ಬಪ್ಪಬ್ಯಾರಿಯ ಸಮನ್ವಯದಿಂದ 'ಅಯೋಧ್ಯಾ ವಿಜಯ'ದ ಉನ್ಮಾದದವರೆಗೆ
ನಿತ್ಯಾನಂದ ಬಿ ಶೆಟ್ಟಿಯವರ ಕೃತಿಯಲ್ಲಿನ ಕಲೆ, ಸಮಾಜ, ರಾಜಕಾರಣದ ಪಲ್ಲಟಗಳು
ಜಾತಿ, ಧರ್ಮ ಮತ್ತು ರಾಜಕಾರಣದ ಸಂಕೋಲೆಗಳಲ್ಲಿ ಯಕ್ಷಗಾನದಂಥ ಕಲೆ ಸಾಗಿ ಬಂದ ಹಾದಿಯ ಸ್ವರೂಪ ಎಂಥದ್ದು? ಅದರ ಗಮ್ಯವೇನು? ಕೆಳಜಾತಿಗಳಿಂದ ಮೇಲ್ಜಾತಿಗಳ ಕೈಗೆ, ಸೌಹಾರ್ದತೆಯಿಂದ ಕೋಮು ದ್ವೇಷದ ಜ್ವಾಲೆಗೆ ಕಲೆ ರೂಪಾಂತರಗೊಂಡ ಕರಾಳ ಸತ್ಯಗಳ ಶೋಧ ಇಲ್ಲಿದೆ. ಯಕ್ಷಗಾನದ ಮಸೂರದ ಮೂಲಕ ನಮ್ಮ ಸಮಕಾಲೀನ ಸಮಾಜ ಮತ್ತು ರಾಜಕಾರಣದ ಮೇಲೆ ಬೆಳಕು ಹಾಯಿಸುವ ನಿತ್ಯಾನಂದ ಬಿ ಶೆಟ್ಟಿಯವರ ಮಹತ್ವದ ಕೃತಿಯ ಕುರಿತು ಶ್ರೀಪಾದ ಹೆಗಡೆ ಅವರ ವಿಶ್ಲೇಷಣಾತ್ಮಕ ಬರಹ ನಿಮ್ಮ ಓದಿಗೆ.
ಸಾಹಿತ್ಯ-ಸಂಸ್ಕೃತಿ-ಸಾಮಾಜಿಕ ವಿಷಯಗಳ ಕುರಿತು ಈ ಕಾಲದ ಪ್ರಮುಖ ಚಿಂತಕರಲ್ಲಿ ಒಬ್ಬರಾದ ನಿತ್ಯಾನಂದ ಬಿ ಶೆಟ್ಟಿಯವರು ಬರೆದ ಅಳವು ಅರಿಯದ ಭಾಷೆ: ಕಲೆ, ಸಮಾಜ, ಇತಿಹಾಸ ಎನ್ನುವ ಪುಸ್ತಕ ತುಂಬ ವಿಶಿಷ್ಟವಾದುದು. ಕರಾವಳಿಯ ಬಹು ಜನಪ್ರಿಯ ಪ್ರದರ್ಶನ ಕಲೆಯಾದ ಯಕ್ಷಗಾನದ ಸಾಮಾಜಿಕ ಇತಿಹಾಸವನ್ನು ಬಗೆಯುತ್ತಾ ಅದು ಅಲ್ಲಿನ ಸಾಮಾಜಿಕ ಇತಿಹಾಸದೊಂದಿಗೆ ತಳಕು ಹಾಕಿಕೊಂಡಿರುವ ಬಗೆಯನ್ನು ಪರೀಕ್ಷಿಸುವುದು ಇದರ ಮುಖ್ಯ ಉದ್ದೇಶ. ಇದರೊಂದಿಗೆ ಯಕ್ಷಗಾನದ ಕಲಾ ಮೀಮಾಂಸೆಯನ್ನು ಸಂಕ್ಷಿಪ್ತವಾಗಿಯೂ ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ-ಸಾಮಾಜಿಕ ಹಿನ್ನೆಲೆಯಲ್ಲಿ ಕನ್ನಡದ ಕರಾವಳಿ ಜಿಲ್ಲೆಗಳ ವಿದ್ಯಮಾನದ ಬೆಳವಣಿಗೆಯನ್ನು ವಿವರವಾಗಿಯೂ ಈ ಕೃತಿ ಓದುಗರ ಮುಂದಿಡುತ್ತದೆ. ಒಂದು ಸಂಶೋಧನಾ ಕೃತಿಗೆ ಬೇಕಾದ ಎಲ್ಲ ಅಧ್ಯಯನದ ಶಿಸ್ತನ್ನು ಒಳಗೊಂಡಿದ್ದರೂ ಇದೊಂದು ಜಡವಾದ ಪಾರಿಭಾಷಿಕ ಪದಗಳಿಂದ ಮತ್ತು ವಿದ್ವತ್ತಿನ ಪದ ಪ್ರಯೋಗಗಳಿಂದ ರಚಿಸಲ್ಪಡದೆ ಸಾಮಾನ್ಯ ಓದುಗನೂ ಸುಲಭವಾಗಿ ಅರ್ಥ ಮಾಡಿಕೊಳ್ಳುವ ಸಾಹಿತ್ಯಿಕ ಭಾಷೆಯಲ್ಲಿ, ಹಲವೊಮ್ಮೆ ಲೇಖಕರ ಅನುಭವದ ಕಥಾನಕದೊಂದಿಗೆ ನಿರೂಪಿಸಲ್ಪಟ್ಟಿದೆ. ಯಕ್ಷಗಾನದ ಪ್ರಭಾವವಲಯದಲ್ಲಿನ ಓದುಗರಲ್ಲದೆ ಆ ವಲಯದ ಹೊರಗಿನವರೂ ಅರ್ಥ ಮಾಡಿಕೊಳ್ಳುವುದಕ್ಕೋಸ್ಕರ ಹಲವು ಟಿಪ್ಪಣಿಗಳನ್ನೂ ಅಡಿ ಪಟ್ಟಿಯಲ್ಲಿ ಲೇಖಕರು ಅಲ್ಲಲ್ಲಿ ನೀಡಿದ್ದಾರೆ. ಲೇಖಕರು ಯಕ್ಷಗಾನದ ಹಿನ್ನೆಲೆ ಇರುವ ಮನೆತನದಿಂದ ಬಂದವರು ಮಾತ್ರವಲ್ಲ ತಮ್ಮ ತಾರುಣ್ಯದಲ್ಲಿ ವೇಷ ಹಾಕಿ ಗೆಜ್ಜೆ ಕಟ್ಟಿ ಕುಣಿದ ಅನುಭವ ಹೊಂದಿದವರೂ ಆಗಿರುವುದು ಇಲ್ಲಿ ಉಲ್ಲೇಖಿಸಲಾದ ಹಲವಾರು ಸಂಗತಿಗಳಿಗೆ ಅಧಿಕೃತತೆಯನ್ನು ತಂದು ಕೊಟ್ಟಿದೆ.

