ಕವಿ, ಭಾಷಾವಿಜ್ಞಾನಿ, ವಿಮರ್ಶಕ ಕೆ. ವಿ. ತಿರುಮಲೇಶ್ ಅವರ ಸಂದರ್ಶನಗಳನ್ನು ಒಟ್ಟುಮಾಡಿ ಇದೀಗ ಓದುಗರ ಕೈಗಿಟ್ಟಿದೆ ಬಹುವಚನ. ಲೇಖಕ, ಕಥೆಗಾರ ಎಂ. ಎಸ್. ಶ್ರೀರಾಮ ಈ ಕೃತಿಯನ್ನು ಸಂಪಾದಿಸಿದ್ದಾರೆ. ಆಯ್ದ ಭಾಗ ಹೊಸವೊಸಗೆಯಲ್ಲಿ.
ಅಲೆಕ್ಸಾಂಡ್ರಿಯಾದಲ್ಲಿ ಕಂಡ ಗ್ರೀಕ್ ಕವಿ ಕವಾಫಿಯ ಬಗ್ಗೆ ಬರೆಯುತ್ತ ಇಂಗ್ಲಿಷ್ ಕಾದಂಬರಿಕಾರ ಇ. ಎಮ್. ಫೋರ್ಸ್ಟರ್ (E. M. Forster), ಆತ ಯಾವಾಗಲೂ ಜಗತ್ತಿಗೆ ತುಸು ಓರೆಯಾಗಿ ನಿಂತವನಂತೆ ತೋರುತ್ತಿದ್ದ ಅನ್ನುತ್ತಾನೆ. ಇದರಲ್ಲೊಂದು ಮಹತ್ವವಾದ ಸಾಹಿತ್ಯಿಕ ಸತ್ಯ ಇದೆ ಅಂತ ನನಗನಿಸುತ್ತದೆ. ಆದ್ದರಿಂದಲೇ, ಸಾಹಿತ್ಯದ ಕುರಿತಾದ ಪ್ರಸ್ತಾಪ ಬಂದಾಗಲೆಲ್ಲಾ ನನಗೀ ಮಾತು ನೆನಪಾಗುತ್ತದೆ. ಈ ಬಗ್ಗೆ ಸಾಧ್ಯವಿದ್ದರೆ ಮತ್ತೆ ಮಾತಾಡೋಣ. ಇನ್ನು ಲೇಖಕನೇ ತನ್ನ ಬಗ್ಗೆ ಹೇಳಿಕೊಳ್ಳುವ ಮಾತುಗಳ ಮಿತಿಯನ್ನೂ ನಾವು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ.
“ಲೇಖಕ ಸತ್ತ” (ದಿ ಆಥರ್ ಈಸ್ ಡೆಡ್) ಎಂಬ ಈಚಿನ ಮಾತೊಂದಿದೆ; ಮಾತು ಈಚಿನದಾದರೂ, ಅದು ಹೊರಗೆಡಹುವ ಸತ್ಯ, ಸಾರ್ವಕಾಲಿಕವಾದುದು: ಎಂದರೆ, ಕೃತಿ ಓದುವವನದ್ದೇ ವಿನಾ ಬರೆದವನದ್ದಲ್ಲ ಎನ್ನುವ ಸತ್ಯ. ಯಾಕೆಂದರೆ, ಪ್ರತಿಯೊಂದು ಕೃತಿಯೂ ನಮ್ಮ ಓದಿನಲ್ಲೇ ರೂಪುಗೊಳ್ಳಬೇಕು. ಕೃತಿಯೊಂದರ “ಅರ್ಥ” ತಿಳಿಯುವುದಕ್ಕೆ ನಾವು ಲೇಖಕನ ಹತ್ತಿರ ಹೋಗುವುದಿಲ್ಲ. ಇದೇ ಮಾತನ್ನು ಲೇಖಕನ ಕುರಿತಾಗಿಯೂ ಹೇಳಬಹುದು; ಲೇಖಕನಾಗಿ ಒಬ್ಬ ಬರಹಗಾರ ತನ್ನನ್ನು ತಾನು ಹೇಗೆ ತೆಗೆದುಕೊಳ್ಳುತ್ತಾನೆ ಅನ್ನುವುದಕ್ಕಿಂತ, ಇತರರು ಹೇಗೆ ತೆಗೆದುಕೊಳ್ಳುತ್ತಾರೆ ಎನ್ನುವುದು ಮುಖ್ಯ. ಸಾಹಿತ್ಯ ಚರ್ಚೆಯ ಸಂದರ್ಭದಲ್ಲಿ ಮುಖ್ಯವಾಗಬಹುದಾದ ಈ ಯಾವೊಂದು ವಿಚಾರಗಳೂ ಲೇಖಕ ಬರೆಯುತ್ತಿರುವ ಸಮಯದಲ್ಲಿ ಆತನನ್ನು ಕಾಡುವುದಿಲ್ಲ-ಕಾಡಬಾರದು.
