ಕವಿ, ಶಿಕ್ಷಕ ಕುಮಾರ್ ಹೊನ್ನೇನಹಳ್ಳಿ ಅವರ ನಡೆದಷ್ಟೂ ಬಯಲು ಎಂಬ ಕವನ ಸಂಕಲನ ಇದೇ ಶನಿವಾರ, 8.6.2024ರಂದು ಅವರದೇ ಪ್ರಕಾಶನದಿಂದ ಹುಣಸೂರಿನಲ್ಲಿ ಬಿಡುಗಡೆಯಾಗಲಿದೆ. ಅದರಲ್ಲಿನ ಮೂರು ಕವಿತೆಗಳು ಇಲ್ಲಿವೆ.
ಅಪ್ಪನ ಬನೀನು
ಒಗೆದು ಒಣಹಾಕಿದ್ದ ಬನೀನುಗಳಲ್ಲಿ
ಒಮ್ಮೊಮ್ಮೆ ಅಪ್ಪನ ಮೈಮೇಲೆ ನನ್ನ
ನನ್ನ ಮೈಮೇಲೆ ಅಪ್ಪನ ಬನೀನು
ಏರಿಬಿಡುತ್ತವೆ
ಅಮ್ಮನೇ ಗುರುತಿಸಿ
ಬಿಚ್ಚಿಕೊಡಿ ಅದು ಮಗನದು
ತೆಗೆ ಅದು ಅಪ್ಪನದು
ಎಂದಾಗ ಮಾತ್ರ
ನಾನು ಮತ್ತೊಮ್ಮೆ ನಾನೆ
ಅಪ್ಪ ಅಪ್ಪನೆ
ಈ ಮೊದಲು ಹಾಗೆ ಇರಲಿಲ್ಲ
ನಾ ಚಿಕ್ಕವನಿದ್ದಾಗ
ಅಪ್ಪನ ಬನೀನು ದೊಡ್ಡದೇ
ಆಗಾಗ ಅದ ಹಾಕಿ ಅಮ್ಮಗೆ ತೋರಿಸಿ
ದೊಡ್ಡ ದನಿಯಲ್ಲಿ ನಗೆಯಾಡುತ್ತಿದ್ದೆ
ಹೊರಗಡೆ ಬಿಟ್ಟಿರುವ ಹತ್ತು ಇಂಚಿನ ಶೂ
ಅದರೊಳಗೆ ಪಾದಗಳ ತೂರಿಸಿ
ಅವರಮ್ಮಗೆ ತೋರಿಸಿ
ನನ್ನ ಮಗನ ಜೋರು ನಗು
ಬೈಸಿಕಲ್ಲಿನ ಮೇಲೆ ಕುಳಿತೆ
ಅಂಗಡಿಗೆ ಹೋಗಲು
ಬಿರುಗಾಳಿಯಂತೆ ಬಂದಳು
"ಮಗುವಿನ ಬೈಸಿಕಲ್ ಹಾಳಾದರೆ,
ಇಳಿಯಿರಿ ಕೆಳಗೆ"
ಗದರಿದಳು
ಮಕ್ಕಳು
ದೊಡ್ಡವರ ಪಾತ್ರ ಮಾಡಿದರೆ ಮಾತ್ರ
ನಗು, ಬೆರಗು ಮತ್ತು ತಮಾಷೆ
ಹೇಳಿ ಗುರುಗಳೆ
ನೋಡಿ ಗುರುಗಳೆ,
ಏಕಲವ್ಯನ ಸಾಗ ಹಾಕಿ
ಅರ್ಜುನನಿಗೂ ಗೊತ್ತಾಗದ ಹಾಗೆ
ಅಶ್ವತ್ಥಾಮನಿಗೆ ಮಾತ್ರ ಕಲಿಸಿದ್ದ ಮಂತ್ರಗಳು ಈಗ
ಯೂಟ್ಯೂಬಿನಲ್ಲಿ ಫ್ರೀಯಾಗಿ ಸಿಗುತ್ತವೆ
ಬೃಹಸ್ಪತಿಗಳ ಭಾಷಣಗಳು
ವಿಶ್ವಾಮಿತ್ರನ ಹೋರಾಟ
