ಯುದ್ಧವೇನೆಂದು ತಿಳಿಯದ ಫ್ರಾನ್ಜ಼್ ಮಾರ್ಕ್ನ ನೀಲಿ ಕುದುರೆಗಳು
ಚೈತ್ರಾ ಶಿವಯೋಗಿಮಠರ 'ಆಕಾಶ ನದಿ ಬಯಲು', ಮೇರಿ ಆಲಿವರ್ ಕವಿತೆಗಳು
ಅಮೆರಿಕನ್ ಕವಿ ಮೇರಿ ಆಲಿವರ್ ಅವರ ಹಲವು ಕವಿತೆಗಳನ್ನು ಯುವ ಕವಿ ಚೈತ್ರಾ ಶಿವಯೋಗಿಮಠ ಅವರು ಆಯ್ದು ಅನುವಾದಿಸಿದ್ದಾರೆ. ಆಕಾಶ ನದಿ ಬಯಲು ಎಂಬ ಈ ಕವಿತೆಗಳ ಸಂಕಲನವು ಹಲಸಂಗಿಯ ಸುಗಮ ಪುಸ್ತಕದಿಂದ ಪ್ರಕಟವಾಗುತ್ತಿದ್ದು ಇದೇ ರವಿವಾರ, ಏಪ್ರಿಲ್ 27, 2025ರಂದು ಬಿಡುಗಡೆಯಾಗಲಿದೆ. ಮೇರಿ ಆಲಿವರ್ ಲಹರಿಯ ಗದ್ಯರೂಪ ಮತ್ತು ಎರಡು ಅನುವಾದಿತ ಪದ್ಯಗಳು ನಿಮ್ಮ ಓದಿಗೆ.
ಅಂದು ಇಂದು ಎಂದೆಂದೂ ಮೇರಿ ಜೊತೆಗೆ...
ಮೇರಿ ಆಲಿವರ್ (Mary Oliver, ಸೆಪ್ಟೆಂಬರ್ 10, 1935 – ಜನವರಿ 17, 2019) ಮನುಷ್ಯ ಲೋಕ ಮತ್ತು ಪ್ರಾಣಿ-ಪಕ್ಷಿ-ಗಿಡ-ಮರಗಳ ಲೋಕದ ನಡುವೆ ಕೊಂಡಿಯಂತಿರುವ ಕವಿ. ಕಾಡಿನಲ್ಲಿ ಓಡಾಡುತ್ತ ಚಿಕ್ಕ ಚಿಕ್ಕ ಸಂಗತಿಗಳಲ್ಲಿ ದೊಡ್ಡ ಅರ್ಥ ಹೇಳುವ, ಸರಳ ಹಾಗೂ ಸ್ಪಷ್ಟ ಭಾಷೆಯನ್ನು ಬಳಸುವ ಅಮೆರಿಕದ ಜನಪ್ರಿಯ ಕವಿ. ಪ್ರಚಾರ ಪ್ರಸಿದ್ಧಿಯಿಂದ ಗಾವುದ ದೂರವೇ ನಿಲ್ಲುವ ಇವರು ಅಮೆರಿಕದ ಕಾವ್ಯ ಜಗತ್ತಿನ ಅತ್ಯಂತ ಪ್ರಭಾವಶಾಲಿಯಾದವರು. ಈಶಾನ್ಯ ದೇಶಗಳ ಆಧ್ಯಾತ್ಮಿಕ ಜಗತ್ತಿನ ಆಳ ಪ್ರಭಾವವನ್ನು ಹೊಂದಿದವರು. ಕಾವ್ಯವಲ್ಲದೇ ಕಾವ್ಯಾತ್ಮಕ ಪ್ರಬಂಧಗಳನ್ನೂ ಬರೆದವರು. ಬಿನ್ನಿಂಗ್ಟನ್ ಕಾಲೇಜ್ ಸೇರಿದಂತೆ ಹಲವಾರು ವಿಶ್ವವಿದ್ಯಾಲಯಗಲ್ಲಿ ಕವಿತೆಯ ಕುರಿತು ಪಾಠ ಮಾಡಿದವರು. ಅವರಿಗೆ ಪುಲಿಟ್ಜ಼ರ್ ಪ್ರಶಸ್ತಿ (American Primitive, 1984), ನ್ಯಾಶನಲ್ ಬುಕ್ ಅವಾರ್ಡ್ (New and Selected Poems Volume 1, 1992). ಲ್ಯಾನನ್ ಲಿಟರರಿ ಅವಾರ್ಡ್ (1998), ಪೋಎಟ್ರಿ ಸೊಸೈಟಿ ಆಫ್ ಅಮೆರಿಕ ಅವಾರ್ಡ್, ಹಲವಾರು ಗೌರವ ಡಾಕ್ಟಾರೇಟುಗಳು ಹಾಗೂ ಚಿನ್ನದ ಪದಕಗಳು ಲಭಿಸಿವೆ.

