ಕತೆ ಕಟ್ಟುವ ಯಂತ್ರ ಮತ್ತು ಒಳಹೊರಗೆ ಸುಳಿವ ಪ್ರೇತಾತ್ಮ
ಕೃತಕ ಬುದ್ಧಿಮತ್ತೆಯ ಸೃಷ್ಟಿಶೀಲತೆ: ಆತಂಕ, ಸವಾಲು ಮತ್ತು ಅವಕಾಶ
ಬ್ರಿಟಿಷ್ ವೈಜ್ಞಾನಿಕ ಕಾದಂಬರಿಕಾರ ಆರ್ಥರ್ ಸಿ. ಕ್ಲಾರ್ಕ್ (Arthur C. Clarke) 1960ರ ದಶಕದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಗ್ಗೆ ಪ್ರಚಲಿತಗೊಳಿಸಿದ ನಾಣ್ಣುಡಿಗಳಲ್ಲಿ ಒಂದರ ಸಾರ ಹೀಗಿದೆ: “Any sufficiently advanced technology is indistinguishable from magic.” — ಬಹಳಷ್ಟು ಮುಂದುವರಿದ ಯಾವುದೇ ತಂತ್ರಜ್ಞಾನವು ಇಂದ್ರಜಾಲಕ್ಕಿಂತ ಬೇರೆಯಲ್ಲವೆನ್ನಿಸುತ್ತದೆ. ಕೃತಕ ಬುದ್ಧಿಮತ್ತೆಯನ್ನು ಕುರಿತ ಇಂದಿನ ಚರ್ಚೆಗಳನ್ನು ಗಮನಿಸಿದಾಗ ಆ ಮಾತು ಮತ್ತೆಮತ್ತೆ ನೆನಪಾಗುತ್ತದೆ.
ತಂತ್ರಜ್ಞಾನವನ್ನು ಕುರಿತ ಬೆರಗು ಮತ್ತು ಆತಂಕ ಎರಡೂ ಹೊಸತಲ್ಲ. ಹೊಸ ತಂತ್ರಜ್ಞಾನವೊಂದು ಬಂದಾಗ ಅದನ್ನು ಕುರಿತ ಬೆರಗು, ಮತ್ತು ಅದಕ್ಕಿಂತಲೂ ಹೆಚ್ಚು ಆತಂಕ ಸಹಜವಾದದ್ದು. ಅದು ತಂದೊಡ್ಡಬಹುದಾದ ಬದಲಾವಣೆಗಳ ಆಳ ಮತ್ತು ವ್ಯಾಪ್ತಿ ನಮಗಿನ್ನೂ ಸ್ಪಷ್ಟವಾಗಿಲ್ಲದ ಕಾಲದಲ್ಲಿ ಆತಂಕದ ತೀವ್ರತೆ ಹೆಚ್ಚಾಗಿರುತ್ತದೆ. ಬರವಣಿಗೆಯೆಂಬ ತಂತ್ರಜ್ಞಾನವು ಮೊದಲ ಬಾರಿಗೆ ಎದುರಾದಾಗ, ಸಾಕ್ರೆಟೀಸ್, “ಬರವಣಿಗೆಯು ಮನುಷ್ಯನ ನೆನಪಿನ ಶಕ್ತಿಯನ್ನು ಕುಂಠಿತಗೊಳಿಸುತ್ತದೆ ಮತ್ತು ಜ್ಞಾನದ ಭ್ರಮೆಯನ್ನು ಹುಟ್ಟುಹಾಕುತ್ತದೆ,” ಎಂಬ ಸಂಶಯವನ್ನು ವ್ಯಕ್ತಪಡಿಸಿದ್ದ. ಮುದ್ರಣಯಂತ್ರವು ಪ್ರಚಲಿತವಾದಾಗ, ಪುಸ್ತಕಗಳು ಅಷ್ಟು ಸುಲಭವಾಗಿ ಸಿಗುವಂತಾದರೆ ಜ್ಞಾನದ ಮೇಲಿನ ಧಾರ್ಮಿಕ ಸಂಸ್ಥೆಗಳ ನಿಯಂತ್ರಣ ಸಡಿಲವಾಗಿ ಸಮಾಜದ ನೈತಿಕತೆ ಕುಸಿಯುತ್ತದೆ ಎಂಬ ಆತಂಕ ಯುರೋಪಿನಲ್ಲಿತ್ತು. ಇನ್ನು ನಮ್ಮದೇ ಕಾಲಕ್ಕೆ ಬಂದರೆ, ಅಂತರ್ಜಾಲವು ನಮ್ಮ ಆಳವಾದ ಓದಿನ ಕ್ರಮವನ್ನೇ ಕಸಿದುಕೊಳ್ಳುತ್ತಿದೆಯೇ ಎಂದು ಪ್ರಶ್ನಿಸಿದ ನಿಕೊಲಸ್ ಕಾರ್ (Nicholas Carr) ಅವರ 2008ರ ಪ್ರಭಾವಶಾಲಿ ಪ್ರಬಂಧವನ್ನು (Is Google Making Us Stupid? What the Internet is doing to our brains) ಕೂಡ ಈ ಹಿನ್ನೆಲೆಯಲ್ಲಿ ನೆನಪಿಸಿಕೊಳ್ಳಬಹುದು.
ಸಿನೆಮಾ, ಟೆಲಿವಿಜನ್, ಇಂಟರ್ನೆಟ್ — ಪ್ರತಿಯೊಂದು ಮುಂದುವರಿದ ತಂತ್ರಜ್ಞಾನವೂ ಅದರೊಟ್ಟಿಗೆ ಹತ್ತುಹಲವು ಅವಕಾಶಗಳನ್ನೂ ಸವಾಲುಗಳನ್ನೂ ಹೊತ್ತುಕೊಂಡು ಬಂದುವು. ಪ್ರತಿ ಸಂದರ್ಭದಲ್ಲೂ ಆತಂಕದ ಒಂದು ಪಾಲು ನ್ಯಾಯೋಚಿತವಾಗಿದ್ದರೆ ಉಳಿದದ್ದು ಅತಿಶಯವಾಗಿತ್ತು. ಸಮಾಜವು ಕಾಲಕ್ರಮೇಣ ಆಯಾ ತಂತ್ರಜ್ಞಾನಗಳೊಂದಿಗೆ ಹೊಂದಿಕೊಂಡು ಅವುಗಳನ್ನು ತನ್ನ ಬಳಕೆಗೆ ಒಗ್ಗಿಸಿಕೊಂಡಿತು; ಮಿತಿಗಳನ್ನು ಗುರುತಿಸುತ್ತ ಮುಂದೆ ಸಾಗಿತು.
ಮೊದಲಿಗೆ ಮಾಟಮಂತ್ರದಂತೆ ತೋರುವ ಹೊಸ ತಂತ್ರಜ್ಞಾನದ ಬಗೆಗಿನ ಬೆರಗು ಮತ್ತು ಆತಂಕ ಎರಡರ ತೀವ್ರತೆಯೂ ಕಾಲ ಸರಿದಂತೆ ಕಡಿಮೆಯಾಗುತ್ತ ಹೋಗುತ್ತದೆ. ತಂತ್ರಜ್ಞಾನದ ಚರಿತ್ರೆಯುದ್ದಕ್ಕೂ ನಾವು ಈ ಪ್ರವೃತ್ತಿಯನ್ನು ಗುರುತಿಸಬಹುದು. ಏಐ ಕುರಿತಾದ ಚರ್ಚೆಗಳು ಸರಿಯಾದ ದಾರಿಯಲ್ಲಿ ನಡೆಯಬೇಕೆಂದರೆ ಮೊದಲಿಗೆ ನಾವು ಈ ವಿದ್ಯಮಾನವನ್ನು ಗಮನಿಸಬೇಕು. ತುಸು ಎಚ್ಚರತಪ್ಪಿದರೂ ಅವು ಅತಿಶಯಗಳ ಹುದುಲಿನಲ್ಲಿ ಸಿಲುಕಿಕೊಳ್ಳುತ್ತವೆ.

ಹಾಗಿದ್ದೂ ಈಗಿನ ಪರಿಸ್ಥಿತಿ ತುಸು ಬೇರೆಯದಾಗಿದೆ. ಏಐನ ಬೆಳವಣಿಗೆಯ ವೇಗ ಮತ್ತು ಅದರ ಚಾಚು ನಾವು ಚರಿತ್ರೆಯಲ್ಲಿ ಇದುವರೆಗೂ ಕಂಡ ಬಹುತೇಕ ತಂತ್ರಜ್ಞಾನಗಳಿಗಿಂತ ಹಿರಿದಾಗಿದೆ. ಮುದ್ರಣಯಂತ್ರದ ಪ್ರಭಾವವು ಇಡಿಯ ಜಗತ್ತಿಗೆ ತಲುಪಲು ನೂರಾರು ವರ್ಷಗಳು ಹಿಡಿದುವು. ರೇಡಿಯೊ ಮತ್ತು ಟೆಲಿವಿಜನ್ ಎಲ್ಲರ ಕೈಗೆಟುಕಲು ಕೆಲವು ದಶಕಗಳಾದರೆ ಇಂಟರ್ನೆಟ್ ಮತ್ತು ಮೊಬೈಲ್ ತಂತ್ರಜ್ಞಾನ ಒಂದು ತಲೆಮಾರಿನಷ್ಟು ಕಾಲವನ್ನು ತೆಗೆದುಕೊಂಡುವು. ಇವೆಲ್ಲ ತಂತ್ರಜ್ಞಾನಗಳ ಕಸುವೂ ಹೋಲಿಕೆಯಲ್ಲಿ ಸಾವಧಾನವಾಗಿ ಹೆಚ್ಚುತ್ತ ಹೋಯಿತು. ಇಂದಿನ ಏಐನ ಸಾಮರ್ಥ್ಯವು ತಿಂಗಳುಗಳಲ್ಲಿ, ಕೆಲವೊಮ್ಮೆ ಕೆಲವೇ ವಾರಗಳಲ್ಲಿ ಬದಲಾಗುತ್ತ ಹೆಚ್ಚುತ್ತ ಹೋಗುತ್ತಿರುವುದಷ್ಟೇ ಅಲ್ಲದೇ ಅದು ಒಂದಾದಮೇಲೊಂದು ಎತ್ತರೆತ್ತರದ ಮೆಟ್ಟಿಲುಗಳನ್ನು ಜಿಗಿಯುತ್ತ ದಾಟುತ್ತಿದೆ. ಐದು ವರ್ಷಗಳ ಹಿಂದೆ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಯಾವ ಸಂಶೋಧಕರಿಗೂ ಏಐ ಇಂದು ತಲುಪಿರುವ ಮಟ್ಟವನ್ನು ತಲುಪಲು ಸಾಧ್ಯವೆಂದು ಕೂಡ ಊಹಿಸಲಾಗಿರಲಿಲ್ಲ. ಮುಂದೇನಾಗಬಹುದು ಎಂಬುದನ್ನು ಊಹಿಸುವುದೂ ಸುಲಭವಲ್ಲ. ಸಂಶೋಧನಾ ವಲಯದಲ್ಲಿ ಚಾಲ್ತಿಯಲ್ಲಿರುವ, “Prediction is very hard, especially about the future,” ಎಂಬ ಅರೆತಮಾಷೆಯ ಮಾತು ಇಲ್ಲಿ ಪೂರ್ತಿಯಾಗಿ ದಿಟ.
ಹಾಗಾಗಿ, ನಾವಿಂದು ಆ ವಿಷಯದ ಬಗ್ಗೆ — ಈ ಬರಹವನ್ನೂ ಸೇರಿಸಿದಂತೆ — ಏನೇ ಚರ್ಚಿಸಿದರೂ ಬಲು ಎಚ್ಚರದಿಂದ, ‘ನಮಗೆ ಇಂದು ತಿಳಿದಿರುವ ಮಟ್ಟಿಗೆ’ ಎಂದು ಗುರುತಿಸುತ್ತಲೇ ಮುಂದೆ ಸಾಗಬೇಕು.
ತಂತ್ರಜ್ಞಾನದ ಬಗೆಗಿನ ಆತಂಕ ಹೇಗೆ ಹೊಸದಲ್ಲವೋ ಹಾಗೆಯೇ ಮನುಷ್ಯರ ಸ್ಥಾನಪಲ್ಲಟಗೊಳಿಸಬಲ್ಲ, ನಾವು ಮಾಡಬಲ್ಲದ್ದನ್ನು ನಮಗಿಂತ ಚೆನ್ನಾಗಿ ಮಾಡಬಲ್ಲ ಸ್ವಯಂಚಾಲಿತ ಯಂತ್ರಗಳ (automaton) ಪರಿಕಲ್ಪನೆಯೂ ಹೊಸದೇನಲ್ಲ. ಭೋಜರಾಜನು ರಚಿಸಿದ್ದೆಂದು ಹೇಳಲಾಗುವ 11ನೆಯ ಶತಮಾನದ ಸಮರಾಂಗಣಸೂತ್ರಧಾರ ಎಂಬ ವಾಸ್ತುಶಾಸ್ತ್ರ ಗ್ರಂಥವು ಯಂತ್ರಶಾಸ್ತ್ರಕ್ಕೆ ಮೀಸಲಾದ ಒಂದು ಅಧ್ಯಾಯವನ್ನು ಒಳಗೊಂಡಿದೆ. ಅದರಲ್ಲಿ ಅರಮನೆಯ ಸೇವೆ, ಯುದ್ಧ, ಮನರಂಜನೆಗಳಿಗೆ ಬಳಸಬಹುದಾದ ಸ್ವಯಂಚಾಲಿತ ಯಂತ್ರಪುರುಷರ ರಚನೆಯ ವಿವರಣೆಯಿದೆ. ಆಧುನಿಕ ಯುಗದಲ್ಲಿಯಂತೂ ಇದೊಂದು ಗೀಳಿನ ಸ್ವರೂಪವನ್ನೇ ಪಡೆದುಕೊಂಡಿತು. ಚೆಕ್ ಬರಹಗಾರ ಕಾರೆಲ್ ಚಾಪೆಕ್ 1920ರಲ್ಲಿ ಬರೆದ R.U.R. (Rossum’s Universal Robots) ಎಂಬ ನಾಟಕದಿಂದಲೇ “robot” ಎಂಬ ಪದ ಹುಟ್ಟಿಕೊಂಡದ್ದು. ಚೆಕ್ನ robota ಎಂದರೆ ಬಲವಂತದ ದುಡಿಮೆ. ಆ ನಾಟಕದಲ್ಲಿ ಕಾರ್ಖಾನೆಯ ಕೆಲಸಗಾರರ ಬದಲಿಗೆ ಸೃಷ್ಟಿಸಲ್ಪಟ್ಟ ಯಂತ್ರಪುರುಷರು ಕೊನೆಗೆ ತಮ್ಮ ಸೃಷ್ಟಿಕರ್ತರ ಮೇಲೆಯೇ ತಿರುಗಿಬೀಳುತ್ತಾರೆ. ಆಲನ್ ಟ್ಯೂರಿಂಗ್ (Alan Turing) ಆಧುನಿಕ ಗಣಕಯಂತ್ರಗಳ ಸೈದ್ಧಾಂತಿಕ ಬುನಾದಿಯನ್ನು ಹಾಕಿಕೊಟ್ಟ ನಂತರವಂತೂ ಈ ಚಿಂತನೆಯು ಹೆಚ್ಚಿನ ತೀವ್ರತೆಯನ್ನು ಪಡೆಯಿತು. ಗಣಕಯಂತ್ರಗಳು ಮನುಷ್ಯರಿಗೆ ಹೋಲಿಸಬಹುದಾದಂಥ ಬುದ್ಧಿಮತ್ತೆಯನ್ನು ತೋರ್ಪಡಿಸುವ ಕಸುವನ್ನು ಅಳೆಯಲು ಅವರು “ಟ್ಯೂರಿಂಗ್ ಪರೀಕ್ಷೆ”ಯನ್ನು (Turing Test) ನಿರೂಪಿಸಿದ್ದರು. ಅದೀಗ ಹಳತಾದ ಪರಿಕಲ್ಪನೆಯೆನ್ನುವುದು ಬೇರೆಯ ಮಾತು.