ಯಕ್ಷಗಾನದ ಆಟ-ಕೂಟಗಳೆಂಬ ಎರಡೂ ಶಾಖೆಗಳ ಉಗಮ ಮತ್ತು ಹಿಂದಿನ ಶತಮಾನದ ಆದಿಯವರೆಗಿನ ಅವುಗಳ ಬೆಳವಣಿಗೆಯ ಇತಿಹಾಸವನ್ನು ಲಭ್ಯವಿರುವ ಸಾಮಗ್ರಿಗಳ ನೆಲೆಯಲ್ಲಿ ಊಹಿಸುತ್ತಲೇ ಇದು ಈ ದೇಶದ ಇತರ ಪ್ರದರ್ಶನ ಕಲೆಗಳಂತೆಯೇ ಕೆಳಜಾತಿಯವರಿಂದ ಶುರುವಾಗಿ ಶತಮಾನಗಳ ಕಾಲ ನಡೆಯುತ್ತಾ ಬಂದದ್ದರ ಬಗ್ಗೆ ಲೇಖಕರು ಸಕಾರಣ ವಾದ ಮಂಡಿಸುತ್ತಾರೆ. ಸುಮಾರು ನೂರು ವರ್ಷಗಳ ಹಿಂದೆ, ಎಂದರೆ 1920ರ ದಶಕದಿಂದ ಈ ಕಲೆಯಲ್ಲಿ ಮೇಲುಜಾತಿಯವರ ಪ್ರವೇಶವಾಯಿತು. ಕಾಲಕ್ರಮೇಣ ಇದು ದೇವಸ್ಥಾನಗಳ ಆಡಳಿತಕ್ಕೆ ಒಳಪಟ್ಟು ಒಂದು ಆರಾಧನಾ ಕಲೆಯಾಗಿ ಬದಲಾಯಿತು. ಈ ಬೆಳವಣಿಗೆಯಿಂದಾಗಿ, ಮೂಲತಃ ಈ ಕಲೆಯಲ್ಲಿದ್ದ ಕೆಳಜಾತಿಯ ಜನರು ಅದರಿಂದ ಹೊರಗಿಡಲ್ಪಟ್ಟರು. ಲೇಖಕರು ಈ ಎಲ್ಲಾ ವಿದ್ಯಮಾನಗಳನ್ನು ಇಲ್ಲಿ ಶೋಧಿಸುತ್ತಾರೆ.
ವಾಣಿಜ್ಯ ಕಾರಣಗಳಿಗಾಗಿ ಹುಟ್ಟಿಕೊಂಡ ಮೇಳಗಳು ಜಾತಿಯ ಗೆರೆಯನ್ನು ಮೀರುವ ಪ್ರಯತ್ನ ಮಾಡುತ್ತವೆ. ಅಲ್ಲದೇ ಸಾಂಪ್ರದಾಯಿಕ ನೆಲೆಯ ಪೌರಾಣಿಕ ಕಥೆಗಳ ಚಾತುರ್ವರ್ಣ್ಯ ವ್ಯವಸ್ಥೆಗೆ ಮುಖಾಮುಖಿಯಾಗಿ ಕೆಳಜಾತಿಗಳ ವೀರರನ್ನು ವೈಭವೀಕರಿಸುವ ಮತ್ತು ಮಹಿಳಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಯಕ್ಷಗಾನ ಪ್ರಸಂಗಗಳು 1950-60ರ ದಶಕದಲ್ಲಿಯೇ ರಚಿತವಾಗಿ ಪ್ರದರ್ಶಿಸಲ್ಪಟ್ಟು ಜನಪ್ರಿಯವಾಗಿದ್ದವು. ಆದರೆ, ಆ ವಿದ್ಯಮಾನ ಸಂಭವಿಸಿದ ದಶಕದ ಅನಂತರ ಈ ಕ್ರಾಂತಿ ಮುಂದುವರಿಯದೆ ಮತ್ತೆ ಸಂಪ್ರದಾಯವಾದವೇ ಮೇಲುಗೈ ಪಡೆದದ್ದರ ವಿಮರ್ಶೆ ಈ ಕೃತಿಯಲ್ಲಿದೆ.
ಹಾಗೆಯೇ ಸಾಮಾಜಿಕ ಸಾಮರಸ್ಯ ಇನ್ನೂ ಕೋಮುವಾದದಿಂದಾಗಿ ಹದಗೆಟ್ಟಿರದ ಆ ಕಾಲದಲ್ಲಿ ಮುಸ್ಲಿಮ್ ಪಾತ್ರಗಳನ್ನು ರಂಗದ ಮೇಲೆ ಉದಾತ್ತವಾಗಿ ಚಿತ್ರಿಸಿದ ಮತ್ತು ಆ ಮೂಲಕ ಮುಸ್ಲಿಮ್ ಪ್ರೇಕ್ಷಕರನ್ನೂ ಗಣನೀಯವಾಗಿ ಆಕರ್ಷಿಸಿದ ಉಲ್ಲೇಖವೂ ಇದೆ. ಆದರೆ ಇದು ಸಹ ತಾತ್ಕಾಲಿಕ ಬೆಳವಣಿಗೆಯಾಗಿದ್ದು 1980-90ರ ದಶಕದ ವೇಳೆಗೆ ಪರಿಸ್ಥಿತಿ ಬದಲಾಗಿತ್ತು. ಮುಸ್ಲಿಮರನ್ನು ಹೀನಾಯವಾಗಿ ನಿಂದಿಸುವ ಮತ್ತು ಆ ಮೂಲಕ ಕರಾವಳಿ ಪ್ರದೇಶದಲ್ಲಿ ಆಗಲೇ ಮೇಲೆದ್ದ ಕೋಮು ಜ್ವಾಲೆಗೆ ತುಪ್ಪ ಸುರಿಯುವ ಉದ್ದೇಶದಿಂದ ಯಕ್ಷಗಾನ ಪ್ರಸಂಗಗಳನ್ನು ರಚಿಸಿ ಆಡುವ ಮಟ್ಟಕ್ಕೆ ಕಲೆ ತನ್ನ ಅಧಃಪತನ ಕಂಡ ವಾಸ್ತವ ಘಟನೆಗಳ ನಿರೂಪಣೆ ಸಮಚಿತ್ತದ ಯಾರನ್ನಾದರೂ ತಳಮಳಿಸಿಬಿಡುತ್ತದೆ.
ಈ ಪುಸ್ತಕದ ಬಗ್ಗೆ ಸ್ಥೂಲವಾಗಿ ಇಷ್ಟು ಹೇಳಿ ಕೆಲವೇ ಕೆಲವು ಸಂಗತಿಗಳನ್ನು ಸ್ವಲ್ಪ ವಿವರವಾಗಿ ನೋಡ ಬಯಸುತ್ತೇನೆ. ಮೊದಲನೆಯದಾಗಿ ದೇಶದ ಎಲ್ಲ ಪ್ರದರ್ಶನ ಕಲೆಗಳ ಹುಟ್ಟು ಮತ್ತು ಒಂದು ಹಂತದವರೆಗಿನ ಬೆಳವಣಿಗೆಯು ಕೆಳಜಾತಿಯವರಿಂದಲೇ ಆಗಿದೆ ಎನ್ನುವ ವಿಚಾರ: ಇದು ನೃತ್ಯ ಮತ್ತು ನಾಟಕಗಳಿಗೆ ಸಮನಾಗಿ ಅನ್ವಯಿಸುತ್ತದೆ. ಅನಂತರ ಮೇಲುಜಾತಿಯವರು ಅವುಗಳಲ್ಲಿ ತೊಡಗಿಕೊಂಡರೂ ನೃತ್ಯ ಮಾಡುವವರು ಸೂಳೆಯರು, ನಾಟಕ ಮಾಡುವವರು ಚಟಸಾರ್ವಭೌಮರು ಎನ್ನುವ ಮಾತು ಸರ್ವೇಸಾಮಾನ್ಯವಾಗಿ ಸುಮಾರು ಐವತ್ತು ವರ್ಷಗಳ ಹಿಂದಿನವರೆಗೂ ವಾಡಿಕೆಯಲ್ಲಿತ್ತು. ಪ್ರಸಿದ್ಧ ಯಕ್ಷಗಾನ ಕಲಾವಿದರಾಗಿದ್ದ ಕೆರೆಮನೆ ಶಿವರಾಮ ಹೆಗಡೆಯವರ ಆತ್ಮಕಥನದಲ್ಲಿ ಯಕ್ಷಗಾನ ಕಲಾವಿದರ ಬಗ್ಗೆ ಸಮಾಜದಲ್ಲಿ ಇದ್ದ ಕೀಳು ಅಭಿಪ್ರಾಯದ ಉಲ್ಲೇಖ ಇದೆ. ನನ್ನ ಬಾಲ್ಯದ ಕಾಲಕ್ಕೆ ಯಕ್ಷಗಾನದಲ್ಲಿ ಅದರಲ್ಲೂ ಉತ್ತರ ಕನ್ನಡದ ಬಡಗುತಿಟ್ಟಿನಲ್ಲಿ ಸಾಕಷ್ಟು ಮೇಲುಜಾತಿಯವರು ಪ್ರಮುಖ ಕಲಾವಿದರಾಗಿ ಕಾಣಿಸಿಕೊಂಡಿದ್ದರು. ಮೇಲುಜಾತಿಯವರು ಮೇಳದಲ್ಲಿ ಹೆಚ್ಚಾಗುತ್ತಾ ಹೋದಂತೆ ಕೆಳಜಾತಿಯವರ ಸಂಖ್ಯೆ ಇಳಿಮುಖವಾಗುತ್ತಾ ಹೋಯಿತು. ಇದೇ ವಿದ್ಯಮಾನ ದಕ್ಷಿಣ ಕನ್ನಡದ ತೆಂಕುತಿಟ್ಟಿನಲ್ಲೂ ಸಂಭವಿಸಿದೆ. ಬಿಲ್ಲವರಂತಹ ಕೆಳಜಾತಿಯವರಿಗೆ ಮೇಳಕ್ಕೆ ಸೇರಿ ಪಾತ್ರ ಮಾಡಲು ಅವಕಾಶವಿರಲಿಲ್ಲ ಎನ್ನುವುದನ್ನು ಉದಾಹರಣೆಯ ಸಹಿತ ಲೇಖಕರು ಉಲ್ಲೇಖಿಸಿದ್ದಾರೆ.

