...ಈ ಪ್ರಕಾರ ಮಗುವಿನ ಹಂಚಿಕೆ ಮಾಡಲಾಯಿತು
ರೇಮಂಡ್ ಕಾರ್ವರ್ನ ಕತೆಯಲ್ಲಿ ಸಾಲಮನ್ನ ತೀರ್ಪಿನ ಕರಾಳ ಸ್ವರೂಪ
ರೇಮಂಡ್ ಕಾರ್ವರ್ನ (Raymod Carver) ‘Popular Mechanics’ ಎಂಬ ಕತೆಯನ್ನು ಸಂಕೇತ ಪಾಟೀಲ ಅನುವಾದಿಸಿ ಅದನ್ನು ಹಳೇ ಒಡಂಬಡಿಕೆಯ (Old Testament) ಸಾಲಮನ್ನ ತೀರ್ಪಿನ (Judgement of Soloman) ಕತೆಯ ಪಕ್ಕಕ್ಕಿಟ್ಟು ನೋಡಿದ್ದಾರೆ.
ಹೀಬ್ರೂ ಬೈಬಲ್ನಲ್ಲಿ 'ಸಾಲಮನ್ನ ತೀರ್ಪು’ (Judgement of Solomon) ಎಂಬ ಕತೆಯಿದೆ. ಆ ಕತೆಯಲ್ಲಿ ಪ್ರಾಚೀನ ಇಸ್ರೇಲಿನಲ್ಲಿ ಸಾಮಾನ್ಯ ಶಕ ಪೂರ್ವ 970ರ ಸುಮಾರು ಆಳರಸನಾಗಿದ್ದ ಸಾಲಮನ್ ಎದುರು ಇಬ್ಬರು ಹೆಂಗಸರು ಒಂದು ಪುಟ್ಟ ಮಗುವನ್ನು ಎತ್ತಿಕೊಂಡು ಬರುತ್ತಾರೆ. ಇಬ್ಬರೂ ಆ ಮಗು ನನ್ನದು, ಇನ್ನೊಬ್ಬಳು ಅದನ್ನು ಕಳುವು ಮಾಡಿದ್ದಾಳೆ ಎಂದು ವಾದಿಸುತ್ತಾರೆ. ಸಾಲಮನ್ ಆ ಕಲಹವನ್ನು ಬಗೆಹರಿಸಿದ ರೀತಿ ನಿಷ್ಪಕ್ಷಪಾತ ನ್ಯಾಯಾಧಿಕರಣದ ಒಂದು ಮೂಲಮಾದರಿಯಾಗಿದೆ. ಹಳೆಯ ಒಡಂಬಡಿಕೆಯ ‘ಅರಸರ ಪುಸ್ತಕಗಳು’ (Books of Kings) ನಲ್ಲಿ ಈ ಕತೆ ಬರುತ್ತದೆ.1

೧೬ ಆ ನಂತರ ವೇಶ್ಯೆಯರಾಗಿದ್ದ ಆ ಇಬ್ಬರು ಹೆಂಗಸರು ಅರಸನ ಬಳಿ ಬಂದು ಅವನೆದುರು ನಿಂತರು.
೧೭ ಮತ್ತು ಒಬ್ಬ ಹೆಂಗಸು ಹೇಳಿದಳು: ‘ಓ ನನ್ನೊಡೆಯಾ, ನಾನು ಮತ್ತು ಈ ಹೆಂಗಸು ಒಂದೇ ಮನೆಯಲ್ಲಿ ವಾಸಿಸುತ್ತೇವೆ; ಹಾಗೂ ನಾನು ಒಂದು ಮಗುವಿಗೆ ಜನ್ಮ ನೀಡಿದ್ದೇನೆ. ಆಗ ಅವಳು ಆ ಮನೆಯಲ್ಲಿಯೇ ಇದ್ದಳು.
