ಕತೆಗಾರ ಕೆ. ಸತ್ಯನಾರಾಯಣ ಅವರು ಇತ್ತೀಚೆಗೆ ಬರೆದ ಕಿರುಗತೆ ಇಲ್ಲಿದೆ. ಒಂದು ಸಮಕಾಲೀನ ಸಂದರ್ಭದ ಇನ್ನೊಂದು ಮಗ್ಗುಲನ್ನು ಆಸಕ್ತಿಕರವಾಗಿ ತೋರಿಸುವ ಈ ಕಿರುಗತೆ ನಿಮ್ಮ ಓದಿಗೆ.
ಮಾರುತಿ ಭಕ್ತರ ಸಮ್ಮೇಳನಕ್ಕೆ ಹೋಗುವ ಅಥವಾ ಅದನ್ನು ನೋಡುವ ಉದ್ದೇಶ ನನಗೆ ಖಂಡಿತ ಇರಲಿಲ್ಲ, ಅದೂ ಸರಯೂ ನದಿಯ ದಡದಲ್ಲಿ. ವ್ಯಾಸ, ವಾಲ್ಮೀಕಿ, ಕೃಷ್ಣ, ರಾಮ, ವಿದುರ, ವಿಭೀಷಣ, ಇವರೆಲ್ಲರಿಗೆ ಹೋಲಿಸಿದರೂ ನನಗೆ ಗೌರವ ಆದರವಿದ್ದುದು ಮಾರುತಿ ಬಗ್ಗೆಯೇ. ಏನೇ ಆದರೂ ಎರಡು ಯುಗಗಳನ್ನು ಕಂಡವನು. ಇನ್ನೊಂದು ವಿಶೇಷವೆಂದರೆ, ಮಾರುತಿ ಯಾರ ಹತ್ತಿರವೇ ಮಾತನಾಡಲಿ, ಯಾವುದೇ ಸಂದರ್ಭದಲ್ಲಿ ಮಾತನಾಡಲಿ, ಒಂದೂ ಸುಳ್ಳು ಹೇಳುವುದಿಲ್ಲ; ಮೋಸವಿಲ್ಲ, ಕಪಟವಿಲ್ಲ, ಅಡ್ಡ ಮಾತಂತೂ ಇಲ್ಲವೇ ಇಲ್ಲ. ಇದೇ ಮಾತನ್ನು ನಾನು ಧರ್ಮರಾಯ, ಭೀಷ್ಮ, ಕೃಷ್ಣರ ಬಗ್ಗೆ ಹೇಳಲಾರೆ. “ಹನುಮಂತನ ಸಂಭಾಷಣೆಗಳು” ಎನ್ನುವುದು ನಾನು ಮುಂದೆ ಬರೆಯಲೇಬೇಕಾದ ಪುಸ್ತಕಗಳಲ್ಲಿ ಒಂದು. ಇರಲಿ, ಈಗ ಸಮ್ಮೇಳನಕ್ಕೆ ಹೋದ ಹಿನ್ನೆಲೆ ಹೇಳುವೆ.
ನಾನೇಕೆ ಅಯೋಧ್ಯೆಗೆ ಹೋಗುವುದಿಲ್ಲ ಎಂದು ಬರೆದಾಗಲೂ ನನಗೆ ಹೋಗಬಾರದು ಎಂದೇನಿರಲಿಲ್ಲ. ನಮ್ಮೂರ ಚಿಕ್ಕಪುಟ್ಟ ರಾಮ ಮಂದಿರಗಳನ್ನು ಇನ್ನೂ ಚೆನ್ನಾಗಿ ನಡೆಸಲು ಎಲ್ಲರ ನೆರವು ಕೋರಿ ಗಮನ ಸೆಳೆಯಲು ಹಾಗೆಂದು ಬರೆದಿದ್ದೆ ಅಷ್ಟೇ. ಮನಸ್ಸಿನ ಒಳಗಡೆ ನನಗೂ ಹೋಗಬೇಕೆಂಬ ಆಸೆ ಇತ್ತು. ಸುಪ್ರೀಂ ಕೋರ್ಟ್ನ ತೀರ್ಪು ಸಹ ರಾಮನ ಪರವಾಗಿಯೇ ಬಂತು. ಸರಿ, ಈಗಲಾದರೂ ಹೋಗೋಣ ಎಂದು ಸೇನೆ, ಪೋಲೀಸ್ನಲ್ಲಿರುವ ಗೆಳೆಯರನ್ನು ಸಂಪರ್ಕಿಸಿ ಹೊರಟೆ. ರಾಮನಿಗೆ highest protocol ಮತ್ತು ವಿಪರೀತ ಸೆಕ್ಯೂರಿಟಿ. ಹತ್ತಾರು ಇಲಾಖೆಗಳ ಪರವಾನಗಿ ಪಡೆಯಬೇಕು. ತಪಾಸಣೆಗೆ ಒಡ್ಡಿಕೊಳ್ಳಬೇಕು. ನಾಲ್ಕಾರು ಬ್ಯಾರಿಕೇಡ್ಗಳನ್ನು ಜಿಗಿಯಬೇಕು. ಭಕ್ತರಿಗಿಂತ ಪೋಲೀಸರು, ಪುರೋಹಿತರಿಗಿಂತ ರಾಜಕೀಯ ಧುರೀಣರೇ ಹೆಚ್ಚು. ಇದೆಲ್ಲದರ ಮಧ್ಯೆ ಶ್ರೀರಾಮಚಂದ್ರನ ಒಂದು ಪುಟ್ಟ ಮೂರ್ತಿಯನ್ನು ತುಂಬಾ ಪುಟ್ಟದಾದ ಟೆಂಟ್ ಒಂದರಲ್ಲಿ ಮುಚ್ಚಿಟ್ಟಂತೆ ಕೂರಿಸಿದ್ದರು. ದಕ್ಷಿಣೆ ನೀಡಿ, ಆತುರಾತುರವಾಗಿ ನಮಸ್ಕರಿಸಿ, ಹೊರಗಡೆ ಬಂದಾಗ, ಮಿಲಿಟರಿ ಕ್ಯಾಂಪಿನಿಂದ ಹೊರ ಬಂದಾಗ ಮೂಡುವ ನಿರಾಳ ಭಾವ.
ನಂತರ ಸಹೋದ್ಯೋಗಿಯೊಬ್ಬರನ್ನು ನೋಡಲು ಹೊರಟೆ. ಬಿಹಾರದ ಕುರ್ಮಿ ಜನಾಂಗದ ನಂಬರ್ ಒನ್ ಶ್ರೀಮಂತ ಜಮೀನ್ದಾರರು. ಅವರು ಅಪ್ಪಟ-ಅನುಪಮ ರಾಮ ಭಕ್ತರು. ಸುಪ್ರೀಂ ಕೋರ್ಟ್ ತೀರ್ಪನ್ನು ಕಂಪ್ಯೂಟರ್ಗೆ ಹಾಕಿಕೊಂಡು ಪ್ರತಿ ದಿನವೂ ಕೆಲವು ಭಾಗಗಳನ್ನು ಓದಿ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. ಇದಕ್ಕೆಂದೇ ಕಂಪ್ಯೂಟರ್ ಒಂದನ್ನು ಮೀಸಲಿಟ್ಟು, ಆ ಕಂಪ್ಯೂಟರ್ಗೆ ಅರಿಶಿನ-ಕುಂಕುಮ ಹಚ್ಚಿ ಪೂಜೆ ಮಾಡಿದ್ದರು. ಆವಾಗ ಮುಂಬೈನಿಂದ ಹೋಗಿದ್ದ ನನಗೆ ಬಿಸಿಬಿಸಿ ಸಮೋಸಾ, ಚಹಾದ ಉಪಾಹಾರವಾಯಿತು. ಆವತ್ತು ಅದೇ ತಾನೆ ಓದಿದ್ದ ತೀರ್ಪಿನ ಭಾಗವನ್ನು ನನಗಾಗಿ ವಿಶ್ಲೇಷಿಸಿದರು. ಹದಿನಾರನೇ ಶತಮಾನದಲ್ಲಿ ಭಾರತಕ್ಕೆ ಪರ್ಷಿಯಾ, ಯುರೋಪುಗಳಿಂದ ಪ್ರವಾಸ ಬಂದು ಕಥನಗಳನ್ನು ರಚಿಸಿದ್ದವರ ಗ್ರಂಥಗಳನ್ನೆಲ್ಲ ಸಂಗ್ರಹಿಸಿ ಒಂದು ಸಣ್ಣ ಪುಸ್ತಕ ಭಂಡಾರವನ್ನೇ ತೆಗೆದಿದ್ದರು. ಅವರ ಕಚೇರಿಯ ಹೊರಗಡೆ ಆವತ್ತು ರೊಯ್ಯನೆ ಬೀಸುತ್ತಿರುವ ಶೀತಗಾಳಿ, ಕತ್ತಲು ತುಂಬಿದ ವಾತಾವರಣ, ಜಟಿ ಜಟಿ ಮಳೆ.
