ಮಾರ್ಕ್ ಸ್ಟ್ರ್ಯಾಂಡ್ (Mark Strand, 11.4.1934 - 29.11.2014) ಒಬ್ಬ ಕೆನೆಡಿಯನ್-ಅಮೆರಿಕನ್ ಕವಿ, ಪ್ರಬಂಧಕಾರ ಮತ್ತು ಅನುವಾದಕ. ನೇರವಾಗಿಯೂ ಸರಳವಾಗಿಯೂ ತೋರುವ ಅವರ ಪದ್ಯಗಳಲ್ಲಿ ಆಳವಾದ ವಿಷಾದ ಮಡುಗಟ್ಟಿದೆ; ಕಳೆದುಹೋದ ಯಾವುದರದೋ ಹಂಬಲವಿದೆ, ಅತಿ ಭಾವುಕವಾಗದ ಹಳಹಳಿಕೆಯಿದೆ. ಮೂರ್ತ ವಿವರಗಳಿಂದ ಆಪ್ತವಾಗುವ ಅವರ ಪದ್ಯಗಳಲ್ಲಿ ಇರುವಿಕೆ ಮತ್ತು ಇಲ್ಲದಿರುವಿಕೆಗಳ ಹುಡುಕಾಟವನ್ನು ಮತ್ತೆ ಮತ್ತೆ ಕಾಣುತ್ತೇವೆ. ಸಂಕೇತ ಪಾಟೀಲ ಅವರ ಕೆಲವು ಪದ್ಯಗಳನ್ನು ಕನ್ನಡಕ್ಕೆ ತಂದಿದ್ದಾರೆ.

ಇರುವನ್ನು ಇಡಿಯಾಗಿರಿಸುವುದು
(ಮೂಲ: Keeping Things Whole)
ಬಯಲಿನೊಳಗೆ
ನಾನು ಬಯಲಿನ
ಅಭಾವ.
ಪ್ರತಿಸಲವೂ
ಆಗುವುದೇ ಹೀಗೆ.
ನಾನು ಎಲ್ಲಿಯೇ ಇದ್ದರೂ
ಅಲ್ಲಿಲ್ಲದಿರುವುದೂ ನಾನೇ.
ನಾನು ನಡೆವಾಗ
ಗಾಳಿಯನ್ನು ಹೋಳು ಮಾಡುತ್ತೇನೆ
ನನ್ನ ದೇಹ ಹಿಂಬಿಟ್ಟ
ತೆರಪ ತುಂಬಲು
ಗಾಳಿ ಒಳನುಗ್ಗುತ್ತದೆ
ಪ್ರತಿಸಲವೂ.
ನಮ್ಮೆಲ್ಲರ ಚಲನೆಗೂ
ಕಾರಣಗಳಿವೆ.
ನಾನು ಚಲಿಸುವುದು
ಇರುವನ್ನು ಇಡಿಯಾಗಿರಿಸಲೆಂದು.
ಬದುಕು
(ಮೂಲ: My Life)
ನನ್ನ ದೇಹದ ಗೊಂಕರು ಗೊಂಬೆ
ಮೇಲೇಳಲೊಲ್ಲೆನ್ನುತ್ತದೆ.
ನಾನು ಹೆಂಗಸರ ಆಟಿಕೆ.
ನನ್ನ ತಾಯಿ
ನೆಮ್ಮಿಸಿ ಎಬ್ಬಿಸುತ್ತಿದ್ದಳು ತನ್ನ ಗೆಳತಿಯರಿಗಾಗಿ
"ಮಾತಾಡು, ಬಾಯ್ಚಿಚ್ಚು," ಗೋಗರೆಯುತ್ತಿದ್ದಳು
ಬಾಯನ್ನಂತೂ ಅಲುಗಿಸುತ್ತಿದ್ದೆ
ಪದಗಳು ಹೊರಡುತ್ತಿರಲಿಲ್ಲ
ಹೆಂಡತಿ ಬಡುವಿನಿಂದ ಇಳಿಸಿಕೊಂಡಳು ನನ್ನ
ಪವಡಿಸಿದೆ ಅವಳ ತೋಳುಗಳಲ್ಲಿ.
"ಆತ್ಮದಸೌಖ್ಯದಿಂದ ತೊಳಲುತ್ತೇವೆ ನಾವೆಲ್ಲ,”
ಪಿಸುಗುಟ್ಟುವಳು. ನಾನು ಮಲಗಿರುವೆ ಮಾತಿಲ್ಲದೆ.
ಮತ್ತೀಗ ನನ್ನ ಮಗಳು
ನೀರು ತುಂಬಿದ ಪ್ಲ್ಯಾಸ್ಟಿಕ್ನ
ಊಡು ಬಾಟಲಿ ಕೊಡುತ್ತಾಳೆ
"ನೀನು ನನ್ನ ನಿಜವಾದ ಕೂಸು," ಎನ್ನುತ್ತಾಳೆ.
ಪಾಪ ಮಗು!
ನಾನವಳ ಕಣ್ಣುಗಳ
ಕಂದುಗನ್ನಡಿಯಲ್ಲಿಣುಕಿ
ನನ್ನನ್ನೇ ಕಾಣುತ್ತೇನೆ
ಕುಗ್ಗುತ್ತ ಅವಳಿಗರಿವಿಲ್ಲ
ದಾಳದಲಿ ಮುಳುಗುತ್ತೇನೆ
ಉಸಿರುದಪ್ಪಿದ ನಾನು
ಏಳಲಾರೆನು ಇನ್ನು
ಸಾವಿನೊಳು ಚಾಚಿಕೊಳ್ಳುವೆನು.