ಯಂತ್ರಗಳಿಗೆ ನುಡಿಯನ್ನು ‘ಕಲಿಸಿ’ ಅವು ನಮ್ಮನ್ನು ಅನುಕರಿಸುವಂತೆ ಮಾಡುವ ಪ್ರಯತ್ನವೂ ಇಂದಿನದ್ದಲ್ಲ. 1966ರಲ್ಲಿ MITಯ ಗಣಕವಿಜ್ಞಾನಿ ಜೋಸೆಫ್ ವೈಜ಼ೆನ್ಬಾಮ್ (Joseph Weizenbaum) “ಎಲೈಜ಼ಾ” (ELIZA) ಎಂಬ ತಂತ್ರಾಂಶವನ್ನು ರೂಪಿಸಿದ್ದರು. ಅದು ಮೊದಲ ಚಾಟ್ಬಾಟ್ಗಳಲ್ಲೊಂದು. ಎಲೈಜ಼ಾ ಚಿಕಿತ್ಸಕ ಮನಃಶಾಸ್ತ್ರಜ್ಞರ ಸೋಗುಹಾಕುತ್ತ ಅದನ್ನು ಬಳಸುವವರೊಟ್ಟಿಗೆ ಟೈಪ್ ಮಾಡಿದ ಪಠ್ಯದ ಮೂಲಕ ಸಂವಾದ ಮಾಡುತ್ತಿತ್ತು. ಯಂತ್ರಗಳು ತಾವು ಹೇಳಿದ್ದನ್ನು ಗ್ರಹಿಸುತ್ತಿದೆ, ಸಂವೇದನೆಯಿಂದ ಪ್ರತಿಕ್ರಿಯಿಸುತ್ತಿದೆ ಎಂದು ನಂಬಿ ಅವಕ್ಕೆ ಮಾನವಸಹಜ ಗುಣಗಳನ್ನು ಆರೋಪಿಸುವ ಪ್ರವೃತ್ತಿಯನ್ನು “ಎಲೈಜ಼ಾ ಪ್ರಭಾವ” (ELIZA Effect) ಎಂದು ಕರೆಯಲಾಯಿತು.
ಹಾಗೆಯೇ ಕೃತಕ ಬುದ್ಧಿಮತ್ತೆಯು ಸಾಹಿತ್ಯವನ್ನು ಸೃಷ್ಟಿಸಬಲ್ಲುದೇ ಎಂಬ ಪ್ರಶ್ನೆಯು ಚಾಟ್ಜಿಪಿಟಿ, ಜೆಮಿನೈ ಮೊದಲಾದ ಹರಟೆಮಲ್ಲ/ಮಲ್ಲಿಯರ ಒಡಹುಟ್ಟಿದ್ದಲ್ಲ. ಒಂದು ಮಹತ್ತ್ವದ ಉದಾಹರಣೆಯನ್ನು ಕೊಡಬಹುದಾದರೆ, ಸುಮಾರು ಆರು ದಶಕಗಳ ಹಿಂದೆಯೇ, 1967ರಲ್ಲಿ ಇಟಲಿಯ ಕಾದಂಬರಿಕಾರ ಇಟಾಲೋ ಕ್ಯಾಲ್ವಿನೋ (Italo Calvino) ಈ ಪ್ರಶ್ನೆಯನ್ನು ತಮ್ಮ ಒಂದು ಉಪನ್ಯಾಸದಲ್ಲಿ ಎತ್ತಿದ್ದರು. ಅದು ಮುಂದೆ Cybernetics and Ghosts ಎಂಬ ಹೆಸರಿನ ಪ್ರಬಂಧವಾಗಿಯೂ ಅದು ಮತ್ತು ಅದಕ್ಕೆ ಸಂಬಂಧಿತ ಉಳಿದ ಬರಹಗಳು The Literature Machine ಎಂಬ ಪ್ರಬಂಧಸಂಕಲನವಾಗಿಯೂ ಪ್ರಕಟವಾಯಿತು.
ಕ್ಯಾಲ್ವಿನೋರ ನೇರ ಮತ್ತು ಪ್ರಚೋದನಕಾರಿಯಾದ ಪ್ರಶ್ನೆ, ನಾವು ಮುಂದಿನ ದಿನಗಳಲ್ಲಿ ಸಾಹಿತ್ಯವನ್ನು ಸೃಷ್ಟಿಸಬಲ್ಲ ಒಂದು ಯಂತ್ರವನ್ನು ಊಹಿಸಬಲ್ಲೆವೇ ಎಂಬುದಾಗಿತ್ತು. ಆ ಊಹೆಗೆ ಆ ಕಾಲದಲ್ಲಿ ತಾಂತ್ರಿಕ ನೆಲೆಗಟ್ಟು ಇರಲಿಲ್ಲವಾದರೂ ಬೌದ್ಧಿಕ ನೆಲೆಗಟ್ಟು ಇದ್ದಿತು. ಅದನ್ನು ಕಟ್ಟಿಕೊಟ್ಟವರು ಯುರೋಪಿನ ಸಂರಚನಾವಾದಿ ಚಿಂತಕರು. ಆಗಿನ ಹಲವು ಪ್ರಮುಖ ಭಾಷಾಶಾಸ್ತ್ರಜ್ಞರು, ಮಾನವಕುಲಶಾಸ್ತ್ರಜ್ಞರು, ಸಾಹಿತ್ಯ ಸಿದ್ಧಾಂತಿಗಳು ಜಗತ್ತಿನ ಬೇರೆಬೇರೆ ಸಂಸ್ಕೃತಿಗಳ ಜಾನಪದ ಕಥೆ ಮತ್ತು ಪುರಾಣಗಳ ಒಳರಚನೆಯಲ್ಲಿರುವ ವಿನ್ಯಾಸಗಳನ್ನು ಹುಡುಕುತ್ತಿದ್ದರು.
ಅದಾಗಲೇ ರಷ್ಯನ್ ಭಾಷಾಶಾಸ್ತ್ರಜ್ಞ ವ್ಲಾದಿಮಿರ್ ಪ್ರಾಪ್ (Vladimir Propp) 1928ರಲ್ಲಿ ಪ್ರಕಟವಾದ Morphology of the Folktale ಎಂಬ ತಮ್ಮ ಕೃತಿಯಲ್ಲಿ ರಷ್ಯನ್ ಜಾನಪದ ಕಥೆಗಳಲ್ಲಿ ಮರುಕಳಿಸುವ ಮೂವತ್ತೊಂದು ಮೂಲಭೂತ ರಚನಾತ್ಮಕ ಘಟಕಗಳನ್ನು ಅಥವಾ ಕಾರ್ಯಗಳನ್ನು (functions) ಗುರುತಿಸಿದ್ದರು. ನೂರು ಜಾನಪದ ಕಥೆಗಳ ಪಠ್ಯಸಂಚಯವನ್ನು ಪರಿಶೀಲಿಸಿ ಅವರು ಈ ನಿರ್ಣಯಕ್ಕೆ ಬಂದಿದ್ದರು. ಮುಖ್ಯ ಪಾತ್ರಗಳು ಮನೆಬಿಟ್ಟು ಹೋಗುವುದು, ಅವರ ಮೇಲೆ ಬೆದರಿಕೆಯ ಕಟ್ಟಳೆ ಹೇರಲಾಗುವುದು, ಅದನ್ನವರು ಮೀರುವುದು, ಬೇಹುಗಾರಿಕೆಯಿಂದ ಮಾಹಿತಿ ಸಂಗ್ರಹಣೆ, ಮಾಯಮಂತ್ರದ ನೆರವು, ವೈರಿಯೊಂದಿಗೆ ಹೋರಾಟ ಮತ್ತು ಗೆಲುವು, ಮರಳುವಿಕೆ, ಕೊನೆಗೆ ಮದುವೆ — ಇವೇ ಮೊದಲಾದ ಮೂವತ್ತೊಂದು ಘಟಕಗಳ ಸರಳರೇಖಾತ್ಮಕ ಜೋಡಣೆಯಿಂದ ಬಹುಪಾಲು ಜಾನಪದ ಕಥೆಗಳ ರಚನೆಯನ್ನು ವಿವರಿಸಬಹುದು ಎಂಬುದು ಅವರ ಗ್ರಹಿಕೆಯಾಗಿತ್ತು. ಮುಂದೆ ಫ್ರೆಂಚ್ ಮಾನವಕುಲಶಾಸ್ತ್ರಜ್ಞ ಕ್ಲಾದ್ ಲೆವಿ-ಸ್ಟ್ರಾಸ್ (Claude Levi-Strauss) ಪುರಾಣಕಥೆಗಳ ಸಂರಚನೆಯಲ್ಲಿ ಆಳವಾಗಿ ಬೇರೂರಿದ್ದ ಹಲವು ಇಬ್ಬಗೆಗಳನ್ನು ಗುರುತಿಸಿ, ಒಂದಕ್ಕೊಂದು ಸಂಬಂಧವಿಲ್ಲದ ದೂರದೂರದ ದೇಶಗಳ ಪುರಾಣಗಳಲ್ಲೂ ಅವು ಒಂದೇ ರೀತಿಯ ಪಾತ್ರವನ್ನು ವಹಿಸುವುದನ್ನು ತೋರಿಸಿದರು. ಅಮೆರಿಕನ್ ಬರಹಗಾರ ಜೋಸೆಫ್ ಕ್ಯಾಂಪ್ಬೆಲ್ (Joseph Campbell) ತಮ್ಮ The Hero with a Thousand Faces ಪುಸ್ತಕದಲ್ಲಿ ಕಥಾನಾಯಕನ ಪಯಣದ ಮೂಲಮಾದರಿಯನ್ನು ಮುಂದಿಡುತ್ತ ಎಲ್ಲ ನಾಯಕಪ್ರಧಾನ ಕಥೆಗಳ ಏಕರೂಪತೆಯ (monomyth) ಪರಿಕಲ್ಪನೆಯನ್ನು ಮಂಡಿಸಿದ್ದರು.
ಇವನ್ನೆಲ್ಲ ಓದಿಕೊಂಡಿದ್ದ ಕ್ಯಾಲ್ವಿನೋರ ತರ್ಕ ಸರಳವಾಗಿತ್ತು: ಕಥೆಯೆಂಬುದು ಬಹಳಷ್ಟು, ಆದರೆ ಪರಿಮಿತವಾದ ಹುರುಳುಗಳು, ಕಾರ್ಯಘಟಕಗಳು ಮತ್ತು ವಿನ್ಯಾಸಗಳ ಸಂಗ್ರಹದಿಂದ ಕೆಲವನ್ನು ಆಯ್ದು ನಿರ್ದಿಷ್ಟವಾದ ಸಂಯೋಜನೆಯಲ್ಲಿ ಜೋಡಿಸಲ್ಪಟ್ಟ artifact ಎಂದಾದಲ್ಲಿ ಇಂಥ ಸಂಯೋಜನೆಗಳನ್ನು ಮನುಷ್ಯರಿಗಿಂತ ಅತಿಹೆಚ್ಚು ಪ್ರಬಲವಾದ ಯಂತ್ರವೊಂದು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಮಾಡಬಲ್ಲುದಲ್ಲವೇ? ಹಾಗಾದಲ್ಲಿ ಸಾಹಿತ್ಯ ಸೃಷ್ಟಿಸುವ ಯಂತ್ರವನ್ನು ನಾವು ಊಹಿಸಿಕೊಳ್ಳಬಹುದಲ್ಲವೇ? ಕ್ಯಾಲ್ವಿನೋರ ಪ್ರಶ್ನೆಗಳು ತಾತ್ವಿಕವಾದುವಾಗಿದ್ದುವು, ತಾಂತ್ರಿಕವಾದುವಲ್ಲ. ಅಂಥ ಯಂತ್ರಕ್ಕೆ ಕಥೆಗಳ ಒಳಸಂರಚನೆಯ ನಿಯಮಗಳನ್ನು, ಸಮಗ್ರ ಪದಕೋಶವನ್ನು, ವ್ಯಾಪಕ ಕಥಾವಸ್ತುಗಳನ್ನು ಊಡಿಸಿದರೆ ಅದು ಲೆಕ್ಕವಿಲ್ಲದಷ್ಟು ಸಾಹಿತ್ಯಿಕ ಪಠ್ಯಗಳನ್ನು ಸೃಷ್ಟಿಸಬಲ್ಲ ವ್ಯವಸ್ಥೆಯಾಗಿ ರೂಪುಗೊಳ್ಳುತ್ತದೆ ಎಂಬ ಚಿತ್ರಣವನ್ನು ಕಟ್ಟಿಕೊಟ್ಟರು.