ಲ್ಯಾಟಿನ್ ಭಾಷೆಯಲ್ಲಿದ್ದು ಇಂಗ್ಲಿಷ್ನಲ್ಲೂ ಪ್ರಚಲಿತವಿರುವ “ಇನ್ ಮೀಡಿಯಾಸ್ ರೆಸ್” ಎಂಬ ಒಂದು ನುಡಿಗಟ್ಟು ಇದೆ; ಇದರರ್ಥ: (ನೇರವಾಗಿ) ವಸ್ತು ಮಧ್ಯಕ್ಕೆ (ಪ್ರವೇಶ)” ಎಂಬುದಾಗಿ. ಎಂದರೆ ಥಟ್ಟನೆ ಮಧ್ಯ ಪ್ರವೇಶ ಮಾಡುವುದು ಎಂದು. ಯಾವ ಲೇಖಕನೂ ನಾಂದಿ ಹಾಡುತ್ತ ರಂಗಪ್ರವೇಶ ಮಾಡುವುದಿಲ್ಲ; ಉಪಸಂಹಾರ ಹೇಳಿ ಮುಗಿಸುವುದೂ ಇಲ್ಲ. ಈ ಇನ್ ಮೀಡಿಯಾಸ್ ರೆಸ್ ಎಂಬ ಮಾತು ವಾಸ್ತವದಲ್ಲಿ ಒಟ್ಟಾರೆ ಮನುಷ್ಯಾವಸ್ಥೆಯನ್ನೇ ಚಿತ್ರಿಸುವಂಥದು. ನಾವೆಲ್ಲಾ ಜನಿಸುತ್ತಲೇ ಯಾವಯಾವುದೋ ಪರಂಪರೆಗೆ ಬಾಧ್ಯರಾಗಿರುತ್ತೇವೆ.
ಉದಾಹರಣೆಗೆ, ದೇಶ-ಕಾಲ-ಭಾಷೆ. ಅದೇ ರೀತಿ ಕತೆ, ಕಾವ್ಯ, ನಾಟಕ, ಸಂಗೀತ-ನಾವು ಯಾವುದನ್ನು ಸ್ಥೂಲವಾಗಿ ಸಂಸ್ಕೃತಿ ಅನ್ನುತ್ತೇವೆಯೋ ಅದೆಲ್ಲವೂ. ಇದೊಂದು ಜೆನಿಟಿಕ್ ದತ್ತಿಯ ಹಾಗೆ - ಒಂದು ಬುತ್ತಿ ಚೀಲ - ಅದರಲ್ಲಿ ನಮಗೆ ಬೇಕಾದ್ದು, ಬೇಡದ್ದು, ನಾವು ಮೆಚ್ಚುವಂಥದು, ದ್ವೇಷಿಸುವಂಥದು ಎಲ್ಲವೂ ಇರಬಹುದು. ಹಾಗೂ, ಇದರ ಮೇಲೆ ನಮಗೆ ಯಾವ ನಿಯಂತ್ರಣವೂ ಇರೋದಿಲ್ಲ. ನಾಟಕದ ರೂಪಕವನ್ನೇ ತೆಗೆದುಕೊಂಡರೆ, ನಾವು ಯಾವತ್ತೂ ಅದು ಸುರುವಾಗಿ ಎಷ್ಟೋ ಕಾಲ ಆದ ಮೇಲೆಯೇ ಕಾಣಿಸಿಕೊಳ್ಳುವವರು. ಸಾಕಷ್ಟು