ಕತೆಗಾರ ಸ್ವಾಮಿ ಪೊನ್ನಾಚಿಯವರ ಕತೆಗಳ ಬಗ್ಗೆ ಸಂಕೇತ ಪಾಟೀಲ ವಿವರವಾಗಿ ಬರೆದಿದ್ದಾರೆ.
ಕೆಲವು ತಿಂಗಳ ಹಿಂದೆ ಸ್ವಾಮಿ ಪೊನ್ನಾಚಿಯವರ ಎರಡು ಕಥಾ ಸಂಕಲನಗಳಾದ ‘ಧೂಪದ ಮಕ್ಕಳು’ (೨೦೧೮), ‘ದಾರಿ ತಪ್ಪಿಸುವ ಗಿಡ’ (೨೦೨೩) ಮತ್ತು ಇತ್ತೀಚಿನ ‘ಕಾಡುಹುಡುಗನ ಹಾಡುಪಾಡು’ ಎಂಬ ಅನುಭವ ಕಥನಗಳನ್ನು ಓದಿದ್ದೆ. ಅವರ ಕತೆಗಳನ್ನು ಓದುತ್ತಿದ್ದಂತೆ ತಾಳುಬೆಟ್ಟದ ಕಮಾನು, ಮಲೆಮಹದೇಶ್ವರ ಬೆಟ್ಟದ ತಪ್ಪಲು, ಚಾಮರಾಜನಗರದ — ಒಂದು ಕಾಲದಲ್ಲಿ ವೀರಪ್ಪನ್ ಓಡಾಡುತ್ತಿದ್ದ — ಕಾಡುಗಳು ಕಣ್ಣಿಗೆ ಕಟ್ಟಿದ್ದವು. ತಾಳುಬೆಟ್ಟದ ಕಮಾನು ಗೋಪುರವೇ ಅವರ ಹಲವು ಕತೆಗಳಿಗೆ ಪ್ರವೇಶದ ಹೆಬ್ಬಾಗಿಲು. ಅಲ್ಲಿಂದಾಚೆ ಅವರು ಕಟ್ಟಿಕೊಡುವ ಕಾಡಂಚಿನ ಪರಿಸರ, ಬಿದಿರ ಮೆಳೆಗಳು ಗಾಳಿಗೆ ಮುರಿಯುವ ಕಟಕಟ ಸದ್ದು, ಕಾಡುಕೀಟಗಳ ಚೇರ್ ಚೇರ್ ಸದ್ದು, ಕೊಂಬೆಯಿಂದ ಕೊಂಬೆಗೆ ಜಿಗಿಯುವ ಮುಸಗಳು — ಮತ್ತು ಇವೆಲ್ಲವುಗಳ ನಡುವೆ ಕಿರುಬ, ಚಿರತೆ, ಮತ್ತು ಎಲ್ಲಕ್ಕೂ ಹೆಚ್ಚಾಗಿ ಆನೆಗಳ ಭಯ. ಹಿಂದಿನ ವರ್ಷಗಳಲ್ಲಿದ್ದ ಕಾಡುಗಳ್ಳರ, ವೀರಪ್ಪನ್ ಗ್ಯಾಂಗಿನವರ ಕಾಟ ಈಗ ಕಡಿಮೆಯಾಗಿದೆ.
‘ಧೂಪದ ಮಕ್ಕಳು’ ಎಂಬ ಕಲ್ಪನೆಯೇ ತೀರ ಹೊಸದು. ಕಾಡಿನಂಚಿನ ಸೋಲಿಗರ ಕೇರಿಯ ಮಕ್ಕಳು ದೊಡ್ಡವರ (ಮತ್ತೆ ಕ್ರಮೇಣ ಅವರದೇ) ಹಣದಾಸೆಗೆ ಶಾಲೆ ತಪ್ಪಿಸಿ ಧೂಪ ಮಾರಲು ಬರುವುದನ್ನು ಜೀವಂತಿಕೆಯಿಂದ ಚಿತ್ರಿಸಿದ್ದಾರೆ. ತಾಳುಬೆಟ್ಟದ ಕಮಾನುಗಳ ಕೆಳಗಿನ ಮಾದಪ್ಪನ ಪಾದವೆಂದು ಪೂಜಿಸಲ್ಪಡುವ ಬಂಡೆ; ಅಲ್ಲಿ ಗಳಿಗೆ ನಿಂದು ಈಡುಗಾಯೊಡೆದು ಬೆಟ್ಟವೇರುವ ಭಕ್ತರು; ಬಸ್ಸು ವ್ಯಾನುಗಳಿಗೆ ಕಾಯುತ್ತ ನಿಂತು ಅವು ಬಂದೊಡನೆ ಗುಲ್ಲೆಬ್ಬಿಸುವ ಧೂಪದ ಮಕ್ಕಳು. ಈ ಕತೆ ಮುಂದೆ ಇಂಥ ಮಕ್ಕಳಲ್ಲಿ ಒಬ್ಬನಾದ ರಂಗಪ್ಪನತ್ತ ತಿರುಗುತ್ತದೆ. ತಿಳಿದದ್ದೂ ತಿಳಿಯದಂತಾಗುವ ತಿಳಿಯದ್ದು ತಿಳಿದಂತಾಗುವ ಅಡ್ಡನಾಡ ವಯಸ್ಸಿನ ರಂಗಪ್ಪ ಮತ್ತು ಅವನಂಥ ಹುಡುಗ ಹುಡುಗಿಯರು. ಇವರನ್ನು ಶಾಲೆಗೆ ಹಚ್ಚಿ ನಾಕಕ್ಷರ ಕಲಿಸಬೇಕೆಂಬ ಫಾಲಾಕ್ಷಪ್ಪ ಮಾಸ್ತರು. ಧೂಪದ ಮಕ್ಕಳ ಕಾಯಕ, ಅವರ ಅಪ್ಪಂದಿರ ಕುಡಿತ; ಕಲಿಕೆಯ ಬಗೆಗಿನ ತಾಕಲಾಟಗಳು. ಕುತೂಹಲವೇ ಮುಂದಾಗಿ ಅದು ಪ್ರಚೋದಿಸುವ ಸಣ್ಣ ದೊಡ್ಡ ಕಳ್ಳತನಗಳು. ಇಷ್ಟಕ್ಕೂ ಕಳ್ಳತನವೆಂದರೇನು? ತನ್ನದಲ್ಲದ್ದನ್ನು ಒತ್ತಾಯದಿಂದ ಪಡೆದುಕೊಳ್ಳುವುದು, ಲಾಭ ಮಾಡಿಕೊಳ್ಳುವುದು. ದೊಡ್ಡವರ ಇಂಥ ಕಳ್ಳತನಗಳು ಗೊತ್ತಿರುವುದೇ — ಒಣಗಿದ ತೊಗಟೆಯನ್ನು ಪುಡಿ ಮಾಡಿ ಧೂಪವೆಂದು ಮಾರುವುದರಿಂದ ಹಿಡಿದು ಹುಣಿಸೇಮರದ ಕೆಳಗೆ ನಸುಗತ್ತಲಲ್ಲಿ ನಡೆಯುವ ಹಾದರದವರೆಗೆ. ಆದರೆ ರಂಗಪ್ಪ ಪ್ರವಾಸಿಗರ ದುಡ್ಡು, ವಸ್ತುಗಳನ್ನು ಕದಿಯುವುದು, ಮಾಸ್ತರರ ಫೋನು ಎತ್ತಿಟ್ಟುಕೊಳ್ಳುವುದು ಲಾಭಕ್ಕಾಗಿಯೇ ಅಥವಾ ಕುತೂಹಲವು ವ್ಯಸನವಾಗಿ ಪರಿಣಮಿಸಿದ್ದರಿಂದಲೇ? ಕತೆ ಸುಲಭವಾಗಿ ತೀರ್ಮಾನಕ್ಕೆ ಬರಲಾಗದ ಇಂಥ ಹಲವು ಪ್ರಶ್ನೆಗಳನ್ನು ಎತ್ತುತ್ತದೆ. ರಂಗಪ್ಪ ಕದ್ದ ಫೋನ್ vibration modeನಲ್ಲಿದ್ದು ಆಗಾಗ ಎಲ್ಲರನ್ನೂ ಎಚ್ಚರಿಸುವುದರಲ್ಲಿ ಒಳ್ಳೆಯ ಸಾಂಕೇತಿಕವಿದೆ. ಆದರೆ ಒಂದು ವಿದ್ಯಮಾನದಿಂದ ಇನ್ನೊಂದಕ್ಕೆ focus shift ಆಗುತ್ತ ಕತೆಯೊಳಗಡೆ ಗೊಂದಲವೇಳುತ್ತದೆ. ಕತೆಯು a little all over the place ಎನ್ನಿಸಿಬಿಡುತ್ತದೆ. ಕತೆಯ ನಿರ್ವಹಣೆಯಲ್ಲಿ ಮತ್ತು ಭಾಷೆಯಲ್ಲಿ ಇನ್ನಷ್ಟು ಹಿಡಿತ ಸಿಗಬೇಕಿತ್ತು. (ಉದಾಹರಣೆ: ನಗರದಿಂದ ಬರುವ ಯುವತಿಯರಿಗೆ “ಬಿಳಿ ಜಿರಳೆ” ಎನ್ನುವ ಪದದ ಬಳಕೆ ಅಲ್ಲಲ್ಲಿ ಬರುವುದು ತುಸು ಕಿರಿಕಿರಿ.)
