ಕನ್ನಡದ ಪ್ರಮುಖ ಕತೆಗಾರ ಕೆ ಸತ್ಯನಾರಾಯಣರ "ಮನುಷ್ಯರು ಬದಲಾಗುವರೆ?” ೨೦೨೨ರಲ್ಲಿ ಪ್ರಕಟವಾದ ಕಥಾಸಂಕಲನವನ್ನು ಸಂಕೇತ ಪಾಟೀಲ ವಿಮರ್ಶಿಸಿದ್ದಾರೆ.
1
ಯಾವುದೇ ಸೃಜನಶೀಲ ಬರೆಹಗಾರರ ಕೃತಿಯೊಂದರ ಬಗ್ಗೆ ಬರೆಯುವುದು ಒಂದು ವಿಜ್ಞಾನದ ಸಂಶೋಧನಾತ್ಮಕ ಪ್ರಬಂಧದ ಮೌಲ್ಯಮಾಪನ ಮಾಡಿದಂತಲ್ಲ. ಒಂದಷ್ಟಾದರೂ ಅವರ ಜೀವಿತ, ಬೆಳವಣಿಗೆ, ಜೀವನದೃಷ್ಟಿ, ಮತ್ತು ನಿಲುವುಗಳ ಅರಿವಿರಬೇಕಾಗುತ್ತದೆ. ಹಾಗಾದಾಗಲೇ ಒಂದು ಪ್ರಮಾಣದ ವಸ್ತುನಿಷ್ಠೆ ಸಾಧ್ಯ ಎಂದು ನನ್ನ ಅನಿಸಿಕೆ. ಇಲ್ಲವಾದಲ್ಲಿ ನಾವು ಬರೆದ ಅಭಿಪ್ರಾಯಗಳು ಆ ಕೃತಿ ಅಥವಾ ಅದರ ಕರ್ತೃವಿನ ಬಗೆಗೆ ಒಳನೋಟಗಳನ್ನು ಕೊಡುವುದಕ್ಕಿಂತ ಹೆಚ್ಚು ಅವು ನಮ್ಮ ಬಗ್ಗೆಯೇ ಆಗಿಬಿಡುವ ಅಪಾಯವಿರುತ್ತದೆ.1 ಸಣ್ಣಕತೆ, ಕಾದಂಬರಿ, ಪ್ರಬಂಧ, ವಿಮರ್ಶೆ ಸೇರಿದಂತೆ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಸತ್ಯನಾರಾಯಣರು ತಮ್ಮ ಈ ಒಂಬತ್ತನೆಯ ಕಥಾ ಸಂಕಲನ ಹೊರಬಂದ ಹೊತ್ತಿನಲ್ಲಿ, “ಭಯವಾಗುತ್ತದೆ. ಸಂತೋಷವೂ ಆಗುತ್ತದೆ.” ಎಂದು ಹೇಳಿಕೊಂಡಿದ್ದಾರೆ. ಅವರ “ಮನುಷ್ಯರು ಬದಲಾಗುವರೆ?” ಎಂಬ ೧೫ರಷ್ಟು ಕತೆಗಳಿರುವ ಈ ಸಂಕಲನವನ್ನು ಓದಿದ ನಂತರ ನನಗೆ ಅನ್ನಿಸಿದ ವಿಚಾರಗಳನ್ನು— ಅವರ ಬಹುತೇಕ ಪುಸ್ತಕಗಳನ್ನು ಓದಿಲ್ಲದ ಕಾರಣದಿಂದ — ಒಂದಷ್ಟು ಸಂಕೋಚದಿಂದಲೇ ಹಂಚಿಕೊಳ್ಳಹೊರಟಿದ್ದೇನೆ.
ಈ ಸಂಕಲನದ ಕತೆಗಳಲ್ಲಿ ಕೆಲವು ಮುಖ್ಯ ಥೀಮ್ಗಳು ಎದ್ದು ಕಾಣುತ್ತವೆ: ಮುಗಿತಾಯ (closure), ಬಗೆಹರಿಸಿಕೊಳ್ಳುವಿಕೆ (reconciliation), ಹಳೆಯದಕ್ಕೆ ಮರಳುವ ಹಂಬಲ ಹಾಗೂ ಅದರೊಡಗೂಡಿದ ಯಾತನೆ (nostalgia). ಇವು ಇಲ್ಲಿನ ಕತೆಗಳ ಪಾತ್ರಗಳ ಅನಿವಾರ್ಯ ಎಷ್ಟೋ ಅಷ್ಟೇ ಕತೆಗಾರನ ಅನಿವಾರ್ಯಗಳೂ ಹೌದೇ? ಎಂಬ ಪ್ರಶ್ನೆ ನನ್ನನ್ನು ಉದ್ದಕ್ಕೂ ಕಾಡಿತು. ಎಲ್ಲ ಗಂಭೀರ ಕತೆಗಾರರು ಕತೆ ಹೇಳುವುದಷ್ಟೇ ಅಲ್ಲದೇ ತಮ್ಮ ಕತೆಗಾರಿಕೆಯ ಮೂಲಕ ಹಲವು ಪ್ರಶ್ನೆಗಳ ಆಳಕ್ಕಿಳಿಯಲೆಳಸುತ್ತಾರೆ, ಮೌಲ್ಯಗಳ ಶೋಧನೆಯಲ್ಲಿ ತೊಡಗಿರುತ್ತಾರೆ. ತಮ್ಮ ಬರೆಹದ ಹಾಗೂ ಬದುಕಿನ ವಿವಿಧ ಹಂತಗಳಲ್ಲಿ ಬೇರೆಬೇರೆ ಪ್ರಶ್ನೆಗಳು ಅವರನ್ನು ಕಾಡುತ್ತಿರುತ್ತವೆ. ತಮ್ಮ ಸುತ್ತಲಿನ ಹಾಗೂ ವಿಸ್ತೃತ ಜಗತ್ತಿನ ಬದಲಾಗುತ್ತಿರುವ ಸಾಮಾಜಿಕ ಹಾಗೂ ರಾಜಕೀಯ ವಾತಾವರಣ, ಅವುಗಳೊಟ್ಟಿಗೆ ಬರೆಹಗಾರನ ರಾಜಕೀಯ ನಿಲುವುಗಳ ಅನುಸಂಧಾನ; ವೈಯಕ್ತಿಕ ಜೀವನದ ಪಲ್ಲಟಗಳು, ಹೊಸ ತಂತ್ರಜ್ಞಾನ ಹಾಗೂ ಜೀವನಶೈಲಿಗಳ infusion; ಇವೆಲ್ಲವೂ ಬರಹಗಾರರ ಕಸುಬಿನ ಮೇಲೆ ಮಾಡುವ ಪರಿಣಾಮಗಳು. ಇವುಗಳ ವಿಕಾಸ ಕುತೂಹಲಕಾರಿಯಾದುದು.2
ಇವುಗಳ ಹಿನ್ನೆಲೆಯಲ್ಲಿ ಕಥಾಸಂಕಲನದ ಹೆಸರನ್ನು ಗಮನಿಸಬಹುದು: ಮನುಷ್ಯರು ಬದಲಾಗುವರೆ? ಸಂಕಲನದಲ್ಲಿ ಈ ಹೆಸರಿನ ಕಥೆಯಿಲ್ಲ. ಹೀಗಾಗಿ ಇದನ್ನೊಂದು overarching theme ಅಥವಾ ಕತೆಗಾರರು ಅನ್ವೇಷಿಸಹೊರಟಿರುವ ಮುಖ್ಯ ಪ್ರಶ್ನೆಯೆಂದು ಗ್ರಹಿಸಬಹುದು. ಈ ಪ್ರಶ್ನೆಯನ್ನು ಬೇರೆ ಬೇರೆ ರೀತಿ ನೋಡಬಹುದು. ಬದಲಾವಣೆಯೇ ಜಗದ ನಿಯಮ, ಹೀಗಾಗಿ ಅದು ನಿರಂತರವಲ್ಲವೇ? ಮನುಷ್ಯರು ಅದಕ್ಕೆ ಹೊರತಾದವರಲ್ಲವಲ್ಲ. ಈ ಸಹಜ ಕ್ರಿಯೆಯ ಬಗ್ಗೆಯೇ ಕತೆಗಾರರು ಸಂಶಯ ತೋರಿಸುತ್ತಿರುವರೆ? ಮನುಷ್ಯ ಮೇಲ್ನೋಟಕ್ಕೆ ಬದಲಾದಂತೆ ತೋರಿದರೂ ಆಳದಲ್ಲಿ ಇರುವುದು ಮೂಲ ಸ್ವಭಾವವೇ. ಹೊರಗಡೆಯ ಬದಲಾವಣೆಗಳೆಲ್ಲ ತೋರಿಕೆಗಳಷ್ಟೇ ಎಂದು ಅರ್ಥೈಸಬಹುದು. ಇಲ್ಲಿನ ಕತೆಗಳ ಕೆಲವು ಪಾತ್ರಗಳು ಈ ರೀತಿಯ posturingನಲ್ಲಿ ತೊಡಗುವುದನ್ನು ಕಾಣುತ್ತೇವೆ.
ಹಾಗಿದ್ದರೆ, ಇಲ್ಲಿರುವುದು ಮನುಷ್ಯನ ಮೂಲಪೃವೃತ್ತಿಯ ಪ್ರಶ್ನೆಯೇ? ಮನುಷ್ಯ ಕೌಟುಂಬಿಕ, ಔದ್ಯೋಗಿಕ, ಹಾಗೂ ಸಾಮಾಜಿಕ ಸ್ತರದಲ್ಲಿ ಎಷ್ಟೇ ವಿಕಾಸ ಹೊಂದಿದ್ದರೂ instinctಗಳನ್ನು ನಿವಾರಿಸಿಕೊಳ್ಳಲಾಗುವುದಿಲ್ಲ. ಒಂದು ರೀತಿಯಲ್ಲಿ ಇದು ನಮ್ಮ ಮೆದುಳಿನಲ್ಲಿ ಅಡಕವಾಗಿರುವ reptilian brain ಹಾಗೂ mammalian brain ಪದರಗಳ ನಡುವಣ ತಿಕ್ಕಾಟದಂತೆ. “ಮನುಷ್ಯರು" ಎನ್ನುವುದಕ್ಕಿಂತ ಒಟ್ಟಾರೆ “ಮನುಷ್ಯ" (mankind) ಎಂದು ಗಣಿಸಿದರೆ ಮೂಲಪೃವೃತ್ತಿಗಳಾದ territorialism, tribalism, conflict ಇಂಥವು ನಿರಂತರವೇನೋ. ಇಲ್ಲಿನ ಕೆಲ ಕತೆಗಳಲ್ಲಿ ಕಾಣುವ ಹಳಹಳಿ, ತಮ್ಮ ಮೂಲ ಊರಿಗೆ, ಮನೆಗೆ, ಸಂಸ್ಕಾರಕ್ಕೆ ಮರಳಬೇಕೆನ್ನಿಸುವ ತೀವ್ರ ಹಂಬಲಗಳನ್ನು ಈ ರೀತಿಯಾಗಿಯೂ ಗ್ರಹಿಸಬಹುದು.
ಇವೆಲ್ಲ ಕಾರಣಗಳಿಂದಲೂ “ಮನುಷ್ಯರು ಬದಲಾಗುವರೆ?” ಎಂಬ ಪ್ರಶ್ನೆಯಷ್ಟೇ “ಕತೆಗಾರರು ಬದಲಾಗುವರೆ?” ಎಂಬುದೂ ನನಗೆ ಕುತೂಹಲಕಾರಿಯಾಗಿ ತೋರುತ್ತದೆ.