ಇದನ್ನವರು ದುರಂತವೆಂದು ಬಗೆಯದೇ ಒಂದು ಆಸಕ್ತಿಕರ ತಾರ್ಕಿಕ ಹರವು ಎಂದು ಭಾವಿಸಿದರು. ಇದರ ದೆಸೆಯಿಂದ “ಕೃತಿಕಾರ” ಎಂಬ ಪರಿಕಲ್ಪನೆಯ ಬಗೆಗಿನ ರಮ್ಯ ಗ್ರಹಿಕೆ ಇಲ್ಲವಾಗುತ್ತದೆ ಎಂದು ಸೂಚಿಸಿದರು. ಯಂತ್ರವೂ ಸಾಹಿತ್ಯವನ್ನು ರಚಿಸಬಲ್ಲದು ಎಂಬುದನ್ನು ಒಪ್ಪಿಕೊಂಡ ಒಡನೆಯೇ ಕೃತಿಕಾರರ ಪಾತ್ರವೇ ಬದಲಾಗುತ್ತದೆ; ಕೃತಿಕಾರ ಎಂದರೆ ದೈವದತ್ತ ಪ್ರೇರಣೆಯಿಂದಲೋ ಎಂಬಂತೆ ಶೂನ್ಯದಿಂದ ಬ್ರಹ್ಮಾಂಡವನ್ನು ಸೃಷ್ಟಿ ಮಾಡುವ ಎಣೆಯಿಲ್ಲದ ಮೇಧಾವಿ ಎಂಬ ಆಧುನಿಕ ನಾಗರಿಕತೆಯು ಕಟ್ಟಿಕೊಟ್ಟ ಚಿತ್ರವು ಮಸುಕಾಗುತ್ತದೆ. ಬರಹಗಾರರು ಸೃಷ್ಟಿಕರ್ತರಲ್ಲ, ಸೃಷ್ಟಿನಿರ್ವಾಹಕರು — ಬಲು ಕಾಳಜಿಯಿಂದ ಯಂತ್ರಕ್ಕೆ ನಿಯತಾಂಕಗಳನ್ನು ಊಡಿಸಿ ಅದು ಅಗಿದುಗುಳುವ ಸಾವಿರಾರು ಸಾಧ್ಯತೆಗಳಲ್ಲಿ ಯಾವುದನ್ನು ಆಯ್ದುಕೊಳ್ಳಬೇಕು ಎಂಬುದನ್ನು ಅಷ್ಟೇ ಎಚ್ಚರದಿಂದ ತೀರ್ಮಾನಿಸುವ ಮೇಲ್ವಿಚಾರಕರು.
ಇಲ್ಲಿಗೇ ನಿಲ್ಲಿಸಿದ್ದರೆ ಇದೊಂದು ಬರಿಯ ರೋಚಕ ಊಹಾಸಿದ್ಧಾಂತವಾಗುತ್ತಿತ್ತಷ್ಟೇ. ಕ್ಯಾಲ್ವಿನೋರ ಪ್ರಬಂಧದ ದಿಟವಾದ ಒಳನೋಟ ಅದರ ಹೆಸರಿನಲ್ಲಿಯೇ ಇದೆ: Cybernetics and Ghosts. ನಾವು ಇದುವರೆಗೆ ನೋಡಿದ ಯಂತ್ರ ಒಂದು ಭಾಗವಾದರೆ ಪ್ರೇತಾತ್ಮಗಳು ಅದರ ಮತ್ತೊಂದು ಭಾಗ. ಯಂತ್ರವು ಇಟ್ಟಳವನ್ನೇನೋ ಕಟ್ಟುತ್ತದೆ. ಆದರೆ, ಅದಕ್ಕೆ ಜೀವ ತುಂಬುವುದಿಲ್ಲ. ಅದು ಯಂತ್ರದಲ್ಲಿಲ್ಲ; ಅದಿರುವುದು ಒಳಹೊರಗೆ ಸುಳಿದಾಡುವ ಪ್ರೇತಾತ್ಮಗಳಲ್ಲಿ. ಅವುಗಳ ವಿಷಯಕ್ಕೆ ಮತ್ತೆ ಬರೋಣ.
ಪ್ರಾಪ್, ಲೆವಿ-ಸ್ಟ್ರಾಸ್, ಕ್ಯಾಂಪ್ಬೆಲ್ ಮೊದಲಾದವರ ಅಧ್ಯಯನಗಳ ತೀರ್ಮಾನಗಳು, ಅವುಗಳ ಎಲ್ಲ ಪೂರ್ವಗ್ರಹ ಮತ್ತು ಮಿತಿಗಳೊಂದಿಗೂ ಸುಸಂಬದ್ಧವಾಗಿರುವುದು (ಕಡೆಯ ಪಕ್ಷ ಹಾಗೆ ತೋರುವುದು) ಆಕಸ್ಮಿಕವಲ್ಲ. ಜಗತ್ತಿನ ಬೇರೆಬೇರೆ ಮೂಲೆಗಳ, ಒಂದಕ್ಕೊಂದು ಸಂಪರ್ಕವಿಲ್ಲದ ಸಂಸ್ಕೃತಿಗಳ ಸೃಷ್ಟಿಕಥೆ, ಜಲಪ್ರಳಯಗಳ ಕಥೆ, ವೀರಗಾಥೆಗಳಲ್ಲಿ ಅಚ್ಚರಿಗೊಳಿಸುವಷ್ಟು ಸಾಟಿಯಿದೆ. ಗಿಲ್ಗಮೆಶ್ನ ಕಥೆಯಲ್ಲಿ ಬರುವ ಮಹಾಪ್ರವಾಹದ ಚಿತ್ರಣಕ್ಕೂ ಮನುಸ್ಮೃತಿಯಲ್ಲಿ ಬರುವ ಮನು-ಮತ್ಸ್ಯಪುರಾಣದ ಚಿತ್ರಣಕ್ಕೂ ಸಾಮ್ಯವಿದೆ. ಬೇರೆಬೇರೆ ಸಂಸ್ಕೃತಿಗಳ ವೀರಗಾಥೆಗಳ ಚಲನೆಯ ಚೌಕಟ್ಟು ಬಹಳಷ್ಟು ಮಟ್ಟಿಗೆ ಒಂದೇ ಆಗಿರುತ್ತದೆ. ಇದು ಏಕೆ?
ಮಾನವನಿಗೆ ಕಥೆ ಹೇಳುವುದು ಸಹಜವಾದದ್ದು; ನಮ್ಮ ಹುಟ್ಟು ಮತ್ತು ವಿಕಾಸದ ಜೊತೆಗೆಯೇ ಬಂದ ಲಕ್ಷಣವದು. ನಮ್ಮ ಜೀವನಾನುಭವವೇ ಯಾವತ್ತಿಗೂ ಕಥೆಗಳ ದ್ರವ್ಯ. ಆದಿಮ ಮನುಷ್ಯರ ಪ್ರತಿಯೊಂದು ಅನುಭವದ ತೀವ್ರತೆ ಬಹಳವಾಗಿದ್ದರೂ ಅನುಭವಲೋಕದ ವಿಸ್ತಾರ ಕಿರಿದಾಗಿತ್ತು. ಬದುಕುಳಿಯುವುದೇ ಪ್ರತಿದಿನದ ಸವಾಲಾಗಿರುವಾಗ ದಿಟ್ಟಿಯು ಅದರಾಚೆಗಿನ ಜಗತ್ತನ್ನು ಗಮನಿಸುವುದು ದುಸ್ತರ. ಬೇರೆಬೇರೆ ಭೂಪ್ರದೇಶಗಳಲ್ಲಿನ ಸಮುದಾಯಗಳ ಅನುಭವಲೋಕದ ನಿರ್ದಿಷ್ಟ ರೂಪ ಭಿನ್ನವಾದರೂ ಚೌಕಟ್ಟು ಒಂದೇ. ಹಾಗಾಗಿ ಅವುಗಳಿಂದ ಹುಟ್ಟಿದ ಕಥೆಗಳ ಒಳವಿನ್ಯಾಸಗಳೂ ಒಂದನ್ನೊಂದು ಹೋಲುತ್ತವೆ.
ಇಲ್ಲಿ ಸ್ಪಷ್ಟಪಡಿಸಬೇಕಾದ್ದು: ಹಳಮೆಯಲ್ಲಿ ಮನುಷ್ಯ ಮನೋಲೋಕವು ಮಟ್ಟಸವಾಗಿತ್ತು ಎಂದು ಹೇಳುತ್ತಿರುವುದಲ್ಲ. ಸರಳವಾಗಿದ್ದದ್ದು ಒಳಮನಸ್ಸಲ್ಲ, ಹೊರಜಗತ್ತಿನ ರಚನೆ. ಹೊರಜಗತ್ತಿನ ಸಾಧ್ಯತೆಗಳ ಸಂಖ್ಯೆ ಮಿತವಾಗಿತ್ತು. ಹಾಗಾಗಿಯೇ ಅವುಗಳಿಂದ ಹುಟ್ಟಿದ ಕಥೆಗಳಲ್ಲಿ ಮಾದರಿಗಳನ್ನು ಗುರುತಿಸುವುದು ಸಾಧ್ಯವಾಯಿತು.
ಕಾಲಕ್ರಮೇಣ ಮನುಷ್ಯನ ಜಗತ್ತು ವಿಸ್ತಾರಗೊಂಡಿತು. ಸಂಸ್ಕೃತಿ, ಸಮುದಾಯಗಳ ನಡುವಿನ ಕೊಡುಕೊಳೆ, ವಲಸೆಗಳು, ವ್ಯಾಪಾರ, ನಾಗರಿಕತೆಯ ವಿಕಾಸ, ಮತಪಂಥಗಳ ಹುಟ್ಟು, ಯುದ್ಧ ಮೊದಲಾದ ರಾಜಕೀಯ ಪಲ್ಲಟಗಳು — ಒಂದೊಂದು ಸ್ತರದ ಸೇರ್ಪಡೆಯಾದಂತೆ ಮನುಷ್ಯನ ಅನುಭವದ ಚೌಕಟ್ಟು ವಿಸ್ತಾರಗೊಳ್ಳುತ್ತ ಸಾಗಿತು. ನಮ್ಮ ಪುರಾಣದ ಕಥೆಗಳೇ ಆಗಲಿ ಬಾಯ್ದೆರೆಯ ಮಹಾಕಾವ್ಯಗಳೇ ಆಗಲಿ, ಹೊಸಕಾಲದ ಕಾದಂಬರಿಯೊಂದರ ಮಾನಸಿಕ ಸಂಕೀರ್ಣತೆಗೂ ಆಳಕ್ಕೂ ಯಾವ ರೀತಿಯಲ್ಲೂ ಕಡಿಮೆಯಿಲ್ಲ. ಇನ್ನು ಆಧುನಿಕ ಕಾಲವಂತೂ ಸಂಕೀರ್ಣತೆಯ ಸ್ಫೋಟವನ್ನು ಕಂಡಿತು. ಆ ಅನುಭವಲೋಕವು ಸರಳಸೂತ್ರಗಳಲ್ಲಿ ಕಟ್ಟಿಹಿಡಿಯಲಾಗದಂಥದ್ದು. ಸಾಹಿತ್ಯವು ಅದನ್ನು ಮಾರ್ಪೊಳೆಯಿಸುವ (ಯಾವಾಗಲೂ ನಂಬಲಾಗದ) ಕನ್ನಡಿ.
ಹಾಗಿದ್ದಲ್ಲಿ, ಕ್ಯಾಲ್ವಿನೋ ನಮ್ಮೆದುರಿಗಿಟ್ಟ ಸಾಹಿತ್ಯಸೃಷ್ಟಿಯ ಯಂತ್ರವನ್ನು ಕುರಿತು ನಾವಿಂದು ಹೇಗೆ ಚಿಂತಿಸಬಹುದು? ಇಂದಿನ ಹಿರಿ ನುಡಿಮಾದರಿಗಳು (Large Language Models) ಈ ಕಾಲದ ಕತೆಗಳನ್ನು ಹೇಳಿಯಾವೇ?
ಮೇಲಿನ ಪ್ರಶ್ನೆಗೆ ಉತ್ತರ ಸಿಗಬಹುದಾದರೆ ಅದು ಹಿರಿ ನುಡಿಮಾದರಿಗಳ ಆಂತರಿಕ ಸ್ವರೂಪದಲ್ಲಿಯೇ ಇರಬೇಕು. ಅವನ್ನು ಆಧರಿಸಿದ ಇಂದಿನ ಏಐ ಪರಿಕರಗಳು ಕ್ಯಾಲ್ವಿನೋ ಊಹಿಸಿದ ಯಂತ್ರಕ್ಕೆ ಎಷ್ಟರಮಟ್ಟಿಗೆ ಸಂವಾದಿಯಾಗಿವೆ ಎಂಬುದನ್ನು ತಿಳಿಯಬೇಕೆಂದರೆ ಅವುಗಳ ಒಳಗೆ ಏನಾಗುತ್ತಿದೆ ಎಂಬುದನ್ನು ತುಸುಮಟ್ಟಿಗೆ ಅರ್ಥೈಸಿಕೊಳ್ಳಬೇಕಾಗುತ್ತದೆ. ತಾಂತ್ರಿಕ ವಿವರಗಳಿಗೆ ಹೋಗದೇ ಒಂದು ಸ್ಥೂಲ ಚಿತ್ರಣವನ್ನು ಕೆಳಗೆ ಕೊಡಲಾಗಿದೆ.