‘ಸ್ವಾಮೀಜಿಯ ಪಾದವೂ ಹೆಣದ ತಲೆಯೂ’ ಕತೆಯ ಪೋಲಿ ಬಸವ ಎಲ್ಲವನ್ನೂ ಪ್ರಶ್ನಿಸುವ ಸಮಾಜದ ಸಾಕ್ಷಿಪ್ರಜ್ಞೆಯಂತಿದ್ದು ಸರಿತಪ್ಪುಗಳನ್ನು ಎತ್ತಿಹಿಡಿಯುವ ಕಾಯಕದಲ್ಲಿ ತೊಡಗಿಕೊಂಡವ. ಬಸವ ಎಂಬ ಅವನ ಹೆಸರು, ಅವನೆತ್ತುವ ಪ್ರಶ್ನೆಗಳು — ಬಸವಣ್ಣನ ಜೊತೆ ತೀರ ಸ್ಫುಟವಾದ ಸಾಟಿಯಿದೆ. ಐನಾರ ಮನೆಯವನಾದ ಅವನು ಈ ರೀತಿ ಎಲ್ಲವನ್ನೂ ವಿರೋಧಿಸುತ್ತಲೇ ಕಡೆಗೆ ಮಠದ ಬುದ್ದಿಯಾಗುವ ವಿಪರ್ಯಾಸವೂ ಇದೆ. ಅವನ ಈ ರೂಪಾಂತರಕ್ಕೆ, ಹೊಸ ವೇಷಧಾರಣೆಗೆ ಕಾರಣವೇನು ಎಂಬುದು ಸ್ಪಷ್ಟವಿಲ್ಲ. ಕತೆಯಲ್ಲಿ ಅದಕ್ಕೆ ಸಾಕಷ್ಟು ಪೂರ್ವತಯಾರಿಯಿಲ್ಲ. ಆದರೆ ವೇಷ ಹಾಕಿದ ನಂತರ ಅವನ ನಡವಳಿಕೆಯಲ್ಲಾಗುವ ಬದಲಾವಣೆಗಳು ವೇಷಕ್ಕೆ ತಕ್ಕುದಾದುವೇ. ಕತೆಯ ಕೊನೆಯಲ್ಲಿ ತನ್ನ ಗೆಳೆಯ ಮೂರ್ತಿಯ ಅಪ್ಪನನ್ನು ಮಣ್ಣು ಮಾಡುವ ಸಂದರ್ಭದಲ್ಲಿ, ಇದೇ ದೇಹವು ಜೀವಂತವಾಗಿದ್ದಾಗ ತನ್ನ ಕೈಗಳಲ್ಲಿ ಎತ್ತಿಕೊಂಡೂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಮತ್ತು ಈಗ ಅದೇ ದೇಹದ ತಲೆಯನ್ನು ತನ್ನ ಪಾದಗಳಿಂದ ಮುಟ್ಟಬೇಕಾದುದರ ಅರಿವಾದಾಗ — ಆ ಗಳಿಗೆಯಲ್ಲಾದರೂ ವೇಷ ಕಳಚಿಬಿದ್ದು ಬಸವನ ಮೂಲ ಮಾನವೀಯ ರೂಪ ಹೊರಬರುತ್ತದೆ. ಈ ಕಥೆ ಒಳ್ಳೆಯ ವಿಡಂಬನೆಯಾಗಬಹುದಿತ್ತು. ನಿರ್ವಹಣೆಯಲ್ಲಿ ಕೆಲ ಸಮಸ್ಯೆಗಳಿವೆ. ಕತೆಯ pacing ಮತ್ತು timelineಗಳಲ್ಲೂ ಗೊಂದಲಗಳಿವೆ.
‘ಅಕ್ಕ ಅವನು ಸಿಕ್ಕಿದನೆ’ ಕತೆಯಲ್ಲಿ ಭೂತವನ್ನು ವರ್ತಮಾನದಲ್ಲಿ ಹದಬೆರೆಸುವ ಪ್ರಯತ್ನವಿದೆ. ಹಿಂದಣ ಅಕ್ಕನ ಕತೆಯಲ್ಲಿ ಇಂದಿನ ಅಕ್ಕಮಹಾದೇವಿಯ ಕತೆಯಿದೆ. ಅರಮನೆಯನ್ನು ತೊರೆದು ಹಾದಿಯಲ್ಲಿ ಎದುರಾಗುವ ಕಷ್ಟಕೋಟಲೆಗಳನ್ನು ನಿವಾರಿಸಿಕೊಳ್ಳುತ್ತ ಕಲ್ಯಾಣದ ಮಹಾಮನೆ ತಲುಪಿದರೂ ಅಲ್ಲಿಯೂ ಸಮಾಧಾನ ಸಿಗದೇ ಶ್ರೀಶೈಲದತ್ತ ನಡೆಯುವ ಇಂದಿನ ಅಕ್ಕಮಹಾದೇವಿ ಇದ್ದಾಳೆ. ಅಕ್ಕ ಮಧುರ ಭಾವವನ್ನು ಅನುಭವಿಸುತ್ತ ಅರಿವಿನ ಮಾರ್ಗದಲ್ಲಿ ಮುಂದುವರಿದರೆ ಇವಳು ಇಂದಿನ ಕೇಡಿಗ ಜಗತ್ತನ್ನು ನಿವಾರಿಸಿಕೊಳ್ಳಲಾಗದೇ ಅವಸಾನ ಹೊಂದುತ್ತಾಳೆ. ಹೆಚ್ಚಿನದೇನನ್ನೋ ಹೇಳಬೇಕೆಂದು ಹವಣಿಸುವ ಕತೆ ಪ್ರಯೋಗಕ್ಕಿಂತ ಎತ್ತರದ ಸ್ತರಕ್ಕೆ ಏರುವುದಿಲ್ಲ. ನಿರೂಪಣಾ ತಂತ್ರದ ಅನಿವಾರ್ಯತೆ ಮನದಟ್ಟಾಗದೇ ಅದು ಫಲಿಸಿಲ್ಲ. ಕತೆಯ ದುರಂತ ಅಂತ್ಯವೂ ಪೂರ್ವನಿರ್ಧಾರಿತವೆನ್ನಿಸುತ್ತದೆ.
