ಕತೆಗಾರ, ಅರ್ಥಶಾಸ್ತ್ರಜ್ಞ ಪ್ರೊ. ಎಂ ಎಸ್ ಶ್ರೀರಾಮ್ ಅವರ ‘ಸಹಕಾರ ತತ್ವ-ಸಿದ್ಧಾಂತ-ಚಳವಳಿ’ಗಳನ್ನು ಪರಿಚಯಿಸುವ ಪ್ರಬಂಧದ ಪುಸ್ತಕ 'ನಾವಿರುವುದೆ ನಮಗಾಗಿ’ ಸದ್ಯದಲ್ಲೇ ಓದುಗರ ಕೈಸೇರಲಿದೆ, ಇದನ್ನು ಪ್ರಕಟಿಸುತ್ತಿರುವವರು ಅಕ್ಷರ ಪ್ರಕಾಶನ, ಹೆಗ್ಗೋಡು.
ಪ್ರಬಂಧದ ಪೀಠಿಕೆಯಲ್ಲಿ ಬೇರೆ ಬೇರೆ ರೀತಿಯ ವ್ಯಾಪಾರ ವ್ಯವಸ್ಥೆಗಳು, ಅವುಗಳಲ್ಲಿನ ಸೈದ್ಧಾಂತಿಕ ವ್ಯತ್ಯಾಸಗಳು, ಹೂಡಿಕೆ ಮತ್ತು ಲಾಭಾಂಶ ಹಂಚಿಕೊಳ್ಳುವ ಬಗೆಗಳನ್ನು ಚರ್ಚಿಸುತ್ತ, ಸಹಕಾರ ಸಿದ್ಧಾಂತಕ್ಕೆ ಪ್ರವೇಶ ಒದಗಿಸುತ್ತಾರೆ.
ಬಂಡವಾಳಶಾಹಿ ವ್ಯವಸ್ಥೆಯನ್ನು ಎಡಪಂಥೀಯ ಸಿದ್ಧಾಂತಗಳು ಪ್ರಶ್ನಿಸಿ, ಮಾರುಕಟ್ಟೆಯ ಮಹತ್ವವನ್ನು ತಳ್ಳಿಹಾಕಿವೆ. ಆದರೆ, ಸಂಕ್ಷೇಮ-ವ್ಯಾಪಾರ ಎಲ್ಲವನ್ನೂ ಸರ್ಕಾರವೇ ಮಾಡಬೇಕೇ? ವ್ಯಾಪಾರವನ್ನು ಮಾರುಕಟ್ಟೆಗೆ ಬಿಟ್ಟುಕೊಡಬೇಕೇ? ಈ ಬೈನರಿಯಲ್ಲದೇ ಮೂರನೇ ಮಾರ್ಗವಿದೆಯೇ? ಈ ಸವಾಲುಗಳು ನಮ್ಮೆದುರಿಗಿವೆ. ಸಹಕಾರ ಸಿದ್ಧಾಂತವೇ ಈ ಮೂರನೇ ಮಾರ್ಗ. ಅದೇನೆಂದು ಈ ಪುಸ್ತಕದಲ್ಲಿ ಪರಿಶೀಲಿಸೋಣ.
ಸಹಕಾರ: ಬಂಡವಾಳವಿಲ್ಲದ ಬಡಾಯಿ
ಬಂಡವಾಳದ ಪ್ರಾಥಮಿಕ ಪಾತ್ರವನ್ನು ಪ್ರಶ್ನಿಸುತ್ತ ಸಹಕಾರ ಸಿದ್ಧಾಂತ ಉದಯಿಸಿತು. ಇದಕ್ಕೊಂದು ಚಾರಿತ್ರಿಕ ಸಂದರ್ಭವೂ ಇದೆ. ಸಹಕಾರದ ಹಿನ್ನೆಲೆಯು ಔದ್ಯೋಗಿಕ ಕ್ರಾಂತಿಯ ಕಾಲಕ್ಕೆ ಹೋಗುತ್ತದೆ. ದೊಡ್ಡ ವ್ಯಾಪಾರಕ್ಕೆ ಬಂಡವಾಳ ಕೇಂದ್ರಿತವಾದ ಸಂಸ್ಥೆಯೇ ಸಮರ್ಪಕವಾದದ್ದು ಎನ್ನುವ ನಂಬಿಕೆ ಆ ಕಾಲಕ್ಕೆ ಪ್ರಬಲಗೊಂಡಿತ್ತು. ವ್ಯಾಪಾರದಲ್ಲೂ ಸರ್ಕಾರದ ಪಾತ್ರವೇ ಪ್ರಮುಖವಾಗಿರಬೇಕೆನ್ನುವ ಎಡಪಂಥೀಯ ವಾದವೂ ಇತ್ತು. ಔದ್ಯೋಗಿಕ ಕ್ರಾಂತಿಯಿಂದಾಗಿ ಎರಡು ಮುಖ್ಯ ಬದಲಾವಣೆಗಳನ್ನು ಈ ಜಗತ್ತು ಕಂಡಿತು. ದೊಡ್ಡ ಮಿಲ್ಲುಗಳು ಉತ್ಪಾದನೆಯ ಕೇಂದ್ರಗಳಾದವು. ಉತ್ಪಾದನಾ ತಂತ್ರ ವಿಕೇಂದ್ರೀಕರಣದಿಂದ ಕೇಂದ್ರೀಕೃತ ಉತ್ಪಾದನಾ ಸವಲತ್ತಿನತ್ತ ಸಾಗಿತ್ತು. ಉತ್ಪಾದನೆಯ ಕೇಂದ್ರೀಕರಣವು ನಗರೀಕರಣಕ್ಕೂ ಕಾರಣವಾಯಿತು. ಗ್ರಾಮೀಣ ಜನ ತಮ್ಮ ಹಳ್ಳಿಗಳನ್ನು ಬಿಟ್ಟು, ಕೇಂದ್ರೀಕೃತ ಉದ್ಯಮದಲ್ಲಿ ಕೆಲಸ ಹುಡುಕಿ ಉದ್ಯಮಕೇಂದ್ರಗಳಿಗೆ ಗುಳೇ ಹೋಗುವ ಪ್ರಕ್ರಿಯೆ ಶುರುವಾಯಿತು.
ಗ್ರಾಮಗಳಿಂದ ಎತ್ತಂಗಡಿಯಾಗಿ ದೂರದ ಉದ್ಯಮಕೇಂದ್ರಕ್ಕೆ ಬಂದ ಜನ ತಮ್ಮ ದಿನನಿತ್ಯದ ಅವಶ್ಯಕತೆಗಳಿಗೆ, ಕಿರಾಣಿಗೆ, ವ್ಯಾಪಾರಿಗಳ ಹತ್ತಿರ ಹೋಗುವುದೂ, ಸಂಬಳ ಸಿಕ್ಕದಿದ್ದರೆ ಉದ್ರಿಯಲ್ಲಿ ಖರೀದಿ ಮಾಡುವ ರಿವಾಜೂ ಇತ್ತು. ಹೊಸಪರಿಸರದಲ್ಲಿದ್ದ ಈ ಗಿರಣಿ ನೌಕರರ ಅಸಹಾಯಕತೆಯನ್ನು ಉಪಯೋಗಿಸಿಕೊಂಡು, ಉದ್ರಿ ಕೊಡುತ್ತಿದ್ದ ವ್ಯಾಪಾರಿಗಳು ಹೆಚ್ಚಿನ ಬೆಲೆ-ಬಡ್ಡಿಗಳನ್ನು ವಸೂಲು ಮಾಡುವುದು ಸಾಮಾನ್ಯವಾಗಿತ್ತು. ಗ್ರಾಮೀಣ ಪ್ರಾಂತ್ಯದಿಂದ ಬಂದ ಮಿಲ್ಲು ನೌಕರರ ಸಮೂಹ ಈ ವ್ಯಾಪಾರಿಗಳನ್ನು ಅಲ್ಲಿಂದ ಹೊಡೆದಟ್ಟುವುದು ಸಾಧ್ಯವಿರಲಿಲ್ಲ. ಆದರೆ, ಅವರುಗಳು ಈ ವ್ಯಾಪಾರದ ಪರಿಯನ್ನು ಪ್ರಶ್ನಿಸಲು ಸಾಧ್ಯವಿತ್ತು. ಹೀಗೆ ಹುಟ್ಟಿದ್ದೇ ಸಹಕಾರ.