2
“ಜಯನಗರ ಕ್ರಾಸಿಂಗಿನಲ್ಲಿ” ಕತೆಯಲ್ಲಿ ಮುಗಿತಾಯದ ಒಂದು ಮಾದರಿ ಕಾಣುತ್ತದೆ. ಮಗಳು ತೀರಿ ಹೋದ ನಂತರವೂ ಅಳಿಯನ ಜೊತೆಗೇ ಉಳಿದುಕೊಳ್ಳುವ ಇಲ್ಲಿನ ಅಜ್ಜಿಗೆ ಹತ್ತಾರು ವರ್ಷಗಳಿಂದ ಅಳಿಯನ ಬಗ್ಗೆ ತಲೆಯನ್ನು ಕೊರೆಯುತ್ತಿರುವ ಸಂಶಯಗಳಿವೆ. ಒಂದಷ್ಟು ಸುಪ್ತ ಪಾಪಪ್ರಜ್ಞೆಯೂ ಇದೆ. ಕರ್ಮಾಂತರಗಳನ್ನು ಪೂರೈಸಲು ಅಮೇರಿಕೆಯಿಂದ ಬಂದ ಮೊಮ್ಮಗಳಿಗೆ ಅವಳಪ್ಪನ ಬಗ್ಗೆ ತನ್ನ ಮನಸ್ಸಿನಲ್ಲಿದುದನ್ನೆಲ್ಲ ಹೇಳುವ ಮೂಲಕ ಅಜ್ಜಿ closure ಕಂಡುಕೊಳ್ಳುತ್ತಾಳೆ. ನಿರಾಳಳಾಗುತ್ತಾಳೆ.
ಆಧುನಿಕ ಕುಟುಂಬಗಳಲ್ಲಿ ಒಟ್ಟಿಗೇ ಇದ್ದಾಗಲೂ ಕುಟುಂಬದ ಪ್ರತಿ ಸದಸ್ಯರ ಜೀವನಗಳೂ ಬಹುಮಟ್ಟಿಗೆ ಸಮಾನಾಂತರ ರೇಖೆಗಳಂತೆ ಚಲಿಸುತ್ತಿರುತ್ತವೆ. ಆಗಾಗ ವಿಶೇಷ ಸಂದರ್ಭಗಳಲ್ಲಿ ಸಂಧಿಸುತ್ತಿರುತ್ತವಷ್ಟೇ. ಇನ್ನು ಅಮೇರಿಕೆಯಲ್ಲಿ ತನ್ನ ಜೀವನ ಸಾಗಿಸುತ್ತಿರುವ ಮಗಳಿಗೆ ಅಪ್ಪನ ಬಗ್ಗೆ ಸಹಜವಾದ ಭಕ್ತಿ, ಪ್ರೀತಿಗಳಿದ್ದರೂ, ಅದುವರೆಗೂ ಅವಳಲ್ಲಿದ್ದುದು ಅಪ್ಪ ಎಂಬ ಪರಿಕಲ್ಪನೆಯ ಒಂದು ಸ್ಥೂಲ ಚಿತ್ರಣವಷ್ಟೇ. ಮಾತಾಡಲು ಹೊರಗೆ ಕರೆದುಕೊಂಡು ಹೋದ ಅಜ್ಜಿ ಅಪ್ಪನ ಬಗೆಗಿನ concrete ವಿವರಗಳನ್ನು ಈ ಚಿತ್ರಕ್ಕೆ ತುಂಬಿ ತಾನು ಹಗುರಾಗಿ ಅದರ ಭಾರವನ್ನು ಮೊಮ್ಮಗಳ ತಲೆಗೆ ಹೊರಿಸುತ್ತಾಳೆ. ಹೀಗಾಗಿ ಅವರು ಮರಳಿ ಮನೆಯೊಳಗೆ ಹೆಜ್ಜೆ ಹಾಕುವಾಗ, “ಅಜ್ಜಿಯ ಹೆಜ್ಜೆಗಳೇ ಹೆಚ್ಚು ಧೃಢವಾಗಿದ್ದವು.” ತನ್ನಲ್ಲುಂಟಾದ ಹೊಸ ಗೊಂದಲಗಳಿಗೆ ಮಗಳು ಇನು ತಾನೇ ಪರಿಹಾರ ಕಂಡುಕೊಳ್ಳಬೇಕು ಎಂಬ ಸೂಚನೆಯೊಂದಿಗೆ ಕತೆ ಮುಗಿಯುತ್ತದೆ. ಚಿಕ್ಕದಾಗಿದ್ದರೂ ಸಂಕೀರ್ಣತೆಯೊಳಗೊಂಡ ಒಳ್ಳೆಯ ಕತೆಯಿದು.
“ಫೋಟೋ ವಲಸೆ” ಕತೆಯ ನಿರೂಪಕನಿಗೆ ತಾನು ಹಲವು ಕಾಲದಿಂದ ಒಡನಾಡಿದ ಮನೆಯ ಗೋಡೆಯೊಂದರ ಮೇಲೆ ಇರಬೇಕಾದವರ ಫೋಟೋ ಇರದೇ ಕಾಡುವ ಖಾಲಿತನ. ಆ ಫೋಟೋ ಕಾಣೆಯಾದದ್ದರ ಬಗ್ಗೆ ಕುತೂಹಲ. ಮತ್ತು ಇದನ್ನು ಬಗೆಹರಿಸಿಕೊಳ್ಳಬೇಕೆನ್ನುವ ಧಾವಂತ. ಅಪ್ಪನ ಬಗ್ಗೆ ಅಸಹನೆ ಇರುವ ಮಗನಿಗೆ ಹಳೆಯ ಪರಂಪರೆಯಿಂದ ಬಿಡಿಸಿಕೊಳ್ಳಬೇಕಾಗಿದೆ. ಗೋಡೆಗೆ ನೇತು ಹಾಕಿದ ಅಪ್ಪನ ಫೋಟೋ ಹಳೆಯದರ ಅಕ್ಷರಶಃ ಪ್ರತಿಮೆ. ಅದು ಅವನಿಗೆ ಹೊರೆ. ಹಾಗಿದ್ದಾಗ್ಗ್ಯೂ reconciliation with the past ಅನಿವಾರ್ಯ. ಇದು ಇಬ್ಬರಿಗೂ ಬೇರೆಬೇರೆ ಬಗೆಯಲ್ಲಿ ಒದಗಿ ಬಂದದ್ದು. ನಿರೂಪಕನಿಗೆ ತೀರಿಹೋದ ಸಾರ್ವಜನಿಕ ವ್ಯಕ್ತಿಯೊಬ್ಬರ ಬಗ್ಗೆ ಗುರುಭಾವದಿಂದ ಗೌರವ. ಅವರ ನೆನಪು ಅಳಿಸಿಹೋಗಬಾರದು ಎಂಬ ಆಸೆ. ಆದರೆ ಮಗನಿಗೆ ಇದು ತೀರ ವೈಯಕ್ತಿಕ. ಜೀರ್ಣವಾದ ಅಪ್ಪನ ತಲೆದಿಂಬನ್ನೇ ಕಾಪಿಟ್ಟುಕೊಂಡು ಅದನ್ನೇ ಅಪ್ಪನೆಂದು ಭಾವಿಸಿ ತನ್ನದೇ ರೀತಿಯಲ್ಲಿ ಸಮಾಧಾನ ಹೊಂದುತ್ತಿದ್ದಾನೆ. ಕೆಲವು ಕಡೆ ಚೂರು ಜಾಳಾಗಿ, ಕೊನೆಯ ಭಾಗ ವಾಚ್ಯವೆನ್ನಿಸುತ್ತದಾದರೂ ಒಟ್ಟಾರೆಯಾಗಿ ಇದೊಂದು ಒಳ್ಳೆಯ ಕತೆ.