ಕತೆ ಈಗಾಗಲೇ ಮುಗಿದಿರುತ್ತದೆ; ಇನ್ನೂ ಆಗುವುದಿರುತ್ತದೆ. ಇದೊಂದು ಖೊಕ್ ಆಟವೂ ಹೌದು. ಇದೇ ಇತಿಹಾಸದ ಬೃಹತ್ತಾದ ಜಗನ್ನಾಥ ರಥ - ಜಗ್ಗರ್ನಾಟ್! ಆದರೆ, ನಮ್ಮೀ ಮಧ್ಯಂತರ ಪ್ರವೇಶದಿಂದಲೇ ನಮ್ಮ ಪಾಲುದಾರಿಕೆಯೂ ಆರಂಭವಾಗುತ್ತದೆ. ಈ ಮಧ್ಯ ಪ್ರವೇಶವೇ ನಮ್ಮ ಪ್ರತ್ಯೇಕ ಪ್ರತ್ಯೇಕವಾದ ಪ್ರಾಕ್ಟಿಸ್ ಅರ್ಥಾತ್ ಕಾರ್ಯಕ್ಷೇಪವು ಕೂಡಾ. ನಾವೇನು ಪಡೆದು ಬಂದಿದ್ದೇವೆಯೋ ಅದನ್ನು ಉಪಯೋಗಿಸಿಕೊಂಡೇ ಅದನ್ನು ಬದಲಾಯಿಸಲೂ ಪ್ರಯತ್ನಿಸುತ್ತೇವೆ. ಇರಲಿ.
ಈಗ ನಿಮ್ಮ ಪ್ರಶ್ನೆಗೆ ಬಂದರೆ, ಮಾರ್ಕ್ವೇಜನ ಹಾಗೆ ನಮ್ಮಲ್ಲಿ ಹಲವರಿಗೆ ಒಬ್ಬ ಅಜ್ಜಿ ಇರುತ್ತಾಳೆ - ಅಥವಾ ಆ ಅಜ್ಜಿಯ ಸ್ಥಾನದಲ್ಲಿ ಆಗಿಂದಾಗ್ಗೆ ಯಾರು - ಯಾರೋ ಇರುತ್ತಾರೆ. ಅವರು ಅವರದೇ ರೀತಿಯಲ್ಲಿ ಕಥೆ ಹೇಳುತ್ತಾರೆ - ಮಾರ್ಕ್ವೇಜನ ಕಥನ ಶೈಲಿ ಇನ್ನೊಂದರ್ಥದಲ್ಲಿ ಅಕ್ಷರಶಃ ಅಜ್ಜಿ ಕಥೆಯನ್ನು ಹೋಲುತ್ತದೆ. ಆತನ ಕಥನಕ್ಕೆ ಹಲವು ತಲೆಮಾರುಗಳ ಬೀಸು ಇದೆ, ಅಲ್ಲಿ ಅದ್ಭುತ ರಮ್ಯ ಸಂಗತಿಗಳು ನಡೆಯುತ್ತವೆ. ಒಂದು ಥರದಲ್ಲಿ ಎಲ್ಲಾ ಒಳ್ಳೆ ಕತೆಗಳಲ್ಲೂ ಈ ಅಜ್ಜಿ ಕಥೆಗಳ ಒಂದಲ್ಲ ಒಂದು ಗುಣಗಳು ಇದ್ದೇ ಇರುತ್ತವೆಯೆಂದು ನನ್ನ ನಂಬಿಕೆ.
