ಫ್ಲಾನರ್ (Flâneur) ಎಂಬ ಒಂದು ಫ್ರೆಂಚ್ ಪದವಿದೆ. ಸರಳ ಅರ್ಥದಲ್ಲಿ ಅದಕ್ಕೆ “ದಾರಿಹೋಕ”, “ಸುಳಿದಾಡುವವ” ಮೊದಲಾದ ಅರ್ಥಗಳಿವೆ. ಆದರೆ ಆ ಪದ ಅವುಗಳಿಗಿಂತ ಹೆಚ್ಚು ಧ್ವನಿಪೂರ್ಣವಾದುದು: ಈ ಫ್ಲಾನರ್ ಅಥವಾ “ವಿಹಾರಿ”ಗಳು ನಗರಗಳ ಹಾದಿಬೀದಿಗಳಲ್ಲಿ, ಮಾರುಕಟ್ಟೆಗಳಲ್ಲಿ, ಜನ ಕೂಡುವೆಡೆಗಳಲ್ಲಿ ಸಾವಕಾಶ ಸುಳಿದಾಡುತ್ತ ಎಲ್ಲವನ್ನೂ ಹತ್ತಿರದಿಂದ ಗಮನಿಸುತ್ತ ಆದರೆ ಯಾವುದರದೂ ಒಳಹೊಗದೆ ದೂರವುಳಿಸಿಕೊಳ್ಳುತ್ತ ತಾವು ನೋಡಿದ್ದೆಲ್ಲದರ ಬಗ್ಗೆ ವ್ಯಾಖ್ಯಾನ ಮಾಡಬಲ್ಲರು, ಸಿದ್ಧಾಂತಗಳನ್ನು ಕಟ್ಟಬಲ್ಲರು.
ಅಥವಾ ಕತೆ ಹೇಳಬಲ್ಲರು ಮತ್ತು ಕವಿತೆ ಬರೆಯಬಲ್ಲರು.

ಕೆ.ವಿ. ತಿರುಮಲೇಶರ ಪದ್ಯಗಳನ್ನು ಓದುವಾಗ ಅವರೂ ಒಬ್ಬ ಫ್ಲಾನರ್ ಆಗಿದ್ದರು ಎಂದು ಭಾಸವಾಗುತ್ತದೆ -- ಅವರೊಟ್ಟಿಗೆ 'ಅವಧ'ದಲ್ಲೊಂದು ಸುತ್ತು ಹಾಕಿ ಬಂದಾಗಲಂತೂ ಇದು ಖಾತ್ರಿಯಾಗುತ್ತದೆ! ‘ಅವಧ' ಕವಿತೆಯನ್ನೇ ಗಮನಿಸಿ:
ಲಖನೋವಿನಲಿ ನಾನು ಲಖನವಿ ಕುರ್ತ ಧರಿಸಿದೆನು
ಅತಿ ತೆಳ್ಳಗಿನ ಒಂದು ಜತೆ ಚಪ್ಪಲಿಯ ಮೆಟ್ಟಿದೆನು
ಮತ್ತೆ ಗಡ್ಡವೂ ಬೆಳೆದಿತ್ತು ಅಲ್ಲಲ್ಲಿ ಬಿಳಿಯಾಗಿತ್ತು
ಇಡಿಯ ಹಜರತ್ಗಂಜ್ ನನ್ನ ಕಾಯುವಂತಿತ್ತು
ಮೆಟ್ಟು ಮೆಟ್ಟಿಲಿಗೆ ಅಂಗಡಿ ಬಾಗಿಲುಗಳು ತೆರೆದು
ಬೀಸುಗಾಳಿಗೆ ಮುಖದ ಅವಗುಂಠನವೂ ಸರಿದು
ಮದಿರೆಯ ಮದಿರಾಕ್ಷಿಯ ಅಫಘಾನದ ದ್ರಾಕ್ಷಿಯೆ
ಎಲ್ಲಿಂದ ಬಂದ ಕಾಣಿಕೆಯಿದು ಹೇಳೆಲೆ ಭಕ್ಷಿಯೆ
ಯಾರೀತ ಗಡ್ಡಕ್ಕೆ ಬಂಗಾರದ ಬಣ್ಣ ಹಚ್ಚಿದವನು
ಹಣೆಯಲ್ಲಿ ನಿತ್ಯವೂ ನಮಾಜಿನ ಹಚ್ಚೆಯುಳ್ಳವನು
ಬಡಾ ಇಮಾಮನೋ ಅಥವ ಛೋಟಾ ಇಮಾಮನೊ
ಅಥವ ಅರಬನಿಗೆ ಹೆಣ್ಣು ಕೊಡಲಿರುವ ಮಾಮನೊ
ಏನನರಸುವನಿವನು ಇಂಥ ಇಳಿಹೊತ್ತಿನಲ್ಲಿ
ಅರಸುವನೆ ಅಳಿದ ಅರಸೊತ್ತಿಗೆಯ ನೆನಪುಗಳ
ಅಥವ ಹೊತ್ತಾದರೂ ಮನೆಗೆ ಬರದಿರುವ ಮಗಳ
(ಅವಧ, ಅವಧ, ಪುಟ 109)ಹೀಗೆ ಎದುರಿಗೆ ಕಂಡವರ ರಹಸ್ಯಗಳ ಬಗೆಯುತ್ತ, ಕಥೆ ಕಟ್ಟುತ್ತ ಸವಾರಿ ಮುಂದುವರಿಯುತ್ತದೆ. ಅದು ಮುಂದೆ ತನ್ನದೇ ಮನದ ಸಿಕ್ಕು ದಾರಿಗಳ ಒಳಹೊಕ್ಕು, ತಾನಾರು, ತನ್ನ ಕಾಲಮಾನವೇನು, ತಾನೀಗ ಮೆಟ್ಟಿ ನಿಂತಿರುವ ನೆಲ ಹಿಂದೆ ಯಾರ ಸೊತ್ತಾಗಿತ್ತು ಎಂಬ ಜಿಜ್ಞಾಸೆಗೆ ಬೀಳುತ್ತಲೇ ಹಿಮ್ಮುಖವಾಗಿ ನಡೆಯುತ್ತ ಎಲ್ಲವನು ಬಲ್ಲ ಸುಲ್ತಾನ ಆಸಿಫ್ ಉದ್ದೌಲನ ಅರಮನೆಯ ಏಕಾಂತವನ್ನು ಪ್ರವೇಶಿಸುತ್ತದೆ. ಆದರೆ, ಅವನೀಗ ಅಲ್ಲೆಲ್ಲಿ? ಅವನಿರುವುದು ಇಮಾಂ ಬಾರಾದ ಗೋರಿಯಲ್ಲಿ. ಹುಗಿದ ಗೋರಿಯ ತಳದಿಂದಲೇ ಎಲ್ಲವನ್ನೂ ನೋಡುತ್ತಿದ್ದಾನೆ, ಕವಿಯಂತೆಯೇ: ಪೀಳಿಗೆಯಿಂದ ಪೀಳಿಗೆಗೆ ಒಂದು ಕನಸಿನ ಬೆನ್ನು ಹತ್ತಿ ಹೊರಟ ಜನರನ್ನು; ಶತಮಾನಗಳಿಂದ ಇನ್ನೂ ಅಲ್ಲಿ ಸುಳಿದಾಡುತ್ತಿರುವ ನಿಟ್ಟುಸಿರನ್ನು.