ಕತೆಗಾರರು ತಮ್ಮ ಪರಿಚಿತ ಪರಿಸರವನ್ನು ಬಿಟ್ಟು ಹೊರಬಂದು ‘ಸ್ವಗತ’ ಹಾಗೂ ‘ವಿದಾಯ’ ಕತೆಗಳಲ್ಲಿ ಕೌಟುಂಬಿಕ ಮತ್ತು ಕುಟುಂಬದ ಹೊರಗಿನ ಆಪ್ತ ಸಂಬಂಧಗಳ ವಿವಿಧ ಮಗ್ಗುಲುಗಳನ್ನು ಶೋಧಿಸಲೆತ್ನಿಸುತ್ತಾರೆ. ‘ಸ್ವಗತ’ ಕತೆಯ ಗಂಡ ಹೆಂಡತಿ ಮತ್ತು ಇಬ್ಬರು ಬೆಳೆದ ಮಕ್ಕಳು ಇರುವ ಮಧ್ಯಮವರ್ಗದ ಕುಟುಂಬದಲ್ಲಿ ಮೇಲ್ನೋಟಕ್ಕೆ — ಇಂಥ ಅನೇಕ ಕುಟುಂಬಗಳಲ್ಲಿರುವಂಥ, ಆದರೆ ಮಟ್ಟದಲ್ಲಿ ತುಸು ಹೆಚ್ಚಿರಬಹುದಾದ — ವಿಘಟನೆಯಿದೆ. ಅದು ಆ ನಾಲ್ಕು ಪಾತ್ರಗಳ ಮತ್ತು ಕೊನೆಯಲ್ಲಿ ನೆರೆಹೊರೆಯ ‘ಅವರು’ಗಳ ಸ್ವಗತದಿಂದ ನಿರೂಪಿತವಾಗಿದೆ. ಇದನ್ನು ಓದುತ್ತಿದ್ದಾಗ ನನಗೆ ಖಾಸನೀಸರ ಕೆಲವು ಕಥೆಗಳು ನೆನಪಿಗೆ ಬಂದುವು. ಮಧ್ಯಮಗರ್ವದ ವಿಭಕ್ತ ಕುಟುಂಬಗಳಲ್ಲಿನ dysfuncion ಅನ್ನು ಖಾಸನೀಸರಷ್ಟು ಸಮರ್ಥವಾಗಿ ಚಿತ್ರಿಸಿದವರು ಕಡಿಮೆ. ಸಾಹಿತ್ಯಿಕ ಆಕಾಂಕ್ಷೆ ಮತ್ತು ಸಾಂಸ್ಕೃತಿಕ ಮಹತ್ವದಲ್ಲಿ ಅದು ತೀರ ಭಿನ್ನವಾಗಿದ್ದರೂ ತಾಂತ್ರಿಕ ಮತ್ತು ಒಂದಷ್ಟು thematic ಹೋಲಿಕೆಗಳಿಂದಾಗಿ, ‘ಅಶ್ವಾರೋಹಿ’ ಕತೆಯನ್ನು ಉಲ್ಲೇಖಿಸಬಯಸುತ್ತೇನೆ. ಖಾಸನೀಸರ ಕತೆಗಳಂತಲ್ಲದೇ ಸ್ವಾಮಿಯವರ ಕತೆಯ ಕೊನೆಯಲ್ಲಿ ಬರುವ ಸರ್ವವ್ಯಾಪಿ ‘ನಿರೂಪಕ’ ಕತೆಗೊಂದು ಸುಖಾಂತವನ್ನು ದಯಪಾಲಿಸುತ್ತಾನೆ. ಒಟ್ಟಾರೆಯಾಗಿ ‘ಸ್ವಗತ’ ಕತೆಯ ಬರವಣಿಗೆ ಕೊಂಚ ಸಪ್ಪೆಯಾಗಿದೆ. ಅದರ ಹೋಲಿಕೆಯಲ್ಲಿ ‘ವಿದಾಯ’ ಕತೆ ಒಂದಕ್ಕಿಂತ ಹೆಚ್ಚು ಅರ್ಥಗಳಲ್ಲಿ ಚಲನಶೀಲವಾಗಿದೆ. ಅಂತ್ಯ ನಿರೀಕ್ಷಿತವೇ ಆಗಿದ್ದರೂ ಒಂದಷ್ಟು ವಿಷಾದವನ್ನು ನಮ್ಮಲ್ಲಿ ಉಳಿಸುತ್ತದೆ.
‘ಮಾಯಿ’ ಕತೆಯ ಮಲ್ಲೇಶನದು ಬೆಂಗಳೂರಿನ ಕನಸು ಕಟ್ಟಿಕೊಂಡು ಹಳ್ಳಿಗಳಿಂದ ಬಂದಿಳಿಯುವ ಎಷ್ಟೋ ತರುಣರ ಪರಿಸ್ಥಿತಿಯೇ. ಬಡತನದ ಬಾಳು ಎಲ್ಲಿದ್ದರೂ ಕಷ್ಟದ್ದೇ ಆದರೂ ನಗರಗಳಲ್ಲಿ ಅನುಭವಿಸುವ ಬಡತನವು ಹಳ್ಳಿಗಳಲ್ಲಿನದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ದೈನಂದಿನ ಕ್ರೌರ್ಯಗಳು ತುಂಬಿಕೊಂಡದ್ದು, ದೈನ್ಯ ಬಯಸುವ ಸ್ವರೂಪದ್ದು ಎನ್ನಿಸುತ್ತದೆ. ಮಲ್ಲೇಶ ಬಂದಿಳಿಯುವ ಕಿಕ್ಕಿರಿದ ವಠಾರದ ವಿವರಗಳು, ಅಲ್ಲವನ ಪೇಚಾಟಗಳು ಪರಿಣಾಮಕಾರಿಯಾಗಿ ಮೂಡಿಬಂದಿವೆ. ಅಲ್ಲಿಂದ ತಪ್ಪಿಸಿಕೊಂಡು ಊರಾಚೆಯ ಡಾಬಾವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರೆ ಅಲ್ಲಿ ಬೇರೆಯವೇ ಸಮಸ್ಯೆಗಳು. ಕೊನೆಗೆ ಕನಸುಗಳು ಕಮರಿದ ಭಾವನೆ ಸ್ಥಾಯಿಯಾಗುತ್ತದೆ. ಒಂದು ಹಳವಂಡದ ಕೊನೆಯೂ ಆಗುತ್ತದೆ ಎನ್ನಬಹುದೇನೋ.