ಸಣ್ಣ ವ್ಯಾಪಾರಗಳು ಏಕಸ್ವಾಮ್ಯ/ಬಹುಸ್ವಾಮ್ಯ ಪದ್ಧತಿಯಲ್ಲಿ ಅನಿಯಮಿತ ಬಾಧ್ಯತೆಯೊಂದಿಗೆ ರಚನೆಗೊಂಡಿರುತ್ತವೆ. ಅಕಸ್ಮಾತ್ ವ್ಯಾಪಾರ ನಷ್ಟಕ್ಕೊಳಗಾದರೆ, ಅದನ್ನು ವ್ಯಾಪಾರೇತರ ಮೂಲಗಳಿಂದ; ಖಾಸಗಿ ಆಸ್ತಿ ಇಲ್ಲವೇ ಉಳಿತಾಯದಿಂದ ತುಂಬಿಸಬೇಕು. ಈ ಎಲ್ಲದರಲ್ಲಿಯೂ ಪ್ರಾಥಮಿಕ ಸ್ಥಾನವನ್ನು ಹೂಡಿಕೆಯೇ ಆಕ್ರಮಿಸಿಕೊಂಡಿದೆ. ಹೂಡಿಕೆಯ ಪ್ರಾಥಮಿಕತೆಯನ್ನು ಗೌಣ ಮಾಡಿ ವ್ಯಾಪಾರವನ್ನು ಭಿನ್ನ ದೃಷ್ಟಿಯಿಂದ ನೋಡಲು ಸಾಧ್ಯವೇ?
ಬಂಡವಾಳದ ಅವಶ್ಯಕತೆಯನ್ನು ಗುರುತಿಸುತ್ತಲೇ ಅದರ ಪ್ರಾಥಮಿಕತೆಯನ್ನು ಸಹಕಾರ ಪ್ರಶ್ನಿಸಿತು. ದೊಡ್ಡ ಮಟ್ಚದ ಹೂಡಿಕೆಗಳಿರುವ ಗಿರಣಿಗಳಿಗೆ ಆರ್ಥಿಕ ಹೂಡಿಕೆಯೇ ಮುಖ್ಯ, ಅದಕ್ಕೇ ಪ್ರಾಮುಖ್ಯತೆ ಕೊಡಬೇಕೆನ್ನುವ ವಾದ ಸರಿಯಾದದ್ದು. ಹೂಡಿಕೆಯ ಹಣವಿದ್ದರೆ ಮಿಕ್ಕೆಲ್ಲ ಸಂಪನ್ಮೂಲಗಳನ್ನೂ ಕೊಂಡುಕೊಳ್ಳಬಹುದು. ವ್ಯಾಪಾರದಿಂದ ಬಂದ ‘ಉಳಿಕೆ’ಯೆಲ್ಲವೂ ಯಾವ ಮೇಲ್ಮಿತಿಯಿಲ್ಲದೆ ಹೂಡಿಕೆದಾರರಿಗೆ ಸಲ್ಲುತ್ತದೆ. ನಷ್ಟವಾದರೆ ನಿಯಮಿತ ಬಾಧ್ಯತೆಯ ಕೆಳಮಿತಿಯಿದೆ! ಹೀಗಾಗಿ ವ್ಯಾಪಾರಗಳೆಲ್ಲವೂ ಹೆಚ್ಚಾಗಿ ಬಂಡವಾಳದ ಆಧಾರದ ಮೇಲೆಯೇ ಕಟ್ಟಿದ್ದು ಸಹಜವೇ.
ಬಂಡವಾಳದ ಪ್ರಾಥಮಿಕತೆಯನ್ನು ಬದಲಾಯಿಸಲು ಆಗುತ್ತದೆಯೇ? ಬಂಡವಾಳಕ್ಕೆ ಒಂದು ನಿಗದಿತ ‘ಬೆಲೆ (ಬಡ್ಡಿ)’ಯನ್ನು ಕೊಟ್ಟು ಅದನ್ನು ಮಿಕ್ಕ ಸಂಪನ್ಮೂಲಗಳಂತೆ ಕರಾರುಬದ್ಧವಾಗಿ ಉಪಯೋಗಿಸುವುದು ಸಾಧ್ಯವೇ? ಹಾಗಾದಾಗ ವ್ಯಾಪಾರದ ಬೇರಾವ ಪದ್ಧತಿಯೂ ಬದಲಾಗುವುದಿಲ್ಲ. ಮಾರುಕಟ್ಟೆಯ ಧರ್ಮಾನುಸಾರ ವ್ಯಾಪಾರವನ್ನು ಮಾಡುತ್ತಲೇ ಅದರ ಪರಿಭಾಷೆಯನ್ನು ಬದಲಿಸಬಹುದೇ?
ಬಂಡವಾಳದ ಪ್ರಾಥಮಿಕತೆಯನ್ನು ಪ್ರಶ್ನಿಸುವ ಸೈದ್ಧಾಂತಿಕ ಪ್ರಶ್ನೆಯನ್ನು ‘ಸಹಕಾರಿ’ಗಳಲ್ಲದೇ ಎಡಪಂಥೀಯರೂ ಎತ್ತಿದ್ದಾರೆ. ಆದರೆ, ಆ ವಾದ ಮಾರುಕಟ್ಟೆಗಳನ್ನು ತಿರಸ್ಕರಿಸಿ, ಸರ್ಕಾರದ ಪಾತ್ರವನ್ನು ಹೆಚ್ಚಿಸುವತ್ತ ವಾಲಿದೆ. ಆ ನಿಲುವು ವ್ಯಾಪಾರದಲ್ಲೂ ಸರ್ಕಾರದ ಹಸ್ತಕ್ಷೇಪವನ್ನು ಬಯಸುತ್ತದೆ. ಕಾನೂನು ರೂಪಿಸುವುದರಲ್ಲಿ, ನೀತಿ-ನಿಯಮಗಳನ್ನು ನಿರ್ಧರಿಸುವಲ್ಲಿ, ಸರ್ಕಾರವೇ ಬೆಲೆಗಳನ್ನು ನಿಗದಿ ಮಾಡಿ ಮಾಲನ್ನು ಖರೀದಿಸುವ ಕ್ರಮದಲ್ಲಿ ಈ ಹಸ್ತಕ್ಷೇಪ ಕಾಣುತ್ತದೆ. ಇದು ಮಾರುಕಟ್ಟೆಯನ್ನು ನೇರವಾಗಿ ನಿಯಂತ್ರಿಸುವ ಕ್ರಮ. ಆದರೆ, ಸಹಕಾರದ ಹಸ್ತಕ್ಷೇಪಕ್ಕೆ ಯಾವ ವಿಶೇಷಾಧಿಕಾವೂ ಬೇಕಿಲ್ಲ. ಮಾರುಕಟ್ಟೆಯಲ್ಲಿದ್ದು, ಮಾರುಕಟ್ಟೆಯ ಧರ್ಮಕ್ಕೆ ಬದ್ಧವಾಗಿಯೇ, ಮಾರುಕಟ್ಟೆಯ ಪರಿಪಾಠದ ಮೂಲಸ್ವರೂಪವನ್ನು ಪ್ರಶ್ನಿಸುತ್ತ; ನಿಮ್ಮೊಳಗಿದ್ದೇ ನಿಮ್ಮವನಾಗಿರದೇ ಕೆಲಸ ಮಾಡುವ ಸಹಕಾರ ಪದ್ಧತಿ ವಿಶಿಷ್ಟವಾದದ್ದು.
ಸಹಕಾರ ಪದ್ಧತಿ ಬಂಡವಾಳದ ಪ್ರಾಥಮಿಕತೆಯನ್ನು ಪ್ರಶ್ನಿಸಿ, ಅದನ್ನೊಂದು ನಿಗದಿತ ಬೆಲೆಯ ಸೇವೆಯನ್ನಾಗಿಸಿತು. ಮೊದಲಿಗೆ ಸಹಕಾರದ ಈ ಪದ್ಧತಿಯ ಪರಿಪಾಠ ಉಂಟಾದದ್ದು ಗ್ರಾಹಕ ಕ್ಷೇತ್ರದಲ್ಲಿ. 1844ರ ಸಮಯದ ಔದ್ಯೋಗಿಕ ಕ್ರಾಂತಿಯ ಕಾಲಕ್ಕೆ. ಪ್ರತಿನಿತ್ಯದ ಬಳಕೆಯ ವಸ್ತುಗಳನ್ನು ಮಾರುತ್ತಿದ್ದ ವರ್ತಕರು ಕಾರ್ಮಿಕರಿಗೆ ಉದ್ರಿಯ ಮೇಲೆ ಕಿರಾಣಿಯನ್ನು ಕೊಟ್ಟು ಹೆಚ್ಚಿನ ದುಡ್ಡನ್ನು ಕೀಳುತ್ತಿದ್ದರು. ಈ ಶೋಷಣೆಯಿಂದ ಮುಕ್ತಿಪಡೆಯಲು ಬಹುಸಂಖ್ಯೆಯಲ್ಲಿದ್ದ ಕಾರ್ಮಿಕ-ಗ್ರಾಹಕರು ಒಟ್ಟುಗೂಡಿದರು. ತಮಗೆ ಬೇಕಾದ ವಸ್ತುಗಳನ್ನು ಪರಸ್ಪರತೆಯ ಆಧಾರದ ಮೇಲೆ ಖರೀದಿಸಿ, ಅದರಲ್ಲಿ ಬಂದ ಲಾಭವನ್ನು ತಮ್ಮಲ್ಲೇ ಹಂಚಿಕೊಳ್ಳುವ ಹೊಸ ಪದ್ಧತಿಯನ್ನು ಹುಟ್ಟುಹಾಕಿದರು. ಇದು ಹಿಂದೆಂದೂ ಮಾಡದಿದ್ದ ಕ್ರಾಂತಿಕಾರಿ ಆಲೋಚನೆಯಾಗಿತ್ತು. ಒಂದೆಡೆ ಕಾರ್ಮಿಕ ಸಂಘಗಳು ಕೆಲಸದ ಜಾಗದಲ್ಲಿ ಏನು ಸವಲತ್ತುಗಳಿರಬೇಕು, ಕೆಲಸಕ್ಕೆ ಮಾಲೀಕರಿಂದ ಎಷ್ಟು ವೇತನ, ಭತ್ಯೆಗಳು ಬರಬೇಕು ಎನ್ನುವ ಬಗ್ಗೆ ಹೋರಾಡಿದರೆ, ಅದೇ ಕಾರ್ಮಿಕರು; ಕೆಲಸದ ಸಂದರ್ಭದಿಂದಾಚೆ ತಮ್ಮ ದಿನನಿತ್ಯದ ಅವಶ್ಯಕತೆಗಳನ್ನು ಪೂರೈಸುವ ವ್ಯಾಪಾರಿಗಳ ರೀತಿಯನ್ನೂ ಪ್ರಶ್ನಿಸಿದ್ದರು.
ಇದೇ ಕಾರಣಕ್ಕೆ ಸಹಕಾರವು ಒಂದು ವ್ಯಾಪಾರವಾಗಿ ರೂಪಿಸಿದ್ದರೂ, ಸಹಕಾರದ ಇತರ ತತ್ವಗಳು ಕಾರ್ಮಿಕ ಸಂಘಗಳ ನಿಕಟ ಒಡನಾಟದಿಂದ ಬಂದಿವೆ. ಅದರಲ್ಲಿ ಮುಖ್ಯವಾದದ್ದು ಪ್ರಜಾತಾಂತ್ರಿಕ ಪದ್ಧತಿಯ ನಿರ್ವಹಣೆ.
ರಾಶ್ಡೇಲ್ ಪಯೋನಿಯರ್ಸ್ (Rochdale Society of Equitable Pioneers) ಮೊದಲ ಸಹಕಾರ ತತ್ವಗಳನ್ನು ರೂಪಿಸಿದರು. ವ್ಯಾಪಾರಕ್ಕೆ ಬಂಡವಾಳ ಮುಖ್ಯ, ಆದರೆ, ವ್ಯಾಪಾರದಿಂದಾಗುವ ಲಾಭ ಕೇವಲ ಬಂಡವಾಳದಿಂದಾಗಿಯೇ ಬರುತ್ತದೆನ್ನುವುದು ಸಮರ್ಪಕವಲ್ಲ. ವ್ಯಾಪಾರದ ಮೂಲವನ್ನು ಬಂಡವಾಳ ಬಿಟ್ಟು ಮಾರಾಟಕೇಂದ್ರಿತ ಮಾಡಿದರೆ? ಗ್ರಾಹಕರೆಲ್ಲರೂ ಕೂಡಿ ವ್ಯಾಪಾರದ ಮೂಲವನ್ನು ಬಂಡವಾಳದಿಂದ ಗ್ರಾಹಕತ್ವದೆಡೆಗೆ ತಿರುಚಿದರೆ? ಯಾರು ಹೆಚ್ಚು ಖರೀದಿ ಮಾಡುತ್ತಾರೋ, ಅವರಿಂದಲೇ ಸಂಸ್ಥೆಗೆ ಹೆಚ್ಚು ಲಾಭ ಆಗುತ್ತಿದೆಯೆಂಬ ತತ್ವವನ್ನು ಹಿಡಿದು ಹೊರಟರೆ? ನೌಕರರಿಗೆ ನಿಗದಿತ ಸಂಬಳವನ್ನು ಕೊಡುವಂತೆಯೇ ಬಂಡವಾಳ ಹೂಡಿದವರಿಗೆ ಒಂದು ನಿಗದಿತ ಬಡ್ಡಿಯನ್ನು ಕೊಟ್ಟು, ‘ಉಳಿಕೆ’ಯ ಹಣವನ್ನು ಗ್ರಾಹಕರಿಗೆ ಖರೀದಿ ಮಾಡಿದ ಅನುಪಾತದಲ್ಲಿ ಹಂಚಿದರೆ? ವ್ಯಾಪಾರದ ಮೂಲವನ್ನು ಬಂಡವಾಳದಿಂದ ವರ್ಗಾಯಿಸಿ ಸೇವೆಯ ಉಪಯೋಗದತ್ತ ತಿರುಚಿದರೆ? ಸಹಕಾರ ಸಿದ್ಧಾಂತದ ಮೂಲ ರೂವಾರಿಗಳು ಬಂಡವಾಳವನ್ನು ಹೀಗೊಂದು ನಿಮಿತ್ತವಾಗಿ ಬದಲಾಯಿಸಿದರು. ಸೈದ್ಧಾಂತಿಕವಾಗಿ ಬಂಡವಾಳವನ್ನು ಪ್ರಶ್ನಿಸಿದ್ದಲ್ಲದೇ. ವ್ಯಾಪಾರ ಪದ್ಧತಿಯಲ್ಲೂ ಬಂಡವಾಳದ ಪ್ರಾಮುಖ್ಯತೆಯನ್ನು ಸಹಕಾರ ತತ್ವಗಳು ಕಮ್ಮಿ ಮಾಡಿದವು.