All poets are keen observers. ಆದರೆ ತಿರುಮಲೇಶರಿಗೆ ಫ್ಲಾನರ್ ಎಂದದ್ದಕ್ಕೆ ವಿಶೇಷ ಕಾರಣವಿದೆ. ಅವರು ಎದುರಾದ ಯಾವುದರ ಬಗ್ಗೆಯೂ ಹಾಗೆಯೇ ಗ್ರಹಿಸಿ ಹೀಗೆಯೇ ಪದ್ಯ ಕಟ್ಟಬಲ್ಲರಾಗಿದ್ದರೇನೋ. ಅವರ ಪದ್ಯಗಳನ್ನು ಓದುತ್ತಿದ್ದಾಗ ‘ಆಹಾ! ಕವಿತೆ ಎಷ್ಟೊಂದು ಸುಲಭ, ಅದೆಷ್ಟು ಸಹಜ’ ಎನ್ನಿಸುತ್ತದೆ. ಕವಿತೆ ಬರೆಯುವುದು ಸುಲಭ ಅಂತಲ್ಲ. ಅದು ಕಡುಕಷ್ಟ. ಆದರೆ ಸದಾ ಕವಿತೆಯನ್ನೇ ಜೀವಿಸುವವರಿಗೆ ಅವು ಎಲ್ಲೆಲ್ಲೂ ದಕ್ಕುತ್ತವೆ ಮತ್ತು ಸಹಜವೆಂಬಂತೆ ರೂಪತಳೆಯುತ್ತವೆ.
‘ಅವಧ’ ಒಂದು ಕವನ ಸಂಕಲನವಷ್ಟೇ ಅಲ್ಲ, ಅದೊಂದು ಪದ್ಯಗಳ ಸಂತೆ. ಅವರೇ ಹೇಳುವಂತೆ —
ನನ್ನ ಸಂಕಲನವೆಂದರೆ ಸಂತೆ
ಅದರ ಕವಿತೆಗಳೆಂದರೆ ಅಂಗಡಿಯ ಸಾಲುಗಳು
ಅಲ್ಲಿ ಜನಜಂಗುಳಿ ಜಾತ್ರೆ ಪಾತ್ರೆಪಗಡಿಗಳು
ಮಣಿಸರಕಿನ ಮಾಲೆಗಳು ಬಿದ್ದರೆ ಒಡೆಯುತ್ತವೆ
ಅಲ್ಲಿಯ ತನಕ ಬದುಕಿಕೊಳ್ಳುತ್ತವೆ
(ನನ್ನ ಸಂಕಲನ, ಅವಧ, ಪುಟ 70)ಈ ‘ಪದ್ಯಗಳ ಸಂತೆ’ಯಲ್ಲಿ ಅಕ್ಷರಶಃ ಒಂದು ಸಂತೆಯೇ ಇದೆ. ಇಡೀ ಪುಸ್ತಕವೇ ಒಂದು ಸಂತೆಯಾದಾಗ, ಅದರೊಳಗೆ ಸುಳಿದಾಡುವ ಕವಿ ರೆಡಿಂಗ್ ಪಟ್ಟಣದ ಶನಿವಾರ ಸಂತೆಯಲ್ಲಿ ಕಳೆದುಹೋಗುವುದು ಸಹಜವೇ. ಹಾಗಾದಾಗ, ತೀರ ನಮ್ಮ ಕಣ್ಣೆದುರೇ ಇದ್ದರೂ ನಾವು ಗಮನಿಸದೇ ಬಿಟ್ಟ ತೀರಾ ಸಾಮಾನ್ಯ ಸಂಗತಿಗಳೂ ಕವಿತೆಗೆ ವಸ್ತುವಾಗಿ ಎತ್ತರಕ್ಕೇರುತ್ತವೆ.
ಕ್ಯಾಬೇಜು ಮಾರಲು ಕೂತ ಗಂಡಸು
ಕ್ಯಾಬೇಜಿನಂತೆ
ಕಾಲಿಫ್ಲವರು ಮಾರುವ ಹೆಂಗಸು
ಕಾಲಿಫ್ಲವರಿನಂತೆ
ಇದ್ದಾರೆಯೇ ಇಲ್ಲವೆ—
(ಶನಿವಾರ ಸಂತೆ: ರೆಡಿಂಗ್, ಅವಧ, 101)ಇವೇ ಮೊದಲಾದ ಪ್ರಶ್ನೆಗಳು ಎಲ್ಲರಿಗೂ ಬರುವುದಿಲ್ಲವಲ್ಲ. ಅದಕ್ಕೆ ಬೇಕಾಗುವುದು ಸೂಕ್ಷ್ಮವಾದ ಅವಲೋಕನ; ಒಂದು ಮೊನಚಾದ ದಿಟ್ಟಿ. ಅತ್ಯಂತ ಜಾಗೃತ ಗಂಡುದಿಟ್ಟಿಯೇ ಅದು (male gaze)! ಹೀಗಾಗಿಯೇ ರೆಡಿಂಗ್ನ ಶನಿವಾರ ಸಂತೆಯಲ್ಲಿ ಸುಳಿದಾಡುವವನಿಗೆ ಕುತೂಹಲವಿರುವುದು ಕಚಕಚನೆ ಕುರಿಮಾಂಸ ಕಡಿದು ಕೊಡುತ್ತಿರುವ ಹುಡುಗನೂ ಹೂವಿನ ರಾಸಿಯ ಹಿಂದೆ ತಲೆ ಮರೆಸಿದ ಹುಡುಗಿಯೂ ಪ್ರೇಮಿಗಳು ಅಹುದೇ ಅಲ್ಲವೇ ಎಂದು; ಬಟಾಟೆ ಕೊಳ್ಳುತ್ತಿರುವ ಹೆಂಗಸಿನ ಹಲ್ಲು, ಯಾರಿಗೋ ಕಾಯುತ್ತಿರುವ ತರುಣಿಯ ಬಲಿತ ಮೊಲೆ ನಿಜವೇ ಸುಳ್ಳೇ ಎಂದು.
ಯಾರು ಮರೆತುಹೋದರು ಕಲ್ಲ ಬೆಂಚಿನ ಮೇಲೆ ಕೈಚೀಲ? ಬದಿಯಲ್ಲೆ ಬಣ್ಣದ ಕೊಡೆ! ಯಾವ ಪಲ್ಲಂಗದಲ್ಲಿ ಸಡಿಲಿತು ಕಠಿಣವಾಗಿ ತೋರಿದ್ದ ತೊಡೆ? (ಹಿಂದಿನದೇ) ಮೊಟ್ಟೆಗಳಿವೆ ಉಪಮೆಗಳಂತೆ ಪ್ರತಿಮೆಗಳಂತಿವೆ ಹೊಟ್ಟೆಗಳು ಅರ್ಥವಿಸ್ತಾರ ಹೆಚ್ಚಿಸುವುದಕ್ಕೆ ವಿಸ್ತೃತ ಕುಂಡೆಯ ಹೆಣ್ಣುಗಳು (ಎಲ್ಲವನ್ನೂ ನೋಡುವುವು ಕವಿಯ ಜಾಗೃತ ಕಣ್ಣುಗಳು) (ಮಂಡಿಯಲ್ಲಿ ಕವಿ, ಅವಧ, ಪುಟ 88)
ರೆಡಿಂಗ್ನಿಂದ ಬ್ರೌಟನ್ವರೆಗೆ ಶಾಂತಿನಾಥ ದೇಸಾಯರೊಂದಿಗಿನ ಯಾತ್ರೆಯನ್ನು ನೆನಪಿಸಿಕೊಂಡಂಥ ಪದ್ಯದುದ್ದಕ್ಕೂ (ಕವಿತೆ: ಶಾಂತಿನಾಥ ದೇಸಾಯಿ ಅವರಿಗೆ, ಅವಧ, ಪುಟ. ೮೯) ಇರುವುದು ಇದೇ ಜಾಗೃತ ಕಣ್ಣುಗಳು — ಇಬ್ಬರವೂ! ಈ ಗಂಡುದಿಟ್ಟಿ ಇನ್ನೊಂದು ರೂಪದಲ್ಲಿ ಪ್ರಕಟವಾಗುವುದು ಅವರ ‘ರವಿವರ್ಮನ ಹೆಂಗಸರು’ ಪದ್ಯದಲ್ಲಿ. ಅಲ್ಲಿ ವಿಮರ್ಶಕರ critical gaze ಕೂಡ ಬಂದು ಸೇರಿಕೊಳ್ಳುತ್ತದೆ. ಆದರೆ, ಆಗ ಕವಿ ಆ ಹೆಂಗಸರ ಪರ ವಕಾಲತ್ತು ನಡೆಸುತ್ತಾನೆ.
