ಕತೆಗಾರ ಶಶಿ ತರೀಕೆರೆ ಅವರ ಚೊಚ್ಚಲ ಕವನ ಸಂಕಲನ ಪ್ಯೂಪಾ ಬಿಡುಗಡೆಗೆ ಸಿದ್ಧವಾಗಿದೆ. ಶಶಿ ತಮ್ಮದೇ ಪ್ರಕಾಶನ, ಅಲರು ಪುಸ್ತಕದಿಂದ ಇದನ್ನು ಹೊರತರುತ್ತಿದ್ದಾರೆ. ಅವರ ಕವಿತೆಗಳನ್ನು ಓದಿದ್ದ ಸಂದರ್ಭದಲ್ಲಿ ಕೆ ವಿ ತಿರುಮಲೇಶರು ಬರೆದಿದ್ದ ಮಾತುಗಳು ಇಲ್ಲಿವೆ. ಇವು ಸಾಮಾನ್ಯ ಮುನ್ನುಡಿಗಳಂತೆ ಕವಿಯ ಅಥವಾ ಅವರ ಕವಿತೆಗಳ ಕುರಿತೇ ಬರೆದ ಮಾತುಗಳಲ್ಲ; ಅಥವಾ ಅವುಗಳ ಕುರಿತಷ್ಟೇ ಬರೆದುವಲ್ಲ. ತಿರುಮಲೇಶರು ಮನುಷ್ಯನ, ಅದರಲ್ಲೂ ಕವಿಯ 'ನಿರುಪಾಯ' ಸ್ಥಿತಿಯನ್ನು ಧೇನಿಸುತ್ತ ತಮ್ಮ ಅನನ್ಯ ಶೈಲಿಯಲ್ಲಿ ‘ಭಗ್ನತೆ’ಯು ಅನಿವಾರ್ಯ ಗುಣವಾದ ಈ ಕಾಲದ ಕವಿತೆಗಳಿಗೊಂದು ಭಾಷ್ಯ ಬರೆದಿದ್ದಾರೆ. ಇದೊಂದು ಅಭ್ಯಾಸಯೋಗ್ಯ ಬರೆಹ.
ನನಗೆ ಗೊತ್ತಿರದ ವಿದ್ಯೆಗಳಲ್ಲಿ ಕವಿತೆ ಬರೆಯುವುದು ಒಂದಾದರೆ ಮುನ್ನುಡಿ ಬರೆಯುವುದು ಇನ್ನೊಂದು—ಅದೂ ಕವನ ಸಂಕಲನಗಳಿಗೆ ಮುನ್ನುಡಿ ಬರೆಯುವುದೆಂದರೆ ನನ್ನ ಅಜ್ಞಾನ ದ್ವಿಗುಣವಾಯಿತೆಂದೇ ಲೆಕ್ಕ. ಆದರೂ ಒಲ್ಲೆ ಒಲ್ಲೆ ಎನ್ನುತ್ತಲೇ ನಾನು ಹಲವಾರು ಕವನಸಂಕಲನಗಳಿಗೆ ಮುನ್ನುಡಿ ಬರೆದಿದ್ದೇನೆ. ಹೆಚ್ಚಿನವೂ ಉದಯೋನ್ಮುಖ ಕವಿಗಳ ಕೃತಿಗಳು. ಇದರರ್ಥ ಈ ಕವನ ಸಂಕಲನಗಳು ಚೆನ್ನಾಗಿರಲಿಲ್ಲ ಎಂದಲ್ಲ; ವಾಸ್ತವದಲ್ಲಿ ಅವೆಲ್ಲವೂ ಉತ್ಕೃಷ್ಟವೇ ಆದ ಸಂಕಲನಗಳು. ಈಗ ಅಂಥದೊಂದು ಸಂಕಲನ ನನ್ನ ಮುಂದಿದೆ: ಶಶಿ ತರೀಕೆರೆ ಎಂಬ ಹೊಸ ಕವಿಯ “ಪ್ಯೂಪಾ.” ನಾನು ‘ನಿರುಪಾಯ’ನಾಗಿ ಕುಳಿತಿದ್ದೇನೆ. ಏನೆಂದು ಬರೆಯಲಿ, ಹೇಗೆ ಬರೆಯಲಿ? ಸಾಧಾರಣ ಗಾತ್ರದ ಒಟ್ಟು 60 ಕವಿತೆಗಳ ಸಂಕಲನ ಇದು.
ಇದರಲ್ಲಿ ವಿಶೇಷವಾದ: ‘ಕೆಮ್ಮು’ ಎಂಬ ಕವಿತೆಯಿದೆ, ಆದರೆ ಅದರಲ್ಲಿ ಕೆಮ್ಮಿನ ಬಗ್ಗೆ ಏನೂ ಇಲ್ಲ. ಕೆಮ್ಮಿನ ಸಂಗತಿ ಬೇರೆ ಎರಡು ಮೂರು ಕವಿತೆಗಳಲ್ಲಿ ಬರುತ್ತದೆ. ‘ರಾಟೆ’ಯೆಂಬ ಒಂದು ಕವಿತೆಯಿದೆ, ಅದರೆ ಅದು ರಾಟೆಯ ಕುರಿತಾಗಿ ಅಲ್ಲ, ರಾಟೆಯೊಂದು ಹೆಳೆಯಷ್ಟೆ. ಶಶಿಯವರ ಕವಿತೆಗಳು ಯಾತರ ‘ಕುರಿತಾಗಿ’ಯೂ ಅಲ್ಲ, ನೆಪವಾಗಿ ಅಷ್ಟೆ. ಆದ್ದರಿಂದಲೇ ಇಲ್ಲಿ (ಎ. ಕೆ. ರಾಮಾನುಜನ್ರ ‘ಹೊಕ್ಕುಳಲ್ಲಿ ಹೂವಿಲ್ಲ’ದಲ್ಲಿ ಹೊಕ್ಕುಳೂ ಇಲ್ಲ, ಹೂವೂ ಇಲ್ಲ!) ಇಂಥ ಕವಿತೆಗಳಲ್ಲಿ ವ್ಯಕ್ತ ಅವ್ಯಕ್ತದ ಕಡೆ ಸೂಚಿಸಬಹುದು, ಆದರೆ ತೋರಿಸುವುದಿಲ್ಲ. ಇಲ್ಲಿನ ‘ಮಂಚ’ ಕೂಡ ಮಂಚವನ್ನು ವರ್ಣಿಸುತ್ತಿದ್ದರೂ, ಅದು ಮಂಚದ ಬಗ್ಗೆ ಅಲ್ಲ, ಮಂಚದಲ್ಲಿ ಮಲಗುವ ಮನುಷ್ಯರ ಬಗ್ಗೆ. ಆದ್ದರಿಂದ ಇಂಥ ಕಡೆ ಒಂದು ರೀತಿಯ ಆಂತ್ರೋಪೋಮಾರ್ಫಿಸಂ (Anthropomorphism) ಕೆಲಸ ಮಾಡುವುದನ್ನು ಕಾಣಬಹುದು. ಪರೋಕ್ಷತೆ ಇಲ್ಲಿನ ಕಾವ್ಯಧರ್ಮ, ಪರೋಕ್ಷತೆ ಮತ್ತು ಪರವಶತೆ. ಇದು ಕನ್ನಡಿಯಲ್ಲಿ ಕಂಡ ಮುಖ ನಿಜವಾದ ಮುಖವೆಂದು ಭ್ರಮಿಸಿದ ಹಾಗೆ. ಅಲ್ಲದೆ ಮುಖವನ್ನು ಕಾಣುವ ಬಗೆ ಹೇಗೆ? ಒಂದೋ ಕನ್ನಡಿಯಲ್ಲಿ, ನೀರಿನಲ್ಲಿ, ಇಲ್ಲವೇ ಚಿತ್ರದಲ್ಲಿ—ಪರೋಕ್ಷವಾಗಿಯಲ್ಲದೆ ಬೇರೆ ದಾರಿಯಿಲ್ಲ. ತನ್ನ ನಿಜವಾದ ಮುಖವನ್ನು ವ್ಯಕ್ತಿ ಎಂದೂ ಕಾಣಲಾರ. ಕಾಣುವ ಅಥವಾ ಕಾಣುತ್ತೇನೆಂದು ಭ್ರಮಿಸುವ ಹೊರಜಗತ್ತಾದರೂ ಎಷ್ಟೊಂದು ನಿಜ ಎನ್ನುವ ಪ್ರಶ್ನೆ ಏಳುತ್ತದೆ. ನೇರವಾಗಿ ನೋಡಿದಾಗ ನಮಗೆ ಎಲ್ಲವೂ ಚಪ್ಪಟೆಯಾಗಿ ತೋರುತ್ತವೆ. ಮೂರನೆಯ ಆಯಾಮ ಗೋಚರಿಸಬೇಕಾದರೆ ಕೋನದಲ್ಲಿ ನೋಡುವುದು ಅಗತ್ಯವಾಗುತ್ತದೆ. ಈ ಕವಿ ಅದನ್ನು ಮಾಡುತ್ತಾರೆ. ಆಗ ನೇರವನ್ನು ಮುರಿಯಬೇಕಾಗುತ್ತದೆ. ಇಲ್ಲೊಂದು ಪ್ರಕ್ಷೇಪವಿದೆ; ಪ್ರಕ್ಷೇಪವೆಂದರೆ ಕತೆಗೆ ಕಟ್ಟುಕತೆ ಸೇರಿಸುವುದು, ಇಂಟರ್ಪೊಲೇಶನ್ (Interpolation). ಕತೆಯೇ ಕಟ್ಟುಕತೆಯಾಗಿರುತ್ತ, ಅದಕ್ಕೆ ಸೇರಿಸುವುದನ್ನಷ್ಟೆ ಕಟ್ಟುಕತೆಯೆಂದಾಗ ಕತೆ ಆಥೆಂಟಿಕ್, ಕಟ್ಟುಕತೆ ಕಲ್ಪನೆ ಎಂಬ ಭ್ರಮೆ ಬರುತ್ತದೆ. ಇದು ಮುಖವನ್ನು ಕನ್ನಡಿಯೊಳಗಿನಿಂದ ನೋಡಿದ ಹಾಗೆ! ಅಥವಾ ಹಾಗೆ ಅಂದುಕೊಳ್ಳುವುದು, ಕಲ್ಪಿಸುವುದು. ಈ ಕವಿ ಇಂಥಾದ್ದನ್ನು ಕವಿತೆಗಳಲ್ಲಿ ಮಾಡುತ್ತಾರೆ. ಅವು ‘ಕಟ್ಟುಕತೆ’ಗಳ ಒಂದು ಸೇತು ಇದ್ದ ಹಾಗೆ. ಒಂದರಿಂದ ಒಂದಕ್ಕೆ ನಾವು ಜಿಗಿಯಬೇಕು. ಎಲ್ಲೂ ಹೋಗುವುದಿಲ್ಲ, ಎಲ್ಲೂ ವಿರಮಿಸುವುದಿಲ್ಲ. ಅರ್ಧಕ್ಕೆ ನಿಂತ ಸೇತುವಿನ ಹಾಗೆ. ಸೆಳವು ನೋಡುವುದಕ್ಕೆ ಮಾಡಿದ್ದು. ಅಥವಾ ನೆರೆಯಲ್ಲಿ ಸೆಳೆದುಕೊಂಡು ಹೋದ್ದು. ಈ ‘ನಿರುಪಾಯ’ ಎಂಬ ಪದವನ್ನು ನಾನು ಶಶಿಯವರದೇ ಕವಿತೆಯೊಂದರಿಂದ ಎತ್ತಿಕೊಂಡದ್ದು. ಇದೇನೂ ಅಸಾಮಾನ್ಯವಾದ ಪದವಲ್ಲದಿದ್ದರೂ ಕವಿತೆಯ ಆಯಕಟ್ಟಿನ ಸ್ಥಳದಲ್ಲಿ ಬರುವುದರಿಂದ ಅದು ಎದ್ದು ಕಾಣುತ್ತದೆ. ನಾನದನ್ನು ಬಳಕೆ ಮಾಡದೆ ಹಲವು ಕಾಲವಾದರೂ, ಆ ಸ್ಥಿತಿಯಲ್ಲಿ ಯಾವತ್ತೂ ಇದ್ದೇನೆ: ನಾವೆಲ್ಲರೂ ಇಂಥ ಸ್ಥಿತಿಯಲ್ಲಿ ಇದ್ದೇ ಇರುತ್ತೇವೆ. ಮನುಷ್ಯನ ಅಸ್ತಿತ್ವಕ್ಕೆ ಒಡ್ಡಿದ ಸವಾಲು ಅದು. ಆದ್ದರಿಂದಲೇ ಕೈಗೊಂಡ ಕಾರ್ಯ ಅರ್ಧಕ್ಕೆ ನಿಲ್ಲುವುದು: ಅರ್ಧ ಸಂಕ, ಅರ್ಧ ಕವಿತೆ, ಅರ್ಧ ಅಂಗಿ. ನಿರುಪಾಯ ಎಂದರೆ ಜಗತ್ತಿನ ನಿವಾಸಿಗಳ ಒಂದು ಸ್ಥಿತಿ. ಈ ಪದವನ್ನು ಕಂಡೊಡನೆಯೇ ನನಗದನ್ನು ತಬ್ಬಿಕೊಳ್ಳಬೇಕೆನ್ನುವಷ್ಟು ಆಸೆಯಾಯಿತು. ನಾನಿಲ್ಲಿ ಸೂಚಿಸುತ್ತಿರುವುದು ‘ನಿರುಪಾಯ’ ಎಂಬ ಕವಿತೆಯನ್ನು, ಹಾಗೂ ಇಲ್ಲಿ ‘ನಿರುಪಾಯ’ನಾಗಿ ಕೂತವನು ಅಂಗಿಯೊಂದನ್ನು ಅರ್ಧ ಹೊಲಿದು, ಮುಗಿಸುವ ಮೊದಲೇ ನಿದ್ರೆಗೆ ಜಾರಿದ ದರ್ಜಿ. ಕವಿತೆಯಲ್ಲಿ ಈ ಅಂಗಿ ಕವಿತೆಗೆ ರೂಪಕವೂ ಆಗಿರುವುದು ವಿಶೇಷ. ದರ್ಜಿ ಕತ್ತರಿಸಿದ ಕಾರಣ ಅದು ಕುಂಟ ಕವಿತೆಯಾಗುತ್ತದೆ, ಮತ್ತು ಕೊನೆಗೊಂಡರೂ ಅಪೂರ್ಣವೇ ಆಗಿ ಉಳಿಯುತ್ತದೆ. ಈ ಮಧ್ಯೆ ಕವಿತೆ ಎಲ್ಲೆಲ್ಲೋ ಹೋಗಿ ಬೀಳುತ್ತದೆ, ಉದಾಃ ಜೇಡನ ಬಲೆಗೆ. ಅಲ್ಲೂ ಅದಕ್ಕೆ ಮೋಕ್ಷವಿಲ್ಲ. ಯಾಕೆಂದರೆ ದರ್ಜಿಗೆ ನಿದ್ದೆ ಬಂದಿದೆ. ಈ ನಿದ್ದೆ ಪರಮಾತ್ಮನ ಅನಂತ ನಿದ್ರೆಯ ಪ್ರತೀಕ. ಆತನೂ ನಿರುಪಾಯ. ಇನ್ನು ಕವಿಯ ಪಾಡೇನು?! ಇದು ಆಧುನಿಕ ಕವಿಯ ಅವಸ್ಥೆ.