ಅಂದು ಇಂದು ಎಂದೆಂದೂ . . .
ಆದರೆ ಅವೆಲ್ಲಕ್ಕೂ ಮುಖ್ಯವಾಗಿ ಮೇರಿ ಆಲಿವರ್ ನಮಗೆ ಅಂದು ಇಂದು ಎಂದೆಂದೂ ಪ್ರಸ್ತುತವಾಗುವುದು ಹೇಗೆ ಎಂದು ಅರ್ಥೈಸಿಕೊಳ್ಳಲು ನಾವು ನಮ್ಮನ್ನೇ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು ಮತ್ತು ಅದಕ್ಕೆ ನಮ್ಮವೇ ಉತ್ತರಗಳನ್ನು ಕಂಡುಕೊಳ್ಳಬೇಕು. ಮೇರಿ ಮಾಡಿದ್ದು ಅದನ್ನೇ.
ತಿಳಿವಳಿಕೆಯನ್ನು ಕೇವಲ ಪದಗಳಲ್ಲಿ ಬರೆದಿಡೋಕೆ ಸಾಧ್ಯವೇ?
ಮನಸಿನ ಸಂಭ್ರಮವನ್ನು ಹಿಡಿದಿಡೋಕೆ ಸಾಧ್ಯವೇ?
ನೋವನ್ನು ನಿಧಾನವಾಗಿ ನಮಗೆ ಬೇಕಾದಷ್ಟು ಸಮಯ ತೆಗೆದುಕೊಂಡು ಸುಮ್ಮನೇ ನೇವರಿಸಲು ಸಾಧ್ಯವೇ?
ಕವಿತೆಯೆಂದರೆ; ಲೋಕವನ್ನು ಅರಿಯಲು ಇರುವ ಕಾಲ್ಪನಿಕ ಬರವಣಿಗೆಯ ಒಂದು ತುಣುಕೇ?
…
ಮೇಲಿನ ಎಲ್ಲಾ ಪ್ರಶ್ನೆಗಳ ಉತ್ತರ – 'ಹೌದು'
'ಇಲ್ಲ' - ಅಂತಾಗಿದ್ದರೆ ಕಾವ್ಯವು ನಿಗೂಢವೂ ಬಡಿದೆಬ್ಬಿಸುವಂಥದ್ದೂ ಆದರೂ ಆಪ್ತವೆನಿಸುತ್ತಿರಲಿಲ್ಲ. ಅನುಭಾವವಾಗದ, ಬಾಳದ, ಭೂತದ ಮಬ್ಬಿನಲಿ ಸೊರಗಿ ಹೋದ ಕಲಾಪ್ರಕಾರವಾಗಿ ಹೋಗುತ್ತಿತ್ತು. ಶತಮಾನಗಳ ಹಿಂದೆ ಬರೆದ ಪದ್ಯಗಳು ಸದಾ ಬೆಳಗುವ ಭಾವದೀಪ್ತಿಯಾಗದೇ ಬರಿಯ ಪಳೆಯುಳಿಕೆಗಳಾಗಿ, ಅಡಿಟಿಪ್ಪಣಿಗಳಾಗಿ, ಇಲ್ಲವೇ ಕೇವಲ ಕೌತುಕದ ವಸ್ತುಗಳಾಗಿ ಉಳಿದುಬಿಡುತ್ತಿದ್ದುವು. ಕವಿತೆಗೆ ಕಾಲದ ಹಂಗಿಲ್ಲ. ಅವು ಮಾನವ ಅಸ್ತಿತ್ವದ ಕುರಿತಾಗಿದ್ದರೆ ಮಾತ್ರ ಈ ಹೊಸ ಕಾಲದ ಜನರಿಗೆ ಇಷ್ಟವಾಗುತ್ತವೆ, ಅದರಲ್ಲೂ ಒಂಚೂರು ವಿಚಾರಶೀಲರಾದವರಿಗೆ ಮಾತ್ರ.