ದಪ್ಪವೆನ್ನುವರು ವಿಮರ್ಶಕರು ನಮ್ಮನ್ನು ಸ್ವಲ್ಪ ದುಂಡಗಿದ್ದೆವು ನಿಜ. ಆ ಕಾಲದ ಮಂದಿಗೆ ರುಚಿಗಳೇ ಬೇರೆ ನೋಡಿ, ಇನ್ನು ನಮ್ಮ ಮೊಲೆ ರಬ್ಬರಿನ ಚೆಂಡುಗಳಂತೆ ಖಂಡಿತ ಇರಲಿಲ್ಲ [...] ಆದರೂ ಮೊದ್ದುಗಳೇನಾಗಿರಲಿಲ್ಲ ಬಿಡಿ ನಾವು ನಿಮಗೇನು ಗೊತ್ತು ನಿಜಕ್ಕೂ ನಮ್ಮ ಎದೆ— ಯೊಳಗಿನದು? ಚಿತ್ರಿಸಲು ಇದ್ದುದನಿದ್ದ ಹಾಗೆ ಯಾತಕೆ ಬೇಕು ರಂಗು ರೇಖೆಗಳ ಕಲ್ಪ?
ಈ ಕವಿಯದ್ದು ಕುಳಿತಲ್ಲಿ ಕೂರದ, ಒಂದು ವಸ್ತುವಿನಿಂದ ಇನ್ನೊಂದು ವಸ್ತುವಿಗೆ ನೆಗೆಯುತ್ತಲೇ ಇರುವ ಹುಚ್ಚು ಮನಸ್ಸು. ಅದು “ತಥಾಗತನ ಧ್ಯಾನದಲ್ಲಿ ಕೂಡ / ಯೋನಿ ಶಿಶ್ನಗಳ ಕುರಿತು / ಯೋಚಿಸುತ್ತದೆ.”
ಕಾಣುವ ಸಂಗತಿಗಳನ್ನು
ಕಡೆಗಣಿಸುತ್ತದೆ
ಕಾಣದ ಸಂಗತಿಗಳನ್ನು
ಕಂಡಿದ್ದೇನೆಂದು
ಭ್ರಮಿಸುತ್ತದೆ
ಸರಿ ಸರಿ ಯೋಚಿಸಿದುದನೆಲ್ಲ
ಬರೆಯಬೇಕಾಗಿಲ್ಲ
ಎಲ್ಲ ಮುಚ್ಚುಮರೆಗಳನೂ
ತೆರೆದು ಮುಖಕ್ಕೆ
ಹಿಡಿಯಬೇಕಾಗಿಲ್ಲ
(ಕವಿಯ ಹುಚ್ಚು ಮನಸು, ಅವಧ, ಪುಟ 74)ಅದರ ಬದಲು ಉಚ್ಚವಾದುನ್ನಷ್ಟೇ ಹೇಳಿದರೆ socially acceptable ಆದುದನ್ನಷ್ಟೇ ಹೇಳಿದರೆ "ಒಂದೊಂದು ವಿಚಾರಗಳನ್ನೂ / ಚಿನ್ನದ ನೀರಿನಲ್ಲಿ ಅದ್ದಿ ತೆಗೆ”ದರೆ ಏನಾದೀತು?
ಜನರು ಆದರಿಸುವರು ಮಹಾ
ದಾರ್ಶನಿಕನೆಂದು ಹೊಗಳುವರು
ಎಲ್ಲರೂ ಕರೆಯುವರು
ಯಾರೂ ತಮ್ಮ ಹೆಂಡಂದಿರನ್ನು
ನಿನ್ನ ಜೊತೆ ಬಿಡಲು ಹೆದರರು
(ಹಿಂದಿನದೇ, ಪುಟ 75)ಆದರೆ ಈ ಕವಿ ಚತುರ. ಕೀಟಲೆಯವನು ಕೂಡ. ಅವನಿಗೆ ಅದು ಬೇಕಿಲ್ಲ. He does not want to take himself too seriously. And in his defence — ಕವಿಯಾದ ತಪ್ಪಿಗೆ ಅವನು ಸದಾ ಗಂಭೀರನಾಗಿ ಚಿಂತಿಸುತ್ತಲಿರಬೇಕಿಲ್ಲವಲ್ಲ. ಕವಿಯಿರುವುದು ಕೂಡ ಎಲ್ಲರ ಹಾಗೆಯೇ —
ಮಸಾಲೆ ಕಡಲೆ ಜಗಿಯುತ್ತ
ಸೌತೆ ಚೂರು ಮೆಲ್ಲುತ್ತ
ಕಾಲೆಳೆಯುತ್ತ ಉಸುಕಿನಲ್ಲಿ
ಮೂರು ಸಂಜೆಯ ಬೆಳಕಿನಲ್ಲಿ
ಕವಿಯಿದ್ದಾನೆ ಎಲ್ಲರ ಹಾಗೆ
ಕವಿಗಳಿರೋದೇ ಹಾಗೆ
ಉಪ್ಪಿನ ಹವೆಗೆ ಒಪ್ಪಿಸಿಕೊಂಡು
ಭಿಕ್ಷುಕರಿಂದ ತಪ್ಪಿಸಿಕೊಂಡು
ಕಡಲಿನ ರಾಗವ ಹಿಡಿಯುತ್ತ
ಬಡವರಿಗಾಗಿ ಮರುಗುತ್ತ
ಕವಿಯಿದ್ದಾನೆ ಎಲ್ಲರ ಹಾಗೆ
ಕವಿಗಳಿರೋದೇ ಹಾಗೆ
(ಮರೀನಾದಲ್ಲಿ ಕವಿ, ಅವಧ, ಪುಟ 191)ಇದೆಲ್ಲವನ್ನೂ ಮೀರಿ ತಿರುಮಲೇಶರು ವಿಮರ್ಶಕರನ್ನಂತೂ (ಒಮ್ಮೊಮ್ಮೆ ಓದುಗರನ್ನು ಕೂಡ) ದೂರ ತಳ್ಳಿ ತಮ್ಮದೇ ಲಹರಿಯಲ್ಲಿ ಬರೆಯುತ್ತ ಹೋಗುತ್ತಾರೆ. ‘ವಾನ್ಗಾಫ್ನ ಬೂಟುಗಳು’ ಕವಿತೆಯನ್ನು ತಿರುಮಲೇಶರು ತಮ್ಮ ಕಾವ್ಯತತ್ವದ ಸಮರ್ಥನೆಯಾಗಿ ಬಳಸಿಕೊಳ್ಳುತ್ತಾರೆ.
ವಿಮರ್ಶಕರೆಂದರು—
ಛೇ! ಛೇ!
ಇಂಥವನ್ನೆಲ್ಲ ಚಿತ್ರಿಸುತ್ತಾರೆಯೇ
ಯಾರಾದರೂ!
ಇಕಾರಸ್ನ ಮರಣ
ಮಹಾ ಪ್ರಳಯ
ಕ್ರೈಸ್ತನ ಪುನರುತ್ಥಾನ
ಕಲೆಯ ವಸ್ತುಗಳೆಂದು ಅವು!
(ವಾನ್ಗಾಫ್ನ ಬೂಟುಗಳು, ಅವಧ, ಪುಟ 104)ಆದರೆ, ವ್ಯಾನ್ ಗೋ ಚಿತ್ರಿಸಿದ್ದು ಒಂದು ಜೊತೆ ಹಳೆಯ ಬೂಟುಗಳನ್ನು. ಹತಾಶರಾದ ವಿಮರ್ಶಕರೀಗ ಆ ಬೂಟುಗಳ ಕೆಳಗಿದ್ದಾರಂತೆ! ಪರೋಕ್ಷವಾಗಿ ಇದು ತಿರುಮಲೇಶರ ಕಾವ್ಯ ಮೀಮಾಂಸೆಯೂ ಹೌದು.