ಯಾಕೆಂದರೆ, ಅಜ್ಜಿ ಕತೆಗಳಿಗೆ ವಿರುದ್ಧವಾದ ವಾಸ್ತವವಾದೀ ಕಥನಗಳು ಅವುಗಳ ವಿಕೃತ ರೂಪದಲ್ಲಿ ವಾರ್ತಾಪತ್ರಿಕೆಗಳ ವರದಿಗಳ ತರಹ ಇರುತ್ತವೆ. ಚಿಕ್ಕಂದಿನಲ್ಲಿ ಮಕ್ಕಳು ಅದ್ಭುತ ರಮ್ಯವಾದ ಅಜ್ಜಿ ಕಥೆಗಳನ್ನು ಕೇಳುವುದು ಅಗತ್ಯವೆಂದು ನನಗನಿಸುತ್ತದೆ - ಇದರಿಂದ ಎಲ್ಲರೂ ಲೇಖಕರಾಗುತ್ತಾರೆ ಎಂದಲ್ಲ. ಆದರೆ, ಈ ಕಥೆಗಳು ಮನಸ್ಸಿನ ಅದಾವುದೋ ಆಯಾಮಗಳನ್ನು ಉದ್ದೀಪನಗೊಳಿಸುತ್ತವೆ, ಮನುಷ್ಯ ಜೀವನಕ್ಕೆ ಒಂದು ಆಳವನ್ನು ಕಲ್ಪಿಸಿಕೊಡುತ್ತವೆ. ಮಕ್ಕಳು ಆಡುವ ಆಟಗಳು, ಹೇಳುವ ಒಗಟುಗಳು, ಬೆಡಗಿನ ಪದಗಳು, ಸುಮ್ಮನೆ ಪ್ರಾಸ ಹೊಸೆಯುವಂಥ ಹುಡುಗಾಟಿಕೆ - ಇವೆಲ್ಲವೂ ಅಗತ್ಯವೆಂದು ನನಗನ್ನಿಸುತ್ತದೆ.
ಯಾಕೆಂದರೆ, ಇವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಭಾಷೆಯೊಂದಿಗೆ ಅವರು ನಡೆಸುವ ಸಂವಾದಗಳೇ. ಅದೇ ರೀತಿ, ಜನಪದ ಆಚರಣೆಗಳು, ಹಾಡುಗಳು ಇತ್ಯಾದಿ ಕೂಡಾ. ಇವುಗಳಲ್ಲಿ ಹಲವು ನಮ್ಮ ಜನರ ಮೂಢನಂಭಿಕೆಗಳ ಆಗರವೂ ಅಲ್ಲವೇ? ಅನ್ಯಾಯ, ಶೋಷಣೆ ಮೊದಲಾದ ಪಿಡುಗುಗಳಿಗೆ ಅವು ಎಡೆ ಮಾಡಿಕೊಡುವುದಿಲ್ಲವೇ? ಒಂದು ರೀತಿಯಲ್ಲಿ ಅವು ಯಥಾಸ್ಥಿತಿ ವಾದಕ್ಕೆ ಆಸ್ಪದವೀಯುವುದಿಲ್ಲವೇ? ನಮ್ಮ ಆಧುನಿಕ ಮನಸ್ಸು ಅಜ್ಜಿ ಕಥೆಗಳನ್ನು ತಿರಸ್ಕರಿಸುತ್ತದೆ. ಅಜ್ಜ ಅಜ್ಜಿಯಂದಿರನ್ನು ವ್ರದ್ಧಾಶ್ರಮಕ್ಕೆ ಸೇರಿಸುತ್ತದೆ. ನನಗೆ ಕತೆ ಹೇಳುವ ಅಜ್ಜಿ ಇರಲಿಲ್ಲವಾದರೂ ನಾನು ಚಿಕ್ಕಂದಿನಲ್ಲಿ ಸಾಕಷ್ಟು ಅಜ್ಜಿ ಕತೆಗಳನ್ನೂ, ಪುರಾಣ ಕತೆಗಳನ್ನೂ, ಕೇಳಿದವನೇ. ಚಂದಮಾಮ, ಬಾಲಮಿತ್ರ ಕತೆಗಳಿಗೆ ಮಾರು ಹೋದವನೇ. ಆ ಕಾಲದಲ್ಲಿ ಕೆಲವೊಮ್ಮೆ ಕಲ್ಪನೆ ಮತ್ತು ವಾಸ್ತವಗಳನ್ನು ಬೇರ್ಪಡಿಸುವುದೇ ಅಸಾಧ್ಯವಾಗುತ್ತಿತ್ತು.
