಮತ್ತು ಅಷ್ಟೇ ಒಳ್ಳೆಯ ಲೇಖಕರಾಗಿದ್ದ ಅವರ The Periodic Table ಎಂಬ ಕಥಾಸಂಕಲನವನ್ನು “The greatest science book ever written,” ಎಂದು ಬಣ್ಣಿಸಲಾಗಿದೆ. ಗ್ರೇಟ್ ಬ್ರಿಟನ್ನ ರಾಯಲ್ ಇನ್ಸ್ಟಿಟ್ಯೂಶನ್ನವರು 2006ರಲ್ಲಿ, ಡಾರ್ವಿನ್ನಿಂದ ಹಿಡಿದು ಡಾಕಿನ್ಸ್ನ ಪುಸ್ತಕದವರೆಗೆ; ವ್ಯಾಟ್ಸನ್, ಫಾಯ್ನ್ಮನ್, ಹಾರ್ಡಿ, ಪೆನ್ರೋಸ್, ಹಾಫ಼್ಸ್ಟಾಟರ್ ಮೊದಲಾದ ದಿಗ್ಗಜ ವಿಜ್ಞಾನಿಗಳ ಪುಸ್ತಕಗಳು; ಬರ್ಟೋಲ್ಟ್ ಬ್ರೆಕ಼್ಟ್ನ The Life of Galileo — ಇವೆಲ್ಲಕ್ಕಿಂತ ಲೆವಿಯ ವಿಜ್ಞಾನಾಧಾರಿತ ಸಣ್ಣಕತೆಗಳ ಪುಸ್ತಕ ಶ್ರೇಷ್ಠ ಎಂದು ಅದನ್ನು ಹೆಸರಿಸಿದರು. ಅದರಲ್ಲಿ ಇಪ್ಪತ್ತೊಂದು ಕತೆಗಳಿವೆ. ಪ್ರತಿಯೊಂದಕ್ಕೂ ಒಂದೊಂದು ರಾಸಾಯನಿಕ ಮೂಲಧಾತುವಿನ ಹೆಸರು: ಆರ್ಗಾನ್, ಹೈಡ್ರೋಜನ್, ಕಾರ್ಬನ್, ಯುರೇನಿಯಂ ಇತ್ಯಾದಿ. ಒಂದೆರಡನ್ನು ಬಿಟ್ಟರೆ ಉಳಿದುವು ಆತ್ಮಕಥಾನಕಗಳು. ಒಂದರ್ಥದಲ್ಲಿ ಆಯಾ ಮೂಲಧಾತುವಿನ ಗುಣವಿಶೇಷಗಳನ್ನು ಲೆವಿಯ ಬದುಕಿನೊಂದಿಗೆ ತಳುಕುಹಾಕಿಕೊಂಡು ಕತೆಯ ರೂಪದಲ್ಲಿ ಜೀವತಳೆದುವು. ತಮ್ಮ ಹುಟ್ಟು, ಬಾಲ್ಯ, ಗೆಳೆತನ, ಪ್ರೇಮ, ಬಂಡಾಯ, ಮತ್ತೆ ಮುಂದೆ ಲಾಗರ್ನ ಅನುಭವಗಳನ್ನು ಕತೆಗಳಾಗಿ ಅಭಿವ್ಯಕ್ತಿಸಲು ಸಾಧ್ಯವಾದದ್ದೇ ಅವರಿಗೆ ಬದುಕಲು ಎಡೆಮಾಡಿಕೊಟ್ಟದ್ದು. A sense of purpose.