ಇಷ್ಟು ಹೇಳಿ ನಾನೂ ದರ್ಜಿಯಂತೆ ಸುಸ್ತಾಗಿದ್ದೇನೆ. ಒಂದು ತರದ ಮಂಪರು ನನ್ನನ್ನು ಆವರಿಸಿದೆ, ಯಾವತ್ತೂ ಆವರಿಸಿದೆ. ನಾನು ಪೂರ್ತಿ ಎಚ್ಚರದಲ್ಲಿ ಇದ್ದುದೇ ಇಲ್ಲ ಎನಿಸುತ್ತದೆ. ಗೊತ್ತಿಲ್ಲ. ಆಧುನಿಕ ಯುಗ ಪೂರ್ತಿ ಎಚ್ಚರವನ್ನು ಅಪೇಕ್ಷಿಸುತ್ತದೆ. ಪೂರ್ತಿ ಎಚ್ಚರ ಎಂದರೆ ಪೂರ್ತಿ ರ್ಯಾಶನಲಿಸಂ. ರೊಮ್ಯಾಂಟಿಸಿಸಂನ ನಂತರದ ಯುಗ ಇದು. ಇಂಥಲ್ಲಿ ಕವಿತೆಗೇನು ಕೆಲಸ ಎಂದು ಕೇಳಬೇಕಾಗುತ್ತದೆ; ಕವಿತೆಗೆ ಮಾತ್ರವೇ ಅಲ್ಲ, ಒಟ್ಟು ಕಲಾಪ್ರಕಾರಗಳಿಗೆ. ಅವು ಪೂರ್ತಿ ರ್ಯಾಶನಲಿಸಂಗೆ ಅಡಿಯಾಳಾಗಿರುವುದು ಸಾಧ್ಯವಿಲ್ಲ, ಯಾಕೆಂದರೆ ಅದಕ್ಕೆ ಗದ್ಯವಿದೆ, ಪರಬಂಧವಿದೆ, ವಿಜ್ಞಾನವಿದೆ, ತತ್ವಜ್ಞಾನವಿದೆ. ಮಿತ್ ಹಾಗೂ ರೊಮ್ಯಾಂಟಿಕ್ ಯುಗಗಳಿಗೆ ಮರಳುವುದೂ ಸಾಧ್ಯವಿಲ್ಲ. ಎಪಿಕ್ ಕವಿಗಳು ಮಿತ್ನ್ನ ಕಾಪಾಡುವುದಕ್ಕೆ ಬರೆದರು; ರೊಮ್ಯಾಂಟಿಕ್ ಕವಿಗಳು ಭಾವನೆಯನ್ನು ಕಾಪಾಡುವುದಕ್ಕೆ ಬರೆದರು. ಇಂದಿನ ಕವಿ ಯಾಕೆ ಬರೆಯಬೇಕು? ಅಸ್ತಿತ್ವವನ್ನು ಕಾಪಾಡುವುದಕ್ಕೆ? ಕಲ್ಪನೆಯನ್ನು ಕಾಪಾಡುವುದಕ್ಕೆ? ರ್ಯಾಶನಲಿಸಂನ ಅತಿರೇಕಕ್ಕೆ ಪ್ರತ್ಯೌಷಧಿಯಾಗಿ? ಧ್ವನಿಯಿಲ್ಲದವರಿಗೆ ಧ್ವನಿಯಾಗಿ? ತಿಳಿಯದು. ಅಂತೂ ಇಂದಿನ ಕವಿತೆ ವ್ಯತ್ಯಸ್ಥವಾಗಿದೆ. ಬಹುತ್ವದ ಕಡೆ ಸಾಗಿದೆ, ಅದೂ ಸುಲಭದ ಮಾತಲ್ಲ. ಒಂದು ರೀತಿಯ ಭಗ್ನತೆ ಇಂದಿನ ಕಾವ್ಯವನ್ನು ವಿವರಿಸುತ್ತಿದೆ. “These fragments I have shored against my ruins” (T. S Eliot). ಆದ್ದರಿಂದ, ಅರ್ಥವೇನು ಎಂಬ ಪ್ರಶ್ನೆಯೇ ಅರ್ಥಹೀನವಾಗಿದೆ. ಹಾಗಿದ್ದರೆ ಕಾಣುವುದು ಭಗ್ನಗಳನ್ನು, ಚೂರುಪಾರುಗಳನ್ನು; ಅವುಗಳ ದೂಪೆ ಏನನ್ನು ತೋರಬಲ್ಲುದೋ ಅದನ್ನು. Ruins ಎನ್ನುವುದು ಮನ ಕಲಕುವ ಪದ. ಗೋಪಾಲಕೃಷ್ಣ ಅಡಿಗರ ಇಡೀ ಕಾವ್ಯ ಸೂಚಿಸುವುದು ಒಡೆದು ಬಿದ್ದ ಈ ಸೌಧವನ್ನು. ಇಂದಿನ ಕವಿ ಇಲ್ಲಿಂದ ಮುಂದುವರಿಯಬೇಕು. ಎಲ್ಲಿಗೆ ಎನ್ನುವುದು ಖಚಿತವಿಲ್ಲ. ಅಡಿಗರಿಗೆ ಖಚಿತವಿತ್ತು—ಮರೆತು ಹೋದ ಮಂತ್ರಗಳನ್ನು ಮತ್ತೆ ಸ್ಮೃತಿಗೆ ತರುವುದಕ್ಕೆ, ನಷ್ಟವಾದ ಸುವರ್ಣ ಯುಗವನ್ನು ಪುನರ್ ಸ್ಥಾಪಿಸುವುದಕ್ಕೆ. ಇಂದಿನ ಕವಿಗಳ ಮನಸ್ಸಿನಲ್ಲಿ ಇದು ಯಾವುದೂ ಇಲ್ಲ. ಶಶಿ ತರೀಕೆರೆ ಇಂಥವರಲ್ಲಿ ಒಬ್ಬರು, ಹಾಗೂ ಅವರ ಈ ಪ್ರಥಮ ಸಂಕಲನ ಅಣೆಗೆಳೆದ ಭಗ್ನತೆಗಳ ಒಂದು ರಾಸಿ. ಅವು ಯಾವುದರ ಭಗ್ನತೆಗಳು ಎಂಬುದನ್ನು ಅವರು ಹೇಳಲಾರರು—ಯಾಕೆಂದರೆ ಈಗಿನ ಕವಿಗಳಿಗೆ ಪೂರ್ವದ ತಥಾಕಥಿತ ಸುವರ್ಣ ಸಂಸ್ಕೃತಿಯ ಯಾವ ಕಲ್ಪನೆಯೂ ಇಲ್ಲ. ಕನ್ನಡ ಕಾವ್ಯದಲ್ಲಿ ಅದು ಬಹುಶಃ ಅಡಿಗರ ಜತೆಗೇ ಹೊರಟುಹೋಗಿದೆ. (ಅಡಿಗರಿಗಾದರೂ ಅಂಥದೊಂದು ‘ಸುವರ್ಣ ಯುಗ’ದಲ್ಲಿ ನಿಜಕ್ಕೂ ವಿಶ್ವಾಸವಿತ್ತೋ ತಿಳಿಯದು; ಅದೊಂದು ಕವಿಸಮಯವಾಗಿದ್ದರೂ ಇರಬಹುದು.)
ಈಗೇನು? ಮಹತ್ವಾಕಾಂಕ್ಷೆಯಿಲ್ಲದ ಇಂಥ ಕವಿತೆಗಳು (‘ಭಗ್ನಗಳು’) ಸಂತೆಯ ನೆನಪು ತರುತ್ತವೆ. ಶಶಿಯವರ ಈ ಸಂಕಲನದಲ್ಲಿ ಸಂತೆ ಕೂಡ ಒಂದು ಪ್ರತಿಮೆಯೇ; ಪ್ರತಿಮಾನಿಷ್ಠವಾದ ಕವಿತೆಗಳು ಇವು. ಒಂದನ್ನು ನಿಲ್ಲಿಸಿದ ತಕ್ಷಣ ಇನ್ನೊಂದಕ್ಕೆ ಕೈತೋರಿಸುತ್ತವೆ. ಸಂತೆಯ ಎಲ್ಲ ಗುಣಗಳೂ ಇಲ್ಲಿ ಇವೆ. ತತ್ಕಾಲಕ್ಕೆ ನೆಲೆಯೂರಿದ, ನೆಲದಲ್ಲೇ ಹರಡಿಕೊಂಡ ಮಣಿಸರಕಿನ ಅಂಗಡಿಗಳನ್ನೋ ಕಟ್ಲೇರಿ ದುಕಾನುಗಳನ್ನೋ ಊಹಿಸಿಕೊಳ್ಳಿ. ಅಲ್ಲಿ ಏನಿದೆ ಏನಿಲ್ಲ? ಪಿಂಗಾಣಿಯ ಪಾತ್ರೆಗಳು, ಬಾಚಣಿಗೆ ರಿಬ್ಬನುಗಳು, ಕುಂಕುಮ ಕರಡಿಗೆಗಳು, ಕಪ್ಪು ಕೆಂಪಿನ ಪಟ್ಟೆ ನೂಲುಗಳು, ಲಾಡಿಗಳು, ಬಳೆಗಳು, ಕ್ಲಿಪ್ಪುಗಳು, ಹೇರ್ಪಿನ್ನುಗಳು, ಬಟನುಗಳು, ದಾರದ ಉಂಡೆಗಳು, ಸೂಜಿಗಳು, ಉಗುರು