ಮತ್ತೆ ಪೊನ್ನಾಚಿಯವರ ಆಪ್ತ ಜಗತ್ತಿಗೇ ಮರಳಿದರೆ ‘ಹೀಗೊಂದು ಭೂಮಿಗೀತ’ ಮತ್ತು ‘ಶಿವನಜ್ಜಿ’ ಕತೆಗಳು ಗಮನ ಸೆಳೆಯುತ್ತವೆ. ಕಾಡುಪ್ರಾಣಿಗಳ ಕಾಟದ ನಿಖರ ವಿವರಗಳು, ನಾಗಣ್ಣ ಮತ್ತು ಕೆಂಚರ ಸಹಜೀವಿ ಸಂಬಂಧದ ನಿರೂಪಣೆ, ಬೇಕಾಗಿಯೂ ಬೇಡವಾಗಿಯೂ ನಾಗಣ್ಣ ಕೆಂಚನ ಮೇಲೆ ಅವಲಂಬಿಸಬೇಕಾಗುದುದು — ‘ಶಿವನಜ್ಜಿ’ ಕತೆಯ ಅಜ್ಜಿಗೆ ನಾಯಿಗಳು ಜೊತೆಯಾದಂತೆ. ಮೊದಲ ಕತೆಯಲ್ಲಿ ನಾಗಣ್ಣನ ಮಗ ಅವನ ಮೇಲಿನ ಕೋಪದಿಂದ ಮನೆ ಬಿಟ್ಟು ಹೋಗಿದ್ದಾನೆ; ಎರಡನೆಯದರಲ್ಲಿ ಸೊಸೆಯ ನಡವಳಿಕೆಯನ್ನು ಸಹಿಸಲಾಗದೆ, ಅದರ ಮೇಲೆ ಮಗನ ಮಾಡಿದ ಅವಮಾನದಿಂದ ಜಿಗುಪ್ಸೆಗೊಂಡ ಶಿವನಜ್ಜಿ ಮನೆಯಿಂದ ಹೊರದಬ್ಬಿಸಿಕೊಂಡವಳಾಗಿ ಬೇರೇ ವಾಸ್ತವ್ಯ ಮಾಡಿದ್ದಾಳೆ. ಎರಡೂ ಕತೆಗಳ ದುರಂತಗಳು ಮುಖ್ಯಪಾತ್ರಗಳು ಹುಲುಕಡ್ಡಿಯಂತೆ ತಮ್ಮ ಕೈಹಿಡಿತದಲ್ಲಿಟ್ಟುಕೊಳ್ಳಬಯಸುವ ಆಸ್ತಿಯ ಜೊತೆ ತಳುಕುಹಾಕಿಕೊಂಡಿವೆ. ಕಡೆಯಲ್ಲಿ ಘಟಿಸಬಹುದಾದ ದುರಂತಗಳ ಸುಳಿವು ಈ ಕತೆಗಳಲ್ಲಿ ಮೊದಲೇ ಸಿಕ್ಕರೂ ಪಾತ್ರಗಳ ಮನೋಭೂಮಿಕೆಯಲ್ಲಿ ನಡೆಯುವ ತಾಕಲಾಟಗಳ ದಾಟಿಸುವಿಕೆ ಮತ್ತು ಸನ್ನಿವೇಶಗಳ ಬೆಳವಣಿಗೆ ಪರಿಣಾಮಕಾರಿಯಾಗಿದ್ದು ಕುತೂಹಲವನ್ನು ಉಳಿಸಿಕೊಳ್ಳುತ್ತವೆ. ಸಾಕಷ್ಟು ಪೂರ್ಣತೆ ಹಾಗೂ ಸಾಫಲ್ಯ ಪಡೆದ ಕತೆಗಳು ಇವು.
ಈ ಕತೆಗಳು, ‘ಧೂಪದ ಮಕ್ಕಳು’ ಕತೆಯಂಥವು ಆಳಕ್ಕಿಳಿಯುವ ಗುಣಲಕ್ಷಣಗಳನ್ನು ಹೊಂದಿದ್ದರೂ, ಸ್ವಾಮಿ ಪೊನ್ನಾಚಿಯವರ ಮೊದಲ ಕಥಾ ಸಂಕಲನ ಒಂದಷ್ಟು ಬಿಡಿ ಕತೆಗಳ ಗೊನೆಯಂತಿದ್ದು ಅದರ ಒಟ್ಟಂದ ಪ್ರಕಟವಾಗಲು ಸಾಧ್ಯವಾಗಿಲ್ಲ. ಆದರೆ ಅವರ ಎರಡನೆಯ ಕಥಾಸಂಕಲನವಾದ ‘ದಾರಿ ತಪ್ಪಿದ ಗಿಡ’ದಲ್ಲಿ ಅವರ ಕತೆಗಾರಿಕೆಯ ಪಕ್ವತೆಯೂ, ಜೀವನ ದೃಷ್ಟಿಯೂ, ಒಡಗೂಡಿಸಿಕೊಂಡಿರುವ ತಾತ್ವಿಕತೆಯೂ ಉಜ್ವಲವಾಗಿ ಹೊಮ್ಮುತ್ತಿರುವುದು ಕಾಣುತ್ತದೆ.
ನಾನು ಶುರುವಾತಿಗೆ ಹೇಳಿದ ಪೊನ್ನಾಚಿಯವರ ಪರಿಸರ ‘ಗೋಣಿಮರದ ಕೊಂಬೆ’ ಕತೆಯಲ್ಲಿ ಪಡಿಮೂಡತೊಡಗುವುದು, ‘ದಾರಿ ತಪ್ಪಿಸುವ ಗಿಡ’ ಕತೆಯಲ್ಲಿ ಮಡುಗಟ್ಟುವುದು, ಹಾಗೂ ‘ನಾಮ್ದರೆ ಜೇನು’ ಕತೆಯಲ್ಲಿ ಓದುಗರನ್ನು ಇನ್ನೂ ಎತ್ತರದ ಸ್ತರಕ್ಕೊಯ್ಯುವುದು. ಜೊತೆಗಾರ ಮಾರನನ್ನು ರೇಷನ್ ತರುವುದಕ್ಕೆ ಊರತ್ತ ಕಳಿಸಿ ಒಬ್ಬನೇ ಕಾಯುತ್ತ ಕುಳಿತ ಶಿವನಪ್ಪನಿಗೆ ದಾರಿ ತಪ್ಪಿಸುವ ಗಿಡದ್ದೇ ಧ್ಯಾನ. ಊರಿನ ಜಂಜಡಗಳಿಂದ ದೂರವಿರಬಯಸುವವರಿಗೆ ಕಾಡಿನ ನೈಸರ್ಗಿಕ ಸದ್ದುಗಳ ನಡುವೆ ಕೇಳುವ ಮೌನವೇ ಅಪ್ಯಾಯಮಾನ. ಆದರೆ ಅದರ ಹಿಂದೆಯೇ ಗೋಚರಾಗೋಚರ ಅಪಾಯಗಳೂ ಅಡಗಿವೆ. ನಿಖರ ವಿವರಗಳಿಂದ ಸಾಂದ್ರವಾದ ಈ ಕತೆಯಲ್ಲಿ ಕಾಡಿನ ಪರಿಸರ, ದೊಡ್ಡಿಯ ಜೀವನ ಎದ್ದುಕಾಣುವಷ್ಟು ಚೆನ್ನಾಗಿ ಚಿತ್ರಿತವಾಗಿದೆ. ಆನೆಯನ್ನು ಓಡಿಸಿದ ಶಿವನಪ್ಪ ಬಾಯಾರಿಕೆ ನೀಗಿಸಲು ಹೆಪ್ಪುಹಾಕಿದ ಮೊಸರನ್ನು ಹೊಟ್ಟೆತುಂಬ ಕುಡಿದರೂ ತಳಮಳ ತಪ್ಪಿದ್ದಲ್ಲ. ಹಗಲು ಸತತ ಏನಾದರೂ ಮಾಡುತ್ತಲಿರುವ ಮನುಷ್ಯರಲ್ಲಿ ರಾತ್ರಿಯ ನಿಧಾನ, ನೀರವತೆಗಳು ಹೆದರಿಕೆ, ಹಳಹಳಿ, ತಪ್ಪರಿವು, ಮತ್ತಿನ್ನೇನೇನೋ ಸುಪ್ತಭಾವನೆಗಳನ್ನು ಜಾಗೃತಗೊಳಿಸುತ್ತವೇನೋ. ಸೇಯಲು ಬೀಡಿಯಿದ್ದರೆ, ಹರಟಲು ಜೊತೆಗೊಬ್ಬರಾದರೂ ಇದ್ದರೆ ಅವಕ್ಕೆ ತಾತ್ಕಾಲಿಕ ಶಮನ. ಇಲ್ಲೆಂದಲ್ಲಿ ಈ ಭ್ರಮೆಗಳು ವಿರಾಟ ರೂಪ ತಾಳಿ ಕುಣಿಯತೊಡಗುತ್ತವೆ. ಅವಕ್ಕೆ ಕೊಳ್ಳಿದೆವ್ವವೋ, ಮೊಸರುದೆವ್ವವೋ, ಹೆಸರು ಕರೆಯುವ ಹಕ್ಕಿಯೋ, ಆಥವಾ ದಾರಿ ತಪ್ಪಿಸುವ ಗಿಡವೋ ಎಂಬ ಹೆಸರು. ಒಬ್ಬಂಟಿ ಮನುಷ್ಯನ ಅವ್ಯಕ್ತ ಅನಿರ್ವಚನೀಯ ಹೆದರಿಕೆಗೆ ಕತೆ ಒಳ್ಳೆಯ ರೂಪಕವಾಗಿದೆ.