“ನೀನು ನಿನಗೇ ಗೊತ್ತಿಲ್ಲದ ಹಾಗೆ ಒಂದು ಪವಿತ್ರವಾದ ದಿನದಂದು ಅಯೋಧ್ಯೆಗೆ ಬಂದಿದ್ದೀಯೇ. ಸರಯೂ ನದಿಯ ಇನ್ನೊಂದು ದಡದಲ್ಲಿ ಈವತ್ತು ಮಾರುತಿ ಭಕ್ತರ ಸಮಾವೇಶವಿದೆ. ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ಪ್ರಭು ಈ ದಿನವೇ ಸರಯೂ ನದಿಯ ಮೇಲೆ ನಡೆದು ಸ್ವರ್ಗಕ್ಕೆ ಹೋದ ದಿನ. ಪ್ರತಿ ವರ್ಷವೂ ಈ ದಿನ ಮಾರುತಿ ಭಕ್ತರು ಸೇರಿ ಸಮ್ಮೇಳನ ಮಾಡುತ್ತಾರೆ. ಹೋಗಿ ನೋಡೋಣ ಬಾ.”
ನಾವು ಹೋದ ನದಿಯ ದಡದ ಭಾಗದಲ್ಲಿ ಒಂದು ವಿಶಾಲವಾದ ಶಿವನ ದೇವಾಲಯವಿತ್ತು. ಪೂಜೆ, ಮಂಗಳಾರತಿಯೆಲ್ಲ ಮುಗಿದಿತ್ತು. ಶೀತಗಾಳಿ ಈಗ ಸುಂಟರಗಾಳಿಯ ಸ್ವರೂಪ ಪಡೆಯುತ್ತಿತ್ತು. ಮಳೆಯ ರಭಸ ಕೂಡ ಹೆಚ್ಚಾಯಿತು. ಮೂರು ನಾಲ್ಕು ಅಡಿ ದೂರದಿಂದಾಚೆಗೆ ಏನೂ ಕಾಣುತ್ತಿರಲಿಲ್ಲ. ನನ್ನ ಸಹೋದ್ಯೋಗಿ, ಭಕ್ತರು ಮಾತ್ರವಲ್ಲ, ಭಾವಜೀವಿ, ಅಧ್ಯಯನಶೀಲರು ಕೂಡ. ಗಂಭೀರವಾದ ಧ್ವನಿಯಲ್ಲಿ ಹೇಳಿದರು:
“ರಾಮನಿಗೆ ಯಾವಾಗಲೂ ಗೊಂದಲ, ಸಂದೇಹ. ತಾನೊಬ್ಬ ಹುಲುಮಾನವನೋ ಇಲ್ಲ ಭಗವಂತನ ಅವತಾರದ ಒಂದು ರೂಪವೋ? ಈ ತಾಕಲಾಟ ಯಾವತ್ತಿಗೂ ಪರಿಹಾರವಾಗಲಿಲ್ಲ. ವಾಲ್ಮೀಕಿಗೂ ಕೂಡ ಇದನ್ನು ಪರಿಹರಿಸುವ ಮನಸ್ಸಿರಲಿಲ್ಲವೆಂದು ಕಾಣುತ್ತದೆ. ತೆರೆದ ಪ್ರಶ್ನೆಯಾಗಿಯೇ ಇಟ್ಟ! ಕೊನೆ ಕೊನೆಗೆ ತಾನು ಹುಲುಮಾನವನಲ್ಲ, ಭಗವಂತನ ಅವತಾರ, ಒಂದು ನಿರ್ದಿಷ್ಟ ಕಾರಣಕ್ಕಾಗಿ ನಿಯುಕ್ತನಾಗಿ ಬಂದವನು ಎಂಬುದು ಗೊತ್ತಾಯಿತು. ಆದರೆ ಅಷ್ಟು ಗೊತ್ತಾಗುವ ಹೊತ್ತಿಗೆ ರಾಮ ದಣಿದಿದ್ದ, ಕಂಗಾಲಾಗಿದ್ದ; ನಿರಂತರ ಯುದ್ಧ, ಪ್ರವಾಸ, ವನವಾಸ. ದಾಂಪತ್ಯ ಕಲಹದಿಂದ ನೊಂದಿದದ್ದ ಅತನನ್ನು ಕಂಡು ದೇವಾನು ದೇವತೆಗಳಿಗೂ ಅಯ್ಯೋ ಎನಿಸಿತು!