ಪಯೋನಿಯರ್ಸ್ ‘ಉಳಿಕೆ’ಯನ್ನು ಹಂಚುವ ರೀತಿಯನ್ನು ಮೂಲಭೂತವಾಗಿ ಬದಲಾಯಿಸಿದರು. ಇದರ ಜೊತೆಗೆ ಸಂಸ್ಥೆಯ ಮಾಲೀಕತ್ವದ ಪರಿಭಾಷೆಯೂ ಬದಲಾಯಿತು. ಸಂಸ್ಥೆಯ ಸೇವೆಯನ್ನು ಉಪಯೋಗಿಸಬಲ್ಲವರು ಮಾತ್ರ ಸದಸ್ಯತ್ವವನ್ನು ಪಡೆಯುವ, ಉಳಿಕೆಗೆ ಅರ್ಹರಾಗುವ ಮೂಲಕ ಅವರೇ ಸಂಸ್ಥೆಯ ಮಾಲೀಕರೂ ಆದರು. ಸಂಸ್ಥೆಯ ಸೇವೆಯನ್ನು ಎಷ್ಟು ಉಪಯೋಗಿಸುತ್ತಾರೋ ಅಷ್ಟರ ಅನುಪಾತದಲ್ಲಿ ‘ಉಳಿಕೆ’ಯ ಹಂಚಿಕೆಯಾಗಲಿತ್ತು. ಸೇವೆಯನ್ನು ಉಪಯೋಗಿಸುವವರೇ ಸಂಸ್ಥೆಯ ನಿರ್ವಹಣಾ ಮಂಡಳಿಯಲ್ಲಿ ಜಾಗ ಪಡೆದರು. ಹೂಡಿಕೆಯಿಟ್ಟವರಿಗೆ ಅಲ್ಲಿ ಸ್ಥಾನವಿರಲಿಲ್ಲ. ಬಂಡವಾಳದ ಪ್ರಾಮುಖ್ಯತೆ ಕಮ್ಮಿಯಾಯಿತು. ಆದರೆ, ಸಂಸ್ಥೆಯ ಮೂಲ ವ್ಯಾಪಾರ ಏನೆಂಬುದನ್ನು ನಿಖರವಾಗಿ ನಮೂದಿಸುವುದೂ ಅವಶ್ಯಕವಾಯಿತು. ವ್ಯಾಪಾರವನ್ನು ನಿಖರವಾಗಿ ವ್ಯಕ್ತಪಡಿಸಿದಾಗ ಮಾತ್ರ ಸದಸ್ಯತ್ವಕ್ಕೆ ಮತ್ತು ‘ಉಳಿಕೆ’ಯ ಹಂಚಿಕೆಗೆ ಅರ್ಹತೆಯನ್ನು ನಮೂದು ಮಾಡಬಹುದು.
ಈ ಸಂಸ್ಥೆಯ ನಿರ್ವಹಣಾ ತತ್ವಗಳೂ ಬಂಡವಾಳಶಾಹಿ ತತ್ವಗಳಿಗಿಂತ ಭಿನ್ನವಾಗಬೇಕಿತ್ತು. ಬಂಡವಾಳವೇ ಮೂಲವಾದ ಪದ್ಧತಿಯಲ್ಲಿ ಹೆಚ್ಚು ಬಂಡವಾಳ ಹೂಡಿದವರಿಗೆ ನಿರ್ವಹಣೆಯಲ್ಲಿ ಹೆಚ್ಚು ಅಧಿಕಾರ. ಅವರಿಗೆ ‘ಉಳಿಕೆ’ಯೂ ಹೆಚ್ಚೇ ಸಿಗುತ್ತಿತ್ತು. ಆದರೆ, ಸಹಕಾರದಲ್ಲಿ? ಪಯೋನಿಯರ್ಸ್ ಯೋಚಿಸಿದ ವ್ಯವಸ್ಥೆಯಲ್ಲಿ ಬಂಡವಾಳಕ್ಕೂ, ಸೇವೆಯನ್ನು ಉಪಯೋಗಿಸಿ ಪಡೆಯುವ ಉಳಿಕೆಯ ಪಾಲಿಗೂ, ಸಂಸ್ಥೆಯ ನಿರ್ವಹಣಾ ಮಂಡಳಿಯನ್ನು ಆಯ್ಕೆ ಮಾಡುವ ವೋಟಿನ ಹಕ್ಕಿಗೂ ಒಂದೇ ರೀತಿಯಲ್ಲಿ ಕೊಂಡಿಹಾಕಿ ಸರಳವಾದ ತತ್ವವನ್ನು ರೂಪಿಸುವುದು ಸಾಧ್ಯವಿರಲಿಲ್ಲ. ಕಾಲಕಾಲಕ್ಕೆ ಸದಸ್ಯರು ಮಾಡುವ ವ್ಯಾಪಾರ/ಉಪಯೋಗಿಸುವ ಸೇವೆ ಬದಲಾಗುತ್ತದೆ. ಕೆಲ ಸದಸ್ಯರು ಸೇವೆಯನ್ನು ಉಪಯೋಗಿಸಲಾಗದ ಪರಿಸ್ಥಿತಿಗೆ ಸೇರಬಹುದು. ಸಂಸ್ಥೆಯಿಂದ ದೂರವಾದ ಊರಿಗೆ ಸ್ಥಳಾಂತರಗೊಂಡರೆ, ಅವಶ್ಯಕತೆಗಳು ಬದಲಾದರೆ, ಸಂಸ್ಥೆಯ ಅವಶ್ಯಕತೆ ಇಲ್ಲವಾಗಬಹುದು. ಆದ್ದರಿಂದ ಸಂಸ್ಥೆಯ ಸೇವೆಗಳನ್ನು ಉಪಯೋಗಿಸುವ ಹೊಸ ಸದಸ್ಯರು ಸೇರುವ, ಹಳಬರು ಬಿಟ್ಟು ಹೋಗಬಹುದಾದ ಮುಕ್ತ ಸದಸ್ಯತ್ವದ ಏರ್ಪಾಟಿನ ಅವಶ್ಯಕತೆ ಇತ್ತು. ಹಾಲಿ ಸದಸ್ಯರಲ್ಲೇ ನಿರ್ವಹಣಾ ಕಾರ್ಯವನ್ನೂ ಕಾರ್ಯಕಾರಿ ಮಂಡಳಿಯ ಪದಾಧಿಕಾರವನ್ನೂ ಪಡೆಯುವಂತೆ ರೂಪಿಸಬೇಕಿತ್ತು.
ಬಂಡವಾಳಶಾಹಿ ಪದ್ಧತಿಯಲ್ಲೂ ಹೂಡಿಕೆದಾರರು ಸಂಸ್ಥೆಯನ್ನು ಬಿಟ್ಟು ಬಂಡವಾಳವನ್ನು ಬೇರೆಡೆಗೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಅದಕ್ಕೆ ತಕ್ಕ ಏರ್ಪಾಟೂ ಇದೆ. ಹೂಡಿಕೆದಾರರು ಅವರ ಹೂಡಿಕೆಯನ್ನು ಷೇರುಪೇಟೆಯಲ್ಲಿ ಮಾರಾಟ ಮಾಡಿ ಸಂಸ್ಥೆಯ ಮಾಲೀಕತ್ವದಿಂದ ಮುಕ್ತಿ ಪಡೆಯಬಹುದು. ದಕ್ಷತೆಯಿಂದ ನಡೆಯುವ ಬಂಡವಾಳಶಾಹಿ ಸಂಸ್ಥೆಗಳಿಗೂ ಷೇರುಪೇಟೆಗೂ ನಿಕಟ ಸಂಬಂಧವಿರುವುದನ್ನು ನಾವು ನೋಡಿದ್ದೇವೆ. ಆದರೆ, ಸಹಕಾರ ತತ್ವಗಳನ್ನ ಪಾಲಿಸುವ ಸಂಸ್ಥೆಗಳಿಗೆ ಈ ಸವಲತ್ತಿಲ್ಲ. ಪಯೋನಿಯರ್ಸ್ ರೂಪಿಸಿದ ತತ್ವಾನುಸಾರ ಅದರ ಅವಶ್ಯಕತೆಯೂ ಇರಲಿಲ್ಲ.
ಬಂಡವಾಳಶಾಹಿ ವ್ಯಾಪಾರದ ಆಶಯವನ್ನು ಪ್ರಶ್ನಿಸಿದರೂ, ವ್ಯಾಪಾರಿ ಪದ್ಧತಿಗಿದ್ದ ಮಾರಾಟ, ಲಾಭಗಳ ಇತರೆ ಲಕ್ಷಣಗಳನ್ನು ನಿರಾಕರಿಸದೆ ಈ ಸಂಸ್ಥೆಗಳು ರೂಪ ತಾಳಿದವು.