೧೮ ಮತ್ತೆ ಅದೇನಾಯಿತೆಂದರೆ ನನ್ನ ಹೆರಿಗೆಯಾದ ಮೂರನೆಯ ದಿನಕ್ಕೆ ಇವಳ ಹೆರಿಗೆಯೂ ಆಯಿತು; ಮತ್ತು ನಾವು ಒಟ್ಟಿಗೇ ಇದ್ದೆವು; ನಮ್ಮಿಬ್ಬರನ್ನು ಬಿಟ್ಟು ಮನೆಯಲ್ಲಿ ಹೊರಗಿನ ಯಾರೂ ಇರಲಿಲ್ಲ.
೧೯ ಮತ್ತೆ ನಿದ್ದೆಯಲ್ಲಿ ಇವಳು ಅದರ ಮೇಲುರುಳಿದಾಗ ಈ ಹೆಂಗಸಿನ ಮಗುವಿನ ಉಸಿರುಗಟ್ಟಿ ಅದು ಸತ್ತು ಹೋಯಿತು.
೨೦ ಮತ್ತೆ ಮಧ್ಯರಾತ್ರಿಯಲ್ಲಿ ನಿನ್ನ ಈ ದಾಸಿಯು ಮಲಗಿರುವಾಗ ಅವಳೆದ್ದು ನನ್ನ ಕೂಸನ್ನು ತನ್ನ ಎದೆಗಾನಿಸಿಕೊಂಡು ಮಲಗಿಸಿದಳು ಮತ್ತು ತನ್ನ ಸತ್ತ ಕೂಸನ್ನು ನನ್ನ ಎದೆಗಾನಿಸಿ ಮಲಗಿಸಿದಳು.
೨೧ ಮತ್ತೆ ನಾನು ನನ್ನ ಮಗುವಿಗೆ ಮೊಲೆ ಕೊಡಲು ನಸುಕಿನಲ್ಲಿ ಎದ್ದಾಗ ನೊಡುತ್ತೇನೆ, ಅಕೋ, ಅದು ಸತ್ತಿತ್ತು; ಆದರೆ ಬೆಳಗಾದ ಮೇಲೆ ಅದನ್ನು ಚೆನ್ನಾಗಿ ನೋಡಿದಾಗ, ಇಕೋ, ಅದು ನನ್ನ ಮಗುವಾಗಿರಲಿಲ್ಲ, ನಾನು ಹೆತ್ತದ್ದಾಗಿರಲಿಲ್ಲ.’
೨೨ ಆಗ ಆ ಇನ್ನೊಬ್ಬ ಹೆಂಗಸು ಹೇಳಿದಳು: ‘ಆದರೆ ಹಾಗಲ್ಲ; ಬದುಕಿರುವವನು ನನ್ನ ಮಗ, ಸತ್ತಿರುವವನು ನಿನ್ನ ಮಗ.’ ಮತ್ತು ಇವಳು ಹೇಳಿದಳು: ‘ಆದರೆ ಹೀಗಲ್ಲ; ಸತ್ತಿರುವವನು ನಿನ್ನ ಮಗ, ಬದುಕಿರುವವನು ನನ್ನ ಮಗ.’ ಅವರು ಅರಸನ ಮುಂದೆ ಈ ರೀತಿಯಲ್ಲಿ ವಾದಿಸಿದರು.
೨೩ ಆಮೇಲೆ ಅರಸನು ಹೇಳಿದನು: ‘ಒಬ್ಬಳು ಹೇಳುತ್ತಾಳೆ: ಇವನು ಬದುಕಿರುವವ ನನ್ನ ಮಗ, ಮತ್ತು ನಿನ್ನ ಮಗ ಸತ್ತಿರುವವ; ಹಾಗೂ ಇನ್ನೊಬ್ಬಳು ಹೇಳುತ್ತಾಳೆ: ಆದರೆ ಹಾಗಲ್ಲ; ನಿನ್ನ ಮಗ ಸತ್ತಿರುವವ, ನನ್ನ ಮಗ ಬದುಕಿರುವವ.’
