ನಮ್ಮ ಕಾಲಕ್ಕೆ ತಕ್ಕುದಾದುದು ಪ್ರಹಸನ ಮಾತ್ರ
ಜೆ ವಿ ಕಾರ್ಲೊ ಅನುವಾದದಲ್ಲಿ ಸ್ಲಾವೊಮೀರ್ ಮ್ರೋಜ಼ೆಕ್ನ "ಆನೆನೂ ಹಾರತೈತಂತೆ…" ಕತೆ
ವನ್ಯಜೀವಿ ಛಾಯಾಚಿತ್ರಕಾರರಾದ ಕೃಪಾಕರ ಸೇನಾನಿ ತಮ್ಮ ಕೆನ್ನಾಯಿಯ ಜಾಡಿನಲ್ಲಿ ಪುಸ್ತಕದಲ್ಲಿ ಆನೆಯೊಂದು ಆನೆಯಾಗುವ ಬಗೆಯನ್ನು ಹೀಗೆ ಚಿತ್ರಿಸುತ್ತಾರೆ:
[…] ಆನೆ, ಆನೆಯಾಗುವ ಮುನ್ನ ತಾನು ಆನೆ ಎಂಬುದನ್ನು ಅರಿಯಬೇಕು. ಅಮ್ಮನ ಕಾಲಡಿಯಲ್ಲಿ ತೆವಳುತ್ತಾ ಕಾಡನ್ನು ಸುತ್ತಬೇಕು. ಕಿವಿಯನ್ನು ತೆರೆದಿಟ್ಟು ಕಾಡಿನ ಭಾಷೆಯನ್ನು ಆಲಿಸಬೇಕು. ಅಮ್ಮನ ಸೂಚನೆ, ಎಚ್ಚರಿಕೆಗಳನ್ನೆಲ್ಲ ಅರ್ಥ ಮಾಡಿಕೊಳ್ಳಬೇಕು. ತನ್ನ ಹತ್ತಾರು ಅಕ್ಕ, ತಂಗಿ, ಚಿಕ್ಕಮ್ಮಂದಿರ ಸ್ಪರ್ಶ, ವಾಸನೆಗಳನ್ನು ಮನದಟ್ಟು ಮಾಡಿಕೊಳ್ಳಬೇಕು. ಅಜ್ಜಿಯಿಂದ ಸಮಾಜದ ನಡೆ, ನುಡಿಗಳನ್ನು ಮರಿ ಆನೆ ಕಲಿಯಬೇಕು. ತನ್ನ ಪರಿಸರದ ಅಕ್ಷಾಂಶ-ರೇಖಾಂಶಗಳನ್ನೆಲ್ಲ ಮನನ ಮಾಡಿಕೊಳ್ಳುತ್ತಾ ತನ್ನ ಮಣ್ಣಿನ ವಾಸನೆಯನ್ನು ಗ್ರಹಿಸಬೇಕು. ಮಿತ್ರರಾರು, ಶತ್ರುಗಳಾರು, ಯಾವುದು ವಿಷ, ಯಾವುದು ಆಹಾರ ಎಂದೆಲ್ಲ ಅರಿತುಕೊಳ್ಳಬೇಕು. ಬೆಳೆದ ಬಳಿಕ ಬಿದಿರಿನ ಮೆಳೆಗಳನ್ನು ಬುಡಮೇಲು ಮಾಡಿ, ನಿಂತ ಮರಗಳನ್ನು ಉರುಳಿಸಿ, ಕೆರೆಗಳಲ್ಲಿ ಇಳಿದು, ನದಿಗಳಲ್ಲಿ ಮುಳುಗಿ ಕಾಡಿನಲ್ಲಿ ಅಂಡಲೆಯಬೇಕು. ಆಗಷ್ಟೇ ಅದು ಆನೆಯಾಗುತ್ತದೆ.
ಸ್ಲಾವೊಮೀರ್ ಮ್ರೋಜ಼ೆಕ್ನ ಕತೆಯಲ್ಲಿ ಬರುವ ಆನೆಗೆ ಮೇಲಿನದ್ಯಾವುದನ್ನೂ ಕಲಿಯಬೇಕಾದ ಪ್ರಮೇಯವೇ ಇಲ್ಲ!
ಸ್ಲಾವೊಮೀರ್ ಮ್ರೋಜ಼ೆಕ್ (Sławomir Mrożek, 9 ಜೂನ್ 1930 – 15 ಅಗಸ್ಟ್ 2013) ಪೋಲಿಷ್ ನಾಟಕಕಾರ, ಕತೆಗಾರ ಮತ್ತು ವ್ಯಂಗ್ಯಚಿತ್ರಕಾರ. 1930ರಲ್ಲಿ ಪೋಲೆಂಡಿನ ಬೊರ್ಜೆಂಚಿನ್ನಲ್ಲಿ ಜನಿಸಿದ್ದು. ಅಧ್ಯಯನ ಮಾಡಿದ್ದು; ವಾಸ್ತುಶಿಲ್ಪಶಾಸ್ತ್ರ, ಪೌರಾತ್ಯ ಸಂಸ್ಕೃತಿ ಮತ್ತು ಚಿತ್ರಕಲೆ. ವ್ಯಂಗ್ಯಚಿತ್ರಕಾರ, ಕತೆಗಾರ, ನಾಟಕಕಾರನಾಗಿ ಪೋಲೆಂಡಿನಲ್ಲಿ ಖ್ಯಾತಿ ಪಡೆದಾತ. ವಿವಾದಾಸ್ಪದ ಬರೆಹಗಳ ಕಾರಣಕ್ಕಾಗಿ ಪೋಲೆಂಡಿನಲ್ಲಿ ಸ್ಲಾವೊಮೀರ್ ಬರಹಗಳನ್ನು ನಿಷೇಧಿಸಿದಾಗ 1968ರಲ್ಲಿ ಪ್ಯಾರಿಸಿಗೆ ಹೋಗಿ, 1970ರಲ್ಲಿ ನಿಷೇಧವನ್ನು ಹಿಂತೆಗೆದಾಗ ಮತ್ತೆ ಪೋಲೆಂಡಿಗೆ ಮರಳುತ್ತಾನೆ. 1968ರಲ್ಲಿ ಪೋಲಿಷ್ನಿಂದ ಇಂಗ್ಲಿಷಿಗೆ ಅನುವಾದಗೊಂಡ ಮ್ರೋಜ಼ೆಕ್ನ ಕಥಾಸಂಕಲನ The Elephant, ಸರ್ವಾಧಿಕಾರಿ ಆಡಳಿತದಲ್ಲಿ ಪೋಲೆಂಡ್ ಜನಜೀವನದ ಕಠೋರ ವಿಡಂಬನಾತ್ಮಕ ಕತೆಗಳ ಗುಚ್ಛ; ‘ಪುಟ್ಟ ಸೋಜಿಗ’ದಿಂದ ಹಿಡಿದು ‘ಅಸಾಧಾರಣ ಸಾಹಿತ್ಯಿಕ ಕ್ರಾಂತಿ’ ಎಂತಲೂ ಬಣ್ಣಿಸಲ್ಪಟ್ಟ ಪುಸ್ತಕಕ್ಕೆ ಡೇನಿಯಲ್ ಮ್ರೋಜ಼್ (Daniel Mróz) ಇಲ್ಲಸ್ಟ್ರೇಷನ್ ಮಾಡಿದ್ದಾರೆ.