ಮಾಸ್ತಿ ಕತೆಗಳನ್ನೋ ಡಿವಿಜಿಯವರ ವ್ಯಕ್ತಿಚಿತ್ರಗಳನ್ನೋ ನೆನಪಿಸುವ “ಪುನರ್ಮುದ್ರಣ” ಕತೆಯಲ್ಲಿ “ಫೋಟೊ ವಲಸೆ”ಯಂಥದ್ದೇ ಒಬ್ಬ ವ್ಯಕ್ತಿಯ (ಅಪ್ಪನ) ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನದ ವ್ಯತಿರಿಕ್ತತೆ ಇನ್ನೂ ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಮುನ್ನೆಲೆಯಲ್ಲಿ ಕಾಣುವ ನಡೆದ ಸಂಗತಿಗಳು ಹಾಗೂ ಹಿನ್ನೆಲೆಯಲ್ಲಿನ ಕಾಣದ ಸತ್ಯ. ಇವೆರಡೂ ಬೇರೆಬೇರೆಯಷ್ಟೇ ಅಲ್ಲದೇ ಒಂದಕ್ಕೊಂದು ವಿರುದ್ಧವಾಗಿಯೂ ಇರಬಹುದು. “ಕದ್ದು(!) ಕೇಳಿಸಿಕೊಂಡ ಕತೆ”ಯಲ್ಲಿ ಇದರ ಒಂದು ಮಗ್ಗುಲು ಕಾಣಿಸುತ್ತದೆ. Facts vs Truth dichotomyಯ ಬಗ್ಗೆ “ಪುನರ್ಮುದ್ರಣ" ಕತೆಯ ರಂಗಪ್ಪನವರು ಹೇಳುತ್ತಾರೆ. ಇಲ್ಲಿಯ ತಂದೆ ಒಬ್ಬ ದಕ್ಷ ಅಧಿಕಾರಿ, ಜ್ಞಾನಿ, ಸಾರ್ವಜನಿಕ ವಲಯದಲ್ಲಿ ಹೆಸರು ಮಾಡಿದವರು. ಇವೆಲ್ಲಾ ಎಲ್ಲರಿಗೂ ಗೊತ್ತಿದ್ದು ನಿರ್ವಿವಾದವಾಗಿರುವ ಸಂಗತಿಗಳು. ಆದರೆ ಆತ ಹೆಂಡತಿಯನ್ನು ಹೊಡೆಯುವ, ಇತರರನ್ನು ಕಂಡು ಅಸಹ್ಯ ಪಡುವ ವ್ಯಕ್ತಿಯಾಗಿದ್ದುದು ಸತ್ಯ. ದೊಡ್ಡ ವ್ಯಕ್ತಿಗಳ ಈ ವ್ಯತಿರಿಕ್ತತೆಗಳ ಉದಾಹರಣೆಗಳು ವಾಸ್ತವದಲ್ಲೂ ಸಾಹಿತ್ಯದಲ್ಲೂ ಅಪಾರ: ಗಾಂಧಿಯ ಮಕ್ಕಳು ತಮ್ಮ ಅಪ್ಪನ ಬಗ್ಗೆ ತಳೆದಿದ್ದ ಧೋರಣೆ; ಟಾಲ್ಸ್ಟಾಯ್ ತಮ್ಮ ಹೆಂಡತಿಯನ್ನು ನಡೆಸಿಕೊಂಡಿದ್ದ ರೀತಿ, ಇತ್ಯಾದಿ.
“ಯಾವತ್ತೂ ಯಾರಿಗೂ ಅವರವರ ತಾಯಿ-ತಂದೆ ಬಗ್ಗೆ ಎಲ್ಲ ನಿಜಾನೂ ಹೇಳೋಕ್ಕಾಗೋಲ್ಲ.” ಎಂದು ರಂಗಪ್ಪನವರು ಹೇಳುವುದು ಇಲ್ಲಿನ ಹಲವು ಕತೆಗಳ ಸಾಮಾನ್ಯ theme. “ಸಲಿಂಗರತಿ-ಮುಷ್ಠಿಮೈಥುನದ ತಂದೆ”, “ಜಯನಗರ ಕ್ರಾಸಿಂಗ್”ನ ತಂದೆ, “ಫೋಟೋ ವಲಸೆ”ಯ ತಂದೆ — ಇವೆಲ್ಲ ಕತೆಗಳಲ್ಲೂ ತಂದೆ ನಿಜಕ್ಕೂ ಏನು ಎಂದು ಮಕ್ಕಳಿಗೆ ಗೊತ್ತಾಗುವುದಿಲ್ಲ ಅಥವಾ ಗೊತ್ತಾದರೂ ಆ ಸತ್ಯದೊಂದಿಗೆ ರಾಜಿಮಾಡಿಕೊಳ್ಳುವುದು ಕಷ್ಟವಾಗುತ್ತದೆ.