ಶುಕ್ಲಾಚಾರ್ಯರ ಪ್ರತಿತಂತ್ರಗಳು
ಚಾರ್ವಾಕರ ವಿಲೋಮ ನಡೆಗಳು
ಬಸವಣ್ಣನ ಬಂಡಾಯ
ಬುದ್ಧನ ತಣ್ಣನೆಯ ಮಂದಹಾಸ
ಗೊಮ್ಮಟನ ವೈರಾಗ್ಯ
ಉರುಳಾಡುತ್ತಿವೆ ರೀಲುಗಳಾಗಿ
ಗುಂಡಿ ಒತ್ತಿದರೆ ಸಾಕು
ಉದುರುವ ರಾಶಿ ರಾಶಿ ಅಕ್ಷರಗಳ
ಬಾಚಿ ಬಾಚಿ ತುಂಬಿಕೊಳ್ಳಬಹುದು
ಜೋಡಿಸಿ ಓದಿಕೊಳ್ಳಬಹುದು
ಹೊಂದಿಸಿ ಬರೆದರೆ ಪರೀಕ್ಷೆಯೂ ಪಾಸು
ಈಗಾಗಲೇ ಓದಿದ್ದ ಕಥೆಗಳ ಪಾತ್ರಗಳು
ಹೆಸರು ಊರು ಬದಲಿಸಿಕೊಂಡು ಹಾಜರು
ಈಗೀಗ ಕಣ್ಣು ಬಿಡುತ್ತಿರುವ
ಗೊದಮೊಟ್ಟೆಗಳಿಗೆ ಅವೇ ಪಾಠಗಳು
ಮೇಷ್ಟ್ರುಗಳು
ಮರಿಹೊತ್ತ ಕಾಂಗರುವಿನಂತೆ ಆಡುವಂತಿಲ್ಲ
ಗದರಿ ಜೋರು ಮಾಡುವಂತಿಲ್ಲ
ಸಂಬಳ ಸಾಲದು ಎಂದು
ಒಳಗೊಳಗೆ ನರಳಿಕೊಂಡು ಹೇಳುವ ಅವರ
ಮಾತುಗಳು ಚಿಟ್ಟೆಗಳಿಗೆ ರುಚಿಸುವುದಿಲ್ಲ
ಪಾತ್ರ ಬದಲಿಸಬೇಕು
ವೇಷ ಹೊಸದು ಧರಿಸಬೇಕು ಎನ್ನುವ ತುಡಿತದ
ಈ ಕಾಲದಲಿ
ಹೆದರುತ್ತವೆ ಅಂತಃಕರಣದ ಮಾತುಗಳು
ಹೊರಗೆ ಬರಲು
ವೈದ್ಯರೇ ಅಲ್ಲದ ವೈದ್ಯರು
ಮಾಸ್ತರೇ ಅಲ್ಲದ ಮಾಸ್ತರು
ಚಿಂತನೆಯೇ ಇಲ್ಲದ ಚಿಂತಕರು
ವಿಜೃಂಭಿಸಲು ತೊಡಗಿರುವಾಗ
ಹೇಳಿ ಗುರುಗಳೇ
ನೀವು
ಇನ್ನು ಮುಂದೆ
ಹೇಗೆ ಕಲಿಯಬೇಕು
ಹೇಗೆ ಕಲಿಸಬೇಕು
ಹೊಸ ಚಿಟ್ಟೆಗಳಿಗೆ
ಕಿವಿಗಳು ಹಾಗೂ ಪಾದಗಳು
ದುಂಬಿಯೊಂದು
ಒಲವಿನಿಂದ ಹೂವಿನ ಬಳಿ ಬಂದಾಗ
ಖಟಾನುಖಟಿ ಅದೇ ಸಮಯ
ಮೋಡದ ಮರೆಯಿಂದ ಹೊರಬಂದ ಸೂರ್ಯ
ಅವನ ಕಡೆಗೆ ತಿರುಗಲೇಬೇಕಿತ್ತು ತಿರುಗಿಬಿಟ್ಟಿತು
ಹೂವು
ಮಧುವ ಹೀರಲು ಚಾಚಿದ್ದ
ದುಂಬಿಯ ಕೊಂಡಿ