ಘನವಾದ ವಸ್ತುಗಳನ್ನು ಕೈಬಿಟ್ಟು — ಅಥವಾ ಅವುಗಳ ಜೊತೆಜೊತೆಗೇ — ನಿತ್ಯಗಟ್ಟಳೆಯ ಸಂಗತಿಗಳನ್ನು ಕಾವ್ಯದ ವಸ್ತುಗಳನ್ನಾಗಿಸುವುದರಲ್ಲೇ ತಿರುಮಲೇಶರ ವಿಶೇಷವಿರುವುದು. ಅವರು ಕವಿತೆಯನ್ನು ಎಲ್ಲಿಂದ ಎಲ್ಲಿಗೆ ಬೇಕಾದರೂ ಒಯ್ಯಬಲ್ಲರು. ಇಲ್ಲಿರುವ 166 ಪದ್ಯಗಳ ವಿಷಯ ವೈವಿಧ್ಯ ಬೆರಗು ಹುಟ್ಟಿಸುವಂಥದ್ದು. ಕೆಲವು ಗಂಭೀರ ಚಿಂತನೆಗಳಾದರೆ, ಇನ್ನು ಕೆಲವು ತೀರಾ ಮೋಜಿನ ಪ್ರಸಂಗಗಳಂತಿವೆ; ಕೆಲವು ಮಕ್ಕಳ ಪದ್ಯಗಳಂತೆ ಕಂಡರೂ ದೊಡ್ಡವರು ಓದಬೇಕಾದುವಾದರೆ, ಇನ್ನು ಕೆಲವು ದೊಡ್ಡವರ ಪದ್ಯಗಳಂತೆ ಪೋಸುಕೊಟ್ಟರೂ ಮಕ್ಕಳ ಮುಗ್ಧತೆಯನ್ನು ಕಾಯ್ದುಕೊಂಡವು. ಪದಗಳ ಮೇಲೆಯೇ ಸವಾರಿ ಮಾಡುವ wordplayಗಳಂತೂ ಇಲ್ಲಿ ಯಥೇಚ್ಛ. ತಿರುಮಲೇಶರನ್ನು ಓದುವಾಗ ಅನ್ನಿಸುವುದೇ ಇದು: ಜಗತ್ತಿನ ಯಾವುದೇ ಸಂಗತಿಯೂ ಕವಿತೆಯಾಗಬಲ್ಲದು. ಅಲ್ಲದೆಯೇ ಅವರ ಪದ್ಯಗಳು ಹಲವು ಬಾರಿ ಪದ್ಯರೂಪದಲ್ಲಿರುವ ಮಿನಿ ಪ್ರಬಂಧಗಳೇನೋ ಎನ್ನುವಷ್ಟು ಸಾಂದ್ರವಾಗಿರುತ್ತವೆ. ಇವುಗಳಲ್ಲಿ ಎಲ್ಲವೂ ಒಳ್ಳೆಯ ಕವಿತೆಗಳಾಗುತ್ತವೆಂದಲ್ಲ. ಬಹಳಷ್ಟು ಆಗಿಲ್ಲ ಕೂಡ. ಓದುತ್ತ ಹೋದಂತೆ ಅದು ಅವರಿಗೂ ಗೊತ್ತಿದ್ದಂತೆನ್ನಿಸುತ್ತದೆ. ಅವರು ಅದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲವೆಂದೂ ಭಾಸವಾಗುತ್ತದೆ.
ಕವಿತೆಯ ವಸ್ತುವಿನಂತೆ ಅವರ ಗ್ರಹಿಕೆಯ ವಿಧಾನವೂ ಅನನ್ಯ. ಕವಿತೆ ಕೇವಲ ಭಾವನೆಯಲ್ಲ, ಅದೊಂದು ಬೌದ್ಧಿಕ ಆಟವೂ ಹೌದು. ಗಣಿತದ ಒಂದು ಶಾಖೆಯಾದ Discrete Mathematicsನಲ್ಲಿ The Pigeonhole Principle ಎಂಬ ಬಹಳ ಹಳೆಯ ತತ್ವವಿದೆ. ಇದನ್ನು ಓದಿದಾಗ ನನಗೆ ಕೂಡಲೇ ನೆನಪಾದದ್ದು ಅದು. ಹಾಗೆಯೇ ‘ನೂರು ಮಂದಿ ಮನುಷ್ಯರು’ ಪದ್ಯದಲ್ಲಿ ದ್ವೀಪದಲ್ಲಿ ಸಿಕ್ಕಿಬಿದ್ದ ನೂರು ಜನರು ಅಲ್ಲಿದ್ದ ಸಸ್ಯ, ಪ್ರಾಣಿ ಎಲ್ಲವನ್ನೂ ತಿಂದುಮುಗಿಸಿಯಾದ ಅನಂತರ ತಮ್ಮಲ್ಲೇ ಪ್ರತಿ ವಾರ ಒಬ್ಬೊಬ್ಬರನ್ನು ಆಯ್ದುಕೊಂಡು ತಿನ್ನುತ್ತ ಹೋಗುತ್ತಾರೆ. ಕೊನೆಗುಳಿದವನೊಬ್ಬ. ಅವನು ತನ್ನನ್ನೇ ತಿನ್ನುವ ಪರಿಯನ್ನು ಬಣ್ಣಿಸುತ್ತಾರೆ. ಇಡೀ ಪದ್ಯ ನಾನು ಹಿಂದೊಮ್ಮೆ ಅಭ್ಯಾಸ ಮಾಡಿದ್ದ ಒಂದು ತರ್ಕದ ಒಗಟಿನಂತೆ ಭಾಸವಾಗುತ್ತದೆ.
ಯಕ್ಷಗಳು ಹನ್ನೆರಡು
ತಾಳೆಮರ ಹನ್ನೊಂದು
ಒಂದು ಯಕ್ಷಿಗೆ ಮರವಿಲ್ಲ
ಆಹಾ! ಒಂದು ಯಕ್ಷಿಗೆ ಮರವಿಲ್ಲ
(ಯಕ್ಷಗಳೂ ತಾಳೆಮರಗಳೂ, ಅವಧ, ಪುಟ 42)ಇಂಥ ಬೌದ್ಧಿಕ ಕಸರತ್ತಿನ ಜೊತೆಜೊತೆಗೇ ಅವರ ಅಗಾಧವಾದ ಓದಿನ ವಿಸ್ತಾರವೂ ಕವಿತೆಗಳಲ್ಲಿ ಇಣುಕುತ್ತದೆ. ‘ಆನೆಗಳು ಎರಡು ವಿಧ’ ಎಂಬ ಪದ್ಯದಲ್ಲಿ ನೀರಾನೆಗಳು ನೆಲಕ್ಕೆ ಬಂದು ಕಾಡಾನೆಗಳಾಗಿ ವಿಕಾಸವಾಗುವ ಚಿತ್ರಣ, ಇಟಾಲೊ ಕಾಲ್ವಿನೋ (Italo Calvino) ಬರೆದ The Aquatic Uncle ಕಥೆಯನ್ನು ನೆನಪಿಸುತ್ತದೆ. ಆ ಕಥೆಯಲ್ಲಿ, ಎಲ್ಲರೂ ನೆಲದ ಮೇಲೆ ಬದುಕಲು ವಿಕಾಸವಾಗುತ್ತಿದ್ದರೂ, ಮುದಿ ಚಿಕ್ಕಪ್ಪನೊಬ್ಬ (Uncle) ಮಾತ್ರ ನೀರಿನಿಂದ ಹೊರಬರಲು ನಿರಾಕರಿಸುತ್ತಾನೆ. ತಿರುಮಲೇಶರ ಪದ್ಯದಲ್ಲೂ ಅಷ್ಟೇ, “ಇತ್ತ ನೀರಾನೆಗಳು ಜೀವವಿಕಾಸವನ್ನೇ ಧಿಕ್ಕರಿಸಿವೆಯೋ ಮರೆತಿವೆಯೋ ಹೇಳುವುದು ಹೇಗೆ?” ಎಂಬ ಪ್ರಶ್ನೆ ಕಾಡುತ್ತದೆ.