ಭ್ರಾಮಕವಾದುದನ್ನು ನಿಜವೆಂದೂ ನಿಜವನ್ನು ಭ್ರಾಮಕವೆಂದೂ ತೋರಿಸುವುದರಲ್ಲಿ ನಿಪುಣನಾದ ಮ್ರೋಜ಼ೆಕ್ ತನ್ನ ಕೃತಿಯಲ್ಲಿ ತನ್ನದೇ ಸಮಾಜದ ಅಧಿಕಾರಿಶಾಹಿಯನ್ನು ಶಾಲಿನೊಳಗೆ ಮೆಟ್ಟು ಇಟ್ಟು ಹೊಡೆಯುವಂತೆ ಲೇವಡಿ ಮಾಡಿದ್ದಾನೆ. ಸಮಾಜದ ಕರಾಳ ಅಂಶಗಳನ್ನು ಬಹಿರಂಗಪಡಿಸಲು ಹಾಸ್ಯ ಮತ್ತು ವ್ಯಂಗ್ಯವನ್ನು ಅಚ್ಚುಕಟ್ಟಾಗಿ ‘ಬೆರಕೆ’ ಮಾಡುವ ಮ್ರೋಜ಼ೆಕ್ ಬರೆವಣಿಗೆಯು grotesque-philosophical ಶೈಲಿಗೆ ಪ್ರಸಿದ್ಧ. ಎಲ್ಲ ನೈಜ ವಿಡಂಬನಕಾರರಂತೆ ಮ್ರೋಜ಼ೆಕ್ ರಾಜಕೀಯ ವ್ಯಾಖ್ಯಾನಕ್ಕಿಂತ ಎಲ್ಲ ಕಡೆಗಳಲ್ಲಿ ಮನುಷ್ಯನ ದೋಷಗಳಿಗೆ ವಿಡಂಬನೆಯ ಕನ್ನಡಿ ಹಿಡಿಯುತ್ತಾನೆ. ಅವನ ಕಿರುಕತೆಗಳು ಕಾಫ್ಕಾನ ದೃಷ್ಟಾಂತಗಳಂತೆ ಕಂಡರೂ ಹಾಸ್ಯಮಯವಾಗಿ ಬದುಕಿಗೆ ಹೆಚ್ಚು ಹತ್ತಿರವಿವೆ: ಕಾಫ್ಕಾನ ಅದ್ಭುತ ಕಲ್ಪಕತೆ, ಹೃಬಾಲ್ನ (Bohumil Hrabal) ಹಾಸ್ಯದ ಅಸಂಗತತೆ ಹಾಗೂ ಚೆಕೋವ್ನ ವ್ಯಂಗ್ಯದ ಚುರುಕುತನ ಸಂತುಲಿತಗೊಂಡಂತಿವೆ.
ಇದು ಆ ಕಾಲಘಟ್ಟದ ಪೂರ್ವ ಯುರೋಪಿನ ವೈಶಿಷ್ಟ್ಯವೇನೋ. ಬಹುಕಾಲ ಪ್ರಭುತ್ವದ ದಬ್ಬಾಳಿಕೆಗೆ ಒಳಪಟ್ಟ ಸಮಾಜದಲ್ಲಿ ಸಾಹಿತ್ಯವು ಸೂಕ್ಷ್ಮವೂ ತೀಕ್ಷ್ಣವೂ ಆದ ವಿಡಂಬನೆಯಾಗಿಯೇ ಹೊರಹೊಮ್ಮಬೇಕೇನೋ. “ನಮ್ಮ ಕಾಲದಲ್ಲಿ ಆಗಬಲ್ಲುದು ಪ್ರಹಸನ ಮಾತ್ರ,” ಎಂದಿದ್ದ ಮ್ರೋಜ಼ೆಕ್. ಅದು ತಕ್ಕುದಾದದ್ದು ಕೂಡ. ವಾಸ್ತವವೇ ಪ್ರಹಸನದಂತಿರುವಾಗ ಅದನ್ನು ಗಂಭೀರವೂ ತರ್ಕಬದ್ಧವೂ ಆದ ಕೃತಿಯೊಂದರ ಮೂಲಕ ಹಿಡಿದು ತೋರಿಸುವುದು ಸರಿಯಾದುದಾದೀತೇ? ನಿರಂಕುಶ ಆಳ್ವಿಕೆಗೆ ಕಲೆಯು ಪ್ರತಿಕ್ರಿಯಿಸುವುದಾದರೂ ಹೇಗೆ? ವಾಸ್ತವದ ಪ್ರಾಮಾಣಿಕ ಅಭಿವ್ಯಕ್ತಿಯ ರೂಪ ಪ್ರಹಸನವೊಂದೇ.