ಹೂಡಿಕೆ ಮತ್ತು ಅದರ ಮೇಲೆ ಅಪೇಕ್ಷಿಸುವ ಲಾಭದ ಮೇಲೆ ಬಂಡವಾಳ ಕೇಂದ್ರಿತ ವ್ಯಾಪಾರದ ಗಾತ್ರ, ಎಷ್ಟು ದೊಡ್ಡ ಫ್ಯಾಕ್ಟರಿ ಹಾಕಬಹುದು, ಎಷ್ಟು ನೌಕರರಿಗೆ ಕೆಲಸ ಕೊಡಬಹುದು, ಸಂಬಳವೆಷ್ಟು ಎಂಬಂತಹ ವಿಚಾರಗಳೆಲ್ಲವನ್ನು ನಿರ್ಧರಿಸಲಾಗುತ್ತದೆ. ಆದರೆ, ಪಯೋನಿಯರ್ಸ್ ಒಡ್ಡಿದ ವಾದ ಹೀಗಿತ್ತು:
ಒಂದು ಸಾವಿರ ರೂಪಾಯಿಯ ಹೂಡಿಕೆಯಿಂದ ಒಂದು ಕಿರಾಣಿಯಂಗಡಿಯನ್ನು ಪ್ರಾರಂಭಿಸೋಣ. ಆ ಸಾವಿರ ರೂಪಾಯಿಯನ್ನು ಹೂಡಿ ಸಗಟಿನಲ್ಲಿ ಕಿರಾಣಿಯ ಪದಾರ್ಥಗಳನ್ನು ಕೊಂಡು ತರುತ್ತೇವೆ. ಆ ಮಾಲನ್ನು ಎರಡು ದಿನಗಳಲ್ಲಿ ನೂರು ಜನರಿಗೆ ಮಾರಾಟ ಮಾಡಿ ಸಾವಿರದಿನ್ನೂರು ರೂಪಾಯಿಗಳನ್ನು ಪಡೆಯುತ್ತೇವೆ. ಹೀಗೆ ಈ ವ್ಯವಹಾರದಲ್ಲಿ ಪಡೆದ ಲಾಭ ಇನ್ನೂರು ರೂಪಾಯಿಗಳು. ಈ ಲಾಭ ಸಾವಿರ ರೂಪಾಯಿ ಹೂಡಿದವರಿಗೆ ಸಲ್ಲುತ್ತದೆ. ಬದಲಿಗೆ ಅದೇ ಮಾಲನ್ನು ಮೊದಲ ದಿನ ನೂರು ಜನರಿಗೆ ಮಾರಿ, ಬಂದ ದುಡ್ಡಿನಿಂದ ಮತ್ತೆ ಮಾಲನ್ನು ಕೊಂಡು, ಇನ್ನೂ ನೂರು ಜನರಿಗೆ ಮಾರಿದರೆ ಒಟ್ಟಾರೆ ಬರುವ ಲಾಭ ನಾಲ್ಕುನೂರು ರೂಪಾಯಿಗಳು. ಈ ನಾಲ್ಕುನೂರು ರೂಪಾಯಿಗಳ ಲಾಭ ಒಂದೇ ಸಾವಿರದ ಹೂಡಿಕೆಯ ಮೇಲೆ ಬಂದಿದೆ. ಆದರೆ, ಇನ್ನೂರು ರೂಪಾಯಿಯ ಲಾಭದಿಂದ ದುಪ್ಪಟ್ಟಾಗಿ ನಾಲ್ಕುನೂರಕ್ಕೆ ತಲುಪಿದ್ದು ಹೆಚ್ಚು ಗ್ರಾಹಕರು ಅಥವಾ ಅದೇ ಗ್ರಾಹಕರು ಹೆಚ್ಚೆಚ್ಚು ಖರೀದಿಸಿದ್ದರಿಂದ. ಈ ಲಾಭ ಬಂಡವಾಳ ಹೂಡಿದವರಿಗೆ ಹೋಗಬೇಕೇ? ಗ್ರಾಹಕ ಸಮೂಹಕ್ಕೆ ಹೋಗಬೇಕೇ?
ಸಾವಿರ ರೂಪಾಯಿ ಹೂಡಿಕೆಗೇ ಪ್ರಾಮುಖ್ಯತೆ ಕೊಟ್ಟು ಹೂಡಿಕೆದಾರರನ್ನು ಕೊಂಡಾಡುವ ಬದಲು ಖರೀದಿಸಿದ ಗ್ರಾಹಕರ ಪಾತ್ರವನ್ನು ಪರಿಶೀಲಿಸಿದರೆ, ಆ ನಾಲ್ಕುನೂರು ರೂಪಾಯಿ ಲಾಭವನ್ನಾರ್ಜಿಸಲು ಗ್ರಾಹಕರೂ ಕಾರಣರಾಗಿದ್ದಾರಲ್ಲವೇ? ಗ್ರಾಹಕರಿಗೇ ಪ್ರಾಮುಖ್ಯತೆ ಕೊಟ್ಟರೆ, ಹೂಡಿಕೆದಾರನಿಗೆ ಪೂರ್ವನಿಗದಿತ ಬಡ್ಡಿಯನ್ನು ಕೊಟ್ಟನಂತರ ಉಳಿವ ಇಡೀ ಮೊತ್ತವನ್ನು ಗ್ರಾಹಕರೇ ಹಂಚಿಕೊಳ್ಳಬಹುದು.
ಗ್ರಾಹಕರನ್ನು ಬಿಟ್ಟು ರೈತರ ಕತೆಯನ್ನು ನೋಡೋಣ. ಭತ್ತ, ಜೋಳ, ರಾಗಿ, ಕಬ್ಬು ಬೆಳೆವ ರೈತರ ಕಾರ್ಯ ಸರಪಳಿ ಹೀಗಿರುತ್ತದೆ: ಬೆಳೆ ಬೆಳೆಯಲು ಬೇಕಾದ ಸಾಲವನ್ನು ದುಡ್ಡಿನ ರೂಪದಲ್ಲಿ ಅಥವಾ ವ್ಯಾಪಾರಿಯಿಂದ; ಬೀಜ, ರಸಗೊಬ್ಬರ, ಕೀಟನಾಶಕಗಳ ರೂಪದಲ್ಲಿ ಕೊಳ್ಳುವುದು. ಈ ಸಾಲಕ್ಕೆ ಸರಾಸರಿ ತಿಂಗಳಿಗೆ ನೂರಕ್ಕೆ ಮೂರು ಪೈಸೆಗಿಂತ ಹೆಚ್ಚೇ ಬಡ್ಡಿ ಕಟ್ಟಬೇಕು. ಉತ್ತು, ಬಿತ್ತು ಬೆಳೆದು ಕೂಲಿ ಕೊಟ್ಟು, ಟ್ರ್ಯಾಕ್ಟರ್ ಓಡಿಸಿ, ಕಡೆಗೆ ಕಟಾವಾಗಿ ಬಂದ ಇಳುವರಿಯನ್ನು ಮತ್ತೆ ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿಯ ಯಾರ್ಡಿನಲ್ಲಿ ಮಾರಾಟ ಮಾಡಬೇಕು ಇಲ್ಲವೇ ತಮ್ಮ ಊರಿಂದಲೇ ಕೊಂಡುಕೊಳ್ಳುವ ಏಜೆಂಟಿಗೆ ಮಾರಬಹುದು. ಎಲ್ಲವೂ ಸರಿಹೋದರೆ ಸಾಲದ ಮೊತ್ತವನ್ನು ಕತ್ತರಿಸಿ ಮಿಕ್ಕ ರೊಕ್ಕವನ್ನು ಒಂದು ಹದಿನೈದು ದಿನಗಳ ಕಾಲದಲ್ಲಿ ರೈತರು ಕಾಣಬಹುದು. ಉತ್ಪನ್ನದ ತೂಕ ಕಟ್ಟುವವರು, ಗುಣಮಟ್ಟವನ್ನು ನಿರ್ಧರಿಸುವವರು, ಬೆಲೆ ಕಟ್ಟುವವರು ಅದನ್ನು ಕೊಳ್ಳುವ ವ್ಯಾಪಾರಿಗಳೇ. ಮಾರುಕಟ್ಟೆ ಸಮಿತಿಯ ಕಾನೂನು ರೈತರ ಹಿತರಕ್ಷಣೆ ಮಾಡಬಹುದು. ಆದರೆ, ಈ ವ್ಯಾಪಾರದ ಇಡೀ ಸರಪಣಿಯಲ್ಲಿ ಬೆಳೆ ಬೆಳೆವ ರೈತರ ಕೈಯಲ್ಲಿ ಯಾವ ನಿರ್ಧಾರವೂ ಇಲ್ಲ. ಎಲ್ಲವೂ ಬಂಡವಾಳವಿರುವ ವಿತರಕ-ಖರೀದಿದಾರರಲ್ಲಿದೆ.