ಅಪ್ಪ ಮತ್ತು ಮಕ್ಕಳ (ಗಂಡುಮಕ್ಕಳ) ತಿಕ್ಕಾಟ, ಅಪ್ಪ ಎಂಬ authoritarian figure, "the father on trial", ಮೊದಲಾದ motifಗಳು ಸಾಹಿತ್ಯದ ಹುಟ್ಟಿನೊಡನೆಯೇ ಹುಟ್ಟಿದುವು ಎನ್ನಿಸುತ್ತದೆ. ಯೋರಪಿನಲ್ಲಿ ಶೇಕ್ಸ್ಪಿಯರ್ನಿಂದ ಹಿಡಿದು ಹತ್ತೊಂಬತ್ತನೇ ಶತಮಾನದ ರಷ್ಯನ್ ಸಾಹಿತ್ಯದ ಮೂಲಕ ಹಾದು ಕಾಫ್ಕಾನನ್ನೂ ಒಳಗೊಂಡು ಅವು ಎಲ್ಲೆಡೆ ಆವರಿಸಿವೆ. ಇದು ಕನ್ನಡಕ್ಕೂ ಹೊಸತೇನಲ್ಲ; ನವ್ಯ ಸಾಹಿತ್ಯದ ಪ್ರಜ್ಞೆಯ ಭಾಗವೇ ಆಗಿತ್ತೇನೋ (ತಕ್ಷಣಕ್ಕೆ ತಲೆಯಲ್ಲಿ ಬಂದಿದ್ದು ಟಿ. ಜಿ. ರಾಘವರ “ಶ್ರಾದ್ಧ" ಕತೆ).
ಅಪ್ಪನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು, ನಿರೀಕ್ಷೆಗಳನ್ನು ಪೂರೈಸುವುದು, ಮತ್ತು ಹಾಗೆ ಮಾಡುತ್ತಿದ್ದಾಗಲೂ ಅಪ್ಪನಂತಾಗಬಾರದು ಎಂದು ನಿರ್ಧಾರ ತಾಳುವುದು, ಈ conflict ಹಾಗೂ reconciliation ಎಲ್ಲ ಕಾಲದಲ್ಲೂ ಎಲ್ಲೆಡೆ ನಡೆಯುತ್ತಿರುವ ಒಂದು ಪ್ರಕ್ರಿಯೆ. ಕೊನೆಗೆ ರಂಗಪ್ಪನ ಮಕ್ಕಳೂ ತಮ್ಮ ತಂದೆಯ ಬಗ್ಗೆ ತಳೆಯುವ ನಿಲುವು ಈ ತಿಕ್ಕಾಟದ ಪರಂಪರೆಯ ಮುಂದುವರಿಕೆಯನ್ನು ಸೂಚಿಸುತ್ತದೆ. ಪ್ರತಿ ಕತೆಯಲ್ಲೂ ಅಪ್ಪ ಸತ್ತ ಮೇಲೆ ಈ ಮುಖಾಮುಖಿಯಾಗುತ್ತಿದೆ ಮತ್ತು ವಿಶೇಷವೆಂದರೆ ಒಬ್ಬ ಮೂರನೆಯ ವ್ಯಕ್ತಿಯ ಪ್ರವೇಶ ಹಾಗೂ ಒತ್ತಾಯದಿಂದಾಗಿ ಇದು ನಡೆಯುತ್ತಿದೆ. ಹೀಗೆ ಇಲ್ಲಿನ ಅನೇಕ ಕತೆಗಳಲ್ಲಿ ಮುಗಿತಾಯದ ಬೇರೆ ಬೇರೆ ಮಾದರಿಗಳು ಕಾಣಸಿಗುತ್ತವೆ.
"ಮನುಷ್ಯರು ಬದಲಾಗುವರೆ?” ಎಂಬ ಪ್ರಶ್ನೆಯನ್ನು ಎತ್ತಿಕೊಳ್ಳುವ ಕೆಲವು ಕತೆಗಳಲ್ಲಿ “ವಾಷಿಂಗ್ಟನ್ ಮೆಮೊರಿಯಲ್ ಮುಂದೆ”, “ಶಿವಗಾಮಿ ಬದಲಾದರೆ(ಳೆ)?”, “ಆನಂದರಾಮು ಮತ್ತು ಜೇಮ್ಸ್ ಮೇನರ್”, “ಎರಡನೇ ಅಳಿಯ”ದಂಥ ಕತೆಗಳು ಗಮನ ಸೆಳೆಯುತ್ತವೆ. “ಎರಡನೇ ಅಳಿಯ” ಕತೆಯಲ್ಲಿ ತಮ್ಮ ಜೀವಿತದ ಕೊನೆಯಲ್ಲಿ ರಸೆಲ್3 ಮೈಲಾರಿರಾಯರು ತಮ್ಮ ಬಾಲ್ಯದಲ್ಲಿದ್ದ ವಾತಾವರಣಕ್ಕೆ ಮರಳುವುದನ್ನು ಗೊತ್ತಿರುವ ಜಾಗದಲ್ಲಿ ಮನುಷ್ಯ ಸಾಂತ್ವನ ಹುಡುಕಬಯಸುತ್ತಾನೆ ಎಂದು ಸಹಾನುಭೂತಿಯಿಂದ ವಿವೇಚಿಸಬಹುದು. ಅಥವಾ ಮನುಷ್ಯ ಎಷ್ಟೇ ಓದಿಕೊಂಡು ಪಾಂಡಿತ್ಯ ಗಳಿಸಿದ್ದರೂ ಸ್ವೇಚ್ಛೆಯಿಂದ ಬದುಕಿ ಮುಕ್ತತೆಯನ್ನು ಅನುಭೋಗಿಸಿದ್ದರೂ ಆಳದಲ್ಲಿನ “ಬ್ರಾಹ್ಮಣಿಕೆ" ಉಳಿದೇಬಿಟ್ಟಿರುತ್ತದೆ ಎಂದು ಸಿನಿಕತೆಯಿಂದಲೂ ವಿಶ್ಲೇಷಿಸಬಹುದು. ಹೀಗೆ ಸರಳವೆನ್ನಿಸುವ ಎಷ್ಟೋ ಕತೆಗಳಲ್ಲಿ ಸಹಜವಾಗಿಯೇ ವೈರುದ್ಧ್ಯಗಳನ್ನು ಕತೆಗಾರರು ತಂದಿದ್ದಾರೆ.