ಹಿರಿ ನುಡಿಮಾದರಿಗಳು ಎಂದು ಕರೆಯಲ್ಪಡುವ ಈ ಏರ್ಪಾಟುಗಳು ಮಾಡುವ ಕೆಲಸವನ್ನು ಬಣ್ಣಿಸುವುದು ಸುಲಭ: ಅವು ಮಾಡುತ್ತಿರುವುದು ಮುನ್ನುಡಿಯುವಿಕೆ (prediction). ಎಂದರೆ, ಅವಕ್ಕೆ ದಕ್ಕಿರುವ ಪೂರ್ವಾಪರ ಸಂದರ್ಭದ ವ್ಯಾಪ್ತಿಯ (context window) ಆಧಾರದ ಮೇಲೆ ಮುಂಬರುವ ಪದವನ್ನು ಊಹಿಸುತ್ತವೆ, ಅಷ್ಟೇ. ಅವು ಇದನ್ನು ಕಲಿತದ್ದು ಹೇಗೆ? ಅದಾಗುವುದು ಅವುಗಳ ತರಬೇತಿಯ (training) ಮೂಲಕ. ಅಂತರ್ಜಾಲದಲ್ಲಿ ಲಭ್ಯವಿರುವ ಬೃಹತ್ ಪಠ್ಯಸಂಚಯವನ್ನು (ಡಿಜಿಟಲೀಕರಿಸಿದ ಪುಸ್ತಕಗಳು, ವೆಬ್ಸೈಟ್ಗಳು, ಲೇಖನಗಳು, ಸಂಭಾಷಣೆಗಳು, ಇತ್ಯಾದಿ) ತಮ್ಮ ತರಬೇತಿಗೆ ಬಳಸಿಕೊಂಡಿರುತ್ತವೆ. ತರಬೇತಿಯ ಸಂದರ್ಭದಲ್ಲಿ ಅವು ಮಾಡುವ ಕೆಲಸವೂ ಅದೇ: ಪಠ್ಯದ ಒಂದು ಭಾಗವನ್ನು ತೋರಿಸಿ “ಹಿಂದುಮುಂದಿನ ಪದಗಳು ಯಾವುವು?” ಅಥವಾ “ನಡುವಿನ ಪದ ಯಾವುದು?” ಎಂಬ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಕೊಡಲು ಕಲಿಯುವುದು. ಈ ಪ್ರಕ್ರಿಯೆಯನ್ನು ಹತ್ತಾರು ಕೋಟಿಗಟ್ಟಲೆ ಸಲ ಮರುಕಳಿಸಿದಾಗ ಈ ಏರ್ಪಾಟು ನುಡಿಯ ಒಳಗಿನ ವಿನ್ಯಾಸ, ಪದಗಳ ಸಂಬಂಧಾಂತರ, ಪರಿಕಲ್ಪನೆಗಳ ನಡುವಣ ನಂಟುಗಳನ್ನು ‘ಗ್ರಹಿಸಿ’ ಅದನ್ನೊಂದು ಗಣಿತದ ಮಾದರಿಯ ಮೂಲಕ ಅಡಕವಾಗಿ ಹಿಡಿದಿಡುತ್ತವೆ. ಅದುವೇ ನುಡಿಮಾದರಿ. ಅಂಥ ಒಂದು ಮಾದರಿಯು, ಈ ನುಡಿಯಲ್ಲಿ ಯಾವ ಪದದ ನಂತರ ಯಾವ ಪದ ಬರುವ ಸಾಧ್ಯತೆಯಿದೆ, ಯಾವ ಪದಕಂತೆಯು ಇನ್ನಾವ ಪದಕಂತೆಗಳ ಪಕ್ಕದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ, ಇವೇ ಮೊದಲಾದ ವಿನ್ಯಾಸಗಳನ್ನು ಗ್ರಹಿಸಿ ಮುಂಬರುವ ಪದಸಾಧ್ಯತೆಗಳ ಸಂಭವನೀಯತೆಯ ವಿತರಣೆಯನ್ನು ಗಣಿಸುತ್ತದೆ. ಒಮ್ಮೆ ಆ ವಿನ್ಯಾಸಗಳನ್ನು ಗ್ರಹಿಸಿ ಸಂಭವನೀಯತೆಯ ವಿತರಣೆಯನ್ನು ತಿಳಿದುಕೊಂಡಮೇಲೆ ನುಡಿಮಾದರಿಯು ಕೇಳಿದ ಪ್ರಶ್ನೆಗೆ ಅನುಕೂಲಕರ ಉತ್ತರವನ್ನು ಕಟ್ಟಿಕೊಡಬಲ್ಲದು.
ಈ ಪ್ರಕ್ರಿಯೆ ಕೆಲಸ ಮಾಡುತ್ತದೆ ಎಂಬ ಸಂಗತಿಯು ನುಡಿಯ ಒಂದು ಬಹುಮುಖ್ಯ ಲಕ್ಷಣವನ್ನು ತೋರಿಸಿಕೊಡುತ್ತದೆ: ಅತಿರಿಕ್ತತೆ (redundancy). ನುಡಿಯಲ್ಲಿನ ಪದಗಳು, ಅಕ್ಷರಗಳು, ಪದಗುಚ್ಛಗಳು ಯಾದೃಚ್ಛಿಕವಾಗಿ ಬರುವುದಿಲ್ಲ; ಅವುಗಳ ನಡುವೆ ಬಹಳಷ್ಟು ಊಹಿಸಬಹುದಾದ ವಿನ್ಯಾಸಗಳಿರುತ್ತವೆ. ಅದು ಹಲವು ರೂಪಗಳಲ್ಲಿ ಕಂಡುಬರುತ್ತದೆ. ಮಾಹಿತಿ ಸಿದ್ಧಾಂತದ (Information Theory) ಪ್ರವರ್ತಕ ಕ್ಲಾಡ್ ಶಾನನ್ (Claude Shannon) 20ನೆಯ ಶತಮಾನದ ಮಧ್ಯಭಾಗದಲ್ಲಿ ನುಡಿಯಲ್ಲಿನ “ಮಾಹಿತಿ ಸಾಂದ್ರತೆ”ಯನ್ನು (information density) ಸಂಖ್ಯಾಶಾಸ್ತ್ರೀಯವಾಗಿ ಅಳೆದಿದ್ದರು. ಶಾನನ್ರ ಆಟ ಎಂದೇ ಪ್ರಸಿದ್ಧವಾಗಿದ್ದ ಅವರ ಒಂದು ಆಟದಲ್ಲಿ ಪಾಲ್ಗೊಂಡವರಿಗೆ ಇಂಗ್ಲಿಷ್ ಪುಸ್ತಕದ ಯಾವುದೋ ಒಂದು ಯಾದೃಚ್ಛಿಕ ವಾಕ್ಯಭಾಗವನ್ನು ತೋರಿಸಿ ಮುಂದಿನ ಅಕ್ಷರ ಯಾವುದೆಂದು ಊಹಿಸಲು ಹೇಳಿದರೆ ಬಹುತೇಕ ಸಂದರ್ಭಗಳಲ್ಲಿ ಸರಿಯಾಗಿ ಊಹಿಸುತ್ತಿದ್ದರು. ಸಂದರ್ಭದ ವ್ಯಾಪ್ತಿ ಹೆಚ್ಚಿದಂತೆ ಊಹೆಯ ಯಶಸ್ಸಿನ ಪ್ರಮಾಣವೂ ಹೆಚ್ಚಾಗುತ್ತಿತ್ತು.
ಆದರೆ, ಕೇವಲ ವಿನ್ಯಾಸಗಳ ಎಣಿಕೆಯಿಂದ ಕಟ್ಟಿದ ಮಾದರಿಗಳು ಬಹುದೂರ ಸಾಗವು. ಯಂತ್ರಕ್ಕೆ ‘ಬೆಕ್ಕು’ ಗೊತ್ತಿದ್ದು ಅದು ‘ಬಾವುಗ’ನನ್ನು ಕಂಡಿರದಿದ್ದಲ್ಲಿ “ಕಿಟಕಿ ಸರಳುಗಳ ನಡುವೆ ತೂರಿಕೊಂಡು ಬಂದ ಬಾವುಗವು ಹಾಲಿನ ಪಾತ್ರೆಯುರುಳಿಸಿತು,” ಎಂಬುದು ಅದನ್ನು ತಬ್ಬಿಬ್ಬುಗೊಳಿಸುತ್ತದೆ. ಏಕೆಂದರೆ, ಇಂಥ ಸರಳ ಮಾದರಿಗಳು ಯಾವುದೇ ಸ್ತರದಲ್ಲಿ ಅರ್ಥವನ್ನು ಗ್ರಹಿಸಿರುವುದಿಲ್ಲ.
ಈ ಸಮಸ್ಯೆಗೆ ಪರಿಹಾರ ಬಂದದ್ದು ಭಾಷಾಶಾಸ್ತ್ರದ ಒಳನೋಟದಿಂದ. ಜಾನ್ ರ್ಯೂಪರ್ಟ್ ಫರ್ತ್ ಎನ್ನುವ ಭಾಷಾಶಾಸ್ತ್ರಜ್ಞ 1950ರ ದಶಕದಲ್ಲಿ, “ಒಂದು ಪದವನ್ನು ಅದರ ಒಡನಾಟದಿಂದ ಅರಿತುಕೊಳ್ಳುವಿರಿ.” (“You shall know a word by the company it keeps.”) ಎಂಬ ಕಲ್ಪನೆಯನ್ನು ಪ್ರಚುರಗೊಳಿಸಿದರು. ಇದೇ ಮುಂದೆ ವಿತರಿತ ಅರ್ಥಪ್ರತೀತಿಶಾಸ್ತ್ರ (Distributional Semantics) ಎಂಬ ಸಂಶೋಧನಾ ಕ್ಷೇತ್ರವಾಗಿ ಬೆಳೆಯಿತು.
ಫರ್ತ್ರ ಮಾತಿನ ಆಶಯವನ್ನು ಮನಗಾಣಲು ಒಂದು ಪುಟ್ಟ ಪ್ರಯೋಗ. ಕೆಳಗಿನ ಸಾಲುಗಳನ್ನು ಗಮನವಿಟ್ಟು ಓದಿ:
“ಆ ದಿನ ಸಂಜೆ ಆಗಸದ ತುಂಬ ಕಪ್ಪು ತುರುಮುಗಳಿದ್ದುವು. ಅವುಗಳ ಕರಿ ನೆರಳು ನೆಲದುದ್ದಕ್ಕೂ ಚಾಚಿತ್ತು. ಇನ್ನೇನು ಆ ತುರುಮುಗಳಿಂದ ಮಳೆ ಸುರಿಯಲಿತ್ತು…”
‘ತುರುಮು’ ಎಂಬ ಪದ ಕನ್ನಡದಲ್ಲಿಲ್ಲ; ಈ ಪ್ರಯೋಗಕ್ಕಾಗಿ ಸೃಷ್ಟಿಸಿದ ಕೃತಕ ಪದ. ಹಾಗಾಗಿ ಅದರ ‘ಅರ್ಥ’ ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ಆದರೂ ಮೇಲಿನ ವಾಕ್ಯಗಳಲ್ಲಿ ಆ ಹೊಸ ಪದ ಏನನ್ನು ಸೂಚಿಸುತ್ತಿದೆ ಎಂಬುದು ಕನ್ನಡ ಬಲ್ಲ ಮಗುವಿಗೂ ಸಲೀಸಾಗಿ ಅರ್ಥವಾಗುತ್ತದೆ. ಆ ಅರ್ಥ ಆ ಪದದ ಒಳಗಿಂದ ಬರಲಿಲ್ಲ; ‘ಆಗಸ’, ‘ಕಪ್ಪು’, ‘ನೆರಳು’, ‘ಮಳೆ’ ಎಂಬ ಒಡನಾಡಿಗಳಿಂದ ಬಂತು. ಭಾಷೆಯ ಒಳಗೆ ಅರ್ಥ ಹೇಗೆ ರೂಪುಗೊಳ್ಳುತ್ತದೆ ಎಂಬುದರ ಒಂದು ಸಣ್ಣ ಪುರಾವೆ ಇದು. ಯಂತ್ರಗಳಿಗೆ ಈ ತತ್ತ್ವವನ್ನು ಕಲಿಸುವ ಬಗೆಯೂ ಇದೇ. ಒಂದು ಪದದ ಅರ್ಥವನ್ನು ಅದರ ಒಡನಾಟದ ವಿನ್ಯಾಸಗಳಲ್ಲಿ ಹಿಡಿಯುವುದು.
ಸರಳವಾಗಿ ಹೇಳಬೇಕೆಂದರೆ: ಒಂದು ಪದದ “ಅರ್ಥ” ಎನ್ನುವುದು ಹಲವು ಆಯಾಮಗಳಲ್ಲಿ ವಿತರಣೆಗೊಂಡಿರುತ್ತದೆ; ಹಾಗೂ ಇಂಥ ಹಲವು ವಿತರಿತ ಆಯಾಮಗಳು ಒಟ್ಟು ಸೇರಿಯೇ ಅದಕ್ಕೊಂದು “ಅರ್ಥ”ವನ್ನು ಕೊಡುತ್ತವೆ. ಒಂದು ನುಡಿಯಲ್ಲಿನ ಪದಗಳ ನಡುವಿನ ಇಂಥ ಅಗೋಚರ ಸಂಬಂಧವನ್ನು ಅರ್ಥಪ್ರತೀತಿಯ ಅವಕಾಶ (semantic space) ಅಥವಾ ಗಣಿತದ ಸದಿಶ ಅವಕಾಶದಲ್ಲಿ (vector space) ಅಡಕವಾಗಿ ಹಿಡಿದಿಡಬಹುದು. ಅರ್ಥೈಸುವುದು ಎನ್ನುವ ಪ್ರಕ್ರಿಯೆ ಉಂಟಾಗುವುದೇ ಆ ಅವಕಾಶದಲ್ಲಿ. ಇಂದಿನ ಹಿರಿ ನುಡಿಮಾದರಿಗಳ ಬುನಾದಿಯಲ್ಲಿ ಇದೇ ತತ್ತ್ವ ಕೆಲಸ ಮಾಡುತ್ತದೆ.