ಅವನ ಕತೆಗಳು ಪೂರ್ವ ಯುರೋಪ್ನ ಆ ಕಾಲದ ಸಾಮಾಜಿಕ ರಾಜಕೀಯ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಾ ನೇರವಾಗಿ ಹೃದಯಕ್ಕೆ ನಾಟುತ್ತವಲ್ಲದೇ ನಮ್ಮ ದೇಶದ ಈ ಕಾಲದ ವಾಸ್ತವಕ್ಕೂ ಪ್ರಸ್ತುತವಾಗಿವೆ. ನಮ್ಮ ಬರಹಗಾರರು, ಕಲಾವಿದರು ಇಂದಿನ ವಿದ್ಯಮಾನಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ? ಆಳ್ವಿಕೆಯು ನಿರಂತರವಾಗಿ ಒದಗಿಸುತ್ತಿರುವ ಸಾಮಗ್ರಿಯನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ?
ಸಂಕಲನದ ಶೀರ್ಷಿಕೆಯ ಹೆಸರಿನ ಕತೆಯಲ್ಲಿ ‘ಆನೆನೂ ಹಾರತೈತಂತೆ...’ ಎನ್ನುವ ವಿದ್ಯಮಾನ ಜರುಗುತ್ತದೆ. ನೆಲದ ಮೇಲಿನ ಅತೀ ದೊಡ್ಡ ಪ್ರಾಣಿಯಾಗಿರುವ ಜೀವಂತ ಆನೆಯನ್ನು ಮೊಟ್ಟಮೊದಲ ಸಲ ನೋಡುವ ಮಕ್ಕಳ ಕಣ್ಣಲ್ಲಿ ಪ್ರತಿಫಲಿಸುವ ಅಚ್ಚರಿ-ಸಂಭ್ರಮಗಳಲ್ಲಿ; ನೋಟದಲ್ಲೇ ಭಾಗಿಯಾಗುವ ಅಪೂರ್ವ ಅನುಭವವನ್ನು ಕಳೆದುಕೊಂಡ ನತದೃಷ್ಟ ಸಮಾಜವೊಂದರ ಬಿಂಬ ಈ ಕತೆ.
ಮಾರಿಯಾನ್ನಾ ಶ್ಚಿಗೈಲ್ಸ್ಕಾ (Marianna Szczygielska) ಪೋಲೆಂಡಿನ ಪೋಜ಼್ನಾನ್ ಮೃಗಾಲಯದ ಬಗ್ಗೆ ತಮ್ಮ ಮಹಾಪ್ರಬಂಧ Elephant Empire: Zoos and Colonia Encounters in Eastern Europeನಲ್ಲಿ ಹೀಗೆ ಬರೆಯುತ್ತಾರೆ: ಮೃಗಾಲಯವೆಂದರೆ ನಗರ, ಆನೆ ಎಂದರೆ ಮೃಗಾಲಯ. ಪೋಲೆಂಡಿಗೆ ಸಾಮ್ರಾಜ್ಯವಿಲ್ಲದಿದ್ದರೂ ಬಹಳಷ್ಟು ಆನೆಗಳಿವೆ. ಕ್ರಮೇಣ ಆನೆಯೇ ಪೋಲೆಂಡಿನ ಹೆಗ್ಗುರುತಾಯಿತು: ಒಂದು ಉದಾತ್ತ ಮತ್ತು ಹೆಮ್ಮೆಯ ಪ್ರಾಣಿ, ಜರ್ಮನ್ ಅಧಿಪತಿಯ ಕ್ರೌರ್ಯದಿಂದ ಗಾಯಗೊಂಡಿದ್ದರೂ ಬಂಡಾಯ ಪ್ರವೃತ್ತಿಯದು.

ಇನ್ನೀಗ ಜೆ ವಿ ಕಾರ್ಲೊ ಅನುವಾದದಲ್ಲಿ ಮ್ರೋಜ಼ೆಕ್ನ Słoń.
ಆನೆನೂ ಹಾರತೈತಂತೆ…
ಆ ಮೃಗಾಲಯದ ನಿರ್ದೇಶಕ ಅಡ್ಡ ಹಾದಿ ಹಿಡಿದು ಮೇಲೇರಿದವನು. ಅಧೀನದಲ್ಲಿದ್ದ ಮೃಗಗಳು ಅವನಿಗೆ ವೃತ್ತಿಯಲ್ಲಿ ಮೇಲೇರಲು ಮೆಟ್ಟಿಲುಗಳಾಗಿದ್ದವಷ್ಟೇ. ಮೃಗಾಲಯದ ಶೈಕ್ಷಣಿಕ ಮಹತ್ವದ ಬಗ್ಗೆ ಅವನಿಗೆ ಕಿಂಚಿತ್ತೂ ಕಾಳಜಿಯಾಗಲಿ, ಆಸಕ್ತಿಯಾಗಲಿ ಇರಲಿಲ್ಲ. ಆ ಮೃಗಾಲಯದಲ್ಲಿದ್ದ ಜಿರಾಫೆಯ ಕತ್ತು ಗಿಡ್ಡವಾಗಿತ್ತು. ನೆಲಕರಡಿಗೆ ಬಿಲವಿರಲಿಲ್ಲ. ಶಿಳ್ಳೆ ಹಕ್ಕಿ ಜೀವನೋತ್ಸಾಹ ಕಳೆದುಕೊಂಡು ಎಲ್ಲೋ ಅಪರೂಪಕ್ಕೊಮ್ಮೆ ಅರೆಮನಸ್ಸಿನಿಂದ ಶಿಳ್ಳೆ ಹೊಡೆಯುತ್ತಿತ್ತು. ಶಾಲಾ ಮಕ್ಕಳು ಗುಂಪುಗೂಡಿ ಆಗಾಗ ಆ ಮೃಗಾಲಯಕ್ಕೆ ಬರುತ್ತಿದ್ದರಿಂದ ಇಂಥ ನ್ಯೂನತೆಗಳು ನಿಜವಾಗಿಯೂ ಅಕ್ಷಮ್ಯವಾಗಿದ್ದವು. ನಮ್ಮ ದೇಶದ ವಾರ್ಷಿಕ ವಿಮೋಚನಾ ದಿನವಾದ ಜುಲೈ 22ರ ಸಂಭ್ರಮಾಚರಣೆಯ ಕುರುಹಾಗಿ ಸರ್ಕಾರ ಈ ಮೃಗಾಲಯಕ್ಕೆ ಒಂದು ಆನೆಯನ್ನು ದಯಪಾಲಿಸಲಾಗುವುದೆಂದು ತಿಳಿಸಿತು.