ಕತ್ತರಿಸುವ ಯಂತ್ರ, ಅಗರು ಬತ್ತಿ, ಲೋಬಾನ, ಪರಿಮಳದ ವಿಭೂತಿ ಉಂಡೆಗಳು, ಸೆಂಟಿನ ಪುಟ್ಟ ಪುಟ್ಟ ಕುಪ್ಪಿಗಳು, ಗುಗ್ಗೆ ತೆಗೆಯುವ ಕೊಕ್ಕೆ, ಬೆಲ್ಟು, ಪಕ್ಕೀಟು ಅರ್ಥಾತ್ ಪರ್ಸು, ಬೀಗ, ಬೀಗದ ಕೈ, ನಶ್ಯದ ಬುರುಡೆ, ಮುಖ ನೋಡುವ ಕನ್ನಡಿಗಳು, ಟೂತ್ ಪೌಡರು, ಬ್ರಶ್ಶು, ಚೂರಿಗಳು, ಕಪ್ಪು ಕನ್ನಡಕಗಳು, ಸಿನೆಮಾ ತಾರೆಯರಿರುವ ಕ್ಯಾಲೆಂಡರುಗಳು, ಮಂತ್ರಿಸಿ ಕಟ್ಟುವ ತಾಯಿತಗಳು, ಸ್ಲೇಟು ಕಡ್ಡಿಗಳು, ಪೆನ್ನು ಪೆನ್ಸಿಲುಗಳು, ಫುಟ್ರೂಲು, ಚಿತ್ರಕ್ಕೆ ಬಣ್ಣ ಬಳಿಯುವ ಕಡ್ಡಿಗಳು, ಬರೆದುದನ್ನು ಒರೆಸುವ ರಬ್ಬರು, ಬೆಂಕಿ ಪೆಟ್ಟಿಗೆಗಳು, ಅವುಗಳ ವಿಭಿನ್ನ ಚಿತ್ರಗಳ ಕಟ್ಟುಗಳು, ಗೋಲಿಗಳು, ರಬ್ಬರ್ ಚೆಂಡುಗಳು, ಬಿಗಿಲುಗಳು, ಆಟದ ಕಾರುಗಳು, ನಾಯಿಮರಿ ನರಿ ಮೊಲ ಹುಲಿ ಮುಂತಾದ ಬೊಂಬೆಗಳು, ಟೊಪ್ಪಿ, ಹ್ಯಾಟುಗಳು, ತಮ್ಮಟೆ ಬಡಿಯುವ ಕೀಲು ಮಂಗ, ತಾಳ ಬಾರಿಸುವ ಇನ್ನೊಂದು ಮಂಗ, ಆಹಾ! ಹಳ್ಳಿಯವರಾದ ನಮಗೆ ಇವೆಲ್ಲವುಗಳ ಪರಿಚಯವಾದ್ದು ಇಂಥ ಸಂತೆಗಳ ಮೂಲಕವೇ ಅಲ್ಲವೇ?
ಶಶಿ ತರೀಕೆರೆಯವರದೂ ಇಂಥದೊಂದು ಬೆರಗಿನ ಲೋಕ; ಅವರೀಗ ಅರೆ ಹಳ್ಳಿ ಅರೆ ಪೇಟೆಯಾದ ತರೀಕರೆಯಿಂದ ಮಹಾನಗರ ಬೆಂಗಳೂರಿಗೆ ಬಂದಿದ್ದರೂ ತಮ್ಮ ಮುಗ್ಧ ನೋಟವನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ತರೀಕೆರೆಯಿಂದ ಬೆಂಗಳೂರನ್ನು ಕಲ್ಪಿಸಿದಂತೆ ಅವರು ಬೆಂಗಳೂರಿನಲ್ಲಿ ತರೀಕೆರೆಯನ್ನು ಕಾಣುತ್ತಾರೆ. ಇಂದಿನ ಹಲವು ಕನ್ನಡ ಕವಿಗಳ ಸಾಮಾನ್ಯ ಸ್ಥಿತಿ ಇದು. ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ. ಇದೊಂದು ‘ಅಚ್ಚರಿಯ ಸಂತೆ’ ಇದರಲ್ಲೊಂದು ‘ವಿಷಾದ’ವೂ (ರೆಫರೆನ್ಸ್: ‘ಕಾಲು ಕೆಜಿ ವಿಷಾದ’ ಎಂಬ ಹೆಸರಿನ ಒಂದು ಕವನ) ಇದೆ.