ನಾವು ಭೂಮಾಲಿಕ ನಾಯರುಗಳ ಒಕ್ಕಲಾಗಿದ್ದೆವು. ಒಕ್ಕಲಾದ ನಮಗೆ ಪಕ್ಕೀರ ಎಂಬ ಉಪ ಒಕ್ಕಲಿಗನೊಬ್ಬ ಇದ್ದ. ಈತ ಚಿಕ್ಕಂದಿನಲ್ಲಿ ನನ್ನ ಹೊತ್ತು ಓಡಾಡಿದವ. ಈ ಪಕ್ಕೀರ ಮತ್ತು ಅವನಂಥ ಹಲವು ಮಂದಿ ನಮ್ಮ ಮನೆಗೆ ಬಂದು ಕೂತು ಪಟ್ಟಾಂಗ ಹೊಡೆಯುವುದಿತ್ತು. ಅವರ ಮಾತುಗಳಲ್ಲಿ ಬರದ ಸಂಗತಿಗಳಿಲ್ಲ - ಯಕ್ಷಿಗಳು, ದೇವತೆಗಳು, ಭೂತಗಳು, ಪ್ರೇತಗಳು, ಊರ ಪರವೂರುಗಳ ಸಂಗತಿಗಳು - ಅದೇನೇನೋ ಹೆಸರುಗಳು - ಬೆಳೆ, ಕೊಯ್ಲು, ರೋಗರುಜಿನಗಳು, ಹಾದರದ ವದಂತಿಗಳು ಇತ್ಯಾದಿ ಇತ್ಯಾದಿ. ಯಾವಳೋ ಒಬ್ಬಾಕೆ ತರುಣಿ - ಅವಳ ಹೊಟ್ಟೆ ತುಸು ಉಬ್ಬಿತ್ತೇ ಎಂದು ಚರ್ಚೆ ಮೊದಲಾಗುವುದು. ಅವಳು ನಮ್ಮ ನೆರೆಯವಳೇ ಆಗಿರಬಹುದು - ಅಥವಾ ನಾವು ನೋಡಿರದವಳೂ ಇರಬಹುದು. ಹಾದರ, ಕಳ್ಳಬಸಿರು, ಗರ್ಭಪಾತ, ಮರುಮದುವೆ. ಈಗ ನೋಡಿದರೆ, ಎಳೆ ಜೀವಗಳ ಲೈಂಗಿಕತೆ ಕೂಡ ಇಂಥ “ಮಾತುಕತೆ”ಗಳಿಂದ ಹೇಗೆ ಉದ್ದೀಪನಗೊಳ್ಳುತ್ತದೆ ಎಂದು ನನಗೆ ಆಶ್ಚರ್ಯವಾಗುತ್ತದೆ. (ಲೈಂಗಿಕ ಪ್ರಜ್ಞೆಗೂ ಸೃಜನಶೀಲತೆಗೂ ಅವಿನಾ ಸಂಬಂಧವಿದೆ ಎಂದು ಶಾಂತಿನಾಥ ದೇಸಾಯಿ ಹೇಳುತ್ತಿದ್ದರು. ನನಗೆ ಈ ಕುರಿತು ಸ್ಪಷ್ಟವಾದ ಅಭಿಪ್ರಾಯವಿಲ್ಲ.)
ಈ ಮಾತುಗಳ ಶೈಲಿ ಕೂಡ ಸ್ವಾರಸ್ಯಕರವಾದ್ದು: ನಮ್ಮ ಪಕ್ಕೀರ ಎಲೆಯಡಿಕೆ ಜಗಿಯುತ್ತ ಯಕ್ಷಿಗಳದೋ ಬೇಟೆಯದೋ ಕತೆ ಹೇಳುತ್ತಿದ್ದರೆ, ಕುತೂಹಲವಿರುವ ಕಡೆ ಕತೆ ನಿಲ್ಲಿಸಿ ಕವಳದ ರಸ ಉಗಿಯುವುದಕ್ಕೆಂದು ಎದ್ದು ಅಂಗಳದ ಕೊನೆ ತನಕ ಹೋಗಿ ಬರುತ್ತಿದ್ದ. ಎಂದರೆ ಅವನಿಗೆ ಕತೆಯ ಫಾರ್ಮಿನ ಕುರಿತು ಅರಿವಿತ್ತು - ಕತೆ ಹೇಳುವ ಎಲ್ಲರಿಗೂ ಇದು ಇರುತ್ತೆ ಅಂದುಕೊಂಡಿದ್ದೇನೆ.