“ನಾವು ನಿನ್ನನ್ನು ಒಂದು ಕೆಲಸಕ್ಕೆಂದು ಕಳಿಸಿದ್ದೆವು. ರಾವಣನ ಹತ್ಯೆಯಾಯಿತು. ನಿನ್ನ ಕೆಲಸ-ಪಾತ್ರ ಮುಗಿಯಿತು. ಮುಂದಿನದು ನಿನ್ನ ಆಯ್ಕೆ. ತ್ರೇತಾಯುಗವು ಮುಗಿಯುವ ತನಕವೂ ಇರಬಹುದು. ಬೇಕಿದ್ದರೆ ನೀನೇ ದ್ವಾಪರ, ಕಲಿಯುಗಗಳಲ್ಲಿ ಮುಂದುವರೆಯಬಹುದು. ಎಲ್ಲವೂ ನಿನ್ನ ಆಯ್ಕೆ.”
ರಾಮಚಂದ್ರ ಸುತಾರಾಂ ಒಪ್ಪಲಿಲ್ಲ. “ನನಗೆ ಈಗಾಗಲೇ ಸುಸ್ತಾಗಿದೆ. ತ್ರೇತಾಯುಗದ ಮನುಷ್ಯರನ್ನೇ ನಾನು ನಿಭಾಯಿಸಲಾರದೆ ಹೋದೆ. ಇನ್ನು ದ್ವಾಪರ, ಕಲಿಯುಗಗಳನ್ನು ನಿರ್ವಹಿಸುವುದು ಹೇಗೆ? ಅದಕ್ಕೆಲ್ಲ ಏನಿದ್ದರೂ ಹನುಮಂತನೇ ಸರಿ. ಕಾಡು, ನಾಡು, ಸಮುದ್ರ, ಆಕಾಶ, ಪರ್ವತ, ಹತ್ತು ಹಲವು ನಾಗರಿಕತೆಗಳನ್ನು ಕಂಡವನು, ಬಲ್ಲವನು. ನನಗಿಂತ ಅವನೇ ಸಮರ್ಥ,” ಎಂದು ಹೇಳಿ, ಆತುರಾತುರವಾಗಿ ಸರಯೂ ನದಿಯ ನೀರಿನ ಮೇಲೆ ನಡೆದು, ದೇವಲೋಕದ ದಿಕ್ಕಿನಲ್ಲಿ ಅಂತರ್ಧಾನನಾದ. ಈವತ್ತೇ ಆ ಪವಿತ್ರ ದಿನದ ವಾರ್ಷಿಕೋತ್ಸವ. ಅದಕ್ಕಾಗಿ ಭಕ್ತರೆಲ್ಲ ಬಂದು ಸೇರುತ್ತಾರೆ.
ಹನುಮಂತನಿಗೂ ಆವತ್ತು ಮತ್ತು ಅಂದಿನಿಂದಲೂ ರಾಮಚಂದ್ರನ ಜೊತೆಯೇ ದೇವಲೋಕಕ್ಕೆ ಹೋಗುವ ಕಾತುರವಿತ್ತು. ರಾಮಚಂದ್ರನಿಗೆ ತನ್ನ ಸ್ವಂತ ಊರಿಗೆ ವಾಪಸ್ ಹೋಗುವ ಗಡಿಬಿಡಿ. ನಾಲ್ಕು ಕ್ಷಣ ನಿನ್ನೊಡನೆ ಮಾತನಾಡುತ್ತೇನೆ ಎಂದು ಹನುಮಂತ ಗೋಗರೆಯುತ್ತಿದ್ದರೂ ಕೈ ಚೆಲ್ಲಿ ಹೊರಟೇ ಬಿಟ್ಟ. ಮಾರುತಿ ವಿಷಾದದಿಂದ, ವ್ಯಾಕುಲತೆಯಿಂದ ಅಂದಿನಿಂದಲೂ ಇಲ್ಲೇ ಕುಳಿತಿದ್ದಾನೆ.
ನಾವು ದಡ ತಲುಪಿದಾಗ ಅಲ್ಲಿ ಭಕ್ತರ ಗಡಿಬಿಡಿ ಇರಲಿಲ್ಲ, ಭಜನೆ ಇರಲಿಲ್ಲ. ಮಾರುತಿಯ ವೇಷ ಧರಿಸಿದವರೊಬ್ಬರು ವ್ಯಾಕುಲಚಿತ್ತರಾಗಿ, ವಿಷಾದ ಭಾವದಿಂದ ಗದ್ದದ ಮೇಲೆ ಕೈ ಹೊತ್ತುಕೊಂಡು ಕೂತಿದ್ದರು. ಭಕ್ತರೆಲ್ಲ ಅವರಿಗೆ ನಮಸ್ಕರಿಸುತ್ತಿದ್ದರು. ನಾವೂ ಕೂಡ ನಮಸ್ಕರಿಸಿದೆವು. ನನ್ನ ಸ್ವಭಾವಕ್ಕನುಗುಣವಾಗಿ, ಎಲ್ಲವನ್ನೂ ವಿವರವಾಗಿ ಗಮನಿಸುವ ಸಲುವಾಗಿ ನಾನು ಅಲ್ಲೇ ನಿಲ್ಲಲು ಪ್ರಯತ್ನಿಸಿದೆ. ಮಾರುತಿ ಗದರಿಕೊಂಡರು.