ಅಲ್ಲಿಂದ ಮುಂದೆ ತಂತ್ರಜ್ಞಾನವು ಬಹಳ ವೇಗವಾಗಿ ಸಾಗಿತು. ಇಂದಿನ ಹಿರಿ ನುಡಿಮಾದರಿಗಳು ಒಂದು ಲೇಖನದ, ಕಥೆಯ, ಸಂಭಾಷಣೆಯ ಸಾವಿರಾರು ಪದಗಳ ಸಂದರ್ಭವನ್ನು ಏಕಕಾಲದಲ್ಲಿ ಪರಿಗಣಿಸಿ ಮುಂಬರುವುದನ್ನು ಊಹಿಸಬಲ್ಲವು. ಇವುಗಳ ತಳಹದಿಯಲ್ಲಿರುವುದು ‘ಮಾರ್ಪಿಗ’ (transformer) ಎಂಬ ಹೊಸ ಕೃತಕ ನರಜಾಲ ವಾಸ್ತುಶಿಲ್ಪ (neural network architecture). ಅಪಾರವಾದ ಮಾಹಿತಿಯನ್ನು ಸಂಚಯಿಸಿ, ಜೊತೆಗೆ ಎಣೆಯಿಲ್ಲದಷ್ಟು ಗಣಕ ಸಂಪನ್ಮೂಲವನ್ನು ಬಳಸಿ ಕಟ್ಟಿದ ಮಾದರಿಗಳು ಇವು. ಹಲವು ಪುಟಗಳು ಅಥವಾ ಉದ್ದಾನುದ್ದ ಲೇಖನದಷ್ಟು ಸಂದರ್ಭ ವ್ಯಾಪ್ತಿಯನ್ನೂ ಒಮ್ಮೆಗೇ ಪರಿಗಣಿಸಬಲ್ಲಂಥವು. ಇಂಥ ಒಂದೇ ನುಡಿಮಾದರಿಯು ಕಂಪ್ಯೂಟರ್ ಪ್ರೋಗ್ರಾಮ್ಗಳನ್ನು ಬರೆಯುವುದರಿಂದ ಹಿಡಿದು ಭಾಷಾಂತರದವರೆಗೆ ವೈವಿಧ್ಯಮಯ ಕೆಲಸಗಳನ್ನು ನಿಭಾಯಿಸಬಲ್ಲುದು. ಇಂದಿನ ಚಾಟ್ಜಿಪಿಟಿ, ಜೆಮಿನೈ, ಕ್ಲಾಡ್ ಮೊದಲಾದ ಏಐ ಪರಿಕರಗಳನ್ನು ಹಿರಿ ನುಡಿಮಾದರಿಗಳ ಮೇಲೆಯೇ ಕಟ್ಟಲಾಗಿದೆ. ಮುನ್ನುಡಿಯುವಿಕೆಯೆಂಬ ಮೂಲತತ್ತ್ವದಿಂದ ಶುರುವಾದ ಪಯಣವು ಇಂದು ಗಮನಾರ್ಹ ಸಾಮರ್ಥ್ಯವನ್ನು ಸಾಧಿಸಿದೆ. ಇದನ್ನು ಹೊರಗಿನಿಂದ ನೋಡಿದಾಗ ಯಂತ್ರವು ನುಡಿಯನ್ನು ಕರಗತ ಮಾಡಿಕೊಂಡಿರುವದಷ್ಟೇ ಅಲ್ಲ ನುಡಿಯಲ್ಲಿ ಹೊಸದನ್ನು ಕಟ್ಟಬಲ್ಲುದು ಕೂಡ ಎಂದು ತೋರುತ್ತದೆ.
ನುಡಿ ಮತ್ತು ಸಾಹಿತ್ಯಸೃಷ್ಟಿಯ ವಿಷಯದಲ್ಲಿ ಏಐ ಯಾವುದನ್ನು ಚೆನ್ನಾಗಿ ಮಾಡಬಲ್ಲದು ಎಂಬುದನ್ನು ನಾವು ಸ್ಪಷ್ಟವಾಗಿ ಮತ್ತು ಪ್ರಾಮಾಣಿಕವಾಗಿ ಗುರುತಿಸದೇ ಅದರ ಮಿತಿಗಳನ್ನು ಕುರಿತು ಚರ್ಚಿಸುವುದು ಸರಿಯಾಗದು.
ಯಾವುದು ಸೂತ್ರಬದ್ದವಾಗಿರುತ್ತದೆಯೋ ಅಂಥ ಸಾಹಿತ್ಯವನ್ನು ಏಐ ಬರೆಯಬಲ್ಲುದಷ್ಟೇ ಅಲ್ಲ — ಮತ್ತೆ ಕ್ಯಾಲ್ವಿನೋನ ಯಂತ್ರವನ್ನು ನೆನೆಯುವುದಾದರೆ — ಮನುಷ್ಯರಿಗಿಂತಲೂ ಚೆನ್ನಾಗಿ ಬರೆಯಬಲ್ಲುದು. ಜನಪ್ರಿಯ ಪ್ರೇಮಕಥೆ ಮತ್ತು ಪತ್ತೇದಾರಿ ಕಾದಂಬರಿಗಳು ಕೆಲವು ಸರಳ ಸೂತ್ರಗಳನ್ನು ಆಧರಿಸಿವೆ: ಒಂದು ಬಗೆಯ ಓಟ, ನಿರೀಕ್ಷಿತ ಏರುಪೇರುಗಳು, ಕೊನೆಗೆ ತೃಪ್ತಿದಾಯಕ ಸಮಾಪ್ತಿ. ಅವು ಬರೆಯುವವರ ಓದುಗರ ಲೋಕದೃಷ್ಟಿಗೆ ಸವಾಲೊಡ್ಡುವುದಿಲ್ಲ, ಅನಗತ್ಯ ಚಿಂತನೆಗೆ ತಳ್ಳುವುದಿಲ್ಲ. ಅಂತೆಯೇ ಅವು ಈಗಾಗಲೇ ಬಹುಕಾಲದಿಂದ ಕಾರ್ಖಾನೆಯ ಮಾದರಿಯಲ್ಲಿ ಉತ್ಪತ್ತಿಯಾಗುತ್ತಿವೆ. ಅವುಗಳ ಹೋಲಿಕೆಯಲ್ಲಿ ಇಂದಿನ ಏಐ ಬರೆಯಬಲ್ಲ ಕೃತಿಗಳು ಯಾವ ಮಟ್ಟಿಗೂ ಕಡಿಮೆಯಿಲ್ಲ; ಒಮ್ಮೊಮ್ಮೆ ಹೆಚ್ಚೇ ಚೆನ್ನಾಗಿರಬಹುದು.
ಅದೇ ರೀತಿಯಲ್ಲಿ ಏಐ ಬಹಳ ಒಳ್ಳೆಯ ಅನುಕರಣ ಪಟು. ಅತ್ಯುತ್ಕೃಷ್ಟವಾಗಿ ಶೈಲಿಯನ್ನು ಅನುಕರಣೆ ಮಾಡಬಲ್ಲುದು. ಏಐಗೆ ಕುವೆಂಪು ಅವರ ಎಲ್ಲ ಕವಿತೆಗಳನ್ನು ಊಡಿಸಿ ಕುವೆಂಪು ಶೈಲಿಯಲ್ಲಿ ಒಂದು ಹೊಸ ಕವಿತೆಯನ್ನು ಬರೆಯಲು ಹೇಳಿದರೆ, ಅದನ್ನು ಮಾಡೀತು. ಅದು ತಕ್ಕಮಟ್ಟಿಗೆ ಚೆನ್ನಾಗಿಯೂ ಇದ್ದೀತು! ಶೈಲಿಯ ಮೇಲ್ಪದರಗಳನ್ನು, ಎಂದರೆ, ಒಬ್ಬ ಕವಿಯ ಪದಬಳಕೆಯ ವಿನ್ಯಾಸ, ಸಾಮಾನ್ಯ ಹಾಗೂ ಅಪೂರ್ವ ನುಡಿಗಟ್ಟುಗಳು, ಛಂದಸ್ಸಿನ ಒಲವು, ಪ್ರತಿಮೆ ರೂಪಕಗಳ ನಿಯೋಜನೆ — ಇಂಥವೆಲ್ಲವನ್ನೂ ಆಧುನಿಕ ಏಐ ಸಮರ್ಥವಾಗಿ ಗ್ರಹಿಸಬಲ್ಲುದು. ಅಲ್ಲದೆಯೇ ಒಂದು ನುಡಿಯ ಅಥವಾ ಕಾಲಘಟ್ಟದ ಅಥವಾ ಸಾಹಿತ್ಯ ಪ್ರಕಾರದ ಸರಾಸರಿ ಅಜಮಾಸು ನುಡಿಕಾಣ್ಕೆಯನ್ನೂ ಅದು ಗಳಿಸಬಲ್ಲುದು. ನವ್ಯಶೈಲಿಯ ಕತೆಯದೋ ಬಂಡಾಯದ ಕವಿತೆಯದೋ ಸೋಗನ್ನು ಹಾಕಬಲ್ಲುದು.
ಇದು ಸಾಹಿತ್ಯಕ್ಕೆ ಮಾತ್ರ ಸೀಮಿತವಾದುದಲ್ಲ. ಒಂದು ಗಳಿಗೆ ಸಾಹಿತ್ಯ ಮತ್ತು ಏಐ ಎರಡನ್ನೂ ಪಕ್ಕಕ್ಕಿಡೋಣ.

17ನೆಯ ಶತಮಾನದ ಡಚ್ ಚಿತ್ರಕಾರ ಯೋಹಾನ್ ವರ್ಮಿಯರ್ (Johannes Vermeer) ತನ್ನ ಚಿತ್ರಕಲೆಯಿಂದ ಎಷ್ಟು ಪ್ರಸಿದ್ಧನೋ ಅವನ ಚಿತ್ರಗಳ ನಕಲಿನ ಚರಿತ್ರೆಯಿಂದಲೂ ಅಷ್ಟೇ ಪ್ರಸಿದ್ಧ. ಹಾನ್ ವಾನ್ ಮೀಗೆರೆನ್ (Han van Meegeren) ಎಂಬಾತ ಮಾಡಿದ ನಕಲಿ ವರ್ಮಿಯರ್ ಚಿತ್ರಗಳು ಎಷ್ಟು ನಿಖರವಾಗಿದ್ದುವೆಂದರೆ 20ನೆಯ ಶತಮಾನದ ಆರಂಭಕಾಲದವರೆಗೂ ಬಹುದೊಡ್ಡ ಸಂಗ್ರಹಾಲಯಗಳ ಪರಿಣಿತರಿಗೆ ಕೂಡ ಅವು ನಕಲುಗಳು ಎಂದು ತಿಳಿದಿರಲಿಲ್ಲ. ಶೈಲಿಯ ಪರಿಪೂರ್ಣ ಅನುಕರಣೆಯು ಮನುಷ್ಯರಿಗೆ ಸಾಧ್ಯವಿರುವಾಗ ಲೋಕದಲ್ಲಿ ಲಭ್ಯವಿರುವ ಮಾಹಿತಿಯನ್ನೆಲ್ಲ ಎಡೆಬಿಡದೆ ಹೀರುವ ಯಂತ್ರಪಿಪಾಸುಗಳಿಗೆ ಅದು ಸಾಧ್ಯವಾಗುವುದು ಆಶ್ಚರ್ಯವೇನಲ್ಲ. ಅಂತೆಯೇ, ಇಂದು DALL-E, Midjourney ಮೊದಲಾದ ಚಿತ್ರಸೃಷ್ಟಿ ಸಾಫ್ಟ್ವೇರ್ಗಳು ಬೇಡಿದ ಶೈಲಿಯಲ್ಲಿ ಚಿತ್ರ ಸೃಷ್ಟಿಸಿಕೊಡಬಲ್ಲವು. ಸಂಗೀತದಲ್ಲೂ ಅದೇ ಬಗೆಯ ಬೆಳವಣಿಗೆಯಾಗಿದೆ. ತಮ್ಮ ಕವಿತೆಗಳಿಗೆ ಏಐ ಮೂಲಕ ಸಂಗೀತಸಂಯೋಜನೆ ಮಾಡಿಸಿ, ಅದರ ಮೂಲಕವೇ ತಮಗೆ ಬೇಕಾದ ದನಿಯಲ್ಲಿ ಹಾಡಿಸಿ ಫೇಸ್ಬುಕ್ನಲ್ಲಿ ಕವಿಗಳು ಹಂಚಿಕೊಳ್ಳುವುದನ್ನು ನಾವು ಕಾಣುತ್ತಲಿದ್ದೇವೆ.
ಈ ಎಲ್ಲ ಸಂದರ್ಭಗಳಲ್ಲಿ ಏಐ ಮಾಡುತ್ತಿರುವುದು ಒಂದೇ ಬಗೆಯ ಕೆಲಸ: ಕೃತಿಯ ಮೇಲ್ಪದರಗಳಲ್ಲಿ ಅಡಕವಾಗಿರುವ ವಿನ್ಯಾಸಗಳ ಗ್ರಹಿಕೆ ಮತ್ತು ಅದರ ಮರುಕಟ್ಟುವಿಕೆ. ಇಲ್ಲಿ ಒಂದು ಮಹತ್ತ್ವದ ವ್ಯತ್ಯಾಸವನ್ನು ಗಮನಿಸಬೇಕು. ಚಿತ್ರಕಲೆ ಮತ್ತು ಸಂಗೀತದಲ್ಲಿ ಕೃತಿಯೊಂದರ ಬಹುಪಾಲು ಸತ್ವ ಆ ಮೇಲ್ಪದರಗಳಲ್ಲಿಯೇ, ಎಂದರೆ, ಬಣ್ಣ, ಧ್ವನಿ, ಲಯಗಳ ವಿನ್ಯಾಸಗಳಲ್ಲಿಯೇ ಅಡಕವಾಗಿರುತ್ತದೆ. ಅವನ್ನು ಪರಿಪೂರ್ಣವಾಗಿ ನಕಲು ಮಾಡಿದರೆ ಬಹುಪಾಲು ಪರಿಣಾಮವೂ ನಕಲಿನೊಂದಿಗೆ ವರ್ಗಾವಣೆಯಾಗುತ್ತದೆ.