‘ನಾಮ್ದರೆ ಜೇನು’ ಕತೆಯಲ್ಲಿ ಪ್ರಕೃತಿಯ ಅನಿಯಮಿತತೆಯ ಇನ್ನೊಂದು ಮಗ್ಗುಲಿನ ದರ್ಶನವಾಗುತ್ತದೆ. ಜೇನು ಕೀಳಲು ಹೊರಟ ತಂಡದ ಪಯಣ ದಟ್ಟ ವಿವರಗಳಲ್ಲಿ ಮೂಡಿ ಘನವಾದ ಕಾದಂಬರಿಯ ಒಂದು ಅಧ್ಯಾಯದಂತಿದೆ. ಕಾರಂತ, ಕುವೆಂಪು, ತೇಜಸ್ವಿ, ಅಥವಾ ಹಲವು ಬಗೆಗಳಲ್ಲಿ ಸ್ವಾಮಿಗೆ ಇನ್ನೂ ಹತ್ತಿರದವರಾದ ಅಬ್ದುಲ್ ರಶೀದರ ಬರವಣಿಗೆಯ ನೆನಪು ತರುತ್ತದೆ. ಅಮಾವಾಸ್ಯೆಯ ಕತ್ತಲೆಯಲ್ಲಿ ನಾಮ್ದರೆಯ ಬರೆ ಹತ್ತಿ ಜೇನಿಳಿಸುವ ಹುನ್ನಾರ. ಈ ಯೋಜನೆಯ ರೂವಾರಿ ಭಂಡಸಾಹಸಿ ಮತ್ತು ಊರ ಉಡಾಳ ಶಂಕರಣ್ಣ. ಅವನಿಗೆ ಇಂಥ ವಿದ್ಯೆಗಳಲ್ಲಿ ಕಾಡಿನ ಸೋಲಿಗರನ್ನೂ ನಿವಾಳಿಸಿ ಒಗೆಯಬಲ್ಲ ಮಲ್ಲೇಶನ ಸಹಾಯ ಬೇಕು. ಮಲ್ಲೇಶ ಶಂಕರಣ್ಣನಿಗೆ ಸಹಾಯ ಮಾಡಲು ಒಪ್ಪಿದ್ದರ ಹಿನ್ನೆಲೆಯಲ್ಲೊಂದು ದುರಂತ ಕತೆಯಿದೆ. ಜಾತಿಗಳ ತಿಕ್ಕಾಟದ ಸೂಕ್ಷ್ಮವಾದ ಎಳೆಯೂ ಇದೆ. ಫಾರೆಸ್ಟಿನವರ, ಖಾಸಗಿ ಟೆಂಡರುದಾರರ ಕಣ್ಣುತಪ್ಪಿಸಿ ಹೊರಟವರಿಗೆ ‘ಹಪ್ಪಳ ನುರುಕಿದಂಗೆ ನುರುಕಿ ಹಾಕಿಬಿಡುವ’ ಆನೆಗಳ ನೆನಪು, ಸೀಳುನಾಯಿಗಳ ಕಾಟ. ಜೇನು ಇಳಿಸುವ ತಯಾರಿಯ ಪ್ರತಿ ವಿವರವನ್ನೂ ಖಚಿತವಾಗಿ ನಿರೂಪಿಸುತ್ತ ಒಂದು ಮಿಡುಕುವ ನೆನಸನ್ನು ಕಾಣಿಸುತ್ತಾರೆ. ನಾಮ್ದರೆಯ ಜೇನಿಳಿಸುವ ಘನೋದ್ದೇಶ ತನ್ನ ಚರಮಸ್ಥಿತಿಗೆ ಏರುತ್ತಿದ್ದಂತೆ ಕತೆಯಲ್ಲೊಂದು ತಿರುವು ಬರುತ್ತದೆ. ಮರಕ್ಕೆ ಕಟ್ಟಿದ ಹಗ್ಗ ಸಡಲಿಸಿ ಹಗ್ಗಕ್ಕೆ ಕಟ್ಟಿದ್ದ ಮಾಲಿನ ಮೇಲೆ ಓಲಾಡುತ್ತ ಕೆಳಗೆ ಜೇನು ಇಳಿಸುತ್ತಿರುವ ಶಂಕರಣ್ಣನ ಕತೆ ಮುಗಿಸಿಬಿಡುವ ಎಂಬ ಪೂರ್ವನಿರ್ಧಾರದಿಂದ ಬಂದಿದ್ದ ಮಲ್ಲೇಶ, ಕೊನೆಗಳಿಗೆಯಲ್ಲಿ ತಪ್ಪಿಗೆ ಶಿಕ್ಷೆ ವಿಧಿಸುವುದು ಮನುಷ್ಯಮಾತ್ರನಾದ ತನ್ನ ಕೆಲಸವಲ್ಲ, ಮತ್ತು ಮನುಷ್ಯನಾದ ತಾನು ಇಷ್ಟು ಸಣ್ಣವನಾಗಬಾರದು ಎಂದು ಮನಸ್ಸು ಬದಲಿಸುತ್ತಾನೆ. ಆದರೆ ಪ್ರಕೃತಿ ನಿರ್ನೈತಿಕ, ನಿರುದ್ದಿಶ್ಯ — ಅದಕ್ಕೆ ಮನುಷ್ಯನಂತೆ ನ್ಯಾಯಾನ್ಯಾಯದ ಬಾಧೆಯಿಲ್ಲ, ಸರಿತಪ್ಪುಗಳ ಹಂಗಿಲ್ಲ. ಶಂಕರಣ್ಣನನ್ನು ಕೊಲ್ಲದಿರುವ ಹೊಸ ನಿರ್ಧಾರದ ಭರದಲ್ಲಿ ಮಲ್ಲೇಶ ತಾನೇ ಜಾರಿ ಬೆಟ್ಟದಿಂದ ಕೆಳಕ್ಕುರುಳುತ್ತಾನೆ.
ಕತೆಗಾರರು ತಮ್ಮ ಕತೆಗಳನ್ನು ಆಗುಮಾಡಲು ಒಂದು ವಿಶ್ವವನ್ನು ಕಟ್ಟಿಕೊಳ್ಳುತ್ತಾರೆ. ಸ್ವಾಮಿಯವರು ಅದನ್ನು ಸಮರ್ಥವಾಗಿ ಮಾಡಿದ್ದಾರೆ. ಆದರೆ ಅಲ್ಲಿ ತೋರಿದಷ್ಟು ಆಸ್ಥೆಯನ್ನು ಪಾತ್ರಗಳ ಬೆಳವಣಿಗೆಯಲ್ಲಿ, ಕತೆಯಲ್ಲಿನ ಕತೆಯನ್ನು ಕಟ್ಟುವಲ್ಲಿ ತೋರಿಲ್ಲವೆನ್ನಿಸುತ್ತದೆ. ಕಥಾಪರಿಸರದ, ಅದರ ನಿರೂಪಣೆಯ ಹರಹನ್ನು ಪಾತ್ರಗಳು ಮತ್ತು ಕಥಾವಸ್ತು ತುಂಬಿಕೊಂಡಿಲ್ಲ. ‘ಗೋಣಿ ಮರದ ಕೊಂಬೆ’ ಕತೆಯ ಕೊನೆಯಲ್ಲಿ ತಿರುವು ಅವಸರದ್ದೂ ಪೂರ್ವನಿರ್ಧಾರಿತವಾದದ್ದೂ ಎನ್ನಿಸಿ ನಿಬಿಡವಾಗಿಯೂ ಕುತೂಹಲಕರವಾಗಿಯೂ ಬೆಳಿಯುತ್ತಿದ್ದ ಕತೆ ಸಪ್ಪೆಯಾಗುತ್ತದೆ. ‘ದಾರಿ ತಪ್ಪಿಸುವ ಗಿಡ’ದಲ್ಲಿ ಸತ್ವಯುತ ರೂಪಕಗಳಿದ್ದು ಕತೆ ಏನನ್ನೋ ಹೇಳಬಯಸಿ ಹೇಳಲಾಗದೇ ಮುಗಿದುಹೋಗುತ್ತದೆ (ಕತೆಗಾರರು ಅದನ್ನು ಮುಗಿಸಿಬಿಡುತ್ತಾರೆ). ಅವುಗಳ ಹೋಲಿಕೆಯಲ್ಲಿ ‘ನಾಮ್ದರೆ ಜೇನು’ ಹೆಚ್ಚು ಪಾಲು realize ಆದ ಕತೆ. ಆದರೆ ಅಲ್ಲಿಯೂ ಕತೆಯ ಪರಿಸರವೇ ಮುನ್ನೆಲೆಯಲ್ಲಿದೆ. ಇನ್ನಷ್ಟು ಮಗ್ನತೆಯಿಂದ ಪಾತ್ರಗಳನ್ನು ಬೆಳೆಸಿದ್ದರೆ ಕತೆಯ ದುರಂತ ಹೆಚ್ಚು ಪರಿಣಾಮಕಾರಿಯಾಗುತ್ತಿತ್ತು.