೨೪ ಆಗ ಅರಸನು ಹೇಳಿದನು: ‘ಒಂದು ಕತ್ತಿಯನ್ನು ತರಿಸಿ.’ ಮತ್ತು ಅವರು ಅರಸನೆದುರು ಒಂದು ಕತ್ತಿಯನ್ನು ತಂದರು.
೨೫ ಮತ್ತೆ ಅರಸನು ಹೇಳಿದನು: ‘ಬದುಕಿರುವ ಈ ಮಗುವನ್ನು ತುಂಡರಿಸಿ ಎರಡು ಮಾಡಿ, ಹಾಗೂ ಅರ್ಧ ಪಾಲನ್ನು ಆ ಒಬ್ಬಳಿಗೆ ಕೊಡಿ ಇನ್ನರ್ಧ ಪಾಲನ್ನು ಈ ಇನ್ನೊಬ್ಬಳಿಗೆ ಕೊಡಿ.’
೨೬ ಆಮೇಲೆ ಬದುಕಿರುವ ಮಗುವಿನ ತಾಯಿಯು ಅರಸನಿಗೆ ಹೇಳಿದಳು, ಏಕೆಂದರೆ ಅವಳೆದೆಯು ತನ್ನ ಮಗನಿಗಾಗಿ ಹಾತೊರೆಯಿತು, ಮತ್ತು ಅವಳೆಂದಳು: ‘ಓ ನನ್ನೊಡೆಯಾ, ಬದುಕಿರುವ ಮಗುವನ್ನು ಅವಳಿಗೆ ಕೊಡು, ಮತ್ತು ಖಂಡಿತವಾಗಿ ಅದನ್ನು ಕಡಿಯದಿರು.’ ಆದರೆ ಇನ್ನೊಬ್ಬಳು ಹೇಳಿದಳು: 'ಅದು ನನ್ನದಾಗಿರುವುದೂ ಬೇಡ, ನಿನ್ನದಾಗಿರುವುದೂ ಬೇಡ; ಪಾಲು ಮಾಡಿ.’
೨೭ ಆಗ ಅರಸನು ಉತ್ತರಿಸುತ್ತ ಹೇಳಿದನು: ‘ಬದುಕಿರುವ ಮಗುವನ್ನು ಅವಳಿಗೆ ಕೊಡು, ಮತ್ತು ಖಂಡಿತವಾಗಿ ಅದನ್ನು ಕಡಿಯದಿರು: ಅವಳು ಅದರ ತಾಯಿ.’
೨೮ ಮತ್ತೆ ಎಲ್ಲ ಇಸ್ರೇಲಿಗರು ಅರಸನು ತೀರ್ಪು ಮಾಡಿದ ತೀರ್ಪಿನ ಬಗ್ಗೆ ಕೇಳಿ ತಿಳಿದರು; ಮತ್ತವರು ಅರಸನಿಗೆ ಹೆದರಿದರು; ಏಕೆಂದರೆ ನೇರ್ಪು ಮಾಡಲು ದೇವರ ಜಾಣ್ಮೆ ಅವನಲ್ಲಿದೆ ಎಂದು ಅವರು ಕಂಡುಕೊಂಡರು.