ಇಲ್ಲಿನ ಬಹಳಷ್ಟು ಕತೆಗಳಲ್ಲಿ ಉತ್ತಮಪುರುಷ ನಿರೂಪಣೆಯಿದ್ದರೂ ನಿರೂಪಕ ಎಲ್ಲದರಿಂದ ತುಸುದೂರವೇ ಇರುತ್ತಾನೆ. ಇದು ನಡೆದ ಅಥವಾ ನಡೆಯುತ್ತಿರುವ ವಿದ್ಯಮಾನಗಳಿಗೆ perspective ಕೊಡಲು ಅನುಕೂಲವಾದ ತಂತ್ರವಾದರೂ ಎಲ್ಲೆಡೆ ಕಾಣಿಸುವ ಇಂಥ ಸಾಕ್ಷೀಭಾವ ಒಮ್ಮೊಮ್ಮೆ ಕಳವಳ ತರಿಸುತ್ತದೆ. ಉದಾಹರಣೆಗಾಗಿ “ಅನಂತರಾಮು ಹಾಗೂ ಜೇಮ್ಸ್ ಮೇನರ್” ಎಂಬ ಕತೆ ನೋಡಬಹುದು. ಇದು ಕೇವಲ ನಿರೂಪಣಾ ತಂತ್ರವೋ ಅಥವಾ ಕತೆಗಾರರ ನಿಲುವೂ ಇದೇಯೋ ಎಂಬ ಅನುಮಾನ ಬರುತ್ತದೆ. ಮೇನರ್ ಅವರಿಗೆ ಎಲ್ಲವೂ ಬದಲಾಗಿದೆ ಎಂಬ ಸದ್ಯದ ಹತಾಶೆಯಿದ್ದರೂ ಬದಲಾವಣೆ ಅನಿವಾರ್ಯ, ಇದು cyclical ಎಂಬ ಆಶಾಭಾವನೆಯೂ ಇದ್ದಂತಿದೆ. ಇಲ್ಲಿ ಮೇನರ್ idealistic, ಅನಂತರಾಮು ಹೆಚ್ಚು pragmatic, ಹಾಗೂ ನಿರೂಪಕ ತುಸು cynical ಎನ್ನಿಸುತ್ತದೆ. ಇದರದೇ ಮುಂದುವರಿಕೆಯೆನ್ನಿಸುವ ಮುಂದಿನ ಕತೆಯ ಕೊನೆಯಲ್ಲಿ ನಿರೂಪಕ:
“ಓದುಗರೇ,
ಮೇನರ್ ಪುಸ್ತಕದಲ್ಲಿ , ಭಾಷಣದಲ್ಲಿ ಇರುವ ನಿರ್ಲಿಪ್ತ ಧ್ವನಿ ಮತ್ತು ಧೋರಣೆಯನ್ನು ಉಳಿಸಿಕೊಂಡು ಮೇಲಿನ ಸಾರಾಂಶವನ್ನು ಬರೆದಿರುವೆನು.
ಆದರೆ ಎಂತಹ ನಿರ್ಲಿಪ್ತ ಬರವಣಿಗೆಯಲ್ಲಾದರೂ ಒಲಿಸಿಕೊಳ್ಳುವ, ಆಕ್ರಮಿಸುವ ಒಂದು ಹೊಂಚು ಇದ್ದೇ ಇರುತ್ತದಷ್ಟೇ. […]"
ಎಂದು ಹೇಳುವುದು ಮೇಲಿನ ಮಾತಿದೆ ಪುಷ್ಟಿ ಕೊಟ್ಟಂತೆ ತೋರುತ್ತದೆ.
3
ಸತ್ಯನಾರಾಯಣರ ಗದ್ಯ ಬರವಣಿಗೆಯ ಶೈಲಿ ಕತೆ, ವ್ಯಕ್ತಿಚಿತ್ರ, ಹಾಗೂ ಪ್ರಬಂಧಗಳ ನಡುವೆ ಸುಳಿಯುತ್ತ ಅತ್ತೊಮ್ಮೆ ಇತ್ತೊಮ್ಮೆ ವಾಲುತ್ತಿರುತ್ತದೆ. ಅವರು ಪ್ರಬಂಧಕಾರರೂ ಆಗಿರುವುದು ಹಾಗೂ ಕತೆಹೇಳುವುದಕ್ಕೆ ಮೊದಲಿನಿಂದಲೂ ಪ್ರಬಂಧ ಮಾದರಿಯನ್ನು ರೂಢಿಸಿಕೊಂಡಿರುವುದು ಎರಡೂ ಇದಕ್ಕೆ ಕಾರಣವಾಗಿರಬಹುದು. ಕನ್ನಡದ್ದಷ್ಟೇ ಅಲ್ಲದೇ ಜಾಗತಿಕ ಬರೆಹಗಾರರ ಓದು ಕೂಡ ಇವರ ಕತೆಗಳಿಗೆ ವಿಶೇಷ ಪ್ರಯೋಗಶೀಲತೆಯನ್ನು ತಂದುಕೊಟ್ಟಿವೆ ಅನ್ನಿಸುತ್ತದೆ. ಆದರೆ ಇಲ್ಲಿನ ಕೆಲವು ಕತೆಗಳು ಕತೆಗಳಾಗದೇ ಪ್ರಯೋಗಶೀಲ ಪ್ರಬಂಧಗಳಾಗಿ ಉಳಿದಿವೆಯೇನೋ ಎನ್ನಿಸುತ್ತದೆ. ಸಾಹಿತ್ಯಿಕ ಪ್ರಬಂಧ (literary essay) ಅಷ್ಟು ಸಮರ್ಪಕವಾಗಿ ಬಳಕೆಯಾಗಿರದ ಒಂದು ಪ್ರಕಾರ ಎಂದು ನನ್ನ ಅನ್ನಿಸಿಕೆ. ಸತ್ಯನಾರಾಯಣರು ಸಮರ್ಥ ಪ್ರಬಂಧಕಾರರೂ4 ಆಗಿರುವುದರಿಂದ ಇವೆರಡೂ ಪ್ರಕಾರಗಳನ್ನು ಸೂಕ್ತವಾಗಿ ದುಡಿಸಿಕೊಳ್ಳಬಲ್ಲರು.
