ಕತೆಗಾರ ಎಸ್. ಗಂಗಾಧರಯ್ಯನವರ ಮೊದಲ ಕಾದಂಬರಿ ಗಂಗಪಾಣಿ 23.3.2024 ರಂದು ಜೀರುಂಡೆ ಪುಸ್ತಕದಿಂದ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಈ ಕಾದಂಬರಿಯ ಆಯ್ದ ಭಾಗವನ್ನು ನೀವಿಲ್ಲಿ ಓದಬಹುದು.
ನೆನಪುಗಳ ಮಿಡುಕಾಟಕ್ಕೆ ಗದ್ದಿಗಪ್ಪ ತಲ್ಲಣಿಸಿದ. ಇನ್ನು ಮುಂದೆ ಹಾಡಲೇಬಾರದು ಅಂದುಕೊಂಡ. ಅದು ಇವತ್ತೇ ಯಾಕಾಗಬಾರದು ಅನಿಸಿತು. ಹಂಗನಿಸಿದ್ದೇ ತಡ ಎದ್ದವನೇ ಮರದಲ್ಲಿ ಬಂದ ಹೊಸತರಲ್ಲಿ ಹೊಡೆದಿದ್ದ ಮೊಳೆಯೊಂದಕ್ಕೆ ಕೈಯ್ಯಲ್ಲಿದ್ದ ತಂಬೂರಿಯನ್ನು ನೇತಾಕಿದ.
ಎಂದೋ ಹೊಡೆದಿದ್ದ ಮೊಳೆ. ಅದೇನು ತುಕ್ಕು ಹಿಡಿದಿತ್ತೋ ಇಲ್ಲಾ ಪೂರಾ ಸಡಿಲಗೊಂಡಿತ್ತೋ, ಅಂತೂ ಗದ್ದಿಗಪ್ಪ ಕೂರುವುದೂ ಮೊಳೆಯ ಸಮೇತ ತಂಬೂರಿ ಅರಳಿಕಟ್ಟೆಯ ಮೇಲೆ ಬೀಳುವುದೂ ಒಂದೇ ಆಯ್ತು. ಹಂಗೆ ಬೀಳುತ್ತಲೇ ತಂಬೂರಿಯ ಬುರುಡೆ ಒಮ್ಮೆಗೇ ಒಡೆದು ಚೂರಾಯ್ತು. ಗದ್ದಿಗಪ್ಪ ದಿಕ್ಕೆಟ್ಟವನಂತೆ ಕೂತು ಬಿಟ್ಟ. ಹತ್ತಾರು ವರ್ಷಗಳಿಂದ ತನ್ನನ್ನು ಸಲಹಿದ್ದ ಪ್ರೀತಿಯ ತಂಬೂರಿಯ ಕಣ್ಣೆದುರಿನ ಸಾವು ಯಾವುದೋ ಅಪಶಕುನದ ಮುನ್ಸೂಚನೆಯಂತೆ ಅವನನ್ನು ದಿಗಿಲಿಗೆ ದೂಡಿತು. ಅಯ್ಯೋ ದೇವರೆ, ಯಾವ ಕೆಟ್ಟ ಗಳಿಗೇಲಿ ಇವತ್ತು ತಂಬೂರಿ ಹಿಡುಕೊಂಡೆನಪ್ಪಾ ಅಂತ ಅಂದುಕೊಂಡು ಅದರ ಒಂದೊಂದೇ ಚೂರುಗಳನ್ನು ಎತ್ತಿ ಎದೆಗೆ ಒತ್ತಿಕೊಂಡ. ದುಃಖ ಉಮ್ಮಳಿಸಿತು. ತಂಬೂರಿಯ ಬುರುಡೆಗೆ ಆವರೆವಿಗೂ ಆಸರೆಯಾಗಿದ್ದ ಬಿದಿರಿನ ಪುಟ್ಟ ಗಳವನ್ನು ತೊಡೆಯ ಮೇಲಿಟ್ಟುಕೊಂಡು ಅದನ್ನೇ ದಿಟ್ಟಿಸಿದ. ಮರದ ಕೊಂಗೆಯೊಂದರಿಂದ ನೇತು ಬಿದ್ದಿದ್ದ ಲಾಟೀನಿನ ಮಂದ ಬೆಳಕಿನಲ್ಲಿ ಈ ಮುಂಚೆ ಅದನ್ನು ಹಿಡಿದಾಡಿದ್ದ ಬೆರಳುಗಳು ಮೂಡುತ್ತಿರುವಂತೆ ಭಾಸವಾಯ್ತು. ಗದ್ದಿಗಪ್ಪನಿಗೆ ದುಃಖದ ಜೊತೆಗೆ ಭಯವಾಯ್ತು.