ಎಲ್ಲ ಭಾವನೆಗಳ ತಾತ್ಕಾಲಿಕತೆ, ಸಣ್ಣ ಹೊಡೆತಗಳಿಂದಲೂ ಒಡೆದುಹೋಗಬಲ್ಲ ಸಂಬಂಧಗಳ ಶಿಥಿಲತೆ, ಕ್ಷಣಾರ್ಧದಲ್ಲಿ ಆಗಬಲ್ಲಂಥ ಪಲ್ಲಟಗಳು, ಇವೆಲ್ಲ ರೇಮಂಡ್ ಕಾರ್ವರ್ನ ಕತೆಗಳುದ್ದಕ್ಕೂ ಕಂಡುಬರುವ ಲಕ್ಷಣಗಳು. ಅವನ Popular Mechanics ಎಂಬ ಕತೆ ಶುರುವಾಗುವುದು ಒಡೆದು ಹೋದ ಒಂದು ಸಂಸಾರದ ಸಂಕ್ಷಿಪ್ತ ಆದರೆ ಸ್ಪಷ್ಟ ಚಿತ್ರಣದೊಂದಿಗೆ. ಅವನ ಬಹಳಷ್ಟು ಕತೆಗಳು ಶುರುವಾಗುವುದೇ ಹೀಗೆ. ಆದರೆ ಈ ಪುಟ್ಟ ಕತೆ ಮುಗಿಯುವಾಗ ಪ್ರೀತಿಯಲ್ಲಿ ಅಂತರ್ಗತವಾಗಿರುವ ನಮ್ಮರಿವಿಗೆ ಬಾರದೇ ಆಳದಲ್ಲಿ ಸತತ ಹರಿಯುತ್ತಿರುವ ಕ್ರೌರ್ಯವನ್ನು ಎತ್ತಿ ತೋರಿಸಿ ತಲ್ಲಣಗೊಳಿಸುತ್ತದೆ. ಪ್ರೀತಿಸಿದ ಇಬ್ಬರು ತಮ್ಮ ಹಳೆಯ ಪ್ರೀತಿಯ ಕಾವು ಆರಿ ಅದೀಗ ದ್ವೇಷದ ತಣ್ಣನೆಯ ತೀವ್ರತೆಯಲ್ಲಿ ಬದಲಾಗಿ ಅದು ಇನ್ನೊಂದು ಜೀವಕ್ಕೆ ಹಾನಿ ಮಾಡುತ್ತಿದೆ ಎಂಬ ಅರಿವನ್ನು ಕಳೆದುಕೊಳ್ಳುವುದು ಕಷ್ಟವೇನಲ್ಲ ಎನ್ನಿಸುತ್ತದೆ. ಒಂದು ಮಟ್ಟದಲ್ಲಿ ಈ ಕತೆ ಸಾಲಮನ್ನ ವಿವೇಕದ ಅವಾಸ್ತವತೆಯ ವಿಡಂಬನೆ ಎನ್ನಿಸುತ್ತದೆ. ಸಂಬಂಧಗಳು ಹಳಸಿಹೋದಾಗ ಒಮ್ಮೊಮ್ಮೆ ಕಾರುಣ್ಯ ಸಾಧ್ಯವೇ ಇಲ್ಲವೇನೋ ಎನ್ನಿಸುವಂತೆ ಮಾಡುತ್ತದೆ.

ಪುಟ್ಟ ವಸ್ತುಗಳು
ಆ ದಿನ ಬೇಗನೇ ಹವಾಮಾನ ಬದಲಾಯಿತು. ಹಿಮ ಕರಗಿ ಕೊಳಚೆ ನೀರಾಗುತ್ತಿತ್ತು. ಹಿತ್ತಲ ಕಡೆಗಿದ್ದ ಹೆಗಲೆತ್ತರದ ಕಿಟಕಿಯಿಂದ ನೀರಿನ ಉದ್ದಪಟ್ಟಿಗಳು ಕೆಳಗೆ ಹರಿಯುತ್ತಿದ್ದುವು. ಹೊರಗೆ ಬೀದಿಯಲ್ಲಿ ಕರಗುತ್ತಿದ್ದ ಹಿಮದ ಕೆಸರಿನಲ್ಲಿ ಕಾರುಗಳು ಹಾದು ಹೋಗುತ್ತಿದ್ದುವು. ಅಲ್ಲಿ ಕತ್ತಲಾಗುತ್ತಿತ್ತು. ಒಳಗೂ ಕತ್ತಲು ಕವಿಯುತ್ತಿತ್ತು.
ಅವನು ಬೆಡ್ರೂಮಿನಲ್ಲಿ ಒಂದು ಸೂಟ್ಕೇಸಿಗೆ ಬಟ್ಟೆಗಳನ್ನು ತುರುಕುತ್ತಿದ್ದ. ಅವಳು ಬಾಗಿಲಿಗೆ ಬಂದಳು.