ಆ ಕಾರಣಕ್ಕೆ, ಶೆಲ್ಲಿ ಚಿರಯೌವ್ವನಿ; ಅವನ ವಯಸ್ಸು ಸದಾಕಾಲಕ್ಕೂ ಇಪ್ಪತ್ತೊಂಭತ್ತು. ಎಷ್ಟೋ ವರುಷಗಳಿಂದ ಬಾ… ಬಾ… ಎಂದು ಕರೆಯುತ್ತಲೇ ಇದ್ದಾನೆ. ಬಾನಾಡಿಯ ಕೀರಲು ಹಾಡು ಕೇಳಲು. ಆ 'ಅಲೌಕಿಕ ಆನಂದ'ದ ಕಡೆಗೆ ತೇಲಿ ಹೋಗಲು. ಅರಿಸ್ಟಾಟಲ್, ಮ್ಯಾಥ್ಯೂ ಆರ್ನಲ್ಡ್ — ಅಷ್ಟೇ ಅಲ್ಲ, ಕವಿತೆಯು ಸತ್ಯ ಮತ್ತು ವಿಚಾರಶೀಲತೆ ಎಂದು ತಿಳಿದ ಎಲ್ಲರೂ ಹೇಳುವುದು ಇದನ್ನೇ. ಕಾವ್ಯವು ವಿಚಾರವನ್ನು ಉತ್ಕೃಷ್ಟ ಭಾಷೆಯಲ್ಲಿ ತೆರೆದಿಡುವಂಥದ್ದು, ಚಲನಶೀಲತೆಯನ್ನು ಹೊಂದಿರುವಂಥದ್ದು. ಅಂಥ ಕವಿತೆ ಹಳತೇ ಆಗಿದ್ದರೂ ಈಗಲೂ ಅಷ್ಟೇ ಶ್ರೀಮಂತ. ಎಷ್ಟೆಂದರೆ, ಜಾರ್ಜ್ ಹರ್ಬರ್ಟ್ ಹುಡುಗನಾಗಿದ್ದಾಗ ಅಡುಗೆ ಮನೆಯ ಕಟ್ಟೆಯ ಮೇಲೆ ಕೂತು ಇಬ್ಬರು ವಯಸ್ಕರು, ತನ್ನ ತಾಯಿ ಮತ್ತವಳ ಗೆಳೆಯ ಜಾನ್ ಡನ್ನ್ ಮಾತು ಕೇಳುವಾಗಿನಷ್ಟು. ವಿಲಿಯಂ ಶೇಕ್ಸ್ಪಿಯರ್ ಎಂಬ ಮನುಷ್ಯ ಹದಿನಾಲ್ಕು ಸಾಲಿನ ಸುನೀತವೊಂದನ್ನು ಪದೇಪದೇ ತಿದ್ದಿ, ಪ್ರೇಮದ ಅಮಲನ್ನು ಹಿಡಿದಿಡುವಷ್ಟೇ ಶ್ರೀಮಂತವಾದುದು …
ಅಂದು ಇಂದು ಎಂದೆಂದೂ … ಏನೂ ಬದಲಾಗಿಲ್ಲ …
ಈ ಲೋಕದಲ್ಲಿ ಯಾವ ಕವಿಯೂ ಬದುಕನ್ನು ಅವಮಾನಿಸಲು ಒಳ್ಳೆಯ ಆದರ್ಶಗಳೊಂದಿಗೆ ರಾಜಿಯಾಗಲು ಆಸ್ತಿಕ ನಂಬಿಕೆಗಳನ್ನ ಧಿಕ್ಕರಿಸಲು ಭರವಸೆ ಇಲ್ಲವೇ ಕೃತಜ್ಞತೆಯ ಅರ್ಥ ಕೆಡಿಸಲು ಮೃದುತ್ವದ ವಿರುದ್ಧ ವಾದಿಸಲು ಪ್ರೇಮಕ್ಕಿಂತ ಮೊದಲು ದ್ವೇಷ ಮೆರೆಸಲು ಮನುಷ್ಯನ ಅಲ್ಪ ಗುಣಗಳನ್ನು ಎತ್ತಿ ಆಡಿ ಹೊಗಳಲು ಕವಿತೆಯನ್ನು ಬರೆದಿಲ್ಲ ಯಾರೊಬ್ಬರೂ ಬರೆದಿಲ್ಲ, ಎಂದೆಂದಿಗೂ ...