ಕತೆಗಳಿರುತ್ತವೆ ಕಾಣಬೇಕಷ್ಟೇ — ಎಂಬ ಮಾತಿನೊಂದಿಗೆ ಸತ್ಯನಾರಾಯಣರು ಈ ಸಂಕಲನಕ್ಕೆ ಪ್ರವೇಶ ಒದಗಿಸುತ್ತಾರೆ. ಕತೆಗಳು ನಮ್ಮ ಸುತ್ತಲೂ ಸುಳಿದಾಡುವ ಗಾಳಿಯಂತೆ ನಿಸರ್ಗದತ್ತವಾದುವು; ಕತೆಗಾರಿಕೆ ಎನ್ನುವುದು ಊಟ, ನಿದ್ದೆ, ಮೈಥುನದಷ್ಟೇ ಸ್ವಾಭಾವಿಕವಾದುದು; ಹೀಗಾಗಿ ಕತೆ ಹೇಳುವುದು ಚಿಟ್ಟೆಯೊಂದರ ಹಾರಾಟದಂತೆ ಸಹಜವಾಗಿ ಅಪ್ರಯತ್ನಪೂರ್ವಕವಾಗಿ ನಡೆಯಬೇಕಾದುದೇ ಹೊರತು, ಅದಕ್ಕೊಂದು ವಿಶೇಷತೆಯನ್ನು ಆರೋಪಿಸಿ ದೊಡ್ಡಸ್ತಿಕೆಯ ಸ್ಥಾನದಲ್ಲಿ ಕೂರಿಸುವುದು ಬೇಡ; ಕತೆಗಳಿಗಿಂತ ಮನುಷ್ಯ ಸಂಬಂಧಗಳು ದೊಡ್ಡದು, ಕತೆ ಹೇಳುವುದಕ್ಕಿಂತ ಜೀವನವನ್ನು ಆದ್ಯಂತವಾಗಿ ಅನುಭವಿಸುವುದು ಮುಖ್ಯ, ಎಂಬುದು ಅವರ ನಿಲುವು.
ಕತೆಗಳು ಇರುತ್ತವೆ ಎಂಬ ಮಾತು ನಿಜ. ಅವು ನಮಗೆ ಕಾಣುವುದು ಒಂದು. ನಾವು ಅದನ್ನು ಬೇರೆಯವರಿಗೆ ಕಾಣಿಸುವುದು ಇನ್ನೊಂದು. ಹೀಗೆ ನಮ್ಮ ಸುತ್ತಲೂ ನಾವು “ಸಾಯೋತನಕ" ಇರುವ ಕತೆಯೆನ್ನುವುದು ಕತೆಯಾಗುವುದು ಯಾವಾಗ? ಕೇವಲ ಅದರ ಇರುವಿಕೆಯಿಂದಲೋ? ಒಬ್ಬ ಕತೆಗಾರರಿಗೆ ಅದು ಕಂಡಾಗಲೋ? ಅಥವಾ ಆ ಕತೆಯನ್ನು ಓದುಗರಿಗೆ ಕಾಣಿಸಿದಾಗಲೋ? ಈ ನಡೆಪಾಡು ನಿರಂತತೆಯಲ್ಲಿ ಆಗುವಂಥದ್ದು. ಈ ಸಂಕಲನದ ಕತೆಗಳು ಅದರೊಳಗೆ ಬೇರೆಬೇರೆ ಹಂತಗಳಲ್ಲಿದ್ದಂತೆ ತೋರುತ್ತವೆ.
ಸತ್ಯನಾರಾಯಣರು “ಬರೆಯುವ ಶೈಲಿಯಲ್ಲಿ ಪಕ್ಕದ ಮನೆಯವರ ಕಷ್ಟ ಸುಖಗಳನ್ನು ಅಲ್ಪಸ್ವಲ್ಪ ಬದಲಾವಣೆ ಮಾಡಿ ಕತೆ ಮಾಡಿಬಿಡಬಹುದು” ಎಂದು ಜಿ. ರಾಜಶೇಖರ್ ಅವರು ಗುರುತಿಸಿದ್ದಾರೆ. ತಮ್ಮ ಸುತ್ತಮುತ್ತಲೂ ನಡೆಯುವ ತಮ್ಮನುಭವಕ್ಕೆ ಬಂದ ಅಥವಾ ಅರಿವಿನಿಂದ ಕಂಡುಕೊಂಡ ಸಂಗತಿಗಳ ಬಗ್ಗೆ ಸರಳವಾಗಿ ಹೇಳಿಬಿಡುವುದೇ ಕತೆಗಾರರಿಗಿರುವ ಆಸೆ. “ಕೇವಲ ರಚಿಸುವ, ಶಿಲ್ಪಿಸುವ ಕತೆಗಳ ಬಗ್ಗೆ ನನ್ನಲ್ಲಿ ಕೊಂಚವೂ ಆಸಕ್ತಿಯಿಲ್ಲ.” ತಮ್ಮ ಜೊತೆಗೇ ಸಾವಯವವಾಗಿ ಬೆಳೆದು ಬದುಕುವ ಕತೆಗಳ ಬಗ್ಗೆ ಅವರ ಆಸ್ಥೆ. ಹಾಗೆಂದು, ಇವು ಯಾವುವೂ ಕತೆಗೆ ಹೊರತಾದುವೇನಲ್ಲವಲ್ಲ. ಮನುಷ್ಯನಿಗೆ ಭಾಷೆ ನಿಸರ್ಗ ಕೊಟ್ಟ ಬಳುವಳಿಯಿರಬಹುದು. ಆದರೆ ಬರವಣಿಗೆ ಸಹಜವಲ್ಲ. ಮನುಷ್ಯ ಸೃಷ್ಟಿ ಮಾಡಿಕೊಂಡದ್ದು. ಗುಡಿ ಕಟ್ಟಿದಂತೆ ಕತೆಯನ್ನೂ ಕಟ್ಟಬೇಕಾಗುತ್ತದೆ. ಶಿಲ್ಪಿ ಕಾಳಜಿಯಿಂದ ಕೆತ್ತಿದ ವಿಗ್ರಹವನ್ನು ಒಳಗುಡಿಯಲ್ಲಿ ಕೂಡಿಸಬೇಕಾಗುತ್ತದೆ. ಕೃತಿಯ ಸಂರಚನೆ, ಅದರಲ್ಲಿ ಎದ್ದುಕಾಣುವ ಕಲಾತ್ಮಕತೆ ಸಹಜವಿರಲಿಕ್ಕಿಲ್ಲ, ಆದರೆ ಸಾರ್ಥಕವಾದುವು.