ಹೋಗ್ತಾ ಇದ್ದೀಯಲ್ಲಾ? ತುಂಬಾ ಒಳ್ಳೇದು! ಖುಷಿ ಆಗ್ತಾ ಇದೆ ನನಗೆ, ನೀನು ಹೋಗ್ತಾ ಇರೋದು! ಕೇಳಿಸ್ತಾ?
ಅವನು ತನ್ನ ಸಾಮಾನುಗಳನ್ನು ಸೂಟ್ಕೇಸಿನಲ್ಲಿ ಹಾಕುತ್ತಲೇ ಇದ್ದ.
ದರಿದ್ರ ನಾಯಿ! ತುಂಬಾಽ ಖುಷಿ ಆಗ್ತಾ ಇದೆ ನನಗೆ, ನೀನು ಹೋಗ್ತಾ ಇರೋದು! ಅಳತೊಡಗಿದಳು. ನನಗೆ ಮುಖ ಕೊಟ್ಟು ನೋಡೋದಕ್ಕೂ ಆಗೋದಿಲ್ಲಲ್ಲ ನಿನಗೆ?
ಅಷ್ಟರಲ್ಲಿ ಹಾಸಿಗೆ ಮೇಲಿದ್ದ ಮಗುವಿನ ಫೋಟೋ ಅವಳ ಗಮನಕ್ಕೆ ಬಂದು ಅದನ್ನು ಎತ್ತಿಕೊಂಡಳು.
ಅವನು ಅವಳ ಕಡೆ ನೋಡಿದ. ಅವಳು ಕಣ್ಣೊರೆಸಿಕೊಂಡು ಅವನತ್ತ ದುರುಗುಟ್ಟಿದಳು. ತಿರುಗಿ ಹೊರ ಕೋಣೆಗೆ ಹೋದಳು.
ಅದನ್ನು ವಾಪಸ್ ತೊಗೊಂಡು ಬಾ ಇಲ್ಲಿ, ಎಂದ.
ಸುಮ್ಮನೆ ನಿನ್ನ ಸಾಮಾನೆಲ್ಲ ಕಟ್ಟಿಕೊಂಡು ಹೊರಟು ಹೋಗು.
ಅವನು ಏನೂ ಹೇಳಲಿಲ್ಲ. ಸೂಟ್ಕೇಸ್ ಮುಚ್ಚಿದ. ಕೋಟ್ ಹಾಕಿಕೊಂಡ. ಒಮ್ಮೆ ಬೆಡ್ರೂಮ್ ಸುತ್ತಲೂ ಕಣ್ಣು ಹಾಯಿಸಿ ದೀಪ ಆರಿಸಿದ. ಆಮೇಲೆ ಹೊರಕೋಣೆಗೆ ಬಂದ.
ಅವಳು ಪುಟ್ಟ ಅಡುಗೆಮನೆಯ ದ್ವಾರದಲ್ಲಿ ಮಗುವನ್ನು ಎತ್ತಿಕೊಂಡು ನಿಂತಿದ್ದಳು.
ನನಗೆ ಮಗು ಬೇಕು, ಎಂದ.
ತಲೆ ಕೆಟ್ಟಿದೆಯಾ?
ಇಲ್ಲ, ನನಗೆ ಮಗು ಬೇಕು, ಅಷ್ಟೇ. ಅವನ ಸಾಮಾನು ತೊಗೊಂಡು ಬರಲು ಯಾರನ್ನಾದರೂ
ಕಳಿಸ್ತೇನೆ.
ಈ ಮಗೂನ್ನ ಮುಟ್ಟೋದಕ್ಕೂ ಬಿಡೋದಿಲ್ಲ, ಅವಳೆಂದಳು.
ಮಗು ಅಳುವುದಕ್ಕೆ ಶುರುಮಾಡಿತು. ಅವನ ತಲೆಗೆ ಸುತ್ತಿದ್ದ ಹೊದಿಕೆಯನ್ನು ಬಿಚ್ಚಿದಳು.