ಖರೆಯೆಂದರೆ, ಕವಿಯು ತನ್ನ ಸ್ವಚ್ಚಂದದಲ್ಲೂ ಖೈದಿನಲ್ಲೂ; ಆರೋಗ್ಯದಲ್ಲೂ ಅನಾರೋಗ್ಯದಲ್ಲೂ; ಕೇಳುಗರಿದ್ದರೂ ಇಲ್ಲದಿದ್ದರೂ; ತನ್ನ ಜೀವನವಿಡೀ ಬದುಕು, ಧ್ಯಾನ, ವಿಚಾರ, ಪ್ರಾಮಾಣಿಕತೆ, ಮಾನವ ಪ್ರೇಮವನ್ನು ಕಣ್ಣರಳಿಸಿ ನೋಡುತ್ತಾ ಉಳಿದುಬಿಡುತ್ತಾಳೆ. ಇದೆಲ್ಲವನ್ನು ಕವಿಯು ಉನ್ಮತ್ತಳಾಗಿ, ಗಂಭೀರವಾಗಿ, ರೂಪಕ ಉಪಮೆಗಳಿಂದ ಅಲಂಕರಿಸಿ, ಲಯಬದ್ಧವಾಗಿ ಮಾಡುತ್ತ ಹೋಗುವವಳು. ಯಾವುದೇ ಪ್ರಶಸ್ತಿ, ಪುರಸ್ಕಾರ, ಬಿರುದು, ಸನ್ಮಾನಗಳ ಹಂಗಿಲ್ಲದೇ, ಪ್ರತಿಕ್ರಿಯೆಗಳಿಗಾಗಿ ಹಾತೊರೆಯದೆ ಮಾಡುವವಳು. ಇದು ಬೇಕಾಗಿಯೋ ಬೇಕಿಲ್ಲದೆಯೋ ಸಹನೆಯಿಂದಲೋ, ಒಮ್ಮೊಮ್ಮೆ ಅಸಹನೆಯ ಹೊಗೆಯಲ್ಲಿಯೋ ಎಲ್ಲಾ ಜೀವಿಗಳಿಗಾಗಿ — ಕಡೆಗೆ ಸೃಷ್ಟಿಕರ್ತನಿಗಾಗಿಯಾದರೂ ಮಾಡುವಂಥ ಕಾವ್ಯಕೃಷಿ. ಆ ಕಾವ್ಯಕೃಷಿಯ ಎಲ್ಲ ದಸ್ತಾವೇಜು ಅದರ ಎಲ್ಲ ಬಗೆಯ ದಾಖಲಾತಿ ಪ್ರತಿಯೊಬ್ಬರಿಗೂ ಸೇರಿದ್ದು. ನನ್ನನ್ನೂ, ನಿನ್ನನ್ನೂ ಸೇರಿದಂತೆ …
ಮೇರಿ ಇದನ್ನು ತೀವ್ರವಾಗಿ ನಂಬಿದವಳು. ಹೀಗಾಗಿ ಅವಳು ಕವಿತೆಗಳನ್ನಷ್ಟೇ ಅಲ್ಲದೇ ಬದುಕಿನ ಕುರಿತಾದ, ಕಾವ್ಯದ ಕುರಿತಾದ, ಬರವಣಿಗೆಯ ಪ್ರಕ್ರಿಯೆಯ ಕುರಿತಾದ ಗದ್ಯವನ್ನು ಕೂಡ ಅತ್ಯಂತ ಕಾವ್ಯಾತ್ಮಕವಾಗಿ ಬರೆದವಳು.
ಇನ್ನೀಗ ಕನ್ನಡಕ್ಕೆ ಬಂದ ಮೇರಿ ಆಲಿವರ್ಳ ಎರಡು ಪದ್ಯಗಳು ನಿಮ್ಮ ಓದಿಗಾಗಿ.