ಅದೊಂದು ಸಣ್ಣ ಪಟ್ಟಣದ ಮೃಗಾಲಯವಾಗಿತ್ತು. ಅಲ್ಲಿ ಮುಖ್ಯವಾದ ಬಹಳಷ್ಟು ಮೃಗಗಳ ಕೊರತೆ ಇತ್ತು. ಅದರಲ್ಲೂ ವಿಶೇಷವಾಗಿ ಆನೆಯದು. ಬೃಹತ್ ಗಾತ್ರದ ಈ ಪ್ರಾಣಿಯ ಕೊರತೆಯನ್ನು ಮೂರು ಸಾವಿರ ಮೊಲಗಳಿಂದಲಾದರೂ ತುಂಬಿಸಲು ಸಾಧ್ಯವೇ? ಆದರೂ, ದೇಶ ಅಭಿವೃದ್ಧಿ ಪಥದಲ್ಲಿ ಮುಂದೆ ಸಾಗುತ್ತಿದ್ದಂತೆ ಸರ್ಕಾರ ಇಂಥ ಕೊರತೆಗಳನ್ನು ಒಂದೊಂದಾಗಿ ಯೋಜನಾಬದ್ಧವಾಗಿ ತುಂಬಿಸಿಕೊಂಡು ಬರುತ್ತಿತ್ತು. ಕೊನೆಗೂ ನಮ್ಮ ದೇಶದ ವಾರ್ಷಿಕ ವಿಮೋಚನಾ ದಿನವಾದ ಜುಲೈ 22ರ ಸಂಭ್ರಮಾಚರಣೆಯ ಕುರುಹಾಗಿ ಸರ್ಕಾರ ಈ ಮೃಗಾಲಯಕ್ಕೆ ಒಂದು ಆನೆಯನ್ನು ಕಳಿಸಿ ಕೊಡಲಾಗುವುದೆಂದು ತಿಳಿಸಿತು. ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಇಲ್ಲಿಯ ಕೆಳವರ್ಗದ ನೌಕರರು ಈ ಸುದ್ದಿಯನ್ನು ಕೇಳಿ ಸಂಭ್ರಮಪಟ್ಟರು. ಆದರೆ, ನಿರ್ದೇಶಕ ಸರ್ಕಾರದ ಈ ಕೊಡುಗೆಯನ್ನು ನಿರಾಕರಿಸಿ, ತಾನು ತುಂಬಾ ಕಡಿಮೆ ಖರ್ಚಿನಲ್ಲಿ ಮೃಗಾಲಯಕ್ಕೆ ಆನೆಯನ್ನು ತರುವುದಾಗಿ ವಾರ್ಸಾಕ್ಕೆ ಪತ್ರವನ್ನು ಬರೆದಾಗ; ಅಲ್ಲಿ ಕೆಲಸ ಮಾಡುತ್ತಿದ್ದವರಿಗೆ ಆಶ್ಚರ್ಯದ ಜೊತೆಯಲ್ಲಿ ನಿರಾಶೆಯೂ ಆಯಿತು.
ಇಲ್ಲಿಗೆ ಒಂದು ಆನೆಯನ್ನು ಕಳಿಸುವುದೆಂದರೆ ಎಷ್ಟೊಂದು ಖರ್ಚುವೆಚ್ಚವಾಗುತ್ತದೆಂಬುದು ನನಗೆ ಮತ್ತು ನನ್ನ ಜೊತೆ ಇಲ್ಲಿ ಕೆಲಸ ಮಾಡುವವರಿಗೆ ಚೆನ್ನಾಗಿ ಗೊತ್ತು. ಕೊನೆಗೆ ಇದರ ಬೆಲೆ ತೆರಬೇಕಾದವರು ಪೋಲೆಂಡಿನ ಅಮಾಯಕ ಗಣಿ ಮತ್ತು ಕಮ್ಮಾರ ಕೆಲಸಗಾರರು. ಈ ಅನವಶ್ಯಕ ಖರ್ಚಿಗೆ ಬದಲಾಗಿ ಸದರಿ ಆನೆಯನ್ನು ನಾವೇ ಕಡಿಮೆ ಖರ್ಚಿನಲ್ಲಿ ಒದಗಿಸಿಕೊಳ್ಳಲು ಅನುಮತಿ ನೀಡಬೇಕೆಂದು ಕೇಳಿಕೊಳ್ಳುತ್ತೇನೆ. ಸಜೀವ ಆನೆಯಂತದ್ದೇ ಗಾತ್ರದ-ಬಣ್ಣದ ತದ್ರೂಪು ಆನೆಯನ್ನು ನಾವು ರಬ್ಬರಿನಿಂದ ತಯಾರಿಸಿ; ಅದಕ್ಕೆ ಗಾಳಿ ತುಂಬಿ ಬೇಲಿ ಕಂಬಿಗಳ ಹಿಂದೆ ನಿಲ್ಲಿಸಬಹುದು. ಹತ್ತಿರದಿಂದ ನೋಡಿದಾಗ ಕೂಡ ಯಾರಿಗೂ ಕಿಂಚಿತ್ ವ್ಯತ್ಯಾಸ ಗೊತ್ತಾಗಲಾರದು. ದೊಡ್ಡ ದೇಹದ ಆನೆ ಚುರುಕಾಗಿ ಅತ್ತಿತ್ತ ಓಡಾಡುವುದಿಲ್ಲವೆನ್ನುವುದು ಎಲ್ಲರಿಗೂ ಗೊತ್ತು. ಹಾಗಿದ್ದೂ, ಅದನ್ನು ನಿಲ್ಲಿಸಿರುವ ಬೇಲಿ ಕಂಬದ ಮೇಲೆ ಇದೊಂದು ಹೆಚ್ಚೇ ಸೋಮಾರಿ ಆನೆ ಎಂಬ ಸೂಚನಾ ಫಲಕ ನೇತುಹಾಕಬಹುದು. ಇದರಿಂದ ಉಳಿತಾಯವಾಗುವ ಹಣವನ್ನು ಒಂದು ವಿಮಾನವನ್ನೋ ಯಾವುದಾದರೂ ಪುರಾತನ ಚರ್ಚಿನ ಸಂರಕ್ಷಣೆಗೋ ಬಳಸಬಹುದು.