ಆ ತಂಬೂರಿ ಅವನನ್ನು ಕೂಡಿಕೊಂಡು ಹತ್ತು ವರ್ಷಗಳ ಮೇಲಾಗಿತ್ತು. ಹಿಮಾಲಯದ ಕಡೆಯಿಂದ ಹಿಂದಿರುಗಿ ಬರುವಾಗ ಒಂದಷ್ಟು ದಿನ ಪುಟ್ಟ ನಗರವೊಂದರ ರೈಲು ನಿಲ್ದಾಣದಲ್ಲಿ ಉಳುಕಂಡಿದ್ದ. ಸುತ್ತಲೂ ಗುಡ್ಡುಗಾಡು. ದಟ್ಟ ಮರಗಳು. ಬೆಳಗಿನ ಹತ್ತಾದರೂ ನಿಲ್ಲದ ಹಿಮ ಮಳೆ. ಮೈ ಕೊರೆಯುವ ಚಳಿ. ಸಂಜೆಯಾಗುತ್ತಲೇ ಇಡೀ ನಗರ ನಿರ್ಜನವಾಗಿಬಿಡುತ್ತಿತ್ತು. ಆದ್ಯಾವುದೋ ಆತಂಕವಾದಿಗಳಿಗೆ ಹೆದರಿ ಜನ ಹೀಗೆ ಮಾಡುತ್ತಾರೆ ಅಂತ ಅವರಿವರಿಂದ ಕೇಳಿ ತಿಳುಕಂಡಿದ್ದ ಗದ್ದಿಗಪ್ಪ. ಹಗಲು ಹೊರಗಡೆ ಓಡಾಡಿಕೊಂಡು ರಾತ್ರಿಯಾಗುತ್ತಲೇ ಆ ನಿಲ್ದಾಣದಲ್ಲಿ ಬಂದು ಮಲಗುತ್ತಿದ. ಅಲ್ಲೂ ಅಷ್ಟೇ ಸಂಜೆಯಾದರೆ ಒಂದಿಬ್ಬರು ಭಿಕ್ಷುಕರನ್ನು ಬಿಟ್ಟರೆ ಒಂದು ನರಪಿಳ್ಳೆಯೂ ಅತ್ತ ಸುಳಿಯುತ್ತಿರಲಿಲ್ಲ. ಜೊತೆಗೆ ರಾತ್ರಿ ಎಂಟು ಗಂಟೆಗೆ ಬರುವ ರೈಲೇ ಅಲ್ಲಿಗೆ ಕೊನೆಯ ರೈಲಾಗಿತ್ತು. ಒಂದು ದಿನ ಹಾಗೆ ಮಲಗಲು ಬಂದಂಥ ಹೊತ್ತಲ್ಲಿ ನಿಲ್ದಾಣದ ಮೂಲೆಯೊಂದರ ಕತ್ತಲಲ್ಲಿ ಮುದುಕನೊಬ್ಬ ತುಂಬಾ ನಿತ್ರಾಣ ಸ್ಥಿತಿಯಲ್ಲಿ ಅಂಗಾತವಾಗಿ ಬಿದ್ದುಬಿಟ್ಟಿದ್ದ. ಅವನು ಬಿದ್ದಿದ್ದ ಸ್ಥಿತಿಯನ್ನು ನೋಡಿದ ಗದ್ದಿಗಪ್ಪನಿಗೆ ಅವನು ಬದುಕಿಲ್ಲ ಅನಿಸಿತ್ತು. ಕುತೂಹಲ ಮತ್ತು ಆತಂಕದಿಂದಲೇ ಅತ್ತ ಹೋದ ಗದ್ದಿಗಪ್ಪ. ಅವನ ಒಂದು ಕೈಯ್ಯಲ್ಲಿ ತಾಳ ಮತ್ತೊಂದರಲ್ಲಿ ತಂಬೂರಿಗಳಿದ್ದವು. ಬಗಲಲ್ಲೊಂದು ಬಟ್ಟೆಯ ಬ್ಯಾಗು. ಅದನ್ನು ನೋಡುತ್ತಲೇ ಇವನ್ಯಾರೋ ದಕ್ಷಿಣದವನೇ ಇರಬೇಕು ಅನಿಸಿತು. ಹಂಗಾಗಿ ಹತ್ತಿರ ಹೋಗಿ ಅಜ್ಜ ಅಂತ ಕೂಗಿದ. ಅಜ್ಜನ ಕೆದರಿದ ಗಡ್ಡ ಹಾಗೂ ತಲೆಗೂದಲು. ತೇಲುಗಣ್ಣಿಗೆ ಬಿದ್ದಿದ್ದ ಕಣ್ಣುಗಳು, ಮುಖದಲ್ಲಿನ ನಿಸ್ತೇಜ ಕಳೆ, ಅಜ್ಜನ ಆಯಸ್ಸು ಮುಗಿಯುತ್ತಾ ಬಂದಿರುವುದನ್ನು ಹೇಳುತ್ತಿದ್ದವು. ಇನ್ನೇನು ಅಲ್ಲಿಂದ ಹೊರಡಬೇಕು ಅನ್ನುವಷ್ಟರಲ್ಲಿ ಅಜ್ಜ ಗೊಗ್ಗರು ದನಿಯಲ್ಲಿ ಸದ್ದು ಮಾಡಿ ಒಂದು ಬೊಗಸೆ ನೀರು ಕೊಡುವಂತೆ ಕೈ ಸನ್ನೆ ಮಾಡಿದ. ನೀರು ತಂದು ಕೊಡುವ ಸಲುವಾಗಿ ರೈಲ್ವೆ ನಿಲ್ದಾಣದ ಮತ್ತೊಂದು ತುದಿಗೆ ಹೋಗಿ ಬರುವಷ್ಟರಲ್ಲಿ ಅಜ್ಜನ ಬ್ಯಾಗು, ತಾಳ, ತಂಬೂರಿಗಳು ಅಲ್ಲಿ ಅನಾಥವಾಗಿ ಬಿದ್ದಿದ್ದವು. ಏನಾಯ್ತು ಅಂತ ಹೇಳಲು ಅಲ್ಲಿ ಯಾರೂ ಇರಲಿಲ್ಲ. ಗದ್ದಿಗಪ್ಪ ಅಂಜಿಕೊಂಡೇ ತಾಳ ಮತ್ತು ತಂಬೂರಿಗಳನ್ನು ಎತ್ತಿಕೊಂಡ. ತನ್ನೂರಿನಲ್ಲೂ ಇಂಥವೇ ತಾಳ ತಂಬೂರಿಗಳಿದ್ದವು. ತಾತ ಸಣ್ಣೀರಪ್ಪ ಭಜನೆ ಮಾಡುವ ಸಲುವಾಗಿ ಅವುಗಳನ್ನು ಮನೆಯಲ್ಲಿ ಇಟ್ಟುಕೊಂಡಿತ್ತು. ಆ ಕಾರಣಕ್ಕೇ ಗದ್ದಿಗಪ್ಪ ಅವುಗಳನ್ನು ಎತ್ತಿಕೊಳ್ಳುವ ಮನಸ್ಸು ಮಾಡಿದ್ದ. ಅವುಗಳು ಸಿಕ್ಕಿದ್ದರಿಂದ ಒಂದಷ್ಟು ದಿನಗಳು ಆ ಪುಟ್ಟ ನಗರದಲ್ಲಿ ಬದುಕು ಸಾಗಿತ್ತು. ಆಗಿನಿಂದ ಅವುಗಳನ್ನು ಜತನ ಮಾಡಿಕೊಂಡು ಬಂದಿದ್ದ.
ತಂಬೂರಿ ಬುರುಡೆಯ ಚೂರುಗಳನ್ನೆಲ್ಲಾ ಒಂದೆಡೆ ಕೂಡಿಸಿ ಅವುಗಳನ್ನು ಮುಟ್ಟಿ ಶರಣು ಮಾಡಿಕೊಂಡ. ಆದರೂ ಎದೆಯಲ್ಲಿನ ಅತಂಕ ತಮಣೆಯಾಗಿರಲಿಲ್ಲ. ಖುಷಿಯಾದಾಗ ಮತ್ತು ಬೇಸರದಲ್ಲಿದ್ದಾಗ ಗದ್ದಿಗಪ್ಪ ಸೀದಾ ಕೊಳ್ಳದೊಳಕ್ಕೆ ಇಳಿದುಬಿಡುತ್ತಿದ್ದ. ಅಲ್ಲಿನ ಕಾಲಾದಿಯಲ್ಲಿ ನಡೆಯುತ್ತಾ ಸಿಕ್ಕ ಸಿಕ್ಕ ಗಿಡಮರಗಳೊಂದಿಗೆ ಮಾತನಾಡುತ್ತಾ, ಅವುಗಳು ಸೂಸುತ್ತಿದ್ದ ಅತ್ತರನ್ನು ಆಸ್ವಾದಿಸುತ್ತಾ ಹಕ್ಕಿಗಳ ಚಿಲಿಪಿಲಿಯನ್ನು ಎದೆಗಿಳಿಸಿಕೊಳ್ಳುತ್ತಾ, ಕಾಡ ಹೂಗಳ ಘಮಲಿನಲ್ಲಿ ಮುಳುಗೇಳುತ್ತಾ ಅದೆಷ್ಟೋ ಹೊತ್ತು ಅಲ್ಲಿದ್ದುಬಿಡುತ್ತಿದ್ದ. ರವಷ್ಟು ಎದೆ ಭಾರ ಇಳಿಯುತ್ತಲೇ ಮೇಲತ್ತಿ ಬರುತ್ತಿದ್ದ. ಸೀತಾಳೊಂದಿಗೆ ಕೂಡಿದ್ದ ದಿನವೊಂದನ್ನು ಬಿಟ್ಟರೆ ಇರುಳಿನಲ್ಲಿ ಯಾವತ್ತೂ ಅದನ್ನು ಇಳಿಯುತ್ತಿರಲಿಲ್ಲ. ಅವತ್ತು ಕೂಡಾ ಅಂಥದ್ದೇ ಇರುಳು. ಆ ಚಣ ಗದ್ದಿಗಪ್ಪನಿಗೆ ಕೊಳ್ಳದೊಳಕ್ಕೆ ಇಳಿಯಬೇಕೆನಿಸಿತು. ಎದ್ದವನೇ ಸೀದಾ ಇಳಿದು ನಡೆಯತೊಡಗಿದ. ಆದರೆ ಆ ಹೊತ್ತಿಗಾಗಲೇ ಕತ್ತಲಾಗಿತ್ತು. ಅದೂ ಕಗ್ಗತ್ತಲು. ಸುತ್ತಲೂ ಜೀರುಂಡೆಗಳು ಜೀಕುತ್ತಿದ್ದವು. ಹಕ್ಕಿಗಳು ಮೆಲು ಗೊಣಗಾಟದಲ್ಲಿದ್ದವು. ದಿನವೂ ಸೌದೆ ತರಲೆಂದೋ ಇಲ್ಲಾ ಬೇಸರ ನೀಗಿಕೊಳ್ಳಲೆಂದೋ ಕೊಳ್ಳದೊಳಕ್ಕಿಳಿಯುತ್ತಿದ್ದ ಗದ್ದಿಗಪ್ಪನಿಗೆ ಅದು ಸರಾಗದ ದಾರಿಯಾಗಿತ್ತು. ಚಡಾವುಗಳಿಲ್ಲದ ಅಂಗಾಲುಗಳ ಕಡೆಯಿಂದ ಶೀತ ಅಡರಿಕೊಳ್ಳುತ್ತಿದ್ದರೂ ಅದು ಮನದೊಳಗಿನ ಬಿಸಿಯ ತಾಪಕ್ಕೆ ತಣ್ಣಗಾಗುತ್ತಿತ್ತು. ತನ್ನನ್ನು ಹುಡುಕಿಕೊಂಡು ಗುಡಿಯ ಹತ್ತಿರಕ್ಕೆ ಹೊರಟಿವೆ ಎಂಬಂತೆ ಹಿಂಡಿಂಡು ಮಿಂಚುಳಗಳು ಮೇಲೇರಿ ಬರುತ್ತಿದ್ದವು. ಥರಾವರಿ ಕಾಡ ಹೂವಿನ ಘಮಲುಗಳು. ಜೊತೆಗೆ ತಂಗಾಳಿಯ ತೀಟೆ.
ಗದ್ದಿಗಪ್ಪನ ಮನಸ್ಸು ಕಲ್ಲು ಜಾಡಿಸಿದ ಕೊಳವಾಗಿತ್ತು. ಈ ಬದುಕು ಯಾಕೆ ಹಿಂಗೆ ಸತಾಯಿಸುತ್ತಿದೆ. ಒಂದೆಡೆ ನಿಲಗೊಡುತ್ತಿಲ್ಲ. ಸುಮ್ಮನೇ ಒಂದೇ ಸಮ ಓಡಿಸುತ್ತಿದೆ. ಓಡಿ ಓಡಿ ದಣಿದಿದ್ದೇನೆ. ನಾನಾದರೂ ಯಾಕೆ ಇಷ್ಟು ಆತ್ಮವಂಚನೆ ಮಾಡಿಕೊಳ್ಳುತ್ತಿದ್ದೇನೆ. ಯಾವುದನ್ನು ಮೀರಬೇಕು ಅಂದುಕೊಳ್ಳುತ್ತೇನೋ ಅದು ಹಠಕ್ಕೆ ಬಿದ್ದು ಗೆಲ್ಲುತ್ತಿದೆ. ಬದುಕಿನ ಹೆದ್ದಲೆಗಳು ದಡ ಸೇರಲು ಬಿಡುತ್ತಲೇ ಇಲ್ಲ. ನಾನಾಗುವ, ನನ್ನನ್ನು ಕಂಡುಕೊಳ್ಳುವ ದಾರಿಯಲ್ಲೂ ಡೋಂಗಿತನವೆ? ಶಿವನೇ! ಇನ್ನೇನು ಒಂದಷ್ಟು ದೂರ ಹಂಗೂ ಹಿಂಗೂ ನಡೆದೆ, ಒಂದಷ್ಟು ನಿಸೂರು ಜಿಲುಪಿತು, ಅನ್ನುವಷ್ಟರಲ್ಲಿ ಮತ್ತೆ ಹಿಂದಕ್ಕೆ. ಮತ್ತದೇ ಹಳೆಯ ಲಯಕ್ಕೆ. ಒಂದು ಚಣ ಲೌಕಿಕದ ಜಂಜಾಟಗಳ ಮೇಲಾಟ. ಮತ್ತೊಂದು ಚಣಕ್ಕೆ ಈ ಭಕ್ತಿ, ನಿಷ್ಠೆ, ಅಧ್ಯಾತ್ಮಗಳ ಕಾಟ. ಒಮ್ಮೊಮ್ಮೆ ನಿಷ್ಠೆಯ ಬೇರುಗಳಿಗೆ ಗೆದ್ದಲಿಡಿಯುತ್ತಿರುವಂತೆ. ಒಮ್ಮೊಮ್ಮೆ ಅವೇ ಬೇರುಗಳು