ಇವುಗಳಾಚೆ ‘ಹದಿನಾರು ಕಂಬದ ಮನೆ’, ‘ಇಟ್ಟರೆ ಸಗಣಿಯಾದೆ’, ‘ಸಿದ್ದವ್ವ ಮತ್ತು ತಂಬೂರಿ ಮಾದ’ದಂಥ ಕತೆಗಳ ಚೌಕಟ್ಟು ಚಿಕ್ಕದಾದರೂ ಕತೆಗಳಾಗಿ ಹೆಚ್ಚು ಪೂರ್ಣವಾಗಿ ಸಾಕಾರಗೊಂಡಿವೆ. ‘ಇಟ್ಟರೆ ಸಗಣಿಯಾದೆ’ ಕತೆಯಲ್ಲಿ ಗೌಡರ ಹಟ್ಟಿಯ ಮುದಿ ದನ ಸತ್ತು ಕೆಳಗಿನ ಕೇರಿಯವರಿಗೆ ಬಾಡೂಟದ ಭಾಗ್ಯ ದಕ್ಕಿದ ದಿನವೇ ಕ್ಯಾತನ ಮೆಚ್ಚಿನ ರಮೇಶ ಮೇಷ್ಟ್ರು ಶಾಲೆಯಲ್ಲಿ ‘ನೀನಾರಿಗಾದೆಯೋ ಎಲೆ ಮಾನವ’ ಎಂದು ಗೋವಿನ ಉಪಯುಕ್ತತೆಯನ್ನೂ ಪವಿತ್ರತೆಯನ್ನೂ ದೈವತ್ವವನ್ನೂ ಬಣ್ಣಿಸುವ ವಿಪರ್ಯಾಸವಿದೆ. ಇದು ತನ್ನಿಂತಾನೇ ನಡೆಯದೆ ಒಂದಷ್ಟು ಮಟ್ಟಿಗೆ ಕೃತಕವಾಗಿ ಯೋಜಿಸಿದ ಸನ್ನಿವೇಶ ಎಂದೆನಿಸಿದರೂ ಅವು ಒಂದಕ್ಕೊಂದು ಎದುರಾದದ್ದು ಪರಿಣಾಮಕಾರಿಯಾಗಿದೆ. ಮೇಷ್ಟ್ರು ಹಸುವಿನ ದೇಹದ ಬೇರೆಬೇರೆ ಭಾಗಗಳಲ್ಲಿ ನೆಲೆಸಿರುವ ದೇವತೆಗಳ ಹೆಸರು ಹೇಳುತ್ತಿದ್ದಂತೆ, “ಕ್ಯಾತನಿಗೆ ಹಸುವಿನ ಈಲಿ, ಗುಂಡ್ಕಾಯಿ, ತೊಡೆಮಾಂಸ, ಒಳಸಾಮಾನು ಇವು ನೆನಪಿಗೆ ಬರುತ್ತಿದ್ದವೇ ಹೊರತು ಯಾವ ದೇವತೆಗಳೂ ಕಾಣಲಿಲ್ಲ,” ಎಂಬ ಆ ಸನ್ನಿವೇಶದ ರುಚಿಕಟ್ಟಾದ ವಿಡಂಬನೆಯಿದೆ. ಮುಗ್ಧ ಹುಡುಗನ ಗೊಂದಲ, ಪಾಪಭೀತಿ, ಹಸಿವೆ ಒಟ್ಟೊಟ್ಟಿಗೇ ಕಾಡುವ ಸಂಕಟವಿದೆ. “ಗೋಹತ್ಯೆ ಮಹಾಪಾಪ, ಹತ್ಯೆ ಮಾಡಲೂಬಾರದು ತಿನ್ನಲೂಬಾರದು ಎಂದು ಹೇಳಿ, ಏನೋ ಬರೆಯಲು ಬೋರ್ಡಿನತ್ತ ತಿರುಗಿದ ಮಾಸ್ಟರಿಗೆ ತಕ್ಷಣ ಏನೋ ಹೊಳೆದಂತಾಗಿ ನಾಲಿಗೆ ಕಚ್ಚಿಕೊಂಡು […]" — ಈ ನಾಲಿಗೆ ಕಚ್ಚಿಕೊಳ್ಳುವುದಿದೆಯಲ್ಲ… ಪೊನ್ನಾಚಿಯವರ ಕತೆಗಳ ರಾಜಕೀಯ ಆ ಸೂಕ್ಷ್ಮತೆಯಲ್ಲಿ, ಈ ರೀತಿಯ non-binary ಸಹಜ ಮಾನವಿಕ ಸಂದರ್ಭಗಳಲ್ಲಿದೆ. ನಮ್ಮ ಲೋಕದೃಷ್ಟಿ, ನಿಲುವು, ಧೋರಣೆಗಳ ಬಹುಪಾಲು ನಮ್ಮ ಸಂಸ್ಕಾರದಿಂದ, ನಾವು ಬೆಳೆದು ಬಂದ ಹಿನ್ನೆಲೆಯಿಂದ ನಮಗೆ — ಬೇಕಾಗಿಯೋ ಬೇಡಾಗಿಯೋ — ದತ್ತವಾಗಿರುತ್ತದೆ. ಬೇಡಾದ್ದನ್ನು ಬಿಡುವ, ತಿದ್ದಿಕೊಳ್ಳುವ ಅವಕಾಶವಿದ್ದೇ ಇದೆ; ಆ ಕರ್ತೃತ್ವಶಕ್ತಿ ಎಲ್ಲರಲ್ಲೂ ಇರುತ್ತದೆ. ಆದರೆ ಈ ಕಾಲದ ಜೋರುಮಾತಿನ, ಘೋಷಣೆಗಳ, ರಾಜಕೀಯ posturing, “ನಾಲಿಗೆ ಕಚ್ಚಿಕೊಂಡು ತಿರುಗಿ ನೋಡುವ” ಭಿನ್ನತೆಗಳಿದ್ದೂ ಪರಸ್ಪರ ಸಂವಾದದ ಸಾಧ್ಯತೆಯನ್ನು ಅಲ್ಲಗಳೆಯುತ್ತದೆ. ಕತೆಗಾರರು ‘ಆಹಾರದ ಆಯ್ಕೆಯ ಹಕ್ಕು’, ‘ಸವರ್ಣೀಯರ ದಬ್ಬಾಳಿಕೆ’, ‘ಜಾತಿ ರಾಜಕಾರಣ’ ಮೊದಲಾದುವನ್ನು ಹೇಳದೇ, ಹೇಳಬೇಕಾದಷ್ಟೆಲ್ಲವನ್ನು ಹೇಳಿಯೂ, ಕಡೆಗೆ ಮಾನವತೆಗೆ ಆತುಕೊಳ್ಳುವುದು ಭರವಸೆ ತರುತ್ತದೆ.