ಇವುಗಳ ಬಗ್ಗೆ ಅರಿವಿಲ್ಲದ ಓದುಗರಿಗೂ ಈ ಪದ್ಯಗಳು ಸ್ವಾರಸ್ಯಕರವಾಗಿಯೇ ಇವೆ. ಆದರೆ ಆ ಸಂಬಂಧಗಳ ಸಾಧ್ಯತೆಯು ಅವಕ್ಕೆ ಇನ್ನೊಂದು ಗ್ರಹಿಕೆಯ ಆಯಾಮವನ್ನು ಒದಗಿಸುತ್ತವೆ.
‘ಹೆಸರು ತಿಳಿಯದ ವಸ್ತುಗಳು’ ಪದ್ಯದಲ್ಲಿ ಸಾರ್ತ್ರ್ ಎದುರಾಗುತ್ತಾನೆ
ಸಾರ್ತ್ರ್ ತನ್ನ ಆತ್ಮಕತೆಯಲ್ಲಿ ಹೀಗೆನ್ನುತ್ತಾನೆ ವಿಶ್ವದ ವಸ್ತುಗಳೆಲ್ಲ ಹೆಸರು ಬೇಡುತ್ತ ನನ್ನ ಬಳಿ ಬಂದಂತಾಯಿತು. ಹೆಸರಿಡುವ ಮೂಲಕ ಅವನ್ನೆಲ್ಲ ನನ್ನದಾಗಿಸಿದೆ ಅಂದುಕೊಂಡಿದ್ದೇನೆ. ಈ ಭ್ರಮೆಯೊಂದು ಇಲ್ಲದಿರುತ್ತಿದ್ದರೆ ನಾನು ಬರೆಯುತ್ತಿರಲಿಲ್ಲ.
ವಿಶ್ವದ ಸಕಲ ವಸ್ತುಗಳಿಗೂ ಹೆಸರಿಟ್ಟು ಯಜಮಾನಿಕೆ ಸ್ಥಾಪಿಸುವ ಮನುಷ್ಯನ ಹಪಾಹಪಿಯ ವಿಡಂಬನೆ ಇಲ್ಲಿದೆ. ವಿಶ್ವದ ಎಲ್ಲ ವಸ್ತುಗಳನ್ನು ತನ್ನದಾಗಿಸಿಕೊಂಡ ಮೇಲೆ ಇನ್ನುಳಿದದ್ದು ಹೆಸರಿಲ್ಲದ ಕಾಡು ಹೂಗಳು. ಅವನ್ನು ತನ್ನದಾಗಿಸಿಕೊಳ್ಳುವುದಾದರೂ ಹೇಗೆ? ಏಕೆಂದರೆ, “ರಾತ್ರಿ ಮಲಗಿ ಏಳುವ ಹೊತ್ತಿಗೆ / ಅವು ಉದುರಿಹೋಗಿರುತ್ತವೆ.”
ಇದೆಲ್ಲದರ ನಡುವೆ, ಈ ಮನುಷ್ಯರ ಗದ್ದಲ, ಕವಿಯ ತರ್ಕ, ಗಣಿತಗಳಿಂದಾಚೆಗೆ ಒಂದು ನಿರಾಳ ಭಾವವೂ ಇಲ್ಲಿನ ಹಲವು ಕವನಗಳಲ್ಲಿದೆ. ‘ಪ್ರೀತಿಸುವ’ ಪದ್ಯವನ್ನು ನೋಡೋಣ.
ಪ್ರೀತಿಸುವ ಮರಗಳನ್ನು ಅವು ಒಂಟಿಯಾಗಿರುತ್ತವೆ ಬೀಸುವ ಗಾಳಿಯ ಜತೆಯಷ್ಟೆ ಮಾತನಾಡುತ್ತವೆ
ಮೂಕ ಸಾಕ್ಷಿಗಳಂತೆ ನಿಂತ ಈ ಮರಗಳನ್ನು ನೋಡಿ. ಫ್ಲಾನರ್ ಆದ ಕವಿಯೋ ಊರೂರು ಅಲೆಯುತ್ತಾನೆ, ಆದರೆ ಅವುಗಳ ಗತಿಯೇನು?
ಮರಗಳು ಪಾಪ ಎಲ್ಲಿಗೂ ಹೋಗುವುದಿಲ್ಲ ಅವು ಹುಟ್ಟಿದಲ್ಲೇ ಬೆಳೆಯುತ್ತವೆ ಯಾವ ದೇಶವನ್ನೂ ಸುತ್ತುವುದಿಲ್ಲ ಯಾವ ನದಿಗಳನ್ನೂ ದಾಟುವುದಿಲ್ಲ ಅವು ಇದ್ದಲ್ಲೆ ಇರುತ್ತವೆ ಮೌನವಾಗಿರುತ್ತವೆ ಅವಕ್ಕೆ ಸುದ್ದಿಗಳು ತಿಳಿಯುವ ಬಗೆ ಹೇಗೆ?
ಅವು ಎಲ್ಲಿಗೂ ಹೋಗದಿದ್ದರೂ ವಸಂತದಲ್ಲಿ ಮರಳಿ ಬರುವ ಹಕ್ಕಿಗಳು ಅವಕ್ಕೆ ದೂರದೇಶದ ಸುದ್ದಿಗಳನ್ನು ತಂದೊಪ್ಪಿಸುವುವು. ಆಗ ಅವು ಮತ್ತೆ ಮೌನ ಮುರಿಯುವುವು. ಇಲ್ಲಿ ಯಾವ ತರ್ಕವೂ ಇಲ್ಲ, ಕೇವಲ ‘ಇರುವಿಕೆ’ ಮಾತ್ರ ಇದೆ. ಇಂಥ ಒಂಟಿತನವನ್ನು ಅರಿಯಬಲ್ಲ ಇನ್ನೊಂದು ಜೀವಿಯೆಂದರೆ ಬೆಕ್ಕು. ಅದು ತಿರುಮಲೇಶರ ಕವಿತೆಗಳಲ್ಲಿ ಮತ್ತೆಮತ್ತೆ ಬರುವಂಥದ್ದು. ಅವರ ಪ್ರಸಿದ್ಧ ‘ಮುಖಾಮುಖಿ’ ಪದ್ಯದಲ್ಲಿ ಬರುವ ಬೆಕ್ಕಿನಂತೆಯೇ ಇಲ್ಲಿಯೂ ‘ಮಾಳಿಗೆ ಮೆಟ್ಟಿಲಲ್ಲೊಂದು ಬೆಕ್ಕು’ ಪ್ರತ್ಯಕ್ಷವಾಗುತ್ತದೆ.
ಮಾಳಿಗೆ ಮೆಟ್ಟಿಲಲ್ಲೊಂದು ಬೆಕ್ಕು ಮೇಲೆ ಹೋಗಲೊ ಕೆಳಗೆ ಹೋಗಲೊ ಎಂದು ತಿಳಿಯದ ಗಾಢಾಲೋಚನೆಯಲ್ಲಿ ಸಿಕ್ಕು ಬಂದೆನೆಲ್ಲಿಂದ ಹೋಗುವೆನೆಲ್ಲಿಗೆ ಇಲ್ಲಿರುವೆ ಯಾಕೆ—ಒಂದೂ ಗೊತ್ತಿರದೆ ನೋಡುವುದು ಮೇಲೆ ನೋಡುವುದು ಕೆಳಗೆ ಯಾವುದು ನಿಜ ಯಾವುದು ಸುಳ್ಳು ಮೇಲಿನಂತೆಯೇ ಇದೆ ಕೆಳಗೆ ಕೂಡ ಯಾವ ರೂಪಕೆ ಯಾವ ನೆರಳು?