ದೇಶದ ಮುನ್ನಡೆಗಾಗಿ ಈ ರಬ್ಬರಿನ ಆನೆಯ ಪರಿಕಲ್ಪನೆ ಮತ್ತು ಅನುಷ್ಠಾನ ನನ್ನ ವಿನಮ್ರ ಸಲಹೆ ಎಂದು ತಿಳಿಯುವುದು.
ಇತೀ ತಮ್ಮ ಸೇವಾಕಾಂಕ್ಷಿ,
ಈ ಪತ್ರ ಯಾರೋ ಪಕ್ಕಾ ಭಾವಶೂನ್ಯ, ಸಂಬಳಕ್ಕಾಗಿಯೇ ಕೆಲಸ ಮಾಡುತ್ತಿರುವ ವಿವೇಚನಾರಹಿತ ಅಧಿಕಾರಿಯ ಕೈಗೆ ಸಿಕ್ಕಿರಬೇಕು. ಅದನ್ನು ಯಾವುದೇ ತಕರಾರುಗಳಿಲ್ಲದೆ ಅನುಮೋದಿಸಿ ಕಳಿಸಲಾಯಿತು. ಸಚಿವಾಲಯದಿಂದ ಅನುಮತಿ ದೊರಕಿದ್ದೇ ತಡ, ಇತ್ತ ಮೃಗಾಲಯದ ಈ ನಿರ್ದೇಶಕ ರಬ್ಬರ್ ಆನೆಯ ತಯಾರಿಯನ್ನು ಕೈಗೆತ್ತಿಕೊಂಡ.

ಅಂತೂ ರಬ್ಬರಿನ ಆನೆ ತಯಾರಾಯಿತು. ಇದಕ್ಕೆ ಎರಡು ಕಡೆಯಿಂದ ಇಬ್ಬರು ಕೆಲಸಗಾರರನ್ನು ಗಾಳಿ ತುಂಬಿಸಲು ನೇಮಿಸಲಾಯಿತು. ಅದಾಗಲೇ ನಗರದಲ್ಲಿ, ನಿಜಕ್ಕೂ ಮೃಗಾಲಯಕ್ಕೊಂದು ಆನೆ ಬರಲಿದೆ ಎಂಬ ಸುದ್ದಿ ಹರಡಿ ಜನರು ಆನೆಯನ್ನು ಕಣ್ತುಂಬ ನೋಡಲು ಕಾತುರರಾಗಿದ್ದರು. ಆದ್ದರಿಂದ ರಬ್ಬರ್ ಆನೆಗೆ ಗಾಳಿ ತುಂಬುವ ಕೆಲಸ ಇಡೀ ಊರು ಮಲಗಿರುವ ರಾತ್ರಿಯ ಹೊತ್ತಿನಲ್ಲಿ ನಡೆಸಬೇಕಾಯಿತು. ನಿರ್ದೇಶಕ ಕೂಡ ಬಹಳ ಆತುರದಲ್ಲಿದ್ದ. ರಬ್ಬರ್ ಆನೆಯ ಪರಿಕಲ್ಪನೆ ಏನಾದರೂ ಯಶಸ್ವಿಯಾದರೆ ಇದೊಂದು ದೊಡ್ಡ ಉಳಿತಾಯ ಯೋಜನೆ ಆಗುವುದರಲ್ಲಿತ್ತು. ನಿರ್ದೇಶಕನಿಗೆ ಬೋನಸ್ಸೋ ಬಡ್ತಿಯೋ ಸಿಗುವುದರಲ್ಲಿ ಯಾವುದೇ ಅನುಮಾನಗಳಿರಲಿಲ್ಲ.
ಇಬ್ಬರು ಕೆಲಸಗಾರರು ಮೃಗಾಲಯದ ವರ್ಕ್ಶಾಪಿನ ಕದವನ್ನು ಗಟ್ಟಿಯಾಗಿ ಮುಚ್ಚಿಕೊಂಡು, ರಾತ್ರೋರಾತ್ರಿ ರಬ್ಬರಿನ ಆನೆಗೆ ಗಾಳಿ ತುಂಬಿಸುವ ಕೆಲಸದಲ್ಲಿ ನಿರತರಾದರು. ಸುಮಾರು ಎರಡು ಗಂಟೆ ಅವಿರತ ಶ್ರಮದ ನಂತರವೂ ಆನೆಯು ನೆಲದಿಂದ ಕೆಲವೇ ಇಂಚುಗಳಷ್ಟು ಮೇಲಕ್ಕೆದ್ದಿತ್ತು. ಅದಕ್ಕೆ ಆನೆಯ ಆಕಾರ ಸ್ವಲ್ಪವೂ ಬಂದಿರಲಿಲ್ಲ. ಗಾಳಿ ತುಂಬಿಸುವ ಕೆಲಸ ಮುಂದುವರಿಯಿತು. ವರ್ಕ್ಶಾಪಿನ ಹೊರಗಡೆ ಮನುಷ್ಯರ ಸದ್ದು ಅಡಗಿತ್ತು. ಆಗಾಗ ಕತ್ತೆಗಳ ಕಿರುಚಾಟವು ರಾತ್ರಿಯ ನೀರವತೆಯನ್ನು ಭೇದಿಸುವುದನ್ನು ಬಿಟ್ಟರೆ ಇಡೀ ಜಗತ್ತು ಶಾಂತವಾಗಿತ್ತು. ರಬ್ಬರ್ ಆನೆಗೆ ಗಾಳಿ ತುಂಬಿಸಿ ತುಂಬಿಸಿ ಸುಸ್ತಾಗಿದ್ದ ಕೆಲಸಗಾರರು, ಈಗಾಗಲೇ ತುಂಬಿಸಿದ್ದ ಗಾಳಿ ಹೊರ ಹೋಗುತ್ತಿಲ್ಲವೆನ್ನುವುದನ್ನು ಖಾತ್ರಿಪಡಿಸಿಕೊಂಡು, ದಣಿವಾರಿಸಿಕೊಳ್ಳಲು ಸ್ವಲ್ಪಹೊತ್ತು ಕುಳಿತುಕೊಂಡರು. ಅಷ್ಟಕ್ಕೂ ಅವರೇನೂ ಹರೆಯದವರಾಗಿರಲಿಲ್ಲ. ಈ ತೆರನಾದ ಗಾಳಿ ತುಂಬಿಸುವ ಕೆಲಸವು ಕೂಡ ಅವರಿಗೆ ಹೊಸತಾಗಿತ್ತು.