ಫ್ರಾಂಜ್ ಮಾರ್ಕನ ನೀಲಿ ಕುದುರೆಗಳು
ನಾಲ್ಕು ನೀಲಿ ಕುದುರೆಗಳ
ಪೈಂಟಿಂಗ್ ನನ್ನ ಕೈಗೆ ಸಿಕ್ಕಿತು
ಆಶ್ಚರ್ಯವಿಲ್ಲಾ
ಅದರಲ್ಲೊಂದು ಕುದುರೆ ನನ್ನ ಕಡೆ ನಡೆದು ಬಂತು
ನೀಲಿ ಮೂಗನ್ನು ನನ್ನ ಮೂಗಿಗೆ ಉಜ್ಜಿತು
ನೀಲಿ ನೀಳ್ಗೂದಲ ಕುತ್ತಿಗೆಯ ಸುತ್ತ ಬಾಹುಗಳಲಿ ಬಳಸುವೆ
ಜುಟ್ಟು ಹಿಡಿಯದೇ ಸುಮ್ಮನೆ ಬೆರಳಾಡಿಸುವೆ
ಹಿತವೆನಿಸುವುದು ಅವನಿಗೆ
ಇನ್ನಷ್ಟು ನೇವರಿಸಿಕೊಳ್ಳುವನು
ಫ್ರಾಂಜ್ ಮಾರ್ಕ್ ಸಣ್ಣ ವಯಸ್ಸಿನಲ್ಲಿ ತೀರಿ ಹೋದ
ಬಾಂಬು ಚೂರುಗಳನು ಹೊತ್ತು
ತಲೆ ಬುರುಡೆಯೊಳಗೆ ಸಿಡಿದು ಚೂರಾದ
ಆ ನೀಲಿ ಕುದುರೆಗಳಿಗೆ ಯುದ್ಧ
ಅಂದರೇನೆಂದು ತಿಳಿ ಹೇಳುವ ಬದಲಿಗೆ
ನಾನು ಸತ್ತು ಹೋಗಬೇಕು
ಕೇಳಿದರೆ, ಹೆದರಿ ತಲೆ ತಿರುಗಿ ಬೀಳುತ್ತಿದ್ದವೇನೋ
ಇಲ್ಲವೇ ನಂಬುವುದಕ್ಕೇ ಆಗದೆ ಬೆದರುವವು
ನಿನಗೆ ಹೇಗೆ ಥ್ಯಾಂಕ್ಸ್ ಹೇಳಬೇಕೋ ಗೊತ್ತಾಗುತ್ತಿಲ್ಲ
ಫ್ರಾಂಜ್ ಮಾರ್ಕ್
ಈ ಲೋಕ ಇನ್ನು ಮೇಲಾದರೂ ಚೂರು ಕರುಣಾಳು ಆಗಲಿ
ಚಂದಗೊಳಿಸುವ ಆಸೆಯಿದ್ದರೆ
ಅದು ನಮ್ಮ ಒಬ್ಬೊಬ್ಬರೊಳಗೂ
ಇರುವ ದೈವಾಂಶಕ್ಕೆ ಸಾಕ್ಷಿ
ಈಗ ನಾಲ್ಕೂ ಕುದುರೆ ಹತ್ತಿರ ಬಂದಿವೆ
ನನ್ನ ಮುಖಕ್ಕೆ ಮುಖವಿಟ್ಟು
ಏನೋ ಗುಟ್ಟು ಹೇಳುವ ಹಾಗೆ
ಅವು ಮಾತನಾಡಲಿ ಅಂತ ಬಯಸುವುದಿಲ್ಲ
ಇಷ್ಟು ಚಂದವಾಗಿರುವುದೇ ಸಾಕಲ್ಲವೇ
ಇದರ ಹೊರತು
ಮತ್ತಿನ್ನೇನು ಹೇಳಬಹುದು ಆ ನೀಲಿ ಕುದುರೆಗಳು?