ಈ ಜಾಗಕ್ಕೆ ಒಂದು ಸಹಕಾರ ಸಂಘವನ್ನು ತಂದು ನಿಲ್ಲಿಸಿ. ಈ ಸಹಕಾರ ಸಂಘ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿದೆ, ಶಿವಮೊಗ್ಗದಲ್ಲಿದೆ. ‘ತೋಟಗಾರ್ಸ್ ಸಪ್ಲೈ ಸೊಸೈಟಿ’, ‘ಮ್ಯಾಮ್ಕೋಸ್ ಸಂಘ’ಗಳು ರೈತರ ಪರವಾಗಿ ಕೆಲಸ ಮಾಡುತ್ತವೆ. ಸಹಕಾರ ಸಂಘದಿಂದಲೇ ಸಾಲ, ಆ ಸಾಲದ ಹಣದಲ್ಲಿ ಮಂಡಳಿಯೇ ಸಗಟಿನಲ್ಲಿ ಕೊಂಡ ಬೀಜ, ರಸಗೊಬ್ಬರ, ಕೀಟನಾಶಕಗಳ ಖರೀದಿ. ಕಟಾವಿನ ನಂತರ ಬಂದ ಇಳುವರಿಯ ಮಾರಾಟವೂ ಸಂಘಕ್ಕೇ ಅಥವಾ ದಾಸ್ತಾನು ಮಾಡಬೇಕಿದ್ದರೆ ಅದಕ್ಕೆ ಜಾಗ. ತಮ್ಮ ಭತ್ತವನ್ನ ಗಿರಣಿಯಾಡಿಸಿ ಮನೆಗೊಯ್ಯುವ ಆಯ್ಕೆಯೂ ಇದೆ. ಗುಣಮಟ್ಟ-ತೂಕ-ಬೆಲೆಯು ಸದಸ್ಯರ ಹಿತಾಸಕ್ತಿಯಲ್ಲಿಯೇ ನಡೆಯುತ್ತದೆ, ಮಾಡಿದ ಲಾಭವೂ ಸಹಕಾರ ಮಂಡಳಿಯದ್ದೇ. ಆ ಲಾಭ, ಲಾಭಾಂಶದ ರೂಪದಲ್ಲಿ ಮತ್ತೆ ರೈತರಿಗೇ ವಾಪಸ್ಸು... ಸಹಕಾರ ಉಪತತ್ವಗಳಲ್ಲಿ ನೈತಿಕ ನ್ಯಾಯವು ನಮಗೆ ಕಾಣುತ್ತದೆ. ಈ ನೈತಿಕತೆ ಸಮುದಾಯವನ್ನು ಒಳಗೊಳ್ಳುವುದರಿಂದ ಬೆಳೆಯುತ್ತದೆ. ಈ ನೈತಿಕ ತತ್ವದ ಮೂಲವನ್ನು ಅರ್ಥಮಾಡಿಕೊಂಡರೆ ಎಲ್ಲವನ್ನೂ ಮಾರುಕಟ್ಟೆಗೆ ಇಳಿಬಿಟ್ಟಿರುವ ಈ ಸಮಯದಲ್ಲಿ ‘ಸಹಕಾರಿತನ’ದ ಮಹತ್ವ ಗೊತ್ತಗುತ್ತದೆ.
ಮೊದಲ ಮಾದರಿಯಲ್ಲಿ ವ್ಯಾಪಾರದ ಪ್ರತಿ ಹಂತದಲ್ಲೂ ಆರ್ಜಿತವಾದ ಲಾಭ ಸಲ್ಲುವುದು ಸಮುದಾಯದ ಹೊರಗಿರುವ, ಬಂಡವಾಳ ಹೂಡಿದ ವ್ಯಾಪಾರಸ್ಥರಿಗೆ. ಎರಡನೇ ಉದಾಹರಣೆಯಲ್ಲಿ ಈ ಹಣ ಸಮುದಾಯಲ್ಲೇ ಉಳಿಯುತ್ತದೆ. ಇದರಲ್ಲಿ ಯಾವುದೇ ದಾನವಾಗಲೀ, ದೇಣಿಗೆಯಾಗಲೀ, ಸಬ್ಸಿಡಿಯಾಗಲೀ ಇಲ್ಲ.
‘ತೋಟಗಾರ್ಸ್ ಸಂಘ’ ಬರೇ ಮೂರು ತಾಲೂಕುಗಳಲ್ಲಿ ಕೆಲಸ ಮಾಡುತ್ತಿದೆ. ಅದರ ವ್ಯಾಪಾರ ರೂ 800 ಕೋಟಿಗಳಷ್ಟಿದೆ. ಬಡವರಿಗೆ, ರೈತರಿಗೆ ಮಾರುಕಟ್ಟೆಯ ತತ್ವಗಳು ಬೇಕು. ಆದರೆ, ಆ ತತ್ವಗಳ ಚೌಕಟ್ಟು ಭಿನ್ನವಾದರೆ, ಬಂಡವಾಳಶಾಹಿ ಪದ್ಧತಿಯ ಮೂಲ ಬದಲಾದರೆ ಏನೆಲ್ಲ ಆರ್ಥಿಕ ಕ್ರಾಂತಿಯಾಗಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ. ಇಲ್ಲಿ ಸದಸ್ಯರಿಗೆ ಉತ್ಪಾದನೆಯ ಸಾಲವನ್ನು ಕೊಡುತ್ತಾರೆ. ಸದಸ್ಯರ ಠೇವಣಿಗಳನ್ನು ಸ್ವೀಕರಿಸುತ್ತಾರೆ. ಉತ್ಪಾದನೆಗೆ ಬೇಕಾದ ಎಲ್ಲ ಸಾಮಗ್ರಿಗಳು ಸಂಘದಲ್ಲಿ ಸಿಗುತ್ತವೆ. ರೈತರು ತಮ್ಮ ಮಾಲನ್ನು ಕಾಪಿಡಲು ದಾಸ್ತಾನು ವ್ಯವಸ್ತೆಯಿದೆ. ಅವರಿಗಿಷ್ಟ ಬಂದ ದಿನದಂದು ಮಾರಾಟ ಮಾಡಲೂ ವ್ಯವಸ್ಥೆಯಿದೆ. ಹೀಗಾಗಿ ರೈತರು ಸರಬರಾಜು ಮಾಡಿದ ಅಡಿಕೆಯ ಮಾರಾಟಕ್ಕೆ ಇರುವ ಅವಕಾಶವಲ್ಲದೇ, ಸಂಘವೇ ರೈತರಿಂದ ಅಡಿಕೆ ಕೊಂಡು ಅದಕ್ಕೊಂದು ತಳಹದಿಯ ಬೆಲೆಯನ್ನು ನಿಗದಿ ಮಾಡಿ ಅವರ ಹಿತದೃಷ್ಟಿಯನ್ನು ಕಾಪಾಡುತ್ತದೆ.
ತೆಲಂಗಾಣದ ವರಂಗಲ್ ಜಿಲ್ಲೆಯ ‘ಮುಲುಕನೂರು ಸಂಘ’ ರೈತರು ಬೆಳೆದ ಅಷ್ಟೂ ಭತ್ತವನ್ನು ಖರೀದಿಸಿ ಗಿರಣಿಯಲ್ಲಿ ಅಕ್ಕಿಯಾಗಿಸಿ ಲಾಭದಾಯಕವಾಗಿ ಮಾರಾಟ ಮಾಡಿ ರೈತರಿಗೆ ಮುಕ್ತ ಮಾರುಕಟ್ಟೆಗಿಂತ ಹೆಚ್ಚಿನ ಬೆಲೆಯನ್ನು ಕೊಡುತ್ತದೆ. ‘ತೋಟಗಾರ್ಸ್ ಸಂಘ’ ಸಾಕಷ್ಟು ಮೊತ್ತದ ಇಳುವರಿಯನ್ನು ಕೊಳ್ಳುತ್ತದೆ. ನೇರ ಮಾರಾಟವಲ್ಲದೆ, ಪರಿಷ್ಕರಣೆ ಮಾಡಿ ನಂತರ ಮಾರಾಟ ಮಾಡುವುದೂ ಉಂಟು. ಈ ಪ್ರಕ್ರಿಯೆಯಿಂದಾಗಿ ಮಾರುಕಟ್ಟೆಯ ಬೆಲೆಗಳನ್ನು ಒಂದು ಹದ್ದುಬಸ್ತಿನಲ್ಲಿಡಲು ಸಾಧ್ಯವಾಗುತ್ತದೆ. ರೈತ ಶೋಷಣೆಯ ವಿರುದ್ಧ ಪರ್ಯಾಯ ವ್ಯವಸ್ಥೆಯಾಗಿ ನಿಂತು, ಸಂಘ ತನ್ನ ಕೈಲಾದ ಪರಿಷ್ಕರಣೆ-ಮಾರಾಟದಿಂದ ರೈತರ ಹಿತದೃಷ್ಟಿಯನ್ನು ಕಾಪಾಡುತ್ತದೆ.