ಕಲ್ಲಾಡಿ ಕೊರಗ ಶೆಟ್ಟಿಯವರು 1920ರ ದಶಕದಲ್ಲಿ ಪ್ರಾರಂಭಿಸಿದ ‘ಇರಾ ಶ್ರೀ ಸೋಮೆಶ್ವರ ಮೇಳ’ ಅನೇಕ ಪ್ರಥಮಗಳನ್ನು ಮಾಡಿ ಮತ್ತು ಯಕ್ಷಗಾನದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದ ಬಗೆಗಿನ ಲೇಖಕರ ವಿಶ್ಲೇಷಣೆ ಯಕ್ಷಗಾನದ ಸಾಮಾಜಿಕ ಇತಿಹಾಸದಲ್ಲಾದ ಮೊದಲ ಪಲ್ಲಟವನ್ನು ದಾಖಲಿಸುತ್ತದೆ. ಹಾಗಂತ ಆಮೇಲೆ ಎಲ್ಲ ಮೇಳಗಳೂ ಕೆಳಜಾತಿಯ ಬಿಲ್ಲವರನ್ನು ಸೇರಿಸಿಕೊಂಡರು ಎಂದರೆ ಸತ್ಯಕ್ಕೆ ದೂರವಾದ ಮಾತಾಗುತ್ತದೆ. ಧರ್ಮಸ್ಥಳ ಮೇಳದಲ್ಲಿ ಈ ಶತಮಾನದ ಮೊದಲ ದಶಕದವರೆವಿಗೂ ಬಿಲ್ಲವರನ್ನು ಸೇರಿಸಿಕೊಳ್ಳುತ್ತಿರಲಿಲ್ಲ ಎನ್ನುವ ಕಟು ವಾಸ್ತವ ಇದಕ್ಕೆ ನಿದರ್ಶನವಾಗಿದೆ. ಕೊರಗ ಶೆಟ್ಟಿಯವರು ಯಕ್ಷಗಾನದ ಕ್ಷೇತ್ರದಲ್ಲಿ ಹಲವು ಪಲ್ಲಟಗಳಿಗೆ ಕಾರಣರಾದರು: ದೇವಸ್ಥಾನದ ಕೃಪಾಪೋಷಣೆ ಇಲ್ಲದೆ ವಾಣಿಜ್ಯ ಉದ್ದೇಶದಿಂದ ಕಟ್ಟಿದ ಮೊದಲ ಮೇಳ, ಕೆಳಜಾತಿಯ ಬಿಲ್ಲವ ಸಮಾಜದ ವ್ಯಕ್ತಿಗಳಿಗೆ ಪ್ರವೇಶ ದೊರಕಿಸಿದ ಮೊದಲ ಮೇಳ, ಮೊದಲ ಟೆಂಟ್ ಮೇಳ ಇತ್ಯಾದಿ. ಇಷ್ಟೇ ಮಹತ್ವದ ಇನ್ನೊಂದು ಕಾರ್ಯ ಅವರು ಮಾಡಿದ್ದೆಂದರೆ ಅದುವರೆಗೆ ಸಂಪ್ರದಾಯಬದ್ಧವಾದ ಚಾತುರ್ವರ್ಣ್ಯವನ್ನು ಎತ್ತಿಹಿಡಿಯುವ ಆಖ್ಯಾನಗಳು ಮಾತ್ರ ಪ್ರದರ್ಶಿತವಾಗುತ್ತಿದ್ದಾಗ 1948ರಲ್ಲಿ ತುಳುವಿನಲ್ಲಿ ‘ಕೋಟಿ ಚೆನ್ನಯ’ ಎನ್ನುವ ಜಾನಪದ ಮೂಲದ ಕತೆಯನ್ನು ಯಕ್ಷಗಾನವಾಗಿಸಿದ್ದು. ಕೋಟಿ ಚೆನ್ನಯರು ಅದುವರೆಗೆ ಯಕ್ಷಗಾನದಿಂದ ಬಹಿಷ್ಕೃತರಾಗಿದ್ದ ಬಿಲ್ಲವ ಜಾತಿಗೆ ಸೇರಿದ ಜನಪದ ವೀರರು ಎನ್ನುವುದು ಮತ್ತು ಅವರೇ ಈ ಕಥಾನಕದ ನಾಯಕರು ಎನ್ನುವುದು ಯಕ್ಷಗಾನ ಸಂಪ್ರದಾಯದಲ್ಲಾದ ಬಹಳ ಮಹತ್ವದ ಪಲ್ಲಟದ ಸಂಗತಿಯನ್ನು ಸೂಚಿಸುತ್ತದೆ. ಈ ಪ್ರಸಂಗ ದಶಕಗಳ ಕಾಲ ತುಂಬಾ ಜನಪ್ರಿಯವಾಗಿ ಪ್ರದರ್ಶಿತವಾಗಿದ್ದರೂ ನಂತರ ಬಂದ ಜಾನಪದ / ಸಾಮಾಜಿಕ ಯಕ್ಷಗಾನ ಕಥಾನಕಗಳು ಚಾತುರ್ವರ್ಣ್ಯದ ಸಾಂಪ್ರದಾಯಿಕ ಮೌಲ್ಯಗಳನ್ನೇ ಎತ್ತಿಹಿಡಿದವು ಎನ್ನುವ ವಿಚಾರ ನಮ್ಮ ಸಮಾಜ ಸಂಪ್ರದಾಯದ ಕಪಿಮುಷ್ಟಿಯಲ್ಲಿ ಅದೆಷ್ಟು ಭದ್ರವಾಗಿ ಬಂಧಿಸಲ್ಪಟ್ಟಿದೆ ಎನ್ನುವುದನ್ನು ತೋರಿಸುತ್ತದೆ. ಈ ವಾಸ್ತವವನ್ನೂ ಲೇಖಕರು ಒತ್ತು ಕೊಟ್ಟು ವಿವರಿಸಿದ್ದಾರೆ. ಹಾಗೆಯೇ ಕೊರಗ ಶೆಟ್ಟಿಯವರು ಸುಮಾರು ಅದೇ ದಶಕದಲ್ಲಿ ‘ತುಳುನಾಡ ಸಿರಿ’ ಎನ್ನುವ ಇನ್ನೊಂದು ಸಾಮಾಜಿಕ ಕತೆಯನ್ನು ಯಕ್ಷಗಾನವಾಗಿ ಪ್ರದರ್ಶಿಸಿದರು. ಅದು ಮಹಿಳೆಯೊಬ್ಬಳು ಕೆಟ್ಟ ಗಂಡನ ವಿರುದ್ಧ ಸಿಡಿದೆದ್ದು ಅವನನ್ನು ತೊರೆದು ಇನ್ನೊಬ್ಬನನ್ನು ಮದುವೆಯಾಗುವ ಕತೆಯುಳ್ಳದ್ದು. ಹೆಣ್ಣಿನ ಸ್ಥಾನವನ್ನು ನಿರ್ಧರಿಸುವ ಸಾಂಪ್ರದಾಯಿಕ ಮೌಲ್ಯಕ್ಕೆ ಕೊಡಲಿ ಏಟು ಕೊಡುವ ಇನ್ನೊಂದು ಸಾಹಸ ಇದಾಗಿತ್ತು. ಆದರೆ, ಯಕ್ಷಗಾನದ ಮುಂದಿನ ಬೆಳವಣಿಗೆ ಈ ದಿಸೆಯಲ್ಲಿ ಆಗಲೇ ಇಲ್ಲ ಎನ್ನುವುದೂ ದುರದೃಷ್ಟಕರ. ಲೇಖಕರು ಈ ಘಟನೆಯ ಸುತ್ತ ನಡೆದ ಅನೇಕ ಸಾಮಾಜಿಕ ವಿದ್ಯಮಾನಗಳನ್ನೂ ತುಲನೆ ಮಾಡಿ ನೋಡುವುದು ಪುಸ್ತಕದ ಮಹತ್ವದ ಅಂಶಗಳಲ್ಲಿ ಒಂದಾಗಿದೆ.