ಒಂದು ಬಗೆಯಲ್ಲಿ ಇದೂ ಒಂದು ರಾಜಕೀಯ ಆಯ್ಕೆ. ಮೇಲೆ ಹೋಗಬೇಕೋ ಕೆಳಗೆ ಹೋಗಬೇಕೋ, ರಾಜಮಾರ್ಗ ಹಿಡಿಯಬೇಕೋ ಒಳಮಾರ್ಗವೋ ಎಂಬ ಜಿಜ್ಞಾಸೆ. ರಾಜಮಾರ್ಗದ ಗದ್ದಲದಿಂದ ದೂರವಾಗಿ, ಅ-ರಾಜಕೀಯವಾದ (apolitical) ಒಳಮಾರ್ಗದಲ್ಲಿ ಸಂಚರಿಸುತ್ತ ಕೆರೆಗಳನ್ನು, ಕಪ್ಪೆಗಳನ್ನು ಕಂಡ ಮೇಲೆ ಇನ್ನೆಂದಿಗೂ ರಾಜಮಾರ್ಗವನ್ನು ಸೇರದವನಾಗಿದ್ದೇನೆ ಎಂದು ನಿರ್ಣಯಿಸಿದರೂ, ರಾಜಕೀಯ ತಪ್ಪಿದ್ದಲ್ಲವಲ್ಲ. ಅದು ಗ್ರಾಮಗಳಲ್ಲಾಗುತ್ತಿರುವ ಪಲ್ಲಟದಲ್ಲೂ ಕಾಣುತ್ತದೆ. ಇಂದಿರಾ ಗಾಂಧಿಯ ಹತ್ಯೆಯ ಸಂದರ್ಭದಲ್ಲಿಯೂ ಇದೆ. ಹೈದರಾಬಾದಿನ ಚಿಂತಲ್ ಬಸ್ತಿಯಲ್ಲಿ ನಡೆಯುವ ಚುನಾವಣಾ ಪ್ರಚಾರದಲ್ಲೂ ಇದೆ.
ಇಂದಿನ ಕಾಲಕ್ಕಂತೂ, ಅವರ ‘ಮಂಡೂಕ ರಾಜ್ಯ’ ಕವಿತೆ ಹೇಳತೀರದಷ್ಟು ಪ್ರಸ್ತುತತೆಯನ್ನು ಹೊಂದಿದೆ. "ಹುಷಾರು! ಕಪ್ಪೆಗಳನ್ನು ತಪ್ಪಿಯೂ ಕೆಣಕದಿರಿ! ... ಬರಲಿದೆ ಮಂಡೂಕಗಳ ರಾಜ್ಯ!" ಎಂದು ಹೇಳಿದ ಮೇಲೆ, ಆಕಾಶವಾಣಿಯಲ್ಲಿ "ಭ್ರಷ್ಟ ಸರಕಾರವನ್ನು ಇಳಿಸಿದ್ದೇವೆ / ಮಂಡೂಕ ರಾಜ್ಯ ತಂದಿದ್ದೇವೆ" ಎಂಬ ಘೋಷಣೆ ಮೊಳಗಿದಾಗ, ಜನರಿಗೆ ಸಿಗುವ ಆದೇಶವಾದರೂ ಏನು? "ಎಲ್ಲರೂ ಶಿಸ್ತಿನಿಂದ ನಡೆಯಿರಿ / ನಾಲ್ಕು ಕಾಲುಗಳ ಮೇಲೆ".
ಕೆಲವರು ಈಗಾಗಲೇ ಹಾಗೆ ನಡೆಯುತ್ತಿದ್ದಾರೆ!
ಹೀಗೆ ಎಲ್ಲವನ್ನೂ—ರಾಜಕೀಯ, ತತ್ವಶಾಸ್ತ್ರ, ಇತಿಹಾಸ—ನೋಡಿದ ಫ್ಲಾನರ್ ಕವಿ “ಎಲ್ಲ ಮಲಗಿದ ಮೇಲೇಳುವ”. ಅವನು ಬುದ್ಧನೂ ಹೌದು, ಒಬ್ಬ ಬಫೂನನೂ ಹೌದು. ನಶಿಸಿಹೋದ ಚರಿತ್ರೆಯ ಸಾಕ್ಷಿಪ್ರಜ್ಞೆ ಪ್ರೇತವೂ ಅವನೇ.
ಅವನ ರೀತಿ ಬೇರೆ—
ಪದಗಳನ್ನು ಹಣ್ಣಿನಂತೆ
ಕಚ್ಚುತ್ತಾನೆ
ಕಲ್ಲಿನಂತೆ ಎಸೆಯುತ್ತಾನೆ
ಜಗಲಿಯಲ್ಲಿ ಕುಳಿತು ವಾಕ್ಯಗಳನ್ನು
ನೂಲಿನಂತೆ ನೇಯುತ್ತಾನೆ
ಬೀಡಿಯ ಹೊಗೆಯಂತೆ
ಉಗುಳುತ್ತಾನೆ ಅರ್ಥದ
ದಟ್ಟ ಮೋಡಗಳನ್ನು
(ವಿಧಿ, ಅವಧ, ಪುಟ 28)ಎಲ್ಲಿಗೂ ಹೋಗದೆ ಇದ್ದಲ್ಲೇ ಇದ್ದು ತನ್ನ ಜಗಲಿ ಕಟ್ಟೆಯಿಂದಲೇ ಎಲ್ಲವನ್ನೂ ನೊಡಿದ್ದಾನೆ, ಎಲ್ಲವನ್ನೂ ಕಂಡಿದ್ದಾನೆ. ಎಲ್ಲವನು ಬಲ್ಲವನು ಇವನು: ಕ್ಷಾಮ, ಡಾಮರ, ... ಆದರೂ ಇವನೂ ಬಫೂನನೇ ಏನು? ಇದೇ ಅವನ ವಿಧಿಯೇನು?
ಹೌದೇನೋ. ಆದರೆ ಎಲ್ಲವನ್ನೂ ಕಂಡು ಜೀರ್ಣಿಸಿಕೊಳ್ಳಲು, ಆ ಅರಿವಿನ ಭಾರವನ್ನು ತಡೆದುಕೊಳ್ಳಲು ಇರುವ ದಾರಿ ಇದೊಂದೇ ಇರಬೇಕು—ಬಫೂನನಾಗುವುದು, ಅಥವಾ ನಿರ್ಲಿಪ್ತ ಸಾಕ್ಷಿಯಾಗುವುದು.
ಹಾಗಿದ್ದೂ, ಹೀಗೆಲ್ಲಾ ನಿರ್ಲಿಪ್ತತೆಯ ಸೋಗು ಹಾಕಿದರೂ; ಕಡಲ ತಡಿಯಲ್ಲಿ, ಜನಜಂಗುಳಿಯ ನಡುವೆ ಅನಾಮಿಕನಂತೆ ಉಳಿದೆಲ್ಲರಂತೆ “ಉಸುಕಲ್ಲಿ ಕಾಲೆಳೆಯುತ್ತ” ಅಲೆದರೂ ಕವಿ ಅಂತಃಕರಣವಿಲ್ಲದವನಲ್ಲ. ಜಗತ್ತಿನ ಎಲ್ಲ ಸಂಕಟಗಳನ್ನೂ ತನ್ನದೇ ಎದೆಯೊಳಗೆ ಇಳಿಸಿಕೊಂಡು ಒಮ್ಮೊಮ್ಮೆ ವಿಹ್ವಲನಾಗುತ್ತಾನೆ.