ನಾನೀ ಜನಪದದಿಂದ ಏನನ್ನು ಪಡೆದುಕೊಂಡೆ ಎಂದು ಹೇಳುವುದು ಕಷ್ಟ. ನೀರಲ್ಲಿರುವ ಮೀನಿಗೆ ನೀರಿನ ಅರಿವಿರುವುದಿಲ್ಲ. ಮೀನನ್ನು ನೀರು ಆವರಿಸಿಕೊಂಡಿರುವಂತೆ ಈ ಪಕ್ಕೀರ ಮುಂತಾದವರು ನನ್ನ ಮನೋಮಯವನ್ನು ಆವರಿಸಿಕೊಂಡಿದ್ದಾರೆ ಎಂದು ಮಾತ್ರ ಹೇಳಬಲ್ಲೆ. ನಿಜ, ನಾನೀಗ ಹುಟ್ಟಿ ಬೆಳೆದ ಊರಲ್ಲಿ ಇಲ್ಲ; ಆದರೆ, ಕೇಳುವ ಕಿವಿ, ನೋಡುವ ಕಣ್ಣುಗಳಿದ್ದರೆ ಪಕ್ಕೀರನಂಥವರು ಎಲ್ಲ ಕಡೆ ಸಿಕ್ಕಿಯೇ ಸಿಕ್ಕುತ್ತಾರೆ; ಆದರೂ ನನ್ನ ಬಾಲ್ಯದ ಪಕ್ಕೀರನಿಗೆ ನನ್ನ ಮನೋಜಗತ್ತಿನಲ್ಲಿ ಪ್ರತ್ಯೇಕವಾದ ಸ್ಥಾನವಿದೆ.
ಆದರೆ, ನಿಮ್ಮ ಪ್ರಶ್ನೆಗೆ ಮುಖ್ಯವಾಗಿ ಕತೆ ಮತ್ತು ಕವಿತೆ ಎಂಬ ಎರಡೂ ಪ್ರಕಾರಗಳಲ್ಲಿ ನಾನು ಬರೆಯುತ್ತಿರುವ ಬಗ್ಗೆ. ಈ ಎರಡು ಅಭಿವ್ಯಕ್ತಿ ಮಾರ್ಗಗಳು ನನಗೆ ಯಾಕೆ ಬೇಕಾದವು ಎನ್ನುವುದು. ಕಾಫ್ಕಾನ “ಮೊದಲ ದುಃಖ” ಅಂತ ಒಂದು ಕತೆಯಿದೆ. ಇದರಲ್ಲಿ, ಈ ಟೆಂಟ್ ಸರ್ಕಸ್ಸಿನಲ್ಲಿ ಜೋಕಾಲಿಯಾಡುವ ಆಟಗಾರನೊಬ್ಬ ಒಂದು ದಿನ ಗೊಳೋ ಎಂದು ಅಳಲು ಸುರುಮಾಡುತ್ತಾನೆ. ಯಾಕೆ ಗೊತ್ತೆ? ತನಗಿರುವುದು ಒಂದೇ ಜೋಕಾಲಿ ಎಂದು. ಅದು ಇಷ್ಟೂ ದಿನ ತನಗೆ ಗೊತ್ತೇ ಆಗಲಿಲ್ಲವಲ್ಲ, ಏನನ್ಯಾಯ, ತನಗೆ ಎರಡು ಜೋಕಾಲಿಗಳು ಬೇಕು ಅನ್ನೋದು ಅವನ ಗೋಳು - ಇದೇ ಮೊದಲ ದುಃಖ. ಆಮೇಲೆ ಮಾಲಿಕರ ಕಾಲಿಗೆ ಬಿದ್ದು ಶತ ಪ್ರಯತ್ನ ಮಾಡಿ ಇನ್ನೊಂದು ಜೋಕಾಲಿ ಸಂಪಾದಿಸಿಕೊಳ್ಳುತ್ತಾನೆ. ನನಗೂ ಇಂಥ ಒಂದು ದುಖಃವೊಂದು ಇದ್ದಿರಬೇಕು! ಇದು ತಮಾಷೆಯ ಉತ್ತರವೆಂದು ನಿಮಗೆ ಅನ್ನಿಸಬಹದು; ಆದರೂ ಸತ್ಯ. ಕವಿತೆ ನನ್ನ ನಿಜವಾದ ಒಲವು. ಆದರೆ, ಒಲವೆಂದರೆ ಒಂದು ರೀತಿಯ ಉಸಿರುಗಟ್ಟಿಸುವ ಸ್ಥಿತಿಯೂ ಹೌದು. ಈ ಒಲವಿನಿಂದ ಸೃಜನಾತ್ಮಕವಾದ ಬಿಡುಗಡೆಯನ್ನು, ಅರ್ಥಾತ್ ದೂರವನ್ನು ಪಡೆಯಲು ಬಹುಶಃ ಕಥನದಲ್ಲಿ ತೊಡಗುವುದು ನನಗೆ ಅಗತ್ಯವಾಯಿತೆಂದು ಕಾಣುತ್ತದೆ. ಕಾಫ್ಕ ಮಾತ್ರ ಈ ಸರ್ಕಸ್ ಕಲಾವಿದ ಯಾಕೆ ಎರಡನೇ ಜೋಕಾಲಿಗೋಸ್ಕರ ಆಸೆ ಪಡುತ್ತಾನೆ ಎನ್ನುವುದರ ಬಗ್ಗೆ ಏನೂ ಹೇಳುವುದಿಲ್ಲ!