ಈ ಪುಸ್ತಕದ ಇನ್ನೊಂದು ಮುಖ್ಯ ವಿಷಯ ಕೋಮು ಸೌಹಾರ್ದತೆ ಮತ್ತು ಅದರ ಕದಡುವಿಕೆಗೆ ಸಂಬಂಧಿಸಿದ್ದು. ಇಲ್ಲಿ ಲೇಖಕರು ಎರಡು ವಿರುದ್ಧ ಧಾರೆಗಳನ್ನು ಎದುರಾಗಿಸಿ ಪರೀಕ್ಷಿಸುವ ಕೆಲಸವನ್ನು ತುಂಬ ಪ್ರೌಢಿಮೆ ಮತ್ತು ವಿವೇಕದಿಂದ ಮಾಡಿದ್ದಾರೆ. ಒಂದು ಶೇಣಿ ಧಾರೆ: ಅದು ಯಕ್ಷಗಾನದ ಪ್ರಸಿದ್ಧ ಅರ್ಥಧಾರಿ ಮತ್ತು ಪಾತ್ರಧಾರಿ “ಮಾತಿನ ಲೋಕದ ಮಹಾ ಕವಿ” ಎಂದು ಹೆಸರಾದ ಶೇಣಿ ಗೋಪಾಲಕೃಷ್ಣ ಭಟ್ಟರು ತಮ್ಮ ವಿವೇಕ ಮತ್ತು ವಿದ್ವತ್ತಿನಿಂದ ಪಾತ್ರಗಳನ್ನು ನಿರ್ವಹಿಸಿದ ಬಗೆ. ಇನ್ನೊಂದು ಕುಂಬ್ಳೆ ಧಾರೆ: ಇದು ಕುಂಬ್ಳೆ ಸುಂದರ ರಾವ್ ಎಂಬ ಪ್ರಸಿದ್ಧ ಯಕ್ಷಗಾನ ಕಲಾವಿದ ಮತ್ತು ಸಂಘದ ಉತ್ಸಾಹಿ ಕಾರ್ಯಕರ್ತ; ನಂತರ ಬಿಜೆಪಿಯಿಂದ ಸ್ಪರ್ಧಿಸಿ ವಿಧಾನ ಸಭಾ ಸದಸ್ಯರಾಗುವ ಮಟ್ಟದ ನಾಯಕನಾಗುವ ತನಕ ಬೆಳೆದು ನಿಂತ ವ್ಯಕ್ತಿ, ಯಕ್ಷಗಾನದ ಕಲೆಯನ್ನು ಬಳಸಿಕೊಂಡು ಕೋಮು ಕಿಚ್ಚು ಹಚ್ಚಿದ ವಿದ್ಯಮಾನಕ್ಕೆ ಸಂಬಂಧಿಸಿದ್ದು. ಇವರಿಬ್ಬರದೂ ಯಕ್ಷಗಾನ ಲೋಕಕ್ಕೆ ಚಿರಪರಿಚಿತ ಹೆಸರು. ಶೇಣಿಯವರು ಕುಂಬ್ಳೆಯವರಿಗಿಂತ ಸುಮಾರು 15 ವರ್ಷ ಹಿರಿಯರು. ತಾಳಮದ್ದಳೆಯಲ್ಲಂತೂ ಇಬ್ಬರೂ ನೂರಾರು ಬಾರಿ ಮುಖಾಮುಖಿಯಾದವರು. ಶೇಣಿಯವರು ತಾವು ನಿರ್ವಹಿಸಿದ ಪಾತ್ರಗಳಿಗೆ ಹೊಸ ಭಾಷ್ಯ ಬರೆದವರು; ಪಾತ್ರಗಳ ಅಂತರಂಗವನ್ನು ಅದುವರೆಗೆ ಯಾರೂ ಬಿಚ್ಚಿ ತೋರಿಸದ ರೀತಿಯಲ್ಲಿ ತೆರೆದಿಟ್ಟವರು. ವಿಶಾಲ ದೃಷ್ಟಿಯ ಆಧ್ಯಾತ್ಮಿಕ ತಳಹದಿಯನ್ನು ಹಲವು ಪಾತ್ರಗಳಿಗೆ ಒದಗಿಸಿದವರು. ಕುಂಬ್ಳೆಯವರು ಅಸ್ಖಲಿತವಾದ ಮತ್ತು ಪ್ರಾಸಬದ್ಧವಾದ ಮಾತಿನ ಧಾರೆಯಲ್ಲಿ ಪಾತ್ರಗಳನ್ನು ಸಾಂಪ್ರದಾಯಿಕ ನೆಲೆಯಲ್ಲಿ ಕಟ್ಟಿಕೊಟ್ಟ ಬಹು ಜನಪ್ರಿಯ ಕಲಾವಿದ.