ಆಳಕ್ಕಿಳಿಯುತ್ತಾ ಗಟ್ಟಿಯಾಗುತ್ತಿರುವಂತೆ. ಆಧ್ಯಾತ್ಮವೆಂದರೆ, ಕೇವಲ ಮೈಯ್ಯ ವಾಂಚಲ್ಯಗಳನ್ನು ಮೀರುವುದಷ್ಟೇನಾ? ದೇಹದ ಹಸಿವು ಅದ್ಯಾಗೆ ಲೌಕಿಕವಾಗಿಬಿಡುತ್ತೆ? ಈ ದೇಹದ ಮಲಿನತೆ ಅನ್ನುವುದೇ ಒಂದು ಟೊಳ್ಳಲ್ಲವೆ? ಕಾಮದ ವಿಚಾರದಲ್ಲಿ ಈ ನೈತಿಕ ಅನೈತಿಕ ಅನ್ನುವುದು ಕೇವಲ ಮನುಷ್ಯರಿಗಷ್ಟೇನಾ? ನಡೆವ ದಾರಿಯಲ್ಲಿ ಎಡವುವುದು ಸಹಜವಲ್ಲವೆ? ಎಡವಲು ಇಚ್ಛಿಸದವನು ನಡೆವುದಾದರೂ ಎಂತು? ಯಾಕೆ ಈ ಗಿಡ ಮರಗಳಂತೆ ನಿರುಮ್ಮಳವಾಗಿ ಹಳೆಯ ಎಲೆಗಳನ್ನು ಉದುರಿಸಿ ಹೊಸ ಎಲೆಗಳನ್ನು ಚಿಗುರಿಸಲಾರ ಈ ಮನುಷ್ಯ? ಕೊಳ್ಳಕ್ಕಿಳಿಯುತ್ತಿದ್ದ ಗದ್ದಿಗಪ್ಪನೊಳಗೆ ಇವೆಲ್ಲಾ ಕುಣಿತಕ್ಕಿಟ್ಟುಕೊಂಡವು.
ಯಾವತ್ತೂ ಅಷ್ಟು ದೊಡ್ಡ ದೊಡ್ಡದಾಗಿ ಯೋಚಿಸಿ ಗೊತ್ತಿರದ ಅಥವಾ ಅಂಥ ಆಲೋಚನೆಗಳಿಗೆ ಹೊಂದುವಂಥ ಪರಿಕರಗಳೇ ಅಪರಿಚಿತವಾಗಿರುವಾಗ ಇಂಥೆಲ್ಲಾ ಆಲೋಚನೆಗಳು ತನ್ನೊಳಗೆ ನುಡಿಯುತ್ತಿರುವುದಾದರೂ ಎಂತು? ಇದು ನಾನೇನಾ? ಇಲ್ಲಾ ಯಾರೋ ಗುರುತು ಪರಿಚಯವಿಲ್ಲದ ಲೋಕ ಜ್ಞಾನಿಯೊಬ್ಬ ನನ್ನೊಳಗೆ ಕೂತು ಹಿಂಗೆಲ್ಲಾ ಏನೇನೋ ಆಡಿಸುತ್ತಿದ್ದಾನಾ? ಗದ್ದಿಗಪ್ಪ ಗೊಂದಲಕ್ಕೊಳಗಾದ. ಇದಾವ ಕೇಡಿಗೆ ಇಂಥವುಗಳೆಲ್ಲಾ ನನ್ನನ್ನು ಮುತ್ತಿಕೊಳ್ಳುತ್ತಿವೆ? ನನಗೆ ಈ ಯಾವುಗಳ ಗಂಧ ಗಾಳಿಯಿಲ್ಲದಿದ್ದಾಗ ಅದೆಷ್ಟು ಖುಷಿಯಾಗಿದ್ದೆ ನನ್ನೂರಿನಲ್ಲಿ? ಗದ್ದಿಗಪ್ಪನಿಗೆ ಕಕರುಮಕರು ಹಿಡಿದಂಗಾತು. ನಡೆಯುತ್ತಿದ್ದವನು ಒಂದು ಚಣ ಕಾಲ್ದಾರಿಯ ಪಕ್ಕದ ದುಂಡಿಯೊಂದರ ಮೇಲೆ ಕೂತ. ಕಣ್ಣುಗಳಾಗಲೇ ಕತ್ತಲೆಯೊಂದಿಗೆ ರಾಜಿ ಮಾಡಿಕೊಂಡಿದ್ದವು. ಒಳಗೆ ನಡೆಯುತ್ತಿದ್ದದ್ದು ಕತ್ತಲೆಯ ಆಟವೋ ಇಲ್ಲಾ ಅದನ್ನು ಮಂಕುಗೆಡವುವ ಬೆಳಕಿನ ಕರಾಮತ್ತೋ ಯಾವೊಂದೂ ನಿಖರವಾಗುತ್ತಿಲ್ಲ. ಅವನಿಗೀಗ ಒಳಗಿನದು ಹೊರಗೂ ಮುಂದುವರೆಯುತ್ತಿರುವಂತೆ. ಹೊರಗಿನದು ಒಳಕ್ಕಿಳಿದು ಹರಡಿಕೊಳ್ಳಲು ಹವಣಿಸುತ್ತಿರುವಂತೆ. ಅವೆರಡೂ ತಂತಮ್ಮ ಮೇಲಾಟಕ್ಕಾಗಿ ಜಿದ್ದಿಗೆ ಬಿದ್ದು ಕಸರತ್ತು ನಡೆಸುತ್ತಿರುವಂತೆ ಭಾಸವಾಗುತ್ತಾ ಹೋಯ್ತು. ಒಂದಷ್ಟೊತ್ತು ಕಲ್ಲಿನಂತೆ ಕೂತ.
“ಚಲನೆಯಿಲ್ಲದೆಡೆ ಮನುಷ್ಯ ಅಸಹಾಯಕನಾಗಿಬಿಡುತ್ತಾನೆ. ಬೇಕಿಲ್ಲದ್ದಕ್ಕೆಲ್ಲಾ ಕಾತರಿಸುತ್ತಾ ತನ್ನ ನೆಮ್ಮದಿಯನ್ನು ತಾನೇ ಕಳೆದುಕೊಳ್ಳುತ್ತಾನೆ. ಹರಿವ ನೀರು ಹರಿದರೆ ತಾನೆ ಅದು ತಿಳಿತುಕೊಳ್ಳುವುದು? ಬೀಸುವ ಗಾಳಿ ಬೀಸಿದರೆ ತಾನೆ ಅದರ ಇರುವಿಕೆ ಸಾಬೀತಾಗುವುದು? ಅಂತೆಯೇ ಗಿಡಮರಗಳು ಚಿಗಿತರೆ ತಾನೆ ಅದಕ್ಕಿರುವ ಹಳೆಯ ಬೇರುಗಳು ರುಜುವಾತಾಗುವುದು? ಮನುಷ್ಯ ಈ ನೀರಿನಂತೆ, ಈ ಗಾಳಿಯಂತೆ, ಈ ಗಿಡಮರಗಳಂತೆ ತಿಳಿಯಾಗಿರಬೇಕು. ಮೈ, ಮನಸ್ಸುಗಳಿಗೆ ಅಂಟಿರುವ ಹಿಮ ಕರಗಬೇಕು. ಕರಗಿದ ಹಿಮ ನೀರಾಗಿ ಗದಗದ ಹರಿಯುವಂತೆ ನಾವೂ ಹರಿಯುತ್ತಿರಿಬೇಕು...”