ಗ್ರಾಹಕರಿಂದ ಶುರುವಾದ ಸಹಕಾರ ತತ್ವಗಳು ಬಂಡವಾಳದ ಪ್ರಾಥಮಿಕತೆಯಿದ್ದ ವ್ಯಾಪಾರದ ಹಲವು ನಂಬಿಕೆಗಳನ್ನು ಅಲುಗಾಡಿಸಿದವು. ಮೂಲಧನವೇ ಮುಖ್ಯವಲ್ಲದ ವ್ಯಾಪಾರಕ್ಕೆ ಈ ತತ್ವ ಹೇಳಿ ಮಾಡಿಸಿದಂತಿತ್ತು. ಆದರೆ, ಈ ತತ್ವದಲ್ಲಿ ಕೆಲವು ತೊಂದರೆಗಳಿವೆ. ದುಡ್ಡು-ರೊಕ್ಕವೇ ಮೂಲವಾದಾಗ ಅದಕ್ಕೆ (ಇನ್ಯಾವ ಪದಾರ್ಥಕ್ಕೂ ಇಲ್ಲದ) ವಿನಿಮಯ ಗುಣವಿದೆ. ಹೆಗ್ಗೋಡಿನಲ್ಲಿ ಕುಳಿತು ಯಾರಾದರೂ ಲೂಧಿಯಾನಾದ ಗಿರಣಿಯ ವ್ಯಾಪಾರದಲ್ಲಿ ಹೂಡಿಕೆಯನ್ನಿಡಬಹುದು. ಅಲ್ಲಿ ಬಂದ ಲಾಭವನ್ನು ಇಲ್ಲಿ ಸುಲಭವಾಗಿ ಬ್ಯಾಂಕ್ ಖಾತೆಯ ಮೂಲಕ ಪಡೆಯಬಹುದು. ಹತ್ತು ರೂಪಾಯಿ ಎಂದರೆ ಅದು ಹತ್ತು ರೂಪಾಯಿಯ ಮೌಲ್ಯವೇ ಹೊರತು, ಒಂದು ನಿರ್ದಿಷ್ಟ ನೋಟಲ್ಲ. ಆದರೆ, ಗ್ರಾಹಕರ ಸಹಕಾರ ಸಂಘದಲ್ಲಿ ಸದಸ್ಯತ್ವವನ್ನು ಪಡೆಯಬೇಕಿದ್ದರೆ, ಆ ಸಂಘದ ಗ್ರಾಹಕರಾಗಲು ಸಾಧ್ಯವಿರಬೇಕು. ಅಂದರೆ ಸದಸ್ಯರು ಅಲ್ಲಿಂದ ವಸ್ತುಗಳನ್ನು ಖರೀದಿಸುವ ಸಾಧ್ಯತೆಯಿರಬೇಕು. ಹೀಗೆ, ದುಡ್ಡಿಗಿರದ ಕೆಲವು ಮಿತಿಗಳು ಈ ಸದಸ್ಯತ್ವಕ್ಕಿವೆ. ಇದು ಭೌಗೋಳಿಕ ಮಿತಿಯಾಗಬಹುದು, ತಾಂತ್ರಿಕ ಮಿತಿಯಾಗಬಹುದು, ಇಲ್ಲವೇ ಸಮಯದ-ಆಸಕ್ತಿಯ ಮಿತಿಯಾಗಬಹುದು. ಸಹಕಾರವು ಈ ಮಿತಿಯಲ್ಲಿಯೇ ಕೆಲಸ ಮಾಡಬೇಕು.
ಸಹಕಾರವು ಯಶಸ್ವಿಯಾಗಲು ಅದರ ಮೂಲ ಉದ್ದೇಶ ಸ್ಪಷ್ಟವಾಗಿರಬೇಕು. ನೇಕಾರರ ಸಹಕಾರ ಸಂಘಗಳ ಮೂಲ ಉದ್ದೇಶ ಏನಿರಬಹುದು? ನೇಯ್ಗೆಯ ಕ್ಷೇತ್ರದಲ್ಲಿ ಆ ಸಹಕಾರ ಸಂಸ್ಥೆಗೆ ಎರಡು ಭಿನ್ನ ರೀತಿಯ ಉದ್ದೇಶಗಳು ಇರಬಹುದು: ನೇಕಾರರಿಗೆ ಕೆಲಸವನ್ನು ಹೆಚ್ಚಿಸುವ ಜೀವನೋಪಾಧಿಯನ್ನು ಕಲ್ಪಿಸುವ ಉದ್ದೇಶವಿದ್ದರೆ ಅದು ಹೆಗ್ಗೋಡಿನಲ್ಲಿರುವ ‘ಚರಕ ಸಂಸ್ಥೆ’ಯ ಹಾಗೆ ರೂಪಿತಗೊಳ್ಳುತ್ತದೆ. ನೇಯ್ಗೆಯನ್ನು ಒಂದು ಕಲೆಯೆಂದು ಪರಿಗಣಿಸದೆ ಅದು ಜೀವನೋಪಾಯಕ್ಕೊಂದು ಮಾರ್ಗವನ್ನಾಗಿ ಪರಿಗಣಿಸಿದರೆ ಆಗ ಹೆಚ್ಚು ನೇಕಾರರನ್ನು ತರಬೇತಿ ಮಾಡುವ, ಅವರಿಗೆ ಹೆಚ್ಚು ಕೆಲಸವನ್ನು ನೀಡುವ, ಅವರು ಏನೇ ನೇಯ್ದರೂ ಅದಕ್ಕೊಂದು ಮಾರುಕಟ್ಟೆಯನ್ನು ಕಂಡುಹಿಡಿಯುವ ಕೆಲಸವನ್ನು ಆ ಸಂಸ್ಥೆ ಮಾಡುತ್ತದೆ. ಈ ದೃಷ್ಟಿಯಿಂದ ಈ ಸಂಸ್ಥೆ ಸರಳವಾದ, ಎಲ್ಲರೂ ನೇಯಬಹುದಾದಂತಹ ಅರಿವೆ, ಅದರಿಂದ ಸರಳವಾಗಿ ಹೊಲಿದು ಧರಿಸಬಲ್ಲ ವಸ್ತ್ರಗಳನ್ನು ತಯಾರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುವ ಕೆಲಸ ಮಾಡುತ್ತದೆ.