“ನಾವು ಈ ವೇಗದಲ್ಲೇ ಮುಂದುವರಿದರೆ ಬೆಳಗಾದರೂ ಆನೆ ಮೇಲೇಳುವುದಿಲ್ಲ!” ಅವರಲ್ಲೊಬ್ಬ ಹೇಳಿದ. “ಮನೆಯಲ್ಲಿ ನನ್ನ ಹೆಂಡತಿಗೆ ಏನಂತ ಹೇಳಲಿ? ಇದೆಲ್ಲಾ ನಮ್ಮ ಬಾಸ್ನ ಕಿತಾಪತಿ. ಹೇಗೂ ಅವನು ಎಡಪಂಥೀಯ ಅಲ್ವೇ?”
ಅವರು ಮತ್ತೆ ಗಾಳಿ ತುಂಬಿಸಲು ಶುರುಮಾಡಿದರು. ಮತ್ತರ್ಧ ಗಂಟೆಯೊಳಗೆ ಅವರಿಗೆ ಆಯಾಸವಾಗತೊಡಗಿತು. ಆನೆ ಮೊದಲಿಗಿಂತಲೂ ಸ್ವಲ್ಪ ಊದಿಕೊಂಡಿತ್ತಾದರೂ ಅದಕ್ಕೆ ಇನ್ನೂ ಆನೆಯ ಆಕಾರ ಬಂದಿರಲಿಲ್ಲ.
“ಯಾಕೋ ನಮ್ಮ ಕೆಲಸ ಸಾಗ್ತಾನೇ ಇಲ್ಲಲ್ಲಪ್ಪ. ಗಾಳಿ ತುಂಬಿಸುವುದೂ ಕಷ್ಟವಾಗುತ್ತಿದೆ,” ಮೊದಲನೆಯ ಕೆಲಸಗಾರ ಬೇಸರದಿಂದ ಹೇಳಿದ.
“ಹೌದೌದು. ನಾವು ಮತ್ತೊಮ್ಮೆ ವಿರಾಮ ತೆಗೆದುಕೊಳ್ಳುವುದು ಒಳ್ಳೆಯದು.”
ಅವರು ವಿಶ್ರಾಂತಿ ತೆಗೆದುಕೊಳ್ಳಲು ಕುಳಿತಿರುವಾಗ ಒಬ್ಬನಿಗೆ ಗೋಡೆಯಲ್ಲಿ ಗ್ಯಾಸ್ ಪೈಪ್ಲೈನ್ ಕಾಣಿಸಿತು. ಅದಕ್ಕೆ ವಾಲ್ವ್ ಕೂಡ ಇತ್ತು. “ಆನೆಗೆ ಗಾಳಿಯ ಬದಲು ಗ್ಯಾಸ್ ತುಂಬಿಸಿದರೆ ಹೇಗೆ?” ಎಂದು ಅವನು ಮತ್ತೊಬ್ಬನನ್ನು ಕೇಳಿದ.
“ಯಾಕಾಗಬಾರದು?” ಒಂದು ಕೈ ನೋಡಿಯೇ ಬಿಡುವ ಎಂದು ಅವರು ನಿರ್ಧರಿಸಿದರು. ಒಂದು ಪೈಪನ್ನು ಗ್ಯಾಸ್ ಲೈನಿನ ವಾಲ್ವಿಗೆ, ಅದರ ತುದಿಯನ್ನು ಆನೆಗೆ ಸಿಕ್ಕಿಸಿ ವಾಲ್ವ್ ತಿರುಗಿಸಿದರು. ಅವರ ಆನಂದಕ್ಕೆ ಪಾರವೇ ಇಲ್ಲದಾಯಿತು. ಕ್ಷಣಾರ್ಧದಲ್ಲಿ ಆನೆಯ ಹೊಟ್ಟೆಯೊಳಗೆ ಗ್ಯಾಸ್ ತುಂಬಿಕೊಂಡು ಅದು ನಿಜವಾದ ಆನೆಯೋ ಏನೋ ಎಂಬಂತೆ ಮೈ ತುಂಬಿಕೊಂಡು ವರ್ಕ್ಶಾಪಿನಲ್ಲಿ ಎದ್ದು ನಿಂತಿತು. ಥೇಟು ನಿಜವಾದ ಆನೆಯಂತೆಯೇ ಕಾಣಿಸುತ್ತಿತ್ತು. ಬೃಹತ್ ಆಕಾರ. ಕಂಬಗಳಂತ ಕಾಲುಗಳು, ಮೊರದಂತ ಅಗಲ ಕಿವಿಗಳು, ಉದ್ದನೆಯ ಸೊಂಡಿಲು. ತುಂಬಾ ಮಹತ್ವಾಕಾಂಕ್ಷಿಯಾಗಿದ್ದ ನಿರ್ದೇಶಕ, ಮೃಗಾಲಯಕ್ಕಾಗಿ ದೊಡ್ಡ ಗಾತ್ರದ ಆನೆಯನ್ನೇ ತಯಾರಿಸಿದ್ದ.