“ನಮಗೆ ಸಲ್ಲಬೇಕಾದ ಕ್ಷಣಗಳು, ಕ್ಷಣಗಳ ರೀತಿ ಈಗಾಗಲೇ ನಿರ್ಧಾರವಾಗಿದೆ. ನೀನು ಅನಗತ್ಯವಾಗಿ ಇಲ್ಲಿ ನಿಲ್ಲಬೇಡ, ಹೊರಡು.” ನಾನು ಮತ್ತೊಮ್ಮೆ ಅಡ್ಡಬಿದ್ದು ಒಂದೆರಡು ಹೆಜ್ಜೆ ಹಿಂದೆ ಸರಿದೆ. ಹಾಗೆ ಮಾಡಿ ಅಲ್ಲೇ ನಿಂತೆ. ಮಾರುತಿಯ ವೇಷ ಹಾಕಿದ್ದವರಿಗೆ ಮುಖದ ತುಂಬೆಲ್ಲ ನೀಲಿ ಬಣ್ಣ ಹಾಕಿದ್ದರು. ಮಾರುತಿಯ ಕಣ್ಣಲ್ಲಿ ನೀರು ಜಿನುಗಿ ಬಣ್ಣವೆಲ್ಲ ಕರಗಿ ಕೆಳಗಡೆ ಹರಿದು ಸರಯೂ ನದಿಯ ನೀರಿನ ಜೊತೆ ಸೇರಿಕೊಂಡಿತು.
ನನ್ನ ಸಹೋದ್ಯೋಗಿ ಹೇಳುತ್ತಲೇ ಇದ್ದರು, “ಇನ್ನೊಂದು ವಾರ ಇಲ್ಲಿ ಮಾರುತಿ ಸಪ್ತಾಹ. ಮಾರುತಿಯ ಬಗ್ಗೆ ವಿಶೇಷ ಉಪನ್ಯಾಸ. ಬೇರೆ ಬೇರೆ ದೇಶಗಳಿಂದ, ವಿಶ್ವವಿದ್ಯಾಲಯಗಳಿಂದ ಬಂದ ಪಂಡಿತರಿಂದ ವ್ಯಾಖ್ಯಾನ. ಹನುಮಂತನಿಗೆ ಸಮಾಧಾನ ಹೇಳುವ ಪ್ರಯತ್ನ. ಸಮಾರೋಪವೆಲ್ಲ ಆದ ಮೇಲೆ, ಹನುಮಂತ ಕೂಡ ಎದ್ದು ನದಿಗೆ ನಮಸ್ಕರಿಸಿ, ವೇಷ ಬದಲಾಯಿಸಿ, ನಮ್ಮೆಲ್ಲರ ರೀತಿಯಲ್ಲೇ ಸಾಧಾರಣ ವೇಷ-ಭೂಷಣ ಧರಿಸಿ, ಕಲಿಯುಗದ ಉಳಿದಿರುವ ಭಾಗವನ್ನು ನಿರ್ವಹಿಸಲು ಉದ್ಯುಕ್ತನಾಗುತ್ತಾನೆ.”
ಕೆ. ಸತ್ಯನಾರಾಯಣ
ಲೇಖಕ ಕೆ. ಸತ್ಯನಾರಾಯಣರು ಸಣ್ಣಕತೆ, ಕಾದಂಬರಿ, ಪ್ರಬಂಧ, ವಿಮರ್ಶೆ ಸೇರಿದಂತೆ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಭಾರತೀಯ ಆದಾಯ ತೆರಿಗೆ ಇಲಾಖೆಯಲ್ಲಿ ಬಹು ದೊಡ್ಡ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಪೂರ್ಣಪ್ರಮಾಣದಲ್ಲಿ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಪ್ರಬಂಧ, ಕಾದಂಬರಿ ಮತ್ತು ಸಣ್ಣಕತೆಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಮಾಸ್ತಿ ಕಥಾ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಒಟ್ಟಾರೆ ಸಣ್ಣಕತೆಗಳ ಸಾಧನೆಗೆ ಮಾಸ್ತಿ ಪ್ರಶಸ್ತಿ ದಕ್ಕಿದೆ.