ಅವರ ಸಾಮಾಜಿಕ ರಾಜಕೀಯ ಸೂಕ್ಷಜ್ಞತೆ ‘ಹದಿನಾರು ಕಂಬದ ಮನೆ’ಯಲ್ಲಿ ವ್ಯಕ್ತಿಯೊಬ್ಬ ಎಷ್ಟೇ ದೊಡ್ಡವನಾದರೂ ಸಮುದಾಯವೂ ಅಷ್ಟಿಷ್ಟು ಬದಲಾದರೂ ಆಳವಾಗಿ ಬೇರೂರಿದ ಜಾತಿಪ್ರಜ್ಞೆಯನ್ನೂ ಕೀಳರಿಮೆಯನ್ನೂ ಮೀರಲಿಕ್ಕಾಗದಿರುವ ಚಿತ್ರಣದಲ್ಲೂ ಕಾಣುತ್ತದೆ. ಕತೆಯ ಸನ್ನಿವೇಶಗಳಲ್ಲಿ ಸ್ಪಷ್ಟವಾದ ವರ್ಗ ಭೇದ ಮತ್ತು ಸಂಘರ್ಷಗಳು ಇದ್ದಾಗ್ಯೂ ಕತೆಗಾರರಿಗೆ ಆಪಾದನೆ ಮಾಡುವುದರಲ್ಲಿ ಅಥವಾ victimizationನಲ್ಲಿ ಆಸಕ್ತಿಯಿಲ್ಲ; ನಿರ್ಲಿಪ್ತತೆಯಿಂದ ಆದರೆ ಓದುಗರಿಗೆ ತಟ್ಟುವಂತೆ ವಾಸ್ತವವನ್ನು ತೋರಿಸುವುದರಲ್ಲಿದೆ. ಗಾಜಿನ ಗೋಲಿಗಳಿಂದ ಸಿಂಗರಿಸಿ ಮಾಡಿದ್ದ ದಪ್ಪ ಮುಂಬಾಗಿಲು, ಕರ್ರಗೆ ಮಿಂಚುವ ತೇಗದ ಕಂಬಗಳು, ಕೆಂಪು ಜ್ವಾಲೆಯ ಕರಿ ಡೂಮ ಮೀರುವಿಕೆಯ ಹಂಬಲದ ಪ್ರಬಲ ಪ್ರತಿಮೆಗಳಾಗಿವೆ.
‘ಗೌರಿ’ ಕತೆಯ ಮಾದೇವ, ‘ಸಿದ್ದವ್ವ ಮತ್ತು ತಂಬೂರಿ ಮಾದ’ದಲ್ಲಿನ ಸಿದ್ದವ್ವ, ರೂಢಿಗತ ನಂಬಿಕೆಗಳು, ಕಟ್ಟುಪಾಡುಗಳು, ನೈತಿಕಪ್ರಜ್ಞೆಗಳನ್ನು ತಮ್ಮ ವೈಯಕ್ತಿಕ ಅನುಭವ ಮತ್ತು ಪ್ರಾಯೋಗಿಕ ದೃಷ್ಟಿಯ ನೆಲೆಯಲ್ಲಿ ನಿಭಾಯಿಸಿಕೊಳ್ಳುವುದನ್ನು ನೋಡುತ್ತೇವೆ. ಸಿದ್ದವ್ವನ ನಿಲುವಿನಲ್ಲಿ ಒಂದೆಡೆ ಸಾಂಪ್ರದಾಯಿಕ ನಿಯಮಗಳ ಮೀರುವಿಕೆಯಿದೆಯಾದರೂ ಅದಾಗುವುದು ಇನ್ನೊಂದೆಡೆಯಿಂದ ಸಾಂಪ್ರದಾಯಿಕ ಚೌಕಟ್ಟನ್ನು ಭದ್ರಪಡಿಸಲೆಂದು — an unconventional means to a conventional end. ಸಂಸಾರ ಉಳಿಸಲು, ಮನೆತನ ಮುಂದುವರಿಸಲು ಮಾಡಬೇಕಾದ್ದೆಲ್ಲ ಮಾಡಲೇಬೇಕು ಎನ್ನುವುದು ಮಹಾಭಾರತ ಕತೆಯ ಕಾಲದಿಂದ ಬಂದ ಬೋಧ.
‘ನಿಂಬೆ ಮತ್ತು ಧೂಳತದ ಪಾಕಿಟ್ಟು’, ‘ದೇವರ ಕನಸು’ ದೇವರು, ನಂಬಿಕೆ ಇವು ವ್ಯಾಪಾರವಾಗುವ ವಿಡಂಬನೆಯನ್ನು ತೋರಿಸುತ್ತದೆ. ‘ದೇವರ ಕನಸು’ ಕತೆಯ ಮೂರ್ತಿ ‘ಹದಿನಾರು ಕಂಬದ ಮನೆ’ ಕತೆಯ ಎಂಎಲ್ಎ ಕರಿಯಪ್ಪನ ಇನ್ನೊಂದು ಅವತಾರ. ಆದರೆ ಅವನಂತಲ್ಲದೇ ಇವನಿಗೆ ಶಿಕ್ಷಣದ ಪ್ರಭಾವದಿಂದ ತನ್ನ ಕೀಳರಿಮೆಯನ್ನು ಮೀರಲು ಆಗಿದೆ. ಆದರೆ ದೇವರು ದಿಂಡರ ಬಗ್ಗೆ ಅಸಡ್ಡೆಯಿದ್ದರೂ ಅವನಿಂದ ನಂಬಿಕೆಯನ್ನು ಮೀರಲಾಗಿಲ್ಲ. ‘ಸ್ವಾಮೀಜಿಯ ಪಾದವೂ …’ ಕತೆಯ ಬಸವ ಮಠದ ಬುದ್ದಿಯಾಗಲು ಹೊರಟಂತೆ ಇವನು ಕನಸಿಲ್ಲಿ ಬಂದ ದೇವರಿಗೆ ಗುಡಿ ಕಟ್ಟಲು ಉದ್ಯುಕ್ತನಾಗುತ್ತಾನೆ. ಆದರೆ ದೇವರು ಕೊಟ್ಟರೆ ಸಾಕೆ? ನೂರೆಂಟು ತಾಪತ್ರಯಗಳನ್ನು ದಾಟಿ ಕೊನೆಗೂ ಕಟ್ಟಿ ಮುಗಿಸಿದ ಗುಡಿಗೆ ಬೀಗ ಜಡಿಯಲಾಗುವ ವ್ಯಂಗ್ಯ ಮೊನಚಾಗಿದೆ.