ಕೃತಿ : ಬದ್ಧತೆ ಎನ್ನುವುದು ಬಂಧನ
ಸಂಪಾದನೆ : ಎಂ. ಎಸ್. ಶ್ರೀರಾಮ
ಪ್ರಕಾಶನ : ಬಹುವಚನ
ಪುಟ : 202
ಬೆಲೆ: ರೂ. 360
ಮುಖಪುಟ ಚಿತ್ರ: ಮಂಜುನಾಥ ಕಲ್ಲೇದೇವರ
ವಿನ್ಯಾಸ : ಮಹಾಂತೇಶ ದೊಡ್ಡಮನಿ
ಖರೀದಿಗೆ ಸಂಪರ್ಕ : 90352 20992
ಎಂ.ಎಸ್. ಶ್ರೀರಾಮ್
ಲೇಖಕ, ಅರ್ಥಶಾಸ್ತ್ರಜ್ಞ ಪ್ರೊ. ಎಂ.ಎಸ್. ಶ್ರೀರಾಮ್ ಬೆಂಗಳೂರಿನ ಐಐಎಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಮಾಯಾದರ್ಪಣ’, ‘ಅವರವರ ಸತ್ಯ’, ‘ತೇಲ್ ಮಾಲಿಶ್’, ‘ಸಲ್ಮಾನ್ ಖಾನ್ ನ ಡಿಫಿಕಲ್ಟೀಸು’, ‘ಕನಸು ಕಟ್ಟುವ ಕಾಲ’, ‘ಶನಿವಾರ ಸಂತೆʼ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ.
ಮುದ್ರಣಕ್ಕೆ/ಬಿಡುಗಡೆಗೆ ಸಿದ್ಧವಾಗುತ್ತಿರುವ ನಿಮ್ಮ ಕೃತಿಗಳ ಆಯ್ದ ಭಾಗಗಳ ಪ್ರಕಟಣೆಗಾಗಿ ಸಂಪರ್ಕಿಸಿ team@konaru.org
ಬಿಂದುವಿನಲ್ಲಿ ಸಿಂಧು: ಅನುಸ್ವಾರವೆಂಬುವುದು - ಕೆ. ವಿ. ತಿರುಮಲೇಶರ ಅಪ್ರಕಟಿತ ಲೇಖನ
ಕೆ.ವಿ.ತಿರುಮಲೇಶರ ಕಥಾ ನಿರೂಪಣೆ ಬಹಳ ಚಂದ. ಎಷ್ಟು ಸಲೀಸಾಗಿ ಓದಿಸಿಕೊಂಡು ಹೋಗುತ್ತದೆ ಎಂದರೆ ನಮ್ಮ ಅರಿವಿಗೆ ಬಾರದ ಉಸಿರಾಟದ ಹಾಗೆ ಸಹಜವಾಗಿರುತ್ತದೆ. ಅವರ ಊರಿನ ಪಕ್ಕೀರನ ಮಾತುಕತೆಗಳ ಪ್ರಭಾವಕ್ಕೆ ಇವರ ಸಾಹಿತ್ಯ ಒಳಗಾಗಿರುವುದನ್ನು ಯಾವ ಮುಚ್ಚುಮರೆಯಿಲ್ಲದೆ ನಿರೂಪಿಸುವ ಪರಿ ಅನನ್ಯ. "ಬಹುವಚನ" ಬೇಗ ಲೋಕಾರ್ಪಣೆಗೊಳ್ಳಲಿ.