ಹೌದು, ವಿಷಾದ. ಜೇಮ್ಸ್ ಜಾಯ್ಸ್ನ ಸಣ್ಣ ಕತೆ ‘ಅರಬಿ’ಯನ್ನು ನೆನೆದುಕೊಳ್ಳಿ. ದೊಡ್ಡವರನ್ನೂ ಮಗುವಾಗಿಸುವ ಕತೆ ಅದು. (“ಡಬ್ಲಿನರ್ಸ್” ಸಂಕಲನದಲ್ಲಿ ಬರುತ್ತದೆ.) ಡಬ್ಲಿನ್ನ ಒಂದೆಡೆ ಒಂದು ಸಂತೆ ಬಂದಿರುತ್ತದೆ, ‘ಅರಬಿ’ ಎಂಬುದು ಅದರ ಹೆಸರು. ಒಬ್ಬ ಹುಡುಗ ತಾನು ಮೆಚ್ಚುವ ನೆರೆಯ ಹುಡುಗಿಗೋಸ್ಕರ ಏನಾದರೂ ಉಡುಗೊರೆ ತರಬೇಕು ಅಂದುಕೊಂಡು ಅಲ್ಲಿಗೆ ಹೋಗುತ್ತಾನೆ. ಮಾವ ಕುಡಿದು ಮನೆಗೆ ಮರಳಲು ತಡವಾಗಿ ಅವನ ಕೈಯಿಂದ ನಾಕು ಕಾಸು ಸಿಗಲು ಹೊತ್ತಾದ ಕಾರಣ, ಹುಡುಗ ಸಂತೆಯ ಜಾಗ ತಲಪಿದಾಗ ರಾತ್ರಿ ಹತ್ತು ಗಂಟೆ. ಸಂತೆ ಮುಚ್ಚುವ ಸಮಯ, ಹೆಚ್ಚಿನ ಅಂಗಡಿಗಳೂ ಮುಚ್ಚಿರುತ್ತವೆ. ತೆರೆದಿರುವ ಒಂದೇ ಒಂದು ಅಂಗಡಿಯಲ್ಲಿ ಅವನಿಗೆ ಸ್ವಾಗತವೇನೂ ಸಿಗುವುದಿಲ್ಲ. ಅಲ್ಲಿನ ಹೆಣ್ಣಿನ ಹದ್ದಿನ ಕಣ್ಣು ಅವನ ಮೇಲಿರುತ್ತದೆ. ಹುಡುಗ ಏನನ್ನೂ ಕೊಳ್ಳುವುದಿಲ್ಲ. ಅಷ್ಟರಲ್ಲಿ ಸಂತೆಯ ಬೆಳಕುಗಳು ಅರುತ್ತವೆ. ಹುಡುಗನಿಗೆ ಸಿಟ್ಟು ಮತ್ತು ಅಳು. ವಿಷಾದವೆಂದರೆ ಇದುವೇ ಅಲ್ಲವೇ? ‘ಕಾಲು ಕೆಜಿ ವಿಷಾದ’ ಇಡೀ ಕವನಸಂಕಲನದಲ್ಲಿ ನನಗೆ ಹೆಚ್ಚು ಇಷ್ಟವಾದ ಕವನಗಳಲ್ಲಿ ಒಂದು.
ಮರೆಯುವ ದಾರಿಯಿದು ಯಾರು ನೆನಪಿಡುವುದಿಲ್ಲ ಎದ್ದಿದ್ದು ಎಡವಿದ್ದು ಬಾಚಿಕೊಂಡಿದ್ದು ಎಲ್ಲಾ ಇಲ್ಲಿ ದಾಖಲಾಗುತ್ತಿಲ್ಲ ಅದಕ್ಕಾಗಿಯೇ ಏನೋ ಜನರೆಲ್ಲಾ ತೂಕಡಿಸುತ್ತಾ ನಿಂತಿದ್ದಾರೆ (‘ಕಾಲು ಕೆಜಿ ವಿಷಾದ’)
ಹೀಗೆ ಆರಂಭವಾಗುತ್ತದೆ. ಇದೊಂದು ಶಶಿಯವರ ಪ್ರಾತಿನಿಧಿಕ ಸ್ಟಾಂಜಾ—ದಾರಿ, ತೂಕಡಿಸುತ್ತಾ ನಿಂತಿರುವ ಜನ, ಅದರ ಕಾರ್ಯ ಕಾರಣ ಸಂಬಂಧ ಅಬ್ಸರ್ಡ್. ದಾರಿ: ಮರೆತುದು, ನೆನಪಿಡದ್ದು, ಎದ್ದುದು, ಎಡವಿದ್ದು, ಬಾಚಿಕೊಂಡದ್ದು, ಆದ್ದರಿಂದ ಅಲ್ಲಿ ಜನ ತೂಕಡಿಸುವುದು. ಜಗತ್ತೇ ಹೀಗೆ ಇದೆ, ಹೀಗೆಯೆ ಇರುವುದೆ? ಇಂಥ ಇನ್ನಿತರ ವಿಷಾದಗಳನ್ನು ಮುಂದಿನ ಸ್ಟಾಂಜಾಗಳು ಹೇಳುತ್ತವೆ. ಯಾಕೀ ವಿಷಾದ ಕಾಲು ಕೆಜಿ? ಯಾಕೀ ಹುಸಿ ನಿಖರತೆ? ಅಳೆಯಲಾರದ್ದನ್ನು ಅಳೆಯುವ ವಿಧಾನ? ‘ಪಾವು ಕಿಲೋ ಗುಬ್ಬಿ’ ಎಂಬ ಇನ್ನೊಂದು ಕವಿತೆ, ‘ಹಕ್ಕಿಯ ಭಾರ’ ಎಂಬ ಮತ್ತೊಂದು ಕವಿತೆ, ‘ಇಬ್ಬನಿ ಗೇಟ್’ ಎಂಬ ಮಗುದೊಂದು