ಇಲ್ಲೊಬ್ಬ ಬಡಪಾಯಿ ಅಲ್ಲೊಬ್ಬ ದಂಗೆಯೆದ್ದ ಸಿಪಾಯಿ
ಎಲ್ಲ ಮಕ್ಕಳನೂ ಕಳಕೊಂಡ ನಿರ್ಗತಿಕ ತಾಯಿ
ಸಾಧ್ಯವಿದ್ದರೆ ನಾನು ಕರೆಯದಿರುತ್ತಿದ್ದೆನೆ
ಕರೆದೆಲ್ಲರ ಕಣ್ಣೀರ ತೊಡೆಯದಿರುತ್ತಿದ್ದೆನೆ
(ಅವಧ, ಅವಧ, ಪುಟ 111)ತನ್ನ ಮಿತಿಯ ಅರಿವಾದಾಗ, ತಾನು ಅಸಹಾಯಕ ಎಂದು ತೋರಿದಾಗ ಪೂರ್ವಸೂರಿಗಳ ಮೊರೆಹೊಗುತ್ತಾನೆ. ಅವರ ಜೊತೆ ಸಂವಾದಕ್ಕೆ ಇಳಿಯುತ್ತಾನೆ.
ಕಾಲದಿಂದ ಕಾಲಕ್ಕೆ ದೇಶದಿಂದ ದೇಶಕ್ಕೆ
ಹರ್ಷ ಬದಲಾಗುವುದೆ
ಯಾರಲ್ಲೂ ಹೇಳದಂಥ ಸಂ—
ಘರ್ಷ ಬದಲಾಗುವುದೇ
ಆಹ್! ಶಬ್ದಗಳ ಹುಡುಕುತ್ತಲೇ
ಕೇಳಿಸುವುದೇನು ಶಬ್ದ!
ಅಂಬಿಗನ ಹಾಡೆ
ಕಮ್ಮಾರನ ಹೊಡೆತವೆ
ಅತಿ ನಸುಕಿಗೇ ಎದ್ದ
ಬೆಸ್ತನೊಬ್ಬನ ನಡೆತವೆ
ನನ್ನದೇ ಎದೆ ಬಡಿತವೆ
ಯಾವ ಶಬ್ದಗಳಲ್ಲಿ ಯಾವ ಅರ್ಥಗಳು
ಮೈಖೆಲೇಂಜೆಲೊ ಹೇಳು
(ಮಧ್ಯಂತರ 1: ಮೈಖೆಲೇಂಜೆಲೊ, ಅವಧ, 46)ಹಾಗೆಯೇ, ಆಕಾಶವನಳೆದು ಭೂಮಿಯ ನೆರಳನಳೆಯುತಿರುವ ಕೆಪ್ಲರನನ್ನೂ ಕೇಳುತ್ತಾನೆ.
ಅಕ್ಷರಗಳ ಹೆಕ್ಕಿ ಜೋಡಿಸುತ್ತಲೆ ಇರುವೆ
ಅವು ಮೂಡಿಸುವ ವಾಕ್ಯಗಳೇನು
ಅರ್ಥಗಳೇನು
ಹೇಳುವುದು ಹೇಗೆ
ಎಲ್ಲ ಅಕ್ಷರಗಳು ಸಿಗುವವರೆಗೆ —
ಎಲ್ಲವನು ಕಂಡವನು ನೀನು, ಕೆಪ್ಲರ್
ಕಾಣುವ ಬಗೆ ಹೇಳು
(ಮಧ್ಯಂತರ ೨: ಕೆಪ್ಲರ್, ಅವಧ, ೧೦೫)ಇವರಿಬ್ಬರನ್ನೂ ಕೇಳಿದ್ದಾಯಿತು, ಸರಿ. ಆದರೆ ‘ಕುಂಬಳೆ ಕೋಟೆ’ಯಲ್ಲಿ ಓಡಾಡುವಾಗ ಕವಿಗೆ ನೆನಪಾಗುವುದಾದರೂ ಯಾರು?
ಮಿಥುನ ಮಾಸದಲಿ ಮೈಥುನದ ರಾತ್ರಿಗಳು
ಮೀನದಲ್ಲಿ ಜನಿಸಿದರು ನೋಡಿ ಮೂರು ಕನ್ನಿಕೆಯರು
ಮೀನುಗಣ್ಣಿನ ಚೆಲುವೆಯರು ಅವರು
ಹೊಳೆಗೊಬ್ಬಳಾಯ್ತು ಕಡಲಿಗಿನ್ನೊಬ್ಬಳು
ಉಳಿದವಳ ಕತೆಯೇನು ಹೇಳು ಕವಿಯೇ ಹೇಳು
(ಕುಂಬಳೆ ಕೋಟೆ, ಅವಧ, 113)ಆ ಉಳಿದವಳನ್ನು ಉಳಿಸುವುದು ಕವಿಯ ಹೊಣೆ. ಅದು ಅವನ ಪ್ರತಿಭೆ. ಹಣೆಬರಹ ಕೂಡ. ಕುಂಬಳೆ ಕೋಟೆಯ ಅವಶೇಷಗಳನ್ನು ಗಮನಿಸುತ್ತ ಅಲೆಯುತ್ತಿರುವಾಗ ಈಜಿಪ್ಟಿನ ರಾಣಿ ನೆಫರತಿತಿ ನೆನಪಾಗುತ್ತಾಳೆ! ಅರೇ, ಯಾರೀಕೆ ನೆಫರತಿತಿ? ಯಾರೀತ ತುತಂಖಮನ್? ಕಾಸರಗೋಡಿನಲ್ಲಿ, ಕುಂಬಳೆಯಲ್ಲೇನು ಇವರ ಕೆಲಸ?
ತಿರುಮಲೇಶರಿಗೆ ಕಾಲದೇಶದ ಹಂಗಿಲ್ಲ. ಚರಿತ್ರೆಯ ತುಣುಕುಗಳು ವರ್ತಮಾನದ ಕಣ್ಣಿಗೆ ಬಿದ್ದಾಗ ಕವಿ ಕಾಲಯಾನಿಯೂ ಆಗುತ್ತಾನೆ. ಆದರೆ ಅದೊಂದು ವಿಚಿತ್ರ ಏಕಪಕ್ಷೀಯ ಹೊಣೆಗಾರಿಕೆ—
ಚರಿತ್ರೆಯ ಏಕಾಂತವನು ಮುರಿದವರು
ಮಾತಿಗೆ ಹೊಣೆಯಾಗುವರು
ಆದರೆ ಚರಿತ್ರೆ ಯಾರಿಗೂ ಹೊಣೆಯಲ್ಲ.
(ತುತಂಖಮನ್, ಅವಧ, 92)ಚರಿತ್ರೆ ಹಾಗಿರಲಿ, ವರ್ತಮಾನದಲ್ಲಿ ಕಣ್ಣೆದುರೇ ಕರಗಿಹೋಗುವ ಬದುಕುಗಳ ಕತೆಯೇನು? ಹಳೆಯ ಕತೆಗಳ ಮನೆಯಾಳು ಪಕ್ಕೀರ ಇಲ್ಲಿ ಕತೆ ಹೇಳುವ ಫಕೀರಪ್ಪನಾಗುತ್ತಾನೆ. ಕತೆ ಹೇಳುವ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದ ಅವನು ಒಂದು ದಿನ ಹೇಳಕೇಳದೇ ಸತ್ತುಹೋಗುತ್ತಾನೆ. ವಿಪರ್ಯಾಸವೆಂದರೆ, ಅವನ ಕತೆಯನ್ನು ಸಶಕ್ತರಾಗಿ ಹೇಳುವವರು ಯಾರೂ ಇಲ್ಲ: “ನಿಜಕ್ಕೂ ತಾನು ಹೇಗೆ ಸತ್ತೆ, ಎಷ್ಟು ಸ್ವಾರಸ್ಯಕರವಾಗಿ ಸತ್ತೆ ಎಂದು ಹೇಳುವುದಕ್ಕೆ” ಅವನೇ ಇಲ್ಲ.