“ಫಸ್ಟ್ ಕ್ಲಾಸ್!” ಗ್ಯಾಸ್ ತುಂಬಿಸುವ ಐಡಿಯಾ ಕೊಟ್ಟಿದ್ದ ಕೆಲಸಗಾರ ಹೆಮ್ಮೆಯಿಂದ ಹೇಳಿದ. “ನಾವೀಗ ನೆಮ್ಮದಿಯಿಂದ ಮನೆಗೆ ಹೋಗಬಹುದು.”
ಮರುದಿನ ಬೆಳಿಗ್ಗೆ ಮೃಗಾಲಯದ ಮಧ್ಯಭಾಗದಲ್ಲಿ, ಕೋತಿಗಳ ಪಂಜರದ ಬಳಿ, ದೊಡ್ಡ ಕಲ್ಲು ಬಂಡೆಯ ಎದುರು ಒಂದು ವಿಶೇಷ ಸ್ಥಳವನ್ನು ನಿರ್ಮಿಸಿ ಅಲ್ಲಿ ಆನೆಯನ್ನು ನಿಲ್ಲಿಸಲಾಯಿತು. ಆನೆಯ ಪ್ರತಿಷ್ಠಾಪನೆಯಿಂದಾಗಿ ಮೃಗಾಲಯವು ಕಳೆಗಟ್ಟಿತು. ಆನೆಯ ಎದುರಿನ ಬೇಲಿ ಕಂಬದ ಮೇಲೆ, “ಈ ಆನೆ ಬಲು ಸೋಮಾರಿ. ಮಿಸುಕಾಡುವುದೇ ಅಪರೂಪ!” ಎಂಬ ದೊಡ್ಡದಾದ ಸೂಚನಾಫಲಕವನ್ನು ನೇತುಹಾಕಲಾಯಿತು.
ಅಂದು ಬೆಳಿಗ್ಗೆ ಮೊಟ್ಟಮೊದಲು ಸ್ಥಳೀಯ ಶಾಲಾ ತಂಡವೊಂದು ಆನೆಯನ್ನು ನೋಡಲು ಮೃಗಾಲಯಕ್ಕೆ ಆಗಮಿಸಿತು. ಮಕ್ಕಳಿಗೆ ಆನೆಯ ಕುರಿತು ವಿವರವಾಗಿ ತಿಳಿಸಲು ಅವರ ಜೊತೆ ಒಬ್ಬ ಶಿಕ್ಷಕರೂ ಬಂದಿದ್ದರು. ಅವರು ಮಕ್ಕಳನ್ನು ಆನೆಯ ಎದುರಿಗೆ ಸಾಲಾಗಿ ನಿಲ್ಲಿಸಿ ಹೇಳತೊಡಗಿದರು:
“ಆನೆಯು ಒಂದು ಸಸ್ಯಾಹಾರಿ ಪ್ರಾಣಿ. ಅದು ತನ್ನ ಸೊಂಡಿಲಿನಿಂದ ಮರಗಿಡಗಳ ಎಲೆಗಳನ್ನು ಹರಿದು ತಿನ್ನುತ್ತದೆ.”
ಮಕ್ಕಳು ಆಶ್ಚರ್ಯದಿಂದ ಕಣ್ಣು ಬಾಯಿ ಬಿಟ್ಟುಕೊಂಡು ಆನೆಯನ್ನೇ ನೋಡುತ್ತಿದ್ದರು. ಅದು ಪಕ್ಕದಲ್ಲಿ ಬೆಳೆದಿದ್ದ ಮರದಿಂದ ಎಲೆಗಳನ್ನು ಯಾವಾಗ ಕಿತ್ತು ತಿನ್ನುತ್ತದೆಂದು ನೋಡಲು ಅವರು ಕಾತುರದಿಂದ ಕಾದು ನಿಂತಿದ್ದರು. ಆದರೆ, ಆನೆ ಕೊಂಚವೂ ಮಿಸುಕಾಡದೆ ಬೇಲಿಯ ಹಿಂದೆ ಹಾಗೆಯೇ ನಿಂತುಕೊಂಡಿತ್ತು.
“...ಆನೆಯು, ಈಗ ಅಳಿದು ಹೋಗಿರುವ ಮ್ಯಾಮತ್ ಅಥವಾ ದೈತ್ಯಗಜದ ವಂಶಜ. ಆದ್ದರಿಂದ ಅದು ನೆಲದ ಮೇಲಿನ ಅತೀ ದೊಡ್ಡ ಪ್ರಾಣಿಯಾಗಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ.”
ಕೆಲವು ಶ್ರದ್ಧಾವಂತ ಮಕ್ಕಳು ಶಿಕ್ಷಕರು ಹೇಳಿದ್ದನ್ನು ತಮ್ಮ ನೋಟ್ಬುಕ್ಗಳಲ್ಲಿ ಬರೆದುಕೊಳ್ಳತೊಡಗಿದರು.
“ಜಗತ್ತಿನಲ್ಲಿ ಆನೆಗಿಂತ ದೊಡ್ಡ ಪ್ರಾಣಿ ತಿಮಿಂಗಿಲ ಅಂತನ್ನಬಹುದು. ಆದರೆ, ತಿಮಿಂಗಿಲ ಸಮುದ್ರದಲ್ಲಿ ವಾಸಿಸುತ್ತದೆ. ಆದ್ದರಿಂದ ಭೂಮಿಯ ಮೇಲೆ ಆನೆಗೆ ಸರಿಸಾಟಿಯಾದ ಪ್ರಾಣಿ ಬೇರೊಂದಿಲ್ಲವೆಂದು ಧೈರ್ಯವಾಗಿ ಹೇಳಬಹುದು.”
ಅಷ್ಟರಲ್ಲಿ ಮಂದವಾದ ಗಾಳಿಯು ಬೀಸಿ ಮರದ ಎಲೆಗಳು ಅಲುಗಾಡತೊಡಗಿದವು. “... ಒಂದು ಪೂರ್ಣವಾಗಿ ಬೆಳೆದಿರುವ ಆನೆಯು ಎಂಟರಿಂದ ಹದಿಮೂರು ಸಾವಿರ ಪೌಂಡುಗಳಷ್ಟು ತೂಗುತ್ತದೆ.”