ಟಿಪ್ಪಣಿ: ಫ್ರಾಂಜ್ ಮಾರ್ಕ್ (1880-1916) ಜರ್ಮನ್ ಕಲಾವಿದ. ಈತ ಪ್ರಾಣಿಗಳ ಚಿತ್ರವನ್ನು ಅತ್ಯಂತ ಭಾವನಾತ್ಮಕವಾಗಿ ಅದ್ಭುತ ಬಣ್ಣ ಸಂಯೋಜನೆಯೊಂದಿಗೆ ಚಿತ್ರಿಸುತ್ತಿದ್ದ ಕಲಾವಿದ. ಬ್ಲೂ ಹಾರ್ಸ್ ಈತನ ಜಗತ್ಪ್ರಸಿದ್ಧ ಕಲಾಕೃತಿ. ೩೬ನೇ ವಯಸ್ಸಿನಲ್ಲೇ ಯುದ್ಧದಲ್ಲಿ ಜಖಂಗೊಂಡು ಸಾವಿಗೀಡಾದನು.
ಪುಟ್ಟ ಗುಮ್ಮ
ಆ ಮುದ್ದು
'ಪುಟ್ಟ ಗುಮ್ಮ' ಕವಿತೆ
ಮಾನಸೀಕ ಮಹರಾಯ
ಬಹಳ ಖಾಯಾಸಿನಿಂದ
ಸೇಬು ತಿನ್ನು ಅಂತ ಕೊಟ್ಟರೆ
ಬಾಡೂಟ ಬೇಡುತಾನೆ
ತಣ್ಣಗೆ ಹೊಳೆದಂಡೆಗುಂಟ
ನಡೆಯಬೇಕೆಂದರೆ
ಇವನಿಗೋ ತಾನು ತೊಟ್ಟ ಅಂಗಿಯೆಲ್ಲ
ಕಳಚಿ ನೀರೊಳಗೆ ಧುಡುಂ ಎಂದು
ಸುರಂಗ ಹಾಕಬೇಕೆನ್ನುವ ಹಠ
ಸಣ್ಣ ಸಣ್ಣ ಪದ ಬಳಸಿ
ಮುಖ್ಯ ಅರ್ಥ ಕೊಡಬೇಕೆಂದಾಗೆಲ್ಲಾ
ಅದು, ನಿಘಂಟನ್ನೇ ಕಿರುಚುತ್ತಾ
ಈ ಪದಗಳಿಗೂ
ಈಗಲೇ ಅವಕಾಶ ಕೊಡಬೇಕು ಅನ್ನುತ್ತೆ
ಕೊನೆಗೆ ಧನ್ಯವಾದ
ಹೇಳಿ ಪದ್ಯ ಮುಗಿಸಬೇಕೆಂದಾಗೆಲ್ಲಾ
ತನ್ನ ಕರಡಿ ಪಾದಗಳಿಂದ
ಕೋಣೆ ಸುತ್ತ ಕೇಕೇ ಹಾಕಿ ಥಕಥಕಥಕ ಕುಣಿದು
ಮತ್ತಷ್ಟು ಸಿಟ್ಟು ತರಿಸುವುದು
ಒಮ್ಮೊಮ್ಮೆ
ನಿನ್ನ ಬಗ್ಗೆ ಆಲೋಚನೆ ಮಾಡುತ್ತಾ
ಮುಖದ ಮೇಲೆ ಅನಾಯಾಸ ಮಂದಹಾಸ ಕಾಣುವಾಗ
ಅದು ತೆಪ್ಪಗೆ ಕೂರುತ್ತೆ
ಗಲ್ಲಕ್ಕೆ ಒಂದು ಪಾಂಜಾ ಒತ್ತಿ
ಸುಮ್ಮನೆ ಆಲಿಸುತ್ತಾ ಕೂರುತಾನೆ
ಕೃತಿ: ಆಕಾಶ ನದಿ ಬಯಲು (ಮೇರಿ ಆಲಿವರ್ ಕವಿತೆಗಳು)
ಆಯ್ಕೆ ಮತ್ತು ಅನುವಾದ : ಚೈತ್ರಾ ಶಿವಯೋಗಿಮಠ
ಪುಟಗಳು: 108
ಬೆಲೆ: ರೂ 150
ಮುಖಪುಟ ಚಿತ್ರ: ಜಿ. ಗೋಪಾಲಕೃಷ್ಣನ್
ವಿನ್ಯಾಸ, ಒಳಪುಟ ಚಿತ್ರಗಳು: ಲಕ್ಷ್ಮಣ್ ಬಾದಾಮಿ
ಪ್ರಕಾಶನ: ಸುಗಮ ಪುಸ್ತಕ, ಹಲಸಂಗಿ
ಚೈತ್ರಾ ಶಿವಯೋಗಿಮಠ