ಅದೊಂದು ಹಿಮಾಲಯದ ತಪ್ಪಲಿನಲ್ಲಿ ಕೂತು, ತನ್ನಂತೆಯೇ ನಿರ್ಮೋಹಿಯಾಗುವ ದಾರಿಯಲ್ಲಿದ್ದ ಸಹ ಪಯಣಿಗನೊಬ್ಬ ಆಡಿದ್ದ ಮಾತುಗಳು, ಹತ್ತದಿನೈದು ವರ್ಷಗಳ ನಂತರ ಮತ್ತೆ ನೆನಪಾದವು. ಗದ್ದಿಗಪ್ಪನಿಗೆ ಅವತ್ತು ಅವನಾಡಿದ ಮಾತುಗಳು ಒಗಟುಗಳಂತೆ ಕಂಡಿದ್ದವು. ಇವತ್ತೂ ಅವುಗಳು ಆಟೋಈಟೋ ಅರ್ಥ ಮಾಡಿಕೊಳ್ಳುವ ದಾರಿಯನ್ನು ಅಪರಿಚಿತಗೊಳಿಸುತ್ತಿವೆ. ಆದರೆ ಅವತ್ತು ಅವುಗಳನ್ನಾಡುವ ಹೊತ್ತಿನಲ್ಲಿ ಆ ಪಯಣಿಗನ ಮುಖದಲ್ಲಾಡುತ್ತಿದ್ದ ಪ್ರಸನ್ನ ಭಾವಕ್ಕೆ ಎಂಥದೋ ವಿಸ್ಮಯದ ನಂಟಿದೆ ಅಂತ ಗದ್ದಿಗಪ್ಪನಿಗೆ ಅನಿಸತೊಡಗಿತು.
ಕೂತಿದ್ದ ಗದ್ದಿಗಪ್ಪ ಚಕ್ಕನೆ ಎದ್ದು ನಡೆಯಹತ್ತಿದ. ಇನ್ನೊಂದತ್ತು ಮಾರು ನಡೆದರೆ ಅವತ್ತು ಸೀತಾಳೊಂದಿಗೆ ಕೂಡಿದ ತಾಣ. ಕೊಂಚ ನವಿರಾಗಿ ತೀಡತೊಡಗಿದ್ದ ತಂಗಾಳಿ ಗದ್ದಿಗಪ್ಪನಿಗೆ ಹಿತವೆನಿಸಿತು. ಕೊಳ್ಳದ ತಳದಿಂದ ಯಾವುದೋ ಹಕ್ಕಿಯೊಂದರ ಸಿಳ್ಳಿನಂತಹ ದನಿಯೊಂದು ಕತ್ತಲೆದೆಯನ್ನು ಸೀಳುತ್ತಾ ಅಲೆದಾಡುತ್ತಿತ್ತು. ತನ್ನ ಮಗ ಗಾಂಧಿ ಸಾಕಿ ಸಲಹಿದ್ದ ಹಕ್ಕಿಗಳ ಸಂಸಾರ ನೆನಪಿಗೆ ಬಂತು. ಅವುಗಳಲ್ಲಿ ಒಂದು ಹಕ್ಕಿ ಬೆಳಗಿನ ಜಾವದಲ್ಲಿ ಇಂಥದ್ದೇ ಸಿಳ್ಳು ಹೊಡೆದು ಕೂಕಾಕುತ್ತಿತ್ತು. ಮಗ ಬದುಕಿದ್ದರೆ ತನ್ನ ಬಾಳಿನ ಪಯಣ ಊರಿನ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ಅಲ್ಲಿನ ಹೊಲ, ಮನೆ, ಗಿಡ, ಮರ, ಪ್ರಾಣಿ, ಪಕ್ಷಿಗಳೇ ತನಗೆ ನಿತ್ಯದ ಸಂಗಾತಿಗಳಾಗುತ್ತಿದ್ದವು. ಒಮ್ಮೆಗೆ ಎತ್ತಿ ಕುಕ್ಕಿದಂತೆ ತನ್ನ ಬದುಕಿನ ಲಯ ತಪ್ಪಿದ್ದು, ಅದು ಗದುಮಿದ್ದ ದಾರಿಯಲ್ಲಿ ನಡೆದದ್ದು... ಗದ್ದಿಗಪ್ಪನೊಳಗೆ ಸಂಕಟ ಸೂಡಾಡತೊಡಗಿತು. ಅದೀಗ ಆ ಚಣಕ್ಕೆ ಅವನಿಗೆ ಬೇಡವಾದ ನೆನಪಾಗಿತ್ತು. ಅದನ್ನು ಮರೆಸಲು ನಾವಿದ್ದೇವೆ ಎಂಬಂತೆ ಮೊದಲು ಕೂಗಿದ ಹಕ್ಕಿಯ ಕೂಗಿಗೆ ತಾನು ನಡೆಯುತ್ತಿದ್ದ ದಾರಿಯ ಮೇಗಡೆಯಿಂದ ಮತ್ತೊಂದು ಹಕ್ಕಿ ಅದೇ ದನಿಯಲ್ಲಿ ಓಗೊಟ್ಟಿತು. ಅವುಗಳ ಕರೆ ಮತ್ತು ಓಗೊಡುವಿಕೆಗಳು ಕತ್ತಲೆದೆಯ ನೀರವತೆಯಲ್ಲಿ ಅನುರಣಿಸತೊಡಗಿದವು. ಗದ್ದಿಗಪ್ಪನೊಳಗಿನ ಸಂಕಟದ ಕಾವು ಕೊಂಚ ಕುಗ್ಗಿತು. ಅದರೆಡೆಯಲ್ಲಿ ಹಕ್ಕಿಗಳ ಕೂಗಿನ ನಿನಾದ ನೆಲೆಸತೊಡಗಿತು. ಸಂಜೆಯಿಂದ ಮುನಿಸಿಕೊಂಡಿದ್ದ ನಕ್ಷತ್ರಗಳು ಒಂದೊಂದಾಗಿ ಮುಖ ತೋರತೊಡಗಿದ್ದವು.