ಸಾಹಿತ್ಯದಲ್ಲಿ ಕೃತಿಯ ಜೀವ ಎಲ್ಲಿರುತ್ತದೆ ಎಂಬ ಪ್ರಶ್ನೆಗೆ ಉತ್ತರ ಬೇರೆ. ಪದ, ನುಡಿಗಟ್ಟು, ಛಂದಸ್ಸು, ರೂಪಕಗಳನ್ನು ಪರಿಪೂರ್ಣವಾಗಿ ನಕಲು ಮಾಡಿದರೂ ಒಂದು ಕವಿತೆಯ ಸೃಷ್ಟಿಗೆ ಕಾರಣವಾದ ನುಡಿಯ ಆಚೆಯದು ಮುಂಬರಿಯುವುದಿಲ್ಲ. ಹಾಯ್ಕುಗಳನ್ನು, ದೀರ್ಘ ಪದ್ಯಗಳನ್ನು ಬರೆಯಬಲ್ಲ, ಬೇಂದ್ರೆ ಶೈಲಿಯನ್ನು ಅನುಕರಿಸಬಲ್ಲ ಕೃತಕ ಬುದ್ಧಿಮತ್ತೆಯು ‘ಜೋಗಿ’ಯನ್ನೋ ‘ಕುಸುಮಬಾಲೆ’ಯನ್ನೋ ಕಟ್ಟಿಕೊಡಬಲ್ಲುದೇ ಎಂಬುದು ನಮ್ಮೆದುರಿಗಿರುವ ನಿಜವಾದ ಪ್ರಶ್ನೆ. ಆ ಪ್ರಶ್ನೆಯ ಆಳಕ್ಕಿಳಿದಾಗ ನಿಜವಾದ ಸಾಹಿತ್ಯಸೃಷ್ಟಿಗೂ ನುಡಿಮಾದರಿಗಳ ಪಠ್ಯದ ಹೊಸಕಟ್ಟುವಿಕೆಗೂ (text generation) ಇರುವ ವ್ಯತ್ಯಾಸ ಗೋಚರವಾಗತೊಡಗುತ್ತದೆ.
ಬರಹಗಾರರ ಅನುಭವದ್ರವ್ಯವು ಸಾಹಿತ್ಯದ ಹುಟ್ಟಿನ ಮೊದಲ ಹಂತ ಎನ್ನುವುದಾದರೆ, ಅದು ಹೆಚ್ಚೂಕಡಿಮೆ ಸಂಪೂರ್ಣವಾಗಿ ನುಡಿಗೆ ಹೊರತಾದದ್ದು. ಅನುಭವಕ್ಕೆ ನುಡಿಯ ಅಗತ್ಯವಿಲ್ಲ. ಇನ್ನು, ಎರಡನೆಯ ಹಂತ, ಅನುಭವದ ಗ್ರಹಿಕೆ ಮತ್ತು ಅನುಸಂಧಾನ: ಅದನ್ನು ನಮ್ಮೊಳಗೊಳ್ಳುವುದು. ಗ್ರಹಿಕೆಯ ತುಸುಪಾಲು ನುಡಿಯ ಮೂಲಕ ಆಗಬಹುದಾದರೂ ಬಹುಪಾಲು ನುಡಿಯನ್ನು ಮೀರಿ ಭಾವದಲ್ಲಿ, ದೇಹದಲ್ಲಿ, ಮನೋಚಿತ್ರಗಳಲ್ಲಿ ನಡೆಯುವಂಥದ್ದು. ಮೂರನೆಯ ಹಂತದಲ್ಲಿ ಆಗುವುದು ಅನುಭವಗಳ ಸಾಂದ್ರತೆಯಿಂದ ಉಂಟಾಗುವ ಒಳಗಿನ ಒತ್ತಡ, ಅದನ್ನು ಹಂಚಿಕೊಳ್ಳಬೇಕೆಂಬ, ಹೊರಹಾಕಬೇಕೆಂಬ ಅವ್ಯಕ್ತ ತುಡಿತ. ಅಭಿವ್ಯಕ್ತಿಯ ಹುಡುಕಾಟ ಶುರುವಾಗುವುದು ಇಲ್ಲಿ. ಅದು ನುಡಿಯ ಬಾಗಿಲ ಮೂಲಕವೇ ಹಾದುಬರಬೇಕು. ಸಾಹಿತ್ಯವು ನುಡಿಯಲ್ಲಿ ಸಂಭವಿಸುವುದು ಈ ಹಂತದಲ್ಲಿ.
ಈ ಮೂರು ಹಂತಗಳನ್ನು ಮೀರಿ, ಮತ್ತು ಮೂರರಲ್ಲೂ ಸುಳಿಯುತ್ತ ಜೀವ ತುಂಬುತ್ತ ಇರುವ ಒಂದು ಪ್ರತ್ಯೇಕ ಅಂಶವಿದೆ. ಅದು ‘ಪ್ರತಿಭೆ’. ಕ್ಯಾಲ್ವಿನೋನ ಯಂತ್ರದ ಪ್ರೇತಾತ್ಮವೂ ಅದೇ.
ಮತ್ತೆ ಏಐಗೆ ಹಿಂದಿರುಗಿ ಮೇಲೆ ಹೇಳಿದ ಸಾಹಿತ್ಯಸೃಷ್ಟಿಯ ಹಂತಗಳಲ್ಲಿ ಅದು ಪಡೆದುಕೊಂಡಿರುವುದು ಏನನ್ನು ಎಂದು ಗಮನಿಸಿದರೆ, ಅದಕ್ಕೆ ಲಭ್ಯವಾಗಿರುವುದು ಕೊನೆಯ, ನುಡಿಯ ಮೂಲಕ ಉಂಟಾದ ಅಭಿವ್ಯಕ್ತಿಯ ಹಂತ ಮಾತ್ರ ಎಂಬುದು ಸ್ಪಷ್ಟ. ನುಡಿಯಲ್ಲಿನ ಅಭಿವ್ಯಕ್ತಿಯಷ್ಟೇ ಅಥವಾ ಅದಕ್ಕೂ ಹೆಚ್ಚಿನ ಮಹತ್ತ್ವದ ನುಡಿಯಾಚೆಗಿರುವ ಸೃಷ್ಟಿಕ್ರಿಯೆಯ ಹಂತಗಳು ಅದಕ್ಕೆ ಲಭ್ಯವಿಲ್ಲ.
ಕುಸುಮಬಾಲೆಯ ಗಾರಸಿದ್ಮಾವ ತಾನು ಹದಿನಾರು ಎಳನೀರನ್ನು ಕುಡಿಯಲೆಂದೇ ಕಿತ್ತದ್ದು ಎಂದು ವಾದಿಸುತ್ತ, “ಎಲ್ಲನುವಿ ನಿಮ್ಮೆದ್ರುಗ ಕುಡುದ್ರ ಒಪ್ಪಗಂಡರ್ಯಪ್ಪ ಆಗ್ಲಾರುವಿ?” ಎಂದು ನ್ಯಾಯದ ಬಗ್ಗೆ ಎತ್ತುವ ಸವಾಲು ಕಾದಂಬರಿಯಲ್ಲಿ ಅವನ ಎದುರಿಗಿರುವ ಮೊಕಂಡನಲ್ಲಿ ಉಂಟುಮಾಡಿದ ತಬ್ಬಿಬ್ಬನ್ನೂ ಅದರಾಚೆ ನಿಂತು ಅದನ್ನು ಓದುತ್ತಿರುವ ನಮ್ಮಲ್ಲಿ ಎಬ್ಬಿಸುವ ಅವನ ಪುರಾತನ ಹಸಿವಿನ ಕಂಪನವನ್ನೂ ಅವನ ಒಡಲಾಳವನ್ನೂ ನುಡಿಯನ್ನಷ್ಟೇ ಅರಿತ ನುಡಿಮಾದರಿಗಳಲ್ಲಿ ಹಿಡಿಯುವುದು ಹೇಗೆ?
ಹಾಗಾದರೆ, ನುಡಿಯಾಚೆಗಿನ ಜಗತ್ತಿಗೆ ಏಐಗೆ ಪ್ರವೇಶವೇ ಇಲ್ಲವೇ? ಹಾಗೆಂದು ಸಾರಾಸಗಟಾಗಿ ಹೇಳಲಾಗದು.
ಇಲ್ಲಿ ಎರಡು ಬಗೆಯ ಎದುರುವಾದಗಳಿಗೆ ಎಡೆಮಾಡಿಕೊಡಬೇಕು. ಮೊದಲನೆಯದು: ಇಂದಿನ ಏಐ ಪರಿಕರಗಳಿಗೆ ಲಭ್ಯವಿರುವುದು ಮತ್ತು ಹೆಚ್ಚುಹೆಚ್ಚು ಲಭ್ಯವಾಗುತ್ತಿರುವುದು ಕೇವಲ ಹಿರಿ ನುಡಿಮಾದರಿಗಳಲ್ಲ. ಅವುಗಳಿಗೂ ಮಿಗಿಲಾದ ಕಾಣ್ಕೆಯ ನುಡಿಮಾದರಿಗಳು (Vision Language Models) ಮತ್ತು ಪಠ್ಯವಲ್ಲದೇ ಚಿತ್ರ, ಆಡಿಯೋ, ವಿಡಿಯೋ ಮೊದಲಾದ ಹಲಬಗೆಯ ಸಂಕೇತಗಳನ್ನು ಒಟ್ಟಿಗೇ ಗ್ರಹಿಸಿ ತರಬೇತಿ ಪಡೆದಿರುವ multimodal AI ಮಾದರಿಗಳು ಲಭ್ಯವಾಗುತ್ತಿವೆ. ‘ಹಸಿವು’, ‘ಶೋಷಣೆ’ಯಂಥ ಪದಗಳನ್ನು ನೋಡುವುದಲ್ಲದೇ ಜೊತೆಗೇ ಅವುಗಳ ಚಿತ್ರಣವನ್ನು ಕಾಣಬಹುದು, ಧ್ವನಿಯನ್ನು ಕೇಳಬಹುದು. ಹೀಗಾಗಿ, ಕೃತಕ ಬುದ್ಧಿಮತ್ತೆಯು ನುಡಿಯಾಚೆಗಿನ ಲೋಕಕ್ಕೆ ಪರೋಕ್ಷವಾಗಿ ತುಸುಮಟ್ಟಿಗೆ ತೆರೆದುಕೊಳ್ಳುತ್ತಿದೆ ಎನ್ನಬಹುದು. ಆದರೆ ಅನುಭವಗಳ ಆನುಷಂಗಿಕ ಗ್ರಹಿಕೆಗೆ — ಅದೆಷ್ಟೇ ವ್ಯಾಪಕವಾಗಿದ್ದರೂ — ನೇರವಾಗಿ ಅನುಭವಿಸುವುದರ ಗಹನತೆ ದಕ್ಕಬಹುದೇ?
ಎರಡನೆಯದು: ನಮ್ಮ ಬರವಣಿಗೆಯ ಪ್ರಕ್ರಿಯೆಯು ಏಐ ಮಾಡುತ್ತಿರುವುದಕ್ಕಿಂತ ತೀರ ಭಿನ್ನವೇ, ಎಲ್ಲವೂ ಪ್ರತ್ಯಕ್ಷ ಅನುಭವಜನ್ಯವೇ ಎಂಬಂಥ ಪ್ರಶ್ನೆಗಳು. ಸಾಹಿತ್ಯಸೃಷ್ಟಿಯ ಹಿನ್ನೆಲೆಯಲ್ಲಿ ಅಪಾರವಾದ ಓದು ಕೂಡ ಕೆಲಸ ಮಾಡುತ್ತಿರುತ್ತದೆ. ಹೀಗಾಗಿ, ಇಂದಿನ ಬರಹವು ಒಂದು ಬಗೆಯಲ್ಲಿ ಹಿಂದಿನ ಬರಹಗಳ ಮರುಜೋಡಣೆ ಅಥವಾ ಮರುನಿರೂಪಣೆಯೇ ಅಲ್ಲವೇ? ಇಂದು ಬರೆಯುತ್ತಿರುವವರು ಹಿಂದಿನದರಿಂದ ಬಹಳಷ್ಟನ್ನು ಪಡೆದಿರುತ್ತಾರೆ ಎನ್ನುವುದು ನಿಜವಾದರೂ ಆ ಪ್ರಭಾವಗಳು ಅವರೊಳಗೆ ಅನುಭವ-ಗ್ರಹಿಕೆ-ಅನುಸಂಧಾನದ ಸಾವಯವ ಪ್ರಕ್ರಿಯೆಯ ಮೂಲಕ ಉಂಟಾಗಿರುತ್ತವೆ. ಮತ್ತೆ ಇದು ಎಲ್ಲರಲ್ಲೂ ಏಕರೂಪದಲ್ಲಿ ನಡೆಯುವಂಥದ್ದಲ್ಲ. ಪ್ರತಿಯೊಬ್ಬರೂ ತಮ್ಮ ನಿರ್ದಿಷ್ಟ ನೆಲೆಯಿಂದ ಓದನ್ನು ಗ್ರಹಿಸಿರುತ್ತಾರೆ. ಅವರ ಒಳಬದುಕಿನ ಸುಳಿಗಳು ಅದನ್ನು ನಿರ್ದೇಶಿಸಿರುತ್ತವೆ.
ಒಂದು ಸಣ್ಣ ಚಿಂತನಾಪ್ರಯೋಗವನ್ನು ಮಾಡಿ ಮುಂದುವರಿಯೋಣ. ನೂರಾರು ಅತ್ಯುತ್ಕೃಷ್ಟ ಕಾದಂಬರಿಗಳನ್ನು ಓದಿದ ಮಾತ್ರಕ್ಕೆ ಒಂದು ಒಳ್ಳೆಯ ಕಾದಂಬರಿಯನ್ನು ಬರೆಯಲು ಸಾಧ್ಯವೇ? ಹಾಗೆಯೇ, ಸಾಹಿತ್ಯವನ್ನು ಓದುವುದು ಬಿಡಿ, ಅಕ್ಷರವೇ ಗೊತ್ತಿಲ್ಲದ ವ್ಯಕ್ತಿಯೊಬ್ಬರು ಅಪೂರ್ವ ಕಥೆಗಳನ್ನು ಕಟ್ಟಬಲ್ಲರೇ? ಇವಕ್ಕೆ ಉತ್ತರ ಸುಲಭಗ್ರಾಹ್ಯ. ಸಾಹಿತ್ಯಸೃಷ್ಟಿಯು ಸಂಕೇತ ಸಂಸ್ಕರಣೆ (signal processing) ಅಲ್ಲ; ಅದು ಹುಟ್ಟುವುದು ಬಾಳುವೆಯಿಂದ ಮತ್ತು ಒಳಗೂಡಿದ ಪ್ರತಿಭೆಯಿಂದ.