ಇದನ್ನೇ ಕೇಂದ್ರವಾಗಿಟ್ಟುಕೊಂಡು ಸಾರಭೂತವಾಗಿ ಮತ್ತು ಘನಿಷ್ಠವಾಗಿ ವಿಕ್ಟರ್ ಫ಼್ರಾಂಕ್ಲ್ (Viktor Frankl) ತಮ್ಮ Man’s Search for Meaningನಲ್ಲಿ ಹೇಳುತ್ತಾರೆ. ಆಸ್ಟ್ರಿಯಾದ ರಾಜಧಾನಿಯಾದ ವಿಯೆನ್ನಾ ಜಗತ್ತಿನ ಮೂರು ಸುಪ್ರಸಿದ್ಧ ಮಾನಸಿಕ ಚಿಕಿತ್ಸಾ ತಜ್ಞರು ಮತ್ತು ಅವರ ಸಿದ್ಧಾಂತಗಳ ಹುಟ್ಟೂರಾಗಿದೆ. ಸಿಗ್ಮಂಡ್ ಫ್ರಾಯ್ಡ್ ಮತ್ತು ಆಲ್ಫ್ರೆಡ್ ಆಡ್ಲರ್ರ ನಂತರ "Third Viennese School" ಅನ್ನು ಸ್ಥಾಪಿಸಿದವರು ವಿಕ್ಟರ್ ಫ್ರಾಂಕ್ಲ್. ಅವರು ಪ್ರತಿಪಾದಿಸಿದ ‘ಲೋಗೋಥೆರಪಿ’ ಸಾಕಷ್ಟು ಜನಪ್ರಿಯವಾಗಿದೆ.
ಈ ಪುಸ್ತಕದಲ್ಲಿ ಎರಡು (ಮೂರು ಎನ್ನಬಹುದು) ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಔಷ್ವಿಟ್ಜ಼್ನ ಕಾನ್ಸಂಟ್ರೇಶನ್ ಕ್ಯಾಂಪ್ನಲ್ಲಿ ಬಂಧಿಯಾಗಿದ್ದ ಅವರ ಅನುಭವಗಳನ್ನು ಹೇಳುತ್ತಾರೆ. ತಮ್ಮ ಬದುಕಿನ ಅತ್ಯಂತ ಕರಾಳ ಅಧ್ಯಾಯವನ್ನು ಅದರ ಎಲ್ಲ ವಿವರಗಳಲ್ಲಿ ಹಿಡಿದಿಟ್ಟರೂ ಎಲ್ಲಿಯೂ ಅತಿಭಾವುಕರಾಗದೇ ಒಂದು ಪ್ರಮಾಣದ ಕ್ಲಿನಿಕಲ್ ವಸ್ತುನಿಷ್ಠೆಯಿಂದಲೂ ಘನತೆಯಿಂದಲೂ ತಮ್ಮ ಅನುಭವವನ್ನು ಕಟ್ಟಿಕೊಡುತ್ತಾರೆ. ಉಳಿದ ಬಂಧಿಗಳನ್ನು ಗಮನಿಸುತ್ತ, ಅವರ ಮನದಾಳದಲ್ಲಿ ನಡೆಯುತ್ತಿರಬಹುದಾದುದನ್ನು ವಿವಿಧ ಹಂತಗಳಲ್ಲಿ ವಿಶ್ಲೇಷಿಸುವ ಮನಃಶಾಸ್ತ್ರದ ಪ್ರಾಥಮಿಕ ಮಾಹಿತಿಯೂ ಅವರ ಕಥಾನಕದೊಂದಿಗೆ ಬೆಸೆದುಕೊಂಡಿದೆ. ಯಾವುದೇ ಸಂದರ್ಭದಲ್ಲಿ ಆತ್ಮಗೌರವವನ್ನು ಎತ್ತಿಹಿಡಿಯುವ, ನಂಬಿಕೆಯನ್ನು ಉಳಿಸಿಕೊಳ್ಳುವ, ಜೀವನದಲ್ಲಿ ಸಾರ್ಥಕತೆ ಮತ್ತು ಉದ್ದೇಶವನ್ನು ಕಂಡುಕೊಳ್ಳುವ ಬಗೆಯನ್ನು ನಿರೂಪಿಸುವ ಅತ್ಯಂತ ಪ್ರಭಾವಶಾಲಿ ಪುಸ್ತಕವಿದು.