ಅವನು ಹೈದರ್ ಗುಡದಲ್ಲಿ ಮೌನವೇ ಮಾತಾಗಿದ್ದ ಹುಡುಗ. ದಾರಿಹೋಕ ಬೈರಾಗಿಯೊಬ್ಬ ಕೊಟ್ಟ ರಾಗಿಯಿಂದಾಗಿ ಒಂದೇ ದಿನದಲ್ಲಿ ಅವನಿಗೆ ಭಾಷಾಸಿದ್ಧಿಯಾಗಿ ಮಾತನಾಡತೊಡಗಿದವನು. ಕವಿಗೇನೋ ಮಾತು ಉಳಿಯಿತು, ಸಿದ್ಧಿಸಿತು. ಆದರೆ ಬದುಕಿನ ಭಾರ ಹೊತ್ತ ಹೈದನಿಗೆ?
ಕ್ರಮೇಣ ಎಲ್ಲರೂ
ಬೈರಾಗಿಯನು ಮರೆತರು
ರಾಗಿಯನೂ ಮರೆತರು
ಹೈದರ್ಗುಡದೊಳಗೆ ಈಗ
ಹೈದನೂ ಕಾಣಿಸನು
ಅವನ ಮಾತೂ ಕೇಳಿಸದು
ಎಲ್ಲಿ ಹೋದನು ಅವನು
ವಾಕ್ಯಗಳ ಮಾಡುತ್ತಿದ್ದವನು
ಸಿಕಂದರಾಬಾದಿನಲಿ
ಮೂಟೆಯನು ಹೊರುವನು
ಪ್ರತಿಯೊಂದು ಗಾಡಿಯನು
ಕಾಯುತ್ತ ಇರುವನು
(ಹೈದರ್ಗುಡದಲ್ಲೊಬ್ಬ ಹೈದ, ಅವಧ, ಪುಟ 56—57)ಹೀಗೆ ಮಾತು ಕಲಿತ ಹೈದ ಜಗದ ಜಂಜಡಕೆ ಬಿದ್ದ. ಕ್ರಮೇಣ ಮಾತನ್ನೂ ಮರೆತ. ಜನರೂ ಅವನನ್ನು ಮರೆತರು. ಅವನು ಅಜ್ಞಾತ, ಕಣ್ಣಿಗೆ ಕಾಣದವನು. ಒಮ್ಮೊಮ್ಮೆ ನಸುಕಿನಲ್ಲೇ ಆತ ನಾಲ್ಕು ರಸ್ತೆಗಳು ಸೇರುವಲ್ಲಿ ಅಳುತ್ತ ನಿಲ್ಲುತ್ತಾನೆ. ಬಸ್ಸುಗಳು, ಕಾರುಗಳು, ಟಾರ್ಪಾಲಿನ್ ಹೊದ್ದ ಟ್ರಕ್ಕುಗಳು, ಎತ್ತಿನ ಗಾಡಿಗಳು ಸಾಗುತ್ತಲೇ ಇರುತ್ತವೆ. ಇವನನ್ನು ಯಾರೂ ಗಮನಿಸುವುದಿಲ್ಲ.
ಯಾರಿಗೂ ತಿಳಿಯದಲೆ ಎದ್ದು ನಿಂತಿದ್ದನ್ನೊಮ್ಮೆಲೇ
ಸಾವರಿಸಿಕೊಂಡು, ಆವರಿಸಿಕೊಂಡು
ನಿಂತು ಏನೋ ಹೇಳಹೊರಟವನು
ಹೇಳುವುದೇಕೆಂದು ತಟಸ್ಥವಾದಂತೆ
ಬಿರಿದೂ ಬಿರಿಯದ ನಗೆ
ಬಚ್ಚಿಟ್ಟ ಪ್ರತಿಯೊಬ್ಬರ ಪಾಪದಂತೆ
(ಪ್ರತಿಮೆ, ಅವಧ, ಪುಟ 50)ಈ ‘ಬಿರಿದೂ ಬಿರಿಯದ ನಗೆ’ ಮತ್ತು ‘ಹೇಳದ ಮಾತು’ಗಳೇ ತಿರುಮಲೇಶರ ಕಾವ್ಯದ ಜೀವಾಳ.
ಎಲ್ಲವನ್ನೂ ಗಮನಿಸಿದ ಫ್ಲಾನರ್, ಎಲ್ಲವನ್ನೂ ಬಲ್ಲ ಬಫೂನ ಕೊನೆಗೆ ತನ್ನ ಪಯಣದ ಅಂತ್ಯಕ್ಕೆ ಬಂದು ನಿಲ್ಲುತ್ತಾನೆ. ತಾರನಾಕದ ಚೌಕದಲ್ಲಿ ನಿಂತಾಗ ಕವಿಯ ಕಣ್ಣಲ್ಲಿ ನೀರು.
ಆದರೇಕೆ ಕಣ್ಣಿನಲಿ ಈ ಒಸರು?
ಇದರ ಕಾರಣ ಮೆಣಸಿನ ಖಾರವೊ?
ಅಥವ ಇನ್ನೂ ಮಾತಿಗೆ ಬರದ
ನಮ್ಮ ಅಂತಿಮ ನಿರ್ಧಾರವೊ?
(ತಾರನಾಕದ ಚೌಕ, ಅವಧ, ಪುಟ 60)'ಅವಧ' ಒಂದು ದೇಶವೂ ಹೌದು ಕಾಲವೂ ಹೌದು. ಅದೊಂದು ಮುಗಿಯದ ಪಯಣ. ಕವಿ ಈಗ ನಮ್ಮೊಂದಿಗಿಲ್ಲ, ಆದರೆ ‘ಅವಧ’ದ ಪುಟಗಳಲ್ಲಿ ಆ ಪಯಣ ನಿರಂತರ.
ಬಂದವರಿದ್ದರೆ ನಿಮ್ಮ ಬೀಳ್ಕೊಡಲು
ಬೀದಿಯ ಕೊನೆಯ ತಿರುವಿನ ತನಕ?
ಮುಂದೆ ಎದ್ದುದು ಯಾವ ಬೆಟ್ಟ ಬಯಲು
ಕಳೆದುಕೊಂಡುದು ಯಾವ ಲೋಕ?
(ಯಾತ್ರಿಕರು, ಅವಧ, ಪುಟ ೧೪೯)ತಿರುಮಲೇಶರು ತಮ್ಮ ಕವಿತೆಗಳಲ್ಲಿ ಕಟ್ಟಿಕೊಟ್ಟ ಆ ಲೋಕವನ್ನು, ಅವರು ನಡೆದ ದಾರಿಯನ್ನು ನಾವು ಮತ್ತೆ ಮತ್ತೆ ನಡೆಯುತ್ತಲೇ ಇರುತ್ತೇವೇನೋ. ಸದ್ಯಕ್ಕೆ ಅವರಂತೂ ಅಜ್ಞಾತವಾಸದಲ್ಲಿದ್ದಾರೆ.
ಯೋಗವಿದ್ದರೆ ಸಂಧಿಸುವೆವು ನಾವು ಇನ್ನೊಂದು ಕಡೆ ಇನ್ನೊಂದು ದಿವಸ ಅಲ್ಲಿಯತನಕ ಎಲ್ಲರಿಗೂ ಇದ್ದದ್ದೆ ಅವರವರ ಅಜ್ಞಾತವಾಸ
ಇದನ್ನೂ ಓದಿ …
ಬದ್ಧತೆ ಎನ್ನುವುದು ಬಂಧನ
ಕವಿ, ಭಾಷಾವಿಜ್ಞಾನಿ, ವಿಮರ್ಶಕ ಕೆ. ವಿ. ತಿರುಮಲೇಶ್ ಅವರ ಸಂದರ್ಶನಗಳನ್ನು ಒಟ್ಟುಮಾಡಿ ಇದೀಗ ಓದುಗರ ಕೈಗಿಟ್ಟಿದೆ ಬಹುವಚನ. ಲೇಖಕ, ಕಥೆಗಾರ ಎಂ. ಎಸ್. ಶ್ರೀರಾಮ ಈ ಕೃತಿಯನ್ನು ಸಂಪಾದಿಸಿದ್ದಾರೆ. ಆಯ್ದ ಭಾಗ ಹೊಸವೊಸಗೆಯಲ್ಲಿ.