ಇನ್ನೇನು ಆ ಕೂಡಿಕೆಯ ತಾವಿಗೆ ತಲುಪಿದೆ ಅನ್ನುವ ಹೊತ್ತಿಗೆ ಗದ್ದಿಗಪ್ಪನಿಗೆ ಹಿಂದಿನಿಂದ ಏನೋ ಜರುಕಿದಂಥ ಸದ್ದಾಯ್ತು. ಯಾವುದಾದರೂ ಕಾಡು ಪ್ರಾಣಿ ಹೊಂಚು ಹಾಕಿಕೊಂಡು ಹಿಂಬಾಲಿಸುತ್ತಿದೆಯಾ ಅಂತ ಗಕ್ಕನೆ ಹಿಂದಿರುಗಿ ನೋಡಿದ. ಮಸಿಗತ್ತಲಿನಲ್ಲಿ ಏನೊಂದೂ ಗೋಚರಿಸಲಿಲ್ಲ. ಯಾವೊಂದು ಸದ್ದೂ ಕಿವಿಗೆ ಬೀಳಲಿಲ್ಲ. ಒಂದು ಚಣ ನಿಂತಲ್ಲೇ ನಿಂತು ಸುತ್ತಲೂ ದಿಟ್ಟಿಸಿದ. ತಾನು ನಿಜವಾಗಿಯೂ ಸದ್ದು ಕೇಳಿಸಿಕೊಂಡಿದ್ದ ಅಥವಾ ಅದು ಮನಸ್ಸಿನ ಭ್ರಾಂತೋ ಅಂತ ಯೋಚಿಸಿದ. ಮತ್ತೆ ಸದ್ದಿನ ಪುನರಾವರ್ತನೆ ಆಗದ ಕಾರಣಕ್ಕೆ ಅದು ಭ್ರಾಂತೇ ಇರಬೇಕು ಅನ್ನುವ ತೀರ್ಮಾನಕ್ಕೆ ಬಂದ. ಮತ್ತೆ ಒಂದೆರಡು ಹೆಜ್ಜೆ ಇಡುವಷ್ಟರಲ್ಲಿ ಅದೇ ಸದ್ದು. ನಿಂತಲ್ಲೇ ಮೈಯ್ಯೆಲ್ಲಾ ಕಣ್ಣಾದ ಗದ್ದಿಗಪ್ಪ. ಒಂದು ಪಕ್ಷ ತಕ್ಷಣಕ್ಕೆ ಯಾವುದೇ ಧಾಳಿಯಾದರೆ ಅದಕ್ಕೆ ಪ್ರತಿರೋಧ ಒಡ್ಡುವ ಮನಸ್ಸಾಗಲಿ ಅಥವಾ ಆಯುಧವಾಗಲಿ ಅವನಿಗಿರಲಿಲ್ಲ. ಹಿಂಗೂ ಕೊನೆಯಾಗಬೇಕೆಂದಿದ್ದರೆ ಆಗಿ ಬಿಡಲಿ ಅಂದುಕೊಂಡ. ಹಂಗಾಗಿ ಮತ್ತೆ ತಿರುಗಿ ನೋಡಲು ಹೋಗಲಿಲ್ಲ. ಇದುವರೆಗಿನ ಬದುಕಿನಲ್ಲಿ ಬೆಚ್ಚಿ ಬೀಳಿಸಿರುವುದು ಇಂಥ ಅನಿರೀಕ್ಷಿತಗಳೇ ತಾನೇ. ಅಷ್ಟಕ್ಕೂ ಬಿಡಿಸಿಕೊಳ್ಳಲು ಯತ್ನಿಸಿದಂತೆಲ್ಲಾ ಅವುಗಳು ಬಿಡಿಸಿಕೊಳ್ಳಲಾಗದಂಥ ಜೀರ್ಗುಣಿಕೆ ಹಾಕಿಕೊಳ್ಳುತ್ತಿವೆ. ಹಂಗಾಗಿ ಅವು ತೋರಿದ ದಾರಿಯಲ್ಲಿ ನಾನು ನಡೆಯಬಲ್ಲೆನಷ್ಟೇ!
ಸದ್ದು ತೀರಾ ಹತ್ತಿರವಾಗಿ ಪೂರಾ ಹಿಂದೆ ಬಂದು ನಿಂತಿತು. ಗದ್ದಿಗಪ್ಪನೂ ಕಲ್ಲಿನಂತೆ ನಿಂತ. ಒಂಚೂರು ಕೊಸರಾಡಿದ ಸದ್ದಿಗೆ ಕೈಗಳೆರಡು ಮೂಡಿ, ಅವು ಹಿಂದಿನಿಂದ ಗದ್ದಿಗಪ್ಪನನ್ನು ಬಳಸಿದವು. ಅವುಗಳ ಆ ಮೆಲು ಸ್ಪರ್ಷ, ಏರಿಳಿತದ ಉಸಿರಾಟ ಗದ್ದಿಗಪ್ಪನನ್ನು ಅಲುಗಾಡಿಸಿತು. ಮರುಚಣವೇ ಹಿಂದಿರುಗಿ ಮುಖಕ್ಕೆ ಮುಖವಿಟ್ಟು ನೋಡಿದರೆ ಸೀತಾ! ಅಯ್ಯೋ ಇದೆಂಥಾ ಅಗ್ನಿಪರೀಕ್ಷೆ? ಈ ಚಣದವರೆವಿಗೂ ಯಾವುದನ್ನು ಮೀರಬೇಕು ಅಂದುಕೊಳ್ಳುತ್ತಾ ಏನೆಲ್ಲಾ ತಕದಿಮಿಗಳಿಗೆ ಕೈಗೊಂಬೆಯಾಗಿದ್ದೆನೋ, ಈಗ ನೋಡಿದರೆ ಅದೇ ತಿರುಗಾಮುರುಗಾ ಆಗುತ್ತಿದೆ. ಏಕಾಏಕಿ ಪರೀಕ್ಷೆಗಿಳಿದು ಬಿಟ್ಟಿದೆ. “ಅಯ್ಯೋ ಸೀತಾ ಇದೇನು ಈ ಕತ್ಲಲ್ಲಿ ಅದೂ ಒಬ್ಬಳೇ?” ಅಂದ ಗದ್ದಿಗಪ್ಪ. ಅದು ಕಾಡಿನೆದೆಯ ಮಾತುಗಳಂತೆ ಅಪರಿಚಿತ ಅನಿಸಿತು ಸೀತಾಳಿಗೆ. “ನೀವು ಸಂಜೆಯಿಂದ ಒಂಥರಾ ಇದ್ದದ್ದನ್ನ ನೋಡ್ತಿದ್ದೆ. ಎಷ್ಟೋ ಹೊತ್ತಾದ ಮೇಲೆ ಯಾವಾಗ ನೀವು ಇಲ್ಲಿಗೆ ಹೊರಟಿರೋ ನಿಮ್ಮ ಹಿಂದೆಯೇ ಬಂದೆ,” ಅಂದಳು ಸೀತಾ ಗದ್ದಿಗಪ್ಪನ ಎದೆಯ ಮೇಲೆ ಮುಖವಿಟ್ಟು.