ನಾನು ಮೊದಲಿಗೆ ಉಲ್ಲೇಖಿಸಿದ ಕತೆಗಳು ನಾಗರಿಕತೆಯ ಅಂಚಿನಲ್ಲಿ, ಕಾಡಿನ ಪರಿಸರದಲ್ಲಿ , ನಿಸರ್ಗದ ಅನಿಯಮತೆಯ ವ್ಯಾಪ್ತಿಯಲ್ಲಿ ನಡೆಯುವಂಥವು. ಅಲ್ಲಿ ಉಂಟಾಗುವ ಕರ್ಷಣ, ನಾಟಕಗಳು ಮನುಷ್ಯನ ಒಬ್ಬಂಟಿತನ, ಪಾಪಪ್ರಜ್ಞೆ, ಹೆದರಿಕೆ, ದ್ವೇಷ ಮೊದಲಾದ ಆದಿಮ ಪ್ರವೃತ್ತಿಗಳ ಪರಿಧಿಯವು. ಆಮೇಲಿನವು ನಾಗರಿಕತೆಯ — ಎಂದರೆ ಹಳ್ಳಿಗಳ ಸಾಮುದಾಯಿಕ ಪರಿಸರದೊಳಗೆ ನಡೆಯುವುವು. ಇಲ್ಲಿ ಜಾತಿ, ವರ್ಗ, ಆಹಾರ, ಅಭಿವೃದ್ಧಿ ಮೊದಲಾದುವುಗಳಿಗೆ ಸಂಬಂಧಿಸಿದ ತಿಕ್ಕಾಟಗಳಿವೆ. ಇವೆಲ್ಲ ವೈವಿಧ್ಯತೆ ಸಂಕೀರ್ಣತೆಗಳನ್ನು ಸ್ವಾಮಿ ಪೊನ್ನಾಚಿ ಬಹುಪಾಲು ಚೆನ್ನಾಗಿ ನಿಭಾಯಿಸಿದ್ದಾರೆ.
ಸ್ವಾಮಿ ಪೊನ್ನಾಚಿಯವರಿಗೆ ಚಾಮರಾಜನಗರ, ಮಲೆಮಹದೇಶ್ವರ ಬೆಟ್ಟ ಮತ್ತು ಬಿಳಿಗಿರಿರಂಗನ ಬೆಟ್ಟಸಾಲುಗಳ ಪರಿಸರ, ಸಂಸ್ಕೃತಿ, ಜನಜೀವನದ ನೇರ ಮತ್ತು ಗಾಢ ಅನುಭವವಿದೆ. ತನ್ನ ಸುತ್ತಮುತ್ತಲಿನ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸುವ ನಿಧಾನ ಅವರಲ್ಲಿದೆ. ಇವಕ್ಕೆ ಪೂರಕ ಹಾಗೂ ಪೋಷಕವಾದ ಓದು, ಸಂಶೋಧನೆ, ತಿರುಗಾಟ ಮತ್ತು ಸಂವಾದಗಳನ್ನು ಬಹುಕಾಲದಿಂದ ನಡೆಸಿದ್ದು ಅವರ ಕೃತಿಗಳನ್ನು ಓದುತ್ತಿದ್ದಂತೆ ಅರಿವಾಗುತ್ತದೆ. ಅವರ ‘ಕಾಡುಹುಡುಗನ ಹಾಡುಪಾಡು’ ಅನುಭವ ಕಥನದಲ್ಲಿ ಅವರ ಕತೆಗಳಿಗೆ ಹಿನ್ನೆಲೆಯಾದ ಪರಿಸರ, ಘಟನೆಗಳು ಮತ್ತು ವ್ಯಕ್ತಿಗಳು ಸಿಗುತ್ತಾರೆ. ಆ ಪರಿಸರದಲ್ಲದ್ದಿದ್ದ ಭಾಷೆಯ ಪ್ರಯೋಗದ ಮೇಲಿನ ಹಿಡಿತವೂ ಅವರಿಗೆ ತಕ್ಕಮಟ್ಟಿಗೆ ಸಾಧಿಸಿದೆ. ಅವರಲ್ಲಿ ಎದ್ದು ಕಾಣುವ ಆಡಂಬರವಿಲ್ಲದ ಸೂಕ್ಷ್ಮ ರಾಜಕೀಯ ಹಾಗೂ ಸಾಮಾಜಿಕ ಪ್ರಜ್ಞೆಯ ಮೇಲ್ಪದರವಿದೆ. ಅವರ ಕತೆಗಳು ದಟ್ಟವಾದ ರಾಜಕೀಯ ವಾಸನೆಯಿಂದ ಬಳಲುವುದಿಲ್ಲ. ಅದು ಓದುಗರ ಮೂಗಿಗೆ ಬಂದು ಅಡರುವುದಿಲ್ಲ, ಬದಲಿಗೆ ನವಿರಾಗಿ ತೇಲಿ ಬಂದು ನಮಗೆ ತಾಕುತ್ತದೆ. ಮಾನವೀಯ ಸಂದರ್ಭಗಳ ಪರಿಶೀಲನೆಯಲ್ಲಿ ಅವರ ಆಸ್ಥೆಯಿದೆ. ಒಬ್ಬ ಸೂಕ್ಷ್ಮ ಆದರೆ ತಟಸ್ಥ ನೋಡುಗನ ಮಾದರಿಯಲ್ಲಿ ನಿರುಮ್ಮಳತೆಯಿಂದ ಕಥನವನ್ನು ನಿರೂಪಿಸುವ, ಹೇಳಲೇಬೇಕಾದ ಅವಸರವನ್ನು ತೋರದೆ ಆದರೆ ಹೇಳಬೇಕಾದ್ದನ್ನು ಹೇಳುವ ಕೌಶಲ ಸಿದ್ಧಿಸಿದೆ. ಹಾಗಿದ್ದೂ ನಿರ್ವಹಣೆಯಲ್ಲಿ ಅವರ ಕತೆಗಳು ಅಲ್ಲಲ್ಲಿ ಸೋಲುತ್ತವೆ: (೧) ಪರಿಚಿತ ಪರಿಸರದಿಂದ ಹೊರಬೀಳುವ ಪ್ರಯತ್ನದಲ್ಲಿ ಎಡವುತ್ತಾರೆ, (೨) ನಿರೂಪಣೆಗೇ ಪ್ರಾಮುಖ್ಯ ಸಿಕ್ಕು ಪಾತ್ರಗಳ ಕಟ್ಟುವಿಕೆ ಮತ್ತು ಕಥಾವಸ್ತುವಿನ ಬೆಳವಣಿಗೆಗೆ ಸಾಕಷ್ಟು ಗಮನ ಸಿಗದೆ ಕತೆಗಳು ಅಪೂರ್ಣವಾಗುಳಿಯುತ್ತವೆ, (೩) ಕೆಲವೆಡೆ ಕತೆಯ ಕೇಂದ್ರ ಬಿಂದು (focal point) ಅತ್ತಿತ್ತ ಕದಲುತ್ತ ಒಟ್ಟಾರೆ ಆಶಯ ಸಾಕಾರವಾಗುವುದಿಲ್ಲ.
ಮೇಲೆ ಹೇಳಿದ ಕೊರತೆಗಳಿದ್ದೂ ಅವರು ಗಟ್ಟಿ ಕತೆಗಾರರೆಂದು ನನಗೆ ಮನವರಿಕೆಯಾಗಿರುವುದರಿಂದ ಅವರ ಕತೆಗಳ ಮತ್ತು ಕತೆಗಾರಿಕೆಯ ಕುರಿತು ಇದಿಷ್ಟು ಬರೆಯಬೇಕು ಎನ್ನಿಸಿತು. ಅವರಿಂದ ಇನ್ನೂ ಮಹತ್ವಾಕಾಂಕ್ಷೆಯ ಪಾತ್ರಗಳು, ಸಂಪುಷ್ಟವಾದ ಕತೆಗಳು ಬರಲೆಂದು ಓದುಗನಾದ ನನ್ನ ನಿರೀಕ್ಷೆ. ಅವರ ‘ಹಾಡುಹುಡುಗನ ಹಾಡುಪಾಡು’ ಓದಿದರೆ ಕಾದಂಬರಿಯನ್ನು ಬರೆಯಬಲ್ಲಷ್ಟು ಲೋಕಾನುಭವ, ಸಾಕಷ್ಟು ಪೂರ್ವತಯಾರಿ ಅವರಲ್ಲಿದೆ ಎಂದು ಸ್ಪಷ್ಟವಾಗುತ್ತದೆ. ಅದಕ್ಕೆ ಬೇಕಾದ ತಾದಾತ್ಮ್ಯ ಮತ್ತು ಅವಕಾಶ ಅವರಿಗೆ ಸಿಗಲೆಂದು ಹಾರೈಸುತ್ತೇನೆ.