1950-60 ರ ದಶಕದಲ್ಲಿ ‘ಬಪ್ಪನಾಡ ಮಹಾತ್ಮೆ’ ಎನ್ನುವ ಒಂದು ಯಕ್ಷಗಾನ ಪ್ರಸಂಗ ರಚಿತವಾಗಿ ರಂಗವೇರುತ್ತದೆ. ಅದರಲ್ಲಿ ಶೇಣಿಯವರು ಬಪ್ಪಬ್ಯಾರಿ ಎಂಬ (ಮುಸ್ಲಿಂ) ಪ್ರಧಾನ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಾರೆ. ಅವರು ಆ ಪಾತ್ರವನ್ನು ಕಟ್ಟಿಕೊಟ್ಟ ಬಗೆ ಅನನ್ಯ. ಅದಕ್ಕಾಗಿಯೇ ಕುರಾನನ್ನು ಅಭ್ಯಸಿಸಿ ನಮ್ಮ ವೈದಿಕ ದರ್ಶನಗಳನ್ನೂ ಕುರಾನಿನ ದರ್ಶನಗಳನ್ನೂ ಸಮನ್ವಯಗೊಳಿಸಿ ಬಪ್ಪಬ್ಯಾರಿಯ ಪಾತ್ರವನ್ನು ಕಟ್ಟಿಕೊಡುವ ಮೂಲಕ ಕೋಮು ಸೌಹಾರ್ದತೆಗೆ ಹೊಸ ಭಾಷ್ಯವೊಂದನ್ನೇ ಅವರು ಬರೆದರು. ತುಂಬ ಜನಪ್ರಿಯವಾಗಿದ್ದ ಯಕ್ಷಗಾನ ಪ್ರಸಂಗ ಅದಾಗಿತ್ತು. ಮುಸ್ಲಿಂ ಸಮಾಜದವರೂ ಬಂದು ಯಕ್ಷಗಾನವನ್ನು ನೋಡಿ ಹೆಮ್ಮೆಪಟ್ಟುಕೊಳ್ಳುವ ರೀತಿಯಲ್ಲಿ ಅವರು ಆ ಪಾತ್ರವನ್ನು ಕಟ್ಟಿಕೊಟ್ಟಿದ್ದರೆನ್ನುವುದು ಈಗ ಇತಿಹಾಸ. ಆದರೆ ಕಾಲ ಬದಲಾಗುತ್ತಾ ಹೋಯಿತು. ಕರಾವಳಿಯಲ್ಲಿ ಕೋಮು ಕಿಚ್ಚು ಹಬ್ಬಿದಂತೆಲ್ಲ ಯಕ್ಷಗಾನದ ಸನ್ನಿವೇಶಕ್ಕೆ ಬೇಕಿಲ್ಲದಿದ್ದರೂ ಸಹ ಕೋಮು ದ್ವೇಷ ಹಬ್ಬಿಸುವ ಮಾತುಗಳನ್ನು ಮೊದಮೊದಲು ಪರೋಕ್ಷವಾಗಿ ಮತ್ತು ನಂತರ ನೇರವಾಗಿ ಆಡಲಾರಂಭಿಸಿದರು. ಇದು ತನ್ನ ಅವನತಿಯ ಆಳವನ್ನು ತಲುಪಿದ್ದು ಕುಂಬ್ಳೆಯವರ ಮುಂದಾಳುತನದಲ್ಲಿ ರಚಿತವಾಗಿ 1990ರ ದಶಕದ ಮಧ್ಯ ಭಾಗದಲ್ಲಿ ಪ್ರದರ್ಶಿತವಾದ ‘ಅಯೋಧ್ಯಾ ವಿಜಯ’ ಎನ್ನುವ ಯಕ್ಷಗಾನದಲ್ಲಿ. ಆ ಪ್ರದರ್ಶನದಲ್ಲಿ ಉಪಸ್ಥಿತರಿದ್ದ ಲೇಖಕರು ಅದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ಅಂದಿನ ದಿನ ನಡೆದ ರಂಗದ ಮೇಲಿನ ಮತ್ತು ಪ್ರೇಕ್ಷಕ ಗ್ಯಾಲರಿಯಲ್ಲಿ ಆದ ಕೋಮು ಉನ್ಮಾದವನ್ನು ವಿವರವಾಗಿ ವರ್ಣಿಸಿದ್ದಾರೆ. ಅಲ್ಲವುದ್ದೀನ್ ಖಿಲಜಿಯಿಂದ ಔರಂಗ ಜೇಬನ ವರೆಗಿನ ಮುಸ್ಲಿಮ್ ದೊರೆಗಳನ್ನು ಅವಹೇಳನಕಾರಿಯಾಗಿ ಚಿತ್ರಿಸಿದ ಬಗೆ, ಇತಿಹಾಸವನ್ನು 180 ಡಿಗ್ರಿ ತಿರುಚಿ ಅವರೆಲ್ಲರೂ ಹಿಂದು ದೊರೆಗಳಿಂದ ಹತರಾದರು ಎಂದು ಕತೆ ಕಟ್ಟಿದ ಬಗೆ. ಮುಖ್ಯ ಪಾತ್ರಧಾರಿಯಾಗಿದ್ದ ಕುಂಬ್ಳೆಯವರು ಕೋಮು ಕಿಚ್ಚು ಹಚ್ಚುವ ಮಾತುಗಳನ್ನು ಭಾವಾವೇಶದಿಂದ ಆಡಿ ಜನರನ್ನು ಹುಚ್ಚೆಬ್ಬಿಸಿದ ರೀತಿ - ಇವೆಲ್ಲ ವರ್ಣನೆಗಳನ್ನು ಓದಿದರೆ ಯಕ್ಷಗಾನ ಕಲಾವಿದರ ವಿವೇಕ ಪಾತಾಳ ತಲುಪಿದ್ದು ಖಾತ್ರಿಯಾಗುತ್ತದೆ. ಈ ಪುಸ್ತಕದ ಮುಕ್ತತೆ ಎಷ್ಟಿದೆಯೆಂದರೆ ಸ್ವತಃ ತಮ್ಮ ತಾರುಣ್ಯದ ಆ ದಿನಗಳಲ್ಲಿ ಸಂಘದ ಕಾರ್ಯಕರ್ತರಾಗಿದ್ದ ಲೇಖಕರು ಕುಂಬ್ಳೆಯವರ ಮಾತಿನಿಂದ ರೋಮಾಂಚಿತರಾಗಿದ್ದನ್ನು ಮುಚ್ಚಿಡುವುದಿಲ್ಲ. ಇದರ ನಂತರ ಯಕ್ಷಗಾನ ಪ್ರಸಂಗದಲ್ಲಿ ಮುಸ್ಲಿಮ್ ಪಾತ್ರಗಳನ್ನು ಸೃಷ್ಟಿಸಿ ತಂದು ರಂಗದ ಮೇಲೆ ಹೀನಾಯವಾಗಿ ಬೈಯುವ ಒಂದು ಪರಂಪರೆಯೇ ಶುರುವಾಗುತ್ತದೆ. ಅದಕ್ಕೆ ಉದಾಹರಣೆಯಾಗಿ ಕೆಲವು ವಿಡಿಯೋ ಕ್ಲಿಪ್ಪುಗಳ ಲಿಂಕನ್ನೂ ಪುಸ್ತಕದಲ್ಲಿ ನೀಡಲಾಗಿದೆ. ಓದುಗರ ಸ್ವತಃ ಅವುಗಳನ್ನು ವೀಕ್ಷಿಸ ಬಹುದಾಗಿದೆ.