ನನ್ನ ಬದುಕು ಕಿರಿದು
ಇನ್ನೂ ಕಿರಿದಾಗುವುದು. ಜಗತ್ತು ಹಸಿರಾಗಿರುವುದು.
ಇಲ್ಲದಿರುವಿಕೆಯಲ್ಲಿ ಎಲ್ಲ ಇರುವುದು.
ಏಳು ಪದ್ಯಗಳು
ಆ್ಯಂಟೋನಿಯಾಗಾಗಿ
೧
ಮೈಯಿರುಳ ಅಂಚಿನಲಿ
ಹತ್ತು ಚಂದಿರರು
ಮೂಡುತ್ತಿರುವರು.
೨
ಕಲೆ ಗಾಯವ ನೆನೆವುದು
ಗಾಯ ನೋವ ನೆನೆವುದು
ನೀನು ಮತ್ತೊಮ್ಮೆ ಅಳುವೆ
೩
ನಾವು ಬಿಸಿಲಲ್ಲಿ ನಡೆವಾಗ
ನೀರವ ತಾರಿಗಳಂತೆ ನೆರಳುಗಳು
೪
ನನ್ನ ದೇಹ ಅಡ್ಡಾಗುತ್ತದೆ
ನನ್ನದೇ ದನಿ ಮಗ್ಗುಲಲ್ಲಿ
ಮಲಗಿದ್ದು ಕೇಳುತ್ತದೆ
೫
ಆಹ್ಲಾದವದು ಆ ಬಂಡೆ
ಕದ ತೆರೆಯುವುದದು
ಒಳಹೊಗುವೆವು ನಾವು
ನಮ್ಮೊಳಗೆಯೇ ಹೊಕ್ಕಂತೆ
ಪ್ರತಿ ರಾತ್ರಿಯೂ
೬
ಕಿಟಕಿ ಕೂಡೆ ಮಾತಾಡುವಾಗ
ಹೇಳುತ್ತೇನೆ ಎಲ್ಲವನ್ನೂ ಎಲ್ಲಾ
ಎಲ್ಲವೂ ಆಗಿದೆ
೭
ನನ್ನ ಬಳಿಯೊಂದು ಕೀಲಿಕೈಯಿದೆ
ಕದ ತೆರೆದು ಒಳಬರುತ್ತೇನೆ
ಕತ್ತಲಿದೆ ಮುನ್ನಡೆಯುತ್ತೇನೆ
ದಟ್ಟ ಕತ್ತಲಿದೆ ಮುನ್ನಡೆಯುತ್ತೇನೆ
ಮುನ್ಸೂಚನೆ
(ಮೂಲ: The Prediction)
ಆ ಇರುಳು ಚಂದ್ರ ಕೊಳದ ಮೇಲೆ ತೇಲುತ್ತ
ನೀರನ್ನು ಹಾಲಾಗಿ ಮಾಡುತ್ತಿದ್ದಾಗ, ಮರಗಳ
ಗೆಲ್ಲುಗಳಡಿಯಲ್ಲಿ ನೀಲಿ ಮರಗಳ ಕೆಳಗೆ
ನಡೆದು ಹೋಗುತ್ತಿದ್ದ ಯುವತಿಗೆ ಒಂದು ಗಳಿಗೆಯಷ್ಟೆ
ಮುಂದಾಗಲಿರುವುದು ಕಂಡಿತ್ತು:
ಅವಳ ಗಂಡನ ಗೋರಿಯ ಮೇಲೆ ಬೀಳುತ್ತಿದ್ದ ಮಳೆ, ಮಳೆ
ಮಕ್ಕಳಾಡುವ ಹುಲ್ಲುಹಾಸಿನ ಮೇಲೆ ಅವಳ ಬಾಯೊಳಗೆ
ನುಗ್ಗಿ ತುಂಬಿಕೊಂಡ ತಂಪುಗಾಳಿ, ಮನೆಯೊಳಗೆ ಸೇರಿಕೊಂಡ ಅಪರಿಚಿತರು
ಅವಳ ಕೋಣೆಯೊಳಗೊಬ್ಬ ಬರೆಯುವ ಪದ್ಯ, ಅದರೊಳಗೆ ತೇಲಿಸೇರುವ ಚಂದ್ರ
ಮರಗಳಡಿ ತಿರುಗಾಡುವ ಒಬ್ಬ ಹೆಂಗಸು, ಸಾವನ್ನು ಧೇನಿಸುತ್ತ,
ತನ್ನ ಬಗ್ಗೆ ಯೋಚಿಸುವ ಅವನ ಬಗ್ಗೆ ಯೋಚಿಸುತ್ತ, ಮತ್ತಾಗ ಬೀಸುವ
ಗಾಳಿ ಚಂದ್ರನನ್ನು ಮೇಲೆಬ್ಬಿಸಿ ಹಿಂದೆ ಬಿಡುವ ಕತ್ತಲೆಯ ಹಾಳೆ.
ಇದನ್ನೂ ಓದಿ …
ದನಿಯೆತ್ತಿ ಒಮ್ಮೊಮ್ಮೆ, ಆಕ್ಷೇಪಣೆಗೊಳಗಾಗಿ ಕೆಲವರಿಂದಲಾದರೂ
·
Wow
-- ಜೈದೇವ್ ಮೋಹನ್
ಸೊಗಸಾದ ಕವಿತೆಗಳು
-- ಡಾ. ವಿಜಯಾ