ನುರಿತ ಕತೆಗಾರರಾರ ಸತ್ಯನಾರಾಯಣರು ತಮ್ಮ ಕತೆಗಳ ವಸ್ತು ಮತ್ತು ಅವುಗಳ ಕಟ್ಟೋಣದ ಬಗ್ಗೆ ಇನ್ನೂ ವ್ಯವಧಾನದಿಂದ, ತಾದಾತ್ಮ್ಯದಿಂದ ಪ್ರಯೋಗ ನಡೆಸುತ್ತಲೇ ಇರುತ್ತಾರೆ ಹಾಗೂ ಅವರಿಂದ ಮುಂದೆಯೂ ಅನೇಕ ಉತ್ತಮ ಕತೆಗಳು ಬರಲಿವೆ ಎಂದು ನನ್ನಂಥ ಓದುಗರ ನಿರೀಕ್ಷೆಯಾಗಿದೆ.
ಈ ಮಾತನ್ನು ಹೇಳುವಾಗ ನನಗೆ Wittgenstein’s Ruler ಎಂಬ ಪರಿಕಲ್ಪನೆ ನೆನಪಾಯಿತು. ಅದರ ಸಾಮಾನ್ಯ ಪಾಠ ಹೀಗಿದೆ: "Unless you have confidence in the ruler’s reliability, if you use a ruler to measure a table you may also be using the table to measure the ruler.” ಒಂದು ಟೇಬಲ್ಲನ್ನು ಅಳೆಯಲು ಬಳಸುವ ಅಳತೆಗೋಲಿನ ನಿಖರತೆಯ ಬಗ್ಗೆ ನಿಮಗೆ ನಂಬಿಕೆಯಿರದಿದ್ದಲ್ಲಿ ನೀವು ಅದರಿಂದ ಟೇಬಲ್ಲನ್ನು ಅಳೆಯುವುದೂ ಟೇಬಲ್ಲಿನಿಂದ ಅದನ್ನು ಅಳೆಯುವುದೂ ಎರಡೂ ಒಂದೇ. ಮಾಧ್ಯಮಗಳಲ್ಲಿ ನಮಗೆ ಎದುರಾಗುವ “ಪರಿಣತರು" ಹೊರಡಿಸುವ ಫರಮಾನುಗಳು ಬಹಳಷ್ಟು ಸಲ ಯಾವುದೇ ವಿಷಯ ಅಥವಾ ಬೆಳವಣಿಗೆಗಳ ಕುರಿತಾಗಿ ಒಳನೋಟಗಳನ್ನು ಒದಗಿಸುವುದಕ್ಕಿಂತ ಹೆಚ್ಚಾಗಿ ಅವರ ಒಲವು, ಇತಿಮಿತಿಗಳನ್ನು ಬಯಲುಪಡಿಸುತ್ತವೆ.
ಕನ್ನಡದ ಅಥವಾ ಜಗತ್ತಿನ ಪ್ರಮುಖ fiction ಬರೆಹಗಾರರ ಕೃತಿಗಳನ್ನು ಅವುಗಳಲ್ಲಿನ ಮೌಲ್ಯಗಳ ಅನ್ವೇಷಣೆಯ evolution ಇಟ್ಟುಕೊಂಡು ಅಭ್ಯಸಿಸಿದರೆ ಅದೊಂದು ಒಳ್ಳೆಯ thesis ಆಗಬಲ್ಲುದು.
ಈ ಕತೆಯ ಮೊದಲಲ್ಲಿ ಬರುವ ಬರ್ಟ್ರಂಡ್ ರಸೆಲ್ರ ಉಲ್ಲೇಖದ ಪ್ರಸ್ತುತತೆ ಕೊನೆಗೂ ತಿಳಿಯುವುದಿಲ್ಲ.
ಜೇಮ್ಸ್ ಮೇನರ್, ನಾಲ್ವಡಿ ಕೃಷ್ಣರಾಜ ಒಡೆಯರ ಪ್ರಸಂಗಗಳು ನಾನು ಇತ್ತೀಚೆಗೆ ಓದಿ ಬಹುವಾಗಿ ಮೆಚ್ಚಿದ ಪ್ರಬಂಧವೊಂದನ್ನು ನೆನಪಿಗೆ ತಂದಿತು. “Reservoir Gods” ಎಂಬ ಹೆಸರಿನ ಈ ಪ್ರಬಂಧ ಕನ್ನಂಬಾಡಿ ಕಟ್ಟೆ ಕಟ್ಟುವುದರ ಹಿಂದೆ ನಡೆದ ರಾಜಕೀಯ ಸಂಧಾನಗಳು, ಜಟಾಪಟಿಗಳನ್ನೆಲ್ಲ ಸೊಗಸಾಗಿ ಕತೆ ಕಟ್ಟಿ ಹೇಳುತ್ತದೆ.
ಚೆನ್ನಾಗಿದೆ ವಿಶ್ಲೇಷಣೆ