ಇವೆಲ್ಲವೂ ಯಕ್ಷಗಾನ ಕಲಾ ಲೋಕದಲ್ಲಿ ಐಸೋಲೇಟೆಡ್ ಆಗಿ ಸಂಭವಿಸಿದ್ದಲ್ಲ; ಕರಾವಳಿಯ ಮತ್ತು ಸ್ಥೂಲವಾಗಿ ದೇಶದಲ್ಲಾದ ಸಾಮಾಜಿಕ ಬದಲಾವಣೆಯ ಪರಿಣಾಮಗಳಿವು. ಅಷ್ಟಲ್ಲದೇ ಒಂದು ಇನ್ನೊಂದನ್ನು ಪರಸ್ಪರ ಪ್ರಭಾವಿಸುತ್ತಾ ಸರಪಣಿಯಾದ ಸಂಗತಿ ಎನ್ನುವ ಮಾರ್ಮಿಕ ವಿಶ್ಲೇಷಣೆಯನ್ನೂ ಈ ಕೃತಿ ಮಾಡುತ್ತದೆ.
ಇದಲ್ಲದೇ ಯಕ್ಷಗಾನದ ಕಲಾ ಮೀಮಾಂಸೆಯನ್ನೂ ಈ ಕೃತಿ ಇನ್ನೊಂದು ನೆಲೆಯಲ್ಲಿ ಮಾಡುತ್ತಾ ಹೋಗುತ್ತದೆ. ಅದು ಆಧ್ಯಾತ್ಮ ಭಾವಕ್ಕೆ ಕೊಡುವ ಮಹತ್ವ ಕಡಿಮೆಯಾಗುತ್ತಾ ಬಂದು ಸಾಂಪ್ರದಾಯಿಕ ಮೌಲ್ಯಗಳನ್ನು ಮಾತ್ರ ಎತ್ತಿ ಹಿಡಿಯುವ ದಿಕ್ಕಿನತ್ತ ಪಯಣಿಸಿದ ವಿವರಗಳಿವೆ. ಹೊಸ ಹೊಸ ಸಾಮಾಜಿಕ ಪ್ರಸಂಗಗಳು ಬರುತ್ತಿದ್ದರೂ ಅವೆಲ್ಲವೂ ಬಹುತೇಕವಾಗಿ ಮನರಂಜನಾ ಸಿನಿಮಾ ಕತೆಯ ನಕಲಾದದ್ದರ ಬಗ್ಗೆ ವಿಷಾದವಿದೆ. ಅದಕ್ಕೂ ಹೆಚ್ಚಾಗಿ ಸಾಂಪ್ರದಾಯಿಕ ಪೌರಾಣಿಕ ಕತೆಗಳನ್ನು ಆಧುನಿಕ ನಾಟಕಗಳ ರೀತಿಯಲ್ಲಿ ಮುರಿದು ಕಟ್ಟಿ ವಿಮರ್ಶಿಸುವ, ಹೊಸ ಅರ್ಥ ಹೊಳೆಯಿಸುವ ಯಾವ ಪ್ರಯೋಗಗಳೂ ನಡೆಯದಿದ್ದುದರಿಂದ ಯಕ್ಷಗಾನ ನಿಂತ ನೀರಾದದ್ದರ ಬಗ್ಗೆ ವಿಮರ್ಶೆ ಇದೆ. ಮತಧರ್ಮ ಮತ್ತು ಯಕ್ಷಗಾನದ ಸಂಬಂಧದ ವಿಷಯವಾಗಿ ಮತ್ತು ಅದು ಬಹುತೇಕ ಆರಾಧನಾ ಕಲೆಯಾಗಿ ಬೆಳೆದು ನಿಂತಿರುವ ಕಾರಣಕ್ಕಾಗಿ ಆದ ಹಿನ್ನಡೆ-ಮುನ್ನಡೆಗಳ ವಿಶ್ಲೇಷಣೆಗಳಿವೆ. ಹಾಗೆಯೇ ಕಲಾವಿದನೊಬ್ಬ ತನ್ನ ಕಲಾ ವೃತ್ತಿಯಿಂದ ಕಾಲಕ್ರಮೇಣ ಆಂತರಿಕವಾಗಿ ಶ್ರೀಮಂತನಾಗುತ್ತಾ ಸಾಗದೆ ಸಾಮಾಜಿಕವಾಗಿಯೂ ಸಾಂಸ್ಕೃತಿಕವಾಗಿಯೂ ಕೀಳು ಅಭಿರುಚಿಯನ್ನು ಬೆಳೆಸಿಕೊಳ್ಳುತ್ತಾ; ಬದಲಾದ ಸಾಮಾಜಿಕ-ರಾಜಕೀಯ ಕಾರಣಗಳಿಗಾಗಿ ಅವುಗಳನ್ನು ಬಳಸಿಕೊಂಡಾಗ ಆಗುವ ಅಪಾಯದ ಬಗ್ಗೆ ಗಂಭೀರವಾದ ವಿಶ್ಲೇಷಣೆ ಈ ಪುಸ್ತಕದಲ್ಲಿದೆ.