ಇದನ್ನು ಬೇರೊಂದು ರೀತಿಯಲ್ಲಿ ನೋಡಬಹುದು. ನೇಯ್ಗೆಯನ್ನು ಕಲೆಯಾಗಿ, ನೈಪುಣ್ಯವಿರುವ ವಿಶಿಷ್ಟ ಕೆಲಸವಾಗಿ ಕಂಡರೆ, ಆಗ ಹೆಚ್ಚು ನೇಕಾರರನ್ನು ಹುಡುಕಿ ತಯಾರು ಮಾಡುವುದಕ್ಕೆ ಬದಲಾಗಿ, ನೈಪುಣ್ಯವುಳ್ಳ ನೇಕಾರರ ಉತ್ಪತ್ತಿಗೆ ಉತ್ತಮ ಬೆಲೆ-ಮಾರುಕಟ್ಟೆಯನ್ನು ಹುಡುಕುವ, ಅವರ ಕಲೆಗೆ ಅತ್ಯಧಿಕ ಬೆಲೆಯನ್ನು ಗಿಟ್ಟಿಸುವ ಕೆಲಸವನ್ನು ಆ ಸಂಸ್ಥೆ ಮಾಡುತ್ತದೆ. ಇದಕ್ಕೆ ತಕ್ಷಣದಲ್ಲಿ ನಮಗೆ ಸಹಕಾರ ಕ್ಷೇತದ ಉದಾಹರಣೆ ಸಿಗುವುದಿಲ್ಲ. ಆರಂಭದ ದಿನಗಳಲ್ಲಿ ‘ಫ್ಯಾಬ್ ಇಂಡಿಯಾ’ಎನ್ನುವ ಖಾಸಗಿ ಸಂಸ್ಥೆ ಮಾಡಿದ್ದ ಕೆಲಸವನ್ನು ಸಹಕಾರ ಕ್ಷೇತ್ರಕ್ಕೆ ಅನ್ವಯಿಸಬಹುದು. ‘ಫ್ಯಾಬ್ ಇಂಡಿಯಾ’ ಕೈಮಗ್ಗದ ವಿಶಿಷ್ಟ ವಸ್ತ್ರಗಳನ್ನು ಮಾರಾಟ ಮಾಡುವ ಒಂದು ಮಳಿಗೆಯಾಗಿತ್ತು. ಇಲ್ಲಿ ನಾವು ನೈಪುಣ್ಯವುಳ್ಳ ನೇಕಾರರ ವಸ್ತುಗಳನ್ನಷ್ಟೇ ಕಾಣಬಹುದಾಗಿತ್ತು. ಇದನ್ನು ಸಹಕಾರ ವ್ಯವಸ್ಥೆಯಲ್ಲಿ ರೂಪಿಸಿದ್ದರೆ, ಗ್ರಾಹಕರಿಂದ ಬಂದ ಹೆಚ್ಚಿನ ಲಾಭಾಂಶ ನುರಿತ ನೇಕಾರರ ಕೈಗೆ ಹೋಗಬಹುದಿತ್ತು. ಈಚಿನ ದಿನಗಳಲ್ಲಿ ‘ಫ್ಯಾಬ್ ಇಂಡಿಯಾ’ ತನ್ನ ಮೂಲತತ್ವವನ್ನು ಬದಿಗಿರಿಸಿ, ಯಂತ್ರಚಾಲಿತ ಮಗ್ಗಗಳ ಉತ್ಪತ್ತಿಯನ್ನು ಮಾರಾಟ ಮಾಡುತ್ತಿರುವುದರಿಂದ, ಇಂದಿನ ದಿನಕ್ಕೆ ಇದು ಪ್ರಾಸಂಗಿಕವಾಗಿಯೂ ಸರಿಯಾದ ಉದಾಹರಣೆಯಲ್ಲ.
ಹೀಗೇ ನಾವು ‘ಕ್ಯಾಂಪ್ಕೋ’ ಸಂಸ್ಥೆಯನ್ನು ಪರಾಮರ್ಶಿಸೋಣ. ಅದು ಅಡಿಕೆ ಬೆಳೆಗಾರರಿಗಾಗಿ ಪ್ರಾರಂಭಿಸಿದ ಸಂಸ್ಥೆಯಾದರೂ, ಅಂತರ ಬೆಳೆಯೆಂದು ಪ್ರೋತ್ಸಾಹಿಸಿದ ಕೋಕೋ ಬೆಳೆಯನ್ನೂ ಖರೀದಿ ಮಾಡಲು ಪ್ರಾರಂಭಿಸಿತು. ಅದರ ಜೊತೆಗೆ ಮೆಣಸು, ರಬ್ಬರ್ ಬೆಳೆಗಳ ರೈತರನ್ನೂ ಒಳಗೊಂಡಿದೆ. ಇದು ತೋಟಗಾರ ರೈತರಿಗಾಗಿ ಕಟ್ಟಿರುವ ಸಹಕಾರ ಸಂಘ ಎಂದು ಹೇಳಬಹುದು. ಒಂದು ಸಂಕುಚಿತ ದೃಷ್ಟಿಯಿಂದ ನೋಡಿದರೆ ಕೋಕೋ ಮತ್ತು ಅಡಿಕೆಯ ನಡುವಿನ ದ್ವಂದ್ವದಲ್ಲಿ ಯಾವ ಹಿತದೃಷ್ಟಿ ಪ್ರಾಥಮಿಕವಾಗಿರಬಹುದು ಎನ್ನುವ ಗೊಂದಲವಿರುವಂತೆ ಕಾಣಬಹುದು. ಆದರೆ, ಅದರ ಉದ್ದೇಶವನ್ನು ವಿಸ್ತಾರವಾಗಿ ನೋಡಿದರೆ; ತೋಟಗಾರ ರೈತರಿಗಾಗಿ ಸ್ಥಾಪಿತವಾದ ಸಂಸ್ಥೆಯಾಗಿ ಕಾಣಿಸುತ್ತದೆ.
ಈ ಮಿತಿಯನ್ನು ಗಮನದಲ್ಲಿಟ್ಟುಕೊಂಡು ಸಹಕಾರ ಸಂಸ್ಥೆಯ ಮೂಲ ಉದ್ದೇಶಕ್ಕೆ ಪೂರಕವಾದ ಸದಸ್ಯತ್ವವನ್ನು ಸಂಘಗಳು ಹೊಂದಿರಬೇಕು. ಸಹಕಾರ ಸಂಸ್ಥೆಗಳಲ್ಲಿ ಮುಕ್ತ ಸದಸ್ಯತ್ವದ ತತ್ವ ಇರುವುದೇ ಮೂಲೋದ್ದೇಶವನ್ನು ಕಾಪಾಡಲು. ಯಾರು ಸಹಕಾರ ಸಂಘದ ಸೇವೆಗಳನ್ನು ಉಪಯೋಗಿಸುತ್ತಾರೋ, ಅವರಿಗೆ ಸದಸ್ಯತ್ವ ತೆರೆದಿರಬೇಕು. ಯಾರು ಉಪಯೋಗಿಸುವ ಸ್ಥಿತಿಯಲ್ಲಿ ಇರುವುದಿಲ್ಲವೋ ಅವರು ಹೊರಬೀಳುವ ಅವಕಾಶವೂ ಇರಬೇಕು. ಈ ತತ್ವ ಅನೇಕ ತೊಂದರೆಗಳನ್ನು ಹುಟ್ಟುಹಾಕುತ್ತದೆ. ಅವುಗಳನ್ನು ಆಮೇಲೆ ಚರ್ಚಿಸೋಣ.
ಪುಸ್ತಕದ ವಿವರಗಳು
ಕೃತಿ : ನಾವಿರುವುದೆ ನಮಗಾಗಿ
ಲೇಖಕರು : ಎಂ ಎಸ್ ಶ್ರೀರಾಮ
ಪ್ರಕಾಶನ : ಅಕ್ಷರ ಪ್ರಕಾಶನ, ಹೆಗ್ಗೋಡು
ಪುಟ : 108
ಬೆಲೆ: ರೂ. 200
ಮುಖಪುಟ ವಿನ್ಯಾಸ: ಸೃಜನಾ ಕಾಯ್ಕಿಣಿ
ಖರೀದಿಗೆ ಸಂಪರ್ಕ : ಅಕ್ಷರ ಪ್ರಕಾಶನ ವೆಬ್ಸೈಟ್
ಎಂ ಎಸ್ ಶ್ರೀರಾಮ್
ಕತೆಗಾರ, ಅರ್ಥಶಾಸ್ತ್ರಜ್ಞ ಪ್ರೊ. ಎಂ.ಎಸ್. ಶ್ರೀರಾಮ್ ಬೆಂಗಳೂರಿನ ಐಐಎಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಮಾಯಾದರ್ಪಣ’, ‘ಅವರವರ ಸತ್ಯ’, ‘ತೇಲ್ ಮಾಲಿಶ್’, ‘ಸಲ್ಮಾನ್ ಖಾನ್ ನ ಡಿಫಿಕಲ್ಟೀಸು’, ‘ಕನಸು ಕಟ್ಟುವ ಕಾಲ’, ‘ಶನಿವಾರ ಸಂತೆʼ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ.
ಮುದ್ರಣಕ್ಕೆ/ಬಿಡುಗಡೆಗೆ ಸಿದ್ಧವಾಗುತ್ತಿರುವ ನಿಮ್ಮ ಕೃತಿಗಳ ಆಯ್ದ ಭಾಗಗಳ ಪ್ರಕಟಣೆಗಾಗಿ ಸಂಪರ್ಕಿಸಿ team@konaru.org