ಹೊರಳಿದ ರಭಸಕ್ಕೆ ತಾಗಿ
ಹೂವಿನ ಪಕಳೆಗೆ ಕೊಂಚ ಗೀರಾಯಿತು
ಮುರಿದುಹೋಯಿತು ದುಂಬಿಯ ಕೊಂಡಿಯ ತುದಿಯೂ
ಇಬ್ಬರಿಗೂ ಗೊತ್ತು
ಹೊರಳಿದ್ದು
ಗೀರಿದ್ದು
ಮುರಿದಿದ್ದು
ಉದ್ದೇಶ ಇರದ
ಪರಂತು
ಇನ್ನೇನಿಲ್ಲ
"ಅದು ಹಾಗಲ್ಲ ಹೀಗೆ" ಅಂತ
ಹೇಳುವಾಗ ಆದ ಧ್ವನಿ ಕಂಪನ
ತಾಕಲಿಲ್ಲ ಮಧುರವಾಗಿ ಕಿವಿಗಳಿಗೆ
ಎಂಬುದೇ ವಾದ
ಸದಾ ಅದೇ ಅಳತೆಯ
ಕಂಪನದ ಅಲೆಗಳಿಗೆ
ಹೊಂದಿಕೊಂಡಿದ್ದ ಕಿವಿಗಳವು
ವಾಸ್ತವದ ಹಾದಿಯ ಕ್ರಮಿಸಿದ ಪಾದಗಳು
ಕಿವಿಗಳಿಗೆ ಸಂತೈಸುವುದರ ಒಳಗೆ
ತೊರೆಯ ತಣ್ಣಗಿನ ನೀರು
ಕೊಂಚ ದೂರ ಸಾಗಿಯಾಗಿತ್ತು
ಅದೆಷ್ಟು ಇಂತಹ ಗಳಿಗೆಗಳು ಸಾಗಿಲ್ಲ
ಕಂಡಿರುವಿರಾ ಎಂದಾದರೂ ಯಾರಾದರೂ
ಹೂ ದುಂಬಿಗೆ ಕೊಟ್ಟಿರುವ
ವಿಚ್ಛೇದನ?
ಕೃತಿ : ನಡೆದಷ್ಟೂ ಬಯಲು (ಕವನ ಸಂಕಲನ)
ಕವಿ : ಕುಮಾರ್ ಹೊನ್ನೇನಹಳ್ಳಿ
ಪುಟ : 116
ಬೆಲೆ : ರೂ. 150
ಪ್ರಕಾಶಕರು: ಕುಮಾರ ಹೆಚ್. ಸಿ.
\(----\)
ಕುಮಾರ್ ಹೊನ್ನೇನಹಳ್ಳಿ
ಶಿಕ್ಷಕ, ಶಿಕ್ಷಕ ತರಬೇತುದಾರ ಮತ್ತು ಕವಿಯಾದ ಕುಮಾರ್ ಹೊನ್ನೇನಹಳ್ಳಿ ಹೊಳೇನರಸೀಪುರದವರು. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಗುರುಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಕುಟುಂಬದೊಂದಿದೆ ಹುಣಸೂರಿನಲ್ಲಿ ನೆಲೆಸಿದ್ದಾರೆ. ‘ಪ್ರಳಯವಾಗುತ್ತಿರಲಿ...’ (2017) ಇವರ ಮೊದಲ ಕವನ ಸಂಕಲನ.
ಇದನ್ನೂ ಓದಿ …
ಸಂತೆಯ ನೆನಪು ತರುವ 'ಭಗ್ನ' ಕವಿತೆಗಳು
·