ತಾಳಮದ್ದಲೆ (ಕೂಟ) ಕೇವಲ ವಾಚಿಕಾಭಿನಯದಿಂದಲೇ, ಎಂದರೆ ಮಾತಿನಿಂದಲೇ ಕಟ್ಟಿ ನಿಲ್ಲಿಸುವ ಕಲೆಯಾದರೆ, ವೇಷಭೂಷಣ, ನೃತ್ಯಾಭಿನಯ ಮತ್ತು ಮಾತುಗಾರಿಕೆಯಿಂದ ಕಟ್ಟುವ ಕಲೆ ಯಕ್ಷಗಾನದ ಇನ್ನೊಂದು ಕವಲು ಅಥವಾ ಮುಖ್ಯ ಆವೃತ್ತಿ ಎಂದೇ ಕರೆಯಿಸಿಕೊಳ್ಳುವ ರಂಗದ ಮೇಲೆ ಪ್ರದರ್ಶಿತವಾಗುವ ಆಟ. ನೃತ್ಯಾಭಿನಯಗಳು ಇದ್ದರೂ ಅದರಲ್ಲೂ ಮಾತಿಗೆ ಹೆಚ್ಚು ತೂಕ ಅಂದರೆ ತಪ್ಪಾಗಲಿಕ್ಕಿಲ್ಲ. ಯಕ್ಷಗಾನ ಈ ವಿಷಯದಲ್ಲಿ ಉಳಿದ ಪ್ರದರ್ಶನ ಕಲೆಗಳಿಗಿಂತ ತೀರ ಭಿನ್ನ. ನಾಟಕ, ಸಿನಿಮಾ ಮುಂತಾದವುಗಳಲ್ಲಿ ನಟನೊಬ್ಬನ ಮೇಲೆ ನಾಟಕಕಾರನೋ, ಸಾಹಿತಿಯೋ ಬರೆದ ಸಂಭಾಷಣೆಯನ್ನು ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸುವ ಜವಾಬ್ದಾರಿ ಮಾತ್ರ ಇದ್ದರೆ ಯಕ್ಷಗಾನದಲ್ಲಿ ನಟ ಸಾಹಿತಿಯೂ ಆಗಿ ತನ್ನ ಸದ್ಯೋಜಾತ ವಾಚಿಕೆಯಿಂದಲೇ ಪಾತ್ರವನ್ನು ಕಟ್ಟಿ ನಿಲ್ಲಿಸಬೇಕಾಗುತ್ತದೆ. ಯಕ್ಷಗಾನದ ಈ ಎರಡೂ ಆವೃತ್ತಿಗಳಲ್ಲಿ ವಾಚಿಕಾಭಿನಯ ಅಥವಾ ಮಾತುಗಾರಿಕೆ ತಲುಪಿದ ಅವನತಿಯ ಹಿನ್ನೆಲೆಯಲ್ಲಿ ಪುಸ್ತಕದ ಶೀರ್ಷಿಕೆಗೆ ಬಳಸಿಕೊಂಡ ಅಲ್ಲಮನ ವಚನದ ಸಾಲು ಧ್ವನಿಪೂರ್ಣವಾಗಿದೆ.
ಪುಸ್ತಕವು ಲೇಖಕರು ಎತ್ತಿದ ವಿಷಯಗಳ ಮೇಲೆ ಯಕ್ಷಗಾನ, ನಾಟಕ, ಸಾಹಿತ್ಯವೂ ಸೇರಿದಂತೆ ವಿವಿಧ ಕ್ಷೇತ್ರಗಳ ಎಂಟು ಮಂದಿ ಪರಿಣಿತರ ಪ್ರತಿಕ್ರಿಯೆಗಳನ್ನೂ ಒಳಗೊಂಡಿದೆ.
ಕೃತಿಯಲ್ಲಿನ ಲೇಖಕರ ಅಭಿಪ್ರಾಯ, ವಿಶ್ಲೇಷಣೆಗಳನ್ನು ನೂರಕ್ಕೆ ನೂರು ನಾನು ಒಪ್ಪುವುದರಿಂದ ಈ ಬರೆಹದಲ್ಲಿ ನನ್ನ ಮಾತುಗಳು ಅವರ ಮಾತುಗಳಿಗಿಂತ ಬೇರೆಯಲ್ಲ ಅನ್ನಿಸುವ ರೀತಿಯಲ್ಲಿ ಬೆರೆತು ಹೋಗಿವೆ. ತಾತ್ಪರ್ಯ ಅದೇ ಆಗಿದ್ದರೂ ಅಕಾಡೆಮಿಕ್ ಶಿಸ್ತಿನಿಂದ ಮಂಡಿಸಿದ ಅವರ ಮಾತುಗಳ ಪೇಲವ ನೆರಳು ನನ್ನವು. ಯಕ್ಷಗಾನ ಕಲೆಯ ಆರೋಗ್ಯದ ಬಗ್ಗೆ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಚಿಂತಿಸುವ ಎಲ್ಲರೂ ಓದಲೇಬೇಕಾದ ಕೃತಿ ಇದಾಗಿದೆ.
ಶ್ರೀಪಾದ ಹೆಗಡೆ
ಶ್ರೀಪಾದ ಹೆಗಡೆ ಅವರು ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಕಾಳಜಿಯುಳ್ಳವರು. ಇಂದಿನ ಏಕರೂಪಿ ಮತ್ತು ಯಾಜಮಾನ್ಯದ ಧೋರಣೆಗಳ ವಿರುದ್ಧ ತಮ್ಮ ಆಳವಾದ ಮಾನವೀಯ ನಿಲುವಿನಿಂದ ಎದುರು ನಿಂತವರು. ತಮ್ಮ ಓದು ಮತ್ತು ಚಿಂತನೆಯ ಮೂಲಕ ಸಮಕಾಲೀನ ಸಾಮಾಜಿಕ-ಸಾಂಸ್ಕೃತಿಕ ವಿದ್ಯಮಾನಗಳಿಗೆ ನಿರಂತರವಾಗಿ ಸ್ಪಂದಿಸುತ್ತಾ ಬಂದಿದ್ದಾರೆ.
ಇದನ್ನೂ ಓದಿ …
ಕೇಡಿನ ಭಾಷೆಯೇ ಆಡುಭಾಷೆಯಾದಾಗ…
ಇತ್ತೀಚೆಗೆ ಹೊರಬಂದ ಡಾ. ನಿತ್ಯಾನಂದ ಬಿ ಶೆಟ್ಟಿಯವರ ಅಳವು ಅರಿಯದ ಭಾಷೆ: ಕಲೆ, ಸಮಾಜ, ಇತಿಹಾಸ ಪುಸ್ತಕ ಕನ್ನಡದ ಬೌದ್ಧಿಕ ವಲಯದಲ್ಲಿ ಚರ್ಚೆಗೆ ಒಳಗಾಗುತ್ತಿದೆ. ಯಕ್ಷಗಾನವನ್ನು ಹಿನ್ನೆಲೆಯಾಗಿಟ್ಟುಕೊಂಡು ಕರಾವಳಿಯ ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಬೆಳವಣಿಗೆಗಳನ್ನು, ಬಿಕ್ಕಟ್ಟುಗಳನ್ನು ಗ್ರಹಿಸಿಕೊಳ್ಳುವ ಪ್ರಯತ್ನವನ್ನು ಈ ಪುಸ್ತಕ ಮಾಡುತ್ತದೆ. ಪ್ರಕಟಣೆಗೆ ಮುನ್ನ ಪುಸ್ತಕದ ಕರಡನ್ನು ಓದಿದ್ದ