ಮೊದಲಿಗೆ ಹೇಳಿದಂತೆ ನುಡಿಯೊಳಗೆ ಮುಂದಿನ ಪದವನ್ನು ಊಹಿಸುವುದು ಸುಲಭವಾದರೂ ಅದಕ್ಕೆ ಸಂಬಂಧಪಟ್ಟ ತಂತ್ರಜ್ಞಾನಗಳು ಮುಂದೆ ಯಾವ ದಿಕ್ಕಿನಲ್ಲಿ ಸಾಗುತ್ತವೆ ಎಂದು ಹೇಳುವುದು ಬಲುಕಷ್ಟ. ನುಡಿಯಾಚೆಗಿನ ಲೋಕವನ್ನು ಕೂಡ ಏಐ ತನ್ನ ‘ಇಂದ್ರಿಯ’ಗಳಿಂದ ಗ್ರಹಿಸಲು ಹಾಗೂ ಅದರ ‘ಅನುಭವ’ವನ್ನು ಗಣಿತದ ಮಾದರಿಗಳ ಮೂಲಕ ಕಟ್ಟಿಕೊಡುವುದು ಮುಂದೆ ಸಾಧ್ಯವಾದರೆ ಅದಕ್ಕೂ ನಮಗೆ ದಕ್ಕಿದ್ದೆಲ್ಲ ದಕ್ಕಬಹುದು. ಈ ಪ್ರಶ್ನೆಯ ಬಾಗಿಲನ್ನು ಸದ್ಯಕ್ಕೆ ತೆರೆದಿಟ್ಟು ಮುನ್ನಡೆಯೋಣ.
ಸಾಹಿತ್ಯಸೃಷ್ಟಿಯಲ್ಲಿ ಏಐನ ಸಾಧ್ಯತೆ ಮತ್ತು ಮಿತಿಗಳನ್ನು ನೋಡಿದ ಮೇಲೆ ಅವಕಾಶ ಮತ್ತು ಸವಾಲುಗಳನ್ನು ಸಂಕ್ಷಿಪ್ತವಾಗಿ ನೋಡೋಣ. ಅದು ಒದಗಿಸಬಹುದಾದ ಹಲವು ಅವಕಾಶಗಳಲ್ಲಿ ಎರಡನ್ನು ಮಾತ್ರ ನಿಮ್ಮ ಮುಂದಿಡುತ್ತೇನೆ: ಸಾಹಿತ್ಯದ ಸಂಪಾದನೆ ಹಾಗೂ ಕನ್ನಡದಲ್ಲಿ ಜ್ಞಾನಸೃಷ್ಟಿ ಮತ್ತು ಸಂಶ್ಲೇಷಣೆ.
ಇಂಗ್ಲಿಷ್ನಂಥ ಭಾಷೆಗಳಲ್ಲಿ ಬರಹಗಾರ-ಸಂಪಾದಕರ ನಡುವಿನ ಪಾಲುದಾರಿಕೆ ಆಳವಾಗಿ ಬೇರೂರಿದ ಸಾಂಸ್ಥಿಕ ಪರಂಪರೆ. ಕನ್ನಡದಲ್ಲಿ ಅದು ಇಲ್ಲವೆನ್ನುವಷ್ಟು ಕಡಿಮೆ. ಅದರ ಪರಿಣಾಮವು ಕಣ್ಣಿಗೆ ಹೊಡೆಯುತ್ತದೆ: ಮೌಲಿಕವೆನ್ನಬಹುದಾದ ಪುಸ್ತಕಗಳಲ್ಲಿಯೂ ಬೆರಳಚ್ಚಿನ ತಪ್ಪುಗಳಿಂದ ಹಿಡಿದು ಮಾಹಿತಿಯ ತಪ್ಪುಗಳು, ಅಸಂಗತತೆಗಳು, ಒಮ್ಮೊಮ್ಮೆ ಕಾಲವಿಸಂಗತಿಗಳು ಕಾಣುತ್ತವೆ. ಇದರಾಚೆಗೆ, ತಪ್ಪು ಪದಬಳಕೆ, ಭಾಷೆಯ ಅಸ್ಪಷ್ಟತೆ, ವಾದಮಂಡನೆಯಲ್ಲಿನ ತೆರಪುಗಳು, ತರ್ಕಾಭಾಸಗಳು, ಮೊದಲಾದ ಹೆಚ್ಚು ಸಂಕೀರ್ಣ ದೋಷಗಳೂ ಸಾಮಾನ್ಯ. ಏಐ ಪರಿಕರಗಳನ್ನು ಒಬ್ಬ ಆಪ್ತ ಸಂಪಾದಕನಂತೆ ಬಳಸಿಕೊಂಡು ಇಂಥವೆಲ್ಲ ಸಮಸ್ಯೆಗಳನ್ನು ಗುರುತಿಸಿ, ತಿದ್ದಿ ಬರವಣಿಗೆಯ ಗುಣಮಟ್ಟವನ್ನು ಎತ್ತರಿಸುವುದು ಸಾಧ್ಯ. ಇದರಿಂದ ಬರಹಗಾರರಿಗೆ ಆಗುವ ಅನುಕೂಲ ಒಂದುಕಡೆಯಾದರೆ, ಇದು ಓದುಗರಿಗೆ ಮಾಡಬಹುದಾದ ದೊಡ್ಡ ಉಪಕಾರ! ಏಐ ಇದನ್ನು ನುರಿತ ಸಂಪಾದಕರಿಗಿಂತಲೂ ಚೆನ್ನಾಗಿ ಮಾಡಬಲ್ಲುದೇ ಎಂಬುದು ಪ್ರಶ್ನೆಯಲ್ಲ; ಇಂಥ ಪರಿಪಾಟವೇ ಇಲ್ಲದಲ್ಲಿ ಇದು ಮೊದಲ ದೊಡ್ಡ ಮೆಟ್ಟಿಲು.
ಇದಕ್ಕೂ ಮುಖ್ಯವಾಗಿ ನಮ್ಮ ವಿಸ್ತೃತ ಸಾಹಿತ್ಯವಲಯದಲ್ಲಿ ಏಐ ಬಳಕೆಯ ದೊಡ್ಡ ಅವಕಾಶವಿರುವುದು ಜ್ಞಾನಸೃಷ್ಟಿ ಮತ್ತು ಸಂಶ್ಲೇಷಣೆಯಲ್ಲಿ. ಅನುವಾದವು ಇದಕ್ಕೊಂದು ಹೆಬ್ಬಾಗಿಲು. ಇಲ್ಲಿ ನಾವು ‘ಅನುವಾದ’ ಎನ್ನುವುದಕ್ಕೆ ಒಂದೇ ಸಾರ್ವತ್ರಿಕ ವ್ಯಾಖ್ಯೆಯಿಲ್ಲ ಹಾಗೂ ಅದು ಮಾಡುವುದು ಒಂದೇ ಬಗೆಯ ಕಾರ್ಯವನ್ನಲ್ಲ ಎಂಬುದನ್ನು ಗಮನಿಸಬೇಕು. ಕನ್ನಡದಲ್ಲಿ ಹಲಬಗೆಯ ಅನುವಾದಗಳ ಪರಂಪರೆಯಿರುವುದು ಗೊತ್ತಿದ್ದದ್ದೇ. ಯಾವ ಉದ್ದೇಶ ಸಾಧನೆಗೆ ಯಾವ ಬಗೆಯ ಅನುವಾದ ಸೂಕ್ತ ಹಾಗೂ ಆ ನಿಟ್ಟಿನಲ್ಲಿ ಏಐ ಸಾಧನವಾಗಬಲ್ಲುದೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು.
ನನ್ನ ಪ್ರಕಾರ, “ಅನುವಾದಕ್ಕೆ ಏಐ ಬಳಕೆ ಸಮರ್ಪಕವೇ?” ಎಂಬುದರ ಉತ್ತರವನ್ನು ಕಂಡುಕೊಳ್ಳುವಾಗ ಮೂರು ಅಂಶಗಳನ್ನು ಪರಿಗಣಿಸಬೇಕು: ಅನುವಾದದ ಬಗೆ, ಪಠ್ಯದ ಸೃಜನಶೀಲ ಸಂಕೀರ್ಣತೆ, ಮತ್ತು ಅನುವಾದದ ಉದ್ದೇಶ. ಮಾಹಿತಿಯ ಪ್ರಸರಣದ ಉದ್ದೇಶದಿಂದ ಇಂಗ್ಲಿಷ್ನಲ್ಲಿರುವ ತಾಂತ್ರಿಕ ಲೇಖನ ಅಥವಾ ಪತ್ರಿಕಾವರದಿಗಳನ್ನು ಏಐ ಅನುವಾದದ ಮೂಲಕ ಕನ್ನಡಕ್ಕೆ ತರುವುದು ತೀರ ಕಷ್ಟವೇನಲ್ಲ. ಹಾಗೆಯೇ ಒಂದು ವಚನದ ಸಾರ, ಜೊತೆಗೆ ತಕ್ಕಮಟ್ಟಿಗೆ ಅದರ ಲಯಗಾರಿಕೆ — ಕನ್ನಡ ಬಾರದ ಓದುಗರಿಗೆ ಇದಿಷ್ಟಾದರೂ ದಕ್ಕಲಿ ಎಂದಾದರೆ, ಇಂದಿನ ಏಐ ಅದನ್ನು ಮಾಡಬಲ್ಲುದು. ಆದರೆ, ಆ ವಚನದ ಸಮಗ್ರ ಚಾರಿತ್ರಿಕ-ಸಾಂಸ್ಕೃತಿಕ ಸಂದರ್ಭ, ನುಡಿಸೂಕ್ಷ್ಮತೆ, ರಸಾನುಭವಗಳೆಲ್ಲವನ್ನೂ ಬೇರೊಂದು ನುಡಿಪರಿಸರದಲ್ಲಿ ಮರುಕಟ್ಟುವುದು ಬಲುಕಷ್ಟ. (ಹಾಗೆ ನೋಡಿದರೆ, ನುರಿತ ಅನುವಾದಕರಿಗೇ ಅದು ಸುಲಭವಲ್ಲದ್ದು. ಅದಿರಲಿ.)
ಇತ್ತೀಚೆಗೆ “ಏಐ ಅನುವಾದಿತ ಮೊದಲ ಕನ್ನಡ ಪುಸ್ತಕ” ಎಂದು ಕನ್ನಡದಲ್ಲಿ ಪ್ರಕಟವಾದ ಜೀವನಚರಿತ್ರೆಯ ಪುಸ್ತಕವೊಂದು ಸುದ್ದಿ ಮಾಡಿತು. ಅದರ ಹಿಂದಿನ ಮಾರ್ಕೆಟಿಂಗ್ ತಂತ್ರಗಳೇನೇ ಇರಲಿ, ನನಗದು ಮೋಜಿನ ಸಂಗತಿಯೆನ್ನಿಸಿತು. ನನ್ನ ಪ್ರಕಾರ ಇದೊಂದು ಆಯ್ಕೆಯ ಪ್ರಶ್ನೆ. ಏಐ ಅನುವಾದ ಎಂದಕೂಡಲೇ ನಾವು ಒಮ್ಮೆಲೇ ಕತೆ, ಕಾವ್ಯ, ಜೀವನಚರಿತ್ರೆ ಇಂಥ ಪ್ರಕಾರಗಳಿಗೇ ಜಿಗಿಯಬೇಕಿಲ್ಲ. ಅದರಾಚೆಗಿನ ಬರಹಲೋಕದತ್ತ ಸಾವಧಾನದ ನೋಟ ಹರಿಸಬಹುದು. ಒಂದು ಹೆಜ್ಜೆ ಹಿಂದೆ ಸರಿದು ಅನುವಾದದ ಗುರಿಯೇನು, ಬೇರೆ ಭಾಷೆಯ ಕೃತಿಗಳು ಕನ್ನಡಕ್ಕೆ ಯಾತಕ್ಕಾಗಿ ಬರಬೇಕು ಎಂಬ ಇನ್ನೂ ಮೂಲಭೂತ ಪ್ರಶ್ನೆಗಳನ್ನು ಕುರಿತು ಚಿಂತಿಸಿದಾಗ, ನಮ್ಮ ಆಯ್ಕೆಗಳು ಹೆಚ್ಚು ಸ್ಪಷ್ಟವಾಗುತ್ತವೆ. ಕನ್ನಡದ ಅರಿವನ್ನು ಹಿಗ್ಗಿಸುವ, ನಮ್ಮ ಸಾಹಿತ್ಯಕ್ಕೆ ಹೊಸ ಮಾದರಿಗಳನ್ನು ಅಥವಾ ಹೊಸ ಚಿಂತನೆಯನ್ನು ತರುವ ಕೃತಿಗಳು ನಮಗೆ ಬೇಕು ಎಂದು ನಾವು ಸಾಮಾನ್ಯವಾಗಿ ಒಪ್ಪುತ್ತೇವೆ. ಹಲವು ಕಾರಣಗಳಿಂದ ಬಹಳಷ್ಟು ಜ್ಞಾನಶಿಸ್ತುಗಳು ಕನ್ನಡದಲ್ಲಿ ಬೇರೂರಿ ಬೆಳೆದಿಲ್ಲ. ಅವಕ್ಕೆ ಸಂಬಂಧಿಸಿದ ಅಗಾಧವಾದ ವೈಚಾರಿಕ ಸಾಹಿತ್ಯವು ಇಂಗ್ಲಿಷ್ನಲ್ಲಿ ಲಭ್ಯವಿದೆ. ಕನ್ನಡದಲ್ಲಿ ಅದಕ್ಕೆ ಬೇಡಿಕೆ ಇದೆ, ಪೂರೈಕೆ ಕಡಿಮೆ. ಅಂಥದ್ದನ್ನು ಕನ್ನಡಕ್ಕೆ ತರುವ ಕೆಲಸಕ್ಕೆ ಏಐಯನ್ನು ಏಕೆ ಬಳಸಿಕೊಳ್ಳಬಾರದು? ನಮ್ಮ ಕಾಲದ ಮುಖ್ಯ ಚರ್ಚೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ಅಥವಾ ವಿದ್ಯಮಾನಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಇಂಗ್ಲಿಷ್ ಬಾರದಿರುವುದೇ ಒಂದು ತಡೆಯಾಗಬಾರದು. ಕನ್ನಡದಂಥ ನುಡಿಗಳ ಸಂವಾದಗಳಿಗೆ ಜಗದರಿವನ್ನು ತರುವ ಕೆಲಸವನ್ನು ಏಐ ಮೂಲಕ ಗಣನೀಯ ಪ್ರಮಾಣದಲ್ಲಿ ಮಾಡುವುದು ಸಾಧ್ಯ.