ಮಗುವಿನತ್ತ ನೋಡುತ್ತ, ಓಽ ಓಽ ಎಂದಳು.
ಅವನು ಅವಳ ಹತ್ತಿರ ಸರಿದ.
ದೇವರಾಣೆ! ಅವಳೆಂದಳು. ಅಡುಗೆಮನೆಯೊಳಗೆ ಒಂದು ಹೆಜ್ಜೆ ಹಿಂದೆ ಸರಿದಳು.
ನನಗೆ ಮಗು ಬೇಕು.
ಹೊರಟು ಹೋಗು ಇಲ್ಲಿಂದ!
ಅವಳು ಅತ್ತ ತಿರುಗಿ ಮಗುವನ್ನು ಸ್ಟವ್ ಹಿಂದಿನ ಮೂಲೆಯ ಬಳಿ ಹಿಡಿದುಕೊಂಡಳು.
ಆದರೆ ಅವನು ಇನ್ನೂ ಮುಂದೆ ಬಂದ. ಸ್ಟವ್ ಆಚೆಗೆ ಕೈಚಾಚಿ ಮಗುವನ್ನು ಬಿಗಿಯಾಗಿ ಹಿಡಿದುಕೊಂಡ.
ಬಿಡು ಅವನನ್ನ, ಎಂದ.
ಹೋಗು, ತೊಲಗು! ಕಿರುಚಿದಳು.
ಮಗುವಿನ ಮುಖ ಕೆಂಪಗಾಗಿತ್ತು. ಅದು ಕಿರುಚುತ್ತಿತ್ತು. ಅವರ ನೂಕಾಟದಲ್ಲಿ ಸ್ಟವ್ ಹಿಂದೆ ನೇತುಬಿಟ್ಟಿದ್ದ ಹೂಕುಂಡವನ್ನು ಬೀಳಿಸಿದರು.
ಅವನು ಗೋಡೆಯ ಬಳಿ ಅವಳ ಸುತ್ತುವರೆದ. ಅವಳ ಹಿಡಿತವನ್ನು ಬಿಡಿಸಲು ಯತ್ನಿಸಿದ. ಮಗುವನ್ನು ಗಟ್ಟಿಯಾಗಿ ಹಿಡಿದುಕೊಂಡು ತನ್ನ ಪೂರ್ತಿ ಭಾರ ಹಾಕಿ ತಳ್ಳಿದ.
ಬಿಡು ಅವನನ್ನ, ಎಂದ.
ಇಲ್ಲ, ನೀನು ಬಿಡು. ಮಗುವಿಗೆ ನೋವು ಮಾಡ್ತಾ ಇದೀಯ.
ನೋವು ಮಾಡ್ತಾ ಇರೋದು ನಾನಲ್ಲ.
ಅಡುಗೆಮನೆಯ ಕಿಟಕಿಯಿಂದ ಸ್ವಲ್ಪವೂ ಬೆಳಕು ಬರುತ್ತಲಿರಲಿಲ್ಲ. ಕವಿಯುತ್ತಿದ್ದ ಕತ್ತಲಿನಲ್ಲಿ ಅವನು ಅವಳ ಮುಷ್ಟಿಗಟ್ಟಿದ ಬೆರಳುಗಳನ್ನು ಒಂದು ಕೈಯಿಂದ ಬಿಡಿಸುತ್ತ ಇನ್ನೊಂದು ಕೈಯಿಂದ ಕಿರುಚುತ್ತಿದ್ದ ಮಗುವಿನ ಭುಜದ ಬಳಿ ತೋಳಿನ ಕೆಳಗೆ ಬಿಗಿಪಟ್ಟು ಹಿಡಿದ.
ತನ್ನ ಬೆರಳುಗಳನ್ನು ಬಲವಂತದಿಂದ ಬಿಡಿಸುತ್ತಿರುವುದು ಅವಳಿಗೆ ಭಾಸವಾಯಿತು. ಮಗು ತನ್ನ ಕೈತಪ್ಪುತ್ತಿರುವುದು ಅರಿವಿಗೆ ಬಂತು.
ಬೇಡ! ಅವಳ ಕೈಹಿಡಿತ ಸಡಿಲವಾಗುತ್ತಿದ್ದಂತೆಯೇ ಕಿರುಚಿದಳು.
ತಾನು ಇದನ್ನು ಪಡೆದೇ ತೀರುತ್ತೇನೆ, ಈ ಮಗುವನ್ನು. ಅವಳು ಮಗುವಿನ ಇನ್ನೊಂದು ತೋಳನ್ನು ಎಳೆದಳು. ಮಗುವಿನ ಮಣಿಕಟ್ಟಿನ ಸುತ್ತ ಕೈಹಿಡಿದು ಹಿಂದಕ್ಕೆ ವಾಲಿದಳು.
ಆದರೆ ಅವನು ಬಿಟ್ಟುಕೊಡಲಿಲ್ಲ. ಮಗು ತನ್ನ ಕೈಯಿಂದ ಜಾರುತ್ತಿದೆ ಎಂದೆನಿಸಿತು ಅವನಿಗೆ. ಬಲವಾಗಿ ಹಿಂದಕ್ಕೆಳೆದ.
ಈ ಪ್ರಕಾರವಾಗಿ ಆ ಹಂಚಿಕೆಯನ್ನು ಇತ್ಯರ್ಥ ಮಾಡಲಾಯಿತು.
ಈ ಕತೆ ಮೊದಲಿಗೆ ಪ್ರಕಟವಾದಾಗ ಕಾರ್ವರ್ ಅದಕ್ಕೆ ಕೊಟ್ಟ ಹೆಸರು Mine. ಮುಂದೆ ಅದನ್ನು ಇನ್ನೊಂದು ಸಂಕಲನದಲ್ಲಿ Little Things ಎಂಬ ಹೆಸರಿನಲ್ಲಿ ಪ್ರಕಟಿಸಿದ. ಕಾರ್ವರ್ನಿಗೆ ಖ್ಯಾತಿ ತಂದು ಕೊಟ್ಟ ಕಥಾಸಂಕಲನವಾದ ‘What we talk about when we talk about love’ನಲ್ಲಿ ಇದು Popular Mechanics ಎಂಬ ಹೆಸರಿನಲ್ಲಿ ಪ್ರಕಟವಾಯಿತು. ಈ ಹೆಸರು ಕೊಟ್ಟದ್ದು ಕಾರ್ವರ್ನ ಕತೆಗಳನ್ನು ಸಂಪಾದಿಸಿದ ಗಾರ್ಡನ್ ಲಿಶ್ (Gordon Lish). Popular Mechanics ಅಮೆರಿಕಾದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಾಧಾರಿತ ಜನಪ್ರಿಯ ಪತ್ರಿಕೆ. ಲಿಶ್ ಈ ಕತೆಗೆ ಆ ಹೆಸರು ಕೊಟ್ಟದ್ದು ಕುತೂಹಲಕಾರಿಯಾಗಿದೆ. ಕತೆಯ ಯುವ ಜೋಡಿ ಅವರ ಪುಟ್ಟ ಮಗುವನ್ನು ಒಂದು ಯಂತ್ರದಂತೆಯೋ ಕಿತ್ತು ಮರುಜೋಡಿಸಬಹುದಾದ ಆಟಿಗೆಯಂತೆಯೋ ಎಳೆದಾಡುವುದನ್ನು ಇದು ಸೂಚಿಸಬಯಸುತ್ತಿದೆಯೇ? ಕಾರ್ವರ್ನ ಕತೆಯ ಕ್ರೌರ್ಯವನ್ನು ವ್ಯಂಗ್ಯವನ್ನು ಇನ್ನೂ ತೀವ್ರಗೊಳಿಸುವುದು ಕತೆಗೆ ಈ ಹೆಸರನ್ನು ಕೊಡುವ ಉದ್ದೇಶವೇ?
Mechnon Mamre: 1 Kings Chapter 3, 1 Kings 3: 16—28