ರೈಲು ಹಳಿ ನಿರ್ಮಾಣದ ಕೂಲಿ ಕೆಲಸ, ಗುಡ್ಡಗಾಡಿನಲ್ಲಿ ಅಲೆದಾಟ, ಬಂಡುಕೋರರ ದಾಳಿ, ಪುನರ್ವಸತಿ ಶಿಬಿರ, ಕರುಣಾಮಯಿ ಡಾಕ್ಟರೊಬ್ಬನ ಕಕ್ಕುಲಾತಿ, ಅಲೆಮಾರಿಗಳ ಸಹವಾಸ ಎಲ್ಲದರಿಂದ ಬಿಡಿಸಿಕೊಂಡ ಮೈಕಲ್ ಕೆ ಕೊನೆಗೊಮ್ಮೆ ಕೇಪ್ ಟೌನ್ನ ಪಾಳುಬಿದ್ದಿರುವ ತನ್ನ ತಾಯಿಯ ಮನೆ ತಲುಪುತ್ತಾನೆ. ಅಲ್ಲಿಯೂ ಅವನಿಗೆ ತೋಟಗಾರನಾಗುವ ಕನವರಿಕೆ; ನೆಲದಲ್ಲಿ ಬಿತ್ತಿ ಬೆಳೆದದ್ದನ್ನು ತಿಂದು ಬದುಕುವ ಬಯಕೆ. ಅವನಿಗೆ ಸಮುದಾಯದ ಹಂಗಿಲ್ಲ, ಜಗತ್ತಿನ ಕರುಣೆ ಬೇಕಿಲ್ಲ. ಅವನೊಬ್ಬ ಪೆದ್ದು ಮನುಷ್ಯನೇ ಇರಬಹುದು, ಅಥವಾ ಅದೂ ಇರದೇ ಒಂದು ಹೆಗ್ಗಣವೋ ಎರೆಹುಳವೋ ಆಗಿರಬಹುದು. ಅವಾದರೂ ತೋಟಗಾರರೇ ಅಲ್ಲವೇ!
“ನೀರಿಗೇನು ಮಾಡುತ್ತೀಯ?” ಎಂದು ಯಾರಾದರೂ ಕೇಳಿದರೆ ಅವನು ಕಿಸೆಯಿಂದ ಒಂದು ಚಹಾ ಚಮ್ಮಚೆ ಮತ್ತು ಹುರಿಯ ಸುರುಳಿಯನ್ನು ತೆಗೆದು ತೋರಿಸಿಯಾನು. ಕೊಳವೆಬಾವಿಯ ಬಾಯಿಯಿಂದ ಕಲ್ಲುಕಸಕಡ್ಡಿ ತೆಗೆದುಹಾಕಿ, ಚಹಾ ಚಮ್ಮಚೆಯ ಹಿಡಿಕೆಯನ್ನು ಕುಣಿಕೆಯಂತೆ ಬಗ್ಗಿಸಿ ಹುರಿಯನ್ನು ಅದಕ್ಕೆ ಬಿಗಿದು ಕೊಳವೆಯುದ್ದಕ್ಕೂ ಇಳಿಸಿ ನೆಲದಾಳಕ್ಕೆ ಅದನ್ನು ತಲುಪಿಸಿಯಾನು; ಆಮೇಲೆ ಅದನ್ನು ಅವನು ಮೇಲೆತ್ತಿ ಹೊರತಂದಾಗ ಚಮ್ಮಚೆಯ ಬಾಯಲ್ಲಿ ನೀರಿದ್ದೀತು; ನೋಡಿ, ಹೀಗೆ ಈ ರೀತಿಯಲ್ಲಿ ಬದುಕುವೆನು ಎಂದವನು ಹೇಳಿಯಾನು.
ಏಕೆಂದರೆ, ಎಲ್ಲ ಮುಗಿದ ಮೇಲೆ ಕೊನೆಗೆ ಇದೆಲ್ಲದರ ಅರ್ಥವೇನು, ತಾನು ಕಲಿತದ್ದೇನು ಎಂದು ಮೈಕಲ್ ಧ್ಯಾನಿಸುವಾಗ ಅವನಿಗೆ ಹೊಳೆದದ್ದು ಇದು: ಸಮಯವಿದೆ, ಎಲ್ಲದಕ್ಕೂ ಇನ್ನೂ ಸಾಕಷ್ಟು ಸಮಯವಿದೆ. ಈ ರೀತಿಯಲ್ಲಿ ಸ್ವತಂತ್ರವಾಗಿ ತನ್ನಷ್ಟಕ್ಕೇ ತಾನು ಬದುಕಲು ಸಾಧ್ಯವಿದೆ.