ಅದೇ ಸಮಯದಲ್ಲಿ ಆನೆ; ಗಾಳಿಗೆ ಅನಿಸುತ್ತದೆ, ಕಂಪಿಸುತ್ತಾ ಮೇಲೇರತೊಡಗಿತು. ಗಾಳಿ ಮತ್ತಷ್ಟು ಜೋರಾಗಿ ಬೀಸತೊಡಗಿತು. ಆನೆ ಸ್ವಲ್ಪ ಹೊತ್ತು ಗಾಳಿಯಲ್ಲಿ ಓಲಾಡುತ್ತಾ ಮತ್ತೊಮ್ಮೆ ಜೋರಾಗಿ ಗಾಳಿ ಬೀಸಿದಾಗ ನಿಧಾನಕ್ಕೆ ಮೇಲೇರತೊಡಗಿ ಬಾನಿನಲ್ಲಿ ಆನೆಯ ದೊಡ್ಡದಾದ ನೆರಳಿನಂತೆ ಕಾಣಿಸತೊಡಗಿತು. ಎಲ್ಲರೂ ಅಚ್ಚರಿಯಿಂದ ಮೇಲೆ ನೋಡತೊಡಗಿದರು. ಆನೆಯ ಕಂಬಗಳಂತ ಕಾಲುಗಳು, ಅದರ ದೊಡ್ಡ ಹೊಟ್ಟೆ, ಸೊಂಡಿಲು ಸ್ಪಷ್ಟವಾಗಿ ಕಾಣಿಸುತ್ತಿದ್ದವು. ಮತ್ತೆ ಗಾಳಿ ಬೀಸಿತು. ಎಲ್ಲರೂ ನೋಡನೋಡುತ್ತಿದ್ದಂತೆ ಆನೆ ಮೃಗಾಲಯದ ಆವರಣದ ಮರಗಳ ಮೇಲಿನಿಂದ ಹೊರಕ್ಕೆ ತೇಲಿ ಹೋಗಿ ಕಣ್ಣಿಗೆ ಕಾಣದಾಯಿತು. ಪಂಜರದೊಳಗಿದ್ದ ಕೋತಿಗಳೂ ಸಹ ಆಶ್ಚರ್ಯದಿಂದ ಆಕಾಶವನ್ನೇ ನೋಡುತ್ತಿದ್ದವು.
ಕೊನೆಗೆ ಆನೆಯು ನೆರೆಯ ಸಸ್ಯೋದ್ಯಾನದಲ್ಲಿ ಸಿಕ್ಕಿತು. ಮುಳ್ಳು ಕಳ್ಳಿ ಗಿಡದ ಮೇಲೆ ಬಿದ್ದು, ರಬ್ಬರ್ ಮೈಗೆ ತೂತುಗಳಾಗಿ ಅದರೊಳಗಿನ ಅನಿಲ ಸೋರಿಹೋಗಿತ್ತು.
ಇದನ್ನು ನೋಡಿದ ಆ ಊರಿನ ಮಕ್ಕಳು ಭ್ರಮನಿರಸನಗೊಂಡು ಓದುವುದನ್ನು ಬಿಟ್ಟು ಪೋಲಿಗಳಾದರು. ಬಹಳಷ್ಟು ಹುಡುಗರು ಕುಡಿಯುವುದನ್ನು ಕಲಿತು ನಶೆಯಲ್ಲಿ ಯಾರುಯಾರದೋ ಮನೆಗಳಿಗೆ ಕಲ್ಲು ಬೀಸುವುದು ಇತ್ಯಾದಿ ಮಾಡುತ್ತಿದ್ದಾರಂತೆ. ಆನೆಗಳ ಮೇಲೆ ಅವರು ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ.
ಜೆ ವಿ ಕಾರ್ಲೊ
ಹಾಸನದ ನಿವಾಸಿ. ಕಟ್ಟಡ ನಿರ್ಮಾಣ ವೃತ್ತಿಯಲ್ಲಿದ್ದವರು. ಓದಿನ ಜೊತೆಗೆ ಇಂಗ್ಲಿಷಿನಿಂದ ಕನ್ನಡ, ಕೊಂಕಣಿಗೆ ಅನುವಾದಗಳನ್ನು ಮಾಡುತ್ತಾ ಬಂದಿದ್ದಾರೆ. ಕೊಂಕಣಿಗೆ ಅನುವಾದಿಸಿದ Pascal Nazareth ಅವರ Gandhi’s Outstanding Leadership ಪುಸ್ತಕದ ಅನುವಾದಕ್ಕಾಗಿ ‘ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ’ ಪುರಸ್ಕಾರ ಲಭಿಸಿದೆ. ಕನ್ನಡದ ಓದುಗರನ್ನು ಸೆಳೆದ ಮತ್ತೆರಡು ಅನುವಾದಗಳೆಂದರೆ ರೊಆಲ್ಡ್ ದಾಹ್ಲ್ ಸಣ್ಣ ಕತೆಗಳ ಅನುವಾದ ಅನಿರೀಕ್ಷಿತ ಕಥೆಗಳು ಹಾಗೂ ಜಾಕ್ ಲಂಡನ್ನ ದಿ ಕಾಲ್ ಆಫ್ ದಿ ವೈಲ್ಡ್.
ಇದನ್ನೂ ಓದಿ …
ಒಂದು ಊರಿತ್ತು, ಅಲ್ಲಿ ಎಲ್ಲವನ್ನೂ ನಿಷೇಧಿಸಲಾಗಿತ್ತು
ಪ್ರಸಿದ್ಧ ಇಟ್ಯಾಲಿಯನ್ ಬರಹಗಾರ ಈಟಾಲೊ ಕಾಲ್ವೀನೊ (Italo Calvino, 15 October 1923 – 19 September 1985) ಅವರ Numbers in the Dark ಕಥಾಸಂಕಲನದ ಒಂದಷ್ಟು ನೀತಿಕಥೆಗಳನ್ನು (fables) ಸಂಕೇತ ಪಾಟೀಲ ಅನುವಾದಿಸಿ ಅವರ ಒಟ್ಟಾರೆ ಸಾಹಿತ್ಯದ ಆಶಯ ಹಾಗೂ ಕಥೆಗಳಿಗೆ ಪೂರಕವಾದ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.