ಚೈತ್ರಾ ಶಿವಯೋಗಿಮಠ ಎಂ.ಟೆಕ್ ಪದವೀಧರರು. ಕಾವ್ಯ, ಅನುವಾದದ ಸೂಕ್ಷ್ಮ ಮಟ್ಟುಗಳ ಮೂಲಕ ಇವರ ಕವಿತೆಗಳು ಗಮನ ಸೆಳೆದಿವೆ. 'ಕೆಂಡಸಂಪಿಗೆ'ಯಲ್ಲಿ ಪ್ರಕಟವಾದ 'ಲೋಕ ಸ್ತ್ರೀ-ಕಾವ್ಯ ಲಹರಿ' ಸರಣಿ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಕಾವ್ಯ ಹಾಗೂ ಅನುವಾದ ಕ್ಷೇತ್ರದಲ್ಲಿ ಒಂದು ನವಿರಾದ ಭಾವ ತಂತು, ನವೀನ ಶೈಲಿಯ ಜೀವಜಾಲದ ಸೂಕ್ಷ್ಮತೆ ಮತ್ತು ಬದುಕಿನ ವಿವಿಧ ಚಲನೆಯನ್ನು ಕಾವ್ಯದ ಮೂಲಕ ಓದುಗರ ಹೃದಯಕ್ಕೆ ಹತ್ತಿರ ತಂದಿರುವ ಬಗೆಯಲ್ಲಿ ಕಾವ್ಯಾಸಕ್ತರು ಗುರುತಿಸಿದ್ದಾರೆ. ಪೆಟ್ರಿಕೋರ್ (2022) ಕವನ ಸಂಕಲನ, ಆಕಾಶ ನದಿ ಬಯಲು (2025) ಮೇರಿ ಆಲಿವರ್ ಆಯ್ದ ಕವಿತೆಗಳ ಅನುವಾದ ಪ್ರಕಟಿತ ಕೃತಿಗಳು. ಇವರ ಕವಿತೆಗಳು ಉರ್ದು, ಇಂಗ್ಲಿಷ್ ಗೆ ಅನುವಾದಗೊಂಡಿವೆ. ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ, ಪ್ರಾರ್ಥನಾ ಸಾಹಿತ್ಯ ಪುರಸ್ಕಾರ, ಅಮ್ಮ ಪ್ರಶಸ್ತಿ, ಅವ್ವ ಪುಸ್ತಕಾಲಯದ ವಾರ್ಷಿಕ ಪುಸ್ತಕ ಪ್ರಶಸ್ತಿ ಇವರಿಗೆ ಸಂದಿವೆ.
ಇದನ್ನೂ ಓದಿ …
ಸಂತೆಯ ನೆನಪು ತರುವ 'ಭಗ್ನ' ಕವಿತೆಗಳು
ಕತೆಗಾರ ಶಶಿ ತರೀಕೆರೆ ಅವರ ಚೊಚ್ಚಲ ಕವನ ಸಂಕಲನ ಪ್ಯೂಪಾ ಬಿಡುಗಡೆಗೆ ಸಿದ್ಧವಾಗಿದೆ. ಶಶಿ ತಮ್ಮದೇ ಪ್ರಕಾಶನ, ಅಲರು ಪುಸ್ತಕದಿಂದ ಇದನ್ನು ಹೊರತರುತ್ತಿದ್ದಾರೆ. ಅವರ ಕವಿತೆಗಳನ್ನು ಓದಿದ್ದ ಸಂದರ್ಭದಲ್ಲಿ ಕೆ ವಿ ತಿರುಮಲೇಶರು ಬರೆದಿದ್ದ ಮಾತುಗಳು ಇಲ್ಲಿವೆ. ಇವು ಸಾಮಾನ್ಯ ಮುನ್ನುಡಿಗಳಂತೆ ಕವಿಯ ಅಥವಾ ಅವರ ಕವಿತೆಗಳ ಕುರಿತೇ ಬರೆದ ಮಾತುಗಳಲ್ಲ; ಅಥವಾ ಅವುಗಳ ಕುರಿತಷ್ಟೇ ಬರೆದುವಲ್ಲ. ತಿರುಮಲೇಶರು ಮನುಷ್ಯನ, ಅದರಲ್ಲೂ ಕವಿಯ 'ನಿರುಪಾಯ'…