ಇದು ಏಐ ತೋರಿರುವ ಭರವಸೆಯ ಹಾದಿ. ಆದರೆ, ತಂತ್ರಜ್ಞಾನದ ಜೊತೆಗೆ ಯಾವತ್ತೂ ಸಾಮಾಜಿಕ, ಆರ್ಥಿಕ ಮತ್ತು ನೈತಿಕ ಸವಾಲುಗಳು ತಳುಕುಹಾಕಿಕೊಂಡಿರುತ್ತವೆ. ಅದನ್ನು ನಿಭಾಯಿಸುವಲ್ಲಿ ಸಮಾಜದ ಪಾತ್ರವು ಮುಖ್ಯವಾಗುತ್ತದೆ. ಆ ಪಾತ್ರವನ್ನು ಕುರಿತು ಕೆಲವು ಸೂಚನೆಗಳನ್ನು ಕೊಟ್ಟು ಈ ಪ್ರಬಂಧವನ್ನು ಕೊನೆಗೊಳಿಸುತ್ತೇನೆ.
ನಾವು ಈ ಮೊದಲು ಚರ್ಚಿಸಿದ ಎಲೈಜ಼ಾ ಪ್ರಭಾವವು ಇಂದಿನ ಆಪ್ತ ಹರಟೆಮಲ್ಲ/ಮಲ್ಲಿಯರ ದೆಸೆಯಿಂದ ಇನ್ನೂ ಹೆಚ್ಚು ಪ್ರಬಲವಾಗಿದೆ. ಎಲೈಜ಼ಾಳಿಂದ ಕಲಿಯಬೇಕಾದ ಪಾಠಗಳು ಎರಡು: ಒಂದು — ಸಂವಾದದ ಭ್ರಮೆಯನ್ನು ಸೃಷ್ಟಿಸುವುದಕ್ಕೂ ನಿಜವಾದ ಮನುಷ್ಯ ಸಂವಾದಕ್ಕೂ ಬಲುದೊಡ್ಡ ಅಂತರವಿದೆ; ಎರಡನೆಯದು — ಮೇಲ್ನೋಟಕ್ಕೆ ಸಮಂಜಸವೆಂದು ತೋರುವ ಉತ್ತರಗಳು ಎದುರಿಗಿದ್ದಾಗ ಮನುಷ್ಯನ ಮನಸ್ಸು ಎಷ್ಟು ಬೇಗ ಮೋಸ ಹೋಗಿ ‘ಬುದ್ಧಿಮತ್ತೆ’ಯನ್ನು ಕಲ್ಪಿಸಿಕೊಳ್ಳುತ್ತದೆ ಅಥವಾ ಆರೋಪಿಸುತ್ತದೆ ಎನ್ನುವ ಎಚ್ಚರ. ಇಲ್ಲೆಂದಲ್ಲಿ, ಏಐನ ಹುಸಿಸೊಲ್ಲುವಿಕೆಯೇ (hallucinations) ದಿಟವೆಂದು ತೋರತೊಡಗುವುದು.
ಸಾಹಿತ್ಯವಲಯದಲ್ಲೂ ಈ ಸವಾಲುಗಳನ್ನು ನಾವು ಎದುರಿಸಲಿದ್ದೇವೆ. ಇತ್ತೀಚೆಗಷ್ಟೇ ಒಂದು ಪ್ರತಿಷ್ಠಿತ ಬಹುಮಾನವನ್ನು ಪಡೆದ ಕತೆಯು ಏಐ ಉತ್ಪಾದಿತವೇ ಎಂಬ ಹುಯಿಲೆದ್ದಿತು. ಇದನ್ನು ಏಐನ ಸೃಷ್ಟಿಶೀಲತೆಯ ಗೆಲುವೆನ್ನುವುದೋ ಸಾಹಿತ್ಯಲೋಕವು ಮೌಲ್ಯಮಾಪನದ ಕಸುವನ್ನು ಕಳೆದುಕೊಳ್ಳುತ್ತಿರುವ ಸೂಚನೆಯೆನ್ನುವುದೋ? ಕೃತಕ ಬುದ್ಧಿಮತ್ತೆಯ ಕಲಗಚ್ಚು (AI slop) ಎಂಬ ಒಂದು ನುಡಿಗಟ್ಟು ಚಾಲ್ತಿಯಲ್ಲಿದೆ. ಅವಸರದಲ್ಲಿ ಉತ್ಪಾದಿಸಿದ, ಹೊಸತನವಿಲ್ಲದ, ಸಾಧಾರಣ ಗುಣಮಟ್ಟದ ಪಠ್ಯ ಅಥವಾ ಬೇರೆ ರೂಪದ ಕಂಟೆಂಟ್ಗೆ ಹಾಗೆನ್ನುತ್ತಾರೆ. ಇಂಥ slop ಏಐ ಮಾತ್ರ ಉತ್ಪಾದಿಸುತ್ತಿದೆಯೇ ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು. ನಿಧಾನ ಗಂಭೀರ ಚಿಂತನಶೀಲತೆಗೆ, ಪ್ರಾಮಾಣಿಕ ವಿಮರ್ಶೆಗೆ, ಕೌಶಲ್ಯವನ್ನು ಒರೆಗೆ ಹಚ್ಚಿ ಪರಿಷ್ಕರಿಸುವ ಶ್ರಮಕ್ಕೆ ಇದ್ದ ಅವಕಾಶವನ್ನು ಸ್ಪರ್ಧೆಗಳಿಗೆ, ಅವಸರದ ಸಂಭ್ರಮಕ್ಕೆ, ಪ್ರಶಸ್ತಿಪುರಸ್ಕಾರಗಳಿಗೆ ಬಿಟ್ಟುಕೊಟ್ಟದ್ದು ತಂತ್ರಜ್ಞಾನವಲ್ಲ.
ಕೆಲವು ತಿಂಗಳುಗಳ ಹಿಂದೆ ನಾನು ಪಾಲ್ಗೊಂಡಿದ್ದ ಸಂವಾದದಲ್ಲಿ ನನಗೆ ಎದುರಾದ ಒಂದು ಪ್ರಶ್ನೆ ಹೀಗಿತ್ತು: ಪತ್ರಿಕೆಗಳು ಈಗಾಗಲೇ ಸಂಕಷ್ಟದಲ್ಲಿವೆ; ಏಐ ಮೂಲಕ ಕಂಟೆಂಟ್ ಉತ್ಪಾದಿಸಬಹುದಾದರೆ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವವರ ಪಾಡೇನು? ಈ ಆತಂಕ ನ್ಯಾಯೋಚಿತವೇ. ಈ ಬಿಕ್ಕಟ್ಟಿನ ಬಗ್ಗೆ ವಿವರವಾಗಿ ಚರ್ಚಿಸುವ ಅಗತ್ಯವಿದೆ. ಆದರೆ, ಒಂದು ಮರುಪ್ರಶ್ನೆಯನ್ನೂ ಕೇಳಿಕೊಳ್ಳಬೇಕು ಎನ್ನಿಸುತ್ತದೆ: ತಂತ್ರಜ್ಞಾನದ ಸಾಮರ್ಥ್ಯದ ತ್ವರಿತವಾದ ಏರಿಕೆ ಒತ್ತಟ್ಟಿಗಿರಲಿ; ಪತ್ರಿಕಾ ವರದಿಗಳನ್ನು ಏಐ ಪರಿಕರಗಳು ಉತ್ಪಾದಿಸಲುಬಹುದು ಎಂದಾದಲ್ಲಿ ಅವು ಅಷ್ಟೊಂದು ಸುಲಭ ಸರಕು ಆದದ್ದು ಯಾವಾಗ? ಗುಣಮಟ್ಟಕ್ಕಿಂತ ಪ್ರಮಾಣ, ಸುದ್ದಿಯ ಸತ್ಯಕ್ಕಿಂತ ಅದನ್ನು ಸಾರುವ ವೇಗ, ಆಳವಾದ ವಿಶ್ಲೇಷಣೆಗಿಂತ ಪೂರ್ವಗ್ರಹಪೀಡಿತ ಅಭಿಪ್ರಾಯಗಳು ಮುಖ್ಯವಾದದ್ದು ಹೇಗೆ? ಅದಕ್ಕೆ ಅವಕಾಶ ಕೊಟ್ಟದ್ದು ಯಾರು? ಅದು ಪತ್ರಿಕೋದ್ಯಮದ ಬಗ್ಗೆ, ಆರ್ಥಿಕ ವ್ಯವಸ್ಥೆಯ ಬಗ್ಗೆ, ಮತ್ತು ಒಟ್ಟಾರೆ ಸಮಾಜದ ಬಗ್ಗೆ ಏನನ್ನು ಹೇಳುತ್ತದೆ?
ಇದು ಕೇವಲ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಬಿಕ್ಕಟ್ಟಲ್ಲ. ಇದೇ ಪ್ರಶ್ನೆಯನ್ನು ಸಾಹಿತ್ಯ, ಸಂಶೋಧನೆ, ಶಿಕ್ಷಣ ಸೇರಿದಂತೆ ಹಲವು ವಲಯಗಳಿಗೆ ಅನ್ವಯಿಸಿ ಕೇಳಬಹುದು. ಸಮಾಜವು ಗುಣಮಟ್ಟದ ಕುಸಿತವನ್ನು ಒಪ್ಪಿಕೊಂಡು ಮುನ್ನಡೆಯುತ್ತಿರುವ ನಮ್ಮ ಕಾಲದ ಪ್ರವೃತ್ತಿಗೆ ಎಲೈಜ಼ಾ ಪ್ರಭಾವವನ್ನು ಒಂದು ರೂಪಕವನ್ನಾಗಿ ಬಳಸಿಕೊಳ್ಳಬಹುದು ಎನ್ನಿಸುತ್ತದೆ.
ತಂತ್ರಜ್ಞಾನವು ಸವಾಲುಗಳನ್ನು ತಂದೊಡ್ಡಿದಂತೆ ಹಲವು ಅವಕಾಶಗಳನ್ನೂ ಒದಗಿಸುತ್ತದೆ. ಅದನ್ನು ಎಲ್ಲಿ, ಹೇಗೆ, ಯಾವ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಎಂಬುದು ಕೊನೆಗೂ ನಮ್ಮ ಆಯ್ಕೆಯ ಪ್ರಶ್ನೆಯೇ. ಯಾವುದನ್ನು ನಾವು ಸೃಷ್ಟಿಶೀಲತೆ ಎಂದು ಗುರುತಿಸುತ್ತೇವೆ; ಯಾವುದು ದಿಟವಾದುದು, ಯಾವುದು ಮೌಲಿಕವಾದುದು ಎಂಬ ತೀರ್ಮಾನವು ಸಮುದಾಯದ್ದು. ನಾವು ಯಾವ ದಿಕ್ಕಿನಲ್ಲಿ ಮುನ್ನಡೆಯಬೇಕು ಎಂಬುದು ಕೂಡ. ಅದನ್ನು ಸರಕಾರಗಳ ಅಥವಾ Big Tech ಕಂಪನಿಗಳ ಕೈಯ್ಯಲ್ಲಿ ಬಿಡಲಾಗದು.
(ಈ ಬರಹದ ಒಂದು ಆವೃತ್ತಿ ಈ ತಿಂಗಳ ‘ಸಮಾಜಮುಖಿ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.)
ಇದನ್ನೂ ಓದಿ …
ವಸ್ತುವಿನ ಆಕಾರ, ನೋಟದ ವಿನ್ಯಾಸ, ಮಾತಿನ ಅರ್ಥ ...
ಕೆ ವಿ ನಾರಾಯಣರು ತಮ್ಮ ನುಡಿಗಳ ಅಳಿವು ಪ್ರಬಂಧವನ್ನು “ಇದು ಒಂದು ವಾಗ್ವಾದವನ್ನು ಬಯಸುವ ಗುರಿಯನ್ನುಳ್ಳ ಬರಹ” ಎಂದು ಹೇಳಿಯೇ ಆರಂಭಿಸುತ್ತಾರೆ. ಆ ನಿಟ್ಟಿನಲ್ಲಿ ಸಂಕೇತ ಪಾಟೀಲರ ಈ ಬರಹವು ಕೆವಿಎನ್ ಅವರ ಪ್ರಬಂಧದಲ್ಲಿರುವ ಹಲವು ಅಂಶಗಳನ್ನು ಚರ್ಚಿಸುತ್ತ ಅದಕ್ಕೆ ಪೂರಕವಾಗಿರುವ ಇನ್ನೂ ಕೆಲವು ನೋಟಗಳತ್ತ ಬೆಳಕು ಚೆಲ್ಲಲೆಳಸುತ್ತದೆ. ಈ ಬರಹವು ಎರಡು ಭಾಗಗಳಲ್ಲಿ ಪ್ರಕಟವಾಗಿದ್ದು ಇದು ಎರಡನೆಯ ಭಾಗವಾಗಿದೆ.