ಕವಿತೆ. ಅಸಾಧ್ಯತೆಯ ಪ್ರತಿಮೆಗಳನ್ನು ನೀಡುವ ಛಲ ಈ ಕವಿಗೆ. ಗೊಸಾಮರ್ನಿಂದ ಕೋಟೆ ಕಟ್ಟಿದಂತೆ. ಅಸಂಗತ ವಿಷಯಗಳನ್ನು ಬಲವಂತವಾಗಿ ಹತ್ತಿರ ತರುವ ಮೆಟಫಿಸಿಕಲ್ ಕವಿಗಳ ವಿಧಾನವೂ ಹೌದು. ಸಂಕಲನವನ್ನು ಓದುತ್ತ ನನಗೆ ಪಿ. ಲಂಕೇಶರ ನೀಲು ಕವಿತೆಗಳ ನೆನಪಾಗುತ್ತಿರಲು, ಲೋ ಏಂಡ್ ಬಿಹೋಲ್ಡ್, ‘ಲಂಕೇಶ್ ಬಂದಿದ್ದರು’ ಎಂಬ ಪದ್ಯವೇ ನನಗೆ ಎದುರಾಗಿದೆ! ನಿಜ, ಪ್ರತಿ ಕವಿಯೂ ಹಿಂದಿನ ಅಥವಾ ಸಮಕಾಲೀನ ಕವಿಗಳಿಂದ ಏನನ್ನೋ ಪಡೆದುಕೊಂಡಿರುತ್ತಾನೆ. ಇದಕ್ಕೆ ಯಾರೂ ಹೊರತಲ್ಲ. ಶಶಿಯವರು ಲಂಕೇಶರ ನೀಲುವಿನಿಂದ ಅದೇನೋ ನವಿರಾದ ನೆನಪುಗಳನ್ನು ಪಡೆದಿರಬಹುದು. ಆದ್ದರಿಂದಲೇ ‘ಲಂಕೇಶ್ ಬಂದಿದ್ದರು’ ಬರೆಯದೆ ಇರುವುದು ಅವರಿಂದ ಅಸಾಧ್ಯವಾಗಿತ್ತು. ಕವಿ ಲಂಕೇಶರನ್ನು ಮನೆಯೊಳಕ್ಕೆ ಕರೆಯುತ್ತಾರೆ, ಅವರು ಇತರರನ್ನೂ ಬರಹೇಳುತ್ತಾರೆ. ಇದೊಂದು ವ್ಯಾಪಕ ಸಂಕೇತ ಎಂದು ನನಗನಿಸುತ್ತದೆ. ಇಷ್ಟು ಹೇಳಿ, ಶಶಿಯವರ ಕಾವ್ಯ ಜೀವನಕ್ಕೆ ಶುಭಾಶಯ ಹಾರೈಸುತ್ತ ನಾನು ನನ್ನ ಯಥಾಸ್ಥಾನವನ್ನು ಸೇರಿಕೊಳ್ಳುತ್ತೇನೆ.
*
ಕೊನೆಯ ಮಾತು: ನಾನು ಮುನ್ನುಡಿ ಬರೆದಾಗಲೆಲ್ಲ ಜನ ಪುಸ್ತಕವನ್ನು ಮೆಚ್ಚುವುದು, ಮುನ್ನುಡಿಯನ್ನು ಚಚ್ಚುವುದು ನಡೆದುಕೊಂಡು ಬಂದಿದೆ. ಈ ಸತ್ಸಂಪ್ರದಾಯ ಮುಂದುವರಿಯಲಿ. ಯಾಕೆಂದರೆ ಜನ ಎರಡನ್ನೂ ಓದಿದ್ದಾರೆ ಎಂದು ಇದರ ಅರ್ಥ.
ಕೃತಿ: ಪ್ಯೂಪಾ (ಕವಿತೆಗಳು) ಕವಿ: ಶಶಿ ತರೀಕೆರೆ ಮುಖಪುಟ ವಿನ್ಯಾಸ: ಶ್ವೇತಾ ಆಡುಕಳ ಪ್ರಕಾಶನ : ಅಲರು ಪುಸ್ತಕ, ಬೆಂಗಳೂರು ಬೆಲೆ: ರೂ. 150/- (Preorder ಬೆಲೆ: ರೂ. 120/-) ಖರೀದಿಗೆ ಸಂಪರ್ಕ : 9731993303
ಶಶಿ ತರೀಕೆರೆ
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯವರಾದ ಶಶಿ ತರೀಕೆರೆ ಸದ್ಯ ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಥೆಗಾರ, ಕವಿ. ಕಿರುಚಿತ್ರ ನಿರ್ಮಾಣದಲ್ಲಿ ಆಸಕ್ತಿ ಉಳ್ಳವರು. 'ಡುಮಿಂಗ’ ಮತ್ತು 'ತಿರಾಮಿಸು’ ಇವರ ಪ್ರಕಟಿತ ಕಥಾಸಂಕಲನಗಳು. ಇವರ ಕೃತಿಗಳಿಗೆ ಛಂದ ಪ್ರಶಸ್ತಿ, ಟೊಟೊ ಪ್ರಶಸ್ತಿ, ಮತ್ತು ಚಿ. ಶ್ರೀನಿವಾಸರಾಜು ಪ್ರಶಸ್ತಿ ಲಭಿಸಿವೆ.