ಅಂದು ಸೀತಾಳ ತುಟಿಗೆ ಮುತ್ತಿನ ಮಳೆಗರೆದಿದ್ದ ಗದ್ದಿಗಪ್ಪನ ತುಟಿಗಳು ಆ ಚಣ ಸೀತಾಳ ಹಣೆಗೊಂದು ಹೂ ಮುತ್ತಿಟ್ಟವು. ಆ ಮುತ್ತಿನಲ್ಲಿದ್ದ ವಾತ್ಸಲ್ಯ ಸೀತಾಳನ್ನು ಬೆಚ್ಚಿಸಿತು. ಆದರೂ ಬಿಗಿಯಾಗಿ ಅಪ್ಪಿದಳು. ಆ ಅಪ್ಪುಗೆಯನ್ನು ಮೆಲ್ಲನೆ ಸಡಿಲಿಸಿಕೊಂಡು ಸೀತಾಳನ್ನು ಹತ್ತಿರಲ್ಲಿದ್ದ ಕಲ್ಲಿನತ್ತ ನಡೆಸಿಕೊಂಡು ಹೋದ ಗದ್ದಿಗಪ್ಪ. ಅದರ ಹಾಸಿನಲ್ಲಿ ಇಬ್ಬರೂ ಕೂತರು. ಗದ್ದಿಗಪ್ಪ ಆ ಚಣ ಮಿಲನದ ಕಾತರದಲ್ಲಿಲ್ಲ ಎಂಬುದು ಸೀತಾಳಿಗೆ ಮನವರಿಕೆಯಾಯ್ತು. ಅಂತೆಯೇ ತಾನೇ ಮುಂದುವರೆದಿದ್ದಕ್ಕೆ ಮುಜುಗರವಾಯ್ತು. ಆ ಮುಜುಗರದ ಜೊತೆಗೆ ಎಂದಿನ ಅಸಹಾಯಕ ಭಾವವೊಂದು ಅವಳೊಳಗೆ ಆಡತೊಡಗಿತು. ಆ ಕಾರಣಕ್ಕೆ ಅವಳು ಗದ್ದಿಗಪ್ಪನಿಂದ ಒಂಚೂರು ಅತತಕ್ಕೆ ಸರುಕಿದಳು.
ಅದೆಷ್ಟೋ ಹೊತ್ತು ಇಬ್ಬರ ನಡುವೆ ಮಾತುಗಳು ಮೂಡಲಿಲ್ಲ. ಅವರು ಕುಳಿತಿದ್ದ ಕಲ್ಲು ಹಾಸಿನ ಮೇಲೆ ಮರವೊಂದರ ಕೊಂಬೆ ಬಾಗಿಕೊಂಡಿತ್ತು. ಅದರೆಡೆಯಿಂದ ಘಮಲೊಂದು ತೇಲಿ ಬರುತಿತ್ತು. ಮೊದಲಿನ ಹಕ್ಕಿಗಳ ಕೂಗು ಪ್ರತಿ ಕೂಗುಗಳು ನಿಂತೋಗಿದ್ದವು. ಬದಲಿಗೆ ಅವರುಗಳ ಎದುರಿಗಿದ್ದ ಕೊಳ್ಳದ ಕಡೆಯಿಂದ ನರಿಗಳ ಕೂಗು ಶುರುವಾಗಿತ್ತು. ನಕ್ಷತ್ರಗಳಿಗೆ ಮುಂಚಿಗಿಂತ ಹೊಳಪು ಬಂದಿತ್ತು. ಆ ಹೊಳಪು ಕತ್ತಲಿನ ಕಂದನಂತೆ ಸುತ್ತಲಿನ ಗಿಡಮರಗಳ ತುದಿಯಲ್ಲಿ ಆಡುತ್ತಿತ್ತು. ಮೇಲೋಗಿದ್ದ ಮಿಂಚುಳುಗಳ ಹಿಂಡು ಅಲ್ಲಿ ನೀವಿರದ್ದಕ್ಕೆ ಇಲ್ಲಿ ಬಂದೆವು ಎಂಬಂತೆ ಅವರ ಸುತ್ತಲೂ ಮಿಣುಕತೊಡಗಿದವು. ಗದ್ದಿಗಪ್ಪನೇ ಎದ್ದು ಅವಳ ಬಳಿ ಹೋಗಿ ಅವಳೆದುರಿಗೆ ಕೂತ. ಎರಡೂ ಕೈಗಳನ್ನೂ ಅವಳ ಭುಜದ ಮೇಲಿಟ್ಟ. ಕೇವಲ ವಲ್ಲಿಯಿಂದ ಕವುಕಂಡಿದ್ದ ಅವನ ಅಂಗಿ ಇಲ್ಲದ ಮೈ ಸೀತಾಳನ್ನು ಕೆಣಕಿತು. ಮೈ ಬಿಸಿಯಾಗತೊಡಗಿತು. ಮೆಲ್ಲಗೆ ಭುಜದ ಮೇಲಿದ್ದ ಅವನ ಕೈಗಳನ್ನು ಸ್ಪರ್ಷಿಸಿದಳು. ನಂತರ ಬಿಗಿಯಾಗಿ ಹಿಡಿದೆಳೆದು ಗದ್ದಿಗಪ್ಪನನ್ನು ಅಪ್ಪಿಕೊಂಡಳು. ಗದ್ದಿಗಪ್ಪನ ಒಂದು ಕೈ ಸೀತಾಳ ಮೇಲಿದ್ದರೆ ಮತ್ತೊಂದು ಅವಳ ಕೆದರಿದ ತಲೆಯನ್ನು ನೇವಳಿಸುತ್ತಿತ್ತು. ಆ ನೇವರಿಕೆ, ಆ ಸ್ಪರ್ಷದಲ್ಲಿ ಬೆಂಕಿಯ ಬದಲಿಗೆ ವಾತ್ಸಲ್ಯದ ಸಳುಕಾಡುತ್ತಿರುವುದು ಸೀತಾಳಿಗೆ ಅರಿವಾಗತೊಡಗಿದ್ದೇ ಅವಳು ಅಪ್ಪುಗೆಯಿಂದ ಬಿಡಿಸಿಕೊಂಡು ತುಂಬಾ ಹತ್ತಿರದಿಂದ ಗದ್ದಿಗಪ್ಪನನ್ನೇ ದಿಟ್ಟಿಸಿದಳು. ಅವನ ಮುಖದಲ್ಲಿ ಕಾಮದ ಕಾವಿನ ಬದಲು ಪ್ರಸನ್ನ ಭಾವವೊಂದು ಆಡುತ್ತಿತ್ತು. ಒಮ್ಮೆಗೇ ಬೆಚ್ಚಿದಳು. ಎದ್ದವಳೇ ಹೊರಡಲು ಅನುವಾದಳು. ಅವಳ ಕೈ ಹಿಡದು ಕೂರಿಸಿಕೊಂಡ ಗದ್ದಿಗಪ್ಪ, “ತಳ ಕಾಣದ ಬಾವಿಯಲ್ಲಿ ಮತ್ತೆ ಬೀಳೋದು ಬೇಡ ಅನಿಸುತ್ತೆ ಸೀತಾ. ಅದೇನು ಒಂದು ಸಾರ್ತಿಗೆ, ಒಂದು ದಿನಕ್ಕೆ ಮುಗಿಯುವ ಮಾತೆ? ಮತ್ಮತ್ತೆ ಹೆಡೆಯೆತ್ತಿ ಆಡುವ ಅದರ ಹೊಡೆತವನ್ನು ತಡೆದುಕೊಳ್ಳುವಷ್ಟು ತ್ರಾಣವೆಲ್ಲಿದೆ ನಮಗೆ? ಹೆಂಗೋ ಆಟೋ ಈಟೋ ನಿಸೂರಾಗಿರುವ ಈ ಬದುಕಿನಲ್ಲಿ ಮತ್ತೆ...” ಗದ್ದಿಗಪ್ಪನ ಕಂಗಳು ತುಂಬಿ ಬಂದವು. ಗಂಟಲು ಕಟ್ಟಿತು. ಸೀತಾಳಿಗೆ ಗದ್ದಿಗಪ್ಪನ ಮಾತುಗಳು ಸರಿಯಾಗಿ ಅರ್ಥವಾಗಲಿಲ್ಲ. ಆದರೆ ಅವಳಲ್ಲೂ ಬಿಕ್ಕಳಿಕೆಗಳಾಡಿದವು. ಅವಮಾನದ ಬಳ್ಳಿಯೊಂದು ತನ್ನನ್ನು ಸುತ್ತಿಕೊಳ್ಳುತ್ತಿರುವಂತೆ ಭಾಸವಾಗಿ ಕಂಪಿಸಿದಳು.
ಗದ್ದಿಗಪ್ಪ ತನ್ನ ಗತಕಾಲದ ಕಥೆಯನ್ನು ಹೇಳಿ ಮುಗಿಸುವಷ್ಟರಲ್ಲಿ ಸೀತಾಳನ್ನು ಸುತ್ತಿಕೊಳ್ಳುತ್ತಿದ್ದ ಅವಮಾನದ ಬಳ್ಳಿ ಹಂಗೇ ಕರಗತೊಡಗಿತ್ತು. ಗದ್ದಿಗಪ್ಪನ ಬಗ್ಗೆ ಮಮಕಾರ ಮೂಡಿತು. ಈವರೆವಿಗೂ ತನ್ನೊಳಗೆ ಬಚ್ಚಿಟ್ಟುಕೊಂಡಿದ್ದ, ದಿನವೂ ಅವುಗಳಿಂದ ಸುಟಿಕೆ ಹಾಕಿಸಿಕೊಳ್ಳುತ್ತಿದ್ದ, ಅವುಗಳನ್ನೆಲ್ಲಾ ಬಿಚ್ಚಿ ಹೇಳಿ ಹಗುರಾಗಬೇಕು ಅನಿಸಿತು ಸೀತಾಳಿಗೆ. ಬೀಸುತ್ತಿದ್ದ ಮೇಗಾಳಿಗೆ ಮೈಯೊಡ್ಡಿದ ಸೀತಾಳ ನರನಾಡಿಗಳೊಳಗೆ ಅದು ಹೊಸಾ ಚೈತನ್ಯವೊಂದು ಹೊಸರಾಡಿಸಿತು.
ಕೃತಿ : ಗಂಗಪಾಣಿ (ಕಾದಂಬರಿ)
ಲೇಖಕರು : ಎಸ್. ಗಂಗಾಧರಯ್ಯ
ಪ್ರಕಾಶನ : ಜೀರುಂಡೆ ಪುಸ್ತಕ, ಬೆಂಗಳೂರು
ಪುಟ : 248
ಬೆಲೆ: ರೂ. 280
ಮುಖಪುಟ ವಿನ್ಯಾಸ: ವಿನಯ ಸಾಯ
ಖರೀದಿಗೆ ಸಂಪರ್ಕ : 9742225779
ಎಸ್ ಗಂಗಾಧರಯ್ಯ
ಕತೆಗಾರ, ಅನುವಾದಕ ಎಸ್. ಗಂಗಾಧರಯ್ಯ ಇಂಗ್ಲಿಷ್ ಸಾಹಿತ್ಯದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಈಗ ತಿಪಟೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. 'ನವಿಲ ನೆಲ', 'ಒಂದು ಉದ್ದನೆಯ ನೆರಳು', ಕಥಾ ಸಂಕಲನಗಳು, ‘ಬಯಲ ಪರಿಮಳ’ ವ್ಯಕ್ತಿಚಿತ್ರ ಸಂಪುಟ; ವೈಕಂ ಕಥೆಗಳು, ಲೋರ್ಕಾ ನಾಟಕ, ಚಿಂಗೀಝ್ ಐತ್ಮತೋವ್ ಕಾದಂಬರಿ ಜಮೀಲಾ, ಮೊದಲಾದ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ. 'ವೈಕಂ ಕಥೆಗಳು’ ಪುಸ್ತಕಕ್ಕೆ 1996ರ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.
ಮುದ್ರಣಕ್ಕೆ/ಬಿಡುಗಡೆಗೆ ಸಿದ್ಧವಾಗುತ್ತಿರುವ ನಿಮ್ಮ ಕೃತಿಗಳ ಆಯ್ದ ಭಾಗಗಳ ಪ್ರಕಟಣೆಗಾಗಿ ಸಂಪರ್ಕಿಸಿ team@konaru.org